. ವಿ. ವರದಾಚಾರ್

ಕನ್ನಡ ರಂಗಭೂಮಿಯ ವಿಷಯದಲ್ಲಿ ಆಸ್ಥೆ ತಳೆದವರಿಗೆ ‘ನಾಟಕದ ವರದಾಚಾರ್ಯ’ರ ಹೆಸರು ತುಂಬಾ ಪರಿಚಿತ. ವರದಾಚಾರ್ಯರು ಹುಟ್ಟಿದ್ದು ೧೮೬೯ರಲ್ಲಿ. ತೀರಿಕೊಂಡದ್ದು ೧೯೨೬ರಲ್ಲಿ ತಮ್ಮ ಜೀವಿತದ ಮುಕ್ಕಾಲು ಪಾಲನ್ನು ಅವರು ಕನ್ನಡ ವೃತ್ತಿರಂಗದ ಏಳಿಗೆಗಾಗಿ ಮುಡುಪಿಟ್ಟರು. ತುಂಬ ಪ್ರಭಾವಶಾಲಿಯೆನಿಸಿದ ‘ರತ್ನಾವಳೀ ನಾಟಕ ಮಂಡಳಿ’ಯನ್ನು ಕಟ್ಟಿದರು. ಕಲಾವಂತರನ್ನು ಹುಡುಕಿ, ಕೂಡಿಸಿ, ರಂಗಶಿಕ್ಷಣ ಕೊಟ್ಟು ನಾಟಕಕಲೆಯಲ್ಲಿ ಪರಿಣತರನ್ನಾಗಿ ಮಾಡಿ, ಅವರಿಗೂ ತಮಗೂ ಕೀರ್ತಿ ತಂದುಕೊಂಡರು. ಕನ್ನಡ ನಾಟಕಗಳನ್ನು ಅಭಿನಯಿಸುತ್ತ ಕನ್ನಡ ಭೂಮಿಯ ಉದ್ದಗಲದಲ್ಲಿ ಮಾತ್ರವೇ ಅಲ್ಲದೆ, ನೆರೆಯ ತಮಿಳು, ತೆಲುಗು ರಾಜ್ಯಗಳಲ್ಲಿಯೂ ಸಂಚರಿಸಿ, ಅಲ್ಲಿನ ಜನ ನಮ್ಮ ನಾಟಕವನ್ನು ಮೆಚ್ಚಿ ಹೊಗಳುವಂತೆ ಮಾಡಿದರು. ಪ್ರದರ್ಶನವು ಉತ್ತಮಗೊಳ್ಳುವ ಸಲುವಾಗಿ, ಅವರ ಕಾಲದಲ್ಲಿ ಕ್ರಾಂತಿಕಾರಕ ಎನಿಸುವಂತಹ ಮಾರ್ಪಾಡುಗಳನ್ನೂ ಸುಧಾರಣೆಗಳನ್ನೂ ಮಾಡಿದರು. ಸ್ವತಃ ವರದಾಚಾರ್ಯರ ವೈಶಿಷ್ಟ್ಯವನ್ನು ಹತ್ತುಪಾಲು ಹಿಗ್ಗಿಸಿ, ನೋಡಿದವರು ಎಂದೆಂದಿಗೂ ಮರೆಯದಂತೆ ಮನಸ್ಸಿನ ಮೇಲೆ ಅಚ್ಚೊತ್ತಿಬಿಡುವ ಕಲಾವಂತಿಕೆ. ಅವರ ಅಭಿನಯವನ್ನು ಕಂಡಿದ್ದವರು ಹೇಳುವಂತೆ ’ನುಡಿಯಲ್ಲಿ ಹಿಡಿಯಲಾಗದ ಕಲಾಸೌಭಾಗ್ಯ ಅವರದು.’

ಜನನ-ವಿದ್ಯಾಭ್ಯಾಸ

‘ನಾಟಕ ವರದಾಚಾರ್ಯ’ರ ಪೂರ್ಣ ಹೆಸರು-ಅನಮನಪಲ್ಲಿ ವೆಂಕಟವರದಾಚಾರ್. ಹುಟ್ಟಿದ್ದು ಚಿತ್ರದುರ್ಗದಲ್ಲಿ ೧೮೬೯ನೇ ವರ್ಷದ ಫೆಬ್ರವರಿ ಎರಡನೆಯ ದಿನಾಂಕದಂದು. ತಂದೆ, ರಂಗಸ್ವಾಮಿ ಅಯ್ಯಂಗಾರರು ರೆವಿನ್ಯೂ ಶಿರಸ್ತೇದಾರರು. ಶಾಸ್ತ್ರೀಯಸಂಗೀತ ಎಂದರೆ ಅವರಿಗೆ ತುಂಬ ಆಸಕ್ತಿ. ಅದರಿಂದ ತಮ್ಮ ಮಗನಿಗೆ ಬಾಲ್ಯದಿಂದಲೇ ವಿದ್ವಾನ್ ವೆಂಕಟೇಶ ಶಾಸ್ತ್ರಿಗಳಲ್ಲಿ ಸಂಗೀತದ ಶಿಕ್ಷಣ ಕೊಡಿಸಿದರು. ಬಾಲಕನ ಸೊಂಪು ದೇಹಕ್ಕೆ ತಕ್ಕ ಸುಂದರ ಮುಖ; ಚುರುಕು ಬುದ್ಧಿ. ಸಂಗೀತ ಕಲಿಯುತ್ತಲೇ ಶಾಲೆಗಳಲ್ಲಿಯೂ ಮುಂದಾಗಿ, ಹದಿನೈದು ವರ್ಷ ವಯಸ್ಸಿನ ಒಳಗಾಗಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೊದಲವರ್ಗದ ಯಶಸ್ಸು ಪಡೆದ. ಅನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಎಫ್.ಎ. ತರಗತಿಯಲ್ಲಿ ಅಭ್ಯಾಸ ನಡೆಸಿದ. ಆ ಸಮಯದಲ್ಲಿ ಎರಗಿದ ಅಘಾತವೆಂದರೆ ತಾಯಿಯ ಮರಣ. ಅದರಿಂದಾಗಿ ಬಾಲಕನ ಬಾಳಿನಲ್ಲಿ ಬಿರುಗಾಳಿ ಬೀಸಿ ಬಡಿದಂತಾಗಿ, ಉತ್ಸಾಹ ಬತ್ತಿ, ಶಾಲೆಗೆ ಶರಣು ಹೊಡೆದು ಸಂಗೀತ ಕಛೇರಿ, ನಾಟಕ ಎಂದು ಕಾಲ ಕಳೆಯತೊಡಗಿದ. ಹಿಂದಿನ ವರ್ಷವೇ ಮದುವೆಯಾಗಿದ್ದ ತಂಗಿಯ ಮನೆಯಲ್ಲಿ ಬಿಡಾರ ಹೂಡಿದ್ದುದರಿಂದ ಊಟ, ನೆರಳುಗಳಿಗೆ ಕೊರತೆ ಇಲ್ಲದಿದ್ದರೂ ಜೀವನದ ನೆಲೆ ತಪ್ಪಿ ಮುಂದಿನ ಗುರಿ ಕಾಣದಾಗಿತ್ತು.

ನಾಟಕದತ್ತ

ವರದಾಚಾರ್ಯರು ಕಾಲ ಕಳೆಯುವ ಸಲುವಾಗಿ ನಾಟಕ ಗಳನ್ನು ನೋಡಿ, ಸಂಗೀತ ಕಛೇರಿಗಳನ್ನು ಕೇಳತೊಡಗಿದಾಗ, ತಮಗೇ ಅರಿವಿಲ್ಲದೆಯೆ ಅನುಕರಣ ಕಲೆ ಮೈ ಹತ್ತಿಕೊಂಡಿತು. ಕಂಡಕಂಡ ಕಂಪೆನಿ ನಾಟಕಗಳಲ್ಲಿ ತಾವೇ ಮುಂದಾಗಿ ಹೋಗಿ ಬೇಡಿ ಮಾಡಿದ ಪಾತ್ರಗಳಿಗಾಗಿ ಪುಡಿಗಾಸು ಸಿಕ್ಕಿದ್ದು ದೊಡ್ಡ ಮಾತಲ್ಲ; ಇವರ ಪಾತ್ರನಿರ್ವಹಣೆಯನ್ನು ನೋಡಿದ ಪ್ರೇಕ್ಷಕರು ಕಳಪೆ ಪಾತ್ರಗಳಿಗೆ ಕೂಡ ಕಳೆಯನ್ನೇರಿಸಿದ ಕಲಾವಂತಿಕೆಗೆ ತಲೆ ದೂಗಿ, ಚಪ್ಪಾಳೆಯನ್ನಿಕ್ಕಿ ಹುರಿದುಂಬಿಸಿದ್ದು ದೊಡ್ಡ ಮಾತು.

ವರದಾಚಾರ್ಯರು ಆಗ ಬೆಂಗಳೂರಿನಲ್ಲಿ ಪ್ರಸಿದ್ಧವಾಗಿದ್ದ ‘ಗೊಲ್ಲರ ಪೇಟೆ ನಾಟಕ ಕಂಪೆನಿ’ಯಿಂದ ಮೊದಲುಗೊಂಡು ಕರೆದ ಕಡೆ ಓಗೊಟ್ಟು ಪಾತ್ರಗಳನ್ನು ಅಭ್ಯಾಸ ಮಾಡಿ, ಹಾಡುಗಳಿಗೆ ತಾವೇ ಮಟ್ಟು ಕೂಡಿಸಿ, ಪಾತ್ರಕ್ಕೆ ತಮ್ಮದೇ ವಿಶಿಷ್ಟರೀತಿಯ ಅಭಿನಯ ಮೆರಗು ಕೊಟ್ಟು ಪ್ರಸಿದ್ಧಿಗೆ ಬಂದರು. ಆಚಾರ್ಯರದು ತುಂಬು ಶರೀರ; ಸೊಂಪಾದ ಶರೀರ; ಆ ವಯಸ್ಸಿಗೇ ಮೈಯುಂಡು ಪ್ರಬುದ್ಧವೆನಿಸಿದ ಪಾತ್ರ ವಿಶ್ಲೇಷಣೆ – ಈ ಎಲ್ಲದರ ಕಾರಣ ಅವರ ಕೀರ್ತಿ ಪರಿಮಳದಂತೆ ಹರಡತೊಡಗಿತು. ಹೀಗೆ ನಾಟಕಕ್ಕೆ ಸೇರಿ, ಮಗ ಕೈತಪ್ಪಿಹೋದಾನೆಂದು ಹೆದರಿ, ತಂದೆಯವರು ಮದರಾಸಿನಿಂದ ಹೆಣ್ಣು ತಂದು ಮದುವೆ ಮಾಡಿದರು. ಸೊಸೆಯಾಗಿ ಬಂದ ಅಚ್ಚಮ್ಮ ಪತಿಯ ಅನುವರ್ತಿಯಾದರು. ಮುಂದಿನ ಮೂರು ವರ್ಷಗಳಲ್ಲಿ ಮುತ್ತಿನಂಥ ಇಬ್ಬರು ಮಕ್ಕಳು.

 

ಹುಡುಗರಾಗಿದ್ದಾಗಲೇ ವರದಾಚಾರ್ಯರಿಗೆ ನಾಟಕವನ್ನು ನೋಡುವ ಆಸೆ.

ಗೌರೀ ನರಸಿಂಹಯ್ಯ

ತಮ್ಮ ಒಬ್ಬನೇ ತಮ್ಮ ’ಸ್ವಾಮಿ’(ಕೃಷ್ಣಸ್ವಾಮಿ ಅಯ್ಯಂಗಾರ್)ಯ ಮದುವೆಗೆಂದು ವರದಾಚಾರ್ಯರು ಮೈಸೂರಿಗೆ ತೆರಳಿ ತಿಂಗಳೊಪ್ಪತ್ತು ಅಲ್ಲಿ ನಿಂತಾಗ-ಅಲ್ಲಿ, ಸ್ವಂತ ನಾಟಕ ಮಂಡಳಿಯನ್ನು ನಡೆಯಿಸುತ್ತ ಸ್ತ್ರೀ ಪಾತ್ರಗಳಿಂದಾಗಿ ಪ್ರಸಿದ್ಧಿ ಪಡೆದಿದ್ದ ಗೌರೀ ನರಸಿಂಹಯ್ಯನವರ ಪರಿಚಯವಾಯಿತು. ಮನೆತನದಿಂದ ಅರಮನೆಯಲ್ಲಿ ಗೌರಿ ಕೂರಿಸುವ ಪರಿಪಾಠದಿಂದಾಗಿ ಅವರು ಗೌರೀ ನರಸಿಂಹಯ್ಯ! ಆದರೆ ತಮ್ಮದೇ ‘ಶ್ರೀ ಸರಸ್ವತೀ ವಿಳಾಸ ರತ್ನಾವಳೀ ನಾಟಕ ಸಭೆ’ಯನ್ನು ಕಟ್ಟಿ ನರಸಿಂಹಯ್ಯನವರು ಅರಮನೆಯ ಆಶ್ರಯದಲ್ಲಿ ‘ಶ್ರೀ ಚಾಮರಾಜೇಂದ್ರ ಕರ್ಣಾಟಕ ನಾಟಕ ಸಭೆ’ಯೊಡನೆಯೇ ಸ್ಪರ್ಧೆ ಹೂಡಿದ್ದರು. ವರದಾಚಾರ್ಯರ ರೂಪ, ಆಕೃತಿ, ಗಾಯನಗಳಿಗೆ ತುಂಬ ಮೆಚ್ಚಿಕೊಂಡರು; ತಮ್ಮ ಮಂಡಳಿಯಲ್ಲಿ ನಾಯಕ ನಟರಾಗಿ ಉಳಿಯಬೇಕೆಂದು ತುಂಬ ಒತ್ತಾಯ ಮಾಡಿದರು. ಆದರೆ ತಮಗೆ ಬಳಕೆಯಾಗಿದ್ದ ಬೆಂಗಳೂರನ್ನು ಬಿಟ್ಟು ಬರಲು ಆಚಾರ್ಯರು ಒಪ್ಪಲಿಲ್ಲ.

ಮತ್ತೆ ಆರು ತಿಂಗಳನಂತರ, ತಮ್ಮ ನಾಯಿಕಾ ಭೂಮಿಕೆಗೆ ತಕ್ಕ ನಾಯಕ ಪಾತ್ರಧಾರಿಯನ್ನು ಕಾಣದೆ ನರಸಿಂಹಯ್ಯನವರು ವರದಾಚಾರ್ಯರನ್ನು ಕರೆತರಲೇಬೇಕೆಂದು ನಿರ್ಧರಿಸಿದರು. ಕಡೆಗೆ ಆಚಾರ್ಯರೂ ಒಪ್ಪಿದರು. ಒಪ್ಪಿದ ಒಳ್ಳೆಯ ಮುಹೂರ್ತ ಅದೆಂತಹುದೋ ಏನೋ! ಮುಂದೆ ಅಲ್ಪಸ್ವಲ್ಪ ಅಡೆತಡೆಗಳಾದರೂ ನಾಟಕರಂಗವೇ ವರದಾಚಾರ್ಯರ ಜೀವನರಂಗವಾಯಿತು; ಮೈಸೂರು ಮನೆಯೇ ಆಯಿತು.

ಆಚಾರ್ಯರು ನರಸಿಂಹಯ್ಯನವರೊಂದಿಗೆ ಮೈಸೂರು ಸ್ಟೇಷನ್ನಿನ ಮನೆಗೆ ಜೋಡಿ ಕುದುರೆ ಸಾರೋಟಿನಲ್ಲಿ ಬಂದರು. ಕಂಪೆನಿಯವರೆಲ್ಲಾ ಬಾಗಿಲಲ್ಲಿ ನಿಂತು ಸ್ವಾಗತಿಸಿದರು. ನರಸಿಂಹಯ್ಯನವರ ಮನೆಯಲ್ಲಿ ಮಹಡಿಯ ಮೇಲೆ ವಿಶಾಲ ವಾದ ಕೊಠಡಿಯೊಂದು ಸಿದ್ಧವಾಗಿತ್ತು. ಆಚಾರ್ಯರು ಸುರ್ಯೋದಯಕ್ಕೆ ಮೊದಲು ಊರ ಹೊರಗೆ ಸುತ್ತಾಡಿ ಬರುತ್ತಿದ್ದರು. ಮನೆಗೆ ಬಂದು ಸ್ನಾನಮಾಡಿ, ಮಡಿಯುಟ್ಟು, ಸಂಧ್ಯಾವಂದನೆ ಮುಗಿಸಿ, ಕಾಫಿ ಕುಡಿಯುತ್ತಿದ್ದರು. ಕೊಠಡಿಯಿಂದ ಹೊರಗೆ ಹೋಗುತ್ತಿರಲಿಲ್ಲ. ಸಂಜೆ ಐದು ಗಂಟೆಗೆ ಸರಿಯಾಗಿ ನರಸಿಂಹಯ್ಯ-ಆಚಾರ್ಯರಿಬ್ಬರೂ ಸಂಗೀತಾಭ್ಯಾಸವನ್ನು ಆರಂಭಿಸುತ್ತಿದ್ದರು. ಯಾವ ವಾದ್ಯವನ್ನೂ ಹಿಂದಿಕ್ಕುವ, ಎಷ್ಟು-ಹೊತ್ತು ಹಾಡಿದರೂ ಕುಗ್ಗದ ಶಾರೀರ. ಕಂದ ಪದ್ಯಗಳನ್ನು ಹಾಡುವುದರಲ್ಲಿ ಹೆಸರುಗಳಿಸಿದ್ದ ಗೌರೀ ನರಸಿಂಹಯ್ಯನವರನ್ನೂ ಆಚಾರ್ಯರು ಹಿಂದಿಕ್ಕಿದರು. ಕಂದವೃತ್ತಗಳನ್ನು ಹಾಡುವಾಗ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಹೇಗೆ ಪದಗಳನ್ನು ಬಿಡಿಸಬೇಕು, ಹೇಗೆ ರಾಗಗಳನ್ನು ಆರಿಸಬೇಕು ಎಂದು ಹೇಳಿಕೊಟ್ಟವರು ನರಸಿಂಹಯ್ಯನವರು. ಆಚಾರ್ಯರನ್ನು ಪ್ರಸಿದ್ಧ ನಟರನ್ನಾಗಿ ಮಾಡಿದ ಕೀರ್ತಿ ಅವರದು.

ರಂಗ ಸಂಗೀತದಲ್ಲಿ, ಪಾತ್ರಾಭಿನಯದಲ್ಲಿ ಗೌರೀ ನರಸಿಂಹಯ್ಯನವರ ನಿರ್ದೇಶನದಂತೆ ಆಚಾರ್ಯರು ಅಸಮಾನ್ಯ ಸಾಧನೆ ಮಾಡಿದನಂತರ, ಮೊದಲ ನಾಟಕ ‘ಸತ್ಯ ಸಂಧೋಪಾಖ್ಯಾನ’, ರಂಗಾಚಾರ್ಲು ಸ್ಮಾರಕ ಭವನದಲ್ಲಿ ಪ್ರದರ್ಶನಗೊಂಡಿತು. ಇದರಲ್ಲಿ ಆಚಾರ್ಯರು ಹರಿಶ್ಚಂದ್ರನ ಪಾತ್ರವನ್ನೂ ರಾಮಚಂದ್ರ ಪಂಡಿತರು ವಿಶ್ವಾಮಿತ್ರನ ಪಾತ್ರವನ್ನೂ ನಿರ್ವಹಿಸಿದರು. ನಾಟಕದಲ್ಲಿ ತನ್ಮಯರಾದ ಪ್ರೇಕ್ಷಕರು ವರದಾಚಾರ್ಯರ ಭೂಮಿಕೆಯನ್ನು ಹೊಗಳಿದರು. ಮುಂದಿನದೇ ವರದಾಚಾರ್ಯರಿಗೆ ಅಪಾರವಾದ ಕೀರ್ತಿಯನ್ನು ತಂದ ‘ರತ್ನಾವಳಿ’ ನಾಟಕ. ಈ ನಾಟಕದ ಒಂದೊಂದು ಪ್ರದರ್ಶನದಲ್ಲಿಯೂ ರಂಗಭವನದಲ್ಲಿ ಜನ ಕಿಕ್ಕಿರಿದು ನೋಡಿದರು. ಹಿಂದೆಂದೂ ಆಗದಂಥ ವರಮಾನ ಬಂದುದರಿಂದ ಗೌರೀ ನರಸಿಂಹಯ್ಯನವರು ಹೊಸಹೊಸ ಪರದೆ, ದೃಶ್ಯಾವಳಿ, ವೇಷಭೂಷಣಗಳನ್ನು ಸಿದ್ಧಪಡಿಸಿ ಕೊಂಡು ಮತ್ತೆಮತ್ತೆ ಮೈಸೂರಿನಲ್ಲಿ ‘ರತ್ನಾವಳಿ’ಯ ಪ್ರದರ್ಶನ ಗಳನ್ನೇರ್ಪಡಿಸಿದ ನಂತರ ಸುಸಜ್ಜಿತವಾದ ಮಂಡಲಿಯೊಂದಿಗೆ ಪ್ರಯಾಣಮಾಡಿ ಬಳ್ಳಾರಿ ಮತ್ತು ಬೆಂಗಳೂರು ನಗರ ಗಳಲ್ಲಿಯೂ ನಾಟಕ ಪ್ರದರ್ಶನಗಳನ್ನೇರ್ಪಡಿಸಿದರು.

ನಾಟಕ ರಂಗ: ಒಳಗೆ, ಹೊರಗೆ

ಅಷ್ಟರಲ್ಲಿ ಆಚಾರ್ಯರ ಜೀವನದಲ್ಲಿ ತುಂಬಿಬಾರದಂತಹ ಆಘಾತವಾಯಿತು. ಮದರಾಸಿನಲ್ಲಿ ಬೆಳೆಯುತ್ತಿದ್ದ ಮಗಳು ತಟಕ್ಕನೆ ಕಾಲವಶವಾದಳು. ಸ್ವಲ್ಪ ಕಾಲದ ಅನಂತರ ಪುಟ್ಟ ಮಗನೂ ಬಾಳಿಗೆ ಆಸರೆಯಾಗಿದ್ದ ಪತ್ನಿ ಅಚ್ಚಮ್ಮನವರೂ ಆ ವರ್ಷ(೧೮೯೩) ಭುಗಿಲೆದ್ದು ಬೀಸಿ ಬಡಿಯುತ್ತಿದ್ದ ಪ್ಲೇಗು ಮಾರಿಗೆ ಬಲಿಯಾಗಿ ಹೋದರು.

ಯಶಸ್ಸಿನ ಆಕಾಶದಲ್ಲಿ ಹಕ್ಕಿಯಂತೆ ಹಾರಾಡುತ್ತಿದ್ದ ಆಚಾರ್ಯರಿಗೆ, ಪ್ರಪಾತಕ್ಕೆ ಕಡೆದು ಉರುಳಿದ ಅನುಭವ ವಾಯಿತು. ಮನಸ್ಸಿನ ತುಂಬ ಕತ್ತಲೆ ತುಂಬಿ, ಜೀವನ ದುರ್ಭರವಾಯಿತು. ‘ನನಗಿನ್ನು ನಾಟಕರಂಗ ಬೇಡ’ ಎಂದು ಮಂಡಳಿಯನ್ನು ಬಿಟ್ಟು ಬೆಂಗಳೂರಿನಲ್ಲಿಯೇ ನಿಂತುಬಿಟ್ಟರು. ಜೀವನ ನಿರ್ವಹಣಕ್ಕಾಗಿ ಬ್ರಿಟಿಷ್ ರೆಸಿಡೆಂಟರ ಕಚೇರಿಯಲ್ಲಿ ಕಾರಕೂನರಾಗಿ ಕೆಲಸಕ್ಕೆ ಸೇರಿದರು. ಕಾಲ ಉರುಳಿತು, ತಳಮಳಿಸುತ್ತಿದ್ದ ಜೀವಕ್ಕೆ ತಂಪು ಕಾಣಲಿಲ್ಲ. ನರಸಿಂಹಯ್ಯ ನವರೂ ನಾಟಕ ಸಂಸ್ಥೆಯನ್ನು ಮುಚ್ಚಿ, ಶ್ರೀರಂಗಪಟ್ಟಣಕ್ಕೆ ಅನಂತರ ನಂಜನಗೂಡಿಗೆ ನಡೆದರು.

ಪಿಡುಗು ಅಡಗಿ ವರ್ಷವಾಗುತ್ತ ಬಂತು. ವರದಾ ಚಾರ್ಯರು ಯಾಂತ್ರಿಕವಾಗಿ ಉದ್ಯೋಗದಲ್ಲಿ ತೊಡಗಿದ್ದರು. ಸ್ನೇಹಿತರೂ ಅಭಿಮಾನಿಗಳೂ ಅವರನ್ನು ಮತ್ತೆ ರಂಗಭೂಮಿಗೆ ಎಳೆತರಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಬಂಧುಗಳು ದುಂಬಾಲುಬಿದ್ದರೂ ಅವರು ಮತ್ತೆ ಮದುವೆ ಮಾಡಿಕೊಳ್ಳಲಿಲ್ಲ. ‘ಮೈಸೂರು ಬೇಡ, ನಿಮ್ಮ ಸಲುವಾಗಿ ಬೆಂಗಳೂರಿನಲ್ಲಿಯೇ ನಾಟಕ ಮಂಡಳಿ ಕಟ್ಟೋಣ’ ಎಂದು ಆಚಾರ್ಯರ ಅಭಿಮಾನಿಗಳು ೧೯೦೦ರಲ್ಲಿ ’ಬೆಂಗಳೂರು ಯೂನಿಯನ್’ ಎಂಬ ಹೆಸರಿನಿಂದ ನಾಟಕ ಸಭೆಯನ್ನೂ ಸ್ಥಾಪಿಸಿದರು. ಕಡೆಗೊಮ್ಮೆ ವರದಾಚಾರ್ಯರು ರೆಸಿಡೆಂಟರ ಕಚೇರಿಯ ಉದ್ಯೋಗವನ್ನು ಬಿಟ್ಟು ನಾಟಕ ಸಭೆಯ ಕಾರ್ಯನಿರ್ವಹಕ್ಕೆ ನಿಂತರು. ಬಂಡವಾಳಕ್ಕಾಗಿ ಐದು ಸಾವಿರ ರೂಪಾಯಿ ಕೂಡಿತು.

ಮೊದಲ ನಾಟಕ ‘ರತ್ನಾವಳಿ’. ಅದರ ಪ್ರಯೋಗವಾದ ನಂತರ ಕ್ರಮವಾಗಿ ‘ಗುಲೇಬಕಾವಲಿ’, ‘ಮನ್ಮಥ ವಿಜಯ’, ‘ಹರಿಶ್ಚಂದ್ರ’, ‘ಶಾಕುಂತಲ’, ‘ಪ್ರತಾಪಸಿಂಹ’ ಎಂದು ವರದಾಚಾರ್ಯರೇ ಸೂಚಿಸಿದ್ದರಂತೆ. ನಾಟಕಗಳಿಗೆ ಬೇಕಾದ ಪರದೆಗಳನ್ನು ರಚಿಸಲು ಹೆಸರಾಂತ ಕಲಾವಿದರಾಗಿದ್ದ ಮೀಸೆ ಶಾಮರಾಯರನ್ನು ವರದಾಚಾರ್ಯರು ನಿಯಮಿಸಿದರು. ಉಡುಪು, ಚಮಕಿ, ಜರತಾರಿ ದಿರಸುಗಳನ್ನು ತಯಾರಿಸಲು ಮೈಸೂರಿನಿಂದ ಮಹಮದ್ ಮಿರ್ಜ ಎಂಬಾತನನ್ನು ಸಂಸಾರ ಸಮೇತ ಕರೆಸಿಕೊಳ್ಳಲಾಯಿತು. ನಾಲ್ಕಾರು ತಿಂಗಳ ಕಾಲ ಭರದಿಂದ ಅಭ್ಯಾಸ ನಡೆಸಿದನಂತರ, ಪ್ರದರ್ಶನಕ್ಕೆ ಎಲ್ಲ ಸಿದ್ಧ ಎಂದು ಖಂಡಿತವಾದಮೇಲೆ ತುಳಸೀ ತೋಟದ ಚಪ್ಪರವನ್ನು ಗೊತ್ತುಮಾಡಿ ನಾಟಕಾರಂಭವಾಯಿತು.

ಆ ಕಾಲದಲ್ಲಿ ದೊಡ್ಡ ದೊಡ್ಡ ಸೀಮೆಎಣ್ಣೆ ದೀಪಗಳನ್ನೇ ರಂಗಮಂಟಪದ ಒಳಗೂ ಹೊರಗೂ ಉಪಯೋಗಿಸುತ್ತಿದ್ದರು. ಸ್ತ್ರೀ ಪಾತ್ರಗಳಿಗೆ ಭಾರಿ ಜರತಾರಿ ಸೀರೆಗಳು ಬೇಕಲ್ಲ? ದೊಡ್ಡ ದೊಡ್ಡ ಶ್ರೀಮಂತರ ಮನೆಯಿಂದ ಸಾಲ ತರುತ್ತಿದ್ದರು. ವಾರಕ್ಕೆ ಎರಡು ನಾಟಕವಾಡುತ್ತಿದ್ದರು. ಸಣ್ಣ ನಾಟಕವಾದರೆ ಬುಧವಾರ ಹಾಕುತ್ತಿದ್ದರು, ದೊಡ್ಡ ನಾಟಕವಾದರೆ ಶನಿವಾರ ಹಾಕುತ್ತಿದ್ದರು. ಜಡೆ ಕೋಲಾಟ ಹಾಕುವುದನ್ನೂ ಎಂ.ಕೃಷ್ಣಮೂರ್ತಿರಾಯರು ಸ್ತ್ರೀ ಪಾತ್ರಧಾರಿಗಳಿಗೆ ಹೇಳಿ ಕೊಟ್ಟಿದ್ದರು. ಅರ್ಧ ಗಂಟೆ ಕಾಲ ಈ ಕೋಲಾಟ ನೋಡುಗರಿಗೆ ಚೆನ್ನಾಗಿರುತ್ತಿತ್ತು. ನಾಟಕ ವಾಡುವಾಗ ಹಾರ್ಮೋನಿಯಂ ವಾದ್ಯ ಆಗಿನ ಕಾಲದಲ್ಲಿ ಇರಲಿಲ್ಲ. ಅಂಕದ ಪರದೆ ಬಿದ್ದಾಗ ಇಬ್ಬರು ನಟರು ಮರಾಠಿ ಮತ್ತು ಹಿಂದೂಸ್ತಾನಿ ಹಾಡುಗಳನ್ನು ಒಳಗಡೆ ಹೇಳುತ್ತಿದ್ದರು.

‘ಗುಲೇಬಕಾವಲಿ’ ನಾಟಕದಲ್ಲಿ ವರದಾಚಾರ್ಯರೇ ರಾಜಕಿರೀಟಿ ಪಾತ್ರ. ಅವರು ಮಂದಾರವಲ್ಲಿಯ ಉದ್ಯಾನವನಕ್ಕೆ ಮಂದಾರಪುಷ್ಪಕ್ಕಾಗಿ ಪ್ರವೇಶಿಸುವಾಗ ಒಳಗಿನಿಂದಲೇ ಕೇದಾರಗೌಳ ರಾಗದಲ್ಲಿ ಎಸ್. ಜೆ. ನರಸಿಂಹಾಚಾರ್ಯರು ರಚಿಸಿಕೊಟ್ಟಿದ್ದ ಉದ್ಯಾನವನದ ವರ್ಣನೆಯ ಹಾಡನ್ನು ಹಾಡಿಕೊಂಡು ರಂಗಮಂಟಪಕ್ಕೆ ಬರುತ್ತಿದ್ದರು. ಅವರ ಆ ವೇಷಭೂಷಣಗಳನ್ನು ನೋಡಿ, ಪ್ರೇಕ್ಷಕರು ಕರತಾಡನ ಮಾಡುತ್ತ ಆನಂದ ಪರವಶರಾಗುತ್ತಿದ್ದರು. ಶಬ್ದ ನಿಂತ ತಕ್ಷಣ ರಾಜಕಿರೀಟಿಯು, “ಈ ವನವನೆಂತು ಬಣ್ಣಿಪೆ” ಎಂದು ಅನೇಕ ಸಂಗತಿಗಳನ್ನು ಹಾಕಿ, ಪಿಟೀಲ್ ವಾದ್ಯಗಾರರ ಕೈಗಳು ಬಿದ್ದು ಹೋಗುತ್ತದೆಯೋ ಏನೋ ಎಂಬಂತೆ ಸಂಗತಿಗಳನ್ನು ಸೇರಿಸಿ ಹಾಡಿದಾಗ ಪ್ರೇಕ್ಷಕರು ಆನಂದದಿಂದ ಮೈಮರೆಯುತ್ತಿದ್ದರು.

ರಂಗದ ಬೆಳಕಿನಿಂದಾಗಿ ತಮ್ಮ ಬಾಳಿಗೂ ಬೆಳಕೇರಿ ಬಂದಿತೆನ್ನುವಷ್ಟರಲ್ಲಿ ಬೆಂಗಳೂರು ಯೂನಿಯನ್ ಸಂಘ ಒಡೆಯಿತು. ಆಚಾರ್ಯರು ನಿಸ್ಸಹಾಯಕರಾಗಿ ನಾಟಕ ಪ್ರದರ್ಶನಗಳನ್ನು ನಿಲ್ಲಿಸಿ ಕೈಕಟ್ಟಿ ಕೂರಬೇಕಾಯಿತು. ಅವರನ್ನು ನೌಕರಿಯಿಂದ ಬಿಡಿಸಿ ಮಂಡಳಿಗೆ ತಂದ ಮುಂದಾಳುಗಳು ಹಿಂದಕ್ಕೆ ನಿಂತರು. ಕಂಡಂತೆ, ಕಾಣದಂತೆ ಸಂಘದ ರಂಗ ಪರಿಕರಗಳು ಕರಗಿದವು. ಮಂಡಳಿ ಮುರಿಯಿತು. ಆರೆಂಟು ತಿಂಗಳ ಕಾಲ ಕೈವೆಚ್ಚಕ್ಕೂ ಕಾಸಿಲ್ಲದೆ ಆಚಾರ್ಯರು ತಂಗಿಯ ಮನೆಯಲ್ಲಿ ಉಳಿದರು. ಬೇಸರವೇರಿತು. ನವರಾತ್ರಿಯ ಉತ್ಸವ ನೋಡುವ ನೆವದಿಂದ ಮನೆ ಬಿಟ್ಟು ಮೈಸೂರಿಗೆ ಪ್ರಯಾಣ ಮಾಡಿದರು.

ಮೈಸೂರು ರತ್ನಾವಳೀ ನಾಟಕ ಸಭಾ

ಅವರು ಮೈಸೂರಿಗೆ ಬರುವ ಸಮಯಕ್ಕೆ ಸರಿಯಾಗಿ, ಗೌರೀ ನರಸಿಂಹಯ್ಯನವರ ಹಿಂದಿನ ನಾಟಕ ಸಂಸ್ಥೆಯನ್ನು ಮೈಸೂರಿನಲ್ಲಿದ್ದ ಕಲಾಭಿಮಾನಿಗಳು ಪುನರುಜ್ಜೀವನಗೊಳಿಸಿ ‘ಶ್ರೀ ಸರಸ್ವತೀ ವಿಳಾಸ ರತ್ನಾವಳೀ ನಾಟಕ ಸಭೆ’ ಎಂದು ಮತ್ತೆ ನಾಮಕರಣ ಮಾಡಿದ್ದರು. ವರದಾಚಾರ್ಯರು ಸ್ನೇಹಿತರ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಆಗಾಗ್ಗೆ ಪಾತ್ರ ವಹಿಸಲು ಮಾತ್ರ ಸಮ್ಮತಿಸಿದರು. ವರದಾಚಾರ್ಯರು ಪಾತ್ರವಹಿಸುವರೆಂಬ ಸುದ್ದಿ ಸಾರಿದ ದಿವಸ ನಾಟಕಶಾಲೆಯು ನೋಟಕರಿಂದ ತುಂಬಿಹೋಗುತ್ತಿತ್ತು. ಆಗ ಅರಮನೆಯಲ್ಲಿ ಒಂದು ನಾಟಕದ ಕಂಪೆನಿ ಇತ್ತು. ಅದರಲ್ಲಿ ಮುಖ್ಯವಾಗಿ ಬಿಡಾರದ ಕೃಷ್ಣಪ್ಪನವರೂ ಲಕ್ಷ್ಮೀಪತಿ ಶಾಸ್ತ್ರಿಗಳೂ ಆಚಾರ್ಯರ ಅಭಿನಯವನ್ನು ನೋಡಿ ಬೆರಗಾದರು. ಅರಮನೆಯ ಕಂಪೆನಿಯನ್ನು ಸೇರಬೇಕೆಂದು ಪ್ರಾರ್ಥಿಸಿದರು. ಆದರೆ ಆಚಾರ್ಯರು ಒಪ್ಪಲಿಲ್ಲ. ಈ ಸಂಗತಿಯನ್ನು ಕೇಳಿ ತಿಳಿದ ಆಚಾರ್ಯರ ಅಭಿಮಾನಿಗಳಿಗೆ ಅವರ ಉಜ್ವಲವಾದ ಅಭಿನಯ ಶಕ್ತಿಯು ನಷ್ಟವಾಗಕೂಡದು ಎನ್ನಿಸಿತು. ಒಂದು ಹೊಸ ಮಂಡಳಿಯನ್ನೇ ಸ್ಥಾಪಿಸಿ ರಂಗಕಲಾ ಕುಶಲರಾದ ವರದಾಚಾರ್ಯರನ್ನೇ ಸರ್ವಾಧಿಕಾರಿಗಳನ್ನಾಗಿ ಮಾಡಬೇಕೆಂದು ಸಂಕಲ್ಪಿಸಿದರು. ‘ಶ್ರೀ ಸರಸ್ವತೀ ವಿಳಾಸ ರತ್ನಾವಳೀ ನಾಟಕ ಸಭೆ’ಗೆ ‘ಮೈಸೂರು ರತ್ನಾವಳೀ ನಾಟಕ ಸಭಾ’ ಎಂಬ ಹೊಸ ಹೆಸರನ್ನಿಟ್ಟು ೧೯೦೨ರ ಫೆಬ್ರವರಿ ತಿಂಗಳಿನಲ್ಲಿ ಹೊಸ ಮಂಡಳಿಯನ್ನು ಪ್ರಾರಂಭಿಸಲಾಯಿತು. ಕಂಪೆನಿಯ ಸಕಲ ಸ್ವತ್ತಿಗೂ ಆಡಳಿತಕ್ಕೂ ವರದಾಚಾರ್ಯರು ಸರ್ವಾಧಿಕಾರಿಗಳಾದರು.

ಮುಂದಿನ ಎರಡು ದಶಕಗಳ ಕಾಲ, ಆಗಾಗ ಸಣ್ಣಪುಟ್ಟ ಎಡರುಗಳು ಅಡ್ಡ ಬಂದರೂ ಒಟ್ಟಾರೆ ವರದಾಚಾರ್ಯರ ದಿಗ್ವಿಜಯದ ಕಾಲವೆನಿಸಿ, ಕನ್ನಡ ವೃತ್ತಿರಂಗದ ಇತಿಹಾಸದಲ್ಲಿ ಅದು ‘ಸ್ವರ್ಣಯುಗ’ವೇ ಆಯಿತು. ಅವರ ರತ್ನಾವಳೀ ಕಂಪೆನಿ, ಮನೆಮನೆಯ ಮಾತಾಯಿತು. ವರದಾಚಾರ್ಯರ ಸೋದರ ಕೃಷ್ಣಸ್ವಾಮಿ ಅಯ್ಯಂಗಾರರು (ಶಾಮಣ್ಣ) ರೈಲ್ವೆ ಗಾರ್ಡ್ ಉದ್ಯೋಗದಲ್ಲಿದ್ದವರು ಕೆಲಸಬಿಟ್ಟು ಅಣ್ಣನ ನಾಟಕ ಕಂಪೆನಿಯನ್ನು ಸೇರಿ ಆಡಳಿತದ ಮೇಲ್ವಿಚಾರಣೆ ನೋಡಿ ಕೊಂಡರು. ಅವರೂ ಒಳ್ಳೆಯ ನಟರು. ಹಲವರು ಪರಿಣತ ಕಲಾವಿದರು ಮಂಡಳಿಯನ್ನು ಸೇರಿದರು. ಕ್ರಮವಾಗಿ ಶಾಕುಂತಲ, ರತ್ನಾವಳೀ, ಮನ್ಮಥವಿಜಯ, ಹರಿಶ್ಚಂದ್ರ, ಸತ್ಯವರ್ಮ, ಮಂದಾರವಲ್ಲೀ ಪರಿಣಯ, ಮಾಳವಿಕಾಗ್ನಿಮಿತ್ರ, ನಿರುಪಮಾ, ರಾಮವರ್ಮ-ಲೀಲಾವತಿ, ಕಾಮಪಾಲ, ಪ್ರತಾಪ ಸಿಂಹ, ಸದಾರಮೆ, ಮಕರಂಧಿಕಾಪರಿಣಯ ಇವುಗಳಲ್ಲದೆ, ಸ್ವತಃ ವರದಾಚಾರ್ಯರೇ ರಚಿಸಿದ ಇಂದಿರಾನಂದ, ಮಿಮಲಾ ವಿಜಯ ಮೊದಲಾದ ನಾಟಕಗಳು ರಂಗದ ಮೇಲೆ ಬಂದವು. ಮೊದಲಿಗೆ ಶನಿವಾರದಂದು ವಾರಕ್ಕೆ ಒಂದು ನಾಟಕ ಮಾತ್ರ ಪ್ರದರ್ಶನವಾಗುತ್ತಿದ್ದುದು, ಜನತೆಯ ಒತ್ತಾಯಕ ಕಾರಣ, ಬುಧವಾರ, ಭಾನುವಾರಗಳ ರಾತ್ರಿಯಲ್ಲಿಯೂ ನಾಟಕಗಳು ಪ್ರಯೋಗಗೊಂಡವು. ನಿಂತ ನೀರಾಗದೆ ಮಂಡಳಿ ಹೊಸ ನಾಟಕಗಳನ್ನು ರೂಢಿಸಿಕೊಂಡು, ದೃಶ್ಯ ಸಂಯೋಜನೆ, ರಂಗ ಸಂಗೀತ, ವೇಷಭೂಷಣಗಳ ನಿಟ್ಟಿನಿಂದ ಹೊಸ ಹಾದಿಯನ್ನೇ ನಿರ್ಮಿಸಿ ಕನ್ನಡನಾಡಿನ ಮುಖ್ಯ ಪಟ್ಟಣಗಳಲ್ಲಿ ಬೀಡುಬಿಟ್ಟು, ವೃತ್ತಿನಾಟಕದ ವಿಷಯದಲ್ಲಿ ಜನತೆಯಿಂದ ಅಪಾರ ಅನುರಾಗವನ್ನು ಸಂಪಾದಿಸಿತು.

ಸಂಸ್ಥೆಯಲ್ಲಿದ್ದ ನಟವರ್ಗದವರು ಮತ್ತು ಸಿಬ್ಬಂದಿಯವರನ್ನು ತಮ್ಮ ಬಂಧುಗಳು ಎಂದೇ ಆಚಾರ್ಯರು ಕಾಣುತ್ತಿದ್ದರು. ಅವರಿಗೆ ತಾವು ಯಜಮಾನ ಎಂಬ ಗರ್ವವಿರಲಿಲ್ಲ. ಎಲ್ಲರೊಡನೆ ಸ್ನೇಹದಿಂದ ಬೆರೆಯುತ್ತಿದ್ದರು. ಅನೇಕರ ಮುಂಜಿ, ಮದುವೆಗಳಿಗೆ ಸಹಾಯಮಾಡಿ ಕಲೆಯ ಅಭಿವೃದ್ದಿಗಾಗಿಯೇ ಸದಾ ಚಿಂತಿಸುತ್ತ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟರು.

ಅಸಾಧಾರಣ ನಟ

ಪರಿಣತರಾದ ನಟರಿಂದ ಕೂಡಿ, ಮಂಡಳಿ ತನ್ನ ಕಾಲಮೇಲೆ ತಾನು ನಿಂತಾಗಲೂ ‘ಯಜಮಾನ’ರಾದ ಆಚಾರ್ಯರು ನಿತ್ಯಜಾಗೃತರಾಗಿ, ತಮಗೆ ದೈವದತ್ತವಾಗಿದ್ದ ಕಲೆಯನ್ನು ಬಳಸಿ ಬೆಳೆಸಿಕೊಳ್ಳುತ್ತ, ಪ್ರತಿಯೊಂದು ನಾಟಕದಲ್ಲಿಯೂ ನಾಯಕ ಭೂಮಿಕಿಯಲ್ಲಿ ನಿಂತು, ಜನ ಆವರೆಗೆ ಕಾಣದಂಥ ಪಾತ್ರದ ಗುಣಧರ್ಮವನ್ನು ಹೊಸ ಹೊಸದಾಗಿ ಹರಿಸಿದರು. ಯಾವ ಪಾತ್ರವೇ ಆಗಲಿ ಆಚಾರ್ಯರು ಅದ್ಭುತವಾಗಿ ನಿರ್ವಹಿಸುತ್ತಿದ್ದರು. ಪ್ರೀತಿ, ಕೋಪ, ಶೌರ್ಯ, ಕರುಣೆ-ಯಾವ ಭಾವವನ್ನಾಗಲಿ ಬೇರೆ ಯಾರೂ ತಮಗೆ ಸಮರಲ್ಲ ಎನ್ನುವಂತೆ ತೋರಿಸುತ್ತಿದ್ದರು. ನಮ್ಮ ದೇಶದಲ್ಲಿ ತನ್ನ ತಪ್ಪಿನಿಂದಲೋ ದುರದೃಷ್ಟದಿಂದಲೋ ಕಷ್ಟಪಟ್ಟು ಕಡೆಗೂ ಕಷ್ಟದಲ್ಲಿಯೇ ಜೀವನ ಮುಗಿಸುವ ನಾಯಕರ ನಾಟಕಗಳಿರಲಿಲ್ಲ. ಇಂತಹವು ಬಂದದ್ದು ಪಶ್ಚಿಮ ದೇಶಗಳಿಂದ. ಇಂತಹ ನಾಯಕರ ಪಾತ್ರಗಳನ್ನು ವರದಾ ಚಾರ್ಯರು ಅಮೋಘವಾಗಿ ಅಭಿನಯಿಸುತ್ತಿದ್ದರು. ಅವರು ರಾಮವರ್ಮ, ಕೀಚಕ, ರಾವಣ ಮುಂತಾದ ಪಾತ್ರಗಳನ್ನು ಅಭಿನಯಿಸಿದ್ದನ್ನು ಒಮ್ಮೆ ನೋಡಿದವರು ಮರೆಯುವಂತಿರ ಲಿಲ್ಲ. ಅವರ ಕಂಠ ಅದ್ಭುತವಾದದ್ದು. ಆದರೆ ಸಂಗೀತವನ್ನು ವಿವೇಚನೆ ಇಲ್ಲದೆ ಬಳಸಲಿಲ್ಲ. ಸನ್ನಿವೇಶಕ್ಕೆ ತಕ್ಕ ಹಾಗೆ ಸಂಗೀತವನ್ನು ಬಳಸಿ ನಾಟಕದ ಪರಿಣಾಮ ಆಳವಾಗುವಂತೆ ಮಾಡಿದರು. ಅಭಿನಯ ಮತ್ತು ಗಾಯನ ಕಲೆಗಳು ಒಬ್ಬ ನಟನಲ್ಲೆ ಹೀಗೆ ಸಮರಸವಾಗಿ ಸೇರುವುದು ಬಹು ವಿರಳ.

 

‘ಶಾಕುಂತಳ’ ನಾಟಕದಲ್ಲಿ ದುಶ್ಯಂತನ ಪಾತ್ರ, ‘ರಾಮವರ್ಮ-ಲೀಲಾವತಿ’ ನಾಟಕದಲ್ಲಿ ರಾಮವರ್ಮನ ಪಾತ್ರ.

 

ಸುಧಾರಣೆಗಳು

ಆಚಾರ್ಯರು ವೇಷಭೂಷಣಗಳನ್ನೂ ರಂಗಪರಿಕರಗಳನ್ನೂ ಪಾತ್ರಕ್ಕೆ, ನಾಟಕದ ಕಥಾ ದ್ರವ್ಯಕ್ಕೆ ಅಸಹಜವಾಗದೆ, ಅಸಂಗತವಾಗದೆ ಹೊಂದಿಕೊಳ್ಳುವಂತೆ ಏರ್ಪಡಿಸಿದರು. ಆಧುನಿಕ ಪಾರ್ಸಿ ಮತ್ತು ಮರಾಠಿ ನಾಟಕ ಸಂಘಗಳಲ್ಲಿ ಬಳಕೆಯಲ್ಲಿದ್ದ ದೃಶ್ಯ ಸಂಬಂಧವಾದ ಆಧುನಿಕ ಸಲಕರಣೆಗಳನ್ನು ತರಿಸಿ ತಮ್ಮ ದೃಶ್ಯಾವಳಿಯ ಅರ್ಥ, ಮಹತ್ತುಗಳನ್ನೂ ಹಿಗ್ಗಿಸುವಂತೆ ಅಳವಡಿಸಿದರು. ಇದರಿಂದ ಕನ್ನಡ ರಂಗಕ್ಕೆ ಹೊಸ ಕಳೆ ಬಂದಿತು. ಪಾತ್ರದ ಸಂವಿಧಾನ, ಸೂಕ್ಷ್ಮವೂ ರಂಜಕವೂ ಆಗುವಂತೆ ಪರಿಷ್ಕರಿಸಿದರು. ರವಿವರ್ಮನ ಚಿತ್ರಗಳನ್ನೂ ಅನುಸರಿಸಿ ಪೌರಾಣಿಕ ಪಾತ್ರಗಳ ವೇಷಭೂಷಣ, ವಸ್ತ್ರಾಭರಣ, ಅಲಂಕಾರಗಳನ್ನು ರೂಪಿಸಿದರು. ಅಲ್ಲಿಯವರೆಗೆ ಋಷಿಗಳ ಪಾತ್ರ ವಹಿಸಿದವರು ಕರಿಯ ಕಾಲುಚೀಲಗಳನ್ನು ಧರಿಸುತ್ತಿದ್ದರು. ಆಶ್ರಮದ ಹುಡುಗಿ ಶಕುಂತಲ ಜರಿ ಪೀತಾಂಬರಗಳನ್ನು ಉಟ್ಟು ಹೊರೆಯಾಗಿ ಆಭರಣಗಳನ್ನೂ ಹೇರಿಕೊಳ್ಳುತ್ತಿದ್ದಳು. ಶಕುನಿ ಪಾತ್ರದವರು ರಜಪೂತ ಸರದಾರ ನಂತೆ ವೇಷಧರಿಸುತ್ತಿದ್ದ. ಹಿರಣ್ಯಕಶಿಪು, ರಾವಣ ಮೊದಲಾದ ಪಾತ್ರಧಾರಿಗಳು ದೆವ್ವ ಬಿಡಿಸುವ ಮಾಂತ್ರಿಕರಂತೆ ಕಾಣುತ್ತಿದ್ದರು. ಈಗ ಅದೆಲ್ಲ ಬದಲಾಯಿತು. ವೇಷಭೂಷಣಗಳು ಪಾತ್ರಕ್ಕೆ ಒಪ್ಪುವಂತಿದ್ದವು. ಹೀಗೆ ವರದಾಚಾರ್ಯರು ಪೌರಾಣಿಕ ಪಾತ್ರಗಳನ್ನು ಅವರವರಿಗೆ ಸಹಜವಾದ ಪೀಠಗಳಲ್ಲಿರಿಸಿ ರಂಗಕ್ಕೆ ನೈಜತೆ ತಂದರು. ಹಳೆಯ ಅನೇಕ ನಾಟಕಗಳನ್ನೂ ಪ್ರದರ್ಶನಕ್ಕೆ ಹೆಚ್ಚು ಯೋಗ್ಯವಾಗುವಂತೆ ತಿದ್ದಿದರು. ತಾವೇ ಸ್ವತಂತ್ರವಾಗಿ ಎರಡು ನಾಟಕಗಳನ್ನು ರಚಿಸಿದರು. ಸಂಸ್ಕೃತ-ಕನ್ನಡ

ಪಂಡಿತರುಗಳನ್ನು ತಮ್ಮೊಂದಿಗೇ ಮಂಡಳಿಯಲ್ಲಿ ಇಟ್ಟುಕೊಂಡು, ಸೂಕ್ತ ಸಲಹೆಗಳನ್ನು ಕೊಟ್ಟು ಪುರಾಣಗಳಲ್ಲಿ ಹೇಳಿದ ಕಥೆ ಮತ್ತು ಪಾತ್ರಗಳಿಗೆ ಅಪಚಾರವಾಗದಂತೆ, ಹೊಸ ನಾಟಕ ಗಳನ್ನು ಬರೆಸಿದರು.

ಹೀಗೆ ತಮ್ಮ ಮಂಡಳಿಯನ್ನು ಹಲವಾರು ನಿಟ್ಟುಗಳಿಂದ ಸಿದ್ಧಪಡಿಸಿಕೊಂಡು ರಂಗಕಲೆಯನ್ನು ಮತ್ತೆ ಮತ್ತೆ ಮಥಿಸಿ ಹೊಸ ಪಾಕವನ್ನೇ ಸಿದ್ಧಗೊಳಿಸಿ ಆಚಾರ್ಯರು ಆ ಅಮೃತ ವನ್ನು ಊರುಊರುಗಳಿಗೆ ಉಣಬಡಿಸಿದರು.

ಬಲಗೈ ಮುರಿದಂತೆ

೧೯೦೩-೦೪ರಿಂದ ನಾಲ್ಕಾರು ವರ್ಷಗಳವರೆಗೆ ಬೆಂಗಳೂರು ಮೈಸೂರುಗಳಲ್ಲಿಯೇ ಆರಾರು ತಿಂಗಳ ಕಾಲ ಮೊಕ್ಕಾಂ ಮಾಡಿ, ಮಂಡಳಿ ನಾಟಕಗಳನ್ನು ಪ್ರದರ್ಶಿಸಿತು. ನವರಾತ್ರಿಯ ಉತ್ಸವವನ್ನು ಬೇರೆ ಊರುಗಳಿಂದ ನೋಡಬಂದ ಜನರಿಗೆ ಆಚಾರ್ಯರ ನಾಟಕಗಳನ್ನು ನೋಡದೆ ಉತ್ಸವ ಪೂರ್ತಿಯಾಗುತ್ತಿರಲಿಲ್ಲ. ಉಳಿದ ಕಾಲದಲ್ಲಿ ಕೂಡ ಮೈಸೂರು, ಬೆಂಗಳೂರಿಗೆ ಬಂದವರು, ಅವರು ಹಳ್ಳಿಗರಾಲಿ, ಪಟ್ಟಣಿಗರಾಗಲಿ, ಕನ್ನಡಿಗರಾಗಲಿ, ಬೇರೆ ಭಾಷೆಯನ್ನು ಆಡುವವರೇ ಆಗಲಿ ರತ್ನಾವಳೀ ಕಂಪೆನಿಯ ಒಂದೆರಡು ನಾಟಕಗಳನ್ನಾದರೂ ನೋಡುವ ಸಲುವಾಗಿಯೇ ಉಳಿದು, ರಂಗದ ಮೇಲೆ ವರದಾಚಾರ್ಯರನ್ನು ನೋಡದೆ ಹಿಂದಿರುಗು ತ್ತಿರಲಿಲ್ಲ. ಕೀರ್ತಿಯಂತೆ ಸಂಪತ್ತೂ ಹರಿದು ಬಂದಿತು. ಆದರೆ ಎಂದೂ ವರದಾಚಾರ್ಯರು ಬಂದ ದುಡ್ಡನ್ನು ಎಣಿಸಿ ಇಟ್ಟವರಲ್ಲ. ವ್ಯವಹಾರ ಚಾತುರ್ಯ ಅವರಿಗಿರಲಿಲ್ಲ. ಆಚಾರ್ಯರ ತಮ್ಮ ಶಾಮಣ್ಣ (ಕೃಷ್ಣಸ್ವಾಮಿ ಅಯ್ಯಂಗಾರ್) ಹಣಕಾಸಿನ ವ್ಯವಹಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಮಂಡಳಿಗೆ ಏನೂ ಕೊರತೆಯಾಗದಂತೆ ನೋಡಿಕೊಂಡರು. ಹೀಗೆ ಆಚಾರ್ಯರಿಗೆ ಅತಿ ಮುಖ್ಯವಾದ ಆಸರೆಯಾಗಿದ್ದವರು ೧೯೧೦ರಲ್ಲಿ ಜಲೋದರ ರೋಗದಿಂದಾಗಿ ಮಡಿದಾಗ ಆಚಾರ್ಯರ ಬಲಗೈ ಮುರಿದು ಬಿದ್ದಂತಾಯಿತು.

ಅನಿವಾರ್ಯವಾಗಿ ಆಚಾರ್ಯರೇ ಹಣಕಾಸಿನ ವ್ಯವಹಾರವನ್ನು ನಿರ್ವಹಿಸಿಕೊಂಡರು. ನಾಲ್ಕು ತಿಂಗಳು ನಿಭಾಯಿಸುವುದ ರೊಳಗಾಗಿ ಅಷ್ಟೊಂದು ಉತ್ಪತ್ತಿ ಇದ್ದೂ ಸಾಲವೇರುತ್ತ, ಕೈ ಬರಿದಾಗಿಯೇ ಉಳಿದುದನ್ನು ಕಂಡಾಗ ಅವರಿಗೇ ಗಾಬರಿಯಾಯಿತು. ವೆಚ್ಚವನ್ನು ತಗ್ಗಿಸಿ ಹೆಚ್ಚಿನ ಹಣಗಳಿಸುವ ಉದ್ದೇಶದಿಂದ ಬೇರೆಬೇರೆ ಊರುಗಳಿಗೆ ಮಂಡಳಿಯೊಂದಿಗೆ ಪ್ರವಾಸ ಹೊರಟರು. ಹೋದಹೋದಲ್ಲಿ ಮಂಡಳಿ ಕೀರ್ತಿ ಪಡೆಯಿತು. ಹಣ ಹೊಳೆಯಾಗಿಯೇ ಹರಿದು ಬಂತು. ಶಿವಮೊಗ್ಗ, ಬೀರೂರು, ಚಿಕ್ಕಮಗಳೂರುಗಳಲ್ಲಿ ಪ್ರೇಕ್ಷಕರು ಆಚಾರ್ಯರ ಮೇಲೆ ಅತ್ಯಭಿಮಾನಗೊಂಡು ಸುವರ್ಣ ಪದಕಗಳನ್ನೂ ಬಿನ್ನವತ್ತಳೆಯನ್ನೂ ಅರ್ಪಿಸಿದರು. ೧೯೧೧ರಲ್ಲಿ ಮಂಗಳೂರಿನಲ್ಲಿ ಬಿಡಾರ ಹೂಡಿ ನಾಟಕವಾಡಿದಾಗ, ರಸಿಕರಾದ ಕರಾವಳಿಯ ಜನ ಮುಗಿ ಬಿದ್ದು ನೋಡಿ ಹೊಗಳಿಕೆಯ ಹೂಮಳೆಗರೆದು ಬಹುಮಾನಗಳ ಕಾಣಿಕೆ ಕೊಟ್ಟರು. ೧೯೧೨ರಲ್ಲಿ, ಆಚಾರ್ಯರಿಗೆ ಮಹತ್ತಾದ ಕೀರ್ತಿತಂದ ‘ಪ್ರಹ್ಲಾದ ಚರಿತ್ರೆ’ ಪ್ರದರ್ಶನಗೊಂಡಿತು.

ಹಿರಣ್ಯ ಕಶಿಪುವಾಗಿ

ಈ ನಾಟಕದಲ್ಲಿಯಂತೂ ಅವರು ತೋರಿಕೊಟ್ಟ ನಾಯಕ ಪಾತ್ರದ ನಿಲುವು ಅಪೂರ್ವವಾದದ್ದು. ಜಗತ್ತನ್ನೇ ಜಯಿಸಿದ ರಾಕ್ಷಸ ಸಾರ್ವಭೌಮ ಹಿರಣ್ಯಕಶಿಪುವಾಗಿ ಆತ, ತನ್ನ ಪುಟ್ಟ ಮಗುವಿನ ಮನಸ್ಸನ್ನೇ ಜಯಿಸದಾದಾಗ ಅನುಭವಿಸಿದ ಸಂಕಟ, ರೋಷ ಅಂತಿತಹುದಲ್ಲ. ಆ ಪುಟ್ಟ ದಿಟ್ಟ ಬಾಲಕ ತಂದೆಯನ್ನು ಕುರಿತು, “ನಿನಗಿಂತ ದೊಡ್ಡವನು ಇನ್ನೊಬ್ಬನಿದ್ದಾನೆ, ಆತ ನಿನ್ನಲ್ಲೂ ನನ್ನಲ್ಲೂ ಎಲ್ಲೆಲ್ಲೂ ಇದ್ದಾನೆ” ಎಂದು ನುಡಿದು ಕಂಬವನ್ನು ತೋರಿದಾಗ, ಒಳಗಿನ ರೋಷವೆಲ್ಲ ಸಿಡಿದು ಆ ಶಿಲಾಸ್ತಂಭವನ್ನು ದಾನವೇಂದ್ರ ಸೀಳುಗೆಡಹಿದ; ತನ್ನ ಕರ್ಮವೇ ಸಾಕಾರ ನರಸಿಂಹನಾಗಿ, ಕಬಳಿಸಲು ಅವತರಿಸಿ ಬಂದಾಗ ದಿಗ್ಭ್ರಾಂತನಾದ. ಆಗಲೂ ಕ್ಷಣಕಾಲ ತಡೆದು ಭಾವಿಸಿ, ತನಗೆ ದೇವದೇವನ ದಿವ್ಯದರ್ಶನ ಮಾಡಿಸಿದ ಪುಟ್ಟ ಮಗನ ಬಳಿಸಾರಿ, ಅವನನ್ನು ಅಪ್ಪಿ, ಮೈದಡವಿ, ಮೇಲೆತ್ತಿ ಮುದ್ದಿಟ್ಟು, ತಂದೆಯ ಅಪಾರ ಪ್ರೇಮವನ್ನೂ ದೇವರ ಸಾನಿಧ್ಯ ಸಾರಿದ ಭಕ್ತನ ಮಹಾ ಆನಂದವನ್ನೂ ಕಣ್ಣಿನಿಂದಲೇ ಹರಿಯಿಸಿ, ಮಗನನ್ನು ಕೆಳಗಿಳಿಸಿ, ಅನಂತರ ಬ್ರಹ್ಮಾಂಡದ ರೋಷವನ್ನೆಲ್ಲ ಆವಾಹನೆ ಮಾಡಿಕೊಂಡು ವೈರಿಯಾದ ನರಸಿಂಹನೆದುರು ವೀರಖಡ್ಗವನ್ನು ಹಿರಿದು ಹೆಜ್ಜೆ ಇಟ್ಟಾಗ ವರದಾಚಾರ್ಯರ ಪಾತ್ರದೃಷ್ಟಿ ಹಾಗೂ ಕಲಾಸಿರಿಗೆ ಮಾರುಹೋದ ಅಸಂಖ್ಯ ಪ್ರೇಕ್ಷಕರು ಪೌರಾಣಿಕ ಪಾತ್ರಗಳ ಬಗೆಗೆ ಹೊಸ ದೃಷ್ಟಿಯನ್ನೇ ತಳೆಯುವಂತಾಯಿತು.

ವಾರದಲ್ಲಿ ಎರಡು ನಾಟಕಗಳಂತೆ ಮೈಸೂರು ನಗರದಲ್ಲಿಯೇ ನಾಲ್ಕು ತಿಂಗಳಕಾಲ ಅಭಿನಯಿಸಿದಾಗ ರಂಗಾಚಾರ್ಲು ಭವನದಲ್ಲಿ ಜನ ಕಿಕ್ಕಿರಿದು ಸೇರಿತು.

ಸನ್ಮಾನಗಳ ಸುರಿಮಳೆ

‘ಪ್ರಹ್ಲಾದ ಚರಿತ್ರೆ’ಯ ಮಾತು, ಗೀತೆಗಳು ಜನದ ನಾಲಿಗೆಯ ಮೇಲೆ ಕುಣಿದವು. ಈ ನಾಟಕದಿಂದಾಗಿ ಅಪಾರವಾದ ಕೀರ್ತಿಯನ್ನು ಗಳಿಸಿದ ವರದಾಚಾರ್ಯರಿಗೆ ೧೯೧೩ರಲ್ಲಿ, ನಗರದ ಪ್ರಮುಖರು ಒಟ್ಟಾಗಿ ಮಹತ್ ಸತ್ಕಾರಮಾಡಿ ‘ಗಿಫ್ಟೆಡ್ ಆಕ್ಟರ್’ ಎಂಬ ಪ್ರಶಸ್ತಿಯನ್ನು ರತ್ನಖಚಿತವಾದ ತೋಡದೊಂದಿಗೆ ಅರ್ಪಿಸಿದರು.

‘ಪ್ರಹ್ಲಾದ ಚರಿತ್ರೆ’ಯನ್ನು ಬೆಂಗಳೂರಿನಲ್ಲಿ ಅಭಿನಯಿಸಲು ಮಂಡಳಿ ಆಗಮಿಸಿದಾಗ ಜನತೆ ಅಭೂತಪೂರ್ವವಾದ ಸ್ವಾಗತ ನೀಡಿತು. ತುಳಸೀತೋಟದ ನಾಟಕಮಂದಿರ ಹೊಸ ನಾಟಕದ ಅಳತೆಗೆ ತುಂಬ ಚಿಕ್ಕದೆನಿಸಿ, ಗಾಂಧಿನಗರಲ್ಲಿ ಕಿಚೆಟ್ಟಿ ಛತ್ರದ ಆವರಣದಲ್ಲಿ ಅತ್ಯಂತ ವಿಶಾಲವಾದ ಚಪ್ಪರ ಹಾಕಿಸಿ ಹೊಸ ನಾಟಕಮಂದಿರವನ್ನೇ ನಿರ್ಮಿಸಿ ಸತತವಾಗಿ ಆರೆಂಟು ತಿಂಗಳ ಕಾಲ, ಮೊದಲು ವಾರಕ್ಕೆ ಎರಡು ಪ್ರದರ್ಶನಗಳನ್ನು ಕೊಟ್ಟರೂ ಪ್ರೇಕ್ಷಕವೃಂದ ಕರಗಲಿಲ್ಲ. ಅನಂತರ ವಾರದಲ್ಲಿ ಮೂರು ಪ್ರದರ್ಶನಗಳನ್ನು ಏರ್ಪಡಿಸಿ ಜನತೆಯನ್ನು ತೃಪ್ತಿಪಡಿಸಬೇಕಾಯಿತು. ಮಂಡಳಿ ಮತ್ತೆ ಪ್ರವಾಸ ಹೊರಟು ತೀರ್ಥಹಳ್ಳಿ, ಕುಂದಾಪುರ, ಉಡುಪಿ, ಮಂಗಳೂರುಗಳಲ್ಲಿ, ‘ಪ್ರಹ್ಲಾದ ಚರಿತ್ರೆ’ಯನ್ನು ವಾರವಾರಗಳ ಕಾಲ ಪ್ರದರ್ಶಿಸಿತು. ಉಡುಪಿಯಲ್ಲಿದ್ದಾಗ ಶ್ರೀಕೃಷ್ಣ ದೇಗುಲದಲ್ಲಿ, ಅಷ್ಟ ಮಠಾಧೀಶರೆಲ್ಲರ ಸಮ್ಮುಖದಲ್ಲಿ ‘ಪ್ರಹ್ಲಾದ ಚರಿತ್ರೆ’ ಪ್ರಯೋಗಗೊಂಡಾಗ ಯತಿಗಳು ಅತ್ಯಾನಂದಪಟ್ಟು ಆಚಾರ್ಯರಿಗೆ ‘ನಾಟ್ಯಕಲಾ ಚತುರ’ ಎಂಬ ಪ್ರಶಸ್ತಿಯನ್ನು ಬಂಗಾರದ ತೋಡ ಖಿಲ್ಲತ್ತುಗಳೊಂದಿಗೆ ಕೊಟ್ಟು ಸನ್ಮಾನಿಸಿದರು. ಬೆಂಗಳೂರಿನಲ್ಲಿ ನಾಟಕಗಳು ನಡೆದು ಆಚಾರ್ಯರು ಅಂದಿನ ಯುವರಾಜರಾಗಿದ್ದ ಕಂಠೀರವ ನರಸರಾಜ ಒಡೆಯರ ವಿಶೇಷ ವಿಶ್ವಾಸಕ್ಕೆ ಪಾತ್ರರಾದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಕಾರಣ ರಂಗಮಂದಿರ ಕುಸಿದುಬಿದ್ದ ಪರಿಣಾಮವಾಗಿ ನಷ್ಟವನ್ನು ಅನುಭವಿಸಿದರು. ಅಲ್ಲಿಂದ ಕೊಯಮುತ್ತೂರಿಗೆ ಮಂಡಳಿಯನ್ನು ಕೊಂಡೊಯ್ದು ತಮಿಳು ಬಾಂಧವರ ಮುಂದೆ ಕನ್ನಡ ನಾಟಕವಾಡಿದಾಗ ದೊರೆತ ಅಪಾರವಾದ ಮೆಚ್ಚುಗೆಯಿಂದಾಗಿ ಅಲ್ಲಿಯೇ ತಿಂಗಳವರೆಗೆ ನಾಟಕಗಳನ್ನಾಡಿ, ಅಂದಿನ ಆ ಅಗ್ಗದ ಕಾಲದಲ್ಲಿ ಹನ್ನೆರಡು ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಉತ್ಪತ್ತಿ ಪಡೆದು ಹಿಂದಿನ ಸಾಲಗಳನ್ನೆಲ್ಲ ತೀರಿಸಿದರು. ತಿರುಚನಾಪಳ್ಳಿಯ ಪ್ರಮುಖರು ಆಚಾರ್ಯರಿಗೆ ‘ನಾಟಕ ಶಿರೋಮಣಿ’ ಎಂಬ ಮಹಾಪ್ರಶಸ್ತಿಯನ್ನು ರತ್ನಖಚಿತವಾದ ತೋಡಾ ಖಿಲತ್ತುಗಳೊಂದಿಗೆ ಅರ್ಪಿಸಿದರು.

ಅನಂತರ ಆಚಾರ್ಯರು ತಮಿಳುನಾಡಿನ ಹಲವು ನಗರಗಳಲ್ಲಿ ನಾಟಕಗಳನ್ನು ಆಡಿ, ಜನರ ಮನಸ್ಸನ್ನು ಸೂರೆಗೊಂಡರು. ಅನೇಕ ಕಡೆ ಜನ ಅವರನ್ನು ಸವರನ್‌ಗಳ ಸರಗಳಿಂದ ಅಲಂಕರಿಸಿದರು. ಹೀಗೆ ಎರಡು ವರ್ಷಗಳ ಕಾಲ ಹೊರಗೇ ಉಳಿದು, ತಮ್ಮ ಮೈಯುಂಡ ರಂಗಕಲೆ ಹಾಗೂ ಪ್ರತಿಭೆಯಿಂದ ನೆರೆನಾಡಿನ ಹೃದಯ ಗೆದ್ದುಕೊಂಡು ೧೯೧೮ರಲ್ಲಿ ಆಚಾರ್ಯರು ನವರಾತ್ರಿಯ ಹೊತ್ತಿಗೆ ಮೈಸೂರಿಗೆ ಹಿಂದಿರುಗಿದಾಗ ನಗರದ ಸುಮ್ಮಾನ ಹೇಳತೀರದು.

ಎರಡು ವರ್ಷಗಳ ಸತತ ಸಂಚಾರದಿಂದಾಗಿ ಹಾಗೂ ಸಂಸ್ಥೆಯ ಆಡಳಿತ ಹೊಣೆಗಾರಿಕೆಯಿಂದಾಗಿ ಆಚಾರ್ಯರು ತುಂಬ ಬಳಲಿದ್ದರು. ಸೋತ ದೇಹ-ಮನಸ್ಸುಗಳಿಂದಾಗಿ ಮಂಡಳಿಯ ವ್ಯವಹಾರಗಳ ಮೇಲಿನ ಹಿಡಿತ ಇನ್ನೂ ಸಡಿಲವಾಗತೊಡಗಿತ್ತು. ಆದರೂ ಜನತೆಯ ಒತ್ತಾಯದ ಕಾರಣ ನಾಟಕ ನಿಲ್ಲಿಸುವಂತಿರಲಿಲ್ಲ. ವಯಸ್ಸು ಐವತ್ತರ ಗಡಿ ದಾಟಿದ್ದರೂ ನಾಯಕ ಪಾತ್ರಗಳನ್ನು ಬಿಟ್ಟುಕೊಡುವ ಸಾಧ್ಯತೆಯೇ ಇರಲಿಲ್ಲ. ಎಂತೂ ಮೈಸೂರಿನಲ್ಲಿಯೇ ನಾಲ್ಕಾರು ತಿಂಗಳ ಕಾಲ ತಂಗಿ ಆಚಾರ್ಯರು ನಾಟಕಗಳನ್ನು ಅಭಿನಯಿಸಿದರು. ಒಂದೇ ಪಾತ್ರವನ್ನು ಅವರು ಒಂದೊಂದು ದಿನ ಒಂದೊಂದು ರೀತಿಯಲ್ಲಿ_ಆದರೆ ಪ್ರತಿ ಬಾರಿಯೂ ಅದ್ಭುತವಾಗಿ-ಅಭಿನಯಿಸುತ್ತಿದ್ದರು. ಸಾಹಿತ್ಯದ ಸೌಂದರ್ಯ ಕೆಡದಂತೆ ಅರ್ಥಚ್ಯುತಿ ಬಾರದಂತೆ, ಪದಗಳನ್ನು ಬಿಡಿಸಿ ಹೇಳುತ್ತಿದ್ದರು.

ಕಷ್ಟಪರಂಪರೆ

೧೯೨೨ರಲ್ಲಿ ಮಂಡಳಿ, ಬೆಂಗಳೂರಿಗೆ ಬಂದು ಕಲಾಸಿಪಾಳ್ಯದಲ್ಲಿ ವಿಶಾಲವಾದ ನಾಟಕಶಾಲೆಯನ್ನು ನಿರ್ಮಿಸಿ ಹಳೆಯ ನಾಟಕಗಳೊಂದಿಗೆ ‘ವಿಷ್ಣುಲೀಲಾ’ ಎಂಬ ಹೊಸ ನಾಟಕವನ್ನೂ ರಚಿಸಿ ಅಭಿನಯಿಸಿತು. ಇದು ಆಚಾರ್ಯರ ರಂಗ ಜೀವನದಲ್ಲಿ ಕಡೆಯ ಮೈಲುಗಲ್ಲು. ಅವರ ಆರೋಗ್ಯ ಕುಸಿಯುತ್ತಿತ್ತು. ಆಡಳಿತ ಭಾರ ಹೊರಲಾರದೆ, ತಮ್ಮ ರತ್ನಾವಳೀ ಸಂಸ್ಥೆಯನ್ನು ಬೆಂಗಳೂರಿನ ಮತ್ತೊಂದು ಮಂಡಳಿ ಯೊಂದಿಗೆ ಲೀನಗೊಳಿಸಿ ನಟರಾಗಿ ಉಳಿದು ವಿಶ್ರಾಂತಿ ಪಡೆಯಲು ಪ್ರಯತ್ನಿಸಿದರು. ಆದರೆ ವರ್ಷದೊಳಗಾಗಿ ಮಂಡಳಿ ಮುಳುಗಿಯೇ ಹೋಗುವುದನ್ನು ತಪ್ಪಿಸಲು ತುಂಬ ಶ್ರಮಪಡಬೇಕಾಯಿತು. ನಷ್ಟತುಂಬಿ ಒಪ್ಪಂದದಿಂದ ಬಿಡುಗಡೆ ಹೊಂದುವಲ್ಲಿ ೧೯೨೩ನೆಯ ಇಡೀ ವರ್ಷ ನ್ಯಾಯಾಲಯಕ್ಕೆ ಅಲೆದಾಡಿದ್ದಲ್ಲದೆ, ಕೈ ಮೀರಿ ಖರ್ಚುಮಾಡಬೇಕಾಯಿತು. ಎಲ್ಲೆಲ್ಲಿಯೂ ಸಾಲವೇರಿತು. ಮನಸ್ಸಿಗೆ ಶಾಂತಿ ಇಲ್ಲದೆ, ದೇಹದಲ್ಲಿ ಜಲೋದರ ಜಾಡ್ಯ ಆಗಾಗ ಕಾಣಿಸಿಕೊಂಡು ಹಿಂಡಿ ಹಿಪ್ಪೆ ಮಾಡುತ್ತಿದ್ದಾಗಲೂ ಆಚಾರ್ಯರು ೧೯೨೪ ರಲ್ಲಿ ಪುನಃ ತಮ್ಮ ರತ್ನಾವಳೀ ಕಂಪೆನಿಯನ್ನು ರೂಢಿಸಿ, ಕಳೆದುಳಿದ ನಟರನ್ನು ಕೂಡಿಹಾಕಿ, ಸಂಪೂರ್ಣ ರಾಮಾಯಣ-ಮಹಾಭಾರತಗಳನ್ನು ಅಭ್ಯಾಸ ಮಾಡಿ ಸಾಲ ತಂದ ಎಲ್ಲ ಹಣ ಸುರಿದು ಹೊಸ ದೃಶ್ಯಾವಳಿಗಳನ್ನೂ ವೇಷಭೂಷಣಗಳನ್ನೂ ಸಿದ್ಧಗೊಳಿಸಿದರು. ಪ್ರದರ್ಶನಗಳಿಂದ ಮೆಚ್ಚಿಗೆ ಬಂದರೂ ನಿರೀಕ್ಷಿಸಿದ ಹಣ ಬಾರದಂತಾಗಿ, ಸಂಸ್ಥೆಯ ವೆಚ್ಚ ತೂಗಿಸಲು ಸಾಧ್ಯವಾಗದೆ ಹೋಯಿತು.

ಇಂಥ ಪರಿಸ್ಥಿತಿಯಲ್ಲಿಯೂ ಎಂದಿನಿಂದಲೂ ಹೆಸರಾದ ವರದಾಚಾರ್ಯರ ದಾನಶೀಲತೆ ಬಡವಾಗಲಿಲ್ಲ. ಅವರನ್ನೇ ನಂಬಿ ನಿಂತಿದ್ದ ವಿದ್ಯಾಸಂಸ್ಥೆಗಳಿಗೂ ವಿದ್ಯಾರ್ಥಿ ನಿಲಯಗಳಿಗೂ ಅನಾಥಾಲಯಗಳಿಗೂ ವಾಚನಾಲಯ ಗಳಿಗೂ ಧರ್ಮಛತ್ರ-ದೇಗುಲಗಳಿಗೂ ಬಿಡಿಬಿಡಿಯಾಗಿ ಸುತ್ತವರಿದ ಎಲ್ಲ ಜಾತಿಯ ಬಡ ವಿದ್ಯಾರ್ಥಿಗಳಿಗೂ ಚೌಲ, ಮುಂಜಿ, ಮದುವೆ, ಯಾತ್ರೆ ತೀರ್ಥಗಳಿಗೆಂದು ಕೈನೀಡಿ ಸಾಲುಗಟ್ಟಿ ಬಂದ ಬಡವರಿಗೂ ಸಾಲ ಮಾಡಿಯಾದರೂ ಒಂದು ಕೇಳಿದರೆ ಹತ್ತು ಕೊಟ್ಟರೇ  ವಿನಾ ಎಂದೆಂದಿಗೂ ತಮ್ಮ ಆರ್ಥಿಕ ಅಡಚಣೆ ಕುರಿತು ಯಾರಲ್ಲಿಯೂ ಚಕಾರ ಎತ್ತಲಿಲ್ಲ. ಬಡವರ ಬಂಧು ಅವರು.

೧೯೨೫ ರಲ್ಲಿ ಬೆಂಗಳೂರಿಗೆ ಬಂದರು. ಯಾವಾಗಲೂ ವಾಸಕ್ಕೆ ದೊಡ್ಡ ಬಂಗಲೆಯನ್ನೇ ಗೊತ್ತುಮಾಡುತ್ತಿದ್ದವರು ಚಿಕ್ಕ ಮನೆಯನ್ನು ಗೊತ್ತುಮಾಡಬೇಕಾಯಿತು. ಹಲವರು ನಟರು ನಾಟಕಮಂದಿರದಲ್ಲೆ ಮಲಗುತ್ತಿದ್ದರು. ಅನಾರೋಗ್ಯದಿಂದ ಆಚಾರ್ಯರು ಒಂದೊಂದು ದಿನ ಮಾತ್ರ ಪಾತ್ರ ವಹಿಸುತ್ತಿದ್ದರು. ೧೯೨೬ರ ಜನವರಿಯಲ್ಲಿ ಒಂದು ದಿನ ‘ಗುಲೇಬಕಾವಲಿ’ಯಲ್ಲಿ ಅವರು ಅಭಿನಯಿಸುತ್ತಾರೆ ಎಂದು ಪ್ರಕಟಿಸಿ ಆಗಿಹೋಗಿತ್ತು. ಅಂದು ಅವರಿಗೆ ತೀರ ಅನಾರೋಗ್ಯ. ಹೊಟ್ಟೆ ಉಬ್ಬರಿಸಿಕೊಂಡಿತ್ತು, ಏಳುವುದು ಕೂಡುವುದು ಕಷ್ಟ. ಆದರೂ ಕಷ್ಟದಿಂದ ಅಭಿನಯಿಸಿ, ಹಾಡಿ ಜನರನ್ನು ತೃಪ್ತಿಗೊಳಿಸಿದರು. ನಾಟಕ ಮುಗಿಯುವ ಹೊತ್ತಿಗೆ ಅವರು ಮಾತಾಡುವ ಸ್ಥಿತಿಯಲ್ಲೆ ಇರಲಿಲ್ಲ. ಅದೇ ಅವರ ಕಡೆಯ ಅಭಿನಯ ಆಯಿತು.

ನಿರ್ಗಮನ

ಆಚಾರ್ಯರು ಉಲ್ಬಣಗೊಂಡಿದ್ದ ಜಲೋದರ ವ್ಯಾದಿಯ ಚಿಕಿತ್ಸೆಗೆಂದು ಮಾರನೆಯ ದಿನವೇ ಪ್ರಕೃತಿ ಚಿಕಿತ್ಸಾಲಯ ಸೇರಿದರು. ಆಚಾರ್ಯರನ್ನುಳಿದು, ನಾಟಕಗಳನ್ನು ಅಭಿನಯಿಸಿದ ಮಂಡಳಿಗೆ ಏನೇನೂ ಉತ್ಪತ್ತಿಯಾಗಲಿಲ್ಲ. ಮಂಡಳಿ ಮುಳುಗಿಹೋಗುತ್ತದೆ ಎಂದು ಆತಂಕಗೊಂಡ ಸಾಲಗಾರರು ಹತ್ತು ದಿಕ್ಕುಗಳಿಂದ ಇದ್ದಕ್ಕಿದ್ದಂತೆ ಎದ್ದು ಜಪ್ತಿ ವಾರಂಟುಗಳನ್ನು ತಂದರು. ಕೈಯಲ್ಲಿ ಬಿಡಿಗಾಸು ಇಲ್ಲದೆ ಪಥ್ಯದ ಮಾತು ಹೇಳಿ ದಿನದಿನವೂ ಉಪವಾಸ ಮಾಡಿದ ಆಚಾರ್ಯರು ತುಂಬ ಬಳಲಿದರು. ಕಡೆಕಡೆಗೆ ನೋಡಲು ಹೋದವರಲ್ಲಿ ಯಾರನ್ನಾದರೂ ಆರಿಸಿ, ಹತ್ತಿರಕ್ಕೆ ಕರೆದು ಅತ್ಯಂತ ಸಂಕೋಚದಿಂದ, “ತಿನ್ನಲು ಏನನ್ನಾದರೂ ತಂದು ಕೊಡಪ್ಪ” ಎಂದು ಬಾಯಿಬಿಟ್ಟು ಬೇಡುವವರೆಗೂ ಸವೆದು ಹೋದರು. ಅಂಥ ನಿರ್ವಿಣ್ಣ ಸ್ಥಿತಿಯಲ್ಲಿಯೂ ಅವರು ಯಾರನ್ನು ನಂಬಿದ್ದರೋ ಅವರೇ ಆಚಾರ್ಯರನ್ನು ಕೋರ್ಟಿಗೆ ಕರೆದೊಯ್ದು ಸಾಲದ ಸಲುವಾಗಿ ನಾಟಕ ಶಾಲೆ ಮೊದಲು ಗೊಂಡು ಇದ್ದಬದ್ದುದನ್ನೆಲ್ಲ ಕ್ರಯಕ್ಕೆ ಬರೆಸಿ ಅವರ ರುಜು ಹಾಕಿಸಿಕೊಂಡರು. ಆಚಾರ್ಯರ ಮನಸ್ಸು ಬೆಂದುಹೋಯಿತು. ಬೆಂಗಳೂರಿನಲ್ಲಿ ಹೀಗೆ ಎಲ್ಲವನ್ನೂ ಕಳೆದುಕೊಂಡು ನಿಂತ ಮಂಡಳಿಯ ನಿಷ್ಠಾವಂತ ನಟರು, ಹೊರ ಊರಿನಲ್ಲಿ ಯಾದರೂ ಏನಾದರೂ ಹುಟ್ಟೀತೇನೋ ಆಚಾರ್ಯರ ಶುಶ್ರೂಷೆ ಮಾಡಿ ಬದುಕಿಸಿಕೊಳ್ಳಬಹುದೇನೋ ಎಂಬ ಆಸೆಯಿಂದ ತುಮಕೂರಿಗೆ ಪ್ರಯಾಣಮಾಡಿ, ಅವರ ಹೆಸರಿನಲ್ಲಿ ಮೊದಲನೆಯ ನಾಟಕವನ್ನಾಡಿದರು. ಅದೇ ರಾತ್ರಿ ೧೯೨೬ ರ ಏಪ್ರಿಲ್ ನಾಲ್ಕನೆಯ ದಿನದಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆಚಾರ್ಯರು ತಮ್ಮ ೫೭ನೆಯ ವಯಸ್ಸಿನಲ್ಲಿ ನಿಧನರಾದರು.

ರಂಗಭೂಮಿಯ ಚರಿತ್ರೆಯಲ್ಲಿ ಸ್ಥಾನ

ವರದಾಚಾರ್ಯರ ರಂಗಜೀವನದ ಅತ್ಯಂತ ಸ್ಥೂಲವಾದ ಹೊಳಹು ಇದು. ಅವರ ಪ್ರವೇಶವಾಗುವವರೆಗೆ ನಮ್ಮ ವೃತ್ತಿರಂಗ(ಎಂದರೆ ಕಂಪೆನಿಗಳ ರಂಗ) ಒಂದು ದೃಷ್ಟಿಯಿಂದ ಅತಿರೇಕಗಳ ಹುಟ್ಟುನೆಲ. ಸಂಗೀತ ಬಲ್ಲವನೇ ಆಗ ಸಾರ್ಥಕ ನಟ! ಅರ್ಥವಿಲ್ಲದಿದ್ದರೂ ಆರ್ಭಟದ ಆಟಾಟೋಪ ಮಾಡುತ್ತಿದ್ದವನೇ ಪರಿಣತ ಕಲಾವಿದ! ಹೀಗೆ, ಇನ್ನೆಲ್ಲಿಯೂ ಸಲ್ಲದವರು ರಂಗದಲ್ಲಿ ಸಲ್ಲುತ್ತಾರೆ ಎನ್ನುವಂತಿದ್ದ ಆ ಕಾಲ ಧರ್ಮವನ್ನು ವರದಾಚಾರ್ಯರು ಕಲಕಿದರು. ಕಾಲು ಶತಮಾನದ ತಮ್ಮ ರಂಗಜೀವನದಲ್ಲಿ ಆಚಾರ್ಯರು ಕನ್ನಡ ವೃತ್ತಿರಂಗದ ನಡೆಯನ್ನು ಏರ್ಪಡಿಸಿದರು. ಅದನ್ನು ಕತ್ತಲೆಯಿಂದ ಬೆಳಕಿನ ಹಾದಿಗೆ ತಂದರು. ರಂಗದಲ್ಲಿ ಅವರು ಸಾಧಿಸಿತಂದ ಸುಧಾರಣೆಗಳು ಈ ಮಾತಿಗೆ ಸಾಕ್ಷಿ ನುಡಿಸಿದವು.

ರಂಗದೃಶ್ಯಗಳ ಮೋಹಕತೆ, ಗಂಭೀರತೆಗಳನ್ನು ಹೆಚ್ಚಿಸುವಲ್ಲಿ ಆಚಾರ್ಯರು ವಿದ್ಯುದ್ದೀಪಗಳನ್ನು ಬಳಸಿಕೊಂಡ ಬಗೆ, ಆ ಕಾಲಮಾನದಲ್ಲಿ ಕ್ರಾಂತಿಕಾರಕವಾದುದು. ನಾಟಕದಲ್ಲಿ ನೆರಳು-ಬೆಳಕುಗಳ ಆಟವನ್ನು ಬಳಸಿಕೊಳ್ಳುವಲ್ಲಿ ಅವರು ಮೊದಲಿಗರು. ರೋಹಿತಾಶ್ವನ ದೇಹವನ್ನು ದಹಿಸಲು ಬಂದ ಚಂದ್ರಮತಿಯ ಎದುರು ವೀರಬಾಹುಕನಾಗಿ ನೆಲದಿಂದ ಮುಗಿಲವರೆಗೆ ನೆರಳಿನಲ್ಲಿಯೇ ಬೆಳೆದು ನಿಲ್ಲುವಂತೆ ಮಾಡಿ ಆ ದೃಶ್ಯಕ್ಕೆ ಸಂಕೇತದ ಸರ್ವಶಕ್ತಿಯನ್ನು ತಂದುಕೊಟ್ಟರು. ಪಕ್ಕವಾದ್ಯಗಳನ್ನು ರಂಗದ ಪಕ್ಕದ ಮೀಸಲು ಸ್ಥಾನದಿಂದ ಬಿಡುಗಡೆಗೊಳಿಸಿ, ಪಾತ್ರದ ಸಂಗೀತದೊಂದಿಗೆ, ಸುಲಭವಾಗಿ ಮೇಳೈಸುವ ಎದುರುವಾದ್ಯಗಳಾಗುವಂತೆ, ‘ಸೌಂಡ್ ಪಿಟ್’ ನಿರ್ಮಿಸಿದ ಮೊದಲಿಗರು ಅವರು. ‘ನಾಟಕವಾದ್ಯ’ವೆನಿಸಿದ ‘ಲೆಗ್ ಹಾರ್ಮೋನಿಯಂ’ನಲ್ಲಿ ಹೆಚ್ಚಿನ ತರಬೇತಿಗಾಗಿ ಮಂಡಳಿಯ ಶೇಷಗಿರಿ ರಾಯರನ್ನು ಮುಂಬಯಿಗೆ ಕಳುಹಿಸಿ ಶಿಕ್ಷಣ ಕೊಡಿಸಿದರು. ಧ್ವನಿ ವಿಶೇಷಗಳನ್ನು ಸೂಕ್ತವಾಗಿ ದೃಶ್ಯಗಳಿಗೆ ಹೊಂದಿಸಿದರು. ಮೊದಲು ಹಾಸ್ಯ ದೃಶ್ಯಗಳಿಗೂ ನಾಟಕದ ಕಥೆಗೂ ಸಂಬಂಧವೇ ಇರುತ್ತಿರಲಿಲ್ಲ. ಆಚಾರ್ಯರು ಹಾಸ್ಯ ದೃಶ್ಯಗಳು ನಾಟಕದ ಭಾಗವಾಗಿ ಹೊಂದಿಕೊಳ್ಳುವಂತೆ ಮಾಡಿದರು.

ಆವರೆಗೆ ನಾಟಕದಲ್ಲಿ ಸಂಗೀತ ಹುಚ್ಚೆದ್ದು ಹರಿಯುತ್ತಿತ್ತು. ಆಚಾರ್ಯರು ಸಂಗೀತ ಹಿತಮಿತವಾಗಿ ನಾಟಕದ ಸನ್ನಿವೇಶಕ್ಕೆ-ಪಾತ್ರಕ್ಕೆ ಹೊಂದಿಕೊಂಡು ಇರುವಂತೆ ಮಾಡಿದರು.

ವರದಾಚಾರ್ಯರದು ಭವ್ಯವಾದ ಶರೀರ; ಉತ್ತಮವಾದ ರಾಗಜ್ಞಾನ; ಖಚಿತವಾದ ತಾಳಜ್ಞಾನ. ಸ್ವಲ್ಪ ವಯಸ್ಸಾಗುವ ಕಾಲಕ್ಕೆ ಅವರ ಧ್ವನಿಯು ಕಂಚಿನ ನಾದದಂತಿತ್ತು. ನಾಟಕದ ಚೌಕಟ್ಟನ್ನು ಸಡಿಲಿಸದೆಯೆ ಸಂಗೀತವನ್ನು ತಮ್ಮ ಕೈಯಾಳಿನಂತೆ ಇಟ್ಟುಕೊಂಡಿದ್ದರು.

ಅಭಿನಯಕಲೆಯಲ್ಲಿ ಅವರಿಗೆ ತುಂಬಾ ಶ್ರದ್ಧೆ. ‘ಭಕ್ತಪ್ರಹ್ಲಾದ’ ನಾಟಕದ ಅಭ್ಯಾಸ ಮಾಡುವಾಗ ರಂಗಭೂಮಿಯ ಮೇಲೆ ಯಾರೂ ಧೂಮಪಾನ ಮಾಡಬಾರದು, ಪಾದರಕ್ಷೆಗಳನ್ನು ತರಬಾರದು ಎಂದು ನಿಯಮ ಮಾಡಿದ್ದರು. ಈ ನಾಟಕದಲ್ಲಿ ಅವರು ಹಿರಣ್ಯಕಶಿಪುವಿನ ಪಾತ್ರ ಮಾಡುತ್ತಿದ್ದರು. ಕೆಲವರು  ಅವರಿಗೆ “ನಿಮ್ಮ ಅಭಿನಯ ಬಹಳ ಸೊಗಸಾಗಿದೆ. ಆದರೆ ಇನ್ನೂ ಭಯಂಕರವಾಗಿ ವೇಷ ಧರಿಸಬೇಕು, ಬಣ್ಣಗಳನ್ನು ಹಾಕಿಕೊಳ್ಳಬೇಕು” ಎಂದು ಸಲಹೆ ಮಾಡಿದರು. ಆಚಾರ್ಯರು ಅವರಿಗೆ, “ನಟ ತನ್ನ ಪಾತ್ರವನ್ನು ಹೇಗೆ ಅರ್ಥ ಮಾಡಿ ಕೊಂಡರೆ ಅದಕ್ಕೆ ಸರಿಯಾಗಿ ವೇಷ ಮತ್ತು ಬಣ್ಣಗಳನ್ನು ಆರಿಸುತ್ತಾನೆ. ನಾನು ಅರ್ಥ ಮಾಡಿಕೊಂಡಿರುವಂತೆ, ಹಿರಣ್ಯಕಶಿಪು ಹಿರಣ್ಯಾಕ್ಷರ ರೂಪ ಭಯಂಕರವಾದುದಲ್ಲ. ಅವರು ಹಿಂದೆ ಜಯ ವಿಜಯರೆಂದು ವಿಷ್ಣುವಿನ ದ್ವಾರಪಾಲಕರಾಗಿದ್ದವರು. ಭೂಮಿಯಲ್ಲಿ ಹುಟ್ಟಿದನಂತರವೂ ವಿಷ್ಣುವೆಂದರೆ ದ್ವೇಷ, ಆದರೆ ಶಿವಪೂಜೆಯನ್ನು ಭಕ್ತಿಯಿಂದ ಮಾಡುತ್ತಿದ್ದರು, ತಪಸ್ಸಿನಿಂದ ಬ್ರಹ್ಮನನ್ನು ಒಲಿಸಿಕೊಂಡರು. ವಿಷ್ಣು ಭಕ್ತರನ್ನೂ ಕ್ರೂರವಾಗಿ ಹಿಂಸಿಸುತ್ತಿದ್ದರು. ಈ ಕ್ರೌರ್ಯದಿಂದ ರಾಕ್ಷಸರೇ ಹೊರತು ರೂಪದಿಂದಲ್ಲ” ಎಂದರು. ಬಂದವರು ಆಚಾರ್ಯರು ಒಂದು ಪಾತ್ರವನ್ನು ಕುರಿತು ಎಷ್ಟು ಆಳವಾಗಿ ಯೋಚಿಸಿರುತ್ತಾರೆ ಎಂದು ಕಂಡು ಮೆಚ್ಚಿಕೊಂಡರು.

ಅವರ ಅಭಿನಯದ ಪ್ರತಿಭೆಯಂತೂ ದೈವದತ್ತವಾದದ್ದು. ಒಂದು ಪಾತ್ರದ ಜೀವಾಳವನ್ನು ಮಿಡಿಯುವಂತಹ ಹುಟ್ಟುಕಲಾವಿದರಾದ ಆಚಾರ್ಯರು ತಾವು ಅಭಿನಯಿಸಿದ ಒಂದೊಂದೂ ಪಾತ್ರವನ್ನೂ ವೈಭವಕ್ಕೆ ಮುಟ್ಟಿಸಿದರು. ಪಾತ್ರದಲ್ಲಿ ಅವರು ಕೈ ಬೀಸಲಿ, ಕೋಪದಿಂದ ಮಾತನಾಡಲಿ, ಕಣ್ಣಿಂದ ಕಿಡಿಗಳುದುರಿಸುತ್ತಿರಲಿ, ದ್ವೇಷ ತೋರಿಸಲಿ, ಭಯ-ಭಕ್ತಿ-ವಿನಯಗಳನ್ನು ಸೂಚಿಸುತ್ತಿರಲಿ, ರಾಜಗಾಂಭೀರ್ಯದಿಂದ ವರ್ತಿಸುತ್ತಿರಲಿ, ಔದ್ಧತ್ಯದಿಂದ ಸಿಡಿದಾಡಲಿ, ಒಲವಿನಿಂದ ಮೋಹಿಸುತ್ತಿರಲಿ, ದುಃಖ ನೈರಾಶ್ಯಗಳಿಂದ ಕಂಗೆಟ್ಟಿರಲಿ, ಆ ಸಮಯದ ಭಾವ ಮಾತ್ರ, ಸಹಜವಾಗಿ, ಸಂಪೂರ್ಣವಾಗಿ ತೋರುತ್ತಿತ್ತು. ಒಮ್ಮೆ ಆಚಾರ್ಯರನ್ನು ದುಷ್ಯಂತನ ಪಾತ್ರದಲ್ಲಿ ನೋಡಿದ ರವೀಂದ್ರನಾಥ ಠಾಕೂರರು ಅನೇಕ ವರ್ಷಗಳ ನಂತರ ಅ.ನ.ಕೃ. ಅವರನ್ನು ಭೇಟಿಯಾದಾಗ, “ಮಹಾಕವಿ ಕಾಳಿದಾಸನ ಹೃದಯ ಅವರೊಬ್ಬರಿಗೇ ಅರ್ಥವಾಗಿದ್ದುದು” ಎಂದರು.

ಮಹಾ ನಟರಾಗಿದ್ದಂತೆ ವರದಾಚಾರ್ಯರು ಹಿರಿಯ ಮಾನವರೂ ಹೌದು. ಅವರ ತಮ್ಮ, ಹೆಂಡತಿ ಮತ್ತು ನಾಲ್ಕು ಮಕ್ಕಳನ್ನು ಬಿಟ್ಟು ತೀರಿಕೊಂಡರು. ಆಚಾರ್ಯರೇ ಆ ಸಂಸಾರದ ಹೊಣೆಯನ್ನು ಹೊತ್ತರು. ಬೆಂಗಳೂರು ಮೈಸೂರು ಪಟ್ಟಣಗಳಲ್ಲಿ ಪ್ರಾರಂಭಿಸಲ್ಪಟ್ಟ ಯಾವ ಬಗೆಯ ಪೌರ, ಸಾಮಾಜಿಕ ಧರ್ಮಕಾರ್ಯಕ್ಕೂ ವರದಾಚಾರ್ಯರ ನಾಟಕದ ದ್ರವ್ಯಸಹಾಯ ಖಂಡಿತವಾಗಿತ್ತು. ಬಡ ಹುಡುಗರಿಗೆ ಸಹಾಯ ಮಾಡುವುದರಲ್ಲಿ ಅವರದು ಎತ್ತಿದ ಕೈ. ಆಚಾರ್ಯರು ನಮೂದಿಸಿಟ್ಟ ಮಾಹಿತಿಯಿಂದ ಸ್ಥೂಲವಾಗಿ ಲೆಕ್ಕವಿಕ್ಕಿದಂತೆ ೧೯೦೪ರ ಡಿಸೆಂಬರ್ ೧೫ನೆಯ ದಿನಾಂಕದಿಂದ ೧೯೨೦ ನೆಯ ಅಕ್ಟೋಬರ್ ೩೧ ರವರೆಗೆ ೧೨೪೬ ನಾಟಕ ಪ್ರದರ್ಶನಗಳನ್ನಿತ್ತು ಸಂಪಾದಿಸಿದ ಸುಮಾರು ಮೂರು ಲಕ್ಷ ಎಂಬತ್ತು ಸಾವಿರ ರೂಪಾಯಿಗಳ ಒಟ್ಟು ಮೊತ್ತದಲ್ಲಿ ನಾಲ್ಕನೆಯ ಒಂದು ಭಾಗವನ್ನು ದಾನಧರ್ಮಗಳಿಗಾಗಿಯೇ ವಿನಿಯೋಗ ಮಾಡಿದರು. ಆಚಾರ್ಯರ ಕಡೆಗಾಲದಲ್ಲಿ, ಕೈ ಬರಿದಾಗಿದ್ದಾಗ, ಬೇಡುತ್ತ ಬಂದ ಬಡ ಬ್ರಾಹ್ಮಣನಿಗೆ ತಾವು ಮೊದಲಿನಿಂದ ಕುಳಿತು ಉಣ್ಣುತ್ತಿದ್ದ ಬೆಳ್ಳಿಯ ತಟ್ಟೆಯನ್ನೇ ಕೊಟ್ಟು ಕಳುಹಿಸಿದ ಮಾತನ್ನೂ ಕಂಡವರೇ ಬರೆದಿದ್ದಾರೆ. ಸಹಾಯ ಮಾಡುವುದರಲ್ಲಿ ಅವರಿಗೆ ಜಾತಿಭೇದವಿರಲಿಲ್ಲ. ಅನೇಕ ಮಂದಿ ಒಕ್ಕಲಿಗೆ ವಿದ್ಯಾರ್ಥಿಗಳಿಗೆ ಅವರು ಸಹಾಯ ಮಾಡುತ್ತಿದ್ದರು. ಆಚಾರ್ಯರು ಮದರಾಸಿಗೆ ಹೋದದ್ದರಿಂದ ತಮಗೆಲ್ಲ ಕಷ್ಟವಾಗಿದೆ ಎಂದು ಅವರು ಎಚ್.ಕೆ.ವೀರಣ್ಣಗೌಡರಿಗೆ ಹೇಳಿದರಂತೆ. ಒಮ್ಮೆ ರಾಮಸ್ವಾಮಿ ಎಂಬ ಹುಡುಗ ಟಿಕೆಟ್ ಇಲ್ಲದೆ ನಾಟಕ ನೋಡಲು ಮಂದಿರದೊಳಕ್ಕೆ ಹೋದ. ಅವನನ್ನು ಹಿಡಿದು ವರದಾಚಾರ್ಯರ ಮುಂದೆ ನಿಲ್ಲಿಸಿದರು. “ನನ್ನ ಹತ್ತಿರ ಹಣ ಇರಲಿಲ್ಲ, ನಾಟಕ ನೋಡಬೇಕೆಂದು ಆಸೆ” ಎಂದ ಹುಡುಗ. “ಚಿಂತೆ ಇಲ್ಲ. ನಾಟಕ ನೋಡು. ನಾಳೆ ನನ್ನನ್ನು ಮನೆಯಲ್ಲಿ ನೋಡು” ಎಂದರು ಆಚಾರ್ಯರು. ಮರುದಿನ ಹುಡುಗ ಹೋದಾಗ ಅವನ ಮನೆಯ ವಿಷಯ ಕೇಳಿ ತಿಳಿದುಕೊಂಡರು. ಅವನ ಬಡತನಕ್ಕೆ ಮರುಗಿ ತಮ್ಮ ಮನೆಯಲ್ಲಿ ಊಟಮಾಡಿ ಕೊಂಡಿರುವಂತೆ ಹೇಳಿದರು. ಹುಡುಗ ಒಪ್ಪಲಿಲ್ಲ. ಅವನಿಗೆ ಎರಡು ರೂಪಾಯಿ ಕೊಟ್ಟು ಕಳುಹಿಸಿದರು.

 

ತಾವೇ ಬಡತನದಲ್ಲಿದ್ದ ಆಚಾರ್ಯರು ತಮ್ಮ ಬೆಳ್ಳಿಯ ತಟ್ಟೆಯನ್ನೆ ದಾನ ಮಾಡಿದರು.

ಆಚಾರ್ಯರಿಗೆ ವ್ಯವಹಾರಬುದ್ಧಿ ಇರಲಿಲ್ಲ. ಹೀಗಾಗಿ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸಿಯೂ ಕಡೆಯ ದಿನಗಳಲ್ಲಿ ಬರಿಗೈ ಆದರು. ಆಗ ಒಂದೇ ಪರಿತಾಪ ಅವರದು – ಈ ಹಾಳು ಬಡತನದಿಂದಾಗಿ ಯಾರಿಗೂ ಏನನ್ನೂ ಕೊಡದಂತಾಯಿತಲ್ಲ ಎಂದು.

ವರದಾಚಾರ್ಯರ ಕಾಲವೆಂದರೆ ಕನ್ನಡ ವೃತ್ತಿ ರಂಗದ ಸ್ವರ್ಣಯುಗವೆನಿಸಿತು; ಆಚಾರ್ಯರು ಆ ಯುಗವನ್ನಾಳಿದ ಸ್ವರ್ಣಮೂರ್ತಿಯೆನಿಸಿಕೊಂಡರು.