ಗುರುರ್ಬ್ರಹ್ಮಾ ಗುರುರ್ವಿಷ್ಣುಃ
ಗುರುರ್ದೇವೋ ಮಹೇಶ್ವರಃ |
ಗುರುಸ್ಸಾಕ್ಷಾತ್‌ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ |

ನಮ್ಮ ನಾಡಿನಲ್ಲಿ ವಿದ್ಯೆ ಕಲಿಸುವ ಗುರುವಿಗೆ ಕೊಟ್ಟಿರುವ ಸ್ಥಾನ ಬಹಳ ದೊಡ್ಡದು. ಗುರು ತಂದೆಗೆ ಸಮಾನ ಎಂಬ ಭಾವನೆ ಇದೆ. ಹಿಂದಿನ ಕಾಲದಲ್ಲಿ ವಿದ್ಯೆ ಕಲಿಯಲು ಬಯಸುವ ವಿದ್ಯಾರ್ಥಿಗಳು ಗುರುಗಳ ಮನೆಯಲ್ಲೇ ವಾಸವಾಗಿರಬೇಕಾಗಿತ್ತು. ಗುರುಗಳು ನಿಯಮಿಸಿದ ಕೆಲಸವನ್ನು ಮಾಡಿಕೊಂಡು ವಿಧೇಯರಾಗಿ ನಡೆದುಕೊಂಡು ಗುರುಗಳು ಕಲಿಸಿದ ವಿದ್ಯೆಯನ್ನು ಶಿಷ್ಯರು ಮನಸ್ಸಿಟ್ಟು ಕಲಿಯಬೇಕೆಂಬುದು ಅಂದಿನ ಪರಿಪಾಠ. ಇದನ್ನು ಗುರುಕುಲವಾಸ ಎಂದು ಕರೆಯುತ್ತಿದ್ದರು.

ಗುರುಗಳು ವಿದ್ಯಾರ್ಥಿಗೆ ತಿಳಿವಳಿಕೆಯನ್ನು ಮಾತ್ರವೇ ಕೊಡುತ್ತಿರಲಿಲ್ಲ. ಅವನ ಸ್ವಭಾವವನ್ನು ರೂಪಿಸುತ್ತಿದ್ದರು. ಸಮಾಜಕ್ಕೆ ಉಪಯೋಗವಾಗುವ ಹಾಗೆ ಬಾಳುವುದು ಹೇಗೆ, ಕಷ್ಟಗಳನ್ನು ಎದುರಿಸುವುದು ಹೇಗೆ ಎಂದು ಹೇಳಿಕೊಡುತ್ತಿದ್ದರು. ಈ ರೀತಿ ವಿದ್ಯಾರ್ಥಿಗಳನ್ನು ಬಾಲ್ಯದಲ್ಲಿ ರೂಪಿಸಿ ಭವಿಷ್ಯ ಜೀವನಕ್ಕೆ ಸಿದ್ಧಮಾಡುವ ಗುರುವಿಗೆ ನಮ್ಮ ಸಂಸ್ಕೃತಿಯಲ್ಲಿ ಅತ್ಯಂತ ಪೂಜ್ಯ ಸ್ಥಾನವಿದೆ.

ಕಾಡು ಹುಡುಗಧೀರ ಹುಡುಗ

ವಿದ್ಯಾರ್ಥಿಗೆ ತನ್ನ ಗುರುವಿನ ಬಗ್ಗೆ ಅಪಾರ ಭಕ್ತಿಯಿದ್ದು, ಶ್ರದ್ಧೆಯಿಂದ ಪ್ರಯತ್ನಪಟ್ಟರೆ ಏನೆಲ್ಲ ಸಾಧಿಸಬಹುದು ಎಂಬುದನ್ನು ಜಗಕ್ಕೆಲ್ಲ ಸಾರಿದವನು ಒಬ್ಬ ಬಾಲಕ. ಗುರುವಿನ ಆಶೀರ್ವಾದದ ಹಿರಿಮೆಯ ಪತಾಕೆ ಹಾರಿಸಿ, ತಾವೇ ಶ್ರೇಷ್ಠ ಕುಲದವರೆಂದು ಹೇಳಿಕೊಳ್ಳುವವರ ಕಣ್ಣನ್ನೂ ತೆರೆಸಿದ ಹೆಗ್ಗಳಿಕೆ ಈತನದು.  ಈ ಆದರ್ಶ ವಿದ್ಯಾರ್ಥಿಯೇ ಏಕಲವ್ಯ.

ಏಕಲವ್ಯ ಒಬ್ಬ ಕಾಡು ಹುಡುಗ. ದಿಟ್ಟತನದ ಧೀರ ಹುಡುಗ. ಬೇಡರ ಜಾತಿಗೆ ಸೇರಿದವನು. ಇದೊಂದು ಕೀಳು ಜಾತಿ ಎಂದು ಕೆಲವರು ತಪ್ಪಾಗಿ ತಿಳಿದುಕೊಂಡಿದ್ದ ಕಾಲ ಅದು. ಆದರೆ ಕೀಳು-ಮೇಲುಗಳು ಜಾತಿಯಲ್ಲಿಲ್ಲ; ಹೃದಯ ಸಂಪತ್ತನ್ನೂ, ಮನಸ್ಸಿನ ವಿಶಾಲತೆಯನ್ನೂ ಅವಲಂಬಿಸಿದೆ ಎಂದು ಏಕಲವ್ಯ ತನ್ನ ನಡೆನುಡಿಯಿಂದ ತೋರಿಸಿಕೊಟ್ಟ.

ಏಕಲವ್ಯನ ವಾಸ ಒಂದು ಪುಟ್ಟ ಕಾಡಿನಲ್ಲಿ. ಅದೊಂದು ಸುಂದರವಾದ ಅರಣ್ಯ. ಈ ಕಾಡಿನಲ್ಲಿ ಆತ ತನ್ನ ತಾಯಿಯೊಂದಿಗೆ ಜೀವನ ನಡೆಸಿದ್ದ. ಸಂತೃಪ್ತ ಜೀವನ ಅವರದಾಗಿತ್ತು.

ಏಕಲವ್ಯನ ತಂದೆ ಹಿರಣ್ಯಧನು. ಅವನು ಆ ಕಾಡಿಗೆ ಅಧಿಪತಿಯಾಗಿದ್ದ.  ಒಬ್ಬನೇ ಮಗ ಏಕಲವ್ಯನನ್ನು ವೀರನಾಗಿ, ಗುಣಸಂಪನ್ನನಾಗಿ ಬೆಳೆಸಬೇಕೆಂದು ಅವನ ಪ್ರಯತ್ನ. ಆದರೆ ವಿಧಿ ಈ ಅಪ್ಪ-ಮಗನನ್ನು ಬಹುಕಾಲ ಜೊತೆಯಾಗಿರಲು ಬಿಡಲಿಲ್ಲ. ಏಕಲವ್ಯ ಇನ್ನೂ ಹುಡುಗನಾಗಿದ್ದಾಗಲೆ ಹಿರಣ್ಯಧನು  ವೀರಮರಣವನ್ನಪ್ಪಿದ. ರಾಜ ಭಕ್ತನಾದ ಆತ ಒಮ್ಮೆ ತನ್ನ ಒಡೆಯನ ಸೇವೆಯಲ್ಲಿ ಯುದ್ಧ ಮಾಡುತ್ತಿದ್ದಾಗ ಸತ್ತುಹೋದ . ಅನಂತರ ಏಕಲವ್ಯನೇ ಆ ಕಾಡಿನ ಯಜಮಾನ.

ಜಿಂಕೆಗಳಿಗಾಗಿ ಕೊರಗು

ಕಾಡಿನಲ್ಲಿ ತನ್ನ ಜೊತೆಜೊತೆಗೇ ಆಡಿ ಬೆಳೆದ ಪ್ರಾಣಿಗಳನ್ನು ಕಂಡರೆ ಏಕಲವ್ಯನಿಗೆ ತುಂಬ ಅಭಿಮಾನ. ತನ್ನ ರಕ್ಷಣೆಯಲ್ಲಿರುವ ಈ ಸಾಧು ಪ್ರಾಣಿಗಳನ್ನು ಅಕ್ಕರೆಯಿಂದ ಪಾಲಿಸಬೇಕೆಂಬ ಹಿರಿಯಾಸೆ ಅವನದು. ಅವಕ್ಕೆ ಸ್ವಲ್ಪವೂ ನೋವಾಗಬಾರದು; ಹಾಗೇನಾದರೂ ಆದರೆ, ಅದಕ್ಕೆ ಕಾರಣರಾದವರನ್ನೇ ಕೊಲ್ಲುವಷ್ಟು ಕೋಪ.

ಆ ಕಾಡಿನಲ್ಲಾದರೋ ತೋಳಗಳ ಸಂಖ್ಯೆಯೂ ಹೆಚ್ಚು. ಪುಟ್ಟಪುಟ್ಟ ಜಿಂಕೆಮರಿಗಳನ್ನು ಹಿಡಿದು ತಿನ್ನುವುದರಲ್ಲಿಯೇ ಅವಕ್ಕೆ ತೃಪ್ತಿ. ತೋಳಗಳ ಕೈಗೆ ಸಿಕ್ಕಿಹಾಕಿಕೊಂಡ ಹುಲ್ಲೆಮರಿಗಳು ಕಿರಿಚಿಕೊಳ್ಳುತ್ತಿದ್ದವು, ಅವುಗಳ ಕೂಗನ್ನು ಕೇಳಿ ಏಕಲವ್ಯನಿಗೆ ತುಂಬ ಸಂಕಟ.

‘ಇವನ್ನು ಕಾಪಾಡಲಾರನೇ? ಕಾಡಿನಲ್ಲಿರುವ ಎಲ್ಲ ತೋಳಗಳನ್ನೂ ನಿರ್ಣಾಮಮಾಡಿಬಿಡುವ ಶಕ್ತಿ ನನ್ನ ತೋಳಿಗೆ ಬರಲಾರದೇ?’ ಎಂದು ಚಿಂತಿಸುತ್ತಿದ್ದ, ಕೊರಗುತ್ತಿದ್ದ.

ಬೇಡರಿಗೆ ಬಿಲ್ವಿದ್ಯೆ ಹುಟ್ಟಿನಿಂದಲೇ ಬಂದದ್ದು. ಏಕಲವ್ಯನೂ ಸಮರ್ಥನಾದ ಬಿಲ್ಲುಗಾರನೇ. ಆದರೂ ಅದಕ್ಕಿಂತ ಹೆಚ್ಚಿನ ಶಕ್ತಿಯನ್ನು ಪಡೆಯಬೇಕು, ತನ್ನ ಕಾಡಿನಲ್ಲಿ ತೋಳಗಳೇ ಇಲ್ಲದಂತೆ ಮಾಡಬೇಕು, ಅದು ಅಭಯಾರಣ್ಯವಾಗಬೇಕು ಎಂದು ಅವನ ಆಸೆ.

ಅದೇ ಚಿಂತೆಯಲ್ಲಿ ಅನ್ನ ಸೇರದಾಯಿತು . ಆಟ ಬೇಡವಾಯಿತು. ನಿಂತಲ್ಲಿ ಕುಳಿತಲ್ಲಿ ಏಕಲವ್ಯ ಬಿಲ್ವಿದ್ಯೆಯ ಅಭ್ಯಾಸ ನಡೆಸಿದ.

ಯಾವ ಗುರುಗಳ ಬಳಿ ಹೋಗಲಿ?’

ತನ್ನ ಪುಟ್ಟ ಕಂದನನ್ನೇನೋ ಚಿಂತೆ ಕಾಡಿಸುತ್ತಿದೆ ಎಂದು ಅವನ ತಾಯಿ ಪರಿತಪಿಸಿದಳು.

“ಮಗೂ ಏಕಲವ್ಯ ಒಂದು ಘಳಿಗೆ, ನಿನ್ನ ಬಿಲ್ಲು ಬಾಣಗಳನ್ನು ಕೆಳಗಿಟ್ಟು ಇಲ್ಲಿ ಬಾ” ಎಂದೊಂದು ಸಂಜೆ ಆಕೆ ಮಗನನ್ನು ಕರೆದಳು.

ಹುಲ್ಲೆಯ ಮರಿಯಂತೆ ಓಡಿಬಂದ ಏಕಲವ್ಯ.

‘ಯಾವ ಗುರುಗಳ ಹತ್ತಿರ ಹೋಗಲಿ?’

“ಮಗೂ, ಈಚೆಗೆ ನೀನು ಬಹಳ ಚಿಂತೆಯಲ್ಲಿ ಇರುತ್ತೀಯಲ್ಲ. ಏಕಪ್ಪ?”

“ಏನಿಲ್ಲ ಅಮ್ಮ, ನಿನಗೆ ಹಾಗೆ ಎನ್ನಿಸುತ್ತಿದೆ ಅಷ್ಟೆ.”

“ಇಲ್ಲ ಮಗೂ, ನಿನಗೆ ಏನೋ ಬೇಸರ, ಏನೋ ಚಿಂತೆ. ನನ್ನ ಬಳಿಯೂ ಹೇಳಬಾರದೆ ಏಕಲವ್ಯ?”

“ನಿನ್ನ ಹತ್ತಿರ ಹೇಳಬಾರದ್ದು ಏನಿದೆ ಅಮ್ಮ? ನಿನಗೂ ಚಿಂತೆ ಏಕೆ ಎಂದು ಹೇಳಲಿಲ್ಲ, ಅಷ್ಟೆ. ಅಮ್ಮ ನಮ್ಮ ಜಿಂಕೆಗಳು, ಕರುಗಳು, ಎಷ್ಟು ದುಷ್ಟ ಪ್ರಾಣಿಗಳಿಗೆ ಆಹುತಿಯಾಗುತ್ತವಲ್ಲ? ತೋಳ ಕಣ್ಣಿಗೆ ಕಂಡರೆ ಬಾಣಬಿಟ್ಟು ಕೊಲ್ಲಬಹುದು.  ಆದರೆ ಎಷ್ಟೋ ಬಾರಿ ಕಣ್ಣಿಗೇ ಕಾಣುವುದಿಲ್ಲ. ಅಮ್ಮ. ಕರುಳು ಕತ್ತರಿಸಿದಂತಾಗುತ್ತದೆ, ಆದರೆ ಏನು ಮಾಡಲಿ? ಕಣ್ಣಿಗೆ ಕಾಣದ ತೋಳವನ್ನು ಹೊಡೆಯುವಂತಹ ಶಕ್ತಿ ನನಗೆ ಇದ್ದಿದ್ದರೆ? ಅಷ್ಟು ಚೆನ್ನಾಗಿ ಬಿಲ್ವಿದ್ಯೆ ನನಗೆ ಬಂದಿದ್ದರೆ? ಆದರೆ ನನಗೆ ಹೇಳಿಕೊಡುವವರು ಯಾರಮ್ಮ? ಯಾವ ಗುರುಗಳ ಹತ್ತಿರ ಹೋಗಲಲಿ? ಇದೇ ನನಗೆ ಚಿಂತೆಯಾಗಿದೆ. ಯಾರನ್ನು ಕೇಳಲಿ?”

ಮಗನ ಮಾತನ್ನು ಕೇಳಿ ತಾಯಿಗೆ ಸಂತೋಷವಾಯಿತು. ಕಾಡಿನ ಸಾಧು ಪ್ರಾಣಿಗಳಲ್ಲಿ ಅವನ ಪ್ರೀತಿಯನ್ನು ಕಂಡು ಅವಳ ಹೃದಯ ಉಬ್ಬಿತು. ಜೊತೆಗೇ, ತಂದೆಯನ್ನು  ಕಳೆದುಕೊಂಡು ಚಿಕ್ಕ ವಯಸ್ಸಿನಲ್ಲೆ ಇಂತಹ ಹೊಣೆಯನ್ನು ಹೊತ್ತ ಹುಡುಗನನ್ನು ಕಂಡು ಮರುಕವಾ ಯಿತು.

“ಏಕಲವ್ಯ , ನೀನು ದ್ರೋಣಾಚಾರ್ಯರ ಹೆಸರು ಕೇಳಿಲ್ಲವೇ?

“ಇಲ್ಲವಮ್ಮ, ಯಾರಮ್ಮ ಅವರು?”

ಮಗೂ, ಕಣ್ಣಿಗೆ ಕಾಣದ ತೋಳಗಳನ್ನು ಹೊಡೆಯಬೇಕು ಎನ್ನುವ ನಿನ್ನ ಆಸೆ ಪೂರ್ತಿಯಾಗಬೇಕಾದರೆ ಅವರ ಶಿಷ್ಯನಾಗಬೇಕು ನೋಡು.”

ಏಕಲವ್ಯನಿಗೆ ಸಂತೋಷ, ಉತ್ಸಾಹ , ಭರವಸೆ ಹೃದಯದಲ್ಲಿ ತುಳುಕಾಡಿದವು.

“ಅವರು ಎಲ್ಲಿದ್ದಾರೆ ಹೇಳಮ್ಮ. ಅವರ ಶಿಷ್ಯನಾಗುತ್ತೇನೆ. ”

“ಅವರು ಹಸ್ತಿನಾವತಿಯಲ್ಲಿದ್ದಾರೆ ಮಗು. ಭರತವಂಶದ ರಾಜರ ರಾಜಧಾನಿಯಲ್ಲಿ ರಾಜಪುತ್ರರಿಗೆ ಬಿಲ್ಲಿನ ವಿದ್ಯೆ ಹೇಳಿಕೊಡುತ್ತಿದ್ದಾರೆ. ಧೃತರಾಷ್ಟ್ರ ಮಹಾರಾಜನ ಮಕ್ಕಳು ಕೌರವರಿಗೆ, ಅವನ ತಮ್ಮನ ಮಕ್ಕಳು ಪಾಂಡವರಿಗೆ ಅವರು ಗುರುಗಳು. ಭೀಷ್ಮಾಚಾರ್ಯರ ಹೆಸರು ಕೇಳಿದ್ದೀಯಲ್ಲ, ಗಂಗಾದೇವಿಯ ಮಗ? ಅವರ ಜೊತೆಗೆ ಯುದ್ಧಮಾಡುವುದೇ ಯಾರಿಗೂ ಸಾಧ್ಯವಿಲ್ಲ ಎನ್ನುತ್ತಾರೆ. ಅವರೇ ದ್ರೋಣಾಚಾರ್ಯರನ್ನು ಆರಿಸಿದರಂತೆ, ರಾಜಕುಮಾರರಿಗೆ ಬಿಲ್ಲಿನ ವಿದ್ಯೆ ಹೇಳಿಕೊಡುವುದಕ್ಕೆ. ಅವರ ಕೀರ್ತಿ ಕೇಳಿ ಬೇರೆ ರಾಜ್ಯಗಳ ರಾಜಕುಮಾರರೂ ಬಂದಿದ್ದಾರೆಂತೆ ವಿದ್ಯಾಭ್ಯಾಸಕ್ಕೆ.”

“ಭೀಷ್ಮಾಚಾರ್ಯರು ಅವರನ್ನು ಹೇಗೆ ಹುಡುಕಿದರಮ್ಮಕ?”

“ಅವರೇ ಹಸ್ತಿನಾವತಿಗೆ ಬಂದರಂತೆ ಮಗು. ಅವರು ಭರದ್ವಾಜ ಋಷಿಯ ಮಗ. ಅವರ ತಂದೆಯೂ ಅವರಿಗೆ ಬಿಲ್ಲಿನ ವಿದ್ಯೆ ಕಲಿಸಿದರು. ಜೊತೆಗೆ ಪರಶುರಾಮರ ಹೆಸರು ಕೇಳಿದ್ದೀಯಲ್ಲ, ಅವರ ಶಿಷ್ಯರೂ ಆಗಿದ್ದರು. ದ್ರೋಣಾಚಾರ್ಯರ ಹಾಗೆ ಬಿಲ್ವಿದ್ಯೆ ತಿಳಿದವರೇ ಹೆಚ್ಚು ಜನ ಇಲ್ಲ ಎನ್ನುತ್ತಾರೆ. ಪಾಪ, ಬಹಳ ಬಡತನದಲ್ಲಿದ್ದರಂತೆ. ಅಲ್ಲಲ್ಲಿ ಸುತ್ತಾಡಿ ಹಸ್ತಿನಾವತಿಗೆ ಬಂದರು.  ಭೀಷ್ಮರಿಗೆ ಅವರ ವಿಷಯ ತಿಳಿದದ್ದು ಒಂದು ಸ್ವಾರಸ್ಯವಾದ ಕಥೆ.”

ಆ ಸ್ವಾರಸ್ಯದ ಕಥೆಯನ್ನು  ಏಕಲವ್ಯನ ತಾಯಿ ಅವನಿಗೆ ಹೇಳಿದಳು.

ದ್ರೋಣಾಚಾರ್ಯರು

ಕೌರವ-ಪಾಂಡವ ರಾಜಕುಮಾರರು ಇನ್ನೂ ಎಳೆಯರಾಗಿದ್ದ ಕಾಲವದು.  ಒಂದು ದಿನ ಅವರೆಲ್ಲರೂ ಆಡುತ್ತಿದ್ದ ಚೆಂಡು ಬಾವಿಯೊಳಕ್ಕೆ ಬಿದ್ದುಹೋಯಿತು. ರಾಜಕುಮಾರರು ಎಷ್ಟೇ ಪ್ರಯತ್ನಪಟ್ಟರೂ ಅದನ್ನು ಹೊರ ತೆಗೆಯಲು ಸಾಧ್ಯವೇ ಆಗಲಿಲ್ಲ. ತಮ್ಮ  ನೆರವಿಗೆ ಯಾರಾದರೂ ಸಿಕ್ಕಬಹುದೇ ಎಂದು ಸುತ್ತಮುತ್ತ ನೋಡಲಾರಂಭಿಸಿದರು. ಬಾವಿಗೆ ಸ್ವಲ್ಪ ದೂರದಲ್ಲೇ ತೇಜಸ್ವಿ ಬ್ರಾಹ್ಮಣರೊಬ್ಬರು ನಿಂತಿದ್ದರು. ಕೃಶಕಾಯರಾಗಿದ್ದು, ಕಪ್ಪಗಿದ್ದರೂ, ಧೀಮಂತ ತೇಜಸ್ಸಿನಿಂದ ಬೆಳಗುತ್ತಿದ್ದರು.

ಈ ತೇಜಸ್ವಿ ಹಿರಿಯರೇ ದ್ರೋಣಾಚಾರ್ಯರು. ಹುಡುಗರ ನಮಸ್ಕಾರವನ್ನು ಸ್ವೀಕರಿಸಿ, ತೊಂದರೆ ಏನೆಂದು ವಿಚಾರಿಸಿದರು. ಹುಡುಗರು ತಮ್ಮ ಕಷ್ಟವನ್ನು ಹೇಳಿಕೊಂಡು, ತಮಗೆ ಸಹಾಯ ಮಾಡಬೇಕೆಂದು ಕೇಳಿದರು.

ದ್ರೋಣಾಚಾರ್ಯರು ಒಂದು ಹಿಡಿ ಹುಲ್ಲನ್ನು ಅಭಿಮಂತ್ರಿಸಿ ಮೊದಲ ದರ್ಭೆಯನ್ನು ಚೆಂಡಿಗೆ ಗುರಿಯಿಟ್ಟು ಎಸೆದರು.  ಅನಂತರ ಒಂದಾದ ಮೇಲೆ ಒಂದರಂತೆ ದರ್ಭೆಗಳನ್ನು ಎಸೆಯುತ್ತಾ ಹೋದರು. ಅವುಗಳು ಒಂದಕ್ಕೊಂದು ಅಂಟಿಕೊಂಡು, ಬಾವಿಯ ಮೇಲಿನವರೆಗೆ ಬಂದಾಗ, ದರ್ಭೆಗಳನ್ನು ಎಳೆದರು, ಚೆಂಡನ್ನು ಮೇಲಕ್ಕೆತ್ತಿ ತೆಗೆದುಕೊಟ್ಟರು. ಹುಡುಗರಿಗೆ ಆಶ್ಚರ್ಯ , ಸಂತೋಷ. ಇದು ಸಾಧ್ಯ ಎಂದು ನಂಬುವುದೇ ಅವರಿಗೆ ಕಷ್ಟವಾಯಿತು.

“ಮಹಾಬ್ರಾಹ್ಮಣ ನಿಮ್ಮ ಹೆಸರೇನು? ಎಲ್ಲಿಂದ ಬಂದಿರಿ?” ಎಂದು ಹುಡುಗರೆಲ್ಲ ಕೇಳಿದರು.

ದ್ರೋಣಾಚಾರ್ಯರು, “ನೀವು ಕಂಡುದನ್ನು ಕಂಡಂತೆಯೇ ನಿಮ್ಮ ತಾತ ಭೀಷ್ಮರಿಗೆ ಬಣ್ಣಿಸಿ, ಅವರಿಗೆ ಎಲ್ಲವೂ ಗೊತ್ತಾಗುವುದು”  ಎಂದು ಹೇಳಿದರಂತೆ.

ತತ್‌ಕ್ಷಣವೇ ರಾಜಕುಮಾರರೆಲ್ಲ ತಾತ ಭೀಷ್ಮರಲ್ಲಿಗೆ ಓಡಿದರು. ತಾವು ಕಂಡ ಮೇಧಾವಿ ಬ್ರಾಹ್ಮಣರ ವಿಚಾರವನ್ನು ಅತಿ ಉತ್ಸಾಹದಿಂದ ವಿವರಿಸಿದರು.

ಆ ಹುಡುಗರೆಲ್ಲ ದೊಡ್ಡವರಾದಾಗ ತಮ್ಮ ರಾಜ್ಯದ ಆಡಳಿತದ ಭಾರವನ್ನು ಹೊರಬೇಕಾದವರು. ಶತ್ರುಗಳಿಂದ ತಮ್ಮ ರಾಜ್ಯಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುವ ಹೊಣೆ ಅವರದಾಗುತ್ತದೆ. ಭೀಷ್ಮಾಚಾರ್ಯರಿಗೆ ಇದೇ ಯೋಚನೆ-ಈ ರಾಜಕುಮಾರರಿಗೆ ಬಿಲ್ವಿದ್ಯೆ ಕಲಿಸುವ ಗುರುವನ್ನು ಹೇಗೆ ಬರಮಾಡಿಕೊಳ್ಳುವುದು? ದ್ರೋಣಾಚಾರ್ಯರ ವಿಷಯ ಅವರು ಆಗಲೇ ಕೇಳಿದ್ದರು, ಅವರು ಭರದ್ವಾಜರ ಮಗ,  ಪರಶುರಾಮರ ಶಿಷ್ಯರು, ಅಸಾಧಾರಣ ಬಿಲ್ಗಾರ ಎಂದು ತಿಳಿದಿದ್ದರು. ಮಕ್ಕಳಲ್ಲಿ ಇಷ್ಟೊಂದು ಉತ್ಸಾಹದ ಬಗ್ಗೆ ಚಿಮ್ಮಿಸಿರುವಾತ ದ್ರೋಣರೇ ಎಂದು ಅವರಿಗೆ ಖಚಿತವಾಯಿತು. ತಕ್ಷಣ ಎದ್ದು, ತಾವೇ ಅಲ್ಲಿಗೆ ಹೋಗಿ ದ್ರೋಣರನ್ನು ಸತ್ಕರಿಸಿದರು. ಪಾಂಡವ ಕೌರವ ರಾಜಕುಮಾರರಿಗೆ ಗುರುಗಳಾಗಿ ಅಲ್ಲಿಯೇ ನೆಲೆಸಬೇಕೆಂದು ಕೇಳಿಕೊಂಡರು.

ಭೀಷ್ಮರ ಮಾತಿಗೆ ಸಮ್ಮತಿಸಿ, ದ್ರೋಣಾಚಾರ್ಯರು ಹಸ್ತಿನಾವತಿಯಲ್ಲಿ ನೆಲೆಸಿದರು.

ಅವರೇ ನನ್ನ ಗುರು

ದ್ರೋಣಾಚಾರ್ಯರ ವಿಷಯವನ್ನೆಲ್ಲ ತಾಯಿಯಿಂದ ಕೇಳುತ್ತಿದ್ದಂತೆ , ಏಕಲವ್ಯನ ಹುಮ್ಮಸ್ಸು ಇಮ್ಮಡಿಸಿತು.

“ಓಹ್‌! ಎಂತಹ ಪುಣ್ಯವಂತರಮ್ಮ ಆ ಕೌರವ-ಪಾಂಡವ ರಾಜಕುಮಾರರು! ಆಚಾರ್ಯ ದ್ರೋಣರು ನನಗೂ ಬಿಲ್ವಿದ್ಯೆ ಹೇಳಿಕೊಡುವರೇನಮ್ಮ?” ತಾಯಿಯನ್ನು ಹಿಡಿದು ಜಗ್ಗಿ ಕೇಳಿದ ಏಕಲವ್ಯ.

“ಹೋಗಿ ಬಾ ಮಗು ನಿನಗೆ ಶುಭವಾಗಲಿ. ಅವರು ಪೂಜ್ಯರು, ಹಿರಿಯರು ಎಂಬುದನ್ನು ಮರೆಯಬೇಡ. ಅವರ ಘನತೆಗೆ ಸಲ್ಲುವ ರೀತಿಯಲ್ಲಿ ನೀನು ನಡೆದುಕೊಳ್ಳಬೇಕು. ಎದಿರಾಡಬೇಡ. ನಮ್ರತೆಯಿಂದ ಕೆಲಸ ಸಾಧಿಸಿಕೊಂಡು ಬಾ”  ಎಂದು ಹೇಳಿ ಮಗನನ್ನು ಆಶೀರ್ವದಿಸಿ ಕಳುಹಿಸಿಕೊಟ್ಟಳು.

“ಗುರು, ದ್ರೋಣರಂತಹ ಆಚಾರ್ಯ ಪುರುಷರನ್ನು ಕಾಣುವೆ , ಅವರೇ ನನ್ನ ಗುರು , ಅವರಿಂದ ವಿದ್ಯೆ ಕಲಿಯುವೆ” ಎಂದು ತುಂಬ ಉತ್ಸಾಹದಿಂದ,  ಸಂತಸದಿಂದ ಹಸ್ತಿನಾಪುರಕ್ಕೆ ಏಕಲವ್ಯ ಪ್ರಯಾಣ ಮಾಡಿದ.

ನೀನೂ ನನ್ನ ಶಿಷ್ಯನೇ

ಪಟ್ಟಣದ ಹೊರವಲಯದಲ್ಲೇ ಅವನಿಗೆ ಗುರುಗಳ ದರ್ಶನವಾಯಿತು. ದ್ರೋಣಾಚಾರ್ಯರು ಶಿಷ್ಯರಿಗೆಲ್ಲ ಅಸ್ತ್ರವಿದ್ಯೆಯ ಮೊದಲ ಪಾಠಗಳನ್ನು ಕಲಿಸುತ್ತಿದ್ದರು. ಆ ಘಳಿಗೆಯಲ್ಲಿ ಅವರ ಬಳಿ ಹೇಗೆ ಹೋಗುವುದು ಎಂದು ಏಕಲವ್ಯನಿಗೆ ಸಂಕೋಚ. ಸಮೀಪದಲ್ಲಿ ನಿಂತು ಕಾಯಲಾರಂಭಿಸಿದ. ದ್ರೋಣಾಚಾರ್ಯರ ಸುತ್ತ ಶಿಷ್ಯರು. ದ್ರೋಣಾಚಾರ್ಯರು ಒಬ್ಬ ಶಿಷ್ಯನಿಗೆ ಎಲ್ಲವನ್ನೂ ಸ್ಪಷ್ಟವಾಗಿ, ಸುಲಭವಾಗಿ ತಿಳಿಸಿಕೊಡುತ್ತಿದ್ದರು. ಹೇಗೆ ನಿಲ್ಲಬೇಕು, ಯಾವ ಕಾಲಿನ ಮೇಲೆ ಶರೀರದ ಭಾರ ಇರಬೇಕು, ಕೈಗಳು ಹೇಗಿರಬೇಕು, ಬೆರಳುಗಳು ಹೇಗಿರಬೇಕು, ಬಾಣವನ್ನು ಹೇಗೆ ಹೂಡಬೇಕು, ಗುರಿಯನ್ನು ಹೇಗೆ ನೋಡಬೇಕು, ಮನಸ್ಸನ್ನು ಹೇಗೆ ಒಂದೇ ಕಡೆ ನಿಲ್ಲಿಸಬೇಕು, ಬಿಲ್ಲಿನ ದಾರವನ್ನು ಹೇಗೆ , ಎಷ್ಟು ದೂರ ಎಳೆಯಬೇಕು, ಬಾಣವನ್ನು  ಯಾವಾಗ ಬೆರಳಿನಿಂದ ಬಿಡಬೇಕು – ಹೀಗೆ ಒಂದೊಂದು ಅಂಶವನ್ನೂ ಹೇಳಿಕೊಡುತ್ತಿದ್ದರು. ಅನಂತರ ಅವನು ಬಾಣ ಬಿಡುವನು. ಅವನು ಎಲ್ಲಿ ತಪ್ಪು ಮಾಡಿದ, ಯಾವುದನ್ನು ಸರಿಯಾಗಿ ಮಾಡಿದ ಎಂದು ಅವರು ವಿವರಿಸುವರು. ಮತ್ತೆ ಅಭ್ಯಾಸ. ಅನಂತರ ಇನ್ನೊಬ್ಬ ಶಿಷ್ಯ – ಹೀಗೆ ಪಾಠ ನಡೆಯುತ್ತಿತ್ತು.

ಏಕಲವ್ಯ ಮೈಯೆಲ್ಲ ಕಣ್ಣಾಗಿ ನೋಡಿದ, ಕಿವಿಯಾಗಿ ಕೇಳಿದ. ಮೈಯಲ್ಲಿ ಮಿಂಚು ಹರಿದಂತಾಯ್ತು. ಹೊಸ ವಿಷಯವನ್ನು ತಿಳಿದ ಸಂಭ್ರಮ ಅವನಿಗೆ. “ಓಹ್‌! ಏನೂ ತಿಳಿಯದವನನ್ನೂ ಉತ್ತಮ ಬಿಲ್ಗಾರನನ್ನಾಗಿ ಮಾಡುವ ಜಾಣ್ಮೆ ಈ ಗುರುವಿನದು . ಎಷ್ಟು ಸುಲಭವಾಗಿ, ಚೆನ್ನಾಗಿ ಹೇಳಿಕೊಡುತ್ತಾರೆ!” ಎಂದು ಮನಸ್ಸಿನಲ್ಲೆ ಮೆಚ್ಚಿಕೊಂಡ.

ತಾಯಿ ನೀಡಿದ ಎಚ್ಚರಿಕೆಯನ್ನು ಮರೆಯದೆ, ಸಮಯಕಾದು ಗುರು ದ್ರೋಣರನ್ನು ಏಕಲವ್ಯ ಭೇಟಿ ಮಾಡಿದ. ಮೈ ಮನಸ್ಸನ್ನೆಲ್ಲ ಗುರುವಿನ ಪಾದದಡಿ ಅರ್ಪಿಸಿದಂತೆ ಉದ್ದಂಡ ನಮಸ್ಕಾರ ಮಾಡಿದ. ವಿನಯವೇ ಮೂರ್ತಿವೆತ್ತಂತಿದ್ದ ಈ ಕಾಡು ಬಾಲಕನನ್ನು ದ್ರೋಣಾಚಾರ್ಯರು ಎರಡೂ ಕೈಗಳಲ್ಲಿ ಹಿಡಿದೆಬ್ಬಿಸಿ ಆಶೀರ್ವದಿಸಿದರು. ಏಕಲವ್ಯ ತನ್ನ ಪರಿಚಯವನ್ನು ಹೇಳಿಕೊಂಡ.

“ಬಿಲ್ವಿದ್ಯೆಯನ್ನು ಕರತಲಾಮಲಕ ಮಾಡಿಕೊಳ್ಳಬೇಕೆಂಬ ಹೆಬ್ಬಯಕೆ ನನ್ನದು. ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ಈ ವಿದ್ಯೆಯನ್ನು ಹೇಳಿಕೊಡಿ ಗುರುದೇವ” ಎಂದು ಬೇಡಿಕೊಂಡ.

ಈ ಪುಟ್ಟ ಬಾಲಕನ ಹಿರಿಯಾಸೆ ಕಂಡು ದ್ರೋಣಾಚಾರ್ಯರಿಗೂ ಮನ ಕರಗಿತು.

ಆದರೂ ಪಾಂಡವ-ಕೌರವ ರಾಜಕುಮಾರರಿಗೆ ವಿದ್ಯೆ ಕಲಿಸುವ ಗುರುತರ ಜವಾಬ್ದಾರಿ ಹೊತ್ತ ಅವರಿಗೆ ಬೇರೆ ಶಿಷ್ಯರನ್ನು ಸ್ವೀಕರಿಸಿ ಪಾಠ ಹೇಳುವಷ್ಟು ಕಾಲಾವಕಾಶವಿರಲಿಲ್ಲ . ಬೇಡರ ಬಾಲಕನಿಗೆ ರಾಜಕುಮಾರರೊಡನೆ ಪಾಠ ಹೇಳಿದರೆ ಹೇಗೋ ಏನೋ ಎಂಬ ಅಳುಕು ಬೇರೆ.

ಈ ಎಲ್ಲ ಕಾರಣಗಳಿಂದ ಅವನನ್ನು ಅಲ್ಲಿಯೇ ಇಟ್ಟುಕೊಳ್ಳುವುದು ಸರಿಯಲ್ಲವೆಂದು ದ್ರೋಣಾಚಾರ್ಯರು ಭಾವಿಸಿದರು. “ಮಗೂ, ಈ ವಿದ್ಯೆ ಕಲಿಯಲು ನಿನಗೆ ಕಷ್ಟವಾಗಲಾರದು. ಹುಟ್ಟಿನಿಂದಲೇ ನೀನು ಬಿಲ್ಗಾರ. ನೀನು ಕಾಡಿಗೆ ಹಿಂತಿರುಗಿ ಶ್ರದ್ಧೆಯಿಂದ ಅಭ್ಯಾಸ ಮಾಡು, ನೀನೂ ನನ್ನ ಶಿಷ್ಯನೇ”  ಎಂದರು.

ಏಕಲವ್ಯನಿಗಾದರೋ ಆ ಭರವಸೆಯೇ ಶ್ರೀರಕ್ಷೆಯಾಯಿತು. ‘ಗುರುವಿನ ಅನುಗ್ರಹ ನನಗಿದೆ. ಇನ್ನೇನು ಬೇಕು? ಅಭ್ಯಾಸದಿಂದ ವಿದ್ಯೆ ಕಲಿಯಬಲ್ಲೆ’ ಎಂಬ ದೃಢ ವಿಶ್ವಾಸ ಅವನಿಗೆ. “ತಮ್ಮ ಮಾತಿನಂತೆ ನಡೆಯುತ್ತೇನೆ, ನನ್ನ ಅಭ್ಯಾಸ ಸಾರ್ಥಕವಾಗಲಿ ಎಂದು ಆಶೀರ್ವದಿಸಿ” ಎಂದು ದ್ರೋಣಾಚಾರ್ಯರ ಕಾಲಿಗೆರಗಿದ. ದ್ರೋಣಾಚಾರ್ಯರು, “ನಿನ್ನ ಇಷ್ಟದಂತೆ ಬಿಲ್ವಿದ್ಯೆ ಸಿದ್ಧಿಸಲಿ” ಎಂದು ಆಶೀರ್ವದಿಸಿದರು.

ಪ್ರತಿಮೆಯ ಮುಂದೆ

ಏಕಲವ್ಯ ಕಾಡಿಗೆ ಹಿಂದಿರುಗಿದ.  ಅವನಿಗೆ ಹೊಸದೇನನ್ನೋ ಸಾಧಿಸಿದ ಭಾವ. ಅಕ್ಕರೆಯಿಂದ ಗುರು ದ್ರೋಣರ ಪುಟ್ಟ ಪ್ರತಿಮೆಯೊಂದನ್ನು ಮಾಡಿದ. ಕಾಡಿನಲ್ಲಿ ದೊರಕುವ ಬಗೆಬಗೆಯ ಹೂವಿನಿಂದ, ಹಕ್ಕಪುಕ್ಕಗಳಿಂದ ಆ ಪ್ರತಿಮೆಗೆ ಅಲಂಕಾರ ಮಾಡಿದ. ಆ ಪ್ರತಿಮೆಯೇ ಅವನ ಪಾಲಿನ ದ್ರೋಣಾಚಾರ್ಯರು.

ಏಕಲವ್ಯ ಪ್ರತಿ ಪ್ರಾತಃಕಾಲ ಬೇಗನೆ ಏಳುವನು. ಸ್ನಾನ ಮಾಡಿ ಶುಚಿಯಾಗಿ,  ಶುಭ್ರ ಮನಸ್ಸಿನಿಂದ ಗುರುಗಳ ಪ್ರತಿಮೆಗೆ ಪೂಜೆ ಮಾಡಿ ನಮಸ್ಕಾರ ಮಾಡುವನು. ಹಸ್ತಿನಾವತಿಯಲ್ಲಿ ದ್ರೋಣಾಚಾರ್ಯರು ತಮ್ಮ ಶಿಷ್ಯರಿಗೆ ಬಿಲ್ವಿದ್ಯೆ ಕಲಿಸುತ್ತಿದ್ದ ರೀತಿ, ಅವರು ರಾಜಕುಮಾರರಿಗೆ ಆಡಿದ ಮಾಡುಗಳು , ಮಾಡಿದ ಮಾರ್ಗದರ್ಶನ ಅವನ ಸ್ಮರಣೆಯಲ್ಲಿ ಸ್ಥಿರವಾಗಿ ಉಳಿದಿದ್ದವು . ಅವನ್ನು ನೆನೆಸಿಕೊಂಡು , ಮನಸ್ಸಿಟ್ಟು ಬಿಲ್ವಿದ್ಯೆಯನ್ನು ಅಭ್ಯಾಸ ಮಾಡುವನು. ದಿನದಿನಕ್ಕೆ ಅವನ ಸಾಮರ್ಥ್ಯ ಹೆಚ್ಚಿತು.

ದ್ರೋಣಾಚಾರ್ಯರು ಎದುರಿಗಿದ್ದು ಅರ್ಜುನನಿಗೆ ಕಲಿಸಿದ ವಿದ್ಯೆಯನ್ನೆಲ್ಲ, ಏಕಲವ್ಯ ಸ್ವಪ್ರಯತ್ನದಿಂದ ಪರೋಕ್ಷವಾಗಿಯೇ ಗುರು ದ್ರೋಣರ ಹೆಸರಿನಲ್ಲಿ ಕಲಿತ . ಯಾವುದಾದರೂ ಗುರಿ ಸಾಧಿಸದೆ ಹೋದರೆ, ಮೂರ್ತಿಯ ಬಳಿ ಬಂದು ಕಣ್ದುಂಬಿ ಹೇಗೆಂದು ಕೇಳುವುದು, ಉತ್ತರ ತನ್ನ ಮನಸ್ಸಿನಲ್ಲಿ ಮೂಡುವವರಿಗೆ ಅದರಲ್ಲಿಯೆ ಮನಸ್ಸು ನಿಲ್ಲಿಸುವುದು, ಉತ್ತರ ಹೊಳೆಯುತ್ತಲೆ ಹಿಂದಿರುಗಿ ಪ್ರಯತ್ನ ಮುಂದುವರಿಸುವುದು. ಹೀಗೆಯೇ ನಡೆಯಿತು ಏಕಲವ್ಯನ ಅಭ್ಯಾಸ.

ಯಾರು ನಿಪುಣ?

ಒಮ್ಮೆ ಕೌರವರೂ ಪಾಂಡವರೂ ಬೇಟೆಗಾಗಿ ಕಾಡಿಗೆ ತೆರಳಿದರು. ಅವರ ತಂಡದೊಡನೆ ತೆರಳಿದ್ದ ನಾಯಿ ಮುಂದೆ ಮುಂದೆ ಓಡುತ್ತಿತ್ತು.

ಹುಲಿಯ ಚರ್ಮದುಡುಗೆ ಉಟ್ಟು, ಕವಡೆಗಳಿಂದ ಅಲಂಕರಿಸಿಕೊಂಡಿದ್ದ ಏಕಲವ್ಯ ಅಭ್ಯಾಸದಲ್ಲಿ ನಿರತನಾಗಿದ್ದ.

ಮುಂದೆ ಓಡಿಬಂದ ನಾಯಿ ಅವನನ್ನು ನೋಡಿತು. ಅದು ಒಂದೇ ಸಮನೆ ಬೊಗಳಲಾರಂಭಿಸಿತು.

ಅದನ್ನು ಕೇಳಿದ ಏಕಲವ್ಯನಿಗೂ ತನ್ನ ಬಿಲ್ವಿದ್ಯೆಯನ್ನು ಪ್ರದರ್ಶಿಸುವ ಅಪೇಕ್ಷೆಯಾಗಿರಬೇಕು. ಆ ನಾಯಿಯ ಧ್ವನಿಯನ್ನನುಸರಿಸಿ ಒಂದರ ಹಿಂದೆ ಒಂದರಂತೆ ಬಾಣಗಳ ಮಾಲೆಯನ್ನೇ ಅದರ ಬಾಯೊಳಗೆ ತುಂಬಿದ. 

ಎಡಗೈಯಲ್ಲಿ ಹಿಡಿದ ಬಾಣದಿಂದ ಬಲ ಹೆಬ್ಬೆರಳನ್ನು ತುಂಡರಿಸಿದ.

 ನಾಯಿ ರಾಜಕುಮಾರರಿದ್ದ ಕಡೆಗೆ ಓಡಿತು.

ತೆರೆದ ಬಾಯಿಯನ್ನು ನಾಯಿ ಮುಚ್ಚುವುದರೊಳಗೆ ಇಷ್ಟೊಂದು ಬಾಣಗಳನ್ನು ಅದರ ಬಾಯಲ್ಲಿ ತುಂಬಿದ್ದ ಹಸ್ತಕೌಶಲ ಕಂಡು ಕುರುವಂಶದ ರಾಜಕುಮಾರರೆಲ್ಲ ಆಶ್ಚರ್ಯಭರತಿರಾದರು. ಈ ಚತುರ ಧನುರ್ಧರ ಯಾರು ಇರಬಹುದು ಎಂದು ಅರಿಯುವ ಕುತೂಹಲವಾಯಿತು.

ಅರ್ಜುನನಿಗಂತೂ ಆಶ್ಚರ್ಯದ ಜೊತೆಗೆ ಆತಂಕ. ಪ್ರಪಂಚದಲ್ಲಿ ತನ್ನ ಸಮಾನರಾದ ಬಿಲ್ಗಾರರಿಲ್ಲ ಎಂದು ಕೀರ್ತಿ ಪಡೆಯಬೇಕು ಎಂದು ಅವನ ಆಸೆ. ಆಗಲೆ ಅವನ ಕೈಚಳಕದ ಖ್ಯಾತಿ ದೇಶದೇಶಗಳಿಗೆ ಹಬ್ಬುತ್ತಿತ್ತು. ಈಗ ಇಂತಹ ಬಿಲ್ವಿದ್ಯೆಯನ್ನು ಕಣ್ಣಾರೆ ಕಂಡು ಅವನಿಗೆ ಆತಂಕವಾಯಿತು – ತನ್ನನ್ನು ಮೀರಿಸುವ ಬಿಲ್ಲಾಳು ಇರಬಹುದೆ ಎಂದು.

ರಾಜಕುಮಾರರು ನಾಯಿಯ ಬಾಯಿಗೆ ಬಾಣಗಳನ್ನು ಹೊಡೆದ ಬಿಲ್ಗಾರನನ್ನು ಹುಡುಕಿಕೊಂಡು ಹೊರಟರು. ಏಕಲವ್ಯನನ್ನು ಕಂಡರು.

ಇಬ್ಬರು ಶಿಷ್ಯರು

ಬಣ್ಣ ಕಪ್ಪು, ಆದರೆ ಭವ್ಯವಾದ ಆಕೃತಿ . ಏಕಲವ್ಯ, ಕೈಯಲ್ಲಿ ಬಿಲ್ಲನ್ನು ಹಿಡಿದು ನಿಂತಿದ್ದ . ಬಲಗೈಯಲ್ಲಿ ಬಾಣ.

ಈ ಬಾಲನೇ ಬಾಣಗಳನ್ನು ಬಿಟ್ಟವನು? ಅವನಿಗೆ ಈ ವಿದ್ಯೆ ಹೇಗೆ ಸಾಧಿಸಿತು? ಇಷ್ಟೊಂದು ಸುಲಲಿತವಾಗಿ ಅದ್ಭುತವಾಗಿ ಬಾಣಬಿಡಲು ಈ ದಟ್ಟಾರಣ್ಯದ ಮಧ್ಯದಲ್ಲಿ ಇವನಿಗೆ ಕಲಿಸಿಕೊಟ್ಟವರಾರು? – ಹಲವಾರು ಪ್ರಶ್ನೆಗಳು ಅವರನ್ನು ಕೆಣಕಿದವು.

ಅರ್ಜುನನ ಚಡಪಡಿಕೆಯಂತೂ ಹೇಳತೀರದು. ತನಗೆ ಸರಿಸಮನಾಗಿ ನಿಲ್ಲಬಲ್ಲ ಈ ವೀರನನ್ನು ಕಂಡು, ಬೇಟೆಯಲ್ಲಿ ಅವನಿಗಿದ್ದ ಉತ್ಸಾಹವೆಲ್ಲ ಕುಗ್ಗಿಹೋಯಿತು.

ರಾಜಕುಮಾರರು ಏಕಲವ್ಯನನ್ನು ಕೇಳಿದರು, ನಾಯಿಯ ಬಾಯಿಯ ಒಳಕ್ಕೆ ಹೋಗುವಂತೆ ಬಾಣ ಬಿಟ್ಟವನು ನೀನೇ?”

“ಹೌದು ಎಂದ ಏಕಲವ್ಯ.

“ನೀನು ಯಾರು? ನಿನ್ನ ಹೆಸರೇನು?”

“ನಿಷಾಧ ರಾಜನಾದ ಹಿರಣ್ಯಧನುವಿನ ಮಗ ನಾನು. ಈ ಅರಣ್ಯಕ್ಕೆ ಅಧಿಪತಿ. ನನ್ನ ಹೆಸರು ಏಕಲವ್ಯ.”

“ಅಯ್ಯಾ, ನಿನ್ನ ಅಸ್ತ್ರವಿದ್ಯೆ ಅದ್ಬುತವಾಗಿದೆ. ನಿನ್ನ ಗುರುಗಳು ಯಾರು?”

“ನನ್ನ ಗುರು ದ್ರೋಣಾಚಾರ್ಯರು” ಏಕಲವ್ಯ ನಮ್ರತೆಯಿಂದ ನುಡಿದ.

ದ್ರೋಣಾಚಾರ್ಯರ ಹೆಸರು ಕೇಳಿದೊಡನೆಯೇ ಅರ್ಜುನ ಚಕಿತನಾದ. ಇದು ನಿಜವೇ? ತನ್ನ ಒಲವಿನ ಗುರು, ಈ ಅನಾಗರಿಕ ಬಾಲಕನಿಗೆ ಇಷ್ಟೊಂದು ವಿದ್ಯೆ ಕಲಿಸಿದರೇ? ಹಾಗಾದರೆ ಗುರುಗಳು ತನಗೆ ನೀಡಿದ ವಚನ ಏನಾಯಿತು?

ಗುರುಗಳ ಭರವಸೆ

ಅರ್ಜುನನನ್ನು ಕಂಡರೆ ದ್ರೋಣರಿಗೆ ವಿಶೇಷ ಪ್ರೇಮ. ಶಿಷ್ಯರೆಲ್ಲರ ಬಗ್ಗೆಯೂ ಅವರಿಗೆ ಅಭಿಮಾನವಿತ್ತು. ಆದರೂ ವಿದ್ಯೆ ಕಲಿಯುವುದರಲ್ಲಿ ಅರ್ಜುನ ತೋರಿಸಿದ ಅಸಾಧಾರಣ ಆಸಕ್ತಿ ಅವರನ್ನು ಸುಪ್ರೀತರನ್ನಾಗಿಸಿತ್ತು.

ದ್ರುಪದ ಎಂಬ ರಾಜ ಅವರ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ. ತಾನು ರಾಜನಾದಾಗ ಅವರಿಗೆ ಸಹಾಯ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದ. ಆದರೆ, ಬಡವರಾಗಿದ್ದ ದ್ರೋಣಾಚಾರ್ಯರು ಅವನನ್ನು ನೋಡಲು ಹೋದಾಗ, “ರಾಜನಿಗೆ ನಿನ್ನಂತಹ ದರಿದ್ರನ ಸಹವಾಸವೆ?” ಎಂದು ಹೇಳಿ ಅಪಮಾನ ಮಾಡಿದ್ದ. ಆಚಾರ್ಯರು ಕೋಪದಿಂದ, “ಒಂದಲ್ಲ ಒಂದು ದಿನ ನಿನ್ನನ್ನು ನನ್ನ ಶಿಷ್ಯನೊಬ್ಬನಿಂದ ಸೋಲಿಸಿ ಕಟ್ಟಿಸಿ ತರಿಸುತ್ತೇನೆ” ಎಂದು ಪ್ರತಿಜ್ಞೆ ಮಾಡಿದ್ದರು. ಈ ವಿಷಯವೇ ಅವರ ಮನಸ್ಸನ್ನು ಕೊರೆಯುತ್ತಿತ್ತು. ಒಂದು ದಿನ ಅವರು ಶಿಷ್ಯರನ್ನೆಲ್ಲ ಹತ್ತಿರ ಕರೆದು,

“ಮಕ್ಕಳಿರಾ, ನಿಮಗೆ ವಿದ್ಯೆ ಕಲಿಸುವ ದೊಡ್ಡ ಜವಾಬ್ದಾರಿ ನನ್ನದು. ಅದನ್ನು ನಾನು ಯಾವುದೇ ಚ್ಯುತಿಬಾರದಂತೆ ನೆರವೇರಿಸುವೆ”  ಎಂದರು. ಅನಂತರ, “ನನ್ನ ಹೃದಯದಲ್ಲಿ ಒಂದು ಅಭಿಲಾಷೆಯಿದೆ. ನೀವು ಅಸ್ತ್ರವಿದ್ಯೆಯನ್ನು ಪೂರ್ಣವಾಗಿ ಕಲಿತನಂತರ ಅದನ್ನು ಈಡೇರಿಸಿಕೊಡಬೇಕು. ಮಾತು ಕೊಡುವಿರಾ?” ಎಂದು ಕೇಳಿದರು.

ಗುರುಗಳ ಮಾತು ಕೇಳುತ್ತ ನಿಂತಿದ್ದ ರಾಜಕುಮಾರರೆಲ್ಲ ಹಾಗೆಯೇ ಸುಮ್ಮನೆ ನಿಂತರು. ಯಾರೂ ಬಾಯಿ ಬಿಡಲಿಲ್ಲ. ಆದರೆ ಅಜುನನಿಗೆ ಇದು ಸರಿಯೆನಿಸಲಿಲ್ಲ. ಗುರುಗಳು ಕೇಳಿದಾಗ ಸುಮ್ಮನಿರುವುದೇ? ತಾವೇನು ಹೇಡಿಗಳೇ? ಕೈಲಾಗದವರೇ? ಎಂದು ಮನ ಸಿಡಿದೆದ್ದಿತು. ಆತ ತಕ್ಷಣ ಮುಂದೆ ಬಂದು, “ಗುರುದೇವ, ನೀವು ನಮ್ಮನ್ನು ಕೇಳಬೆಕೆ? ನಿಮ್ಮ ವಾಕ್ಯ ನಮಗೆ ಆಜ್ಞೆ. ನಿಮ್ಮ ಇಷ್ಟಾರ್ಥ ಏನೇ ಆಗಿರಲಿ, ಪ್ರತಿಜ್ಞೆ ಯಾವುದೇ ಆಗಿರಲಿ, ಅದನ್ನು ನಾನು ನೆರವೇರಿಸಿಕೊಡುತ್ತೇನೆ” ಎಂದು ವಾಗ್ದಾನ ಮಾಡಿ ಗುರುಗಳಿಗೆ ನಮಸ್ಕರಿಸಿದ.

ದ್ರೋಣಾಚಾರ್ಯರ ಹೃದಯ ಸಂತಸದಿಂದ ಹಿಗ್ಗಿತು. ತಾವು ಅರಸಿ ಬಂದ ಶಿಷ್ಯ-ಅರ್ಜುನನಲ್ಲಿ ದೊರೆತ ಎಂದು ಮನಸ್ಸಿಗೆ ನೆಮ್ಮದಿಯಾಯಿತು. ಅವನೆಡೆಗೆ ಅಕ್ಕರೆ ಉಕ್ಕಿ ಹರಿಯಿತು. “ನಿನಗೆ ಯಾರೂ ಸಮಾನರಿಲ್ಲ ಎನ್ನುವಂತೆ ಶಿಕ್ಷಣ ಕೊಡುತ್ತೇನೆ”  ಎಂದು ಮಾತು ಕೊಟ್ಟರು.

ಒಮ್ಮೆ ಊಟಮಾಡುವಾಗ ದೀಪ ಆರಿಹೋಯಿತಂತೆ. ಊಟ ಮಾತ್ರ ಮುಂದುವರಿಯಿತು. ಅರ್ಜುನನಿಗೆ ಎನ್ನಿಸಿತು, ಕಣ್ಣಿಗೆ ಕೈಯಾಗಲಿ ಬಾಯಾಗಲಿ ಕಾಣುತ್ತಿಲ್ಲ. ಆದರೂ ಕೈ ಸರಿಯಾಗಿ ಬಾಯಿಯ ಕಡೆಗೇ ಹೋಗುತ್ತಿದೆ. ಇದಕ್ಕೆ ಕಾರಣ ಅಭ್ಯಾಸ. ಆದುದರಿಂದ ತಕ್ಕಷ್ಟು ಅಭ್ಯಾಸ ಮಾಡಿದರೆ, ಕತ್ತಲಿನಲ್ಲಿಯೂ ಗುರಿ ತಪ್ಪದೆ ಬಾಣ ಹೊಡೆಯಬಹುದು”. ಊಟ ಮುಗಿದದ್ದೇ ತಡ, ಬಾಣಗಳನ್ನು ಕತ್ತಲಲ್ಲಿ ಹೂಡಿ ಬಿಡುವ ಅಭ್ಯಾಸ ಪ್ರಾರಂಭಿಸಿದ. ಆಚಾರ್ಯರಿಗೆ ಬಹಳ ಸಂತೋಷವಾಯಿತು.

ನನ್ನ ಗುರುವನ್ನು ನಿಂದಿಸಬೇಡ

ಪ್ರಪಂಚದಲ್ಲೆಲ್ಲ ತಾನೇ ಅಪ್ರತಿಮ ಧನುರ್ಧರ, ಗುರುವಿನ ಆಶೀರ್ವಾದ ತನಗೆ ಲಭ್ಯವಾಗಿದೆ ಎನ್ನುವ ಮನೋಭಾವದಲ್ಲೇ ಅರ್ಜುನ ಬೆಳೆದ. ಆದ್ದರಿಂದಲೇ ದಟ್ಟ ಕಾಡೊಂದರ ಮಧ್ಯದಲ್ಲಿ ತನಗೆ ಸವಾಲಾಗಿ ನಿಲ್ಲಬಲ್ಲ ವೀರನನ್ನು ಕಂಡು ಮನಸ್ಸಿನಲ್ಲೇ ಕರುಬಿದ; ಭಯಗೊಂಡ. ಆ ಯೋಚನೆಯೇ ಅವನಿಗೆ ಬೇಡವಾಯಿತು.

ಆ ಬಾಲಕನಾದರೋ ತಾನೂ ದ್ರೋಣಾಚಾರ್ಯರ ಶಿಷ್ಯ ಎನ್ನುತ್ತಿದ್ದಾನೆ. ಇದು ಹೇಗೆ ಸಾಧ್ಯ? ದ್ರೋಣಾಚಾರ್ಯರಂತಹ ಮಹಾನುಭಾವರು ಮಾತಿಗೆ ತಪ್ಪುವರೇ? ಏನೂ ಅರ್ಥವಾಗದಂತಾಯ್ತು ಅವನಿಗೆ.

“ನಿನ್ನ ಗುರು ದ್ರೋಣಾಚಾರ್ಯರೆ? ಇದು ದಿಟವೆ?” ಅರ್ಜುನ ಏಕಲವ್ಯನನ್ನು ಕೇಳಿದ.

“ನನ್ನ ಮಾತಿನ ಸತ್ಯಾಸತ್ಯತೆಯನ್ನು ಪ್ರಶ್ನಿಸುವ ದಿಟ್ಟತನ ಮಾಡಬೇಡ. ನನ್ನಪ್ಪ ನನಗೆ ಬಿಲ್ವಿದ್ಯೆ ಕಲಿಸುವಷ್ಟು ದಿನ ಬಾಳಲಿಲ್ಲ. ಆದರೆ ಸುಳ್ಳಾಡದಂತೆ, ಸುಳ್ಳಾಡಿದವರನ್ನು ಸುಮ್ಮನೆ ಬಿಡದಂತೆ ಪಾಠ ಕಲಿಸಿದ್ದಾರೆ. ನಿನಗೇಕೆ ಈ ಅನುಮಾನ? ನನ್ನ ಗುರುವಿನಲ್ಲಿ ಅನುಮಾನ ಪಡುವ ನೀನು ಯಾರು?” ಸಿಡಿದಿದ್ದ ಏಕಲವ್ಯ ಮರುಪ್ರಶ್ನಿಸಿದ.

“ನಾನು ಪಾಂಡುರಾಜನ ಮಗ, ಅರ್ಜುನ. ನನ್ನ ಗುರು ದ್ರೋಣಾಚಾರ್ಯರು; ಹಿರಿಯ ಕುಲದವರು. ನಿನ್ನಂತಹ ಬೇಡರ ಕಾಡು ಬಾಲಕನಿಗೆ ಅವರು ಕಲಿಸುವುದು ಸಾಧ್ಯವೆ ಇಲ್ಲ. ಅವರ ಶಿಷ್ಯರೆಲ್ಲ ನನ್ನಂತೆಯೇ ಉತ್ತಮ ಕುಲದಲ್ಲಿ ಹುಟ್ಟಿದವರು” ಅರ್ಜುನ ಬೀಗಿ ಹೇಳಿದ.

ಏಕಲವ್ಯನಿಗಾದರೋ ಅವನ ಮಾತನ್ನು ಕೇಳಿ ನಗೆ ಬರುವಂತಾಯತ್ತು. ಆದರೂ ಅದನ್ನು ತಡೆದುಕೊಂಡು ಹೇಳಿದ: “ನನ್ನ ಗುರುಗಳಿಗೆ ಕುಲದ ಪರಿಗಣನೆ ಇಲ್ಲ ಅರ್ಜುನ. ಆರ್ಯನಾದರೇನು? ಬೇಡನಾದರೇನು? ಅದಕ್ಕೂ ಬಿಲ್ವಿದ್ಯೆ ಕಲಿಯುವುದಕ್ಕೂ ಏನು ಸಂಬಂಧ? ಅರ್ಜುನ, ಈಗಲಾದರೂ ತಿಳಿದುಕೊ. ನನ್ನ ಗುರುಗಳು ಹೇಳಿರುವಂತೆ ಅಪ್ರತಿಮ ಧನುರ್ವಿದ್ಯಾ ಚತುರನಾಗಬೇಕಾದರೆ ದೃಢಮನಸ್ಸು, ಏಕಾಗ್ರಚಿತ್ತತೆ ಶಿಷ್ಯನಲ್ಲಿರಬೇಕು; ನಮ್ಮನ್ನು ಹೇಳಿರುವಂತೆ, ಶಿಷ್ಯನಿಗೆ ಕಲಿಸಲು ಗುರುವಿಗೆ ಮನಃಪೂರ್ವಕ ಆಸಕ್ತಿಯಿರಬೇಕು. ನನ್ನ ಗುರು ದ್ರೋಣಾಚಾರ್ಯರು ನನ್ನನ್ನು ಹೃತ್ಪೂರ್ವಕವಾಗಿ ಆಶೀರ್ವದಿಸಿದ್ದಾರೆ. ಅವರ ಅನುಗ್ರಹದಿಂದ, ಸತತ ಅಭ್ಯಾಸದಿಂದ ನಾನು ಅದ್ವಿತೀಯ ಧನುರ್ಧರನಾಗಬಲ್ಲೆ ಎಂಬ ವಿಶ್ವಾಸ ನನಗಿದೆ.”

ಅವನ ಮಾತು ಅರ್ಜುನನಿಗೆ ಸಹ್ಯವಾಗಲಿಲ್ಲ. ಮಧ್ಯದಲ್ಲೇ ಅವನನ್ನು ತಡೆದು, ಕೂಗಿ ಹೇಳಿದೆ: “ಇದು ಸುಳ್ಳು, ಇದನ್ನು ನಂಬಲಾರೆ. ಹಾಗಾದರೆ ಗುರುದೇವ ದ್ರೋಣಾಚಾರ್ಯರು ನನ್ನನ್ನು ವಂಚಿಸಿದರೇ?”

ಆ ಮಾತನ್ನು ಕೇಳಿದ ತಕ್ಷಣವೇ ರೋಷದಿಂದ ಸಿಡಿದೆದ್ದು ನಿಂತ ಏಕಲವ್ಯ. ಬಿಲ್ಲಿಗೆ ಬಾಣ ಹೂಡಿ ಕಾದಾಟಕ್ಕೆ ಸಜ್ಜಾಗಿ ನಿಂತು ಹೇಳಿದ; “ಮುಚ್ಚು ಬಾಯಿ, ನನ್ನನ್ನು ಏನು ಬೇಕಾದರೂ ಅನ್ನು ಆದರೆ ನನ್ನ ಗುರುದೇವನನ್ನು ನಿಂದಿಸಿದರೆ ನಿನ್ನ ನಾಲಿಗೆಯನ್ನು ಸೀಳದೆ ಬಿಡಲಾರೆ.”

‘ಗುರುವನ್ನು ನಿಂದಿಸಿದರೆ ನಿನ್ನ ನಾಲಿಗೆಯನ್ನು ಸೀಳದೆ ಬಿಡಲಾರೆ’.

ಮಾತು ಮಿತಿ ದಾಟುತ್ತಿರುವುದನ್ನು ಅರಿತ ಧರ್ಮರಾಯ, ತಮ್ಮನನ್ನು ಸಮೀಪಕ್ಕೆ ಕರೆದು ಸಮಾಧಾನ ಮಾಡಿದ. “ಸುಮ್ಮನೆ ದ್ವೇಷವೇಕೆ ಅರ್ಜುನ? ನಡೆ, ಹೊರಡೋಣ, ಆಚಾರ್ಯರನ್ನೇ ಕೇಳಿದರಾಯಿತು” ಎಂದು ಹೇಳಿ ಎಲ್ಲರನ್ನೂ ಹೊರಡಿಸಿದ.

ಆಚಾರ್ಯರ ಮುಂದಿನ ದಾರಿ

ಹಸ್ತಿನಾಪುರಕ್ಕೆ ಹಿಂದಿರುಗುವುದೇ ತಡ, ಅಜುನ ದ್ರೋಣಾಚಾರ್ಯರ ಬಳಿಗೆ ಓಡಿದ. ಮುಖ ಕೆಂಪಡರಿತ್ತು. ಕಣ್ಣುಗಳಲ್ಲಿ ಆತಂಕ ತುಂಬಿಬಂದಿತ್ತು . ಕಾಡಿನಲ್ಲಿ ನಡೆದುದನ್ನೆಲ್ಲ ಅರ್ಜುನ ವಿವರಿಸದ.

“ನನ್ನನ್ನೂ ಮೀರಿಸುವಂತೆ ಬಿಲ್ವಿದ್ಯೆಯನ್ನು ಆ ಬೇಡರ ಹುಡುಗ ಸ್ವಾಧೀನ ಮಾಡಿಕೊಂಡಿದ್ದಾನೆ, ಗುರುದೇವ.  ಸಾಲುದುದಕ್ಕೆ ನೀವೇ ಅವನ ಗುರುಗಳೆಂದು ಒಣಜಂಬ ಕೊಚ್ಚಿಕೊಳ್ಳುತ್ತಿದ್ದಾನೆ. ಇದು ಹೇಗೆ ಸಾಧ್ಯ ಆಚಾರ್ಯ? ನನಗೆ ನೀವು ಕೊಟ್ಟ ವಚನವೇನಾಯ್ತು?” ಎಂದು ಹಲುಬಿದ.

ದ್ರೋಣಾಚಾರ್ಯರಿಗೆ ಏನೊಂದೂ ತಿಳಿಯದಾಯ್ತು. ಯಾವುದೋ ಗೊಂದಲದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡ ಹಾಗಾಯಿತು.

ಒಂದು ನಿಮಿಷ ಮೌನ ತಾಳಿದರು. ನಡೆದಿರಬಹುದಾದ ಸಂಗತಿ ಅವರ ಒಳಗಣ್ಣಿಗೆ ತಾನೆ ತಾನಾಗಿ ಸ್ಪಷ್ಟವಾಗತೊಡಗಿತು. ಇಬ್ಬರು ಆತ್ಮೀಯ ಶಿಷ್ಯರ ನಡುವೆ ಸಿಕ್ಕಿಹಾಕಿಕೊಂಡ ಪರಿಸ್ಥಿತಿ ತಮ್ಮದೆಂದು ಅವರಿಗೆ ಅರ್ಥವಾಯಿತು.

ಕಾಡಿನಲ್ಲೆಲ್ಲೋ ನಿಂತು, ತಮ್ಮ ಹೆಸರಿನ ಆಧಾರವೊಂದರಿಂದಲೇ ವಿದ್ಯೆಯನ್ನು ಕರಗತ ಮಾಡಿಕೊಂಡ ವೀರ ಶಿಷ್ಯನನ್ನು ನೆನೆದು ಅಭಿಮಾನಪಟ್ಟರು. “ಓಹ್‌ ! ಎಂತಹ ಸಾಹಸಿ ! ಎಂತಹ ದೃಢಚಿತ್ತ ಆ ಪುಟ್ಟ ಬಾಲಕನದು ! ಅರ್ಜುನನೂ ಮೆಚ್ಚಿ ಅಸೂಯೆ ಪಡುವಂತೆ ಬಾಣ ಪ್ರಯೋಗಿಸಬೇಕಾದರೆ ಅವರ ಸಾಧನೆ ಮೆಚ್ಚುವಂತಹುದೇ ಆಗಿರಬೇಕು” ಎಂದು ಮನದಲ್ಲೇ ಆನಂದಿಸಿದರು.

ಆಚಾರ್ಯರಿಗೆ ಏಕಲವ್ಯನ ಗುರುಭಕ್ತಿ, ವಿದ್ಯೆಗಳಿಸುವುದರಲ್ಲಿ ದೃಢಮನಸ್ಸು ಮೆಚ್ಚಿಕೆಯಾದವು. ಅರ್ಜುನನಿಗೆ ಇನ್ನೂ ನಿಜಾಂಶ ತಿಳಿಯದು; ಅವನಿಗೂ ಏಕಲವ್ಯನ ವ್ರತ ತಿಳಿಯಬೇಕು ಎಂದು ತೀರ್ಮಾನಿಸಿದರು.

ಅಲ್ಲಿ ತಾವು ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆಯೂ ನಿರ್ಧಾರಕ್ಕೆ ಬಂದರು. ಆ ನಿರ್ಧಾರವನ್ನು ನೆನೆದಂತೆಲ್ಲ ಅಪಾರ ಯಾತನೆಪಟ್ಟರು. ಆದರೂ ತಮ್ಮದೇನಿದೆ? ದೇವರು ನಡೆಸಿದಂತಾಗಲಿ ಎಂದು ತಾವೇ ಸಮಾಧಾನ ಮಾಡಿಕೊಂಡು ಕಾರ್ಯೋನ್ಮುಖರಾದರು. ಅರ್ಜುನನನ್ನೂ, ಅಶ್ವತ್ಥಾಮನನ್ನೂ ಜೊತೆಯಲ್ಲಿ ಕರೆದುಕೊಂಡು ಏಕಲವ್ಯನ ನೆಲೆಯಾದ ಕಾಡಿಗೇ ನಡೆದರು.

ಬಂದರು ನನ್ನ ಗುರು!

ತನ್ನ ಮನೆಗೆ ಗುರು ದ್ರೋಣರು ಬರಲಿರುವರೆಂಬುದನ್ನು ಅರಿತ ಏಕಲವ್ಯ ಉತ್ಸಾಹದ ಚಿಲುಮೆಯಾದ. ಇಡೀ ಅರಣ್ಯವನ್ನೆ ಅವರ ಸ್ವಾಗತಕ್ಕಾಗಿ ಸಜ್ಜುಗೊಳಿಸಿದ.

ಗಗನದೆತ್ತರಕ್ಕೆ ಬೆಳೆದುನಿಂತ ಬೃಹದಾಕಾರದ ಮರಗಳು ಸೂರ್ಯನ ಬೆಳಕನ್ನು ಒಳಗೆ ಬಿಡಲು ನಿರಾಕರಿಸಿದಾಗ, ಗುರುದೇವ ಕತ್ತಲೆಯಲ್ಲಿ ಎಲ್ಲಿ ದಾರಿತಪ್ಪುವರೋ ಎಂದು ತತ್ತರಿಸಿದ. ದಾರಿಯುದ್ಧಕ್ಕೂ ತನ್ನ ಸಂಗಡಿಗರ ಕಾವಲು ಹಾಕಿ, ಗುರುಗಳಿಗೆ ಯಾವುದೇ ತೊಂದರೆಯಾಗದಂತೆ ಕರೆತರಲು ಆಜ್ಞಾಪಿಸಿದ.

ತಾನು ಭಕ್ತಿಯಿಂದ ಪೂಜಿಸುತ್ತಿದ್ದ ಮೂರ್ತಿಯನ್ನು ಮತ್ತೊಮ್ಮೆ ಕಾಡುಹೂವುಗಳಿಂದ ಸಿಂಗರಿಸಿದ. ಮತ್ತೆ ಮತ್ತೆ ಪೂಜೆ ಮಾಡಿದ. ಬಿಲ್ಲು ಬಾಣಗಳನ್ನೆಲ್ಲ ಸಜ್ಜುಗೊಳಿಸಿಟ್ಟ. ಏನು ಮಾಡಿದರೂ, ತೃಪ್ತಿಯಿಲ್ಲ ಆ ಹಿರಿಯ ಜೀವಕ್ಕೆ.

ಕಹಳೆಗಳು ಮೊಳಗಿ ದ್ರೋಣಾಚಾರ್ಯರ ಆಗಮನವನ್ನು ಸೂಚಿಸಿದವು. ಹೊರಗೋಡಿಬಂದು ಆಚಾರ್ಯರು ನಡೆದು ಬರುತ್ತಿರುವುದನ್ನು ಕಂಡ. ಭಕ್ತಿಭಾವದಿಂದ, ಕೃತಜ್ಞತೆಯಿಂದ ತುಂಬಿಬಂದ ಕಣ್ಣೀರಿನಲ್ಲಿ ಅವರ ಪಾದ ತೊಳೆದ. ಅವರನ್ನು ಹೇಗೆ ಉಪಚರಿಸಿದರೂ ಸಾಲದು. ಗುರುಗಳಿಗೆ ತನ್ನ ಸರ್ವಸ್ವವನ್ನೂ ಸಮರ್ಪಿಸಿಕೊಳ್ಳುವ ಉದಾರಚಿತ್ತ ಅವನದು.

ದ್ರೋಣಾಚಾರ್ಯರೊಡನೆ ಬಂದಿದ್ದ ಅಶ್ವತ್ಥಾಮ, ಅರ್ಜುನರನ್ನೂ ಅವನು ಸ್ವಾಗತಿಸಿದ.

ಶಿಷ್ಯನ ಮುಂದೆ ಗುರು

ಹಣ್ಣು ಹಂಪಲು, ಹಾಲಿನ ಸತ್ಕಾರ ನೀಡಿದನಂತರ, ತನ್ನ ವಿದ್ಯೆಯ ರಸದೂಟವನ್ನುಣ್ಣಿಸಿದ. ಗುರುಭಕ್ತಿಯಲ್ಲಿ ಅವನ ಬಿಲ್ಲು ಝೇಂಕರಿಸಿತು. ಬಾಣಗಳಾದ ಮೇಲೆ ಬಾಣಗಳು ಹೊಸಹೊಸ ಮೋಡಿಯಲ್ಲಿ ವಿಜೃಂಭಿಸಿದವು.

“ಇವೆಲ್ಲ ನಿಮ್ಮ ಅನುಗ್ರಹ ಗುರುದೇವ. ನಿಮ್ಮನ್ನು ನೆನೆದು ನಾನು ಬಾಣಬಿಟ್ಟರೆ ಅದು ಗುರಿತಪ್ಪಲು ಸಾಧ್ಯವೇ ಇಲ್ಲ” ಎಂದು ಎದೆಯುಬ್ಬಿಸಿ ಹೇಳಿಕೊಂಡ. ಶಬ್ದವೇಧಿಯೂ ನನಗೆ ಸಿದ್ಧಿಸಿದೆ ಆಚಾರ್ಯ, ಅಂದು… ಆ ವಿದ್ಯೆ ಕಲಿಯುವಂದು ಗುರುದೇವ, ನಿಮ್ಮ ಮೂರ್ತಿಯ ಮುಂದೆ ಕೈಮುಗಿದು ಕುಳಿತರೆ ಎಲ್ಲ ಮನಸ್ಸಿಗೆ ಸ್ಫುರಿಸಿತು.  ಈ ಉಪಕಾರವನ್ನು ಹೇಗೆ ಮರೆಯಬಲ್ಲೆ ?” ಎಂದು ಕಣ್ಮುಚ್ಚಿ ಧನ್ಯತಾಭಾವದಲ್ಲಿ ನುಡಿದ.

ಅವನ ಒಂದೊಂದು ನುಡಿ-ನಡೆ, ದ್ರೋಣಾಚಾರ್ಯರನ್ನು ಹಿಡಿದು ಅಲುಗಾಡಿಸಿತು. ಅವನನ್ನು ನೋಡಿದಂತೆಲ್ಲ ಹೃದಯ ಹಿಗ್ಗಿತು. ಕಣ್ಣೀರು ತುಂಬಿಬಂತು. ತಮ್ಮ ಪ್ರತಿಮೆಗೆ ಅವನು ನಡೆಸಿದ್ದ ಪೂಜೆ, ತಮ್ಮಡೆಗೆ ಅವನಿಗಿದ್ದ ಭಕ್ತಿಭಾವ ಕಂಡು ಮೂಕರಾದರು. ಇಂತಹ ಶಿಷ್ಯನನ್ನು ಪಡೆದ ತಾವು ಧನ್ಯರೆಂದುಕೊಂಡರು.

ಇಂತಹ ಮುಗ್ಧ ಬಾಲಕನಿಂದ ತಾವು ಅಪೇಕ್ಷಿಸಿ ಬಂದಿರುವುದಾದರೂ ಏನನ್ನು? ಅದನ್ನು ನೆನೆದೇ ಅವರ ಮೈನಡುಗಿತು.

ಯಾವುದೋ ದುರದೃಷ್ಟಕರ ಗಳಿಗೆಯಲ್ಲಿ ರಾಜಕುಮಾರನೊಬ್ಬನಿಗೆ ಕೊಟ್ಟ ಮಾತನ್ನುಳಿಸಿಕೊಳ್ಳಲು ಈ ಬಾಲಕನಿಗೆ ಶಿಕ್ಷೆಯೆ? ಅವನು ತನ್ನ ಜೀವದುಸಿರಾಗಿ ಘೋಷಿಸಿಕೊಂಡು ಬಂದಿರುವ ಹಿರಿಯ ಆಕಾಂಕ್ಷೆಗೇ ಕೊಡಲಿ ಪೆಟ್ಟೇ? – ಯೋಚಿಸಿದಂತೆಲ್ಲ ಮಮ್ಮಲ ಮರುಗಿದರು ದ್ರೋಣರು .

ಏಕಲವ್ಯನ ಬಿಲ್ವಿದ್ಯೆ ಅಶ್ವತ್ಥಾಮ ಅರ್ಜುನರನ್ನು ಸೆರೆಹಿಡಿದು ಕುಳ್ಳಿರಿಸಿತ್ತು. ತಮ್ಮನ್ನು ತಾವು ಮರೆತು ಆನಂದದಿಂದ ಏಕಲವ್ಯನ ಹಸ್ತಚಾತುರ್ಯವನ್ನು ನೋಡುತ್ತಿದ್ದರು. ‘ಭಲೆ ಬಲೆ ಭಾಪುರೆ ಭಾಪುರೆ’ ಎನ್ನಲಾರಂಭಿಸಿದರು.

ಗುರುದಕ್ಷಿಣೆ ಕೊಡಬೇಕು

ಅರ್ಜುನನ ಧ್ವನಿ ದ್ರೋಣಾಚಾರ್ಯರನ್ನು ಹೊಡೆದೆಬ್ಬಿಸಿತು. ವಚನಭ್ರಷ್ಟತೆಯ ಅಪವಾದದ ಭೀತಿ ಅವರನ್ನು ಕಾರ್ಯೋನ್ಮುಖರನ್ನಾಗಿಸಿತು.

“ಅಶ್ವತ್ಥಾಮ ಹೊರಡು, ನಾವಿನ್ನು ಹಿಂತಿರುಗುವ ಹೊತ್ತಾಯಿತು; ನಮ್ಮ ಪ್ರಯಾಣಕ್ಕೆ ಸಿದ್ಧಮಾಡು” ಎಂದು ಮಗನನ್ನು ಹೊರಗೆ ಕಳುಹಿಸಿದರು. ತಾವು ಮಾಡಲು ಉದ್ದೇಶಿಸಿದ್ದ ಕಾರ್ಯಕ್ಕೆ ಮಗನೆ ಅಡ್ಡಿಯಾಗಬಹುದು ಎಂಬ ಭಯ ಅವರನ್ನಾವರಿಸಿ, ಅಶ್ವತ್ಥಾಮನನ್ನು ಹೊರಗೆ ಕಳುಹಿಸಿದರು.

“ಏಕಲವ್ಯ”, ಮೆಲ್ಲನೆ ಶಿಷ್ಯನನ್ನು ಕರೆದರು.

“ಗುರುದೇವ?”

“ನೀನು ಗಳಿಸಿರುವ ವಿದ್ಯೆ ಅಪಾರ, ಕುಮಾರ. ನಾವಿಂದು ಸಂತೃಪ್ತರಾದೆವು. ನಿಷ್ಠೆಯಿಂದ ಅಭ್ಯಾಸ ನಡೆಸಿ, ನೀನು ಪಡೆದಿರುವ ಸಿದ್ಧಿ ಒಂದು ಮಹತ್ಸಾಧನೆ. ನಿನ್ನ ಈ ಸಾಧನೆ ಮುಂದಿನ ವಿದ್ಯಾರ್ಥಿಗಳಿಗೆಲ್ಲ ದಾರಿದೀಪವಾಗಲಿ ವತ್ಸ” , ಮನಃಪೂರ್ವಕವಾಗಿ ಆಶೀರ್ವದಿಸಿದರು ಗುರು ದ್ರೋಣರು.

ಏಕಲವ್ಯನ ಹೃದಯದಲ್ಲಿ ಸಂತೋಷ ತುಳುಕಾಡಿತು. “ಪುನೀತನಾದೆ ಗುರುದೇವ. ನಿಮ್ಮ  ಈ ಆಶೀರ್ವಾದದ ನುಡಿಯನ್ನು ನನ್ನವ್ವ ಕೇಳಬೇಕಿತ್ತು. ಆದರೆ ಆಚಾರ್ಯ, ಈ ವಿದ್ಯೆಯನ್ನು ಅನುಗ್ರಹಿಸಿದವರು ನೀವು. “ಕಾಡಿನಲ್ಲಿ ಬಿಲ್ವಿದ್ಯೆ ಅಭ್ಯಾಸ ಮಾಡು, ನೀನೂ ನನ್ನ ಶಿಷ್ಯನೇ” ಎಂದು ತಾವು ಹಸ್ತಿನಾವತಿಯಲ್ಲಿ ನುಡಿದಿರಿ; ಇಲ್ಲವಾದರೆ ನನ್ನ ಈ ಪ್ರಯತ್ನವೇ ನಡೆಯುತ್ತಿರಲಿಲ್ಲವೇನೋ! ನಿಮ್ಮ ಆಶೀರ್ವಾದ ನನ್ನನ್ನು ಮುಂದೆಯೂ ರಕ್ಷಿಸಲಿ, ಆಚಾರ್ಯ.”

“ನನ್ನನ್ನು ನೀನು ಗುರುವೆಂದು ಒಪ್ಪಿರುವುದು ನಿಜವಾದರೆ, ಗುರುದಕ್ಷಿಣೆಯನ್ನು ನೀನು ಕೊಡಬೇಕಾಗುವುದು, ಏಕಲವ್ಯ, ಇನ್ನೊಮ್ಮೆ ಯೋಚಿಸಿ ನೋಡು”, ಗಗನದಲ್ಲಿ ದೃಷ್ಟಿನೆಟ್ಟು ಹೇಳಿದರು ದ್ರೋಣಾಚಾರ್ಯರು,

ಏಕಲವ್ಯ ನಕ್ಕು ನುಡಿದ: ಯೋಚಿಸುವುದೇನಿದೆ ಇದರಲ್ಲಿ, ಭಗವಾನ್‌? ನಾನು ನಿಮ್ಮ ಶಿಷ್ಯ. ನೀವು ನನ್ನ ಗುರು. ನನ್ನವ್ವೆ, ನನ್ನ ಈ ಕಾಡು, ನನ್ನ ಈ ಪುಟಾಣಿ ಜಿಂಕೆ ಮರಿಗಳು ಇವುಗಳಷ್ಟೇ ಸತ್ಯ ಈ ಅಂಶ. ಗುರುದಕ್ಷಿಣೆಗೆ ಹೆದರುವೆನೆ ನಾನು? ನಾನು ಈ ರೀತಿ ಹೆದರಿದೆನಾದರೆ, ಈ ನಡವಳಿಕೆ ನಿಮ್ಮಂಥ ಹಿರಿಯ ಗುರುವಿನ ಶಿಷ್ಯನಿಗೆ ಸಲ್ಲುವುದೇ? ಏನು ಬೇಕಾದರೂ ಕೇಳಿ ಗುರುದೇವ; ಪ್ರಾಣದ ಪಣ ಇಟ್ಟಾದರೂ ನನ್ನ ಗುರುದಕ್ಷಿಣೆ ಸಲ್ಲಿಸುವೆ.”

ದ್ರೋಣರಿಗೆ ಮಾತು ಹೊರಡದಂತಾಯಿತು. ಈ ಪುಟ್ಟ ಬಾಲಕನ ರಕ್ತದ ಕಣಕಣದಲ್ಲೂ ತಮ್ಮಡೆಗೆ ಚಿಮ್ಮುತ್ತಿದ್ದ ಭಕ್ತಿಭಾವ ಅವರ ದಾರಿಗೆ ಅಡ್ಡವಾಯಿತು. ತಮ್ಮನ್ನು ಕಟ್ಟಿಹಾಕಿದ್ದ ಪರಿಸ್ಥಿತಿಯಿಂದ ಹೊರಬರಲಾರದೆ ಮುಗ್ಧ ಶಿಷ್ಯನಿಗೆ ಹೇಳಿದರು: “ಏಕಲವ್ಯ, ನಿನ್ನ ಸಿದ್ಧಿ ಅಸಾಧಾರಣವಾದದ್ದು. ಇಂತಹ  ಬಿಲ್ಗಾರಿಕೆಯನ್ನು ಸಾಧಿಸಿದ ಶಿಷ್ಯ ಎಂದರೆ ಗುರುವಿಗೇ ಹೆಮ್ಮೆ. ಆದರೆ, ಮಗೂ, ನಿನ್ನ ಗುರು ಇಂದು ಕೊಟ್ಟ ಮಾತು ಮುರಿಯುವ ಸ್ಥಿತಿ ಬಂದಿದೆ.”

“ಪೂಜ್ಯರೆ, ತಾವು ಕೊಟ್ಟ ಮಾತು ಮುರಿಯುವುದೇ? ಹಾಗೆ ಆಗಲಿ ಕೂಡದು. ಅದೂ ನಾನು ಈ ವಿದ್ಯೆ ಪಡೆದುಕೊಂಡದ್ದರಿಂದ? ಕೂಡದು, ಭಗವಾನ್. ಹೇಳಿ, ನಾನು ಇದನ್ನು ಹೇಗೆ ತಡೆಯಬಲ್ಲೆ? ನಿವಾರಿಸಬಲ್ಲೆ? ನನ್ನದು ಎನ್ನುವುದೆಲ್ಲ ತಮ್ಮದು, ನನ್ನ ಪ್ರಾಣವೂ ತಮ್ಮದು.”

ಗುರುದಕ್ಷಿಣೆ ಸ್ವೀಕರಿಸಿ, ಗುರುದೇವ

“ಏಕಲವ್ಯ, ನಿನ್ನ ಈ ಗುರು ತನ್ನ ಮಾತನ್ನುಳಿಸಿಕೊಳ್ಳಲು ನಿನ್ನಿಂದ ಹಿರಿದಾದ ತ್ಯಾಗ ಬಯಸುತ್ತಿದ್ದಾನೆ. ಕ್ಷಮಿಸು ಕಂದ. ನಿನ್ನ ಬಲಗೈಯ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಕೇಳುತ್ತಿದ್ದೇನೆ, ಕೊಡುವೆಯಾ ಕಂದ?”

ಏಕಲವ್ಯ ಗುರುದೇವನ ಮುಖ ದಿಟ್ಟಿಸಿದ. ಆ ಕಣ್ಣುಗಳಲ್ಲಿ ಪ್ರತಿಬಿಂಬಿಸಿದ ಆಪಾರ ಯಾತನೆ ಅವನ ಹೃದಯವನ್ನು ಮುಟ್ಟಿತು.

ಅಂಜದೆ ಅಳುಕದೆ ದಿಟ್ಟತನದ ಸಾಕಾರ ಮೂರ್ತಿಯಾಗಿ ಎದ್ದುನಿಂತ. ಗುರುದ್ರೋಣರ ಪ್ರತಿಮೆಯ ಮುಂದಿದ್ದ ಪುಟ್ಟಕಲ್ಲಿನ ಮೇಲೆ ಬಲಗೈಯ ಹೆಬ್ಬೆರಳನ್ನಿಟ್ಟು ಎಡಗೈಯಲ್ಲಿ ಹಿಡಿದ ಬಾಣದಿಂದ ಅದನ್ನು ತುಂಡರಿಸಿದ. ರಕ್ತದ ಬುಗ್ಗೆ ಒಮ್ಮೆಲೇ ಚಿಮ್ಮಿತು.

ತನ್ನ ಗುರುಗಳಿಗೂ ಏಕಲವ್ಯನಿಗೂ ನಡೆಯುತ್ತಿದ್ದ ಸಂಭಾಷಣೆಯನ್ನು ಆಸಕ್ತಿಯಿಂದಲೂ ಆತಂಕದಿಂದಲೂ ಅರ್ಜುನ ಕೇಳುತ್ತಿದ್ದ. ಈಗ ಏಕಲವ್ಯನ ಬಿಲ್ವಿದ್ಯೆಯ ಪ್ರಭುತ್ವವನ್ನು ಕಂಡು, “ಇವನು ನನ್ನನ್ನು ಆಗಲೆ ಮೀರಿಸಿದ್ದಾನೆ, ಅಲ್ಲವೆ? ನಾನು ಇವನನ್ನು ಸರಿಗಟ್ಟಬಲ್ಲೆನೆ?” ಎಂದು ಪ್ರಶ್ನಿಸಿಕೊಳ್ಳುತ್ತಿದ್ದ. ‘ಗುರುಭಾಷೆ ಕೊಟ್ಟಿದ್ದಾರಲ್ಲವೆ – ನಿನಗೆ ಯಾರೂ ಬಿಲ್ಗಾರಿಕೆಯಲ್ಲಿ ಸಮಾನರಲ್ಲ ಎಂದು ಮಾಡುತ್ತೇನೆ ಎಂದಿದ್ದಾರಲ್ಲವೆ? ಅವರ ಮಾತನ್ನು ಉಳಿಸಿಕೊಳ್ಳದೆ ಹೋಗುತ್ತಾರೆಯೆ?” ಎಂದುಕೊಂಡ.

ಆಚಾರ್ಯರು ಏಕಲವ್ಯನಿಗೆ, ನಿನ್ನ ಬಲಗೈಯ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಬಯಸಿದ್ದೇನೆ ಎಂದಾಗ ಅರ್ಜುನ ಬೆಚ್ಚಿದ. ಅವನು ಏಕಲವ್ಯನತ್ತ ತಿರುಗಿ ನೋಡುವಷ್ಟರಲ್ಲಿ ಭೂಮಿಯ ಮೇಲೆ ಉರುಳಿತ್ತು ಏಕಲವ್ಯನ ಹೆಬ್ಬೆಟ್ಟು – ರಕ್ತದ ನಡುವೆ ರಕ್ತದ ಮಡುವಿನಲ್ಲಿ ಬಿದ್ದ ಬೆರಳನ್ನು ಕಂಡು ಅರ್ಜುನನ ಮೈ ಕಂಪಿಸಿತು.

ಕಣ್ಮುಚ್ಚಿ ಕುಳಿತಿದ್ದ ದ್ರೋಣರಿಗೆ ಏಕಲವ್ಯ ಶಿರಬಾಗಿ ಪ್ರಣಾಮ ಸಲ್ಲಿಸಿದ. “ಗುರುದಕ್ಷಿಣೆ ಸ್ವೀಕರಿಸಿ, ಆಚಾರ್ಯ.”

ಕಣ್ತೆರೆದು ನೋಡಿದರು ಆಚಾರ್ಯರು. ರಕ್ತದಲ್ಲಿ ಶಿಷ್ಯನ ಹೆಬ್ಬೆರಳು; ಎದುರಿಗೆ ತಲೆಬಾಗಿ ನಿಂತ, ನಸು ನಗುತ್ತಿರುವ ಶಿಷ್ಯ.

ತಾವು ಶಿಷ್ಯನಿಗೆ ವಿಧಿಸಿದ ಶಿಕ್ಷೆಯಿಂದ ಆಚಾರ್ಯರಿಗೆ ಸಂಕಟವಾಯಿತು. ಅವನ ದೃಢವಾದ ಗುರುಭಕ್ತಿಯನ್ನು ಕಂಡು ಮೆಚ್ಚಿಕೆಯಾಯಿತು. ಅವನನ್ನು ತಬ್ಬಿಕೊಂಡು, “ಮಗೂ, ನಿನ್ನ ಗುರುಭಕ್ತಿಗೆ ಎಣೆ ಇಲ್ಲ. ನಿನ್ನಂತಹ ಶಿಷ್ಯನನ್ನು ಪಡೆದ ನಾನು ಧನ್ಯ. ದೇವರು ನಿನಗೆ ಮಂಗಳವನ್ನು ಮಾಡಲಿ” ಎಂದು ಆಶೀರ್ವದಿಸಿದರು.

ಅರ್ಜುನ ಮೂಕನಾಗಿ ನಿಂತಿದ್ದ.

ಅರ್ಜುನನನ್ನು ಕರೆದುಕೊಂಡು ಹಸ್ತಿನಾವತಿಗೆ ಹಿಂದಿರುಗಿದರು ದ್ರೋಣಾಚಾರ್ಯರು.

ಶ್ರೀ ಕೃಷ್ಣ ಕೈಯಲ್ಲಿ ಮರಣ

ಏಕಲವ್ಯ ಸೋತು ಗೆದ್ದ; ಅವನ ಕೈಯಲ್ಲಿ ಧನುಸ್ಸು ಮೊದಲಿನ ಶಕ್ತಿಯನ್ನು ಕಳೆದುಕೊಂಡಿತು. ಆದರೆ ಹಾಗೆಂದು ಬಿಲ್ವಿದ್ಯೆಯನ್ನು ಬಿಡುವನೇ ಆ ಧೀರ ಮತ್ತೆ ಸತತ ಪ್ರಯತ್ನ. ಎಡಗೈಯಲ್ಲೇ ಬಾಣ ಹೂಡುವುದನ್ನು ಅಭ್ಯಾಸ ಮಾಡಿದ. ಅದರಲ್ಲಿ ಸಾಕಷ್ಟು ಯಶಸ್ಸನ್ನೂ ಗಳಿಸಿದ. ಏಕಲವ್ಯನ ಬಾಣ ಗುರಿ ತಪ್ಪದು ಎಂದು ಕೀರ್ತಿ ಪಡೆದ. ನಿಷ್ಠಾವಂತ ಸಾಧಕನಿಗೆ ಏನೂ ಅಡ್ಡಬರಲಾರದು ಎಂಬುದನ್ನು ತೋರಿಸಿದ.

ಇಂತಹ ಧೀಮಂತ ಬಾಲಕನಿಗೆ ಯಾವಾಗಲೂ ಅದೃಷ್ಟ ವಿರೋಧಿಯೇ. ತಂದೆಯಂತೆ ತಾನೂ ಪರಾಕ್ರಮಿಯಾಬೇಕು, ತನ್ನ ರಾಜನಿಗೆ ಕಷ್ಟ ಸಮಯದಲ್ಲಿ ನೆರವಾಗಬೇಕು ಎಂಬ ಅವನ ಆಸೆ ಈಡೇರಲೇ ಇಲ್ಲ.

ಕುರುಕ್ಷೇತ್ರದಲ್ಲಿ ಮಹಾಯುದ್ಧದ ಸಮಯ. ಪಾಂಡವ ಪಕ್ಷಪಾತಿ ಕೃಷ್ಣ, ಅರ್ಜುನನ ವಿರುದ್ಧನಾಗಿ ಕೌರವರ ಕಡೆ ಸೇರಬಹುದಾದ ವೀರರೆಲ್ಲರ ಬಗ್ಗೆ ಯೋಚಿಸುತ್ತಿದ್ದ.

ಏಕಲವ್ಯನ ತಂದೆ ಹಿರಣ್ಯಧನು ತನ್ನ ರಾಜನ ಸೇವೆಯಲ್ಲಿ ಮಡಿದಿದ್ದ. ಈಗ ಅವನ ಮಗನೂ, ತನ್ನ ರಾಜ ಕೌರವನ ಕಡೆ ಸೇರುವ ಸಂಭವವೇ ಹೆಚ್ಚಾಗಿತ್ತು. ಅವನ ಬಲ ಹೆಬ್ಬೆರಳು ಹೋಯಿತು, ನಿಜ. ಆದರೂ ಅತಿ ಶ್ರೇಷ್ಠ ಬಿಲ್ಗಾರರಲ್ಲಿ ಒಬ್ಬ ಅವನು ಎನ್ನಿಸಿತು ಶ್ರೀಕೃಷ್ಣನಿಗೆ.

ಹೀಗೆ ಕೌರವನ ಸೈನ್ಯದಲ್ಲಿ ಸೇರಬಹುದಾದ ಏಕಲವ್ಯನನ್ನು ಶ್ರೀಕೃಷ್ಣ ಯುದ್ಧ ನಡೆಯುವುದಕ್ಕೆ ಮುಂಚಿತವಾಗಿಯೇ ಸಂಹರಿಸಿ ಮುಕ್ತಿ ದೊರಕಿಸಿಕೊಟ್ಟ ಎಂದು ಮಹಾಭಾರತ ಹೇಳುತ್ತದೆ.

ವಿದ್ಯಾರ್ಥಿ

ಆದರ್ಶ ವಿದ್ಯಾರ್ಥಿ ಏಕಲವ್ಯ. ವಿದ್ಯಾರ್ಥಿ ಎಂದರೆ ವಿದ್ಯೆಯನ್ನು ಬಯಸುವವನು. ಈ ಬಯಕೆ ತೀವ್ರವಾದಷ್ಟೂ ನಾವು ನಿಜವಾದ ವಿದ್ಯಾರ್ಥಿಗಳಾಗುತ್ತೇವೆ. ಈ ಬಯಕೆಗೇ ಸರ್ವಸ್ವವನ್ನೂ ಅರ್ಪಿಸಿ, ಗುರು ಎದುರಿಗೆ ಇಲ್ಲದಿದ್ದರೂ ತನ್ನ ನಿಷ್ಠೆಯಿಂದ ಗುರುವಿನ ವಿದ್ಯೆಯನ್ನು ಸೆಳೆದುಕೊಂಡ ಏಕಲವ್ಯ. ತಂದೆಯಿಲ್ಲದ ಹುಡುಗ, ಕಾಡಿನಲ್ಲಿ ಎಲ್ಲೋ ವಾಸಿಸುವವನು, ಅರ್ಜುನನೇ ಕಳವಳ ಪಡುವಂತೆ ಧನುರ್ವಿದ್ಯೆಯನ್ನು ಸಾಧಿಸಿದ. ಗುರು ‘ಬಲಗೈ ಹೆಬ್ಬೆರಳನ್ನು ಬೇಡುತ್ತೇನೆ’ ಎಂದಾಗ ಅಳುಕಿಲ್ಲದೆ, ವಿಳಂಬವಿಲ್ಲದೆ ಅದನ್ನು ಅವರ ಪಾದದೆಡೆ ಕೆಡವಿದ. ಏಕಲವ್ಯನ ಹೆಸರು ಎಂದಿಗೂ ಬೆಳಗುವ ಧ್ರುವತಾರೆಯಂತೆ.