ತಮ್ಮ ಇಡೀ ಜೀವನವನ್ನು ಸಂಗೀತ ಕಲೆಯ ಬೆಳವಣಿಗೆಗಾಗಿ ಮೀಸಲಿರಿಸಿ, ಸಂಗೀತದಲ್ಲಿ ಅಪಾರ ಸಾಧನೆಗೈದಿರುವ ಬಳ್ಳಾರಿಯ ಶ್ರೀ ಎ. ಚಂದ್ರಶೇಖರ ಗವಾಯಿಗಳು ಕರ್ನಾಟಕದ ಹಿರಿಯ ತಲೆಮಾರಿನ ಹಿಂದುಸ್ಥಾನಿ ಸಂಗೀತಗಾರರಲ್ಲೊಬ್ಬರಾಗಿದ್ದಾರೆ.

೧೯೩೩ರಲ್ಲಿ ಶ್ರೀ ಭೀಮಸೇನಪ್ಪ, ಶ್ರೀಮತಿ ಅಯ್ಯಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ಚಂದ್ರಶೇಖರ ಅವರು ಬಾಲ್ಯದಿಂದಲೇ ಸಂಗೀತಾಭ್ಯಾಸವನ್ನು ಅಣ್ಣಶ್ರೀ ವಿರೂಪಾಕ್ಷಪ್ಪನವರಿಂದ ಆರಂಭಿಸಿ, ತರುವಾಯ ಶ್ರೀ ಬಿ. ಮರಿಯಪ್ಪ ಸವಣೂರು ಕೃಷ್ಣಾಚಾರ್, ಡಾ. ಪುಟ್ಟರಾಜ ಗವಾಯಿ ಹಾಗೂ ಶ್ರೀ ಸಿದ್ಧರಾಮ ಜಂಬಲದಿನ್ನಿ ಅವರುಗಳಿಂದ ಉನ್ನತ ಸಂಗೀತ ಶಿಕ್ಷಣ ಪಡೆದಿದ್ದಾರೆ.

ಶ್ರೀಯುತರು ಸತತ ೪೦ ವರ್ಷಗಳಿಂದ ಕರ್ನಾಟಕದಾದ್ಯಂತ ಗಾಯನ ಸೇವೆ ಸಲ್ಲಿಸುತ್ತಾ ಬಂದಿದ್ದು, ಸರ್ಕಾರದ ಸಂಗೀತೋತ್ಸವಗಳಲ್ಲಿ, ಅದರಲ್ಲೂ ಮುಖ್ಯವಾಗಿ ಮೈಸೂರು ದಸರಾ, ಹಂಪಿ ಉತ್ಸವ, ನವರಸಪುರ ಸಂಗೀತೋತ್ಸವ, ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ, ಸೊಂಡೂರು ಮುಂತಾದ ವಿಶೇಷ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕರ್ನಾಟಕ ಸರ್ಕಾರದ ವಿಶೇಷ ಸಂಗೀತ ಪರೀಕ್ಷೆಗಳಿಗೆ ಪರೀಕ್ಷಕ ಮಂಡಳಿಯ ಸದಸ್ಯರಾಗಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಶ್ರೀ ಚಂದ್ರಶೇಖರ ಗವಾಯಿಗಳು ೧೯೬೦ ರಿಂದ ಬಳ್ಳಾರಿಯ ಕಲಾಪ್ರೇಮಿ ಸಂಘದಲ್ಲಿ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ. ಇವರ ಹಲವಾರು ಶಿಷ್ಯಂದಿರು ಆಕಾಶವಾಣಿಯ ಕಲಾವಿದರಾಗಿದ್ದಾರೆ.

ಇವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೮-೯೯ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.