ಬಾನ ತಳಿಗೆಯೊಳಿಟ್ಟ ಹಣತೆಗಳ ರೀತಿಯಲಿ
ರವಿ ಶಶಿಗಳಾರತಿಯು ಬೆಳಗುತಿರಲು,
ನಿನ್ನ ರೂಪವ ದಿನವು ಸಿಂಗರಿಪ ತೊಡವಿನೊಲು
ಲಕ್ಷ ನಕ್ಷತ್ರಗಳು ರಾಜಿಸಿರಲು,
ಮಂದ ಮಂದಾನಿಲನು ಧೂಪದೊಲು ತೀಡುತಿರೆ,
ಗಾಳಿ ಚಾಮರ ಸೇವೆ ಗೈಯುತಿರಲು,
ಸಕಲ ವನರಾಜಿಗಳು ಹೂವಿನಾರತಿ ಎತ್ತಿ
ನಿತ್ಯವೂ ನಿನಗಾಗಿ ಶೋಭಿಸಿರಲು-

ಏನು ಅದ್ಭುತ ಪೂಜೆ ಸಲ್ಲುತಿದೆ ನಿತ್ಯವೂ
ಭಯ ದುಃಖವನು ಕೊಂದ ಗುರುವೆ ನಿನಗೆ
ಓಂಕಾರ ನಾದವಿದೊ ಗುಡುಗಿನೊಲು ಮೊಳಗುತಿದೆ
ಸಕಲ ಸಚರಾಚರದ ಎದೆಯ ಒಳಗೆ !
ಓ ಅಪೂರ್ವವೆ ನಿನ್ನ ಕರುಣೆಯನು ಕರೆಯಯ್ಯ
ಬೇಡುವೀ ನಾನಕನ ಹೃದಯದೊಳಗೆ.