Categories
e-ದಿನ

ಏಪ್ರಿಲ್-26

ಪ್ರಮುಖಘಟನಾವಳಿಗಳು:

1721: ಭೀಕರ ಭೂಕಂಪನದಲ್ಲಿ ಇರಾನಿನ ಟಾಬ್ರಿಜ್ ನಗರ ನಾಶಗೊಂಡಿತು.

1933: ನಾಜಿ ಜರ್ಮನಿಯ ಗುಪ್ತಪೋಲೀಸ್ ದಳವಾದ ‘ಗೆಸ್ಟಾಪೋ’ ಸ್ಥಾಪನೆಗೊಂಡಿತು.

1958: ಅಮೆರಿಕದ ಬಾಲ್ಟಿಮೋರ್ನಿಂದ ಓಹಿಯೋಗೆ ಪಯಣಿಸುತ್ತಿದ್ದ ಮೊಟ್ಟಮೊದಲ ಎಲೆಕ್ಟ್ರಿಕ್ ರಸ್ತೆ ರೈಲಾದ ‘ರಾಯಲ್ ಬ್ಲೂ’ 68 ವರ್ಷಗಳ ನಂತರ ತನ್ನ ಕೊನೆಯ ಯಾನವನ್ನು ನಡೆಸಿತು.

1960: ಹನ್ನೆರಡು ವರ್ಷಗಳ ಸರ್ವಾಧಿಕಾರ ನಡೆಸಿದ ದಕ್ಷಿಣ ಕೊರಿಯಾದ ಅಧ್ಯಕ್ಷ ಸಿಂಗ್ಮ್ಯಾನ್ ರೀ ಅವರು ಏಪ್ರಿಲ್ ಕ್ರಾಂತಿಯ ಪರಿಣಾಮವಾಗಿ ತಮ್ಮ ಸ್ಥಾನದಿಂದ ಹೊರದಬ್ಬಲ್ಪಟ್ಟರು.

1962: ನಾಸಾದ ರೇಂಜರ್ 4 ಗಗನನೌಕೆಯು ಚಂದ್ರನ ಮೇಲೆ ಡಿಕ್ಕಿ ಹೊಡೆಯಿತು.

1970: ಅಂತರರಾಷ್ಟ್ರೀಯ ಬೌದ್ಧಿಕ ಆಸ್ತಿಯನ್ನು ಕಾಯ್ದುಕೊಳ್ಳುವ ಸಂಸ್ಥೆ (World Intellectual Property Organization) ಸ್ಥಾಪನೆಯ ಪ್ರಕ್ರಿಯೆಗೆ ಚಾಲನೆ ದೊರಕಿತು.

1981: ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಡಾ. ಮೈಖೇಲ್ ಆರ್. ಹ್ಯಾರಿಸನ್ ಅವರು ಸ್ಯಾನ್ ಫ್ರಾನ್ಸಿಸ್ಕೋ ಮೆಡಿಕಲ್ ಸೆಂಟರ್ನಲ್ಲಿ ಮೊಟ್ಟಮೊದಲ ಭ್ರೂಣ ಚಿಕಿತ್ಸೆಯನ್ನು ನಡೆಸಿದರು.

1986: ಸೋವಿಯತ್ ಒಕ್ಕೂಟದ ಚೆರ್ನೋಬಿಲ್ ಪರಮಾಣು ವಿದ್ಯುತ್ ಘಟಕದಲ್ಲಿ ಸಂಭವಿಸಿದ ವಿಶ್ವದ ಅತಿ ಕೆಟ್ಟ ಪರಮಾಣು ದುರಂತದಲ್ಲಿ ಅತಿಭೀಕರ ಪರಮಾಣು ವಿಕಿರಣ ಸೋರಿಕೆ ಉಂಟಾಗಿ, ಪರಿಸರದಲ್ಲಿ ಭಯಂಕರ ಪರಿಣಾಮ ಉಂಟಾಗಿದ್ದೇ ಅಲ್ಲದೆ, ಕನಿಷ್ಠ 31 ಮಂದಿ ಕೆಲವೇ ಕ್ಷಣಗಳಲ್ಲಿ ಮೃತರಾದರು.

1989: ವಿಶ್ವದ ಚರಿತ್ರೆಯಲ್ಲೇ ಅತ್ಯಂತ ಭೀಕರವಾದ ಸುಂಟರಗಾಳಿಯು ಬಾಂಗ್ಲಾದೇಶದ ಕೇಂದ್ರವನ್ನು ಅಪ್ಪಳಿಸಿ 1,300 ಜನರನ್ನು ಬಲಿ ತೆಗೆದುಕೊಂಡು, 12,000 ಜನರನ್ನು ಗಾಯಗೊಳಿಸಿ 80,000ಕ್ಕೂ ಹೆಚ್ಚು ಜನರನ್ನು ನಿರ್ವಸತಿಗರನ್ನಾಗಿ ಮಾಡಿತು.

1989: ಪೀಪಲ್ಸ್ ಡೈಲಿ ಪತ್ರಿಕೆಯಲ್ಲಿ ಪ್ರಕಟಗೊಂಡ ಏಪ್ರಿಲ್ 26ರ ಸಂಪಾದಕೀಯವು ಟಿಯನಾನ್ಮೆನ್ ಸ್ಕ್ವೇರ್ ಪ್ರತಿಭಟನೆಗಳಿಗೆ ತೀವ್ರ ಕಾವು ತಂದುಕೊಟ್ಟವು.

2005: ಅಂತರರಾಷ್ಟ್ರೀಯ ಒತ್ತಾಯಗಳಿಂದಾಗಿ ಸಿರಿಯಾವು ತನ್ನ ಕೊನೆಯ 14,000 ಮಂದಿ ಸೈನಿಕರನ್ನು ಲೆಬಾನಾನ್ ದೇಶದಿಂದ ಹಿಂತೆಗೆದುಕೊಂಡಿತು. ಇದರಿಂದಾಗಿ ಲೆಬನಾನ್ ದೇಶದಲ್ಲಿ 29 ವರ್ಷಗಳ ಕಾಲ ಪ್ರಚಲಿತವಿದ್ಧ ಮಿಲಿಟರಿ ಹಸ್ತಕ್ಷೇಪ ಕೊನೆಗೊಂಡಂತಾಯಿತು.

2006: ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟದ ನೂತನ ಅಧ್ಯಕ್ಷರಾಗಿ ಪಾರ್ಥಿ ಭಟೋಲ್ ಆಯ್ಕೆಯಾದರು. 33 ವರ್ಷಗಳಿಂದ ಅಧ್ಯಕ್ಷರಾಗಿದ್ದ ಡಾ. ವರ್ಗೀಸ್ ಕುರಿಯನ್ ಅವರು ಹಿಂದಿನ ತಿಂಗಳು ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2008: ಹಿರಿಯ ವೃತ್ತಿ ರಂಗ ಕಲಾವಿದೆ ಹಾಗೂ ಖ್ಯಾತ ಹಿಂದೂಸ್ತಾನಿ ಗಾಯಕಿ ಬಳ್ಳಾರಿಯ ಸುಭದ್ರಮ್ಮ ಮನ್ಸೂರು ಅವರನ್ನು 2007ನೇ ಸಾಲಿನ ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಏಣಗಿ ಬಾಳಪ್ಪ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ಸುಭದ್ರಮ್ಮ ಅವರ ಹೆಸರನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಶಿಫಾರಸು ಮಾಡಿತು.

ಪ್ರಮುಖಜನನ/ಮರಣ:

1564: ಮಹಾನ್ ನಾಟಕಕಾರ ವಿಲಿಯಂ ಶೇಕ್ಸ್ಪಿಯರ್ ಅವರಿಗೆ ವಾರ್ವಿಕ್ಷೈರಿನ ಸ್ತ್ರಾಟ್ಫೋರ್ಡ್-ಅಪಾನ್-ಏವನ್ ಎಂಬಲ್ಲಿ ‘ಬ್ಯಾಪ್ಟೈಸ್’ ಸಂಸ್ಕಾರ ಅಥವ ನಾಮಕರಣವನ್ನು ನಡೆಸಲಾಯಿತು. ಅವರ ಹುಟ್ಟಿದ ದಿನ ಬಗ್ಗೆ ಮಾಹಿತಿ ಲಭ್ಯವಿಲ್ಲವಾಗಿದೆ.

1849: ಕನ್ನಡ ಸಾಹಿತ್ಯ ಚರಿತ್ರೆಯನ್ನು ಸಂಶೋಧಿಸಿ ಪ್ರಕಟಿಸಿದ ಬ್ರಿಟಿಷ್ ವಿದ್ವಾಂಸ ಇ.ಪಿ. ರೈಸ್ ಅವರು ಇಂಗ್ಲೆಂಡಿನ ಹ್ಯಾರೋ ಎಂಬಲ್ಲಿ ಜನಿಸಿದರು. ಇವರು ‘ಎ ಹಿಸ್ಟರಿ ಆಫ್ ಕೆನರೀಸ್ ಲಿಟರೇಚರ್ ಅನ್ನು 1915ರಲ್ಲಿ ಪ್ರಕಟಿಸಿದರು.

1879: ಇಂಗ್ಲಿಷ್ ಭೌತವಿಜ್ಞಾನಿ ಓವೆನ್ ವಿಲಿಯನ್ಸ್ ರಿಚರ್ಡ್ಸನ್ ಅವರು ಇಂಗ್ಲೆಂಡಿನ ಯಾರ್ಕ್ ಷೈರ್ ಬಳಿಯ ಡ್ಯೂಯಿಸ್ ಬರಿ ಎಂಬಲ್ಲಿ ಜನಿಸಿದರು. ಥರ್ಮಿಯೋನಿಕ್ ಎಮಿಷನ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1928ರ ವರ್ಷದ ನೊಬೆಲ್ ಭೌತಶಾಸ್ತ್ರ ಪುರಸ್ಕಾರ ಸಂದಿತು. ಈ ಸಂಶೋಧನೆಯು ರಿಚರ್ಡ್ಸನ್ಸ್ ಲಾ ಎಂದೇ ಪ್ರಖ್ಯಾತಿ ಪಡೆದಿದೆ.

1887: ಪ್ರಸಿದ್ಧ ವೈಣಿಕರಾದ ವೀಣಾ ವೆಂಕಟಗಿರಿಯಪ್ಪ ಅವರು ಹೆಗ್ಗಡದೇವನ ಕೋಟೆಯಲ್ಲಿ ಜನಿಸಿದರು. ತಾತ ದೊಡ್ಡ ಸುಬ್ಬರಾಯರಿಂದಲೇ ವೀಣೆ ಪಾಠ ಆರಂಭಿಸಿದ ವೆಂಕಟರಾಮಯ್ಯ ಅವರು ಮುಂದೆ ಮೈಸೂರು ಮಹಾರಾಜರ ಆಸ್ಥಾನ ವಿದ್ವಾಂಸರಾಗಿ ನೇಮಕಗೊಂಡು ಮಹಾರಾಜರ ಪ್ರೋತ್ಸಾಹದಿಂದ ಪಾಶ್ಚಾತ್ಯ ಸಂಗೀತ ವಾದ್ಯಗಳಾದ ಪಿಯಾನೋ, ಕೆರಮಿಮ್ ವಾದನವನ್ನೂ ಕಲಿತು ವೀಣೆಯೊಂದಿಗೆ ಅವುಗಳಲ್ಲೂ ಪ್ರವೀಣರಾದರು.

1898: ಸ್ಪ್ಯಾನಿಷ್ ಸಾಹಿತಿ ವಿಸೆಂಟೆ ಅಲೆಗ್ಸಿಯಾಂಡ್ರೆ ಅವರು ಸ್ಪೈನಿನ ಸೆವಿಲ್ಲೇ ಎಂಬಲ್ಲಿ ಜನಿಸಿದರು. ಇವರಿಗೆ 1977 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1917: ಚೀನಾ-ಅಮೆರಿಕದ ಕಟ್ಟಡ ವಿನ್ಯಾಸಕ, ನ್ಯಾಷನಲ್ ಗ್ಯಾಲರಿ ಆಫ್ ಆರ್ಟ್ ಮತ್ತು ಬ್ಯಾಂಕ್ ಆಫ್ ಚೀನಾ ಟವರ್ ಮುಂತಾದ ವಿನ್ಯಾಸಗಳಿಗೆ ಪ್ರಸಿದ್ಧರಾದ ಐ. ಎಂ. ಪೀ ಅವರು ಚೀನಾದ ಗುವಾಂಗ್ಜೌ ಎಂಬಲ್ಲಿ ಜನಿಸಿದರು.

1932: ಇಂಗ್ಲಿಷ್-ಕೆನಡಾ ಜೈವಿಕ ವಿಜ್ಞಾನಿ ಮತ್ತು ತಳಿತಜ್ಞ ಮೈಖೇಲ್ ಸ್ಮಿ ಅವರು ಇಂಗ್ಲೆಂಡಿನ ಬ್ಲ್ಯಾಕ್ ಪೂಲ್ ಎಂಬಲ್ಲಿ ಜನಿಸಿದರು. ‘ಸೈಟ್ ಜನರೇಟೆಡ್ ಮ್ಯುಟಾಜೆನೆಸಿಸ್ ಕುರಿತಾದ ಸಂಶೋಧನೆಗಾಗಿ’ ಇವರಿಗೆ 1933 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತು.

1933: ಜರ್ಮನ್-ಅಮೆರಿಕನ್ ಭೌತವಿಜ್ಞಾನಿ ಅರ್ನೊ ಅಲ್ಲನ್ ಪೆನ್ಜಿಯಾಸ್ ಅವರು ಜರ್ಮನಿಯ ಮ್ಯೂನಿಚ್ ನಗರದಲ್ಲಿ ಜನಿಸಿದರು. ಕಾಸ್ಮಿಕ್ ಮೈಕ್ರೋವೇವ್ ಬ್ಯಾಕ್ಗ್ರೌಂಡ್ ರೇಡಿಯೇಶನ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1978 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1937: ಖ್ಯಾತ ಇತಿಹಾಸ ತಜ್ಞ, ಸಂಶೋಧಕ, ಸಾಹಿತಿ, ಪ್ರಾಧ್ಯಾಪಕ ಸೂರ್ಯನಾಥ ಕಾಮತ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದರು. 70ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ಪ್ರಶಸ್ತಿ, ತುಳು ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.

1946: ಭಾರತೀಯ ಕ್ರಿಕೆಟ್ ತೀರ್ಪುಗಾರ ವಿ.ಕೆ. ರಾಮಸ್ವಾಮಿ ಅವರು ಚೆನ್ನೈನಲ್ಲಿ ಜನಿಸಿದರು.

1955: ಗಾಯನ, ಸಂಗೀತ ಸಂಯೋಜನೆ, ಧ್ವನಿ ಸುರುಳಿಗಳ ನಿರ್ಮಾಣ ಮತ್ತು ಕನ್ನಡದ ಸುಗಮಸಂಗೀತದ ಬರಹಗಳಿಗೆ ಹೆಸರಾದ ಜಯಶ್ರೀ ಅರವಿಂದ್ ಅವರು ತಲಕಾಡಿನಲ್ಲಿ ಜನಿಸಿದರು.

1910: ನಾರ್ವೆ ದೇಶದ ಸಾಹಿತಿ ಜೋರನ್ಸ್ ಜೆರ್ನೆ ಜೋರನ್ಸನ್ ಅವರು ಫ್ರಾನ್ಸಿನ ಪ್ಯಾರಿಸ್ ನಗರದಲ್ಲಿ ನಿಧನರಾದರು. ಇವರಿಗೆ 1903 ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1920: ಭಾರತೀಯ ಗಣಿತಜ್ಞ ಶ್ರೀನಿವಾಸ ರಾಮಾನುಜಂ ಅವರು ತಮಿಳುನಾಡಿನ ಕುಂಭಕೋಣಂ ಪಟ್ಟಣದಲ್ಲಿ ತಮ್ಮ 32ನೇ ವಯಸ್ಸಿನಲ್ಲಿ ಕ್ಷಯ ರೋಗಕ್ಕೆ ತುತ್ತಾಗಿ ನಿಧನರಾದರು. ವಿಶ್ವದ ಶ್ರೇಷ್ಠ ಗಣಿತಜ್ಞರಲ್ಲೊಬ್ಬರೆಂದು ಪ್ರಖ್ಯಾತರಾಗಿರುವ ಇವರಿಗೆ ರಾಯಲ್ ಸೊಸೈಟಿಯ ಫೆಲೋ ಗೌರವ ಸಂದಿತ್ತು.

1940: ಜರ್ಮನಿಯ ರಸಾಯನತಜ್ಞ ಕಾರ್ಲ್ ಬೋಸ್ಚ್ ಅವರು ಹೀಡೆಲ್ ಬರ್ಗ್ ಎಂಬಲ್ಲಿ ನಿಧನರಾದರು. ಹೈ ಪ್ರೆಷರ್ ಇಂಡಸ್ಟ್ರಿಯಲ್ ಕೆಮಿಸ್ಟ್ರಿಯಲ್ಲಿ ಮಹಾನ್ ಪರಿಣತರೆಂದು ಪ್ರಖ್ಯಾತರಾದ ಇವರು ಒಂದು ಕಾಲದಲ್ಲಿ ವಿಶ್ವದ ಅತಿ ದೊಡ್ಡ ರಾಸಾಯನಿಕ ಉದ್ಯಮವಾದ ಐ.ಜಿ. ಫರ್ಬೆನ್ ಸ್ಥಾಪಿಸಿದರು. ‘ಹೇಬರ್ ಬೋಸ್ಚ್ ಪ್ರೋಸೆಸ್’ ಸಂಶೋಧನೆಗೆ ಪ್ರಸಿದ್ಧರಾದ ಇವರಿಗೆ 1931 ವರ್ಷದ ನೊಬೆಲ್ ರಸಾಯನಶಾಸ್ತ್ರ ಪುರಸ್ಕಾರ ಸಂದಿತ್ತು.

2006: ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಪಿ. ವೆಂಕೋಬರಾವ್ ಅವರು ಬೆಂಗಳೂರಿನಲ್ಲಿ ನಿಧನರಾದರು.

2007: ‘ಭಾರತ ದರ್ಶನ’ ಉಪನ್ಯಾಸ ಮಾಲಿಕೆಯಿಂದ ಖ್ಯಾತರಾಗಿದ್ದ ವಿದ್ಯಾನಂದ ಶೆಣೈ ಅವರು ತಮ್ಮ 56ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು. ಭಾರತ ದರ್ಶನ ಉಪನ್ಯಾಸ ಮಾಲಿಕೆಯ 1100ಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದ ಇವರ ಉಪನ್ಯಾಸಗಳು ಧ್ವನಿಮುದ್ರಿಕೆಗಳಲ್ಲೂ ಪ್ರಖ್ಯಾತಿಗಳಿಸಿವೆ.

2008: ಖ್ಯಾತ ಇಸ್ಲಾಂ ವಿದ್ವಾಂಸ ಮೌಲಾನಾ ಅಂಜರ್ ಷಾ ಕಾಶ್ಮೀರಿ ಅವರು ತಮ್ಮ 81ನೆಯ ವಯಸ್ಸಿನಲ್ಲಿ ನವದೆಹಲಿಯಲ್ಲಿ ನಿಧನರಾದರು.