Categories
e-ದಿನ

ಏಪ್ರಿಲ್-24

ದಿನಾಚರಣೆಗಳು
ರಾಷ್ಟ್ರೀಯ ಪಂಚಾಯತ್ ರಾಜ್ ದಿನ
ಭಾರತದಲ್ಲಿ ಏಪ್ರಿಲ್ 24 ದಿನವನ್ನು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನಾಗಿ ಆಚರಿಸಲಾಗುತ್ತಿದೆ. 2010ರ ವರ್ಷದಲ್ಲಿ, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೊದಲ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಉದ್ಘಾಟಿಸಿದರು.

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 1184: ಈ ದಿನದಂದು ಟ್ರೋಜನ್ ಯುದ್ಧದಲ್ಲಿ ಟ್ರಾಯ್ ನಗರದ ಮೇಲೆ ಗ್ರೀಕರು ಯುದ್ಧ ನಡೆಸಿದರು ಎಂದು ನಂಬಲಾಗಿದೆ

1704: ಬ್ರಿಟಿಷ್ ವಸಾಹತುವಾದ ಅಮೆರಿಕದಲ್ಲಿ ಮೊಟ್ಟ ಮೊದಲ ನಿರಂತರ ಪತ್ರಿಕೆಯಾದ ‘ದಿ ಬೋಸ್ಟನ್ ನ್ಯೂಸ್-ಲೆಟರ್’ ಪ್ರಕಟಗೊಂಡಿತು.

1800: ಅಮೆರಿಕದ ಅಧ್ಯಕ್ಷರಾದ ಜಾನ್ ಆಡಮ್ಸ್ ಅವರು ಕಾನೂನಿಗೆ ಅಗತ್ಯವಾದ ಪುಸ್ತಕಗಳನ್ನು ಕೊಳ್ಳಲು 5000 ಡಾಲರ್ ಎತ್ತಿರಿಸಬೇಕೆಂದು ಖಾಯಿದೆಗೆ ಸಹಿ ಮಾಡಿದರು. ಈ ಮೂಲಕ ವಿಶ್ವದ ಪ್ರತಿಷ್ಟಿತ ಗ್ರಂಥಾಲಯವೆನಿಸಿರುವ ‘ಲೈಬ್ರೆರಿ ಆಫ್ ಕಾಂಗ್ರೆಸ್’ ಸ್ಥಾಪನೆಗೊಂಡಿತು.

1895: ಇಡೀ ವಿಶ್ವವನ್ನು ಏಕಾಂಗಿಯಾಗಿ ಪಯಣಿಸಿದ ಜೋಷುವಾ ಸ್ಲೋಕಂ ಅವರು ಬೋಸ್ಟನ್ ಇಂದ ಪಯಣ ಆರಂಭಿಸಿದರು

1922: ಆಕ್ಸ್ಫರ್ಡ್ ಷೈರಿನ ಲೀಫೀಲ್ಡ್, ಇಂಗ್ಲೆಂಡ್ ಮತ್ತು ಈಜಿಪ್ಟಿನ ಕೈರೋ ನಡುವಣ ವೈರ್ಲೆಸ್ ಟೆಲಿಗ್ರಫಿ ಸೌಕರ್ಯ ಆರಂಭಗೊಂಡಿತು.

1923: ವಿಯೆನ್ನಾದಲ್ಲಿ ಸಿಗ್ಮಂಡ್ ಫ್ರಾಯ್ಡ್ ಅವರು ಇಚ್ ಉಂಡ್ ದಾಸ್ ಎಸ್’ (ದಿ ಇಗೋ ಅಂಡ್ ದಿ ಇದ್) ಪ್ರಕಟಗೊಂಡಿತು. ಇದ್, ಇಗೋ ಮತ್ತು ಸೂಪರ್-ಇಗೋ ಕುರಿತಾದ ಸಿದ್ಧಾಂತಗಳನ್ನು ಅವರು ತಿಳಿಸಿದ್ದಾರೆ.

1967: ಗಗನಯಾತ್ರಿ ವ್ಲಾಡಿಮಿರ್ ಕೊಮಾರೋವ್ ಅವರು ಸೋಯುಜ್ 1ರಲ್ಲಿ ಪ್ಯಾರಾಚೂಟ್ ಸಕಾಲಿಕವಾಗಿ ತೆರೆದುಕೊಳ್ಳದ ಕಾರಣದಿಂದ ನಿಧನರಾದರು.

1990: ಬಾಹ್ಯಾಕಾಶ ವಾಹನವಾದ ಡಿಸ್ಕವರಿಯಿಂದ ಹಬ್ಬಲ್ ಸ್ಪೇಸ್ ಟೆಲಿಸ್ಕೋಪ್ ಅನ್ನು ಕಾರ್ಯಾರಂಭ ಮಾಡಿಸಲಾಯಿತು.

2013: ಬಾಂಗ್ಲಾದೇಶದ ಡಾಕ್ಕಾದಲ್ಲಿ ಕಟ್ಟಡವೊಂದು ಕುಸಿದು 1129 ಜನ ನಿಧನರಾಗಿ 2500ಕ್ಕೂ ಜನ ಗಾಯಗೊಂಡರು.

ಪ್ರಮುಖಜನನ/ಮರಣ:

1845; ಸ್ವಿಸ್ ಸಾಹಿತಿ ಕಾರ್ಲ್ ಸ್ಪಿಟ್ಟೆಲೆರ್ ಅವರು ಸ್ವಿಟ್ಜರ್ಲ್ಯಾಂಡ್ ದೇಶದ ಲೀಸ್ಟಲ್ ಎಂಬಲ್ಲಿ ಜನಿಸಿದರು.

1927: ಖ್ಯಾತ ಗಾಯಕಿ ಜಯವಂತಿದೇವಿ ಹಿರೇಬೆಟ್ಟು ಅವರು ಮಂಗಳೂರಿನಲ್ಲಿ ಜನಿಸಿದರು. ಕರ್ನಾಟಕದ ಪ್ರತಿಷ್ಠಿತ ಪ್ರಶಸ್ತಿಯಾದ ಸಂತ ಶಿಶುನಾಳ ಶರೀಫ ಪ್ರಶಸ್ತಿಯ ಪ್ರಥಮ ಪುರಸ್ಕೃತರಾದ ಈಕೆ ಮಹಾತ್ಮ ಗಾಂಧೀಜಿವರ ಪ್ರಾರ್ಥನಾ ಸಭೆಯಲ್ಲಿ ವಂದೇ ಮಾತರಂ ಹಾಡಿದ್ದರು. ತ್ಯಾಗಯ್ಯ, ಕಲ್ಪನಾ ಚಿತ್ರಗಳಲ್ಲೂ ಹಿನ್ನೆಲೆ ಗಾಯಕರಾಗಿ ಹಾಡಿದ್ದ ಇವರ ಗಾಯನ ಆಕಾಶವಾಣಿ ಮತ್ತು ಎಚ್ ಎಮ್ ವಿ ಧ್ವನಿಮುದ್ರಿಕೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

1929: ಕನ್ನಡ ಚಿತ್ರರಂಗದ ಮಹಾನ್ ನಟ, ಗಾಯಕ, ದಾದಾ ಸಾಹೇಬ್ ಫಾಲ್ಕೆ ವಿಜೇತ, ಪದ್ಮಭೂಷಣ ಪುರಸ್ಕೃತ ಡಾ. ರಾಜ್ ಕುಮಾರ್ ಅವರು ಗಾಜನೂರಿನಲ್ಲಿ ಜನಿಸಿದರು. ಕನ್ನಡ ರಂಗಭೂಮಿಯಿಂದ ಬಂದವರಾಗಿ ಕನ್ನಡ ಚಲನಚಿತ್ರರಂಗದಲ್ಲಿ ನಿರಂತರವಾಗಿ ತಮ್ಮ ಶಿಸ್ತು, ಪ್ರತಿಭೆ, ತೇಜಸ್ಸಿನಿಂದ ಜನಪ್ರಿಯತೆಯ ಮುಂಚೂಣಿಯಲ್ಲಿದ್ದ ಡಾ. ರಾಜ್ ಕುಮಾರ್ ಅವರು ಕನ್ನಡ ಸಾಂಸ್ಕೃತಿಕ ಲೋಕದ ರಾಯಭಾರಿಗಳಾಗಿ ಹಾಗೂ ಕನ್ನಡಪರ ಧ್ವನಿಯಾಗಿಯೂ ಪ್ರಸಿದ್ಧರಾಗಿದ್ದರು.

1934: ಪ್ರಸಿದ್ಧ ಸಾಹಿತಿ, ಪತ್ರಕರ್ತ, ಕಾರ್ಯಕರ್ತ, ಸಿನಿಮಾ ನಿರ್ದೇಶಕ ಮುಂತಾದ ವಿವಿಧಮುಖಿ ವಿದ್ವಾಂಸರಾದ ಜಯಕಾಂತನ್ ಅವರು ಕಡಲೂರಿನಲ್ಲಿ ಜನಿಸಿದರು. ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ಪದ್ಮಭೂಷಣ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1947: ಅಮೆರಿಕದ ಜೈವಿಕ ವಿಜ್ಞಾನಿ ರೋಜರ್ ಡಿ ಕಾರನ್ಬರ್ಗ್ ಅವರು ಸೈಂಟ್ ಲೂಯಿ ಎಂಬಲ್ಲಿ ಜನಿಸಿದರು. ಇವರಿಗೆ ಯೂಕರ್ಯೋಟಿಕ್ ಟ್ರಾನ್ಸ್ಕ್ರಿಪ್ಶನ್ ಕುರಿತಾದ ಮಹತ್ವದ ಸಂಶೋಧನೆಗೆ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತ್ತು.

1973: ವಿಶ್ವದ ಮಹಾನ್ ಕ್ರಿಕೆಟ್ಟಿಗರಲ್ಲಿ ಪ್ರಮುಖ ಹೆಸರಾದ ಸಚಿನ್ ತೆಂಡುಲ್ಕರ್ ಮುಂಬೈನಲ್ಲಿ ಜನಿಸಿದರು. ಅತ್ಯಧಿಕ ಶತಕಗಳೂ ಸೇರಿದಂತೆ ಅಸಂಖ್ಯ ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿದ ಇವರಿಗೆ ಭಾರತರತ್ನ ಪ್ರಶಸ್ತಿಯೂ ಸೇರಿದಂತೆ ಅನೇಕ ಶ್ರೇಷ್ಠ ಗೌರವಗಳು ಸಂದಿವೆ.

1960: ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ಮ್ಯಾಕ್ಸ್ ವಾನ್ ಲಾಯೇ ಅವರು ಪಶ್ಚಿಮ ಬರ್ಲಿನ್ ನಗರದಲ್ಲಿ ನಿಧನರಾದರು. ಡಿಫ್ರಾಕ್ಷನ್ಸ್ ಆಫ್ ಎಕ್ಸ್-ರೇ ಕುರಿತಾದ ಸಂಶೋಧನೆಗಾಗಿ ಇವರಿಗೆ 1914 ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.

2007: ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದ ‘ಸೇವ್ ದಿ ಚಿಲ್ಡ್ರನ್ ಇಂಡಿಯಾ’ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕಿ ವಿಪುಲ ಕದ್ರಿ ಅವರು ತಮ್ಮ 71ನೆಯ ವಯಸ್ಸಿನಲ್ಲಿ ಮುಂಬೈಯಲ್ಲಿ ನಿಧನರಾದರು.

2011: ಭಾರತೀಯ ಆಧ್ಯಾತ್ಮಿಕ ಗುರು ಸತ್ಯ ಸಾಯಿ ಬಾಬಾ ಅವರು ಪುಟ್ಟಪರ್ತಿಯಲ್ಲಿ ನಿಧನರಾದರು.