Categories
e-ದಿನ

ಏಪ್ರಿಲ್-21

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 753: ರೊಮ್ಯುಲಸ್ ಅವರು ರೋಮ್ ಅನ್ನು ಪತ್ತೆ ಹಚ್ಚಿದರು.

ಕ್ರಿಸ್ತ ಪೂರ್ವ 43: ಮ್ಯೂಟಿನ ಕದನದಲ್ಲಿ ಮಾರ್ಕ್ ಆಂತೋನಿಗೆ ಔಲಸ್ ಹಿರಿಟಸ್ ಇಂದ ಮತ್ತೊಮ್ಮೆ ಸೋಲುಂಟಾಗಿ ಮ್ಯುಟಿನಾವನ್ನು ವಶಪಡಿಸಿಕೊಳ್ಳಲಾಗಲಿಲ್ಲ. ಆದರೆ ಹಿರಿಟಸ್ ಮತ್ತು ಬ್ರೂಟಸ್ ಕೊಲ್ಲಲ್ಪಟ್ಟರು.

900: ತಾಮ್ರದ ಮೇಲೆ ಕೆತ್ತಲಾದ ಅತ್ಯಂತ ಹಳೆಯದೆಂದು ಹೇಳಲಾಗಿರುವ ‘ಲಗುನಾ ಕಾಪರ್ ಪ್ಲೇಟ್ ಇನ್ಸ್ಕ್ರಿಪ್ಷನ್’ ಈಗಿನ ಫಿಲಿಪೈನ್ಸ್ ದೇಶದಲ್ಲಿ ಪತ್ತೆಗೊಂಡಿತು.

1506: 3 ದಿನಗಳ ಲಿಸ್ಬನ್ ಹತ್ಯಾಕಾಂಡವು ಕೊನೆಗೊಂಡಿತು. ಪೋರ್ಚುಗೀಸ್ ಕ್ಯಾಥೊಲಿಕ್ಕರು 1900ಕ್ಕೂ ಹೆಚ್ಚು ಜ್ಯೂ ಜನಾಂಗೀಯರನ್ನು ಹತ್ಯೆಗೈದರೆಂದು ಶಂಕಿಸಲಾಗಿದೆ.

1526: ಮೊದಲನೆಯ ಪಾಣಿಪತ್ ಯುದ್ಧದಲ್ಲಿ ಮೊಘಲ್ ದೊರೆ ಬಾಬರನು, ಲೋದಿ ವಂಶದ ಕಟ್ಟ ಕಡೆಯ ಆಡಳಿತಗಾರ ಇಬ್ರಾಹಿಮ್ ಲೋದಿಯನ್ನು ಸೋಲಿಸಿ ಕೊಲೆಗೈದನು.

1782: ಹಿಂದೆ ರತ್ತನಕೊಸಿನ್ ಎಂದು ಹೆಸರಾಗಿದ್ದ ಈಗಿನ ಬ್ಯಾಂಕಾಕ್ ಅನ್ನು, ಚಾವೋ ಫ್ರಯಾ ನದಿಯ ದಂಡೆಯ ಮೇಲೆ ರಾಜ ಬುದ್ಧ ಯೋದ್ಫ್ಹ ಚುಲಾಲೋಕೆ ಎಂಬಾತ ಪತ್ತೆ ಮಾಡಿದ.

1856: ಆಸ್ಟ್ರೇಲಿಯಾದಲ್ಲಿ ಮೆಲ್ಬೋರ್ನ್ ಆಸುಪಾಸಿನಲ್ಲಿನ ಕಟ್ಟಡ ಕಟ್ಟುವ ಕಾರ್ಮಿಕರು 8 ಗಂಟೆಗಳ ದಿನವನ್ನು ಪಡೆಯುವುದಕ್ಕಾಗಿ ಮೆಲ್ಬೋರ್ನ್ ವಿಶ್ವವಿದ್ಯಾಲಯದಿಂದ ಪಾರ್ಲಿಮೆಂಟ್ ಭವನದವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.

2006: “ಪತಿ ಮೂರುಬಾರಿ ತಲಾಖ್ ಹೇಳಿದ ಮಾತ್ರಕ್ಕೆ ಗಂಡ- ಹೆಂಡತಿ ಬೇರೆ ಬೇರೆಯಾಗಿ ಬದುಕಬೇಕು ಎಂದು ಒತ್ತಾಯಿಸುವ ಹಕ್ಕು ಯಾರಿಗೂ ಇಲ್ಲ” ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ಒರಿಸ್ಸಾದ ಮುಸ್ಲಿಂ ಸಮುದಾಯವು ಷರಿಯತ್ ಹೆಸರಿನಲ್ಲಿ ತಮ್ಮ ಪತಿಯ ಜೊತೆ ಬದುಕಲು ತಮಗೆ ಅನುಮತಿ ನಿರಾಕರಿಸಿದ ಸಂಬಂಧ ನಜ್ಮಾ ಬೀವಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ವಿಚಾರಣಾ ಪೀಠ ಈ ತೀರ್ಪು ನೀಡಿತು.

2006: ಕರ್ನಾಟಕ ಸರ್ಕಾರವು 2005 ವರ್ಷದ ಸಾಂಸ್ಕತಿಕ ಪ್ರಶಸ್ತಿಗಳನ್ನು ಪ್ರಕಟಿಸಿತು. ಟಿ.ಚೌಡಯ್ಯ ಪ್ರಶಸ್ತಿಗೆ ಹಿಂದೂಸ್ಥಾನಿ ತಬಲಾ ವಾದಕ ದತ್ತಾತ್ರೇಯ ಸದಾಶಿವ ಗರುಡ; ಕನಕ ಪುರಂದರ ಪ್ರಶಸ್ತಿಗೆ ಗಮಕ ಕ್ಷೇತ್ರದ ಬಿ. ಎಸ್. ಎಸ್. ಕೌಶಿಕ್; ದಾನಚಿಂತಾಮಣಿ ಪ್ರಶಸ್ತಿಗೆ ಲೇಖಕಿ ಡಾ. ವೀಣಾ ಶಾಂತೇಶ್ವರ; ಡಾ. ಗುಬ್ಬಿ ವೀರಣ್ಣ ಪ್ರಶಸ್ತಿಗೆ ವೃತ್ತಿ ರಂಗಭೂಮಿಯ ರೇಣುಕಮ್ಮ ಮುಳಗೋಡು; ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಗಾಯಕ ಈಶ್ವರ ಮಿಣಚಿ; ಜಕಣಾಚಾರಿ ಪ್ರಶಸ್ತಿಗೆ ಸಿದ್ದಲಿಂಗಯ್ಯ ಮತ್ತು ಶಾಂತಲಾ ನಾಟ್ಯ ಪ್ರಶಸ್ತಿಗೆ ಲೀಲಾ ರಾಮನಾಥನ್ ಅವರುಗಳನ್ನು ಆಯ್ಕೆಮಾಡಲಾಯಿತು.

2008: ತನ್ನ ಚೊಚ್ಚಲ ಯಾನ ಕಾಲದಲ್ಲೇ ಸಮುದ್ರದಲ್ಲಿ ಮುಳುಗಿ ಹೋದ ‘ಟೈಟಾನಿಕ್’’ ದುರಂತ ನೌಕೆಯ ಟಿಕೆಟ್ ಒಂದು, ಈದಿನ ಲಂಡನ್ನಿನಲ್ಲಿ ನಡೆದ ಹರಾಜಿನಲ್ಲಿ 33,000 ಪೌಂಡುಗಳಿಗೆ ಮಾರಾಟವಾಯಿತು.

2009: ಎನ್.ಗೋಪಾಲಸ್ವಾಮಿ ಅವರು ಹುದ್ದೆಯಿಂದ ನಿವೃತ್ತರಾದ ಬಳಿಕ ನವೀನ್ ಚಾವ್ಲಾ ಅವರು ಈದಿನ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು.

ಪ್ರಮುಖಜನನ/ಮರಣ:

1619: ಡಚ್ ಸರ್ಜನ್ ಜಾನ್ ವ್ಯಾನ್ ರೀಬೀಕ್ ಜನಿಸಿದರು. ಇವರು 1652ರಲ್ಲಿ ಕೇಪ್ ಟೌನನ್ನು ಸ್ಥಾಪಿಸಿದರು.

1837: ಡ್ಯಾನಿಶ್ ಲೆಫ್ಟಿನೆಂಟ್ ಅಧಿಕಾರಿ, ಶಿಕ್ಷಕ, ಬರಹಗಾರ ಮತ್ತು ರಾಜಕಾರಣಿ ಹಾಗೂ ಸ್ವೀಡನ್ ಮತ್ತು ನಾರ್ವೆ ಪ್ರದೇಶದಲ್ಲಿ ಶಾಂತಿಗಾಗಿ ಕೆಲಸ ಮಾಡಿದ ಫ್ರೆಡ್ರಿಕ್ ಬಜೆರ್ ಅವರು ಜನಿಸಿದರು. ಇವರಿಗೆ 1908 ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.

1882: ಅಮೆರಿಕದ ಭೌತ ವಿಜ್ಞಾನಿ ಪೆರ್ಸಿ ವಿಲ್ಲಿಯಮ್ಸ್ ಬ್ರಿಡ್ಗ್ ಮ್ಯಾನ್ ಅವರು ಕೇಂಬ್ರಿಡ್ಜಿನಲ್ಲಿ ಜನಿಸಿದರು. ‘ಫಿಸಿಕ್ಸ್ ಆಫ್ ಹೈ ಪ್ರೆಷರ್ಸ್’ ಕುರಿತಾದ ಸಂಶೋಧನೆಗೆ ಇವರಿಗೆ 1946 ವರ್ಷದ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

1889: ರಷ್ಯನ್-ಸ್ವಿಸ್ ಸಾವಯವ ರಸಾಯನ ಶಾಸ್ತ್ರಜ್ಞರಾದ ಪಾಲ್ ಕರ್ರೆರ್ ಅವರು ಮಾಸ್ಕೋದಲ್ಲಿ ಜನಿಸಿದರು. ವಿಟಮಿನ್ಸ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1937 ವರ್ಷದ ನೊಬೆಲ್ ರಸಾಯನ ಶಾಸ್ತ್ರ ಪ್ರಶಸ್ತಿ ಸಂದಿತ್ತು.

1911: ಕ್ಲಿಯರ್ಸಿಲ್ ಕಂಡು ಹಿಡಿದ ಅಮೆರಿಕದ ಉದ್ಯಮಿ ಇವಾನ್ ಕೊಂಬೆಅವರು ಲೊವ ಬಳಿಯ ಫ್ರೆಮಾಂಟ್ ಎಂಬಲ್ಲಿ ಜನಿಸಿದರು.

1920: ಆಕಾಶವಾಣಿ, ನಾಟಕ, ಯಕ್ಷಗಾನ, ಸಿನಿಮಾ ಹಾಗೂ ಕಚೇರಿಗಳ ಮೂಲಕ ಸಂಗೀತ ಮತ್ತು ಸುಗಮ ಸಂಗೀತಕ್ಕೆ ವಿಶಾಲ ವ್ಯಾಪ್ತಿಯನ್ನು ತಂದುಕೊಟ್ಟವರಲ್ಲಿ ಪ್ರಮುಖರಾದ ಪದ್ಮಚರಣ್ ಅವರು ಎ. ವಿ. ಕೃಷ್ಣಮಾಚಾರ್ ಎಂಬ ಹೆಸರಿನಲ್ಲಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುತ್ತಿ ಎಂಬಲ್ಲಿ ಜನಿಸಿದರು. ಇವರು ಸಂಗೀತ ನೀಡಿದ ಬೇಲೂರು ಸಾಕ್ಷ್ಯ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ, ಸೋಮನಾಥಪುರ ಸಾಕ್ಷ್ಯಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತವು. ಕರ್ನಾಟಕ ಸಂಗೀತ, ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾತಿಲಕ, ಗಾಯನ ಸಮಾಜದ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1920: ಕನ್ನಡದ ಪ್ರಸಿದ್ಧ ಸಾಹಿತಿ ತ.ರಾ.ಸು ಅವರು ಮಲೆಬೆನ್ನೂರಿನಲ್ಲಿ ತಳುಕಿನ ವೆಂಕಣ್ಣಯ್ಯನವರ ಮನೆತನದಲ್ಲಿ ಜನಿಸಿದರು. ಪತ್ರಿಕಾರಂಗ, ಸಾಹಿತ್ಯ, ಸ್ವಾತಂತ್ರ್ಯ ಚಳವಳಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿ ಪಡೆದಿದ್ದ ತ.ರಾ. ಸುಬ್ಬರಾಯರ ‘ಹಂಸಗೀತೆ’ ಕೃತಿ ಹಿಂದಿಯಲ್ಲಿ ‘ಬಸಂತ ಬಹಾರ್’ ಮತ್ತು ಕನ್ನಡದಲ್ಲಿ ‘ಹಂಸ ಗೀತೆ’ಯಾಗಿ ಜಾಗತಿಕ ಮನ್ನಣೆ ಗಳಿಸಿದವು. ‘ನಾಗರಹಾವು’ ಪ್ರಸಿದ್ಧ ಚಲನಚಿತ್ರವಾಯಿತು. ‘ದುರ್ಗಾಸ್ತಮಾನಕ್ಕೆ ‘ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿತ್ತು.

1926: ಇಂಗ್ಲೆಂಡಿನ ರಾಣಿ ಎರಡನೇ ಎಲಿಜಬೆತ್ ಅವರು ಲಂಡನ್ನಿನಲ್ಲಿ ಜನಿಸಿದರು.

1946: ಭಾರತದ ಕ್ರಿಕೆಟ್ ಆಟಗಾರ, ನಾಯಕ ಮತ್ತು ಪ್ರಸಿದ್ಧ ತೀರ್ಪುಗಾರ ಶ್ರೀನಿವಾಸರಾಘವನ್ ವೆಂಕಟರಾಘವನ್ ಅವರು ಚೆನ್ನೈನಲ್ಲಿ ಜನಿಸಿದರು. 1965ರಿಂದ 1983ರವರೆಗೆ ಹದಿನೆಂಟಕ್ಕೂ ಹೆಚ್ಚು ಸುದೀರ್ಘ ಅವಧಿಯವರೆಗೆ ಟೆಸ್ಟ್ ಕ್ರಿಕೆಟ್ ಆಡಿದ ದಾಖಲೆ ಹೊಂದಿರುವ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಅಂಪೈರ್ ಎಂಬ ಕೀರ್ತಿ ಗಳಿಸಿದ್ದಾರೆ. ಇವರಿಗೆ ಪದ್ಮಶ್ರೀ ಗೌರವ ಸಂದಿದೆ.

1950: ರಂಗಭೂಮಿ ಮತ್ತು ದೂರದರ್ಶನದ ಧಾರವಾಹಿಗಳಲ್ಲಿ ಪ್ರಸಿದ್ಧರಾಗಿರುವ ಲಕ್ಷ್ಮೀ ಚಂದ್ರಶೇಖರ್ ಅವರು ಹಾಸನದಲ್ಲಿ ಜನಿಸಿದರು. ಲಕ್ಷ್ಮೀ ಚಂದ್ರಶೇಖರ್ ಅವರು ಅನೇಕ ರಾಷ್ಟ್ರಗಳಲ್ಲಿ ಸಹಾ ರಂಗಪ್ರದರ್ಶನಗಳನ್ನು ನೀಡಿದ್ದಾರೆ. ಸಂಗೀತ ನಾಟಕ ಅಕಾಡೆಮಿಯ ಗೌರವವೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಅವರಿಗೆ ಸಂದಿವೆ.

1950: ಪ್ರಸಿದ್ಧ ಕಿರುತೆರೆ ಮತ್ತು ಸಿನಿಮಾ ನಟ ಶಿವಾಜಿ ಸತಂ ಅವರು ಜನಿಸಿದರು. ಹಿಂದೀ ಮತ್ತು ಮರಾಠಿ ಚಿತ್ರಗಳಲ್ಲಿ ಹಾಗೂ ಕಿರುತೆರೆಯ ಕಥಾನಕಗಳಲ್ಲಿ ಪ್ರಸಿದ್ಧರಾಗಿರುವ ಇವರಿಗೆ ಮಹಾರಾಷ್ಟ್ರ ಸರ್ಕಾರದ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1900: ಜೇತ್ವಾ ರಜಪೂತ್ ರಾಜವಂಶಕ್ಕೆ ಸೇರಿದ ಪೋರಬಂದರ್ ಸಂಸ್ಥಾನದ ರಾಜ ವಿಕ್ರಮತ್ಜಿ ಖಿಮೋಜಿರಾಜ್ ನಿಧನರಾದರು

1910: ಮಾರ್ಕ್ ಟ್ವೇನ್ ಎಂದೇ ಖ್ಯಾತರಾಗಿದ್ದ ಅಮೆರಿಕದ ಬರಹಗಾರ ಸ್ಯಾಮುಯೆಲ್ ಲಾಂಗ್ಹೋರ್ಮ್ ಕ್ಲೆಮೆನ್ಸ್ ಅವರು ಕನೆಕ್ಟಿಕಟ್ ಬಳಿಯ ರೆಡ್ಡಿಂಗ್ ಎಂಬಲ್ಲಿ ತಮ್ಮ 74ನೇ ವಯಸ್ಸಿನಲ್ಲಿ ನಿಧನರಾದರು.

1938: ಉರ್ದು ಮಹಾಕವಿ ಮುಹಮ್ಮದ್ ಇಕ್ಬಾಲ್ ಲಾಹೋರಿನಲ್ಲಿ ನಿಧನರಾದರು. ಇವರ ‘ಸಾರೆ ಜಹಾಂಸೆ ಅಚ್ಚಾ, ಹಿಂದೂಸ್ಥಾನ್ ಹಮಾರ’ ಗೀತೆ ಅತ್ಯಂತ ಪ್ರಸಿದ್ಧಿ ಪಡೆದಿದೆ.

1965: ಇಂಗ್ಲಿಷ್-ಸ್ಕಾಟಿಷ್ ವಿಜ್ಞಾನಿ ಎಡ್ವರ್ಡ್ ವಿಕ್ಟರ್ ಆಪಲ್ಟನ್ ಅವರು ಸ್ಕಾಟ್ಲ್ಯಾಂಡಿನ ಎಡಿನ್ಬರ್ಗ್ ಎಂಬಲ್ಲಿ ನಿಧನರಾದರು. ‘ಅಯಾನ್ ಸ್ಪಿಯರ್’ (ionsphere) ಕುರಿತಾದ ಸಂಶೋಧನೆಗಾಗಿ ಇವರಿಗೆ 1947 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

2006: ರಾಜಕಾರಣಿ, ಬರಹಗಾರ ಮತ್ತು ಕೇರಳದ ಅನೇಕ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಘಟನೆಗಳ ಸ್ಥಾಪಕ ಟಿ.ಕೆ. ರಾಮಕೃಷ್ಣನ್ ನಿಧನರಾದರು,

2013: ‘ಮಾನವ ಕಂಪ್ಯೂಟರ್‌’ ಎಂದು ವಿಶ್ವ ಖ್ಯಾತಿ ಗಳಿಸಿದ್ದ ಗಣಿತಜ್ಞೆ, ಜ್ಯೋತಿಷಿ ಮತ್ತು ಜಾದೂಗಾರ್ತಿ ಶಕುಂತಲಾದೇವಿ ಬೆಂಗಳೂರಿನಲ್ಲಿ ನಿಧನರಾದರು.

2015: ದೀರ್ಘಕಾಲ ಒದಿಶಾದ ಮುಖ್ಯಮಂತ್ರಿಗಳಾಗಿದ್ದ ಹಾಗೂ ಕೆಲಕಾಲ ಅಸ್ಸಾಂನ ರಾಜ್ಯಪಾಲರಾಗಿದ್ದ ಜೆ.ಬಿ. ಪಟ್ನಾಯಕ್ ತಿರುಪತಿಯಲ್ಲಿ ನಿಧನರಾದರು.