ಕಳೆದ ಶತಮಾನದ ೫೦, ೬೦, ೭೦, ೮೦ರ ದಶಕಗಳಲ್ಲಿ ಕರ್ನಾಟಕದ ಮೂಲೆ ಮೂಲೆಗಳಲ್ಲಿಯೂ ಮನೆ ಮನೆಗಳಲ್ಲಿಯೂ ಕೇಳಿಬರುತ್ತಿದ್ದ ಮಧುರ ಮನೋಹರ ಧ್ವನಿ ಎಂದರೆ ಎ. ಸುಬ್ಬರಾಯರದು. ಜನಪ್ರಿಯತೆಯ ಪರಾಕಾಷ್ಠೆಯನ್ನು ಕಂಡ ಹಿರಿಯರು. ಭಾರತೀಯ ಸಂಗೀತ ಪ್ರಕಾರಗಳೆರಡರಲ್ಲೂ ವೈದುಷ್ಯ ಪಡೆದಿದ್ದ ಇವರ ಜನನ ಶ್ರೀಮತಿ ಶಾರದಮ್ಮ – ಅನಂತ ರಾಮರಾವ್‌ ದಂಪತಿಗಳ ಏಕಮಾತ್ರ ಸಂತಾನವಾಗಿ ಮೈಸೂರಿನಲ್ಲಿ ೨೮-೦೭-೧೯೨೩ ರಂದು. ಇವರ ತಾತ ನಾಗೇಶರಾಯರು ಆ ಕಾಲಕ್ಕೇ ಲಕ್ಷಾಂತರ ರೂಪಾಯಿಗಳ ಆಸ್ತಿ ಹೊಂದಿದ್ದ ಶ್ರೀಮಂತರು. ಅನಾಥರಾಗಿದ್ದ ಬಿಡಾರಂ ಕೃಷ್ಣಪ್ಪನವರಿಗೆ ಹಲವು ರೀತಿಯಲ್ಲಿ ನೆರವಾಗಿದ್ದವರು. ಈ ಉಪ ಕೃತಿಗೇ ಕೃಷ್ಣಪ್ಪನವರಿಗೆ ಸುಬ್ಬರಾಯರ ಪ್ರಥಮ ಗುರುಗಳಾದರು. ನಿಸ್ಸಂತಾನರಾಗಿದ್ದ ಕೃಷ್ಣಪ್ಪನವರಿಗೆ ಸುಬ್ಬರಾಯರ ಮೇಲೆ ಪುತ್ರ ವಾತ್ಸಲ್ಯ. ಅಮಿತ ಪ್ರೇಮ. ಮುಂದೆ ಕೆ. ಲಕ್ಷ್ಮೀದಾಸರಾವ್‌ ಹಾಗೂ ಚಿಕ್ಕರಾಮರಾಯರಲ್ಲಿ ಶ್ರೀಯುತರ ಸಂಗೀತಾಭ್ಯಾಸ ಮುಂದುವರೆದು ಉನ್ನತಿಗೆ ಏರಿತು.

ಅಂದಿನ ಅರಮನೆ ಉತ್ಸವಗಳಲ್ಲಿ, ಸಾಮಾಜಿಕ ಉತ್ಸವಗಳಲ್ಲಿ ನಡೆಯುತ್ತಿದ್ದ ಕರ್ನಾಟಕ ಹಿಂದೂಸ್ಥಾನಿ ಕಚೇರಿಗಳೆಲ್ಲವನ್ನೂ ಕೇಳಿ, ಅವುಗಳಲ್ಲಿನ ಮರ್ಮಗಳನ್ನು ಅಧ್ಯಯಿಸಿ ಸಾಧನೆಯಿಂದ ಎರಡೂ ಪ್ರಕಾರಗಳಲ್ಲೂ ಸಿದ್ಧಿ ಪಡೆದರು. ನಂತರ ಅವರು ಕಚೇರಿ ಮಾಡದ ಸಭೆಯೂ ಇರಲಿಲ್ಲ. ಉತ್ಸವಗಳೂ ಇರಲಿಲ್ಲ. ಆಕಾಶವಾಣಿ – ದೂರದರ್ಶನಗಳಿಂದಲೂ ಇವರ ಮಧುರ ಗಾಯನ ಮೂಡಿ ಬರುತ್ತಿತ್ತು. ಶಾಸ್ತ್ರೀಯ ಸಂಗೀತದಂತೆ ಲಘು ಶಾಸ್ತ್ರೀಯ ಹಾಗೂ ಸುಗಮ ಸಂಗೀತದಲ್ಲೂ ಜನಪ್ರಿಯತೆ ಪಡೆದಿದ್ದರು. ಅರಮನೆ – ಗುರುಮನೆಗಳಲ್ಲಿ ಇವರ ಗಾಯನ ನಡೆಯುತ್ತಿತ್ತು. ಪಂಡಿತ್‌ ವಿ. ರಾಮರಾವ್‌ ನಾಯಕ್‌ ರವರೊಂದಿಗೆ ಜುಗಲ್‌ಬಂದಿ ನಡೆಸಿದ್ದರು. ಚಲನಚಿತ್ರಗಳಿಗೂ ಹಿನ್ನೆಲೆ ಗಾಯನ ಹಾಡಿದರು.

ಸ್ಥಳೀಯ ವಿದ್ವಾಂಸರಿಗೆ ಆದ್ಯತೆ ದೊರಕಿಸಿಕೊಡುವ ದೃಷ್ಟಿಯಿಂದ ಸ್ಥಾಪಿತವಾದ ಕರ್ನಾಟಕ ಗಾನಕಲಾ ಪರಿಷತ್ತಿನ ಸ್ಥಾಪಕ ಪ್ರಧಾನ ಕಾರ್ಯದರ್ಶಿ ನಂತರ ಉಪಾಧ್ಯಕ್ಷ ತಜ್ಞರ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಶ್ರೀ ಗಾನಕಲಾ ಭಾರತೀಯ ಸ್ಥಾಪಕಾಚಾರ್ಯರಾಗಿ, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಒಂದು ಅವಧಿ ಅಧ್ಯಕ್ಷರಾಗಿ, ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್‌ ಸದಸ್ಯರಾಗಿ ಹಲವಾರು ರೀತಿಯಲ್ಲಿ ಸೇವೆ ಸಲ್ಲಿಸಿದ್ದರು. ಸಂಗೀತ ಮತ್ತು ಕಲಾವಿದರನ್ನು ಕುರಿತು ಅನೇಕ ಲೇಖನಗಳನ್ನು ಬರೆದಿದ್ದಾರೆ.

ಹಲವಾರು ಉತ್ತಮ ಶಿಷ್ಯರನ್ನು ತರಬೇತಿ ನೀಡಿ ಕ್ಷೇತ್ರಕ್ಕೆ ಕೊಟ್ಟಿರುವ ಶ್ರೀಯುತರಿಗೆ ‘ಗಾನ ಸುಧಾಕರ’, ‘ಗಾನಕಲಾ ವಸಂತ’, ‘ಸಂಗೀತ ರತ್ನ’, ‘ಸಂಗೀತ ಕಲಾರತ್ನ’, ‘ರಾಜ್ಯೋತ್ಸವ ಪ್ರಶಸ್ತಿ’, ‘ಕರ್ನಾಟಕ ಕಲಾತಿಲಕ’, ‘ಗಾನ ಕಲಾಭೂಷಣ’, ‘ಗಾಂಧರ್ವ ವಿದ್ಯಾನಿಧಿ’, ಬೆಂಗಳೂರು ನಾಗರತ್ನಮ್ಮ ಸ್ಮಾರಕ ‘ಪುರಂದರದಾಸ ಪ್ರಶಸ್ತಿ’, ‘ರಾಜ್ಯ ವಿದ್ವಾನ್’, ‘ಕನಕ-ಪುರಂದರ ಪ್ರಶಸ್ತಿ’ – ಹೀಗೆ ಪ್ರಶಸ್ತಿಗಳ ಮಾಲಿಕೆಯೇ ಲಭಿಸಿತ್ತು. ೨೦-೦೪-೨೦೦೬ ರಂದು ಶ್ರೀಯುತರು ಭಗವತಿ ಶಾರದೆಯ ಅಡಿದಾವರೆಗಳನ್ನು ಹೊಂದಿದರು.