Categories
e-ದಿನ

ಏಪ್ರಿಲ್-02

ಪ್ರಮುಖಘಟನಾವಳಿಗಳು:

1679: ಮೊಘಲ್ ದೊರೆ ಔರಂಗಜೇಬನು ಮುಸ್ಲಿಮೇತರರ ಮೇಲೆ ‘ಜೆಜಿಯಾ’ ತೆರಿಗೆಯನ್ನು ಮತ್ತೆ ಜಾರಿಗೊಳಿಸಿದನು. ಸುಮಾರು ನೂರು ವರ್ಷಕ್ಕೆ ಮೊದಲು ಈ ತೆರಿಗೆಯನ್ನು ಅಕ್ಬರ್ ರದ್ದುಗೊಳಿಸಿದ್ದರು.

1755: ಕಾಮಡೋರ್ ವಿಲಿಯಂ ಜೇಮ್ಸನು ಮರಾಠರ ಸುವರ್ಣದುರ್ಗ ಕೋಟೆಯನ್ನು ವಶಪಡಿಸಿಕೊಂಡನು.

1792:ಅಮೆರಿಕದಲ್ಲಿ ‘ದಿ ಕಾಯಿನೇಜ್ ಆಕ್ಟ್’ ಜಾರಿಗೆ ಬಂದು ಅಮೆರಿಕದ ‘ಮಿಂಟ್’ ಚಲಾವಣೆಗೆ ಬಂತು.

1800: ಲುಡ್ವಿಗ್ ವಾನ್ ಬಿಥೋವೆನ್ ಅವರು ತಮ್ಮ ಪ್ರಥಮ ಸಿಂಪೋನಿ ಕಾರ್ಯಕ್ರಮವನ್ನು ವಿಯೆನ್ನಾದಲ್ಲಿ ನೀಡಿದರು

1851: ನಾಲ್ಕನೇ ರಾಮ ಥಾಯ್ಲೆಂಡಿನ ರಾಜನಾದ

1902: ಅಮೆರಿಕದ ಪ್ರಥಮ ಚಲನಚಿತ್ರ ಮಂದಿರವಾದ ‘ಎಲೆಕ್ಟ್ರಿಕ್ ಥಿಯೇಟರ್’ ಲಾಸ್ ಏಂಜೆಲಿಸ್ ನಗರದಲ್ಲಿ ಆರಂಭಗೊಂಡಿತು.

1917: ಅಮೆರಿಕದ ಅಧ್ಯಕ್ಷ ವುಡ್ರೋ ವಿಲ್ಸನ್ ಅವರು ಅಮೆರಿಕದ ಕಾಂಗ್ರೆಸ್ ಮುಂದೆ ಜರ್ಮನಿಯ ಮೇಲೆ ಯುದ್ಧವನ್ನು ಘೋಷಿಸಲು ಕೋರಿದರು

1965: ವಿ.ವಿ. ಗಿರಿ ಅವರು ಕರ್ನಾಟಕದ ಮೂರನೇ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡರು.

1972: 1950ರ ದಶಕದ ಪ್ರಾರಂಭದಲ್ಲಿ ‘ರೆಡ್ ಸ್ಕೇರ್’ ಘಟನೆಯ ಸಂದರ್ಭದಲ್ಲಿ ಕಮ್ಯೂನಿಸ್ಟ್ ಎಂದು ಹಣೆಪಟ್ಟಿ ಕಟ್ಟಿಸಿಕೊಂಡ ನಂತರದಲ್ಲಿ ಇದೇ ಮೊದಲಬಾರಿಗೆ ಚಾರ್ಲಿ ಚಾಪ್ಲಿನ್ ಅವರು ಅಮೆರಿಕಕ್ಕೆ ಹಿಂದಿರುಗಿದರು.

1973: ಕಂಪ್ಯೂಟರೀಕೃತ ಕಾನೂನು ಸಂಶೋಧನಾ ಸೇವೆಯಾದ ಲೆಕ್ಸಿನೆಕ್ಸಿಸ್ ಆರಂಭಗೊಂಡಿತು

2008: ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ಚುನಾವಣೆಗಳನ್ನು ಘೋಷಿಸಲಾಯಿತು. ಕ್ಷೇತ್ರ ಮರುವಿಂಗಡಣೆಯ ನಂತರದಲ್ಲಿ ಚುನಾವಣೆ ಘೋಷಿತಗೊಂಡ ಪ್ರಥಮ ರಾಜ್ಯವೆನಿಸಿತು.

2009: ಪ್ರಧಾನಿ ಮನಮೋಹನ ಸಿಂಗ್ ಮತ್ತು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ನಡುವೆ ಮೊದಲ ಬಾರಿಗೆ ದ್ವಿಪಕ್ಷೀಯ ಮಾತುಕತೆ ನಡೆಯಿತು. ಲಂಡನ್ನಿನಲ್ಲಿ ಜಿ 20 ಶೃಂಗಸಭೆ ಮುಕ್ತಾಯಗೊಂಡ ಕೂಡಲೇ ಆರಂಭವಾದ ಈ ಸಭೆಯಲ್ಲಿ, ಭಯೋತ್ಪಾದನೆ ಹಾಗೂ ಹವಾಮಾನ ವೈಪರೀತ್ಯದ ವಿರುದ್ಧ ಜಂಟಿಯಾಗಿ ಹೋರಾಡಲು ಇರುವ ಹೊಸ ಮಾರ್ಗೋಪಾಯಗಳ ಬಗ್ಗೆ ಉಭಯ ನಾಯಕರೂ ಚರ್ಚಿಸಿದರು.

2009: ಆರ್ಥಿಕ ಬಿಕ್ಕಟ್ಟು ಹಾಗೂ ಜನರ ಅಭಿರುಚಿ ಬದಲಾದದ್ದರಿಂದ 72 ವರ್ಷಗಳಿಂದ ಪ್ರಸಾರವಾಗುತ್ತಿದ್ದ ಗೈಡಿಂಗ್ ಲೈಟ್ ಧಾರಾವಾಹಿಗೆ ತಡೆ ಹಾಕಲು ಅಮೆರಿಕದ ಸಿ.ಬಿ.ಎಸ್ ವಾಹಿನಿ ನಿರ್ಧರಿಸಿತು.

2011: ಭಾರತವು ಮಹೇಂದ್ರ ಸಿಂಗ್ ಧೋನಿ ಅವರ ನೇತೃತ್ವದಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಜಯಿಸಿತು. ಮುಂಬೈನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ, ಭಾರತ ತಂಡವು ಶ್ರೀಲಂಕಾ ತಂಡವನ್ನು 6 ವಿಕೆಟ್ಟುಗಳಿಂದ ಸೋಲಿಸಿ, ವಿಶ್ವಕಪ್ ಕ್ರಿಕೆಟ್ ಅನ್ನು ತನ್ನದೇ ನೆಲದಲ್ಲಿ ಗೆದ್ದ ಪ್ರಥಮ ರಾಷ್ಟ್ರವೆನಿಸಿತು.

ಪ್ರಮುಖಜನನ/ಮರಣ:

1805: ಪ್ರಸಿದ್ಧ ಡ್ಯಾನಿಶ್ ಕಥೆಗಾರ ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ ಅವರು ಡೆನ್ಮಾರ್ಕಿನ ಒಡೆನ್ಸ್ ಎಂಬಲ್ಲಿ ಜನಿಸಿದರು.

1862: ಅಮೆರಿಕನ್ ತತ್ವಜ್ಞಾನಿ, ಕೊಲಂಬಿಯಾ ವಿಶ್ವ ವಿದ್ಯಾಲಯದ ಅಧ್ಯಕ್ಷ ಮತ್ತು ಕಾರ್ನಿಗಿ ಎಂಡೋಮೆಂಟ್ ಫಾರ್ ಇಂಟರ್ನ್ಯಾಶನಲ್ ಪೀಸ್ ಅಧ್ಯಕ್ಷರಾದ ನಿಕೊಲಸ್ ಮುರ್ರೆ ಬಟ್ಲರ್ ಅವರು ನ್ಯೂ ಜೆರ್ಸಿಯ ಎಲಿಜಬೆತ್ ಎಂಬಲ್ಲಿ ಜನಿಸಿದರು. ಇವರಿಗೆ 1931 ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1891: ಭಾರತೀಯ ರಾಷ್ಟ್ರೀಯವಾದಿ ಮತ್ತು ಗೋವಾದಲ್ಲಿನ ವಿದೇಶಿ ವಸಾಹತುಗಳ ವಿರುದ್ಧದ ಹೋರಾಟಗಾರ ತ್ರಿಸ್ತಾವ್ ಬ್ರಗಾಂಕಾ ಕುನ್ಹಾ ಅವರು ಗೋವಾದ ಚಂದೋರ್ ಎಂಬಲ್ಲಿ ಜನಿಸಿದರು.

1898: ಭಾರತೀಯ ಕವಿ, ನಟ ಮತ್ತು ರಾಜಕಾರಣಿ ಹರೀಂದ್ರನಾಥ ಚಟ್ಟೋಪಾಧ್ಯಾಯ ಅವರು ಹೈದರಾಬಾದಿನಲ್ಲಿ ಜನಿಸಿದರು. ಇವರು ಸರೋಜಿನಿ ನಾಯ್ಡು ಅವರ ಕಿರಿಯ ಸಹೋದರರಾಗಿದ್ದು, ಮತ್ತೋರ್ವ ಮಹಾನ್ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಸಮಾಜ ಸುಧಾರಕಿ ಕರ್ನಾಟಕದ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಪತಿ. ಇವರಿಗೆ ಪದ್ಮಭೂಷಣ ಗೌರವ ಸಂದಿತ್ತು.

1902: ಪ್ರಖ್ಯಾತ ಹಿಂದೂಸ್ಥಾನಿ ಸಂಗೀತಕಾರರಾದ ಬಡೇ ಗುಲಾಂ ಅಲಿ ಅಲಿ ಖಾನ್ ಅವರು ಪಂಜಾಬಿನ ಕಸೂರ್ ಎಂಬಲ್ಲಿ ಜನಿಸಿದರು. ಪಾಟಿಯಾಲ ಘರಾಣಾ ಮತ್ತು ಖಯಾಲ್ ಹಾಡುಗಾರಿಕೆಯನ್ನು ಜನಪ್ರಿಯಗೊಳಿಸಿದವರಲ್ಲಿ ಇವರು ಪ್ರಮುಖರೆನಿಸಿದ್ದಾರೆ. ಪದ್ಮಭೂಷಣ ಮತ್ತು ಸಂಗೀತ ನಾಟಕ ಅಕಾಡೆಮಿ ಗೌರವಗಳನ್ನೂ ಒಳಗೊಂಡ ಅನೇಕ ಪುರಸ್ಕಾರಗಳು ಇವರಿಗೆ ಸಂದಿದ್ದವು.

1911: ಹೈದರಾಬಾದ್ ಕರ್ನಾಟಕ ವಿಭಾಗದ ಕನ್ನಡ ಸಾಹಿತ್ಯ ನವ ನಿರ್ಮಾಣದಲ್ಲಿ ಪ್ರಮುಖರಾದ ಮಾನ್ವಿ ನರಸಿಂಗರಾವ್ ಅವರು ರಾಯಚೂರಿನಲ್ಲಿ ಜನಿಸಿದರು. ಭಾರತ ಸರ್ಕಾರದ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದ ಇವರಿಗೆ ಅನೇಕ ಗೌರವಗಳು ಸಂದಿದ್ದವು.

1942: ಭಾರತೀಯ ಇಂಗ್ಲಿಷ್ ನಟ ರೋಶನ್ ಸೇಥ್ ಪಾಟ್ನಾದಲ್ಲಿ ಜನಿಸಿದರು. ಇವರು ‘ಗಾಂಧೀ’, ‘ಇಂಡಿಯಾನಾ ಜೋನ್ಸ್’ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳಲ್ಲೂ, ‘ಭಾರತ್ ಏಕ್ ಖೋಜ್’ ಧಾರಾವಾಹಿಯಲ್ಲೂ ಅಭಿನಯಿಸಿ ಪ್ರಸಿದ್ಧರಾಗಿದ್ದಾರೆ.

1943: ಸುಲಭ್ ಶೌಚಾಲಯಗಳ ಮೂಲಕ ಸ್ವಚ್ಚತೆ ಹಾಗೂ ಜನರು ಮಲ ಎತ್ತಬೇಕಾದ ಅಮಾನವೀಯ ಪರಿಸ್ಥಿತಿಗೆ ಕ್ರಾಂತಿ ತಂದ ಬಿಂದೇಶ್ವರ ಪಾಠಕ್ ಅವರು ಬಿಹಾರದ ರಾಂಪುರದಲ್ಲಿ ಜನಿಸಿದರು. ಪದ್ಮಭೂಷಣ ಪ್ರಶಸ್ತಿಯೇ ಅಲ್ಲದೆ ವಿಶ್ವದ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

1969: ಹಿಂದೀ ಚಲನಚಿತ್ರ ನಟ ಅಜಯ್ ದೇವಗನ್ ನವದೆಹಲಿಯಲ್ಲಿ ಜನಿಸಿದರು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಉತ್ತಮ ನಟ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಗಳೇ ಅಲ್ಲದೆ ಇನ್ನಿತರ ಅನೇಕ ಗೌರವಗಳೂ ಇವರಿಗೆ ಸಂದಿವೆ.

1972: ದೃಶ್ಯ ಸಂಯೋಜಕ ಮತ್ತು ನರ್ತಕ ರೇಮೋ ಡಿಸೌಜಾ ಕೇರಳದ ಒಲವಕ್ಕೋಡ್ ಎಂಬಲ್ಲಿ ಜನಿಸಿದರು. ಗೀತದೃಶ್ಯ ಸಂಯೋಜನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಒಳಗೊಂಡಹಾಗೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

1914: ಜರ್ಮನಿಯ ನೊಬೆಲ್ ಸಾಹಿತ್ಯ ಪುರಸ್ಕೃತ ಪಾಲ್ ಹೆಯ್ಸೆ ಮ್ಯೂನಿಚ್ ನಗರದಲ್ಲಿ ನಿಧನರಾದರು.

1928: ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ಅಮೆರಿಕನ್ನರಾದ ವಿಲಿಯಮ್ ರಿಚರ್ಡ್ಸ್ ಅವರು ಕೇಂಬ್ರಿಡ್ಜ್ ನಗರದಲ್ಲಿ ನಿಧನರಾದರು. ಕೆಮಿಕಲ್ ಎಲಿಮೆಂಟ್ಸ್ ಗಳಲ್ಲಿ ಇರುವ ಆಟೋಮಿಕ್ ತೂಕವನ್ನು ಖಚಿತವಾಗಿ ಹೇಳುವ ಮಾದರಿಯನ್ನು ಇವರು ಪ್ರಸ್ತುತಪಡಿಸಿದರು.

1933: ಭಾರತದ ಶ್ರೇಷ್ಠ ಕ್ರಿಕೆಟ್ ಪಟುಗಳಲ್ಲಿ ಒಬ್ಬರ, ನವನಗರದ ಮಹಾರಾಜರೂ ಆದ ಜಾಮ್ ಸಾಹಿಬ್ ರಣಜಿತ್ ಸಿನ್ಹಜಿ ವಿಭಾಜಿ ಅವರು ತಮ್ಮ 60ನೇ ವಯಸ್ಸಿನಲ್ಲಿ ನಿಧನರಾದರು. 1899ರಲ್ಲಿ ಇವರು ಒಂದೇ ಋತುವಿನಲ್ಲಿ 3000ಕ್ಕೂ ಹೆಚ್ಚು ರನ್ನುಗಳನ್ನು ಗಳಿಸಿದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆ ಗಳಿಸಿದ್ದರು. ಇವರ ನೆನಪಿಗಾಗಿ 1934ರಲ್ಲಿ ರಣಜಿ ಟ್ರೋಫಿಯನ್ನು ಆರಂಭಿಸಲಾಯಿತು.

2009: ಸಹಸ್ರಾರು ಜಾನಪದ ಗೀತೆಗಳನ್ನು ಸರಾಗವಾಗಿ, ತಮ್ಮ ಅದ್ಭುತ ನೆನಪಿನ ಶಕ್ತಿ ಮಾತ್ರದಿಂದ ಹಾಡಿ ಮಹಾನ್ ವಿದ್ವಾಂಸರೆಲ್ಲರನ್ನೂ ಅಚ್ಚರಿಗೊಳಿಸಿ ಗೌರವಾನ್ವಿತರಾಗಿದ್ದ ಶತಾಯುಷಿ, ಜಾನಪದ ಹಾಡುಗಾರ್ತಿ ಸಿರಿಯಜ್ಜಿ ಅವರು ಚಳ್ಳಕೆರೆ ಸಮೀಪದ ಯಲಗಟ್ಟೆ ಗೊಲ್ಲರಹಟ್ಟಿಯಲ್ಲಿ ನಿಧನರಾದರು. ಜಾನಪದ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗಣರಾಜ್ಯೋತ್ಸವ ಪ್ರಶಸ್ತಿಯೇ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.