೨೧-೧-೧೯೩೧ ರಂದು ಬೆಂಗಳೂರಿನಲ್ಲಿ ಜನಿಸಿರುವ ರಾಜಾಚಾರ್ ಅವರು ತಮ್ಮ ಮೃದಂಗದಲ್ಲಿನ ಶಿಕ್ಷಣವನ್ನು ಎಂ.ಎಲ್‌. ವೀರಭದ್ರಯ್ಯನವರಲ್ಲಿ ಪಡೆದರು. ಇವರ ತಂದೆ ವಿದ್ವಾನ್‌ ಎ. ಶ್ರೀನಿವಾಸಾಚಾರ್ ತಬಲ ವಾದಕರಾಗಿದ್ದರು. ಸತತ ಅಭ್ಯಾಸದಿಂದಲೂ, ಪರಿಶ್ರಮದಿಂದಲೂ ರಾಜಾಚಾರ್ ಉತ್ತಮ ಮೃದಂಗ ವಾದಕರಾದರು.

ಆಕಾಶವಾಣಿ-ದೂರದರ್ಶನ ಕೇಂದ್ರಗಳಿಂದ ಇವರ ವಾದನ ಪ್ರಸಾರವಾಗುತ್ತಿರುತ್ತದೆ. ರಾಜ್ಯದಲ್ಲಿನ ಹಾಗೂ ನೆರೆ ರಾಜ್ಯಗಳ ಹಲವಾರು ಸುಪ್ರಸಿದ್ಧ ಸಭೆ-ಸಂಸ್ಥೆಗಳಲ್ಲಿ ಹಿರಿಯ ಕಿರಿಯ ವಿದ್ವನ್ಮಣಿಗಳನೇಕರಿಗೆ ಮೃದಂಗ ಸಹಕಾರವಿತ್ತಿದ್ದಾರೆ.

ಇನ್ನೂರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ಮೃದಂಗ ವಾದನದಲ್ಲಿ ತರಬೇತಿ ನೀಡಿರುವ ಹಿರಿಮೆ ಇವರದು. ಇವರ ವಿದ್ಯಾರ್ಥಿಗಳಲ್ಲಿ ಹಲವಾರು ಮಂದಿ ಹಿರಿಯ ವಿದ್ವಾಂಸರಾಗಿ ದೇಶ ವಿದೇಶಗಳಲ್ಲಿ ವಿಖ್ಯಾತಿ ಪಡೆದವರಾಗಿದ್ದಾರೆ.

ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿರುವ ಶ್ರೀಯುತರಿಗೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯೂ ಲಭ್ಯವಾಗಿದೆ.