ಏರ್ ಇಂಡಿಯಾದ ಮೊದಲ ಅಂತರರಾಷ್ಟ್ರೀಯ ಯಾನದ ಸ್ಮರಣಾರ್ಥ ೧೯೪೮ರ ಮೇ ೨೯ರಂದು ಬಿಡುಗಡೆಯಾದ ೧೨ ಆಣೆ ಮುಖಬೆಲೆಯ ಅಂಚೆಚೀಟಿಯು ಹಲವು ರೀತಿಯಿಂದ ವಿಶಿಷ್ಠವಾದುದಾಗಿದೆ. ಮೊದಲ ಯಾನದಲ್ಲಿ [First Flight Air Mail] ಪಾಲ್ಗೊಂಡ ಪತ್ರಗಳಿಗೆ ಬಳಸುವ ಸಲುವಾಗಿ ಮಾತ್ರ ಈ ಅಂಚೆಚೀಟಿಯು ಬಿಡುಗಡೆಯಾಗಿತ್ತು. ನಂತರ ಇವುಗಳನ್ನು ಚಲಾವಣೆಯಿಂದ ಹಿಂಪಡೆಯಲಾಯಿತು. ಸಾಧಾರಣ ಅಂಚೆಗಾಗಿ ಇವುಗಳನ್ನು ಬಳಸಲಾಗಲಿಲ್ಲ. ಹೀಗಾಗಿ ಕೇವಲ ೫.೭ ಲಕ್ಷ ಅಂಚೆಚೀಟಿಗಳನ್ನು ಮುದ್ರಿಸಲಾಗಿತ್ತು. ಈ ಅಂಚೆಚೀಟಿಗಳ ಮಾರಾಟಕ್ಕಾಗಿ ವಿಶೇಷ ಏರ್ಪಾಡುಗಳನ್ನು ಮಾಡಲಾಗಿತ್ತು. ಅಹಮದಾಬಾದ, ಅಲಹಾಬಾದ, ಅಂಬಾಲಾ, ಅಮೃತಸರ, ಬೆಂಗಳೂರು, ಮುಂಬೈ, ಕೋಲಕತ್ತಾ, ಕಟಕ್, ಡಾರ್ಜಿಲಿಂಗ್, ಡೆಹರಾಡೂನ್, ದೆಹಲಿ, ಹೊಸದೆಹಲಿ, ಜಬಲಪುರ, ಕಾನಪುರ, ಲಖನೌ, ಚೆನ್ನೈ, ಮಧುರೈ, ಮೀರತ್, ಮಸ್ಸೂರಿ, ನಾಗಪುರ, ನೈನಿತಾಲ, ಪಾಟನಾ, ಪುಣೆ, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ, ವಿಶಾಖಾಪಟ್ಟಣಗಳಲ್ಲಿನ ಮುಖ್ಯ ಅಂಚೆಕಚೇರಿಗಳಲ್ಲಿ ಈ ಅಂಚೆಚೀಟಿಯ ಮಾರಾಟದ ಬಗ್ಗೆ ವಿಶೇಷ ಮಳಿಗೆಗಳನ್ನು ತೆರೆಯಲಾಗಿತ್ತು. ಹೊರ ಊರಿನ ಜನರಿಗೆ ಈ ಅಂಚೆಚೀಟಿಗಳು ಬೇಕಾಗಿದ್ದಲ್ಲಿ ೨೯-೦೫-೧೯೪೮ಕ್ಕೂ ಮುಂಚೆಯೇ ಅವರು ಈ ಮೇಲೆ ತಿಳಿಸಿದ ಯಾವುದಾದರೊಂದು ಕಡೆ ತಮ್ಮ ಬೇಡಿಕೆಗಳನ್ನು ನೋಂದಾಯಿಸಬೇಕಿತ್ತು. ಈ ಅಂಚೆಚೀಟಿಗಳ ಜೊತೆಗೆ ಮೊದಲಯಾನಕ್ಕೆ ವಿಶೇಷವಾಗಿ ಮುದ್ರಿಸಿದ ಲಕೋಟೆಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆಯಾಗಿತ್ತು. ಈ ಅಂಚೆಚೀಟಿಗಳನ್ನು ಅಂಟಿಸಿದ ಮೊದಲಯಾನದ ಲಕೋಟೆಗಳನ್ನು ಸಾಮಾನ್ಯ ಪತ್ರಗಳಂತೆ ಅಂಚೆಡಬ್ಬಗಳಲ್ಲಿ ಹಾಕುವಂತಿರಲಿಲ್ಲ. ಅವುಗಳನ್ನು ವಿಶೇಷ ಮಳಿಗೆಗಳಲ್ಲಿ ನಿಗದಿಪಡಿಸಿದ ವ್ಯಕ್ತಿಗಳಿಗೆ ವೈಯಕ್ತಿಕವಾಗಿ ನೀಡಬೇಕಿತ್ತು. ಅಲ್ಲಿಂದ ಅವುಗಳನ್ನು ಸಂಗ್ರಹಿಸಿ ಬೇರೆ ಲಕೋಟೆಗಳಲ್ಲಿ ಭದ್ರಪಡಿಸಿ ಮುಂಬೈನ ಮುಖ್ಯ ಅಂಚೆಕಚೇರಿಗೆ ಕಳಿಸುವ ಏರ್ಪಾಡು ಮಾಡಲಾಗಿತ್ತು. ಸಾದಾ ವಿರೂಪಣಾ ಮುದ್ರೆಗಳನ್ನು ಒತ್ತಿ ಈ ಅಂಚೆಚೀಟಿಗಳನ್ನು ರದ್ದುಪಡಿಸುವಂತಿರಲಿಲ್ಲ. ಈ ಬಗ್ಗೆ ಸ್ಪಷ್ಟ ನಿರ್ದೇಶನಗಳು ಜಾರಿಯಾಗಿದ್ದವು.

ತಾಂತ್ರಿಕ ಮಾಹಿತಿ – ಈ ಅಂಚೆಚೀಟಿಯು ೧೯೪೮ರ ಮೇ ೨೯ರಂದು ಬಿಡುಗಡೆಯಾಗಿದ್ದು ೧೨ಆಣೆ ಮುಖಬೆಲೆಯನ್ನು ಹೊಂದಿದೆ. ಆದರೆ ಇದನ್ನು ಅಧಿಕೃತವಾಗಿ ಉಪಯೋಗಿಸಿದ್ದು ೧೯೪೮ರ ಜೂನ ೮ರಂದು. ಮುಂಬೈನಿಂದ ಲಂಡನ್ನಿಗೆ ನಿಗದಿಯಾಗಿದ್ದ ಮೊದಲ ವಿಮಾನಯಾನದ ಹಾಗೂ ಅದೇ ತಿಂಗಳ ೧೧ರಂದು ಲಂಡನ್ನಿನಿಂದ ಮುಂಬೈಗೆ ಹಿಂತಿರುಗಲಿದ್ದ ವಿಮಾನದಲ್ಲಿ ಬರಲಿದ್ದ ಮೊದಲಯಾನದ ಅಂಚೆಗಾಗಿ ಮಾತ್ರ. ಈ ಅಂಚೆಚೀಟಿಯು 13.5 x 14 ಅಳತೆಯ ಸಾಲುರಂಧ್ರಗಳನ್ನು ಹೊಂದಿದೆ. ನಾಸಿಕದ ಭಾರತ ಪ್ರತಿಭೂತಿ ಮುದ್ರಣಾಲಯದಲ್ಲಿ [India Security Press] ಆಫ್-ಸೆಟ್ ಲಿಥೋ ತಂತ್ರಜ್ಞಾನದಲ್ಲಿ ಬಹುನಕ್ಷತ್ರ ಜಲಚಿಹ್ನೆಯುಳ್ಳ [Watermark]ಕಾಗದದ ಮೇಲೆ ಮುದ್ರಿತವಾಗಿದೆ. ೫ ಲಕ್ಷ ೭೦ ಸಾವಿರ ಅಂಚೆಚೀಟಿಗಳು ಹಾಳೆಗೆ ೧೬೦ರಂತೆ ಮುದ್ರಣಗೊಂಡಿವೆ. ಇದರ ವಿನ್ಯಾಸವನ್ನು ಶ್ರೀ ಟಿ ಐ ಅರ್ಚರ್ ಅವರು ನಿರ್ವಹಿಸಿದ್ದಾರೆ.

ಹಿನ್ನೆಲೆ ೧೯೪೮ರ ಜೂನ ತಿಂಗಳ ೮ನೇ ದಿನಾಂಕದ ಸಾಯಂಕಾಲ ಭಾರತದ ವಿಮಾನ “ಮಲಬಾರ್ ಪ್ರಿನ್ಸೆಸ್” ಮೊಟ್ಟಮೊದಲ ಬಾರಿಗೆ ಅಂತರರಾಷ್ಟ್ರೀಯ ಯಾನ ಮಾಡಿದ ಕೀರ್ತಿಗೆ ಪಾತ್ರವಾಯಿತು. ೪೦ ಆಸನಗಳನ್ನು ಹೊಂದಿದ್ದ ಈ ವಿಮಾನ ಲಾಕ್-ಹೀಡ್ ಎಲ್ ೭೪೯ [LOCKHEED L-749 CONSTELLATION]  ಮಾದರಿಯದ್ದಾಗಿತ್ತು. ಕ್ಯಾಪ್ಟನ್ ಕೆ ಆರ ಗುಜದಾರ್ ಎಂಬುವರು ಈ ವಿಮಾನದ ಚಾಲಕರಾಗಿದ್ದರು. ಈ ವಿಮಾನವು ೨೪ ಗಂಟೆಗಳಿಗೂ ಹೆಚ್ಚುಕಾಲ ಯಾನ ಮಾಡಿ ೫೦೦೦ ಮೈಲಿಗಳಷ್ಟು ದೂರ ಕ್ರಮಿಸಿ ಇಜಿಪ್ತ ದೇಶದ ಕೈರೋ ಹಾಗೂ ಸ್ವಿಟ್ಜರಲ್ಯಾಂಡ್ ದೇಶದ ಜಿನೇವಾ ಪಟ್ಟಣಗಳನ್ನು ಹಾದು ಲಂಡನ್ ನಗರವನ್ನು ತಲುಪಿತ್ತು.

ನ್ಯೂನ್ಯತೆಗಳು, ತೊಂದರೆಗಳು – ಮೊದಲನೆಯದಾಗಿ ಈ ಅಂಚೆಚೀಟಿಯ ಜೊತೆಗೆ ವಿಶೇಷವಾಗಿ ಮುದ್ರಿಸಿದ ಮೊದಲ ಯಾನದ ಲಕೋಟೆಗಳನ್ನು ಉಚಿತವಾಗಿ ನೀಡಲಾಗುವುದೆಂದು ಹೇಳಲಾಗಿದ್ದರೂ ಇವು ಎಲ್ಲ ಕಡೆಗೂ ಲಭ್ಯವಾಗಲಿಲ್ಲ ಎಂಬ ದೂರುಗಳು ಕೇಳಿಬಂದವು. ಇನ್ನೊಂದು ನ್ಯೂನ್ಯತೆಯೆಂದರೆ ಈ ಅಂಚೆಚೀಟಿಯ ಮುಖಬೆಲೆಯನ್ನು ೧೨ ಆಣೆಗೆ ನಿಗದಿ ಮಾಡಿದ್ದು. ಪ್ರಸಕ್ತ ವಿಮಾನದ ಮೊದಲಯಾನವು ಕೈರೋ, ಜಿನೇವಾ ಮಾರ್ಗವಾಗಿ ಲಂಡನ್ನಿಗೆ ನಿಗದಿಯಾಗಿತ್ತಷ್ಟೆ. ಮುಂಬೈನಿಂದ ಕೈರೋ ನಗರಕ್ಕೆ ಅಂಚೆಶುಲ್ಕ ೧೦ ಆಣೆ ಮತ್ತು ಜಿನೇವಾಕ್ಕೆ ೧೪ ಆಣೆ ಇತ್ತು. ಹೀಗಾಗಿ ಈ ಎರಡೂ ಊರುಗಳಿಗೆ ಪತ್ರಗಳನ್ನು ರವಾನಿಸುವವರು ೨ಆಣೆಗಳಷ್ಟು ಕಡಿಮೆ ಅಥವಾ ಹೆಚ್ಚಿಗೆ ನೀಡಬೇಕಾಗುತ್ತಿತ್ತು. ಆದರೆ ಅಂಚೆ ಇಲಾಖೆಯು ಈ ಬಗ್ಗೆ ತಕರಾರು ತೆಗೆಯಲಿಲ್ಲ ಮಾತ್ರವಲ್ಲ, ಹೆಚ್ಚಿನ ಶುಲ್ಕವನ್ನು ಕೇಳದೇ ಅಂಚೆಗಳ ಸಾಗಣೆಗೆ ವ್ಯವಸ್ಥೆ ಮಾಡಲಾಗಿತ್ತು.  ಮುಖ್ಯವಾದ ತೊಂದರೆ ಎದುರಾಗಿದ್ದು ಮೊದಲ ಯಾನದ ಮೂಲಕ ಕಳಿಸಲ್ಪಟ್ಟ ಪತ್ರಗಳು ಲಂಡನ್ ತಲುಪಿದಾಗ. ಇಲ್ಲಿನ ಅಂಚೆ ಇಲಾಖೆಯ ಮುಖ್ಯಸ್ಥರು [Post Master General] ಈ ಪತ್ರಗಳಿಗೆ ಸ್ವೀಕೃತಿಗಾಗಿ ವಿಶೇಷ ಮುದ್ರೆಯನ್ನು ಒತ್ತಲು ನಿರಾಕರಿಸಿಬಿಟ್ಟರು. ಇದಲ್ಲದೆ ೧೧-೦೬-೧೯೪೮ರಂದು ಲಂಡನ್ನಿನಿಂದ ಮುಂಬೈಗೆ ಹಿಂತಿರುಗಲಿದ್ದ ವಿಮಾನದಲ್ಲಿ ಅಲ್ಲಿಂದ ಬರುವ ಪತ್ರಗಳಿಗೂ ವಿಶೇಷ ಮುದ್ರೆಗಳನ್ನು ಒತ್ತಲು ನಿರಾಕರಿಸಿದರು.

ಪೂರಕ ಮಾಹಿತಿ – ೦೮-೦೬-೧೯೪೮ರಂದು ಮುಂಬೈನಿಂದ ಲಂಡನ್ನಿಗೆ ಅಂತರರಾಷ್ಟ್ರೀಯ ಯಾನ ಆರಂಭಿಸಿದ ಏರ್ ಇಂಡಿಯಾ ಇತಿಹಾಸವನ್ನೇ ನಿರ್ಮಿಸಿತು. ಅಂದಿನಿಂದ ೩೧-೧೨-೧೯೪೮ರ ಅವಧಿಯಲ್ಲಿ ಅದು ೪೦ ಪೂರ್ಣಪ್ರಮಾಣದ ಯಾನಗಳನ್ನು ಪೂರೈಸಿತು. [ಮುಂಬೈನಿಂದ ಲಂಡನ್ನಿಗೆ ಹೋಗಿ ಹಿಂತಿರುಗಿ ಮುಂಬೈಗೆ ಬಂದರೆ ಒಂದು ಪೂರ್ಣಯಾನ] ಸುಮಾರು ೪೧೧೦೦೦ ಮೈಲಿಗಳಷ್ಟು ಹಾರಾಟ ನಡೆಸಿ ೨೬೦೦ ಪ್ರಯಾಣಿಕರನ್ನೂ, ೮೧೧೭೦ ಪೌಂಡುಗಳಷ್ಟು ಅಂಚೆಯನ್ನೂ ೮೩೫೧೬ ಪೌಂಡುಗಳಷ್ಟು ಸರಕುಗಳ ಸಾಗಾಣಿಕೆಯನ್ನೂ ನಿರ್ವಹಿಸಿತು ಎಂದು ದಾಖಲೆಗಳು ತಿಳಿಸುತ್ತವೆ!!