ನಮ್ಮ ಪಕ್ಕದ ಮನೆಯ ಸಾಹುಕಾರರ ಧರ್ಮಪತ್ನಿ
ವೆಂಕಟಲಕ್ಷ್ಮಮ್ಮನವರು, ನಾರಿಯೋ ಒಡವೆಗಳ
ಲಾರಿಯೋ ಅನ್ನುವಂತಿದ್ದಾರೆ. ಗಂಡ ದೊಡ್ಡ ಕುಳ.
ಮೇಲಾಗಿ ವೆಂಕಟರಮಣನ ಭಕ್ತರು. ಅವರ ಹತ್ತು
ಮಳಿಗೆಗಳ ಕತ್ತಲಲ್ಲಿ ಕೊಳೆಯುತ್ತಿದೆ ಬಚ್ಚಿಟ್ಟ
ದವಸ ಧಾನ್ಯ. ಧರ್ಮಪತ್ನಿ ವೆಂಕಟಲಕ್ಷ್ಮಮ್ಮ
ಭಾಗ್ಯದ ಲಕ್ಷ್ಮಿಯಾಗಿ, ಕೂತರೆ ಏಳಲಾರದೆ,
ಎದ್ದರೆ ಕೂರಲಾರದೆ ಒಡವೆ ವಸ್ತ್ರಗಳಿಂದ
ಝಗ ಝಗಿಸುತ್ತಾ ಕಣ್ಣು ಕುಕ್ಕುತ್ತಾರೆ…..

ನಮ್ಮ ತಿರುಪತಿಯ ಶ್ರೀಮದ್ ವೆಂಕಟೇಶ್ವರನ
ಪ್ರಿಯಪತ್ನಿ ಪದ್ಮಾವತೀ ದೇವಿಗೂ, ಮೊನ್ನೆ ಯಾರೋ
ನಮ್ಮ ಪಕ್ಕದ ಮನೆಯ ಸಾಹುಕಾರರಂಥವರು,
ಭಗವತ್ ಪ್ರೇರಣೆಯಿಂದ, ಹತ್ತು ಲಕ್ಷ ರೂಪಾಯಿ
ಬೆಲೆಯ ಪಚ್ಚೆಯ ಪದಕ ಮಾಡಿಸಿಕೊಟ್ಟರೆಂದು
ಹಿಂದೂ ಪತ್ರಿಕೆಯಲ್ಲಿ ಭಕ್ತಜನಪ್ರಿಯವಾದ ಸುದ್ದಿ.
ಅವಳಿಗೂ ಮೈತುಂಬ ಝಗ ಝಗ ಒಡವೆ.
ಹೀಗಿರುವಾಗ ನಮ್ಮ ಸಾಹುಕಾರರ ಹೆಂಡತಿಗೂ
ತಿರುಪತಿ ತಿಮ್ಮಪ್ಪನ ಪತ್ನಿಗೂ ಏನು ವ್ಯತ್ಯಾಸ ?