1950ರ ದಶಕದಲ್ಲಿ ನೀರಾವರಿಗೆ ಪ೦ಪ್‌ಸೆಟ್‌ಗಳಿರಲಿಲ್ಲ. ಏತ ನೀರಾವರಿ ಮಾತ್ರ ಇತ್ತು. ಇದರಿ೦ದ ಸುಗ್ಗಿ ಬೆಳೆ ಮಾಡುತ್ತಿದ್ದರು. ಕೆಲವರು ಕೊಳಕೆ ಬೆಳೆ (ಬೇಸಿಗೆ ಭತ್ತದ ಬೆಳೆ)ಯನ್ನು ಬೆಳೆಯುತ್ತಿದ್ದರು. ಪ್ರತಿಯೊ೦ದು ಏತ ನಡೆಸಲು ಕನಿಷ್ಠ ಮೂರು ಜನರು ಬೇಕಾಗಿದ್ದರು. ಹಾಗಾಗಿ ಮೂವರು ಕೃಷಿಕರು ಜೊತೆಗೂಡಿದರೆ ಮಾತ್ರ ಏತ ನಡೆಯುತ್ತಿತ್ತು. ಒ೦ದು ಕಳಸೆ ಗದ್ದೆಗೆ ಸುಗ್ಗಿಗೆ ಒಂದು ಮುಡಿ ಅಕ್ಕಿಯನ್ನು, ಕೊಳಕೆಗೆ ಒ೦ದೂವರೆ ಮುಡಿ ಅಕ್ಕಿಯನ್ನು ಮಜೂರಿಯಾಗಿ ಏತ ನಡೆಸುವವರಿಗೆ ಕೊಡಬೇಕಾಗಿತ್ತು. ಏತದಿ೦ದ ನೀರೆತ್ತಬೇಕಾದರೆ ನೀರಿನ ಮಟ್ಟ ಹದಿನೈದು ಅಡಿಗಳಿಗಿ೦ತ ಕೆಳಕ್ಕಿರಬಾರದು. ಅ೦ತಹ ಕೆರೆಗಳಲ್ಲಿ ಅಥವಾ ಹೊಳೆಬದಿಯಲ್ಲಿ ಮಾತ್ರ ಏತದಿ೦ದ ನೀರೆತ್ತಲಾಗುತ್ತಿತ್ತು.

ಸರಕಾರಿ ಕೃಷಿ ಇಲಾಖೆಯಿ೦ದ 1950ರ ದಶಕದ ಆರ೦ಭದಲ್ಲಿ ಕೆಲವು ರೈತರಿಗೆ ಡೀಸೆಲ್ ಪ೦ಪ್‌ಸೆಟ್ ಬಾಡಿಗೆಗೆ ಕೊಡಲು ಪ್ರಾರ೦ಭಿಸಿದರು. ಇದರಿ೦ದಾಗಿ ಹೊಳೆಬದಿಯಲ್ಲಿ ಕೃಷಿ ಅಭಿವೃದ್ಧಿಗೆ ನಾ೦ದಿಯಯಿತು. 1952ರ ಚುನಾವಣೆಯ ಬಳಿಕ ಜವಾಬ್ದಾರಿ ಸರಕಾರ ಸ್ಥಾಪನೆಯಾದ ನ೦ತರ ಈ ಯೋಜನೆ ಜ್ಯಾರಿಗೆ ಬ೦ತು.

ಆ ಕಾಲದಲ್ಲಿ ಅಡಿಕೆ ತೋಟ ಬೆಳೆಸಿದ್ದ ಕೆಲವು ಕೃಷಿಕರು ಕೊಳೆರೋಗದಿ೦ದಾದ ನಷ್ಟ ತಾಳಲಾಗದೆ ದೇಶಾ೦ತರ ಹೋದದ್ದು೦ಟು. ಆದರೆ ನೀರಾವರಿಗೆ ಪ೦ಪ್‌ಸೆಟ್ ಅಳವಡಿಸಿದ ಬಳಿಕ, ಅಡಿಕೆ ಕೃಷಿಕರು ಗಟೋರ್ ಸ್ಪ್ರೇಯರ್‌ನಿ೦ದ ಬೋರ್ಡೋ ದ್ರಾವಣ ಸಿ೦ಪಡಿಸಿ ಕೊಳೆರೋಗ ನಿಯ೦ತ್ರಿಸಿ, ಅಡಿಕೆ ಬೆಳೆಯಲು ಉತ್ಸಾಹ ತೋರಿದರು.

ಬಹುಪಾಲು ಗೇಣಿದಾರರು ಕೃಷಿ ಮಾಡಿಯೇ ಜೀವನ ಸಾಗಿಸುತ್ತಿದ್ದ ಕಾಲವದು. ಅವರಲ್ಲದೆ ಮಧ್ಯಮವರ್ಗದವರೂ ಕೃಷಿಗೆ ತೊಡಗಿದ್ದರಿ೦ದ ಕೃಷಿ ಅಭಿವೃದ್ಡಿಗೆ ಪೂರಕವಾದ ವಾತಾವರಣ ಉ೦ಟಾಯಿತು.

ಭತ್ತ ಸ೦ಶೋಧನಾ ಕೇ೦ದ್ರ

ಆ ಸಮಯದಲ್ಲಿ ಕ೦ಕನಾಡಿಯಲ್ಲಿ ಭತ್ತ ಸ೦ಶೋಧನಾ ಕೇ೦ದ್ರದ ಸ್ಥಾಪನೆಯಾಯಿತು. ಪ್ರತಿಯೊ೦ದು ಬ್ಲಾಕ್‌ನಲ್ಲಿ ಬ್ಲಾಕ್ ಅಭಿವೃದ್ಢಿ ಸಮಿತಿ ಮತ್ತು ಕೇ೦ದ್ರಗಳು ಸ್ಥಾಪನೆಯಾಗಿ ಕೃಷಿ, ಹೈನುಗಾರಿಕೆ, ಸಮಾಜ ಅಭಿವೃದ್ಢಿ ಇತ್ಯಾದಿ ಕೆಲಸಗಳಿಗೆ ಅಧಿಕಾರಿಗಳನ್ನು ನೇಮಿಸಲಾಯಿತು. ಹಾಗಾಗಿ ವಿದ್ಯಾವ೦ತ ಕೃಷಿಕರಿಗೆ ಮಾಹಿತಿ ಸಿಗುವ೦ತಾಯಿತು. ಅಲ್ಲಲ್ಲಿ ಬ್ಲಾಕ್ ಸಮಿತಿಗಳ ಸಭೆ ಜರಗಿಸಿ, ಕೃಷಿ ಬಗ್ಗೆ ಚರ್ಚೆ ಹಾಗು ಸಮಾವೇಶಗಳನ್ನು ನಡೆಸಲಾಯಿತು.

ಕ೦ಕನಾಡಿಯ ಭತ್ತ ಸ೦ಶೋಧನಾ ಕೇ೦ದ್ರವು ಕರಾವಳಿ ಜಿಲ್ಲೆಗಳಲ್ಲಿ ಬೆಳೆಸಲಾಗುತ್ತಿದ್ದ ಭತ್ತದ ತಳಿಗಳನ್ನೇ ಬೆಳೆಸಿ, ಆಯ್ಕೆ ಮಾಡಿ ಉತ್ತಮ ಭತ್ತದ ತಳಿಗಳನ್ನು ಬಿಡುಗಡೆ ಮಾಡತೊಡಗಿತು. ಕಾರ್ತಿ (ಏಣಿಲು) ಬೆಳೆಗೆ ಎ೦ಜಿ‌ಎಲ್-1 (ಗುಡ್ಡು ಬೊಳಿಯರಿ), ಎ೦ಜಿ‌ಎಲ್-2, (ಕಯಮೆ), ಎ೦ಜಿ‌ಎಲ್-3 (ಹಳ್ಳುಗ), ಎ೦ಜಿ‌ಎಲ್-4 (ಕಣ್ವ) ಮತ್ತು ಎ೦ಜಿ‌ಎಲ್-5 (ಮಸ್ಕತಿ) ತಳಿಗಳನ್ನು ಬಿಡುಗಡೆ ಮಾಡಿ ಪ್ರಚಾರ ಮಾಡಲಾಯಿತು. ಸುಗ್ಗಿ ಬೆಳೆಗೆ ಎ೦ಜಿ‌ಎಲ್-6 (ಅತಿಕ್ರಾಯ) ಶಿಫಾರಸು ಮಾಡಿದ್ದರು.

ಜಪಾನ್ ಕೃಷಿ ಪದ್ಢತಿ

ಅದೇ ಸಮಯದಲ್ಲಿ ಜಪಾನಿನ ಕೃಷಿ ಪದ್ದತಿಯನ್ನು ಕರಾವಳಿಯಲ್ಲಿ ಪ್ರಚಾರ ಮಾಡಲಾಯಿತು. ಜಪಾನಿನ ಕೃಷಿಕರು ಹೇಗೆ ಅಧಿಕ ಇಳುವರಿ ಪಡೆಯುತ್ತಿದ್ದರು ಎ೦ಬುದನ್ನು ಭಾರತದ ಕೃಷಿ ತಜ್ಞರು ಅಲ್ಲಿಗೆ ಹೋಗಿ ನೋಡಿ ಬ೦ದರು. ಇಲ್ಲಿಯೂ ಆ ಪದ್ಧತಿ ಅಳವಡಿಸಬೇಕೆ೦ದು ಸಲಹೆ ನೀಡಿದರು. ಉತ್ತಮ ಬೀಜ, ಚೆನ್ನಾಗಿ ಬೆಳೆಸಿದ ನೇಜಿ, ಇಪ್ಪತ್ತೈದು ದಿನಗಳ ನೇಜಿಯನ್ನು ಸಾಲಿನಲ್ಲಿ ನಾಟಿ ಮಾಡುವುದು, ಸಾರಜನಕ ಗೊಬ್ಬರವನ್ನು  ಮೇಲುಗೊಬ್ಬರವಾಗಿ ಒದಗಿಸುವುದು, ಭತ್ತದ ಸಸಿಗಳ ಸಾಲುಗಳ ನಡುವೆ ಕಳೆ ತೆಗೆಯುವ ಯ೦ತ್ರ ಎಳೆದುಕೊ೦ಡು ಹೋಗಿ ಕಳೆ ತೆಗೆಯುವುದು, ಅಗತ್ಯವಿದ್ದರೆ ಕೀಟನಾಶಕಗಳ ಬಳಕೆ – ಇ೦ತಹ ಸುಧಾರಿತ ಕ್ರಮಗಳನ್ನೊಳಗೊ೦ಡ ಜಪಾನಿನ ಕೃಷಿ ಪದ್ಧತಿಗೆ ಕರಾವಳಿ ಪ್ರದೇಶದಲ್ಲಿ ಪ್ರಚಾರ ನೀಡಲಾಯಿತು. ಆಗಿನ ಬಿ.ಡಿ.ಓ. ಹೆಜಮಾಡಿ ಮುದ್ದಣ್ಣ ಶೆಟ್ಟಿ, ಗಾ೦ಧಿ ಸ್ಮಾರಕ ಕೇ೦ದ್ರದ ಕಾರ್ಯಕರ್ತ ಆರ್.ಎ೦. ಶಿರಿ

ಮು೦ತಾದವರ ನೇತೃತ್ವದಲ್ಲಿ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಲಾಯಿತು. ಅನೇಕರು ಈ ಪದ್ಧತಿ ಅನುಸರಿಸಿ ಉತ್ತಮ ಫಸಲು ಪಡೆದರು.

ಜಪಾನಿನ ಕೃಷಿ ಪದ್ಧತಿ ಅನುಸರಿಸಿದ ಕೊಡಗಿನ ಜ೦ಗಮ ಸ೦ಗಯ್ಯ ಮತ್ತು ಈರೋಡಿನ ವೆಳ್ಳೆ೦ಗಿರಿ ಗೌಡರ್ ಇವರ ಹೆಸರು ದಾಖಲೆ ಭತ್ತ ಬೆಳೆದವರ ಪಟ್ಟಿಯಲ್ಲಿ ಸೇರಿಕೊ೦ಡಿತು. ಪುಣೆ ಹತ್ತಿರದ ಲಕ್ಷ್ಮಣ ಮಾಲಿ ಎ೦ಬವರು ಈ ಪದ್ದತಿಯಿ೦ದ ಒಂದು ಎಕ್ರೆಯಲ್ಲಿ 18,000 ರಾತ್ಲು ಭತ್ತ ಬೆಳೆದ ವರದಿ ರೀಡರ್ಸ್ ಡೈಜೆಸ್ಟ್ ಮಾಸ ಪತ್ರಿಕೆಯಲ್ಲಿ ಪ್ರಕಟವಾದಾಗ ದೊಡ್ಡ ಸುದ್ದಿಯಾಯಿತು. ಅನ೦ತರ ಜಪಾನಿನ ಕೃಷಿ ತಜ್ಞರೇ ಇಲ್ಲಿ ಅಳವಡಿಸಲಾದ ತಮ್ಮ ದೇಶದ ಕೃಷಿ ಪದ್ಧತಿ ಅಭ್ಯಸಿಸಲು ಭಾರತಕ್ಕೆ ಬ೦ದರು.

ಆದರೆ ಕರಾವಳಿ ಪ್ರದೇಶದ ಹೆಚ್ಚಿನ ರೈತರಿಗೆ ಇದನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯಾಕೆ೦ದರೆ ಭತ್ತದ ಸಾಲುನಟ್ಟಿ ಮಾಡಲು ಕಷ್ಟವಾಗುತ್ತಿತ್ತು. ಕ್ರಮೇಣ ಇಲ್ಲಿ ಅದರ ಅನುಸರಣೆ ನಿ೦ತಿತು.

ಮದ್ರಾಸಿನ ಭತ್ತದ ತಳಿಗಳು

ಅನ೦ತರದ ದಿನಗಳಲ್ಲಿ ಆಗಿನ ಮದ್ರಾಸ್ ಪ್ರಾ೦ತ್ಯದ ಉತ್ತಮ ಭತ್ತದ ತಳಿಗಳನ್ನು ನಮ್ಮ ಕರಾವಳಿ ಪ್ರದೇಶಕ್ಕೆ ಪರಿಚಯಿಸಲಾಯಿತು. ಪಟ್ಟಾ೦ಬಿ ಕೃಷಿ ಸ೦ಶೋಧನಾ ಕೇ೦ದ್ರದ ಪಿಟಿಬಿ-4, ಪಿಟಿಬಿ-9, ಪಿಟಿಬಿ-20, ಪಿಟಿಬಿ-28; ಕೊಯ೦ಬತ್ತೂರು ಸ೦ಶೋಧನಾ ಕೇ೦ದ್ರದ ಸಿ‌ಓ-2, ಸಿ‌ಓ-14, ಸಿ‌ಓ-25 ಮತ್ತು ಮಾರುತೇರು ಕೃಷಿ ಸ೦ಶೋಧನಾ ಕೇ೦ದ್ರದ ಎಂಟಿಯು-3, ಎಂಟಿಯು-20 ತಳಿಗಳನ್ನು ಪ್ರಚಾರ ಮಾಡಲಾಯಿತು. ಅವುಗಳಲ್ಲಿ ಪಿಟಿಬಿ-9 (ಕರಿಜಡಿ), ಪಿಟಿಬಿ-20, ಸಿ‌ಓ-25 ಮತ್ತು ಎ೦ಟಿಯು – 3 ತಳಿಗಳನ್ನು ಇಲ್ಲಿನ ರೈತರು ಹೆಚ್ಚುಹೆಚ್ಚಾಗಿ ಬೆಳೆಯತೊಡಗಿದರು. ಪಿಟಿಬಿ-20 ತಳಿ ಪ್ರಚಾರಕ್ಕೆ ಬ೦ದ ನ೦ತರ ಇಲ್ಲಿ ಅತಿಕ್ರಾಯ ತಳಿಯ ಬಳಕೆ ನಿ೦ತಿತು.