ಧರ್ಮವನ್ನು ಯಾರು ರಕ್ಷಿಸುವರೋ ಅಂಥವರನ್ನು ಧರ್ಮವು ರಕ್ಷಿಸುತ್ತದೆ ಎಂಬ ತತ್ವದಲ್ಲಿ ನಂಬಿಕೆಯನ್ನಿಟ್ಟು ಸಾಮ್ರಾಜ್ಯವನ್ನು ಕಟ್ಟಿದವರು ವಿಜಯನಗರದ ಪ್ರಭುಗಳು.  ಈ ಅರಸು ಮನೆತನದವರಲ್ಲಿ ಕೃಷ್ಣದೇವರಾಯ ಹೆಸರು ಬಹು ಪ್ರಖ್ಯಾತವಾದುದು. ಈತನು ಪಂಡರಾಪೂರದಲ್ಲಿದ್ದ ಪಾಂಡುರಂಗನ ವಿಗ್ರಹವನ್ನು ವಿಜಯನಗರದ ರಾಜಧಾನಿಗೆ ತಂದು ಅಲ್ಲಿ ಪೂಜಾದಿಗಳು ನಡೆಯುವಂತೆ ಏರ್ಪಾಡು ಮಾಡಿದನು. ಈ ವಿಷಯವನ್ನು ತಿಳಿದ ಭಾನುದಾಸರು ಪಂಪಾ ಕ್ಷೇತ್ರವನ್ನು ಹುಡುಕಿಕೊಂಡು ಬಂದರು. ರಾಜವೈಭವದಲ್ಲಿ ಪೂಜೆಗೊಳ್ಳುತ್ತಿದ್ದ ಪಾಂಡುರಂಗನ ಅನನ್ಯ ಸೇವೆ ಮಾಡಿದರು.  ಸಾಮ್ರಾಟನಾದ ಕೃಷ್ಣದೇವರಾಯನನ್ನು ಕಂಡು ಆತನ ಮನವಲಿಸಿಕೊಂಡು ವಿಠ್ಠಲನ ವಿಗ್ರಹವನ್ನು ಪಂಡರಪೂರಕ್ಕೆ ತಂದು ಮೊದಲಿದ್ದ ಸ್ಥಳದಲ್ಲಿಯೇ ಪುನಃ ಪ್ರತಿಷ್ಠಾಪನೆಯಾಗುವಂತೆ ಮಾಡಿದರು. ಅಂದಿನಿಂದ ಕನ್ನಡ ನಾಡಿನ ಹರಿದಾಸರು, ಮಹಾರಾಷ್ಟ್ರದ ಸಂತರು ಪಂಢರಪುರ ಕ್ಷೇತ್ರದಲ್ಲಿ ಒಮ್ಮಿಳಿತರಾಗಿ ಭಕ್ತಿಯಿಂದ ಭಾಗವತ ಧರ್ಮವನ್ನು ಪ್ರಚಾರ ಮಾಡಲಾರಂಭಿಸಿದರು. ಮಹಾನುಭಾವರಾದ ಈ ಭಾನುದಾಸರ ವಂಶದಲ್ಲಿ ಜನ್ಮ ತಾಳಿದವರು ಸಂತ ಏಕನಾಥರು.

ಶಕಪುರುಷನೆಂದು ಖ್ಯಾತನಾದ ಶಾಲಿವಾಹನನ್ನು ಗೋದಾವರಿ ತೀರದ ಪ್ರತಿಷ್ಠಾನಪುರ ಎಂಬ ನಗರದಲ್ಲಿ ರಾಜ್ಯವನ್ನಾಳಿದ.

ಬಾಲ್ಯ :

ಪೈಠಣ ನಗರದ ನಿವಾಸಿಗಳಾದ ಸೂರ್ಯನಾರಾಯಣ ಹಾಗೂ ರುಕ್ಮಿಣಿ ಎಂಬ ದಂಪತಿಗಳಿಗೆ  ಶಾಲಿವಾಹನ ಶಕೆ ೧೪೫೫ರಲ್ಲಿ (ಅಂದರೆ ಕ್ರಿಶ ೧೫೩೩ರಲ್ಲಿ) ಮೂಲಾ ನಕ್ಷತ್ರದಲ್ಲಿ ಗಂಡು ಸಂತಾನವಾಯಿತು ಈ ನಕ್ಷತ್ರ ದೋಷವೇನೋ ಎಂಬಂತೆ ಮಗುವು ತಂದೆ ತಾಯಿಗಳ್ನು ಕಳೆದುಕೊಂಡು ತಬ್ಬಲಿಯ ಕೂಸಾಗಿ ಅಜ್ಜ-ಅಜ್ಜಿಯರ ನೆರಳಿನಲ್ಲಿಬೆಳೆಯುವಂತಾಯಿತು. ಈ ಮಗುವನ್ನು ಬಿಟ್ಟರೆ ವಂಶಕ್ಕೆ ಬೇರೇ ಸಂತಾನವೇ ಇರಲಿಲ್ಲ.ಆದುದರಿಂದ ತಾತ ಚಕ್ರಪಾಣಿಯವರು ಈ ಮಗುವನ್ನು “ಎಕನಾಥ” ಎಂಬ ಹೆಸರಿನಿಂದ ಕರೆಯಲಾರಂಬಿಸಿದರು.

ಮಗು ಏಕನಾಥನು ಬೆಳೆದಂತೆಲ್ಲ ಅವನಿಗೆ ಸರಿಯಾದ ರೀತಿಯಲ್ಲಿ ವಿದ್ಯಾಭ್ಯಾಸವು ದೊರೆಯುವಂತಾಗಬೇಕು ಎಂದು ಆರು ವರ್ಷದ ಬಾಲಕನಿರುವಾಗಲೇ ಚಕ್ರಪಾಣೀಯವರು ಆತನಿಗೆ ಉಪನಯನ ಸಂಸ್ಕಾರವನ್ನು ನೆರವೇರಿಸಿದರು. ಸ್ನಾನ, ಸಂಧ್ಯಾವಂದನೆ,ದೇವತಾರ್ಚನೆ ಮೊದಲಾದವುಗಳಲ್ಲಿ ಏಕನಾಥನಿಗೆ ಬಹು ಆಸಕ್ತಿ. ಬಾಲಕನು ಸಮಯಕ್ಕೆ ಸರಿಯಾಗಿ , ನಿಯಮಕ್ಕೆ ಒಳಪಟ್ಟು ತನ್ನ ದಿನಚರಿಯನ್ನು ನಡೆಸಿಕೊಂಡು ಬರುತ್ತಿದ್ದನು. ಆತನ ಕಂಠದಿಂದ ವೇದ ಪಾಠಗಳನ್ನು ಕೇಳುವುದೆಂದರೆ ಪೈಠನದ ಹಿರಿಯರಿಗೆ ಹಬ್ಬವೆನಿಸುತ್ತಿತ್ತು. ಕಾವ್ಯ, ನಾಟಕ, ಮೊದಲಾದ  ಸಂಸ್ಕೃತ ಸಾಹಿತ್ಯಾಭ್ಯಾಸದಲ್ಲಿ ಆತನನ್ನು ಸರಿಗಟ್ಟುವ ವಿದ್ಯಾರ್ಥಿಗಳೀರಲಿಲ್ಲ.  ವೇದ ವೇದಾಂತ ಮೊದಲಾದ ಉದ್ಗ್ರಂಥಗಳಲ್ಲಿ ಅಡಕವಾದ ಜಟಿಲಾರ್ಥಗಳನ್ನು ಸುಲಭವಾದ ರೀತಿಯಲ್ಲಿ ತನಗೆ ತಿಳಿಸಿ ಹೇಳುವ ಗುರುಗಳನ್ನು ಪಡೆಯಲು ಆತನ ಮನಸ್ಸು ಹಾತೊರೆಯಲಾರಂಭಿಸಿತು.

ಗುರು ದೊರೆತರು :

ಗೋದಾವರಿ ತೀರದಲ್ಲಿಯ ಶಿವದೇವಾಲಯವೆಂದರೆ ಏಕನಾಥನಿಗೆ ಪಂಚಪ್ರಾಣ. ಆ ದೇವಾಲಯವೆಂದರೆ ಏಕನಾಥನಿಗೆ ಪಂಚ ಪ್ರಾಣ. ಆ ದೇವಾಲಯದಲ್ಲಿ ಬಂದಿಳೀದ ಸಾಧು ಸಂತರ ಸೇವೆಯನ್ನು ಆತ ಬಹು ಶ್ರದ್ದೇಯಿಂದ ಮಾಡುತ್ತಿದ್ದ. ಅವರಿಲ್ಲದ ವೇಳೆಯಲ್ಲಿ ಏಕಾಂತದ ತಾಣವನ್ನು ಹುಡುಕಿಕೊಂಡು ಹೋಗಿ ಧ್ಯಾನಾಸಕ್ತನಾಗಿ ಕುಳಿತು ಬಿಡುತ್ತಿದ್ದ. ಹೀಗೆ ಏಕಾಂತದಲ್ಲಿ  ಕುಳಿತಾಗ ಒಂದು ದಿನ “ನಿನ್ನ ಆತ್ಮೋದ್ದಾರಕರಾದ ಗುರುಗಳು ದೇವಗಡದಲ್ಲಿದ್ದಾರೆ, ನೀನು ಅವರಿಗೆ ಮೋರೆ ಹೋಗು” ಎಂಬ ಸೂಚನೆ ಆಯಿತೆಂದು ಹೇಳುತ್ತಾರೆ. ಆಗ ತಕ್ಷಣವೇ ಏಕನಾಥನು ಯಾರಿಗೂ ತಿಳಿಸದೇದೇವಗಡದ ಮಾರ್ಗವನ್ನು ತುಳಿಯಲಾರಂಭಿಸಿದ.

ಅಂದು ಇಂದಿನಂತೆ ಪ್ರವಾಸದ ಸೌಕರ್ಯಗಳ ಕಾಲವಾಗಿರಲಿಲ್ಲ. ಪೈಠಣದಿಂದ ದೇವಗಡ ಸಮೀಪದ ದಾರಿಯು ಆಗಿರಲಿಲ್ಲ. ಮಾರ್ಗದುದ್ದಕ್ಕೂ ದಟ್ಟವಾದ ಕಾಡು. ವನ್ಯ ಮೃಗಗಳ ಭಯ, ಕಳ್ಳಕಾಕರ ಹಾವಳಿ, ಯಾವ ಕಷ್ಟವನ್ನೂ ಲೆಕ್ಕಿಸದೇ  ತದೇಕಚಿತ್ತನಾಗಿ ರುಗುಚರಣಾರವಿಂದಗಳನ್ನು ಧ್ಯಾನ ಮಾಡುತ್ತ ಒಂದು ನಸುಕಿನಜಾವ ದೇವಗಡ (ಇಂದಿನ ದೌಲತಾಬಾದ) ದ ಕೋಟೆಯನ್ನು ಸುರಕ್ಷಿತವಾಗಿ ಬಂದುತಲುಪಿದನು.

ಬಹುದೂರದ ಪ್ರಯಾಣವನ್ನು ಕೈಗೊಂಡು ಬಳಲಿ ಬಂದ ಏಕನಾಥನನ್ನು ಕಂಡಾಗ ಜನಾರ್ಧನ ಸ್ವಾಮಿಗಳಿಗೆ ಧ್ರುವನ ಚಿತ್ರವು ಕಣ್ಣ ಮುಂದೆ ಬಂದು ನಿಂತಿತು. ಅವರು ಅತ್ಯಂತ ವಾತ್ಸಲ್ಯದಿಂದ ಆತನಿಗೆ ಆಶ್ರಯವನ್ನಿತ್ತು ತಮ್ಮ ಸೇವೆ ಮಾಡಿಕೊಂಡಿರುವಂತೆ ಅಪ್ಪಣೆಯಿತ್ತರು. ಅಂದಿನಿಂದ ಏಕನಾಥರು ಮನಃಪೂರ್ವಕವಾಗಿ ಗುರುಗಳು ಹಾಗೂ ಗುರು ಪತ್ನಿಯ ಸೇವೆಯಲ್ಲಿ ನಿರತರಾದರು.ಏಕನಾಥರಿಗೆ ಗುರುಗಳೇ ತಂದೆ, ಗುರುಪತ್ನಿಯೇ ತಾಯಿ ಎನ್ನುವಂತಾಯಿತು.

ಏಕನಾಥರ ಗುರುಗಳಾದ ಜನಾರ್ಧನ ಪಂತರು ಮೂಲತಃ ಚಾಳಿಸಗಾವ ಎಂಬಲ್ಲಿಯ ದೇಶಪಾಂಡೆ ಮನೆ ತನದವರು. ಪಂತರ ಸಾಹಸ, ಪರಾಕ್ರಮ ಹಾಗೂ ನಿಷ್ಟೇಯ ಜೀವನ ಇವುಗಳೀಗೆ ಮಾರುಹೋದ ದೊರೆಗಳು ಜನಾರ್ಧನ ಪಂತರನ್ನು ದೇವೇಗಡದ ದುರ್ಗಾಧಿಪತಿಯನ್ನಾಗಿ ನಿಯಮಿಸಿದರು. ಇವರು ಮಹಾ ಭಗವದ್ಗಕ್ತರೆಂದೂ ದತ್ತ ದೇವನ ಆರಾಧಕರೆಂದೂ ಹೆಸರುವಾಸಿಯಾಗಿದ್ದರು.

ಕೋಟೆಯ ರಕ್ಷಣೆ:

ಒಂದು ದಿನ ನಸುಕಿನ ಜಾವದಲ್ಲಿ ಜನಾರ್ಧನ ಪಂತರು ಧ್ಯಾನಮಗ್ನರಾಗಿ ಯೋಗಾಸನದಲ್ಲಿ ಕುಳಿತು ಕೊಂಡಿದ್ದರು. ಅದೇ ಸಮಯದಲ್ಲಿ ಶತ್ರುಗಳು ಕೋಟೆಯನ್ನು ಮುತ್ತಿರುವರೆಂಬ ಸಮಾಚಾರ ಬಂದಿತು.ಆಗ ಏಕನಾಥರು ಯುದ್ಧ ಕಾಲದಲ್ಲಿತಮ್ಮ ಗುರುಗಳು ಧರಿಸುತ್ತಿದ್ದ ಉಡುಪುಗಳನ್ನು ಧರಿಸಿಕೊಂಡು ಅವರ ಕುದುರೆಯನ್ನೇ ಹತ್ತಿ ದೇವಗಡದ ಸೈನಿಕರನ್ನು ಹುರಿದುಂಬಿಸುತ್ತ ಕಾಲಭೈರವನಂತೆ ಯುದ್ಧವನ್ನುಆರಂಭಿಸಿದರು. ಇದನ್ನುಕಂಡ ಸೈನಿಕರು ಇಮ್ಮಡಿ ಉತ್ಸಾಹದಿಂದ ಮುನ್ನುಗ್ಗಿ ಶೂರತನದಿಂದ ಹೋರಾಡತೊಡಗಿದರು. ಶತ್ರುಗಳು ಓಡಿ ಹೋದರು.

ಯುದ್ಧಭೂಮಿಯಿಂದ ಮರಳಿದ ಏಕನಾಥರು ತಾವುತೊಟ್ಟ ಶಸ್ತ್ರಾಸ್ತ್ರಗಳನ್ನೆಲ್ಲ ಬಿಚ್ಚಿಟ್ಟು ಲಾಯದಲ್ಲಿ ಕುದುರೆಯನ್ನು ಕಟ್ಟಿ ಹಾಕಿ, ತಮ್ಮ ಗುರುಗಳ ಧ್ಯಾನಾಸಕ್ತರಾಗಿ ಕುಳಿತ ಸ್ಥಳದಲ್ಲಿ ಮತ್ತೇಮೊದಲಿನಂತೆ ಕಾವಲು ಕಾಯತೊಡಗಿದರು.  ಧ್ಯಾನ ಸಮಾಧಿಯಿಂದ ಎಚ್ಚೆತ್ತು, ಜನಾರ್ಧನ ಸ್ವಾಮಿಗಳು ಬದಲಾವಣೆಯನ್ನು ಕಂಡರು.ನಡೆದುದೆಲ್ಲವನ್ನು ವಿಚಾರಿಸಿ ಒಂದು ಸಲ ಸೂಕ್ಷ್ಮವಾಗಿ ಏಕನಾಥನನ್ನು ಅವಲೋಕಿಸಿದರು. ಅನಂತರ ಆತನನ್ನು ಸಮೀಪಕ್ಕೆ ಬರಮಾಡಿಕೊಂಡು, “ಮಗೂ ನಿನ್ನ ಈ ಸಾಹಸದಿಂದ ನಾನು ಬೆರಗಾಗಿದ್ದೇನೆ. ಇಂದು ವಿಪತ್ತಿಲ್ಲಿ ಸಿಲುಕಿದ ಈ ಕೋಟೆಯನ್ನು ರಕ್ಷಿಸಿದಂತೆ ವಿಧರ್ಮಿಗಳ ಪ್ರಭಾವಕ್ಕೆ ಸಿಲುಕಿರುವ ಸನಾತನ ಧರ್ಮವನ್ನು ರಕ್ಷಿಸುವ ಕಾರ್ಯವು ನಿನ್ನಿಂದಾಗಲಿ, ಆ ತಪೋಬಲವು ನಿನ್ನಲ್ಲಿ ಬೆಳೆದು ಬರುಂತಾಗಲಿ ಎಂದು ದತ್ತದೇವನಲ್ಲಿ  ನಾನು ಪ್ರಾರ್ಥನೆ ಮಾಡಿಕೊಳ್ಳುವೆ”ಎಂದು ಹೇಳಿ ವಾತ್ಸಲ್ಯದಿಂದ ಏಕನಾಥರ ಮೈದಡವಿ ಆಶಿರ್ವಾದ ಮಾಡಿದರು.

“ಹೀಗೆಯೇ ಸಿಕ್ಕುತ್ತದೆ”

ದುರ್ಗದ ಖರ್ಚು ವೆಚ್ಚಗಳನ್ನೆಲ್ಲ ಚೆನ್ನಾಗಿ ಪರಿಶೀಲಿಸುವಂತೆ ಗುರುಗಳು ಏಕನಾಥರಿಗೆ ಆಜ್ಞೆ ಮಾಡಿದರು. ಆಯವ್ಯಯಗಳನ್ನುತಾಳೆ ಹಾಕಿ  ನೋಡಿದಾಗ ಒಂದೇ ಒಂದು ಕಾಸು ಲೆಕ್ಕಕ್ಕೆ ಸಿಗಲಿಲ್ಲ. ಅದನ್ನು ಹುಡುಕಿ ನೋಡಲು ರಾತ್ರಿ ಬಹಳ ಹೊತ್ತು ಕಳೆಯಿತು. “ಹೋ, ಸಿಕ್ಕಿಹೋಯಿತು” ಎಂದು ಹರ್ಷಭರಿತರಾಗಿ ಏಕನಾಥರು ಕೂಗಿಕೊಂಡರು. ಚಪ್ಪಾಳೆಯನ್ನು ತಟ್ಟಿದರು.  ಅವರ ಕೂಗನ್ನು ಕೇಳಿ ಜನಾರ್ಧನ ಪಂತರಿಗೆ ಎಚ್ಚರವಾಯಿತು. ಕೂಡಲೇ ಹೊರಬಂದು ವಿಷಯ ವನ್ನು ವಿಚಾರಿಸಿದರು. ಆಗ ಒಂದು ಬಿಡಿ ಕಾಸಿನ ಲೆಕ್ಕವು ತಮಗೆ ತೊಂದರೆ ಕೊಟ್ಟುದನ್ನು ಏಕನಾಥರು ವಿವರಿಸಿದರು.  ಅದನ್ನು ಕೇಳಿ, ಜನಾರ್ಧನ ಸ್ವಾಮಿಗಳು, “ಮಗೂ, ಒಂದು ಬಿಡಿಕಾಸನ್ನು ಹುಡುಕಿ ತೆಗೆಯಲು  ಹೇಗೆ ನೀನು ಪ್ರಯತ್ನಿಸಿದ್ದೇಯೋ ಹಾಗೆಯೇ ಭಗವಂತನ ಸಾಕ್ಷಾತ್ಕಾರ ವನ್ನು ಪಡೆಯಲು ಪ್ರಯತ್ನಿಸಿದ್ದಲ್ಲಿ ಖಂಡಿತವಾಗಿಯೂ ನಿನಗೆ ಆ ಕಾರ್ಯದಲ್ಲಿ ಯಶವು ಲಭಿಸುವುದು” ಎಂದು ಹೇಳೀದರು.

ಹೀಗೆ ಜನಾರ್ಧನ ಸ್ವಾಮಿಗಳು ತಮ್ಮ ದಿನನಿತ್ಯದ  ವ್ಯವಹಾರಗಳಿಂದ ಪಾರಮಾರ್ಥದ ಒಂದೊಂದೇ ಮೆಟ್ಟಿಲನ್ನು ಹತ್ತುವಂತೆ ನಾಥರಿಗೆ ಶಿಕ್ಷಣವನ್ನೀಯುತ್ತಿದ್ದರು.

 

ಭಗವಂತನ ಸಾಕ್ಷಾತ್ಕಾರವೂ ಆಗುತ್ತದೆ".

ಭೈರಾಗಿಯ ಭೇಟಿ :

ಏಕನಾಥ ಮಾಡುತ್ತಿದ್ದ ಸೇವೆ, ಆಚರಿಸುತ್ತಿರುವ ದಿನಚರಿ ಇವುಗಳನ್ನೆಲ್ಲ ಚೆನ್ನಾಗಿ ಗಮನಿಸಿದ ಪಂತರಿಗೆ ಈ ಬಾಲಕನು ದೇವಸಾಕ್ಷಾತ್ಕಾರವನ್ನು ಪಡೆಯುವ ಕಾಲವು ಸನ್ನಿಹಿತವಾದಂತೆ ತೋರತೊಡಗಿತು. ಆಗ ಅವರು ತಮ್ಮ ಶಿಷ್ಯನನ್ನು ಕರೆದುಕೊಂಡು ವಿಶಾಲಗಡದ ಉತ್ತರ ಭಾಗಕ್ಕೆ  ಪ್ರಯಣ ಹೊರಟರು.ನಾಥಾ, ಮಾನವರಾದ ನಮಗೆ ಭಗವಂತನ ದರ್ಶನವೂ ಯಾವಾಗ, ಎಂಥ ಸಂದರ್ಭಗಳಲ್ಲಿ ಲಭಿಸುವುದೆಂದು  ಹೇಳಲು ಸಾಧ್ಯವಿಲ್ಲ. ಆದರೂ ಸಹ ನಮ್ಮ ಪ್ರಯತ್ನ ದಲ್ಲಿ ಎಂಥ ಕಠಿಣ ಪ್ರಸಂಗಗಳು ಬಂದರೂ ಅವು ನಮ್ಮ ಪರೀಕ್ಷೇಗಾಗಿ ಎಂದು ತಿಳಿದುಕೊಳ್ಳಬೇಕು. ಇಲ್ಲಿರುವ ಸಸ್ಯ ಸಂಪತ್ತು, ಮೃಗಪಕ್ಷಿಗಳು, ವನ್ಯಜೀವಿಗಳು,ಸುಂದರವಾಗಿ ಕಾಣುವ ಸರೋವರ, ಮಂದಗಾಮಿಯಾಗಿ ಹರಿಯುತ್ತಿರುವ ಈ ತೊರೆ- ಇವೆಲ್ಲವುಗಳಲ್ಲಿ ಆಮಹಾನುಭಾವ ಭಗವಂತನ ಸಾನಿಧ್ಯವು ಇದ್ದೇ ಇರುತ್ದೆ. ಈ ತತ್ವದ ಗುಟ್ಟ ಎಲ್ಲಿ ನೋಡಿದರೂ ಭಗವಂತನಿರುವನೆಂದು ನಂಬಿದ ಸಾಧಕನಿಗೆ ಮಾತ್ರ ಅರ್ಥವಾಗುತ್ತದೆ. ಇನ್ನು ಯಾರಿಗೆ ಪೂರ್ವಜನ್ಮದ ಸುಕೃತವಿದೆಯೋ ಅಂಥ ಪುಣ್ಯ ಜೀವಿಗಳಿಗೆ ಇಲ್ಲಿಯೇ ಪರಮಾತ್ಮನ ದರ್ಶನವಾಗಬಹುದು” ಎಂದು ಉಪದೇಶ ಮಾಡುತ್ತ ಸಾಗಿದ್ದರು.

ಆಗ ಒಂದು ಕುತೂಹಲದ ಪ್ರಸಂಗವು ನಡೆಯಿತೆಂದು ಹೇಳುತ್ತಾರೆ. ಭಯಂಕರ ರೂಪಿಯಾದ ಬೈರಾಗಿಯೊಬ್ಬರು ಒಂದು ಕೈಯಲ್ಲಿನಾಯಿಯನ್ನೂ ಇನ್ನೊಂದು ಕೈಯಲ್ಲಿ ಭಿಕ್ಷಾ ಪಾತ್ರೆಯನ್ನು ಹಿಡಿದುಕೊಂಡು ಬರುತ್ತಿರುವುದು ಕಾಣಬಂದಿತು. ಅದನ್ನು ಕಂಡ ಜನಾರ್ಧನ ಸ್ವಾಮಿಗಳಿಗೆ ಬಹು ಆನಂದವಾಯಿತು. ಅವರು ಆ ಭಿಕ್ಷುಕನ ಪಾದಗಳಿಗೆ ಸಾಷ್ಟಾಂಗ  ನಮಸ್ಕಾರ ಮಾಢಿದರು. ಭೈರಾಗಿ  ನಾಯಿಯ ಮೊಲೆ ಹಾಲನ್ನು  ತೆಗೆದು ಭಿಕ್ಷಾಪಾತ್ರೆಯಲ್ಲಿ ತಂಗಳನ್ನವನ್ನು ಕಲೆಸಲು ಜನಾರ್ಧನ ಸ್ವಾಮಿಗಳಿಗೆ ಹೇಳಿದನು. ಇಬ್ಬರೂ ಅನದ್ನು ಭೋಜನ ಮಾಡಿದರು. ಅನಂತರ ಆ ಪಾರೆಯನ್ನು ತೊಳೆದು ತರುವಂತೆ ಏಕನಾಥರಿಗೆ ಒಪ್ಪಿಸಿದರು.

ಗುರುಗಳು ಭೈರಾಗಿಯೊಂದಿಗೆ ನಡೆದುಕೊಂಡ ರೀತಿ ಯನ್ನು ನೋಡಿದಾಗ ಈತನು ಸಾಮಾನ್ಯ ಭಿಕ್ಷುಕನಲ್ಲ ವೆಂದು ಏಕನಾಥರಿಗೆ ಅನಿಸಿತು. ವಿಶ್ವಮೂರ್ತಿಯಾದ ದತ್ತಾತ್ರೇಯ ಈ ವೇಷಧಾರಣ ಮಾಡಿಕೊಂಡು ಬಂದಿರಬಹುದೇ ಎಂಬ ಯೋಚನೆಯೂ ಮೂಡಿತು. ಆಗ ಏಕ ನಾಥನು ಆ ಎಂಜಲು ಪಾತ್ರೆಯಲ್ಲಿಯ ನೀರನ್ನೇ ಹರಿಗುರು ಗಳ ಪ್ರಸಾದವೆಂದು ಬಹು ಭಕ್ತಿಯಿಂದ ಕುಡಿದು ಬಿಟ್ಟರಂತೆ. ತಕ್ಷಣ ಅವರಿಗೆ ಅಮೃತ ಸೇವನೆಮಾಡಿದಂತಹ ಅನುಭವ ಆಯಿತಂತೆ.  ಆ ಪ್ರಸಾದವನ್ನು ಸ್ವೀಕರಿಸಿದ  ಮೇಲೆ ಅವರ ಮುಖದಲ್ಲಿ ವಿಲಕ್ಷಣವಾದ ತೇಜಸ್ಸು ಕಾಣತೊಡಗಿತು. ಅವರು ಪಾತ್ರೆಯಲ್ಲಿ ನೀರು ತುಂಬಿಕೊಂಡು ಮರಳಿ ಬಂದಾಗ ಆ ನಾಯಿಯ ಬದಲು ಕಾಮಧೇನುವನ್ನು ಕಂಡರಂತೆ. ಭೈರಾಗಿಯು ದತ್ತರೂಪವನ್ನು ಧಾಋನಾ ಮಾಡಿ ಏಕನಾಥರಿಗೆ ಅನುಗ್ರಹ ಮಾಡಿದನೆಂದು ಅವರ ಭಕ್ತರು ನಂಬುತ್ತಾರೆ.

ಈ ಘಟನೆಯ ನಂತರ ಕೆಲವು ದಿನಗಳ ಕಾಲ ನಾಥರು ಆ ಕಾಡಿನಲ್ಲಿದ್ದುಕೊಂಡು ತಪ್ಪಸ್ಸನಾಚರಿಸತೊಡಗಿದರು.  ಅವರು ಧಾನ್ಯ ಸಮಾಧಿಯಲ್ಲಿ  ಕುಳಿತಾಗ ಗೋಪಾಲಕ ನೊಬ್ಬನು ಅವರಿಗೆ ಹಾಲನ್ನಿಡಲು ಅವರು ಬಂದಾಗ ಮಹಾ ಘಟ ಸರ್ಪವು ಏಕನಾಥರ ಶರೀರವನ್ನು ಸುತ್ತಿಕೊಂಡು ಅವರ ತಲೆಯ ಮೇಲೆ ಹೆಡೆ ಯೆತ್ತಿ ಕುಳಿತ್ತಿರುವುದನ್ನು ಕಂಡನು.  ಅವನು ಹೆದರಿ ಕೂಗಲಾರಂಭಿಸಿದನು. ಆತನಕೂಗಾಟದಿಂದ ನಾಥರಿಗೆ ಎಚ್ಚರವಾದಾಗ ಸರ್ಪದ ಬಂಧನವು ಸಡಿಲವಾಗಿತ್ತು. ಅವರು ತಮ್ಮ ಮುಂದಿಟ್ಟ  ಹಾಲನ್ನು ಆ ಸರ್ಪದ ಮುಂದಿಟ್ಟರು. ಆ ಸರ್ಪವು ಹಾಲನ್ನು ಕುಡಿದು ಮಾಯವಾಯಿತಂತೆ. ಏಕ ನಾಥರು ದೇವಗಡಕ್ಕೆ ಬಂದು ನಡೆದುದನ್ನೆಲ್ಲ ಗುರುಗಳಲ್ಲಿ ಅರಿಕೆ ಮಾಡಿಕೊಂಡರು.ಆಗ ಜನಾರ್ಧನ ಸ್ವಾಮಿಗಳು, “ಮಗೂ, ಮನುಷ್ಯನಿಗೆ ಕಾಮ, ಕ್ರೋಧ, ಮದ, ಮತ್ಸರ, ಮೋಹ,ಲೋಭ ಮೊದಲಾದವುಗಳು ಆ ಘಟಸರ್ಪವಿದ್ದಂತೆ. ಆ ಸರ್ಪ ಬಂಧನದಿಂದ ಬಿಡುಗಡೆಯಾದಾಗ ಮಾತ್ರ ಸಾಧಕನಿಗೆ ಸಿದ್ದಿಯ ಅವಕಾಶವು ದೊರೆಯುತ್ತದೆ. ತಿಳಿಯಿತೇ?” ಎಂದು ಏಕನಾಥರಿಗೆ ಉಪದೇಶ ಮಾಡಿದರು.

ಗುರುಕುಲವಾಸ ಮುಗಿಯಿತು :

ಹನ್ನೆರಡು ವರ್ಷಗಳ ಕಾಲ ಅವ್ಯಾಹತವಾಗಿ ಗುರುಸೇವೆ ಮಾಡಿ ಪಕ್ವಹೃದಯರಾದ ಏಕನಾಥರ ಜೀವನಕ್ಕೆ ಲೋಕಜ್ಞಾನದ ಮೆರಗನ್ನು ಕೊಡುವುದು ಅತ್ಯವಶ್ಯಕವಿತ್ತು.  ಆದುದರಿಂದ ಜನಾರ್ಧನ ಸ್ವಾಮಿಗಳೂ ತಮ್ಮ ಶಿಷ್ಯನನ್ನು ಕರೆದುಕೊಂಡು ತೀರ್ಥಯಾತ್ರೆಗೆಂದು ಪ್ರಯಾಣ ಹೊರಟರು. ಅವು ಗೋದಾವರಿ ತೀರದ ಗಂಗಾಧರ ಭಟ್ಟರ ಕುಟೀರದಲ್ಲಿ ಬಿಡಾರ  ಮಾಡಿದರು. ಮಹಾನುಭಾವರಾದ ಗಂಗಾಧರ ಭಟ್ಟರು ಶ್ರಿಮದ ಭಾಗವತ ಗ್ರಂಥದ ಅನುವಾದನವನ್ನು ಅಮೋಘವಾದ ರೀತಿಯಲ್ಲಿ ಮಾಡಿದ್ದರು.  ಆ ಅನುವಾದವನ್ನು ಕೇಳಿ ಸಂತೋಷಪಟ್ಟ ಜನಾರ್ಧನ ಪಂತರು.”ಏಕನಾಥ, ಭಾಗವತ ಗ್ರಂಥವು ಪರಮ ಪವಿತ್ರವಾದುದು. ಅದರ ಪ್ರಯೋಜನ ಎಲ್ಲರಿಗೂ ಲಭಿಸುವಂತಾಗಬೇಕು. ಈ ಕಾರ್ಯವು ನಿನ್ನಿಂದ ಸಾಧಿಸುವಂತಾಗಲಿ” ಎಂದು ಹೇಳಿ, ಏಕನಾಥರು ಮರಾಠಿ ಭಾಷೆಯಲ್ಲಿ ಈ ಕೃತಿ ರಚಿಸುವಂತೆ ವಚನವನ್ನು ಪಡೆದರು.

ಗುರುಶಿಷ್ಯರಿಬ್ಬರೂ ಕೂಡಿಕೊಂಡು ನಾಸಿಕ್, ಪಂವಟಿ, ನಿವೃತ್ತ ಸಂಗಮ ಮೊದಲಾದ ತೀರ್ಥಕ್ಷೇತ್ರಗಳನ್ನೆಲ್ಲ ಸುತ್ತಾಡಿ ಆ ಕ್ಷೇತ್ರದಲ್ಲಿ ಬಿಡಾರ ಮಾಡಿದ ಸಾಧುಸಂತರ ಸಹವಾಸವನ್ನು ಪಡೆದು, ತಮ್ಮಯಾತ್ರೆಯನ್ನು ಮುಗಿಸಿಕೊಂಡು ಮರಳುವಾಗ ಜನಾರ್ಧನ ಸ್ವಾಮಿಗಳು, “ಏಕನಾಥ, ಇನ್ನು ಮೇಲೆ ನಿನ್ನ ಗುರುಕುಲವಾಸದ ಅವಧಿಯು ಮುಗಿದಂತಾಯಿತು.  ಇನ್ನು ನೀನು ಪೈಠಣಕ್ಕೆ ಮರಳಿ ಹೋಗು. ಅಲ್ಲಿಯೇ ಸಂಸಾರಿಯಾಗಿದ್ದುಕೊಂಡು ಸಕಲ ಪುರುಷಾರ್ಥಗಳ ಸಾಧನೆಯನ್ನು ಮಾಡಿಕೋ, ನಿನಗೆ ಮಂಗಳವಾಗಲಿ” ಎಂದು ಹೃದಯ ತುಂಬಿ ಆಶಿರ್ವದಿಸಿ ಶಿಷ್ಯನನ್ನು ಬೀಳ್ಕೊಟ್ಟರು.

ವಿವಾಹ:

ಬಹುಕಾಲ ಕಣ್ಮರೆಯಾದ ಕರುಳಿನ ಕುಡಿಯನ್ನು ಕಂಡಾಗ ಚಕ್ರಪಾಣಿಯವರಿಗಾದ ಆನಂದ ಹೇಳತೀರದು. ಭಾವಪರವಶರಾದ ಅವರು, “ಏಕನಾಥ, ನೀನು ನಮ್ಮನ್ನು ಅನಾಥರನ್ನಾಗಿ ಮಾಡಿ ಹೋಗುವುದೇ? ಇನ್ನು ಮೇಲಾದರೂ  ಈ ವೃದ್ಧಾಪ್ಯದಲ್ಲಿ ನಮ್ಮನ್ನು ಬಿಟ್ಟು ಹೋಗಬೇಡ. ಬಿಟ್ಟು ಹೋಗುವುದಿಲ್ಲವೆಂದು ವಚನ ಕೊಡು” ಎಂದು ಹೇಳುತ್ತ ಮೊಮ್ಮಗನನ್ನು ಬಿಗಿದಪ್ಪಿ ಮುದ್ದಾಡಿ ಮನೆಗೆ ಕರೆ ತಂದರು.

ಏಕನಾಥರ ಆಗಮನದಿಂದ ಚಕ್ರಪಣಿಯವರಿಗೆ ನವಚೇತನಮೂಡಿದಂತಾಯಿತು. ಅವರು ಅತ್ಯಂತ ಸ್ಫುರ ದ್ರೂಪಿಯೂ ಗುಣಶೀಲ ಸಂಪನ್ನೆಯೂ ಅದ ವಧುವನ್ನು ಏಕನಾಥರಿಗೆ ಹುಡುಕಲಾರಂಭಿಸಿದರು. ಬಿಜಾಪೂರದ ಶ್ರೋತೀಯ ಕುಟುಂಬದಲ್ಲಿ ಜನಿಸಿದ ಗಿರಿಜ ಎಂಬ ಕನ್ಯೆಯನ್ನು ತಂದು ಬಹು ವೈಭವದಿಂದ ವಿವಾಹವನ್ನು ಮಾಡಿದರು.

ಗಿರಿಜ ಮತ್ತು ಎಕನಾಥರ ದಾಂಪ್ಯವು ಹೇಳಿ ಮಾಡಿಸಿದಂತಹ ಜೋಡಿಯಾಗಿತ್ತು. ಪತಿಯ ಗುಣಧರ್ಮಗಳನ್ನು ಅರ್ಥಮಾಡಿಕೊಂಡು ಅವನ ಮನ ಒಪ್ಪುವಂತೆ ಜೀವನ ನಡೆಸುತ್ತಿದ್ದಳು ಗಿರಿಜ. ಪತಿಯ ಧರ್ಮವೇ ತನ್ನ ಧರ್ಮ, ಅವರು ಕೈಗೊಂಡ ಸೇವೆಯಲ್ಲಿ ಸಹಾಯಕಳಾಗಿರುವುದೇ ತನ್ನ ಜೀವನ ಎಂದು ನಂಬಿ ಪತಿಯೊಂದಿಗೆ ಏಕಜೀವಿಯಾಗಿ ಮನೆಗೆ ಬಂದ ಅತಿಥಿ ಅಭ್ಯಾಗತರ ಯೋಗಕ್ಷೇಮ ಗಳನ್ನು ವಿಚಾರಿಸುತ್ತ, ಆದರ್ಶ ಸತಿಯಗಿ ಬಾಳುವೆಯನ್ನಾರಂಭಿಸಿದಳು.

ಉಪದೇಶ :

ಏಕನಾಥರು ಪ್ರತಿದಿನವೂ ಪುರಾಣ ಹಾಗೂ ಹರಿಕಥಾ ಕಾಲಕ್ಷೇಪವಗಳು ಕಾರ್ಯಕ್ರಮಗಳನ್ನು  ನಡೆಸುತ್ತಿದ್ದರು. ನಾಮ ಸ್ಮರಣೆಯ ಅಧಿಕಾರವೂ ಪ್ರತಿಯೊಬ್ಬ ಮಾನವನಿಗೆ ಜನ್ಮಸಿದ್ಧವಾಗಿ ದೊರೆತ ಅಧಿಕಾರವಾಗಿದೆ. ಅದನ್ನುಯಾರು ಕಸಿದುಕೊಳ್ಳುವಂತಿಲ್ಲ. ತಡೆಯುವಂತಿಲ್ಲ ಎಂಬುವದೇ ಏಕನಾಥರ ಸಿದ್ಧಾಂತವಾಗಿತ್ತು. ಈ ಅಭಯ ವಾಣಿಯು ಪೈಠಣದ ಪ್ರಜೆಗಳಾದ ದೀನ ದಲಿತರಿಗೆ ದೇವಣಿಯಾಗಿ ಪರಿಣಮಿಸಿತು.  ಅವರ ಈ ಕಾರ್ಯಕ್ರಮಗಳಿಗೆ ಮತ ಪಂಥಗಳೆಂಬ ತಾರತಮ್ಯ ವಿರಲಿಲ್ಲ. ಎಲ್ಲ ವರ್ಣದವರೂ ಹರಿಕಥೆಯಲ್ಲಿ ಭಾಗವಹಿಸುತ್ತಿದ್ದರು.

ಏಕನಾಥರು ಹರಿಕಥ ಕಾಲಕ್ಷೇಪಗಳನ್ನು ನಡೆಸುವಾಗ ಕಥೇಯ ಸಂದರ್ಭಗಳಿಗೆ ಹೊಂದಿಕೊಳ್ಳುವಂತಹ ಅಭಂಗ ಗಳನ್ನು ಹೇಳಿ ಅವುಗಳ ಅರ್ಥವನ್ನು ಸಾಮಾನ್ಯರಿಗೆಲ್ಲ ತಿಳಿಯುವಂತೆ ಬಿಡಿಸಿ ಹೇಳುತ್ತಿದ್ದರು.

ಮಾನವನ ಉದ್ಧಾರವಾಗಬೇಕಾದಲ್ಲಿ ಭಗವಂತನಲ್ಲಿ ನಿರ್ಮಲವಾದ ಭಕ್ತಿ ಹಾಗೂ ಸಾತ್ವಿಕ ಜೀವನ ಇವು ಬಹು ಮುಖ್ಯವಾದ ಅಂಶಗಳೆಂದು ಕಥೆ ಕೇಳುವವರು ಮನಸ್ಸಿನ ಮೇಲೆ ಪರಿಣಾಮಕಾರಿಯಾಗುವಂತೆ ಅನೇಕು ಉದಾಹರಣೆಗಳನ್ನು ಕೊಟ್ಟು ಹೇಳುತ್ತಿದ್ದರು.

ಅಂದಿನ ಕಾಲದಲ್ಲಿ ಶಾಸ್ತ್ರ ಪರಂಪರಾಗತರಾದ ಬ್ರಾಹ್ಮಣರ ಪಂಡಿತರೊಬ್ಬರೂ ಈ ತರಹದ  ಉಪದೇಶಗಳನ್ನು ಮಾಡುವುದೆಂದರೆ ಕ್ರಾಂತಿಯ ಕಹಳೆಯನ್ನೇ ಕೈಗೆತ್ತಿಕೊಂಡಂತಾಗುತ್ತಿತ್ತು.

ಕೇವಲ ಒಂದು ಸಮಾಜವು ಉದ್ಧಾರವಾಗುವುದರಿಂದ ಇಡೀ ಭಾರತದ ಉದ್ಧಾರವಾಲಾರರು ಎಂಬುವುದೇ ಏಕ ನಾಥರ ನಂಬಿಕೆಯಾಗಿತ್ತು. ಆದುದರಿಂದ ಅವರು ತಾವು ಕೈಗೊಂಡ ಕಾರ್ಯದಲ್ಲಿ ಎಂಥ ಅಡೆತಡೆಗಳು ಬಂದರೂ ಸಹ ಅವುಗಳನ್ನು ಲೆಕ್ಕಿಸದೇ ಭಾಗವತ ಧರ್ಮದ ಪ್ರಚಾರವನ್ನು ಏಕ ಚಿತ್ತರಾಗಿ ಮಾಡಲಾರಂಭಿಸಿದರು.

 

ಏಕನಾತ ಹೋರಾಡುತ್ತಿರುವುದು..... ಎಕನಾಥರು ಬರೆಯುತ್ತಿರುವುದು.

ಹೀಗೆ ನಡೆಯಿತಂತ :

ಸಾಮಾನ್ಯವಾಗಿ ಪಾಂಡಿತ್ಯ ಪ್ರತಿಭೆಗಳಿಗಿರುವ ವ್ಯ್ಕತಿಯನ್ನು ಜನಗೌರವಿಸುತ್ತಾರೆ. ಆತನ ವಿಷಯದಲ್ಲಿ ಸದ್ಭಾವನೆಯನ್ನು ತಾಳುತ್ತಾರೆ. ಆ ಭಾವನೆಯೇ ಮುಂದೆ ಅಂಥವರ ಗುಣ ಗಳನ್ನು ಕೊಂಡಾಡುವಾಗ ಕಥೆಯ ರೂಪವನ್ನು ತಾಳುತ್ತದೆ. ಕಾಲಾಂತರದಲ್ಲಿ ಆ ಕಥೆಗಳೇ ಪವಾಡವಾಗಿ ಪರಿಣಮಿಸುತ್ತವೆ. ಅಂಥ ವ್ಯಕ್ತಿಗಳ ವಿಷಯದಲ್ಲಿ ಸಮಾಜವು ಜೀವನದುದ್ದಕ್ಕೂ ಆ ನಂಬಿಕೆಗಳನ್ನು ಉಳಿಸಿಕೊಂಡು ಬರಲು ಪ್ರಯತ್ನಿಸುವುದು.

ಏಕನಾಥರ ಜೀವನದಲ್ಲಿಯೂ ಸಹ ಈ ತರಹದ ಪವಾಡಗಳು ನಡೆದುವೆಂದು ಭಕ್ತರು ನಂಬುತ್ತಾರೆ.

ಕಡು ಬಡತನದಲ್ಲಿ ಬಳಲಿದ ಬ್ರಾಹ್ಮಣ ಯುವಕ ನೊಬ್ಬನು ಏಕನಾಥರಲ್ಲಿ ಬಂದು ತನಗೆ ಆಶ್ರಯವನ್ನೀಯಬೇಕೆಂದು   ಕೇಳತೊಡಗಿದನು. ಮನಕರಗಿದ ಅವರು ಆ ಬ್ರಾಹ್ಮಣನಿಗೆ ಆಶ್ರಯವನ್ನಿತ್ತರು. ಪ್ರತಿದಿನ ಆ ಯುವಕನು ಏಕನಾಥರ ಪೂಜಾಧಿಗಳಿಗೆ ಅವಶ್ಯವಾದ ಗಂಧ, ತುಳಸಿ, ಹೂ, ಮಡಿನೀರು, ಮಡಿಬಟ್ಟೆಗಳನ್ನು ವ್ಯವಸ್ಥಿತವಾಗಿ ಅಣಿ ಮಾಡಿ ಇಡುತ್ತಿದ್ದನು. ಸಾತ್ವಿಕ ಪರಿವಾರಕ್ಕೆಲ್ಲ ಆತನು ಆತ್ಮೀಯ ವ್ಯಕ್ತಿಯಾದನು. ಶ್ರೀ ಖಂಡೆ ಎಂಬುವುದು ಅತನ ಹೆಸರು. ಏಕನಾಥರಿಗೆ ಅಚ್ಚುಮೆಚ್ಚಿನ ಶಿಷ್ಯನಾಗಿ ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದನು. ಹೀಗಿರುವಾಗ ಒಂದು ದಿನ ದೂರದ ಯಾತ್ರಿಕರೊಬ್ಬರು ಏಕನಾಥರ ಮನೆಯನ್ನು ಹುಡುಕಿಕೊಂಡು ಬಂದರು. ಅವರು ತಮಗೆ ಶ್ರೀಖಂಡೆಯ ದರ್ಶನ ಮಾಡಿಸಬೇಕೆಂದು ಪ್ರಾರ್ಥಿಸತೊಡಗಿದರು. ಆಕಸ್ಮಿಕವೆನಿಸಬಹುದಾದ ಈ ಪ್ರಾರ್ಥನೆಯ ಹಿನ್ನಲೆಯಲ್ಲಿ ತಿಳಿದುಕೊಳ್ಳಲು ಪ್ರಯತ್ನಿಸಿದಾಗ ಆ ಯಾತ್ರಿಕರು ತಾವು ದ್ವಾರಕಾ ಕ್ಷೇತ್ರಕ್ಕೆ ಭೇಟಿ ಕೊಟ್ಟಾಗ ಸಾಕ್ಷಾತ್ ಶ್ರೀಹರಿಯೇ ನಮ್ಮ ಸ್ವಪ್ನದಲ್ಲಿ ಕಾಣಿಸಿಕೊಂಡು ತಾನು ಪೈಠಣದ ಏಕನಾಥರಲ್ಲಿ ಶ್ರೀ ಖಂಡೇ ಎಂಬ ಹೆಸರಿನಿಂದ ಸೇವೆ ಸಲ್ಲಿಸುತ್ತಿರುವುದಾಗಿ ಸೂಚಿಸಿದನು.  ಆದುದರಿಂದ ಆ ಪ್ರಭುವನ್ನು ಕಂಡು ಪುನೀತನಾಗಲು ಈ ದೂರದ ಪ್ರವಾಸವನ್ನು ಕೈಗೊಂಡಿರುವುದಾಗಿ ಅವರು ತಿಳಿಸಿದರು. ಶ್ರೀ ಕೃಷ್ಣನೇ ಶ್ರೀ ಖಂಡೆಯ ರೂಪದಲ್ಲಿ ಇರುವನೆಂಬ ವಿಷಯವು ತಿಳಿದಾಗ ಏಕನಾಥರಿಗೆ ರೋಮಾಂಚನವಾಯಿತು. ಹರ್ಷ ಪುಲಕಿತರಾದ ಅವರು ಶ್ರೀ ಖಂಡೆಯನ್ನು ಹುಡುಕಲಾರಂಭಿಸಿದರು. ಆದರೆ ಆತ ಯಾರ ಕಣ್ಣಿಗೂ ಕಾಣದಂತೆ ಮಾಯವಾದನಂತೆ. ಶ್ರೀ ಹರಿಯಾದ ತ್ರಿಲೋಕ ನಾಥನೇ ಏಕನಾಥರ ಮನೆಯ ಆಳಾಗಿ ಸೇವೆ ಸಲ್ಲಿಸಿದನೆಂದು ನಾಥ ಚರಿತೆಯ ಗ್ರಂಥವು ಹೇಳುತ್ತದೆ.

ಕರ್ನಾಟಕದ ವ್ಯಾಪಾರಿಗಳೊಬ್ಬರು ಬಹು ಸುಂದರವಾದ ವಿಠ್ಠಲ ಹಾಗೂ ರಕುಮಾಯಿಯ ವಿಗ್ರಹವನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ಪೈಠನ ನಗರದಲ್ಲಿರುವ ಏಕನಾಥ ಮನೆಯನ್ನು ಹುಡುಕುತ್ತ ಹೊರಟಿದ್ದರು. ನಾಲ್ಕು ಜನರಿಂದ ಆಮಹಾನುಭಾವರ ವಿಳಾಸವನ್ನು ಕೇಳಿಕೊಂಡು ಕೊನೆಗೊಮ್ಮೆ ಅವರು ಏಕನಾಥರ ಮನೆಗೆ ಬಂದು ತಲುಪಿದರು.

ಬಹುದೂಋದಿಂದ ಬಂದ ಅತಿಥಿಗಳನ್ನು ಕಂಡು ನಾಥರಿಗೆ ಸಂತೋಷವಾಯಿತು. ಆವರು ಅದರದಿಂದ  ಆ ವ್ಯಾಪಾರಿಗೆ ಸ್ವಾಗತ ನೀಡಿದರು. ಅತ್ಯಂತ ವಿಶ್ವಾಸದಿಂದ ಅವರ ಕುಶಲವನ್ನು ವಿಚಾರಿಸಿಕೊಂಡರು.

ಏಕನಾಥರ ನಯ, ವಿನಯ, ಸೌಜನ್ಯ ಇವುಗಳನ್ನು ಕಂಡ ವ್ಯಾಪಾರಿಗೆ ತಾನು ಸರಿಯಾದ ಸ್ಥಳಕ್ಕೆ ತಲುಪಿದನೆಂಬ ಸಮಾಧಾನವಾಯಿತು. ಅವನು ಎಕನಾಥರಿಗೆ ತಾನು ಬಂದ ಉದ್ದೇಶವನ್ನು ವಿವರಿಸಿದ:

“ಈ ಸುಂದರವಾದ ವಿಗ್ರಹಗಳನ್ನು ನನ್ನ ಮನೆಯಲ್ಲಿಯೇ ಪ್ರತಿಷ್ಠಾಪಿಸಿ ಪೂಜಿಸಬೇಕೆಂಬ ಅಪೇಕ್ಷೆಯಿಂದ ಮಾಡಿಸಿದೆ.  ಆದರೆ ಆ ಸ್ವಾಮಿಯೇ ಈ ವಿಗ್ರಹಗಳನ್ನು ಪೈಠಣದ ಏಕನಾಥರಲ್ಲಿ ಒಪ್ಪಿಸುವಂತೆ ಆಜ್ಞೆ ಮಾಡಿದ್ದಾನೆ. ಆದುದರಿಂದ ಈ ದೂರದ ಪ್ರವಾಸವನ್ನು ಕೈಗೊಂಡು ಈವಿಗ್ರಹ ದಂಪತಿಗಳನ್ನು ತಮಗೊಪ್ಪಿಸಿ ಹೋಗಲು ಬಂದಿದ್ದೇನೆ. ದಯವಿಟ್ಟು ಈ ವಿಗ್ರಹಗಳನ್ನು ಸ್ವೀಕರಿಸಿ ನನ್ನನ್ನು ಉದ್ಧಾರ ಮಾಡಿರಿ” ಎಂದು ಕೈ ಮುಗಿದು ಪ್ರಾರ್ಥಿಸತೊಡಗಿದನು.

ವ್ಯಾಪಾರಿಯ ಮಾತುಗಳನ್ನು ಕೇಳೀ ಏಕನಾಥ  ಕಣ್ಣಿನಲ್ಲಿ ನೀರು ತುಂಬಿತು. ಆನಂದಪರವಶರಾಗಿ ಆ ಮೂರ್ತಿಗಳನ್ನು ತಲೆಯ ಮೇಲಿಟ್ಟುಕೊಂಡು ಕುಣಿದಾಡಿದರು.

ಪೈಠಾಣದ ಏಕನಾಥರ ಮನೆಯ ಆವರಣದಲ್ಲಿಯೇ ಆ ಸುಂದರ ವಿಗ್ರಹಗಳಿಗಾಗಿ ದೇವ ಮಂದಿರದ ಖರ್ಚು ವೆಚ್ಚಗಳನ್ನೆಲ್ಲ ಕರ್ನಾಟಕದ ವ್ಯಾಪಾರಿಯೇ ವಹಿಸಿಕೊಂಡು ವೈಭವದಿಂದ ಪ್ರತಿಷ್ಠಾಪನೆಯ ಕಾರ್ಯವನ್ನು ಮುಗಿಸಿ, ತನ್ನೂರಿಗೆ ಮರಳಿದನಂತೆ. ಅಂದು ಪ್ರತಿಷ್ಠಾಪಿಸಲ್ಪಟ್ಟ ಪಾಂಡುರಂಗ ಹಾಗೂ ರುಕುಮಾಯಿಯ ಪ್ರತಿಮೆಗಳು ಇಂದಿಗೂ ಕರ್ನಾಟಕದ ಕೊಡುಗೆಯಾಗಿ ಪೈಠಣದಲ್ಲಿ ಪೂಝೆಗೊಳ್ಳುತ್ತಲ್ಲಿವೆ.

ಏಕನಾಥರು ಹೀಗೆ   ನಡೆದುಕೊಂಡರು:

ಒಂದು ಸಲ ಏಕನಾಥರು ಬೆಳಗಿನ ಜಾವದಲ್ಲಿ ಗೋದಾವರಿ ಸ್ನಾನ ತೀರಿಸಿಕೊಂಡು ಮನೆಗೆ ಹೊರಟಿದ್ದರು.  ದಾರಿಯಲ್ಲಿ ಕೆಲವರು ಅವರಿಗೆ  ಮೈಲಿಗೆ ಮಾಡಿ ಅವರ ಕೋಪಿಕೊಳ್ಳುವರೇ  ಎಂದು ಪರೀಕ್ಷಿಸತೊಡಗಿದರು. ಆದ ಕೊಳೆಯ ನಿವಾರಣೆಗಾಗಿ ನೂರು ಸಲ ಸ್ನಾನ ಮಾಡಬೇಕಾಗಿ ಬಂದರೂ, ಅವರು ಕೋಪಗೊಳ್ಳಲಿಲ್ಲ. ಕೋಪವೇ ಮೈಲಿಗೆ,. ಆ ಮೈಲಿಗೆಯನ್ನು ಅವರು ಎಂದೋ ಕಳೆದುಕೊಂಡಿದ್ದರು.  ಇದನ್ನು ಕಂಡ ಕಿಡಿಗೇಡಿಗಳು ನಾಚಿಕೆಪಟ್ಟು ತಮ್ಮ ತಪ್ಪನ್ನು ಮನ್ನಿಸಬೇಕೆಂದು ಪ್ರಾರ್ಥಿಸಿ ನಾಥರಿಗೆ ನಮಸ್ಕರಿಸಿದರು. ಹೀಗೆ ನಾಥರು ತಮ್ಮ ಅಪಾರ ತಾಳ್ಮೆಯಿಂದ ಜನರನ್ನು ಸನ್ಮಾರ್ಗಕ್ಕೆ ತರಲು ಯತ್ನಿಸುತ್ತಿದ್ದರು.

ಮತ್ತೊಂದು ಸಲ ಸ್ನಾನಕ್ಕೆ ಹೊರಟ ಏಕನಾಥರಿಗೆ ಮರಳಿನಲ್ಲಿ ಬಿಸಿಲಿನ ತಾಪವನ್ನು ತಾಳಲಾರದೆ ಅಳುತ್ತ ಹೊರಟ ಹರಿಜನರ ಮಗುವು ಕಾಣಿಸಿತು. ತಕ್ಷಣ ಅವರು ಆ ಮಗುವನ್ನೆತ್ತಿಕೊಂಡು ತಂದೆ-ತಾಯಿಗಳಿದ್ದಲ್ಲಿಗೆ ಅದನ್ನು ತಂದು ಒಪ್ಪಿಸಿದರಂತೆ. ಇದು ಅವರ ಮಾನವೀಯ ಅನುಕಂಪವನ್ನು ಸೂಚಿಸುವುದು.

ಒಂದು ದಿನ ಪೈಠಣದ ಹರಿಜನರ ಗುಂಪು ಏಕನಾಥರ ಮನೆಯ ಮುಂದೆ ಹಾದು ಹೋಗುತ್ತಿರುವಾಗ ಅವರಿಗೆ ಸೊಗಸಾದ ಅಡಿಗೆಯ ವಾಸನೆಯು ಬಡಿಯಿತು. ಸ್ವಾಭಾವಿಕವಾಗಿಯೇ ಅವರ ಬಾಯಲ್ಲಿ ನೀರೂರಿತು. ತಮ್ಮ ಜನ್ಮದಲ್ಲಿ ಇಂತಹ ದಿವ್ಯವಾದ ಅನ್ನವನ್ನು  ಊಟ ಮಾಡಲು ಸಾಧ್ಯವೇ ಎಂದು ಅವರು ಮಾತನಾಡಿಕೊಳ್ಳುತ್ತಿದ್ದರು. ಅದನ್ನು ಕೇಳಿಸಿಕೊಂಡ ಏಕನಾಥರು ಆ ಹರಿಜನರನ್ನೆಲ್ಲ ಮನೆಯೊಳಗೆ ಬರಮಾಡಿಕೊಂಡು ಮಾಢಿದ ಅಡಿಗೆಯನ್ನೆಲ್ಲ ಅವರಿಗೆ ಬಡಿಸಿ ತೃಪ್ತರಾಗುವಂತೆ ಊಟ ಮಾಡಿಸಿ ಕಳೂಹಿಸಿದ.

ಬ್ರಾಹ್ಮಣನೊಬ್ಬ ತನ್ನ ಮಗಳ ಮದುವೆಯನ್ನು ಪೂರೈಸಲು ಸಹಾಯ ಮಾಡುವಂತೆ ಪೈಠನದ ಬ್ರಾಹ್ಮಣರಲ್ಲಿ ಪ್ರಾರ್ಥನೆ ಮಾಡಿಕೊಂಡನು. ಬ್ರಾಹ್ಮಣನು ಬಡತನ ಹಾಗೂ ಆತನ ಅಗತ್ಯಗಳನ್ನರಿತುಕೊಂಡು ಪಠಣದ ಬ್ರಾಹ್ಮಣರು, “ನೀವು ಏಕನಾಥರಲ್ಲಿ ಹೋಗಿ ಅವರು ಕೋಪಿಸಿಕೊಳ್ಳುವಂತೆ ಮಾಡಿದರೆ ಇನ್ನೂರು ರೂಪಾಯಿಗಳನ್ನು ಕೊಡುತ್ತೇವೆ: ಎಂದು ಹೇಳಿದರು.

ಬಡತನವೆಂಬುವುದು ಬಹಳ ಕೆಟ್ಟದ್ದು. ಹೇಗಾದರೂ ಆಗಲಿ, ತನ್ನ ಮಗಳ ಮದುವೆಯಾದರೆ ಸಾಕು ಎಂಬ ಆಸೆಯಿಂದ ಪೈಠಣದ ಬ್ರಾಹ್ಮಣರ ಮಾತಿನಂತೆ ಆ ಬ್ರಾಹ್ಮಣನು ಏಕನಾಥರ ಮನೆಯನ್ನು ಹುಡುಕಿಕೊಂಡು ಬಂದನು. ಅವರು ಪೂಜಾ ಕಾರ್ಯದಲ್ಲಿ ನಿರತರಾದುದನ್ನು ಕಂಡು ಇದೇ ಸರಿಯಾದ ಸಮಯವೆಂದು ಭಾವಿಸಿ ನೇರವಾಗಿ  ಅವರ ತೊಡೆಯ ಮೇಲೆಯೇ ಹೋಗಿ ಕುಳಿತುಬಿಟ್ಟನು.

ನಡು ಮಧ್ಯಾಹ್ನದಲ್ಲಿ ಬಂದ ಅತಿಥಿಯನ್ನು ಕಂಡ ಏಕನಾಥರಿಗೆ ಬಹು ಸಂತೋಷವಾಯಿತು. ಅವರು ಬ್ರಾಹ್ಮಣನೊಂದಿಗೆ ಕುಶಲ ಪ್ರಶ್ನೆಗಳನ್ನು ಮಾಡಿ, “ಇಂದು ಈ ಬಡವನ ಮನೆಯಲ್ಲಿಯೇ ತಾವು ತೀರ್ಥ ಪ್ರಸಾಧವನ್ನು ಸ್ವೀಕರಿಸಿ ಉದ್ಧರಿಸಬೇಕು” ಎಂದು ವಿನಯದಿಂದ ಪ್ರಾರ್ಥಿಸಿ ಕೊಂಡರು.

ಬ್ರಾಹ್ಮಣನಿಗೆ ತುಂಬಾ ನಾಚಿಕೆಯಾಯಿತು. ಆತನು ಏಕನಾಥರ ಪಾದಗಳನ್ನು ಹಿಡಿದು ತನ್ನ ಗೃಹಕೃತ್ಯದ ಅಡಚಣೆಗಳನ್ನು ನೀಗಲು ಪೈಠಣದ ಬ್ರಾಹ್ಮಣರ ಮಾತಿಗೆ ಕಿವಿಗೊಟ್ಟು ಹೀಗೆ ಮಾಡಿದುದಾಗಿಯೂ ಈ ಕೃತ್ಯದಿಂದ ಬಹು ಪಶ್ಚಾತಾಪ ವಾಗಿದೆಯೆಂದು ಹೇಳಿಕೊಂಡರು. ಎಲ್ಲವನ್ನು ಕೇಳಿದ ಏಕ ನಾಥರು, “ಪೂಜ್ಯರೇ, ಈ ವಿಷಯವನ್ನು ತಾವು ಮೊದಲೇ ತಿಳಿಸಿದಲ್ಲಿ ಖಂಡಿತವಾಗಿಯೂ ನಾನು ತಮ್ಮ ಮೇಲೆ ಕೋಪಿಸಿಕೊಳ್ಳಬಹುದಾಗಿತ್ತು. ತಮಗೂ ಹಣ ಸಿಕ್ಕುತ್ತಿತ್ತು. ಆದದ್ದು ಆಗಿ ಹೋಯಿತು. ತಮ್ಮಮಗಳು ಬೇರೆಯಲ್ಲ. ನನ್ನ ಮಕ್ಕಳು ಬೇರೆಯಲ್ಲ. ಈ ಕಲ್ಯಾಣ ಕಾರ್ಯಕ್ಕೆ ತಗಲುವ ಖರ್ಚುವೆಚ್ಚಗಳನ್ನೆಲ್ಲ ನಾನೇ ವಹಿಸಿಕೊಳ್ಳುತ್ತೇನೆ. ನಿರ್ವಿಘ್ನವಾಗಿ ಮಂಗಳಕಾರ್ಯವನ್ನು ನೆರವೇರಿಸಿ” ಎಂದು ಹೇಳಿ ಸಂಭಾವನೆಯನ್ನಿತ್ತು ಕಳೂಹಿಸಿದರು”

ಪೈಠಣದಲ್ಲಿ ಒಮ್ಮೆ ಹರಿಕಥಾ ಕಾಲಕ್ಷೇಪವು ನಡೆಯುತ್ತಿ‌ತ್ತು. ಕತೆ ಮುಗಿದು ಮಂಗಳ ಹಾಡಿನ ಸಂಪ್ರದಾಯ ವಿತ್ತು.  ಅ ಪ್ರಸಾದದ ರುಚಿಯನ್ನು ಕೇಳಿದ್ದ ವಡ್ಡ-ಗಂಡ ಹೆಂಡತಿ ಇಬ್ಬರೂ ಬಹು ಆಸೆಯಿಂದ ಅಂದಿನ ಹರಿಕಥೆಯಲ್ಲಿ ಭಾಗವಹಿಸಲು ಬಂದರು. ಸ್ಥಳಾವಕಾಶವಿಲ್ಲದ್ದರಿಂದ ಏಕನಾಥರು ವಿಶ್ರಮಿಸುತ್ತಿದ್ದ  ಕೋಣೆಯಲ್ಲಿಯೇ ಕುಳಿತುಕೊಂಡರು. ಕಥೆ ಕೆಳುತ್ತಿದ್ದಂತೆಯೇ ಬಿಸಿಲಿನಲ್ಲಿ ದುಡಿದು ಬಂದ ದಂಪತಿಗಳು ನಿದ್ರೆ ಹೋದರು. ಗುರುಗಳ ಹಾಸಿಗೆಯನ್ನು ಬಿಡಿಸಲು ಬಂದ ಅವರ ಶಿಷ್ಯ ಉದ್ಧವನಿಗೆ ಅಲ್ಲಿ ನಿಶ್ಚಿಂತವಾಗಿ ಮಲಗಿದ ಆ ದಂಪತಿಗಳನ್ನು ಕಂಡು ಆಶ್ಚರ್ಯವಾಯಿತು. ಈ ದಂಪತಿಗಳನ್ನೆಬ್ಬಿಸಲು ಗಟ್ಟಿಯಾಗಿ ಆತ ಕೂಗತೊಡಗಿದ. ಆ ಆತನ ಗಲಾಟೆಯನ್ನು ಕೇಳೀ ಅಲ್ಲಿಗೆ ಬಂದ ಏಕನಾಥರು ಪ್ರಸಂಗವನ್ನರಿತು, ” ಇಂದು ನಿಮ್ಮ ನಿದ್ರೆ ಕೆಟ್ಟಿತು. ಅದಕ್ಕಾಗಿ ನನ್ನನ್ನು ಕ್ಷಮಿಸಿ”ಎಂದು ಆ ವಡ್ ದಂಪತಿಗಳನ್ನು ಕೇಳಿಕೊಂಡರು. ಇಂದಿನ ರಾತ್ರಿ ಇಲ್ಲಿಯೇ ಊಟ ಮಾಡಿ ಸುಖವಾಗಿ ನಿದ್ರೆ ಮಾಡಿ ಹೋಗಬಹುದು” ಎಂದು ಹೇಳಿದರು. ತನ್ನಂತೆ ಪರರು ಎಂದು ಭಾವಿಸಿ ನಡೆಯುವುದೇ ಪರಮಾತ್ಮನ ಪ್ರೀತಿಗೆ ದಾರಿ ಎಂದು ತೋರಿಸಿಕೊಟ್ಟರು.

ಏಕನಾಥರ ಮನೆಗೆ ಕನ್ನ ಹಾಕಲು ಕಳ್ಳರ ತಂಡವೊಂದು ಪ್ರಯತ್ನಿಸುತ್ತಿತು. ಅವರ ಗಲಾಟೆಯಿಂದ ಎಚ್ಚೆತ್ತ ನಾಥರು ಹೊರಬಂದಾಗ ಅವರನ್ನು ಕಂಡ ಕಳ್ಳರು ಭಯದಿಂದ ನಡುಗಲಾರಂಭಿಸಿದರು. ನಾಥರು ಅವರಿಗೆ ಅಭಯವನ್ನಿತ್ತು ಕದ್ದ ಪದಾರ್ಥಗಳನ್ನೆಲ್ಲ ತಾವೇ ಅವರಿಗೆ ಕೊಟ್ಟು ಮತ್ತೇ ಇಂತಹ ಕೆಲಸಕ್ಕೆ ಕೈಹಾಕದೇ ದುಡಿದು ಜೀವಿಸಲು ಅವರಿಗೆ ಉಪದೆಶ ಮಾಡಿಕಳೂಹಿಸಿದರು.

 

ಇಲ್ಲಿಯೇ ಊಟ ಮಾಡಿ ನಿದ್ರೆ ಮಾಡಿ ಹೋಗಬಹುದು:

ಏಕನಾಥರು ಉತ್ತರ ಭಾರತದ ತೀರ್ಥ ಕ್ಷೇತ್ರಗಳ ಯಾತ್ರೆಯನ್ನು ಮುಗಿಸಿ ಗಂಗಾಜಲ ಸಮೇತರಾಗಿ ದಕ್ಷಿಣದ ರಾಮೇಶ್ವರ ಯಾತ್ರಗೆಂದು ಶಿಷ್ಯ ಸಹಿತ ಹೊರಟರು.

ಗಂಗಾಜಲವನ್ನು ರಾಮೇಶ್ವರದಲ್ಲಿ ಅರ್ಪಿಸುವುದು ಸಂಪ್ರದಾಯ. ರಾಮೇಶ್ವರದ ಸಮೀಪಕ್ಕೆ ಬಂದಾಗ ಬಿಲಿಸಿನ ತಾಪವನ್ನು ಸಹಿಸದೇ ಬಾಯಾರಿಕೆಯಿಂದ ಕತ್ತೆಯೊಂದು ಬಳಲುತ್ತಿತ್ತು. ಆ ದೃಶ್ಯವನ್ನು ಕಂಡನಾಥರು ಕಾವಢಿಯಲ್ಲಿದ್ದ ಗಂಗಾಜಲವನ್ನು ಆ ಕತ್ತೆಗೆ ಕುಡಿಸಿದರು. ಅದನ್ನು ಕಂಡ ಶಿಷ್ಯರು, ರಾಮೇಶ್ವರದ ಯತ್ರಾ ಫಲವನ್ನೇಕೆ ಕಳೆದುಕೊಂಡಿರಿ?” ಎಂದು ಕೇಳಿದಾಗ, ನಾಥರು, ” ಈ ಮೂಕ ಪ್ರಾಣಿಯ ರೂಪದಲ್ಲಿರುವ ಭಗವಂತನು ಸಂತೋಷಪಡುವುದರಿಂದಾಗಿ ಸಾವಿರ ಸಲ ರಾಮೇಶ್ವರ ಯಾತ್ರೆ ಮಾಢಿದ ಪುಣ್ಯವು ಲಭಿಸಿದಂತಾಗುವುದು ಎಂದರು.

ಸಂಸಾರ :

ಏಕನಾಥರಿಗೆ ಗಂಗಾತಾಯಿ ಹಾಗೂ ಗೋದಾವರಿ ಎಂಬ ಹೆಣ್ಣು ಮಕ್ಕಳೂ ಹರಿಪಂತ ಎಂಬ ಗಂಡುಮಗನೂ ಇದ್ದರು. ಹಿರಿಯ ಮಗಳಾದ ಗೋದಾವರಿಯನ್ನು ಪೈಠನದ ವಿಶ್ವಂಭರ ಎಂಬುವರಿಗೆ ಕೊಟ್ಟು ವಿವಾಹ ಮಾಡಿದರು. ಗೋದಾವರಿಗೆ ಮುಕ್ತೇಶ್ವರ ಎಂಬ ಗಂಡು ಮಗುವಿತ್ತು. ಆ ಮಗು ಮೂಕನಾಗಿ ಬೆಳೆಯಿತು. ತನ್ನ ಮಗುವಿನ ಸ್ಥಿತಿಯನುನ ಚಿಂತಿಸಿದಾಗಲೆಲ್ಲ ಗೋದಾವರಿಯು ಕಣ್ಣೀರಿಡುತ್ತಿದ್ದಳು. ಮಗಳ ಮನೋವ್ಯಥೆಯನ್ನು ಕಂಡ ಏಕನಾಥರು ಆ ಮಗುವನ್ನು ತಮ್ಮ ತೊಡೆಯ ಮೇಲೆ ಇಟ್ಟುಕೊಂಡು “ಚಿರಂಜೀವಿಯಾಗು, ಮನೆ ತನದ ಕೀರ್ತಿಯನ್ನು ಬೆಳಗಿಸು” ಎಂದು ತಲೆಯ ಮೇಲೆ ಕೈಯಿಟ್ಟು ಆಶಿರ್ವದಿಸಿದರು.  ಆ ಮಗು ನಾಥರ ಅನುಗ್ರಹದಿಂದ ಮಾತನಾಡುವಂತೆ ಆಯಿತು. ಮುಂದೆ ಈತನೇ ಮಹಾರಾಷ್ಟ್ರದಲ್ಲಿ ಅತ್ಯಂತ ಹೆಸರುವಾಸಿಯಾದ “ಮುಕ್ತೇಶ್ವರ” ಎಂಬ ಕಾವ್ಯನಾಮದಿಂದ ಅನೇಕ ಕೃತಿಗಳನ್ನು ರಚಿಸಿದನು. ಮುಕ್ತೇಶ್ವರನು ತಾನು ರಚಿಸಿದ ಕಾವ್ಯಗಳಲ್ಲಿ ತಾತ ಏಕನಾಥರನ್ನು ತುಂಬ ಕೊಂಡಾಡಿದ್ದಾನೆ.

ಎರಡನೆಯ ಮಗಳಾದ ಗಂಗಾಮಾತೆಯನ್ನು ಕರ್ನಾಟಕ ಪುಂಡಾಜಿ ಎಂಬುವರಿಗೆ ಕೊಟ್ಟು  ವಿವಾಹ ಮಾಢಿದ್ದರಂತೆ.

ಕೃತಿಗಳು:

ಏಕನಾಥರ ಜೀವನವು ಪವಾಡಮಯವೆಂದು ತೋರಿದರೂ ಅವರ ಬಾಳು ಅಂದಿನ ಸಮಾಜವನ್ನು ಸರಿಯಾದ ದಾರಿಗೆ ತರಲು ನಾನಾ ಮುಖವಾಗಿ ಪರಿಣಾಮ ಬೀರಿತೆಂದು ತಿಳಿಯುವುದು. ಏಕನಾಥರು ಸವ್ಯಸಾಚಿಗಳು. ಖಡ್ಗ ಹಿಡಿದು, ಹೋರಾಡಿ ಗೆದ್ದು ದುರ್ಗವನ್ನು ರಕ್ಷಿಸಿದರು.  ಸಾಹಿತ್ಯಕ್ಕೆ ಕೈಯಿಟ್ಟು ಸರಸ್ವತಿಯ ಕೃಪೆಗೂ ಸಹ ಪಾತ್ರರಾದರು. ಮರಾಠಿಯಲ್ಲಿ ಕೃತಿ ರಚನೆ ಮಾಡಿ ಜನರಿಗೆ ಮಾರ್ಗದರ್ಶನ ಮಾಡಿದರು. ಅವರ ಜೀವನವು ಬ್ರಹ್ಮತೇಜಸ್ಸಿನಿಂದಲೂ ಕ್ಷಾತ್ರತೇಜಸ್ಸಿನಿಂದಲೂ ಮೆರೆಯಿತು.

ಮರಾಠಿ ಸಾಹಿತ್ಯದಲ್ಲಿ ಏಕನಾಥರ ಕೃತಿಗಳು ಮೈಲಿಗಲ್ಲುಗಳಾಗಿವೆ. ಚತುಶ್ಲೋಕಿ ಭಾಗವತ: ದಿಂದ ಪ್ರಾರಂಭವಾದ ಅವರ ಲೇಖನ ಕಾರ್ಯವು ಕೀರ್ತಿ ಕಳಸದತ್ತ ಮೇಲೆರತುತ ಹೋಯಿತು.

“ರುಕ್ಮಿಣಿ ಸ್ವಯಂವರ ಎಂಬ ಅವರ ಕೃತಿಯಲ್ಲಿ ೧೮ ಅಧ್ಯಾಯಗಳೂ ೧೭೦೦ ಶ್ಲೋಕಗಳೂ ಇವೆ. ಮೊದಲೆಯ ಅಧ್ಯಾಯದಲ್ಲಿ ರುಕ್ಮೀಣಿ ಸೌಂಧರ್ಯದ ವರ್ಣನೆಯಿದೆ. ಈ ಕಾವ್ಯವು ಶ್ರೀ ಕೃಷ್ಣನ ಬಾಲ ಲೀಲೆಗಳಿಂದಲೂ ಪರಿಣಯವೇ ಮೊದಲಾದ ಚಿತ್ತಾಕರ್ಷಕ ವರ್ಣನೆಗಳಿಂದಲೂ ತುಂಬಿದ ಒಂದು ಸುಂದರ ಕೃತಿಯಾಗಿದೆ. ಇದು ಮರಾಠಿ ಭಾಷೆಯಲ್ಲಿರುವುದರಿಂದ ವಾರಕೀ ಪಂಥದ ಭಕ್ತರಿಗೆಲ್ಲ ಇದು ಪರಮಪ್ರೀಯವಾದ ಗ್ರಂಥವೆಂದು ಕರೆಸಿಕೊಳ್ಳುತ್ತಿದೆ.

“ಚಿರಂಜೀವಿಯ ಪದ: ಎಂಬುವುದು ಅವರ ಮೂರನೆಯ ಕೃತಿ. ಇದರಲ್ಲಿ ಜೀವ ಪರಮಾತ್ಮರ ವಿಷಯಗಳನ್ನು ನಿರುಪಿಸುತ್ತಾರೆ. ಇದು ಗಾಢವಾದ ವೇದಾಂತ ವಿಷಯಗಳಿಂದ ಕೂಡಿದೆ.

ಅವರ ನಾಲ್ಕನೆಯ ಕೃತಿಯನ್ನೇ” ಏಕನಾಥ ಭಾಗವತ ಎಂದು ಕರೆಯುತ್ತಾರೆ. ಈ ಗ್ರಂಥವು ಭಾಗವತ ಧರ್ಮದ ತತ್ವಗಳನ್ನು ಎತ್ತಿ ತೋರಿಸುವುದಕ್ಕಾಗಿಯೇ ರಚಿತವಾದುದಾಗಿದೆ. ಮೊತ್ತ ಮೊದಲು ವೇದವ್ಯಾಸರಿಂದ ಅವರ ಮಕ್ಕಳಾದ ಶುಕಾಚಾರ್ಯರಿಗೆ ದೊರೆತ ಉಪದೇಶವೇ ಈ ಗ್ರಂಥದ ವಿಷಯ. ಅನಂತರ ಶುಕಾಚಾರ್ಯರು ಅತ್ಯಂತ ವಿಪತ್ತಿನಲ್ಲಿ ಸಿಲುಕಿದ ಪರೀಕ್ಷಿತ ರಾಜನ ಉದ್ದಾರಕ್ಕಾಗಿ ಗಂಗಾ ತೀರದಲ್ಲಿ ಕುಳಿತು ಈ ಗ್ರಂಥದ ಮಾತ್ಮ್ಯವನ್ನು ಅವನಿಗೆ ಉಪದೇಶ ಮಾಡಿದರು. ಸಂಸ್ಕೃತದ ಭಾಷೆಯಲ್ಲಿರುವ ಪರಮಸಾತ್ವಿಕ ವಾದ ಈ ಭಾಗವತ ಗ್ರಂಥವನ್ನು ಏಕನಾಥರು ಇಪ್ಪತ್ತು ಸಾವಿರ ಶ್ಲೋಕಗಳಲ್ಲಿ ಮರಾಠಿ ಭಾಸೆಯಲ್ಲಿ ವ್ಯಾಖ್ಯಾನ ಮಾಡಿದರು.  ಈ ಗ್ರಂಥ ಬರೆಯಲು ಅರಂಭಿಸಿ ಮೂರು ಅಧ್ಯಾಯಗಳು ಪೂರ್ತಿಯಾಗಿತ್ತು. ಅಷ್ಟನ್ನೆ ಶಿಷ್ಯರೊಬ್ಬರು ಪ್ರತಿ ಮಾಡಿಕೊಂಡು ಕಾಶಿಯಾತ್ರೆಗೆ ಹೋದರು. ಅವರು ಕಾಶಿಯ ಗಂಗಾ ತೀರದಲ್ಲಿ ದಿನವೂ ಅದನ್ನ ಪಾರಾಯಣ ಮಾಡುತ್ತಿದ್ದರು.ಮರಾಠಿ ಭಾಷೆಯಲ್ಲಿ ಹೇಳಿಕೊಳ್ಳುತ್ತಿರುವ ಆ ಭಾಗವತದ ಶ್ಲೋಕಗಳನ್ನು ಕೆಳಿ ಕಾಶಿಯ ಪಂಡಿತರು ಸಂಸ್ಕೃತ ಶ್ಲೋಕಗಳನ್ನು ಕೇಳಿ ಕಾಶಿಯ ಪಂಡಿತರು ಸಂಸ್ಕೃ ವಾಗ್ಮಯಕ್ಕೂ ವೇದ ವ್ಯಾಸರಿಗೂ ಅಪಚಾರವಾಗಿದೆಯೆಂದು ಕೂಗಿಕೊಳ್ಳಳಾರಂಭಿಸಿದರು. ಗ್ರಂಥಕರ್ತರಾದ ಏಕನಾಥರನ್ನು ಕಾಶಿಗೆ ಕರೆಸಿ ಅವರ ಈ ಕೃತಿ ಯನ್ನು ಖಂಡಿಸುವುದಕ್ಕಾಗಿ ಪಂಡಿತರು ಮಹಾ ಸಮ್ಮೇಳನವನ್ನೇ ಕರೆದರು. ಈ ಸಂದರ್ಭದಲ್ಲಿ ಏಕನಾಥರು, “ಜನ ಸಾಮಾನ್ಯರ ಉದ್ಧಾರವಾಗಬೇಕಾದಲ್ಲಿ ಸನಾತನ ಧರ್ಮವು ಉಳಿಯಬೇಕಾದಲ್ಲಿ ಭಾಗವತ ಧರ್ಮ ಪ್ರಚಾರವಾಗಬೇಕಾದುದು ಅತ್ಯವಶ್ಯಕ. ಆದುದರಿಂದ ದೇಶಭಾಷೆಯಲ್ಲಿ ಇಂತಹ ಕೃತಿಗಳು ಭಾಷಾಂತರವಾಗಬೇಕಾದುದು ಅಗತ್ಯ. ಈ ಹಿನ್ನೆಲೆಯಲ್ಲಿ ನಾನು ಈ ಗ್ರಂಥವನ್ನು ರಚಿಸಿದ್ದೇನೆಯೇ ವಿನಾ ಮಹಾ ಪಂಡಿತನೆಂದಾಗಲೀ ಅಥವಾ ಅಹಂಕಾರದಿಂದಾಗಲಿ ರಚಿಸಿಲ್ಲ” ಎಂದರು. ನೆರೆದ ಪಂಡಿತರು ಈ ಮಾತಿನಿಂದ ಸಮಾಧಾನಗೊಂಡಂತೆ ಕಂಡರು. ಆದರೂ ಅಸೂಯೆ ಹೋಗಲಿಲ್ಲ. ಮೂರು ಅಧ್ಯಾಯದ ಆ ಗ್ರಂಥವನ್ನು ಗಂಗೆಯಲ್ಲೆಸೆದರೆಂದೂ ಅದು ತೇಲಿಕೊಂಡು ಏಕನಾಥರ ಕೈಯಲ್ಲಿಯೇ ಬಂದಿತೆಂದೂ  ಹೇಳುತ್ತಾರೆ.  ಆಮೇಲೆ ಇಡೀ ಭಾಗವತವನ್ನು ಏಕನಾಥರು ಕಾಶಿಯಲ್ಲಿದ್ದುಕೊಂಡು ಪೂರೈಸಿದರು. ಮುಂದೆ ಅ ಗ್ರಂಥವನ್ನು ಜನರು ಆನೆಯ ಮೇಲೆಯಿಟ್ಟು ಕಾಶಿಯಲ್ಲಿ ಬಹು ವೈಭವದಿಂದ ಮರೆಸಿದರೆಂದೂ ತಿಳಿದುಬರುವುದು.

ಏಕನಾಥರ ಮನೆಯ ಸಮೀಪದಲ್ಲಿಯೇ ತಂದೆಯನ್ನು ಕಳೆದುಕೊಂಡು ಅನಾಥನಾದ ಗವಬಾ ಎಂಬ ಬಾಲಕನಿದ್ದನು . ಪೆದ್ದನಾಗಿ ಬೆಳೆದ ಮಗುವನ್ನು ಕಂಡು ಕಂಡು ತಾಯಿಯು ತುಂಬಾ ಕೊರಗುತ್ತಿದ್ದಳೂ. ದೊಡ್ಡವರ ಸಹವಾಸದಲ್ಲಿದ್ದರೆ ಮಗುವು ಬುದ್ಧಿವಂತನಾಗಬಹುದೆಂದು ಆ ಮಗುವನ್ನು ತಂದು ನಾಥರಿಗೆ ಒಪ್ಪಿಸಿ, ಹೇಗಾದರೂ ಮಾಡಿ ತನ್ನ ಮಗು ಬುದ್ಧಿವಂತನಾಗುವಂತೆ ಮಾಡಿರಿ” ಎಂದು ಕೇಳಿಕೊಳ್ಳತೊಡಗಿದಳು. ದಿನವೂ ಅವನ್ನು ಓದಲು, ಬರೆಯಲು ಕಲಿಸುವ ಪ್ರಯತ್ನ ನಡೆಯಿತು. ಎಷ್ಟೋ ದಿನಗಳಾದ ಮೇಲೆ ಏಕನಾಥ ಎಂಬ ನಾಲ್ಕು ಅಕ್ಷರಗಳನ್ನು ಬರೆಯಲು ಬರುವಂತಾಯಿತು. ಅದನ್ನೇ ಸದಾಕಾಲವು ಜಪಿಸುವಂತೆ ನಾಥರು ಆಜ್ಞೆ ಮಾಡಿದರು. ಶತದಡ್ಡನೆಂದು ಹೆಸರುಗಳಿಸಿದ್ದ ಆ ಬಾಲಕನಿಂದಲೇ ಮುಂದೆ ನಾಥರು ಅರ್ಧದಲ್ಲಿಯೇ ನಿಲ್ಲಿಸಿದ ರಾಮಾಯಣದ ಅನುವಾದ ಪೂರ್ಣಗೊಂಡಿತು.

ಏಕನಾಥರು ತಮ್ಮ ಕೊನೆಯ ಗಾಲದಲ್ಲಿ ರಾಮಾಯಣವನ್ನು ಅನುವಾದಿಸಲು ಆರಂಭಿಸಿದರು. ಅವರ ಕೃತಿಗಳಲ್ಲೆಲ್ಲ ಇದು ಬಹು ದೊಡ್ಡದು.  ಆದರೆ ಮಧ್ಯದಲ್ಲಿಯೇ ಕಾಲವಾದುದರಿಂದ ಅನುವಾಧವು ಅಪೂರ್ಣವಾಗಿ ಉಳಿಯುವಂತಾಯಿತು. ತಮ್ಮ ಈ ಕೃತಿಯನ್ನು ಏಕಾಂತ ಭಕ್ತನಾದ ಗವಬಾ ಎಂಬ ಶಿಷ್ಯನು ಪೂರ್ಣ ಮಾಡುವೆನೆಂಬ ಮುನ್ಸೂಚನೆಯನ್ನು ಮೊದಲೇ ಕೊಟ್ಟಿದ್ದರಂತೆ. ಅವರ ಹೇಳಿಕೆಯಂತಯೇ ಭಾವಾರ್ಥ ರಾಮಾಯಣವನ್ನು ಗವಬಾ ಮುಂದೆ ಪೂರ್ಣಗೊಳಿಸಿದನು.

ಏಕನಾಥರ ಗುರುಭಕ್ತಿಯು ಬಹು ಅಗಾಧವಾದುದು. ಅವರು ತಮ್ಮ ಗ್ರಂಥ ರಚನಾರಂಭದಲ್ಲಿ ತಮ್ಮ ಗುರುಗಳಿಗೆ ವಂದಿಸಿ, “ಅವರ ಅನುಗ್ರಹ ಬಲದಿಂದಲೇ ಈ ಕೃತಿಯನ್ನು ರಚಿಸುತ್ತಿದ್ದೇನೆ” ಎಂದು ಹೇಳಿಕೊಂಡಿದ್ದಾರೆ. ಅವರ ಸಾಹಿತ್ಯದಲ್ಲಿ ಒಂದು ಪದ್ಯವು ಈ ಕೆಳಗಿನಂತಿದೆ:

ಗುರುಮಾತಾ ಗುರುಪಿತಾ |
ಗುರುಸ್ವಾಮಿ ಕುಲದೇವತಾ
|
ಗುರುವಾಜೋನಿ ಸರ್ವಥಾ
|
ಅಣಿಕ ದೇವತಾ ಸ್ಮರೇನಾ
||

ಗುರುಗಳ ವಿನಾ ನನಗೆ ಬೇರೆ ದೇವರಿಲ್ಲ. ಆ ಗುರುಗಳೇ ನನ ತಂದೆ, ಅವರೇ ನನಗೆ ತಾಯಿ ಬಂಧುಳು. ಅಷ್ಟೇ ಅಲ್ಲ, ನನ್ನ ಕುಲಸ್ವಾಮಿಯೂ ಸಹ ಗುರುಗಳೇ ಆಗಿದ್ದಾರೆ.

“ಏಕಾಜನಾರ್ಧನಿ- ಇದು ಏಕನಾಥರ ಕಾವ್ಯನಮವಾಗಿದೆ. ಅವರು ತಮ್ಮ ಪದಪದ್ಯಗಳನ್ನು ಮುಗಿಸುವಾಗಲೇ ತಪ್ಪದೇ ಈ ಪದವನ್ನು ಬಳಸಿದ್ದಾರೆ.

ದೇಹಬಿಟ್ಟರು :

ಏಕನಾಥರು ಒಂದು ದಿನ ತಮ್ಮ ಶಿಷ್ಯ ಪರಿವಾರವನ್ನೆಲ್ಲ ಕೂಡಿಸಿಕೊಂಡು ತಾವು ಶಲಿವಾಹನ ಶಕೆ ೧೫೨೧ (ಕ್ರಿ.ಶ.೧೫೯೯) ಫಾಲ್ಗುಣ ಷಷ್ಠಿಯ ದಿನದಂದು ಈ ಭೌತಿಕ ದೇಹವನ್ನು ವಿಸರ್ಜಿಸುವುದಾಗಿ ಪ್ರಕಟಿಸಿದರು.

ಆ ಮಹಾನುಭಾವರು ತಮ್ಮ ಜೀವನದ ಕೊನೆಯ ಹರಿಕಥೆಯನ್ನು ಗೋದಾವರಿ ತೀರದ ಮರಳು ದಂಡೆಯ ಮೇಲೆ ಮಾಡಿದರು. ಆಂದಿನ ಆ ಹರಿಕಥೆಯನ್ನು ಕೇಳಿದ ಭಕ್ತವೃಂದಕ್ಕೆಲ್ಲ ತಾವು ವೈಕುಂಠದಲ್ಲಿ ವಿಹರಿಸುತ್ತಿದ್ದಂತೆಯೇ ಆನಂದದ ಅನುಭವ ವಾಯಿತು ಎಂದು ಹೇಳುತ್ತಾರೆ. ಏಕನಾಥರ ಕೀರ್ತನೆಗೆ ಮಂಗಳವನ್ನು ಹಾಡಿಸರ್ವರಿಗೂ ತಮ್ಮ ಕೊನೆಯ ನಮಸ್ಕಾರವನ್ನು ತಿಳಿಸಿ,”ನಾವು ಹೋಗಿಬರುತ್ತೇವೆ. ನಮ್ಮಿಂದ ಉಪದೆಶಿಸಲ್ಪಟ್ಟ ಭಾಗವತ ಧರ್ಮವನ್ನು ಮರೆಯದಂತೆ ನೀವೆಲ್ಲರೂ ಆಚರಿಸಿಕೊಂಡು ಬನ್ನಿರಿ. ಪಾಂಡರಂಗನು ನಿಮಗೆ ಮಂಗಳವನ್ನುಂಟು ಮಾಡಲಿ” ಎಂದು ಉಪದೇಶವನ್ನು ಮಾಢಿ ಗೋದಾವರಿಯ ತುಂಬ ಪ್ರವಾಹವನ್ನು ಪ್ರವೇಶ ಮಾಡಿದರಂತೆ.  ಅವರ ಶಿಷ್ಯರು ಏಕನಾಥರ ದೇಹವನ್ನು ತಂದು ಪಠಣದಲ್ಲಿ ಸಮಾಧಿ ಮಾಡಿದರು.

ಆಡಿದ್ದು ನಡೆದದ್ದು ಆದರ್ಶ ಪ್ರಾಯ:

ಏಕನಾಥರು ತಮ್ಮ ಅರವತ್ತಾರು ವರ್ಷಗಳ ಜೀವನದಲ್ಲಿ ಕೇವಲ ಮರಾಠಿ ಭಾಷೆಯಲ್ಲಿಯೇ ಸಾಹಿತ್ಯ ರಚನೆ ಮಾಡಿದರೆಂದೇನು ಅಲ್ಲ. ಅಂದಿನ ರಾಜಕೀಯ ಪ್ರಭಾವಕ್ಕೆ ಒಳಗಾದ ಭಾರತೀಯರೆಲ್ಲರಿಗೂ ಭಾಗವತ ಧರ್ಮದ ಅರ್ಥವನ್ನು ಮಾಡಿಸಬೇಕಾದುದರಿಂದ ಅವರು ಕೆಲವು ಪದ ಪದ್ಯಗಳನ್ನು ಅಂದಿನ ರಾಜಭಾಷೆಯಾದ ಉರ್ದು ಭಾಷೆಯಲ್ಲಿಯೂ ರಚಿಸಿರುವರೆಂದು ಕಂಡುಬರುವುದು. ಅಂತಹ ಒಂದೆರಡು ಪಧ್ಯಗಳನ್ನಿಲ್ಲಿ ಉದಾಹರಿಸಬಹುದಾಗಿದೆ.

ಅಲ್ಲ ರಖೇಗಾ ವೈಸೆ ಹೀ ರಹನಾ
ಮುಲ್ಲಾ ರಖೇಗಾ ವೈಸೆ ಹೀ ರಹನಾ

ಈ ಮೇಲಿನ ಪದ್ಯದಲ್ಲಿ ಹರಿ ಗುರುಗಳ ಇಟ್ಟಂತೆ ಜೀವಿಸುವುದೇ ಮನುಷ್ಯ ಧರ್ಮ ಎಂದು ಹೇಳಿದ್ದಾರೆ.

ಏಕನಾಥರ ದಿವ್ಯ ಜೀವನದ ಸ್ಮಾರಕಗಳೆಂದು ತೋರಿಸಲು ಫೈಠಣದಲ್ಲಿ ಬಹು ಸುಂದರವಾದ ಸಮಾಧಿಯಿದೆ. ಅವರ ಪ್ರತಿಷ್ಠೆ ಮಾಡಿದ ಪಾಂಡುರಂಗನ ದೇವಾಲಯವಿದೆ. ಅವರು ಏಕಾಂತವಾಗಿ ಕುಳಿತುಕೊಳ್ಳುತ್ತಿದ್ದ ಶಿವ ದೆವಾಲಯವಿದೆ. ಇದು ಗೋದಾವರಿ ತೀರದಲ್ಲಿದೆ. ಫಾಲ್ಗುಣ ಷಷ್ಠಿಯ ದಿನ ಲಕ್ಷೋಪಲಕ್ಷ ಯಾತ್ರಿಕರು ಗೋದಾವರಿಯಲ್ಲಿ ಮಿಂದು ಈ ಸ್ಮಾರಕಗಳನ್ನು ಸಂದರ್ಶಿಸಿ ಪುನೀತರಾಗುತ್ತಾರೆ.

ಏಕನಾಥರು ಕಾಲವಾದ ನಂತರ ಅವರ ಭಕ್ತಿ ಭಾವಗಳಿಗೆ ಮಾರುಹೋದ ನಿಜಾಮ, ಹೋಳ್ಕರ, ಸಿಂಧೆ, ಭೋಸಲೆ, ಪವಾರ, ಗಯಕವಾಡ ಇವರೇ ಮೊದಲಾದ  ರಾಹಮಹಾರಾಜರು ಅವರ ಹೆಸರಿನಲ್ಲಿ ನಡೆಯುವ ಉತ್ಸವಾದಿಗಳಿಗಾಗಿ ಅನೇಕ ಜಹಗೀರಿಗಳನ್ನು ದಾನವಾಗಿತ್ತು. ವೈಭೋಪೇತರಾಗಿ ಉತ್ಸವವು ನಡೆದು ಬರುವಂತೆ ವ್ಯವಸ್ಥೆ ಮಾಡಿ ಕೃತಾರ್ಥರಾಗಿದ್ದಾರೆ. ನಾಥರ ಉತ್ಸವ ಕಾರ್ಯಗಳನ್ನೆಲ್ಲ ನೋಡಿಕೊಳ್ಳಳು ಒಂದು ಸಂಸ್ಥೆಯೂ ಏರ್ಪಟ್ಟಿದೆ.

ಏಕನಾಥರು ಗತಿಸಿ ಸುಮಾರು ನಾನ್ನೂರು ವರ್ಷಗಳು ಸಮೀಪಿಸುತ್ತಿವೆ. ಅಂದು ಅವರು ಬೆಳಗಿದ ನಂದಾ ದೀಪವು ಅವರ ಭಕ್ತವೃಂದಕ್ಕೆಲ್ಲ ಇಂದಿಗೂ ಬೆಳಕನ್ನೀಯುತ್ತಿದೆ.

ಅವರ ಭಕ್ತರಲ್ಲಿ ಅಗ್ರಗಣ್ಯರಾದ ಉದ್ಭವಚಿದ್ದನ, ರಂಗನಾಥ, ರಾಮವಲ್ಲಭದಾಸ, ಸಿದ್ಧ ಚೈತನ್ಯ, ಮುಕುಂದ, ಜೈರಾಮಸುತ, ಖಂಡೇರಾಯ, ಮೊದಲಾದವರು  ಪ್ರೇಮಭರಿತರಾಗಿ ನಾಥರ ಸ್ತ್‌ಓತ್ರ ಮಾಡಿದ “ಸುಮನ ಗುಚ್ಛ” ಎಂಬ ಕಾವ್ಯ ಕೃತಿಯನ್ನು ಅವರ ಆಡಿದಾವರೆಗಳಿಗೆ ಅರ್ಪಿಸಿದ್ದಾರೆ,. ಇದರಲ್ಲದೇ ನಾಥರ ಮೊಮ್ಮಕ್ಕಳಾದ ಮುಕ್ತೇಶ್ವರ ಮತ್ತು ಬಾಳಾಚ ಪಂತ ಪರಾಡಕರ ಇವರೂ ಕೆಲವು ಸ್ತೋತ್ರಗಳನ್ನು ರಚಿಸಿದ್ದಾರೆ.

ಏಕನಾಥರು ರಚಿಸಿದ ಅಭಂಗಗಳು ತುಕಾರಾಮ, ನಾಮದೇವರ ಅಭಂಗಗಳಂತೆಯೇ ಅತ್ಯಂತ ಸುಂದರವಾಗಿವೆ. ಅದರಲ್ಲಿ ಒಂದನ್ನು ಇಲ್ಲಿ ಉದಾಹರಿಸಬಹುದಾಗಿದೆ.

ಪೂಝಾ ಕೈಸಿಕರು, ದೇವಾ, ವಾಚೆ- ಆಠವೂ ಕೇಶವಾ,
ಹೇಜಿ ಮಾಝಿ ಪೂಝಾ ವಿಧಿ ಸರ್ವ ಟಾಕಲಿ
, ಉಪಾಧಿ,

ಫಾಲ್ಗುನಿ ನಿರ್ಮಳ ಆಸನ, ಪೂಜೂ ಸಂತಾನಚೀ
ಚರಣ ದೃಢಭಾವದರೂ ಸಾಚಾ
, ಸದಾ ವಂದಹರಿ
ನಾಮಾ
, ಏಕಜನಾರ್ಧನಿ ಪೂಜಾ ಸರ್ವಭಾವೇ ಗರುಡ ಧ್ವಜಾ ||

(ದೇವಾ, ನಿನ್ನ ಪೂಜೆ ಹೇಗೆ ಮಾಡಲಿ, ನೀನು ವಚನಕ್ಕೆ ನಿಲುಕುವವನಲ್ಲ. ಸಂತರ ಚರಣ ಪೂಜೆ , ಸದಾ ದೃಢ ಭಾವದಿಂದ ಹರಿನಾಮ ಭಜನೆ ಮಾಡುವುದೇ ಸರ್ವ ಭಾವದಿಂದಲೂ ಗರುಡ ಧ್ವಜನ ಪೂಜೆ ಎಂದು ನಾನು ಭಾವಿಸಿದ್ದೇನೆ. ಇದೇನಾನು ಮಾಡುವ ಪೂಜೆ ಎಂದು ನಾನು ಭಾವಿಸಿದ್ದೇನೆ.  ಇದರಿಂದ ಸಕಲ ಭಾಧೆಗಳು ನಿವಾರಣೆಯಾಗುವುವು).

ಭಗವಂತನ ಏಕಾಂತ ಭಕ್ತರಾದ ಏಕನಾಥರ ಪ್ರೇಮ ಮಯ ಕರುಣಾಪೂರ್ಣ ಜೀವನವು ಭಾರತೀಯರಿಗೆಲ್ಲ ಸನ್ಮಾರ್ಗ ದೀಪಿಕೆಯಾಗಿದೆ.