ರಾಜ್ಯದ ಮಂಗಳವಾದ್ಯ ವಾದಕರಲ್ಲಿ ಎ.ವಿ. ನಾರಾಯಣಪ್ಪನವರಿಗೆ ಒಂದು ಗೌರವಾನ್ವಿತ ಸ್ಥಾನ ಉಂಟು. ವಾದಕ, ಬೋಧಕ ಹಾಗೂ ಆಸ್ತಿಕರಾಗಿ ಅವರ ಸ್ಥಾನ ಹಿರಿದಾದುದು.

ನಾಗಸ್ವರವು ‘ಮಂಗಳ ವಾದ್ಯ’ ಎನಿಸಿಕೊಂಡರೂ ಆ ವಾದ್ಯದ ಕಲಾವಿದರ ಸ್ಥಿತಿ-ಗತಿಗಳೇನೂ ಸುಸ್ಥಿತಿಯಲ್ಲಿ ಇರಲಿಲ್ಲ. ಈಗಲೂ ಇಲ್ಲ! ಇಂಥ ಸಮಯದಲ್ಲಿ ನಾಗಸ್ವರ-ಡೋಲು ವಾದಕರ ಏಳಿಗೆಗೆ ಶ್ರಮಿಸಿದ ಕೆಲವರಲ್ಲಿ ನಾರಾಯಣಪ್ಪನವರು ಪ್ರಮುಖರು.

ಹಾಸನ ಜಿಲ್ಲೆಯ ಅರಕಲಗೂಡು, ಅನೇಕ ಗಣ್ಯರಿಗೆ ಜನ್ಮ ನೀಡಿದ ತಾಣ. ಇಲ್ಲಿಯ ವೆಂಕಟಪ್ಪನವರು ನಾಗಸ್ವರ ವಾದಕರಾಗಿ ಜಿಲ್ಲೆಯಾದ್ಯಂತ ಪರಿಚಿತರು. ಅವರ ಮಗನಾಗಿ ನಾರಾಯಣಪ್ಪನವರು ೨೧-೬-೧೯೧೨ರಲ್ಲಿ ಜನಿಸಿದರು. ಎಸ್‌.ಸಿ. ಬೇಲೂರಯ್ಯನವರು ಇವರ ಸೋದರ ಮಾವ. ಇವರು ಪ್ರಜಾ ಪ್ರತಿನಿಧಿ ಸಭೆಯ ಸದಸ್ಯರಾಗಿ ಜನಾಂಗದ ಮುಂದಾಳಾಗಿಕ ಸೇವೆ ಸಲ್ಲಿಸಿದವರು. ನಾರಾಯಣಪ್ಪನವರು ತಮ್ಮ ಪ್ರಾರಂಭದ ಸಂಗೀತ ಶಿಕ್ಷಣವನ್ನು ಬೇಲೂರಯ್ಯನವರಲ್ಲಿ ಪಡೆದರು. ನಂತರ ಮೈಸೂರಿಗೆ ವಲಸೆ ಬಂದರು. ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ನಾಗಸ್ವರ ಕಲೆಗೆ ವಿಶೇಷ ಸ್ಥಾನ ದೊರಕಿತ್ತು. ದೊಡ್ಡ ಸೀನಪ್ಪ, ಚಿಕ್ಕಸೀನಪ್ಪ, ಚಿಂತಾಯಿ, ಮಧುರೆ ಪೊನ್ನುಸ್ವಾಮಿ ಮುಂತಾದ ವಿದ್ವನ್ಮಣಿಗಳು ಅರಮನೆಯಿಂದ ವಿಶೇಷವಾಗಿ ಪ್ರೋತ್ಸಾಹಿತರಾಗುತ್ತಿದ್ದ ಕಾಲ. ಮದುವೆ ಮನೆಯಲ್ಲೋ, ಶುಭ ಸಂದರ್ಭಗಳಲ್ಲೋ ಶಬ್ದಾಡಂಬರಕ್ಕಾಗಿ ಬಳಕೆಯಾಗುತ್ತಿದ್ದ ನಾಗಸ್ವರ ವಾದ್ಯವು ರಾಜರಿಂದ ಪುರಸ್ಕೃತಗೊಂಡು ಅರಮನೆ-ಗುರುಮನೆ-ಸಮಾಜಗಳಲ್ಲಿ ಒಂದು ಗೌರವಾನ್ವಿತ ಸಂಗೀತ ವಾದ್ಯವಾಗಿ ಬಳಕೆಗೆ ಬರತೊಡಗಿತು. ಮೈಸೂರಿನ ಸಂಗೀತದ ವಾತಾವರಣ ಹಾಗೂ ನಾಗಸ್ವರದ ಸ್ಥಾನಮಾನಗಳು ನಾರಾಯಣಪ್ಪನವರನ್ನು ಸಂಗೀತ ಕಲಿಕೆಗೆ ಉತ್ತೇಜಿಸಿತು. ಆಸ್ಥಾನ ವಿದ್ವಾನ್‌ ದೊಡ್ಡ ಚಿನ್ನಪ್ಪನವರಲ್ಲಿ ಕಲಿಯತೊಡಗಿದ ನಾರಾಯಣಪ್ಪನವರು ತಂಜಾವೂರು ರಂಗೈಯ್ಯನಾಯಿಡು ಅವರಲ್ಲಿ ಕಲಿಕೆ ಮುಂದುವರಿಸಿದರು. ಆದರೆ, ಅವರ ವಿದ್ಯಾದಾಹ ಹಿಂಗಲಿಲ್ಲ. ಕಾರಣ, ತಂಜಾವೂರಿನಲ್ಲಿ ನೆಲೆಸಿ ನಾಲ್ಕಾರು ಜನ ಗಣ್ಯ ವಿದ್ವಾಂಸರ ನಾಗಸ್ವರ-ಗಾಯನಗಳನ್ನು ನಿತ್ಯ ಕೇಳತೊಡಗಿದರು. ಈ ಕೇಳ್ಮೆಯಿಂಧ ಸಂಗೀತದ ಆಳ-ವಿಸ್ತಾರಗಳ ಹರಿವು ಹೆಚ್ಚಿದಂತೆ ಕಲಿಕೆಯ ಆಸ್ಥೆಯೂ ವರ್ಧಿಸತೊಡಗಿತು. ಪಿ.ಎನ್‌. ಅಂಗಪ್ಪ ಪಿಳ್ಳೆಯವರು ಆ ಕಾಲದ ಪ್ರತಿಷ್ಠಿತ ನಾಗಸ್ವರ ವಿದ್ವಾಂಸರು. ತಮ್ಮ ರಾಗಾಲಪನೆಗೂ ರಂಜನೀಯ ಸ್ವರ ಪ್ರಸ್ತಾರಕ್ಕೂ ಮೌಲಿಕ ಸಂಗೀತಕ್ಕೂ ಪ್ರಸಿದ್ಧರು. ಗುರುಗಳಾಗಿ ದಕ್ಷ ಶಿಕ್ಷಣದಿಂದ ನಾಲ್ಕಾರು ಶಿಷ್ಯರನ್ನು ಮುಂದಕ್ಕೆ ತಂದವರು. ಇಂತಹವರಲ್ಲಿ ಕಲಿಯುವ ಆಸೆ ನಾರಾಯಣಪ್ಪನವರಿಗೆ ಆದುದು ಸಹಜವೇ! ತಿಳಿದವರಿಂದ ಅರಿಕೆ ಮಾಡಿಕೊಂಡು ಅಂಗಪ್ಪನವರಲ್ಲಿ ಹಿಂದಿನ ಕಾಲದ ಗುರುಕುಲ ಪದ್ಧತಿಯಲ್ಲಿ ವಿದ್ಯಾಭ್ಯಾಸ ಮಾಡತೊಡಗಿದರು. ಬೆಳಗಿನ ಜಾವವೇ ಎದ್ದು ಹಾಡುಗಾರಿಕೆಯ ಅಭ್ಯಾಸ. ಒಳ್ಳೆಯ ವಿಳಂಬಕಾಲದಲ್ಲಿ ವರ್ಣಗಳ ವಿನಿಕೆ. ನಂತರ ಗುರುಗಳಿಂದ ಮಾರ್ಗದರ್ಶನ. ಶೋರ್ ತಣ್ಣಿಯ ಸೇವನೆ. ಗುರುಗಳ ಮನೆಯ ಸೇವೆ. ಗುರು ಪತ್ನಿಯ ಕೈಯಿಂದ ನೀಡಿದ ಭೋಜನ. ಮಧ್ಯಾಹ್ನದ ವೇಳೆ ಪುನಃ ಹೊಸ ಕೃತಿಗಳ ಪಾಠ, ಸಂಜೆಗೆ ಗುರುಗಳ ಇಬ್ಬರು ಪುತ್ರಿಯರಿಗೆ ಗಾಯನ ಸಂಗೀತ ಶಿಕ್ಷಣ. ರಾತ್ರಿಯ ವೇಳೆ ದೇವಸ್ಥಾನದಲ್ಲಿ ನಾಗಸ್ವರ ವಿನಿಕೆ. ಪ್ರಸಾದ ಸ್ವೀಕಾರ. ಗುರುಗಳ ಸೇವೆ. ಗುರುಗಳ ಸೇವೆಯ ನಂತರ ವಿಶ್ರಾಂತಿ, ಹೀಗೆ ಸಾಗಿತ್ತು ನಾರಾಯಣಪ್ಪನವರ ದಿನಚರಿ.

ತಂಜಾವೂರಿನಲ್ಲಿದ್ದಾಗ ಅನೇಕ ಹಿರಯ ಕಲಾವಿದರ ಸಂಗೀತ ಕೇಳುವ ಭಾಗ್ಯ ನಾರಾಯಣಪ್ಪನವರಿಗೆ ಒದಗಿತು. ಊರಿನ ದೇವಸ್ಥಾನ, ರಥೋತ್ಸವ, ಮದುವೆ ಮುಂತಾದ ಸಂದರ್ಭಗಳಲ್ಲಿ ನಡೆಯುತ್ತಿದ್ದ ಕಚೇರಿಗಳು ನಾದರಸದೌತಣವನ್ನು ಉಣಬಡಿಸುತ್ತಿದ್ದವು. ವಿಭಿನ್ನ ಬಾನಿಯ ಗಾಯಕರು ವಿವಿಧ ಶೈಲಿಯ ವಾದ್ಯ  ವಾದಕರು; ಹಿರಿಯರ ವಾದ್ಯದ ಮೇಲಿನ ಪ್ರಭುತ್ವ, ಗಂಟೆಗಟ್ಟಲೆ ರಾಗಾಲಾಪನೆ ಮಾಡುತ್ತಿದ್ದ ಅಗಣಿತ ಮನೋಧರ್ಮ, ತಾಳದ ಮೇಲಿನ ಹಿಡಿತ, ಕೃತಿಗಳಿಗೆ ಸೊಬಗು ತುಂಬು ಕೈಚಳಕ; ಅಹೋರಾತ್ರಿ ಓಲಗ ನುಡಿಸುವ ದೈತ್ಯ ಶಕ್ತಿ-ಇವುಗಳು ನಾರಾಯಣಪ್ಪನವರ ಸಂಗೀತ ವ್ಯಕ್ತಿತ್ವನ್ನು ರೂಪಿಸುವಲ್ಲಿ ಗಾಢ ಪರಿಣಾಮ ಬೀರಿತು. ಗುರುಗಳೊಡನೆ ದಕ್ಷಿಣ ಭಾರತಾದ್ಯಂತವಲ್ಲದೆ ಸಿಲೋನ್‌ನಲ್ಲೂ ಕಚೇರಿ ಮಾಡಿದರು. ಈ ‘ಪಿನ್‌ಪಾಟ್ಟು’ ನಾರಾಯಣಪ್ಪನವರಿಗೆ ಒಳ್ಳೆಯ ಕಚೇರಿಯ ಅನುಭವ ತಂದುಕೊಟ್ಟಿತು.

ಇಪ್ಪತ್ತನೇ ಶತಮಾನದ ಐದನೇ ದಶಕದಲ್ಲೇ ನಾರಾಯಣಪ್ಪನವರ ನಾಗಸ್ವರ ವಾದನ ಮದ್ರಾಸ್‌, ತಿರುಚ್ಚಿ ಮುಂತಾದ ನಿಲಯಗಳಿಂದ ಪ್ರಸಾರವಾಗತೊಡಗಿತು. ಅಲ್ಲದೆ, ಅವರ ಗಾಯನವೂ ಪ್ರಸಾರವಾಗಿವೆ. ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, ಪುಟ್ಟಪರ್ತಿ ಸತ್ಯಸಾಯಿ ಬಾಬಾರ ಜನ್ಮೋತ್ಸವ, ದಸರಾ ಸಾಂಸ್ಕೃತಿಕ ಉತ್ಸವ, ಚಾಮುಂಡಿ ಬೆಟ್ಟದ ಜಾತ್ರೆ, ನಂಜನಗೂಡಿನ ಶ್ರೀಕಂಠಮುಡಿ, ತಿರುಪತಿ ಬ್ರಹ್ಮೋತ್ಸವ-ಹೀಗೆ, ಅವರ ವಿನಿಕೆ ನಡೆಯದ ಸ್ಥಳವಿಲ್ಲ. ಅಲ್ಲದೆ, ಡಾ.ಬಿ.ದೇವೇಂದ್ರಪ್ಪ, ಆಲತ್ತೂರು ವೆಂಕಟೇಶ ಅಯ್ಯರ್ ಹಾಗೂ ಸ್ವಾಮಿ ಮಲೈ ಸೀತಾರಾಮ ಭಾಗವತರ್-ಅವರುಗಳಲ್ಲೂ ಸಂಗೀತ ಮಾರ್ಗದರ್ಶನ ಪಡೆದರು.

ಮೈಸೂರಿಗೆ ಹಿಂತಿರುಗಿದ ನಾರಾಯಣಪ್ಪನವರು ಗೃಹಸ್ಥಾಶ್ರಮವನ್ನು ಪ್ರವೇಶ ಮಾಡಿದರು. ವಾದಕ, ಬೋಧಕರಾಗಿ ಮೈಸೂರಿನ ಗಣ್ಯ ಕಲಾವಿದರಾದರು. ಮೈಸೂರಿನಲ್ಲಿ ಆಕಾಶವಾಜನಿ ಪ್ರಾರಂಭವಾದ ದಿನಗಳಲ್ಲಿ ನಾ. ಕಸ್ತೂರಿ ಮತ್ತು ಪ್ರೊ. ಎ.ಎನ್‌. ಮೂರ್ತಿರಾಯರು ಮುಖವೀಣೆಯನ್ನು ಕಲಿಯಲು ನಾರಾಯಣಪ್ಪನವರನ್ನು ಪ್ರಚೋದಿಸಿದರು. ಗ್ರಾಮಾಂತರದಲ್ಲಿ-ಜಾನಪದದಲ್ಲಿ ಮುಖವೀಣೆ ಸರ್ವೇಸಾಮಾನ್ಯವಾಗಿದ್ದರೂ ಶಾಸ್ತ್ರೀಯ ಸಂಗೀತ ವೇದಿಕೆಯ ಮೇಲೆ ಕಾಣುತ್ತಿರಲಿಲ್ಲ. ಇಂಥ ವಾದ್ಯವನ್ನು ತರಿಸಿ ಅಭ್ಯಸಿಸಿ ಕರಗತ ಮಾಡಿಕೊಂಡು ಮುಖವೀಣೆಗೆ ಶಾಸ್ತ್ರೀಯ ಸಂಗೀತ ವೇದಿಕೆಯ ಮೇಲೆ ಒಂದು ಗೌರವಾನ್ವಿತ ಸ್ಥಾನ ದೊರಕಿಸಿಕೊಟ್ಟ ಕೀರ್ತಿ ನಾರಾಯಣಪ್ಪನವರಿಗೇ ಸಲ್ಲುತ್ತದೆ. ನೋಡುವುದಕ್ಕೆ ಮೋಟುದ್ದದ ವಾದ್ಯವಾದರೂ ಮುಖವೀಣೆಯುದು ಮಧುರ ನಾದ. ಸರಿಯಾಗಿ ನುಡಿಸಿದರೆ ಮೋಹಕ ವಾದ್ಯ. ಹಿಂದಿನಿಂದಲೂ ಮಿತವ್ಯಾಪ್ತಿ ಉಳ್ಳದ್ದಾದರೂ ಸಾಧಕನ ಕೈಯಲ್ಲಿ ವಾಪ್ತಿ ಹೆಚ್ಚಬಹುದು. ಇಂಥ ಮುಖವೀಣೆಯ ವಾದಕರಾಗಿ ನಾರಾಯಣಪ್ಪನವರು ಮೈಸೂರು ಆಕಾಶವಾಣಿಯ ನಿಲಯದ ಕಲಾವಿದರಾಗಿ ಸೇರಿದರು. ಮುಂದೆ ಮೈಸೂರಿನಿಂದ ಆಕಾಶವಾಣಿ ಬೆಂಗಳೂರಿಗೆ ವರ್ಗವಾದಾಗ ಇವರೂ ಬೆಂಗಳೂರಿಗೆ ಸ್ಥಳಾಂತರವಾದರು. ಆಕಾಶವಾಣಿಯಲ್ಲಿ ನಿರ್ಮಿತವಾಗಿ ಪ್ರಸಾರವಾದ ಅನೇಕ ಸಂಗೀತ ಕಾರ್ಯಕ್ರಮಗಳು, ರೂಪಕಗಳು ಮುಂತಾದವುಗಳಲ್ಲಿ ನಾರಾಯಣಪ್ಪನವರು ಸಕ್ರಿಯವಾಗಿ ಪಾಲ್ಗೊಂಡರು. ಅವರ ವಿನಿಕೆ ಸಾಂಪ್ರದಾಯಿಕ ಚೌಕಟ್ಟಿನಲ್ಲೇ ಅರಳುತ್ತಿತ್ತು. ಸ್ವತಃ ಗಾಯಕರಾದುದರಿಂದ ಅವರ ವಾದನವು ಹಾಡಿದಂತೆಯೇ ನುಡಿಯುತ್ತಿತ್ತು. ಸಾಹಿತ್ಯ ಚೆನ್ನಾಗಿ ಅಭ್ಯಸಿಸಿದ್ದರಿಂದ ಕೃತಿಗಳ ಸಂಗತಿಗಳು ಭಾವಪೂರ್ಣವಾಗಿ ಅವರ ಕೈಯಲ್ಲಿ ಹೊಮ್ಮುತ್ತಿ‌ತ್ತು. ನಿರೂಪಣೆಯಲ್ಲಿ ಅಡಾವುಡಿ ಇರಲಿಲ್ಲ. ಚಪ್ಪಾಳೆಗಾಗಿ ಏನನ್ನೂ ನುಡಿಸುತ್ತಿರಲಿಲ್ಲ. ಸರಸ್ವತಿಯಲ್ಲಿ ಭಕ್ತಿ-ಸಂಗೀತದಲ್ಲಿ ಶ್ರದ್ಧೆ ಸಂಪ್ರದಾಯದಲ್ಲಿ ಗೌರವ-ಇದರಿಂದ ಮೂಡಿದ ಸಂಗೀತವು ಗಂಭೀರವೂ, ಗೌರವಾನಿತ್ವೂ ಆದುದು ಸಹಜವೇ. ಯಾವ ರಾಕ್ಷಸತೆಗಳಿಗೂ ಕೈಹಾಕದೆ ವಾದ್ಯ ತಂತ್ರಗಳಿಗೆ ಮಾರು ಹೋಗದೆ ಅನುಭವಿಸಿ ನುಡಿಸುತ್ತಿದ್ದರು. ಇದರಿಂದ ನಾರಾಯಣಪ್ಪನವರ ಸಂಗೀತ ಎಲ್ಲರ ಮನ್ನಣೆಗೆಕ ಪಾತ್ರವಾಯಿತು. ಕಚೇರಿಯ ಜನತೆ ನಾರಾಯಣಪ್ಪನವರು ಬೋಧಕರಾಗೂ ಸೇವೆ ಸಲ್ಲಿಸಿದ್ದಾರೆ. ಅನೇಕ ಕಿರಿಯರಿಗೆ ನಾಗಸ್ವರ-ಹಾಡುಗಾರಿಕೆ ಎರಡರಲ್ಲೂ ಪಾಠ ಮಾಡತೊಡಗಿದರು. ಇಂದಿನ ಅನೇಕ ಸುಪರಿಚಿತ ನಾಗಸ್ವರ ವಾದಕರುಗಳು ಅವರ ಶಿಷ್ಯರೇ. ಕೃತಿಗಳನ್ನು ಮೊದಲು ಹಾಡಿಸಿ, ಸಾಹಿತ್ಯಾರ್ಥವನ್ನು ಅರ್ಥೈಸಿ ನಂತರ ವಾದ್ಯದಲ್ಲಿ ಹೇಳಿಕೊಡುತ್ತಿದ್ದರು. ಇದರಿಮದ ಕಿರಿಯರಿಗೆ ಕೃತಿಗಳ ಒಳ್ಳೆಯ ಪಾಠಾಂತರವಾಗುತ್ತಿತ್ತು. ರಾಜ್ಯದಲ್ಲಿ ನಾಗಸ್ವರ ವಾದಕರ ಪರಂಪರೆ ಮುಂದುವರೆಯುವಲ್ಲಿ ನಾರಾಯಣಪ್ಪನವರ ಪಾತ್ರ ಗಣ್ಯವಾದುದು.

ನಾಲ್ಕಾರು ಸಭೆ, ದೇವಾಲಯ, ಉತ್ಸವಗಳಿಗೆ ನಾರಾಯಣಪ್ಪನವರು ಸಂಗೀತ ಕಲಾವಿದರನ್ನು ಗೊತ್ತು ಮಾಡಿಕೊಡುತ್ತಿದ್ದರು. ತಿರುಪತಿಯ ಬ್ರಹ್ಮರಥೋತ್ಸವ, ಚಾಮುಂಡೇರ್ಶವರೀ ಅಮ್ಮನವರ ಜಯಂತಿ ಮುಂತಾದ ಸಂದರ್ಭಗಳಲ್ಲಿ ರಾಜ್ಯದ ಕಲಾವಿದರುಗಳಿಂದ ಸಂಗೀತ ಕಚೇರಿ ನಡೆಸುತ್ತಿದ್ದರು. ಎಲ್ಲರೊಡನೆ ಸೌಜನ್ಯದ ಮಾತು, ಸುಸಂಸ್ಕೃತ ನಡವಳಿಕೆ ತೋರುತ್ತಿದ್ದರು. ಒಳ್ಳೆಯ ಬಿಳುಪಿನ ಕಚ್ಚೆಪಂಚೆ, ಬಿಳಿ ಜುಬ್ಬ, ಸಣ್ಣ ಅಂಚಿನ ಬಿಳಿ ಉತ್ತರೀಯಗಳನ್ನು ಧರಿಸುತ್ತಿದ್ದ ಶ್ರೀಯುತರು ಮೇಲ್ನೋಟಕ್ಕೇ ಸಾತ್ವಿಕರಂತೆ ಗೋಚರವಾಗಿ ಮೊದಲ ನೋಟಕ್ಕೇ ಗೌರವಾರ್ಹರಾಗುತ್ತಿದ್ದರು. ಮಿತಭಾಷಿಯಾದರೂ ಸ್ವಾರಸ್ಯಕರವಾಗಿ ಮಾತನಾಡುತ್ತಿದ್ದರು. ದೇವರಲ್ಲಿ ಅಪಾರ ಭಕ್ತಿ. ದಿನಚರಿಯಲ್ಲಿ ಎರಡೂ ಹೊತ್ತು ಸಾಂಗವಾಗಿ ಪೂಜೆ ಮಾಡುತ್ತಿದ್ದರು. ಸಾಧು, ಸಂನ್ಯಾಸಿ, ಸ್ವಾಮಿಗಳಲ್ಲಿ ನಿರಂತರ ಭಕ್ತಿ. ಬಾಯಲ್ಲಿ ಸದಾ ರಾಮನಾಮ. ನಿತ್ಯಜೀವನದಲ್ಲಿ ಬಹುಸರಳ. ವೇಷ, ಒಡವೆ ಮತ್ತು ಮಾತು-ಯಾವುದರಲ್ಲೂ ಆಡಂಬರಕ್ಕೆ ಎಡೆಯಿಲ್ಲ. ಎದುರಾಳಿ ಯಾವುದೇ ವಯಸ್ಸಿನವರಾದರೂ ಇವರದು ವಿನೀತಭಾವ. ಓರ್ವ ಮಗ, ಓರ್ವ ಮಗಳು ಉಳ್ಳ ಪುಟ್ಟ ಸಂಸಾರ. ಮುಂದೆ ಮೊಮ್ಮಕ್ಕಳಿಂದ ತುಂಬಿದ ಮನೆ. ಅತಿಥಿಗಳ ಆದರಣೆಯಲ್ಲಿ ಬಹುಶ್ರದ್ಧೆ. ಧಾರ್ಮಿಕ ಕೆಲಸ ಎಲ್ಲಿ ನಡೆದರೂ ಇವರದು ಕೊಡುಗೈ ದಾನ. ಕಿರಿಯರಿಗೆ ಮಾರ್ಗದರ್ಶಕವಾಗಬಹುದಾದ ಬದುಕು.

ನಾರಾಯಣಪ್ಪನವರ ಸಂಗೀತ ಸೇವೆಯನ್ನು ಮನ್ನಿಸಿ ಅನೇಕ ಬಿರುದು ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದುದು ಸಹಜವೇ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಬಿರುದಿನೊಂದಿಗೆ ವಾರ್ಷಿಕ ಪ್ರಶಸ್ತಿಯ ನ್ನು ನೀಡಿ ಗೌರವಿಸಿತು. ಅಲ್ಲದೆ, ಬೆಂಗಳೂರು ಗಾಯನ ಸಮಾಜ, ಕರ್ನಾಟಕ ಗಾನ ಕಲಾ ಪರಿಷತ್‌ ಮುಂತಾದ ಪ್ರತಿಷ್ಠಿತ ಸಭೆಗತಳು ಅವರನ್ನು ಸನ್ಮಾನಿಸಿವೆ. ಬೆಂಗಳೂರು ಗಾಯನ ಸಮಾಜದ ೨೦ನೆಯ ಸಂಗೀತ ಸಮ್ಮೇಳನದ (೧೯೮೮)ಸಮ್ಮೇಳನಾಧ್ಯಕ್ಷರಾಗಿ ಸಂಗೀತ ಕಲಾ ರತ್ನಬಿರುದು ಸ್ವೀಕರಿಸಿದರು. ಇವರು ಸಮಾಜದ ಸಂಗೀತ ಸಮ್ಮೇಳನದ ಅಧ್ಯಕ್ಸರಾಗಿ ಸನ್ಮಾನಿತರಾದ ಮೊದಲ ನಾಗಸ್ವರ ವಿದ್ವಾಂಸರು ಹಾಗೂ ದಕ್ಷಿಣ ಭಾರತದಲ್ಲೇ ಎರಡನೆಯವರು. ಸಮ್ಮೇಳನದ ತಮ್ಮ ಅಧ್ಯಕ್ಷ ಭಾಷಣದಲ್ಲಿ ನಾರಾಯಣಪ್ಪನವರು “ರಾಜ್ಯದಲ್ಲಿ ಮಂಗಳವಾದ್ಯವನ್ನು ಕ್ರಮಬದ್ಧವಾಗಿ ಕಲಿಸುವ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಬೇಕು. ಸಂಪ್ರದಾಯವನ್ನು ಮೀರದೆ ಪ್ರತಿಭೆಯನ್ನು ಬೆಳಗಬೇಕು. ಸರಸ್ವತಿಯನ್ನು ನಂಬಿ ಕೆಟ್ಟವರಿಲ್ಲ”-ಎಂದು ಕರೆಕೊಟ್ಟರು.

ತಿರುವಯ್ಯಾರಿನಲ್ಲಿ ತ್ಯಾಗರಾಜರ ಬೃಂದಾವನ ಸಾರ್ವಕಾಲಿಕ ಆಕರ್ಷಣೆ. ಅಂಗಪ್ಪನವರಲ್ಲಿ ಕಲಿಯುತ್ತಿರುವಾಗಲೇ ಪದೇ ಪದೇ ಈ ಕ್ಷೇತ್ರಕ್ಕೆ ನಾರಾಯಣಪ್ಪನವರು ಭೇಟಿ ಕೊಡುತ್ತಿದ್ದರು. ತ್ಯಾಗರಾಜರ ಬೃಂದಾವನವು ಭಗ್ನಾವಶೇಷ ಸ್ಥಿತಿಗೆ ತಲುಪುತ್ತಿದ್ದ ಕಾಲದಲ್ಲಿ ಅದರ ಜೀರ್ಣೋದ್ಧಾರ ಮಾಡಿದವರು ಕನ್ನಡತಿ ಬೆಂಗಳೂರು ನಾಗರತ್ನಮ್ಮ. ತಂಜಾವೂರಿನಲ್ಲಿ ಈಕೆಯ ಕೃಪಾಕಟಾಕ್ಷಕ್ಕೆ ನಾರಾಯಣಪ್ಪನವರು ಒಳಗಾದರು. ಬೃಂದಾವನದ ಜೀರ್ಣೋದ್ಧಾರಕ್ಕಾಗಿ ತಮ್ಮ ಜೀಔಮಾನದ ಸಂಪಾದನೆಯನ್ನೆಲ್ಲಾ ಧಾರೆಯೆರೆದು ಆ ಕ್ಷೇತ್ರ ಬೆಳಗುವಂತೆ ಮಾಡಿದ ಪುಣ್ಯ ಚೇತನ. ತ್ಯಾಗರಾಜರ ಬೃಂದಾವನವನ್ನು ಕುರಿತು ಆ ಕಾಲದ ಸಂಗೀತಗಾರರಲ್ಲಿ ಪರಸ್ಪರ ಇದ್ದ ವೈಷಮ್ಯ, ತಾರತಮ್ಯಗಳನ್ನು ಪರಿಹರಿಸಿ ಸಂಘಟನೆ ಮಾಡುವ ಯತ್ನವನ್ನು ನಾಗರತ್ನಮ್ಮ ಮಾಡಿದರು. ಆಕೆಗೆ ತ್ಯಾಗರಾಜರಲ್ಲಿದ್ದ ಅವಿಚ್ಛಿನ್ನ ಭಕ್ತಿ ನಾರಾಯಣಪ್ಪನವರ ಮೇಲೆ ಗಾಢ ಪರಿಣಾಮವನ್ನು ಬೀರಿತು; ಅವರು ತ್ಯಾಗರಾಜರ ಬೃಂದಾವನವನ್ನು ಪ್ರತಿಷ್ಠಾಪಿಸಲು ಪ್ರೇರೇಪಿಸಿತು.

ಶ್ರೀರಂಗಪಟ್ಟಣದ ಪೇಟೆ ಬೀದಿಯಲ್ಲಿರುವ ಕೋದಂಡರಾಮಸ್ವಾಮಿ ದೇವಸ್ಥಾನ ಪ್ರಾಚೀನವಾದುದು. ವಿಜಯನಗರದ ಅರಸರ ಕಾಲದಲ್ಲಿ ನಾಗಸ್ವರ ವಂಶಸ್ಥರಿಗೆ ನೀಡಿದ ಉಂಬಳಿ (ಈ ಕುರಿತ ಶಾಸನ ಗರ್ಭಗುಡಿಯ ಮುಂಭಾಗದಲ್ಲಿ ಈಗಲೂ ಇದೆ). ಈ ದೇವಸ್ಥಾನದಲ್ಲಿ ಇನ್ನೊಂದು ವಿಶೇಷವೂ ಉಂಟು. ಸಾಮಾನ್ಯವಾಗಿ ಅಮ್ಮನವರು ದೇವರ ಎಡಭಾಗದಲ್ಲಿ ಇರುವುದು ಸಂಪ್ರದಾಯ. ಆದರೆ, ಈ ದೇವಸ್ಥಾನದಲ್ಲಿ ಸೀತಾದೇವಿ ರಾಮನ ಬಲಭಾಗದಲ್ಲಿದ್ದಾಳೆ-ಲಗ್ನಕಾಲದಲ್ಲಿ ಇರುವಂತೆ. ನಾಗಸ್ವರ ವಿದ್ವಾಂಸರಾದ ನಾರಾಯಣಪ್ಪನವರು ಸಹಜವಾಗಿಯೇ ಈ ದೇವಾಲಯದ ಧರ್ಮದರ್ಶಿಗಳಲ್ಲಿ ಒಬ್ಬರಾಗಿದ್ದರು. ಈ ಸನ್ನಿಧಿಯಲ್ಲಿ ಒಂದು ತ್ಯಾಗರಾಜರ ಬೃಂದಾವನವನ್ನು ಸ್ಥಾಪಿಸುವ ಕನಸನ್ನು ನಾರಾಯಣಪ್ಪನವರು ಕಂಡರು. ತಿರುವಯ್ಯಾರಿನ ತ್ಯಾಗರಾಜರ ಮೂಲ ಬೃಂದಾವನದಿಂದ ತರಿಸಿದ ಮೃತ್ತಿಕೆಯಿಂದ ಇಲ್ಲಿ ಒಂದು ಬೃಂದಾವನವನ್ನು ಕಟ್ಟಿಸಿದರು . ಹೀಗಾಗಿ ಇದು ತ್ಯಾಗರಾಜರ ಮೃತ್ತಿಕಾ ಬೃಂದಾವನ ಇರುವ ಕರ್ನಾಟಕದ ಏಕೈಕ ಸಂಗೀತ ಕ್ಷೇತ್ರ. ಬೃಂದಾವನದ ಮೇಲೆ ತ್ಯಾಗರಾಜರ ಸುಂದರ ಶಿಲ ವಿಗ್ರಹವನ್ನೂ ಪ್ರತಿಷ್ಠಾಪಿಸಿದರು . ಕಾಲ ಕ್ರಮೇಣ ಗರ್ಭಗುಡಿಯ ಮುಂದೆ ಸಭಾಂಗಣ, ವೇದಿಕೆ, ಇದಕ್ಕೆ ಆತುಕೊಂಡ ಹಾಗೆ ಪಾಕಶಾಲೆ, ಭೋಜನಾಂಗಣ, ವಿಶ್ರಾಂತಿ ಕೊಠಡಿ ಮುಂತಾದವುಗಳನ್ನು ನಿರ್ಮಿಸಿದರು. ಪ್ರತಿವರ್ಷ ಸ್ವಾಮಿಯ ಸನ್ನಿಧಾನದಲ್ಲಿ ತ್ಯಾಗರಾಜರ ಆರಾಧನೆ ಮಾಡತೊಡಗಿದರು. ಪ್ರಾರಂಭದಲ್ಲಿ ಸುತ್ತಲ ನಾಲ್ಕು ಜನ ಸಂಗೀತಗಾರರು ಭಾಗವಹಿಸುತ್ತಿದ್ದ ಆರಾಧನೆಯಲ್ಲಿ ಕ್ರಮೇಣ ರಾಜ್ಯಾದ್ಯಂತದಿಂದ ಕಲಾವಿದರು ಭಾಗವಹಿಸತೊಡಗಿದರು. ತ್ಯಾಗರಾಜರ ಕೃತಿಗಳನ್ನು ಅವರ ಪದತಳದಲ್ಲೇ ಸಮರ್ಪಿಸುವ ಭಾಗ್ಯ ಕಲಾವಿದರಿಗೆ ಒದಗಿಸಿದರು. ಕಾವೇರಿ ತೀರದಲ್ಲೆ ರಂಗನಾಥನ ಸನ್ನಿಧಿಯಲ್ಲಿ ತ್ಯಾಗರಾಜರಿಗೆ ನಾದಾಂಜಲಿ ಅರ್ಪಿಸುವ ಅಪೂರ್ವ ಅವಕಾಶವು ನಾರಾಯಣಪ್ಪನವರ ಪ್ರಯತ್ನದಿಂದ ಒದಗಿತು. ಪೌರಾಣಿಕ, ಚಾರಿತ್ರಿಕ ಕೇಂದ್ರವಾದ ಶ್ರೀರಂಗಪಟ್ಟಣವು ತ್ಯಾಗರಾಜರ ಬೃಂದಾವನದಿಂದ ಸಂಗೀತ ಕ್ಷೇತ್ರವಾಗಿಯೂ ಬೆಳಗತೊಡಗಿತು.

ಪ್ರತಿ ವರ್ಷ ಪುಷ್ಯ ಬಹುಳ ಪಂಚಮಿಯಿಂದ (ಸಾಮಾನ್ಯವಾಗಿ ಎಲ್ಲ ಕಡೆ ತ್ಯಾಗರಾಜರ ಆರಾಧನೆಯು ಚತುರ್ಥಿಯಿಂದ ಮೂರುದಿನಗಳ ವರೆಗೆ ನಡೆಯುವುದು ವಾಡಿಕೆ.) ಮೂರು ದಿನಗಳ ಕಾಲ ಇಲ್ಲಿ ತ್ಯಾಗರಾಜರ ಆರಾಧನೆಯು ವಿಜೃಂಭಣೆಯಿಂಧ ನಡೆಯುವುದು. ಕಲಾವಿದರು ಆರಾಧನೆಯಂದು ಮುಂಜಾನೆ ಪಟ್ಟಣದ ಬೀದಿಗಳಲ್ಲಿ ದಿವ್ಯನಾಮ ಕೀರ್ತನೆಗಳನ್ನು ಹಾಡುತ್ತಾ ಉಂಛವೃತ್ತಿ ಮಾಡುವರು. ಬೃಂದಾವನದ ಮುಂದೆ ಎಲ್ಲರೂ ಕೂಡಿ ಪಂಚರತ್ನ ಕೃತಿಗಳನ್ನು ಹಾಡುವರು. ಮೇಲು ಕೀಳು, ಜಾತಿ, ಅಂತಸ್ತುಗಳ ತಾರತಮ್ಯವಿಲ್ಲದೆ ಎಲ್ಲರೂ ಕಲೆತು ಮಾಡು ವಗ ಈ ಗೋಷ್ಠಿಗಾಯನವು ಆರಾಧನೆಯ  ಮುಖ್ಯ ಅಂಗ. ಇದಲ್ಲದೆ ಕಲಾವಿದರು ತನಿಯಾಗಿ ಹಾಡಿ, ನುಡಿಸಿ, ಸಂಗೀತ ಕೈಂಕರ್ಯ ಸಲ್ಲಿಸುವರು. ಆರಾಧನೆಯ ಸಂದರ್ಭದಲ್ಲಿ ಸೀತಾ ಕಲ್ಯಾಣ, ಸುಂದರಕಾಂಡ ಪಾರಾಯಣ, ಸೂರ್ಯನಮಸ್ಕಾರ, ರಥೋತ್ಸವ ಹಾಗೂ ಸಮಾರಾಧನೆಗಳನ್ನು ವಿಧ್ಯುಕ್ತವಾಗಿ ಮಾಡುವ ಮೇಲ್ಪಂಕ್ತಿಯನ್ನು ನಾರಾಯಣಪ್ಪನವರು ಹಾಕಿಕೊಟ್ಟಿದ್ದಾರೆ. ಅವರು ಊರೂರಿಗೆ ಅಲೆದು ಧನ-ಧಾನ್ಯ ಸಂಗ್ರಹಿಸಿ ಈ ಬೃಂದಾವನವನ್ನು ಕಟ್ಟಿದರು. ಪ್ರತಿವರ್ಷ ಆರಾಧನೆಗೆ ಧಾನ್ಯ, ತರಕಾರಿ, ಹಣ್ಣು, ವಸ್ತ್ರ, ಮುಂತಾದವನ್ನು ಹತ್ತಾರು ಕಡೆ ಅಲೆದು ಸಂಗ್ರಹಿಸುತ್ತಿದ್ದರು. ಎಲ್ಲದಕ್ಕೂ ಸರಿಯಾದ ಲೆಕ್ಕವಿಟ್ಟು ದಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದುದು ನಮ್ಮ ಕಣ್ಣಬೆಳಸು. ನಾಲಕ್ಕಾರು ಹಿರಿ ಕಿರಿಯರನ್ನು  ಈ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿ ಕಾರ್ಯಕರ್ತರ ಒಂದು ತಂಡವನ್ನೇ ಅವರು ಕಟ್ಟಿದುದರಿಂದ ಆರಾಧನೆಯು ಅವರ ನಂತರವೂ ಘನವಾಗಿ ನಡೆದುಕೊಂಡು ಬರುತ್ತಿದೆ. ಶ್ರೀರಂಗಪಟ್ಟಣದ ತ್ಯಾಗರಾಜರ ಬೃಂದಾವನ-ಆರಾಧನೆಗಳು ಎ.ವಿ. ನಾರಾಯಣಪ್ಪನವರ ಶ್ರದ್ಧೆ, ದುಡಿತ, ತ್ಯಾಗಗಳ ಸಂಕೇತವಾಗಿ ಮೂಡಿದೆ.

ಹೀಗೆ, ಸಂಗೀತ ಕ್ಷೇತ್ರಕ್ಕೆ ಬಹುಮುಖ ಸೇವೆ ಸಲ್ಲಿಸಿದ ಎ.ವಿ. ನಾರಾಯಣಪ್ಪನವರು ೨೪.೧೨.೧೯೯೪ರಂದು ರಾಮನ ಪಾದಾರವಿಂದವನ್ನು ಸೇರಿದರು. ನಾದೋಪಾಸಕ, ರಾಮ ಭಕ್ತ, ತ್ಯಾಗರಾಜ ಸೇವಕ ನಾರಾಯಣಪ್ಪನವರು ಎಂದೂ ಪ್ರಾತಃ ಸ್ಮರಣೀಯರು.