Categories
e-ದಿನ

ಏಪ್ರಿಲ್-03

ಪ್ರಮುಖಘಟನಾವಳಿಗಳು:

1885: ಗೊಟ್ಟಿಲೆಬ್ ಡೈಮ್ಲರ್ ಅವರಿಗೆ ಇಂಜಿನ್ ವಿನ್ಯಾಸಕ್ಕಾಗಿ ಪೇಟೆಂಟ್ ಸಂದಿತು

1922: ಜೋಸೆಫ್ ಸ್ಟಾಲಿನ್ ಅವರು ಸೋವಿಯತ್ ಯೂನಿಯನ್ನಿನ ಕಮ್ಮ್ಯೂನಿಸ್ಟ್ ಪಕ್ಷದ ಪ್ರಥಮ ಪ್ರಧಾನ ಕಾರ್ಯದರ್ಶಿಗಳಾದರು.

1933: ಮಾರ್ಕಿಸ್ ಕ್ಲೈಡೆಸ್ ಡೇಲ್ ಅವರು ಎವರೆಸ್ಟ್ ಶಿಖರದ ಮೇಲೆ ಪ್ರಪ್ರಥಮ ವಿಮಾನ ಹಾರಾಟ ನಡೆಸಿದರು. ಅವರ ಈ ಸಾಹಸಕ್ಕೆ ಲೂಸಿ ಲೇಡಿ ಹೌಸ್ಟನ್ ಅವರು ಆರ್ಥಿಕ ಸಹಕಾರ ನೀಡಿದರು.

1948: ಅಮೆರಿಕದ ಅಧ್ಯಕ್ಷರಾದ ಹ್ಯಾರಿ ಎಸ್. ಟ್ರೂಮನ್ ಅವರು 16 ರಾಷ್ಟ್ರಗಳಿಗೆ ಆರ್ಥಿಕ ಸಹಾಯ ನೀಡುವ ಮಾರ್ಷಲ್ ಯೋಜನೆಗೆ ಸಹಿ ಮಾಡಿದರು.

1948: ದಕ್ಷಿಣ ಕೊರಿಯಾದ ಜೆಜು ಪ್ರಾಂತ್ಯದಲ್ಲಿ ಮಾನವೀಯ ಹಕ್ಕುಗಳ ಮೇಲೆ ಅತಿಕ್ರಮಣ ನಡೆದು ಅಂತರ್ಯುದ್ಧದ ವಾತಾವರಣ ನಿರ್ಮಾಣಗೊಂಡಿತು.

1968: ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು ‘ನಾನು ಪರ್ವತದ ತುದಿಗೆ ಹೋಗಿದ್ದೆ’ (I’ve Been to the Mountaintop) ಎಂಬ ಭಾಷಣವನ್ನು ಮಾಡಿದರು.

1973: ಮೋಟರಾಲ ಸಂಸ್ಥೆಯ ಮಾರ್ಟಿನ್ ಕೂಪರ್ ಅವರು ಮೊಟ್ಟಮೊದಲ ಅಂಗೈನಲ್ಲಿನ ಮೊಬೈಲ್ ಮೂಲಕದ ಕರೆಯನ್ನು ಬೆಲ್ ಲ್ಯಾಬ್ಸ್ ಸಂಸ್ಥೆಯ ಜೋಯೆಲ್ ಏಂಜೆಲ್ ಅವರಿಗೆ ಮಾಡಿದರು

1975: ಬಾಬಿ ಫಿಷರ್ ಅವರು ರಷ್ಯದ ಅನಾತೊಲಿ ಕಾರ್ಪೊವ್ ಅವರ ವಿರುದ್ಧ ಆಡುವುದಕ್ಕೆ ಅಸಮ್ಮತಿ ಸೂಚಿಸಿದ ಕಾರಣ, ಅನಾತೊಲಿ ಕಾರ್ಪೊವ್ ಅವರನ್ನು ಜಾಗತಿಕ ಚೆಸ್ ಚಾಂಪಿಯನ್ ಎಂದು ಘೋಷಿಸಲಾಯಿತು.

1981: ಎಲ್ಲಿಂದೆಲ್ಲಿಗೆ ಒಯ್ಯಬಹುದಾದ ಪ್ರಪ್ರಥಮ ಯಶಸ್ವೀ ಕಂಪ್ಯೂಟರ್ ಆದ ‘ಒಸ್ಬೋರ್ನೆ’ ಅನ್ನು ಸ್ಯಾನ್ ಫ್ರಾನ್ಸಿಸ್ಕೋದ ವೆಸ್ಟ್ ಕೋಸ್ಟ್ ಕಂಪ್ಯೂಟರ್ ಫೇರ್ನಲ್ಲಿ ಬಿಡುಗಡೆ ಮಾಡಲಾಯಿತು

1984: ರಷ್ಯದ ಸೋಯುಜ್ ಟಿ-11 ಗಗನನೌಕೆಯ ಮೂಲಕ ಬಾಹ್ಯಾಕಾಶ ಯಾತ್ರೆಯಲ್ಲಿ ಪಾಲ್ಗೊಂಡ ಸ್ಕ್ವಾಡ್ರನ್ ಲೀಡರ್ ರಾಕೇಶ್ ಶರ್ಮ ಅವರು ಭಾರತದ ಮೊತ್ತ ಮೊದಲ ಗಗನಯಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ದೂರದರ್ಶನದ ಮೂಲಕ ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತಿದೆ ಎಂದು ಪ್ರಧಾನಿ ಇಂದಿರಾಗಾಂಧಿ ಅವರು ಪ್ರಶ್ನಿಸಿದಾಗ ‘ಸಾರೇ ಜಹಾಂಸೆ ಅಚ್ಛಾ’ ಎಂದು ಶರ್ಮ ಉತ್ತರಿಸಿದರು.

2000: ಅಮೆರಿಕ ಸರ್ಕಾರ ಮತ್ತು ಮೈಕ್ರೋಸಾಫ್ಟ್ ಸಂಸ್ಥೆ ನಡುವಣ ಕಾನೂನು ವ್ಯಾಜ್ಯದಲ್ಲಿ, ಮೈಕ್ರೋ ಸಾಫ್ಟ್ ಸಂಸ್ಥೆಯು ಅಮೆರಿಕದ ಆಂಟಿಟ್ರಸ್ಟ್ ಕಾನೂನನ್ನು ಉಲ್ಲಂಘಿಸಿದೆ ಎಂದು ನ್ಯಾಯಾಲಯವು ತೀರ್ಪಿತ್ತಿತು. ಮೈಕ್ರೋಸಾಫ್ಟ್ ಪ್ರತಿಸ್ಪರ್ಧಿಗಳನ್ನು ಅದುಮಿ ಹಾಕುವ ಹೆಬ್ಬೆಟ್ಟಿನ ನೀತಿಯನ್ನು ಅನುಸರಿಸುತ್ತಿದ್ದು ಇದು ಕಾನೂನಿನ ನೀತಿಗಳನ್ನು ಉಲ್ಲಂಘಿಸುವಂತದ್ದಾಗಿದೆ ಎಂದು ನ್ಯಾಯಾಲಯವು ತೀರ್ಪು ನೀಡಿತು.

2007: ಗಂಟೆಗೆ 574.8 ಕಿ.ಮೀ. ವೇಗದಲ್ಲಿ ಚಲಿಸುವ ಮೂಲಕ ಪ್ರಾನ್ಸಿನ ಗ್ರಾಂಡೇ ವಿಟೆಸ್ಸೇ ರೈಲು ನೂತನ ದಾಖಲೆ ನಿರ್ಮಿಸಿತು. ಈ ಹಿಂದೆ 1990ರಲ್ಲಿ ಫ್ರಾನ್ಸಿನ ರೈಲೊಂದು ಗಂಟೆಗೆ 515.3 ಕಿ.ಮೀ. ವೇಗದಲ್ಲಿ ಚಲಿಸಿದ್ದು ಹಿಂದಿನ ವಿಶ್ವದಾಖಲೆಯಾಗಿತ್ತು.

2009: ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಹುಲಿ ತಲೆಯ ರತ್ನಖಚಿತ ಶಿಖರಾಲಂಕಾರವು ಲಂಡನ್ನಿನಲ್ಲಿ 3,89,600 ಪೌಂಡುಗಳಿಗೆ ಹರಾಜಾಯಿತು. 18ನೇ ಶತಮಾನದ ಅಮೂಲ್ಯವಾದ ಈ ಶಿಖರಾಲಂಕಾರವನ್ನು ಅನಾಮಧೇಯ ವ್ಯಕ್ತಿಯೊಬ್ಬರು ಖರೀದಿಸಿದರು.

2009: ಶತಮಾನಗಳಿಂದ ಬಂದಿದ್ದ ಶಿಷ್ಟಾಚಾರವನ್ನು ಬದಿಗೊತ್ತಿ ಬ್ರಿಟನ್ ರಾಣಿ ಎಲಿಜಬೆತ್ ಅವರು ಅಮೆರಿಕದ ಪ್ರಥಮ ಮಹಿಳೆ ಮಿಷೆಲ್ ಒಬಾಮ ಅವರಿಗೆ ಆತ್ಮೀಯ ಆಲಿಂಗನ ನೀಡಲು ಮುಂದಾದರು.

2010: ಆಪಲ್ ಸಂಸ್ಥೆಯು ಮೊದಲ ಪೀಳಿಗೆಯ ಟ್ಯಾಬ್ಲೆಟ್ ಕಂಪ್ಯೂಟರ್ ಆದ ಐಪ್ಯಾಡ್ ಅನ್ನು ಬಿಡುಗಡೆ ಮಾಡಿತು.

ಪ್ರಮುಖಜನನ/ಮರಣ:

1781: ಧಾರ್ಮಿಕ ಗುರು ಸ್ವಾಮಿ ನಾರಾಯಣ ಅವರು ಘನಶ್ಯಾಮ ಪಾಂಡೆ ಎಂಬ ಹೆಸರಿನಲ್ಲಿ ಉತ್ತರ ಪ್ರದೇಶದ ಚ್ಚಯಾಯಿಯ ಎಂಬಲ್ಲಿ ಜನಿಸಿದರು. ಹಲವು ವರ್ಷಗಳ ಭಾರತೀಯ ಯಾತ್ರೆಯ ನಂತರದಲ್ಲಿ ಇವರು ಗುಜರಾತಿನಲ್ಲಿ ನೆಲೆಸಿದ್ದರು.

1876: ಬಹುಭಾಷಾ ಕೋವಿದರೂ, ಸಾಹಿತಿಗಳೂ ಆಗಿದ್ದ ಬೆನಗಲ್ ರಾಮರಾಯರು ಮಂಗಳೂರಿನಲ್ಲಿ ಜನಿಸಿದರು. ಇವರು 1925ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1943ರ ಮೇ 8ರಂದು ನಿಧನರಾದರು.

1876: ಜೆಕೋಸ್ಲವೇಕಿಯಾದ ಉದ್ಯಮಿ ಬಾಟಾ ಶೂಸ್ ಸಂಸ್ಥೆಯ ಸ್ಥಾಪಕ ತೋಮಸ್ ಬಾಟಾ ಅವರು ಜನಿಸಿದರು.

1898: ಚೀನೀ-ಅಮೆರಿಕನ್ ಪ್ರಕಾಶಕ ಮತ್ತು ಟೈಮ್ ಮ್ಯಾಗಜೈನ್ ಪತ್ರಿಕೆಯ ಸಹ ಸಂಸ್ಥಾಪಕ ಹೆನ್ರಿ ಲ್ಯೂಸ್ ಅಮೆರಿಕದ ತೆಂಗ್ ಚೌ ಎಂಬಲ್ಲಿ ಜನಿಸಿದರು.

1903: ಸ್ವಾತಂತ್ರ್ಯ ಹೋರಾಟಗಾರ್ತಿ, ಸಮಾಜ ಸುಧಾರಕಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಮಂಗಳೂರಿನಲ್ಲಿ ಜನಿಸಿದರು. ಸ್ವಾತಂತ್ಯ ಹೋರಾಟದಲ್ಲಿ ಅನೇಕ ವರ್ಷಗಳ ಕಾಲ ಸೆರೆವಾಸ ಅನುಭವಿಸಿದ ಇವರು ಸಂಗೀತ ನಾಟಕ ಆಕಾಡೆಮಿ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಕರಕುಶಲ ಅಭಿವೃದ್ಧಿ ನಿಗಮ ಮುಂತಾದ ಅನೇಕ ಸಂಸ್ಥೆಗಳ ಸ್ಥಾಪನೆಗೆ ಪ್ರೇರಕರಾದರು. ಕೇಂದ್ರೀಯ ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್, ಪದ್ಮಭೂಷಣ, ಪದ್ಮವಿಭೂಷಣ, ಮ್ಯಾಗ್ಸೆಸೆ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1914: ಭಾರತದ ಸೇನಾ ಮಹಾದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಅವರು ಅಮೃತಸಾರದಲ್ಲಿ ಜನಿಸಿದರು. 1971ರಲ್ಲಿ ಬಾಂಗ್ಲಾದೇಶದ ಉದಯಕ್ಕೆ ಕಾರಣವಾದ ಭಾರತ – ಪಾಕ್ ನಡುವಿನ ಯುದ್ಧದಲ್ಲಿ ಭಾರತದ ವಿಜಯದ ರೂವಾರಿಯಾದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ, ಎರಡನೇ ವಿಶ್ವಮಹಾಯುದ್ಧದಲ್ಲಿ ಹೋರಾಡಿ ಶೌರ್ಯ ಪಶಸ್ತಿಗೆ ಭಾಜನರಾಗಿದ್ದವರು. ಸ್ಯಾಮ್ ಬಹಾದೂರ್ ಎಂದೇ ಆದರಪೂರ್ವಕವಾಗಿ ಕರೆಸಿಕೊಂಡ ಮಾಣಿಕ್ ಶಾ ಎರಡನೇ ವಿಶ್ವ ಮಹಾಯುದ್ಧದಲ್ಲಿ ಬರ್ಮಾದಲ್ಲಿ ಹೋರಾಟ ನಡೆಸಿದ ವೇಳೆ ತೀವ್ರವಾಗಿ ಗಾಯಗೊಂಡು ಬದುಕುಳಿದ ಅದೃಷ್ಟಶಾಲಿ. ಭಾರತ ಸೇನೆಯ ಅತ್ಯುನ್ನತ ಹುದ್ದೆ ಫೀಲ್ಡ್ ಮಾರ್ಷಲ್ ಗೌರವ ಪಡೆದ ಪ್ರಥಮರಿವರು.

1930: ಏಕೀಕೃತ ಜರ್ಮನಿಯ ಮೊತ್ತ ಮೊದಲ ಚಾನ್ಸಲರ್ ಹೆಲ್ಮಟ್ ಕೊಹ್ಲ್ ಅವರು ಲುಡ್ವಿಗ್ ಶಫೇನ್ ಎಂಬಲ್ಲಿ ಜನಿಸಿದರು.

1947: ಶ್ರೀಕೃಷ್ಣ ಆಲನಹಳ್ಳಿ ಅವರು ಮೈಸೂರು ಜಿಲ್ಲೆಯ ಆಲನಹಳ್ಳಿಯಲ್ಲಿ ಜನಿಸಿದರು. ಅವರ ‘ಕಾಡು’, ‘ಪರಸಂಗದ ಗೆಂಡೆತಿಮ್ಮ’, ‘ಗೀಜಗನ ಗೂಡು’, ‘ಫೀನಿಕ್ಸ್’, ‘ಭುಜಂಗಯ್ಯನ ದಶಾವತಾರಗಳು’ ಕಾದಂಬರಿಗಳು ಪ್ರಸಿದ್ಧ ಚಿತ್ರಗಳಾಗಿದ್ದವು. ಕಾದಂಬರಿಗಳಲ್ಲದೆ, ಕವಿತೆ, ಸಣ್ಣ ಕಥೆಗಳು ಮತ್ತು ಸಂಪಾದನೆಯನ್ನೂ ಮಾಡಿದ್ದ ಇವರು ತಮ್ಮ 42ರ ಕಿರುವಯಸ್ಸಿನಲ್ಲಿಯೇ ನಿಧನರಾದರು.

1958: ಭಾರತೀಯ ಚಿತ್ರರಂಗದಲ್ಲಿ ವಿವಿಧ ಭಾಷಾ ಚಿತ್ರಗಳಲ್ಲಿ ಯಶಸ್ಸು ಗಳಿಸಿ, ಪ್ರಸಿದ್ಧರಾದ ಸೌಂಧರ್ಯವತಿ ಜಯಪ್ರದ ಅವರು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದರು. ಅಂದಿನ ಅವರ ಹೆಸರು ಲಲಿತಾ ರಾಣಿ.

1955: ಶಾಸ್ರೀಯ ಸಂಗೀತ, ಸಿನಿಮಾ ಸಂಗೀತ, ಘಜಲ್ ಮತ್ತು ಫ್ಯೂಷನ್ ಸಂಗೀತಗಳಲ್ಲಿ ಪ್ರಮುಖ ಹೆಸರಾದ ಹರಿಹರನ್ ಅವರು ಕೇರಳದ ತಿರುವನಂತಪುರಂನಲ್ಲಿ ಜನಿಸಿದರು. ಸಿನಿಮಾ ಗಾಯನಕ್ಕೆ ಹಲವು ರಾಷ್ಟ್ರೀಯ ಪ್ರಶಸ್ತಿಗಳೂ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.

1973: ನಟ, ನರ್ತಕ, ನೃತ್ಯಸಂಯೋಜಕ, ನಿರ್ಮಾಪಕ, ನಿರ್ದೇಶಕ ಪ್ರಭುದೇವ ಮೈಸೂರಿನಲ್ಲಿ ಜನಿಸಿದರು. ಇವರ ನೃತ್ಯ ಸಂಯೋಜನೆಗಳು ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿರುವುದಲ್ಲದೆ ಅಪಾರ ಜನಪ್ರಿಯತೆ ಗಳಿಸಿವೆ.