ಹಬ್ಬ-ಜಾತ್ರೆಗಳು ಸಾಮಾನ್ಯವಾಗಿ ನಂಬಿಕೆಯ ಆಧಾರ ಮೇಲೆ ನೆಲೆಗೊಂಡ ಸಾಂಪ್ರದಾಯಿಕ ಆಚರಣೆಗಳು. ಇವೆಲ್ಲ ದಿಡೀರ್ ಹುಟ್ಟು ಪಡೆಯದೆ ಮನುಷ್ಯನ ಭೌಗೋಳಿಕ ಸಾಮಾಜಿಕ ಹಿನ್ನಲೆಯಲ್ಲಿ ನೆಲೆಗೊಂಡ ಜಾನಪದ ಸಂಪ್ರದಾಯಗಳು. ಈ ಜನಪದ ಸಂಸ್ಕೃತಿ ಬದಲಾಗುತ್ತಿರುವ ಸಾಮಾಜಿಕ ಹಿನ್ನೆಲೆಯಲ್ಲಿ ಕಾಲ ಸಂದರ್ಭಗಳಿಗೆ ಅನುಗುಣವಾಗಿ ಅರ್ಥಪೂರ್ಣ ಹಿನ್ನೆಲೆಯಲ್ಲಿ ಪಡೆದುಕೊಂಡಿರುತ್ತದೆ. ಹೀಗೆ ಆಚರಣೆಯಲ್ಲಿದ್ದ ಎಷ್ಟೋ ಹಬ್ಬ-ಜಾತ್ರೆಗಳು ಬದಲಾದ ರಾಜಕೀಯ, ಸಾಮಾಜಿಕ ಜೀವನ ಮೌಲ್ಯಗಳ ಹೊಡೆತಕ್ಕೆ ಸಿಕ್ಕಿ ತಮ್ಮ ವೈಶಿಷ್ಟ್ಯವನ್ನು ಕಳೆದುಕೊಂಡಿವೆ. ಕೆಲವಂತೂ ಇಂದಿಗೂ ಹೇಳ ಹೆಸರಿಲ್ಲದಂತಾಗಿವೆ ಎನ್ನಬಹುದು.

ಹಬ್ಬ ಸಾಮಾನ್ಯವಾಗಿ ಒಂದು ಸಾರ್ವತ್ರಿಕ ಆಚರಣೆಯಾಗಿರಬಹುದು ಅಥವಾ ಆಯಾ ಪಂಗಡದ ಊರಿನ ಸಾಂಪ್ರದಾಯಿಕ ವಿಶಿಷ್ಟಾಚರಣೆಯಾಗಿರಬಹುದು. ಏನೇ ಆದರೂ ಸಹ ಸಾಂಪ್ರದಾಯಿಕ ನೆಲೆಗಟ್ಟಿನ ಮೇಲೆ ಸಮಾಜದ ಒಳಿತನ್ನು ಗುರಿಯಾಗಿಟ್ಟುಕೊಂಡಿರುವುದು ಮುಖ್ಯವಾಗಿರುತ್ತದೆ.

ಒಂದು ಕರಾರುವಕ್ಕಾದ ಅವಧಿಯಲ್ಲಿ ಒಂದು ವಿಶಿಷ್ಟ ಗುಂಪೊಂದು ತನ್ನ ಗ್ರಾಮ ದೇವತೆಗೆ ಸಲ್ಲಿಸುವ ಪೂಜೆ ಪುರಸ್ಕಾರಾದಿಗಳ ಸಾಂಪ್ರದಾಯಿಕ ಆಚರಣೆಯನ್ನೇ ಜಾತ್ರೆ ಎನ್ನಬಹುದು. ಜನ ಸೇರಿದ ಈ ಜಾತ್ರೆಯಲ್ಲಿ ಕೇವಲ ವ್ಯಾಪಾರ ವ್ಯವಹಾರವೇ ಮುಖ್ಯವಾಗಿರದೆ ದೈವ ಸಂಬಂಧವಾದ ಸಾಂಸ್ಕೃತಿಕ ಆಚರಣೆಗಳು ಧಾರ್ಮಿಕವಾಗಿ ಅನುಸರಣೆಗೊಳ್ಳಬೇಕು. ದೇವತಾರಾಧನೆಯ ನೆಪದಲ್ಲಿ ಕಲೆತ ಮಂದಿ ತಮ್ಮ ವ್ಯವಹಾರಗಳನ್ನು ಕುದುರಿಸಿಕೊಳ್ಳುತ್ತಾರೆ. “Society is a group of Community of Individual” ಎನ್ನುವಂತೆ ಸಮಾಜದ ಗುಂಪುಗಳ ಮತ್ತು ವ್ಯಕ್ತಿ ನಡುವಿನ ಸಾಮರಸ್ಯಕ್ಕೆ ಮಧುರ ಸೇತುವೆಯಾಗಬಲ್ಲದು. ಕೌಟುಂಬಿಕ ವ್ಯವಹಾರ ಕಷ್ಟ-ಸುಖ, ಮಳೆ-ಬೆಳೆ ಹಾಗೂ ಬಾಂದವ್ಯ ಸಮೀಕರಣಕ್ಕೆ ಜಾತ್ರೆ ಉತ್ತಮವಾದ ಸಾಧನವಾಗಬಹುದು. ಇದರಿಂದಾಗಿ ಸಾಮಾಜಿಕ ಬಾಂಧವ್ಯ ಸುಧಾರಣೆಗೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಇಂದು ಹಬ್ಬ-ಜಾತ್ರೆಗಳು ಅರ್ಥಪೂರ್ಣ ಎನಿಸಿಕೊಳ್ಳುಲು ಸಾಧ್ಯವಾಗುತ್ತದೆ.

ಸಾಮಾನ್ಯವಾಗಿ ಜಾತ್ರೆಗಳು ಒಂದೇ ಸ್ವರೂಪದ್ದಾಗಿದ್ದು. ಆಚರಣೆಯಲ್ಲಿ ಕೆಲವು ವೈಶಿಷ್ಟ್ಯಗಳನ್ನು ಕಾಣಬಹುದು. ಗ್ರಾಮೀಣ ಜನರೇ ಸೇರಿ ನಿರ್ಧರಿಸಿ ನೆರವೇರಿಸುವ ಜಾತ್ರೆಗಳು ಒಂದೆಡೆಯಾದರೆ ಆಗಮಿಕರ ಲೆಕ್ಕಾಚಾರದಂತೆ ತಿಥಿ, ವಾರ, ನಕ್ಷತ್ರಗಳ ಲೆಕ್ಕಾಚಾರಗಳಲ್ಲಿ ವೈದಿಕ ರೀತಿ ನಡೆಯುವ ಜಾತ್ರೆಗಳೂ ಇವೆ. ಆಗ ಮುಕ್ತವಾಗಿ ನಡೆಯುವ ಪೂಜೆ ಕೈಂಕರ್ಯಕ್ಕೆ ಶಿಷ್ಟ ರೀತಿಯ ಪೂಜಾರಿಗಳಿಂದ ಪೂಜಿಸಲ್ಪಡುತ್ತದೆ. ಆದರೆ ಗ್ರಾಮೀಣ ಜಾತ್ರೆಗಳ ಪೂಜಾರಿಗಳು ಜನಪದರಲ್ಲಿ ಒಬ್ಬರಾಗಿದ್ದು ವಂಶಪಾರಂಪರ‍್ಯವಾಗಿ ಬಂದಿರುತ್ತಾರೆ.

ಹೀಗೆ ನಿರ್ಧರಿಸಲ್ಪಟ್ಟ ಜಾತ್ರೆಗಳು ನಿರ್ದಿಷ್ಟ ವೇಳೆಯಲ್ಲಿ ತುಂಬಾ ವೈಭವದಿಂದ ಜರುಗುತ್ತವೆ. ಅಂಗಡಿ ಮುಂಗಟ್ಟುಗಳು ಜಮಾಯಿಸುತ್ತವೆ. ಜಾನುವಾರುಗಳು ಸೇರುತ್ತವೆ. ಉತ್ತಮ ರಾಸುಗಳಿಗೆ ಬಹುಮಾನವನ್ನು ಜಾತ್ರೆಗೆ ಮೊದಲೇ ವ್ಯವಸ್ಥಾಪಕರು ಪ್ರಚುರಪಡಿಸುವುದರಿಂದ ಬೆಲೆ ಬಾಳುವ ಉತ್ತಮ ತಳಿಯ ರಾಸುಗಳು ಬರುತ್ತವೆ. ಜಾನುವಾರು ವ್ಯವಹಾರದಲ್ಲಿ ಹಲವಾರು ನಾಲ್ಕು ಕಾಸು ಕುದುರಿಸಿದರೆ ಮತ್ತು ಕೆಲವರು ಕೈ ಕೆಡಿಸಿಕೊಂಡು ಹ್ಯಾಪ ಮೋರೆ ಹಾಕಿಕೊಳ್ಳುತ್ತಾರೆ. ದೊಂಬರಾಟ, ಕೋತಿ ಕುಣಿಯುವುದು, ಹಾವಾಡಿಗ, ಮೋಡಿ ಹಾಕುವುದು ಇತ್ಯಾದಿಗಳು ಜಾತ್ರೆಯ ಜನಾಕರ್ಷಣೆಯ ಕೇಂದ್ರಗಳಾಗುತ್ತವೆ. ಇಷ್ಟೆಲ್ಲಾ ಗೋಜಲುಗಳು ನಡುವೆ ಪೂಜೆ ಪುನಸ್ಕಾರಗಳು ನೇಮದಂತೆ ನಡೆಯುವುದು ದೈವ ಕೃಪೆಯೇ ಸರಿ ಎನ್ನಬಹುದು.

ಭಾರತದಲ್ಲಿ ಇಂದು ಅನೇಕ ಧರ್ಮಗಳಲ್ಲಿ ನೆಲೆಯಾಗಿವೆ. ಆಯಾ ಧರ್ಮಗಳಿಗೆ ಸಂಬಂಧಿಸಿದ ಅನೇಕ ಹಬ್ಬಗಳು ಅಚರಣೆಯಲ್ಲಿವೆ. ಹಬ್ಬಗಳಲ್ಲಿ ಸಾರ್ವತ್ರಿಕವಾಗಿ ಮತ್ತು ಆಯಾ ಗ್ರಾಮಗಳಿಗೆ ಸೀಮಿತವಾಗಿ ಆಚರಿಸುವ ಎರಡು ಸಂಪ್ರದಾಯಗಳನ್ನು ಕಾಣಬಹುದು. ಯಾವುದೇ ರೀತಿಯ ಹಬ್ಬಗಳು ಸಾಮಾಜಿಕ ಒಳಿತಿಗಾಗಿ ಎಂಬ ನಂಬಿಕೆಯಿಂದ ದೈವದ ಹೆಸರಿನಲ್ಲಿ ಆಚರಿಸುವುದೇ ಆಗಿದೆ. ಹಿಂದೂಗಳಲ್ಲಿ ಸಾರ್ವತ್ರಿಕವಾಗಿ ಆಚರಿಸುವ ಉಗಾದಿ, ಗೌರಿ ಗಣೇಶ, ದೀಪಾವಳಿ, ಸಂಕ್ರಾಂತಿ, ಶಿವರಾತ್ರಿ, ಇತ್ಯಾದಿ ಹಬ್ಬಗಳನ್ನು ಕಾಣಬಹುದು. ಗ್ರಾಮದೇವತೆ ಹಬ್ಬಗಳಲ್ಲಿ ಆಯಾ ಗ್ರಾಮಗಳಲ್ಲಿ ನೆಲೆನಿಂತ ಮಾರಿ, ಮಸಣಿ, ಪಟ್ಟಲದಮ್ಮ, ಮಂಚಮ್ಮ, ಮಾಯಮ್ಮ, ಮಾಸ್ತಮ್ಮ, ಕಬ್ಬಾಳಮ್ಮ, ಏಳೂರಮ್ಮ, ಮದ್ದೂರಮ್ಮ, ಹುಚ್ಚಮ್ಮ, ಕಿಕ್ಕೇರಮ್ಮ, ಬೋರೆ ದೇವರು, ಸಾಂಕ್ರಮಿಕ ರೋಗಗಳಿಗೆ ಸಂಬಂಧಿಸಿದ ದೇವತೆಗಳು ಇತ್ಯಾದಿಯಾಗಿ ಕಂಡುಬರುತ್ತವೆ. ಸಾರ್ವತ್ರಿಕ ಹಬ್ಬಗಳು ನಿಗದಿಯಾದ ದಿನದಂದು ಸಾರ್ವತ್ರಿಕವಾಗಿ ಎಲ್ಲಾ ಕಡೆ ಏಕರೂಪದಲ್ಲಿ ಏಕತೆಯಿಂದ ಆಚರಿಸಲ್ಪಡುತ್ತವೆ. ಆದರೆ ಗ್ರಾಮದೇವತೆಗಳ ಹಬ್ಬಗಳು ಆಯಾ ಗ್ರಾಮಗಳ, ಸಂಪ್ರದಾಯಕ್ಕೆ ಸಂಬಂಧಿಸಿದಂತೆ ಬೇರೆ ಬೇರೆಯಾಗಿ ಹಾಗೂ ವೈಶಿಷ್ಟ್ಯಪೂರ್ಣವಾದ ವ್ಯತ್ಯಾಸಗಳಿಂದ ಕೂಡಿ ಆಚರಿಸಲ್ಪಡುತ್ತವೆ.

ಮನುಷ್ಯ ತನ್ನ ಅವಿಶ್ರಾಂತ ದುಡಿಮೆಯ ನಡುವೆ ಬಿಡುವು ಮಾಡಿಕೊಂಡು ಎಲ್ಲರೊಡನೆ ಕಲೆತು ಸಂತೋಷದಿಂದ ಕೂಡಿ ಬಾಳಲು ಹಬ್ಬ-ಹರಿದಿನಗಳು ಸಹಕಾರಿಯಾಗಿವೆ. ಕುಟುಂಬಗಳು ಬೆಳೆದು ವಿಭಜನೆಗೊಂಡು ಬದುಕಿನ ಅನಿವಾರ‍್ಯತೆಯಿಂದ ದೂರ ದೂರ ಚದುರಿಹೋದವರು ಹಬ್ಬಗಳ ನೆಪದಲ್ಲಿ ಆಗಾಗ್ಗೆ ಒಂದೆಡೆ ಕಲೆತು ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳಲು ಸಹಕಾರಿಯಾಯಿತು. ಅಲ್ಲದೆ ದೇವತೆಗಳನ್ನು ಪೂಜಿಸುವುದರಿಂದ ನಾಡಿಗೆ ಮತ್ತು ತಮಗೆ ಒಳಿತುಂಟಾಗುತ್ತದೆಂಬ ನಂಬಿಕೆಗಳ ಹಿನ್ನೆಲೆಯಲ್ಲಿ ಹಬ್ಬಗಳು ಚಾಲ್ತಿಯಲ್ಲಿ ಉಳಿದು ಬೆಳೆದು ಬರಲು ಕಾರಣವಾಯಿತು.

ಹಬ್ಬಗಳು, ಆಚರಣೆಗಳ ಹಿನ್ನೆಲೆಯಲ್ಲಿ ಅನೇಕ ಅಂಶಗಳು ವ್ಯಕ್ತವಾಗುತ್ತವೆ. ಗ್ರಾಮದ ರಸ್ತೆ ಚರಂಡಿಗಳು ಶುಚಿಗೊಂಡು ಗ್ರಾಮ ಸ್ಚಚ್ಛತೆಗೆ ಕಾರಣವಾಗುತ್ತವೆ. ಹಾಗೆಯೇ ಮನೆಯ ದೂಳು ತೆಗೆದು ಗೋಡೆ ಬಿರುಕುಗಳನ್ನು ಮುಚ್ಚಿ ಸುಣ್ಣ-ಬಣ್ಣ ಹೊಡೆಯುವುದರಿಂದ ವರ್ಷಕ್ಕೊಮ್ಮೆ ಮನೆಯನ್ನು ನವೀಕರಿಸಿದಂತಾಗಿ ಸುಭದ್ರಗೊಳ್ಳುತ್ತದೆ. ಸುಣ್ಣ ಬಳಿಯುವುದರಿಂದ ಕ್ರಿಮಿಕೀಟಗಳು ನಾಶವಾಗಿ ಮನೆ ಆರೋಗ್ಯದ ಬೀಡಾಗುತ್ತದೆ. ಹಬ್ಬಗಳಲ್ಲಿ ವಿಶೇಷವಾಗಿ ಎಣ್ಣೆಹಚ್ಚಿ ಮನೆಮಂದಿಯೆಲ್ಲಾ ಸ್ನಾನ ಮಾಡುವುದರಿಂದ ಕುಟುಂಬದ ಆರೋಗ್ಯ ವೃದ್ಧಿಸುತ್ತದೆ. ವರ್ಷವೆಲ್ಲಾ ದುಡಿಯುವ ವ್ಯಕ್ತಿಗಳಿಗೆ  ಸಂಭ್ರಮ ಹೆಚ್ಚಿ ವಿಶ್ರಾಂತಿ ದೊರೆತು ಉಲ್ಲಾಸದಾಯಕವಾಗಿರುತ್ತದೆ. ದೂರದ ಸಂಬಂಧಿಗಳ ದರ್ಶನವಾಗುತ್ತದೆ. ವಿವಾಹವಾಗಿ ಹೋಗಿರುವ ತಮ್ಮ ಕುಟುಂಬದ ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಕೆಲವು ಕಾಲ ಮನೆಯಲ್ಲೇ ಇರುವುದರಿಂದ ಪ್ರೀತಿ ವಾತ್ಸಲ್ಯ ವೃದ್ಧಿಗೊಳಿಸಲು ಅವಕಾಶವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಭಾವನಾತ್ಮಕ ತಳಹದಿಯ ಮೇಲೆ ಗ್ರಾಮದವರೆಲ್ಲರೂ ತಮ್ಮ ವೈಮನಸ್ಸು ಮರೆತು ಒಂದೆಡೆ ಕಲೆತು  ದೇವತಾರಾಧನೆ ಮಾಡುವುದರಿಂದ ಗ್ರಾಮದ ಒಗ್ಗಟ್ಟಿಗೆ ಕಾರಣವಾಗುತ್ತದೆ. ಹೀಗೆ ಇನ್ನು ಮುಂತಾದ ಅಂಶಗಳನ್ನು ಗಮನಿಸಬಹುದಾಗಿದೆ.

ಯಾವುದೇ ಗ್ರಾಮದಲ್ಲಿ ನಡೆಯುವ ಹಬ್ಬವು ಆ ಗ್ರಾಮದ ಎಲ್ಲಾ ವರ್ಗದ ಮತ್ತು ಜಾತಿಯ ಜನರ ಒಟ್ಟು ಸಹಕಾರ ವ್ಯವಸ್ಥೆಯ ಪ್ರತೀಕವಾಗಿರುತ್ತದೆ. ಜನಪದರ ಮುಖ್ಯ ಕಸುಬು ಬೇಸಾಯವೇ ಆಗಿರುವುದರಿಂದ ಬೇಸಾಯ ಕಾರ್ಯದಲ್ಲಿ ಹಾಗೂ ದಿನನಿತ್ಯದ ಬದುಕಿನಲ್ಲಿ ಇತರ ಜಾತಿಯ ಜನರ ಸಹಕಾರ ಅನಿವಾರ‍್ಯವಾಗಿರುತ್ತದೆ. ಅಂತೆಯೇ ಇಂತಹ ವ್ಯವಸ್ಥೆಯ ಹೊಂದಾಣಿಕೆ ಮತ್ತಷ್ಟು ಗಾಢವಾಗಲು ಅನುಕೂಲವಾಗುವಂತೆ ಹಬ್ಬಗಳು ಸಹಕಾರಿಯಾಗಿವೆ. ಕೆಳವರ್ಗದ ಜನ ತಮಟೆ, ನಗರಿ ವಾದ್ಯದೊಡನೆ ದೇವರ ಕಾರ್ಯಕ್ರಮದಲ್ಲಿ ತೊಡಗುವುದರಿಂದ ಅವರಿಗೆ ಕೆಲವು ಹಕ್ಕು-ಬಾದ್ಯತೆಗಳು ಸಾಂಪ್ರದಾಯಿಕವಾಗಿ ಬಂದಿರುತ್ತವೆ. ಕೆಲವು ಗ್ರಾಮಗಳಲ್ಲಿ ಒಕ್ಕಲಿಗ ಅರ್ಚಕ ಮತ್ತು ಹೆಬ್ಬಾರೆ ಬಾರಿಸುವ ಕೆಳವರ್ಗದವರು ಹಬ್ಬದ ಆರಂಭದ ಸಂಕೇತವಾಗಿ ಹೆಬ್ಬಾರೆ ಕಟ್ಟಿದಂದಿನಿಂದ ಹಬ್ಬ ಮುಗಿಯುವವರೆಗೆ ಜನಿವಾರ ಧಾರಣೆ ಮಾಡುವ ಸಂಪ್ರದಾಯವಿದೆ. ಇದಲ್ಲದೆ ಅರ್ಚಕ ಮತ್ತು ಹೆಬ್ಬಾರೆಯ ಕೆಳವರ್ಗದವರು ಹಬ್ಬದ ಅವಧಿಯ ಒಂದು ವಾರ ಪೂರ್ಣ ಉಪವಾಸವಿದ್ದು ಎಳನೀರು ಮತ್ತು ಬಾಳೆಹಣ್ಣು ಮಾತ್ರ ಸೇವಿಸುತ್ತಾರೆ. ಇಂತಹ ಸಂಪ್ರದಾಯ ಜಾತಿಯ ಅಂತರವನ್ನು ಕಡಿಮೆ ಮಾಡುವಂತೆ ತೋರುತ್ತದೆ. ಅಗಸರು ಮಡಿಬಟ್ಟೆ ಕಾರ್ಯದಲ್ಲಿ ಹಾಗೂ ಪಂಜಿನ ಸೇವೆಯಲ್ಲಿ ಸಹಕರಿಸುತ್ತಾರೆ. ಅಂತೆಯೇ ಆ ಗ್ರಾಮದ ಇತರ ಜಾತಿಯವರೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಹಕ್ಕು-ಬಾಧ್ಯತೆಗಳ ಹಿನ್ನೆಲೆಯಲ್ಲಿ ಭಾಗವಹಿಸುತ್ತಾರೆ. ಒಂದು ವೇಳೆ ಯಾವುದೇ ಜಾತಿಯವರಿಗೆ ಗ್ರಾಮದಲ್ಲಿ ಅನ್ಯಾಯವಾದಾಗ ಇಂತಹ ಸಂದರ್ಭಗಳಲ್ಲಿ ಅವರು ಭಾಗವಹಿಸಲು ನಿರಾಕರಿಸುವ ಸಾಧ್ಯತೆ ಇರುವುದರಿಂದ ಹಬ್ಬಗಳು ನಿಂತು ಹೋಗುತ್ತಿದ್ದವು. ಅದಕ್ಕಾಗಿ ಪರಸ್ಪರ ಸಮಾನ ಪ್ರವೃತಿಗೆ ಇಂತಹ ಹಬ್ಬಗಳು ಸಾಕಾರವಾಗಿ ಬೆಳೆದು ಬಂದಿರುವುದನ್ನು ಕಾಣಬಹುದಾಗಿದೆ.

ಹಬ್ಬ-ಜಾತ್ರೆಗಳಲ್ಲಿ ಸಾಮರಸ್ಯವಿದೆ. ಹಬ್ಬದ ದಿನಗಳಲ್ಲೆಲ್ಲಾ ಜಾತ್ರೆ ನಡೆಯುವುದಿಲ್ಲ. ಆದರೆ ಜಾತ್ರೆಯಲ್ಲಿ ಹಬ್ಬದಾಚರಣೆಯನ್ನು ಕಾಣಬಹುದು. ಸಾಮಾನ್ಯವಾಗಿ ಹಬ್ಬ ಊರುಗಳಲ್ಲಿ ಏಕಕಾಲಕ್ಕೆ ಅಥವಾ ಬೇರೆ ಬೇರೆಯಾಗಿ ಆಚರಿಸಬಹುದು. ಒಂದೇ ಹಬ್ಬವನ್ನು ಒಂದೇ ಊರಿನಲ್ಲಿ ಬೇರೆ ಬೇರೆ ದಿನಗಳಲ್ಲಿ ಆಚರಿಸಬಹುದು, ಸಾರ್ವತ್ರಿಕ ಹಬ್ಬಗಳಾದ ಯುಗಾದಿ, ಗೌರಿ, ಶಿವರಾತ್ರಿ ಹಬ್ಬಗಳನ್ನು ಒಟ್ಟಿಗೆ ಆಚರಿಸಿ ಇದರಲ್ಲಿ ಏಕತೆಯನ್ನು ಕಾಣಬಹುದು: ಅದೇ ಸ್ಥಳೀಯ ಹಬ್ಬಗಳನ್ನು ಹಿಂದಿನಿಂದಲೂ ರೂಢಿಸಿಕೊಂಡಂತೆ ತಮಗೆ ಅನುಕೂಲವಾದ ನಿಗದಿಯಾದ ದಿನ ಗ್ರಾಮೀಣ ಜನರು ನಡೆಸುತ್ತಾರೆ.

ಸಂತೋಷಕ್ಕೆ ಸಮೃದ್ಧಿಗೆ ಸಮಾಜದ ಒಳಿತಿಗೆ ಈ ಹಬ್ಬ-ಜಾತ್ರೆಗಳು ಆಚರಣೆಗೆ ಬಂದಿರಬೇಕು. ವ್ಯಕ್ತಿ ತನ್ನ ಸಾಮಾಜಿಕ ಜೀವನವನ್ನು ವಿಸ್ತಾರಗೊಳಿಸುವುದಕ್ಕೆ, ಸಮಾಜದ ಇತರ ವ್ಯಕ್ತಿಗಳೊಡನೆ ಸಾಮರಸ್ಯಕ್ಕೆ ಆತ್ಮೀಯರನ್ನು ಬರಮಾಡಿಕೊಂಡು ತನ್ನ ಕಷ್ಟ ಸುಖಗಳನ್ನು ಹಂಚಿಕೊಳ್ಳುವುದಕ್ಕೆ, ತಾನು ಜೀವಿಸುವ ಗದ್ದೆ, ತೋಟ, ಮನೆಗಳ ಕ್ಷೇಮಕ್ಕಾಗಿ ಅಡ್ಡಿಯಾಗುವ ದುಷ್ಟ ಶಕ್ತಿಗಳ ದಮನಕ್ಕೆ ತಾನು ತನ್ನ ರಕ್ಷಣೆಗಾಗಿ ದೇವರೆಂದು ನಂಬಿರುವ ತನ್ನ ಪರಿಸರದ ಕಾಡು, ಬೆಟ್ಟ, ನದಿ ಮಳೆಗಳೇ ಮುಂತಾದ ನಿಸರ್ಗವನ್ನು ನಿಯಂತ್ರಿಸುವ ಶಕ್ತಿ ಆಗಿದೆ.

ಜಾತ್ರೆ ಹಬ್ಬದ ಒಂದು ಭಾಗವಾಗಿ ಆಸ್ತಿತ್ವಕ್ಕೆ ಬಂದುದಾಗಿದೆ. ಜನಪದ ಸಂಸ್ಕೃತಿಯ ಪ್ರತೀಕವಾದ ಹಬ್ಬ ಮತ್ತು ಜಾತ್ರೆಗಳು ಧಾರ್ಮಿಕ ವಿಧಿ-ವಿಧಾನಗಳನ್ನೊಳಗೊಂಡು ಅವರೆಡೂ ಒಂದೇ ಎಂಬಂತೆ ತೋರುತ್ತದೆ. ಆದರೆ ಹಬ್ಬದ ಸಂದರ್ಭಗಳಲ್ಲಿ ಜಾತ್ರೆ ನಡೆಯಬೇಕೆಂಬ ನಿಯಮವಿಲ್ಲ. ಜಾತ್ರೆ ನಡೆಯುವಾಗೆಲ್ಲ ಹಬ್ಬದ ಆಚರಣೆ ಇದ್ದೇ ಇರುತ್ತದೆ. ಆದ್ದರಿಂದ ಹಬ್ಬದ ಕಾರಣದಿಂದ ಎಲ್ಲಾ ಕಡೆಗಳಿಂದಲೂ ಜನತೆ ಭಕ್ತಿಯ ಕಾರಣಕ್ಕಾಗಿ ಸೇರುವ ಸಂದರ್ಭದಲ್ಲಿ ದೇವರ ಸಂಬಂಧವಾದ ಜನಪದ ಕಲೆಗಳ ಪ್ರದರ್ಶನ ಹಾಗೂ ಅನೇಕ ಧಾರ್ಮಿಕ ವಿಧಿ-ವಿಧಾನಗಳ ಆಚರಣೆ ಕಂಡು ಬಂದು ಜನಾಕರ್ಷಣೆಯ ಕೇಂದ್ರವಾಗುತ್ತಿತ್ತು. “ಧಾರ್ಮಿಕ ಸ್ವರೂಪದ ಹಬ್ಬ, ಕಾಲಕ್ರಮೇಣ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಪಡೆದು ಕೊನೆಗೆ ವಾಣಿಜ್ಯ ಮುಖವನ್ನು ರೂಪಿಸಿಕೊಂಡಾಗ ಜಾತ್ರೆಯಾಯಿತು” ಎಂಬ ಡಾ.ದೇ.ಜ.ಗೌ. (ಜಾನಪದ ಅಧ್ಯಯನ) ಅವರ ಅಭಿಪ್ರಾಯ ಸರ್ವ ಸಮ್ಮತವಾದುದಾಗಿದೆ.

ಆದಿ ಮಾನವನಿಂದ ಮೊದಲ್ಗೊಂಡು ನದಿ ದಡಗಳನ್ನು ಆಶ್ರಯಿಸಿ ಬೇಸಾಯಿ ಪಶು ಸಂಗೋಪನೆ ಮೊದಲಾದ ಕಸುಬಿನ ಮೂಲಕ ಬದುಕನ್ನು ವಿಸ್ತರಿಸಿಕೊಂಡ ಮಾನವನಿಂದ ಇಂದಿನವರೆಗೆ ಸಂಸ್ಕೃತಿ ವಿಕಾಸವಾಗುತ್ತಾ ಬಂದಿದೆ. ಸನಾತನ ಪರಂಪರೆಯ ಅಂಶವಾಗಿ ಧಾರ್ಮಿಕ ಶ್ರದ್ಧೆ ಮತ್ತು ಭಕ್ತಿಭಾವಗಳು ಜನಪದರ ಬದುಕಿನ ಅವಿಭಾಜ್ಯ ಅಂಗವಾಗಿ ಉಳಿದು ಬಂದಿದೆ. ನಂಬಿಕೆ ಮತ್ತು ಆಚರಣೆಯ ಹಿನ್ನೆಲೆಯಲ್ಲಿ ಜನಪದರು ವೈಯಕ್ತಿಕ ಮತ್ತು ಸಾಮೂಹಿಕ ಹಿತರಕ್ಷಣೆಯ ಉದ್ದೇಶದಿಂದ ನಿರಂತರವಾಗಿ ಹಬ್ಬ ಮತ್ತು ಜಾತ್ರೆಗಳನ್ನು ನಡೆಸುತ್ತಾ ಬಂದಿದ್ದಾರೆ.

ಮನುಷ್ಯ ಗ್ರಾಮದೇವತೆಗಳನ್ನು ನಂಬಿಕೊಂಡು ನಡೆಯತೊಡಗಿದ. ಪ್ರಾಕೃತಿಕ ವಿಕೋಪದಿಂದ ಪಾರಾಗುವಂಥ ಹಾದಿಯನ್ನು ಹಲವು ಆಚರಣೆಗಳಲ್ಲಿ ಕಂಡುಕೊಂಡ, ದೇವರು-ದಿಂಡರುಗಳನ್ನು ಒಲಿಸಿಕೊಳ್ಳಲು ಸಂಪ್ರೀತಗೊಳಿಸಲು ಹರಕೆ ಹರಿಸೇವೆಯಲ್ಲದೆ ವೈವಿಧ್ಯಮಯ ಆಚರಣೆಗಳನ್ನು ರೂಢಿಯಲ್ಲಿ ತಂದ. ಬದುಕಿನ ವಾಸ್ತವತೆಗೆ ಅನುಗುಣವಾಗಿ ಗಂಡು ದೇವರು, ಹೆಣ್ಣು ದೇವರುಗಳನ್ನು ಗುರುತಿಸಿ ಕೈ ಮುಗಿದ ವೈವಿಧ್ಯಮಯವಾದ ಸೇವೆಗಳನ್ನು ಗುರುತಿಸಿ ಗ್ರಾಮದೇವತೆಗಳಿಗೆ ಸಲ್ಲಿಸಿದ, ಹಬ್ಬಗಳ ಮೂಲಕ ದೇವರಿಗೆ ಹೆಚ್ಚು ಶ್ರದ್ಧೆ ನಿಷ್ಠೆಯನ್ನು ಜನಪದರು ವ್ಯಕ್ತಪಡಿಸುತ್ತಾರೆ.

ಗ್ರಾಮದೇವತೆಗಳ ಹಬ್ಬ ಮತ್ತು ಜಾತ್ರೆಗಳು

ಮಂಡ್ಯಜಿಲ್ಲೆ ಹಲವು ಕಾರಣಗಳಿಂದ ತುಂಬಾ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈ ಜಿಲ್ಲೆಗೆ ಸೇರಿದ ಅರಕೆರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುವ ಹಬ್ಬ-ಹರಿದಿನಗಳನ್ನು ಅವುಗಳ ವಿಶೇಷತೆಯನ್ನು ಗುರುತಿಸುವುದು ಮುಖ್ಯವಾಗಿದೆ. ಹಬ್ಬ ಜಾತ್ರೆಗಳಲ್ಲಿ ಈ ಗ್ರಾಮದೇವತೆಗಳು ಆಚರಿಸಲ್ಪಡುವ ರೀತಿ ಹಾಗೂ ಅಲ್ಲಿಯ ಹಬ್ಬಗಳು ವೈವಿಧ್ಯಪೂರ್ಣವಾಗಿವೆ. ವಿವಿಧ ವರ್ಗ ವರ್ಣಗಳ ಜನರ ಭಾಗವಹಿಸುವಿಕೆ ಹಾಗೂ ಅಲ್ಲಿ ಆಚರಣೆಗೊಳ್ಳುವ ವಿಧಿ-ವಿಧಾನಗಳು ಕರ್ನಾಟಕದ ಜನಸಾಮಾನ್ಯರ ಪರ‍್ಯಾಯ ಸಂಸ್ಕೃತಿಯೊಂದನ್ನು ಸೂಚಿಸುತ್ತಾ ವೈದಿಕ ಕಲ್ಪನೆಗಳಿಗೆ ತೀರ ವ್ಯತಿರಿಕ್ತವಾಗಿವೆ. ಆಯಾ ಗ್ರಾಮದೇವತೆಗಳನ್ನು ಆರಾಧಿಸುವ ವಿಧಿ-ವಿಧಾನಗಳು ನಮ್ಮ ಮೂಲ ಸಂಸ್ಕೃತಿಯ ಅರ್ಥೈಸುವಿಕೆಗೆ ತುಂಬಾ ಪೂರಕವಾಗಿವೆ.

ಇಲ್ಲಿಯ ಗ್ರಾಮದೇವತೆಯ ಹಬ್ಬದ ವ್ಯಾಪ್ತಿಗೆ ಶ್ರೀರಂಗಪಟ್ಟಣ ಒಳಗೊಳ್ಳುತ್ತವೆ. ಶ್ರೀರಂಗಪಟ್ಟಣ ಎಂಬುದು ಇತಿಹಾಸ ಪ್ರಸಿದ್ಧವಾದ ಒಂದು ಪ್ರಾಚೀನ ನಗರವಾಗಿದೆ. ಹೈದರಾಲಿ ಟಿಪ್ಪುಸುಲ್ತಾನರು ಇಂಗ್ಲೀಷರೊಂದಿಗೆ ನಡೆಸಿದ ಯುದ್ಧಗಳಿಂದಾಗಿ ಈ ನಗರ ಜಗತ್ಪ್ರಸಿದ್ಧವಾಯಿತು. ಈ ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳು ತಮ್ಮದೇ ಆದ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿವೆ. ಈ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆಯ ಸುತ್ತಮುತ್ತಲಿನ ಗ್ರಾಮದೇವತೆಗಳನ್ನು ಪರಿಶೀಲಿಸಲಾಗಿದೆ.

ಗ್ರಾಮದೇವತೆಗಳ ಹಬ್ಬ ಆಚರಣೆಗಳು ಸಾಮಾನ್ಯವಾಗಿ ಒಂದೇ ರೀತಿಯಲ್ಲಿರುತ್ತವೆ. ಕಾರಣ ಶಿಷ್ಟದೇವ-ದೇವತೆಗಳಿಗಿರುವಂತೆ ಗ್ರಾಮದೇವತೆಗಳಿಗೆ ಶಾಸ್ತ್ರಗಳ ಕಟ್ಟುಪಾಡಿರುವುದಿಲ್ಲ. ಇಲ್ಲಿ ಆಚರಣೆಗಳೇ ಮುಖ್ಯವಾಗಿರುತ್ತವೆ. ಯಾವುದೇ ಗ್ರಾಮದೇವತೆಯ ಹಬ್ಬ, ಜಾತ್ರೆಯ ಆಚರಣೆಯಲ್ಲಿಯೂ ಮಡೆ ಹೊರುವುದು. ಕೊಂಡ ಹಾಯುವುದು, ಗಾವು ಸಿಗಿಯುವುದು, ಸಿಡಿಯಾಡುವುದು ಇದ್ದೇ ಇರುತ್ತದೆ. ಕೆಲವು ವೇಳೆ ಒಂದೆರಡು ವ್ಯತ್ಯಾಸಗಳೂ, ವಿಶಿಷ್ಠತೆಗಳು ಇರಬಹುದು. ಈಚೀಚೆಗೆ ಗ್ರಾಮದೇವತೆಗಳಿಗೆ ಶಿಷ್ಟರೂಪ ಕೊಡುವುದು ನಡೆದಿದೆ. ಮಡೆ, ಎಡೆ, ಬಲಿ, ತೇರು, ಇವುಗಳಂತೂ ಎಲ್ಲಾ ಕಡೆಗಳಲ್ಲೂ ಸಾಮಾನ್ಯವಾಗಿವೆ.

ಪ್ರತಿಯೊಂದು ಹಳ್ಳಿಯಲ್ಲಿಯೂ ಆ ಹಳ್ಳಿಗೆ ಸೀಮೀತವಾಗಿರುವ ದೇವತೆಯನ್ನು ಪೂಜಿಸುತ್ತಾರೆ. ಅಷ್ಟೇ ಅಲ್ಲದೆ ಆ ದೇವರ ಹೆಸರಿನಲ್ಲಿ ಜಾತ್ರೆ, ಉತ್ಸವಗಳು ನಡೆಯುತ್ತವೆ. ಹೀಗೆ ಗ್ರಾಮದೇವತೆಗಳ ಹಬ್ಬಗಳನ್ನು ಪರಿಚಯಿಸಬಹುದಾಗಿದೆ. ಇಲ್ಲಿ ಮುಖ್ಯವಾಗಿ ಹಬ್ಬ-ಜಾತ್ರೆಗಳನ್ನು ಜನರ ಮನಸ್ಸನ್ನು ಸಂತೋಷಪಡಿಸಲು ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳಲು ಆಚರಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಗ್ರಾಮದೇವತೆಗಳನ್ನು ಕುರಿತಂತೆ ಚರ್ಚಿಸಲಾಗುವುದು. ಹಬ್ಬಗಳಲ್ಲಿ ಮುಖ್ಯವಾಗಿ ಅರಕೆರೆ ಮಾರಮ್ಮನ ಹಬ್ಬವನ್ನು ವಿವರಿಸುವ ಪ್ರಯತ್ನ ಮಾಡಲಾಗಿದೆ.

 

ಅರಕೆರೆ ಗ್ರಾಮದಲ್ಲಿ ಬಿಸಿಲು ಮಾರಮ್ಮನ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಇಲ್ಲಿ ಹಬ್ಬ ಮಾಡಲು ವಿವಿಧ ಕೋಮಿನ ಜನಾಂಗದವರೆಲ್ಲಾ ಒಟ್ಟಾಗಿ ಸೇರುತ್ತಾರೆ. ಇದು ಒಂದು ತಿಂಗಳು ಆಚರಿಸುವ ಹಬ್ಬವಾಗಿದೆ. ಈ ಹಬ್ಬವನ್ನು ಶಿವರಾತ್ರಿ ನಂತರ ಅಮಾವಾಸ್ಯೆಯಾದ ಮೇಲೆ ಬರುವ ಮೊದಲನೆಯ ಭಾನುವಾರವೇ ಕಡ್ಡಾಯವಾಗಿ ಆಚರಿಸುವರು.

ಈ ಹಬ್ಬವನ್ನು ಗ್ರಾಮಸ್ಥರ ತೆಂಡೆಯವರ ತೀರ್ಮಾನದ ಮೇರೆಗೆ ಆಚರಿಸುವರು. ತೆಂಡೆಯ ತೀರ್ಮಾನವಾಗದೆ ಹಬ್ಬ ಮಾಡುವಂತಿಲ್ಲ ಕಟ್ಟುನಿಟ್ಟಿನ ಕ್ರಮವಿರುವುದನ್ನು ಕ್ಷೇತ್ರಕಾರ‍್ಯ ಸಂದರ್ಭದಲ್ಲಿ ಕೇಳಿದ್ದೇನೆ, ನಂತರ ಆ ಊರಿನ ಗ್ರಾಮದೇವತೆ ವಾದ್ಯಸಮೇತ ಪುರೋಹಿತರು ಸೇರಿ ನಂತರ ಹರಿಜನ ಹೆಬ್ಬಾರೆಯವರು ಸೇರಿ ಮಾರಮ್ಮನ ಗುಡಿಯಲ್ಲಿ ಅಲ್ಲೇ ತಂಗುತ್ತಾರೆ. ಇಲ್ಲಿ ಹೆಬ್ಬಾರೆಯವರು ಎರಡು+ಒಂದು ಜನರು ಇರುತ್ತಾರೆ. ಹೆಬ್ಬಾರೆ ಹೊರುವವರು ಒಂದು ವಾರ ಉಪವಾಸವಿರಬೇಕು. ಹಾಗೆಯೇ ಎಂಟು ದಿವಸ ಅಲ್ಲಿಯೇ ತಂಗಿರಬೇಕು ಎಂಬುದು ಇವರ ಪದ್ಧತಿಯಾಗಿದೆ.

ಮುಂದಿನ ಬುಧವಾರ ಕೊಂಡ ಬಂಡಿ ಮನೆತನದವರು ಎಂದೇ ಪ್ರತ್ಯೇಕವಾಗಿರುವವರು ಕೊಂಡಬಂಡಿ ಕಟ್ಟುವರು. ಇಲ್ಲಿ ಕೊಂಡಬಂಡಿಯ ವಿವರಣೆಯನ್ನು ನೋಡಬಹುದು.

ಕೊಂಡ

ಗ್ರಾಮದೇವತೆ ಅಥವಾ ದೇವರ ಗುಡಿಯ ಮುಂದೆ ಹನ್ನೆರಡು ಮಾರು ಅಂದರೆ ಸುಮಾರು ೬೦ ಅಡಿ ಉದ್ದ, ೩ ಅಡಿ ಅಗಲ, ೩ ಅಡಿ ಆಳದ ಹೊಂಡವನ್ನು ತೋಡಿ ಅದರಲ್ಲಿ ಹತ್ತಾರು ಅಡಿ ಎತ್ತರಕ್ಕೆ ಸೌದೆಯನ್ನು ಹಾಕಿ ಸುಡುವರು. ಹೀಗೆ ಸುಟ್ಟು ಬಿದ್ದ ಕೆಂಡವನ್ನು ಹೊಂಡದ ಉದ್ದಗಲಕ್ಕೂ ಹಾಕಿ ಬೆಂಕಿ ಮೇಲಿನ ಬೂದಿಯನ್ನು ಗಾಳಿ ಹೊಡೆದು ಆರಿಸಿ ರಗರಗನೆ ಹೊಳೆಯುವ ಕೆಂಡದ ಮೇಲೆ ದೇವರ ಪೂಜೆ ಹೊತ್ತು ಇಲ್ಲವೇ ದೇವರ ಖಡ್ಗ ಹಿಡಿದು ಸಮತೂಕವಾಗಿ ಹೆಜ್ಜೆಯಿರಿಸುತ್ತಾ ಕೊಂಡವನ್ನು ಹಾಯಬೇಕು. ಅಂದರೆ ಕೊಂಡದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕು. ಇದನ್ನು ನೋಡಲು ಭಕ್ತಾದಿಗಳು ಬಹಳ ದೂರದ ಊರುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಾರೆ.

ಕೊಂಡವನ್ನು ಒಂದೊಂದು ಊರಿನಲ್ಲಿಯೂ ಅವರಿಗೆ ಅನುಕೂಲವಾದ ರೀತಿಯಲ್ಲಿ ಒಂದೊಂದು ಪ್ರಮಾಣದಲ್ಲಿ ತೆಗೆಯುತ್ತಾರೆ. ಈ ರೀತಿಯಾಗಿ ಆಯಾಮ ಹಳ್ಳಿಗಳಲ್ಲಿ ಗ್ರಾಮದೇವತೆಗಳ ಹಬ್ಬದ ಸಂದರ್ಭದಲ್ಲಿ ಆಯಾಯ ಗ್ರಾಮದೇವತೆ ಪೂಜಾರಿ ಕೊಂಡ ಹಾಯುವುದನ್ನು ನಾವು ಕಾಣಬಹುದಾಗಿದೆ.

ಬಂಡಿ

ಬಂಡಿ ಎಂದರೆ ಜನಪದರಲ್ಲಿ ಗಡಿ ಎಂದರ್ಥ, ಇದರಲ್ಲಿ ಒಟ್ಟು ಮೂರು ವಿಧಗಳಿವೆ. ಅರೆಕಾಲಿಲ್ಲದ ವೃತ್ತಾಕಾರದ ಕಬ್ಬಿಣದ ಅಚ್ಚು ಇರುವ ಮರದ ಚಕ್ರಗಳುಳ್ಳ ಗಿಡ್ಡನೆಯ ಗಾಡಿ, ಗೂಟಗೋಲಿನ ನಡುವೆ ಬೃಹದಾಕಾರದ ಕೋಡು ಮಕ್ಕರಿಯನ್ನಿಸಿರುತ್ತಾರೆ. ಕೋಡು ಮಕ್ಕರಿಯನ್ನು ಬಿದಿರು ಅಥವಾ ಈಚಲು ಕಡ್ಡಿಯಿಂದ ಎಣೆದಿರುತ್ತಾರೆ. ಇದು ಪ್ರಾಚೀನ ಕಾಲದ ಗಾಡಿ. ಎತ್ತರವಾದ ಮರದ ಚಕ್ರ ಗುಂಬದಿಂದ ಚಕ್ರದವರೆಗೆ ಅರೆಕಾಲಿರುತ್ತವೆ. ಚಕ್ರದ ಸುತ್ತ ಕಬ್ಬಿಣದ ಅಚ್ಚಿದೆ. ಈ ಗಾಡಿಗೆ ಗೂಟಗೋಲುಗಳಿದ್ದು ಸುಭದ್ರವಾಗಿ ಹಲಗೆಗಳನ್ನು ಹಾಕಿ ಕುಳಿತುಕೊಳ್ಳಲು ಅನುಕೂಲಕರವಾಗಿ ಒರಗಲು ತಡಿಕೆಗಳಿರುತ್ತವೆ. ಈ ತಡಿಕೆಗಳು ಬಿದಿರಿನ ಅಚ್ಚೆಗಳಾಗಿರುತ್ತವೆ. ಬಿದಿರಿನ ಅಚ್ಚೆ ತಡಿಕಿಗೆ ಬದಲಾಗಿ ಮರದ ಹಲಗೆಗಳನ್ನೇ ಹಾಕುವುದುಂಟು. ಇದು ಎರಡನೆ ವಿಧದ ಗಾಡಿ. ಆಧುನಿಕವಾದ ಟೈರುಗಾಡಿಗಳು ಮೂರನೆಯ ವಿಧದವು. ಇವುಗಳನ್ನು ವಿರಳವಾಗಿ ಇತ್ತೀಚೆಗೆ ಬಂಡಿ ಹಬ್ಬಗಳಲ್ಲಿ ಬಳಸುತ್ತಿದ್ದಾರೆ.

ಸುಣ್ಣ ಮತ್ತು ಕೆಮ್ಮಣ್ಣನ್ನು ಬಣ್ಣವಾಗಿ ಬಂಡಿಗಳ ಅಲಂಕಾರದಲ್ಲಿ ಬಳಸುತ್ತಾರೆ. ಬಂಡಿಗಳ ಗೂಟಗೋಲುಗಳಿಗೆ ಬಾಳೆಕಂದು, ಕಬ್ಬು, ಮಾವಿನ ಮತ್ತು ಬೇವಿನ ಸೊಪ್ಪನ್ನು ಕಟ್ಟಿ ಹೂ ಹಾಕಿ ಅಲಂಕರಿಸುತ್ತಾರೆ.

ಬಂಡಿಗಳಿಗೆ ಕಟ್ಟುವ ಎತ್ತುಗಳ ಕೊಂಬುಗಳನ್ನು ಸವರಿ ಬಣ್ಣ ಹಚ್ಚಿ ಗೌನು ಹಾಕಿ ಕೊರಳಿಗೆ ಹೂಮಾಲೆ ಹಾಕಿ ಕಾಲುಗಳಿಗೆ ಮುರಿ ಹಾಕಿ ಅಲಂಕರಿಸುತ್ತಾರೆ. ಅಲಂಕೃತವಾದ ಬಂಡಿಗಳನ್ನು ದೇವರ ಗುಡ್ಡಂದಿರು ಅಥವಾ ಯಜಮಾನರು ಇಲ್ಲವೇ ಊರಿನ ಪ್ರಮುಖರು ಏರುತ್ತಾರೆ. ಈ ಬಂಡಿಗಳ ಮೆರವಣಿಗೆಯು ತಮಟೆ ವಾದ್ಯ ಸಮೇತ ಊರಿನ ಬೀದಿಗಳಲ್ಲಿ ನಡೆಯುತ್ತದೆ. ಕೆಲವು ಊರುಗಳಲ್ಲಿ ಬಂಡಿಗಳನ್ನು ಯಾರೂ ಏರುವುದಿಲ್ಲ, ಅವುಗಳನ್ನು ರಸ್ತೆಯಲ್ಲಿ ಓಡಿಸುತ್ತಾರೆ. ಮುಂದೆ ಬರುವ ಬಂಡಿಯನ್ನು ಮುಂಬಂಡಿ ಎಂದೂ ಹಿಂದೆ ಬರುವ ಬಂಡಿಯನ್ನು ಹಿಂಬಂಡಿ ಎಂದೂ ಕರೆಯುತ್ತಾರೆ. ಇವುಗಳಲ್ಲಿ ಗೊತ್ತಾದ ದೇವರಗುಡ್ಡಂದಿರು ಏರುತ್ತಾರೆ. ಬಂಡಿ ಹಬ್ಬವನ್ನು ನೋಡಲು ಅಕ್ಕಪಕ್ಕದ ಊರುಗಳಿಂದ ಅನೇಕ ಭಕ್ತಾದಿಗಳು ಬಂದು ಸೇರುತ್ತಾರೆ.

ಕೊಂಡ ಬಂಡಿಗಳಲ್ಲಿ ಕಂಡು ಬರುವ ಕೆಲವು ಆಚರಣೆಗಳು

ಕೊಂಡ ಬಂಡಿ ನಡೆಯುವ ಕ್ಲುಪ್ತ ಕಾಲಕ್ಕೆ ಮೊದಲೇ ಕೆಲವು ಖಚಿತವಾದ ಆಚರಣೆಗಳು ನಡೆಯುತ್ತವೆ. ಒಂದು ವಾರದಿಂದ ಒಂದು ತಿಂಗಳಿವರೆಗೆ ಹಬ್ಬಗಳು ಈ ಜಿಲ್ಲೆಯಲ್ಲಿ ನಡೆಯುವುದನ್ನು ಕಾಣಬಹುದು.

ಕಂಬಿಕ್ಕುವುದು

ಕೊಂಡ ಬಂಡಿ ಇನ್ನೂ ಒಂದು ವಾರವಿರುವಾಗ ಕಂಬಿಕ್ಕುವ ಆಚರಣೆಯನ್ನು ಕಾಣುತ್ತೇವೆ. ಮೂರು ಕವಲೊಡೆದಿರುವ ಉದ್ದವಾಗಿರುವ ಹಾಲುಗಳ್ಳಿ ಕೋಲನ್ನೇ ಕಂಬ ಎನ್ನಬಹುದು. ಈ ಕಂಬವನ್ನು ಕಡಿದು ತಂದು ಶುಚಿಗೊಳಿಸಿ ಅರಿಶಿನ ಕುಂಕುಮವಿಟ್ಟು ಐಧಾನ್ಯದ ಬುತ್ತಿಕಟ್ಟಿ (ಐದು ರೀತಿಯ ಧಾನ್ಯ) ಕಂಬವನ್ನು ಊರಿನ ಹೊರಗಿರುವ ಅರಳಿಮರದ ಬುಡದಲ್ಲಿರಿ ಸಿರುತ್ತಾರೆ. ಹೀಗೆ ಇರಿಸುವವರು ಬೆಸ್ತ ಜನಾಂಗಕ್ಕೆ ಸೇರಿದವರಾಗಿರುತ್ತಾರೆ. ಈ ಕಂಬವನ್ನು ಗ್ರಾಮದೇವತೆಯ ಪೂಜಾರಿ ಪೂಜಿಸಿ ಹೆಗಲ ಮೇಲಿರಿಸಿಕೊಂಡು, ಮಂಗಳವಾದ್ಯಗಳೊಡನೆ ಊರಿನಲ್ಲಿ ಮೆರವಣಿಗೆ ಮಾಡಿ ತಂದು ದೇವಾಲಯದ ಮುಂದಿರುವ ಕಲ್ಲು ಕಂಬಕ್ಕೆ ಕಟ್ಟುತ್ತಾರೆ. ಇದನ್ನೇ ಕಂಬಿಕ್ಕುವುದು ಎನ್ನುತ್ತಾರೆ.

ಕಂಬಿಕ್ಕಿದ ಮೇಲೆ ಹಬ್ಬವಾಗುವವರೆಗೆ ಊರಿನಲ್ಲಿ ಕಂಟು ಹಾಕಬಾರದು. ಕಂಬಿಕ್ಕಿದ ದಿನ ಅಥವಾ ಕಂಬಿಕ್ಕಿದ ಮೇಲೆ ಊರಿಗೆ ಬಂದ ನೆಂಟರು ಹಬ್ಬವನ್ನು ಮುಗಿಸಿಕೊಂಡೇ ಹೋಗಬೇಕು. ಹಬ್ಬವನ್ನು ಮುಂದಿಟ್ಟುಕೊಂಡು ತಮ್ಮ ಊರಿಗೆ ಹೋದರೆ ಕೇಡಾಗುತ್ತದೆಂಬ ನಂಬಿಕೆ ಈ ಜನರಲ್ಲಿ ಇದೆ.

ಹೂ ಹೊಂಬಾಳೆ

ಗ್ರಾಮದೇವತೆ ಪೂಜೆ ಕಟ್ಟಿದ ಮೇಲೆ ಊರು ಸುತ್ತ ಮೆರವಣಿಗೆಯಾಗುವ ಮುನ್ನ ದೇವಾಲಯಕ್ಕೆ ಸಮೀಪ ಇರುವ ಕಟ್ಟೆ, ಕೊಳ ಅಥವಾ ನೀರಿನ ತಡಿಯಲ್ಲಿ ಅಥವಾ ದೇವಾಲಯಕ್ಕೆ ಸಮೀಪ ಇರುವ ಅರಳಿ, ನೇರಳೆ, ಬನ್ನಿ ಮರಗಳಡಿಯಲ್ಲಿ ಪೂಜೆ ಕಳಸಗಳಿಗೆ ತೆಂಗಿನ ಹೊಂಬಾಳೆಯನ್ನು ಕಟ್ಟಿ ಅಲಂಕರಿಸಿ ಪೂಜೆ ಮಾಡುವ ವಿಶಿಷ್ಟ ಆಚರಣೆಯಾಗಿದೆ. ಹೂ ಹೊಂಬಾಳೆಯಾದ ಮೇಲೆ ದೇವತೆಗಳ ಮೆರವಣಿಗೆ ಬಂದು ಪೂಜೆ ಹೊತ್ತ ಗುಡ್ಡಪ್ಪ ಕೊಂಡ ಹಾಯುತ್ತಾನೆ.

ಕೊಂಡಕ್ಕೆ ಹರಳು ಹಾಕುವುದು

 

ಮೈಮೇಲೆ ಹುಲ್ಲುಗುರಿದ್ದವರು ಅವು ಕಾಣೆಯಾದರೆ ಕೊಂಡಕ್ಕೆ ಹರಳು ಹಾಕುವುದಾಗಿ ಹರಕೆ ಮಾಡಿಕೊಳ್ಳುತ್ತಾರೆ. ಚರ್ಮವ್ಯಾದಿ ಗುಣವಾದರೆ ಕೊಂಡ ಹಾಯ್ದ ಮೇಲೆ ಕೊಂಡಕ್ಕೆ ಹರಳು ಹಾಕುತ್ತಾರೆ, ಜೊತೆಯಲ್ಲಿ ಸಾಂಬ್ರಾಣಿಯನ್ನು ಹಾಕುತ್ತಾರೆ, ದೇವರ ಕೊಂಡ ಹಾಯ್ದ ಮೇಲೆ ಹರಸಿಕೊಂಡವರು ಕೊಂಡದ ಬೂದಿಯ ಮೇಲೆ ಓಡುತ್ತಾರೆ.

ಕೊಂಡಕ್ಕೆ ಮಣ್ಣು

ಈ ರೀತಿ ಕೊಂಡ ಹಾಯುವುದನ್ನು ವೀಕ್ಷಿಸಿದವರೆಲ್ಲರೂ ಕೊಂಡಕ್ಕೆ ಒಂದೊಂದು ಹಿಡಿ ಮಣ್ಣು ಹಾಕುವುದು ರೂಢಿ. ಹಾಗೆ ಮಾಡಿದರೆ ಒಳ್ಳೆಯದಾಗುತ್ತದೆಂಬ ನಂಬಿಕೆ ಇದೆ. ಬಂಡಿ ಮತ್ತು ಕೊಂಡದ ನಡುವಿನ ರಾತ್ರಿ ಕುಣಿತವಿರುತ್ತದೆ. ಈ ಪೂಜಾ ಕುಣಿತ ವೈವಿಧ್ಯಮಯವಾಗಿರುತ್ತದೆ. ಪೂಜಾ ಕುಣಿತದಲ್ಲಿ ಐದು ಹೆಜ್ಜೆ ಕುಣಿತ, ಮೂರು ಹೆಜ್ಜೆ ಕುಣಿತ ಎಂದು ಎರಡು ಬಗೆ ಇದೆ. ಕುಣಿತದಲ್ಲಿ ಕಲಾ ನೈಪುಣ್ಯತೆ ಕಾಣುತ್ತದೆ. ಹಾಗೆಯೇ ತಲೆ ಹೆಗಲ ಮೇಲೆ ಪೂಜೆ ಹೊತ್ತು ಕುಣಿಯುವುದನ್ನು ಕಾಣಬಹುದು.

ಹಸಿಶೂಲ

ಹೀಗೆ ಕೊಂಡ ಬಂಡಿ ಮನೆತನದವರೇ ಆದ ಅರಕೆರೆ ಗ್ರಾಮದಲ್ಲಿರುವ ೧. ತಿರೇಗೌಡನ ಹಟ್ಟಿ, ೨. ಬಂಡಿ ಸಿದ್ದೇಗೌಡನ ಹಟ್ಟಿ, ೩. ಕುಳ್ಳೇಗೌಡನ ಪಿರಕ ಹಟ್ಟಿಯವರು, ೪. ಚುಂಚೇಗೌಡರ ಹಟ್ಟಿ ಮಾತ್ರ ಕೊಂಡ ಬಂಡಿ ಕಟ್ಟುವವರಾಗಿದ್ದಾರೆ. ಇಲ್ಲಿಯ ಮತ್ತೊಂದು ವಿಶೇಷತೆ ಎಂದರೆ ಕೊಂಡಕ್ಕೆ ಬೇಕಾದ ಸಿದ್ಧತೆಗಳನ್ನು ರೂಪಿಸುವವರೇ ಬೇರೆ. ಹಾಗೆಯೇ ಬಂಡಿ ಕಟ್ಟುವವರು ಬೇರೆ. ಅವರೆಂದರೆ ಮೇಗಲು ಪೇಟೆ, ಕೆಳಗಲ ಪೇಟೆ, ಇಲ್ಲಿಯ ಜನರು ಬಂಡಿಗಳನ್ನು ಕಟ್ಟಿ ದೇವಸ್ಥಾನದ ಮೈದಾನದಲ್ಲಿ ಗುರುವಾರ ಓಡಾಡಿಸುತ್ತಾರೆ. ಅದೇ ದಿವಸ ಸಂಜೆ ಕೊಂಡ ಹಚ್ಚಿ ಗ್ರಾಮದೇವರ ಮನೆಗೆ ಹೋಗುತ್ತಾರೆ.

ಶುಕ್ರವಾರ ಬೆಳಿಗ್ಗೆ ಅರಕೆರೆ ಸಮೀಪ ಹರಿಯುವ ಕಾವೇರಿ ನದಿ ತೀರದ ಬೋರೆದೇವರ ಗುಡಿಗೆ ಹೋಗುತ್ತಾರೆ. ಅಲ್ಲಿ ಪೂಜೆ ಮುಗಿಸಿ ವಾಪಸ್ಸು ಚಾವಡಿಯಲ್ಲಿ ದೇವರನ್ನು ಇಳಿಸುತ್ತಾರೆ. ನಂತರ ಕರಿಕಲ್ಲು ಅಥವಾ ಕರುಕಲ್ಲು ಪೂಜೆಗೆ ತೋರಣ ಕಟ್ಟಿ ಪೂಜೆ ಸಲ್ಲಿಸುತ್ತಾರೆ. ಕರುಕಲ್ಲು ಪೂಜೆಗೆ ಹರಿಜನರು ತಂಬಿಟ್ಟು ಆರತಿ ಮಾಡಿ ಮಡೆ ಸಮೇತ ಬಂದು ಬಿಸಿಲು ಮಾರಮ್ಮನ ದೇವಸ್ಥಾನದ ಪಟಲದಮ್ಮನ ದೇವಸ್ಥಾನದಲ್ಲಿ ಶಾಂತಿ ಕೊಡುತ್ತಾರೆ. ಈ ಹಬ್ಬ ೧೫ ದಿವಸ ನಡೆಯುತ್ತದೆ.

ಮತ್ತೆ ಮಂಗಳವಾರ ಕರುಕಲ್ಲಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಶೂಲ ಆಡಲು ಶೂಲದ ಬೋರೆಗೆ ಹೋಗುತ್ತಾರೆ. ಈ ಹಬ್ಬದ ಸಂದರ್ಭದಲ್ಲಿ ಗಾಡಿಗಟ್ಟಲೆ ಸೌದೆ ಬಂದು ಬೀಳುವುದು. ನಂತರ ಒಂದೇ ಕಡೆ ಗುಡ್ಡೆ ಮಾಡುವ ಕೆಲಸ ನಡೆಯುತ್ತದೆ. ಈ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಗಳು ಇರುತ್ತವೆ. ಸೌದೆ ಹಾಕಿ ಹಚ್ಚಿದ ನಂತರ ಉರಿ ಹಾಕುತ್ತಾರೆ. ಆ ಸಂದರ್ಭದಲ್ಲಿ ಬಿಸಿಲು ಮಾರಮ್ಮ ಓರೆ ಹಾಗುತ್ತಾಳೆಂಬ ನಂಬಿಕೆ ಇಂದಿಗೂ ಈ ಗ್ರಾಮದ ಜನರಲ್ಲಿ ಹಾಸುಹೊಕ್ಕಾಗಿದೆ.

ನಂತರ ಭಾನುವಾರ ಅಡಿಕೆ ಮರ ತರುವುದಕ್ಕೆ ಊರಿಗೆ ಹೋಗುತ್ತಾರೆ. ಆ ದಿನ ಊರಿನ ಒಂದೊಂದು ಮನೆಯಲ್ಲಿ ಒಬ್ಬ ಆಳು ಹೋಗಲೇಬೇಕೆಂಬ ಕಟ್ಟುನಿಟ್ಟಿನ ಕ್ರಮವಿದೆ. ಈ ಸಂದರ್ಭದಲ್ಲಿ ಯಾವುದೇ ತೋಟಕ್ಕೆ ಹೋದರೂ ಕೇಳುವಂತಿಲ್ಲ. ಅದರಲ್ಲಿ ಯಾವುದಾದರೂ ನಾಲ್ಕು ಮರ ಕಡಿಯಬೇಕು. ಇದರಲ್ಲಿ ಒಂದು ಮರ ಮಾತ್ರ ವಿಶೇಷವಾಗಿರಬೇಕು (೬೦ ಅಡಿ). ಈ ಮರವನ್ನು “ವಾರಿಲೇ ಮರ” ಎಂದು ಕರೆಯುತ್ತಾರೆ. ಈ ಮರವನ್ನು ಮಾತ್ರ ಊರಿನಲ್ಲಿ ಮೆರವಣಿಗೆ ಮಾಡಿ ಶೂಲ ಆಡುವ ಜಾಗಕ್ಕೆ ಕೊಂಡೊಯ್ಯುತ್ತಾರೆ.

ಸೋಮವಾರ ಶೂಲದ ಮರಕ್ಕೆ ಗುಂಡಿ ತೆಗೆಯುವ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಎಲ್ಲಾ ಜನಾಂಗದವರು ಭಾಗವಹಿಸುವುದನ್ನು ಕಾಣುತ್ತೇವೆ. ಈ ಮೂಲಕ ಏಕತೆಯನ್ನು ಇಲ್ಲಿ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಕೋಮಿನ ಜನರು ಸೇರಿ ಪರಸ್ಪರ ಹೊಂದಾಣಿಕೆಯಿಂದ ಶೂಲದ ಆಚರಣೆಗಳನ್ನು ಆಚರಿಸುತ್ತಾರೆ.

ಶೂಲದ ಮರಕ್ಕೆ ಗುಂಡಿ ತೆಗೆಯುವುದು ಪರಂಪರಾಗತವಾಗಿ ಬೆಳೆದು ಬಂದಿರುವ ಆಚರಣೆ. ಇದಕ್ಕೆ ಒಂದೇ ಕಡೆ ನಾಲ್ಕು ಗುಂಡಿ ತೆಗೆಯುತ್ತಾರೆ. ಇಲ್ಲಿ ವಿಶೇಚವಾಗಿ ಗುಂಡಿ ತೆಗೆಯುವವರು “ಮುಸಲ್ಮಾನರು”. ಮರವನ್ನು ನೆಡುವಾಗ ಗುಂಡಿಗೆ ಆರತಿ ಬೆಳಗಿ ಅರಶಿಣ ಕುಂಕುಮ ಎಲ್ಲಾ ಹಾಕುತ್ತಾರೆ. ಶೂಲ ಆಡುವವರು “ಗಂಗಮತಸ್ಥರು”. ಅವರು ಬಲಿ ಬೀಳುತ್ತಾರೆ. ನೆಟ್ಟ ಮರಗಳೆಲ್ಲಾ ಸರಿಯಾಗಿ ಇವೆಯೇ ಎಂಬುದನ್ನು “ಗಾಣಿಗರು”, “ವಿಶ್ವಕರ್ಮರು” ಪರೀಕ್ಷಿಸುತ್ತಾರೆ. ನಂತರ ಈ ಬಲಿ ಬೀಳುವವರಿಗೆ ಹೊಸಬಟ್ಟೆ ಹೊಲಿಸಬೇಕು. ಅಂದರೆ ಪಂಚೆ, ಅಂಗಿ ನಡುವಿಗೆ ಕಟ್ಟುವ ಕೇಸರಿ ಬಟ್ಟೆ, ಕೇಸರಿಪೇಟ ಒಂದು ಕೈಗೆ ಹಸಿರು ಚೌಕ ಕೊಡಬೇಕು.

ಶೂಲ ಆಡುವ ಸಂದರ್ಭದಲ್ಲಿ ಒಬ್ಬನ ಕೈಯಲ್ಲಿ ಹಸಿರು ಚೌಕ ಇನ್ನೊಬ್ಬನ ಕೈಯಲ್ಲಿ ಹಳದಿ ಚೌಕ ಇರಬೇಕು. ಶೂಲ ಆಡುವಾಗ ಮರದಿಂದ ಮರಕ್ಕೆ ಬದಲಾಯಿಸುತ್ತಿದ್ದಂತೆ ಚೌಕವನ್ನು ಬದಲಾಯಿಸಬೇಕು. ಶೂಲ ಆಡುವಾಗ ಬಿದ್ದರೆ ಬದುಕುವುದಿಲ್ಲ ಎಂಬ ನಂಬಿಕೆ ಅಲ್ಲಿಯ ಜನರಲ್ಲಿದೆ. ಅಡಿಕೆ ಮರ ಮುರಿದು ಹೋದರೆ ವಿಶೇಷವಾಗಿ ಯಾವುದೇ ತೊಂದರೆಯಿಲ್ಲ. ಶೂಲ ಆಡುವವರು ಉಪವಾಸ ಇರಬೇಕು. ಮಾಂಸ ಮಡ್ಡಿ ಮುಟ್ಟುವಂತಿಲ್ಲ ಈ ಸಂದರ್ಭದಲ್ಲಿ ಇದೊಂದು ನಿಷೇಧವಾಗಿದೆ, ಕರಿಕಲ್ಲು ಕಟ್ಟಿದ ನಂತರ ಊರಿನಲ್ಲಿ ಮೆಣಸಿನಕಾಯಿ ಸುಡುವಂತಿಲ್ಲ. ಶೂಲ ಆಡಿದ ನಂತರ ಶೂಲ ಆಡಿದವರ ಮೈಮೇಲೆ ಇರುವೆ ಓಡಾಡುತ್ತವೆ. ಮಂಗಳವಾರ ತಂಪೆರೆಯುತ್ತಾರೆ. ಶೂಲದವರು ಕೆಳಗೆ ಇಳಿದ ನಂತರ ಪ್ರಜ್ಞೆ ತಪ್ಪುತ್ತಾರೆ. ಆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಸರಿಪಡಿಸುತ್ತಾರೆ. ಶೂಲ ಕೊನೆಯವರೆಗೂ ಎಳೆನೀರಿನಲ್ಲಿ ಹೋಗಿ ಸರಿಪಡಿಸುತ್ತಾರೆ. ಶೂಲ ಆಡಿದಾಗಿನಿಂದ ಕೊನೆಯವರೆಗೂ ಎಳೆನೀರಿನಲ್ಲಿ ದೀಪ ಉರಿಸುತ್ತಾರೆ. ಈ ಶೂಲ ಆಡುವ ನಾಲ್ಕು ಜನರಿಗೆ ವಿಶೇಷವಾದ ಚೊಕ್ಕ ಭೋಜನ ಇರುತ್ತದೆ. ಇವರಿಗೆ ಆ ಊರಿನ ದೇಸಿಶೆಟ್ಟರ ಮನೆಯಲ್ಲಿ ಊಟದ ವ್ಯವಸ್ಥೆ ಇರುತ್ತದೆ. ಶೂಲ ಆಡಿದ ನಂತರ ಇಳಿದ ಮೇಲೆ ಯುವಕರು ಮನರಂಜನೆಗಾಗಿ ಶೂಲ ಆಡುತ್ತಾರೆ.

ಬುಧವಾರ ಹತ್ತು ಗಂಟೆಗೆ ಹತ್ತಿರದ ಗೊಬ್ಬರ ಗಾಲ ಗ್ರಾಮದಿಂದ ಹಸಿಟ್ನ ಹೆಡಿಗೆ ಬರುತ್ತದೆ. ನಂತರ ಮಾರನೇ ದಿವಸ ಗುರುವಾರ ಕಾವೇರಿ ಬೋರೆದೇವರಿಗೆ ೧೨ ದೇವರ ಕೂಟ ಸೇರಬೇಕು ಎಂಬ ಪದ್ಧತಿ ಇದೆ. ಏಳು ಊರುಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಅವುಗಳೆಂದರೆ ೧. ಲಾಳದಕೆರೆ, ೨. ಚೆನ್ನನಕೆರೆ, ೩. ಹುಂಜನಕೆರೆ, ೪. ಹಾಲಗೂಡು, ೫. ಮಿಕ್ಕರೆ, ೬. ಬಳ್ಳಕೆರೆ, ೭. ಅರಕೆರೆ, ಈ ರೀತಿ ಏಳು ಗ್ರಾಮಗಳು ಒಳಗೊಂಡಿದ್ದು ಏಳು ದೇವತೆಗಳು ಆ ದಿನ ಒಂದೆಡೆ ಸೇರಲೇಬೇಕು. ಹೀಗೇ ಒಂದೇ ಕಡೆ ಎಲ್ಲಾ ದೈವಗಳು ಸೇರಿ ಸಂಜೆಯವರೆಗೂ ಇದ್ದು ಕೂಟ ಆದ ನಂತರ ಅವರವರ ಊರಿಗೆ ಹೋಗುತ್ತಾರೆ.

ನಂತರ ಗುರುವಾರ ಸಂಜೆ ಗಂಗಮತಸ್ಥರು ಕಾಯಿಪೂಜೆ ಮಾಡುತ್ತಾರೆ. ನಂತರ ಶುಕ್ರವಾರ ತೇರು, ಶನಿವಾರ ಮತ್ತು ಆ ದಿನ ಕೆರೆಯಲ್ಲಿ ಅಂದು ರಾತ್ರಿ ಉಯ್ಯಾಲೆ ಉತ್ಸವ ಮಾಡುತ್ತಾರೆ.

ಮಂಗಳವಾರ ದೇವರನ್ನು ವಾಪಸ್ಸು ಚಾವಡಿಯಿಂದ ತರುತ್ತಾರೆ. ನಂತರ ಒಂದು ವಾರವಾದ ಮೇಲೆ ತಂಪು ಎರೆಯುತ್ತಾರೆ. ತಂಪೆರೆಯುವಾಗ ಮುಂದೆ ಯುಗಾದಿ ಹಬ್ಬದೊತ್ತಿಗೆ ಯುಗಾದಿ ಎರಡು ದಿವಸ ಇರುತ್ತದೆ. ಶಿವರಾತ್ರಿ ಅಮವಾಸ್ಯೆ, ಯುಗಾದಿ ಅಮವಾಸ್ಯೆಯವರೆಗೆ ಒಂದು ತಿಂಗಳುಗಳ ಕಾಲ ಹಬ್ಬ ಆಚರಿಸುತ್ತಾರೆ. ಹಬ್ಬ ಮುಗಿದ ಮೇಲೆ ಗಾಣಿಗರು ಒಬ್ಬೊಬ್ಬರಿಗೆ ವೇಷಕಟ್ಟಿ ದಿಮ್ಮಿಸಾಲೆ ವಿಚಿತ್ರ ವೇಷ ಹಾಕಿ ಕುಣಿಯುತ್ತಾರೆ.

ಹೀಗೆ ಅರಕೆರೆ ಗ್ರಾಮದಲ್ಲಿ ಒಟ್ಟಾರೆಯಾಗಿ ಹಬ್ಬ-ಜಾತ್ರೆಗಳು ಸೇರಿಕೊಂಡಂತೆ, ಎಲ್ಲಾ ಕೋಮಿನ ಜನಾಂಗದವರು ಸೇರಿ ತಮ್ಮ ನಿರ್ದಿಷ್ಟ ಕೆಲಸವನ್ನು ನಿರ್ವಹಿಸುವುದನ್ನು ಕಾಣುತ್ತೇವೆ.

ಹಸಿಶೂಲ ಬಲಿಹಬ್ಬ

ಶ್ರೀರಂಗ ಪಟ್ಟಣ ತಾಲ್ಲೂಕಿನಲ್ಲಿರುವ ಅರಕೆರೆ ಎಂಬ ಗ್ರಾಮದಲ್ಲಿ ಈ ರೀತಿಯ ಬಲಿಹಬ್ಬವನ್ನು ಮಾತ್ರ ಕಾಣಬಹುದಾಗಿದೆ. ಇಲ್ಲಿ ಮುಖ್ಯವಾಗಿ ಶೂಲ ಆಡುವವರು ಬಹಳ ಕಟ್ಟುನಿಟ್ಟಿನ ಕ್ರಮ ವಹಿಸಿ ಶಿಸ್ತಿನಿಂದ ಇರಬೇಕಾಗುತ್ತದೆ. ಶೂಲ ಆಡುವವರು ಬೆಳಿಗ್ಗೆಯಿಂದ ಸಂಜೆಯವರೆಗೂ ಉಪವಾಸದಿಂದಿರುವರು. ನಾಲ್ಕು ಮಂದಿ ಬೆಸ್ತರು ಒಂದೇ ತೆರನಾದ ಬಟ್ಟೆ ಧರಿಸಿರುವರು. ಸಾಮಾನ್ಯವಾಗಿ ನೀಲಿ ಶರಟು, ಹಸಿರು ಚಡ್ಡಿ ಹಾಕಿರುವರು. ಹಸಿರು ನಿಕ್ಕರಿನ ಮೇಲೆ ಬಿಳಿ ಕಚ್ಚೆ ಕಟ್ಟಿರುವರು. ಹಸಿಶೂಲದ ರಾತ್ರಿ ಹೊತ್ತು ನಾಲ್ಕು ಮಂದಿಗೂ ಕತ್ತಿಗೆ ಹೂವಿನ ಹಾರ ಹಾಕಿರುವರು. ಇವರನ್ನು ಸಹ ಊರಿನಲ್ಲಿ ಮೆರವಣಿಗೆ ಮಾಡಿಸುವರು. ದೇವಸ್ಥಾನದ ಮುಂಭಾಗಕ್ಕೆ ಬಂದ ನಂತರ ನಾ ಮುಂದು ತಾ ಮುಂದು ಎಂದು ದಡದಡನೆ ಅಡಿಕೆ ಮರವನ್ನೇರುವರು. ಈ ಅಡಿಕೆ ಮರವು ಸುಮಾರು ಮೂವತ್ತರಿಂದ ನಲವತ್ತು ಅಡಿ ಎತ್ತರವಿರುವುದು. ನಂತರ ಮೇಲ್ಭಾಗದಲ್ಲಿ ಮರದ ಹಲಗೆಯನ್ನು ಕಟ್ಟಿರುವರು. ಹೀಗೆ ಹಸಿಶೂಲ ಬಲಿ ಹಬ್ಬದ ಸಂದರ್ಭದಲ್ಲಿ ಈ ತರಹ ಆಚರಣೆಯ ಕ್ರಮವನ್ನು ನಾವು ಕಾಣುತ್ತೇವೆ.

ಹಸಿಶೂಲ ಹಬ್ಬವನ್ನು ಆಚರಿಸುವವರು. ಅಡಿಕೆ ಮರದ ತುಟ್ಟ ತುದಿಗೇರಿ ಹಲಗೆಯ ಮೇಲೆ ಕಾಲನ್ನು ಇಟ್ಟು ಉಯ್ಯಾಲೆಯಂತೆ ಆಡುತ್ತಾರೆ. ನೆಟ್ಟಿರುವ ಅಡಿಕೆ ಮರವು ಸುತ್ತಮುತ್ತ ಬಾಗುವುದು. ಈ ಶೂಲವನ್ನು ನೋಡಲು ಅರಕೆರೆ ಸುತ್ತಮುತ್ತಲ ಗ್ರಾಮದವರೆಲ್ಲಾ ಸೇರುತ್ತಾರೆ. ನಿಜಕ್ಕೂ ಬಿಸಿಲು ಮಾರಮ್ಮನ ಶಕ್ತಿ ಶೂಲ ನೋಡುವವರಿಗೆ ಗೋಚರವಾಗುವುದು. ಶೂಲ ಆಡುವವರು ನಾಲ್ಕು ಮಂದಿ ಮಾತ್ರ. ಒಬ್ಬರ ಕತ್ತಿನಿಂದ ಮತ್ತೊಬ್ಬರ ಕತ್ತಿಗೆ ಹೂವಿನ ಹಾರವನ್ನು ಬದಲಾಯಿಸಿಕೊಳ್ಳುತ್ತಾ ಜೀವದ ಹಂಗನ್ನು ತೊರೆದು ಸಣ್ಣದಾದ ಅಡಿಕೆಮರದ ಮೇಲೇರಿ ಉಯ್ಯಾಲೆ ಆಡುವುದೆಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಮೂರು ಗಂಟೆಯ ಕಾಲ ಆಟ ಆಡುವರು. ಆ ನಂತರ ಅಡಿಕೆ ಮರದಿಂದ ಕೆಳಕ್ಕಿಳಿಯುವರು. ನಾಲ್ಕು ಜನರಿಗೆ ಜ್ಞಾನವೇ ಇರುವುದಿಲ್ಲ. ಅವರಿಗೆಲ್ಲಾ ಮಾರಮ್ಮ ಮೈದುಂಬಿದ್ದಾಳೆ ಎನ್ನುತ್ತಾರೆ. ಅಲ್ಲಿ ಸೇರಿರುವ ಜನಸ್ತೋಮ, ಶೂಲ ಹತ್ತಿದ ನಾಲ್ಕು ಜನರಿಗೆ ಮೈ ಕೈ ಮುಖಕ್ಕೆಲ್ಲಾ ಮಾರಮ್ಮನ ಇರುವೆಗಳು (ಕಪ್ಪು ಇರುವೆ) ಮುತ್ತಿರುತ್ತವೆ. ಅವರನ್ನು ಬಿಸಿಲು ಮಾರಮ್ಮನ ದೇವಸ್ಥಾನದ ಮುಂದೆ ಮಲಗಿಸುವರು. ಬಿಸಿಲು ಮಾರಮ್ಮನಿಗೆ ಪೂಜೆ ಮಾಡಿ ತೀರ್ಥ ಹಾಕಿದ ನಂತರ ಇರುವೆಗಳೆಲ್ಲಾ ಮಾಯವಾಗುವುವು. ನಾಲ್ಕು ಮಂದಿಗೂ ಜ್ಞಾನ ಬರುವುದು. ಹೀಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ನಡೆಯುವ ಹಸಿಶೂಲವು ಮತ್ತೆಲ್ಲಿಯೂ ನಡೆದಿಲ್ಲದಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಮಹದೇವಮ್ಮನ ಹಸಿಟ್ನ ಹೆಡಿಗೆ ಹಬ್ಬ

ಮಂಡ್ಯ ಜಿಲ್ಲೆ ಶ್ರಿರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದ ಮಹದೇವಮ್ಮನಿಗೆ ಹಸಿಟ್ನ ಹೆಡಿಗೆ ಹಬ್ಬವನ್ನು ನಿಗದಿತ ತಾರೀಖಿನಂದು ಆಚರಿಸುವರು. ಅರಕೆರೆಯ ಸುತ್ತಮುತ್ತಲ ಊರಿನವರು ಈ ಹಬ್ಬದಂದು ಅವರವರ ಊರಿನ ದೇವರನ್ನು ತರುವರು. ಹುಂಜನಕೆರೆ, ಬಳ್ಳೆಕೆರೆ, ಮುತ್ತರಾಯ, ಗೊಬ್ಬರದ ಗಾಲ, ಅರಕೆರೆ ಈ ಎಲ್ಲಾ ಊರಿನವರು ದೇವರನ್ನು ಮೆರವಣಿಗೆ ಮಾಡಿಸುವರು. ಆ ದೇವರ ಹಿಂದೆ ಹಸಿಟ್ನ ಹೆಡಿಗೆಯವರು ಹೋಗುವರು. ಒಂದು ಕಾಗದದ ಹೆಡಿಗೆಯಲ್ಲಿ ಅಕ್ಕಿಹಿಟ್ಟನ್ನು ತುಂಬಿಕೊಂಡು ಅದರ ಮೇಲೆ ಅಡಿಕೆ ಹೊಂಬಾಳೆ ಸಿಕ್ಕಿಸಿರುವರು. ಕಾಗದದ ಕುಕ್ಕೆಗೆ ಬಣ್ಣದ ರಂಗೋಲೆ ಬಿಟ್ಟಿರುವರು. ಸುಮಾರು ನಲವತ್ತು-ಐವತ್ತು ಮಂದಿ ಹಸಿಟ್ನ ಹೆಡಿಗೆ ಹೊತ್ತುಕೊಂಡು ದಾರಿಯುದ್ದಕ್ಕೂ ಕುಣಿಯುವರು. ಹಸಿಟ್ನ ಹೆಡಿಗೆ ಹೊರುವವರು ಗಂಡಸರು. ಈ ಹಬ್ಬ ನೋಡುವುದಕ್ಕೆ ತುಂಬಾ ಚೆಂದ, ಹಾಗೆಯೇ ಕಣ್ಣಿಗೆ ಆನಂದ. ಹಸಿರು-ಹಸಿರಾಗಿ ಹೊಂಬಾಳೆ ಕಾಣುವುದು. ಜೊತೆ ಜೊತೆಗೆ ಎಲ್ಲರೂ ಕೈಕಾಲು ಕುಣಿಸುತ್ತಾ ರಸ್ತೆಗಳಲ್ಲಿ ಕುಣಿದು ದೇವಸ್ಥಾನವನ್ನು ಸೇರುವರು. ಈ ಹಬ್ಬದ ಮಾರನೆಯ ದಿವಸ ಮಾರಮ್ಮನ ತೇರುಹಬ್ಬ. ಈ ಹಬ್ಬಕ್ಕೆ ಸುತ್ತಮುತ್ತಲ ಊರುಗಳಿಂದ ಚಂದೇಗೌಡನ ಕೊಪ್ಪಲು, ಬಳ್ಳೆಕೆರೆ, ಚಿಕ್ಕಾರುಳ್ಳಿ ಇನ್ನು ಮುಂತಾದ ಎಲ್ಲಾ ಊರಿನವರು ಹಸಿಟ್ನ ಹೆಡಿಗೆ ಹೊತ್ತುಕೊಂಡು ಕುಣಿಯುವರು.

ಮಾರಮ್ಮನ ದೇವರ ತೇರು

ಅರಕೆರೆ ಗ್ರಾಮ ಶ್ರೀರಂಗಪಟ್ಟಣ ತಾಲ್ಲೋಕಿನಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಈ ಗ್ರಾಮದಲ್ಲಿ ಅರಕೆರೆಯ ಬಿಸಿಲು ಮಾರಮ್ಮ ಹಬ್ಬ ಇಪ್ಪತ್ತು ದಿನಗಳವರೆಗೆ ನಡೆಯುತ್ತದೆ. ಇದರಲ್ಲಿ ಒಂದು ದಿನ ಗೊತ್ತಾದ ತಾರೀಖಿನಂದು ಮಾರಮ್ಮ ದೇವರ ತೇರು ನಡೆಯುತ್ತದೆ. ಹಗಲಿನಲ್ಲಿ ಈ ರಥೋತ್ಸವ ನಡೆಯುತ್ತದೆ. ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ತೇರನ್ನು ಆ ಊರಿನಲ್ಲೆಲ್ಲಾ ಮೆರವಣಿಗೆ ಮಾಡಿಸುವರು. ಅದಕ್ಕಾಗಿ ಆ ತೇರಿಗೆ ಬಣ್ಣ ಬಣ್ಣದ ಬಟ್ಟೆಗಳಿಂದ ಹೂವುಗಳಿಂದ ಅಲಂಕರಿಸುವರು. ಹಾಗೆಯೇ ಉತ್ಸವ ಮೂರ್ತಿಯನ್ನು ತೇರಿನಲ್ಲಿ ಕೂಡಿಸಿಕೊಂಡು ಊರಿನ ಪ್ರಮುಖ ಬೀದಿಗಳಲ್ಲಿ ಮೆರೆವಣಿಗೆ ಮಾಡುವರು. ಆ ಸಂದರ್ಭದಲ್ಲಿ ಮಧ್ಯೆ ಮಧ್ಯೆ ಮನೆಯವರು ಆರತಿ ಪೂಜೆ ಮಾಡಿಸುತ್ತಾರೆ. ತೇರನ್ನು ಎಳೆಯುವಾಗ ನಗಾರಿ ಬಾರಿಸುವರು. ಪಟಾಕಿ ಬಾಣ ಬಿರುಸುಗಳನ್ನು ರಸ್ತೆಯಲ್ಲಿ ಆರಿಸುತ್ತಾರೆ.

ತೇರಿನ ಅನಂತರ ದೇವಿಯ ಉಯ್ಯಾಲೆ ಪ್ರಾರಂಭವಾಗುತ್ತದೆ. ಅಂದಿನ ರಾತ್ರಿ ತೆಪ್ಪೋತ್ಸವ ನಡೆಯುತ್ತದೆ. ಕೆರೆಯ ನಡುವೆ ತೇರು ನಿಲ್ಲಿಸಿ ತೊಳೆಯುವರು. ಉತ್ಸವ ಮೂರ್ತಿಯನ್ನು ತೊಳೆಯುವರು. ಶುಚಿ ಮಾಡಿದ ಉತ್ಸವ ಮೂರ್ತಿಗೆ ಅಭಿಷೇಕ ಮಾಡಿ ನೈವೇದ್ಯ ಸಲ್ಲಿಸಿ ಭಕ್ತಾದಿಗಳಿಗೆ ಪ್ರಸಾದ ಹಂಚುವರು. ಹೀಗೆ ಮಾರಮ್ಮ ತೇರನ್ನು ಆ ಊರಿನ ಜನಸಮೂಹ ಅತ್ಯಂತ ವಿಭೃಂಭಣೆಯಿಂದ ಎಳೆಯುವರು.

ಬಿಸಿಲು ಮಾರಮ್ಮನ ಉಯ್ಯಾಲೆ ಮತ್ತು ತೆಪ್ಪೋತ್ಸವ

ಬಿಸಿಲು ಮಾರಮ್ಮನ ತೇರು ಎಳೆದ ನಂತರ ದೇವರನ್ನು ಉಯ್ಯಾಲೆ ಆಡಿಸುವರು. ಊರಿನ ಜನರೆಲ್ಲಾ ಒಂದೆಡೆ ಸೇರುವರು. ಅದೇ ದಿವಸ ರಾತ್ರಿ ತೆಪ್ಪೋತ್ಸವ ಇರುವುದು. ತೇರನ್ನು ಕೆರೆಯ ಹತ್ತಿ ತೆಗೆದುಕೊಂಡು ಹೋಗುವರು. ಕೆರೆಯ ಮಧ್ಯದಲ್ಲಿ ತೇರನ್ನು ನಿಲ್ಲಿಸಿಕೊಂಡು ಚೆನ್ನಾಗಿ ಉಜ್ಜಿ ತೊಳೆಯುವರು. ದೇವರ ವಿಗ್ರಹವನ್ನು ತೊಳೆದು ಅಭಿಷೇಕ ಮಾಡಿ ಅಲಂಕಾರ ಮಾಡುವರು. ಆಗ ದೇವರಿಗೆ ನೈವೇದ್ಯ ಮಾಡಿ ಪ್ರಸಾದವನ್ನು ಎಲ್ಲರಿಗೂ ವಿತರಣೆ ಮಾಡುವರು. ನಂತರ ಮಹದೇವಮ್ಮ ದೇವಿಯ ಕೊಂಡ ಬಂಡಿಹಬ್ಬ ಪ್ರಾರಂಭವಾಗುತ್ತದೆ.

ಮಹದೇವಮ್ಮನ ಕೊಂಡ ಬಂಡಿಹಬ್ಬ

ಇಲ್ಲಿ ಮಹದೇವಮ್ಮ ಹಸಿಟ್ನ ಹೆಡಿಗೆ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಭಯ ಭಕ್ತಿಯಿಂದ ಆಚರಿಸುವರು. ಇಲ್ಲಿ ಮುಖ್ಯವಾಗಿ ಮಹದೇವಮ್ಮನನ್ನು ಪೂಜಿಸುವ ಅರ್ಚಕನು ಕೊಂಡ ಐದು ದಿವಸ ಬಾಕಿ ಇರುವಾಗಲೇ ಉಪವಾಸದಿಂದಿರುವನು. ಆ ದಿವಸ ಎಳನೀರನ್ನು ಮಾತ್ರ ಉಪಯೋಗಿಸುವನು. ಕೊಂಡಕ್ಕೆಂದು ನಿಗದಿತ ಜಾಗವಿದೆ. ಆ ಜಾಗದಲ್ಲಿ ಸೀಳುಸೌದೆ, ಕೊಂಟುಗಳಿಂದ ರವ ರವ ಎಂಬ ಕೆಂಡ ತಯಾರಿಸುವರು. ಹಾಗೆಯೇ ದೇವರಿಗೆ ಹರಿಸಿಕೊಂಡಿರುವವರು ಕೂಡ ಹಾಯುವರು. ಕೊಂಡದಲ್ಲಿ ಬೂದಿ ಹಾಗೂ ಧೂಳು ಇರಬಾರದೆಂದು ಮೊರದಿಂದ ಬೀಸುತ್ತಿರುವರು. ಕೊಂಡ ಹಾಯ್ದು ನಂತರ ಬಂಡಿ ಓಡಿಸುವರು. ತಿರೇಗೌಡನ ಹಟ್ಟಿಯಿಂದ ಒಂದು ಬಂಡಿ, ಬಂಡಿಸಿದ್ದೇಗೌಡರ ಕುಟುಂಬದರಿಂದ ಒಂದು ಬಂಡಿ ಕುಳ್ಳೇಗೌಡರ ಕುಟುಂಬದವರಿಂದ ಒಂದು ಬಂಡಿ ಹಾಗೂ ಚುಂಚೇಗೌಡರವರಿಂದ ಒಂದು ಬಂಡಿ ಹೀಗೆ ಒಟ್ಟು ನಾಲ್ಕು ಬಂಡಿಗಳು. ಇಲ್ಲಿ ಈ ಬಂಡಿಗಳನ್ನು ಇದಕ್ಕಾಗಿಯೇ ಮಾಡಿಸಿರುವರೆಂಬುದು ಕ್ಷೇತ್ರಕಾರ‍್ಯದಿಂದ ತಿಳಿಯಿತು. ಈ ಬಂಡಿಗಳನ್ನು ಎತ್ತುಗಳಿಗೆ ಕಟ್ಟಿಕೊಂಡು ಅವರದೇ ಆದ ಜಾಗದಲ್ಲಿ ಓಡಿಸುವರು. ಬಂಡಿ ಓಡಿಸುವಾಗ ಮಧ್ಯೆ ಯಾರೂ ಸುಳಿಯಬಾರದೆಂಬ ನಿಷೇಧ ಪದ್ಧತಿ ಇರುವುದನ್ನು ಕಾಣುತ್ತೇವೆ. ಕಾರಣ ಆ ಬಂಡಿಯು ಹಿಡಿತಕ್ಕೆ ಸಿಕ್ಕುವುದು ಕಷ್ಟ. ಯಾರ ಮೇಲಾದರೂ ಹರಿದು ಬಿಡುವ ಸಾಧ್ಯತೆ ಇರುವುದು. ಇಲ್ಲಿ ಬಂಡಿಯನ್ನು ಬಣ್ಣ ಬಣ್ಣದ ಬಟ್ಟೆಗಳಿಂದ ಅಲಂಕಾರಗೊಳಿಸುವುದನ್ನು ಕಾಣುತ್ತೇವೆ. ಇಲ್ಲಿ ಬಳಸುವ ಬಂಡಿಗಳು ಕಲ್ಲಿನ ಬಂಡಿಗಳಾಗಿರುವುವು. ಇಂತಿಂಥ ಕುಟುಂಬದವರೇ ಬಂಡಿ ಓಡಿಸಬೇಕೆಂದು ನಿರ್ಧಾರವಾಗುವುದರಿಂದ ಮುಂಚಿತವಾಗಿ ಬಂದು ಬಂಡಿ ಓಡಿಸಲು ಕಾಯುವರು.

ಹೀಗೆ ಕೊಂಡ ಬಂಡಿ ಹಬ್ಬದ ಸಂದರ್ಭದಲ್ಲಿ ಕೊಂಡ ಬಂಡಿ ಮನೆತನದವರು ಎಂದೇ ಪ್ರಸಿದ್ಧಿಯನ್ನು ಪಡೆದಿರುವಂತಹ ಆ ಊರಿನ ಕೊಂಡ ಬಂಡಿ ಕುಟುಂಬದವರು ಮಾತ್ರ ವಿಶೇಷವಾಗಿ ಮಹತ್ವವನ್ನು ಪಡೆದುಕೊಳ್ಳುವರು. ನಂತರ ದಿಮ್ಮಸಾಲೆಯ ಆಚರಣೆಯನ್ನು ನೋಡುತ್ತೇವೆ.

ದಿಮ್ಮಸಾಲೆ

ಅರಕೆರೆಯ ಬಿಸಿಲು ಮಾರಮ್ಮನ ಹಬ್ಬದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ಈ ದಿಮ್ಮಸಾಲೆ ವಹಿಸುತ್ತಾನೆ. ದಿಮ್ಮಸಾಲೆ ಬೆಸ್ತರವನು. ಇಲ್ಲಿ ದಿಮ್ಮಸಾಲೆ ಮನರಂಜಿಸುವವರಾಗಿದ್ದಾರೆ. ಅಂದರೆ ನಾಟಕಗಳ ಸಂದರ್ಭದಲ್ಲಿ ಪ್ರೇಕ್ಷಕರನ್ನು ಸಂತೋಷಪಡಿಸಿ ಅವರಿಗೆ ಆಸಕ್ತಿ ಮೂಡಿಸುವ ರೀತಿ ಈ ಪಾತ್ರದಾರಿ ನಟಿಸುವನು. ಈ ಹಬ್ಬದಲ್ಲಿ ದಿಮ್ಮಸಾಲೆ ಹಲವು ಸಂಗತಿಗಳಿಗೆ ಸಾಂಕೇತಿಕವಾಗಿದ್ದರೆ.

ದಿಮ್ಮಸಾಲೆ ಮಾರಮ್ಮನ ಗಂಡ ಮತ್ತು ಈತನ ಕಡೆಯವರು ಮಾಲೆಮರದ ತಳದಲ್ಲಿ ಬಳಿ ಬೀಳುತ್ತಾರೆ. ದಿಮ್ಮಸಾಲೆ ಮತ್ತು ಬಲಿ ಬೀಳುವವರು ಬೆಸ್ತ ಜನಾಂಗದವರು. ಇಲ್ಲಿ ಬಲಿ ಬೀಳುವ ಬೆಸ್ತರು ವೀರಭದ್ರನ ಮುಖವಾಡವನ್ನು ಸೊಂಟಕ್ಕೆ ಕಟ್ಟಿಕೊಂಡಿರುತ್ತಾರೆ.

ದಿಮ್ಮಸಾಲೆ ವಹಿಸುವವರು ಈತ ಮಂಡಿಯವರೆಗೆ ಕಚ್ಚೆ ಹಾಕುತ್ತಾನೆ. ಕೊರಳಿಗೆ ಹಸಿ ಅಡಿಕೆ ಕಾಯಿಯ ಸರ ಹಾಕುತ್ತಾನೆ. ತಲೆಗೆ ಒಂದು ಕೋಡಂಗಿ ಟೋಪಿ ಧರಿಸುತ್ತಾನೆ. ಈ ಕೋಡಂಗಿ ಟೋಪಿಗೆ ಅಡಿಕೆ ಸರದ ಅಲಂಕಾರವಿರುತ್ತದೆ. ಕೈಯಲ್ಲಿ ಎದೆ ಮಟ್ಟದ ದೊಣ್ಣೆ ಹಿಡಿದಿರುತ್ತಾನೆ. ಈ ದೊಣ್ಣೆಗೆ ಗೆಜ್ಜೆ ಸರವಿರುತ್ತದೆ. ಈತನ ಕರ್ತವ್ಯ ಬಹು ಮುಖ್ಯವಾಗಿ ಹಬ್ಬ ಆರಂಭದ ಹಿಂದಿನ ದಿನ ರಾತ್ರಿ ರಕ್ತಕೂಳನ್ನು ಊರಿನ ಬೀದಿಗಳಲ್ಲಿ ಹಾಕುತ್ತಾನೆ. ರಕ್ತದೂಳು ಹಾಕಿದ ಮೇಲೆ ಊರಿನಲ್ಲಿ ಮಾಂಸ ನಿಷಿದ್ಧವಾಗಿರುತ್ತದೆ. ಅರಕೆರೆ ಸುತ್ತಮುತ್ತಲಿನ ಇಪ್ಪತ್ತನಾಲ್ಕು ಹಳ್ಳಿಗಳಿಂದ ಕಾಣಿಕೆ ಪಡೆಯುವ ಹಕ್ಕು ಈ ದಿಮ್ಮಸಾಲೆಗೆ ಇದೆ. ಈತ ಮಾರಮ್ಮನ ಗಂಡ ಎಂಬ ನಂಬಿಕೆ-ಭಕ್ತರಿಗಿರುವುದರಿಂದ ಮಾರಮ್ಮನಿಗೆ ಕಟ್ಟಿಕೊಂಡಿರುವ ಹರಕೆ ಹಣವನ್ನು ಈತನಿಗೆ ಒಪ್ಪಿಸುತ್ತಾರೆ. ನಂತರ ಈತ ಮಾರಮ್ಮನ ಹಬ್ಬ ಹದಿನೈದು ದಿನವಿರುವಾಗಲೇ ಹಳ್ಳಿಗಳಿಗೆ ಹೋಗಿ ಭಿಕ್ಷೆ ಎತ್ತುತ್ತಾನೆ. ಈ ರೀತಿಯಾಗಿ ದಿಮ್ಮಸಾಲೆ ಮರದ ಶಿಶ್ನವನ್ನು ಸೊಂಟಕ್ಕೆ ಕಟ್ಟಿಕೊಂಡಿರುತ್ತಾನೆ. ಧಾರ್ಮಿಕ ಭಿಕ್ಷಾಟನೆಯ ಸಂದರ್ಭದಲ್ಲಿ ಈ ಶಿಶ್ನವನ್ನು ತೋರಿಸಿ ಕೆಲವು ಲೈಗಿಂಕ ಭಾವನೆಗಳನ್ನು ಸಾಂಕೇತಿಸಿ ಬಯ್ಯುತ್ತಾನೆ.

ಹೀಗೆ ಅರಕೆರೆ ಮಾರಮ್ಮನ ಶೂಲ-ಬಲಿ ಹಬ್ಬವಾದ ಮೇಲೆ ಈ ದಿಮ್ಮಸಾಲೆ ಮತ್ತು ಹೆಬ್ಬಾರೆಯವರು ಹಿನ್ನೆಲೆಗೆ ಹೋಗುತ್ತಾರೆ. ಇವರು ಮತ್ತೆ ಕಾಣಿಸಿಕೊಳ್ಳುವುದು ಮುಂದಿನ ವರ್ಷದ ಹಬ್ಬದಲ್ಲಿಯೇ. ಆದರೆ ಈ ಹಬ್ಬ ಈಗ ಪ್ರತಿವರ್ಷವೂ ನಡೆಯುವುದಿಲ್ಲ. ಎಲ್ಲೊ ಮೂರು ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತದೆ. ಎಂಬುದು ಕ್ಷೇತ್ರಕಾರ‍್ಯ ಸಂದರ್ಭದಲ್ಲಿ ಬಂದಂತಹ ಮಾಹಿತಿಯಾಗಿದೆ.