ನಾಗಸ್ವರ ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದ ವೆಂಕಟಪ್ಪನವರ ಸುಪುತ್ರರಾಗಿ ೨೧-೬-೧೯೧೨ ರಂದು ಅರಕಲಗೂಡಿನಲ್ಲಿ ನಾರಾಯಣಪ್ಪ ಜನಿಸಿದರು. ಎಸ್‌. ಸಿ. ಬೇಲೂರಯ್ಯ, ಮೈಸೂರು ಆಸ್ಥಾನ ವಿದ್ವಾನ್ ದೊಡ್ಡ ಸೀನಪ್ಪ, ರಂಗಯ್ಯನಾಯ್ಡು ಹಾಗೂ ಪಿ.ಎನ್‌. ಅಂಗಪ್ಪ ಪಿಳ್ಳೆ ಇವರುಗಳಲ್ಲಿ ನಾಗಸ್ವರ ಮತ್ತು ಗಾಯನದಲ್ಲಿ ಶಿಕ್ಷಣ ಪಡೆದರು. ಮುಂದೆ ಡಾ|| ಬಿ. ದೇವೇಂದ್ರಪ್ಪ ಹಾಗೂ ಅಲತ್ತೂರು ವೆಂಕಟೇಶ ಅಯ್ಯರ್ ಅವರಲ್ಲಿ ಗಾಯನ ಮತ್ತು ಪಿಟೀಲು ವಾದನದಲ್ಲೂ ಶಿಕ್ಷಣ ಹೊಂದಿದರು. ಮುಖ ವೀಣಾ ವಾದನದಲ್ಲಿ ವಿಶೇಷ ಪರಿಣತಿ ಪಡೆದಿದ್ದ ವಿದ್ವಾಂಸರಿವರು.

ತಮ್ಮ ಗುರುಗಳೊಡನೆ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಲ್ಲದೆ ಮೈಸೂರು ಮಹಾರಾಜರ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿಯೂ ಅಸಂಖ್ಯಾತ ನಾಗಸ್ವರ ವಾದನ ಕಚೇರಿಗಳನ್ನು ಮಾಡಿದ್ದರು. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳ ಪ್ರಮುಖ ಕೇಂದ್ರ ಸಂಸ್ಥೆ-ಸಭೆಗಳಲ್ಲಿಯೂ ಮುಂಬಯಿ ಎಸ್‌.ವಿ. ಅಸೋಸಿಯೇಷನ್‌ ಇವರ ಮುಖವೀಣೆ- ನಾಗಸ್ವರ ವಾದನ ಕಚೇರಿಗಳು ನಡೆದಿದ್ದುವು. ಮೈಸೂರು ನಂತರ ಬೆಂಗಳೂರು ಆಕಾಶವಾಣಿ ಕೇಂದ್ರಗಳ ನಿಲಯದ ಕಲಾವಿದರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಹಲವಾರು ಆಕಾಶವಾಣಿ ಕೇಂದ್ರಗಳಿಂದಲೂ ಇವರ ನಾಗಸ್ವರ – ಮುಖ ವೀಣಾ ಕಾರ್ಯಕ್ರಮಗಳು ಪ್ರಸಾರವಾಗಿದ್ದುವು.

ತಿರುವೈಯ್ಯಾರಿನ ಶ್ರೀ ತ್ಯಾಗರಾಜಸ್ವಾಮಿಗಳ ಸಮಾಧಿಯಿಂದ ಮೃತ್ತಿಕೆಯನ್ನು ತಂದು ಶ್ರೀರಂಗಪಟ್ಟಣದಲ್ಲಿ ಆ ಮೃತ್ತಿಕೆಯನ್ನೂ ಸೇರಿಸಿ ತ್ಯಾಗರಾಜರ ಬೃಂದಾವನವನ್ನು ಕಟ್ಟಿಸಿ ವರ್ಷಂಪ್ರತಿ ಅಲ್ಲಿ ಆರಾಧನೆ ನಡೆಯುವಂತೆಯೂ, ನಿತ್ಯ ಪೂಜೆ ನಡೆಯುವಂತೆಯೂ ಏರ್ಪಾಟುಗಳನ್ನೂ ಮಾಡಿರುತ್ತಾರೆ.

ಸರಳತೆ, ಸಜ್ಜನಿಕೆ, ಸೌಹಾರ್ದಗಳ ಸ್ವರೂಪವೆಂಬಂತಿದ್ದ ಶ್ರೀಯುತರಿಗೆ ನಾನಾ ಸಂಘ-ಸಂಸ್ಥೆಗಳ ಗೌರವಗಳೂ ‘ಕರ್ನಾಟಕ ಕಲಾ ತಿಲಕ’, ‘ರಾಜ್ಯೋತ್ಸವ ಪ್ರಶಸ್ತಿ’, ‘ಸಂಗೀತ ಕಲಾರತ್ನ’ ಮುಂತಾದ ಪ್ರಶಸ್ತಿಗಳೂ ಲಭಿಸಿದ್ದುವು. ಸಾರ್ಥಕ ಜೀವ ನಾನಂತರ ೨೪-೧೨-೧೯೯೪ ರಂದು ನಾರಾಯಣಪ್ಪನವರು ನಾದ ಬ್ರಹ್ಮನಲ್ಲಿ ಐಕ್ಯಗೊಂಡರು.