Categories
e-ದಿನ

ಏಪ್ರಿಲ್-07

ದಿನಾಚರಣೆಗಳು:

ವಿಶ್ವ ಆರೋಗ್ಯ ದಿನ

ವಿಶ್ವ ಆರೋಗ್ಯ ಸಂಸ್ಥೆಯಾದ ‘ವರ್ಲ್ಡ್ ಹೆಲ್ತ್ ಆರ್ಗನೈಸೇಶನ್’ ಜಿನೀವಾದಲ್ಲಿ ಆರಂಭವಾದ ಏಪ್ರಿಲ್ 7 ದಿನದಂದು ವಿಶ್ವದಾದ್ಯಂತ ವಿಶ್ವ ಆರೋಗ್ಯ ದಿನಾಚರಣೆಯನ್ನು ನಡೆಸಲಾಗುತ್ತಿದೆ. ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶ. 1948ರಲ್ಲಿ ನಡೆದ ಮೊದಲ ವಿಶ್ವ ಆರೋಗ್ಯ ಸಭೆಯಲ್ಲಿ ಏಪ್ರಿಲ್ 7ನ್ನು ವಿಶ್ವ ಆರೋಗ್ಯ ದಿನವಾಗಿ ಆಚರಿಸಲು ನಿರ್ಧರಿಸಲಾಯಿತು. 1950ರಿಂದ ವಿಶ್ವ ಆರೋಗ್ಯ ದಿನದ ಆಚರಣೆ ಜಾರಿಗೆ ಬಂತು.

ಪ್ರಮುಖಘಟನಾವಳಿಗಳು:

529: ನ್ಯಾಯಶಾಸ್ತ್ರದ ಕುರಿತಾದ ‘ಕಾರ್ಪಸ್ ಜ್ಯುರಿಸ್ ಸಿವಿಲಿಸ್’ ಕರಡು ಪ್ರತಿಯನ್ನು ಪೂರ್ವ ರೋಮನ್ ಚಕ್ರವರ್ತಿ ಮೊದಲನೇ ಜಸ್ಟೀನಿಯನ್ ಹೊರಡಿಸಿದರು.

1141: ಚಕ್ರವರ್ತಿನಿ ಮಟಿಲ್ಡಾ ‘ಲೇಡಿ ಆಫ್ ಇಂಗ್ಲಿಷ್’ ಬಿರುದಾಂಕಿತರಾಗಿ ಇಂಗ್ಲೆಂಡಿನ ಪ್ರಥಮ ರಾಜ್ಯಾಧಿಕಾರಿಣಿಯಾದರು.

1348: ಪ್ರೇಗ್ನಲ್ಲಿ ಚಾರ್ಲ್ಸ್ ವಿಶ್ವವಿದ್ಯಾಲಯ ಸ್ಥಾಪನೆಗೊಂಡಿತು.

1827: ಜಾನ್ ವಾಲ್ಕರ್ ತಾವು ಹಿಂದಿನ ವರ್ಷ ಕಂಡುಹಿಡಿದಿದ್ದ ವಿಶ್ವದ ಪ್ರಥಮ ‘ಬೆಂಕಿಕಡ್ಡಿ’ (ಮ್ಯಾಚ್ ಸ್ಟಿಕ್) ಅನ್ನು ಮಾರಾಟ ಮಾಡಿದರು.

1940: ಬೂಕರ್ ಟಿ. ವಾಷಿಂಗ್ಟನ್ ಅವರು ಅಮೆರಿಕದ ಅಂಚೆ ಚೀಟಿಯ ಮೇಲೆ ಮೂಡಿಬಂದ ಪ್ರಪ್ರಥಮ ಅಮೆರಿಕನ್ ಆಫ್ರಿಕನ್ ಎನಿಸಿದರು.

1943: ಹೋಲೋಕಾಸ್ಟ್ ಚಿತ್ರ ಹಿಂಸೆಯ ಘಟನೆಯೊಂದರಲ್ಲಿ ಜರ್ಮನ್ನರು 1,100 ಜ್ಯೂಸ್ ಜನಾಂಗೀಯರನ್ನು ಕೇವಲ ತಮ್ಮ ಒಳ ಉಡುಪುಗಳೊಂದಿಗೆ ಉಕ್ರೇನಿನ ಟೆರೆಬೋವಿಲಾ ನಗರದಲ್ಲಿ ಮೆರವಣಿಗೆಯಲ್ಲಿ ಸಾಗುವಂತೆ ಮಾಡಿ, ನಂತರದಲ್ಲಿ ಪ್ಲೆಬಾನಿವ್ಕ ಎಂಬ ಹಳ್ಳಿಯಲ್ಲಿ ಗುಂಡಿಟ್ಟು ಕೊಂದು ಹಳ್ಳದಲ್ಲಿ ಹೂತುಹಾಕಿದರು.

1945: ಎರಡನೇ ವಿಶ್ವ ಮಹಾಯುದ್ಧದಲ್ಲಿ ಅಮೆರಿಕದ ವಿಮಾನಗಳು ಜಪಾನಿನ ಅತ್ಯಂತ ಬೃಹತ್ ಯುದ್ದ ನೌಕೆಯಾದ ‘ಯಮಾಟೋ’ವನ್ನು ಮುಳುಗಿಸಿದವು. ಈ ನೌಕೆಯು ಆತ್ಯಹತ್ಯಾ ಪಡೆಯಾಗಿ ಆಪರೇಷನ್ ಟೆನ್-ಗೋ ಎಂಬ ವಿಧ್ವಂಸಕ ಉದ್ದೇಶಕ್ಕೆ ಹೊರಟಿತ್ತು ಎಂದು ಹೇಳಲಾಗಿದೆ.

1946: ಸಿರಿಯಾವು ಫ್ರಾನ್ಸ್ ಆಡಳಿತದಿಂದ ಅಧಿಕೃತವಾಗಿ ಸ್ವಾತಂತ್ರ್ಯ ಗಳಿಸಿತು.

1948: ವಿಶ್ವಸಂಸ್ಥೆಯು ಜಿನೀವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಾದ ‘ವರ್ಲ್ಡ್ ಹೆಲ್ತ್ ಆರ್ಗನೈಸೇಶನ್’ ಅನ್ನು ಸ್ಥಾಪಿಸಿತು.

1949: ರೋಜರ್ಸ್ ಮತ್ತು ಹ್ಯಾಮರ್ಸ್ಟೀನ್ ಸಂಗೀತ ತಂಡವಾದ ‘ಸೌತ್ ಪೆಸಿಫಿಕ್’ ಬ್ರಾಡ್ವೇನಲ್ಲಿ ಆರಂಭಗೊಂಡಿತು. ಇದು 1925 ಕಾರ್ಯಕ್ರಮಗಳನ್ನು ನೀಡಿ 10 ಟೋನಿ ಪ್ರಶಸ್ತಿಗಳನ್ನು ಗಳಿಸಿತು.

1953: ಡ್ಯಾಗ್ ಹ್ಯಾಮ್ಮರ್ ಷೀಲ್ಡ್ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

1954: ಅಮೆರಿಕ ಅಧ್ಯಕ್ಷ ಡ್ವೈಟ್ ಡಿ. ಈಸೆನ್ಹೂವರ್ ಅವರು ತಮ್ಮ ‘ಡಾಮಿನೋ ಥಿಯರಿ’ ಕುರಿತಾಗಿ ಭಾಷಣವನ್ನು ಪತ್ರಿಕಾ ಗೋಷ್ಠಿಯಲ್ಲಿ ಮಾಡಿದರು. 1955: ಯುನೈಟೆಡ್ ಕಿಂಗ್ಡಂ ಪ್ರಧಾನಿಗಳಾದ ವಿನ್ಸ್ಟನ್ ಚರ್ಚಿಲ್ ಅವರು ಅನಾರೋಗ್ಯದ ಕಾರಣದಿಂದಾಗಿ ರಾಜೀನಾಮೆ ಸಲ್ಲಿಸಿದರು ಯುನೈಟೆಡ್ ಕಿಂಗ್ಡಂ ಪ್ರಧಾನಿಗಳಾದ ವಿನ್ಸ್ಟನ್ ಚರ್ಚಿಲ್ ಅವರು ಅನಾರೋಗ್ಯದ ಕಾರಣದಿಂದಾಗಿ ರಾಜೀನಾಮೆ ಸಲ್ಲಿಸಿದರು.

1964: ಐಬಿಎಮ್ ಸಿಸ್ಟಮ್/360 ಅನ್ನು ಘೋಷಿಸಿತು.

1967: ಚಲನಚಿತ್ರ ವಿಮರ್ಶಕ ರೋಜರ್ ಎಬರ್ಟ್ ಅವರು ತಮ್ಮ ಪ್ರಥಮ ಚಲನಚಿತ್ರ ವಿಮರ್ಶೆಯನ್ನು ಚಿಕಾಗೋ-ಸನ್-ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟಿಸಿದರು.

1968: ಮೋಟಾರ್ ರೇಸ್ ಚಾಂಪಿಯನ್ ಜಿಮ್ ಕ್ಲಾರ್ಕ್ ಅವರು ಹಾಕೆನ್ಹೀಮ್ ಫಾರ್ಮ್ಯುಲಾ 2 ರೇಸ್ ಸಂದರ್ಭದಲ್ಲಿ ಉಂಟಾದ ಅಪಘಾತದಲ್ಲಿ ನಿಧನರಾದರು.

1969: ಆರ್.ಎಫ್.ಸಿ. 1 ಪ್ರಕಟಣೆಗೊಂಡು, ಈ ದಿನವು ಅಂತರ್ಜಾಲದ (ಇಂಟರ್ನೆಟ್ಟಿನ) ಸಾಂಕೇತಿಕವಾದ ಹುಟ್ಟಿದ ದಿನವಾಗಿದೆ.

1978: ಅಮೆರಿಕ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರು ನ್ಯೂಟ್ರಾನ್ ಬಾಂಬ್ ತಯಾರಿಕೆಯನ್ನು ರದ್ಧುಗೊಳಿಸಿದರು.

1983: ಎಸ್.ಟಿ.ಎಸ್-6 ಬಾಹ್ಯಾಕಾಶ ಯೋಜನೆಯ ಸಂದರ್ಭದಲ್ಲಿ ಸ್ಟೋರಿ ಮುಸ್ಗ್ರೇವ್ ,ಮತ್ತು ಡಾನ್ ಪೀಟರ್ಸನ್ ಅವರು ಪ್ರಥಮ ಬಾಹ್ಯಾಕಾಶ ನಡಿಗೆಯನ್ನು ಕೈಗೊಂಡರು.

1985: ಸೋವಿಯತ್ ಅಧ್ಯಕ್ಷರಾದ ಮಿಖೈಲ್ ಗೋರ್ಬೆಚೆವ್ ಅವರು ಯೂರೋಪಿನಲ್ಲಿ ಮಧ್ಯಮ-ಶ್ರೇಣಿಯ ಕ್ಷಿಪಣಿಗಳ ನಿಯೋಜನೆಯನ್ನು ನಿಷೇದಿಸಲು ಕರೆಕೊಟ್ಟರು.

1991: ಮಾರ್ಸ್ ಒಡಿಸ್ಸಿ (ಮಂಗಳ ಗ್ರಹದ ಯಾತ್ರೆಯ ಒಡಿಸ್ಸಿ) ಎಂಬ ಮಂಗಳಗ್ರಹದಲ್ಲಿನ ರೋಬೋಟ್ ರೂಪದ ಯಾಂತ್ರಿಕ ಸಮೀಕ್ಷೆ ಆರಂಭಗೊಂಡಿತು.

2003: ಅಮೆರಿಕದ ಪಡೆಗಳು ಬಾಗ್ದಾದ್ ಅನ್ನು ಆಕ್ರಮಿಸಿದವು. ಎರಡು ದಿನಗಳ ನಂತರದಲ್ಲಿ ಸದ್ದಾಮ್ ಹುಸೇನ್ ಅಧಿಪತ್ಯವು ಅಂತ್ಯಗೊಂಡಿತು.

2006: ಸುಮಾರು 1700 ವರ್ಷಗಳಿಂದ ಕಾಣೆಯಾಗಿತ್ತು ಎನ್ನಲಾದ ‘ಗಾಸ್ಪೆಲ್ ಆಫ್ ಜುದಾಸ್’ ಹಸ್ತಪ್ರತಿ ವಾಷಿಂಗ್ಟನ್ನಲ್ಲಿ ಪತ್ತೆಯಾಯಿತು. ಮೂರು ಅಥವಾ ನಾಲ್ಕನೇ ಶತಮಾನಕ್ಕೆ ಸೇರಿದ ಈ ಹಸ್ತಪ್ರತಿಯ ಅಧಿಕೃತ, ಅನುವಾದಿತ ಪ್ರತಿಯನ್ನು ವಾಷಿಂಗ್ಟನ್ನಿನಲ್ಲಿ ಪ್ರದರ್ಶನಕ್ಕೆ ಇಡಲಾಯಿತು. ಏಸು ಕ್ರಿಸ್ತ ಹಾಗೂ ಜುದಾಸ್ ಬಗ್ಗೆ ಈ ಕೃತಿ ಹೊಸ ಭಾಷ್ಯ ಬರೆದಿದೆ. ಬೈಬಲ್ಲಿನಲ್ಲಿ ಕೆಟ್ಟ ವ್ಯಕ್ತಿ ಎಂದು ಬಿಂಬಿತನಾಗಿರುವ ಜುದಾಸ್, ಕ್ರಿಸ್ತನಿಗೆ ದ್ರೋಹ ಎಸಗಿಲ್ಲ, ಆದರೆ ಕ್ರಿಸ್ತನೇ ಖುದ್ದಾಗಿ ತನ್ನನ್ನು ಶಿಲುಬೆಗೆ ಏರಿಸುವವರಿಗೆ ಒಪ್ಪಿಸುವಂತೆ ತನ್ನ ಶಿಷ್ಯ ಜುದಾಸನಿಗೆ ಸೂಚಿಸಿದ್ದುದಾಗಿಯೂ, ಇದರಿಂದ ಜುದಾಸನಿಗೆ ಬಹಳ ವ್ಯಥೆಯಾಯಿತು ಎಂದೂ ಈ ಕೃತಿ ಹೇಳಿದೆ.

2006: ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈ ನಗರಗಳಲ್ಲಿ ಮೆಟ್ರೊ ರೈಲು ಯೋಜನೆ ಆರಂಭಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿತು.

2007: ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಅರಂಭವಾದ ಕದಂಬೋತ್ಸವದಲ್ಲಿ 2006ನೇ ಸಾಲಿನ ಪ್ರತಿಷ್ಠಿತ ಪಂಪ ಪ್ರಶಸ್ತಿಯನ್ನು ಖ್ಯಾತ ವಿಮರ್ಶಕ ಡಾ. ಜಿ.ಎಸ್. ಆಮೂರ ಅವರಿಗೆ ಪ್ರದಾನ ಮಾಡಲಾಯಿತು.

2007: ಕಾಂಚೀಪುರಂಗೆ ಸಮೀಪದ ಮಾಮಲ್ಲಾಪುರಂನಲ್ಲಿ 1800 ವರ್ಷಗಳಷ್ಟು ಹಳೆಯದಾದ ಮುರುಗನ್ ದೇವಾಲಯ ಒಂದರ ಅವಶೇಷಗಳನ್ನು ಪ್ರಾಕ್ತನ ತಜ್ಞರು ಪತ್ತೆ ಹಚ್ಚಿದರು.

2009: ನಲವತ್ತೊಂದು ವರ್ಷಗಳ ನಂತರದಲ್ಲಿ ನ್ಯೂಜಿಲೆಂಡಿನ ನೆಲದಲ್ಲಿ ಭಾರತವು ಕ್ರಿಕೆಟ್ ಟೆಸ್ಟ್ ಸರಣಿಯನ್ನು ಗೆದ್ದಿತು. 1967-68ರಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ನಾಯಕತ್ವದಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದಾಗ ಟೆಸ್ಟ್ ಸರಣಿ ಜಯಿಸಿದ್ದ ಭಾರತವು ನಾಲ್ಕು ದಶಕಗಳ ನಂತರದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಈ ಸಾಧನೆಯನ್ನು ಮಾಡಿತು.

ಪ್ರಮುಖಜನನ/ಮರಣ:

1506: ಫ್ರಾನ್ಸಿಸ್ ಝೇವಿಯರ್ ಅವರು ಈಗಿನ ಸ್ಪೇನ್ ದೇಶವಾದ ಕಿಂಗ್ಡಂ ಆಫ್ ನವ್ವಾರೆಯ ಜೇವಿಯರ್ ಎಂಬಲ್ಲಿ ಜನಿಸಿದರು. ಆಧುನಿಕ ಕಾಲದ ಖ್ಯಾತ ರೋಮನ್ ಕ್ಯಾಥೋಲಿಕ್ ಪ್ರಚಾರಕರಾದ ಇವರು ಭಾರತ, ಜಪಾನ್, ಚೀನಾ ಮತ್ತಿತರ ರಾಷ್ಟಗಳಲ್ಲಿ ಕ್ರೈಸ್ತಧರ್ಮ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದವರಾಗಿದ್ದಾರೆ.

1770: ಮಹಾನ್ ಕವಿ ವಿಲಿಯಂ ವರ್ಡ್ಸ್ ವರ್ತ್ ಇಂಗ್ಲೆಂಡಿನ ಲೇಕ್ ಜಿಲ್ಲೆಯ ಕಾಕರ್ ಮೌತ್ ಎಂಬಲ್ಲಿ ಜನಿಸಿದರು. ಇಂಗ್ಲಿಷ್ ರೊಮಾಂಟಿಕ್ ಕಾವ್ಯ ಯುಗದ ಪ್ರವರ್ತಕರಲ್ಲಿ ಪ್ರಮುರೆನಿಸಿದ ಇವರು ಸಾಮ್ಯುಯಲ್ ಟೇಲರ್ ಕೊಲೆರಿಡ್ಜ್ ಅವರ ಸಹಯೋಗದಲ್ಲಿ 1798ರಲ್ಲಿ ಪ್ರಕಟಿಸಿದ ‘ಲಿರಿಕಲ್ ಬಲ್ಲಾಡ್ಸ್’ ಕೃತಿ ರೊಮಾಂಟಿಕ್ ಯುಗಕ್ಕೆ ಪ್ರಾರಂಭ ನೀಡಿದ ಕೃತಿಗಳಲ್ಲೊಂದು.

1860: ಕೆಲ್ಲಾಗ್ ಸಂಸ್ಥೆಯ ಸಹ ಸಂಸ್ತಾಪಕ ವಿಲ್ ಕೀತ್ ಕೆಲ್ಲಾಗ್ ಮಿಚಿಗನ್ನಿನ ಬ್ಯಾಟಲ್ ಕ್ರೀಕ್ ಎಂಬಲ್ಲಿ ಜನಿಸಿದರು.

1889: ನೊಬೆಲ್ ಪುರಸ್ಕ್ಸೃತ ಕವಯತ್ರಿ ಮತ್ತು ಶಿಕ್ಷಣ ತಜ್ಞೆ ಗೆಬ್ರಿಲಾ ಮಿಸ್ತ್ರಾಲ್ ಅವರು ಚಿಲಿ ದೇಶದ ವಿಕುನಾ ಎಂಬಲ್ಲಿ ಜನಿಸಿದರು. 1945ರ ವರ್ಷದಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಗಳಿಸಿದ ಇವರು, ಲ್ಯಾಟಿನ್ ಅಮೆರಿಕಾದಲ್ಲೇ ನೊಬೆಲ್ ಪ್ರಶಸ್ತಿ ಗಳಿಸಿದ ಪ್ರಥಮ ವ್ಯಕ್ತಿ ಎನಿಸಿದರು.

1891: ಪ್ರಖ್ಯಾತ ಆಟಿಕೆಗಳ ಉದ್ಯಮವಾದ ‘ದಿ ಲೆಗೋ ಗ್ರೂಪ್’ ಸಂಸ್ಥಾಪಕ ಒಲೆ ಕಿರ್ಕ್ ಕ್ರಿಶ್ಚಿಯಾನ್ಸೆನ್ ಅವರು ಡೆನ್ಮಾರ್ಕಿನ ಫ್ಲಿಸ್ಕೋವ್ ಎಂಬಲ್ಲಿ ಜನಿಸಿದರು.

1893: ಭಾರತೀಯ ಉದ್ಯಮಿ ‘ದಾಲ್ಮಿಯಾ ಸಮೂಹದ’ ಸ್ಥಾಪಕರಾದ ರಾಮಕೃಷ್ಣ ದಾಲ್ಮಿಯಾ ಅವರು ರಾಜಾಸ್ಥಾನದ ಚಿರಾವಾ ಎಂಬಲ್ಲಿ ಜನಿಸಿದರು. ಇವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ದಿ ಟೈಮ್ಸ್ ಗ್ರೂಪ್ ಉದ್ಯಮಗಳಲ್ಲೂ ನಿರ್ಣಾಯಕವಾದ ಪಾಲುದಾರಿಕೆ ಒಡೆತನವನ್ನು ಹೊಂದಿದ್ದರು.

1918: ಯಕ್ಷಗಾನ ಕ್ಷೇತ್ರದ ಮಾತಿನ ಮಾಂತ್ರಿಕ, ವೇಷಧಾರಿ, ಪ್ರಸಂಗ ಕರ್ತೃ, ಮೇಳದ ಯಜಮಾನ ಹೀಗೆ ಹಲವು ಹತ್ತು ಮುಖಗಳ ಪ್ರತಿಭೆಯ ಸಂಗಮರಾಗಿದ್ದ ಗೋಪಾಲಕೃಷ್ಣ ಭಟ್ಟರು ಕಾಸರಗೋಡು ತಾಲ್ಲೂಕಿನ ಕುಂಬಳೆಯ ಎಡನಾಡುಗ್ರಾಮದಲ್ಲಿ ಜನಿಸಿದರು. ಕರ್ನಾಟಕ, ಕೇರಳ, ಎರಡು ರಾಜ್ಯಗಳಿಂದಲೂ ರಾಜ್ಯಪ್ರಶಸ್ತಿ ಗಳಿಸಿದ ಯಕ್ಷಗಾನ ಕಲಾವಿದರೆಂಬ ಹೆಗ್ಗಳಿಕೆಯ ಜೊತೆಗೆ ಕ್ಯಾಸೆಟ್ ಲೋಕದಲ್ಲಿ ಅವರ ಅನೇಕ ಕ್ಯಾಸೆಟ್ಟುಗಳು ದಾಖಲೆಯ ಮಾರಾಟವಾದವು. ಮಂಗಳೂರು ವಿಶ್ವವಿದ್ಯಾಲಯವು ಶೇಣಿ ಗೋಪಾಲಕೃಷ್ಣ ಭಟ್ಟರಿಗೆ ಡಾಕ್ಟರೇಟ್ ಗೌರವವನ್ನಿತ್ತು ಗೌರವಿಸಿತು.

1920: ಪೂರ್ವ ಪಶ್ಚಿಮಗಳೆರಡನ್ನೂ ಸಂಗೀತದಲ್ಲಿ ಸಮ್ಮಿಲನಗೊಳಿಸಿದ ಸಿತಾರ್ ವಾದಕ ಪಂಡಿತ್ ರವಿಶಂಕರರು ಬನಾರಸ್ ಪಟ್ಟಣದಲ್ಲಿ ಜನಿಸಿದರು. ಸಿತಾರ್ ವಾದನವಷ್ಟೇ ಅಲ್ಲದೆ ಯೆಹೂದಿ ಮೆನನ್ ಅವರಿಂದ ಮೊದಲ್ಗೊಂಡು ವಿಶ್ವದ ಪ್ರಸಿದ್ಧರೊಂದಿಗೆ ಜುಗಲ್ಬಂದಿ, ಬ್ಯಾಲೆಟ್ ರಂಗ ಪ್ರಯೋಗಗಳು, ಸಿನಿಮಾ ಸಂಗೀತ ಹೀಗೆ ಎಲ್ಲೆಡೆ ಅವರ ಸಂಗೀತ ಹರಿದಿದ್ದು, ಭಾರತರತ್ನದ ವರೆಗಿನ ಭಾರತದ ಪ್ರಶಸ್ತಿಗಳು ಮತ್ತು ಅನೇಕ ಅಂತರ್ರಾಷ್ಟ್ರೀಯ ಗೌರವಗಳು ಅವರಿಗೆ ಸಂದಿವೆ.

1924: ಕನ್ನಡದ ಪ್ರಸಿದ್ಧ ಬರಹಗಾರ ಮತ್ತು ಹೋರಾಟಗಾರರಾದ ಶಾಂತರಸ ಅವರು ರಾಯಚೂರು ಜಿಲ್ಲೆಯ ಹೆಂಬೇರಾಳ ಎಂಬ ಹಳ್ಳಿಯಲ್ಲಿ ಜನಿಸಿದರು. ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.

1925: ಸ್ವಾತಂತ್ರ್ಯ ಹೋರಾಟಗಾರ, ಕಾರ್ಮಿಕ ನಾಯಕ, ಕಮ್ಮ್ಯೂನಿಸ್ಟ್ ನಾಯಕ, ಕೇಂದ್ರ ಮಂತ್ರಿ ಚತುರಾನನ್ ಮಿಶ್ರಾ ಅವರು ಬಿಹಾರಿನ ನಹಾರ್ ಎಂಬಲ್ಲಿ ಜನಿಸಿದರು. ಇವರು ಕೇಂದ್ರದಲ್ಲಿ ಕೃಷಿ ಮತ್ತಿತರ ಖಾತೆಗಳ ಮಂತ್ರಿಗಳಾಗಿದ್ದರು.

1942: ಚಲನಚಿತ್ರ ನಟ, ನಿರ್ಮಾಪಕ ಜಿತೇಂದ್ರ ಅವರು ರವಿ ಕಪೂರ್ ಎಂಬ ಹೆಸರಿನಿಂದ ಅಮೃತಸಾರದಲ್ಲಿ ಜನಿಸಿದರು. ಇವರಿಗೆ 2014 ವರ್ಷದ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ ಸಂದಿದೆ.

1947: ಅಮೆರಿಕದ ಪ್ರಸಿದ್ಧ ವಾಹನ ಉದ್ಯಮಿ ಫೋರ್ಡ್ ಮೋಟಾರ್ ಸಂಸ್ಥೆಯ ಸ್ಥಾಪಕ ಹೆನ್ರಿ ಫೋರ್ಡ್ ಅವರು 83ನೆಯ ವಯಸ್ಸಿನಲ್ಲಿ ಮಿಚಿಗನ್ನಿನ ಫೇರ್ ಲೇನ್ ಎಂಬಲ್ಲಿ ನಿಧನರಾದರು. ಇವರು ತಮ್ಮ ಬಹುತೇಕ ಆಸ್ತಿಯನ್ನು ಫೋರ್ಡ್ ಫೌಂಡೇಶನ್ನಿಗೆ ನೀಡಿ ಶಿಕ್ಷಣ ಮತ್ತು ಜನಹಿತ ಕಾರ್ಯಕ್ರಮಗಳಿಗೆ ಬಳಸಲು ಅನುವು ಮಾಡಿಕೊಟ್ಟಿದ್ದಾರೆ.

1968: ಕುರುಡರ ಶ್ರೇಯೋಭಿವೃದ್ಧಿಗಾಗಿ ಕೆನಡಿಯನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ದಿ ಬ್ಲೈಂಡ್ (CNIB) ಸ್ಥಾಪಿಸಿದ ಎಡ್ವಿನ್ ಬೇಕರ್ ನಿಧನರಾದರು.

2007: ಖ್ಯಾತ ಜಾನಪದ ತಜ್ಞ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ. ದೇವೇಂದ್ರ ಕುಮಾರ ಸಿ. ಹಕಾರಿ ಅವರು ಅವರು ತಮ್ಮ 78ಮೇ ವಯಸ್ಸಿನಲ್ಲಿ ಧಾರವಾಡದಲ್ಲಿ ನಿಧನರಾದರು.

2014: ಚಲನಚಿತ್ರರಂಗದಲ್ಲಿ ಶ್ರೇಷ್ಠ ಛಾಯಾಗ್ರಾಹಕರೆಂದು ಹೆಸರಾಗಿದ್ದ ದಾದಾ ಫಾಲ್ಕೆ ಪುರಸ್ಕೃತ ವಿ.ಕೆ. ಮೂರ್ತಿ ಬೆಂಗಳೂರಿನಲ್ಲಿ ನಿಧನರಾದರು. ಭಾರತದ ಪ್ರಪ್ರಥಮ ಸಿನಿಮಾಸ್ಕೋಪ್ ಚಿತ್ರ ‘ಕಾಗಜ್ ಕಿ ಫೂಲ್’ ಮತ್ತು ‘ಸಾಹಿಬ್, ಬೀಬಿ ಔರ್ ಗುಲಾಂ’ ಚಿತ್ರದ ಛಾಯಾಗ್ರಹಣಕ್ಕಾಗಿ ಮೂರ್ತಿ ಅವರು ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಸೆರೆವಾಸ ಅನುಭವಿಸಿದ್ದ ಇವರು ರಂಗ ಪ್ರಯೋಗಗಳಲ್ಲಿ ಸಹಾ ಪಾಲ್ಗೊಂಡಿದ್ದರು.