ಸುಪ್ರಸಿದ್ಧ ಹಾರ್ಮೋನಿಯಂ ವಿದ್ವಾಂಸರಾಗಿದ್ದ ಅರುಣಾಚಲಪ್ಪ – ಅನ್ನಪೂರ್ಣಮ್ಮ ದಂಪತಿಗಳ ಸುಪುತ್ರರಾಗಿ ೪-೧೨-೧೯೨೩ ರಂದು ಜನಿಸಿದವರು ವೀರಭದ್ರಯ್ಯ. ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವಿ ಪಡೆದಿದ್ದ ಇವರಿಗೆ ಸಹಜವಾಗಿಯೇ ಎಳೆತನದಿಂದಲೂ ಸಂಗೀತದಲ್ಲಿ ಆಸಕ್ತಿ ಇತ್ತು. ಪ್ರಾರಂಭಿಕ ಶಿಕ್ಷಣವನ್ನು ತಂದೆಯವರಿಂದಲೇ ಪಡೆದು ಮುಂದೆ ಎಲ್‌.ಎಸ್‌. ನಾರಾಯಣಸ್ವಾಮಿ ಭಾಗವತರಲ್ಲಿ ಉನ್ನತಮಟ್ಟದ ಶಿಕ್ಷಣ ಪಡೆದು ನಮ್ಮ ನಾಡಿನ ಅತಿ ಹಿರಿಯ ಶ್ರೇಷ್ಠ ವಯೋಲಿನ್‌ವಾದಕರಾಗಿ ವಿಜೃಂಭಿಸಿದರು.

ಪ್ರೊ. ಹೆಚ್‌.ವಿ. ಕೃಷ್ಣಮೂರ್ತಿ, ಆನೂರು ಎನ್‌. ರಾಮಕೃಷ್ಣ ಅವರೊಡನೆ ವೀರಭದ್ರಯ್ಯನವರು ಸೇರಿ ನೀಡಿದ ಪಿಟೀಲುತ್ರಯ ಕಚೇರಿಗಳು ನಮ್ಮ ನಾಡಿನಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಜನಪ್ರಿಯವಾಗಿ ನಡೆದುವು. ಗಣ್ಯ ವಿದ್ವಾಂಸರೆಲ್ಲರಿಗೂ ಪಕ್ಕವಾದ್ಯ ನುಡಿಸಿರುವ ಹಿರಿಮೆಯೂ ಇವರದಾಗಿದೆ.

೧೯೩೪ರಲ್ಲಿ ಅರುಣಾಚಲಪ್ಪನವರು ಸ್ಥಾಪಿಸಿದ ಅರುಣಾ ಮೂಸಿಕಲ್ಸ್‌ನ ಮಾಲೀಕರಾಗಿ ತನ್ಮೂಲಕ ಸಂಗೀತ ವಾದ್ಯಗಳ ತಯಾರಿಕೆಯಲ್ಲಿ ತೊಡಗಿ ವಿಶೇಷ ಪ್ರಯೋಗಾತ್ಮಕ ಪ್ರಯತ್ನಗಳಿಂದ ಮರದ ವಿವಿಧ ವಾದ್ಯ ತಯಾರಿಕೆಯೊಡನೆ ಫೈಬರ್‍ಗ್ಲಾಸ್ನ ಉಪಯೋಗವನ್ನೂ ಮಾಡಿ ಕ್ರಾಂತಿಯನ್ನೇ ಉಂಟು ಮಾಡಿದರೆನ್ನಬಹುದು. ಇಡೀ ಜಗತ್ತಿಗೆ ಉಪಯುಕ್ತವಾಗುವಂತಹ ವಿವಿಧ ವಾದ್ಯಗಳಿಗೆ ಸೂಕ್ತವಾದ ತಂತಿಗಳ ತಯಾರಿಕೆ, ಶ್ರುತಿ ಕೊಳವೆಗಳ ತಯಾರಿಕೆ ಇವರ ನೇತೃತ್ವದಲ್ಲಿ ಸಾಧ್ಯವಾದುವು.

ವಿಜಯ ಸಂಗೀತ ವಿದ್ಯಾಲಯ, ವಾಣೀ ಸಂಗೀತ ವಿದ್ಯಾಲಯ, ಕರ್ನಾಟಕ ಗಾನಕಲಾ ಪರಿಷತ್ತು, ರಾಜ್ಯ ಸಂಗೀತ-ನೃತ್ಯ ಅಕಾಡೆಮಿ- ಹೀಗೆ ಹಲವು ಸಂಸ್ಥೆಗಳಲ್ಲಿ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ನಾನಾ ರೀತಿಯಲ್ಲಿ ಸೇವೆ ಸಲ್ಲಿಸಿದರು.

‘ನಾದ ಗಂಭೀರ’, ‘ಗಾನ ಕಲಾ ಭೂಷಣ’, ‘ಕರ್ನಾಟಕ ಕಲಾಶ್ರೀ’ ಮುಂತಾದ ಪ್ರಶಸ್ತಿಗಳಿಂದ ಭೂಷಿತರಾಗಿದ್ದ ವೀರಭದ್ರಯ್ಯನವರು ೬-೯-೧೯೯೯ ರಂದು ನಾದ ಬ್ರಹ್ಮನಲ್ಲಿ ಐಕ್ಯರಾದರು.