೩-೩-೧೯೨೭ ರಲ್ಲಿ ಜನಿಸಿದ ಆರ್ಥರ್ ಡೇವಿಡ್‌ ಜಕರಿಯ ಮದ್ರಾಸ್‌ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನೂ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್‌. ಪದವಿಯನ್ನೂ ಪಡೆದಿದ್ದಾರೆ. ವೃತ್ತಿಯಿಂದ ಅಧ್ಯಾಪಕರಾಗಿದ್ದ ಜಕರಿಯರವರು ಜೋಸೆಫ್‌ ಇಂಡಿಯನ್‌ ಹೈಸ್ಕೂಲ್‌, ಬಿಷಪ್‌ಕಾಟನ್‌ ಶಾಲೆ ಹಾಗೂ ಹಲವಾರು ಕಾರ್ಪೊರೇಷನ್‌ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತ ಮೂರು ದಶಕಗಳನ್ನು ಕ್ರಮಿಸಿದ್ದಾರೆ. ನಂತರ ಅವರ ಒಲವು ಸಮಯವೆಲ್ಲ ಪೂರಾ ಸಂಗೀತದತ್ತ ವಾಲಿತು. ಎ. ಡಿ. ಜಕರಿಯರವರು ಬಾಲ್ಯದಲ್ಲಿಯೇ ಪಾಶ್ಚಾತ್ಯ ಸಂಗೀತ ಪಿಟೀಲು ವಿದ್ವಾಂಸರಾಗಿದ್ದ ತಂದೆ ಅಧಿಸಾಯಂ ಪಿಳ್ಳೈ ಅವರಿಂದ ಪ್ರಭಾವಿತರಾಗಿ ಜರ್ಮನ್‌ ಪಿಟೀಲು  ವಾದಕ ಲುಡ್ವಿಗ್‌ ಅವರಲ್ಲಿ ಪಾಶ್ಚಾತ್ಯ ಸಂಗೀತ ಶಿಕ್ಷಣವನ್ನು ಪಡೆದಿದ್ದರು. ನಂತರ ಬಿ.ಎನ್‌. ಮೂರ್ತಿಯವರಲ್ಲಿ ಕರ್ನಾಟಕ ಶೈಲಿಯಲ್ಲಿ ವಯೋಲಿನ್‌ವಾದನವನ್ನು ಕಲಿತು ಅಭ್ಯಾಸದಿಂದ ಉತ್ತಮ ವಾದಕರಾದರು. ಪಲ್ಲವಿ ಎಸ್‌. ಚಂದ್ರಪ್ಪನವರ ಮಾರ್ಗದರ್ಶನದಲ್ಲಿ ಅವರ ಪ್ರತಿಭೆ ಮತ್ತೂ ವಿಕಾಸಗೊಂಡಿತು. ಹಾರ್ಮೋನಿಯಂ, ಬುಲ್‌ಬುಲ್‌, ತರಂಗ್‌ ವಾದನಗಳಲ್ಲೂ ಹಿಂದೂಸ್ಥಾನಿ ಪದ್ಧತಿಯ ಸಂಗೀತದಲ್ಲೂ ಪರಿಶ್ರಮವಿರುವ ಶ್ರೀಯುತರ ಅವಿಷ್ಕಾರ ‘ನಾದ ತರಂಗ’ ಕ್ಷೇತ್ರದಲ್ಲಿ ವಿದ್ವಾಂಸರ ಗಮನ ಸೆಳೆದಿದೆ.

ಬೆಂಗಳೂರು ಆಕಾಶವಾಣಿಯ ನಿಲಯದ ಕಲಾವಿದರಾಗಿ ಸೇವೆ ಸಲ್ಲಿಸಿದ ಸಮಯದಲ್ಲಿ ಹಲವಾರು ವಿನೂತನ ಗೇಯ ರೂಪಕಗಳನ್ನು ನಿರ್ದೇಶಿಸಿದ್ದಾರೆ. ವಾದ್ಯ ವೃಂದದ ಮೂಲಕವೂ ಇವರ ಕ್ರಿಯಾಶೀಲತೆ ಪ್ರಕಟಗೊಂಡಿದೆ. ಮುತ್ತುಸ್ವಾಮಿ ದೀಕ್ಷಿತರ ಕೃತಿಗಳಲ್ಲಿ ವಿಶೇಷ ಆಸಕ್ತಿ ತಳೆದಿರುವ ಜಕರಿಯರವರು ‘ಮಕ್ಕಳ ದೀಕ್ಷಿತರು’, ‘ದೀಕ್ಷಿತರ ಕೃತಿಗಳಲ್ಲಿ ದರ್ಶನ’ ಹಾಗೂ ‘ದೀಕ್ಷಿತರ ಕೃತಿಗಳಲ್ಲಿ ಸೌಂದರ್ಯಾನುಭೂತಿ’ ಎಂಬ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದ್ದಾರೆ.

ಭಾರತದ ಸಾಂಸ್ಕೃತಿಕ ಪ್ರತಿನಿಧಿಯಾಗಿ ಬ್ರಿಟನ್‌ದೇಶವನ್ನು ಸಂದರ್ಶಿಸಿರುವ ಶ್ರೀಯುತರಿಗೆ ರಾಜ್ಯೋತ್ಸವ ಪ್ರಶಸ್ತಿ, ಚೌಡಯ್ಯ ಸ್ಮಾರಕ ಪ್ರಶಸ್ತಿಗಳೂ ಸೇರಿದಂಥೆ ಅನೇಕ ಗೌರವಗಳು ಸಂದಿವೆ. ಕಲಾಭೂಷಣ, ಕಲಾನಿಧಿ, ಮಧುರ ವಾದನ ಪ್ರವೀಣ, ಇಸೈ ಅರುವಿ, ಕರ್ನಾಟಕ ಕಲಾಶ್ರೀ, ಗಾಂಧರ್ವ ವಿದ್ಯಾನಿಧಿ ಮುಂತಾದವು ಇವರಿಗೆ ಲಭ್ಯವಾಗಿರುವ ಗೌರವಗಳು.