Categories
e-ದಿನ

ಏಪ್ರಿಲ್-05

ಪ್ರಮುಖಘಟನಾವಳಿಗಳು:

1900: ಪುರಾತತ್ವಶಾಸ್ತ್ರಜ್ಞರಾದ ನಾಸ್ ಮತ್ತು ಕ್ರೇಟ್ ಅವರು ಹೀರೋಗ್ಲಿಫಿಕ್ ಬರಹಗಳಿದ್ದ ಬೃಹತ್ ಗಾತ್ರದ ಮಣ್ಣಿನ ಫಲಕಗಳನ್ನು ಅನ್ವೇಷಿಸಿದರು. ಮುಂದೆ ಇದರಲ್ಲಿದ್ದ ಲಿಪಿಯನ್ನು ಅವರು ‘ಲಿನಿಯರ್ ಬಿ’ ಎಂದು ಕರೆದರು.

1915: ಕ್ಯೂಬಾದ ಹವಾನಾದಲ್ಲಿ ಅಮೆರಿಕದ ಬಾಕ್ಸರ್ ಜೆಸ್ ವಿಲ್ಲರ್ಡ್ ಅವರು ತಮ್ಮ ದೇಶದವರೇ ಆದ ಜಾಕ್ ಜಾನ್ಸನ್ ಅವರನ್ನು ಸೋಲಿಸಿ ವಿಶ್ವ ಹೆವಿ ವೈಟ್ ಚಾಂಪಿಯನ್ ಆದರು.

1942: ಎರಡನೇ ವಿಶ್ವಮಹಾಯುದ್ಧದಲ್ಲಿ ಇಂಪೀರಿಯಲ್ ಜಪಾನೀ ನೌಕಾದಳವು, ಸಿಲೋನಿನ ಕೊಲಂಬೋ ಬಳಿಯ ಹಿಂದೂ ಮಹಾಸಾಗರದ ನೆಲೆಯಲ್ಲಿ ದಾಳಿ ನಡೆಸಿ, ಅಲ್ಲಿನ ಬಂದರು ಮತ್ತು ಸಾವರ್ಜನಿಕ ವ್ಯವಸ್ಥೆಗಳಿಗೆ ಹಾಳುಗೆಡವಿ, ರಾಯಲ್ ನೆವಿ ಕ್ರೂಯಿಸರ್ಸ್ ಎಚ್.ಎಮ್.ಎಸ್. ಕಾರ್ನಿವಾಲ್ ಮತ್ತು ಎಚ್.ಎಮ್.ಎಸ್. ಡೊರೆಟ್ ಶೈರ್ ನೌಕೆಗಳನ್ನು ಮುಳುಗಿಸಿತು.

1949: ಬಾಲಕರ ಸ್ಕೌಟ್ಸ್ ಮತ್ತು ಬಾಲಕಿಯರ ಗೈಡ್ಸ್ ಗಳನ್ನು ಒಂದುಗೂಡಿಸಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಾಪಿಸಲಾಯಿತು.

1956: ಶ್ರೀಲಂಕಾದಲ್ಲಿ ಮಹಾಜನ್ ಏಕ್ಸಾಥ್ ಪೆರಾಮುನಾ ಪಕ್ಷವು ಚುನಾವಣೆಗಳಲ್ಲಿ ಜಯಗಳಿಸಿ, ಎಸ್.ಡಬ್ಲ್ಯೂ.ಆರ್. ಡಿ. ಬಂಡಾರನಾಯ್ಕೆ ಅವರು ಪ್ರಧಾನ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

1957: ಕೇರಳ ರಾಜ್ಯದಲ್ಲಿನ ಪ್ರಥಮ ಚುನಾವಣೆಗಳಲ್ಲಿ ಕಮ್ಯೂನಿಸ್ಟ್ ಪಕ್ಷವು ಅಧಿಕಾರಕ್ಕೆ ಬಂದು, ಇ.ಎಮ್.ಎಸ್. ನಂಬೂದರಿಪಾದ್ ಅವರು ಪ್ರಥಮ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು

1985: ಬೀದರಿನಲ್ಲಿ ಡಾ. ಹಾ.ಮಾ. ನಾಯಕ್ ಅವರ ಸಮ್ಮೆಳನಾಧ್ಯಕ್ಷತೆಯಲ್ಲಿ 57ನೇ ಕನ್ನಡ ಸಾಹಿತ್ಯ ಸಮ್ಮೇಳನವು ಆರಂಭಗೊಂಡಿತು.

1998: ವಿಶ್ವದ ಅತಿದೊಡ್ಡ ಸಸ್ಪೆನ್ಷನ್ ಸೇತುವೆಯಾದ ಜಪಾನಿನ ‘ಆಕಾಶಿ ಕೈಕ್ಯೋ’ ಸಂಚಾರಕ್ಕೆ ತೆರೆದುಕೊಂಡಿತು.

2006: ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವಿದ್ಯಾರ್ಥಿಗಳಿಗೆ ಶೇಕಡಾ 50 ಮೀಸಲಾತಿ ಕಲ್ಪಿಸುವ ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಮಸೂದೆಯನ್ನು ಕರ್ನಾಟಕ ವಿಧಾನಸಭೆ ಅಂಗೀಕರಿಸಿತು.

2008: ಚಾಮರಾಜಪೇಟೆಯ ರಾಮಸೇವಾ ಮಂಡಲಿಯ ಎಸ್. ವಿ. ನಾರಾಯಣ ಸ್ವಾಮಿರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ಪಿಟೀಲು ವಿದ್ವಾಂಸ ಟಿ.ಎನ್. ಕೃಷ್ಣನ್ ಅವರು ಆಯ್ಕೆಯಾದರು.

2009: ರಾಜಧಾನಿ ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದ್ದ ಅಲ್ಲಿನ ಐತಿಹಾಸಿಕ ‘ಕಾಫಿ ಹೌಸ್’ ಇಂದು ನೇಪಥ್ಯಕ್ಕೆ ಸರಿಯಿತು. ‘ಕಾಫಿ ಹೌಸ್’ ಶಾಖೆಗಳು ನಗರದ ಇತರೆಡೆಗಳಲ್ಲಿವೆ.

ಪ್ರಮುಖಜನನ/ಮರಣ:

1649: ಇಂಗ್ಲಿಷ್ ವರ್ತಕ ಮತ್ತು ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಯಾಗಿದ್ದ ಎಲಿಹು ಯಾಲೆ ಅವರು ಬೋಸ್ಟನ್ ನಗರದಲ್ಲಿ ಜನಿಸಿದರು. ಇವರು ಮದ್ರಾಸಿನಲ್ಲಿ ಫೋರ್ಟ್ ಸೇಂಟ್ ಜಾರ್ಜಿನ ಗವರ್ನರ್ ಆಗಿದ್ದರು. ಇವರ ನೆರವಿನಿಂದ ಕಾಲೇಜಿಯೇಟ್ ಶಾಲೆ ಆರಂಭಗೊಂಡಿತು. ಮುಂದೆ ಇವರ ಗೌರವಾರ್ಥ ಇದರ ಹೆಸರನ್ನು ಯಾಲೆ ಕಾಲೇಜು ಎಂದು ಹೆಸರಿಸಲಾಯಿತು.

1827: ಬ್ರಿಟಿಷ್ ಸರ್ಜನ್ ಹಾಗೂ ವೈದ್ಯಕೀಯ ವಿಜ್ಞಾನಿ ಸರ್ ಜೋಸೆಫ್ ಲಿಸ್ಟರ್ ಇಂಗ್ಲೆಂಡಿನ ಉಪ್ಟನ್ ಹೌಸ್ ಎಂಬಲ್ಲಿ ಜನಿಸಿದರು. ಇವರು ನಂಜು ನಿರೋಧಕ (ಆಂಟಿಸೆಪ್ಟಿಕ್) ಔಷಧಿಯನ್ನು ಕಂಡು ಹಿಡಿದರು.

1908: ಸ್ವಾತಂತ್ರ್ಯ ಪೂರ್ವದಿಂದಲೇ ಹಿಂದುಳಿದ ವರ್ಗಗಳ ನಾಯಕರಾಗಿ ರೂಪುಗೊಂಡು ಉಪಪ್ರಧಾನಿ ಸ್ಥಾನದವರೆಗೆ ಏರಿದ ಬಾಬು ಜಗಜೀವನ್ ರಾಮ್ ಅವರು ಬಿಹಾರದ ಚಾಂದ್ವಾ ಎಂಬಲ್ಲಿ ಜನಿಸಿದರು.

1929: ನಾರ್ವೆಯನ್-ಅಮೆರಿಕನ್ ಭೌತಶಾಸ್ತ್ರಜ್ಞ ಇವಾರ್ ಗಿಯೇವರ್ ಅವರು ನಾರ್ವೆಯ ಬೆರ್ಗೆನ್ ಎಂಬಲ್ಲಿ ಜನಿಸಿದರು. ‘ಟನೆಲಿಂಗ್ ಫಿನಾಮಿನ ಇನ್ ಫ್ಲೂಯಿಡ್ಸ್ ಕುರಿತಾದ’ ಅನ್ವೇಷಣೆಗಾಗಿ ಇವರಿಗೆ 1973 ವರ್ಷದ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತು.

1951: ಕನ್ನಡದ ಜನಪ್ರಿಯ ಚಲನಚಿತ್ರ ನಟಿ ಮಂಜುಳಾ ಅವರು ತುಮಕೂರಿನಲ್ಲಿ ಜನಿಸಿದರು. ನಾಯಕ ನಟರಿಗೆ ಪ್ರಾಧಾನ್ಯತೆಗಳಿರುವ ಚಿತ್ರರಂಗದಲ್ಲಿ ಅದಕ್ಕೆ ಸರಿ ಸಮಾನವಾಗಿ ಜೊತೆ ಜೊತೆಯಾದ ಪಾತ್ರಗಳನ್ನು ಅಷ್ಟೇ ಸಮ ಮಹತ್ವದಲ್ಲಿ ನಟಿಸಿದ ಅಪರೂಪದ ನಟಿ ಎಂದು ಮಂಜುಳ ಖ್ಯಾತರಾಗಿದ್ದರು.

1940: ಇಂಗ್ಲಿಷ್ ಭಾರತೀಯ ಮಿಷಿನರಿ, ಶಿಕ್ಷಣ ತಜ್ಞ ಮತ್ತು ಗಾಂಧೀಜಿ ಆಪ್ತರಾದ ಚಾರ್ಲ್ಸ್ ಫ್ರೀರ್ ಆಂಡ್ರೂಸ್ ಕೋಲ್ಕತ್ತದಲ್ಲಿ ನಿಧನರಾದರು. ಮಹಾತ್ಮ ಗಾಂಧೀ ಅವರನ್ನು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರುವಂತೆ ಮನವೊಲಿಸಿದವರಲ್ಲಿ ಇವರು ಪ್ರಮುಖರಾಗಿದ್ದರು.

1967: ಅಮೆರಿಕದ ವೈದ್ಯ ವಿಜ್ಞಾನಿ ಹೆರ್ಮಾನ್ ಜೋಸೆಫ್ ಮುಲ್ಲರ್ ಅವರು ಇಂಡಿಯಾನಾ ಪೊಲಿಸ್ ಎಂಬಲ್ಲಿ ನಿಧನರಾದರು. ‘ಭೌತಿಕವಾಗಿ ಹಾಗೂ ಅನುವಂಶೀಯಕವಾಗಿ ರೇಡಿಯೇಶನ್ ಇಂದ ಆಗುವ ಪರಿಣಾಮಗಳ ಕುರಿತಾಗಿ’ ನೀಡಿದ ಸಂಶೋಧನಾತ್ಮಕ ವಿವರಗಳಿಗಾಗಿ ಇವರಿಗೆ 1946ರ ವರ್ಷದಲ್ಲಿ ನೊಬೆಲ್ ವೈದ್ಯ ಪುರಸ್ಕಾರ ಸಂದಿತ್ತು.

1993: ಚಲನಚಿತ್ರ ನಟಿ ದಿವ್ಯಾ ಭಾರತಿ ಅವರು ಮುಂಬೈನಲ್ಲಿ ತಾವಿದ್ದ ಬಹುಮಹಡಿ ಕಟ್ಟಡದಿಂದ ಬಿದ್ದು ಸಾವಿಗೀಡಾದರು.

2005: ಕೆನಡಾ-ಅಮೆರಿಕದ ಸಾಹಿತಿ ಸಾವ್ಲ್ ಬೆಲ್ಲೋ ಬ್ರೂಕ್ಲಿನ್ ನಗರದಲ್ಲಿ ನಿಧನರಾದರು. ಇವರಿಗೆ 1976ರ ವರ್ಷದಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಸಂದಿತ್ತು.

2007: ತಮ್ಮ ವಿಶಿಷ್ಟ ಕಥೆ, ಕಾದಂಬರಿ ಹಾಗೂ ವೈಜ್ಞಾನಿಕ ಬರಹಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟರಾಗಿದ್ದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಚಿಕ್ಕಮಗಳೂರು ಜಿಲ್ಲೆಯ ಹಳೆ ಮೂಡಿಗೆರೆ ನಿಂಬೆಮೂಲೆಯಲ್ಲಿನ ತಮ್ಮ ಸ್ವಗೃಹ ‘ನಿರುತ್ತರ’ದಲ್ಲಿ ನಿಧನರಾದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಮುಂತಾದ ಅನೇಕ ಗೌರವಗಳಿಗೆ ಇವರು ಪಾತ್ರರಾಗಿದ್ದರು. ಅವರ ತಬರನ ಕಥೆ, ಅಬಚೂರಿನ ಪೋಸ್ಟಾಫೀಸ್, ಕುಬಿ ಮತ್ತು ಇಯಾಲ ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಪ್ರಮುಖ ಸಾಧನೆಗಳನ್ನು ಮಾಡಿದ್ದವು.

2007: ಬಂಗಾಳಿ ಲೇಖಕಿ ಲೀಲಾ ಮಜುಂದಾರ್ ಕೋಲ್ಕತ್ತದಲ್ಲಿ ನಿಧನರಾದರು. ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಮಹತ್ವದ ಕೆಲಸ ಮಾಡಿದ್ದ ಇವರಿಗೆ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಪಶ್ಚಿಮ ಬಂಗಾಳ ಸರ್ಕಾರದ ಪುರಸ್ಕಾರ, ರಬೀಂದ್ರ ಪುರಸ್ಕಾರ, ದೇಶಿಕೊತ್ತಮ ಪುರಸ್ಕಾರಗಳು ಸಂದಿದ್ದವು.

2013: ಭಾರತೀಯ ಇತಿಹಾಸಜ್ಞ ಮತ್ತು ಶಿಕ್ಷಣ ತಜ್ಞ ಮೊಹಮ್ಮದ್ ಇಷಾಕ್ ಖಾನ್ ನಿಧನರಾದರು. ಇವರ ಬರಹಗಳು ಅಂತರರಾಷ್ಟ್ರೀಯ ಮಟ್ಟದ ಜರ್ನಲ್ಗಳಲ್ಲಿ ಇತಿಹಾಸಜ್ಞರ ಗೌರವಕ್ಕೆ ಪಾತ್ರವಾಗಿದ್ದವು.