ಶ್ರೀ ಎ.ವಿ.ಪ್ರಕಾಶ್ ಅವರು ಮೈಸೂರಿನ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಗಾನ ಕಲಾರತ್ನ ಶ್ರೀ ಎ.ಕೆ. ಮುತ್ತಣ್ಣನವರ ಮಗ. ಕಳೆದ ಐದು ದಶಕಗಳಿಂದ ಭಾರತದಾದ್ಯಂತ ಪ್ರಮುಖ ನಗರಗಳ ಸಂಗೀತ ಸಭೆಗಳು ಮತ್ತು ಸಮ್ಮೇಳನಗಳಲ್ಲಿ ಕೊಳಲು ವಾದನ ಕಚೇರಿಗಳನ್ನು ನೀಡಿ ಜನಮನ್ನಣೆ ಪಡೆದಿದ್ದಾರೆ. ಜೊತೆಗೆ ಆಕಾಶವಾಣಿ ಕಲಾವಿದರೂ ಕೂಡ.

೧೯೮೭ರಲ್ಲಿ ಮದ್ರಾಸಿನಲ್ಲಿ ನಡೆದ ’ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿ’ ಯವರ ೫೫ನೇ ವರ್ಷದ ’ದಕ್ಷಿಣ ವಲಯ ಸಂಗೀತ ಮಹೋತ್ಸವ’ದಲ್ಲಿ ಆ ವರ್ಷದ ’ಉತ್ತಮ ಕೊಳಲು ವಾದಕ’ ಎಂಬ ಬಿರುದಿನೊಂದಿಗೆ ಗೌರವಿಸಲ್ಪಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಾರ್ಕ್‌ ಸಮ್ಮೇಳನದಲ್ಲೂ ಪ್ರಕಾಶ ಅವರ ಕೊಳಲು ಕಾರ್ಯಕ್ರಮ ನಡೆದಿದೆ. ಜೊತೆಗೆ ಮೈಸೂರು ದಸರಾ ಸಂದರ್ಭದಲ್ಲಿ ದರ್ಬಾರ್ ಸಭಾಂಗಣದಲ್ಲಿ ಇವರ ಕೊಳಲು ಕಚೇರಿ ಹಲವು ಬಾರಿ ನಡೆದಿದೆ. ಭೂಪಾಲ್‌ನಲ್ಲಿರುವ ’ಇಂದಿರಾಗಾಂಧಿ ಅಂತರರಾಷ್ಟ್ರೀಯ ಮಾನವ ಸಂಪನ್ಮೂಲ ಸಂಗ್ರಹಾಲಯ’ದ ಆಶ್ರಯದಲ್ಲಿ ಪ್ರಕಾಶ್ ಕೊಳಲು ವಾದ್ಯದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಹಲವು ಸಂದರ್ಭಗಳಲ್ಲಿ ಅನೇಕ ಹೊರ ದೇಶಗಳಲ್ಲೂ ಇವರ ಕೊಳಲು ಕಾರ್ಯಕ್ರಮ ನಡೆದಿವೆ.

ಶ್ರೀ ಪ್ರಕಾಶ್‌ರವರು ಅನೇಕ ನೃತ್ಯ ರೂಪಕಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ರಣಬೆಳಗೊಳದಲ್ಲಿ ನಡೆದ ಮಹಾ ಮಸ್ತಕಾಭಿಷೇಕಕ್ಕಾಗಿ ’ಭರತ ಬಾಹುಬಲಿ ಬಾಲ್ಯ ಲೀಲೋತ್ಸವ’ ನೃತ್ಯ ರೂಪಕಕ್ಕೆ ಶ್ರೀ ಪ್ರಕಾಶ್ ಅವರ ಸಂಗೀತ ಸಂಯೋಜನೆಯಿದೆ.

ಬೆಂಗಳೂರು ಗಾಯನ ಸಮಾಜ ೨೦೦೧ರ ಸಾಲಿನ ತನ್ನ ಸಮ್ಮೇಳನದಲ್ಲಿ ಪ್ರಕಾಶರನ್ನು ’ವರ್ಷದ ಕಲಾವಿದ’ ರಾಗಿ ಗುರುತಿಸಿ ಗೌರವಿಸಿದೆ. ಮೈಸೂರಿನ ಸುತ್ತೂರು ಮಠಾಧೀಶರು ಮತ್ತು ಶೃಂಗೇರಿ ಸ್ವಾಮಿಗಳಿಂದಲೂ ಪ್ರಕಾಶ್ ಸನ್ಮಾನಿಸಲ್ಪಟ್ಟಿದ್ದಾರೆ. ಬೆಂಗಳೂರಿನ ನಾದಜ್ಯೋತಿ ಶ್ರೀ ತ್ಯಾಗರಾಜಸ್ವಾಮಿ ಭಜನ ಸಭಾ ಪ್ರಕಾಶರನ್ನು ’ಕಲಾಜ್ಯೋತಿ’ ಬಿರುದು ನೀಡಿ ಗೌರವಿಸಿದೆ. ಶ್ರೀಯುತರ ಅನೇಕ ಶಿಷ್ಯರು ಇಂದು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಮತ್ತು ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾಗಿಯೂ ಹೆಸರು ಮಾಡಿದ್ದಾರೆ.

ಶ್ರೀ ಎಂ.ವಿ. ಪ್ರಕಾಶ್‌ ಅವರಿಗೆ ೨೦೦೪-೦೫ರ ಸಾಲಿನ ತನ್ನ ವಾರ್ಷಿಕ ಪ್ರಶಸ್ತಿಯನ್ನಿತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡಿ ಗೌರವಿಸಿದೆ.