Categories
e-ದಿನ

ಏಪ್ರಿಲ್-28

ಪ್ರಮುಖಘಟನಾವಳಿಗಳು:

1503: ಸೆರಿಗ್ನೋಲ ಕದನವು ನಡೆಯಿತು. ಚರಿತ್ರೆಯಲ್ಲಿ ಸಿಡಿಮದ್ದು ಪುಡಿಯನ್ನು ಉಪಯೋಗಿಸಿ ಸಣ್ಣ ಸೈನ್ಯವು ಯುದ್ಧದಲ್ಲಿ ಜಯಗಳಿಸಿದ ಪ್ರಥಮ ಘಟನೆ ಎನ್ನಲಾಗಿದೆ.

1611: ಪಾಂಟಿಫಿಕಲ್ ಮತ್ತು ರಾಯಲ್ ಯೂನಿವರ್ಸಿಟಿ ಆಫ್ ಸ್ಯಾಂಟೋ ಥಾಮಸ್, ಫಿಲಿಫೈನ್ಸ್ ವಿಶ್ವವಿದ್ಯಾಲಯವು ಸ್ಥಾಪನೆಗೊಂಡಿತು. ಇದು ವಿಶ್ವದಲ್ಲಿನ ಅತ್ಯಂತ ದೊಡ್ಡ ಕ್ಯಾತೊಲಿಕ್ ವಿಶ್ವವಿದ್ಯಾಲಯವೆನಿಸಿದೆ.

1869: ಪ್ರಥಮ ಎರಡು ಖಂಡಗಳ ನಡುವಣ ರೈಲು ನಿರ್ಮಾಣಕ್ಕೆ ತೊಡಗಿದ್ದ ಸೆಂಟ್ರಲ್ ಪೆಸಿಫಿಕ್ ರೈಲ್ ರೋಡ್ನಲ್ಲಿ ಕಾರ್ಯನಿರ್ವಹಿಸಿದ ಚೀನಾ ಮತ್ತು ಐರಿಷ್ ಕಾರ್ಮಿಕರು ಒಂದೇ ದಿನದಲ್ಲಿ ಹತ್ತು ಕಿಲೋಮೀಟರ್ ದೂರದವರೆಗೆ ಕಂಬಿಗಳನ್ನು ಜೋಡಿಸಿದರು. ಇಂತಹ ಒಂದು ಸಾಧನೆ ಹಿಂದೆಯಾಗಲಿ ಮುಂದೆಯಾಗಲಿ ಸಂಭವಿಸಿಲ್ಲ.

1910: ಫ್ರಾನ್ಸಿನ ಲೂಯಿ ಪಾಲ್ಹನ್ ಅವರು ಲಂಡನ್ನಿನಿಂದ ಮ್ಯಾಂಚೆಸ್ಟರ್ವರೆಗೆ ಏರ್ಪಡಿಸಲಾಗಿದ್ದ ಪ್ರಥಮ ಹೆಚ್ಚು ದೂರದ ವಿಮಾನ ಹಾರಾಟ ಸ್ಪರ್ಧೆಯಲ್ಲಿ ಜಯಗಳಿಸಿದರು.

1932: ಮಾನವ ಕಾಮಾಲೆ ರೋಗಿಗಳ ಮೇಲೆ ಉಪಯೋಗಿಸಬಹುದಾದ ಲಸಿಕೆಯನ್ನು ಪ್ರಕಟಿಸಲಾಯಿತು.

1945: ಇಟಲಿಯ ಸರ್ವಾಧಿಕಾರಿ ಬೆನಿಟೋ ಮುಸ್ಸೊಲೋನಿ ಮತ್ತು ಆತನ ಪ್ರೇಯಸಿ ಕ್ಲಾರ ಪೆಟಾಸ್ಸಿ ಅವರನ್ನು ಇಟಲಿಯ ಪ್ರತಿಭಟನಾ ಚಳುವಳಿಗಾರರು ಕೊಂದುಹಾಕಿದರು.

1967: ವಿಯೆಟ್ನಾಮ್ ಯುದ್ಧದ ಸಂದರ್ಭದಲ್ಲಿ ಬಾಕ್ಸರ್ ಮುಹಮ್ಮದ್ ಅಲಿ ಅವರು ಅಮೆರಿಕದ ಸೇನಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಬೇಕೆಂಬ ಕರೆಯನ್ನು ತಿರಸ್ಕರಿಸಿದರು. ಹೀಗಾಗಿ ಅವರಿಗೆ ನೀಡಿದ್ದ ಚಾಂಪಿಯನ್ಶಿಪ್ ಮತ್ತು ಪರವಾನಗಿಯನ್ನು ರದ್ದುಗೊಳಿಸಲಾಯಿತು.

1978: ಆಫ್ಘಾನಿಸ್ತಾನದಲ್ಲಿ ದಂಗೆಯೆದ್ದ ಕಮ್ಮ್ಯೂನಿಸ್ಟ್ ಪರರಾದ ಬಂಡುಕೋರರು ಅಧ್ಯಕ್ಷರಾದ ಮೊಹಮ್ಮದ್ ದಾವೂದ್ ಖಾನ್ ಅವರನ್ನು ಸ್ಥಾನದಿಂದ ಹೊರದಬ್ಬಿ ಕೊಲೆಗೈದರು.

1986: ಚೆರ್ನೋಬಿಲ್ ಪರಮಾಣು ದುರಂತದಲ್ಲಿ ಅತ್ಯಧಿಕ ಮಟ್ಟದ ವಿಕಿರಣ ಹೊರಸೂಸಿದ್ದು ಸ್ವೀಡನ್ನಿನ ಪರಮಾಣು ಘಟಕದಲ್ಲಿ ಪತ್ತೆಗೊಂಡಿತು. ಹೀಗಾಗಿ ಸೋವಿಯೆತ್ ಅಧಿಕಾರಿಗಳಿಗೆ ಆಗಿದ್ದ ಅನಾಹುತವನ್ನು ಸಾರ್ವಜನಿಕವಾಗಿ ಘೋಷಿಸುವ ಅನಿವಾರ್ಯತೆ ಉಂಟಾಯಿತು.

1994: ಅಮೇರಿಕಾದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯ ಕೌಂಟರ್ ಇಂಟೆಲಿಜೆನ್ಸ್ ಅಧಿಕಾರಿ ಮತ್ತು ವಿಶ್ಲೇಷಕಾರಾದ ಆಲ್ಡ್ ರೋಚ್ಜ್ ಅವರು ತಾವು ಅಮೆರಿಕದ ಗಹನವಾದ ಗುಟ್ಟುಗಳನ್ನು ರಷ್ಯಾಗೆ ಬಿಟ್ಟುಕೊಟ್ಟಿದ್ದಾಗಿ ತಪ್ಪೊಪ್ಪಿಗೆ ಸಲ್ಲಿಸಿದರು.

2006: ಪಣಜಿ ಸಮೀಪದ ವಾಸೊದಲ್ಲಿ ಭಾರತೀಯ ಕರಾವಳಿ ಕಾವಲು ಪಡೆಗೆ ಅತ್ಯಂತ ದೊಡ್ಡದಾದ ಪಹರೆ ನೌಕೆ 105 ಮೀಟರ್ ಉದ್ದದ ಐಜಿಜಿಎಸ್ ಸಂಕಲ್ಪ ಸೇರ್ಪಡೆಗೊಂಡಿತು.

2006: ‘ಹೌ ಓಪಲ್ ಮೆಹ್ತಾ ಗಾಟ್ ಕಿಸ್ಡ್, ಗಾಟ್ ವೈಲ್ಡ್ ಅಂಡ್ ಗಾಟ್ ಎ ಲೈಫ್’ ಕಾದಂಬರಿಗಾರ್ತಿ ಕಾವ್ಯಾ ವಿಶ್ವನಾಥನ್ ಅವರು ತಾವು ಕೃತಿಚೌರ್ಯ ಮಾಡಿದ್ದಾಗಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಅವರ ಕಾದಂಬರಿಯನ್ನು ಪ್ರಕಟಿಸಿದ ‘ಲಿಟ್ಲ್ ಬ್ರೌನ್’ ಪ್ರಕಾಶನ ಸಂಸ್ಥೆಯು, ಆ ಕಾದಂಬರಿಯ ಎಲ್ಲ ಪ್ರತಿಗಳನ್ನೂ ಮಾರುಕಟ್ಟೆಯಿಂದ ವಾಪಸ್ ಪಡೆಯಲು ನಿರ್ಧರಿಸಿತು.

2006: ಯೂತ್ ಐಕಾನ್ ಹೆಸರಿನ ಮೊಹರು ಮಾಡಲಾದ ಸ್ಪೈಟ್ ಬಾಟಲಿಯೊಳಗೆ ಸತ್ತ ಕೀಟಗಳು ಇದ್ದುದಕ್ಕಾಗಿ, ಗ್ರಾಹಕನಿಗೆ 1.20 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡುವಂತೆ ದೆಹಲಿಯ ಗ್ರಾಹಕ ನ್ಯಾಯಾಲಯವು ಕೋಕಾ-ಕೋಲಾ ಕಂಪೆನಿಗೆ ಆದೇಶಿಸಿತು.

2008: ಪಾಕಿಸ್ಥಾನದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ನಡೆಸಿದ ಹೋರಾಟಕ್ಕಾಗಿ ಮಾಜಿ ಪ್ರಧಾನಿ ದಿ. ಬೆನಜೀರ್ ಭುಟ್ಟೊ ಅವರಿಗೆ ಪ್ರತಿಷ್ಠಿತ ತಿಪ್ಪೆರರಿ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು.

2008: ಮಲೇಷ್ಯಾದ ಸಂಸತ್ತಿಗೆ ಭಾರತೀಯ ಮೂಲದ 10 ಶಾಸಕರು ಹಾಗೂ ವಿರೋಧ ಪಕ್ಷದ ನಾಯಕರಾಗಿ ಮಹಿಳೆಯೊಬ್ಬರು ಆಯ್ಕೆಯಾಗಿ ಅತಿ ಹೆಚ್ಚು ಭಾರತೀಯರ ಆಯ್ಕೆಗೊಂಡ ಹೊಸ ಇತಿಹಾಸ ನಿರ್ಮಿಸಿದರು.

2008: ಭಾರತ ಹಾಕಿ ಫೆಡರೇಷನ್ ಅಧ್ಯಕ್ಷ ಕೆ.ಪಿ.ಎಸ್. ಗಿಲ್ ಅವರ ಹದಿನೈದು ವರ್ಷಗಳ ಆಳ್ವಿಕೆಯನ್ನು ಭಾರತೀಯ ಒಲಿಂಪಿಕ್ ಸಂಸ್ಥೆಯು ಅಂತ್ಯಗೊಳಿಸಿತು.

2008: ವೇಗಿ ಎಸ್. ಶ್ರೀಶಾಂತ್ ಅವರ ಕೆನ್ನೆಗೆ ಬಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಭಜನ್ ಸಿಂಗ್ ಅವರ ಮೇಲೆ ಇಂಡಿಯನ್ ಪ್ರೀಮಿಯರ್ ಲೀಗಿನಲ್ಲಿ 11 ಪಂದ್ಯಗಳನ್ನು ಆಡದಂತೆ ನಿಷೇಧ ಹೇರಲಾಯಿತು.

2008: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈದಿನ ಬೆಳಗ್ಗೆ ಆಕಾಶಕ್ಕೆ ಚಿಮ್ಮಿದ ಇಸ್ರೋದ ಪಿ ಎಸ್ ಎಲ್ ವಿ ರಾಕೆಟ್ಟು, ಒಂದೇ ಸಲಕ್ಕೆ 10 ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ಬಿಡುವ ಮೂಲಕ ಐತಿಹಾಸಿಕ ವಿಶ್ವ ದಾಖಲೆಯನ್ನು ನಿರ್ಮಿಸಿತು.

2009: “2011ರ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಗಳು ಭಾರತದಲ್ಲಿ ನಡೆಯಲಿವೆ” ಎಂದು ಐಸಿಸಿ ತಿಳಿಸಿತು. ಇದೇ ವೇಳೆ ಭದ್ರತೆಯ ಕಾರಣದಿಂದ ಪಾಕಿಸ್ಥಾನದಲ್ಲಿ ಪಂದ್ಯಗಳನ್ನು ನಡೆಸದಿರಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ, ಲಾಹೋರಿನಲ್ಲಿದ್ದ ಐ.ಸಿ.ಸಿ ಕಚೇರಿಯನ್ನು ಮುಚ್ಚಲು ತೀರ್ಮಾನಿಸಲಾಯಿತು.

2016: ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆಯ 7ನೆಯ ಮತ್ತು ಕೊನೆಯದಾದ ಐಆರ್ಎನ್ಎಸ್ಎಸ್-1ಜಿ ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

2016: ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕೆ ಏಕೈಕ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ಎನ್ಇಇಟಿ ನೀಟ್) ನಡೆಸಲು ಸುಪ್ರೀಂಕೋರ್ಟ್ ಮಾರ್ಗವನ್ನು ಮುಕ್ತಗೊಳಿಸಿತು. ಎಂಬಿಬಿಎಸ್, ಬಿಡಿಎಸ್ ಮತ್ತು ಸ್ನಾತಕೋತ್ತರ ಕೋರ್ಸ್ಗಳಿಗೆ ‘ನೀಟ್’ ಮೂಲಕ ಎರಡು ಹಂತಗಳಲ್ಲಿ ಪ್ರವೇಶ ಪರೀಕ್ಷೆ ನಡೆಸುವಂತೆ ಕೇಂದ್ರ ಮತ್ತು ಸಿಬಿಎಸ್ಇಗೆ ಸುಪ್ರೀಂ ಕೋರ್ಟ್ ಆದೇಶ ನೀಡಿತು.

ಪ್ರಮುಖಜನನ/ಮರಣ:

1838: ನೊಬೆಲ್ ಶಾಂತಿ ಪುರಸ್ಕೃತ ಡಚ್ ನ್ಯಾಯವಾದಿ ಮತ್ತು ವಿದ್ವಾಂಸ ಟೋಬಿಯಾಸ್ ಅಸ್ಸೆರ್ ಅವರು ನೆದರ್ಲ್ಯಾಂಡ್ಸ್’ನ ಆಮ್ಸ್ಟರ್ಡ್ಯಾಮ್ ನಗರದಲ್ಲಿ ಜನಿಸಿದರು. ಇವರು ಪ್ರಥಮ ಹೇಗ್ ಸಮಾವೇಶದಲ್ಲಿ ಶಾಶ್ವತವಾಗಿ ಸಮಾಲೋಚನೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ಕೋರ್ಟ್ ಸ್ಥಾಪಿಸಲು ಕಾರಣರಾದರು.

1924: ಜಾಂಬಿಯಾಗೆ ಸ್ವಾತಂತ್ರ್ಯ ತಂದುಕೊಟ್ಟ ಕೆನ್ನೆತ್ ಕೌಂಡಾ ಅವರು ಉತ್ತರ ರೋಡೇಶಿಯಾದ ಚಿನ್ಸಾಲಿ ಎಂಬಲ್ಲಿ ಜನಿಸಿದರು. 1961ರಲ್ಲಿ ಜಾಂಬಿಯಾಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಇವರು 1991ರವರೆಗೂ ಅಲ್ಲಿನ ಅಧ್ಯಕ್ಷರಾಗಿದ್ದರು.

1928: ಆಮೆರಿಕದ ಖಗೋಳ ಭೌತವಿಜ್ಞಾನಿ ಇ.ಎಂ. ಶೂಮೇಕರ್ ಅವರು ಲಾಸೆಂಜಲಿಸ್ ನಗರದಲ್ಲಿ ಜನಿಸಿದರು. ಇವರು ತಮ್ಮ ಪತ್ನಿ ಕರೋಲಿನ್ ಎಸ್. ಶೂಮೇಕರ್ ಮತ್ತು ಡೇವಿಡ್ ಹೆಚ್. ಲೆವಿ ಅವರುಗಳೊಂದಿಗೆ ಸೇರಿ ಧೂಮಕೇತುವನ್ನು ಅನ್ವೇಷಿಸಿದರು. ಅದನ್ನು ಕಾಮೆಟ್ ಶೂಮೇಕರ್-ಲೆವಿ 9 ಎಂದು ಹೆಸರಿಸಲಾಗಿದೆ.

1929: ವಿದುಷಿ ರಾಜಮ್ಮ ಕೇಶವಮೂರ್ತಿ ಅವರು ಚಿಕ್ಕಮಗಳೂರು ಜಿಲ್ಲೆಯ ಅಂಬಳೆ ಗ್ರಾಮದಲ್ಲಿ ಜನಿಸಿದರು. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.

1937: ಇರಾಕಿನ ಅಧ್ಯಕ್ಷರಾಗಿದ್ದ ಸದ್ದಾಂ ಹುಸೇನ್ ಅವರು ಇರಾಖಿನ ಅಲ್-ಅಜ್ವಾ ಎಂಬಲ್ಲಿ ಜನಿಸಿದರು.

1941: ಅಮೆರಿಕದ ರಸಾಯನ ಶಾಸ್ತ್ರಜ್ಞ ಕಾರ್ಲ್ ಬ್ಯಾರಿ ಶಾರ್ಪ್ಲೆಸ್ ಅವರು ಫಿಲೆಡೆಲ್ಫಿಯಾದಲ್ಲಿ ಜನಿಸಿದರು. ಸ್ಟೀರಿಯೋ ಸೆಲೆಕ್ಟಿವ್ ರಿಯಾಕ್ಷನ್ಸ್ ಕುರಿತಾದ ಸಂಶೋಧನೆಗಾಗಿ ಇವರಿಗೆ 2001 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತು.

1946: ಭಾಷಾವಿಜ್ಞಾನಿ, ಕೋಶವಿಜ್ಞಾನಿ, ಸಂಶೋಧಕ, ಜಾನಪದ ವಿದ್ವಾಂಸ, ಹರಿದಾಸ ಸಾಹಿತ್ಯ ಸಾಧಕರಾದ ಪ್ರೊ. ಎ.ವಿ. ನಾವಡ ಅವರು ಮಂಗಳೂರು ಸಮೀಪದ ಕೋಟೆಕಾರು ಎಂಬಲ್ಲಿ ಜನಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಜಾನಪದ ತಜ್ಞ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1954: ಫ್ರಾನ್ಸಿನ ಕಾರ್ಮಿಕ ನಾಯಕ ನೊಬೆಲ್ ಶಾಂತಿ ಪುರಸ್ಕೃತ ಲಿಯಾನ್ ಜೌಹಾಕ್ಸ್ ಅವರು ಪ್ಯಾಂಟಿನ್ ಎಂಬಲ್ಲಿ ಜನಿಸಿದರು.

1740: ಮರಾಠ ಸಾಮ್ರಾಜ್ಯದ ಪೇಶ್ವ ಅಥವಾ ಪ್ರಧಾನಮಂತ್ರಿಯಾಗಿದ್ದ ಬಾಜಿರಾವ್ ಅವರು ರಾವೆರ್ ಖೇಡಿ ಎಂಬಲ್ಲಿ ನಿಧನರಾದರು.

1998: ಭಾರತೀಯ ಕ್ರಿಕೆಟ್ ಆಟಗಾರರಾಗಿದ್ದ ರಮಾಕಾಂತ್ ದೇಸಾಯಿ ಅವರು ಮುಂಬೈನಲ್ಲಿ ನಿಧನರಾದರು.

1999: ಅಮೆರಿಕದ ಭೌತವಿಜ್ಞಾನಿ ಆರ್ಥರ್ ಲಿಯೋನಾರ್ಡ್ ಸ್ಕಾವ್ಲೋವ್ ಅವರು ಕ್ಯಾಲಿಫೋರ್ನಿಯಾದ ಪಾಲೋ ಆಲ್ಟೊ ಎಂಬಲ್ಲಿ ನಿಧನರಾದರು. ಲೇಸರ್ಸ್ ಕುರಿತಾದ ಮಹತ್ಕಾರ್ಯಕ್ಕಾಗಿ ಅವರಿಗೆ 1981 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

2016: ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್ ಅವರು ಬೆಂಗಳೂರಿನಲ್ಲಿ ನಿಧನರಾದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಭಾರತ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು.