Categories
e-ದಿನ

ಏಪ್ರಿಲ್-09

ಪ್ರಮುಖಘಟನಾವಳಿಗಳು:

190: ಡಾಂಗ್ ಜುವೋ ತನ್ನ ಪಡೆಯನ್ನು ರಾಜಧಾನಿ ಲುವಾಂಗೋದಿಂದ ತೆರವುಗೊಳಿಸಿ ಅದನ್ನು ಪೂರ್ತಿ ಸುಟ್ಟುಹಾಕಿದ.

1511: ಲೇಡಿ ಮಾರ್ಗರೇಟ್ ಬಿಯೋಫೋರ್ಟ್ ಅವರು ಕೇಂಬ್ರಿಡ್ಜಿನ ಸೈಂಟ್ ಜಾನ್ಸ್ ಕಾಲೇಜನ್ನು ಸ್ಥಾಪಿಸಿದರು.

1682: ರಾಬರ್ಟ್ ಕಾವೆಲಿಯರ್ ಡಿ ಲಾ ಸಲ್ಲೆ ಅವರು ಮಿಸ್ಸಿಸಿಪಿ ನದಿಯ ಬಾಯಿಯನ್ನು ಅನ್ವೇಷಿಸಿ, ಅದಕ್ಕೆ ಲೌಯೀಸಿಯಾನ ಎಂದು ಹೆಸರಿಟ್ಟು, ಅದು ಫ್ರಾನ್ಸಿಗೆ ಸೇರಬೇಕು ಎಂದು ಪ್ರತಿಪಾದಿಸಿದರು.

1756: ಬಂಗಾಳದ ನವಾಬ ಅಲಿವರ್ಧಿ ಖಾನ್ ನಿಧನರಾಗಿ ಅವರ ಕಿರಿಯ ಪುತ್ರ ಸಿರಾಜ್ ಉದ್-ದೌಲ್ ಉತ್ತರಾಧಿಕಾರಿಯಾದರು. ಈತ ಮುಂದೆ ಬ್ರಿಟಿಷರನ್ನು ಪ್ರಸಿದ್ಧ ಪ್ಲಾಸಿ ಕದನದಲ್ಲಿ ಎದುರಿಸಿದರು.

1860: ಎಡ್ವರ್ಡ್-ಲಿಯಾನ್ ಸ್ಕಾಟ್ ಡಿ ಮಾರ್ಟಿನ್ವಿಲ್ಲೆ ಅವರು ತಾವು ಕಂಡುಹಿಡಿದ ‘ಫೋನ್ ಆಟೋಗ್ರಾಫ್’ ಮೂಲಕ ಮಾನವ ಧ್ವನಿಯನ್ನು ಧ್ವನಿಮುದ್ರಿಸಿದರು. ಇದು ಮೊಟ್ಟಮೊದಲನೆಯದಾಗಿ ಗುರುತಿಸಲ್ಪಟ್ಟಿರುವ ಅತ್ಯಂತ ಹಳೆಯ ಧ್ವನಿಮುದ್ರಿತ ಮಾನವ ಧ್ವನಿಯಾಗಿದೆ.

1945: ಯುನೈಟೆಡ್ ಸ್ಟೇಟ್ಸ್ ಆಟೋಮಿಕ್ ಎನರ್ಜಿ ಕಮಿಷನ್ ರೂಪುಗೊಂಡಿತು.

1961: ಒಂದು ಕಾಲದಲ್ಲಿ ವಿಶ್ವದ ಅತ್ಯಂತ ದೊಡ್ಡ ವಿದ್ಯುತ್ ರೈಲ್ವೆ ಎನಿಸಿದ್ದ ಲಾಸ್ ಎಂಜೆಲಿಸಿನ ಪೆಸಿಫಿಕ್ ಎಲೆಕ್ಟ್ರಿಕ್ ರೈಲ್ವೆ ತನ್ನ ಕಾರ್ಯಾಚರಣೆಗಳನ್ನು ನಿಲ್ಲಿಸಿತು.

1965: ಅಸ್ಟ್ರಾಡೋಮ್ ಪ್ರಾರಂಭಗೊಂಡು ಪ್ರಥಮ ಒಳಾಂಗಣ ಬೇಸ್ ಬಾಲ್ ಆಟ ಏರ್ಪಟ್ಟಿತು.

1980: ಸದ್ಧಾಂ ಹುಸೇನ್ ಆಡಳಿತವು ತತ್ವಜ್ಞಾನಿ ಮುಹಮ್ಮದ್ ಬಕಿರ್ ಅಲ್-ಸದರ್ ಮತ್ತು ಆತನ ಸಹೋದರಿ ಬಿಂಟ್-ಅಲ್-ಹುದಾ ಅವರುಗಳಿಗೆ ಮೂರು ವರ್ಷಗಳ ಕಾಲ ಚಿತ್ರಹಿಂಸೆ ನೀಡಿದ ನಂತರದಲ್ಲಿ ಕೊಂದುಹಾಕಿತು.

2006: ಮೆಲ್ಬೋರ್ನ್ ಕಾಮನ್ ವೆಲ್ತ್ ಕೂಟದ ಅವಧಿಯಲ್ಲಿ ಉದ್ದೀಪನ ಮದ್ದು ಸೇವನೆ ವಿವಾದದಲ್ಲಿ ಸಿಲುಕಿದ ಭಾರತದ ವೇಯ್ಟ್ ಲಿಫ್ಟರುಗಳಾದ ತೇಜೀಂದರ್ ಸಿಂಗ್ ಮತ್ತು ಎಡ್ವಿನ್ ರಾಜು ಅವರಿಗೆ ಜೀವಮಾನದ ನಿಷೇಧ ಹೇರಲಾಗಿದೆ ಎಂದು ಭಾರತೀಯ ವೇಯ್ಟ್ ಲಿಫ್ಟಿಂಗ್ ಒಕ್ಕೂಟ ಪ್ರಕಟಿಸಿತು.

2007: ಬಾಲಮುರಳಿ ಕೃಷ್ಣ, ಆಶಾ ಬೋಂಸ್ಲೆ, ಇಳಯರಾಜಾ, ಗಿರಿಜಾದೇವಿ ಅವರುಗಳಿಗೆ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಪ್ರತಿಷ್ಠಿತ ಸಂಗೀತ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಗೆ ಆಯ್ಕೆಯಾಗಿದ್ದ ಸರೋದ್ ಮಾಂತ್ರಿಕ ಅಲಿ ಅಕ್ಬರ್ ಖಾನ್ ಅವರು ಅನಾರೋಗ್ಯದ ಕಾರಣ ಸಮಾರಂಭಕ್ಕೆ ಆಗಮಿಸಿರಲಿಲ್ಲ.

2008: ಕೇವಲ ಬೀದಿಗಳಲ್ಲಿ ಪಡ್ಡೆ ಹುಡುಗರ ನಡುವೆ ಇದ್ದ ‘ರಾಕ್ ಎನ್ ರೋಲ್’ ಸಂಗೀತವನ್ನು ಸಭಾಂಗಣಗಳಲ್ಲೂ ರಿಂಗಣಿಸುವಂತೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ ಗೀತರಚನಾಕಾರ ಬಾಬ್ ದೈಲನ್ ಅವರು ನ್ಯೂಯಾರ್ಕಿನಲ್ಲಿ ಪ್ರತಿಷ್ಠಿತ `ಪುಲಿಟ್ಜರ್ ಪ್ರಶಸ್ತಿ’ ಸ್ವೀಕರಿಸಿದರು.

2008: ಈ ದಿನದನು ‘ಉತ್ತರ ಧ್ರುವ’ವನ್ನು ತಲುಪಿದ ಸಾಧನೆ ಮಾಡಿದ ಭಾರತೀಯ ನೌಕಾಪಡೆಯು ನೌಕಾಪಡೆಯು ಜಗತ್ತಿನ ಎಲ್ಲಾ ಮೂರು ಧ್ರುವಗಳನ್ನು (ಉತ್ತರ ಧ್ರುವ, ದಕ್ಷಿಣ ಧ್ರುವ ಮತ್ತು ಶಿಖರ ಧ್ರುವವೆಂದು ಹೆಸರಾದ ಮೌಂಟ್ ಎವರೆಸ್ಟ್) ಮುಟ್ಟಿದ ಭಾರತದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ಕಮಾಂಡರ್ ಸತ್ಯವ್ರತಧಾಮ್ ಅವರು ಈ ತಂಡದ ನೇತೃತ್ವ ವಹಿಸಿದ್ದರು.

ಪ್ರಮುಖಜನನ/ಮರಣ:

1861: ಖ್ಯಾತ ಸಂಶೋಧಕರಾಗಿ, ಭಾಷಾವಿಜ್ಞಾನಿಯಾಗಿ, ಶಾಸನ ತಜ್ಞರಾಗಿ, ಗ್ರಂಥ ಸಂಪಾದಕರಾಗಿ ಮತ್ತು ಸಾಹಿತಿಗಳಾಗಿ ಹೆಸರಾದ ಆರ್. ನರಸಿಂಹಾಚಾರ್ ಅವರು ಮಂಡ್ಯದ ಕೊಪ್ಪಲುವಿನಲ್ಲಿ ಜನಿಸಿದರು. ಪ್ರಾಕ್ತನ ವಿಮರ್ಶನ ವಿಚಕ್ಷಣ, ರಾವ್ ಬಹದ್ದೂರ್ ಗೌರವಾನ್ವಿತರಾದ ಇವರು 1918ರಲ್ಲಿ 4ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮತ್ತು 1907ರಲ್ಲಿ ಧಾರವಾಡದಲ್ಲಿ ನಡೆದ ಗ್ರಂಥಕರ್ತರ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

1893: ಹಿಂದೀ ಭಾಷಾ ಶಾಸ್ತ್ರಜ್ಞ, ಸಾಹಿತಿ ಮಹಾಪಂಡಿತ್ ರಾಹುಲ್ ಸಂಕ್ರಿತ್ಯಯಾನ್ ಉತ್ತರಪ್ರದೇಶದ ಪಾಂಡಹ ಎಂಬಲ್ಲಿ ಜನಿಸಿದರು. ಹಿಂದೀ ಸಾಹಿತ್ಯದಲ್ಲಿ ಪ್ರವಾಸ ಸಾಹಿತ್ಯದ ಜನಕರೆಂದು ಪ್ರಖ್ಯಾತರಾಗಿರುವ ಇವರಿಗೆ ಪದ್ಮಭೂಷಣ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವಗಳು ಸಂದಿದ್ದವು.

1918: ಡೇನಿಶ್ ಕಟ್ಟಡ ವಿನ್ಯಾಸಕ, ಸಿಡ್ನಿ ಒಪೆರಾ ಹೌಸ್ ವಿನ್ಯಾಸಕ್ಕೆ ಖ್ಯಾತರಾದ ಜಾರ್ನ್ ಉಟ್ಜೋನ್ ಅವರು ಡೆನ್ಮಾರ್ಕಿನ ಕೋಪನ್ ಹ್ಯಾಗನ್ ನಗರದಲ್ಲಿ ಜನಿಸಿದರು.

1919: ಅಮೆರಿಕದ ತಂತ್ರಜ್ಞ ಜೆ. ಪ್ರೆಸ್ಪರ್ ಎಕ್ಕರ್ಟ್ ಅವರು ಫಿಲೆಡೆಲ್ಫಿಯಾ ನಗರದಲ್ಲಿ ಜನಿಸಿದರು.

1929: ಖ್ಯಾತ ಸರೋದ್ ವಾದಕಿ ಶರನ್ ರಾಣಿ ಬಾಕ್ಲಿವಾಲ್ ಅವರು ದೆಹಲಿಯಲ್ಲಿ ಜನಿಸಿದರು. ಸಂಗೀತ ವಿದ್ವಾಂಸರರಾಗಿ, ವಿಶೇಷವಾಗಿ ಸರೋದ್ ವಾದನದಲ್ಲಿ ಪ್ರಖ್ಯಾತರಾಗಿದ್ದ ಇವರಿಗೆ ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿದ್ದವು.

1926: ಹಗ್ ಹೆಫ್ನರ್ ಅವರು ಚಿಕಾಗೋದಲ್ಲಿ ಜನಿಸಿದರು. ಪ್ರಸಿದ್ಧವಾದ `ಪ್ಲೇಬಾಯ್’ ಮ್ಯಾಗಜಿನ್ ಪ್ರಕಾಶಕರಾದ ಇವರು, ಮ್ಯಾಗಜಿನ್ ವಿಫಲಗೊಳ್ಳಬಹುದೆಂಬ ಹೆದರಿಕೆಯಿಂದ ಮೊದಲ ಸಂಚಿಕೆಯಲ್ಲಿ ತಮ್ಮ ಹೆಸರು ಹಾಕಿಕೊಂಡಿರಲಿಲ್ಲ. ಹಣಕಾಸು ತೊಂದರೆ ಪರಿಣಾಮವಾಗಿ ಎರಡನೇ ಸಂಚಿಕೆ ಪ್ರಕಟಗೊಳ್ಳುವುದರ ಬಗ್ಗೆಯೇ ಇವರಿಗೆ ಭೀತಿ ಇತ್ತಂತೆ!

1932: ಪ್ರಸಿದ್ಧ ನಟಿ ಪ್ರತಿಮಾ ದೇವಿ ಜನಿಸಿದರು. ಪ್ರಸಿದ್ಧ ನಿರ್ಮಾಪಕ, ನಿರ್ದೇಶಕ, ಮಹಾತ್ಮ ಪಿಕ್ಚರ್ ಸ್ಥಾಪಕ ಶಂಕರ್ ಸಿಂಗ್ ಅವರ ಪತ್ನಿಯಾದ ಇವರು 1947 ರ ವರ್ಷದಲ್ಲಿ ಪ್ರಸಿದ್ಧ ಕೃಷ್ಣಲೀಲಾ ಚಿತ್ರದಲ್ಲಿ ಚಿತ್ರರಂಗಕ್ಕೆ ಬಂದು ಅರವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. 1951ರಲ್ಲಿ ಇವರು ಪ್ರಧಾನ ಪಾತ್ರದಲ್ಲಿದ್ದ ‘ಜಗನ್ಮೋಹಿನಿ’ ಶತದಿನೋತ್ಸವ ಆಚರಿಸಿದ ಪ್ರಥಮ ಕನ್ನಡ ಚಿತ್ರವೆನಿಸಿದೆ.

1948: ಪ್ರಸಿದ್ಧ ಅಭಿನೇತ್ರಿ ಜಯ ಬಚ್ಚನ್ ಅವರು ಜಯಾ ಬಾಧುರಿ ಎಂಬ ಹೆಸರಿನಿಂದ ಜಬ್ಬಲ್ ಪುರ್ ಪಟ್ಟಣದಲ್ಲಿ ಜನಿಸಿದರು. ಸತ್ಯಜಿತ್‌ ರಾಯ್ ಅವರ ಬಂಗಾಳಿ ಚಲನಚಿತ್ರ ‘ಮಹಾನಗರ್’ನಲ್ಲಿ ಬಾಲನಟಿಯಾಗಿ ಬಂದ ಇವರು ಕೆಲವೊಂದು ಬಂಗಾಳಿ ಚಿತ್ರಗಳು ಮತ್ತು ಅನೇಕ ಹಿಂದೀ ಚಿತ್ರಗಳಲ್ಲಿ ಅಭಿನಯಿಸಿ ಪದ್ಮಶ್ರೀ ಪ್ರಶಸ್ತಿಯೂ ಸೇರಿ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.

ಕ್ರಿಸ್ತಪೂರ್ವ 585: ಜಪಾನಿನ ಪ್ರಥಮ ಚಕ್ರವರ್ತಿ ಜಿಮ್ಮು ನಿಧನರಾದರು.

2007: ಖ್ಯಾತ ವ್ಯಂಗ್ಯಚಿತ್ರಕಾರ ಜಾಹ್ನಿ ಹರ್ಟ್ ನಿಧನರಾದರು. ಅವರ ಪ್ರಶಸ್ತಿ ವಿಜೇತ ವ್ಯಂಗ್ಯಚಿತ್ರ ಸರಣಿ ‘ಬಿ.ಸಿ.’ ವಿಶ್ವದಾದ್ಯಂತ 1300 ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಅವರು ‘ಬಿ.ಸಿ.’ ಕಾರ್ಟೂನ್ ಸ್ಟ್ರಿಪ್ ಅನ್ನು 1958ರಲ್ಲಿ ಆರಂಭಿಸಿದರು.