Categories
e-ದಿನ

ಏಪ್ರಿಲ್-13

ಪ್ರಮುಖಘಟನಾವಳಿಗಳು:

1699: ಸಿಖ್ಖರ ಹತ್ತನೇ ಗುರುಗಳಾದ ಗುರು ಗೋವಿಂದ ಸಿಂಗ್ ಅವರು ಈ ದಿನದಂದು ಪಂಜಾಬಿನ ಆನಂದಪುರ್ ಸಾಹಿಬ್ನಲ್ಲಿ ಖಲ್ಸಾವನ್ನು ಸ್ಥಾಪಿಸಿದರು.

1772: ಬ್ರಿಟಿಷ್ ಆಡಳಿತವು ವಾರನ್ ಹೇಸ್ಟಿಂಗ್ ಅವರನ್ನು ಬಂಗಾಳದ ಗವರನರ್ ಆಗಿ ನೇಮಿಸಿತು.

1880: ನ್ಯೂಯಾರ್ಕಿನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಸ್ಥಾಪನೆಗೊಂಡಿತು.

1919: ಇದು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದ ದಿನವಾಗಿದೆ. ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಇ. ಡೈಯರ್ ಎಂಬ ನೀಚನ ನೇತೃತ್ವದಲ್ಲಿ ಬ್ರಿಟಿಷ್ ಪಡೆಗಳು ಅಮೃತಸರದ ಜಲಿಯನ್ ವಾಲಾಬಾಗಿನಲ್ಲಿ ಸಭೆ ಸೇರಿದ್ದ 10,000ಕ್ಕೂ ಹೆಚ್ಚು ಮಂದಿ ಪುರುಷರು, ಮಹಿಳೆಯರು, ಮಕ್ಕಳ ಮೇಲೆ 15 ನಿಮಿಷಗಳ ಕಾಲ ಗುಂಡಿನ ಮಳೆಗರೆದವು. ಈ ಹತ್ಯಾಕಾಂಡದಲ್ಲಿ ಕನಿಷ್ಠ 379 ಜನ ಮೃತರಾಗಿ 1200ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಹತ್ಯಾಕಾಂಡ ಭಾರತೀಯರ ಸ್ವಾತಂತ್ರ್ಯ ಹೋರಾಟದ ಕೆಚ್ಚನ್ನು ತೀವ್ರಗೊಳಿಸಿತು.

1945: ಜರ್ಮನಿಯ ಸೇನಾಪಡೆ ಗಾರ್ಡೆಲೆಗಾನ್ ಎಂಬಲ್ಲಿ 1000ಕ್ಕೂ ಹೆಚ್ಚು ರಾಜಕೀಯ ಮತ್ತು ಸೇನಾ ಸೆರೆಯಾಳುಗಳನ್ನು ಹತ್ಯೆಮಾಡಿತು.

1964: ಅಕಾಡೆಮಿ ಪ್ರಶಸ್ತಿಗಳಲ್ಲಿ ಸಿಡ್ನಿ ಪಾಯಿಟಿಯರ್ ಅವರು ಶ್ರೇಷ್ಠ ನಟ ಪ್ರಶಸ್ತಿ ಗೆದ್ದ ಮೊಟ್ಟ ಮೊದಲ ಆಫ್ರಿಕನ್-ಅಮೇರಿಕನ್ ಪುರುಷನೆನಿಸಿದರು. ಅವರಿಗೆ ಈ ಪ್ರಶಸ್ತಿ ‘ಲಿಲ್ಲೀಸ್ ಆಫ್ ದಿ ಫೀಲ್ಡ್’ ಚಿತ್ರಕ್ಕೆ ಸಂದಿತು.

1970: ಅಪೋಲೋ 13 ಬಾಹ್ಯಾಕಾಶ ನೌಕೆಯಲ್ಲಿ ಆಮ್ಲಜನಕದ ತೊಟ್ಟಿಯೊಂದು ಸಿಡಿದು, ಅದರಲ್ಲಿದ್ದ ಪ್ರಯಾಣಿಕರಿಗೆ ಕಷ್ಟಗಳುಂಟಾಗಿ ಅದು ಚಂದ್ರನಲ್ಲಿಗೆ ಹೊತ್ತೊಯ್ಯುತ್ತಿದ್ದ ಉಪಗ್ರಹಕ್ಕೆ ತೀವ್ರ ಹಾನಿಯಾಯಿತು.

1997: ಟೈಗರ್ ಉಡ್ಸ್ ಅವರು ಗಾಲ್ಫ್ ಆಟದಲ್ಲಿ ಮಾಸ್ಟರ್ಸ್ ಪಂದ್ಯಾವಳಿ ಗೆದ್ದ ಅತ್ಯಂತ ಕಿರಿಯರೆನಿಸಿದರು.

2006: ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಬಡ ಮಹಿಳೆಯರಿಗಾಗಿ ಮೊದಲ ಬಾರಿ ಜಾರಿಗೆ ತರಲಾಗಿರುವ ಸೂಕ್ಷ್ಮ ಪಿಂಚಣಿ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಉದ್ಘಾಟಿಸಿದರು. ಶ್ರೀ ಮಹಿಳಾ ಸೇವಾ ಸಹಕಾರಿ ಬ್ಯಾಂಕ್ ತನ್ನ ಎಂಟು ಲಕ್ಷ ಸದಸ್ಯರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿತು. ಬ್ಯಾಂಕ್ ಸಂಸ್ಥಾಪಕಿ ಇಳಾ ಭಟ್ ಅವರ ಚಿಂತನೆಯ ಮೂಸೆಯಲ್ಲಿ ರೂಪುಗೊಂಡ ಈ ಯೋಜನೆಗೆ ಆರಂಭದ ದಿನವೇ 25,025 ಮಹಿಳೆಯರು ಸದಸ್ಯರಾದರು.

2008: ನೇಪಾಳದಲ್ಲಿ ಸಿಪಿಎನ್-ಮಾವೋ ಪಕ್ಷವು ಅಧಿಕಾರಕ್ಕೆ ಬಂದು 240 ವರ್ಷಗಳ ರಾಜ ಮನೆತನದ ಪಾರಂಪರಿಕ ಆಡಳಿತಕ್ಕೆ ಕೊನೆಯುಂಟಾಯಿತು

ಪ್ರಮುಖಜನನ/ಮರಣ:

1743: ಅಮೆರಿಕದ 3ನೇ ಅಧ್ಯಕ್ಷರಾದ ಥಾಮಸ್ ಜೆಫರ್ಸನ್ ಅವರು ವರ್ಜೀನಿಯಾ ಬಳಿಯ ಶಾಡ್ವೆಲ್ ಎಂಬಲ್ಲಿ ಜನಿಸಿದರು.

1769: ಪ್ರಸಿದ್ಧ ಇಂಗ್ಲಿಷ್ ಕಲಾಕಾರ ಥಾಮಸ್ ಲಾರೆನ್ಸ್ ಬ್ರಿಸ್ಟಲ್ ಎಂಬಲ್ಲಿ ಜನಿಸಿದರು.

1906: ಐರಿಷ್ ಸಾಹಿತಿ ಸಾಮ್ಯುಯೆಲ್ ಬೆಕ್ಕೆಟ್ ಅವರು ಡಬ್ಲಿನ್ ಬಳಿಯ ಫಾಕ್ಸ್ ರಾಕ್ ಎಂಬಲ್ಲಿ ಜನಿಸಿದರು. ಇವರಿಗೆ 1969 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1930: ‘ಸುಜನಾ’ ಎಂಬ ಕಾವ್ಯ ನಾಮದಿಂದ ಪ್ರಸಿದ್ಧರಾದ ಎಸ್. ನಾರಾಯಣಶೆಟ್ಟಿ ಅವರು ಕೆ.ಆರ್. ಪೇಟೆ ತಾಲ್ಲೂಕಿನ ಹೊಸಹೊಳಲುವಿನಲ್ಲಿ ಜನಿಸಿದರು. ಪ್ರಾಧ್ಯಾಪಕರಾಗಿ, ಸಾಹಿತಿಗಳಾಗಿ ಪ್ರಸಿದ್ಧರಾದ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.

1963: ವಿಶ್ವದ ಮಹಾನ್ ಚೆಸ್ ಆಟಗಾರರಾದ ಗ್ಯಾರಿ ಕಾಸ್ಪರೋವ್ ಅವರು ಸೋವಿಯತ್ ಯೂನಿಯನ್ನಿನ ಬಾಕು ಎಂಬಲ್ಲಿ ಜನಿಸಿದರು. 1986ರಿಂದ ಮೊದಲುಗೊಂಡಂತೆ ಅವರು ನಿವೃತ್ತರಾದ 2005 ವರ್ಷದವರೆಗಿನ 228 ತಿಂಗಳುಗಳಲ್ಲಿ 225 ತಿಂಗಳುಗಳ ಕಾಲ ನಂಬರ್ ಒಂದು ಆಟಗಾರರಾಗಿದ್ದ ಅದ್ಭುತ ಸಾಧನೆ ಇವರದ್ದಾಗಿದೆ.

1939: ಐರಿಷ್ ಸಾಹಿತಿ ಸೀಮಸ್ ಹೀನೈ ಅವರು ಉತ್ತರ ಐರ್ಲ್ಯಾಂಡಿನ ಕ್ಯಾಸಲ್ ಡಾಸನ್ ಎಂಬಲ್ಲಿ ಜನಿಸಿದರು. ಇವರಿಗೆ 1995 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1940: ಫ್ರೆಂಚ್ ಸಾಹಿತಿ ಜೆ.ಎಂ.ಜಿ. ಲೇ ಕ್ಲೆಜಿಯೋ ಅವರು ಫ್ರಾನ್ಸಿನ ನೈಸ್ ಎಂಬಲ್ಲಿ ಜನಿಸಿದರು. ಇವರಿಗೆ 2008 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1941: ಅಮೆರಿಕದ ತಳಿ ವಿಜ್ಞಾನಿ ಮೈಖೇಲ್ ಸ್ಟುವರ್ಟ್ ಬ್ರೌನ್ ಅವರು ನ್ಯೂಯಾರ್ಕಿನ ಬ್ರೂಕ್ಲಿನ್ ನಗರದಲ್ಲಿ ಜನಿಸಿದರು. ಕೊಲೆಸ್ಟರಾಲ್ ಮೆಟಬಾಲಿಸಮ್ ಕುರಿತಾದ ಮಹತ್ವದ ಸಂಶೋಧನೆಗಾಗಿ ಇವರಿಗೆ 1985 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತು.

2008: ಕನ್ನಡದ ಪ್ರಸಿದ್ಧ ಬರಹಗಾರ ಮತ್ತು ಹೋರಾಟಗಾರರಾದ ಶಾಂತರಸ ಅವರು ತಮ್ಮ 85ನೆಯ ವಯಸ್ಸಿನಲ್ಲಿ ಕಲಬುರ್ಗಿಯಲ್ಲಿ ನಿಧನರಾದರು. ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.

2015: ಜರ್ಮನ್ ಸಾಹಿತಿ ಗುಂಟೆರ್ ಗ್ರಾಸ್ ಲ್ಯುಬೆಕ್ ಎಂಬಲ್ಲಿ ನಿಧನರಾದರು. ಅವರಿಗೆ 1999 ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.