೧೯೩೪ರ ಮಾರ್ಚ್‌ ತಿಂಗಳಲ್ಲಿ ಬೆಂಗಳೂರಿನಲ್ಲಿ ಜನಿಸಿದ ಶ್ರೀ ಎಂ. ನಾಗರಾಜ್ ಅವರದ್ದು ಸುಪ್ರಸಿದ್ಧ ಸಂಗೀತದ ಮನೆತನ. ತಂದೆ ಪ್ರಸಿದ್ಧ ಹಾರ್ಮೋನಿಯಂ ಮಾಂತ್ರಿಕ ದಿ|| ಅರುಣಾಚಲಪ್ಪನವರು, ಅಣ್ಣ ಪ್ರಸಿದ್ಧ ಪಿಟೀಲು ವಾದಕರಾಗಿದ್ದ ಕಲಾಭೂಷಣ ದಿ|| ಎ. ವೀರಭದ್ರಪ್ಪನವರು. ತಂದೆ ಹಾಗೂ ಅಣ್ಣಂದಿರಿಂದಲೇ ಇವರಿಗೆ ಸಂಗೀತದಲ್ಲಿ ಸಮಗ್ರ ಶಿಕ್ಷಣ. ಶಾಸ್ತ್ರೀ ಸಂಗೀತಕ್ಕಿಂತ ಸುಗಮ ಸಮಗೀತ ಕಡೆಗೆ ಇವರ ಒಲವು ಮೂಡಿ ಖ್ಯಾತ ಸುಗಮ ಸಂಗೀತ ಗಾಯಕ ಪಿ. ಕಾಳಿಂಗರಾವ್ ಹಾಗೂ ಮೈಸೂರು ಅನಂತಸ್ವಾಮಿಯವರ ಗಾಯನಕ್ಕೆ ಅನೇಕ ವರ್ಷಗಳ ಕಾಲ ಪಿಟೀಲು ಪಕ್ಕವಾದ್ಯ ನುಡಿಸಿದ್ದಾರೆ. ಅನಂತಸ್ವಾಮಿಯವರ ಅನೇಕ ಧ್ವನಿ ಸುರುಳಿಗಳಿಗೆ ಪಿಟೀಲು ಸಹಕಾರ ನೀಡಿದ್ದಾರೆ. ಇತ್ತೀಚಿನ ಖ್ಯಾತನಾಮರಾದ ಎಲ್ಲಾ ಸುಗಮ ಸಂಗೀತ ಗಾಯಕರಿಗೆ ಪಿಟೀಲು ಪಕ್ಕವಾದ್ಯ ನುಡಿಸಿದ್ದಾರೆ.

ಜೊತೆ ಜೊತೆಯಲ್ಲೇ ನೃತ್ಯ ಕ್ಷೇತ್ರದ ಕಡೆಗೆ ಧುಮುಕಿ ಅಲ್ಲಿಯೂ ಅನೇಕ ನೃತ್ಯಪಟುಗಳ ಕಾರ್ಯಕ್ರಮಗಳಿಗೆ ಪ್ರಮುಖವಾಗಿ ಸೊನಾಲ್ ಮಾನ್‌ಸಿಂಗ್, ಪ್ರತಿಭಾ ಪ್ರಹ್ಲಾದ್, ಪದ್ಮಿನಿ ರವಿ, ವೀಣಾಮೂರ್ತಿ ಮುಂತಾದವರಿಗೆ ಹಿಮ್ಮೇಳ ವಾದ್ಯಗಾರರಾಗಿ ಹೆಸರುಗಳಿಸಿದ್ದಾರೆ. ಇತ್ತೀಚಿನ ಸಾಕಷ್ಟು ನೃತ್ಯ ಕಾರ್ಯಕ್ರಮಗಳಲ್ಲಿ ನಾಗರಾಜ್ ಅವರ ಪಿಟೀಲು ಇದ್ದೇ ಇರಬೇಕನ್ನುವಷ್ಟು ಹೆಸರು ಗಳಿಸಿದ್ದಾರೆ.

ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳಲ್ಲೂ, ಅನೇಕ ಗಾಯಕರಿಗೆ ಪಕ್ಕವಾದ್ಯ ನುಡಿಸಿದ್ದಾರೆ. ’ಪ್ರಸದ್ಧ ಪ್ರತಿಷ್ಠಾನ’ ’ಮೈಸೂರು ಅನಂತಸ್ವಾಮಿ ಸಂಗೀತ ಅಕಾಡೆಮಿ’, ’ಶಾಂತಲಾ ನೃತ್ಯ ಅಕಾಡೆಮಿ’ ಮುಂತಾದ ಸಂಸ್ಥೆಗಳಿಂದ ಗೌರವಿಸಿ ಸನ್ಮಾನಿಸಲ್ಪಟ್ಟಿದ್ದಾರೆ.

ಹೀಗೆ ಆಸ್ತ್ರೀಯ ಸಂಗೀತ, ಸುಗಮ ಸಂಗೀತ ಹಾಗೂ ನೃತ್ಯ ಕ್ಷೇತ್ರಗಳಲ್ಲಿ ಪಿಟೀಲು ವಾದಕರಾಗಿ ಸಾಕಷ್ಟು ಕೃಷಿ ಮಾಡಿರುವ ಶ್ರೀ ಎಂ. ನಾಗರಾಜ್ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೨೦೦೧-೦೨ನೇ ಸಾಲಿನ ’ಕರ್ನಾಟಕ ಕಲಾ ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.