Categories
e-ದಿನ

ಏಪ್ರಿಲ್-01

 

ದಿನಾಚರಣೆಗಳು:

ಅಧಿಕೃತ ಆರ್ಥಿಕ ವರ್ಷಾರಂಭದ ದಿನ” ಭಾರತವನ್ನೊಳಗೊಂಡಂತೆ ಅನೇಕ ದೇಶಗಳಲ್ಲಿ ಸರ್ಕಾರದ ವಿಭಾಗಗಳು ಮತ್ತು ಉದ್ಯಮಗಳು ಆರ್ಥಿಕ ವ್ಯವಹಾರಗಳ ವರ್ಷದ ಪ್ರಾರಂಭದ ದಿನವೆಂದು ಈ ದಿನವನ್ನು ಪರಿಗಣಿಸಿವೆ.

ಏಪ್ರಿಲ್ ಮೂರ್ಖರ ದಿನಾಚರಣೆ ಜೆಫ್ಫರಿ ಚೌಸರ್ ಎಂಬಾತ 1392ರಲ್ಲಿ ಪ್ರಕಟಿಸಿದ ತಮ್ಮ ‘ದಿ ಕ್ಯಾಂಟರ್ಬರಿ ಕಥೆಗಳಲ್ಲಿ’ ಏಪ್ರಿಲ್ 1 ಮತ್ತು ಮೂರ್ಖರ ದಿನಕ್ಕೆ ಪ್ರಥಮ ಸಂಬಂಧ ಬೆಸಿದಿದ್ದಾರೆ. ಹೀಗೆ ನಿಜವೇ ಇರಬಹುದೇನೋ ಎಂಬಂತಹ ಸುಳ್ಳು ಸುದ್ಧಿಗಳನ್ನು ಹಬ್ಬಿಸಿ, ಹಾಸ್ಯವಾಗಿ ಇತರರನ್ನು ಬೇಸ್ತುಬೀಳಿಸುವ ದಿನವಾಗಿ ಏಪ್ರಿಲ್ 1 ದಿನವನ್ನು ಮೂರ್ಖರ ದಿನಾಚರಣೆಯನ್ನಾಗಿ ಆಚರಿಸುವ ಪರಿಪಾಠ ಬೆಳೆದಿದೆ. ಇಂತಹ ಪರಿಪಾಠಗಳಿಗೆ ಹಲವಾರು ಪ್ರಸಿದ್ಧ ಪತ್ರಿಕೆಗಳೂ ಸಹ ಪುಷ್ಟಿ ನೀಡುವಂತಹ ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಮಾರನೆಯ ದಿನ ಇದನ್ನು ಹಾಸ್ಯಕ್ಕೆ ಮಾಡಲಾಯ್ತು ಎಂದು ಪ್ರಕಟಿಸಿದ್ದಿದೆ.

ಪ್ರಮುಖಘಟನಾವಳಿಗಳು:

286: ಚಕ್ರವರ್ತಿ ಡಿಯೋಕ್ಲೆಟಿಯನ್ ತಮ್ಮ ಸೇನಾಧಿಕಾರಿಯಾದ ಮಾಕ್ಸಿಮಿಯಾನ್ ಅವರನ್ನು ಅಗಸ್ಟಸ್ ಸ್ಥಾನದ ಮೂಲಕ ಸಹ-ಚಕ್ರವರ್ತಿ ಸ್ಥಾನಕ್ಕೇರಿಸಿ ರೋಮನ್ ಚಕ್ರಾಧಿಪತ್ಯದ ಪಶ್ಚಿಮ ಪ್ರದೇಶದ ಅಧಿಪತ್ಯವನ್ನು ವಹಿಸಿಕೊಟ್ಟರು.

1545: ಅಪಾರ ಬೆಳ್ಳಿಯ ನಿಕ್ಷೇಪಗಳನ್ನು ಹೊಂದಿರುವ ಬೊಲಿವಿಯಾದ ಪಟೌಸಿಯನ್ನು ಅನ್ವೇಷಿಸಲಾಯಿತು

1826: ಸಾಮ್ಯುಯೆಲ್ ಮೊರಿ ಅವರು ಕಂಪ್ರೆಶನ್ ರಹಿತವಾದ ಗ್ಯಾಸ್ ಅಥವಾ ವೇಪರ್ ಎಂಜಿನ್ ಕಂಡುಹಿಡಿದರು.

1854: ಚಾರ್ಲ್ಸ್ ಡಿಕನ್ಸ್ ಅವರ ‘ಹಾರ್ಡ್ ಟೈಮ್ಸ್’ ಕೃತಿಯು ‘ಹೌಸ್ ಹೋಲ್ಡ್ ವರ್ಡ್ಸ್’ ನಿಯತಕಾಲಿಕದಲ್ಲಿ ಧಾರಾವಾಹಿಯಾಗಿ ಪ್ರಕಟಗೊಳ್ಳಲಾರಂಭಿಸಿತು.

1887: ಮುಂಬೈ ಅಗ್ನಿಶಾಮಕ ದಳವನ್ನು ಸ್ಥಾಪಿಸಲಾಯಿತು

1895: ಭಾರತದ ಸೇನೆಯಾದ ‘ಇಂಡಿಯನ್ ಆರ್ಮಿ’ ಸ್ಥಾಪನೆಗೊಂಡಿತು.

1924: ಅಡಾಲ್ಫ್ ಹಿಟ್ಲರನಿಗೆ ‘ಬೀರ್ ಹಾಳ್ ಪುಟ್ಸ್ಚ್’ನಲ್ಲಿ ಭಾಗವಹಿಸಿದ್ದಕ್ಕೆ 5 ವರ್ಷಗಳ ಜೈಲು ವಿಧಿಸಲಾಯಿತು. ಆದರೆ ಆತ ಸೇರೆಯಲ್ಲಿದ್ದದ್ದು 9 ತಿಂಗಳು ಮಾತ್ರ. ಈ ಅವಧಿಯಲ್ಲಿ ಆತ ‘ಮೆಯಿನ್ ಕಂಪ್ಫ್’ ರಚಿಸಿದ

1935: ಭಾರತದ ಕೇಂದ್ರೀಯ ಬ್ಯಾಂಕ್ ಆದ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಸ್ಥಾಪನೆಗೊಂಡಿತು.

1936: ಬಿಹಾರಿನಿಂದ ಬೇರ್ಪಟ್ಟು ಒರಿಸ್ಸಾ ಭಾರತದ ಪ್ರತ್ಯೇಕ ರಾಜ್ಯವಾಯಿತು.

1954: ಏರ್ ಮಾರ್ಷಲ್ ಸುಬ್ರತೋ ಮುಖರ್ಜಿ ಭಾರತದ ಪ್ರಥಮ ವಾಯುಪಡೆ ಮುಖ್ಯಸ್ಥರಾದರು.

1955: ಜನರಲ್ ರಾಜೇಂದ್ರ ಸಿನ್ಹಜಿ ಭಾರತದ ಪ್ರಥಮ ಸೇನಾ ದಂಡ ನಾಯಕರಾದರು.

1960: ‘ಟಿರೋಸ್-1’ ಉಪಗ್ರಹವು ಬಾಹ್ಯಾಕಾಶದಿಂದ ಮೊಟ್ಟ ಮೊದಲ ಚಿತ್ರವನ್ನು ಪ್ರಸಾರಮಾಡಿತು.

1971: ಬಾಂಗ್ಲಾದೇಶದ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನ ಸೇನೆಯು ಬಾಂಗ್ಲಾದೇಶದ ಕೆರಾನಿಗಂಜ್ ಉಪಾಜಿಲಾ ಎಂಬಲ್ಲಿ 1000 ಜನರನ್ನು ಹತ್ಯೆಮಾಡಿತು

1973: ಪ್ರಾಜೆಕ್ಟ್ ಟೈಗರ್ ಎಂಬ ಹುಲಿ ಸಂರಕ್ಷಣಾ ಯೋಜನೆಯನ್ನು ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ನಲ್ಲಿ ಆರಂಭಿಸಲಾಯಿತು.

1976: ಸ್ಟೀವ್ ಜಾಬ್ಸ್ ಮತ್ತು ಸ್ಟೀವ್ ವೋಜ್ನಿಯಾಕ್ ಅವರು ಕ್ಯಾಲಿಫೋರ್ನಿಯಾದಲ್ಲಿ ಆಪಲ್ ಇನ್ಕಾರ್ಪೋರೇಶನ್ ಸಂಸ್ಥೆಯನ್ನು ಸ್ಥಾಪಿಸಿದರು.

1979: ಶೇಕಡಾ 99ರಷ್ಟು ಮತಗಳಿಂದ ಇರಾನ್ ದೇಶವು ಇಸ್ಲಾಮಿಕ್ ಗಣರಾಜ್ಯವಾಗಿ ರೂಪುಗೊಂಡು, ಅಧಿಕೃತವಾಗಿ ಅಲ್ಲಿ ಷಾ ಆಡಳಿತವು ಕೊನೆಗೊಂಡಿತು.

2004: ಗೂಗಲ್ ಸಂಸ್ಥೆ ಸಾರ್ವಜನಿಕರಿಗೆ ‘ಜಿಮೈಲ್’ ವ್ಯವಸ್ಥೆಯನ್ನು ಘೋಷಿಸಿತು.

2007: ಭಾರಿ ಒತ್ತಡಕ್ಕೆ ಮಣಿದ ಫಿಡೆ (ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್) ಕೊನೆಗೂ ಭಾರತದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರಿಗೆ ಸಲ್ಲಬೇಕಾದ ಗೌರವವನ್ನು ಕೊಟ್ಟಿತು. ಭಾರತದ ವಿಶ್ವನಾಥನ್ ಆನಂದ್ ಅವರು ವಿಶ್ವ ಚೆಸ್ ಕ್ರೀಡೆಯ ನಂಬರ್ 1 ಆಟಗಾರ ಎಂದು ಫಿಡೆ ಶ್ರೇಯಾಂಕ ನಿರ್ಣಯ ಸಮಿತಿಯ ಅಧ್ಯಕ್ಷ ಕ್ಯಾಸ್ಟ್ರೊ ಅಂಬುಡೊ ಖಚಿತಪಡಿಸಿದರು.

2007: ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಅವರ ಜನ್ಮದಿನವಾದ ಈದಿನದಂದು ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

2007: ಆಸ್ಟ್ರೇಲಿಯಾದ ವೇಗದ ಬೌಲರ್ ಗ್ಲೆನ್ ಮೆಗ್ರಾತ್ ಅವರು ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ನಿರ್ಮಿಸಿದರು. ತಮ್ಮ 33ನೇ ವಿಶ್ವಕಪ್ ಪಂದ್ಯದಲ್ಲಿ 56ಕ್ಕೆ ವಿಕೆಟ್ ಗಳಿಸಿದ ಮೆಗ್ರಾತ್ ಅವರು ಪಾಕಿಸ್ಥಾನದ ವಾಸಿಂ ಅಕ್ರಂ ಅವರ ಹೆಸರಿನಲ್ಲಿದ್ದ 38 ಪಂದ್ಯಗಳಿಂದ ಗಳಿಸಿದ್ದ 55 ವಿಕೆಟ್ ದಾಖಲೆಯನ್ನು ಮೀರಿ ಮುಂದುವರೆದರು.

2007: ಆಸ್ಟ್ರೇಲಿಯಾದ ವೇಗದ ಬೌಲರ್ ಗ್ಲೆನ್ ಮೆಗ್ರಾತ್ ಅವರು ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ನಿರ್ಮಿಸಿದರು. ತಮ್ಮ 33ನೇ ವಿಶ್ವಕಪ್ ಪಂದ್ಯದಲ್ಲಿ 56ಕ್ಕೆ ವಿಕೆಟ್ ಗಳಿಸಿದ ಮೆಗ್ರಾತ್ ಅವರು ಪಾಕಿಸ್ಥಾನದ ವಾಸಿಂ ಅಕ್ರಂ ಅವರ ಹೆಸರಿನಲ್ಲಿದ್ದ 38 ಪಂದ್ಯಗಳಿಂದ ಗಳಿಸಿದ್ದ 55 ವಿಕೆಟ್ ದಾಖಲೆಯನ್ನು ಮೀರಿ ಮುಂದುವರೆದರು.

2008: ಕಾಮನ್ವೆಲ್ತ್ ಮಹಾಪ್ರಧಾನ ಕಾರ್ಯದರ್ಶಿಯಾಗಿ ಭಾರತೀಯ ರಾಜತಂತ್ರಜ್ಞ ಕಮಲೇಶ್ ಶರ್ಮಾ ಅವರು ಲಂಡನ್ನಿನಲ್ಲಿ ಅಧಿಕಾರ ವಹಿಸಿಕೊಂಡರು.

2008: ಫಾಹ್ಮೀದಾ ಮಿರ್ಜಾ ಅವರು ಪಾಕಿಸ್ಥಾನ ಸಂಸತ್ತಿನಲ್ಲಿ ಮಹಿಳಾ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ ಪ್ರಥಮ ಮಹಿಳೆ ಎನಿಸಿದರು.

2008: ಪಾಕಿಸ್ಥಾನದ ಕ್ರಿಕೆಟ್ಟಿಗ ಶೋಯಬ್ ಅಖ್ತರ್ ಅವರ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಲಾಯಿತು. ಅಖ್ತರ್ ಅವರು ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಹಾಗೂ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಪಾಕಿಸ್ಥಾನ ಕ್ರಿಕೆಟ್ ಮಂಡಳಿಯು ಈ ನಿರ್ಧಾರ ಕೈಗೊಂಡಿತು.

2008: ಮಹಾರಾಷ್ಟ್ರ ಸರ್ಕಾರವು 2010ರೊಳಗಾಗಿ ಬೃಹನ್ಮುಂಬೈ ಮಹಾನಗರದಲ್ಲಿ ಮಾನೊ ರೈಲು ಆರಂಭಿಸುವ ಯೋಜನೆ ಕೈಗೆತ್ತಿಕೊಂಡಿತು.

2009: ಅತ್ಯಾಧುನಿಕ ಹಾಗೂ ಅತ್ಯಂತ ಸುರಕ್ಷಿತ ಎನ್ನಲಾದ ಬೋಯಿಂಗ್ ಬಿಸಿನೆಸ್ ಜೆಟ್‌ ಅನ್ನು ರಾಷ್ಟ್ರಪತಿಗಳು ಭಾರತೀಯ ವಾಯುಪಡೆಗೆ ವಿದ್ಯುಕ್ತವಾಗಿ ಹಸ್ತಾಂತರಿಸಿದರು.
ಅತ್ಯಾಧುನಿಕ ಹಾಗೂ ಅತ್ಯಂತ ಸುರಕ್ಷಿತ ಎನ್ನಲಾದ ಬೋಯಿಂಗ್ ಬಿಸಿನೆಸ್ ಜೆಟ್‌ ಅನ್ನು ರಾಷ್ಟ್ರಪತಿಗಳು ಭಾರತೀಯ ವಾಯುಪಡೆಗೆ ವಿದ್ಯುಕ್ತವಾಗಿ ಹಸ್ತಾಂತರಿಸಿದರು.

ಪ್ರಮುಖಜನನ/ಮರಣ:

1578: ಇಂಗ್ಲಿಷ್ ವೈದ್ಯ ವಿಜ್ಞಾನಿ ವಿಲಿಯಂ ಹಾರ್ವೆ ಜನಿಸಿದರು. ಹೃದಯವು ಪಂಪಿನಂತೆ ಕಾರ್ಯನಿರ್ವಹಿಸುತ್ತ ರಕ್ತಸಂಚಾರಕ್ಕೆ ನೆರವಾಗುತ್ತದೆ ಎಂಬುದನ್ನು ಅವರು ನಿರೂಪಿಸಿದರು.

1865: ಆಸ್ತ್ರಿಯನ್-ಜರ್ಮನ್ ಪುರಸ್ಕೃತ ರಸಾಯನ ಶಾಸ್ತ್ರ ವಿಜ್ಞಾನಿ ರಿಚರ್ಡ್ ಅಡಾಲ್ಫ್ ಸಿಗ್ಮಂಡಿ ಅವರು ವಿಯೆನ್ನಾದಲ್ಲಿ ಜನಿಸಿದರು. ಇವರು ‘ಕೊಲ್ಲಾಯ್ಡ್ಸ್’ ಕುರಿತಾದ ಸಂಶೋಧನೆಗೆ ಹೆಸರಾಗಿದ್ದು, 1925ರ ವರ್ಷದಲ್ಲಿ ಇವರಿಗೆ ನೊಬೆಲ್ ರಸಾಯನ ಶಾಸ್ತ್ರ ಪ್ರಶಸ್ತಿ ನೀಡಲಾಯಿತು. ಚಂದ್ರನ ಮೇಲಿನ ‘ಕುಳಿ’ಗೆ ‘ಕ್ರೇಟರ್ ಸಿಗ್ಮಂಡಿ’ ಎಂದು ಇವರ ಹೆಸರಿರಿಸಿ ಗೌರವಿಸಲಾಗಿದೆ.

1856: ಭಾರತೀಯ ವೈದ್ಯ ಅಕಾಸಿಯೋ ಗೇಬ್ರಿಯಲ್ ವೇಗಾಸ್ ಅವರು ಗೋವಾದ ಅರ್ಪೊರಾ ಎಂಬಲ್ಲಿ ಜನಿಸಿದರು. 1896ರ ವರ್ಷದಲ್ಲಿ ಇವರು ಮುಂಬೈನಲ್ಲಿ ಬ್ಯುಬಾನಿಕ್ ಪ್ಲೇಗ್ ಹರಡಿದ್ದನ್ನು ಗುರುತಿಸಿದರು. ಇವರ ಈ ಗುರುತಿಸುವಿಕೆಯಿಂದ ಅನೇಕ ಜೀವಗಳು ಉಳಿದವಲ್ಲದೆ, ಇವರು 18,000ಕ್ಕೂ ಹೆಚ್ಚು ಮಂದಿಗೆ ಇನಾಕ್ಯುಲೇಶನ್ ಸಹಾ ನೀಡಿದರು. ಇವರು ಬಾಂಬೆ ಮುನಿಸಿಪಲ್ ಕಾರ್ಪೊರೇಶನ್ನಿನ ಅಧ್ಯಕ್ಷರೂ ಆಗಿದ್ದರು.

1883: ಮೂಕಿ ಯುಗದ ಪ್ರಖ್ಯಾತ ಅಮೆರಿಕನ್ ನಟ ಲೋನ್ ಚಾನೆಯ್ ಅವರು ಕೊಲರಾಡೋದಲ್ಲಿ ಜನಿಸಿದರು. ಇವರನ್ನು ‘ಸಹಸ್ರ ಮುಖಗಳ ಮನುಷ್ಯ’ (ಮ್ಯಾನ್ ಆಫ್ ಥೌಸಂಡ್ ಫೇಸಸ್) ಎಂದು ಕರೆಯಲಾಗುತ್ತಿತ್ತು.

1889: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕರಾದ ಕೇಶವ ಬಲಿರಾಂ ಹೆಡ್ಗೆವಾರ್ ಅವರು ಬೋಧನ್ ಎಂಬಲ್ಲಿ ಜನಿಸಿದರು. ಸ್ವಾಮಿ ವಿವೇಕಾನಂದರು ಮತ್ತು ಅರವಿಂದರ ಬೋಧನೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲ ಆದರ್ಶಗಳಾಗಬೇಕು ಎಂದು ಇವರು ಕನಸು ಕಂಡರು.

1908: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಮಾಗಡಿ ತಾಲ್ಲೂಕಿನ ವೀರಪುರದಲ್ಲಿ ಜನಿಸಿದರು. ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಪಾರಂಗತರಾದ ಸ್ವಾಮೀಜಿಯವರು ವಿರಕ್ತಾಶ್ರಮಕ್ಕೆ ಬಂದದ್ದು 1930ರಲ್ಲಿ. ಇಂದು ಬೆಳೆದು ನಿಂತಿರುವ ಸಿದ್ಧಗಂಗಾ ವಿದ್ಯಾಸಂಸ್ಥೆ ಸ್ವಾಮೀಜಿಯವರ ಶ್ರಮದ ಪ್ರತಿಫಲ. ಇದಲ್ಲದೆ ಸಿದ್ಧಗಂಗಾಮಠದ ಗುರುಕುಲದಲ್ಲಿ 5 ವರ್ಷದಿಂದ 16 ವರ್ಷದವರೆಗಿನ ಸುಮಾರು 8500 ಮಕ್ಕಳು ಆಶ್ರಯಪಡೆದಿದ್ದಾರೆ.

1919: ಅಮೆರಿಕದ ಮತ್ತು ಸೇನಾನಿ ಜೋಸೆಫ್ ಮುರ್ರೆ ಅವರು ಮಸಚುಸೆಟ್ಸಿನ ಮಿಲ್ಫೋರ್ಡ್ ಎಂಬಲ್ಲಿ ಜನಿಸಿದರು. ‘ಮನುಷ್ಯನಿಗೆ ಚಿಕಿತ್ಸೆ ನೀಡುವಿಕೆಯಲ್ಲಿ ದೇಹದ ಭಾಗಗಳು ಮತ್ತು ಕಣಗಳ ಕಸಿಮಾಡುವಿಕೆ’ಯನ್ನು ಬಳಕೆಗೆ ತಂದ ಇವರಿಗೆ 1990 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತು.

1921: ರಾಜಕಾರಣಿ ಮತ್ತು ಕ್ರಿಕೆಟ್ ಆಡಳಿತಗಾರ ಎನ್.ಕೆ.ಪಿ. ಸಾಲ್ವೆ ಅವರು ಮಧ್ಯಪ್ರದೇಶದ ಚಿಂದ್ವಾರ ಎಂಬಲ್ಲಿ ಜನಿಸಿದರು. ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದ ಇವರು ವಿಶ್ವಕಪ್ ಕ್ರಿಕೆಟ್ ಅನ್ನು ಇಂಗ್ಲೆಂಡ್ ಮಾತ್ರವೇ ಅಲ್ಲದೆ ಇತರೆಡೆಗಳಲ್ಲೂ ನಡೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

1933: ಅಲ್ಜೀರಿಯನ್-ಫ್ರೆಂಚ್ ಭೌತವಿಜ್ಞಾನಿ ಕ್ಲಾಡ್ ಕೋಹೆನ್-ತನ್ನೌಡ್ಜಿ ಅವರು ಫ್ರೆಂಚ್ ಅಲ್ಜೀರಿಯಾಗೆ ಸೇರಿದ್ದ ಕಾನ್ಸ್ಟಾನ್ಟೈನ್ ಎಂಬಲ್ಲಿ ಜನಿಸಿದರು. ಲೇಸರ್ ಕೂಲಿಂಗ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1997 ವರ್ಷದ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತು.

1936: ಅಸ್ಸಾಂನ ಮುಖ್ಯಮಂತ್ರಿಗಳಾಗಿದ್ದ ತರುಣ್ ಗಗೊಯ್ ಅವರು ಈಗಿನ ಜೋರ್ಹಾಟ್ ಜಿಲ್ಲೆಗೆ ಸೇರಿದ ತಾಜ್-ಅಹೋಮ್ ಎಂಬಲ್ಲಿ ಜನಿಸಿದರು.

1940: ಕೀನ್ಯಾದ ಪರಿಸರವಾದಿ ಮತ್ತು ರಾಜಕಾರಣಿ ಮಹಿಳೆ ವಂಗಾರಿ ಮಾಥೈ ಅವರು ಕೀನ್ಯಾದ ಲ್ಲ್ಹಿತೆ ಎಂಬಲ್ಲಿ ಜನಿಸಿದರು. ‘ಗ್ರೀನ್ ಬೆಲ್ಟ್ ಮೂವ್ಮೆಂಟ್’ ಸ್ಥಾಪಿಸಿದ ಈಕೆಗೆ 2004 ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.

1941:ಭಾರತದ ಕ್ರಿಕೆಟ್ ಕ್ಯಾಪ್ಟನ್ ಆಗಿದ್ದ ಅಜಿತ್ ವಾಡೇಕರ್ ಮುಂಬೈನಲ್ಲಿ ಜನಿಸಿದರು. 1971ರಲ್ಲಿ ಇಂಗ್ಲೆಂಡಿನಲ್ಲಿ ಆ ದೇಶದ ವಿರುದ್ಧ ನಡೆದ ಪಂದ್ಯಗಳಲ್ಲಿ ಭಾರತಕ್ಕೆ ಮೊದಲ ಸರಣಿ ಜಯ ತಂದು ಕೊಟ್ಟ ಕ್ರಿಕೆಟ್ ಕ್ಯಾಪ್ಟನ್ ಎಂಬ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ.

1968: ರಷ್ಯಾದ ಭೌತವಿಜ್ಞಾನಿ ಲೆವ್ ಲಾಂಡಾವ್ ಅವರು ಮಾಸ್ಕೋದಲ್ಲಿ ನಿಧನರಾದರು. ಇವರಿಗೆ ಸೂಪರ್ ಫ್ಲೂಯಿಡಿಟಿ ಕುರಿತಾದ ಸಂಶೋಧನೆಗಾಗಿ 1962 ವರ್ಷದ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತು.

2007: ಕಡಿಮೆ ವೆಚ್ಚದ ಮನೆಗಳ ನಿರ್ಮಾಣ ತಂತ್ರಜ್ಞಾನದ ಅನ್ವೇಷಕ ಎಲ್. ಬೇಕರ್ ಅವರು ತಮ್ಮ 90ನೇ ವಯಸ್ಸಿನಲ್ಲಿ ತಿರುವನಂತಪುರದಲ್ಲಿ ನಿಧನರಾದರು. 1945ರಲ್ಲಿ ಭಾರತಕ್ಕೆ ಬಂದ ಇವರು ಇಲ್ಲಿಯೇ ನೆಲೆಸಿ 1989ರಲ್ಲಿ ಈ ದೇಶದ ಪೌರತ್ವ ಪಡೆದಿದ್ದರು.