ಪ್ರಯೋಗಶೀಲತೆ ವಿನೂತನ ಕ್ರಿಯಾತ್ಮಕತೆಗಳಿಗೆ ಇನ್ನೊಂದು ಹೆಸರು ಕೃಷ್ಣಮಾಚಾರ್. ೨೧-೪-೧೯೨೦ ರಂದು ಜನಿಸಿದ ಇವರು ಸಂಗೀತ ಶಿಕ್ಷಣ ಪಡೆದುದು ಪಕ್ಕಾ ಹನುಮಂತಾಚಾರ್, ಅಮಿದಾಲ, ವೆಂಕಟಸ್ವಾಮಿ, ಧಮಿದಾಲ ವೆಂಕಪ್ಪ, ಬಿ. ವೆಂಕಟಪ್ಪ, ರಾಳ್ಲಪಲ್ಲಿ ಅನಂತ ಕೃಷ್ಣಶರ್ಮ – ಇವರುಗಳಲ್ಲಿ ಗಾಯನ ಹಾಗೂ ಪಿಟೀಲು ವಾದನಗಳೆರಡರಲ್ಲೂ ಪರಿಣತಿ ಹೊಂದಿದ್ದರು.

ನಾಡಿನ ಸುಪ್ರಸಿದ್ಧ ಸಭೆ, ಸಂಸ್ಥೆ, ಸಂಘಗಳಲ್ಲೂ ಉತ್ಸವಾದಿಗಳಲ್ಲೂ ಹಿರಿಯ-ಕಿರಿಯ ಕಲಾವಿದರನೇಕರಿಗೆ ಪಕ್ಕ ವಾದ್ಯಗಾರರಾಗಿಯೂ, ತನಿ ಪಿಟೀಲು ವಾದಕರಾಗಿಯೂ ಕೀರ್ತಿ ಗಳಿಸಿದ್ದರು. ಬೆಂಗಳೂರು ಆಕಾಶವಾಣಿ ನಿಲಯದ ಕಲಾವಿದರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದ ಇವರ ವಾದನ ಆಕಾಶವಾಣಿ ಹಾಗೂ ದೂರದರ್ಶನ ಕೇಂದ್ರಗಳಿಂದ ಪ್ರಸಾರವಾಗುತ್ತಿತ್ತು. ರಷ್ಯಾ ದೇಶದಲ್ಲೂ ಕಾರ್ಯಕ್ರಮ ನೀಡಿದ್ದರು.

ಸಂಗೀತ ನಿರ್ದೇಶಕರಾಗಿ, ರಾಗ ಸಂಯೋಜಕರಾಗಿ ಇವರು ಸಲ್ಲಿಸಿದ ಸೇವೆ ಅಪಾರ. ಹಲವಾರು ಸಂಗೀತ ರೂಪಕಗಳು, ಚಲನಚಿತ್ರ ಗೀತೆಗಳು, ಭಾವಗೀತೆಗಳು, ಗೀತ-ಚಿತ್ರ ರೂಪಕಗಳು ಇವರಿಂದ ರಾಗ ಸಂಯೋಜನೆ ಪಡೆದು ಶ್ರೋತೃಗಳ ಮನದಲ್ಲಿ ನೆಲೆ ನಿಲ್ಲುವಂತಾಗಿವೆ. ಈ ರೂಪಕಗಳೂ, ಗೀತೆಗಳೂ ಜನಪ್ರಿಯ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಯಕ್ಷಗಾನ ಹಾಗೂ ವೃತ್ತಿ ನಾಟಕ ಪ್ರಯೋಗಗಳಲ್ಲಿಯೂ ಸಂಗೀತ ನೀಡಿದ್ದಾರೆ. ‘ಪದ್ಮಚರಣ್‌’ ಎಂಬ ಅಂಕಿತದಲ್ಲಿ ಇವರು ರಚಿಸಿರುವ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ರಚನೆಗಳನ್ನು ವಿದ್ವಾಂಸರು ಆಕಾಶವಾಣಿ ಹಾಗೂ ಧ್ವನಿಸುರುಳಿಗಳ ಮೂಲಕ ಪ್ರಚಾರ ಮಾಡಿರುತ್ತಾರೆ.

‘ಕರ್ನಾಟಕ ಕಲಾ ತಿಲಕ’, ‘ರಾಜ್ಯೋತ್ಸವ ಪ್ರಶಸ್ತಿ’, ‘ಸಂಗೀತ ಕಲಾ ರತ್ನ’ ಪ್ರಶಸ್ತಿಗಳೊಡನೆ ಅನೇಕ ಸಭೆ-ಸಂಸ್ಥೆಗಳಿಂದ ಗೌರವ ಸನ್ಮಾನಗಳನ್ನು ಸ್ವೀಕರಿಸಿದ್ದ ಶ್ರೀಯುತರು ೨೦೦೩ರಲ್ಲಿ ತಮ್ಮ ಐಹಿಕ ಜೀವನದಿಂದ ವಿಮುಕ್ತರಾದರು.