ಮಾನವನಿಗೆ ಸಂಘ ಜೀವನದ ಪ್ರಜ್ಞೆ ಮೂಡಿದಾಗಿನಿಂದ ಅವನು ವಾಸ ಮಾಡುವುದಕ್ಕೆ ನದಿಯ ದಂಡೆಯ ಮೇಲಿರುವ ವಿಶಾಲವಾದ ಬಯಲು ಪ್ರದೇಶವನ್ನು ಆಯ್ಕೆ ಮಾಡಿಕೊಂಡ. ಇಂತಹ ಫಲವತ್ತಾದ ಭೂಮಿ ಹಾಗೂ ನೀರು ದೊರೆಯುವಂತಹ ಪ್ರದೇಶದಲ್ಲಿ, ಮಾನವನು ಮನೆಗಳನ್ನು ಕಟ್ಟಿಕೊಂಡು ನಿರಾತಂಕವಾಗಿ ಜೀವನವನ್ನು ಕಳೆಯಲು ಪ್ರಾರಂಭಿಸಿದ. ಬರುಬರುತ್ತಾ ಮಾನವ ಜನಾಂಗ ವೃದ್ಧಿಯಾಗುತ್ತಾ ನಡೆಯಿತು. ಆಗ ಒಂದು ಕುಟುಂಬಕ್ಕೆ ಬದಲಾಗಿ ಹತ್ತೆಂಟು ಕುಟುಂಬಗಳು ಬೆಳೆದವು. ಹೀಗೆ ಕುಟುಂಬಗಳು ವೃದ್ಧಿಯಾಗುತ್ತಾ ಹೋದಂತೆ ಆ ಪ್ರದೇಶವು ಗ್ರಾಮಗಳ ಉಗಮಕ್ಕೆ ಕಾರಣವಾಯಿತು. ಆಗ ಮನುಷ್ಯ ಮನುಷ್ಯರಲ್ಲಿ ಸಂಪರ್ಕ ಸಂಬಂಧಗಳು ವೃದ್ಧಿಯಾಗ ತೊಡಗಿದುದರ ಪರಿಣಾಮವಾಗಿ ಅವರಲ್ಲಿ ಅನೇಕ ಬಗೆಯ ಸಂಸ್ಕಾರಗಳು ಮೂಡಿದವು ಎನ್ನಬಹುದು.

ಮಾನವ ತನ್ನ ರಕ್ಷಣೆಗಾಗಿ ಹಾಗೂ ತನ್ನವರ ಸಂರಕ್ಷಣೆಗಾಗಿ ತಾನು ನೆಲೆಸಿದ ಪ್ರದೇಶದಲ್ಲಿ ಇರುವ ಪ್ರಕೃತಿ ದೇವತೆಗಳಿಗೆ ಮಾರು ಹೋದನು. ತನ್ನ ಕಲ್ಪನೆ ಆಳದಲ್ಲಿ ತನಗೆ ಇಷ್ಟ ಬಂದಂತಹ ದೇವತೆಗಳ ನಾಮಕರಣ ಮಾಡಿದನು. ಅವುಗಳನ್ನು ಭಕ್ತಿ-ಗೌರವ, ಶ್ರದ್ಧೆಯಿಂದ ಆರಾಧನೆ ಮಾಡತೊಡಗಿದನು. ಈ ಪರಂಪರೆಯಿಂದ ಜನರಲ್ಲಿ ನಂಬಿಕೆ, ಭಕ್ತಿ ಶ್ರದ್ಧೆಗಳು ವ್ಯಾಪಕವಾಗುತ್ತಾ ನಡೆದವು. ಆಗ ಮೂರ್ತಿಗಳಿಗೆ ಒಂದು ಸ್ವರೂಪ ಬಂದಿರಬೇಕು. ತಾನು ಆರಾಧಿಸುವಂಥಹ ದೇವತೆಗಳಿಂದ ಪ್ರತಿಫಲ ದೊರೆಯದಿದ್ದಾಗ ಮತ್ತೊಂದು ಹೆಸರಿನಲ್ಲಿ ಮೂರ್ತಿಯನ್ನು ತಯಾರಿಸಿ ಅದಕ್ಕೆ ಆರಾಧನೆ ಮಾಡಲು ಪ್ರಾರಂಭಿಸಿದನು. ಕ್ರಮೇಣ ಮಾನವನಲ್ಲಿ ಜ್ಞಾನವು ವಿಕಾಸವಾದಂತೆ ಅವನಲ್ಲಿ ಕಲ್ಪನೆಗಳು ಬೆಳೆಯತೊಡಗಿದವು. ಅವರೊಂದಿಗೆ ದೇವತೆಗಳ ಪೂಜೆ ಪ್ರಮಾಣವು ಅಧಿಕವಾಗತೊಡಗಿದವು. ಅವರು ವಾಸಿಸುವ ಪ್ರದೇಶದಲ್ಲಿ ಕಟ್ಟಿಕೊಂಡಂತಹ ಗ್ರಾಮಗಳಲ್ಲಿ ದೇವತೆಗಳ ಸಂಖ್ಯೆಯು ಬೆಳೆಯತೊಡಗಿತು. ಇದರಿಂದ ಗ್ರಾಮದೇವತೆಗಳು ಎಂಬ ಕಲ್ಪನೆಯು ಮೂಡಿ ಬಂದಿರಲು ಸಾಧ್ಯವಿದೆ ಎಂದು ಹೇಳಬಹುದಾಗಿದೆ.

ನಮ್ಮ ಹಳ್ಳಿಗರ ಬದುಕಿನಲ್ಲಿ ದೈವಗಳ ಪಾತ್ರ ಬಹು ಮಹತ್ತರವಾದುದು. ಅವರ ಎಲ್ಲಾ ರೀತಿಯ ವ್ಯವಹಾರಗಳಲ್ಲಿ ದೇವರುಗಳು ಒಂದಲ್ಲಾ ಒಂದು ರೀತಿಯಲ್ಲಿ ಪ್ರವೇಶವನ್ನು ಪಡೆದೇ ಇರುತ್ತದೆ. ಊರಿನ ಒಳಿತು ಕೆಡಕುಗಳ ತಾವು ಆಚರಿಸುವ ಹಬ್ಬ-ಹುಣ್ಣಿಮೆಗಳು ಅನುಸರಿಸಿದ ರೀತಿ-ನೀತಿಗಳನ್ನವಲಂಬಿಸಿರುತ್ತದೆಂದೂ ತಮ್ಮ ಪಾಪ-ಪುಣ್ಯಗಳನ್ನು ನಡೆ-ನುಡಿಗಳನ್ನು ದೇವರು ಸದಾ ನೋಡುತ್ತಿರುವನೆಂದೂ ನಂಬಿದ್ದಾರೆ. ನಂಬಿಕೆ ಬೇರು ಜೀವನದ ಎಲ್ಲಾ ಕ್ಷೇತ್ರಗಳಲ್ಲಿಯೂ ಬಲವಾಗಿ ಆವರಿಸಿರುತ್ತದೆ. ಊರಿನಲ್ಲಿ ದನಕರುಗಳಿಗೆ, ಮಕ್ಕಳು ಮರಿಗಳಿಗೆ ಏನಾದರೂ ರೋಗ ಸಂಭವಿಸಿದರೆ ಅಕಸ್ಮಾತ್ ಸಾವು ನೋವುಗಳುಂಟಾದರೆ ಅದೆಲ್ಲವೂ ತಾವು ಆಚರಿಸದಿರುವ ಯಾವುದೋ ದೇವರ ಕಾಟವೆಂದು ನಂಬಿ ಅವುಗಳ ಮೊರೆ ಹೋಗುತ್ತಾರೆ. ಪ್ರಕೃತಿಯ ಆರಾಧಕರಾದ ನಮ್ಮ ಜನಪದರಿಗೆ ಪ್ರಕೃತಿಯ ವೈಪರಿತ್ಯಗಳು ಭಯವನ್ನುಂಟು ಮಾಡುವುದು ಸಹಜ ಸ್ವಭಾವವಾಗಿದೆ. ಧರ್ಮ, ಪುರಾಣ, ಹಿರಿಯರ ಕಥೆಗಳು, ಇತಿಹಾಸಗಳು ಮುಂತಾದವನ್ನೆಲ್ಲಾ ಪ್ರಕೃತಿಯಲ್ಲಿ ಕಂಡುಕೊಂಡು ಅದಕ್ಕೊಂದು ಪುರಾಣ ಮೂಲವನ್ನು ಆರೋಪಿಸಿಕೊಂಡು ಪುಣ್ಯಪುರುಷರ ಸ್ಮರಣೆಯನ್ನು ಮಾಡಿಕೊಳ್ಳುತ್ತಾ ತಮ್ಮ ಬದುಕನ್ನೂ ಅದಕ್ಕೆ ಸಮೀಕರಿಸಿ ಕೊಳ್ಳುತ್ತಾರೆ ಮತ್ತು ಅದನ್ನು ಸದಾ ನೆನಪಿನಲ್ಲಿಡಲು ಕೆಲವು ಆಚರಣೆಗಳನ್ನು ರೂಢಿಸಿಕೊಂಡು ಬಂದಿದ್ದಾರೆ. ಹೀಗಾಗಿ ಹಳ್ಳಿಗರ ಪ್ರತಿಯೊಂದು ಸಂದರ್ಭದಲ್ಲಿಯೂ ದೇವರ ಮೊರೆಹೋಗುವುದನ್ನು ಕಾಣಬಹುದಾಗಿದೆ.

ಹೀಗೆ ಪ್ರಕೃತಿಯಲ್ಲಿ ಬದಲಾವಣೆಯಾದಂತೆ ಮಾನವನಲ್ಲಿ ಬದಲಾವಣೆಯಾಗುವುದು ಸಹಜ. ಆಗ ಅವನಲ್ಲಿ ವಿಕಾಸಶೀಲ ಮನೋಭಾವನೆ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ. ಇದರಂತೆಯೇ ಗ್ರಾಮಗಳು ವಿಕಾಸಶೀಲತೆಯ ಪ್ರಯೋಗಕ್ಕೆ ಒಳಗಾದವು. ಬರುಬರುತ್ತಾ ಪಟ್ಟಣಗಳಲ್ಲಿಯೂ ಈ ದೇವತೆಗಳು ಆವರಿಸಿಕೊಂಡವು. ಇದರಿಂದಾಗಿ ಗ್ರಾಮದೇವತೆಗಳು ಪಟ್ಟಣದ ದೇವತೆಗಳು ಆದವೆಂದು ಹೇಳಬಹುದು, ಕ್ರಮೇಣ ಮನುಷ್ಯನ ಬದುಕಿನಲ್ಲಿ ಅನೇಕ ವ್ಯತ್ಯಾಸಗಳಾದವು. ಆದರೆ ದೇವರ ಕಲ್ಪನೆಯ ಅಂಶಗಳ ಹಿನ್ನಲೆಯಲ್ಲಿ ವ್ಯತ್ಯಾಸ ಕಾಣಲಿಲ್ಲ. ಅವರಲ್ಲಿ ದೇವತೆಗಳ ಬಗೆಗೆ ನಂಬಿಕೆಯೂ ಶಾಶ್ವತವಾಗಿ ಮುಂದುವರಿಯಿತೆಂದು ಹೇಳಬಹುದು. ದೇವರ ಬಗೆಗೆ ಆರಾಧನೆ, ಪೂಜೆಗಳು, ಮುಂತಾದ ಕ್ರಿಯಾವಿಧಾನಗಳು. ಕ್ರಮೇಣ ಮೊದಲಿನಕ್ಕಿಂತಲೂ ಅಧಿಕವಾದವು ಹೊರತು ಕಡಿಮೆ ಆಗಲಿಲ್ಲ. ಆದುದರಿಂದ ದೇವತಾರಾಧನೆಯ ಅಂದಿನಿಂದ ಇಂದಿನವರೆಗೂ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ ಎಂದು ಹೇಳಬಹುದು.

ಇವತ್ತು ನಮ್ಮ ಸಂಸ್ಕೃತಿಯ ಆಳವನ್ನು ಅವಲೋಕಿಸಿದಾಗ ಅಲ್ಲಿ ಸ್ತ್ರೀಯು ತನ್ನ ಪವಾಡವನ್ನು ಬೀರಿದ್ದು ಅರಿವಾಗದಿರದು. ಅನೇಕ ಸ್ತ್ರೀಯರು ತಮ್ಮ ಪತಿಯ ಮರಣದ ನಂತರ ಸತಿ ಹೋದರು. ಅಲ್ಲದೆ ಬೇರೆ ಬೇರೆ ವಿಧಾನಗಳಲ್ಲಿ ಸಿಲುಕಿ ಶಿಕ್ಷೆಗೆ ಗುರಿಯಾದವರು, ಆತ್ಮಹತ್ಯೆ ಮಾಡಿಕೊಂಡವರು, ಆಘಾತಕ್ಕೆ ಒಳಗಾದವರು ಇದ್ದರು. ಅನೇಕ ಸ್ತ್ರೀಯರು ತಮ್ಮನೇ ತಾವು ಬಲಿಕೊಟ್ಟ ಸಂಗತಿಗಳನ್ನು ನೋಡಬಹುದು. ಇವರೆಲ್ಲರೂ ಚರಿತ್ರೆಯ ಹಾಗೂ ಧರ್ಮದ ನಂಬಿಕೆಯ ಹಿನ್ನೆಲೆಯಲ್ಲಿ ಗ್ರಾಮದೇವತೆಗಳಾಗಿ ರೂಪಗೊಂಡಿರುವುದಕ್ಕೆ ಸಾಧ್ಯವಿದೆ. ವ್ಯಕ್ತಿಗಳ ಸುತ್ತ ಹರಡಿಕೊಂಡಿರುವ ಐತಿಹ್ಯ ಮತ್ತು ಸ್ಥಳದ ಮೇಲಿಂದ ಹುಟ್ಟಿದಂತಹ ಐತಿಹ್ಯಗಳ ಮೇಲೆ ಕೆಲವೊಂದು ದೇವತೆಗಳು ಹುಟ್ಟಿಕೊಂಡವು. ವೀರಪುರುಷರು, ಜನೋಪಕಾರ ಮಾಡಿದ ಮನುಷ್ಯರು, ಚಾರಿತ್ರಿಕ ವ್ಯಕ್ತಿ, ಮಹಾತ್ಮರು, ಪವಾಡ ಪುರುಷರು, ಈ ಹಿನ್ನಲೆಯಲ್ಲಿ ದೇವತೆಗಳು ಹುಟ್ಟಿಕೊಂಡು ಬಂದವು. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಗ್ರಾಮದೇವರು ಹಾಗೂ ದೇವತೆಗಳಾಗಿರಬಹುದು. ತದನಂತರ ಜನರಿಗೆ ಸಣ್ಣ ಪುಟ್ಟ ತೊಂದರೆಗಳಾದಾಗ ಅವುಗಳ ನಿವಾರಣೆಗಾಗಿ ಕೆಲವು ಸಣ್ಣ ಪುಟ್ಟ ದೇವತೆಗಳು ಹುಟ್ಟಿಕೊಂಡು ಬಂದಿರಬಹುದು ಎಂಬ ಅಭಿಪ್ರಾಯವೂ ಇದೆ.

ಯಾವುದೇ ಮನುಷ್ಯನಿಗೆ ಕಾಯಿಲೆಯಾದಾಗ ಆ ಕಾಯಿಲೆಯನ್ನು ದೂರ ಮಾಡುವಂತಹ ದೇವತೆಗಳು ಹುಟ್ಟಿಕೊಂಡವು ಎಂದು ಹೇಳಬಹುದು. “ಇಂಥ ದೇವತೆಗಳನ್ನು ಆರಾಧಿಸಿ ಅಭಿಷೇಕ ಮಾಡಿಸಿ ಪ್ರಸಾದವನ್ನು ಸ್ವೀಕಾರ ಮಾಡಿದರೆ ಗುಣವಾಗುತ್ತದೆ ಎಂಬ ಕಲ್ಪನೆಯಲ್ಲಿ ಹಲವು ದೇವತೆಗಳ ಉಗಮ ಆಗಿರಬೇಕು.” ಹಾವು, ಚೇಳುಗಳು ಕಚ್ಚಿದರೆ ಗುಡಿಗೆ ಹೋಗಿ ಪೂಜೆಯನ್ನು ಸಲ್ಲಿಸಿ ಪೂಜಾರಿ ಕೊಟ್ಟ ಗಂಧವನ್ನು ಹಾವು ಚೇಳುಗಳು ಕಚ್ಚಿದ ಭಾಗಕ್ಕೆ ಹಚ್ಚಿದರೆ ಪರಿಹಾರವಾಗುತ್ತದೆ ಅನ್ನುವಂಥ ನಂಬಿಕೆ. ಅಲ್ಲದೆ ದೈಹಿಕ ಹಾಗೂ ಮಾನಸಿಕ ತೊಂದರೆಗಳಿಗೆ ಒಳಗಾಗಿ ಬಳಲುತ್ತಿರುವ ವ್ಯಕ್ತಿ ತನಗೆ ಬಂದಂತಹ ತೊಂದರೆಗಳನ್ನು ನಿವಾರಿಸಿಕೊಳ್ಳಲು ಈ ದೇವತೆಗಳು ಹುಟ್ಟಿಕೊಂಡಿರಬಹುದು. ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿದಾಗ ಮಾನವನಲ್ಲಿ ಈ ಅಂಶಗಳು ಮೂಢನಂಭಿಕೆಯಿಂದ ಇಲ್ಲವೆ ತನ್ನ ಬಯಕೆಗೆ ಅನುಗುಣವಾಗುವಂತೆ ಸೃಷ್ಟಿಸಿಕೊಂಡಿರುವನು. ಜನತೆಯ ಸಂಪ್ರದಾಯಕ್ಕೆ ಅನುಗುಣವಾಗಿ ಹಾಗೂ ಗ್ರಾಮದ ಸಂಪ್ರದಾಯಕ್ಕೆ ಹೊಂದಿಕೊಂಡಂತೆ ಪ್ರತಿಯೊಂದು ಗ್ರಾಮದ ಜನರು ತಮ್ಮದೇ ಆದಂತಹ ವಿಶಿಷ್ಟ ದೇವತೆಗಳನ್ನು ಸೃಷ್ಟಿಸಿಕೊಂಡರು. ಅವುಗಳನ್ನು ತಮ್ಮ ಗ್ರಾಮದ ದೇವತೆಗಳೆಂದು ಕರೆಯತೊಡಗಿದರು. ದಕ್ಷಿಣ ಭಾರತದಲ್ಲಿ ಗ್ರಾಮದೇವತೆಗಳು ಎಂಬ ಹೆಸರಿನಲ್ಲಿಯೇ ಕರೆದರು. ಇನ್ನೂ ಕೆಲವು ಕಡೆ ಊರಿನ ಅಮ್ಮ ಎಂದೂ ಕರೆಯುವುದು ವಾಡಿಕೆ. ಅದೇ ರೀತಿ ಉತ್ತರ ಭಾರತದಲ್ಲಿ ಠಾಕುಣಿ ಎಂದು ಕರೆಯುವರು. ಆದ್ದರಿಂದ ಈ ದೇವತೆಗಳು ಊರನ್ನು ಹಾಗೂ ಊರಿನ ಜನರನ್ನು ಕಾಪಾಡುವವು ಎಂಬ ನಂಬಿಕೆ ಜನರಲ್ಲಿ ಬೇರೂರಿತು. ಒಂದು ವೇಳೆ ಮಾರಕ ಶಕ್ತಿಗಳು ಊರನ್ನು ಪ್ರವೇಶಿಸಿದರೆ ಆ ಮಾರಕ ಶಕ್ತಿಗಳನ್ನು ಈ ದೇವತೆಗಳೇ ಹೊಡೆದೋಡಿಸುತ್ತಾರೆ ಎಂಬ ನಂಬಿಕೆ ಹಳ್ಳಿಯ ಜನರಲ್ಲಿ ಬೆಳೆದುಬಂದಿದೆ. ಈ ದೇವತೆಗಳನ್ನು ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಿಂದ ಕರೆಯುವರು. ಮಾರಿಯಮ್ಮ ಮಧ್ಯ ಭಾರತದಲ್ಲಿ (ಮಾರಿ, ಭವಾನಿ, ಪ್ಲೇಗ) ಗಯಾ ಜಿಲ್ಲೆಯಲ್ಲಿ ಮತ್ತು ಮುಂಬಿಯಿಯಲ್ಲಿ ಮಾಯಿ, ಬಂಗಾಳದಲ್ಲಿ ಓಲಾಯ್, ಚಂಡಿ ದಕ್ಷಿಣ ದೇಶದಲ್ಲಿ ಪೆದ್ದಮ್ಮ, ಅಣ್ಣಮ್ಮ, ನೂಕಲಮ್ಮ, ಕೊಕ್ಕಲಮ್ಮ, ಸಿಡುಬು, ಮುತ್ಯಲಮ್ಮ ಎಂದೂ ಉತ್ತರ ಕರ್ನಾಟಕದಲ್ಲಿ ಕರಿಯಮ್ಮ, ದುರುಗಮ್ಮ, ಕಾಳಮ್ಮ, ಮಾರೆಮ್ಮ, ಚೌಡಮ್ಮ – ಹೀಗೆ ಹಲವಾರು ಹೆಸರುಗಳಿಂದ ಕರೆಯುವುದು ಕಂಡು ಬರುತ್ತದೆ.

ಈ ದೇವತೆಗಳ ದೇವಾಲಯಗಳು ಊರಿನ ಪ್ರಮುಖವಾದ ಸ್ಥಳದಲ್ಲಿ ಅಥವಾ ಊರಿನ ಹೊರಭಾಗದಲ್ಲಿ, ಊರಿನ ಮಧ್ಯಭಾಗದಲ್ಲಿ ಸ್ಥಾಪಿತವಾಗುವುವು. ಯಾಕೆಂದರೆ ಊರಿಗೆ ಪೀಡೆಗಳು ಪ್ರವೇಶ ಮಾಡಿದರೆ ಅವುಗಳನ್ನು ಹೊರಗಿನಿಂದಲೇ ಓಡಿಸಬೇಕೆಂಬ ನಂಬಿಕೆ ಪ್ರಬಲವಾಗಿರಬೇಕು. ಊರಿನ ಮಧ್ಯೆ ನೆಲೆಸಿದಂತಹ ಗ್ರಾಮದೇವತೆಯು ಊರಿನ ಜನರ ರಕ್ಷಣೆಯ ಭಾರ ಹೊತ್ತು ಅವರನ್ನು ಸಂರಕ್ಷಣೆ ಮಾಡುವಂತಹವು. ಇದಲ್ಲದೆ ಊರಿನ ಹೊರಭಾಗದಲ್ಲಿ, ಬಯಲು ಪ್ರದೇಶದಲ್ಲಿ, ಮರದ ಕೆಳಗೆ ಹಳ್ಳಗಳ ದಂಡೆಯಲ್ಲಿ ನದಿ ಮತ್ತು ಕೆರೆಯ ದಂಡೆಯ ಮೇಲೆ ಕೆಲವು ದೇವತೆಗಳು ಸ್ಥಾಪಿತಗೊಂಡಿರುವುವು. ಈ ದೇವತೆಗಳನ್ನು ಊರಿನ ಜನರು ಪೂಜಿಸುವ ಅವಕಾಶಗಳು ಇವೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಗ್ರಾಮದೇವತೆಗಳಾದ ಉಕ್ಕಡ ಮಾರಮ್ಮ, ದಂಡಿನ ಮಾರಮ್ಮ ಹಾಗೂ ಅರಕೆರೆಯ ಮಾರಮ್ಮ ಮುಂತಾದ ಗ್ರಾಮದೇವತೆಗಳು ಇದಕ್ಕೆ ಉದಾಹರಣೆಯಾಗಿವೆ. ಹೀಗೆ ಅನೇಕ ವಿಧಗಳಲ್ಲಿ ಜನಪದರ ಜೀವನದಲ್ಲಿ ಗ್ರಾಮದೇವತೆಗಳು ಹಾಸುಹೊಕ್ಕಾಗಿ ಬೆರೆತುಕೊಂಡಿರುವುದನ್ನು ಸಹಜವಾಗಿ ಕಾಣುತ್ತೇವೆ. ಹೆಣ್ಣು ದೇವತೆಗಳಲ್ಲದೆ ಗಂಡು ದೇವತೆಗಳು  ಬೆಳೆದುಕೊಂಡು ಬಂದು ಅವುಗಳೂ ಕೂಡ ಗ್ರಾಮದೇವರೆಂದು ಕರೆಸಿಕೊಂಡವು.

ಈ ಹಿನ್ನೆಲೆಯಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ, ಮನುಕುಲದ ಚರಿತ್ರೆ ತುಂಬಾ ಆಸಕ್ತಿದಾಯಕವಾದುದು ಆಗಿದೆ. ಆಹಾರ ಸಂಗ್ರಹಣೆ, ಬೇಟೆ, ಪಶುಪಾಲನೆ ಕೃಷಿ ಮತ್ತು ಕೈಗಾರಿಕೆ ಈ ಹಂತದಲ್ಲಿ ವಿಕಸನಗೊಂಡ ಮನುಷ್ಯ ಸಂಸ್ಕೃತಿ ಇಂದು ಅತ್ಯಂತ ಸಂಕೀರ್ಣ ರೂಪ ತಾಳಿ ನೂರಾರು ಕವಲುಗಳಲ್ಲಿ ನಮ್ಮ ಮುಂದೆ ಚಾಚಿವೆ. ಈ ಪಶುಪಾಲನೆ ಕೃಷಿ ಹಂತಗಳಲ್ಲಿ ಉಗಮಗೊಂಡಿರಬಹುದಾದ ನಮ್ಮ ಗ್ರಾಮದೇವತೆಗಳ ವಿಚಾರವು ಇವತ್ತಿನ ಆಧುನಿಕ ಯುಗದಲ್ಲಿ ಯಾವ ರೀತಿ ಸ್ಪಂದಿಸುತ್ತದೆ ಎಂಬುದು ಕುತೂಹಲಕರ ವಿಚಾರವಾಗಿದೆ.

ಆದರೂ ಈ ಗ್ರಾಮದೇವತೆಗಳ ಉಗಮ ಹೀಗೇ ಆಯಿತು ಎಂದು ಹೇಳಲು ಬರುವುದಿಲ್ಲ. ನಮ್ಮ ಇಡೀ ಸಾಮಾಜಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿ ನಾನಾ ಕಾರಣಗಳಿಗೆ ರೂಪುಗೊಂಡು ಕ್ರಮೇಣ ಆರಾಧನೆಗೆ ಒಳಗಾದ ದೇವತೆಯರು ಬಹಳಷ್ಟು ಇದ್ದಾರೆ. ನಮ್ಮ ಕರ್ನಾಟಕದ ಅಥವಾ ದಕ್ಷಿಣ ಭಾರತದ ಬಹು ಭಾಗಗಳಲ್ಲಿ ಕಂಡುಬರುವ ಮಾಸ್ತಮ್ಮಗಳು ಮಹಾಸತಿ ಯಾದ ತ್ಯಾಗಜೀವಿ ಮಹಿಳೆಯರ ನೆನಪಿನ ಆಕೃತಿಗಳು. ಮಾರಮ್ಮಗಳ ಹಿನ್ನಲೆ ಅದಕ್ಕಿಂತ ಭಿನ್ನವಾದುದ್ದು. ಉತ್ತಮ ಕುಲದ ಸ್ತ್ರೀ ದಲಿತ ವರ್ಗದ ಪುರುಷನನ್ನು ಮದುವೆಯಾದ ತಪ್ಪಿಗಾಗಿ ಅಗ್ನಿಗೆ ಅಹುತಿಯಾಗಬೇಕಾಗುತ್ತದೆ. ಈ ಪುರಾಣದ ಹಿನ್ನಲೆಯಲ್ಲಿ ಅನೇಕ ಮಾರಮ್ಮಗಳ ಹಬ್ಬ ಆಚರಣೆಗಳು ಇಂದಿಗೂ ರೂಢಿಯಲ್ಲಿರುವುದನ್ನು ಹಳ್ಳಿಗಳಲ್ಲಿ ಕಾಣಬಹುದು. ಸಾಮೂಹಿಕವಾಗಿ ಬರುತ್ತಿದ್ದ ರೋಗಗಳಿಗೆ ಇಡೀ ಹಳ್ಳಿಯ ಜನರೇ ತುತ್ತಾಗುತ್ತಿದ್ದ ಕಾಲದಲ್ಲಿ ದುಷ್ಟಶಕ್ತಿಯೇ ಇದಕ್ಕೆ ಕಾರಣ ಎಂದು ಭಾವಿಸಿ ಆ ಶಕ್ತಿಗೆ ತಮ್ಮ ಕಲ್ಪನೆಯ ಅನೇಕ ರೂಪಗಳನ್ನು ಕೊಟ್ಟು ಪೂಜಿಸಿರುವ ಅನೇಕ ಬಗೆಯ ದೇವತೆಗಳೂ ಉಂಟು. ಹೀಗಾಗಿ ಮಾರಮ್ಮ, ಚೌಡಮ್ಮ, ಪಡಲದಮ್ಮ, ಮಾಯಮ್ಮ, ಮಾಸ್ತಮ್ಮ, ಮಸಣಮ್ಮ, ಹುಲಿಗೆಮ್ಮ, ಗುಡ್ಡದಮ್ಮ, ಎಲ್ಲಮ್ಮ, ಮುಂತಾಗಿ ನೂರಾರು ದೇವತೆಯರು ಉಗಮಗೊಂಡರು.

“ಇದೇ ರೀತಿ ಗಂಡು-ದೇವತೆಗಳ ಸೃಷ್ಟಿ ಇನ್ನೊಂದು ಬಗೆಯಾಗಿದೆ. ಬಹುಶಃ ಇದು ಬೇಟೆ ಮತ್ತು ಪಶುಪಾಲನೆ ಹಂತದಲ್ಲೂ ಆಗಿರಬಹುದಾದ ಉದಾಹರಣೆಗಳು ಇವೆ. ಜುಂಜಪ್ಪ ಪಶುಸಂಗೋಪನೆ ಹಂತದ ದೇವರೆಂದು, ಬ್ಯಾಟರಾಯ ಬೇಟೆ ಹಂತದ ದೇವರೆಂದೂ ಕರೆಯಬಹುದು. ಹೀಗೆಯೇ ಸಮಾಜದ ಉನ್ನತಿಗಾಗಿ ಹೋರಾಡಿ ಶ್ರಮಿಸಿ ಜನವರ್ಗದ ಬೆಂಬಲ ಪಡೆದು ನಾಯಕರಾದ ಕೆಲವು ಸಾಂಸ್ಕೃತಿಕ ವೀರರೂ ದೇವರುಗಳಾದುದುಂಟು. ಇದಕ್ಕೆ ಉದಾಹರಣೆಯಾಗಿ ಮಾದೇಶ್ವರ, ಮಂಟೇಸ್ವಾಮಿ, ಸಿದ್ಧಪ್ಪಾಜಿ, ಭರಮಪ್ಪ, ಅಣ್ಣಪ್ಪ, ಇಗ್ಗುತಪ್ಪ, ಮುಂತಾದ ವೀರರು ಕಾಲ ಕಳೆದಂತೆ ದೇವರುಗಳಿಗೆ ಪೂಜಿಸಲ್ಪಟ್ಟರು.”

ಆರ್ಯರ ಆಗಮನದ ನಂತರ ಅವರ ವಸಾಹತುಶಾಹಿ ದಬ್ಬಾಳಿಕೆಯಲ್ಲಿ ತಮ್ಮ ಸ್ವಂತಿಕೆಯನ್ನು ಕಳೆದುಕೊಳುತ್ತಾ ಬಂದ ದ್ರಾವಿಡರು ಅಥವಾ ಇಂಡಿಯಾದ ಮೂಲ ನಿವಾಸಿಗಳು, ವರ್ಣಭೇದ ನೀತಿಯ ಶ್ರೇಣೀಕರಣಕ್ಕೆ ಒಳಗಾದರು. ಅನಂತರ ಗ್ರಾಮೀಣ ಭಾರತದ ಆರಾಧನಾ ವಿಚಾರದಲ್ಲಿ ಆದ ಬದಲಾವಣೆಗಳು ಇನ್ನಷ್ಟು ಕುತೂಹಲಕರ ಸಂಗತಿಯಾಗಿದೆ. ಅವರ ದೇವತೆಯರಾದ ಬ್ರಹ್ಮ, ಮಹೇಶ್ವರ, ಲಕ್ಷ್ಮಿ, ಸರಸ್ಪತಿ, ಪಾರ್ವತಿ, ಅಗ್ನಿ, ವಾಯು, ಇಂದ್ರ ಮುಂತಾದ ಆಮದು ದೇವತೆಗಳ ಗಾಢ ಪ್ರಭಾವ ಆಯಿತು. ಈ ಕಾರಣಕ್ಕಾಗಿ ಚೌಡಮ್ಮ ಚೌಡೇಶ್ವರಿಯಾಗಿ, ಮಾರಮ್ಮ ಮಹೇಶ್ವರಿಯಾಗಿ, ಮಾದಪ್ಪ ಮಾದೇಶ್ವರನಾಗಿ, ಸಿದ್ಧಪ್ಪ-ಸಿದ್ಧಲಿಂಗೇಶ್ವರನಾಗಿ ಪರಿವರ್ತಿತವಾಗಬೇಕಾಯಿತು. ಮಾಂಸಾಹಾರಿಗಳಾಗಿದ್ದ ದೇವರುಗಳು ಶಿಷ್ಟವಾದ ಹಲವು ಪ್ರಸಂಗಗಳೂ ಇವೆ. ಗುಡಿ ಗೋಪುರಗಳ ನಿರ್ಮಾಣ, ಸಂಸ್ಕೃತಿ ಬೆಳೆದ ನಂತರ ಅಸ್ಪೃಶ್ಯತೆಯ ಕಾರಣಕ್ಕಾಗಿ ಅನೇಕ ಜನಾಂಗಗಳು ಇಂದಿಗೂ ಗುಡಿಯ ಆಚೆ ಇರಬೇಕಾದ ಪರಿಸ್ಥಿತಿ ಕೂಡ ಉಂಟಾಯಿತು. ಆರ್ಯರ ಪ್ರಭಾವ ಎಲ್ಲಿಯವರೆಗೆ ಆಯಿತೆಂದರೆ ಸಾಮೂಹಿಕವಾಗಿ ಆರಾಧಿಸಲ್ಪಡುತ್ತಿದ್ದ ದೇವರುಗಳು ಕೆಲವೇ ವರ್ಗದ ಸ್ವತ್ತುಗಳಾಗಿ ಮಾರ್ಪಟ್ಟಿರುವುದನ್ನು ಇಂದಿಗೂ ಕಾಣಬಹುದಾಗಿದೆ.

ಈ ಮೇಲಿನ ಎಲ್ಲಾ ಪ್ರಭಾವಗಳ ನಂತರವು ಗ್ರಾಮದೇವತೆಗಳು ನಮ್ಮ ಮೂಲ ಸಂಸ್ಕೃತಿಯ ಪಳೆಯುಳಿಕೆಗಳನ್ನು ಉಳಿಸಿಕೊಂಡಿವೆ ಎನ್ನುವುದೇ ಒಂದು ವಿಶಿಷ್ಟತೆಯಾಗಿದೆ. ಈ ಪಳೆಯುಳಿಕೆಗಳು ಗೋಚರಗೊಳ್ಳುವುದು ಆಯಾ ದೇವತೆಗಳ ಹಬ್ಬ ಮತ್ತು ಜಾತ್ರೆಗಳಲ್ಲಿ. ಶ್ರೇಣೀಕೃತ ಸಮಾಜ ವ್ಯವಸ್ಥೆಯನ್ನು ಮೀರಿ ಗುಡಿಗೋಪುರಗಳಿಂದ ಹೊರಬಂದು ಸಾಮೂಹಿಕವಾಗಿ ಆರಾಧನೆಗೊಳಪಡುವಾಗ ಹಳೆಯದನ್ನು ನೆನಪಿಸುವ ಅನೇಕ ಸಂದರ್ಭಗಳನ್ನು ಕಾಣುತ್ತೇವೆ. ಈ ಸಾಮೂಹಿಕ ಆಚರಣೆಗಳು ಜನಸಮುದಾಯದ ಆಶಯಗಳಾಗಿ ಹೊರಹೊಮ್ಮುತ್ತವೆ. ಕೆಳವರ್ಗದವರ ಸಿಟ್ಟು, ಸ್ತ್ರೀಯ ಆಕ್ರೋಶ, ಮುಕ್ತತೆ ಬಯಸುವ ಮನೋವೃತ್ತಿ, ಮತಾಂತರ ಕ್ಲೇಶ ಭಾವನೆ, ತನ್ನನ್ನೇ ತಾನು ಶಿಕ್ಷಿಸಿಕೊಳ್ಳುವ ಪಶ್ಚಾತ್ತಾಪ ಮುಂತಾಗಿ ಹತ್ತಾರು ಬಗೆಯ ಸಂದರ್ಭಗಳು. ಈ ಹಬ್ಬ ಜಾತ್ರೆಗಳಲ್ಲಿ ಅದರಲ್ಲೂ ಗ್ರಾಮದೇವತೆಗಳ ಹಬ್ಬಗಳಲ್ಲಿ ಪ್ರದರ್ಶನಗೊಳ್ಳುತ್ತವೆ.

ಈ ಗ್ರಾಮದೇವತೆಗಳು ಹುಟ್ಟಿಕೊಂಡ ನಂತರ ಆ ದೇವತೆಗಳ ಬಗೆಗೆ ಅನೇಕ ದಂತಕಥೆಗಳು,  ಐತಿಹ್ಯಗಳು ಅವುಗಳ ಸುತ್ತ ಹೆಣೆದುಕೊಂಡು ಬಂದಿರುವುದನ್ನು ಸಹಜವಾಗಿ ಕಾಣುತ್ತೇವೆ. ಇಂತಹವುಗಳ ಬಗೆಗೆ ಅಲ್ಲಲ್ಲಿ ಉಲ್ಲೇಖಗಳನ್ನು ಸಹ ಕೊಡಬಹುದು. ಉದಾಹರಣೆಗೆ ಗ್ರಾಮದೇವತೆಯ ಸೃಷ್ಟಿಯ ಬಗೆಗೆ ಒಂದು ದಂತಕಥೆ ಇದೆ. ಪರಶುರಾಮ ತನ್ನ ತಂದೆ ಜಮದಗ್ನಿ ಆಜ್ಞೆಯ ಪ್ರಕಾರ ಸ್ವತಃ ತಾಯಿ ರೇಣುಕೆಯ ತಲೆಯನ್ನು ಕಡಿದು ಹಾಕುವ ಪ್ರಸಂಗ ಬಂದಿತು. ತಂದೆಯ ಅಪ್ಪಣೆಯನ್ನು ಮೀರುವಂತಿಲ್ಲ. ತಾಯಿಯನ್ನು ಉಳಿಸುವಂತಿಲ್ಲ. ಇಂತಹ ಇಕ್ಕಟ್ಟಿನ ಸಮಯದಲ್ಲಿ ಕೊಡಲಿ ತೆಗೆದುಕೊಂಡು ತಾಯಿ ರೇಣುಕೆಯ ತಲೆಯನ್ನು ಕಡಿದು ಹಾಕಿದ. ರೇಣುಕೆಯ ರುಂಡ ಬಿದ್ದ ಕಡೆ ಒಂದಕ್ಕೆ ಎರಡರಂತೆ ಹೊಸ ತಲೆಗಳು ಹುಟ್ಟಿದವು. ಅವುಗಳನ್ನು ಕಡಿದು ಹಾಕಿದನು. ಅವು ಬಿದ್ದ ಕಡೆ ಎರಡಕ್ಕೆ ನಾಲ್ಕು ತಲೆಗಳು ಹುಟ್ಟಿದವು. ಹೀಗೆ ಅಸಂಖ್ಯಾತ ತಲೆಗಳು ಹುಟ್ಟಿಕೊಂಡವು. ಕೊನೆಗೆ ಜಮದಗ್ನಿಯ ಅನುಗ್ರಹದಿಂದ ರೇಣುಕೆಗೆ ಜೀವದಾನವಾಯಿತು. ಆದರೆ ಉಳಿದ ಅಸಂಖ್ಯಾತ ತಲೆಗಳ ಗತಿ ಏನು? ಅವು ಗ್ರಾಮದೇವತೆಗಳಾಗಲಿ ಎಂದು ಪರಶುರಾಮ ವರ ನೀಡಿದನಂತೆ. ಅದರಂತೆ ರೇಣುಕೆಯ ತಲೆಯಿಂದ ಹುಟ್ಟಿದ ಅಸಂಖ್ಯಾತ ತಲೆಗಳು ಗ್ರಾಮದೇವತೆಗಳಾದವು. ಅವು ರೇಣುಕೆಯ ರುಂಡದ ಸಂಕೇತಗಳು. ಕೇವಲ ರುಂಡವಾದ್ದರಿಂದಲೇ ಇಡೀ ದೇಹ ಕಾಣದೆ ರುಂಡದ ಭಾಗವನ್ನು ಮಾತ್ರ ಪೂಜಿಸುವುದು ಎಂದು ಕೆಲವು ಜನರಲ್ಲಿ ನಂಬಿಕೆ ಇದೆ.

ಗ್ರಾಮದೇವತೆಗಳ ಪ್ರಾಚೀನತೆ

ಗ್ರಾಮದೇವತೆಗಳ ಕಲ್ಪನೆಯು ತುಂಬಾ ಪ್ರಾಚೀನವಾದದ್ದು. ವೇದ-ಉಪನಿಷತ್ತು ಮತ್ತು ಪುರಾಣಕ್ಕಿಂತಲೂ ಹಿಂದಿನದೆಂದು ಹೇಳಬಹುದು. ಹರಪ್ಪಾ, ಮೊಹೆಂಜೊದಾರೋ ಸಂಸ್ಕೃತಿಯಲ್ಲಿ ಕ್ರಿ.ಪೂ. ೪ ರಿಂದ ೨ನೇ ಶತಮಾನದ ನಾಗರಿಕತೆಯಲ್ಲಿ ದೇವತಾ ವಿಗ್ರಹಗಳು ದೊರಕಿದ ಬಗೆಗೆ ಉಲ್ಲೇಖಗಳನ್ನು ಕಾಣಬಹುದು. ಮಾನವನು ಗ್ರಾಮಜೀವನವನ್ನು ಪ್ರಾರಂಭ ಮಾಡಿದ ಮೇಲೆ ಗ್ರಾಮದೇವತೆಯ ಸೃಷ್ಟಿಯಾಯಿತು. ಆದರೆ ಮಾನವ ಎಂದಿನಿಂದ ಗ್ರಾಮದಲ್ಲಿ ನೆಲೆಯೂರಿ ನಿಂತ? ಯಾವ ಕಾಲದಲ್ಲಿ ಗ್ರಾಮದೇವತೆಗಳು ಸೃಷ್ಟಿಗೊಂಡು ಬಂದವು ಎಂದು ಸ್ಪಷ್ಟವಾಗಿ ಹೇಳಲು ಆಧಾರ ಸಾಮಾಗ್ರಿಗಳ ಕೊರತೆ ತುಂಬಾ ಇದೆ.

ಮುಖ್ಯವಾಗಿ ಗ್ರಾಮದೇವತೆಗಳ ಪ್ರಾಚೀನತೆ ಕುರಿತಂತೆ ಪ್ರೊ.ಎಚ್.ವಿ. ನಾಗೇಶ್ ಅವರು “ಗ್ರಾಮಗಳು ನೆಲೆಗೊಂಡ ದಿನದಂದಿನಿಂದ ಅಂದರೆ ವೇದಪೂರ್ವ ಕಾಲದಿಂದಲೂ ಗ್ರಾಮದೇವತೆಯ ಸಂಪ್ರದಾಯ ಇದ್ದಿರಬಹುದೆಂದು”ಅಭಿಪ್ರಾಯಪಡುವರು. ಆದರೆ ಅಲ್ತೆಕರರು ಮೂರ್ತಿ ಪೂಜೆಯ ಆರಂಭ ಮತ್ತು ಬೆಳವಣಿಗೆ ವಿಷಯವಾಗಿ ಇನ್ನೂ ಕೆಲಸ ಆಗಬೇಕಾಗಿದೆ. ಮನೆಯಲ್ಲೇ ಆಗಲಿ ದೇವತಾಮೂರ್ತಿಯನ್ನು ಪೂಜಿಸುವ ವಿಷಯವನ್ನು ಧರ್ಮಸೂತ್ರಕಾರರೂ ಸಾಮಾನ್ಯವಾಗಿ ಹೇಳುವುದಿಲ್ಲ. ಮನು ಕೂಡ ಹೇಳಿಲ್ಲ. ದೇವಸ್ಥಾನವನ್ನು ಪೂಜಿಸುವ ಸಂಪ್ರದಾಯ ಅಶೋಕನಿಗಿಂತ ಇತ್ತೀಚಿನದೆಂದು ಕಾಣುತ್ತದೆ ಎಂಬ ಅಭಿಪ್ರಾಯವೂ ಇದೆ.

ದೇವಸ್ಥಾನಗಳು ಸಾರ್ವಜನಿಕ ಪೂಜಾ ಕೇಂದ್ರಗಳೆಂದು ಮುಂದೆ ಪರಿಗಣಿತವಾದವು. ಇಂದಿಗೂ ಕೆಲವೊಂದು ಅಂಶಗಳು ಹಳ್ಳಿ-ಪಟ್ಟಣಗಳಲ್ಲಿ ಉಳಿದುಕೊಂಡು ಬಂದಿವೆ. ದೇವರಿಗೆ ವೀಳ್ಯವನ್ನು ಸ್ವೀಕರಿಸುವ ಸಂಪ್ರದಾಯವನ್ನು ಪ್ರಾರಂಭ ಮಾಡಿದರು ಆರ‍್ಯರು. ಇವರು ಇದನ್ನು ದ್ರಾವಿಡರಿಂದ ಸ್ವೀಕಾರ ಮಾಡಿದರು. ಈ ವೀಳ್ಯೆಯನ್ನು ಸ್ವೀಕರಿಸುವ ಸಂಪ್ರದಾಯವನ್ನು ಅವಲೋಕಿಸಿದರೆ ಗ್ರಾಮದೇವತೆಗಳು ಹಳ್ಳಿಯ ಜನರ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತುಕೊಂಡಿದ್ದವು ಎಂದು ಹೇಳಬಹುದು. ಇವತ್ತಿಗೂ ಪ್ರತಿಯೊಂದು ಹಳ್ಳಿ-ಹಳ್ಳಿಗಳಲ್ಲೂ ದೇವಾಲಯಗಳು ಸ್ಥಾಪನೆಗೊಂಡಿದುದರ ಬಗೆಗೆ ಅನೇಕ ಐತಿಹ್ಯಗಳು ಕೈಗೆ ಸಿಕ್ಕುತ್ತವೆ. ಹೀಗೆ ಇನ್ನೂ ಅನೇಕ ಅಂಶಗಳನ್ನು ಊಹಿಸಲೂ ಅವಕಾಶವಿದೆ.

ಅದೇ ರೀತಿ ಜಿ.ಆರ್. ತಿಪ್ಪೇಸ್ವಾಮಿ ಅವರು ಗ್ರಾಮದೇವತೆಗಳ ಆರಾಧನೆಯು ಆರ್ಯ ಪೂರ್ವಕಾಲದಿಂದಲೂ ನಡೆಯುತ್ತಾ ಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುವರು.

ಹಾಗೆಯೇ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಗ್ರಾಮದೇವತೆಯ ಕಲ್ಪನೆ ಅತ್ಯಂತ ಪ್ರಾಚೀನವಾದುದು, ಆರ್ಯರ ಉಪನಿಷತ್ತು ವೇದಗಳ ಕಾಲಕ್ಕೆ ಸೇರಿದವು ಎಂದು ಹೇಳಲಾಗುತ್ತದೆ. ರಾಮಾಯಣದ ಕಾಲಕ್ಕಿಂತಲೂ ಹಿಂದಿನಿಂದಲೂ ದೇವತೆ ಇದ್ದಿರಬೇಕು ಎಂದಿದ್ದಾರೆ.

ಹೀಗಾಗಿ ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದರೆ ಗ್ರಾಮದೇವತೆಗಳ ಪ್ರಾಚೀನತೆಯ ಬಗೆಗೆ ವಿದ್ವಾಂಸರಲ್ಲಿಯೂ ಖಚಿತವಾದ ಅಭಿಪ್ರಾಯಗಳಿಲ್ಲವೆಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ಆದರೆ ಗ್ರಾಮದೇವತೆಗಳ ಬಗೆಗೆ ಊಹಿಸಲು ಸಾಕಷ್ಟು ಆಧಾರಗಳು ಸಿಗುತ್ತವೆ. ಆದರೆ ಅಭ್ಯವಾದ ಆಧಾರಗಳ ಮೂಲಕ ವಿವೇಚಿಸಿದರೆ ಖಚಿತವಾದ ಅಭಿಪ್ರಾಯ ಮೂಡಿಬರುವುದಿಲ್ಲ.

ಅಡಿ ಟಿಪ್ಪಣಿಗಳು

೧.    ಪ್ರೊ. ಡಿ. ಲಿಂಗಯ್ಯ, ಕರ್ನಾಟಕದ ಗ್ರಾಮದೇವತೆಗಳು, ಪು. ೭.

೨.    ಪ್ರೊ. ಹಿ.ಚಿ. ಬೋರಲಿಂಗಯ್ಯ, ೧೯೯೫, ಬುಡಕಟ್ಟು ದೈವಾರಾಧನೆ, ಪು. ೩೪

೩.    ಡಿ. ಲಿಂಗಯ್ಯ, ಕರ್ನಾಟಕ ಗ್ರಾಮದೇವತೆಗಳು, ಪು. ೮-೯.

೪.    ಎಚ್.ವಿ. ನಾಗೇಶ್, ಗ್ರಾಮವ್ಯಾಸಂಗ, ನಮ್ಮ ಗ್ರಾಮದೇವತೆಗಳು, ಪು. ೧೪.

೫.    ಎಚ್.ವಿ. ನಾಗೇಶ್, ಗ್ರಾಮವ್ಯಾಸಂಗ, ಪು. ೨೫.