ಜನಪದರಲ್ಲಿ ‘ಏಳು’ ಎಂಬುದರ ಕಲ್ಪನೆಯು ಬಹಳ ಹಿಂದಿನಿಂದಲೂ ರೂಢಿಯಲ್ಲಿರುವುದನ್ನು ಕಾಣಬಹುದಾಗಿದೆ. ಅಂದರೆ ಹಿಂದೆ ಪಶುಪಾಲಕ ವಲಸೆಗಾರ ದ್ರಾವಿಡರಲ್ಲಿದ್ದ ಆಡಳಿತ ವ್ಯವಸ್ಥೆ ಕೆಲವು ಈ ಏಳು ಎಂಬ ಸಂಖ್ಯೆಯನ್ನು ಆಧರಿಸಿ ಜಾರಿಯಲ್ಲಿತ್ತು. “ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸೆಟ್ಟಿಕೆರೆ ಗ್ರಾಮದ ಕೆಂಪಮ್ಮನ ಜಾತ್ರೆಯ ವಿವರಗಳಲ್ಲಿ ಬರುವ ಮಾಹಿತಿ ಈ ಮಾತಿಗೆ ನಿದರ್ಶನವಾಗಿದೆ.” ಕೆಂಪಮ್ಮ ಸೆಟ್ಟಿಕೆರೆಯನ್ನು ಒಳಗೊಂಡು ಏಳು ಹಳ್ಳಿಗಳಿಗೆ ಗ್ರಾಮದೇವತೆ. ಏಳು ಹಳ್ಳಿಯ ರಾಜ್ಯದ ಜನರಲ್ಲಿ ಪ್ರತಿಯೊಂದು ಜಾತಿಯಿಂದಲೂ ಒಬ್ಬೊಬ್ಬ ಪ್ರತಿನಿಧಿಯನ್ನು ಆರಿಸುತ್ತಾರೆ. ಈ ಪ್ರತಿನಿಧಿಗಳಿಂದ ಕೂಡಿದ ಸಮಿತಿ ಕೆಂಪಮ್ಮನಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ನೋಡಿಕೊಳ್ಳುತ್ತದೆ. ಇಲ್ಲಿ ಮುಖ್ಯವಾಗಿ ಕಾಲಕಾಲಕ್ಕೆ ತಕ್ಕಂತೆ ಕೆಲವು ಪರಿಷ್ಕರಣಗಳಾಗಿರುವಂತೆ ತೋರುತ್ತದೆ. ಜಾತಿ ವ್ಯವಸ್ಥೆಯ ಪೂರ್ವದಲ್ಲಿ ಅಸ್ಥಿತ್ವದಲ್ಲಿದ್ದ ವಿಭಿನ್ನ ಕುಲಗಳಿಂದ ಕೆಂಪಮ್ಮನ ಜಾತ್ರೆ ಸಮಿತಿ ಆಗುತ್ತಿದ್ದಂತೆ ತೋರುವುದು. ಈ ಕುಲಗಳು ಒಂದೇ ಬುಡಕಟ್ಟಿಗೆ ಸೇರಿದವಾಗಿದ್ದವು. ಅವು ಪಶುಪಾಲಕ ವಲಸೆಗಾರರು ಎಂದು ಮತ್ತೆ ಹೇಳುವ ಪ್ರಮೇಯವಿಲ್ಲ. ಒಂದೇ ಹೆಣ್ಣು ದೇವತೆ, ಅನೇಕ ಕುಲಗಳನ್ನು ಒಂದೆಡೆ ತರುವ ಕೇಂದ್ರಶಕ್ತಿಯಾಗಿರುವುದು ಇಲ್ಲಿನ ಇನ್ನೊಂದು ಮುಖ್ಯ ಸಂಗತಿ.

ಅದೇ ರೀತಿ ಆಂಧ್ರದ ವೆಲಮ ಜಾತಿಯ ಒಂದು ವಿಭಾಗದ ವಿಧವೆ ಹೆಂಗಸು ಏಳು ಸಲ ಮದುವೆಯಾಗುವ ಪದ್ಧತಿ ಇದೆ. ಕಾಡು ಸ್ಥಿತಿಯಲ್ಲಿರುವ ಆಂಧ್ರದ ಯಾನಾಡಿ ಹೆಂಗಸರೂ ಏಳು ಸಲ ಮದುವೆಯಾಗಬಹುದಾಗಿದೆ. ಜೋಗಿ ಜಾತಿಯ ಹೆಂಗಸರು ಏಳು ಸಲ ಮದುವೆಯಾಗುವ ಪದ್ಧತಿ ಇದೆ.

ಮತ್ತೆ ತಮಿಳುನಾಡಿನ ಕೆಲವು ಭಾಗಗಳಿಗೆ ವಲಸೆ ಹೋದ ಕನ್ನಡ ಕೃಷಿಕರಲ್ಲಿ ಅನುಪ್ಪನ್ ಜಾತಿಯು ಒಂದು. ಇವರು ಮದುವೆಯಲ್ಲಿ ತಾಳಿಯನ್ನು ಕಟ್ಟುವುದಿಲ್ಲ. ಆದರೆ ನವ ದಂಪತಿಗಳ ಬೆರಳನ್ನು ಏಳು ವಿಭಿನ್ನ ಸಂದರ್ಭಗಳಲ್ಲಿ ಕೂಡಿಸುವರು. ಇದು ಅವರಲ್ಲಿ ಕಡ್ಡಾಯದ ವಿಧಿ ಆಚರಣೆಯಾಗಿದೆ.

ಹಾಗೆಯೇ ನೀಲಗಿರಿಯ ಕೃಷಿಕ ಬುಡಕಟ್ಟು ಎಂದೇ ಪ್ರಸಿದ್ಧವಾಗಿರುವ ಬಡಗರಲ್ಲಿ ಏಳರ ಪ್ರಸ್ತಾಪ ಬಹಳಷ್ಟು ಸಂದರ್ಭಗಳಲ್ಲಿ ಬರುತ್ತದೆ. ಇವರು ಕನ್ನಡ ಬುಡಕಟ್ಟುಗಳಲ್ಲಿ ಪ್ರಮುಖರು. ಆದರೆ ಇವರು ಮೂಲತಃ ಕೃಷಿಕರಲ್ಲ, ಇವರು ವಲಸೆಗಾರ ದ್ರಾವಿಡ ಜನ. ಬಡಗರ ಮೂಲದ ಐತಿಹ್ಯದಲ್ಲಿ ಏಳರ ಪ್ರಸ್ತಾಪ ಅನೇಕ ಸಲ ಬರುತ್ತದೆ. ಏಳು ಸೋದರರು ತಲಮಲೈ ಬೆಟ್ಟದಲ್ಲಿದ್ದರು. ಯಾವುದೋ ಮಹಮ್ಮದ್ ಅರಸ ತಮ್ಮ ಸೋದರಿಯನ್ನು ಆಶಿಸಿದ್ದರಿಂದ ಇವರು ವಲಸೆ ಬಂದರು. ಈ ಏಳು ಸೋದರರೇ ಹೆತ್ತಪ್ಪನ ರೂಪದಲ್ಲಿ ಪೂಜಿಸಲ್ಪಡುತ್ತಾರೆ. ಇವರ ವೃತ್ತಿ ಬುಡಕಟ್ಟು ವಿವರಗಳು ಇವರು ಪಶುಪಾಲಕ ವಲಸೆಗಾರರಾಗಿದ್ದರೆಂಬುದನ್ನು ಖಚಿತಪಡಿಸುತ್ತದೆ. ಕೃಷಿ ಸಂಬಂಧಿ ಆಚರಣೆಗಳಲ್ಲಿ ಏಳು ಪ್ರಕಾರದ ಕಾಳುಗಳನ್ನು ಹಳ್ಳಿಗಳಲ್ಲಿ ದೆವ್ವ, ಗುಡಿಪೂಜಾರಿ ಮತ್ತು ಒಬ್ಬ ಕುರುಬ ಇಬ್ಬರೂ ಸೇರಿ ಬಿತ್ತುವರು. ಹಾಗೆಯೇ ಕೆಲವು ಹಳ್ಳಿಗಳಲ್ಲಿ ಬೆಂಕಿ ಕೊಂಡವನ್ನು ಹಾಯುವ ವಿಧಿ ಆಚರಣೆಯಲ್ಲಿ ಏಳು ಜನರನ್ನು ಹಾಯಿಸುವ ಪದ್ಧತಿ ಇದೆ. ಈ ಪದ್ಧತಿಯು ಬಡಗರಲ್ಲಿಯೂ ಇರುವುದನ್ನು ಕಾಣಬಹುದಾಗಿದೆ. ಬಡಗರಲ್ಲಿ ಶವಸಂಸ್ಕಾರ ಮಾಡುವ ಸಂದರ್ಭದಲ್ಲಿ ಏಳು ಹಂತದ ತೇರು ಕಟ್ಟುವ ಪದ್ಧತಿಯು ಇವರಲ್ಲಿ ಇದೆ. ಅದೇ ರೀತಿ ಜಾತ್ರೆಗಳಲ್ಲಿ ಏಳು ಕುಡಿ ತೇರನ್ನು ನಿರ್ಮಿಸಿ ಎಳೆಯುತ್ತಾರೆ. ಹಾಗೆಯೇ ತಳಗವಾದಿ ಮಾರಮ್ಮನ ಕೊಂಡಕ್ಕೆ ಏಳು ಬಂಡಿ ಕಟ್ಟಿಗೆ ಬರಬೇಕು. ಇದೇ ಕ್ರಮ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕು ಕಾದಲಗೆರೆ ವಗ್ರಿ ಕಾಳಮ್ಮನ ಜಾತ್ರೆಯಲ್ಲೂ ಇದೆ.

ಹಾಸನದ ಹಾಸನಾಂಬೆ ಸಪ್ತಮಾತೃಕೆಯರಲ್ಲಿ ಒಬ್ಬಳು ಎಂಬ ಪ್ರತೀತಿ ಇದೆ. ಜಾತ್ರೆಯ ಕೊನೆಯ ದಿನ ಹಾಸನಾಂಬೆಗೆ ಹಾಕಿದ್ದ ಒಡವೆ ಪೆಟ್ಟಿಗೆಯ ಪೂಜೋತ್ಸವ ನಡೆದು ಬಾಗಿಲು ಮುಚ್ಚುತ್ತಾರೆ.

ಮಲ್ಹಾರಿ ಮಹಾತ್ಮೆಯ ಪ್ರಕಾರ ಸಪ್ತ ಧರ್ಮಪುತ್ರರ ಅಪೇಕ್ಷೆಯಂತೆ ಶಿವನು ಸ್ವಯಂ ಭೂ ರೂಪ ತಾಳಿಸಿ ಮೈಲಾರ ಕ್ಷೇತ್ರಗಳಲ್ಲಿ ಅವತರಿಸಿದ ಎಂಬ ಪ್ರತೀತಿ ಇದೆ.

ಸವದತ್ತಿ ಎಲ್ಲಮ್ಮದೇವಿ ಏಳು ಕೊಳ್ಳದವಳು ಎಂಬುದು ಪ್ರಖ್ಯಾತ ಸಂಗತಿ. ಅದೇ ರೀತಿ ಮೈಲಾರದ ದೇವರು ಏಳು ಕೋಟಿ ಹಿಂದೆ ಏಳ್ಕೋಟಿ ಸಮಯ ಎಂಬುದು ಪಂಥವಾಗಿತ್ತು.

ಏಳು ಕೋಟೆಗಳಲ್ಲಿರುತ್ತಿದ್ದ ಮೈಲಾರಲಿಂಗ ಪಂಥದ ಪ್ರತ್ಯೇಕ ವಿಶ್ಲೇಷಣೆಯ ಅಗತ್ಯವಿದೆ. ಶಿಶ್ನಾರಾಧಕ ಪಶುಪಾಲಕ ವಲಸೆಗಾರ ಕುರುಬರ ಮಾರಡಿಗಳ ದೇವರು. ಮೈಲಾರಲಿಂಗ ಇವರೇ ಸ್ವಯಂಭು ಲಿಂಗಗಳ ಸ್ಥಾಪಕರು. ನಾಗರಾದ ಕೊಲೆ-ಮಾದಿಗರನ್ನು ನಾಶಮಾಡಿ ಅಂದರೆ ಹುತ್ತಗಳನ್ನು ನಾಶ ಮಾಡಿ ಅಲ್ಲಿ ತಮ್ಮ ಅಧಿಕಾರವನ್ನು ಅಂದರೆ ಸ್ವಯಂಭು ಲಿಂಗವನ್ನು ಸ್ಥಾಪಿಸಿ ಇವರು ಈಗಿನ ಮಹಾರಾಷ್ಟ್ರ, ಕರ್ನಾಟಕ, ಆಂಧ್ರದ ಪ್ರದೇಶಗಳಲ್ಲಿ ಬಹು ವ್ಯಾಪಕವಾಗಿ ನೆಲೆಯೂರಿದರು. ಮಣಿ ಮಲ್ಲಾಸುರರು, ಹೊಲೆ ಮಾದಿಗರು. ಹೊಲೆ ಮಾದಿಗ ಮುಖಂಡರಾದ ಇವರನ್ನು ಸಂಹಾರ ಮಾಡಿ ಮೈಲಾರಲಿಂಗ ಸುಖ ವೈಭವದಲ್ಲಿ ಮೆರೆಯುತ್ತಾನೆ. ಈ ಆಚರಣೆಯನ್ನೇ ಇಂದಿಗೂ ಮೈಲಾರ ಖಂಡೋಬಾ ಜಾತ್ರೆಗಳಲ್ಲಿ ಪುನರನುಕರಿಸಲಾಗುತ್ತದೆ. ನಮಗಿಲ್ಲಿ ಪ್ರಸ್ತುತವಾದುದು. ಏಳು ಕೋಟಿ ಎಂಬ ಉದ್ಘೋಷ. ಇದು ಸಂಖ್ಯಾವಾಚಿ ಕೋಟಿಯಲ್ಲ. ನಾಮಪದ ಕೋಟೆ, ಮಹಾರಾಷ್ಟ್ರ. ಆಂಧ್ರ ಕರ್ನಾಟಕದ ಮೈಲಾರ ದೇಗುಲಗಳು. ಪ್ರಾಚೀನ ರೂಪದ ಕೋಟೆ ಆ ವಾರಗಳಲ್ಲಿರುತ್ತವೆ. ಇಲ್ಲಿ ಮುಖ್ಯವಾಗಿ ಏಳು ಎಂಬುದು ವಲಸೆಗಾರ ದ್ರಾವಿಡರ ಸಂಕೇತ. ಮಣಿ ಮಲ್ಲಾಸುರರು ಹೊಲೆ ಮಾದಿಗರೇ ಎಂಬುದನ್ನು ಸ್ಪಷ್ಟಪಡಿಸುವ ಒಂದು ಆಚರಣೆ ಈಗಲೂ ದೇವರಗುಡ್ಡದಲ್ಲಿ ಇದೆ. ಮೈಲಾರ ಪಂಥದಲ್ಲಿ ಪ್ರಸಿದ್ಧವಾಗಿರುವ ಭಾರತ ಹುಣ್ಣಿಮೆಯ ಜಾತ್ರೆಯಲ್ಲಿ ಕಡುಬಿನ ಕಾಳಗ, ಒಡೆಯರು ಮೂರು ಬಾಣಗಳನ್ನು ಬಿಟ್ಟ ನಂತರ ಹೊಲೆಯರವನೊಬ್ಬ ದೇವರ ಮುಂದೆ ಬಂದು ನಿಂತು ಕಕ್ಕಡಾರತಿ ಬೆಳಗಿ ಅದೇ ಕಕ್ಕಡದಿಂದ ಅಲ್ಲಿದ್ದ ಗೊರವರನ್ನು ಹೊಡೆಯುತ್ತಾರೆ. ಅದಾಗುವ ವೇಳೆಯಲ್ಲಿ ಆ ಹೊಲೆಯರವನು ಅಲ್ಲಿಂದ ಓಡಿ ಹೋಗಿ ಕುರುಬತೆವ್ವನ ಗುಡಿಯ ಸಮೀಪ ಅಡಗಿ ಕೊಳ್ಳುತ್ತಾನೆ.

ಇಲ್ಲಿ ಕಾಡುಗೊಲ್ಲರು ಮತ್ತು ಕುರುಬರ ಮೈಲಾರ ಪಂಥಗಳಲ್ಲಿರುವ ಕೆಲವು ಸಾಮ್ಯಗಳನ್ನು ವಿವರಿಸಬಹುದು. ಈ ಸಂಪ್ರದಾಯದಲ್ಲಿಯೂ ಕೂಡ ಏಳು ಸಂಖ್ಯೆ ಪದೇ ಪದೇ ಕಾಣಿಸಿಕೊಳ್ಳುತ್ತದೆ. ಏಳೂರು ಗೌಡರು ಏಳು ಕೆರೆಯಲ್ಲಿ ಏಳೇಳು ಸಲ ಸ್ನಾನ ಮಾಡುವುದು. ಏಳು ಕೊಪ್ಪರಿಕೆ ನೀರು, ಅಲೇಗೌಡನ ಏಳು ಕರುಗಳು-ಕೆಂಗುರಿ ಮಲ್ಲಪ್ಪನಲ್ಲಿ ಕ್ರಮೇಣ ಏಳು ಗೂಡಿನ ದನ, ಏಳು ಗೂಡಿನ ಮೇಕೆಗಳು, ಏಳು ಗೂಡಿನ ಕುರಿಗಳು ಆದುದು-ಮಾಟದಲ್ಲಿ ಏಳು ಕೋಟಿ ಗೊಂಬೆ ಬಳಸುವುದು ಇತ್ಯಾದಿಗಳಲ್ಲಿ ಇವನ್ನು ಕಾಣಬಹುದು. ಇದರಿಂದ ಮೈಲಾರ ಸಂಪ್ರದಾಯ ಮತ್ತು ಜುಂಜಪ್ಪನ ಸಂಪ್ರದಾಯಗಳ ನಡುವೆ ಗಾಢವಾದ ಸಂಬಂಧ ಸಂಪರ್ಕಗಳಿರುವುದು ಸ್ಪಷ್ಟವಾಗುತ್ತದೆ.

ಮದ್ದೂರು ತಾಲ್ಲೂಕಿನ ತೈಲೂರು ಪಟ್ಟಲದಮ್ಮ ಊರ ಹೊರ ಬಯಲಲ್ಲಿ ಮಣ್ಣಿನ, ಮೂರ್ತಿ, ಸುತ್ತಲ ಏಳು ಊರುಗಳನ್ನು ಕಾಯಲು ಅನುಕೂಲವಾಗುವಂತೆ ಸುತ್ತಲೂ ಗೋಡೆ ಕಟ್ಟಿಲ್ಲದಿರುವುದು ಕಂಡುಬರುತ್ತದೆ.

“ದಕ್ಷಿಣ ಕನ್ನಡ ಜಿಲ್ಲೆಯ ಕೊರಗರು ಉತ್ತರ ದ್ರಾವಿಡಕ್ಕೆ ಸೇರುವ ಭಾಷೆಯನ್ನಾಡುವುದರಿಂದ ಅವರು ಉತ್ತರದಿಂದ ದಕ್ಷಿಣಕ್ಕೆ ವಲಸೆ ಬಂದಿರಬಹುದೆಂದು ಶಂಕಿಸುವ ಡಾ. ಪುರುಷೋತ್ತಮ ಬಿಳಿಮಲೆಯವರು ತಮ್ಮ ಕೃತಿ ಕೊರಗರು ಎಂಬ ಪುಸ್ತಕದಲ್ಲಿ ಇವರ ಬಗ್ಗೆ ಕೊಡುವ ಇತರ ವಿವರಗಳಲ್ಲಿ ಏಳರ ಪ್ರಾಬಲ್ಯವಿರುವುದು ಕಂಡುಬರುತ್ತದೆ.”

ಉದಾಹರಣೆಗೆ ಹೆರಿಗೆ ಮೈಲಿಗೆಯನ್ನು ಕೊರಗರು ಏಳು ದಿನ ಆಚರಿಸುವುದು. ಅದೇ ರೀತಿ ಹುಡುಗಿ ಮೈನೆರೆದಾಗ ಏಳು ದಿನ ಮನೆಯಿಂದ ಹೊರಗೆ ಇರಿಸುತ್ತಾರೆ. ಇವರ ಮುಖ್ಯ ದೈವನಾದ ಕೊರಗ ತನಿಯ ಹಟ್ಟಿಯ ದನಗಳನ್ನು ರಕ್ಷಿಸುವವನೆಂದು ನಂಬುತ್ತಾರೆ. ಕಂಬುಲದಲ್ಲಿ ಇವರು ಕೋಣಗಳಾಗುವುದು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಸೇರಿವೆ. ಅದೇ ರೀತಿ ತಪ್ಪಿತಸ್ಥರು ಏಳು ಮನೆಗಳನ್ನು ಹೊಕ್ಕು ಬರಬೇಕಾಗುತ್ತದೆ. ಹಾಗೆಯೇ ಕೊರಗರು ತಮ್ಮ ಮನೆ ಮತ್ತು ವಾಸಸ್ಥಾನಗಳಿಗೆ ಕೊಪ್ಪ ಎನ್ನುತ್ತಾರೆಂಬ ಅಂಶವೂ ಇವರು ವಲಸೆಗಾರರೆಂಬುದನ್ನು ಸೂಚಿಸುವುದು. ಇವರಲ್ಲಿ ಏಳು ಮಾಗಾಣಿಗಳ ಕೂಟವಿದೆ.

ನೀಲಗಿರಿ ಇರುಳರಲ್ಲಿ ಏಳು ಕನ್ನಿಕೆಯರು ಮುಖ್ಯ ದೇವತೆ ಕಣಿ ಹೇಳುವವನು. ಈ ದೇವತೆಯ ಗುಡಿಸಲು ಹತ್ತಿರವಿದ್ದು ಎಲ್ಲಾ ಜಾತಿ ಜನಗಳಿಗೂ ಕಣಿ ಹೇಳುವನು. ದೇವಿ ಅವನ ಮೈಯನ್ನು ತುಂಬುವಳು.

ಅದೇ ರೀತಿ ನೀಲಗಿರಿಯ ಕೋಟರು ಏಳು ಹಳ್ಳಿಗಳಲ್ಲಿದ್ದಾರೆ. ಇವಕ್ಕೆ ಕೋಟಗಿರಿ ಅಥವಾ ಕೋಕಾಲ್ ಎನ್ನುವರು. ಇವರು ಗೌಡ ಬುಡಕಟ್ಟಿಗೆ ಸೇರಿದವರು. ಸತ್ತ ಎಮ್ಮೆ ತಿನ್ನುವರೆಂಬ ನಂಬಿಕೆಯೂ ಇದೆ. ಇವರು ನೀಲಗಿರಿಯ ಇತರ ಬುಡಕಟ್ಟು ಜನಗಳಿಗೆ ಗೃಹ ಕೃಷಿ ಉಪಯೋಗಿ ವಸ್ತುಗಳನ್ನು ಸರಬರಾಜು ಮಾಡುವ ಕರಕುಶಲಕರ್ಮಿಗಳು, ಕಂಬಾರಿಗೆ, ಕುಂಬಾರಿಕೆ, ಅಕ್ಕಸಾಲಿಕೆ, ಬಡಗಿತನ, ಚರ್ಮ ಹದಗಾರಿಕೆ ಮುಂತಾದ ವೃತ್ತಿಗಳಲ್ಲಿ ತೊಡಗುವರು.

ಹಾಗೆಯೇ ತಮಿಳುನಾಡಿನ ಕರುಂಪುರತ್ತನ್ ಎಂಬ ಹೆಂಡ ಇಳಿಸುವ ಜಾತಿ ಜನರಲ್ಲಿ ಏಳು ಉಪಜಾತಿಗಳಿವೆ. ಮಧುರೈ ಭಾಗದ ಏಳು ನಾಡು ಅಥವಾ ಹಳ್ಳಿಗಳಲ್ಲಿ ಇವರು ವಾಸವಾಗಿದ್ದು ಇದರಿಂದ ಏಳು ಉಪಜಾತಿಗಳಿವೆ.

Zuni ಬುಡಕಟ್ಟಿನ Pueblo ಜನ ಏಳು ಕೇರಿಗಳಲ್ಲಿದ್ದು ಪ್ರತಿಯೊಂದು ಕುಲಕ್ಕೂ ಪ್ರತ್ಯೇಕವಾದ ಬಣ್ಣಗಳ ಗುರುತಿಸುತ್ತದೆ. ಮೂಲದಲ್ಲಿ ಇವು ಒಂದಾಗಿದ್ದು, ನಂತರ ವಿಭಜನೆಗೊಂಡವು ಎಂದು ಎಮಿಲಿಡರ್ ಕೆಮ್ ಹೇಳುತ್ತಾರೆ.

ಇಂಥ ಅಸಂಖ್ಯಾ ನಿದರ್ಶನಗಳು ಏಳನ್ನು ವಲಸೆಗಾರ ಪಶುಪಾಲಕ ಕುಮ್ರಿ ಬೇಸಾಯಗಾರರ ಸಂಸ್ಕೃತಿಯ ಜೊತೆ ಬೆಸೆಯುತ್ತವೆ ಮತ್ತು ಸಪ್ತಮಾತೃಕೆಯರು ಹೊಲೆ ಮಾದಿಗರದ್ದಲ್ಲ, ವಲಸೆಗಾರ ದ್ರಾವಿಡರ ಸಂಸ್ಕೃತಿಗೆ ಸೇರಿದವರೆಂದು ಸ್ಪಷ್ಟವಾಗುತ್ತದೆ. ಹಾಗೆಯೇ ಇದಕ್ಕೆ ವಿರುದ್ಧವಾಗಿ ಹೊಲಗಳಲ್ಲಿ ಮಾಡುವ ವಿಧಿಯಾಚರಣೆಗಳಲ್ಲಿ ಸಾಮಾನ್ಯವಾಗಿ ಏಳು ಬರುವುದಿಲ್ಲ “ಐದು” (೫) ಬರುತ್ತದೆ.

ಕೊನೆಯದಾಗಿ ಏಳರ ವಿಶೇಷ ಮಹತ್ವ ದ್ರಾವಿಡ ತತ್ತ್ವಶಾಸ್ತ್ರವಾದ “ಯೋಗ”ದಲ್ಲಿ ಪ್ರಕಟವಾಗುವ ರೀತಿಯ ಅದ್ಭುತವಾಗಿರುವುದನ್ನು ಇಲ್ಲಿ ಪ್ರಸ್ತಾಪಿಸಬೇಕಿದೆ. ತಾಂತ್ರಿಕರಲ್ಲಿ ಯೋಗ ಸಾಧನೆಗೆ ದೇಹದಲ್ಲಿ ಏಳು ಕಮಲ ಸ್ಥಾನಗಳನ್ನು ಕಲ್ಪಿಸಿರುವುದು ಸರಿಯಷ್ಟೆ. ಲೋಕಾಯತರ ಪ್ರಕಾರ ಇದು ತನ್ನಲ್ಲಿ ಹೆಣ್ತನವನ್ನು ಹುಡುಕುವ ಅಥವಾ ಪತಿಷ್ಠಾಪಿಸುವ ವಿಫಲ ಯತ್ನ. ಆದರೆ ದ್ರಾವಿಡ ಪರಂಪರೆ ಈ ಯತ್ನವನ್ನು ವಿಫಲಗೊಳಿಸಲಿಲ್ಲ. ಎಲ್ಲಮ್ಮನ ಜೋಗತಿಯಲ್ಲಿ ಅಮ್ಮನ ಪೂಜಾರಿಗಳಲ್ಲಿ ಸ್ತ್ರೀತತ್ವವನ್ನು ಸ್ಥಾಪಿಸಿಯೇ ಬಿಟ್ಟಿತು. ಇದು ಬೇರೆ ವಿಚಾರ, ನಮಗಿಲ್ಲಿ ಮುಖ್ಯವಾಗುವುದು “ಏಳು ಕಮಲಗಳ ಪರಿಕಲ್ಪನೆ, ಏಳು ಕಮಲಗಳೆಂದರೆ ಏಳು ಯೋನಿಗಳು, ಏಳು ಅಮ್ಮಂದಿರ ಸ್ಥಾನಗಳು.” ಸಪ್ತಮಾತೃಕೆಯರು ಹೀಗೆ ಪ್ರತಿಯೊಬ್ಬರ ದೇಹದಲ್ಲೂ ಪ್ರತಿಷ್ಠಾಪಿತರಾಗಿದ್ದಾರೆ. ಯೋಗವು ಈ ಏಳುನ್ನು ಏಳು ಶಕ್ತಿಯರು ಎನ್ನುತ್ತದೆ. ಕುಂಡಲಿನಿ, ವರುಣೆ, ಲಕಿನಿ,… ಇತ್ಯಾದಿ ಸಹಸ್ರಾರ ದಳ ಕಮಲಕ್ಕೆ ಕುಂಡಲಿನಿ ಶಕ್ತಿಯನ್ನು ತಂದು ಸ್ಥಾಪಿಸುವುದು ಎಂದರೆ ಪುರುಷತ್ವವನ್ನು ಸಂಪೂರ್ಣ ನಾಶಗೊಳಿಸಿ ಸ್ತ್ರೀತ್ವದ ಅರಿವು ಮಾಡಿಕೊಳ್ಳುವುದು ಅದ್ವೈತವಾಗುವುದು. ಈ ಅದ್ವೈತವು ದ್ರಾವಿಡ ಜನಪದ ವರ್ಗದಲ್ಲಿ ಬಹಳ ವ್ಯಾಪಕವಾಗಿ ಸಾಧಿತವಾಯಿತು ಎಂಬುದು ಗಮನಾರ್ಹ ಅಂಶವಾಗಿದೆ. ಒಟ್ಟಾರೆ ಮೂಲಿಗ ಮಾತೃ ಆರಾಧಕ (ಅವರು ಸ್ವತಃ ಸ್ಥಿರವಾದ ಕೃಷಿಕ ಸಮಾಜವಾದ ನಂತರ). ಕೃಷಿಕರ ಜತೆ ವಲಸೆಗಾರ ದ್ರಾವಿಡರ ಸಂಯೋಗದ ನಂತರ ಯೋಗ ಸಿದ್ಧಾಂತದಲ್ಲಿ ಒಂದು ಪರಿಪೂರ್ಣತೆ ಲಭ್ಯವಾಯಿತು ಎಂಬುದು ನಮಗಿಲ್ಲಿ ಪ್ರಸ್ತುತವಾಗುವ ವಿಚಾರವಾಗಿದೆ.

ಹೀಗೆ ಏಳು ಎಂಬ ಸಂಖ್ಯೆ ಹಿಂದೆ ಇಷ್ಟೆಲ್ಲಾ ಅಂಶಗಳು ಬೆಳಕು ಚೆಲ್ಲುವುದರ ಮೂಲಕ ಏಳರ ಮಹತ್ವ ಮತ್ತು ಉದ್ದೇಶಗಳನ್ನು ಸ್ಪಷ್ಟೀಕರಿಸಲಾಗಿದೆ. ಈ ಹಿನ್ನಲೆಯಲ್ಲಿ ಜನಪದರು ಏಳು ಎಂಬುದರ ಕಲ್ಪನೆಯನ್ನು ಮೇಲಿನ ಅಂಶಗಳಲ್ಲಿ ಸ್ಪಷ್ಟೀಕರಿಸಿರುವುದನ್ನು ಕಾಣಬಹುದಾಗಿದೆ.

ಏಳು ಗ್ರಾಮಗಳ ಹಿನ್ನಲೆ ಮತ್ತು ಮಹತ್ವ

ಜನಪದ ಸಾಹಿತ್ಯದಲ್ಲಿ ಗ್ರಾಮಗಳು ಅಥವಾ ಹಳ್ಳಿಗಳು ತುಂಬಾ ಮಹತ್ವದ ಸ್ಥಾನವನ್ನು ಪಡೆದುಕೊಂಡಿವೆ. ಇಲ್ಲಿ ಗ್ರಾಮ ಎನ್ನುವ ಪರಿಕಲ್ಪನೆಯನ್ನು ಈ ರೀತಿ ಅರ್ಥೈಸಬಹುದು. ಮಾನವರನ್ನೊಳಗೊಂಡ ಶಾಶ್ವತವಾದ ಕೃಷಿಕ ಸಮುದಾಯಗಳನ್ನು ನಿಜವಾದ ಗ್ರಾಮಗಳೆನ್ನಬಹುದು. ವ್ಯಕ್ತಿ ಜೀವನದಲ್ಲಿ ಕುಟುಂಬಕ್ಕೆ ಪ್ರಾಧಾನ್ಯತೆ ಇರುವಂತೆ ಸಮಾಜ ಜೀವನದಲ್ಲಿ ಗ್ರಾಮ ಒಂದು ಮೂಲ ಘಟಕ. ಹಿಂದಿನ ಅರ್ಥ ಊರು ಎಂದು ಅದರಿಂದ ಗ್ರಾಮ ರಚನೆಯ ಮೂಲವನ್ನು ಗುರುತಿಸಬಹುದು. ಅಲೆಮಾರಿಯಾಗಿ ಜೀವಿಸುತ್ತಿದ್ದ ಜನಾಂಗಗಳು ಅನುಕೂಲವಾದ ಪ್ರಕೃತಿಯ ಮಡಿಲಲ್ಲಿ ತಳ ಊರಿದ್ದ ಊರು. ಅವರ ಅನುಕೂಲಕ್ಕೆ ತಕ್ಕಂತೆ ಉತ್ತು ಬಿತ್ತಿ ಬೆಳೆದುಕೊಳ್ಳುವ ಹೊಲಕ್ಕೆ ಸಮೀಪವಾಗಿ ಪ್ರತಿವರ್ಷ ನೀರಿನ ಸೌಕರ್ಯವುಳ್ಳ ಹಳ್ಳದ ದಂಡೆಯಲ್ಲಿರುವ ಬೀಡು ವಸತಿಗೆ ಅತಿ ಅನುಕೂಲವಾದ ಸ್ಥಳವಾಗಿದ್ದಿತು. ಹಲವು ಬೀಡುಗಳನ್ನು ಒಳಗೊಂಡಿದ್ದ ಹಳ್ಳಿ, ಹಳ್ಳದ ದಂಡೆಯಲ್ಲಿ ಹಳ್ಳಿ ಹೊಳೆಯ ತೀರದಲ್ಲಿ ಹೊಳಲು ನಗರವನ್ನಾಶ್ರಯಿಸಿ ನಗರಗಳು ಹುಟ್ಟಿಕೊಂಡವು. ಈ ಹಿನ್ನೆಲೆಯಲ್ಲಿ ಊರು, ಹಳ್ಳಿ, ಗ್ರಾಮ – ಇವೆಲ್ಲವುಗಳ ಅರ್ಥ ಒಂದೇ ಎಂಬುದು ನನ್ನ ಅಭಿಪ್ರಾಯವಾಗಿದೆ.

ಪ್ರಾಕೃತಿಕವಾದ ಪರಿಸರದ ಒಡನಾಟದಲ್ಲಿ ಮನುಷ್ಯನ ಬದುಕು ಸಾಗುತ್ತಿರುವುದರಿಂದಲೇ ಅದನ್ನು ಜಗತ್ತು ಎಂದು ಕರೆಯುವುದು. ಅವನ ಹುಟ್ಟಿನೊಡನೆ ಗ್ರಾಮ, ನಾಮ, ಹೆಸರುಗಳು, ಮನೆ, ಮಠ, ಗುಡಿಸಲು ಗೋಪುರ ಎಂಬ ಸ್ವರೂಪದಲ್ಲಿ ಕಂಡುಬಂದವು. ಇದಕ್ಕೆ ಪೂರ್ವದಲ್ಲಿ ಮಾನವರ ನೆಲೆ ಮರದ ಪೊಟರೆ ಮತ್ತು ಕಲ್ಲು ಗುಹೆಗಳಲ್ಲಿ ಎಂಬುದನ್ನು ನಾವು ಈಗಾಗಲೇ ಅರಿತಿದ್ದೇವೆ. ಆರಂಭದಲ್ಲಿ ಗೆಡ್ಡೆ – ಗೆಣಸು, ಹಸಿ ಮಾಂಸವನ್ನು ತಿಂದು ಬದುಕು ಮಾಡುತ್ತಿದ್ದ ಕಾಲಘಟ್ಟ ಮುಗಿದು ಹೋಗಿ ಪ್ರಕೃತಿಯ ಮಜಲುಗಳಾದ ಕೆರೆ-ಹೊಳೆ-ನದಿ, ಕಾಲುವೆ, ಗುಡ್ಡ, ದಿಬ್ಬ, ಬಯಲು ಭೂ ಫಲವತ್ತತೆ ಎಲ್ಲಿದೆ, ಅಲ್ಲಲ್ಲಿ ನೆಲೆಗಳನ್ನು ಕಂಡುಕೊಳ್ಳುವ ಪ್ರಯತ್ನ ನಡೆದಿತ್ತು. ಕಾಲಕಳೆದಂತೆ ಆ ನೆಲೆಗಳೇ ಹಟ್ಟಿ, ಊರು, ಹಳ್ಳಿ, ಗ್ರಾಮ, ಪುರ, ಅಗ್ರಹಾರ, ನಾಡು, ರಾಷ್ಟ್ರ, ಬೀಡು, ಮಂಡಲಗಳಾಗಿ ಅಸ್ತಿತ್ವಕ್ಕೆ ಬಂದವು.

ಗ್ರಾಮಗಳಲ್ಲಿ ವಾಸಿಸುವ ಜನರ ಜೀವನಾಧಾರ ಮುಖ್ಯ ಕಸುಬು ವ್ಯವಸಾಯವೇ ಆಗಿದೆ. ಆದುದರಿಂದ ಗ್ರಾಮಗಳ ರಚನೆ ಈ ಕಸುಬಿಗೆ ಪೂರಕವಾಗಿರುತ್ತದೆ. ಸಾಮಾನ್ಯವಾಗಿ ಎತ್ತರವಾದ ಸಮತಟ್ಟಿನ ಪ್ರದೇಶದಲ್ಲಿ ಗ್ರಾಮ ರಚನೆಗೊಳ್ಳುತ್ತದೆ. ಸುತ್ತಮುತ್ತ ಸಾಗುವಳಿಗೆ ಅವಶ್ಯಕವಾಗಿ ಫಲವತ್ತಾದ ಭೂಮಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕರ್ನಾಟಕದ ಬಹುಪಾಲು ಗ್ರಾಮಗಳು ವ್ಯವಸಾಯವನ್ನು ಮಾಡುವುದಕ್ಕೆ ಮಳೆಯನ್ನೇ ಅವಲಂಭಿಸಿದ್ದರೂ ನೀರಿನ ಸೌಕರ್ಯಕ್ಕಾಗಿ ಕೆರೆ, ಕುಂಟೆ, ಬಾವಿಗಳನ್ನು ರಚಿಸಿಕೊಳ್ಳುವ ವ್ಯವಸ್ಥೆ ಹಿಂದಿನಿಂದಲೂ ಕಂಡುಬಂದಿದೆ.

ಮಲೆನಾಡು ಪ್ರದೇಶದಲ್ಲಿ ಒಂದೊಂದು ಮನೆಯು ಒಂದೇ ಗ್ರಾಮವೇ ಆಗಿರುತ್ತದೆ, ಹೆಚ್ಚೆಂದರೆ ನಾಲ್ಕರಿಂದ ಹತ್ತು ಮನೆಗಳು ಇಂದಿಗೂ ಕಂಡುಬರುತ್ತವೆ, ಅದೇ ರೀತಿ ಬಯಲು ಸೀಮೆಗಳಲ್ಲಾದರೆ ಐವತ್ತರಿಂದ ಒಂದೂವರೆ ಸಾವಿರದ ಮನೆಗಳ ವಾಸ್ತವ್ಯವನ್ನು ನೋಡಬಹುದು. ಇದಕ್ಕೆ ಅಲ್ಲಲ್ಲಿಯ ಭೌಗೋಳಿಕ ಪರಿಸರವೇ ಕಾರಣವಾಗಿರುತ್ತದೆ. ಸಾಮಾನ್ಯವಾಗಿ ಪ್ರತಿ ಗ್ರಾಮದಲ್ಲಿಯೂ ತನ್ನದೇ ಆದ ಬಾವಿ, ಚಾವಡಿ ಹಾಗೆಯೇ ಗ್ರಾಮದೇವತೆ ಗುಡಿ, ಇತರೆ ದೇವತೆಗಳ ಗುಡಿ ಇರುತ್ತವೆ. ಊರಿಗೆ ತೀರ ಸಮೀಪದಲ್ಲಿ ಕೆರೆ ಇರುತ್ತದೆ. ಕೆಲವೊಮ್ಮೆ ಪಕ್ಕದಲ್ಲೇ ಮರದ ತೋಪು ಇರುತ್ತದೆ. ಇಲ್ಲಿ ನಿರ್ದಿಷ್ಟ ರಚನೆಯ ಮನೆಗಳನ್ನು ಕಾಣಲಾಗುವುದಿಲ್ಲ. ಗ್ರಾಮೀಣರು ತಮಗೆ ಬೇಕಾದಂತೆ ಮನೆಗಳನ್ನು ಕಟ್ಟಿಕೊಂಡಿರುತ್ತಾರೆ. ಇಲ್ಲಿ ಎಲ್ಲಾ ಜಾತಿ, ಮತ, ವರ್ಗ, ಪಂಗಡಗಳ ಜನರೂ ಒಟ್ಟಿಗೆ ವಾಸಿಸಬೇಕಾಗಿರುವುದರಿಂದ ಅವರವರ ಸಾಮಾಜಿಕ ರೀತಿ-ನೀತಿಗಳು ವಿಭಿನ್ನವಾಗಿರುವುದರಿಂದ ಸ್ವತಂತ್ರ ಜೀವನ ಮಾಡಲು ಅವರದೇ ಆದ ಪ್ರತ್ಯೇಕ ತಾಂಡಗಳು, ಹಟ್ಟಿಗಳು, ಕೇರಿಗಳು ರೂಪುಗೊಂಡಿರುತ್ತವೆ. ಉದಾಹರಣೆಗೆ ಮೇದರ ಕೇರಿ, ಒಕ್ಕಲಗೇರಿ, ಕುಂಬಾರಗೇರಿ, ಬ್ರಾಹ್ಮಣಕೇರಿ ಇತ್ಯಾದಿ. ಒಂದು ಖಾಯಂ ನೆಲೆಯ ಹಿಂದೆ ಗ್ರಾಮಗಳ ಉತ್ಪನ್ನ ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿತ್ತು. ಗ್ರಾಮನಾಮ ಮಾನವ ಜನಾಂಗಕ್ಕೆ ಅಂಟಿಕೊಂಡೇ ಬಂದವುಗಳು. ಪಶುಪಕ್ಷಿಗಳ ಸಂಬಂಧದೊಂದಿಗೆ ಮರಗಿಡ ಬಳ್ಳಿಗಳು, ಸಸ್ಯ ಕ್ಷೇತ್ರಗಳ ಪರಿಚಯವೂ ಊರು-ಕೇರಿಗಳ ಬೆನ್ನ ಹಿಂದೆಯೇ ತಮ್ಮ ಸ್ವರೂಪ ವೈವಿಧ್ಯಗಳನ್ನು ಬಿಚ್ಚಿ ಹೇಳುತ್ತವೆ. ಈ ಹಿನ್ನೆಲೆಯಲ್ಲಿ ಊರು, ಗ್ರಾಮ, ಹಳ್ಳಿಗಳಲ್ಲಿ ಮಾನವ ಜನಾಂಗದ ಸರ್ವಸ್ವವೂ ಅಡಗಿದೆ ಎನ್ನಬಹುದು. ಮನುಕುಲದ ಮೊದಲ ಸೃಷ್ಟಿಯ ಹಟ್ಟಿಗಳೇ ಈ ‘ಊರು’ಗಳು, ಭೂಗೋಳದ ಕಣಗಳು, ಶಾಸನದ ಗಣಿಗಳೂ, ಭಾಷೆಯ ಖನಿಜಗಳೂ, ಇತಿಹಾಸದ ಮಣಿಗಳೂ, ಚರಿತ್ರೆಯ ಖನಿಜಗಳೂ, ಸಸ್ಯ, ಪ್ರಾಣಿ – ಪಕ್ಷಿ – ಸಂಕುಲದ ಸೃಷ್ಟಿ ಪುಂಜದ ಹಂದರಗಳೇ ಈ ಗ್ರಾಮನಾಮ ಊರುಗಳು. ಈ ಊರುಗಳಲ್ಲಿ ಏನಿಲ್ಲವೆಂದಿಲ್ಲ. ಗ್ರಾಮನಾಮಗಳ ವಿಶ್ಲೇಷಣೆಯಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಓರೆಗೆ ಹಚ್ಚುವ ಪ್ರವೃತ್ತಿಗಳಿಗೆ, ಲೋಕರೂಢಿ – ಸಂಪ್ರದಾಯದ ಆಚಾರ ಪದ್ಧತಿಗಳಿವೆ. ಹೀಗೆ ಪ್ರಕೃತಿಯ ಪಂಚಭೂತಗಳ ಮಿಳಿತದ ಫಲವೇ ಈ ಗ್ರಾಮನಾಮ ಊರುಗಳ ಉಗಮದಲ್ಲಿ ಹಾಸುಹೊಕ್ಕಾಗಿವೆ.

ಯಾವುದೇ ಒಂದು ಗ್ರಾಮ ಅಥವಾ ಹಳ್ಳಿಯ ಹೆಸರಿನ ಹಿಂದೆ ಒಂದು ಕಥೆ ಅಥವಾ ಪುರಾಣ ಇರುತ್ತದೆ, ಹಾಗೆಯೇ ಐತಿಹ್ಯವೂ ಕೂಡ ಒಳಗೊಂಡಿರುತ್ತದೆ. ಆದ್ದರಿಂದ ಗ್ರಾಮಗಳ ಹಿನ್ನೆಲೆಯ ಹಿಂದೆ ಇವು ಮುಖ್ಯ ಪಾತ್ರವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಅರಕೆರೆ ಸುತ್ತಮುತ್ತಲಿನಲ್ಲಿರುವ ಏಳು ಊರುಗಳ ಹಿನ್ನಲೆ ಹಾಗೂ ಅದರ ಸ್ವರೂಪವನ್ನು ನಾವು ಕಾಣಬಹುದಾಗಿದೆ.

ಇಲ್ಲಿ ಮುಖ್ಯವಾಗಿ ಸಾಂಸ್ಕೃತಿಕ ದೃಷ್ಟಿಯಿಂದ ಗ್ರಾಮನಾಮಗಳು ವಿಶೇಷವಾಗಿ ಸ್ಥಳ ಮತ್ತು ವ್ಯಕ್ತಿನಾಮಗಳ ಅಧ್ಯಯನದಿಂದ ಹೆಚ್ಚು ಉಪಯುಕ್ತವಾಗಿವೆ. ಅವು ಇತಿಹಾಸ, ಭೂಗೋಳ, ಸಾಮಾಜಿಕ ಪದ್ಧತಿಯ ಆಚಾರ-ವಿಚಾರ ನಂಬಿಕೆಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಜನಾಂಗ ಜನಾಂಗಗಳ ನಡುವಣ ಸಂಬಂಧ, ವೈಷಮ್ಯಗಳನ್ನು ಗುರುತಿಸುತ್ತವೆ. ಒಂದು ನಾಡಿನ ಸಾಮ್ಯತೆಯನ್ನು ಕಾಪಾಡುವಲ್ಲಿ ನಿರತವಾಗಿರುತ್ತವೆ. ಭಾಷೆಯ ಬೆಳವಣಿಗೆಯಲ್ಲಿ ಮತ್ತು ಅದರ ಸ್ವರೂಪ ರಚನೆಗಳ ಅಧ್ಯಯನದಲ್ಲಿ ಅವುಗಳ ಪಾತ್ರ ಮಹತ್ವಪೂರ್ಣವಾದುದು. ಅವುಗಳಲ್ಲಿ ಜಾನಪದೀಯ ಅಂಶಗಳು ಅಡಕವಾಗಿವೆ. ಒಟ್ಟಿನಲ್ಲಿ ಅವು ಸಂಸ್ಕೃತಿಯ ವಾಹಕಗಳೆಂದು, ಒಂದು ಜನಾಂಗದ ಕೋಶಗಳೆಂದು ಸ್ಪಷ್ಟವಾಗಿ ಹೇಳಬಹುದಾಗಿದೆ.

ಇಲ್ಲಿ ಒಂದು ಗ್ರಾಮ ಅಥವಾ ಊರಿನ ಹಿನ್ನಲೆ ಕುರಿತು ಹೇಳುವುದಾದರೆ ಒಂದು ಮಗುವಿನ ಜಾತಕಕ್ಕೆ ಹೊಂದಿಕೊಳ್ಳುವಂತೆ ಅದಕ್ಕೆ ಹೆಸರು ಇಟ್ಟಂತೆ ಒಂದು ಊರಿನ ಹೆಸರು ಅಲ್ಲಿ ನೆಲೆಸಿರುವ ನೆಲೆಸಿದ್ದ ಮೂಲನಿವಾಸಿಗಳಿಂದಲೇ ಬಂದಿರದೆ ಅವರ ಆಸುಪಾಸಿನವರಿಂದಲೂ ಬಂದಿರುತ್ತದೆ. ಅವರಿಗೆ ಅಂದರೆ ಹತ್ತಿರದ ಊರಿನವರನ್ನು ಗುರುತಿಸುವುದಕ್ಕಾಗಿ ಆ ಊರಿಗೊಂದು ಹೆಸರಿಡುತ್ತಾರೆ. ಹಾಗೆ ಹೆಸರಿಡುವಾಗ ಸ್ಥಳದ ಭೂ ವಿವರಕ್ಕೆ ಅನುಗುಣವಾಗಿ ಏರು-ತಗ್ಗು, ನೀರು-ಪಾರು, ಕಾಡು-ಕೋಡು, ಬೆಟ್ಟ-ಗುಡ್ಡ, ಹಳ್ಳ-ಕೊಳ್ಳ – ಹೀಗೆ ಹೊಂದುವ ಹೆಸರನ್ನೇ ಇಡುತ್ತಿದ್ದರಿಂದ ಆ ಸ್ಥಳ ಆ ಹೆಸರನ್ನೂ ಕೂಡಿಸಿಕೊಂಡು ಸ್ವನಾಮಕರಣ ಪಡೆಯಿತು. ಆ ಒಂದು ಸ್ಥಳನಾಮದ ಉಳಿವು ಮತ್ತು ಶಾಶ್ವತ ಸ್ವರೂಪವನ್ನು ನಿರ್ಧರಿಸುವ ಅಂಶಗಳು ಸ್ಥಳದ ಗಾತ್ರ ಮತ್ತು ಅಲ್ಲಿನ ಜನಸಂಖ್ಯೆ. ಆದ್ದರಿಂದಲೇ ಹೆಚ್ಚು ಚಲಾವಣೆ ಪಡೆದ ನದಿ, ಪರ್ವತ, ಕಾಡು-ಮೇಡು ಮತ್ತಿತರ ಪ್ರಧಾನ ಭೌಗೋಳಿಕ ಲಕ್ಷಣಗಳನ್ನು ಹೇಳುವ ದೃಢವೂ, ಶಾಶ್ವತವೂ ಆಗಿ ಉಳಿದಿರುವುದು.

ಗ್ರಾಮನಾಮಗಳು ಸಾಮಾನ್ಯವಾಗಿ ಸ್ಥಳೀಯ ಭಾಷೆಯಿಂದ ಹಾಗೂ ಸ್ಥಳೀಯ ಐತಿಹ್ಯ ಚರಿತ್ರೆ, ಪುರಾಣಗಳಿಂದ ಸೂಚಿಸಲ್ಪಟ್ಟಿರುತ್ತದೆ. ಇಲ್ಲಿ ಗ್ರಾಮನಾಮಗಳು ಮುಖ್ಯವಾಗಿ ಎರಡು ಪ್ರಕಾರಗಳನ್ನು ಒಳಗೊಂಡಿದೆ. ಒಂದನೆಯದು ಪ್ರಾಕೃತಿಕ ಸ್ವಭಾವ ಅಥವಾ ಗುಣಲಕ್ಷಣಗಳಿಂದ ನಿಷ್ಟನ್ನವಾದ ಸ್ವಾಭಾವಿಕ ನಾಮಗಳು, ಎರಡನೆಯದು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನಾಮಗಳು. ಮೊದಲ ವರ್ಗದ ಗ್ರಾಮನಾಮಗಳು ಅಧಿಕ ಸಂಖ್ಯೆಯಲ್ಲಿರುವುದಲ್ಲದೇ ಬಹು ಪ್ರಾಚೀನವೂ ಆಗಿರುವುವು ಎಂಬುದು ಸ್ಪಷ್ಟವಾಗುತ್ತದೆ.

ಈ ಮೇಲಿನ ಹಿನ್ನಲೆಯಲ್ಲಿ ಗ್ರಾಮನಾಮಗಳ ಹಿನ್ನೆಲೆಯನ್ನು ಹುಡುಕುವ ಪ್ರಯತ್ನ ಮಾಡಬಹುದಾಗಿದೆ. ಇಲ್ಲಿ ಮುಖ್ಯವಾಗಿ ಗ್ರಾಮಗಳ ಹೆಸರುಗಳು ಕೆಲವು ನಾಮಗಳಿಂದ ಪ್ರಾರಂಭವಾಗುತ್ತವೆ. ಅಂದರೆ ಹಳ್ಳಿ, ಊರು, ಪುರ, ದೊಡ್ಡಿ, ಘಟ್ಟ, ಹಟ್ಟಿ, ಕಟ್ಟಿ, ಕಲ್ಲು, ಕುಪ್ಪೆ-ಕೊಪ್ಪ, ಸಂದ್ರ-ಸಮುದ್ರ, ವಾಡಿ, ಬಾಗಿಲು, ಕೊಳಲು, ಗುಡಿ, ಕಳಲೆ, ಕೋಟೆ, ಗಾವಿ, ಅರೆ, ಕಲ್ಲು, ಕೆರೆ-ಗೆರೆ – ಹೀಗೆ ಆಯಾಯ ಗ್ರಾಮದ ಅಥವಾ ಊರಿನ ಕೊನೆಯಲ್ಲಿ ಈ ರೀತಿ ಉಚ್ಚರಿಸಲ್ಪಟ್ಟು ರೂಢಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಏಳು ಹಳ್ಳಿಗಳಾದ ಲಾಳನಕೆರೆ, ಚೆನ್ನನಕೆರೆ, ಹುಂಜನಕೆರೆ, ಹಾಲಗೂಡು, ಮಿಕ್ಕೆರೆ, ಬಳ್ಳೆಕೆರೆ, ಅರಕೆರೆ – ಹೀಗೆ ಕೆರೆಗೆ ಸಂಬಂಧಿಸಿದ ಗ್ರಾಮಗಳು ಈ ಏಳು ಗ್ರಾಮಗಳ ಗ್ರಾಮದೇವತೆಗಳು ಅಲ್ಲಿಯ ಆಚರಣೆಯ ವ್ಯಾಪ್ತಿಗೆ ಬರುವಂಥ ಗ್ರಾಮಗಳಾಗಿವೆ.

ಊರು ಮತ್ತು ಜಲ ಸಂಬಂಧ

ಮಂಡ್ಯ ಜಿಲ್ಲೆಯಲ್ಲಿ ಕಾಣಬರುವ ಹಲವು ಗ್ರಾಮಗಳು ಯಥೇಚ್ಛವಾಗಿ ಆ ಊರಿನ ಜೊತೆ ಜಲ ಸಂಬಂಧವನ್ನು ಒಳಗೊಂಡಿರುವುದು ಸೂಚಿತವಾಗುತ್ತದೆ. ಮಾನವ ಒಂದು ಕಡೆ ಊರಿ ನಿಂತ ಜಾಗವೇ ಊರು ಎಂದಾಯಿತು ಎಂದು ಕೆಲವರು ಹೇಳುವುದುಂಟು. ಊರು ಕಟ್ಟಿಕೊಂಡ ಮೇಲೆ ಜೀವನಾಧಾರಕ್ಕೆ ಮುಖ್ಯವಾಗಿ ನೀರು ಬೇಕೇ ಬೇಕು. ಅದಕ್ಕಾಗಿ ಕೆರೆ, ಕುಂಟೆ, ಕಾಲುವೆ, ಮುಂತಾದ ಜಲ ಸಂಬಂಧಗಳು ನಿರ್ಮಾಣವಾದವು. ಹೀಗಾಗಿ ಊರು ಅಲ್ಲಿನ ಮಣ್ಣು ನದಿ-ಕೆರೆ-ಗೆರೆ ಸಂಬಂಧಗೊಂಡು ಗ್ರಾಮನಾಮ ಘಟಕಗಳಾದವು. ಉದಾಹರಣೆಗೆ ಉಪ್ಪಿನಕೆರೆ, ಬಳ್ಳೆಕೆರೆ, ಲಾಳನಕೆರೆ, ಹುಂಜನ ಕೆರೆ, ಚೆನ್ನನಕೆರೆ ಮುಂತಾದವುಗಳನ್ನು ಹೆಸರಿಸಬಹುದು. ಹಾಗೆಯೇ ಅಲ್ಲಿ ಬೆಳೆಯುವ ಸಸ್ಯ ಲಭ್ಯವಿರುವ ಪ್ರಾಣಿಗಳ ಹಿನ್ನಲೆಯಲ್ಲಿ ಹುಲಿಕೆರೆ, ಕಾರ್ಕಳ್ಳಿ, ಕಾಡುಕೊತ್ತನಹಳ್ಳಿ. ಹುಲಿಗೆರೆಪುರ, ಮೆಣಸಿನಗೆರೆ, ಬ್ಯಾಲದಕೆರೆ ಇತ್ಯಾದಿ ಹೆಸರುಗಳು ಕಂಡುಬರುತ್ತವೆ. ಹೆಮ್ಮರಗಳಿಂದ ಕೂಡಿದ ಹಳ್ಳಿ ಹೆಮ್ಮನಹಳ್ಳಿ, ತೈಲ ಉತ್ಪಾದನೆ ಅಥವಾ ತೈಲ ಮರಗಳಿಂದಾಗಿ ತೈಲೂರು ಹುಣಸೇ ಮರಗಳಿದ್ದಲ್ಲಿ ಹುಣಸೇಮರದದೊಡ್ಡಿ, ಬೆಳ್ಳಕ್ಕಿಗಳ ಊರು ಬೆಳ್ಳೂರು, ಕೆಸರು ಇರುವ ಕೆಸ್ತೂರು. ಆಬಲವಾಡಿ ಬಿದಿರು ಮಳೆಯ ಬಿದಿರಹಳ್ಳಿ, ಬಿದಿರುಕೋಟೆ ಇತ್ಯಾದಿ. ಆತತ-ಗು ಎಂದರೆ ಹರಡಿದ ಎಂಬ ಅರ್ಥವನ್ನು ಕೊಡುತ್ತದೆ. ಈ ಸಂಬಂಧದಿಂದ ಆತಗೂರು ಎಂಬುದರಲ್ಲಿ ಜಲಸಂಬಂಧವಾದ ನಾಮಾಂಕಿತವಿರುವುದನ್ನು ಗುರುತಿಸಬಹುದು.

ಹೀಗೆ ಗ್ರಾಮನಾಮಗಳ ಹೆಸರಿನ ಕೊನೆಯಲ್ಲಿ ಕೆರೆ, ಸಸ್ಯ, ಪ್ರಾಣಿ ಹಾಗೂ ಪ್ರಾಕೃತಿಕ ಸಂಬಂಧ, ಧಾರ್ಮಿಕ ಸಂಬಂಧಗಳು ಇರುವುದರಿಂದ ಯಾವುದೇ ಊರಿನ ಕೊನೆಯಲ್ಲಿ ಈ ರೀತಿಯ ಹೆಸರುಗಳನ್ನು ಕಾಣಬಹುದು.

ಗ್ರಾಮನಾಮಗಳ ಮಹತ್ವ

ಗ್ರಾಮನಾಮಗಳ ಮಹತ್ವದ ಬಗ್ಗೆ ಹೇಳುವುದಾದರೆ ಜಗತ್ತು ಎಂಬುದು ಮನುಷ್ಯರ ಹುಟ್ಟಿನೊಂದಿಗೆ ಸವಿಸ್ತಾರವಾದ ಅರ್ಥವನ್ನು ಪಡೆದಿದೆ. ಅವನ ಹುಟ್ಟಿನ ಜೊತೆಯಲ್ಲೇ ಸ್ಥಳಗಳ ಹೆಸರುಗಳು ಮನೆ-ಮಠ-ಗುಡಿ- ಗೋಪುರಗಳು- ಗುಡಿಸಲು-ಕುಟೀರಗಳು ಹುಟ್ಟಿದವು. ಮಾನವ ಮೊದಲು ಕಾಡಿನಲ್ಲಿ ವಾಸವಾಗಿದ್ದು ಗೆಡ್ಡೆ-ಗೆಣಸುಗಳನ್ನು ತಿಂದು ಜೀವಿಸುತ್ತಿದ್ದನು. ಕಾಲ ಕ್ರಮೇಣ ಅಲ್ಲಿಯೇ ನೆಲೆನಿಂತು ವಲಸೆ ಹೋಗಲು ಪ್ರೇರಣೆ ನೀಡಿರಬೇಕು. ಒಂದೆಡೆ ನಿಲ್ಲಲ್ಲು ಬೆಟ್ಟ-ಗುಡ್ಡ-ಕಾಡು-ಕಣಿವೆ, ಕಲ್ಲು-ಬಂಡೆ-ನದಿ ತಟಗಳೇ ಪೂರ್ವಾಶ್ರಮದ ನೆಲೆಗಳ ಕುರುಹುಗಳಾಗಿವೆ. ಪ್ರಕೃತಿಯ ಪಂಚಭೂತಗಳೇ ಮನುಷ್ಯನ ಆರಾಧ್ಯ ದೈವಗಳಾದವು.

ಇಲ್ಲಿ ಮುಖ್ಯವಾಗಿ ಚರ್ಚಿಸಬೇಕಾಗಿರುವ ಮಹತ್ವದ ವಿಷಯವೆಂದರೆ ಗ್ರಾಮಗಳ ಹಿಂದೆ ಇರುವ ಅದರ ಮಹತ್ವ ಏನು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಗ್ರಾಮನಾಮಗಳ ಹುಟ್ಟು ನೆನ್ನೆ ಮೊನ್ನೆಯದಲ್ಲ, ಅದಕ್ಕೆ ಪುರಾತನ ಕಾಲದ ಇತಿಹಾಸವಿದೆ. ಮಾನವನ ಬದುಕು ವಿಸ್ತಾರವಾದಂತೆಲ್ಲ ಪ್ರಾಕೃತಿಕ, ಭೌಗೋಳಿಕ, ಚಾರಿತ್ರಿಕ, ಜಾನಪದೀಯ, ಪುರಾಣ, ಐತಿಹ್ಯಗಳ ಮೂಲಕ ಮುಖಾಮುಖಿಯಾಗಿ ಅಸ್ತಿತ್ವಕ್ಕೆ ಬಂದಂತವು. ಹಾಗೆಯೇ ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಗ್ರಾಮಗಳ ಹೆಸರುಗಳು ಹುಟ್ಟಿಕೊಂಡವು. ಆ ವಾಸ್ತವ್ಯಗಳೇ ಊರು, ಕಟ್ಟೆ, ಕುಂಟೆ, ಕೆರೆ ಕೋಟೆ-ಕೊತ್ತಲ, ಕುಟೀರ ಗುಡಿ, ಗೆರೆ-ಗೇರಿ-ಗ್ರಾಮ, ಸಮುದ್ರ, ಸಂದ್ರ, ಹಳ್ಳಿ, ವಳ್ಳಿ, ಪಟ್ಟಣ, ನಗರ, ಮನೆ, ಇತ್ಯಾದಿ ಗ್ರಾಮನಾಮಗಳೊಂದಿಗೆ ಹೊಸ ಹುಟ್ಟು ಪಡೆಯಿತು.

ಕೂಲಿ ಮಠಗಳು, ಗುರುಕುಲಗಳು ಶೈಕ್ಷಣಿಕ ವಾತಾವರಣದಿಂದ ಕಣ್ಮರೆಯಾದ ಮೇಲೆ ವಿದ್ಯಾಸಂಸ್ಥೆಗಳು ಉಗಮವಾದಾಗ ವಿದ್ಯೆಯ ಕಲಿಕೆಯ ಜೊತೆಯಲ್ಲಿ ಶಾಲಾ-ಕಾಲೇಜುಗಳು ಆರಂಭವಾದವು. “ಈ ಹಿನ್ನಲೆಯಲ್ಲಿ ಉದ್ಯೋಗದ ಅನ್ವೇಷಣೆಯ ಮೂಲಕ ಕೈಗಾರಿಕೆ ಮತ್ತು ವ್ಯವಹಾರದ ನಿಟ್ಟಿನಲ್ಲಿ ನಗರ ಪಟ್ಟಣಗಳು ಹುಟ್ಟಿದ್ದವು. ಹಾಗೆಯೇ ಪ್ರತಿಯೊಂದು ಗ್ರಾಮದ ಹೆಸರಿನ ಹಿಂದೆ ಅನನ್ಯವಾದ ಹೆಸರುಗಳನ್ನು ಕಾಣಬಹುದಾಗಿದೆ. ಉದಾಹರಣೆಗೆ “ಬೆಂದಕಾಳೂರು-ಬೆಂಗಳೂರು, ಮಾಂಡವ್ಯ-ಮಂಡ್ಯ, ಮಹಿಷಪುರ-ಮೈಸೂರು, ಎಡತೊರೆ-ಕೃಷ್ಣರಾಜನಗರ. ಹೀಗೆ ಇನ್ನೂ ಕೆಲವು ಹೆಸರುಗಳನ್ನು ಸೂಚಿಸ ಬಹುದಾಗಿದೆ.”

ಗ್ರಾಮನಾಮಗಳ ಮಹತ್ವ ಅಪರಿಮಿತ ಹಾಗೂ ಅನಂತವಾದುದು. ಮನುಕುಲದ ಸರ್ವಸಮಸ್ತವೂ ಕೂಡ ಗ್ರಾಮನಾಮಗಳಲ್ಲಿವೆ. ಅವುಗಳಲ್ಲಿ ನೋಟದ ಸವಿಯು ಇದೆ. ಆ ಕ್ಷೇತ್ರದ ಅರಿವು ಇದೆ, ಮಣ್ಣಿನ ಗಮ್ಮತ್ತಿನ ಗುಣವಿದೆ, ಬಣ್ಣದ ಬೆಡಗಿದೆ. ಭಾಷೆಯ ಸೊಗಡಿದೆ. ಸಂಸ್ಕೃತಿಯ ಪ್ರತಿಬಿಂಬವಿದೆ. ಈ ತರಹದ ಅಧ್ಯಯನದಿಂದ ವೈಚಾರಿಕ, ಭಾಷಿಕ, ಸಾಹಿತ್ಯಿಕ, ಜೈವಿಕ, ಮಾನವಿಕ ಹಾಗೂ ಸಾಂಸ್ಕೃತಿಕ ವಿವರಗಳು ಲಭ್ಯವಾಗುತ್ತವೆ.

ಕಲೆ-ಸಂಗೀತ, ಕಸೂತಿ, ಭೌಗೋಳಿಕ ಪರಿಸರ, ಜೀವವಿಜ್ಞಾನ, ಸಸ್ಯವಿಜ್ಞಾನ, ಐತಿಹಾಸಿಕ ಪರಂಪರೆ ಗತಕಾಲದ ಪಳೆಯುಳಿಕೆಗಳ ಹಿನ್ನಲೆ ಹಾಗೂ ಜಾನಪದೀಯ ವಿವರಗಳನ್ನು ಗ್ರಾಮನಾಮಗಳಿಂದ ಮಾತ್ರ ನಾವು ತಿಳಿಯಬಹುದಾಗಿದೆ. ಅವುಗಳೇ ಇಂದಿನ ಊರು, ಕೇರಿ, ಗ್ರಾಮ, ಕೆರೆ-ಕಟ್ಟೆ, ಹೋಬಳಿ, ತಾಲ್ಲೂಕು ಜಿಲ್ಲೆಗಳಾಗಿವೆ.

ಈ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಆಚರಿಸಲ್ಪಡುವ ಗ್ರಾಮದೇವತೆಯಾದ ಬಿಸಿಲು ಮಾರಮ್ಮನ ಸಂಪ್ರದಾಯದ ವ್ಯಾಪ್ತಿಗೆ ಕೆಲವು ಗ್ರಾಮಗಳು ಸೇರಿಕೊಳ್ಳುತ್ತವೆ. ಲಾಳನಕೆರೆ, ಚೆನ್ನನಕೆರೆ, ಹುಂಜನಕೆರೆ, ಹಾಲಗೂಡು, ಮಿಕ್ಕೆರೆ, ಬಳ್ಳೆಕೆರೆ, ಅರಕೆರೆ, ಹೀಗೆ ಏಳು ಗ್ರಾಮಗಳು ಇದರ ಸರಹದ್ದಿನಲ್ಲಿ ಬರುತ್ತವೆ. ಈ ಏಳು ಗ್ರಾಮಗಳ ಹಿನ್ನೆಲೆ ಮತ್ತು ಮಹತ್ವ ತುಂಬಾ ಅಪಾರವಾಗಿದೆ. ಇಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶವೆಂದರೆ ಇಲ್ಲಿ ಕಾಣುವ ಪ್ರತಿಯೊಂದು ಹಳ್ಳಿಗಳು ಕೆರೆಯನ್ನು ಆವರಿಸುವುದರಿಂದ ಆ ಊರಿನ ಪಕ್ಕದಲ್ಲಿ  ಯಾವುದಾದರೂ ಒಂದು ಕೆರೆ ಇದ್ದೇ ಇದೆ. ಈ ಹಿನ್ನೆಲೆಯಲ್ಲಿ ಊರಿನ ಹೆಸರಿನ ಮುಂದೆ ಕೆರೆ ಎನ್ನುವ ಪ್ರಾಕೃತಿಕ ಬಳಕೆಯಾಗಿದೆ ಎನ್ನಬಹುದು. ಹಾಗೆಯೇ ಈ ಗ್ರಾಮಗಳ ಚರಿತ್ರೆಯನ್ನು ಹುಡುಕುವ ಸಂದರ್ಭದಲ್ಲಿ ರಾಜರ ಆಳ್ವಿಕೆ ನಡೆಸಿದಂತಹ ಕುರುಹುಗಳು ಸಿಗುತ್ತವೆ. ಹಿಂದೆ ಮೈಸೂರು ರಾಜ ಈ ಹಳ್ಳಿಗಳನ್ನು ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಬಳುವಳಿಯಾಗಿ (ದಾನ-ದತ್ತಿ) ಕೊಟ್ಟಿರುವುದಕ್ಕೆ  ಆ ಊರುಗಳಲ್ಲಿ ಸಾಕ್ಷಿಗಳಿವೆ.

ಈ ನಿಟ್ಟಿನಲ್ಲಿ ಏಳು ಊರಿನ ಹಿನ್ನೆಲೆ, ಮಹತ್ವವನ್ನು ಗುರುತಿಸಿದ ಪ್ರಯತ್ನ ಮಾಡಲಾಗಿದೆ. ಹಾಗೆಯೇ ಆ ಊರುಗಳ ವಿಶೇಷತೆಯೂ ಕೂಡ ತುಂಬಾ ಮಹತ್ವದ್ದಾಗಿದೆ. ಹೀಗಾಗಿ ಆ ಊರಿನ ಹೆಸರಿನ ಹಿಂದೆ ಯಾವುದಾದರೂ ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕವಾದ ಕುರುಹು ಇರಲೇಬೇಕು. ಜಾಗತೀಕರಣ, ಉದಾರೀಕರಣ, ನಗರೀಕರಣದ ಪ್ರಭಾವದಿಂದಾಗಿ ಇದ್ದ ಹಲವು ಹೆಸರುಗಳು ಬಿದ್ದು ಹೋಗಿ ಹೊಸ ಹೆಸರುಗಳನ್ನು ಪಡೆದು ಎದ್ದು ನಿಲ್ಲುತ್ತವೆ. ಆದರೂ ಹಿಂದೆ ಇದ್ದ ಆ ಸ್ಥಳ ಮಹಿಮೆಯ ವಿವರ ಅಷ್ಟಾಗಿ ಅಳಿದು ಹೋಗುವುದಿಲ್ಲ. ಒಂದು ಊರು, ಗ್ರಾಮ, ಪುರ, ಹಳ್ಳಿ ಅಥವಾ ಒಂದು ನಿಶ್ಚಿತ ಪ್ರದೇಶಕ್ಕೆ ಕಾಟಾಚಾರದ ಹೆಸರಿಡುವುದಿಲ್ಲ. ಆ ಸ್ಥಳದ ಮಹಿಮೆಗೆ ತಕ್ಕಂತೆ ಅನೇಕ ಪೂರಕ ಅಂಶಗಳು ಕಾರಣೀಭೂತವಾಗಿರುತ್ತವೆ. ಅವುಗಳು ಪ್ರಾಕೃತಿಕ, ಭೌಗೋಳಿಕ ಅಂಶಗಳಾಗಿರಬಹುದು. ಮಾನವನ ಸಾಂಸ್ಕೃತಿಕ ಹಿನ್ನಲೆಯ ಸಂಸ್ಕೃತಿಯ ಹೆಸರುಗಳಾಗಿ ಅಂಕಿತ ಪಡೆದು ಪ್ರಚಾರಕ್ಕೆ ಬಂದು ಟಂಕಸಾಲೆಯ ಹಣದಂತೆ ಪ್ರಸಾರಗೊಳ್ಳಬಹುದು. ಪ್ರಾಕೃತಿಕ ಪರಿಸರವಿರುವ ಕರ್ನಾಟಕ ರಾಜ್ಯದಲ್ಲಿ ಒಂದೊಂದು ಪ್ರಾಂತ್ಯ ಮತ್ತು ಊರಿನ ಹೆಸರುಗಳು ವೈವಿಧ್ಯಮಯ ವರ್ಣನೆಗಳಿಂದ ಕೂಡಿದವುಗಳಾಗಿವೆ. ಈ ಹಿನ್ನಲೆಯಲ್ಲಿ ಗ್ರಾಮನಾಮಗಳ ಮಹತ್ವವನ್ನು ತಿಳಿಯಬಹುದಾಗಿದೆ.

ಈ ಮೇಲಿನ ಅಂಶಗಳಲ್ಲದೆ ಗ್ರಾಮನಾಮಗಳ ಮಹತ್ವವನ್ನು ತಿಳಿಯಲು ಇನ್ನೂ ಕೆಲವು ಅಂಶಗಳು ಸಹಕಾರಿಯಾಗಿವೆ. ಅವುಗಳನ್ನು ಈ ಕೆಳಕಂಡ ಅಂಶಗಳಿಂದ ತಿಳಿಯಬಹುದು.

೧.         “ಮಾನವನ ಹುಟ್ಟು ಮತ್ತು ನೆಲೆಗಳ ವಿಕಾಸ

೨.         ನಾಗರೀಕತೆಯ ಬೆಳವಣಿಗೆ

೩.         ಪ್ರಕೃತಿ ಸಂಪತ್ತಿನ ಅನುಭೋಗ ಮತ್ತು ವಿನಿಯೋಗ

೪.         ಪ್ರಾಕೃತಿಕ ಭೌಗೋಳಿಕ ಪರಿಸರದ ನೆಲೆ ಮತ್ತು ವಾಸ್ತವ್ಯದ ಕುರುಹುಗಳನ್ನು ತಿಳಿಯಬಹುದಾಗಿದೆ

೫.         ಪಶುಪಾಲನೆ-ಪೋಷಣೆಗಳ ಆರಂಭವಾದದ್ದು

೬.         ಐತಿಹಾಸಿಕ ಪರಂಪರೆಯ ವಿವರಗಳು

೭.         ಮಾನಸಿಕ ವಿಜ್ಞಾನಗಳ ಪರಿಚಯ

೮.         ಆಯಾಯ ಕಾಲದ ರಾಜರ ಸಾಂಸ್ಕೃತಿಕ ವಿವರಗಳನ್ನು ಕೆತ್ತಿರುವ ಶಾಸನಗಳು ಮತ್ತು ಅವುಗಳ ಭಾಷೆ, ಸಿದ್ಧಿ, ಸಾಧನೆ, ದಾನ ಧರ್ಮಾದಿಗಳು ಇತ್ಯಾದಿ.

೯.         ಕೃಷಿಗಾರಿಕೆ, ಮೀನುಗಾರಿಕೆ, ಬೇಟೆ, ಇತ್ಯಾದಿ – ವೃತ್ತಿಗಳ ಇತಿಹಾಸ

೧೦.       ವೃತ್ತಿ ಮತ್ತು ಜನಾಂಗದ ವಿವರಗಳು

೧೧.       ಭೂ ಸಂಪತ್ತಿನಲ್ಲಿ ದೊರೆಯುವ ಲೋಹಗಳ ಬಳಕೆ

೧೨.       ಪಶುಪಕ್ಷಿಗಳ ನಡುವೆ ಮಾನವರ ಅವಿನಾಭಾವ ಸಂಬಂಧ

೧೩.       ಸಸ್ಯ ಸಂಪತ್ತು ಮತ್ತು ಸಮೃದ್ಧಿಯ ವಿವರಗಳು

೧೪.       ಮಾನವ ಮತ್ತು ಪ್ರಕೃತಿಯ ಸಂಬಂಧ

೧೫.       ಸಾಮಾಜಿಕ ಏಣಿಶ್ರೇಣಿಯ ಉಗಮ (ಬಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ)

೧೬.       ಕೈಗಾರಿಕೆಯ ಬೆಳವಣಿಗೆಗಳು

೧೭.       ನಗರೀಕರಣ

೧೮.       ಆರ್ಥಿಕ ಸ್ವಾವಲಂಬನೆ ಮತ್ತು ವಸ್ತುಗಳ ವಿನಿಮಯ ಪದ್ಧತಿ

೧೯.       ರಾಜಪ್ರಭುತ್ವ ಸಿದ್ಧಿ, ಸಾಧನೆ ಮತ್ತು ಕೌಶಲ್ಯಗಳು

೨೦.       ಮತಧರ್ಮದ ವಿವರಗಳು

೨೧.       ಉಡುಗೆ-ತೊಡುಗೆ, ಊಟೋಪಚಾರ ಪದ್ಧತಿಗಳು

೨೨.       ಲೋಕ ರೂಢಿ, ಸಂಪ್ರದಾಯಗಳು

೨೩.       ವಾಸ್ತವ್ಯದ ಮಾದರಿ ವಿವಿಧ ಶೈಲಿಗಳು

೨೪.       ಕಲೆ, ಸಂಗೀತ, ಕಸೂತಿ”

ಇನ್ನೂ ಮುಂತಾದ ವಿಚಾರಗಳು ಊರು, ಸ್ಥಳಗಳ ವಿವರಗಳಿಂದ ಮಾತ್ರ ತಿಳಿಯಲು ಸಾಧ್ಯ. ಆದ್ದರಿಂದಲೇ ಊರು, ಹಳ್ಳಿಗಳ ಹಿನ್ನೆಲೆಯಲ್ಲಿ ಗ್ರಾಮನಾಮಗಳಿಗೆ ಅಷ್ಟೊಂದು ಮಹತ್ವ ಬಂದಿದೆ. ಗ್ರಾಮನಾಮಗಳ ಮಹತ್ವವನ್ನು ಕೆಲವು ಅಂಶಗಳ ಆಧಾರದ ಮೇಲೆ ನಿರ್ಧರಿಸಬಹುದಾಗಿದೆ.

ಅಡಿ ಟಿಪ್ಪಣೆಗಳು

೧.         ಎಸ್.ಎಸ್. ಹಿರೇಮಠ, ಕರ್ನಾಟಕ ಸಂಸ್ಕೃತಿ ಪರಂಪರೆ ಭಾಗ – ೨ ಜಾತ್ರೆಗಳು, ಪು. ೨೯.

೨.         ಡಾ. ಪುರುಷೋತ್ತಮ ಬಿಳಿಮಲೆ, ಕೊರಗರು, ಪು. ೩೮.

೩.         ಎಸ್.ಎಸ್, ಹಿರೇಮಠ, ಕರ್ನಾಟಕ ಸಂಸ್ಕೃತಿ ಪರಂಪರೆ ಭಾಗ – ೨ ಜಾತ್ರೆಗಳು, ಪು. ೩೬

೪.         ಡಾ. ಎಚ್. ವಿಶ್ವನಾಥ, ಸಕಲೇಶಪುರದ ಸ್ಥಳನಾಮಗಳು, ಪು. ೪೨.

೫.         ಡಾ. ಎಚ್. ವಿಶ್ವನಾಥ, ಸಕಲೇಶಪುರದ ಸ್ಥಳನಾಮಗಳು, ಪು. ೪೩-೪೪.