Categories
e-ದಿನ

ಏಪ್ರಿಲ್-20

ಪ್ರಮುಖಘಟನಾವಳಿಗಳು:

1303: ಎಂಟನೇ ಪೋಪ್ ಬೋನಿ ಫೇಸ್ ಅವರು ಸಾಪಿಯೇನ್ಜಾ ಯೂನಿವರ್ಸಿಟಿ ಆಫ್ ರೋಮ್ ಸ್ಥಾಪಿಸಿದರು.

1882: ಲೂಯಿ ಪ್ಯಾಶ್ಚರ್ ಮತ್ತು ಕ್ಲಾರ್ಡ್ ಬರ್ನಾರ್ಡ್ ಅವರು ಪ್ಯಾಶ್ಚರೀಕರಣದ ಮೊದಲ ಪರೀಕ್ಷೆಯನ್ನು ಪೂರ್ಣಗೊಳಿಸಿದರು. 48 ದಿನಗಳ ಕಾಲ ಮುಚ್ಚಿಡಲಾಗಿದ್ದ ಬಾಟಲಿಗಳನ್ನು ಫ್ರೆಂಚ್ ವಿಜ್ಞಾನ ಅಕಾಡೆಮಿಯ ಸಭೆಯೊಂದರಲ್ಲಿ ತೆರೆಯಲಾಯಿತು. ಆ ಬಾಟಲಿಗಳಲ್ಲಿ ನಾಯಿಯ ರಕ್ತ ಹಾಗೂ ಮೂತ್ರವನ್ನು ತುಂಬಿಸಿ 30 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ಇಡಲಾಗಿತ್ತು. ಈ ಅವಧಿಯಲ್ಲಿ ಅವು ಕೆಟ್ಟಿರಲಿಲ್ಲ. ಇದರಿಂದ ಸೂಕ್ಷ್ಮಜೀವಿಗಳು ಸಾಯುವಷ್ಟು ಉಷ್ಣತೆಯಲ್ಲಿ ಆಹಾರವನ್ನು ಇರಿಸಿ, ಕೆಡದಂತೆ ರಕ್ಷಿಸಿ ಇಡುವ ಸಾಧ್ಯತೆಗಳು ಗೋಚರಗೊಂಡವು.

1871: ಅಮೆರಿಕದಲ್ಲಿ ನಾಗರಿಕ ಹಕ್ಕುಗಳ ಕಾನೂನು ಜಾರಿಗೊಂಡಿತು.

1902: ಪಿಯೆರೆ ಮತ್ತು ಮೇರಿ ಕ್ಯೂರಿ ಅವರು ರೇಡಿಯಂ ಕ್ಲೋರೈಡ್ ಅನ್ನು ಸಂಸ್ಕರಿಸಿದರು.

1939: ಅಡಾಲ್ಫ್ ಹಿಟ್ಲರನ 50ನೇ ಜನ್ಮದಿನವನ್ನು ನಾಜಿಗಳ ಜರ್ಮನಿಯಲ್ಲಿ ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಯಿತು.

1946: ತನ್ನ ಬಹುತೇಕ ಅಧಿಕಾರವನ್ನು ವಿಶ್ವಸಂಸ್ಥೆಗೆ ನೀಡುವುದರ ಮೂಲಕ ಲೀಗ್ ಆಫ್ ನೇಶನ್ಸ್ ಅಧಿಕೃತವಾಗಿ ವಿಸರ್ಜನೆಗೊಂಡಿತು.

2006: ಭಾರತದ ಯುವ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ಟಿಗೆ ಪಾದಾರ್ಪಣೆ ಮಾಡಿದ ಕೇವಲ 16 ತಿಂಗಳಲ್ಲಿಯೇ ಏಕದಿನ ಪಂದ್ಯಗಳಲ್ಲಿನ ವಿಶ್ವದ ಅಗ್ರಗಣ್ಯ ಬ್ಯಾಟುದಾರರೆನಿಸಿದರು.

2007: ಬಾಲಿವುಡ್ಡಿನ ಜನಪ್ರಿಯ ತಾರೆಗಳಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಮುಂಬೈಯಲ್ಲಿ ದಾಂಪತ್ಯ ಜೀವನಕ್ಕೆ ಅಡಿ ಇಟ್ಟರು.

2008: ಇಂಡಿ ಜಪಾನ್ 300 ಸ್ಪರ್ಧೆಯಲ್ಲಿ ಜಯಗಳಿಸಿದ ಡೇನಿಕಾ ಪ್ಯಾಟ್ರಿಕ್ ಅವರು ವಿಶ್ವದಲ್ಲೇ ಇಂಡಿ ಕಾರ್ ರೇಸ್ ಗೆದ್ದ ಪ್ರಪ್ರಥಮ ಮಹಿಳೆ ಎನಿಸಿದರು.

2008: ಹೊಟ್ಟೆಪಾಡಿಗಾಗಿ ಹಾಗೂ ಔಷಧಿ ಖರ್ಚು ಭರಿಸುವ ಸಲುವಾಗಿ ಖ್ಯಾತ ಹಿಂದಿ ಕಾದಂಬರಿಕಾರ, ಸ್ವಾತಂತ್ರ್ಯ ಹೋರಾಟಗಾರ 83 ವಯಸ್ಸಿನ ಅಮರ ಕಾಂತ್ ಅವರು 2007ರಲ್ಲಿ ದೊರೆತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ತಮಗೆ ಸಂದ ಪ್ರಶಸ್ತಿ ಪದಕಗಳನ್ನು ಮಾರಾಟ ಮಾಡಲು ನಿರ್ಧರಿಸಿರುವುದಾಗಿ ಪ್ರಕಟಿಸಿದರು.

2009: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಸರ್ವಋತು ಬೇಹುಗಾರಿಕೆ ಅಧ್ಯಯನಶೀಲ ಉಪಗ್ರಹ ‘ರಿಸ್ಯಾಟ್-2’ ಹಾಗೂ ಶೈಕ್ಷಣಿಕ ಉದ್ದೇಶದ ‘ಅನುಸ್ಯಾಟ್’ ಉಪಗ್ರಹಗಳನ್ನು ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಿತು.

ಪ್ರಮುಖಜನನ/ಮರಣ:

1850: ಅಮೆರಿಕದ ಪ್ರಸಿದ್ಧ ಶಿಲ್ಪಿ ಡೇನಿಯಲ್ ಚೆಸ್ಟರ್ ಫ್ರೆಂಚ್ ಅವರು ನ್ಯೂ ಹ್ಯಾಂಪ್ ಶೈರಿನ ಏಕ್ಸೆಟರ್ ಎಂಬಲ್ಲಿ ಜನಿಸಿದರು. ಲಿಂಕನ್ ಪ್ರತಿಮೆಯನ್ನು ನಿರ್ಮಿಸಿದ ಕೀರ್ತಿ ಸಹಾ ಇವರದ್ದಾಗಿದೆ.

1889: ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಅವರು ಆಸ್ಟ್ರಿಯಾ-ಹಂಗೇರಿ ಬ್ರೌನವ್ ಆಮ್ ಇನ್ ಎಂಬಲ್ಲಿ ಜನಿಸಿದ. ನಾಜಿ ಪಕ್ಷದ ನಾಯಕನಾಗಿ 1933ರಲ್ಲಿ ಜರ್ಮನ್ ಚಾನ್ಸೆಲರ್ ಆದ ಈತ 1934¬-45 ಅವಧಿಯಲ್ಲಿ ‘ಫುಹ್ರೆರ್’ ಅಂದರೆ ನಾಯಕ ಪದವಿಯನ್ನು ಅಲಂಕರಿಸಿದ್ದ. 1939ರಲ್ಲಿ ಪೋಲೆಂಡ್ ದೇಶವನ್ನು ಆಕ್ರಮಿಸುವುದರೊಂದಿಗೆ ಎರಡನೇ ಮಹಾಯುದ್ಧಕ್ಕೆ ತೀವ್ರತೆ ನೀಡಿದ ಈತ ಹೋಲೋಕಾಸ್ಟ್ ಹತ್ಯಾಕಾಂಡದ ಕೇಂದ್ರವಾಗಿದ್ದ.

1918: ಸ್ವೀಡಿಷ್ ಭೌತ ವಿಜ್ಞಾನಿ ಕೈ ಸೀಗ್ಬಾಹ್ನ್ ಅವರು ಸ್ವೀಡನ್ನಿನ ಲುಂಡ್ ಎಂಬಲ್ಲಿ ಜನಿಸಿದರು. ‘ಎಲೆಕ್ಟ್ರಾನ್ ಸ್ಪೆಕ್ಟ್ರೋಸ್ಕೊಪಿ ಫಾರ್ ಕೆಮಿಕಲ್ ಅನಾಲಿಸಿಸ್’ ಸಂಶೋಧನೆಗಾಗಿ ಇವರಿಗೆ 1981 ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.

1927: ಸ್ವಿಸ್ ಭೌತವಿಜ್ಞಾನಿ ಕಾರ್ಲ್ ಅಲೆಕ್ಸ್ ಮ್ಯುಯೆಲರ್ ಅವರು ಸ್ವಿಟ್ಜರ್ಲ್ಯಾಂಡ್ ದೇಶದ ಬಾಸೆಲ್ ಎಂಬಲ್ಲಿ ಜನಿಸಿದರು. ‘ಸೂಪರ್ ಕಂಡಕ್ಟಿವಿಟಿ ಇನ್ ಸೆರಾಮಿಕ್ ಮೆಟೀರಿಯಲ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1987 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1942: ದತ್ತಣ್ಣ ಎಂದೇ ಪ್ರಖ್ಯಾತರಾದ ಪ್ರಸಿದ್ಧ ಕಲಾವಿದ ಎಚ್. ಜಿ. ದತ್ತಾತ್ರೇಯ ಅವರು ಚಿತ್ರದುರ್ಗದಲ್ಲಿ ಜನಿಸಿದರು. ಭಾರತೀಯ ವಾಯು ಸೇನೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು ಪ್ರವೃತ್ತಿಯಿಂದ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಕಲಾವಿದರಾಗಿ ತಮ್ಮ ಅಭಿನಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನೂ ಒಳಗೊಂಡಂತೆ ಅನೇಕ ಪ್ರಶಸ್ತಿ ಗೌರವಗಳನ್ನು ಸ್ವೀಕರಿಸಿದ್ದಾರೆ.

1950: ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರು ಚಂದ್ರಗಿರಿ ಬಳಿಯ ನರವಾರಿ ಪಲ್ಲೆ ಎಂಬಲ್ಲಿ ಜನಿಸಿದರು.

1873: ರಾಯಲ್ ಎಕ್ಸ್ಚೇಂಜ್ ವಿನ್ಯಾಸಗೊಳಿಸಿದ ಪ್ರಸಿದ್ಧ ಇಂಗ್ಲಿಷ್ ಕಟ್ಟಡ ವಿನ್ಯಾಸಕ ವಿಲಿಯಂ ಟೈಟ್ ಅವರು ಟೋರ್ಕ್ವೇ ಎಂಬಲ್ಲಿ ನಿಧನರಾದರು.

1918: ಜರ್ಮನ್-ಅಮೆರಿಕನ್ ಭೌತವಿಜ್ಞಾನಿ ಕಾರ್ಲ್ ಫರ್ಡಿನೆಂಡ್ ಬ್ರೌನ್ ಅವರು ಬ್ರೂಕ್ಲಿನ್ ನಗರದಲ್ಲಿ ನಿಧನರಾದರು. ರೇಡಿಯೋ ಮತ್ತು ಟೆಲಿವಿಶನ್ ತಂತ್ರಜ್ಞಾನಕ್ಕೆ ಮಹತ್ವದ ಕೊಡುಗೆ ನೀಡಿರುವ ಇವರಿಗೆ 1909 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

2003: ಜರ್ಮನ್-ಇಂಗ್ಲಿಷ್ ಜೈವಿಕ ವಿಜ್ಞಾನಿ ಬರ್ನಾರ್ಡ್ ಕಟ್ಜ್ ಲಂಡನ್ನಿನಲ್ಲಿ ನಿಧನರಾದರು. ನರ್ವ್ ಬಯೋಕೆಮಿಸ್ಟ್ರಿ ಸಂಶೋಧನೆಗೆ ಪ್ರಸಿದ್ಧರಾದ ಇವರಿಗೆ 1970 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

2008: ಮರಾಠಿಯ ಪ್ರಸಿದ್ಧ ಜಾನಪದ ಮತ್ತು ಶಿಕ್ಷಣತಜ್ಞೆ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯೆ ಡಾ. ಸರೋಜಿನಿ ಬಾಬರ್ ಅವರು ತಮ್ಮ 87ನೇ ವಯಸ್ಸಿನಲ್ಲಿ ಪುಣೆಯಲ್ಲಿ ನಿಧನರಾದರು.