Categories
e-ದಿನ

ಏಪ್ರಿಲ್-30

ಪ್ರಮುಖಘಟನಾವಳಿಗಳು:

1789: ನ್ಯೂಯಾರ್ಕ್ ನಗರದ, ವಾಲ್ ಸ್ಟ್ರೀಟ್ನಲ್ಲಿರುವ ಫೆಡರಲ್ ಸಭಾಂಗಣದಲ್ಲಿ ಜಾರ್ಜ್ ವಾಷಿಂಗ್ಟನ್ ಅವರು ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.

1885: ನ್ಯೂಯಾರ್ಕಿನ ಗವರ್ನರ್ ಆದ ಡೇವಿಡ್ ಬಿ ಹಿಲ್ ಅವರು ನ್ಯೂಯಾರ್ಕ್ ನಗರದ ಮೊಟ್ಟ ಮೊದಲ ಉದ್ಯಾನವನ ಉದ್ದೇಶಿತ ‘ನಯಾಗರ ರಿಸರ್ವೇಶನ್’ ಶಾಸನಕ್ಕೆ ಸಹಿ ಮಾಡಿದರು. ಈ ಶಾಸನವು ನಯಾಗರ ಜಲಪಾತವನ್ನು ಕೇವಲ ಕೈಗಾರಿಕೆ ಮತ್ತು ವಾಣಿಜ್ಯ ಉದ್ದೇಶಗಳಿಗೆ ಬಳಸುವುದನ್ನು ತಪ್ಪಿಸಿತು.

1897: ಲಂಡನ್ನಿನ ರಾಯಲ್ ಇನ್ಸ್ಟಿಟ್ಯೂಷನ್ನಿನಲ್ಲಿ ಜೆ.ಜೆ. ಥಾಮ್ಪನ್ ಅವರು ಸಬ್ ಆಟೋಮಿಕ್ ಪಾರ್ಟಿಕಲ್ ಭಾಗವಾದ ಎಲೆಕ್ಟ್ರಾನ್ ಸಂಶೋಧನೆಯನ್ನು ಘೋಷಿಸಿದರು. ಇದು ಪ್ರೋಟಾನಿಗಿಂತ 1800 ಪಟ್ಟು ಕಿರಿದಾದುದಾಗಿತ್ತು.

1925: ವಾಹನ ತಯಾರಿಕಾ ಸಂಸ್ಥೆಯಾದ ಡಾಡ್ಜ್ ಬ್ರದರ್ಸ್ ಇನ್ಕಾರ್ಪೋರೆಶನ್ ಅನ್ನು ದಿಲ್ಲಾನ್, ರೀಡ್ ಅಂಡ್ ಕಂಪೆನಿಗೆ 146 ಮಿಲ್ಲಿಯನ್ ಡಾಲರುಗಳಿಗೆ ಮತ್ತು 50 ಮಿಲಿಯನ್ ಡಾಲರ್ ಸಮಾಜಸೇವೆಗೆ ಎಂದು ಮಾರಲಾಯಿತು.
1938: ಕಾರ್ಟೂನ್ ಆನಿಮೇಶನ್ ಪಾತ್ರವಾದ “ಪೋರ್ಕಿ’ಸ್ ಹೇರ್” ಹಂಟ್ ಚಲಚಿತ್ರವಾಗಿ ಚಿತ್ರಮಂದಿರಗಳಿಗೆ ಬಂದು ‘ಹ್ಯಾಪಿ ರಾಬಿಟ್’ ಪರಿಚಿತಗೊಂಡಿತು
ಕಾರ್ಟೂನ್ ಆನಿಮೇಶನ್ ಪಾತ್ರವಾದ “ಪೋರ್ಕಿ’ಸ್ ಹೇರ್ ಹಂಟ್” ಚಲಚಿತ್ರವಾಗಿ ಚಿತ್ರಮಂದಿರಗಳಿಗೆ ಬಂದು ‘ಹ್ಯಾಪಿ ರಾಬಿಟ್’ ಪರಿಚಿತಗೊಂಡಿತು

1945: ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಮತ್ತು ಆತನ ಪತ್ನಿ ಇವಾ ಬ್ರೌನ್ ಬರ್ಲಿನ್ನಿನ ಚಾನ್ಸಲರಿ ಕಟ್ಟಡದ ತಳಭಾಗದ ಬಂಕರಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು.

1993: ಮಹಿಳಾ ಟೆನಿಸ್ ಪಟು ಮೋನಿಕಾ ಸೆಲೆಸ್ ಅವರಿಗೆ ಜರ್ಮನಿಯ ಹ್ಯಾಂಬರ್ಗಿನಲ್ಲಿ ಟೆನಿಸ್ ಪಂದ್ಯ ನಡೆಯುತ್ತಿದ್ದಾಗ ವ್ಯಕ್ತಿಯೊಬ್ಬ ಹಿಂದಿನಿಂದ ಚೂರಿ ಹಾಕಿದ. ಮೋನಿಕಾ ವಿರುದ್ಧ ಸೆಣಸುತ್ತಿದ್ದ ಸ್ಟೆಫಿ ಗ್ರಾಫ್ ಅಭಿಮಾನಿ ತಾನೆಂದು ಹೇಳಿಕೊಂಡ ಆ ವ್ಯಕ್ತಿಯನ್ನು ನಂತರ ದಂಡನೆಗೆ ಗುರಿಪಡಿಸಲಾಯಿತು.

1993: ವರ್ಲ್ಡ್ ವೈಡ್ ವೆಬ್ (www) ಪ್ರೋಟೋಕಾಲ್ ಅನ್ನು ಉಚಿತವಾಗಿ ಲಭ್ಯವೆಂದು ಸಿ ಇ ಆರ್ ಎನ್ (CERN) ಪ್ರಕಟಿಸಿತು.

1994: ಫಾರ್ಮ್ಯುಲಾ ಒನ್ ರೇಸಿಂಗ್ ಚಾಲಕರಾದ ರೋಲ್ಯಾಂಡ್ ರಟ್ಸೆನ್ ಬರ್ಗರ್ ಅವರು ಇಟಲಿಯ ಇಮೋಲಾ ಬಳಿಯಲ್ಲಿನ ಸ್ಯಾನ್ ಮರಿನೋ ಗ್ರಾಂಡ್ ಪ್ರಿಕ್ಸ್ ಅರ್ಹತಾ ಸುತ್ತಿನ ಪಂದ್ಯದ ಸಮಯದಲ್ಲಿ ಅಪಘಾತದಿಂದ ನಿಧನರಾದರು.

2007: ದೇಶದಲ್ಲಿ ಇದೇ ಪ್ರಪ್ರಥಮ ಬಾರಿಗೆ ಮಹಿಳಾ ನೌಕರರನ್ನು ರಾತ್ರಿ ವೇಳೆಯಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲು ರಾಜ್ಯ ಸರ್ಕಾರವು ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ- 1961ಕ್ಕೆ ತಿದ್ದುಪಡಿ ಮಾಡಿತು.

2009: ಕ್ರಿಸ್ಲರ್ ಸಂಸ್ಥೆಯು ಚಾಪ್ಟರ್ 11ರ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿತು.

2009: ಇಂಧನ ಕೊರತೆಯಿಂದ ಬಳಲುತ್ತಿರುವ ರಾಜ್ಯಕ್ಕೆ ಮಹಾರಾಷ್ಟ್ರದ 800 ಕಿ.ಮೀಗಳಷ್ಟು ದೂರದ ದಾಬೋಲ್‌ನಿಂದ ಕೊಳವೆ ಮಾರ್ಗದ ಮೂಲಕ ನೈಸರ್ಗಿಕ ಅನಿಲವನ್ನು ಪೂರೈಕೆ ಮಾಡುವ ಮಹತ್ವದ ಯೋಜನೆಗೆ ಅಂಕಿತ ಬಿದ್ದಿತು.

2012: ಬ್ರಹ್ಮಪುತ್ರ ನದಿಯಲ್ಲಿ ದೋಣಿ ಜನರಿಂದ ತುಂಬಿ ತುಳುಕಿದ್ದ ದೋಣಿ ಮುಳುಗಿ 103 ಜನ ಮೃತರಾದರು.

ಪ್ರಮುಖಜನನ/ಮರಣ:

1870: ಭಾರತೀಯ ಚಿತ್ರರಂಗದ ಪಿತಾಮಹರಾದ ದಾದಾ ಸಾಹೇಬ್ ಫಾಲ್ಕೆ ಅವರು ತ್ರಯಂಬಕೇಶ್ವರದಲ್ಲಿ ಜನಸಿದರು. ಪ್ರಸಿದ್ಧ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ಪದವೀಧರರಾದ ಇವರು 1913ರಲ್ಲಿ ತಯಾರಿಸಿದ ಭಾರತದ ಪ್ರಪ್ರಥಮ ಪೂರ್ಣಪ್ರಮಾಣದ ಚಿತ್ರ ‘ರಾಜಾ ಹರಿಶ್ಚಂದ್ರ’ ಸೇರಿದಂತೆ ತಮ್ಮ 19 ವರ್ಷಗಳ ಚಿತ್ರ ಜೀವನದಲ್ಲಿ 95 ಚಲನಚಿತ್ರಗಳನ್ನೂ ಮತ್ತು 26 ಕಿರುಚಿತ್ರಗಳನ್ನೂ ನಿರ್ಮಿಸಿದ್ದರು. ಭಾರತದಲ್ಲಿ ಶ್ರೇಷ್ಠ ಚಲನಚಿತ್ರರಂಗದ ಸೇವೆ ಮಾಡಿದವರಿಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

1901: ಬೆಲರೂಸಿಯನ್ – ಅಮೆರಿಕನ್ ಅರ್ಥಶಾಸ್ತ್ರಜ್ಞ ಮತ್ತು ಸಂಖ್ಯಾಶಾಸ್ತ್ರಜ್ಞರಾದ ಸೈಮನ್ ಕುಜ್ನೆಟ್ಸ್ ಅವರು ರಷ್ಯಾ ಸಾಮ್ರಾಜ್ಯಕ್ಕೆ ಸೇರಿದ್ದ ಪಿನ್ಸ್ಕ್ ಎಂಬಲ್ಲಿ ಜನಿಸಿದರು. ಇವರಿಗೆ 1971 ವರ್ಷದ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತು.

1921: ಜಿ.ಪಿ.ಎಸ್ ಸಹಸಂಶೋಧಕರಾದ ರೋಜರ್ ಎಲ್. ಈಸ್ಟನ್ ಅವರು ವೆರ್ಮಾಂಟಿನ ಕ್ರಾಫ್ತ್ಸ್ ಬರಿ ಎಂಬಲ್ಲಿ ಜನಿಸಿದರು.

1926: ಭಾರತೀಯ ಚಲನಚಿತ್ರ ಸಂಗೀತ ಸಂಯೋಜಕ / ನಿರ್ದೇಶಕ ಶ್ರೀನಿವಾಸ ಕಾಳೆ ಮುಂಬೈನಲ್ಲಿ ಜನಿಸಿದರು. ಪದ್ಮಭೂಷಣ, ಸುರಸಿಂಗಾರ್ ಗೌರವಗಳೂ ಒಳಗೊಂಡಂತೆ ಅವರಿಗೆ ಅನೇಕ ಗೌರವಗಳು ಸಂದಿದ್ದವು.

1927: ಭಾರತದ ಸುಪ್ರೀಂಕೋರ್ಟಿನ ಮೊಟ್ಟ ಮೊದಲ ಮಹಿಳಾ ನ್ಯಾಯಾಧೀಶರಾದ ಎಂ. ಫಾತಿಮಾ ಬೀವಿ ಅವರು ಟ್ರಾವಂಕೂರಿನ ಪಥಾನಮಿಥಿಟ್ಟ ಎಂಬಲ್ಲಿ ಜನಿಸಿದರು. ಅವರು ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.

1944: ಭರತನಾಟ್ಯ ಮತ್ತು ಒಡಿಸ್ಸಿ ನಾಟ್ಯಕಲೆಯ ಹಿರಿಯ ಕಲಾವಿದರಾದ ಸೋನಾಲ್ ಮಾನ್ಸಿಂಗ್ ಅವರು ಮುಂಬೈನಲ್ಲಿ ಜನಿಸಿದರು. ವಿಶ್ವದೆಲ್ಲೆಡೆ ಪ್ರಸಿದ್ಧರಾದ ಇವರಿಗೆ ಪದ್ಮಭೂಷಣ, ಪದ್ಮವಿಭೂಷಣ, ಕಾಳಿದಾಸ ಸಮ್ಮಾನ್, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1951: ಪ್ರಸಿದ್ಧ ಕತೆ, ಕಾದಂಬರಿಗಾರ್ತಿ ಸಿ. ಎನ್. ಮುಕ್ತಾ ಚಿತ್ರದುರ್ಗದಲ್ಲಿ ಜನಿಸಿದರು. ಇವರ ಅನೇಕ ಕೃತಿಗಳು ಚಲನಚಿತ್ರ ಮತ್ತು ದೂರದರ್ಶನದ ಧಾರಾವಾಹಿಗಳಾಗಿಯೂ ಜನಪ್ರಿಯಗೊಂಡಿವೆ. ಅತ್ತಿಮಬ್ಬೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.

1977: ಕರ್ನಾಟಕ ಸಂಗೀತದ ವಿದುಷಿ ಸುಧಾ ರಘುನಾಥನ್ ಅವರು ಬೆಂಗಳೂರಿನಲ್ಲಿ ಜನಿಸಿದರು. ಸಂಗೀತ ಕ್ಷೇತ್ರದ ಮಹಾನ್ ಸಾಧಕರಾದ ಡಾ. ಎಂ. ಎಲ್. ವಸಂತಕುಮಾರಿ ಅವರ ಶಿಷ್ಯೆಯಾದ ಇವರು ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿದ್ದು ತಮ್ಮ ಗುರುಗಳಂತೆಯೇ ಕನ್ನಡ ದಾಸ ಸಾಹಿತ್ಯವನ್ನೂ ಸಂಗೀತದಲ್ಲಿ ಹೆಚ್ಚು ಹೆಚ್ಚು ಪ್ರಸ್ತುತಪಡಿಸುತ್ತಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.

1987: ಪ್ರಸಿದ್ಧ ಭಾರತೀಯ ಕ್ರಿಕೆಟ್ ಪಟು ರೋಹಿತ್ ಶರ್ಮಾ ನಾಗಪುರದಲ್ಲಿ ಜನಿಸಿದರು.

2014: ಬಂಗಾಳದ ಪ್ರಸಿದ್ಧ ಕಲಾವಿದ ಮತ್ತು ರಂಗಕರ್ಮಿ ಖಾಲೆದ್ ಚೌಧುರಿ ಅವರು ತಮ್ಮ 94ನೆಯ ವಯಸ್ಸಿನಲ್ಲಿ ಕೋಲ್ಕತ್ತದಲ್ಲಿ ನಿಧನರಾದರು. ಪದ್ಮಭೂಷಣ, ಕಾಳಿದಾಸ ಸಮ್ಮಾನ್, ಸಂಗೀತ ನಾಟಕ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿದ್ದವು.

2016: ಇಂಗ್ಲಿಷ್ ರಸಾಯನ ಶಾಸ್ತ್ರಜ್ಞ ಹ್ಯಾರಿ ಕ್ರೋಟೋ ವಿಸ್ಬೆಕ್ ಎಂಬಲ್ಲಿ ನಿಧನರಾದರು. ‘ಫುಲ್ಲರೇನ್ಸ್’ ಕುರಿತಾದ ಸಂಶೋಧನೆಗಾಗಿ ಅವರಿಗೆ 1996 ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.