ಇದು ದೊಡ್ಡ ಕಾರ್ಖಾನೆ :
ಯಂತ್ರದಾರ್ಭಟವಿಲ್ಲ,
ಬೆಳಗಾಗ ಬನ್ನಿರೋ ಎಂದು ಕಿರಿಚುವ ಕೊರಳಿ-
ಗುಸಿರಿಲ್ಲ.
ಭೋರ್ಗರೆವ ಜಲಪಾತ ಥಟ್ಟನೆ ಬತ್ತಿ
ತಳದ ಹಾವಸೆ ಬಂಡೆ ಕೊರಕಲಿನ ಕಂಕಾಲ
ಹಲ್ಲು ಕಿರಿಯುವ ಮೌನ !
ಚಕ್ರದರಗಳ ನಡುವೆ ಬಲೆಯ ನೆಯ್ದಿವೆ ಜೇಡ ;
ಕಿಡಿಯಿರದ ಕುಲುಮೆ ಕಗ್ಗವಿಯೊಳಗೆ ಬೂದಿಯ ನಿದ್ದೆ.
ಹೊಗೆ ಹಿಡಿದ ಛಾವಣಿಯ ಗಾಜು ಮೂಲೆಗಳಲ್ಲಿ
ಲೊಚಗುಡುವ ಹಲ್ಲಿ !
ಇದ್ದಕಿದ್ದಂತೆ ಸಿಡಿಲೆರಗಿ ಬಡಿದು ಚೂರಾದಂತೆ
ಅಲ್ಲಲ್ಲೆ ಸಾಮಾನೆಲ್ಲ ಚಲ್ಲಾಪಿಲ್ಲಿ.
ಭೋರೆಂದು ಮೊರೆದಿದೆ ಗಾಳಿ-
ನಟ್ಟುಬೋಲ್ಟುಗಳಿಂದ ಕಿಟಕಿ ಕದಗಳು ಮಾತ್ರ
ಕಟುವಿಕಟ ರವದಲ್ಲಿ ರೆಕ್ಕೆ ಬಡಿಯುವ ಚಿತ್ರ !