ಮಾನವನ ಪ್ರಾಗೈತಿಹಾಸಿಕ ಕಾಲದ ಅವಲೋಕನದಿಂದ ಅವನು ತನ್ನ ಉತ್ಪತ್ತಿಯ ಆರಂಭದ ಹಂತದಲ್ಲಿ ಕಾಡುಮಾನವನಾಗಿ ಪ್ರಾಣಿಜೀವನ ನಡೆಸುತ್ತಿದ್ದುದು ತಿಳಿದು ಬರುತ್ತದೆ. ಕಾಡಿನಲ್ಲಿ ಒಂಟಿಯಾಗಿ ಅಲೆದಾಡುತ್ತಾ ಹೊಟ್ಟೆಪಾಡಿಗಾಗಿ ಕೈಗೆ ದೊರಕಿದ ಹಣ್ಣು-ಹಂಪಲು, ಗೆಡ್ಡೆ-ಗೆಣಸುಗಳನ್ನು ತಿಂದುಕೊಂಡು ಜೀವಿಸುತ್ತಿದ್ದು, ಆತನ ಜೀವನ ಕ್ರಮದಲ್ಲಿ ಬೆಳವಣಿಗೆಯಾದಂತೆ ಬೇಟೆ ಆಡುವುದನ್ನು ಒಂದು ಪ್ರಮುಖ ಕಸುಬನ್ನಾಗಿ ಮಾಡಿಕೊಂಡು ಪ್ರಾಣಿಗಳ ಮಾಂಸವನ್ನು ತಿನ್ನುತ್ತ ತನ್ನ ಹಸಿವೆಯನ್ನು ಹಿಂಗಿಸಿಕೊಳ್ಳತೊಡಗಿದನು. ಕ್ರಮೇಣ ಬೆಂಕಿಯ ಬಳಕೆ ಹೊಳೆದಾಗಿನಿಂದ ಮಾಂಸವನ್ನು ಬೇಯಿಸಿಕೊಂಡು ತಿನ್ನಲು ಪ್ರಾರಂಭಿಸಿದನು. ಇವುಗಳ ಹಿನ್ನೆಲೆಯಲ್ಲಿ ಮಾನವನಿಗೆ ಬರುಬರುತ್ತಾ ಮಾನವನಿಗೆ ಉದ್ಯೋಗದ ಕಲ್ಪನೆ ಮೂಡಿ ಒಂದು ವಿಶಾಲವಾದ ಬಯಲು ಪ್ರದೇಶದಲ್ಲಿ ನೆಲೆನಿಂತು ಪ್ರಾಣಿಗಳನ್ನು ಸಾಕಿ ಅವುಗಳ ಸಹಾಯದಿಂದ ಬೇಸಾಯವನ್ನು ಪ್ರಾರಂಭಿಸಿದನು. ಆಕಳುಗಳಿಂದ ಹಾಲುತುಪ್ಪ ಮುಂತಾದವುಗಳನ್ನು ದೊರಕಿಸಿಕೊಂಡನು. ಕುರಿಗಳ ಉಣ್ಣೆಯಿಂದ ಬಟ್ಟೆಯನ್ನು ತಯಾರಿಸಲು ಕಂಡುಕೊಂಡನು. ಇದಕ್ಕಿಂತ ಪೂರ್ವದಲ್ಲಿ ಕಾಡಿನಲ್ಲಿ ಅಲೆಯುತ್ತಿದ್ದಾಗ ಗಿಡದ ಎಲೆಗಳು ಅವನ ಉಡುಗೆಗಳಾಗಿದ್ದವು ಹಾಗೂ ಮರದ ಪೊದೆಗಳು ಅವನ ಆಶ್ರಯ ತಾಣಗಳಾಗಿದ್ದವು. ಹೀಗೆ ಮಾನವನ ವಿಕಾಸದ ಪ್ರಥಮ ಹಂತವನ್ನು ಕಾಣಬಹುದಾಗಿದೆ.

ಮುಂದೆ ಮಾನಸಿಕ ಬೆಳವಣಿಗೆ ಪಡೆದಂತೆ ಮಾನವರಲ್ಲಿ ಭಾವನೆಗಳು ಪಕ್ವವಾದಂತೆ ಏಕಾಏಕಿಯಾಗಿ ಅಲೆದಾಡುವುದನ್ನು ನಿಲ್ಲಿಸಿ, ಸಾಂಘಿಕ ಜೀವನದಲ್ಲಿ ಆಸಕ್ತಿಯನ್ನು ಹೊಂದಿದನು, ಸಂಘವನ್ನು ಕಟ್ಟಿಕೊಂಡನು, ಕೌಟುಂಬಿಕ ಜೀವನವನ್ನು ಪ್ರಾರಂಭಿಸಿದನು. ಭಾವುಕ ಜೀವಿಯಾದಂತೆ ಹುಟ್ಟು, ಸಾವುಗಳು ಮಾನವರಲ್ಲಿ ಭಯದ ಅಂಶವನ್ನು ಭಿತ್ತಿದವು. ಈ ಭಯದ ನಿವಾರಣೆಗಾಗಿ ಮಾನವನು ಪ್ರಕೃತಿಯ ಶಕ್ತಿಗಳಿಗೆ ಮಾರುಹೋಗಬೇಕಾಯಿತು. ಈ ಶಕ್ತಿಗಳು ಅವ್ಯಕ್ತಶಕ್ತಿಗಳಾಗಿದ್ದವು. ಪ್ರಕೃತಿಯಲ್ಲಿಯ ಗುಡುಗು, ಮಿಂಚು, ಸಿಡಿಲು, ಭೂಕಂಪ, ಜ್ವಾಲಾಮುಖಿ, ಅಗ್ನಿ, ಮುಂತಾದವು ಸುಪ್ತಶಕ್ತಿಯ ವ್ಯಕ್ತ ರೂಪಗಳಾಗಿ ಪ್ರಕೃತಿಯ ಇಂಥ ಅದ್ಭುತ, ಶಕ್ತಿಯನ್ನು ಕಂಡು ಭಯಭೀತನಾದ ಅವನು ಅದಕ್ಕೆ ಶರಣು ಹೋಗಿ ಈ ಶಕ್ತಿಯ ಪ್ರತೀಕಗಳನ್ನು ಪೂಜಿಸತೊಡಗಿದನು. ಇವುಗಳೇ ದೇವರ ಸ್ವರೂಪವೆಂದು ತಿಳಿದನು. ಆರಾಧನೆಯ ಹಿಂದಿರುವ ಭಯ ಕಾಲಾಂತರದಲ್ಲಿ ಭಕ್ತಿಯ ಸ್ವರೂಪವನ್ನು ಪಡೆಯಿತು. ವೈಯಕ್ತಿಕ ಜೀವನದಲ್ಲಿ ಮೂಡಿಬಂದ ಭಯವನ್ನು ಹೋಗಲಾಡಿಸಿಕೊಳ್ಳಲು ಭಕ್ತಿ ನೆಲೆಯೂರಲು ಪ್ರಾರಂಭಿಸಿತು. ನಂತರ ಯಾವುದೋ ಒಂದು ಚೇತನಶಕ್ತಿ ಭೂಮಿಯ ಅಂತರಾಳದಲ್ಲಿ ಹುದುಗಿಕೊಂಡಿರುವುದನ್ನು ಗುರುತಿಸಿದ ಮಾನವ ಆ ಶಕ್ತಿಯನ್ನು ದೈವತ್ವವನ್ನು ಗುರುತಿಸಿದನು. ಹೀಗೆ ಮನವರಲ್ಲಿ ದೈವತ್ವದ ಕಲ್ಪನೆ ಅಂದರೆ ದೇವರ ಕಲ್ಪನೆ ಸ್ಥಿರವಾಗಿ ನಿಂತಿತು.

ಧಾರ್ಮಿಕ ಕಲ್ಪನೆ

ಮಾನವರಲ್ಲಿ ಧಾರ್ಮಿಕ ಕಲ್ಪನೆಗಳು ನಂಬಿಕೆ ಮತ್ತು ಆಚರಣೆಗಳ ಹಿನ್ನೆಲೆಯಲ್ಲಿಯೇ ಬೆಳೆದುಕೊಂಡು ಬಂದಿರುವಂಥವು. “ಪ್ರಾಚೀನ ಶಿಲಾಯುಗದ ಆದಿ ಭಾಗದಲ್ಲಿಯೇ ಅಂದರೆ ೩೫,೦೦,೦೦೦ ವರ್ಷಗಳ ಹಿಂದೆಯೇ ಧಾರ್ಮಿಕ ಪ್ರವೃತ್ತಿ ಬೆಳೆಯಿತು ಎಂದು ತಿಳಿಯುತ್ತದೆ.” ಬುಡಕಟ್ಟು ಜನಾಂಗಗಳಲ್ಲಿ ಮನುಷ್ಯನು ಸತ್ತ ಮೇಲೆ ಅವನ ಮೆದುಳನ್ನು ತೆಗೆದು ಅದಕ್ಕೆ ವಿಧಿ-ವಿಧಾನಗಳನ್ನು ನೆರವೇರಿಸಿ ಪ್ರೇತರಲ್ಲಿ ತಿನ್ನುವ ಪದ್ಧತಿಯನ್ನು ಈ ಜನಾಂಗಗಳಲ್ಲಿ ಕಾಣುತ್ತೇವೆ. ಇದಲ್ಲದೆ ಬೋರ್ನಿಯಾ, ಮಲೇಶಿಯಾಗಳಲ್ಲಿ ಸತ್ತ ಮನುಷ್ಯನ ಮೆದುಳನ್ನು ತೆಗೆದು ಧಾರ್ಮಿಕ ವಿಧಿಗಳನ್ನು ನಡೆಸಿ ಅನಂತರ ಪ್ರೇತರಂತೆ ತಿನ್ನುವ ಪದ್ಧತಿ ಇಂದಿಗೂ ಆದಿವಾಸಿಗಳಲ್ಲಿದೆ. ಹೀಗೆ ಮೆದುಳನ್ನು ತಿನ್ನುವುದು ಧಾರ್ಮಿಕ ಕಲ್ಪನೆಗಳು ಅಂಗವಾಗಿಯೇ ಇದ್ದಿತೆನ್ನುವುದು ಗಮನಾರ್ಹ ಅಂಶವಾಗಿದೆ.

ಹೀಗೆ ಕ್ರಮೇಣವಾಗಿ ಧಾರ್ಮಿಕ ಕಲ್ಪನೆಗಳು ಅನೇಕ ಪರಿಸರದಲ್ಲಿ ಬೆಳೆದುಕೊಂಡು ಬಂದು ಮುಂದೆ ಧರ್ಮಗಳ ಉಗಮಕ್ಕೆ ದಾರಿ ಮಾಡಿದವು. ಇಂಥ ಧಾರ್ಮಿಕ ಕಲ್ಪನೆಯ ಪ್ರಭಾವದಲ್ಲಿ ಸಿಲುಕಿದ ಮಾನವನಿಗೆ ಹೊಸ ಕಲ್ಪನೆ ಮೂಡಿ ಮುಂದೆ ಅವನು ಮೂರ್ತಿ ಪೂಜೆಯನ್ನು ರೂಢಿಯಲ್ಲಿ ತಂದನು. ತನ್ನ ಕಲ್ಪನೆಗೆ ತೋಚಿದಂತೆ ಮೂರ್ತಿಯನ್ನು ಸೃಷ್ಟಿಸಿಕೊಂಡು ಅದರ ಮೇಲೆ ದೇವತಾಭಾವನೆಯನ್ನು ಇರಿಸಿ ಆರಾಧಿಸ ತೊಡಗಿದನು. ಜ್ಞಾನ ಕ್ಷಿತಿಜವು ವಿಸ್ತರವಾದಂತೆ ಮೂರ್ತಿಶಿಲ್ಪಗಳ ಜೊತೆಗೆ ದೇವಾಲಯ ನಿರ್ಮಾಣದ ಕಲ್ಪನೆಗಳು ಬಂದವು. ಹೀಗೆ ಧಾರ್ಮಿಕ ಭಾವನೆಯು ಗಟ್ಟಿಗೊಂಡಂತೆ ಅದರೊಂದಿಗೆ ಕಲೆಯು ಬೆಳೆಯುತ್ತಾ ಸಾಗಿತು. ಹೀಗೆ ಕಾಲಕ್ರಮೇಣ ಮಾನವನಲ್ಲಿ ಉಂಟಾದ ಭಾವನೆಗಳ ಬೆಳವಣಿಗೆ ಆಯಾ ಪರಿಸರಕ್ಕೆ ಅನುಗುಣವಾಗಿ ಹಲವಾರು ದೇವತೆಗಳ ಉಗಮಕ್ಕೆ ಕಾರಣವಾಗಿರಬಹುದು. ಮಾನವ ತನಗೆ ಇಷ್ಟ ಬಂದಂತೆ ದೇವತೆಗಳನ್ನು ಸೃಷ್ಟಿಸಿಕೊಂಡನೆಂದು ಹೇಳಬಹುದು. ದೇವತೆಗಳ ಉಗಮವಾದ ನಂತರ ಅವನ ಮನಸ್ಸಿನಲ್ಲಿ ಪೂಜಾ ವಿಧಿ-ವಿಧಾನಗಳ ಕಲ್ಪನೆಗಳು ಮೂಡಿದವು. ಹೀಗೆ ದೇವರನ್ನು ಸೃಷ್ಟಿಸಿದ ಮಾನವ ತಾನು ಸೃಷ್ಟಿಸಿದ ದೇವತೆಗಳಿಗೆ ಮಾನವನ ಗುಣ-ಸ್ವಭಾವ ಮನೋಧರ್ಮಗಳನ್ನು ಆರೋಪಿಸಿದ. ಅದರ ಪರಿಣಾಮವಾಗಿ ನೀನು ನನ್ನನ್ನು ಉದ್ಧಾರ ಮಾಡಿದರೆ ನಾನು ನಿನಗೆ ಪ್ರತಿಯಾಗಿ ಬಲಿಯ ರೂಪದಲ್ಲೋ ಅಥವಾ ಇನ್ನಾವುದೋ ರೂಪದಲ್ಲಿಯೋ ಕಾಣಿಕೆ ಅರ್ಪಿಸುವೆನು ಎಂದು ಅದರ ಪ್ರಯೋಜನ ದೃಷ್ಟಿಯಿಂದ ಪ್ರಾರ್ಥಿಸಿಕೊಂಡಿರಬೇಕು. ಹೀಗೆ ಪ್ರಾರ್ಥನೆ ಪೂಜೆಯಿಂದ ತಕ್ಕ ಫಲ ದೇವರಿಂದ ದೊರೆಯುತ್ತದೆ ಎಂಬ ಗಾಢ ನಂಬಿಕೆ, ಮೂಡಿಕೊಂಡು ಬಂದಿತು. ಇದರಿಂದ ಪೂಜೆ ಪ್ರಾರ್ಥನೆಯ ಮಹತ್ವವೂ ಹೆಚ್ಚಿತು.

“ಮಾನವನ ಸಾಂಘಿಕ ಜೀವನದ ಫಲವಾಗಿ ಕ್ರಮೇಣ ಒಂದೊಂದು ಗುಂಪುಗಳೇ ಒಂದೊಂದು ಬುಡಕಟ್ಟುಗಳಾಗಿ ಪರಿಣಮಿಸಿದವು. ಒಂದೊಂದು ಬುಡಕಟ್ಟಿನ ಜನರಲ್ಲಿ ಒಂದೊಂದು ಬಗೆಯ ನಂಬಿಕೆ. ಒಂದೊಂದು ರೀತಿಯ ಪದ್ಧತಿ, ಆಚರಣೆಗಳು ಪ್ರತ್ಯೇಕ ಪ್ರತ್ಯೇಕವಾಗಿ ಕಾಣಿಸಿಕೊಳ್ಳಲರಂಭಿಸಿದವು.” ಸಾಂಘಿಕ ಜೀವನದ ಪರಿಕಲ್ಪನೆಗಳಿಂದಾಗಿ ಅವನ ಮನಸ್ಸು ವಿಶಾಲಗೊಂಡು ವಿಚಾರಶಕ್ತಿ ಇಮ್ಮಡಿಸಿ, ವಿಕಾಸಶೀಲ ಮನೋಭಾವ ತಳೆಯಿತು. ತತ್ಪರಿಣಾಮವಾಗಿ ಅವನಲ್ಲಿ ವಾಸ್ತುಶಿಲ್ಪದ ಕಲ್ಪನೆಗಳು ಮೂಡಿಬಂದುವು. ಇವುಗಳನ್ನು ಹಂತ ಹಂತವಾಗಿ ಕಾರ್ಯಾಚರಣೆಯಲ್ಲಿ ತರುತ್ತ ಮಾನವ ಮುಂದುವರಿದನು. ಆಗಿನ ಕಾಲದಲ್ಲಿ ಗುಡಿ-ಗುಂಡಾರಗಳು ಕೇವಲ ಒಂದು ಬುಡಕಟ್ಟಿನವರಿಗೆ ಅನ್ವಯವಾಗದೆ ಇಡೀ ಜನಾಂಗಕ್ಕೆ ಮೂಲವಾಗಿ ಕಂಡುಬಂದವು.

ಸಮಾಜಶಾಸ್ತ್ರದ ದೃಷ್ಟಿಯಿಂದ ಧರ್ಮ ದೇವರು ಎಂಬ ಪರಿಕಲ್ಪನೆಗಳು ಮಾನವನ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಇವು ಸಾಮಾಜಿಕ ಸಂಬಂಧವನ್ನು ಕಲ್ಪಿಸುವುದರ ಜೊತೆಗೆ ದೇವರು ಮತ್ತು ಧರ್ಮದ ಸುತ್ತ ಅನೇಕ ಆಚರಣೆಗಳನ್ನು ಹೆಣೆದವು. ಹಬ್ಬ-ಹುಣ್ಣಿಮೆ, ಜಾತ್ರೆ – ಹೀಗೆ ಅನೇಕ ಕಟ್ಟಳೆಗಳು ಮೂಡಿಬಂದವು. ಇದರಿಂದ ಜನರಲ್ಲಿ ಭಕ್ತಿಯ ಮೊಳಕೆಯೂ ಉದಯಿಸಿತು. ತಮ್ಮ ಭಕ್ತಿಯ ದಾಹವನ್ನು ಹಿಂಗಿಸಿಕೊಳ್ಳಲು ದೇವಾಲಯಗಳ ನಿರ್ಮಾಣದ ಕಡೆಗೆ ಹೆಚ್ಚು ಗಮನಕೊಟ್ಟರು.

ಸತ್ತವರ ಸಮಾಧಿಗಳೇ ಮುಂದೆ ಮಾರ್ಪಟ್ಟು ಹಿಂದಿನ ಕಾಲದ ದೇವಾಲಯಗಳಾಗಿವೆ ಎಂದು ಅಭಿಪ್ರಾಯಪಡುವವರೂ ಇದ್ದಾರೆ. ಆದರೆ ಇದಕ್ಕೆ ಪೋಷಕವಾದ ವಿಪುಲ ಆಧಾರಗಳಿಲ್ಲ. ದೇವಾಲಯಗಳ ಕಲ್ಪನೆ ಮೂಡಿಬರುವ ಮೊದಲು ಬಯಲಿನಲ್ಲಿ ಗಿಡಗಂಟೆಗಳ ಪೊದರಿನಲ್ಲಿ ಆರಾಧನೆ ಕಂಡುಬರುತ್ತಿತ್ತು. ಕ್ರಮೇಣ ಪ್ರಕೃತಿಯಲ್ಲಿ ಮರಗಳೇ ದೇವಾಲಯಗಳಾಗಿ ಪರಿವರ್ತನೆ ಹೊಂದಿರಬೇಕು. ಆ ಮರಗಳ ಕೆಳಗೆ ಪೂಜಿಸಿದ ಒರಟು ಕಲ್ಲುಗಳೇ ದೇವರ ಸಂಕೇತವಾಗಿ ಬೆಳೆದು ಬಂದಿವೆ ಎಂದು ತಿಳಿಯಬಹುದು.

 

ಗುಪ್ತರ ಕಾಲದಲ್ಲಿ ಗುಡಿಗಳು ಇದ್ದ ಉಲ್ಲೇಖಗಳು ಬರುತ್ತವೆ. ಅವರ ಕಾಲದ ಗುಡಿಗಳು ಮರದಿಂದ, ಮಣ್ಣಿನಿಂದ ಮಾಡಲ್ಪಟ್ಟಿದ್ದವು. ಈ ಕಟ್ಟಡಗಳು ಬಹುಕಾಲ ಉಳಿಯಲಿಲ್ಲ. ಕ್ರಿಸ್ತಾಬ್ದ ೨ನೇ ಶತಮಾನದ ಸುಮಾರಿಗೆ ನಾಗರಶೈಲಿಯ ದೇವಾಲಯಗಳಾಗಿ ಮೈದೋರಿದ್ದವು, ಇವು ಜನರ ಹರಕೆ ಪೂಜೆಗೆ ಅನುಕೂಲವು ಆಗಿದ್ದವು.

ಕಾಲಕ್ರಮೇಣ ಚೋಳ ಅರಸರ ಕಾಲದಲ್ಲಿ ಗುಡಿಗಳ ಬೆಳವಣಿಗೆಯ ಹಂತವನ್ನು ಕಾಣುತ್ತೇವೆ. ಈ ಅರಸರ ಕಾಲದಲ್ಲಿ ಪ್ರತಿಯೊಂದು ಊರಿನಲ್ಲಿ ಗುಡಿಗಳು ಬೆಳವಣಿಗೆ ಹೊಂದಿರುವುದು ಸ್ವಷ್ಟವಾಗುತ್ತದೆ. ಹೀಗೆ ಗುಡಿಗಳು ಕಾಲಕಾಲಕ್ಕೆ ಅಭಿವೃದ್ಧಿಯಾಗುತ್ತ ಬಂದವು. ಭಯ-ಭಕ್ತಿಯ ಪ್ರತೀಕವಾಗಿ ಜನತೆಯಲ್ಲಿ ಆರಾಧನಾ ಮನೋಭಾವನೆ ಬೆಳೆಯಿತು, ಅದರೊಂದಿಗೆ ದೇವರ ಮೂರ್ತಿಗಳನ್ನು ಇಟ್ಟುಕೊಂಡು ಪೂಜಿಸುವ ವಿಧಾನವೂ ಆರಂಭವಾಯಿತು. ಹೀಗೆ ಈ ಎಲ್ಲ ಅಂಶಗಳು ಮಾನವನ ಮನಸ್ಸಿನಲ್ಲಿ ಅಚ್ಚಳಿಯದೆ ಪ್ರಭಾವ ಮುದ್ರೆ ಬಿತ್ತಿರುವುದರಿಂದ ದೈವತ್ವದ ಕಲ್ಪನೆ ಮೂಡಿತು. ಮಾನವನು ಮಾನವೀಯತೆಯ ಅಂಶಗಳ ಸಹಾಯದಿಂದ ಮಹಾ ಮಾನವನಾಗಲು ಸಾಧ್ಯವಾಯಿತು ಎಂಬುದಕ್ಕೆ ಅವನ ವಿಕಾಸ ಹಂತವೇ ಮೂಲ ಆಧಾರವಾಗಿದೆ. ಇಂತಹ ಸಂದರ್ಭದಲ್ಲಿ ದೈವೀಕೃಪೆಯಿಂದ ಅವನಲ್ಲಿ ದೇವರ ಕಲ್ಪನೆ ಮೂಡಿ ಬಂದಿರುವುದು ಅತ್ಯಂತ ಮಹತ್ವವಾದ ವಿಷಯವಾಗಿದ್ದು ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ.

ಮಾತೃದೇವತಾರಾಧನೆಯ ಕಲ್ಪನೆ

ಮಾನವನು ಸಮಾಜಜೀವಿ. ತನ್ನ ಬೌದ್ಧಿಕ ಶ್ರಮದಿಂದ ಜಗತ್ತಿನಲ್ಲಿ ಇತರ ಪ್ರಾಣಿಗಳಿಗಿಂತಲೂ ಭಿನ್ನವಾಗಿ ಉನ್ನತ ಮಟ್ಟದಲ್ಲಿರುವನು. ಪ್ರಾಚೀನಕಾಲದಿಂದಲೂ ಮಾನವನು ತಾಯಿಗೆ ದೇವತೆಯ ಸ್ಥಾನವನ್ನು ಕೊಟ್ಟಿರುವನು. ಮಾತೆಯೇ ಮಾನವನ ಪ್ರಗತಿಯಲ್ಲಿ ಪ್ರಮುಖ ಸ್ಥಾನವನ್ನು ವಹಿಸಿರುವಳು. ಆದುದರಿಂದ ಮಾತೃದೇವತೆಯ ಆರಾಧನೆಯು ಎಲ್ಲಾ ಜನಾಂಗಗಳಲ್ಲಿಯೂ ಕಂಡುಬರುತ್ತದೆ. ಒಂದು ಕಾಲದಲ್ಲಿ ಮಾತೃದೇವತೆಯ ಆರಾಧನೆಯೂ ಕೆಲವೊಂದು ಬುಡಕಟ್ಟುಗಳಿಗೆ ಅಥವಾ ಜನಾಂಗಕ್ಕೆ ಸೀಮೀತವಾದುದೆಂಬ ಭಾವನೆಯಾಗಿದ್ದು. ಆದರೆ ಆದಿಕಾಲದಿಂದಲೂ ಮಾತೃದೇವತೆಯ ಆರಾಧನೆ ಇದ್ದುದು ಸರ್ವವಿಧಿತವಾಗಿದೆ, ಆರಾಧನೆಗಳು, ಕಟ್ಟಳೆಗಳು ಮೊದಲಿನಿಂದಲೂ ಬೆಳೆದುಕೊಂಡು ಬಂದಿವೆ. ಈ ಪದ್ಧತಿಯು ಎಲ್ಲಾ ಕಾಲದಲ್ಲಿಯೂ ನಮ್ಮ ದೇಶದಲ್ಲಿ ಬೆಳೆದುಕೊಂಡು ಬಂದಿದೆ.

ಸೈಂಧವ ಸಂಸ್ಕೃತಿಯ ಅವಶೇಷಗಳನ್ನು ಅವಲೋಕಿಸಿದಾಗ ಅಲ್ಲಿ ದೇವಿಯ ಚಿತ್ರಗಳು ಮರದಿಂದಲೇ ಹೊರಹೊಮ್ಮಿಕೊಂಡು ಬಂದಂತೆ ಕಾಣುತ್ತವೆ. ಈ ಸಂಸ್ಕೃತಿಯ ಜನರು ಪ್ರಕೃತಿಯನ್ನು ಕೆಂಪು ಬಣ್ಣದಿಂದ ಕಾಯುವುದು ಪುರಾತನ ಪದ್ಧತಿಯೂ ಆಗಿತ್ತು. ಆದುದರಿಂದ ದೇವಿಯ ಮೈಬಣ್ಣ ಉಡಿಗೆ, ತೊಡಿಗೆ, ಅಲಂಕಾರ ಇವೆಲ್ಲವುಗಳು ದೇವಿಗೆ ಪ್ರಿಯವಾದ ವಸ್ತುಗಳೆಂದು ನಂಬಿಸುವುದು ಕಂಡುಬರುತ್ತದೆ.

“ಇವತ್ತಿಗೂ ದೇವಿಗೆ ಅರ್ಪಿಸುತ್ತಾ ಬಂದಿರುವ ಕುಂಕುಮ ಕೆಂಪು ದಾಸವಾಳ ಹೂವು, ರಕ್ತವಸ್ತ್ರ, ರಕ್ತಫಲ ಮೊದಲಾದವುಗಳು ದೇವಿಗೆ ಪ್ರಿಯವಾದವು ಎಂಬ ಕಲ್ಪನೆ ಇದೆ.” ಇದೇ ಕಲ್ಪನೆಯನ್ನು ಧರ್ಮಗ್ರಂಥಗಳಲ್ಲಿ ಶಾಸ್ತ್ರಪುರಾಣಗಳಲ್ಲಿಯೂ ಕಾಣುತ್ತೇವೆ. ಆದುದರಿಂದ ಸೈಂಧವ ಸಂಸ್ಕೃತಿಯಲ್ಲಿ ಮಾತೃದೇವತೆಗೆ ಪ್ರಮುಖವಾದ ಸ್ಥಾನವಿತ್ತು. ಪಿತೃದೇವತೆಗಿಂತ ಮಾತೃದೇವತೆಯ ಕಲ್ಪನೆ. ಪ್ರಾಚೀನವೆಂಬ ಸತ್ಯ ಪ್ರಾಗೈತಿಹಾಸಿಕ ಜನವಾಸ್ತವ್ಯದ ನೆಲೆಗಳ ಉತ್ಖನನಗಳನ್ನು ಗಮನಿಸಿದಾಗ ನಮಗೆ ಖಚಿತವಾಗುತ್ತದೆ. ಯೂರೋಪಿನ ಶಿಲಾಯುಗದ ಉತ್ಖನನಗಳನ್ನು ಗಮನಿಸಿದಾಗಲೂ ಬಹು ಪ್ರಾಚೀನ ಮಣ್ಣಿನ ಹಾಗೂ ಕಲ್ಲಿನ ಪ್ರತಿಮೆಗಳೆಂದರೆ ಮಾತೃದೇವತೆಯ ಪ್ರತಿಮೆಗಳೇ” ಇಂತಹ ಅಂಶಗಳು ಮಾತೃದೇವತೆಯ ಕಲ್ಪನೆಯ ಬಗೆಗೆ ಪುಷ್ಟಿಯನ್ನು ನೀಡುತ್ತವೆ.

ವೈದಿಕ ಸಂಸ್ಕೃತಿಯ ಜನರು ಪಿತೃಪ್ರಧಾನ ಸಮಾಜದ ವ್ಯವಸ್ಥೆಯನ್ನು ಹೊಂದಿದವರಾಗಿದ್ದರು. ಈ ಸಂಸ್ಕೃತಿಯಲ್ಲಿ ಬರುವ ಗಂಡಸರು ಬೇಟೆಯಾಡುವುದು, ಕುದುರೆ ಹತ್ತುವುದು ಈ ಅಂಶಗಳು ಪ್ರಮುಖವಾಗಿ ಕಂಡುಬರುತ್ತವೆ. ಅಲ್ಲದೆ ಇವರು ಇಂದ್ರ, ವರುಣ, ಸೂರ್ಯ, ವಿಷ್ಣು, ರುದ್ರ – ಈ ದೇವತೆಗಳ ಆರಾಧಕರಾಗಿದ್ದರು. ಆದುದರಿಂದ ಈ ಸಂಸ್ಕೃತಿಯಲ್ಲಿ ಪುರುಷಪ್ರಧಾನವಾದ ಸಮಾಜ ನಿರ್ಮಾಣಗೊಂಡಿತ್ತು. ಪುರುಷನೇ ಕುಟುಂಬದ ಯಜಮಾನನಾಗಿದ್ದು ಆ ಕುಟುಂಬಕ್ಕೆ ಕೇಂದ್ರಬಿಂದುವಾಗಿದ್ದನು.

ಭಾರತೀಯ ಸಂಸ್ಕೃತಿಯ ಹಿನ್ನಲೆಯನ್ನು ಅವಲೋಕಿಸಿದಾಗ ಈ ಸಂಸ್ಕೃತಿಯು ಆರ್ಯದ್ರಾವಿಡ ಸಂಸ್ಕೃತಿಗಳ ಸಮ್ಮಿಲನವಾಗಿದೆ. ಈ ಸಂಸ್ಕೃತಿಯಲ್ಲಿ ಮಾತೃಪ್ರಧಾನವಾದ ದ್ರಾವಿಡ ಸಂಸ್ಕೃತಿ ಹಾಗೂ ಪಿತೃಪ್ರಧಾನವಾದ ಆರ್ಯ ಸಂಸ್ಕೃತಿಗಳ ಸಮ್ಮಿಲನವಾಗಿದೆ. ಹರಪ್ಪ-ಮೊಹೆಂಜೋದಾರೋಗಳಲ್ಲಿ ದೊರೆತ ವಿಗ್ರಹವನ್ನು ಪರಿಶೀಲಿಸಿದರೆ ಅವು ಜೇಡಿಮಣ್ಣಿನ ನಗ್ನ ಸ್ತ್ರೀ ವಿಗ್ರಹಗಳು, ಶಿರೋವಸ್ತ್ರ, ಕೇಶಾಲಂಕಾರ, ಸೊಂಟದಪಟ್ಟಿ – ಹೀಗೆ ಅನೇಕ ವಸ್ತು ಒಡವೆಗಳನ್ನು ಗಮನಿಸಿದರೆ ಭಾರತೀಯ ಸಂಸ್ಕೃತಿಯಲ್ಲಿ ಮಾತೃದೇವತೆಯ ಉಪಾಸನೆಯು ಆದಿಕಾಲದಿಂದಲೂ ಪ್ರಚಾರದಲ್ಲಿತ್ತು ಎಂಬುದು ತಿಳಿದುಬರುತ್ತದೆ. ಇವುಗಳಿಗೆ ಆಧಾರವಾಗಿ ಸಿಂಧೂಕಣಿವೆಯಲ್ಲಿ ದೊರೆತ ಅವಶೇಷಗಳೇ ಆಧಾರವಾಗಿವೆ. ಮಾತೃದೇವತಾ ಪೂಜೆ, ಶಿವಭಕ್ತಿಗಳ ಆರಾಧನೆಯು ಮುಂದೆ ದ್ರಾವಿಡ ಸಂಸ್ಕೃತಿಯಲ್ಲಿ ಭಾಗಶಃ ರೂಢಿಯಲ್ಲಿ ಬಂದಿರುತ್ತದೆ. ಅಲ್ಲದೆ ಮೆಸಪಟೋಮಿಯಾ, ಸಿರಿಯಾ, ಏಷ್ಯಾಮೈನರ್, ಈಜಿಪ್ಟ್ ಮೊದಲಾದ ಕಡೆಯಲ್ಲಿಯೂ ಅನೇಕ ಸ್ತ್ರೀ ವಿಗ್ರಹಗಳು ದೊರತಿದುದರ ಬಗೆಗೆ ಉಲ್ಲೇಖಗಳು ಇವೆ. ಈ ಅಂಶಗಳನ್ನು ಗಮನಿಸಿದರೆ ಪ್ರಾಚೀನ ನಾಗರೀಕತೆಯಲ್ಲಿಯೂ ಮಾತೃದೇವತೆ ಆಗ್ರಪೂಜಿತಗಳಾಗಿದ್ದಳು ಎಂಬ ಅಂಶ ಗಮನಕ್ಕೆ ಬರುತ್ತದೆ. ಇದರಿಂದ ಇಡೀ ಭಾರತೀಯ ಸಂಸ್ಕೃತಿಯೇ ಮಾತೃಪ್ರಧಾನವಾದ ದ್ರಾವಿಡ ಸಂಸ್ಕೃತಿಯ ಮೂಲ ಲಕ್ಷಣವೆನಿಸುತ್ತದೆ. “ಮಾತೃದೇವತೆಯ ಪೂಜೆ ಇದು ಆರ್ಯ ಸಂಸ್ಕೃತಿಗೆ ಹೊರತಾದುದೆಂದೂ ಅದು ದ್ರಾವಿಡರ ಕೊಡುಗೆಯೆಂದೂ ಒಂದು ಕೂಗು ಕೇಳಿಸುತ್ತದೆ. ನಮ್ಮ ಜನಸ್ತೋಮದಲ್ಲಿ ಪ್ರಾಗಾರ್ಯ, ಆರ್ಯ, ದ್ರಾವಿಡ ಎಂಬ ವಿಭಜನೆಗೆ ಆಧಾರಗಳು ಕಡಿಮೆ ಪ್ರಮಾಣದಲ್ಲಿವೆ. ಯಾಕೆಂದರೆ ಹಲವಾರು ಬುಡಕಟ್ಟುಗಳ ಸಮ್ಮಿಳನ ಆರಂಭಕಾಲದಿಂದಲೂ ನಡೆಯುತ್ತಾ ಬಂದಿದೆ. ಅದಕ್ಕಾಗಿ ಆರ್ಯರು, ದ್ರಾವಿಡರು ಎಂದು ಪ್ರತ್ಯೇಕೀಸುವುದು ಸಾಧ್ಯವಿಲ್ಲ.” ಆದರೆ ಸಿಂಧೂ ಸಂಸ್ಕೃತಿಯ ಧರ್ಮದಲ್ಲಿ ಒಂದು ಕಡೆ ಮಾತೃದೇವತೆಯ ಕಲ್ಪನೆ ವೃಕ್ಷಗಳು ಪ್ರಾಣಿಗಳು. ಇನ್ನೊಂದು ಕಡೆ ಪ್ರಕೃತಿಯ ಪೂಜೆ ಕಂಡುಬರುತ್ತದೆ. ಆ ಪ್ರಕೃತಿಯನ್ನು ಅಂತರ್ಗೊಳಿಸಿಕೊಂಡ ಶಿವ ಅವನ ಸಂಕೇತವಾದ ಲಿಂಗದ ಅನುಸಂಧಾನವನ್ನು ಕಾಣಬಹುದು. ಈ ಎಲ್ಲಾ ಅಂಶಗಳ ಸಹಾಯದಿಂದ ನಾವು ಮಾತೃದೇವತೆಯ ಕಲ್ಪನೆಯು ಪ್ರಾಚೀನ ಜನಾಂಗದಲ್ಲಿ ಪ್ರಮುಖವಾಗಿತ್ತು ಎಂಬ ಅಂಶ ಸ್ಪಷ್ಟವಾಗುತ್ತದೆ. “ಮಾನವನ ಉತ್ಪತ್ತಿಯನ್ನು ಗಮನಿಸಿದರೆ ತಂದೆ ತಾಯಿಗಳ ಪಾತ್ರ ಹಿರಿದಾಗಿದೆ. ಈ ಹಿನ್ನೆಲೆಯಲ್ಲಿ ತಂದೆ-ತಾಯಿಗಳು ದೇವರ ಸ್ವರೂಪ ಹೊಂದಿದವರು. ಆದರೆ ತಾಯಿಯ ಪಾತ್ರ ಮಹತ್ವದ್ದು ಎಂದು ಕಂಡುಬಂದಿತು. ತಾಯಿಯ ಉದರದಲ್ಲಿ ಹುದುಗಿಕೊಂಡಿರುವ ನಿಗೂಢವಾದ ಸ್ವರೂಪ ಇವೆಲ್ಲವು ಈ ಹಂತದಲ್ಲಿ ಸೇರಿಕೊಂಡವು.”ಈ ರೀತಿಯಾಗಿ ಮಾತೃದೇವತೆಯ ಕಲ್ಪನೆ ಮಾನವ ಜನಾಂಗದಲ್ಲಿ ಮೂಡಲು ಯಾವ ರೀತಿಯ ಅಂಶಗಳು ಪ್ರಚೋದನೆ ನೀಡಿರಬೇಕು ಎಂಬ ಅಂಶವನ್ನು ಗಮನಿಸಿದಾಗ ಕಂಡುಬರುವ ಸಂಗತಿ ಎಂದರೆ ಪ್ರಕೃತಿಯ ಮಡಿಲಿನಲ್ಲಿರುವ ನೀರಿನ ಪ್ರವಾಹ, ಗಾಳಿಯ ರಭಸ, ಮಿಂಚು, ಗುಡುಗು, ಸೂರ್ಯ ಚಂದ್ರಾದಿಗಳ ಪ್ರಕಾಶ, ಬೆಂಕಿಯ ಪ್ರಕಾಶ, ಇತ್ಯಾದಿ ಅಂಶಗಳು ಇವು ಒಂದು ಕಡೆಯಾದರೆ, ಕಾಡಿನಲ್ಲಿ ವಾಸಿಸುವ ಕ್ರೂರ ಮೃಗಗಳು ಗಗನದಲ್ಲಿ ಹಾರಾಡುವ ಪಕ್ಷಿಗಳ ಸಮೂಹ, ಜಲಚರಗಳು ಇತ್ಯಾದಿ ಈ ಎಲ್ಲಾ ಅಂಶಗಳ ಪ್ರಭಾವದಿಂದ ಕಾಲಕ್ರಮೇಣ ಪ್ರಕೃತಿಯ ಹುಟ್ಟು ಸಾವುಗಳಿಗೆ ಹೆಣ್ಣು ಕಾರಣ ಎಂಬ ಅಂಶ ಅವನಲ್ಲಿ ಪ್ರಮುಖವಾಗಿ ಕಂಡಾಗ ಮಾನವ ಆಕೆಯನ್ನು ಅತ್ಯಂತ ಗೌರವದಿಂದ ಕಂಡಿರಬೇಕು. ಸರ್ವಸಾಕಾರ ಮೂರ್ತಿಯಾದ ಸ್ತ್ರೀಯನ್ನು ಕಂಡಂತಹ ಮಾನವ ಆಕೆಯನ್ನು ಮಾತೃದೇವತೆಯ ಕಲ್ಪನೆಯಂತೆ ರೂಪಿಸಿರುವುದು ಕಾಣುತ್ತದೆ.

ಈ ರೀತಿಯಾಗಿ ಮಾತೃದೇವತೆಯ ಇತಿಹಾಸ ಚರಿತ್ರೆಗಳು ಆರಂಭಗೊಂಡು ಜಾನಪದರ ಕಟ್ಟಳೆಗಳ ಬುನಾದಿಯ ಮೇಲೆ ಬೀಡುಬಿಟ್ಟಿವೆ. ಈ ಪುರಾತನವಾದ ಶಕ್ತಿಯು ಪ್ರಿಯವಾಗಿದ್ದು ಒಳ್ಳೆಯ ಜನರ ಸಮೂಹದಲ್ಲಿಯೂ ಪ್ರವೇಶ ಮಾಡಿ ತನ್ನ ಪ್ರಭಾವವನ್ನು ಸ್ಪಷ್ಟವಾಗಿ ಬೀರಿದೆ. ಆದರೆ ಜಾನಪದ ಪ್ರಿಯವಾಗಿದ್ದ ಶಕ್ತಿವಾದದಲ್ಲಿ, ಶಕ್ತಿ ಎಂಬ ಎಣಿಕೆಯಲ್ಲಿ, ಶಾಕ್ತರ ನಂಬಿಕೆ ಎಲ್ಲ ಹೆಂಗಸರೂ ದೇವತಾ ಸ್ವರೂಪರು ನಂಬಿಕೆ ನೂರಾರು ಮಾತೃದೇವತೆಯರಿಗೆ ದಾರಿ ಮಾಡಿಕೊಟ್ಟಿತು. ಹೀಗೆ ಮಾತೃದೇವತೆಯರಿಗೆ ಅನೇಕರ ಆಸರೆಯಲ್ಲಿ ಬೆಳೆದು ಬಂದವರಾಗಿರುವುದರಿಂದ ಈಗ ನಾವು ಸಾವಿರರು ಮಾತೃದೇವತೆಗಳ ಪ್ರಭಾವಗಳ ಪ್ರತೀತಿ ಇರುವುದನ್ನು ಕಾಣುತ್ತೇವೆ. ಈ ಎಲ್ಲಾ ಮಾತೃದೇವತೆಗಳ ಕಥೆ ಮತ್ತು ಪ್ರಭಾವಳಿಗಳಲ್ಲಿ ಸಾಮಾನ್ಯವಾಗಿ ತುಂಬಾ ಸಾಮ್ಯ ಅಂಶಗಳಿರುತ್ತವೆ. ಈ ಸಾದೃಶ್ಯವನ್ನು ಅವಲಂಭಿಸಿ ಬರಬರುತ್ತಾ ಒಬ್ಬಳೇ ಮಾತೃದೇವತೆ ಅನೇಕ ಸ್ವರೂಪಗಳಲ್ಲಿ ಮೈದೋರಿರುವಳೆಂಬ ಭಾವನೆ ಮೂಡಿಬಂದಿತು. “ದೇವನೊಬ್ಬ ನಾಮಹಲವು” ಎಂಬ ಹೆಗ್ಗಳಿಕೆಯಂತೆ ಅನೇಕ ಬಗೆಯ ಹೆಸರುಗಳನ್ನು ಹೊಂದಿದಂತಹ ದೇವಿಯರು ಮೂಲದಲ್ಲಿ ಒಂದೇ ಹೆಸರಿನವರು. ಉದಾ: ಎಲ್ಲಮ್ಮನ ಅವತಾರ-ಎಲ್ಲರ ಅಮ್ಮ ಎಲ್ಲಮ್ಮ-ಹೀಗೆ ಒಂದೇ ಅವತಾರವನ್ನು ಧರಿಸಿದ್ದರೂ ಆಕೆಯನ್ನು ಅನೇಕರು ಬೇರೆ ಬೇರೆ ಹೆಸರುಗಳಲ್ಲಿ ಕರೆಯುವುದುಂಟು. ಫಲಗೌರಿ, ರೇಣುಕೆ, ಮಾರಿಕಾಂಬೆ, ಭವಾನಿ ಇತ್ಯಾದಿ ಈ ಎಲ್ಲ ಹೆಸರು ಜಾನಪದ ನೆಲೆಯಿಂದ ಮೂಡಿಬಂದಿವೆ. ಆದುದರಿಂದ ಭಾರತೀಯ ಸಂಸ್ಕೃತಿಯಲ್ಲಿ ಮಾತೃದೇವತೆ ಅತ್ಯಂತ ಮಹತ್ವವನ್ನು ಪಡೆದಿರುವಳು. ‘ಮನೆಯೆ ಮೊದಲ ಪಾಠ ಶಾಲೆ-ಜನನಿ ತಾನೆ ಮೊದಲು ಗುರು’. ಮಾತೃದೇವೋಭವ, ಇನ್ನು ಮುಂತಾದ ಶ್ಲೋಕಗಳು ಕೂಡಾ ಮಾತೃದೇವತೆ ಕಲ್ಪನೆಯು ಭಾರತೀಯರ ಸ್ಮೃತಿ ಪಲಟದಲ್ಲಿ ಹೇಗೆ ಅಲಂಕೃತವಾಗಿತ್ತು ಎಂಬುದಕ್ಕೆ ಇಂದಿಗೂ ಈ ನುಡಿಗಳೇ ಸಾಕ್ಷಿಯಾಗಿ ನಿಂತಿವೆ. ಆದುದರಿಂದ ಸ್ತ್ರೀಯನ್ನು ಮಹಾಮಾತೆಯೆಂದೂ ಸಾರ್ವಕಾಲಿಕ ಕನ್ಯೆಯೆಂದೂ, ದಿವ್ಯಸತಿ ಮಹಾಸಂಹಾರಿಣಿ ಎಂದು ಕರೆಯುವುದುಂಟು. ಆದುದರಿಂದ ಭಾರತೀಯರು ಮಾತೃದೇವತೆಗೆ ಅತ್ಯಂತ ಗೌರವದ ಸ್ಥಾನ ನೀಡಿ ಪೂಜಿಸುತ್ತ ಬಂದಿರುವುದುಂಟು.

ಈ ರೀತಿಯಾಗಿ ಮಾನವ ಜನಾಂಗದಲ್ಲಿ ತಾಯಿಯನ್ನು ಮಾತೃದೇವತೆಯ ಸ್ಥಾನಕ್ಕೇರಿಸಿ ಆಕೆಯನ್ನು ದೇವತೆ ಅಷ್ಟೇ ಏಕೆ ಸಾಕ್ಷಾತ್ ದೇವತೆ ಎಂಬ ಪರಿಕಲ್ಪನೆ ಮೂಡಿ ಬಂದಿತು. ಇಂತಹ ನಂಬಿಕೆಯಿಂದ ಗ್ರಾಮದೇವತೆಗಳ ಕಲ್ಪನೆ ಮೂಡುವುದಕ್ಕೆ ಉತ್ತಮ ಮಾಗೃದರ್ಶಿಯಾಯಿತು ಎಂದು ಹೇಳಬಹುದು.

ಅಡಿ ಟಿಪ್ಪಣಿಗಳು

೧.    ಎಸ್.ಕೆ. ರಾಮಚಂದ್ರರಾವ್, ಮೂರ್ತಿಶಿಲ್ಪ ಹಿನ್ನೆಲೆ, ಪು. ೨೨೮.

೨.    ಡಾ. ಹಿ.ಚಿ. ಬೋರಲಿಂಗಯ್ಯ, ಬುಡಕಟ್ಟು ದೈವಾರಾಧನೆ, ಪು ೧೭.

೩.    ಎಸ್.ಕೆ. ರಾಮಚಂದ್ರರಾವ್, ಭಾರತೀಯ ದೇವಾಲಯಗಳ ಜಾನಪದ ಮೂಲ, ಪು. ೩೯.

೪.    ಡಾ. ವಿಲ್ಯಂಮಾಡ್ತ, ಜಾನಪದ ಸಾಹಿತ್ಯ ದರ್ಶನ, ಭಾಗ-೮, ಲೇಖನ, ಪು. ೮೧.

೫.    ಎಸ್.ಕೆ. ರಾಮಚಂದ್ರರಾವ್, ಭಾರತೀಯ ದೇವಾಲಯಗಳ ಜಾನಪದ ಮೂಲ. ಪು. ೭೪.

೬.    ಎಸ್.ಕೆ. ರಾಮಚಂದ್ರರಾವ್, ಮೂರ್ತಿಶಿಲ್ಪ ಹಿನ್ನಲೆ, ಪು. ೧೮೧.