Categories
e-ದಿನ

ಏಪ್ರಿಲ್-14

ದಿನಾಚರಣೆಗಳು:

ಸೌರಮಾನ ಯುಗಾದಿ ಅಥವಾ ಸೌರಮಾನ ಹೊಸವರ್ಷಾರಂಭ

ಸೌರಮಾನ ಪಂಚಾಗವನ್ನು ಅಳವಡಿಸಿಕೊಂಡಿರುವ ಭಾರತೀಯ ಜನಾಂಗಗಳು ಇಂದು ‘ಯುಗಾದಿ’ – ನವ ವರ್ಷಾರಂಭವನ್ನು ಆಚರಿಸುತ್ತಾರೆ. ಅಸ್ಸಾಮಿಯರು ಇದನ್ನು ಬಿಹು ಎಂದು; ಬಂಗಾಳಿ ಜನಾಂಗೀಯರು ಫೊಹಿಲಾ ಬೋಯಿಶಕ್ ಎಂದು; ಬರ್ಮೀಯರು ತಿಂಗ್ಯಾನ್ ಎಂದು; ಉತ್ತರ ಭಾರತೀಯ ಮತ್ತು ಸಿಖ್ಖರು ವೈಶಾಖಿ ಎಂದು; ಕಾಂಬೋಡಿಯಾದವರು ಖ್ಮೇರ್ ಅಥವಾ ಚೋಲ್ ಚ್ನಮ್ ಎಂದು; ಲಾವೋಸ್ ಜನಾಂಗದವರು ಲಾವೋ ಹೊಸ ವರ್ಷ ಅಥವಾ ಸೊಂಗ್ಕನ್ ಎಂದು; ಮಾಲ್ಡೀವ್ಸ್, ಲಕ್ಷದ್ವೀಪ್ ಮತ್ತು ಕೇರಳ ರಾಜ್ಯದ ಕೆಲವರು ಮಹ್ಲ್ ಹೊಸ ವರ್ಷ ಎಂದು; ಮಿಥಿಲಾ ಪ್ರಾಂತ್ಯದವರು ಮೈಥಿಲಿ ಹೊಸ ವರ್ಷ ಎಂದು; ಮಲಯಾಳಂ ಭಾಷಿಗರು ಮಲಯಾಳಿ ಹೊಸ ವರ್ಷ ಅಥವಾ ವಿಶು ಎಂದು; ನೇಪಾಳದವರು ನೇಪಾಳಿ ಹೊಸ ವರ್ಷ ಅಥವಾ ನವಬರ್ಷಾ ಅಥವಾ ಬೈಶಾಕ್ ಎಂದು; ಓದಿಷಾ ರಾಜ್ಯದವರು ಒರಿಯಾ ಅಥವಾ ಒಡಿಯಾ ಹೊಸ ವರ್ಷ ಅಥವಾ ಪನ ಸಂಕ್ರಾಂತಿ ಎಂದು; ಸಿಂಹಳೀಯರು ಸಿಂಹಲೀಸ್ ಹೊಸ ವರ್ಷ ಅಥವಾ ಅಲುಥ್ ಅವುರುಧು ಎಂದು; ತಮಿಳು ನಾಡಿನವರು ತಮಿಳ್ ಹೊಸ ವರ್ಷ ಅಥವಾ ಪುಥಾಂಡು ಎಂದು; ಥೈಲ್ಯಾಂಡ್ ದೇಶೀಯರು ಥೈ ಹೊಸ ವರ್ಷ ಅಥವಾ ಸೊಂಗ್ಕ್ರಾನ್ ಎಂದು ಮತ್ತು ಕರ್ನಾಟಕದ ತುಳುವರು ತುಳುವ ಹೊಸ ವರ್ಷ ಅಥವಾ ಬಿಸು ಎಂದು; ಸೌರಮಾನ ಪಂಚಾಂಗವನ್ನು ಅನುಸರಿಸುವ ಕನ್ನಡಿಗರಿಗೆ ಸೌರಮಾನ ಯುಗಾದಿ ಎಂದು ಹೀಗೆ ವಿವಿಧ ಜನಾಂಗೀಯರಿಗೆ ಇದು ವಿಶಿಷ್ಟ ದಿನವಾಗಿದೆ.

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 43: ಮ್ಯೂಟಿನಾ ಎಂಬಲ್ಲಿ ಮಾರ್ಕ್ ಆಂತೋನಿಯು, ಜೂಲಿಯಸ್ ಸೀಸರನ ಹತ್ಯೆಗೆ ಕಾರಣನಾದ ಡೆಸಿಮಸ್ ಬ್ರೂಟಸ್ ಅನ್ನು ಮುತ್ತಿಗೆ ಹಾಕಿ ಪನ್ಸಾ ಎಂಬ ರಾಯಭಾರಿಯ ಸೈನ್ಯವನ್ನು ಸೋಲಿಸಿದ. ಆದರೆ, ತಕ್ಷಣವೇ ಮತ್ತೊಬ್ಬ ರಾಯಭಾರಿ ಔಲಸ್ ಹಿರಿಟಿಯಸ್ ನೇತೃತ್ವದ ಸೈನ್ಯದಿಂದ ಸೋಲುಂಡನು.

1699: ನಾನಕ್ ಶಾಹಿ ಪಂಚಾಗಕ್ಕೆ ಅನುಗುಣವಾಗಿ ಗುರು ಗೋವಿಂದ ಸಿಂಗ್ ಅವರಿಂದ ಸಿಖ್ ಧರ್ಮವು ‘ಯೋಧ ಸಂತರ’ ಭ್ರಾತೃತ್ವದ ಸಂಘಟನೆಯಾದ ‘ಖಲ್ಸಾ’ ಪಂಥವಾಗಿ ಹೊರಹೊಮ್ಮಿತು.

1775: ಬೆಂಜಮಿನ್ ಫ್ರಾಂಕ್ಲಿನ್ ಮತ್ತು ಬೆಂಜಮಿನ್ ರಶ್ ನೇತೃತ್ವದಲ್ಲಿ ಉತ್ತರ ಅಮೆರಿಕದಲ್ಲಿ ‘ದಿ ಸೊಸೈಟಿ ಫಾರ್ ದಿ ರಿಲೀಫ್ ಆಫ್ ಫ್ರೀ ನೀಗ್ರೋಸ್ ಅನ್ಲಾಫುಲಿ ಹೆಲ್ಡ್ ಇನ್ ಬಾಂಡೇಜ್’ ಎಂಬ ಪ್ರಥಮ ಗುಲಾಮ ವಿಮೋಚನಾ ಸಂಘಟನೆಯು ಸ್ಥಾಪನೆಗೊಂಡಿತು.

1816: ಬ್ರಿಟಿಷ್ ಆಡಳಿತದಲ್ಲಿನ ಬಾರ್ಬಡೋಸ್ನಲ್ಲಿ ಬುಸ್ಸಾ ಎಂಬಾತ ದಂಗೆಯೊಂದರ ನೇತೃತ್ವ ವಹಿಸಿ ಕೊಲ್ಲಲ್ಪಟ್ಟ. ಹೀಗೆ ಆತ ಬಾರ್ಬಡೋಸ್ ಪ್ರದೇಶದ ರಾಷ್ಟ್ರೀಯ ನಾಯಕನೆನಿಸಿದ.

1828: ನೋಹ್ ವೆಬ್ಸ್ಟರ್ ತಮ್ಮ ನಿಘಂಟಿನ ಪ್ರಥಮ ಆವೃತ್ತಿಯನ್ನು ಹಕ್ಕುಸ್ವಾಮ್ಯಗಳಿಗೆ ಒಳಪಡಿಸಿದರು.

1865: ಜಾನ್ ವಿಲ್ಕೆಸ್ ಬೂಥ್ ಎಂಬಾತ ಫೋರ್ಡ್ಸ್ ಥಿಯೇಟರಿನಲ್ಲಿ ಅಬ್ರಹಾಂ ಲಿಂಕನ್ ಅವರ ಮೇಲೆ ಗುಂಡು ಹಾರಿಸಿದ. ಅಬ್ರಹಾಂ ಲಿಂಕನ್ ಅವರು ಒಂದು ದಿನದ ನಂತರದಲ್ಲಿ ನಿಧನರಾದರು.

1894: ಮೊಟ್ಟ ಮೊದಲ ವಾಣಿಜ್ಯ ಚಲನಚಿತ್ರ ಮಂದಿರವು ನ್ಯೂಯಾರ್ಕ್ ನಗರದಲ್ಲಿ ಆರಂಭಗೊಂಡಿತು. ಇಲ್ಲಿ ಚಿತ್ರ ವೀಕ್ಷಣೆಗಾಗಿ ಹತ್ತು ಕಿನೆಟೋಸ್ಕೋಪ್ಗಳನ್ನು ಬಳಸಲಾಗಿತ್ತು.

1912: ಬ್ರಿಟಿಷ್ ಜನಸಾಗಣೆಯ ಆರ್.ಎಮ್.ಎಸ್. ಟೈಟಾನಿಕ್ ಹಡಗು ಉತ್ತರ ಅಟ್ಲಾಂಟಿಕ್ನಲ್ಲಿ ಬೃಹತ್ ಮಂಜುಗೆಡ್ಡೆಗೆ ಡಿಕ್ಕಿ ಹೊಡೆದು ಭೀಕರ ಅಪಘಾತಕ್ಕೀಡಾಯಿತು. (ಮಾರನೆಯ ದಿನ ಬೆಳಿಗ್ಗೆ ಏಪ್ರಿಲ್ 15ರಂದು ನೀರಿನಲ್ಲಿ ಮುಳುಗಿತು).

1927: ಸ್ವೀಡನ್ನಿನ ಗೊಥೆನ್ ಬರ್ಗ್ ಎಂಬಲ್ಲಿ ಮೊಟ್ಟ ಮೊದಲ ವೋಲ್ವೋ ಕಾರು ಬಿಡುಗಡೆಗೊಂಡಿತು.

1928: ಜರ್ಮನಿಯ ಜಂಕರ್ಸ್ ಡಬ್ಲ್ಯೂ 33 ಮಾಧರಿಯ ‘ಬ್ರೆಮೆನ್’ ವಿಮಾನವು ಕೆನಡಾದ ಗ್ರೀನ್ಲಿ ದ್ವೀಪವನ್ನು ತಲುಪಿತು. ಇದು ಪೂರ್ವದಿಂದ ಪಶ್ಚಿಮ ಖಂಡಕ್ಕೆ ತಲುಪಿದ ಪ್ರಪ್ರಥಮ ವಿಮಾನವೆನಿಸಿದೆ.

1944: ಮುಂಬೈ ಬಂದರಿನಲ್ಲಿ ಉಂಟಾದ ಸ್ಪೋಟದಲ್ಲಿ 300 ಜನ ಅಸುನೀಗಿದರಲ್ಲದೆ 20 ಮಿಲಿಯನ್ ಪೌಂಡ್ ಅಷ್ಟು ಮೌಲ್ಯದ ಆರ್ಥಿಕ ನಷ್ಟ ಏರ್ಪಟ್ಟಿತು.

1944: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಭಾರತೀಯ ನೆಲದಲ್ಲಿ ಮೊತ್ತ ಮೊದಲ ಬಾರಿಗೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು. ಇಂಫಾಲಿನಿಂದ 45 ಕಿ.ಮೀ. ದೂರದ ಮೊಯಿರಂಗ್ ಎಂಬ ಈ ಸ್ಥಳದಲ್ಲಿ ಈಗ ಭಾರತೀಯ ರಾಷ್ಟ್ರೀಯ ಸೇನೆ (ಇಂಡಿಯನ್ ನ್ಯಾಷನಲ್ ಆರ್ಮಿ) ಸ್ಮಾರಕ ಸಭಾಂಗಣ ಮತ್ತು ಯುದ್ಧ ನೆನಪಿನ ಸಂಗ್ರಹಾಲಯವಿದೆ.

1951: ದಕ್ಷಿಣ ಭಾರತದಲ್ಲಿ ರೈಲ್ವೇ ಸ್ಥಾಪನೆಗೊಂಡಿತು. ಇದು ಮೊತ್ತ ಮೊದಲ ವಲಯ ರೈಲ್ವೇ (ಝೋನಲ್ ರೈಲ್ವೇ) ಆಗಿದ್ದು, ಮದ್ರಾಸ್, ದಕ್ಷಿಣ ಮರಾಠಾ, ದಕ್ಷಿಣ ಭಾರತ ಮತ್ತು ಮೈಸೂರು ರಾಜ್ಯ ರೈಲ್ವೇಗಳನ್ನು ವಿಲೀನಗೊಳಿಸಿ ಈ ರೈಲ್ವೇ ವಲಯವನ್ನು ಸ್ಥಾಪಿಸಲಾಯಿತು.

1958: ತನ್ನ 162ದಿನಗಳ ಕಾರ್ಯವನ್ನು ಪೂರೈಸಿದ ರಷ್ಯಾದ ‘ಸ್ಪುಟ್ನಿಕ್ 2’ ಉಪಗ್ರಹವು ಕಕ್ಷೆಯಿಂದ ಉರುಳಿ ಬಿತ್ತು. ಈ ಉಪಗ್ರಹದಲ್ಲಿ ಹೆಣ್ಣು ನಾಯಿಯಾದ ಲೈಕಾ ಕೂಡಾ ಪಯಣಿಸಿತ್ತು. ಅದು ಕಕ್ಷೆಯಲ್ಲಿ ಕೆಲವೊಂದು ಗಂಟೆಗಳು ಮಾತ್ರಾ ಬದುಕಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

1986: ದಾಖಲಾಗಿರುವ ಅತೀದೊಡ್ಡ ಆಲಿಕಲ್ಲುಗಳು ಬಿದ್ದು ಬಾಂಗ್ಲಾದೇಶದ ಗೋಪಾಲ್ ಗಂಜ್ ಜಿಲ್ಲೆಯಲ್ಲಿ 92 ಜನ ಮೃತರಾದರು. ಇವುಗಳ ತೂಕ ಸುಮಾರು ಒಂದು ಕೆ.ಜಿ ಇದ್ದವೆಂದು ಹೇಳಲಾಗಿದೆ.

2008: ಸುಮಾರು ನಾಲ್ಕು ದಶಕಗಳ ನಂತರ ಕೋಲ್ಕತಾ-ಢಾಕಾ ನಡುವಿನ ರೈಲು ಸೇವೆ ಪುನರಾರಂಭವಾಯಿತು.

ಪ್ರಮುಖಜನನ/ಮರಣ:

1866: ಕುರುಡಿ, ಕಿವುಡಿ ಮತ್ತು ಮೂಕರಾಗಿದ್ದ ಹೆಲೆನ್ ಕೆಲ್ಲರ್ ಅವರನ್ನು ಅದ್ಭುತ ರೀತಿಯಲ್ಲಿ ಮಾರ್ಗದರ್ಶಿಸಿದ ಆನ್ ಸುಲ್ಲಿವಾನ್ ಮ್ಯಾಕೆ ಅವರು ಮೆಸ್ಸಚುಸೆಟ್ಸ್ ಬಳಿಯ ಫೀಡಿಂಗ್ ಹಿಲ್ಸ್ ಎಂಬಲ್ಲಿ ಜನಿಸಿದರು.

1872: ಭಾರತೀಯ ಇಂಗ್ಲಿಷ್ ಬರಹಗಾರ ಅಬ್ದುಲ್ಲಾ ಯೂಸುಫ್ ಅಲಿ ಮುಂಬೈನಲ್ಲಿ ಜನಿಸಿದರು.

1891: ಡಾ. ಭೀಮರಾವ್ ರಾಮಜಿ ಅಂಬೇಡ್ಕರ್ ಅವರು ಮಧ್ಯಪ್ರದೇಶದ ಮಾಹೊವ್ ಗ್ರಾಮದಲ್ಲಿ ಜನಿಸಿದರು. ಅಸ್ಪೃಶ್ಯತೆ, ಮೂಢನಂಬಿಕೆ ಮತ್ತು ಜಾತಿ ಪದ್ಧತಿಗಳು ತುಂಬಿ ತುಳುಕಿದ್ದ ಸಮಾಜದಲ್ಲಿ ತಾವೇ ಅವುಗಳ ಬಿಸಿಯನ್ನು ಅನುಭವಿಸಿ ತಮ್ಮ ಪ್ರತಿಭೆ, ಛಲ, ಸಾಹಸಗಳಿಂದ ಮೇಲೆ ಬಂದು, ತಮ್ಮಂತೆ ನೊಂದವರ ಬದುಕು ಹಸನುಗೊಳಿಸಲು ತಮ್ಮ ಜೀವನ ಪರ್ಯಂತ ಪ್ರಯತ್ನಿಸಿದ ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿಗಳಾಗಿ ಸಹಾ ಪ್ರಸಿದ್ಧರಾಗಿದ್ದಾರೆ.

1889: ಇಂಗ್ಲಿಷ್ ಇತಿಹಾಸಕಾರ ಆರ್ನಾಲ್ಡ್ ಜೋಸೆಫ್ ಟಾಯ್ನಬಿ ಲಂಡನ್ನಿನಲ್ಲಿ ಜನಿಸಿದರು. ಅವರ ‘ಎ ಸ್ಟಡಿ ಆಫ್ ಹಿಸ್ಟರಿ’ ಗ್ರಂಥ ಪ್ರಸಿದ್ಧವಾಗಿದೆ.

1919: ಪ್ರಖ್ಯಾತ ಹಿನ್ನೆಲೆ ಗಾಯಕಿ ಶಂಶದ್ ಬೇಗಂ ಅವರು ಬ್ರಿಟಿಷ್ ಭಾರತದ ಲಾಹೋರಿನಲ್ಲಿ ಜನಿಸಿದರು. ವಿವಿಧ ಭಾರತೀಯ ಭಾಷೆಗಳ ಸುಮಾರು 6000 ಗೀತೆಗಳಿಗೆ ಧ್ವನಿಯಾಗಿದ್ದ ಅವರಿಗೆ ಪದ್ಮಭೂಷಣ ಮತ್ತಿತರ ಗೌರವಗಳು ಸಂದಿದ್ದವು. 2013 ವರ್ಷದ ಏಪ್ರಿಲ್ 23ರಂದು ತಮ್ಮ 94ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾದರು.

1919: ಪ್ರಸಿದ್ಧ ಕತೆಗಾರ್ತಿ ಕೆ. ಸರಸ್ವತಿ ಅಮ್ಮ ಜನಿಸಿದರು. ಮಲಯಾಳಂನಲ್ಲಿ ರಚಿಸಿದ ಅವರ ಮಹಿಳಾ ಧ್ವನಿಯ ಕೃತಿಗಳು ಇಂಗ್ಲಿಷ್ ಭಾಷೆಯಲ್ಲೂ ಪ್ರಖ್ಯಾಂತಗೊಂಡಿವೆ.

1921: ಅಮೆರಿಕದ ಅರ್ಥಶಾಸ್ತ್ರಜ್ಞ ಥಾಮಸ್ ಸ್ಕೆಲ್ಲಿಂಗ್ ಅವರು ಓಕ್ಲ್ಯಾಂಡ್ನಲ್ಲಿ ಜನಿಸಿದರು. ಅವರಿಗೆ 2005 ವರ್ಷದ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತ್ತು.

1927: ನ್ಯೂಜಿಲ್ಯಾಂಡಿನ ರಸಾಯನ ಶಾಸ್ತ್ರಜ್ಞ ಅಲನ್ ಮ್ಯಾಕ್ ಡಿಯಾರ್ಮಿಡ್ ಅವರು ಮಾಸ್ಟರ್ ಟನ್ ಎಂಬಲ್ಲಿ ಜನಿಸಿದರು. ಅವರಿಗೆ 2000 ವರ್ಷದ ನೊಬೆಲ್ ರಸಾಯನ ಶಾಸ್ತ್ರ ಪುರಸ್ಕಾರ ಸಂದಿತ್ತು.

1928: ಕರ್ನಾಟಕ ಸಾಂಪ್ರದಾಯಿಕ ಚಿತ್ರಕಲೆಗೆ ಬಂಗಾಳಿ ಕಲೆಯನ್ನು ಸಮ್ಮಿಶ್ರಣ ಮಾಡಿ ವಿನೂತನ ಶೈಲಿಯನ್ನು ರೂಪಿಸಿದ ಶಂಕರಗೌಡ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬೆಟ್ಟದೂರಿನಲ್ಲಿ ಜನಿಸಿದರು. ರೇಖಾಚಿತ್ರ, ಜಲವರ್ಣ, ನೆರಳು ಬೆಳಕಿನ ಕಲೆ, ತೈಲವರ್ಣ, ಭಾವಚಿತ್ರ ಮುಂತಾದುವುಗಳಲ್ಲಿ ಸಾಧನೆ ಮಾಡಿದ್ದ ಇವರಿಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಅನೇಕ ಗೌರವಗಳು ಸಂದಿದ್ದವು.

1950: ಆಧ್ಯಾತ್ಮ ಋಷಿವರ್ಯರೆಂದು ಪ್ರಸಿದ್ಧರಾದ ರಮಣ ಮಹರ್ಷಿ ಅವರು ತಿರುವಣ್ಣಾಮಲೈನಲ್ಲಿರುವ ತಮ್ಮ ಆಶ್ರಮದಲ್ಲಿ ಈ ಲೋಕವನ್ನಗಲಿದರು.

1962: ಮಹಾನ್ ತಂತ್ರಜ್ಞ, ರಾಜರ ಆಳ್ವಿಕೆಯ ಕಾಲದ ಮೈಸೂರು ಪ್ರಾಂತ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾರಣೀಭೂತರಾದ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರು ತಮ್ಮ 102 ನೆಯ ವಯಸ್ಸಿನಲ್ಲಿ ನಿಧನರಾದರು.

1963: ಹಿಂದೀ ಭಾಷಾ ಶಾಸ್ತ್ರಜ್ಞ, ಸಾಹಿತಿ ಮಹಾಪಂಡಿತ್ ರಾಹುಲ್ ಸಂಕ್ರಿತ್ಯಯಾನ್ ಡಾರ್ಜಿಲಿಂಗ್ನಲ್ಲಿ ನಿಧನರಾದರು. ಹಿಂದೀ ಸಾಹಿತ್ಯದಲ್ಲಿ ಪ್ರವಾಸ ಸಾಹಿತ್ಯದ ಜನಕರೆಂದು ಪ್ರಖ್ಯಾತರಾಗಿರುವ ಇವರಿಗೆ ಪದ್ಮಭೂಷಣ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವಗಳು ಸಂದಿದ್ದವು.

2000: ಅಮೆರಿಕದ ಕಂಪ್ಯೂಟರ್ ಪ್ರೋಗ್ರಾಮರ್, ಕಂಪ್ಯೂಟರ್ ಯುಗದಲ್ಲಿ ‘ಜಿಪ್ ಫೈಲ್ ಫಾರ್ಮಾಟ್’ (Zip File Format) ಸೃಷ್ಟಿಕರ್ತ ಫಿಲ್ ಕಾಟ್ಜ್ ಅವರು ವಿಲ್ಕಾನ್ಸಿನ್ ಬಳಿಯ ಮಿಲ್ವವ್ಕೆ ಎಂಬಲ್ಲಿ ನಿಧನರಾದರು. ‘ಪಿಕೆಜಿಪ್’ ಅಂತಹ ಉತ್ತಮ ಸೃಷ್ಟಿಗಳನ್ನು ಮಾಡಿದ್ದ ಇವರು ಕುಡಿತದ ಹವ್ಯಾಸಕ್ಕೆ ಬಲಿಯಾಗಿ ಇನ್ನೂ 37ರ ಹರೆಯದಲ್ಲೇ ನಿಧನರಾದರು.

2006: ಇಂದಿರಾ ಗಾಂಧೀ ಮತ್ತು ರಾಜೀವ್ ಗಾಂಧೀ ಮಂತ್ರಿಮಂಡಲಗಳಲ್ಲಿ ರೈಲ್ವೆ ಸಚಿವರಾಗಿದ್ದ ಘನೀಖಾನ್ ಚೌಧರಿ ಕೋಲ್ಕತ್ತದಲ್ಲಿ ನಿಧನರಾದರು. ಇವರು ಕೋಲ್ಕತ್ತಾದ ಮೆಟ್ರೋ ರೈಲು ಮತ್ತು ಸರ್ಕ್ಯುಲರ್ ವ್ಯವಸ್ಥೆ ನಿರ್ಮಾಣಗಳಲ್ಲಿ ಪಾತ್ರ ನಿರ್ವಹಿಸಿದ್ದರು.

2013: ಭಾರತೀಯ ಉದ್ಯಮಿ ಆರ್.ಪಿ.ಜಿ ಸಮೂಹ ಸಂಸ್ಥೆಗಳ ಸ್ಥಾಪಕ ಆರ್. ಪಿ. ಗೋಯೆಂಕಾ ಕೋಲ್ಕತ್ತಾದಲ್ಲಿ ನಿಧನರಾದರು.