ಈಗೆಲ್ಲಿಗೆ ಹೋದುವು- ೧೩೮. ನಿನಗೆ ಚಕ್ರವರ್ತಿತ್ವವನ್ನು ಘೋಷಿಸುವ ವೀರರ ಶೌರ್ಯದ ಆಕ್ಯವು ವಿಕ್ರಮಾರ್ಜುನನಲ್ಲಿ ಅದೇಕೆ ಸಲ್ಲುವುದಿಲ್ಲ. ನನಗೆ ಅವನು ಗೆಲ್ಲುವುದಕ್ಕೆ ಅಸಾಧ್ಯನಾದವನು. ಕೊಲ್ಲಲಾಗದವನು. ನಾನೂ ಈ ಯುದ್ಧಮುಖದಲ್ಲಿಯೇ ನಿಂತು ಕಾದುತ್ತೇನೆ. ಅಲ್ಲಿಯವರೆಗೆ ನೀನೂ ನನ್ನ ತೇರು, ಸಾರಥಿ, ಧ್ವಜ ಕವಚಗಳಿಂದ ಕೂಡಿಕೊಂಡು ಜಗದೇಕಮಲ್ಲನಲ್ಲಿ ಸಂಸಿ ಯುದ್ಧಮಾಡು. ವ|| ಎನ್ನಲು ದುರ್ಯೋಧನನು ಏನಾದರೇನಾಯಿತು. ನನ್ನ ಶತ್ರುವನ್ನು ನಾನೇ ಕೊಲ್ಲುತ್ತೇನೆ ಎಂದು ಒಡೆಯಲಾಗದ ಕವಚವನ್ನು ತೊಟ್ಟು ಶ್ರೇಷ್ಠವಾದ ಬಿಲ್ಲುಬಾಣಗಳನ್ನು ತೆಗೆದುಕೊಂಡು ಕಳಶಧ್ವಜರಥದಿಂದ ಕೂಡಿಕೊಂಡು ಹೋದನು. ೧೩೯. ದುರ್ಯೋಧನನು ತಡೆಯದೆ ಎದುರಾಗಿ ಬಂದು ಭೋರ್ಗರೆದು ಬಾಣಪ್ರಯೋಗ ಮಾಡಲು ಬಾಣಗಳು ನಾಟಿಕೊಳ್ಳದೆ ಸಿಡಿದುವು. ಅರ್ಜುನನು ಅವನ ಎರಡು ಕೈಗಳನ್ನೂ ಬಿರಿದುಹೋಗುವ ಹಾಗೆ ಹೊಡೆದು ಆಯುಧವನ್ನು ಹಿಡಿಯುವ ಶಕ್ತಿಯನ್ನೂ ಕೆಡಿಸಿದನು. ಭೀಮನು ಆತನನ್ನು ಕೊಲ್ಲುವೆನೆಂದು ಮಾಡಿದ ಪ್ರತಿಜ್ಞೆಯು ಹುಸಿಯಾಗುವುದೆಂದು ಅವನನ್ನು ಕೊಲ್ಲಲಾರದೆ ಹೋದನು. ವ|| ಅಷ್ಟರಲ್ಲಿ ಈ ಕಡೆ ಧರ್ಮರಾಯನು ಅರ್ಜುನನ ರಕ್ಷಣೆಗಾಗಿ ಸಾತ್ಯಕಿಯನ್ನು ಕಳುಹಿಸಲು ಕೌರವಸೇನಾಸಮುದ್ರದ ಮಧ್ಯಭಾಗವನ್ನು ದಾಟಿ ಬರುತ್ತಿದ್ದ ಸಾತ್ಯಕಿಯನ್ನು ಭೂರಿಶ್ರವನು ಅಡ್ಡಗಟ್ಟಿ ಎದುರಿಸಿದನು. ೧೪೦. ಹೋಗಬೇಡ ಎಂದು ಮೂದಲಿಸಲು ಸಾತ್ಯಕಿಯು ಹರಿತವಾದ ಬಾಣ ಸಮೂಹದಿಂದ ಭಯಂಕರವಾಗಿ ಅವನ ತೇರನ್ನು ಕತ್ತರಿಸಲು ಹಿರಿದ ಕತ್ತಿಯೊಡನೆ ಆತನು ಸಮೀಪಕ್ಕೆ ಬಂದು ಎದುರಿಸಿದನು. ಆಗ ತಾನೂ ಭಯವಿಲ್ಲದೆ ಕತ್ತಿಯನ್ನು ಹೊರಸೆಳೆದು ನುಗ್ಗಿ ಭೂಮ್ಯಾಕಾಶಗಳವರೆಗೆ ಭಯಂಕರವಾಗಿ ವಿರೋಗಳು ಸಂಸಿ ಯುದ್ಧಮಾಡಿದನು. ವ|| ಹಾಗೆ ಇಬ್ಬರೂ ಒಬ್ಬೊಬ್ಬರಲ್ಲಿ ವೀರವನ್ನೂ ಗರ್ವವನ್ನೂ ಪ್ರಕಾಶಿಸಲು ದಾಸವಾಳದ ಹೂವಿನ ಹಾರವನ್ನು ದೊಡ್ಡದಾಗಿ ರಾಶಿಮಾಡಿದಂತೆ ದಿಕ್ಕು ದಿಕ್ಕಿಗೆ ಚೆದುರಿ ಮಾಂಸದ ಉಂಡೆಗಳೂ ಕಿತ್ತಳೆಯ ಮತ್ತು ಬಣ್ಣ ಬಣ್ಣದ ಬಟ್ಟೆಯ ಬಾವುಟಗಳಂತೆ ಗಗನಕ್ಕೆ ಅತ್ತಿತ್ತ ಚಲಿಸುವ ಮತ್ತು ಚಿಮ್ಮಿ ಹಾರುವ ರಕ್ತದ ಸುಂಟುರುಗಾಳಿಗಳೂ ಅತಿ ಭಯಂಕರಾಕಾರದುವು. ಹಾಗೆ ಕಾದಿ ಶಕ್ತಿಗುಂದಿದ ಸಾತ್ಯಕಿಯನ್ನು ಭೂರಿಶ್ರವನು ಶ್ರಮವಿಲ್ಲದೆಯೇ ನೆಲಕ್ಕೆ ಬಡಿದು ಗಂಟಲನ್ನು ಮೆಟ್ಟಿ ತಲೆಯನ್ನು ಕತ್ತರಿಸುವಾಗ ಸಾತ್ಯಕಿಯು ಭೂಮಿಯುದ್ಧದಲ್ಲಿ ಪ್ರವೀಣನಾಗಿದ್ದುದರಿಂದ ಆತನ ಕತ್ತಿಯ ಬಾಯಲ್ಲಿ ಚಕ್ರಾಕೃತಿಯಿಂದ ತಲೆಯನ್ನು ತಿರುಗಿಸುತ್ತಿದ್ದಾಗ ಅದನ್ನು

ಕಂ|| ನರನೆಚ್ಚೊಡೆ ಪಱದು ಕರಂ
ಕರವಾಳೊಡನಮರೆ ಕಾಸಿ ಬೆಚ್ಚಂತೆ ವಸುಂ|
ಧರೆಯೊಳ್ ಬೞರ್ದುದದೇಂ
ತಿರವೋ ಪೂಣಿಸಿದ ಮುಷ್ಟಿ ಭೂರಿಶ್ರವನಾ|| ೧೪೧

ವ|| ಆಗಳ್ ಸಾತ್ಯಕಿ ಮುಳಿಸಿನೊಳ್ ಕಣ್ಗಾಣದೆ ಭೂರಿಶ್ರವನ ತಲೆಯನರಿದು ತನ್ನೇಱಂಗೆ ತಾನೆ ಸಿಗ್ಗಾಗಿ ಪೋದನನ್ನೆಗಂ ಯಮನಂದನನ ಬೆಸದೊಳ್ ಫಲ್ಗುಣನಂ ಕೆಯ್ಕೊಳಲ್ ಬರ್ಪ ಮರುನ್ನಂದನಂಗಾ ದ್ರೋಣರಡ್ಡಂ ಬಂದೊಡೆ ಗುರುಗೆ ಗುರುದಕ್ಷಿಣೆ ಗುಡುವಂತವರ ರಥಮಂ ಶತಚೂರ್ಣಂ ಮಾಡಿ ಕಳಿಂಗರಾಜ ಗಜಘಟೆಗಳನೌಂಕಿ ಸೊರ್ಕುತ್ತುಂ ಬರೆ ದುಶ್ಶಾಸನಾದಿಗಳದಿರದಿದಿರಂ ಬಂದಾಂತೊಡೆ-

ಚಂ|| ನಿಡುವಗೆ ಸೈಪಿನಿಂದೆ ದೊರೆಕೊಂಡುದಿವರ್ ಗಜೆಗೊಂಡೆನಪ್ಪೊಡೀ
ಗಡೆ ಪರೆದಪ್ಪರೆಚ್ಚು ತವೆ ಕೊಲ್ವೆನಿವಂದಿರನೆಂದು ನಚ್ಚಿನ|
ಚ್ಚುಡಿವಿನಮೆಚ್ಚೊಡೆಯಿನೆಚ್ಚರುಣಾಂಬು ಕಲಂಕಿ ಪಾಯೆ ಮು
ನ್ನಡಿಯೊಳುರುಳ್ದರಂಧನೃಪನಂದನರಂದು ಮರುತ್ತನೂಜನಾ|| ೧೪೨

ವ|| ಅಂತು ದುರ್ಮುಖ ದುರ್ಮದ ದುರ್ಧರ್ಷಣರ್ ಮೊದಲಾಗೆ ಮೂವತ್ತು ಮೂವರಂ ಕೊಂದು ದುಶ್ಶಾಸನನಂ ವಿರಥನಂ ಮಾಡಿ ದುರ್ಯೋಧನನನೊಂದೆ ನಿಶಿತ ವಿಶಿಖ ಹತಿಯಿಂ ಸುರುಳ್ದುರುಳ್ವಿನಮೆಚ್ಚು ಮೂರ್ಛಾಗತನಂ ಮಾಡಿ ಸಿಂಹನಾದದಿನಾರ್ದು ಮುಟ್ಟೆವರ್ಪಾಗಳಾಳ್ದನ ಸಾವಂ ನೋಡಲಾಱದೆ-

ಮ|| ಎಡೆಗೊಂಡಂಕದ ಕರ್ಣನೆಯ್ದೆವರೆ ದಿವ್ಯಾಸ್ತ್ರಂಗಳಿಂದಂ ಸಿಡಿಲ್
ಪೊಡೆವಂತಪ್ಪಿನಮೆಚ್ಚುದಗ್ರರಥಮಂ ಮುಯ್ಯೇೞು ಸೂೞು ಕೋಪದಿಂ|
ಕಡಿಯಲ್ ಸಾರ್ದೊಡೞಲ್ದು ಸೂತಸುತನೊಂದುಗ್ರೇಷುವಿಂ ತಿಣ್ಣಮೆ
ಚ್ಚೊಡನಾರ್ದಂ ನಸುಮೂರ್ಛೆಹೋಗಿ ರಥದೊಳ್ ಭೀಮಂ ನರಲ್ವನ್ನೆಗಂ|| ೧೪೩

ವ|| ಅಂತು ಮೂರ್ಛಾಗತನಾದ ಭೀಮನ ಕೊರಲೊಳ್ ಬಿಲ್ಲಂ ಕೋದು ಮೇಗಿಲ್ಲದೆ ತೆಗೆದು-

ಕೃಷ್ಣನು ನೋಡಿ ವಿದ್ವಿಷ್ಟ ವಿದ್ರಾವಣನಾದ ಅರ್ಜುನನಿಗೆ ತೋರಿಸಿದನು. ೧೪೧. ಅರ್ಜುನನು (ಭೂರಿಶ್ರವನನ್ನು) ಹೊಡೆಯಲು ಅವನ ಕೈ ಕತ್ತರಿಸಿಹೋಗಿ ಕತ್ತಿಯೊಡನೆ ಕಾಯಿಸಿ ಬೆಸೆದ ಹಾಗೆ ಅಂಟಿಕೊಂಡಿದ್ದು ಭೂಮಿಯಲ್ಲಿ ಬಿದ್ದಿತು. ಭೂರಿಶ್ರವನು ಪ್ರತಿಜ್ಞೆಮಾಡಿ ಹಿಡಿದ ಮುಷ್ಟಿಯ ಎಷ್ಟು ಸ್ಥಿರವಾದುದೊ! ವ|| ಆಗ ಸಾತ್ಯಕಿಯು ಕೋಪದಿಂದ ಕುರುಡನಾಗಿ ಭೂರಿಶ್ರವನ ತಲೆಯನ್ನು ಕತ್ತರಿಸಿದನು. ತನ್ನ ಯುದ್ಧಕಾರ್ಯಕ್ಕೆ ತಾನೆ ನಾಚಿಕೊಂಡು ಹೋದನು. ಅಷ್ಟರಲ್ಲಿ ಧರ್ಮರಾಜನ ಆಜ್ಞೆಯ ಪ್ರಕಾರ ಅರ್ಜುನನಿಗೆ ಸಹಾಯಕನಾಗಿ ಬರುತ್ತಿದ್ದ ಭೀಮನಿಗೆ ದ್ರೋಣಾಚಾರ್ಯರು ಅಡ್ಡಲಾಗಿ ಬರಲು ಭೀಮನು ಗುರುವಿಗೆ ಗುರುದಕ್ಷಿಣೆಯನ್ನು ಕೊಡುವಂತೆ ಅವರ ತೇರನ್ನು ನೂರು ಚೂರುಗಳನ್ನಾಗಿ ಮಾಡಿ ಕಳಿಂಗರಾಜನ ಆನೆಯ ಸಮೂಹವನ್ನು ಒತ್ತಿ ಸೋಕುತ್ತ ಬರಲು ದುಶ್ಶಾಸನನೇ ಮೊದಲಾದವರು ಹೆದರದೆ ಎದುರಾಗಿ ಬಂದು ಪ್ರತಿಭಟಿಸಿದರು. ೧೪೨. ದೀರ್ಘಕಾಲದ ಶತ್ರುಗಳಾದ ಇವರು ಅದೃಷ್ಟದಿಂದ ದೊರೆಕೊಂಡಿದ್ದಾರೆ. ಗದೆಯನ್ನು ತೆಗೆದುಕೊಂಡರೆ ಇವರು ಈಗಲೇ ಚದುರಿ ಓಡಿಹೋಗುತ್ತಾರೆ. ಇವರನ್ನು ಬಿಲ್ಲಿನಿಂದಲೇ ಪೂರ್ಣವಾಗಿ ಹೊಡೆದು ಕೊಂದುಹಾಕುತ್ತೇನೆ. ಎಂದು ತನ್ನ ಆತ್ಮವಿಶ್ವಾಸಕ್ಕೆ ಪಾತ್ರವಾದ ಮುದ್ರೆಯನ್ನು ಒಡೆಯುವ ಹಾಗೆ ಹೊಡೆಯಲು ಆ ಹೊಡೆದ ಕಡೆಯ ಗಾಯದಿಂದ ಹೊರಟ ರಕ್ತವು ಕದಡಿ ಹಾಯಲು ಕುರುಡುದೊರೆಯಾದ ಧೃತರಾಷ್ಟ್ರನ ಮಕ್ಕಳು ಆ ವಾಯುಪುತ್ರನಾದ ಭೀಮನ ಕಾಲಿನ ಮುಂಭಾಗದಲ್ಲಿ ಉರುಳಿದರು. ವ|| ಹಾಗೆ ದುರ್ಮುಖ, ದುರ್ಮದ, ದುರ್ಧರ್ಷಣರೇ ಮೊದಲಾದ ಮೂವತ್ತು ಮೂರು ಮಂದಿಯನ್ನೂ ಕೊಂದು ದುಶ್ಶಾಸನನನ್ನು ರಥವಿಲ್ಲದವನನ್ನಾಗಿ ಮಾಡಿ (ತೇರಿನಿಂದ ಉರುಳಿಸಿ) ದುರ್ಯೋಧನನನ್ನು ಒಂದೇ ಹರಿತವಾದ ಬಾಣದ ಪಟ್ಟಿನಿಂದ ಮುರಿದುಕೊಂಡು ಉರುಳಿ ಬೀಳುವ ಹಾಗೆ ಹೊಡೆದೂ ಮೂರ್ಛಿತನನ್ನಾಗಿ ಮಾಡಿ ಸಿಂಹಧ್ವನಿಯಿಂದ ಗರ್ಜಿಸಿ ಹತ್ತಿರಕ್ಕೆ ಬಂದಾಗ ತನ್ನನ್ನಾಳಿದ ಯಜಮಾನನ ಸಾವನ್ನು ನೋಡಲಾರದೆ- ೧೪೩. ಪ್ರಸಿದ್ಧನಾದ ಕರ್ಣನು ದುರ್ಯೋಧನ ಮತ್ತು ಭೀಮರ ಮಧ್ಯೆ ಪ್ರವೇಶಿಸಿ ಹತ್ತಿರ ಬರಲು (ಭೀಮನು ತನ್ನ) ಶ್ರೇಷ್ಠವಾದ ಬಾಣಗಳಿಂದ ಸಿಡಿಲು ಹೊಡೆಯುವ ಹಾಗೆ ಹೊಡೆದು (ಕರ್ಣನ) ಎತ್ತರವಾದ (ಶ್ರೇಷ್ಠವಾದ) ತೇರನ್ನು ಇಪ್ಪತ್ತೊಂದು ಸಲ ಕೋಪದಿಂದ ಕಡಿದು ಹಾಕಿದನು. ಕರ್ಣನು ವ್ಯಥೆಪಟ್ಟು ತನ್ನ ಶ್ರೇಷ್ಠವಾದ ಬಾಣದಿಂದ ತೀಕ್ಷ್ಣವಾಗಿ ಹೊಡೆದು ಭೀಮನು ರಥದಲ್ಲಿಯೇ ಸ್ವಲ್ಪ ಮೂರ್ಛೆಹೋಗಿ ನರಳುವ ಹಾಗೆ ಹೊಡೆದು ಆರ್ಭಟ ಮಾಡಿದನು. ವ|| ಹಾಗೆ ಮೂರ್ಛೆ ಹೋದ ಭೀಮನ ಕತ್ತಿಗೆ ಬಿಲ್ಲಿನ ಹಗ್ಗವನ್ನು ಸುತ್ತಿ ಅಸಮಾನವಾದ ರೀತಿಯಲ್ಲಿ ಸೆಳೆದು

ಕಂ|| ತಾಂ ಗಡಮೆನ್ನಾಳ್ದನ ತೊಡೆ
ಯಂ ಗಡಮಿನ್ನುಡಿವನೆನ್ನೊಳಂ ಕಾದುವನೆಂ|
ದಂಗಪತಿ ನುಡಿದು ಕೊಲ್ಲದೆ
ತಾಂಗಿದನಂಬಿಕೆಗೆ ನುಡಿದ ನುಡಿ ನಿಲೆ ಮನದೊಳ್|| ೧೪೪

ವ|| ಅನ್ನೆಗಮಿತ್ತ ಚಾಣೂರಾರಿ ಜರಾಸಂಧಾರಿಯ ಮುನ್ನೆಗೆದು ಬೞಕ್ಕಡಂಗಿದ ಸಿಂಹನಾದಕ್ಕೆ ಮನಕ್ಷತಂಬಟ್ಟು ಸಾತ್ಯಕಿಯ ನಾರಯಲಟ್ಟಿದೊಡಾತಂ ಬಂದಚೇತನನಾಗಿ ಬಿೞರ್ದ ವೃಕೋದರನಂ ತನ್ನ ರಥಮನೇಱಸಿಕೊಂಡು ಕೂಡೆ ವಂದನನ್ನೆಗಂ ದುರ್ಯೋಧನಂ ಕರ್ಣಂ ಬೆರಸು ಸೈಂಧವನ ಮೊನೆಯೊಳಾತನಂ ಪೆಱಗಿಕ್ಕಿ ಮುಂದೆ ನಿಂದಾಗಳ್-

ಚಂ|| ದಿನಕರನಸ್ತಮಸ್ತಕಮನಾಸೆವಡಲ್ ಬಗೆದಪ್ಪನೇಕೆ ಕೆ
ಮ್ಮನೆ ತಡೆವೈ ಜಯದ್ರಥನನಿಕ್ಕುೞದಾರೊಳಮಿಂ ತೊಡಂಕವೇ|
ಡೆನುತುಮಜಂ ಮರುಜ್ಚವದೆ ಚೋದಿಸೆ ಪಾರ್ಥನ ದೇವದತ್ತ ನಿ
ಸ್ವನದೊಳೆ ತೀವಿ ಪೊಟ್ಟನೊಡೆವಂತೆವೊಲಾದುದಜಾಂಡಮಂಡಳಂ|| ೧೪೫

ಚಂ|| ಚಟುಳಿತ ಚಕ್ರನೇಮಿ ಪರಿವರ್ತನ ಘಟ್ಟನ ಘಾತ ನಿರ್ಭರ
ಸುಟಿತ ಧರಾತಳಂ ವಿಜಯನುಗ್ರರಥಂ ಪರಿದತ್ತು ದಲ್ ಘಟಾ|
ಘಟಿತ ಹಟದ್ವಿರೋ ರುರಪ್ಲವಲಂಪಟ ಸಂಕಟೋತ್ಕಟಂ
ಕಟಕಟ ಘಾತ ನಾಕತಟ ಸಂಕಟ ಸಂಗರ ರಂಗಭೂಮಿಯೊಳ್|| ೧೪೬

ವ|| ಆಗಳ್ ಕುರುಧ್ವಜಿನಿಗೆ ಭಯಜ್ವರಮುಂ ಮಹೇಶ್ವರಜ್ವರಮುಂ ಬರೆ ಬರ್ಪುದಾರ ಮಹೇಶ್ವರನ ರಥದ ಬರವಂ ಕಂಡು ಕರ್ಣ ಶಲ್ಯ ಶಕುನಿ ಶಾರದ್ವತ ಕೃತವರ್ಮ ದುರ್ಯೋಧನ ದುಶ್ಶಾಸನರ್ ಮೊದಲಾದತಿರಥ ಸಮರಥ ಮಹಾರಥಾರ್ಧರಥರೊಂದೆವಿಂದೆಯಲ್ಲ ದೊಂದೊರ್ವರೊಳ್ ಸಂಸಿ ಗೊಂದಣಿಸಿ ನಿಂದಾಗಳ್-

ಚಂ|| ಶರದೊಳಗುರ್ಚಿಪೋಪ ಪೊಳಪಿಂಗೊಳಗಾಗಿ ತಗುಳ್ದುದೊಂದು ಬೆ
ಳ್ಸರಿಗೆಣೆಯಾದುದೀಯೆಱಗುವಂಬಿನ ಬಲ್ಸರಿಯೆಂಬಿನಂ ನಿರಂ|
ತರದೊಳೆ ಪಾಯ್ದ ಕೂರ್ಗಣೆಗಳಂ ತಱದೊಟ್ಟಿ ತೆರಳ್ಚಿ ತೂಳ್ದಿಕೊಂ
ಡರೆದು ಮುಗೞ ಸಣ್ಣಿಸಿದನಾಂತ ಚತುರ್ವಲಮಂ ಗುಣಾರ್ಣವಂ|| ೧೪೭

೧೪೪. ಇವನೇ ಅಲ್ಲವೇ ನನ್ನ ಯಜಮಾನನ ತೊಡೆಯನ್ನು ಒಡೆಯುವವನು; ಇನ್ನು ನನ್ನಲ್ಲಿಯೂ ಕಾದುವವನು ಎಂದು ಹೇಳಿ ಕರ್ಣನು ತಾಯಿಗೆ ಕೊಟ್ಟ ಮಾತು (ಭಾಷೆ) ಮನಸ್ಸಿನಲ್ಲಿ ನಿಂತಿರಲಾಗಿ ಭೀಮನನ್ನು ಕೊಲ್ಲದೆ ತಡೆದನು. ವ|| ಅಷ್ಟರಲ್ಲಿ ಈ ಕಡೆ ಕೃಷ್ಣನು ಭೀಮನ ಮುಂದಕ್ಕೆ ಹಾರಿ ಬಳಿಕ ಕುಗ್ಗಿದ ಸಿಂಹಧ್ವನಿಗೆ ಮನಸ್ಸಿನಲ್ಲಿಯೇ ವ್ಯಥೆಪಟ್ಟು ಸಾತ್ಯಕಿಯನ್ನು ನೋಡಿಕೊಂಡು ಬರಲು ಕಳುಹಿಸಿದನು. ಆತನು ಬಂದು ಶಕ್ತಿಗುಂದಿ ಬಿದ್ದಿದ್ದ ಭೀಮನನ್ನು ತನ್ನ ರಥದಲ್ಲಿ ಏರಿಸಿಕೊಂಡು ಜೊತೆಯಲ್ಲಿಯೇ ಬಂದನು. ಅಷ್ಟರಲ್ಲಿ ಕರ್ಣನೊಡಗೂಡಿ ದುರ್ಯೋಧನನು ಸೈಂಧವನ ಯುದ್ಧಭೂಮಿಗೆ ಬಂದು ಆತನನ್ನು ಹಿಂದೆ ಹಾಕಿ ತಾನು ನಿಂತನು.

೧೪೫. ಸೂರ್ಯನು ಅಸ್ತಪರ್ವತದ ನೆತ್ತಿಯನ್ನು ಸೇರಲು (ಮುಳುಗಲು) ಯೋಚಿಸುತ್ತಿದ್ದಾನೆ. ಏಕೆ ಸುಮ್ಮನೆ ಸಾವಕಾಶ ಮಾಡುತ್ತಿದ್ದೀಯೆ? ಜಯದ್ರಥನನ್ನು ಹೊಡೆ; ಮಿಕ್ಕವರಾರಲ್ಲಿಯೂ ತೊಡಕಿಕೊಳ್ಳಬೇಡ ಎನ್ನುತ್ತ ಕೃಷ್ಣನು ವಾಯುವೇಗದಿಂದ ರಥವನ್ನು ಚೋದಿಸಿದನು. ಅರ್ಜುನನ ದೇವದತ್ತವೆಂಬ ಶಂಖದ ಧ್ವನಿಯಿಂದ ತುಂಬಿ ಬ್ರಹ್ಮಾಂಡಮಂಡಲವು ಒಡೆಯುವಂತಾಯಿತು. ೧೪೬. ವೇಗವಾಗಿ ಚಲಿಸುತ್ತಿರುವ ತೇರಿನ ಚಕ್ರದ ಬಳೆಯ ಸುತ್ತುವುದರ ಪೆಟ್ಟಿನ ಹೊಡೆತದಿಂದ ಭರಿಸಲಸಾಧ್ಯವಾಗಿ ಭೂಪ್ರದೇಶವು ಸೀಳಿತು. ಅರ್ಜುನನ ಭಯಂಕರವಾದ ರಥವು ಆನೆಗಳ ಗುಂಪಿನಿಂದ ಕೂಡಿದ ಶತ್ರುಗಳ ಪ್ರಕಾಶಮಾನವಾದ ರಕ್ತಪ್ರವಾಹದಲ್ಲಿ ಆಸಕ್ತಿಯುಳ್ಳ ತಮ್ಮ ಕಟಕಟವೆಂಬ ಹೊಡೆತದಿಂದ ಸ್ವರ್ಗಕ್ಕೆ ಹಿಂಸೆಯನ್ನುಂಟುಮಾಡುತ್ತ ಯುದ್ಧಭೂಮಿಯಲ್ಲಿ ಹರಿಯಿತು. ವ|| ಆಗ ಕೌರವಸೈನ್ಯಕ್ಕೆ ಭಯವೆಂಬ ಜ್ವರವೂ ಈಶ್ವರನ ಹಣೆಗಣ್ಣಿನ ಜ್ವರವೂ ಬರುವ ಹಾಗೆ ಬರುತ್ತಿರುವ ಉದಾರಮಹೇಶ್ವರನಾದ ಅರ್ಜುನನ ರಥದ ಬರುವಿಕೆಯನ್ನು ಕಂಡು ಕರ್ಣ, ಶಲ್ಯ, ಶಕುನಿ, ಶಾರದ್ವತ, ಕೃತವರ್ಮ, ದುರ್ಯೋಧನ, ದುಶ್ಶಾಸನನೇ ಮೊದಲಾದ ಅತಿರಥ, ಸಮರಥ, ಮಹಾರಥ, ಅರ್ಧರಥರು ಗುಂಪಾಗಿರದೆ ಬೇರೆ ಬೇರೆಯಾಗಿ ಒಬ್ಬೊಬ್ಬರಲ್ಲಿ ಸೇರಿಕೊಂಡು ನಿಂತರು. ೧೪೭. ನಿರಂತರವಾಗಿ ಬೀಳುವ ಬಾಣಗಳ ಮಳೆಯ ನಡುವೆ ನುಸುಳಿಕೊಂಡು ಬಂದು ಪ್ರಕಾಶಿಸುವ ಸೂರ್ಯಕಿರಣವು ಬಾಣದ ಮಳೆಯ ಮಧ್ಯೆ ಸುರಿಯುವ ಬಿಳಿಯ ಕಿರಣಗಳ ಮಳೆಯೆಂಬಂತಾಯಿತು ಎನ್ನುವ ಹಾಗೆ ಎಡಬಿಡದೆ ಹಾದು ಬರುತ್ತಿರುವ ಬಾಣಗಳಿಂದ ಪ್ರತಿಭಟಿಸಿದ

ಮ||ಸ್ರ|| ಕಲಿಗಂ ಬಲ್ಲಾಳ್ಗಮಂಬೆತ್ತಿದೆನಿದುವೆ ಪದಂ ಮಾರ್ಕೊಳಲ್ ಸಿಂಧುರಾಜಂ
ಗೆಲಲೆಂದಾಂ ಬಂದೆನಿಂ ಕೊಂದಪನೆ ನೆರದು ನಿಂದಾನಿಮೆಂದಾಂತರಂ ಮೂ|
ದಲಿಸುತ್ತೆಚ್ಚಂ ಪ್ರಚಂಡ ಪ್ರಳಯ ಘನ ಘಟಾರಾವದಿಂದಾರ್ದು ಬಾಣಾ
ವಲಿಯಿಂದಂ ಪೂೞೆ ರೋದೋವಿವರಮನೊದವಿತ್ತೊಂದು ಘೋರಾಂಧಕಾರಂ|| ೧೪೮

ವ|| ಅಂತಮೋಘಾಸ್ತ್ರಧನಂಜಯನೆಚ್ಚ ಶರಸಂಘಾತದಿನೊಗೆದ ರಣಗೞ್ತಲೆಯೆ ಮೊಲಗೞ್ತಲೆಯಂ ಮಾಡೆ ನೇಸೞು ಪಟ್ಟತ್ತು ವಿಜಯಂ ಸೋಲ್ತನೆಂದು ಕೌರವಬಲಮಾರ್ದೊಡೆ-

ಚಂ|| ಜ್ವಳದನಳಾಸ್ತ್ರದಿಂದಮಿಸೆ ಕೞ್ತಲೆ ತೂಳ್ದು ತೆರಳ್ದುದಾಗಳು
ಮ್ಮಳಿಸಿ ಮಹಾರಥರ್ ಪೆಳ ಸೈಂಧವನೆನ್ನಳವಿಂಗಮೆನ್ನ ದೋ|
ರ್ವಳದಳವಿಂಗಮಿಂ ಸೆಡೆದಿರಲ್ ದೊರೆಯಲ್ತೆನಗೆಂದು ಬಂದಸುಂ
ಗೊಳೆ ಪೊಣರ್ದಂ ಸುರರ್ ಪೊಗೞೆ ತನ್ನಳವಂ ಜಗದೇಕಮಲ್ಲನೊಳ್|| ೧೪೯

ವ|| ಅಂತತಿರಥ ಮಥನನ ರಥಕ್ಕದಿರದಿದಿರಂ ತನ್ನ ರಥಮಂ ಪರಿಯಿಸಿ ಜಯದ್ರಥಂ ಮುಟ್ಟೆವಂದು-

ಉ|| ನಿನ್ನೆ ಪೊರಳ್ಚಿ ನಿನ್ನ ಮಗನಂ ಸೆರಗಿಲ್ಲದೆ ಕೊಂದನಿಂದುಮಿಂ
ತಿನ್ನೆಗಮಿರ್ಪುದಂ ಭಯದಿನಿರ್ದೆನೆ ನಿನ್ನನೆ ಪಾರುತಿರ್ದೆನೆಂ|
ದುನ್ನತ ಶೌರ್ಯದಿಂದಜಿತನಂ ನರನಂ ಮುನಿದೆಚ್ಚನೇೞುಮೆಂ
ಟುನ್ನಿಶಿತಾಸ್ತ್ರದಿಂದದಟದೇಂ ದೊರೆವೆತ್ತುದೊ ಸಿಂಧುರಾಜನಾ|. ೧೫೦

ವ|| ಅಂತೆ ಚ್ಚು ಕಿಚ್ಚುಂ ಕಿಡಿಯುಮಾಗಿ ಪೆರ್ಚಿದುಮ್ಮಚ್ಚರದಿಂದಚ್ಚರಿಯಾಗಿ ಕಾದೆ

ಸ್ರ|| ಎಂತಸ್ಮತ್ಪ್ರುತ್ರನಂ ಸಂಗರದೊಳೞದೆಯಿನ್ನಂತೆ ನಿಲ್ ಶಕ್ತಿ ಚಾತು
ರ್ದುಂತಂಗಳ್ ನಿನ್ನನಾಂ ಕೊಲ್ವೆಡೆಯೊಳೆಲವೊ ಪೇೞ್ ಕಾವುವೇ ಕಾಯವಣ್ಮೆಂ|
ದಂತಾಂತೆಚ್ಚೆಚ್ಚು ಸೂತ ಧ್ವಜ ಹಯ ರಥ ಸಂಘಾತಮಂ ನುರ್ಗೆ ಲೋಕ
ಕ್ಕಂತಂ ಮಾೞ್ಪಂತಕಂಬೋಲ್ ಗದೆವಿಡಿದುಱದೆಯ್ತರ್ಪನಂ ಕಂಡನಂತಂ|| ೧೫೧

ಚತುರಂಗಸೈನ್ಯವನ್ನು ಅರ್ಜುನನು ಕತ್ತರಿಸಿ, ಓಡಿಸಿ ರಾಶಿಮಾಡಿಕೊಂಡು ಅರೆದು ಪುಡಿಮಾಡಿದನು. ೧೪೮. ‘ಶೂರರಿಗೂ ಬಲಿಷ್ಠರಾದ ವೀರರಿಗೂ ಸವಾಲು ಮಾಡುತ್ತಿದ್ದೇನೆ. (ಬಾಣಗಳನ್ನು ಎತ್ತಿದ್ದೇನೆ). ಪ್ರತಿಭಟಿಸುವುದಕ್ಕೆ ಇದೇ ಹದವಾದ ಕಾಲ. ಸೈಂಧವನನ್ನು ಗೆಲ್ಲುವುದಕ್ಕಾಗಿ ನಾನು ಬಂದಿದ್ದೇನೆ. ಕೊಲ್ಲುತ್ತೇನೆ. ಗುಂಪಾಗಿ ನಿಂತು ಎದುರಿಸಿ ಎಂದು ಪ್ರತಿಭಟಿಸಿದವರನ್ನು ಮೂದಲಿಸಿದನು (ಅಣಕವಾಡಿದನು). ಪ್ರಪಂಚವಾದ ಪ್ರಳಯಕಾಲದ ಗುಡುಗಿನ ಶಬ್ದದಿಂದ ಆರ್ಭಟಮಾಡಿ ಹೊಡೆದು ಬಾಣಗಳ ಸಮೂಹದಿಂದ ಆಕಾಶಪ್ರದೇಶವನ್ನು ಹೂಳಿದನು. ಅದರಿಂದ ಭಯಂಕರವಾದ ಕತ್ತಲೆಯು ಆವರಿಸಿತು. ವ|| ಹಾಗೆ ಅಮೋಘಾಸ್ತ್ರ ಧನಂಜಯನಾದ ಅರ್ಜುನನು ಹೊಡೆದ ಬಾಣಗಳ ಸಮೂಹದಿಂದುಂಟಾದ ಯುದ್ಧಗತ್ತಲೆಯೇ ಮೊಲಗತ್ತಲೆಯನ್ನು (ಚಂದ್ರನಲ್ಲಿರುವ ಮೊಲಗತ್ತಲೆಯನ್ನು- ರಾತ್ರಿಯ ಭ್ರಮೆಯನ್ನು) ಉಂಟುಮಾಡಲು “ಸೂರ್ಯನು ಮುಳುಗಿದನು-ಅರ್ಜುನನು ಸೋತನು” ಎಂದು ಕೌರವ ಸೈನ್ಯವು ಕೂಗಿಕೊಂಡಿತು. ೧೪೯. ತಕ್ಷಣವೇ ಅರ್ಜುನನು ಪ್ರಕಾಶಮಾನವಾದ ಆಗ್ನೇಯಾಸ್ತ್ರವನ್ನು ಪ್ರಯೋಗಿಸಲು ಕತ್ತಲೆ ಹರಿದು ಓಡಿಹೋಯಿತು. ಆಗ ಮಹಾರಥರು ವ್ಯಥೆಪಟ್ಟು ಹೆದರಿದರು. ಸೈಂಧವನು ತನ್ನ ಶಕ್ತಿಗೂ ತನ್ನ ಬಾಹುಬಲದ ಶಕ್ತಿಗೂ ಇನ್ನು ಭಯದಿಂದ ನಾನು ಕುಗ್ಗಿರುವುದು ಯೋಗ್ಯವಲ್ಲ ಎಂದು ಹೊರಗೆ ಬಂದು ಪ್ರಾಣಾಪಹಾರಮಾಡುವ ಹಾಗೆ ತನ್ನ ಪರಾಕ್ರಮವನ್ನು ದೇವತೆಗಳೂ ಹೊಗಳುತ್ತಿರಲು ಜಗದೇಕಮಲ್ಲನಾದ ಅರ್ಜುನನಲ್ಲಿ ಹೋರಾಡಿದನು- ವ|| ಅತಿರಥಮಥನನಾದ ಅರ್ಜುನನ ರಥಕ್ಕಿದಿರಾಗಿ ಹೆದರದೆ ತನ್ನ ರಥವನ್ನು ಹಾಯಿಸಿ ಸೈಂಧವನು ಸಮೀಪಕ್ಕೆ ಬಂದು ೧೫೦. “ನಿನ್ನೆಯ ದಿನ ಭಯವಿಲ್ಲದೆ ನಿನ್ನ ಮಗನಾದ ಅಭಿಮನ್ಯುವನ್ನು ಹೊರಳಿಸಿ ಕೊಂದೆ. ಇಂದು ಇಲ್ಲಿಯವರೆಗೆ ಭಯದಿಂದ ಮರೆಯಾಗಿದ್ದೆನೆ? ನಿನ್ನನ್ನೇ ನಿರೀಕ್ಷಿಸುತ್ತಿದ್ದೆ” ಎಂದು ಕೋಪದಿಂದಲೂ ಅತಿಶಯವಾದ ಪರಾಕ್ರಮದಿಂದಲೂ ಕೃಷ್ಣನನ್ನೂ ಅರ್ಜುನನ್ನೂ ಬಹಳಹರಿತವಾದ ಏಳೆಂಟು ಬಾಣಗಳಿಂದ ಹೊಡೆದನು. ಸೈಂಧವನ ಪರಾಕ್ರಮವು ಅದ್ಭುತವಾಯಿತು! ವ|| ಕೋಪಗೊಂಡು ಹೆಚ್ಚಿದ ಮತ್ಸರದಿಂದ ಆಶ್ಚರ್ಯವಾಗವ ಹಾಗೆ ಕಾದಿದನು. ೧೫೧. “ನನ್ನ ಮಗನನ್ನು ಹೇಗೆ ಕೊಂದೆಯೋ ಇದು ಹಾಗೆಯೇ; ನಿಲ್ಲು, ಶಕ್ತಿಯುಕ್ತವಾದ ಚತುರಂಗಸೈನ್ಯಗಳು ನಾನು ನಿನ್ನನ್ನು ಕೊಲ್ಲುವ ಸಂದರ್ಭದಲ್ಲಿ ರಕ್ಷಿಸಲಾರವು. ಸಾಯಿ” ಎಂದು ಪ್ರತಿಭಟಿಸಿ ಸಾರಥಿ, ಬಾವುಟ, ಕುದುರೆ ಮತ್ತು ತೇರಿನ ಸಮೂಹಗಳನ್ನು ನುಚ್ಚುನೂರಾಗಿ

ಪುಡಿಯಾಗುವ ಹಾಗೆ ಹೊಡೆದನು. ಸೈಂಧವನು ರೋಷಾವೇಶದಿಂದ ಪ್ರಪಂಚಕ್ಕೆ ಅಂತ್ಯವನ್ನುಂಟುಮಾಡುವ ಯಮನಂತೆ ಗದೆಯನ್ನು

ಕಂ|| ತುಡು ಪಾಶುಪತಮನೆನೆ ನರ
ನೆಡೆಮಡಗದೆ ತುಡೆ ದಿಶಾಳಿ ನಡುಗಿದುದು ಸುರು|
ಳ್ದುಡುಗಿದುದು ವಿಯತ್ತಳಮೆಳೆ
ಪಿಡುಗಿದುದು ಕಲಂಕಿ ಕದಡಿದುದು ಶಿವನ ಮನಂ|| ೧೫೨

ಉ|| ಸುಱಯೊಳಗಿರ್ದು ಬೆಟ್ಟು ಪೊಱಪೊಣ್ಮುವಿನಂ ಲವಣಾಂಬುರಾಶಿ ಕು
ಕ್ಕುೞಗುದಿವಲ್ಲಿ ಕೂೞ್ಗುದಿಯೆ ಮೇಗೆ ಸಿಡಿಲ್ದಗುಳಂತೆ ಕೂಡೆ ತ|
ತ್ತೞಗುದಿಯುತ್ತುಮಿರ್ಪ ಕುದಿಯೊಳ್ ಸಿಡಿದಲ್ಲಿಯ ಮುತ್ತುಗಳ್ ಛೞಲ್
ಛೞಲೆನೆ ಕೊಂಡುವೊರ್ಮೊದಲೆ ರುದ್ರ ಸುರೇಂದ್ರ ವಿಮಾನಪಙ್ಕಿ ಯಂ|| ೧೫೩

ವ|| ಅಂತು ಸಮುದ್ರಕ್ಷೋಭಮುಂ ತ್ರೈಲೋಕ್ಯಕ್ಷೋಭಮುಮೊಡನೊಡನಾಗೆ

ಚಂ|| ತೆಗೆನೆ ದೊಱಕೊಂಡಿಸೆ ಶಿರಂ ಪರಿದತ್ತ ವಿಯತ್ತಳಂಬರಂ
ನೆಗೆದೊಡೆ ರಾಹು ಬಾಯ್ದೆದು ನುಂಗಲೆ ಬಂದಪುದೆಂಬ ಶಂಕೆಯಿಂ|
ದಗಿದು ದಿನೇಶನಸ್ತಗಿರಿಯಂ ಮಗೊಂಡನಮೋಘಮೆಂಬ ಮಾ
ತುಗಳ ನೆಗೞ್ತೆಯಂ ಪಡೆದನಾಹವದೊಳ್ ಪರಸೈನ್ಯಭೈರವಂ|| ೧೫೪

ಚಂ|| ಬಿರಿದಲರೋಳಿ ಸಗ್ಗದ ಮದಾಳಿಗಳಂ ಗೆಡಗೊಂಡು ದೇವಸುಂ
ದರಿಯರ ಕೆಯ್ಗಳಿಂದಮುಗೆ ತುಂಬುರು ನಾರದರೊಂದು ಗೇಯದಿಂ|
ಚರಮೆರ್ದೆಯಂ ಪಳಂಚಲೆಯೆ ವೀರಲತಾಂಗಿಯ ಸೋಂಕು ಮೆಯ್ಯೊಳಂ
ಕುರಿಸೆ ನಿರಾಕುಳಂ ಕಳೆದನಾಜಿ ಪರಿಶ್ರಮಮಂ ಗುಣಾರ್ಣವಂ|| ೧೫೫

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ
ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ
ಚತುರ ಕವಿತಾಗುಣಾರ್ಣವ ವಿರಚಿತಮಪ್ಪ
ವಿಕ್ರಮಾರ್ಜುನ ವಇಜಯದೊಳ್

ಏಕಾದಶಾಶ್ವಾಸಂ

ಹಿಡಿದು ವೇಗವಾಗಿ ಬರುತ್ತಿದ್ದುದನ್ನು ಕೃಷ್ಣನು ನೋಡಿ ಅರ್ಜುನನಿಗೆ ೧೫೨. ‘ಪಾಶುಪತಾಸ್ತ್ರವನ್ನು ಪ್ರಯೋಗಿಸು’ ಎಂದು (ಕೃಷ್ಣನು) ಹೇಳಿದನು. ಅರ್ಜುನನು ಸಾವಕಾಶಮಾಡದೆ ಅದನ್ನು ಪ್ರಯೋಗಿಸಲು ದಿಕ್ಕುಗಳ ಸಮೂಹವು ನಡುಗಿತು. ಆಕಾಶಪ್ರದೇಶವು ಸುರುಳಿಯಾಗಿ ಸುಕ್ಕಿಹೋಯಿತು. ಭೂಮಿಯು ಒಡೆಯಿತು. ಈಶ್ವರನ ಮನಸ್ಸು ಕದಡಿಹೋಯಿತು. ೧೫೩. ಸಮುದ್ರದ ಸುಳಿಯಲ್ಲಿದ್ದ ಪರ್ವತಗಳು ಹೊರಹೊಮ್ಮುತ್ತಿರಲು ಉಪ್ಪುನೀರಿನ ಸಮುದ್ರವು ಅನ್ನವು ಕುದಿಯುವಂತೆ ಕುದಿಯುವಾಗ ಮೇಲಕ್ಕೆ ಸಿಡಿದ ಅನ್ನದ ಅಗುಳಂತೆ ಕೂಡಲೆ ತಳತಳವೆಂದು ಕುದಿಯುತ್ತಿರುವ ಕುದಿತದಲ್ಲಿ ಆ ಸಮುದ್ರದ ಮುತ್ತುಗಳು ಛಿಟಿಲ್ ಛಿಟಿಲ್ ಎಂದು ಆಕಾಶಕ್ಕೆ ಹಾರಿ ಶಿವನ ಮತ್ತು ದೇವೇಂದ್ರನ ವಿಮಾನಗಳ ಸಾಲುಗಳನ್ನು ಒಂದೇಸಲ ಆಕ್ರಮಿಸಿದುವು. ವ|| ಹಾಗೆ ಸಮುದ್ರದ ಕ್ಷೋಭವೂ (ಕುಲಕುವಿಕೆಯೂ) ಮೂರು ಲೋಕಗಳ ಕ್ಷೋಭವೂ (ಭಯಕಂಪನಾದಿಗಳೂ) ಜೊತೆಜೊತೆಯಲ್ಲಿಯೇ ಉಂಟಾದವು. ೧೫೨. ಅರ್ಜುನನು ಬಾಣವನ್ನು ದೀರ್ಘವಾಗಿ ಕಿವಿಯವರೆಗೂ ಸೆಳೆದು ಬಲವಾಗಿ ಅದುಮಿಕೊಂಡು ಹೊಡೆಯಲು ಸೈಂಧವನ ತಲೆಯು ಕತ್ತರಿಸಿ ಆಕಾಶದೆಡೆ ಹಾರಲು ರಾಹುಗ್ರಹವು ಬಾಯಿ ತೆರೆದುಕೊಂಡು ನುಂಗಲು ಬಂದಿದೆಯೋ ಎನ್ನುವ ಭಯದಿಂದ ಸೂರ್ಯನು ಹೆದರಿ ಅಸ್ತಪರ್ವತದಲ್ಲಿ ಅಡಗಿದನು. (ಮರೆಯಾದನು). ಪರಸೈನ್ಯಭರವನಾದ ಅರ್ಜುನನು ಇದರಿಂದ ಯುದ್ಧದಲ್ಲಿ ಬೆಲೆಯಿಲ್ಲದ ಶಕ್ತಿಯುಳ್ಳವನು ಎಂಬ ಕೀರ್ತಿಯನ್ನು ಪಡೆದನು. ೧೫೫. ಅರಳಿದ ಪುಷ್ಪಗಳ ಸಮೂಹವು ಸ್ವರ್ಗದ ಮದಾಳಿ (ಮದಿಸಿದ ದುಂಬಿ) ಗಳಿಂದ ಕೂಡಿ ದೇವಸುಂದರಿಯರ ಕೈಗಳಿಂದ ಸುರಿಯುತ್ತಿರಲು (ಪುಷ್ಪಮೃಷ್ಟಿಯಾಗುತ್ತಿರಲು) ತುಂಬುರು ನಾರದರ ಗೀತದ ಒಂದು ಇಂಪಾದ ಸ್ವರವು ಎದೆಯನ್ನು ತಾಗಿ ಅಲೆಯುತ್ತಿರಲು ವಿಜಯಲಕ್ಷ್ಮಿಯ ಸ್ಪರ್ಶವು ಶರೀರದಲ್ಲಿ ರೋಮಾಂಚನವಾಗುತ್ತಿರಲು ಅರ್ಜುನನು ಯುದ್ಧದ ಆಯಾಸವನ್ನು ಶ್ರಮವಿಲ್ಲದೆಯೇ ಕಳೆದನು. ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನ ವಿಜಯದಲ್ಲಿ ಹನ್ನೊಂದನೆಯ ಆಶ್ವಾಸ.