Categories
e-ದಿನ

ಏಪ್ರಿಲ್-08

ಪ್ರಮುಖಘಟನಾವಳಿಗಳು:

1911: ಡಚ್ ಭೌತ ವಿಜ್ಞಾನಿಯಾದ ಹೀಕೆ ಕಾಮೆರ್ಲಿಂಗ್ಹ್ ಒನ್ನೆಸ್ ಅವರು ಸೂಪರ್ ಕಂಡಕ್ಟಿವಿಟಿಯನ್ನು ಅನ್ವೇಷಿಸಿದರು.

1929: ಭಾರತೀಯ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ದೆಹಲಿಯ ಕೇಂದ್ರೀಯ ಶಾಸನಸಭೆಯಲ್ಲಿ ಬಾಂಬ್ ಸ್ಫೋಟಿಸಿದರು. ಭಾರತೀಯ ಪ್ರಜೆಗಳ ನಾಗರಿಕ ಹಕ್ಕುಗಳನ್ನು ಮೊಟಕುಗೊಳಿಸುವ ಸಾರ್ವಜನಿಕ ಸುರಕ್ಷತೆ ಮತ್ತು ಕಾರ್ಮಿಕ ವಿವಾದಗಳ ಮಸೂದೆಯನ್ನು ಪ್ರತಿಭಟಿಸಿ ಅವರು ಈ ಕೃತ್ಯ ಎಸಗಿದರು.

1945: ಪ್ರಸ್ಸಿಯಾದ ಹ್ಯಾನೊವರ್ ಬಳಿ ನಾಸಿ ಕಾನ್ಸೆನ್ಟ್ರೇಶನ್ನಿಗೆ ಬಂಧಿಗಳನ್ನಾಗಿ ಒಯ್ಯುತ್ತಿದ್ದ 4000 ಜನರಿದ್ದ ರೈಲು ಅಕಸ್ಮಾತ್ತಾಗಿ ವಿಮಾನ ಆಕ್ರಮಣಕ್ಕೆ ಒಳಗಾಗಿ ನಾಶಗೊಂಡಿತು. ಅಪಘಾತದಲ್ಲಿ ಉಳಿದವರನ್ನು ನಾಜಿಗಳು ಹತ್ಯೆ ಮಾಡಿದರು.

1950: ಪಂಡಿತ್ ಜವಾಹರಲಾಲ್ ನೆಹರೂ ಮತ್ತು ಪಾಕಿಸ್ತಾನದ ಲಿಯಾಖತ್ ಅಲಿ ಖಾನ್ ನಡುವೆ ಒಪ್ಪಂದಕ್ಕೆ ಸಹಿಯಾಯಿತು.

1959: ಗ್ರೇಸ್ ಹಾಪರ್ ಅವರ ನೇತೃತ್ವದ ತಂಡವು ಕಂಪ್ಯೂಟರ್ ತಯಾರಕರು, ಗ್ರಾಹಕರು ಮತ್ತು ವಿಶ್ವವಿದ್ಯಾಲಯದ ಜನರೊಂದಿಗೆ ಸಭೆ ಸೇರಿ ಒಂದು ಉಪಯುಕ್ತ ‘ಪ್ರೊಗ್ರಾಮಿಂಗ್ ಲ್ಯಾಂಗ್ವೇಜ್’ ಸೃಷ್ಟಿಯ ಬಗ್ಗೆ ಚರ್ಚೆ ನಡೆಸಿತು. ಮುಂದೆ ಅದು ‘ಕೋಬಾಲ್’ (COBOL) ಎಂದು ಪ್ರಸಿದ್ಧಿಗೊಂಡಿತು.

1992: ನಿವೃತ್ತ ಟೆನಿಸ್ ಆಟಗಾರ ಆರ್ಥರ್ ಆಶ್ ಅವರು ತಮಗೆ ‘ಏಡ್ಸ್’ ಕಾಹಿಲೆ ಇರುವುದಾಗಿ ಪ್ರಕಟಿಸಿ, ಈ ಕಾಹಿಲೆಯು ತಮಗೆ ಎರಡು ಹೃದಯ ಶಸ್ತ್ರಚಿಕಿತ್ಸೆಗಳಲ್ಲಿ ನೀಡಲಾದ ರಕ್ತ ವರ್ಗಾವಣೆ ಸಂದರ್ಭದಲ್ಲಿ ಉಂಟಾಗಿದೆ ಎಂದು ಹೇಳಿದರು.

2001: ಜಾರ್ಜಿಯಾದ ಆಗಸ್ಟಾದಲ್ಲಿ `ಆಗಸ್ಟಾ ಮಾಸ್ಟರ್ಸ್’ ಗೆಲ್ಲುವ ಮೂಲಕ ಟೈಗರ್ ವುಡ್ಸ್ ಅವರು ಏಕ ಕಾಲಕ್ಕೆ ಎಲ್ಲ ನಾಲ್ಕು ಪ್ರಮುಖ ಚಾಂಪಿಯನ್ ಶಿಪ್ಪುಗಳನ್ನು ಗೆದ್ದ ಮೊದಲ ಗಾಲ್ಫ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2007: ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಅವರ ಜನ್ಮಶತಮಾನೋತ್ಸವಕ್ಕೆ ಚಾಲನೆ ನೀಡಿದರು.

2009: ಜವಹರಲಾಲ್ ನೆಹರು ವಿಜ್ಞಾನ ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಪ್ರೊ. ಸಿ.ಎನ್.ಆರ್.ರಾವ್ ಅವರು ರಷ್ಯಾದ ಪ್ರತಿಷ್ಠಿತ ‘ಆರ್ಡರ್ ಆಫ್ ಫ್ರೆಂಡ್‌ಶಿಪ್’ ಗೌರವಕ್ಕೆ ಪಾತ್ರರಾದರು.

ಪ್ರಮುಖಜನನ/ಮರಣ:

1541: ಇಟಲಿಯ ಪ್ರಸಿದ್ಧ ಭೌತಶಾಸ್ತ್ರಜ್ಞ ಮತ್ತು ಪ್ರಾಕ್ತನ ತಜ್ಞ ಮಿಚೆಲಿ ಮರ್ಕಾಟಿ ಜನಿಸಿದರು.

1832: ಫೆರ್ಡಿನೆಂಡ್ ಕಿಟೆಲರು ಜರ್ಮನಿಯ ರಾಸ್ಟರ್ ಹಾಫ್ ಎಂಬ ಊರಲ್ಲಿ ಜನಿಸಿದರು. ಜರ್ಮನಿಯ ಬಾಸೆಲ್ ಮಿಶನ್ ಮೂಲಕ ಕರ್ನಾಟಕಕ್ಕೆ ಕನ್ನಡ ಭಾಷೆಯಲ್ಲಿ ಮಹತ್ತರವಾದ ಸಾಧನೆಗೈದರು. ಇವರ ‘ಕನ್ನಡ –ಇಂಗ್ಲಿಷ್ ನಿಘಂಟಿಗೆ’ ಜರ್ಮನಿಯ ಟ್ಯುಬಿಂಗನ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು. ಕನ್ನಡದ ಕಾರ್ಯಕ್ಕೆ ಸಂದ ಪ್ರಪ್ರಥಮ ಡಾಕ್ಟರೇಟ್ ಗೌರವವಾಗಿದೆ.

1904: ಇಂಗ್ಲಿಷ್ ಅರ್ಥಶಾಸ್ತ್ರಜ್ಞರಾದ ಜಾನ್ ಹಿಕ್ಸ್ ಅವರು ಇಂಗ್ಲೆಂಡಿನ ವಾರ್ವಿಕ್ ಎಂಬಲ್ಲಿ ಜನಿಸಿದರು. ಇವರಿಗೆ 1972 ವರ್ಷದಲ್ಲಿ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತು.

1911: ಅಮೆರಿಕದ ಜೈವಿಕ ವಿಜ್ಞಾನಿ ಮೆಲ್ವಿನ್ ಕ್ಯಾಲ್ವಿನ್ ಅವರು ಮಿನ್ನೇಸೋಟಾದ ಸೈಂಟ್ ಪಾಲ್ ಎಂಬಲ್ಲಿ ಜನಿಸಿದರು. ಜೀವ ರಸಾಯನಶಾಸ್ತ್ರ, ದ್ಯುತಿ ಸಂಶ್ಲೇಷಣಾ ಕ್ರಿಯೆಗಳಲ್ಲಿನ ಜೈವಿಕ ಸಂಶ್ಲೇಷಣೆಗಳನ್ನು ಸ್ಪುಟಗೊಳಿಸಿದವರೆಂದು ಪ್ರಸಿದ್ಧಿ ಪಡೆದಿರುವ ಇವರಿಗೆ 1911 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1924: ಹಿಂದೂಸ್ಥಾನಿ ಸಂಗೀತದ ಅದ್ಭುತ ಸಾಧಕರಾದ ಕುಮಾರ ಗಂಧರ್ವ ಅವರು ಬೆಳಗಾವಿ ಜಿಲ್ಲೆಯ ಸೂಳೆಭಾವಿಯಲ್ಲಿ ಜನಿಸಿದರು. ಜನ್ಮಜಾತ ಪ್ರತಿಭೆಯಾಗಿದ್ದ ಕುಮಾರ ಗಂಧರ್ವರು, ಗಾಯಕರಾಗಿ ಉನ್ನತಿಗೇರಿದ್ದರ ಜೊತೆಗೆ ಹನ್ನೆರಡು ರಾಗಗಳನ್ನೂ ಸೃಷ್ಟಿಸಿದ್ದರು. ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕಾಳಿದಾಸ ಸಮ್ಮಾನ, ಉಜ್ಜಯನಿ ವಿಕ್ರಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.

1939: ಸಿಪಿಕೆ ಎಂದೇ ಖ್ಯಾತರಾಗಿರುವ ಪ್ರೊ.ಸಿ.ಪಿ. ಕೃಷ್ಣಕುಮಾರ್ ಮೈಸೂರಿನಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಇವರು ವಿವಿಧ ಪ್ರಕಾರಗಳಲ್ಲಿ 250ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿ, ಜಾನಪದ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ.

1861: ಓಟಿಸ್ ಎಲಿವೇಟರ್ ಕಂಪೆನಿ ಸ್ಥಾಪಕ ಎಲಿಷಾ ಓಟಿಸ್ ನ್ಯೂಯಾರ್ಕಿನ ಯಾಂಕರ್ಸ್ ಎಂಬಲ್ಲಿ ನಿಧನರಾದರು.

1894: ನಮ್ಮ ಭಾರತೀಯರಿಗೆ ‘ವಂದೇ ಮಾತರಂ’ ಅಂತಹ ದೇಶಭಕ್ತಿಗೀತೆಗಳನ್ನು ನೀಡಿ, ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಲ್ಲಿ ತಮ್ಮ ಮೊನಚು ಬರಹ, ಹಾಡುಗಳ ಮುಖಾಂತರ ಕಿಚ್ಚು ತುಂಬಿದ ಬಂಗಾಳಿ ಸಾಹಿತಿ, ಪತ್ರಕರ್ತ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರು ಕೋಲ್ಕತ್ತಾದಲ್ಲಿ ನಿಧನರಾದರು. ಬ್ರಿಟಿಷರು ಅವರನ್ನು ಚಟರ್ಜಿ ಅಂದು ಕರೆಯುತ್ತಿದ್ದರು.

1931: ಸ್ವೀಡಿಷ್ ಕವಿ ಎರಿಕ್ ಆಕ್ಸೇಲ್ ಕಾರ್ಲ್ ಫೆಲ್ಡ್ಟ್ ಅವರು ಸ್ಟಾಕ್ ಹೋಮ್ ನಗರದಲ್ಲಿ ನಿಧನರಾದರು. ಇವರಿಗೆ 1931 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1973: ಜಗತ್ತಿನ ಖ್ಯಾತ ಕಲಾವಿದರಲ್ಲಿ ಒಬ್ಬರಾದ ಪಾಬ್ಲೋ ಪಿಕಾಸೋ ಫ್ರಾನ್ಸಿನ ಮೌಗಿನ್ಸಿನಲ್ಲಿ ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದರು. 20ನೇ ಶತಮಾನದ ಆಧುನಿಕ ಕಲೆಗೆ ಇವರು ಮಹತ್ವದ ಕಾಣಿಕೆ ಸಲ್ಲಿಸಿದ್ದಾರೆ.

1984: ರಷ್ಯಾದ ಭೌತವಿಜ್ಞಾನಿ ಪ್ಯೋಟ್ರ್ ಕಪಿಟ್ಸಾ ಅವರು ಮಾಸ್ಕೋದಲ್ಲಿ ನಿಧನರಾದರು. ‘ಕಡಿಮೆ ಉಷ್ಣಾಂಶದ ಭೌತಶಾಸ್ತ್ರ’ಕ್ಕೆ ಪ್ರಸಿದ್ಧರಾದ ಇವರಿಗೆ 1978 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

2008: ಖ್ಯಾತ ಸರೋದ್ ವಾದಕಿ ಶರನ್ ರಾಣಿ ಬಾಕ್ಲಿವಾಲ್ ಅವರು ದೆಹಲಿಯಲ್ಲಿ ನಿಧನರಾದರು. ಸಂಗೀತ ವಿದ್ವಾಂಸರರಾಗಿ ವಿಶೇಷವಾಗಿ ಸರೋದ್ ವಾದನದಲ್ಲಿ ಪ್ರಖ್ಯಾತರಾಗಿದ್ದ ಇವರಿಗೆ ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿದ್ದವು.

2015: ಪ್ರಸಿದ್ಧ ಸಾಹಿತಿ, ಪತ್ರಕರ್ತ, ಕಾರ್ಯಕರ್ತ, ಸಿನಿಮಾ ನಿರ್ದೇಶನ ಮುಂತಾದ ವಿವಿಧ ಮುಖಿ ವಿದ್ವಾಂಸರಾದ ಜಯಕಾಂತನ್ ಅವರು ಚೆನ್ನೈ ನಗರದಲ್ಲಿ ನಿಧನರಾದರು. ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ಪದ್ಮಭೂಷಣ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿದ್ದವು.