Categories
e-ದಿನ

ಏಪ್ರಿಲ್-17

ದಿನಾಚರಣೆಗಳು:

ವಿಶ್ವ ಹಿಮೋಫಿಲಿಯಾ ದಿನ.

ವಿಶ್ವ ಹಿಮೋಫಿಲಿಯಾ ದಿನಾಚರಣೆಯನ್ನು ಪ್ರತಿ ವರ್ಷ ಏಪ್ರಿಲ್ 17ರಂದು ಹಮ್ಮಿಕೊಳ್ಳಲಾಗುತ್ತದೆ. ವಿಶ್ವ ಹಿಮೋಫಿಲಿಯಾ ಸಂಘಟನೆಯ(WFH) ಸಂಸ್ಥಾಪಕ ಫ್ರ್ಯಾಂಕ್ ಸ್ಖಾನ್ಬೆಲ್ ಅವರ ಸ್ಮರಣೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. 1989ರಿಂದ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜನರಲ್ಲಿ ಹಿಮೋಫಿಲಿಯಾ ಅಥವಾ ವಿವಿಧ ರೀತಿಯ ರಕ್ತ ಸ್ರಾವ ರೋಗದ ಕುರಿತು ಜಾಗೃತಿ ಮೂಡಿಸಿ, ಅವರಿಗೆ ಉತ್ತಮ ಚಿಕಿತ್ಸೆ ದೊರಕುವಂತೆ ಮಾಡಿ, ಅವರ ಬದುಕನ್ನು ಸಹ್ಯಗೊಳಿಸುವ ಆಶಯ ಈ ಆಚರಣೆಯಲ್ಲಿದೆ.

ಪ್ರಮುಖಘಟನಾವಳಿಗಳು:

1397: ಜೆಫ್ಫರೀ ಚೌಸರ್ ಅವರು ಮೊಟ್ಟಮೊದಲಬಾರಿಗೆ ‘ದಿ ಕ್ಯಾಂಟರ್ಬ್ಯುರಿ’ ಕಥೆಗಳನ್ನು ಎರಡನೆ ರಿಚರ್ಡ್ಸ್ ಅವರ ಆಸ್ಥಾನದಲ್ಲಿ ಹೇಳಿದರು. ಚೌಸರ್ ಪಂಡಿತರುಗಳು 1387ರ ವರ್ಷದ ಇದೇ ದಿನವನ್ನೇ ಪುಸ್ತಕದ ಕ್ಯಾಂಟರ್ಬರಿಯ ಯಾತ್ರೆಯ ಪ್ರಾರಂಭದ ದಿನವೆಂದು ಹೇಳುತ್ತಾರೆ.

1492: ಸ್ಪೈನಿನ ಕ್ಯಾಥೊಲಿಕ್ ಮೊನಾರ್ಚ್ಸ್ ಮತ್ತು ಕ್ರಿಸ್ತಫರ್ ಕೊಲಂಬಸ್ ನಡುವೆ ‘ಕ್ಯಾಪಿಟುಲೇಶನ್ಸ್ ಆಫ್ ಸಂತ ಫೆ’ ಏರ್ಪಟ್ಟಿತು. ಆತ ಏಷ್ಯಾ ಖಂಡಕ್ಕೆ ಪಯಣಿಸಿ ಸಂಬಾರ ಪದಾರ್ಥಗಳನ್ನು ತರುವುದರ ನಿಟ್ಟಿನಲ್ಲಿ ಆದ ಒಡಂಭಡಿಕೆ ಇದು.

1524: ಇಟಲಿಯ ನಾವಿಕ ಜಿಯೋವನ್ನಿ ಡ ವೆರ್ರಜ್ಜಾನೋ ನ್ಯೂಯಾರ್ಕ್ ಬಂದರನ್ನು ತಲುಪಿದರು.

1799: ಬ್ರಿಟಿಷ್ ಪಡೆಯು 4ನೇ ಮೈಸೂರು ಯುದ್ಧದ ಸಂದರ್ಭದಲ್ಲಿ ಟಿಪ್ಪೂ ಸುಲ್ತಾನನ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿತು. ಮೇ 4ರಂದು ಟಿಪ್ಪು ಸುಲ್ತಾನ್ ಸಾವಿನೊಂದಿಗೆ ಈ ಮುತ್ತಿಗೆ ಕೊನೆಗೊಂಡಿತು.

1912: ಮುಷ್ಕರದಲ್ಲಿ ತೊಡಗಿದ್ದ ಈಶಾನ್ಯ ಸೈಬೀರಿಯಾದ ಚಿನ್ನದ ಗಣಿ ಕಾರ್ಮಿಕರ ಮೇಲೆ ರಷ್ಯನ್ ಸೇನೆ ಗುಂಡು ಹಾರಿಸಲಾಗಿ ಕಡೇಪಕ್ಷ 150 ಜನ ಸಾವಿಗೀಡಾದರು.

1951: ‘ಪೀಕ್ ಡಿಸ್ಟ್ರಿಕ್ಟ್’ ಎಂಬುದು ಯುನೈಟೆಡ್ ಕಿಂಗ್ಡಂನ ಮೊದಲ ನ್ಯಾಷನಲ್ ಪಾರ್ಕ್ ಎನಿಸಿತು.

1969: ರಾಬರ್ಟ್ ಎಫ್. ಕೆನಡಿ ಅವರ ಹತ್ಯೆಯ ಸಂಬಂಧದಲ್ಲಿ ಸಿರ್ಹಾನ್ ಸಿರ್ಹಾನ್ ಎಂಬುವನನ್ನು ಬಂಧಿಸಲಾಯಿತು.

1971: ಬಾಂಗ್ಲಾದೇಶದಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಬಾಂಗ್ಲಾದೇಶ್ ಸ್ಥಾಪನೆಗೊಂಡಿತು.

2006: ದೇಶದ ಮೊದಲ ಬೃಹತ್ ಜೈವಿಕ ತಂತ್ರಜ್ಞಾನ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಯೋಕಾನ್ ಫಾರ್ಮಾಸ್ಯೂಟಿಕಲ್ಸ್ ಕೇಂದ್ರಕ್ಕೆ ಬೆಂಗಳೂರು ಹೊರವಲಯದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಚಾಲನೆ ನೀಡಿದರು.

2006: ನರ್ಮದಾ ಅಣೆಕಟ್ಟೆಯಿಂದ ನಿರಾಶ್ರಿತರಾದವರಿಗೆ ಸೂಕ್ತ ಪುನರ್ ವಸತಿ ಕಲ್ಪಿಸದೇ ಇದ್ದರೆ ಮೇ 1ರಿಂದ ಅಣೆಕಟ್ಟೆ ಕಾಮಗಾರಿ ನಿಲ್ಲಿಸುವುದಾಗಿ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ನರ್ಮದಾ ಬಚಾವೊ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ತಮ್ಮ 20 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.

2006: ದೇಶದ ಕ್ಷೀರ ಕ್ರಾಂತಿಯ ಹರಿಕಾರ ವರ್ಗೀಸ್ ಕುರಿಯನ್ ಅವರನ್ನು ಅಲಹಾಬಾದ್ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ನೇಮಕ ಮಾಡಲಾಯಿತು.

2014: ನಾಸಾದ ಕೆಪ್ಲರ್ ಅವರು ಮತ್ತೊಂದು ನಕ್ಷತ್ರದ ಆವರಣದಲ್ಲಿ ವಾಸಯೋಗ್ಯವಾದ ಭೂಮಿಯ ಗಾತ್ರದ ಗ್ರಹವೊಂದನ್ನು ಪತ್ತೆಹಚ್ಚಿರುವುದಾಗಿ ದೃಢೇಕರಿಸಿದರು.

ಪ್ರಮುಖಜನನ/ಮರಣ:

1756: ಪಾಳೆಯಗಾರರ ಯುದ್ಧದಲ್ಲಿ ಪ್ರಸಿದ್ಧರಾದ ಧೀರನ್ ಚಿನ್ನಾಮಲೈ ಅವರು ತಮಿಳುನಾಡಿನ ಈರೋಡ್ ಬಳಿಯ ಮೇಳಪಾಳಯಂ ಎಂಬಲ್ಲಿ ಜನಿಸಿದರು. ಟಿಪ್ಪು ಸುಲ್ತಾನ್ ಜೊತೆಯಲ್ಲಿ ಫ್ರೆಂಚ್ ಸೇನೆಯಿಂದ ತಯಾರಿ ಪಡೆದಿದ್ದ ಇವರು, ಬ್ರಿಟಿಷರನ್ನು ಹಲವು ಬಾರಿ ಸೋಲಿಸಿದ ಯುದ್ಧಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಗೆರಿಲ್ಲಾ ಯುದ್ಧಗಳಲ್ಲಿ ಬ್ರಿಟಿಷರಿಗೆ ತಲೆನೋವಾಗಿದ್ದ ಇವರು ತಮ್ಮ ಅಡಿಗೆಯವನ ಮೋಸದಿಂದ ಬ್ರಿಟಿಷರಿಗೆ ಸೆರೆಸಿಕ್ಕು 1805 ವರ್ಷದಲ್ಲಿ ನೇಣಿಗೆ ತಲೆ ಒಡ್ಡಿದರು.

1897: ಮಾರುತಿ ಶಿವರಾಮ್ ಪ್ಯಾಂಟ್ ಕಂಬ್ಳಿ ಎಂಬ ಹೆಸರಿನಿಂದ, ಭಾರತೀಯ ತತ್ವಜ್ಞಾನಿ ನಿಸರ್ಗದತ್ತ ಮಹಾರಾಜ್ ಅವರು ಮುಂಬೈನಲ್ಲಿ ಜನಿಸಿದರು. ಇವರು ಮರಾಟಿಯಲ್ಲಿ ನೀಡಿದ ಉಪನ್ಯಾಸಗಳನ್ನೂ ‘I Am That’ ಎಂಬ ಹೆಸರಿನಲ್ಲಿ ಮಾರೈಸ್ ಫ್ರಿಡ್ಮ್ಯಾನ್ ಅವರು ಪ್ರಕಟಿಸಿದಾಗ ಇವರ ಕೀರ್ತಿ ವಿಶ್ವದಾದ್ಯಂತ ಹಬ್ಬಿತು.

1915: ವಿಶ್ವದ ಮೊಟ್ಟ ಮೊದಲ ಮಹಿಳಾ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾದ ಶ್ರೀಲಂಕಾದ ಆರನೇ ಪ್ರಧಾನಿ ಸಿರಿಮಾವೊ ಬಂಡಾರ ನಾಯಕೆ ಅವರು ಸಿಲೋನಿನಲ್ಲಿ ಜನಿಸಿದರು.

1961: ಭಾರತದ ಬಿಲಿಯರ್ಡ್ಸ್ ಆಟಗಾರ ಗೀತ್ ಸೇಥಿ ಅವರು ನವದೆಹಲಿಯಲ್ಲಿ ಜನಿಸಿದರು. ಬಿಲಿಯರ್ಡ್ಸ್ ಆಟದಲ್ಲಿ ವೃತ್ತಿಪರರಾಗಿ ಆರು ಬಾರಿ ಮತ್ತು ಹವ್ಯಾಸಿಯಾಗಿ 3 ಬಾರಿ ವಿಶ್ವ ಚಾಂಪಿಯನ್ ಪ್ರಶಸ್ತಿಗಳನ್ನು ಪಡೆದಿರುವ ಇವರು, 1985ರಲ್ಲಿ ವಿಶ್ವ ಅಮೆಚೂರ್ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಸರು ಪಡೆದರು. ಇವರಿಗೆ ರಾಜೀವ್ ಖೇಲ್ ರತ್ನ, ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿಗಳು ಸಂದಿವೆ.

1965: ಪ್ರಖ್ಯಾತ ರಂಗಭೂಮಿ ಮತ್ತು ಚಲನಚಿತ್ರ ನಟ ರಂಗಾಯಣ ರಘು ಅವರು ಚಿಕ್ಕರಂಗಪ್ಪ ರಘುನಾಥ್ ಎಂಬ ಹೆಸರಿನಿಂದ ಕೊಟ್ಟೂರು ಎಂಬಲ್ಲಿ ಜನಿಸಿದರು. ಬಿ.ವಿ. ಕಾರಂತರ ನೇತೃತ್ವದ ರಂಗಾಯಣದಲ್ಲಿ ಪಾಲ್ಗೊಂಡು ರಂಗಾಯಣ ರಘು ಎಂದೇ ಖ್ಯಾತರಾಗಿರುವ ಇವರು ಸಿನಿಮಾ ಕ್ಷೇತ್ರದಲ್ಲಿ ಪ್ರಸಿದ್ಧಿಗಳಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿಗಳೂ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

1882: ಇಂಗ್ಲಿಷ್ ತಂತ್ರಜ್ಞ ಮತ್ತು ಕೊಳಾಯಿ ತಜ್ಞ, ಸಾರ್ವಜನಿಕ ಫ್ಲಶ್ ಶೌಚಾಲಯ ವ್ಯವಸ್ಥೆ ಅನ್ವೇಷಿಸಿದ ಜಾರ್ಜ್ ಜೆನ್ನಿಂಗ್ಸ್ ನಿಧನರಾದರು.

1942: ಫ್ರೆಂಚ್-ಅಮೆರಿಕನ್ ಭೌತ ವಿಜ್ಞಾನಿ ಮತ್ತು ರಸಾಯನ ವಿಜ್ಞಾನಿ ಜೀನ್ ಬಾಪ್ಟಿಸ್ಟ್ ಅವರು ನ್ಯೂಯಾರ್ಕ್ ನಗರದಲ್ಲಿ ನಿಧನರಾದರು. ಕ್ಯಾಥೋಡ್ ರೇಸ್, ಬ್ರೌನಿಯನ್ ಚಲನೆಯ ಕುರಿತಾದ ಸಂಶೋಧನೆಗಳಿಗೆ ಪ್ರಸಿದ್ಧರಾದ ಇವರಿಗೆ 1926 ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.

1975: ಭಾರತದ ತತ್ವಜ್ಞಾನಿ, ವಿದ್ವಾಂಸ, ಶಿಕ್ಷಣ ತಜ್ಞ, ಎರಡನೇ ರಾಷ್ಟ್ರಪತಿಗಳಾಗಿದ್ದ ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ 86ನೇ ವಯಸ್ಸಿನಲ್ಲಿ ಚೆನ್ನೈನಲ್ಲಿ ನಿಧನರಾದರು. ಇವರ ಜನ್ಮದಿನವಾದ ಸೆಪ್ಟೆಂಬರ್ 5 ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ.

1976: ಡ್ಯಾನಿಶ್ ಜೈವಿಕ ವಿಜ್ಞಾನಿ ಮತ್ತು ವೈದ್ಯ ವಿಜ್ಞಾನಿ ಹೆನ್ರಿಕ್ ಡ್ಯಾಮ್ ನಿಧನರಾದರು. ಕಾಗ್ಯುಲೆಶನ್ ವಿಟಮಿನ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1943 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

2012: ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ ಮತ್ತು ರಾಜಕಾರಣಿ ನಿತ್ಯಾನಂದ ಮೊಹಾಪಾತ್ರ ಅವರು ಒದಿಶಾದ ಭದ್ರಾಕ್ ಎಂಬಲ್ಲಿ ನಿಧನರಾದರು.

2013: ಕರ್ನಾಟಕದ 13ನೇ ರಾಜ್ಯಪಾಲರಾಗಿದ್ದ ವಿ.ಎಸ್. ರಮಾದೇವಿ ಬೆಂಗಳೂರಿನಲ್ಲಿ ನಿಧನರಾದರು. 1990ರ ವರ್ಷದಲ್ಲಿನ ಕಿರು ಅವಧಿಯಲ್ಲಿ ಕೇಂದ್ರೀಯ ಚುನಾವಣಾ ಆಯೋಗದ ಆಯುಕ್ತರಾಗಿಯೂ ಇವರು ಕೆಲಸ ಮಾಡಿದ್ದರು.

1994: ಅಮೆರಿಕದ ವೈದ್ಯವಿಜ್ಞಾನಿ ರೋಜರ್ ವಾಲ್ಕಾಟ್ ಸ್ಪೆರ್ರಿ ಅವರು ಕ್ಯಾಲಿಫೋರ್ನಿಯಾದ ಪೆಸಡೆನ ಎಂಬಲ್ಲಿ ನಿಧನರಾದರು. ‘ಸ್ಪ್ಲಿಟ್ ಬ್ರೈನ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1981 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

2014: ಕೊಲಂಬಿಯಾದ ಪತ್ರಕರ್ತ ಮತ್ತು ಸಾಹಿತಿ ಗೇಬ್ರಿಯಲ್ ಗಾರ್ಸಿಯಾ ಮರ್ಕ್ವೆಜ್ ಅವರು ಮೆಕ್ಸಿಕೋದಲ್ಲಿ ನಿಧನರಾದರು. ಇವರಿಗೆ 1982 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.