ಹೆಸರು: ಸಾಗರ
ಊರು: ಹೊರೆಯಾಲ

 

ಪ್ರಶ್ನೆ: ಮೈಸೂರು ಆಕಾಶವಾಣಿಯ ನಮ್ಮ ಮನೆಯ ಮಲ್ಲಿಗೆ ಕಾರ್ಯಕ್ರಮದ ವಿಭಾಗಕ್ಕೆ ಮಾಡುವ ವಂದನೆಗಳು. ಸ್ವಾಮಿ ಏನೆಂದರೆ ನಮ್ಮ ಮನೆಯ ಮಲ್ಲಿಗೆ ಕಾರ್ಯಕ್ರಮ ತುಂಬಾ ಉಪಯುಕ್ತವಾದ ಕಾರ್ಯಕ್ರಮ. ಇದನ್ನು ಪ್ರಾಯೋಜಿಸುವ ರವಿ ಸಿಮೆಂಟ್ ಬ್ರಿಕ್ಸ್ ನವರು ನಿಲ್ಲಿಸದೇ ಇದೇ ರೀತಿ ಪ್ರಾಯೋಜಿಸಲಿ ಎನ್ನುವದೇ ನಮ್ಮ ಬಯಕೆ. ಸ್ವಾಮಿ ನಮ್ಮ ದೇಹದ ಯಾವುದೇ ತೊಂದರೆ ಇದ್ದರೂ ಮಹಿಳೆ ಮತ್ತು ಪುರುಷರು ಗುಪ್ತವಾಗಿ ಪ್ರಶ್ನೆ ಕೇಳಿ ಉತ್ತರ ಪಡೆದು ಬದುಕುವುದಕ್ಕೆ ಒಂದು ಒಳ್ಳೆ ಮಾರ್ಗದರ್ಶನ. ಇದಕ್ಕೆ ಎಲ್ಲಾ ಜನತೆಯ ಪರವಾಗಿ ನಮ್ಮ ಅಭಿನಂದನೆಗಳು.

ನೋಡಿ ಸ್ವಾಮಿ ನನ್ನದೇನು ಸಮಸ್ಯೆ ಇಲ್ಲ. ಆದರೂ ಸಾರ್ವಜನಿಕವಾಗಿ ಕೆಲವು ಪ್ರಶ್ನೆ ಕೇಳುತಿದ್ದೇನೆ. ದಯವಿಟ್ಟು ಉತ್ತರಿಸಿ. ಸ್ತ್ರಿಯರಲ್ಲಿ ಗರ್ಭಕೋಶ ಇನ್ ಫೆಕ್ಷನ್ ಆದರೆ ಅದು H.I.V.ಗೆ ತಿರುಗುವ ಸಾಧ್ಯತೆ ಇದೆಯೇ?

H.I.V. ಪೀಡಿತರಾಗಿರುವ ವ್ಯಕ್ತಿಗಳಿಗೆ ನಾವು ಕೊಡುವ ಹಸಿರು ಸೊಪ್ಪಿನಿಂದ H.I.V. ನಿವಾರಣೆಯಾಗುತ್ತದೆ. ಒಂದು ತಿಂಗಳಲ್ಲಿ ರಕ್ತವನ್ನು ಪರೀಕ್ಷಿಸಿಕೊಳಬಹುದು ಎಂದು ಪತ್ರಿಕೆಗಳಲ್ಲಿ ಜಾಹಿರಾತು ನೀಡುವ ವೈದ್ಯರು ನಿಜವಾಗಲು H.I.V. ಪೀಡಿತರ ಪ್ರಾಣ ಉಳಿಸಲು ನಡೆಸುವ ಪ್ರಯತ್ನವೇ? ಅಥವಾ ಹಣ ಗಳಿಸಲು ನಡೆಸುವ ಸಂಚೇ ತಿಳಿಸಿ.

ಉತ್ತರ: ಒಳ ಮತ್ತು ಹೊರ ಜನನೇಂದ್ರಿಯಗಳಿಗೆ ಸೋಂಕು ಉಂಟಾದರೆ ಅದು H.I.V.ಗೆ ತಿರುಗುವುದಿಲ್ಲ. ಆದರೆ ಅಂಥಹ ಮಹಿಳೆಯರು H.I.V. ಪೀಡಿತ ಪುರುಷನೊಂದಿಗೆ ಸಂಭೋಗ ಮಾಡಿದರೆ ಬಹಳ ಸುಲಭವಾಗಿ H.I.V. ಹಬ್ಬುತ್ತದೆ.

H.I.V. ರೋಗವು ಮುಖ್ಯವಾಗಿ

೧. ದೈಹಿಕ ಸಂಪರ್ಕದಿಂದ (ಲೈಂಗಿಕ ಸಂಪರ್ಕ)

೨. ಸಂಸ್ಕರಿಸದ ಸೂಜಿ ಮತ್ತು ಸಿರಿಂಜ್ ಗಳ ಬಳಕೆಯಿಂದ.

೩. ರೋಗ ಇರುವ ವ್ಯಕ್ತಿಯಿಂದ ರಕ್ತ ತೆಗೆದುಕೊಳ್ಳುವುದರಿಂದ ಬಹು ಬೇಗನೆ ಹರಡುತ್ತದೆ.

. ಲೈಂಗಿಕ ಸಂಪರ್ಕದಿಂದ: ಸಲಿಂಗಕಾಮಿಗಳು, ವಿಕೃತಕಾಮಿಗಳು, ಹಲವಾರು ಜನರೊಡನೆ ದೈಹಿಕ ಸಂಪರ್ಕವಿರುವವರು, ವೇಶ್ಯೆಯರು ಇವರಲ್ಲಿ ಮತ್ತು ಇವರಿಂದ ಏಡ್ಸ್ ರೋಗವು ಕಾಣಿಸಿಕೊಳ್ಳುತ್ತದೆ ಮತ್ತು ಬಹು ಬೇಗನೆ ಹರಡುತ್ತದೆ.

. ರಕ್ತದಿಂದ: H.I.V. ರೋಗಾಣು ಇರುವವರು ಇತರರಿಗೆ ರಕ್ತ ನೀಡುವುದರಿಂದ ರೋಗ ಹರಡುತ್ತದೆ.

. ಸಂಸ್ಕರಿಸದ ಸೂಜಿ ಮತ್ತು ಸಿರಿಂಜ್ನಿಂದ: ರೋಗ ಇರುವವರಿಗೆ ಚುಚ್ಚಿದ ಸೂಜಿಯಿಂದಲೇ ಇತರರಿಗೆ ಚುಚ್ಚಿದರೆ ಸುಲಭವಾಗಿ ರೋಗಾಣು ಬೇರೆ ವ್ಯಕ್ತಿಯ ದೇಹದೊಳಗೆ ಪ್ರವೇಶಿಸುತ್ತದೆ. ಇದೇ ರೀತಿ ಶಸ್ತ್ರ ಚಿಕಿತ್ಸಾ ಶಿಬಿರಗಳಲ್ಲಿ ಒಂದೇ ದಿನ ಹಲವಾರು ಶಸ್ತ್ರ ಚಿಕಿತ್ಸೆಗಳನ್ನು ಮಾಡುವಾಗ ಶಸ್ತ್ರ ಚಿಕಿತ್ಸಾ ಉಪಕರಣಗಳನ್ನು ಸರಿಯಾಗಿ ಸಂಸ್ಕರಿಸದೆ ಒಬ್ಬರಾದ ಮೇಲೆ ಒಬ್ಬರಿಗೆ ಬಳಸುವುದರಿಂದಲೂ ಏಡ್ಸ್ ಹರಡುವ ಸಾಧ್ಯತೆ ಇದೆ.

. ಕ್ಷೌರಿಕರಿಂದ: ಕ್ಷೌರ ಮಾಡಿಸಿಕೊಳ್ಳಲು ಅಂಗಡಿಗೆ ಹೋದಾಗ ಏಡ್ಸ್ ರೋಗವಿರುವ ವ್ಯಕ್ತಿಗೆ ಬಳಸಿದ ಬ್ಲೇಡ್, ಚಾಕುವಿನಿಂದ ಬೇರೆಯವರಿಗೂ ಅದೇ ಬ್ಲೇಡ್ ಚಾಕು ಬಳಸಿದಾಗ ಏಡ್ಸ್ ಕಾಯಿಲೆ ಹರಡುವ ಸಾಧ್ಯತೆ ಇರುತ್ತದೆ.

ರೋಗ ಹರಡಲು ತೆಗೆದುಕೊಳುವ ಸಮಯ: H.I.V. ವೈರಾಣು ತಗುಲಿದ ವ್ಯಕ್ತಿಯಲ್ಲಿ ಖಾಯಿಲೆಯ ಲಕ್ಷಣಗಳು ಕಾಣಲು ೯ ರಿಂದ ೧೦ ವರ್ಷಗಳು ಬೇಕಾಗುತ್ತದೆ.  ಒಮ್ಮೆ ಏಡ್ಸ್ ಖಾಯಿಲೆಯ ಲಕ್ಷಣಗಳು ಕಂಡು ಬಂದರೆ ಚಿಕಿತ್ಸೆ ತಗೆದುಕೊಳ್ಳದಿದ್ದರೆ, ಸಾವು ಬೇಗನೆ ಬರುತ್ತದೆ. ಇಂಥಹ ವ್ಯಕ್ತಿಯು ಕೇವಲ ೯ ತಿಂಗಳು (ಸರಾಸರಿ) ಬದುಕಬಹುದು.

ತಾಯಿಯಿಂದ ಮಗುವಿಗೆ ಸೋಂಕು ಹರಡುವುದು: ಗರ್ಭವಸ್ಥೆಯಲ್ಲಿ ಗರ್ಭಿಣಿ ತಾಯಿಯಿಂದ ಮಗುವಿಗೆ ಸೋಂಕು ತಗಲುವ ಅಪಾಯ ಶೇ.೧೫ ರಿಂದ ೫೦ ರಷ್ಟು ಇರುತ್ತದೆ.

೧) ಗರ್ಭ ಧರಿಸಿದ ಮೇಲೆ H.I.V. ಸೋಂಕು ಪ್ಲಾಸೆಂಟಾದ ಮುಲಕ ತಗಲುವ ಸಾಧ್ಯತೆ ಇರುತ್ತದೆ.

೨) ಹೆರಿಗೆಯ ಸಮಯದಲ್ಲಿ ಅದರಲ್ಲೂ ವಿಶೇಷವಾಗಿ ಸಹಜ ಹೆರಿಗೆಯ ಸಮಯದಲ್ಲಾಗುವ ರಕ್ತ ಸ್ರಾವದ ಮುಲಕ ಮಗುವಿಗೆ ಸೋಂಕು ತಗಲುವ ಅಪಾಯವಿರುತ್ತದೆ.

ತಾಯಿಗೆ ಯಾವ ಪ್ರಮಾಣದಲ್ಲಿ ಸೋಂಕು ಇರುತ್ತದೆಯೋ ಅಷ್ಟೆ ತೀವ್ರವಾಗಿ ಮಗುವಿಗೂ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಪ್ರಾರಂಭಿಕ ಹಂತದಲ್ಲಿ ಸೋಂಕಿಗೆ ಶೇ. ೧೨ ರಷ್ಟು ಶಿಶುಗಳು ಬಲಿಯಾದರೆ, ಕೊನೆಯ ಹಂತದಲ್ಲಿ ಶೇ. ೧೦೦ ರಷ್ಟು ಬಲಿಯಾಗುತ್ತವೆ.

ಹೆರಿಗೆಯ ನಂತರ: ಶಿಶು ಜನನದ ನಂತರ ಸ್ತನ್ಯಪಾನದ (ಎದೆ ಹಾಲಿನ) ಮುಲಕ H.I.V. ಸೋಂಕು ಮಗುವಿಗೆ ಹರಡುವ ಸಾಧ್ಯತೆಗಳಿರತ್ತವೆ. ಇದರ ಪ್ರಮಾಣ ಶೇ. ೧೫ ರಿಂದ ೪೮ ರಷ್ಟಿರುತ್ತದೆ.

ತಡೆಗಟ್ಟುವ ವಿಧಾನ (ಸೋಂಕು ತಗಲದಂತೆ ಎಚ್ಚರಿಕಾ ಕ್ರಮಗಳು): ಗರ್ಭಿಣಿಯಾದಾಗ ಅನೈತಿಕ ಸಂಬಂಧದಿಂದ ದೂರವಿರುವುದು, ಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು (ನಿರೋಧ್ ಬಳಕೆ) ಈಗಾಗಲೇ ಒಂದು ವೇಳೆ ಸೋಂಕು ತಗುಲಿದ್ದರೆ, ಗರ್ಭಾವಸ್ಥೆಯ ಸಮಯದಲ್ಲಿ ಕ್ರಮಬದ್ಧವಾಗಿ  H.I.V.ಸೋಂಕಿಗೆ ಚಿಕಿತ್ಸೆ ಪಡೆಯುವುದು. ಪ್ರತಿ ಹಂತದಲ್ಲೂ ಸರಿಯಾದ ಸೂಕ್ತ ಚಿಕಿತ್ಸೆಯನ್ನು ಪಡೆಯುವುದು ಅತ್ಯವಶ್ಯಕ.

ಹೆರಿಗೆ ಸಮಯದಲ್ಲಿ ಸಹಜ ಹೆರಿಗೆಗಿಂತ ಶಸ್ತ್ರಕ್ರಿಯೆಯ ಹೆರಿಗೆಯೆ (ಸಿಸೆರಿಯನ್) ಹೆಚ್ಚು ಸೂಕ್ತ. ರಕ್ತ, ಪ್ಲಾಸೆಂಟಾ ಮುಂತಾದ ದ್ರವಗಳ ಬಗ್ಗೆ ಎಚ್ಚರಿಕೆಯಿಂದ ಸಂರಕ್ಷಿಸಿಕೊಳ್ಳಬೇಕು.  ಹರಿತವಾದ ಸೂಜಿ, ಚಾಕು ಮುಂತಾದವುಗಳನ್ನು ಉಪಯೋಗಿಸಬಾರದು. ಒಮ್ಮೆ ಬಳಸಿದ ಉಡುಪನ್ನು, ಮಾಸ್ಕ್, ಕೈಕವಚ (ಗ್ಲೌಸ್) ಗಳನ್ನು, ಹಾಗೂ ಪಾದರಕ್ಷೆ ಮುಂತಾದವುಗಳನ್ನು ಪುನಃ ಬಳಸಬಾರದು.

ಹೆರಿಗೆಯ ನಂತರ ಸ್ತನ್ಯಪಾನವನ್ನು ಮಾಡಿಸಬಾರದು. ಬಾಣಂತಿಯಾಗಿದ್ದಾಗ ಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು.

ಹಸಿರು ಸೊಪ್ಪಿನಿಂದ H.I.V. ನಿವಾರಣೆ ಎಂದೆಲ್ಲಾ ಜಾಹೀರಾತು ನೀಡುವವರು ಡೊಂಗಿ ವೈದ್ಯರು. ನೀವೇ ಹೇಳಿದಂತೆ ಹಣ ಗಳಿಸಲು ಸಂಚು ಹಾಕುತ್ತಿರಬಹುದು. ನೀವು ಜಾಗೃತರಾದಂತೆ ಉಳಿದವರನ್ನು ಜಾಗೃತಗೊಳಿಸಿ.