ಮೃದಂಗ ವಾದಕರಾಗಿದ್ದ “ಎ” ವೆಂಕೋಬಾಚಾರ್ಯರ ಸುಪುತ್ರರಾಗಿ ೧೬-೪-೧೯೩೬ ರಂದು ಹಾಸನದಲ್ಲಿ ಜನಿಸಿದ ಆನಂದ್‌ ಅವರಿಗೆ ಬಾಲ್ಯದಿಂದಲೂ ಲಯದ ಬಗ್ಗೆ ಇದ್ದ ತೀವ್ರವಾದ ಆಸಕ್ತಿಯನ್ನು ಗುರುತಿಸಿ ಅದಕ್ಕೆ ಉತ್ತಮ ರೀತಿಯ ಪೋಷಣೆ ನೀಡಿ ಆನಂದ್‌ ಇಂದು ನಮ್ಮ ನಾಡಿನ ಅತಿ ಶ್ರೇಷ್ಠ ಲಯವಾದ್ಯ ವಿದ್ವಾಂಸರಾಗಲು ಕಾರಣರಾದದ್ದು. ಶ್ರೀ ಕೆ.ಎಸ್‌. ಮಂಜುನಾಥನ್‌ ಅವರು, ಒಂಭತ್ತನೆಯ ವಯಸ್ಸಿನಲ್ಲಿಯೇ ಮೊದಲ ಸಾರ್ವಜನಿಕ ಕಾರ್ಯಕ್ರಮ ನೀಡುವ ಮಟ್ಟಕ್ಕೆ ತಮ್ಮನ್ನು ಏರಿಸಿದ ಗುರುಗಳ ಬಗ್ಗೆ ಆನಂದ್‌ ಅವರಿಗೆ ಆತ್ಮೀಯ ಭಕ್ತಿ, ಗೌರವ, ಕೃತಜ್ಞತೆ ತಮ್ಮನ್ನು ಹುರಿದುಂಬಿಸಿ ಅವಕಾಶಗಳನ್ನಿತ್ತ ಟಿ. ಚೌಡಯ್ಯನವರ ಬಗ್ಗೆಯೂ ವಿಶೇಷ ಗೌರವ.

ನಾಡಿನ ಹಾಗೂ ನೆರೆ ನಾಡುಗಳ ಸುಮಾರು ಮೂರು ನಾಲ್ಕು ತಲೆಮಾರಿನ ವಿದ್ವದ್ವರೇಣ್ಯರೆಲ್ಲರಿಗೂ ಮೃದಂಗ ಸಹಕಾರ ನೀಡಿರುವ ಘನತೆ ಇವರದು. ಮೃದಂಗದ ಬಗ್ಗೆ ಹಲವೆಡೆ ಸೋದಾಹರಣ ಭಾಷಣಗಳನ್ನು ನೀಡಿದ್ದಾರೆ. ವಿದೇಶಗಳಲ್ಲಿಯೂ ಇವರ ಮೃದಂಗ ವಾದನ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳು ನಡೆದಿವೆ.

ಆಕಾಶವಾಣಿಯ ‘ಎ’ ಟಾಪ್‌ ಕಲಾವಿದರಾಗಿರುವ ಇವರ ವಾದನ ಆಕಾಶವಾಣಿ ಹಾಗೂ ದೂರದರ್ಶನ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ರಾಷ್ಟ್ರೀಯ  ಪ್ರಸಾರಗಳಲ್ಲಿ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಹಿರಿಮೆ ಇವರದು ಅನೇಕ ಶಿಷ್ಯರನ್ನು ತರಬೇತಿಗೊಳಿಸಿ ಕ್ಷೇತ್ರಕ್ಕೆ ನೀಡಿರುವ ಉತ್ತಮ ಗುರುವೂ ಆಗಿರುವ ಶ್ರೀಯುತರಿಗೆ ಸಂದಿರುವ ಸನ್ಮಾನಗಳೂ ಅನೇಕ ಅನನ್ಯ ಪುರಸ್ಕಾರ “ಕರ್ನಾಟಕ ಕಲಾ ಶ್ರೀ” , ಲಯಭೂಷಣ ‘ಲಯ ಕಲಾ ನಿಪುಣ’, ‘ಮೃದಂಗ ಕಲಾ ಶಿರೋಮಣಿ’, ‘ಮೃದಂಗ ವಾದನ ಚಕ್ರವರ್ತಿ’, ‘ಕಲಾ ಭೂಷಣ’, ‘ಕಲಾ ಜ್ಯೋತಿ’ ‘ಲಯ ವಾದ್ಯ ಕಲಾ ವತಂಸ’, ‘ಮೃದಂಗ ವಾದನ ರತ್ನ’, ‘ಸ್ವಾನಂದ ಕಲಾಶ್ರೀ’ ಮುಂತಾದ ಪ್ರಶಸ್ತಿಗಳಿಂದ ಅಲಂಕೃತರಾಗಿರುವ ಆನಂದ್‌ ಅವರು ಹಲವಾರು ಲಯ ವಾದ್ಯಗೋಷ್ಠಿಗಳನ್ನೂ ನಿರ್ದೇಶಿಸಿ ಪ್ರಸ್ತುತ ಪಡಿಸಿರುತ್ತಾರೆ.