ಸೂಚನೆ
|| ಅಧ್ವರಕೆ ಯಾದವರ ಗಡಣದಿಂ ದಾನವ ಕು |
ಲಧ್ವಂಸಿ ಹಸ್ತಿನಾವತಿಗೆ ಬಿಜಯಂಗೆಯ್ಯು |
ತಧ್ವರದೊಳ್ ತಾಗಿದನುಸಾಲ್ವನಂ ಗೆಲ್ದು ಪಾಂಡವರನುರೆ ಪಾಲಿಸಿದನು ||

ಭೂರಮಣಕೇಳನಿಲತನಯನಂ ಕೂಡಿಕೊಂ |
ಡಾರೋಗಿಸಿದಬಳಿಕ ನವಕುಸುಮಗಂಧ ಕ |
ರ್ಪೂರ ತಾಂಬೂಲಮಂ ಕೊಟ್ಟು ಕೃತವರ್ಮಣಂ ಕರೆಸಿ ಧರ್ಮಜನ ಮಖಕೆ ||
ವಾರಣನಗರಿಗೀಗ ನಮ್ಮೊಡನೆ ನಡೆತರಲಿ |
ದ್ವಾರಕೆಯೊಳಿರ್ದ ಜನರೆಲ್ಲರುಂ ಪೊಯ್ಸು ಗೂ |
ಡಾರಮಂ ಪೊರಗೆ ಸಾರಿಸು ಪುರದೊಳೆಂದು ಮಧುಸೂದನಂ ನೇಮಿಸಿದನು ||೧||

ವಸುದೇವ ಹಲಧರರ್ ಪೊಳಲಿನಲ್ಲಿರ್ದು ಪಾ |
ಲಿಸಲುಳಿದ ಪ್ರದ್ಯುಮ್ನ ಗದ ಸಾಂಬನನಿರುದ್ಧ |
ನಿಶಠ ಶಠನಕ್ರೂರ ಸಾತ್ಯಕಿ ಪ್ರಮುಖ ಯಾದವರೆಮ್ಮ ಕೂಡೆ ಬರಲಿ ||
ಒಸಗೆ ಮಿಗೆ ದೇವಕಿಯೊಡನೆ ತೆರಳರಸಿಯರ್ |
ಪೊಸೆತೆನಿಪ ವಸ್ತುವಂ ತೆಗೆಸು ಭಂಡಾರದಿಂ |
ದೆಸೆವ ಪುರಜನ ಸ್ತ್ರೀಯರೈದಲೆಂದಸುರಾರಿ ನೇಮಿಸಿದನು ||೨||

ಬಳಿಕ ಕೃತವರ್ಮಕನ ನೇಮದಿಂ ನಗರದೊಳ್ |
ಮೊಳಗಿದುವು ನಿಸ್ಸಾಳಕೋಟಿಗಳ್ ಪೊರಮಟ್ಟು |
ದುಳಿಯದೆ ಸಮಸ್ತ ಜನಮೈದಿದುವು ದೇವಕಿ ಯಶೋದೆಯರ ದಂಡಿಗೆಗಳು ||
ಕೆಳದಿಯರ್ವೆರಸಿ ರುಕ್ಮಿಣಿ ಸತ್ಯಭಾಮಾದಿ |
ಲಲನೆಯರ ಪಲ್ಲಕ್ಕಿಗಳ ಸಾಲ್ಗಳಂದು ಕೆಲ |
ಬಲದ ಸುಯ್ದಾನದಿಂ ತೆರಳಿದುವು ಕೋಶದ ಸುವಸ್ತುಗಳನೆತ್ತಿಸಿದರು ||೪||

ಸುತ ಸೋದರ ಜ್ಞಾತಿ ಮಿತ್ರ ಬಾಂಧವ ಪುರೋ |
ಹಿತರೊಡನೆ ಪೊರಮಟ್ಟನಸುರಾಂತಕಂ ಸಮಾ |
ವೃತವಟುಗಳಿಂದೆ ಸನ್ನಿಹಿತಶಾಸ್ತ್ರಂಗಳಿಂ ದ್ವಿಜರಾಯುಧಂಗಳಿಂದೆ ||
ಚತುರಂಗ ಬಲದಿಂದೆ ಭೂಭುಜರ್ ದ್ರವ್ಯದಿಂ |
ದತುಳ ಸಂಭಾರದಿಂ ವೈಶ್ಯರೈದಿತು ಶೂದ್ರ |
ವಿತತಿ ನಾಣಾಜಾತಿಗಳ ನೆರವಿಯಿಂ ತಮ್ಮ ತಮ್ಮ ವಿನಿಯೋಗದಿಂದೆ ||೪||

ಒಟ್ಟೆಗಳ ವೇಸರದ ಪೊರೆಯಾಳ ಕಂಬಿಗಳ |
ಕೊಟ್ಟಿಗೆಯ ಕೊಲ್ಲಾರಬಂಡಿಗಳ ಮೇಲೆ ಸರ |
ಕಿಟ್ಟಣಿಸಿ ನೂಕಿದುದು ಗೋಮಹಿಷಿಕುಲದ ಕೀಲಾರ ಬಿಡದೆಯ್ದಿತೊಡನೆ ||
ದಟ್ಟಿಸಿದುವಾನೆ ಕುದುರೆಯ ರಥದ ಸೆನೆ ಪೊರ |
ಮಟ್ಟುದಂದಣದ ಪಲ್ಲಕ್ಕಿಗಳ ರಾಜಿ ಸಾ |
ಲಿಟ್ಟು ನಡೆದುವು ಛತ್ರಚಾಮರ ಪತಾಕೆಗಳ್ ತೆರಳಿತು ಜನಂ ಮುದದೊಳು ||೫||

ವಿಟರ ಮೇಳಂಗಳಿಂ ಚೇಟಿಯರ ಗಡಣದಿಂ |
ನಟ ವಿದೂಷಕ ವಂದಿ ಗಾಯಕರ ತಂಡದಿಂ |
ಕಟಕಿಧ್ವನಿ ವ್ಯಂಗ್ಯ ಸರಸೋಕ್ತಿಗಳ ಬೆಡಗು ಬಯಲನಗೆ ನೋಟಂಗಳ ||
ನಟನೆಗಳ ನಡೆಯ ಭಂಗಿಯ ಬರಿಯ ಬೇಟದತಿ |
ಕುಟಿಲಾಂಗದೊಲವುಗಳ ವಾರನಾರೀಜನಂ |
ಕಟಕದೊಳ್ ಕಾಮುಕರ ನಡೆಗೆಡಿಸುತೊಗ್ಗಿನಿಂ ಪೊರಮಟ್ಟು ಬರುತಿರ್ದುದು ||೬||

ನಾಗಪತಿಗಸದಳಂ ಕಮಠಂಗರಿದು ದಿಶಾ |
ನಾಗತತಿಗಳಮಲ್ಲ ಧರಿಸಲರಿದೆಂಬಂತೆ |
ನಾ ಗಣಿಸಲರಿಯೆನಿದು ಪೊಸತೆನಲ್ ಪಣಹ ನಿಸ್ಸಾಳ ಕಹಳಾರವದೊಳು ||
ಸಾಗರದ ಮಧೃದಿಂದೆದ್ದುದೋ ಮತ್ತೊಂದು |
ಸಾಗರಂ ಪೇಳೆನಲ್ಕಖಿಳ ಯಾದವಕಟಕ |
ಸಾಗರಂ ದ್ವಾರಕಾನಗರಮಂ ಪೊರಮಟ್ಟು ನಡೆಗೊಂಡುದೇವೇಳ್ವೆನು ||೭||

ಕಳಿಪುತೈತಂದ ವಸುದೇವ ಬಲಭದ್ರರಂ |
ಬಳಿಕ ವಂದಿಸಿ ಪರಕೆಗೊಂಡು ಸಂತೈಸಿ ನಿಜ |
ನಿಳಯರಕ್ಷೆಗೆ ನಿಲಿಸಿ ಭೀಮನಂ ಬೀಳ್ಕೊಳಿಸಿ ಸಿತ ಹಯಾರೂಢನಾಗಿ ||
ಉಳಿದ ಯಾದವರೆಲ್ಲರಂ ಕೂಡಿಕೊಂಡು ಮುಂ |
ದಳೆದು ಮಧುಸೂದನಂ ಮಧ್ಯಮಾರ್ಗದೊಳೊಂದು |
ಕೊಳನಿರಲ್ಕಲ್ಲಿ ಬೀಂಬಿಡಿಸಿ ನಸುನಗುತೆ ರುಕ್ಮಿಣಯೊಳಿಂತೆಂದನು ||೮||

ರಾಜಮುಖಿ ನೋಡೀ ಸರೋವರದ ಪದ್ಮಿನಿಗೆ |
ರಾಜಹಂಸಕ್ರೀಡೆ ಪುನ್ನಾಗಕೇಳಿ ವಿ |
ಭ್ರಾಜಿತಮಧುಗೋಷ್ಠಿ ಸಂದಪುದು ರವಿಗೆ ತಾನರಸಿಯಾದಪಳದೆಂತೋ ||
ಸ್ತ್ರಿಜನಕೆ ಸಹಜಮಿದು ಮೇಲೆ ಕರ್ದಮಜಾತೆ |
ಮಾಜುವಳೆದೆಯೊಳಿರ್ದ ಕೃಷ್ಣತೆಯನಿದು ಜಗಕೆ |
ಸೋಜಿಗವೆ ಚಂಚಲೆಯಲಾ ಪತಿಯನೆಣಿಸುವಳೆ ಪೇಳೆಂದೊಡಿಂತೆಮದಳು ||೯||

ದೇವ ನೀ ಪದ್ಮಿನಿಗೆ ಪಳಿವನಾರೋಪಿಸುವು |
ದಾವ ಸಮ್ಮತಿ ರಾಜಹಂಸ ಪುನ್ನಾಗ ಮಧು |
ಪಾವಳಿಯನೋವಲಾಗದೆ ಮಾತೆ ಮಕ್ಕಳಗೂಡಿರ್ದೊಡೇಂ ಧರೆಯೊಳು ||
ಜೀವನಂ ನಿಂದೊಡಾದುದು ಪಂಕಮಿಲ್ಲಿ ತಾ |
ನಾವಿರ್ಭವಿಸಿದೊಡೇಂ ಕೃಷ್ಣಹೃದಯಕೆ ದೋಷ |
ಮಾವುದಾಣ್ಮಂಗೆ ನಡುನಡುಗಿದೊಡೆ ಚಂಚಲೆಯೆ ನಾವರಿಯೆವಿದನೆಂದಳು ||೧೦||

ಪುರುಷನೊರ್ವಂಗೆ ನಾರಿಯರುಂಟು ಪಲಬರೀ |
ಧರೆಯೊಳಂಗನೆಗೆ ಪತಿಯೊರ್ವನೇ ಗತಿಯೆಂಬ |
ಪರಿವಿಡಿಯ ನರುಹಿಸುವೊಡಾವಿರ‍್ವರಲ್ಲದೊರ್ವರುಮಿಲ್ಲಮಿನ್ನು ಬರಿದೆ ||
ಸರಸಿಯೊಳಗಣ ಪದ್ಮಿನಿಯನೆ ದೂಷಿಸಬೇಡ |
ಪರಮಪಾವನೆಯೆಂದು ಶಿವನುತ್ತಮಾಂಗದೊಳ್ |
ಧರಿಸಿದನೆನಲ್ ಪತಿವ್ರತೆಯಲ್ಲದಿಹಳೆ ಪೇಲೆಂದು ರುಕ್ಮಿಣಿ ನುಡಿದಳು ||೧೧||

ನರಕಂತ ಕೇಳ್ ಬಳಿಕ ರುಕ್ಮಿಣಿಯ ಮಾತಿಂಗೆ |
ನರಕಾಂತಕಂ ಮೆಚ್ಚಿ ನಸುನಗುತೆ ನಿಂದು ವಾ |
ನರಕಾಂತಕೇತನಾಗ್ರಜನೊಳ್ ಸರಸವಾಡುತೊಲವಿಂದೆ ಪಾಳೆಯವನು ||
ಸರದ ಸುತ್ತಣ ತೀರದೊಳ್ ಬಿಡಿಸಿ ಸುಭಟಪ್ರ |
ಸರದ ಸುಯ್ದಾನದಿಂದರ್ದನೆಂದು ಪರಿವಾ |
ಸರದ ಸೂರ್ಯೋದಯದೊಳಲ್ಲಿಂದೆ ಯಾದವರ ವಂಡು ನಡೆದುದು ಪಥದೊಳು ||೧೨||

ಆ ಮಾಧವಂ ಪಯಣಗತಿಯಿಂದೆ ಗಜಪುರದ |
ಸೀಮೆಗೈತಂದು ಗಮಗಾನದಿಯ ತೀರದೊಳ್ |
ಭೀಮನಂ ಸುಯ್ದಾನಕಿರಿಸಿ ಯಾದವಕಟಸಾಗರವನಲ್ಲಿ ಬಿಡಿಸಿ ||
ಭೂವಿಶ ದರ್ಶನೋತ್ಸವಕೆ ಬಿಜಯಂಗೈದೆ |
ನಾ ಮಧ್ಯಮಾರ್ಗದೊಳ್ ಕಂಡುದು ಮಹಾಜನಂ |
ತಾಮರಸನೇತ್ರಂ ತಮತಮಗೆ ನುತಿಸಿದರ್ ನಿಗಮಾಗಮೋಕ್ತಿಯಿಂದೆ ||೧೩||

ಶ್ರುತಿ ಧರ್ಮಶಾಸ್ತ್ರಾಗಮ ಸ್ಮ*ತಿ ವಿಚಾರದಿಂ |
ಗತಿಗೆಟ್ಟು ಬ್ರಹ್ಮಹತ್ಯಾದಿಪಾತಕಕೆ ನೀ |
ಪ್ಕೃತಿ ತವಸ್ಮರಣಮಾತ್ರದೊಳಪ್ಪುದೆಂದೊಡಾಶ್ರಮನಾಲ್ಕರೊಳ್ ಮಾಡಿದ ||
ವ್ರತ ದಾನ ಜಪ ತಪಸ್ಸ್ವಾಧ್ಯಾಯ ಪೂಜೆ ಸ |
ತ್ಕ್ರತು ಸಮಾಧಿಗಳೆಮಗೆ ನಿನ್ನ ನೀಕ್ಷಿಸಲನು |
ಷ್ಠಿತಮಾದುವೆಂಬುದೇಂ ನುತಿಯೆ ನಿನಗೆಂದು ಹರಿಯಂ ಪೊಗಳ್ದರಾ ಪಾರ್ವರು ||೧೪||

ಕಾಣಿಕೆಯನಿತ್ತೆರಗಿ ಕಂಡುದು ಸಕಲಜನ |
ಶ್ರೇಣಿ ತಮತಮಗೆ ಮುಗಿದೆತ್ತಿದರ್ ನೊಸಲೆಡೆಗೆ |
ಪಾಣಿಗಳನಾ ಪಥದೊಳೊರ್ವ ನರ್ತಕಿ ಬಂದು ನಾನಾಪ್ರಕಾರದಿಂದೆ ||
ವೇಣು ವೀಣಾದಿ ಸಂಗೀತ ವಾದ್ಯಶ್ರುತಿಯ |
ಕೇಣಿಗೊಂಡುರುಪು ತಿರುಪಭಿನವಕಳಾ ಸಪ್ರ |
ಮಾಣದ ಸುನೃತ್ತದಿಂ ಮೆಚ್ಚಿಸಿದಳಚ್ಯುತನನಚ್ಚರಿಯರಚ್ಚರಿಯೆನೆ ||೧೫||

ನಾಗನಗರಿಯನಗಧರಂ ಪೊಕ್ಕು ಬರುತಿರ್ದ |
ನಾಗ ನಗರಿಪು ಮುಖ್ಯರೈದೆ ಸಾಸಿರಪಡೆಯ |
ನಾಗನ ಗರೀಯಾಂಗತಲ್ಪದವನಿವನೆಂದು ಗಗನದೊಳ್ ಕೈವಾರಿಸೆ ||
ಬಾಗಿಲಂ ಸಾರ್ದು ತಮತಮಗೆ ಕಾಮಿನಿಯರಿಂ |
ಬಾಗಿ ಲಂಬಿಸುವಲರ‍್ಮುಡಿಗಳ ಶಿರಂಗಳಿಂ |
ಬಾಗಿ ಲಕ್ಷ್ಮೀಪತಿಗೆ ವಂದಿಸಿದರೊಲವಿಂದೆ ರಾಜಮಾರ್ಗಾತರದೊಳು ||೧೬||

ರಾಜಮಾರ್ಗದ ಕೆಲಬಲದ ಗೋಪುರದೊಳಿರ್ದ |
ರಾಜವದನೆಯರಗರು ಚಂದನ ಸುಧೂಪ ನೀ |
ರಾಜನ ಫಲಾಳಿ ತಾಂಬೂಲ ಬಹಿವಿಧ ಕುಸುಮ ಲಾಜ ದೂರ್ವಾಕ್ಷತೆಗಳ ||
ರಾಜಿಗಳನಳವಡಿಸೆ ಮಣಿತೋರಣಪ್ರಭೆ ವಿ |
ರಾಜಿಸುವ ಧರ್ಮಸುತನರಮನೆಯ ಬಾಗಿಲ್ಗೆ |
ರಾಜೀವಲೋಚನಂ ಬರೆ ಕೇಳ್ದು ಭೂವರನಿದಿರ್ಗೊಂಡನುತ್ಸವದೊಳು ||೧೭||

ಧರ್ಮಸುತನಂ ಕಂಡು ನಗುತೆ ಮುರರಿಪು ಹೇಮ |
ನಿರ್ಮಿತವರೂಥದಿಂದಿಳಿದು ನೃಪವರನಡಿಗೆ |
ನಿರ್ಮಲಕಿರೀಟಮಂ ಚಾಚುತಿರೆ ತೊಲಗಿ ಹರಿಯಂಘ್ರಿಗರಸಂ ನಮಿಸಲು ||
ಪೆರ್ಮೆಯಿಂ ತೆಗೆದು ಬಿಗಿಯಪ್ಪಲವನೀಶ್ವರಂ |
ನಿರ್ಮಾಯನಂ ಮಗುಳೆ ತಕ್ಕೈಸಲಾಗಳಮ |
ರರ್ಮಹೀಪಾಲಕನ ಪೂರ್ವಕೃತಪುಣ್ಯಮಂ ಬಣ್ಣಿಸಿದರಂಬರದೊಳು ||೧೮||

ತದನಂತರದೊಳಾ ಮುರಾತಕಂ ಧೃತರಾಷ್ಟ್ರ |
ವಿದುರ ಕೃಪ ಗಾಂಧಾರಿ ಕುಂತಿಯರ್ಗಭಿನಮಿಸಿ |
ಮುದದಿಂದೆ ನರ ನಕುಲ ಸಹದೇವ ವೃಷಕೇತು ಯೌವನಾಶ್ವಾದಿಗಳನು ||
ಪದಕಮಲಕೆಗರಿದೊಡೆ ತೆಗೆದು ತಕ್ಕೆಯಸಿ ದ್ರೌ |
ಪದಿ ಸುಭದ್ರೆಯರನೊಲವಿಂದೆ ಕಾಣಿಸಿಕೊಂಡು |
ಪದುಳಮಂ ಕೇಳ್ದು ಸುಖಗೋಷ್ಠಿಯಿಂ ಕುಳ್ಳಿರ್ದ ಬಳಿಕ ನೃಪನಿಂತೆಂದನು ||೧೯||

ದೇವ ದೇವಕೀವಿ ಮೊದಲಾದವರ್ಗೆ ವಸು
ದೇವ ಹಲಧರ ಮನ್ಮಥಾದಿಗಳ್ಗಖಿಳರಾ |
ಣೀವಾಸಕೈದೆ ಪದುಳಮೆ ಭೀಮಸೇನನೇಗೈದನಾರುಂ ಬಾರದೆ ||
ನೀವೆ ಚಿತ್ತೈಸಿದಿರಿದೇನೆನೆ ಸಮಸ್ತಪ್ರ |
ಜಾವಿಭವದಿಂದೆ ಮಾರುತಿಸಹಿತ ಬಂದು ಗಂ |
ಗಾವರನದೀತೀರದೊಳ್ ಬಿಟ್ಟುದೆಮ್ಮಕಟಕಂ ನೋಳ್ತೊಡೇಳೆಂದನು ||೨೦||

ಎಂದು ಹರಿ ನುಡಿಯಲರ್ಜುನನ ಮೊಗನೋಡಿ ನಾ |
ವಿಂದು ಧನ್ಯರ್ ಭಕ್ತರೆಡೆಗೀ ದಯಾರ್ಣವಂ |
ಬಂದುದಚ್ಚರಿಯಲಾ ಬಾಂಧವರ ದರ್ಶನಂ ನಮಗೆ ಕೌತುಕಮಪ್ಪುದು ||
ಮಂದಿಯಂ ಕರೆಸು ನಡೆ ನಗರಿ ಗುಡಿತೋರಣಗ |
ಳಿಂದೆ ಮೆರೆಯಲಿ ಬರಲಿ ಸಿಂಗರದ ಬಾಲಕಿಯ |
ರಂದಣಗಳಂ ಪಿಡಿಯಲರಸಿಯರ್ ಪೊರಮಡಲಿ ಜನಮೆಂದು ನೃಪನೆದ್ದನು ||೨೧||

ಬಳಿಕ ನೃಪನಾಜ್ಞೆಯಿಂದಾ ಹಸ್ತಿನಾವತಿಯ |
ಪೊಳಲನುರೆ ಸಿಂಗರಿಸೆ ಮೊಳಗಿದುದು ಕೂಡೆ ಮಂ |
ಗಳವಾದ್ಯಸಂಕುಲಂ ನೆರೆದುದು ಸಕಲಪೌರಜನಮಲಂಕಾರದಿಂದೆ ||
ಪೊಳೆವ ಮಣಿಭೂಷಣದ ಪೆಣ್ಗಳಿಟ್ಟಣಿಸಿದರ್ |
ತಳತಂತ್ರ ಮೈದೆ ಸಂದಣಿಸಿದುದು ಪಾಠಕರ |
ಕಳಕಳದ ನೃತ್ತಗೀತಂಗಳ ವಿಲಾಸದಿಂದಿರ್ಗೊಳಲ್ ಪೊರಮಟ್ಟರು ||೨೨||

ಉತ್ಸವದೊಳಧ್ವರಹಯಂ ಮುಂದೆ ನಡೆಯೇ ಭೀ |
ಭತ್ಸು ಮೊದಲಾದನುಜರೆಡದೊಳಡಿಯಿಡೆ ಭಕ್ತ |
ವತ್ಸಲಂ ಬಲದ ಭಾಗದಿ ಬರಲ್ ಪಿಂತೆ ಮುನಿನಿಕರಮೈತರೆ ಮುದದೊಳು ||
ಸತ್ಸಿಕತಮಯ ವಿರಾಜಿತ ವಿಮಲ ನಿರ್ಜರ ಸ |
ರಿತ್ಸವಿಪದೊಳೆಸವ ಯಾದವರ ಪಾಳೆಯವ  |
ನುತ್ಸುಕದೊಳವನೀಶ್ವರಂ ಸಾರ್ದನಂಬುಧಿಯನಂಭೋದಿ ಬೆರೆಸಿದಂತೆ ||೨೩||

ದೇವಕಿ ಯಶೋದೆ ರೋಹಿಣಿಯರ್ಗೆ ಪಾಂಡವರ್ |
ಭೂವರಾರ್ಜುನ ಕುಂತಿಯರ್ಗಖಿಳಯಾದವರ್ |
ಭಾವಿಸಿದರುಳಿದವರ್ಗಾಲಿಂಗನೆಗಲಾದವನ್ಯೋನ್ಯಮವರವರ್ಗೆ ||
ಆ ವಾಯುಜಂ ಕಂಡನರಸನಂ ರುಕ್ಮಿಣೀ |
ದೇವಿ ಮೊದಲಾದರಂ ದ್ರೌಪದಿಸುಭದ್ರೆಯರ್ |
ತಾವಪ್ಪಿದರ್ ಪ್ರಭಾವತಿ ಹರಿದು ರಾಣಿಯರ್ಗೆರಗಿ ಕಾಣಿಕೆಗೊಟ್ಟಳು ||೨೪||

ಮೂಡುವೆಳನಗೆಗೂಡಿ ದ್ರುಪದನಂದನೆಯ ಮೊಗ |
ನೋಡಿ ನೀನೆ ಚದುರೆ ಲೋಕದೊಳ್ ಕೃಷ್ಣನಂ |
ಷೋಡಶ ಸಹಸ್ರ ನಾರಿಯರೈದಲರಿಯರಾತನನೊಲಿಸಿಕೊಂಡೆ ನಿನ್ನ ||
ಗಾಡಿಗಿದು ಪೊಸತೆ ಗಂಡರನೈವರಂ ಮರುಳು |
ಮಾಡುವ ಮಹಾಪತವ್ರತೆ ನಿನ್ನೊಳಾವು ಮಾ |
ತಾಡಲಂಜುವೆವೆಂದು ಸತ್ಯಭಾಮಾದೇವಿ ನುಡಿಯಲವಳಿಂತೆಂದಳು ||೨೫||

ಕಾರುಣ್ಯನಿಧಿಯನಾನೊಲಿಸಿಕೊಳದಿರ್ದೊಡೆ ವಿ |
ಚಾರಿಸುವರುಂಟೆ ಎನ್ನಭಿಮಾನಹಾನಿಯಂ |
ಕೌರವನ ಸಭೆಯೊಳುಳಿದವರಿರ್ದೊಡೇನಾಯ್ತು ಕೃಷ್ಣನಂ ಪಾಲಿಸಿದನು |
ಪಾರಿಜಾತದ ನೋಂಪಿಗೆಂದು ನಿಜರಮಣನಂ |
ನಾರದಮುನಿಗೆ ಕೊಟ್ಟಬಳಿಕೊಡೆಯರುಂಟೆ ನಿನ |
ಗೀರುಕ್ಮಿಣೀಧವನನಾಥರ್ಗೆ ನಾಥನೆಂಬುದಸು ಪುಸಿಯೆ ಪೇಳೆಂದಳು ||೨೬||

ಎಂದು ದ್ರೌಪದಿ ನುಡಿದ ಮಾತು ಮುಗಿವನಿದೊಳ್ |
ಮಂದಿಯಂ ಕಡೆಗೆ ತೊಲಗಿಸಿ ಯಜ್ಞತುರಗಮಂ |
ತಂದು ನಿಲ್ಲಿಸಿದರಲ್ಲಿ ಹರಿ ನಿರೂಪಿಸಲರಸನಾಜ್ಞೆಯಿಂದಾ ಕ್ಷಣದೊಳು ||
ಇಂದೀವರಾಕ್ಷಿಯರ್ ನೋಡಿದರ್ ಕೌತುಕುಮಿ |
ದೆಂದು ವಸ್ತ್ರಾಭರಣ ಪುಷ್ಪ ಗಂಧಾಕ್ಷತೆಗ |
ಳಿಂದೆ ಪೂಜಿಸುತಿರ್ದರಶ್ವಮಂ ಭೂಪ ಕೇಳ್ ಮೇಲಾದ ಸಂಗತಿಯನು ||೨೭||

ಆ ಸಮಯದೊಳ್ ಸಾಲ್ವನನುಜನನುಸಾಲ್ವನೀ |
ವಾಸುದೇವನ ಪೂರ್ವವೈರಕಲ್ಲಿಗೆ ಬಂದು |
ಮೋಸದೊಳ್ ತಾಗಿ ತತ್ತುರಗಮಂ ಪಿಡಿದೆತ್ತಿದೊಂಡೊಯ್ದು ಕಟ್ಟಿ ಬಳಿಕ ||
ಅಸುತ್ತುವಳಯದೊಳ್ ಪರ್ದ್ದಿನಾಕಾರಕೆ ಮ |
ಹಾಸೇನೆಯಂ ನಿಲಿಸಿ ತಾನದರ ಮುಖದೊಳ್ ಶ |
ರಾಸನದೊಳಂಬನೇರಿಸಿ ನಿಂದು ನುಡಿದಂ ಸುಧಾರನೆಂಬಾಪ್ತನೊಡನೆ ||೨೮||

ಅಣ್ಣನಂ ಕೊಂದೆಮ್ಮ ಸೌಭನಗರವನಿರಿದ |
ಬೆಣ್ಣೆಗಳ್ಳನ ಕೊಬ್ಬಿದುದರದೊಳ್ ಪೊಚ್ಚಪೊಸ |
ಸುಣ್ಣಮಂ ಪುಯ್ದು ನೀರೆರೆದಂತೆ ಮಾಡಿ ಯಾದವಪಾಂಡವರ ಬಿಂಕದ ||
ಬಣ್ಣಮಂ ಕೆಡಿಸಿ ಕಾಳಗದೊಳಯಬ್ಬಸಮನುರೆ |
ಹಣ್ಣಿದಲ್ಲದೆ ಮಾಣಿನಹುತರ್ಗೆ ಪಗೆಯೆನ್ನ |
ಕಣ್ಣಮುಂದೇಂ ಸುಳಿದು ಜೀವಿಪನೆ ಸೇನೆ ಸನ್ನದ್ಧಮಾಗಿರಲೆಂದನು ||೨೯||

ಇಂದು ತುರಗಾಹಿಯಂ ಬಂದಿರಿಯದವನೆನಗೆ |
ಸಂದ ಪಗೆ ಗೊವಳೆಯರುಪನಾಯಕನ ರಣಕೆ |
ನಿಂದು ಕಾದುವನಾಪ್ತನನಿತರೊಳ್ ಸಂದೇಹಮಿಲ್ಲ ಪರಿವಾರದೊಳಗೆ ||
ಹಿಂದಣಪರಾಧಮಂ ಮುಂದಣ ದ್ರೋಹಂಗ |
ಳೊಂದುಮಂ ನೋಡೆ ನೂರುಂಬಳಿ ಗಜಾಶ್ವ ಗೋ |
ವೃಂದ ಧನ ಯಿವತಿಯರ್ ಮೊದಲಾದ ಸಕಲವಸ್ತುಗಳನಿತ್ತಪೆನೆಂದನು||೩೦||

ಸೊಕ್ಕಿದನುಸಾಲ್ವನೀತೆರದಿಂದೆ ತನ್ನ ಪಡೆ |
ಗಿಕ್ಕಿದೀ ಸೆಲವಂ ಸುಧಾರನೆಂಬಾ ಸಚಿವ |
ನಕ್ಕರಿಂದಖಿಳ ಸೇನಾವಳಯದೊಳ್ ಸಾರಿಸಲ್ ಪ್ರಳಯ ಮೇಘಂಗಳ ||
ಕಕ್ಕಸದ ಸಿಡಲ ಗರ್ಜನೆಗಳಂ ಕಲ್ಪಾಂತ |
ಕುಕ್ಕುವಬ್ಧಿಗಳ ಪೆರ್ದೆರೆಗಳ ಸುಘೋಷಮಂ |
ಮಿಕ್ಕುವು ಸಮಸ್ತ ವಾದ್ಯ ಧ್ವನಿಗಳತಿಬಲರ ಬೊಬ್ಬೆಯಬ್ಬರದ ಕೂಡೆ ||೩೧||

ಇತ್ತಲಡಹಾಯ್ದು ಮೋಸದೊಳಾ ತುರಂಗಮವ |
ನತ್ತಲನುಸಾಲ್ವನೆಳೆದುಯ್ದು ಭರಕಬಲೆಯರ |
ಮೊತ್ತಮಗಲಕೆ ಚೆಲ್ಲಿತಂಜಿದರ್ ಮುನಿಗಳೆಲ್ಲಾ ಜನಂ ತಲ್ಲಣಿಸಿತು ||
ಚಿತ್ತದೊಳ್ ನೃಪನೆಣಿಕೆಗೊಳುತಿರ್ದನುಳಿದವರಿ |
ದೆತ್ತಣದ್ಭುತವೆಂದು ಬೆರಗಾದರಸುರಹರ |
ನುತ್ತಮಾಂಗವನೊಲೆಯುತಂದು ವಹಮಾನದಿಂ ಪಟುಭಟರ್ಗಿತೆಂದನು ||೩೨||

ಈತನನುಸಾಲ್ವನೆಂಬಾತನಿವನಣ್ಣ ನಂ |
ಘಾತಿಸಿದೆವಂದದರ ಖಾತಿಗೆಮ್ಮೊಡನೆ ಸ |
ತ್ವಾತಿಶಯಮಂ ತೋರುವಾತುರದೊಳತಿಬಲವ್ರಾತಮಂ ಕೂಡಿಕೊಂಡು ||
ಭೀತಿಯಿಲ್ಲದೆ ಪರಮಹೀತಳಕೆ ಬಂದು ನ |
ವಿತುರಗಮಂ ಪಿಡಿದನೇತರಪರಾಕ್ರಮದ |
ಮಾತು ನಮಗಿನ್ನು ಮಝಪುತು ದಾನವಯೆನುತೆ ಪೀತಾಂಬರಂ ಪೊಗಳ್ದನು ||೩೩||

ಆರೀತನಂ ಗೆಲ್ಬು ಕುದುರೆಯಂ ಬಿಡಿಸಿ ತಹ |
ವೀರರೀ ಪಟುಭಟರೊಳವರ್ಗಿದೆಕೊ ವೀಳೆಯಂ |
ಪೂರೈಸುವಡೆ ಪಿಡಿಯಲೆಂದು ಹರಿ ನುಡಿಯಲತಿಬಲರಂಜಿ ಸುಮ್ಮನಿರಲು ||
ಚಾರುಹಯಮಂ ತಂದು ಕುಡುವೆನಲ್ಲದೊಡೆ ವೃಷ |
ಳೀರಮಣುಗ್ರಗತಿಗಿಳಿವೆನೆಂದಸುರಸಂ |
ಹಾರನಡಿಗೆರಗಿ ತಾಂಬೂಲಮಂ ಪ್ರದ್ಯುಮ್ನನಾಂತು ಕಳುಹಿಸಿಕೊಂಡನು ||೩೪||

ಬಳಿಕ ವೃಷಕೇತು ಗರುಡಧ್ವಜನ ಮೃದುಪದಯ |
ಗಳಕೆರಗಿ ದೇವ ಚಿತ್ತೈಸಾದೊಡಿನ್ನು ಕೊಳು |
ಗುಳದೊಳನುಸಾಲ್ವನೆಂದೆಂಬ ಖಳನಂ ಪಿಡಿದು ನಿಮ್ಮಂಘ್ರಿಗೊಪ್ಪಿಸದೊಡೆ ||
ಮುಳಿದು ವಿಪ್ರನ ವಧೆಗೆಳಸಿದವನ ಗತಿಗೆ ತಾ |
ನಿಳಿವೆನೆನ್ನಂ ಕಳುಹಬೇಕೆಂದು ಕೈಮುಗಿಯೆ |
ನಳಿನಾಕ್ಷನಾತನಂ ತೆಗೆದು ತಕ್ಕೈಸಿ ವೀಳೆಯವಿತ್ತು ಬೀಳ್ಕೊಟ್ಟನು ||೩೫||

ಸದ್ಯೋಗಿಜಯದ ವಿನಧ್ವಜವನಳವಡಿಸಿ |
ವಿದ್ಯುತ್ಪ್ರಚಾರಮಂ ಗೆಲ್ವ ಹಯಮಂ ಪೂಡಿ |
ಖದ್ಯೋತಬಿಂಬಮಂ ಮಣಿಖಚಿತ ಕಾಂಚನಮಯ ಪ್ರಭೆಗಳಿಂದೆ ನಗುವ ||
ಉದ್ಯದ್ಪರೂಥಮಂ ಜೋಡಿಸಿ ಮಹಾಸಮರ |
ಕುದ್ಯುಕ್ತನಾಗಿ ಸಾರಥಿ ತಂದು ನಿಲಿಸಲಾ |
ಪ್ರದ್ಯುಮ್ನನಡರ್ದು ನಿಜಚಾಪಮಂ ಜೇಗೈದು ಬಂದನಾಹವಕೆ ನಲಿದ ||೩೬||

ಕಂಡನನುಸಾಲ್ವನಿವನಾರೀಗ ರಣಕೆ ಮುಂ |
ಕೊಂಡು ಬಹ ವೀರನಸುರಾರಿಯಾದೊಡೆ ಕೇತು |
ದಂಡದಗ್ರದೊಳಿರದು ಮತ್ಸ್ಯವಿವನವನ ಸುತನಾಗಬೇಕಿಲ್ಲಿ ಬರಲಿ ||
ದಿಂಡುಗೆಡುಪುವೆನೆನುತೆ  ಸೇನೆಯಂ ಪಿಂದಿಕ್ಕಿ |
ಪುಂಡರೀಕಾಕ್ಷನ ಕುಮಾರನಂ ತಡೆಯೆ ಕೋ |
ದಂಡದೊಳ್ ಪ್ರದ್ಯುಮ್ನನೈದುಕಣೆಯಂ ಪೂಡಿ ದೈತ್ಯನಂ ತೆಗೆದೆಚ್ಚನು ||೩೭||

ವ್ಯಗ್ರವೇತಕೆ ನಿನಗೆ ನಾವಿಂದ್ರಿಯಂಗಳಂ |
ನಿಗ್ರಹಿಸಿದವರಲ್ಲ ವಿರಹವೆಮಗಿಲ್ಲ ಸುರ |
ತಗ್ರಾಹ್ಯ ಮೋಹನದ ಪಂಚಬಾಣಪ್ರಯೋಗಂಗಲೇಕೀಗ ನಿನ್ನ ||
ವಿಗ್ರಹಕೆ ನಮಗಿಕ್ಷುಚಾಪವಾರಡಿವೆದೆ ಸ |
ಮಗ್ರಕುಸುಮಾಸ್ತ್ರಂಗಳಿಲ್ಲ ನೋಡೆಮ್ಮದೊಂ |
ದುಗ್ರಸಾಯಕವನೆಂದಾರ್ದು ತೆಗೆದೆಚ್ಚಸಾಲ್ವನಚ್ಚಯುತನ ಸುತನ ||೩೮||

ಪೃಥಿವಿಪತಿ ಕೇಳೆದೆಯಮೇಲೆ ಕೋಲ್ ಕೀಲಿಸಲ್ |
ವ್ಯಥಿಸಿ ಮೈಮರೆದನಾ ಪ್ರದ್ಯುಮ್ನಮೊಡವೆ ಸಾ |
ರಥಿ ಕೃಷ್ಣನಿದ್ದೆಡೆಗೆ ತೇರನಾಗಳೆ ಕೊಂಡು ಬರೆ ಶೌರಿ ಕಂಡು ಬಳಿಕ ||
ಪೃಥುಲಪೌರುಷದಿಂದೆ ನಮ್ಮ ಸುತನಿಂದು ರಿಪು |
ಮಥನಮಂ ಮಾಡಿ ಬಳಲಿದನೆನುತೆ ಬಂದೆಲವೋ |
ಶಿಥಿಲಪೌರುಷ ನಿನ್ನನೇಗೆಯ್ಯಲೆಂದು ಹರಿಯೊದೆದನೆಡಗಾಲ್ದುದಿಯೊಳು ||೩೯||

ದ್ವಾರಕೆಯನೆಂತಬಲೆಯರ ಮುಂದೆ ಪುಗುವೆ ಪೋ |
ಗಾರಣ್ಯಕೆನಲಲ್ಲಿ ಮುನಿಗಳ್ಗೆ ಸೇರೆ ಕೆ |
ಟ್ಟಾರೂರ ಸಾರ್ದೊಡಂ ನೀಂ ವಿರಹಿತನು ವಿಷಮನೆಂದೊರ್ವರುಂ ಕೂಡರು ||
ಆರಿನ್ನು ಗತಿ ನಿನಗೆ ಸಂಬಂಧಿ ಬಾಣನಂ |
ಹಾರೈಸುವೊಡೆ ನಿನ್ನ ಬೇರ‍್ಗೊಲೆಗೆ ಶಿವನಿಪ್ಪ |
ಕಾರಣವನಂಗತ್ವಮೇ ಪ್ರಾಪ್ತಮೆಂದು ಹರಿ ಸುತನಂ ಜರೆದನು ||೪೦||

ಕಾಲ್ದುದಿಯೊಳೊದೆಯಲ್ಕೆ ನಿನ್ನ ಮಗನೀತಂಗೆ |
ಸೋಲ್ದಪನೆ ಸಾಕಿನ್ನು ಕರ್ಣನ ಕುಮಾರಂಗೆ |
ಮೇಲ್ದಳವನಟ್ಟೆಂದು ಮಾರುತಿ ನುಡಿಯೆ ಶೌರಿ ಪೋಗು ನೀನಾದೊಡೆನಲು ||
ಸೋಲ್ದು ದಿನ್ನಾಹವಂ ತನಗೆಂಬ ಹರ್ಷದಿಂ |
ನಾಲ್ದೆ ಸೆಗಳದಿರೆ ಬೊಬ್ಬಿರಿದಾರ್ದು ಬಿಲ್ವೆದೆಗೆ |
ಕೋಲ್ದುಡಿಸಿ ತೆಗೆದಿಸುತ ರಿಪುಚಾತುರಂಗಮಂ ತಾಗಿದಂ ಪವನಸೂನು ||೪೧||

ಆ ಭೀಮನುರವಣಿಸೆ ಕಂಡು ವೃಷಕೇತು ನಗು |
ತೀ ಭೂಮಿಗಿಂದು ಪೊಸತಾದುದೆಲೆ ತಾತ ಬಾ |
ಲಾಭಿಲಾಷೆಯ ಫಲಕೆಳಸುವರೆ ತನಗೆ ವಿಸಲೀ ಸಮರಮಿದಕೆ ||
ಲೋಭದಿಂ ನೀಂ ಬರ್ಪುದುಚಿತವೇ ಪೇಳೆನಲ್ |
ಶೋಭಿಸುವ ಪಣ್ವಿಡಿದು ತಂದೆ ಸವಿಸದೊಡೆ ತಾ |
ನೇ ಭುಂಜಿಪನೆ ಪಸುಳೆ ನಿನಗೆ ರಣದನುದೋರಬಂದೆನೆಂದಂ ಮಾರುತಿ ||೪೨||

ನಸುನಗುತೆ ವೃಷಕೇತು ಬಳಿಕ ಕಾರ್ಮುಕವನನೊದ |
ರಿಸುತೆ ರಿಪುಸೈನ್ಯಮಂ ತಾಗಿದಂ ವಿರ್ದು ಗ |
ರ್ಜಿಸಿ ವನಾಂತರಕೆ ಸಿಡಿಲೆರಗಿದಂತಿದಿರಾಂತ ಭಟರ ಗೋಣ್ಗಳನರಿಯಲು ||
ಮಸಗಿ ಚಿಮ್ಮುವ ರಕ್ತಧಾರೆಗಳ್ ಕೂಡೆ ಕ |
ಣ್ಗೆಸೆದುವಲ್ಲಿಯ ಕಿಚ್ಚಿನಂತೊಡನೆ ಮುಸುಕಿತೆ |
ಣ್ದೆಸೆಯನಿಸುವಂಬು ಬಿರುವಳೆಯಂತೆ ಹೊನಲಾಯ್ತು ರುಧಿರಂ ಪ್ರವಾಹದಂತೆ ||೪೩||

ಝಷಕೇತನಂ ತನಗೆ ಸೋಲ್ದು ಹಿಮ್ಮೆಟ್ಟಿದಂ |
ವೃಷಭಾಂಕಿತಧ್ವಜಸ್ತಂಭದವನಾರಿವಂ |
ವಿಷಮಗೋಪಾಲನಲ್ಲೆನುತೆ ಕಡುಗೋಪದಿಂದಸಾಲ್ವನಿವನ ಮೇಲೆ ||
ಇಪುವೃಷ್ಟಿಯಂ ಕರೆಯಲಾ ಕರ್ಣಸಂಭವಂ |
ವೃಷೆಯಲ್ಲದೆನ್ನೊಡನೆ ತೋರಿಸಾ ನಿನ್ನ ಪೌ |
ರುಷವನೆಂದೆನುತವಂ ಮುಸುಕಿದಂ ಪೊಸಮಸೆಯ ವಿಶಿಖದೊಳವನ ರಥವನು ||೪೪||

ಉಚ್ಚಳಿಸಿ ಹಾಯ್ದುವಂಬುಗಳವನ ಕಾಯದಿಂ |
ದೆಚರಿಲ್ಲದೆ ನಿಮಿಷಮಿರ್ದು ಚೇತರಿಸಿ ಕೊಂ |
ಡೆಚ್ಚನನುಸಾಲ್ವನೀ ಕರ್ಣಜನ ವಕ್ಷಸ್ಸ್ಥಲವನೊಂದು ಬಾಣದಿಂದೆ ||
ಅಚ್ಚಪೂರಾಯ ಗಾಯದೊಳೆ ಮೈಮರೆದು ಕ |
ಣ್ಮುಚ್ಚುತೆ ವರೂಥದೊಳ್ ಮಲಗಲ್ಕೆ ಕಂಡು ಖತಿ |
ವೆಚ್ಚಿ ಪವಮಾನಜಂ ಬಂದವನ ತೇರನಪ್ಪಳಿಸಿದಂ ಬಲ್ಗದೆಯೊಳು ||೪೫||

ಮುಗ್ಗಿದುದು ಕುದುರೆ ಸಾರಥಿ ಮಡಿದನಾ ರಥಂ |
ನೆಗ್ಗಿದುದು ಚಿಗಿನನುಸಾಲ್ವನಾತನ ಬಲಂ |
ಮುಗ್ಗಿದುದು ಸಂದಣಿಸಿ ಪವಜನ ಮೇಲೆ ಶಸ್ತ್ರಾಸ್ತ್ರಪ್ರಯೋಗದಿಂದೆ ||
ತಗ್ಗಿದುದು ದಿಗ್ದಂತಿ ಭೋಗಿರಾಜನ ಕೊರಲ್ |
ಕುಗ್ಗಿದುದು ಧರಣಿತಲಮಿಬ್ಭಾಗಮಾಗಿ ಸಲೆ |
ಹಿಗ್ಗಿದುದು ಪೋಗೆನಲ್ ಪೊಯ್ದನುರುಗದೆಯಿಂದೆ ಪರಸೈನ್ಯಮಂ ಭೀಮನು ||೪೬||

ಕಾದಿ ದಂದುಗವಡದ ಮುನ್ನವೇ ತನ್ನಳವಿ |
ಗೈದಿದಂಕದ ಭಟರ ತೇರ್ಗಳಂ ತೆಗೆದಿಳೆಗೆ |
ಮೋದದಿಂ ಕೊಂದನಡಗೆಡಹಿದಂ ಸದೆದನೊದೆದಂ ಪಿಡಿದು ಸುಂಡಿಲ್ಗಳ ||
ಸೇದಿ ದಂತಿಗಳ ನೀಡಾಡಿದಂ ರುದಿರದಿಂ |
ನಾದಿದಂ ಧರೆಯನುಸಿಗಾಳಿಯಿಂದಂ ಪಾರ |
ಲೂದಿದಂ ರಣದೊಳ್ ಪೆಣದ ರಾಶಿಮಾಡಿದಂ ಪರಬಲದೊಳಾ ಭೀಮನು ||೪೭||

ಮೆಟ್ಟಿದಂ ಮಡದೊಳಿಟ್ಟೊರಸಿ ಕಾಳಾಳ್ಗಳಂ |
ಘಟ್ಟಿಸಿದನುರುಬುವ ಹಯಂಗಳಂ ನಭೆಕೆ ತೆಗೆ |
ದಿಟ್ಟನಾನೆಗಳನಪ್ಪಳಿಸಿದಂ ತೇರ್ಗಳಂ ಧುರದೊಳನಿಲಜನ ಕೂಡೆ ||
ಮುಟ್ಟಿ ಕಾದುವುರುಂಟೆ ಸೇನೆ ನಿಮಿಷಾರ್ಧದೊಳ್ |
ಬಟ್ಟಬಯಲಾಯ್ತು ಪೊಸರಥದೊಳೈತಂದಳವಿ |
ಗೊಟ್ಟನನುಸಾಲ್ವನಂಬುಗಳ ಮಳೆಯಂ ಕರೆಯುತಾ ವೃಕೋದರನ ಮೇಲೆ ||೪೮||

ಸಾಲ್ವಾನುಜಂ ಪೂಣ್ದೆಸಲ್ಕೆ ಯಮದಂಡಮಂ |
ಪೋಲ್ವಗದೆಯಂ ಕೊಂಡು ಮತ್ತೆ ಮಾರುತಸುತಂ |
ಮೇಲ್ವಾಯ್ದು ಬರಲೊಂದುಬಾಣಮಂ ಕಿವಿವರೆಗೆ ತೆಗೆದೆಚ್ಚು ಬೊಬ್ಬಿರಿಯಲು ||
ಕೋಲ್ವಕ್ಷದೊಳ್ ನಾಂಟಿತಳವಳಿದು ಪವನಜಂ |
ತೇಲ್ವನಿತರೊಳ್ ಕಂಡು ದೈತ್ಯನುಳಿದದಟರ್ಗೆ |
ಸೋಲ್ವನಲ್ಲೆಂದಚ್ಯುತಂ ತಾನೆ ಕೋಪದಿಂದಾಹವಕೆ ನಡೆತಂದನು ||೪೯||

ದರ್ಪದಿಂ ಕುದುರೆಯ ಕೊಂಡುಬಹೆನೆಂದು ಕಂ |
ದರ್ಪನೊಂದೆಸೆಯೊಳುರವಣಿಸಿದಂ ಕೂಡೆ ನಡೆ |
ದರ್ಪರಬಲಕೆ ಸಾಂಬ ಕೃತವರ್ಮ ಗದ ಸಾತ್ಯಕಿ ಪ್ರಮುಖ ಯದುವಿರರು ||
ಸರ್ಪವೈರಿಧ್ವಜನ ರಥಮೈದೆ ಕಂಡು ನೇ |
ಸರ್ಪಲವನಡಗಿಸುವ ಚಕ್ರದಿಂ ದೈತ್ಯರ ಪೆ |
ಸರ್ಪರೆಯದಂತೆ ಮಾಡುವ ಕೃಷ್ಣನಿವನೆಂದರಿದು ಮೊರೆದನನುಸಾಲ್ವನು ||೫೦||

ಪೊಳೆವಮಿಂಚುಗಳೈಸೆ ತೇಜಿಗಳಿವಲ್ಲ ಬ |
ಲ್ಮೊಳಗುಗಳಿವೈಸೆ ರಥಚಕ್ರಧ್ವನಿಗಳಲ್ಲ |
ತೊಳಗುವಮರೇಂದ್ರ ಕಾರ್ಮುಕಮೈಸೆ ಪಿಡಿದಿರ್ದ ಶಾರ್ಙ್ಗಧನುವಲ್ಲ ಬೀಳ್ವ ||
ಮಳೆವನಿಗಳೈಸೆ ಕೂರಂಬುಗಳಿವಲ್ಲ ಕ |
ಣ್ಗೊಳಿಪ ಕಾರ್ಮುಗಿಲೈಸೆ ಕೃಷ್ಣನಲ್ಲೆಂಬವೋಲ್ |
ಕೊಳಗುಳಕೆ ಮೈದೋರೆ ಕಂಡು ಕಲಿಸಿಂಹದಂತಿದಿರಾದನನುಸಾಲ್ವನು ||೫೧||

ವ್ಯಗ್ರದಿಂದೈದುವ ಮುರಾರಿಯಂ ಕಂಡು ತ |
ನ್ನಗ್ರಜನನಂದು ಕೊಂದಾ ಪಗೆವನೀತನಂ |
ನಿಗ್ರಹಿಪೆನೆಂದು ಕಣೆನಾಲ್ಕರಿಂದಚ್ಯುತನ ಹಯಚತುಷ್ಟಯವನಿಸಲು ||
ಉಗ್ರಶರಘಾತಿಗವು ಸೂತನಂ ಕೈಕೊಳದೆ |
ವಿಗ್ರಹವನುಳಿದೊಂದು ಕಡೆಗೆ ಹಾಯ್ದುವು ಯದುಕು |
ಲಾಗ್ರಣಿಯನಿದಿರೆ ಕಾಣದೆ ನೊಂದು ತನ್ನವರ್ಗನುಸಾಲ್ವನಿಂತೆಂದನು ||೫೨||

ನವೆದಪುದೊ ಪರಿವಾರವಿಧನಮಂ ಧನಮಂ ತರಿಸ  |
ಲವಿಚಾರದಿಂ ಪ್ರಜೆಗಳಸಿದರೋ ದೇಶದೊಳ್ |
ತವಕ ಮಿಗೆ ನಾರಿಯರ್ ಪತಿಗಳಿರಲನ್ಯರೊಳ್ ಮೆರೆದಪರೊ ಮತ್ಕೋಶಕೆ ||
ತವೆ ಪುತ್ರರೊಲ್ಲದಳಿದವರೊಡನೆ ಸಾರ್ದಪುದೊ |
ಬವರಕೈತಮದ ರಿಪು ಕೃಷ್ಣನಂ ಕಾಣದಿಹ |
ಪವಣಾವುದಕಟ ಪೊಸತಿದು ತನ್ನ ಹಗೆ ಹರಿಯದೆಂದು ಚಿಂತಿಸುತಿರ್ದನು ||೫೩||

ಆನ್ನೆಗಂ ಕುದುರೆಗಳನುಪಚರಿಸಿ ಸಾರಥಿಗೆ |
ಸನ್ನೆಗೈದನುಸಾಲ್ವನಭಿಮುಖಕೆ ಮುರಹರಂ |
ಕೆನ್ನೆಗೇರಿಸಿ ಚಾಪದೊಳ್ ಪೂಡಿದಂಬನಾರ್ದಿಸುತೆ ಬರಲವನತ್ತಲು ||
ಪನ್ನಗಾರಿಧ್ವಜಂ ಮಗುಳೈತರಲ್ ಕಂಡು |
ತನ್ನೊಳ್ ಪೊಣರ್ವ ಭರದಿಂ ಬಂದು ಸಮರದೊಳ್ |
ಗನ್ನಗತಕವನೆಸಗಲೇನಹುದು ಮಾರಾಮತು ನೋಡೆನುತೆ ತೆಗೆದೆಚ್ಚನು ||೫೪||

ಸಂಜನಿಸುವೆಳನಗೆಯೊಳಗಧರಂ ಮಾರಾಂಪೊ |
ಡಂಜುವೆವು ನಿಮಗೆ ಸಂಗ್ರಾಮದೊಳ್ ದಾನವರ್ |
ಭಂಜನೆಗಲಸಿದೊಡಂ ಬಿಡದಲಾ ನಮಗೆನುತೆ ತೆಗೆದಿಸಲದಂ ಸೈರಿಸಿ ||
ಶಿಂಜಿನಿಯೊಳೊಂದು ಸರಳಂ ಪೂಡಿ ಬರೆಸೆಳೆದು |
ರಂಜಿಪ ವಿಶಾಲವಕ್ಷಸ್ಥಳವನೆಚ್ಚನಂ |
ದಂಜನಾದ್ರಿಯಮೇಲೆ ಸಿಡಿಲೆರಗಿದಂತಾಗೆ ದನುಜಾರಿ ಮೈಮರೆದನು ||೫೫||

ಪಾಥೋರುಹಾಕ್ಷನಂ ದಾರುಕಂ ನಿಟ್ಟಿಸಿ ವ |
ರೂಥಮಂ ತಿರುಗಿಸದನಖಿಳ ಯಾದವರ ವರ |
ಯೂಥಮದು ಮಸಗಿತು ಭಯಂಗೊಂಡು ಪುರಜನದ ನೆರವಿ ಪೆರ್ಬಾಗಿಲ್ಗಳ ||
ವೀಥಿಗಳೊಳಿಟ್ಟಣಿಸಿ ಪಟ್ಟಣಕೆ ಸರಿಯೆ ವಧೂ |
ನಾಥನಿರ್ದಲ್ಲಿ ಬೆರಗಾಗೆ ನಿಂದಂ ವಧೂ |
ಯೂಥಮಸುರಾರಿಯಂ ಬಳಸಿತರೊಳ್ ಸತ್ಯಭಾಮೆ ನಗುತಿಂತೆಂದಳು ||೫೬||

ದಾನವಂಗಿದಿರಾಗಿ ಪೋಗಿ ರಣದೊಳ್ ಪ್ರಾಣ |
ದಾನಂ ಪಡೆದು ಮರಳಿದ ನಿನ್ನ ಸತ್ವದ ನಿ |
ದಾನವಂ ತಿಳಿದಹಿತರೇಗೆಯ್ಯರಕಟ ನಿಜಶೌರ್ಯದಿಂ ಪ್ರದ್ಯುಮ್ನನ ||
ಮಾನವಂ ಭಂಗಿಸಿದೆ ನಿನ್ನಂ ಜಗದೊಳಾವ |
ಮಾನವಂ ಬಣ್ಣಿಸುವನಿನ್ನು ನಿನ್ನದಟಿಗೆ ಸ |
ಮಾನರಂ ಕಾಣೆನೆಂದಳ್ ಸತ್ಯಭಾಮೆ ನಗುತುರೆ ಜರೆದು ನಿಜಪತಿಯನು ||೫೭||

ಕಂದೆರೆದು ವಲ್ಲಭೆಯ ನುಡಿಗೆ ಲಜ್ಜಿಸಿ ಮನಂ |
ಕಂದೆ ಕಣ್ಣಾಲಿಗಳ್ ಕೆಂಪಡರೆ ಖತಿ ಮಿಗ |
ಲ್ಕಂದೆಡಬಲಂಗಳಂ ನೋಡಿ ಹರಿ ಮತ್ತೆ ರಣಕನುವಾಗುತಿರಲಿತ್ತಲು ||
ನಿಂದು ವೃಷಕೇತುವನುಸಾಲ್ವನಂ ತಡೆದು ನೀ |
ನಿಂದು ಮುರವೈರಿಯುಂ ತೆರಳಿಚಿದೆ ವೀರ ಎ |
ನ್ನಿಂದುಳಿದೆಯಾದೊಡಾಂ ಕರ್ಣಜನೆ ನಿಲ್ಲೆನುತೆ ತೆಗೆದೆಚ್ಚು ಬೊಬ್ಬಿರಿದನು ||೫೮||

ಹೆಂಗುಸಂ ಕೊಂದದಟತನದಿಂದೆ ಬಂಡಿಯಂ |
ಭಂಗಿಸಿದ ಬಲ್ಪಿಂದಲೆತ್ತು ಕತ್ತೆಯನಿರಿದ |
ತುಂಗವಿಕ್ರಮದಿಂದ  ಹಕ್ಕಿ ಹಾವಂ ಸದೆದ ಸಾಹಸದೆ ಬೆರೆತಿರ್ದೊಡೆ ||
ಸಂಗರದೊಳಾಳಹನೆ ಗೋಪನವನಂ ಯುದ್ಧ |
ರಂಗದೊಳ್ ತೊಲಗಿಪುದೆನಗೆ ಪರಾಕ್ರಮವೆ ನಿ |
ನ್ನಂಗವಣೆಯಾವುದೆಮ್ಮೊಡನೆ ಸೆಣಸಿದೆಯನುತೆ ತೆಗೆದೆಚ್ಚನನುಸಾಲ್ವನು ||೫೯||

ಎಲೆವೂ ಖಳ ನೀನರಿಯದಿರ್ದೊಡೇನಚ್ಯುತಂ |
ತಿಳಿಯೆ ಗೋಪಾಲನಲ್ಲವೆ ಕಪಟರೂಪದಿಂ |
ಮುಳಿದು ದುಷ್ಟರನೈದೆ ಶಿಕ್ಷಿಸದೆ ಮಾಣ್ದಪನೆ ನೊಣನೂರಿ ಮದಗಜವನು |
ಬಳಲಿಪುದು ಗಡ ದಿಟಂ ನಿನಗಸುರಕುಲಮಥನ |
ನಳುಕುವನೆ ಶಿವಶಿವಾ ನಿನ್ನೊಡನೆ ಸೆಣಸುವೊಡೆ |
ಬಲವಂತರಾವಲ್ಲ ನೋಡು ಸಾಕಿನ್ನೆನುತೆ ತೆಗೆದೆಚ್ಚನಿನಜಸೂನು ||೬೦||

ಕರ್ಣಜನ ಕಣೆಗಳಂ ಕತ್ತರಿಸಿ ಪೊಸಮಸೆವೊ |
ಗರ್ನಭೋಮಂಡಲವನಡಲೆಯಲೊಪ್ಪುವ ಸು |
ವರ್ಣಪುಂಖದ ಸರಳ್ಗರೆದನನುಸಾಲ್ವನದನೆಲ್ಲಮಂ ತತ್‌ಕ್ಷಣದೊಳು ||
ನಿರ್ಣಯಿಸಿ ವೃಷಕೇತು ಕೀಕೊಂಡನಿಸುಗೆಯಂ |
ದುರ್ನಿರೀಕ್ಷಣಮಾದುದರಸ ಕೇಳದನೆನಗೆ |
ವರ್ಣಿಸುವೊಡರಿದು ಕೂರಂಬುಗಳ್ಗಂಬರದೊಳಿಂಬಿಲ್ಲಮೆಂಬೊಲಾಯ್ತು |೬೧||

ಮಂಡಲಾಕೃತಿಯಲ್ಲದಿರದು ನೋಡಲ್ಕೆ ಕೋ |
ದಂಡವಂಬುಗಿವ ಹೂಡುವ ಬಿಡುವ ಭೇದಮಂ |
ಕಂಡವರದಾರಸ್ತಮಯಮಾದುದೆಣ್ದೆಸೆಗಳನುಸಾಲ್ವನಳವಳಿದನು ||
ದಿಂಡುರುಳಿತಾತನ ಚತುರ್ಬಲಂ ಬಳಿಕ ಕೋ |
ದಂಡಮಂ ಕೊಂಡವನ ರಥದೆಡೆಗೆ ಬಂದೆಳೆದು |
ಕೊಂಡು ಕೃಷ್ನನ ಪದಾಂಬುಜದ ಹೊರೆಗಾಗಿ ನಡೆತಂದಿಳುಹಿ ಕೈಮುಗಿದನು ||೬೨||

ಕೊಂಡಾಡಿ ಶೌರಿ ತಕ್ಕೈಸಿದಂ ನೃಪನಪ್ಪಿ |
ಮುಂಡಾಡಿ ಮನ್ನಿಸಿದನರ್ಜುನಾದಿಗಳಿಳಿಕೆ |
ಗೊಂಡಾಡಿಗಳ್ ತಮ್ಮ ಸಾಸಮಂ ಸತಿಯರ್ ಪೊಗಳ್ದರೀ ಕ್ಷತ್ರಿಯರೊಳು ||
ಉಂಡಾಡಿಗಳ್ ಪಲಬರಿರ್ದೊಡೇನಹುದಿವಂ |
ಗಂಡಾಡಿದುರುಭಾಷೆಗರಿಗಳ ಶಿರಂಗಳಂ |
ಚೆಂಡಾಡಿ ಪಗೆವನಂ ಪಿಡಿದೊಪ್ಪಿಸಿದನೆಂದರೆಲ್ಲರುಂ ಕರ್ಣಜನನು ||೬೩||

ಯುದ್ಧಶ್ರಮಂ ಪೋಗೆ ಕಂದೆರೆದನನಿತಿರೊಳ್ |
ಬುದ್ಧ ಪಲ್ಲಟಿಸಿತನುಸಾಲ್ವಂಗೆ ಕಂಡನನಿ |
ರುದ್ಧನ ಪಿತಾಮಹನ ಮೂತಿಯಂ ದೇವ ನೀನಾವನೆಂದಾನರಿಯದೆ ||
ಬದ್ದಮಾಯಾಪಾತನಾಗಿ ಬಿದ್ದಿಹೆನೆನ್ನ |
ನುದ್ಧರಿಸು ಮರೆವೊಕ್ಕೆನೆನೆ ಕೇಳ್ದು ಕರ್ಣಜಂ |
ಕ್ರುದ್ಧನಾದಂ ಜರೆದು ನುಡಿದ ಕಲಿತನಮೆಲ್ಲಿ ಸುಡು ನಿನ್ನೊಡಲನೆಂದನು ||೬೪||

ರೋಷಮೇತಕೆ ಮರುಳೆ ವೃಷಕೇತು ಕೃಷ್ಣನಂ |
ದ್ವೇಷದಿಂ ಬೈದೊಡಂ ತನ್ನ ಮನವಾರೆ ಸಂ |
ತೋಷದಿಂ ನುತಿಗೈದೊಡಂ ಪೋಗದಿರ್ದಪುವೆ ಕೋಟಿಜನ್ಮದೊಳೊದವಿದ ||
ದೋಷಂಗಳಿಂದು ವೀರಾವೇಶದಿಂದೆ ನಾಂ |
ದೂಷಿಸಿದೊಡೀ ದಯಾಂಬುಧಿ ಕಾಯದುಳಿವನೆ ವಿ |
ಶೇಷಸುಕೃತನ ಫಲಂ ದೊರೆದುದೆನಗೆಂದವಂ ಬಿದ್ದನಚ್ಚ್ಯುತನಂಘ್ರಿಗೆ ||೬೫||

ನಗುತೆ ಮದುಸೂದನಂ ಪ್ರೀತಿಯಿಂದಾತನಂ |
ತೆಗೆದಪ್ಪಿ ನೀನಿಂದು ಮೊದಲಾಗಿ ದಿವಿಜರ್ಗೆ |
ಪಗೆಯೆನಿಸದೆಮ್ಮೊಡನೆ ಧರ್ಮಜನ ಯಜ್ಞದ ಸಹಾಯಕಿಲ್ಲಿಪ್ಪುದೆಂದು |
ಮಿಗೆ ಮನ್ನಿಪನಿರೊಳ್ ಪ್ರದ್ಯುಮ್ನನುಳಿದ ಸೇ |
ನೆಗಳೆಲ್ಲಮಂ ಗೆಲ್ದು ತುರಗಮಂ ಬೆಡಿಸಿಕೊಂ |
ಡಗಧರನ ಸಮ್ಮುಖಕೆ ತಂದು ನಿಲಿಸಿದನಿತ್ತಭಾಷೆಗುತ್ತಾರಮಾಗೆ ||೬೬||

ಬಳಿಕ ಜಯಲಾಭದಿಂದಸುರಾರಿ ಪಾಂಡವರ್ |
ಮೊಳಗುವ ನಿಖಿಳವಾದ್ಯಕುಲದಿಂದೆ ವಂದಿಗಳ |
ಕಳಕಳದ ರಭಸದಿಂ ಬಳಸಿದ ಸಮಸ್ತ ಪುರುಷ ಸ್ತ್ರೀಕದಂಬದೊಡನೆ ||
ಪೊಳಲಂ ಪುಗಲ್ಕಾ ಯುಧಿಷ್ಠಿರ ನರೇಶ್ವರಂ ||
ನಿಳಯಂಗಳಿತ್ತನಿಬರೆಲ್ಲರಂ ಸತ್ಕರಿಸಿ |
ಕಳುಹಿ ನಿಜಭವನದೊಳ್ ದೇವಪುರಲಕ್ಷ್ಮೀಪತಿಯನುಪಚರಿಸುತಿರ್ದನು ||೬೭||