ಗ್ರಾಮದೇವತೆಗಳ ಬಗೆಗೆ ಇರುವ ನಂಬಿಕೆ ಸಂಪ್ರದಾಯಗಳು ಮಾನವ ಜೀವನದಲ್ಲಿ ಹಾಸುಹೊಕ್ಕಾಗಿ ಬೆಳೆದುಕೊಂಡು ಬಂದಿವೆ. ಮಾನವರು ಆರಂಭದಿಂದಲೂ ದೇವತೆಗಳ ಬಗೆಗೆ ಇರಿಸಿಕೊಂಡ ಭಕ್ತಿ ಅನನ್ಯವಾಗಿದೆ. ಮಾನವನ ಧಾರ್ಮಿಕ ಇತಿಹಾಸವನ್ನು ಅವಲೋಕಿಸಿದಾಗ ಅವನಲ್ಲಿ ನಂಬಿಕೆಯು ಪ್ರಾರಂಭದಿಂದಲೂ ಘನೀಭೂತವಾಗಿರುವುದು ಕಂಡುಬರುತ್ತದೆ. ಮಾನವ ತನ್ನ ರಕ್ಷಣೆಗೆ ನಿರ್ಮಿಸಿಕೊಂಡಂತಹ ದೇವತೆಗಳಲ್ಲಿ ಚೇತನ ಶಕ್ತಿ ಹುದುಗಿದೆಯೆಂದುಕೊಂಡು ನಂಬಿದನು. ಅಲ್ಲದೆ ಅದರಿಂದ ಪ್ರಯೋಜನ ಪಡೆದುಕೊಳ್ಳಲು ಪ್ರಯತ್ನಿಸಿದನು. ಹೀಗಾಗಿ ನಂಬಿಕೆಯ ಆಧಾರದ ಮೇಲೆ ದೇವತೆಗಳನ್ನು ಬೆಳೆಸಿ ಕೊಂಡು ಬದುಕತೊಡಗಿದನು. ತಾನು ವಾಸಿಸುವ ಗ್ರಾಮದಲ್ಲಿ ಈ ದೇವತೆಗಳಿಗೆ ಸ್ಥಾನವನ್ನು ಕಲ್ಪಿಸಿಕೊಂಡು ಉಳಿದನು. ಆದರೆ ಕಾಲ ಬದಲಾದಂತೆ ಈ ರೀತಿಯ ನಂಬಿಕೆ ಹಾಗೂ ಸಂಪ್ರದಾಯಗಳು, ಮೂಢ ನಂಬಿಕೆ ಹಾಗೂ ಮೂಢ ಸಂಪ್ರದಾಯಗಳೆಂದು ಕರೆಯಲ್ಪಟ್ಟರೂ ಸಹ ನಂಬಿಕೆಯ ಆಧಾರದ ಮೇಲೆ ಜೀವನ ಸಾಗಿಸುವ ಪ್ರಯತ್ನಗಳಾಗಿವೆ.

ಇಲ್ಲಿ ಬಹು ಮುಖ್ಯವಾಗಿ ಆದಿಕಾಲದಿಂದಲೂ ಮಾನವನು ಸಂಘಜೀವಿಯಾಗಿ ಬದುಕುತ್ತಾ ಗೊತ್ತು ಗುರಿಗಳಿಲ್ಲದೇ ಅಲೆಮಾರಿಯಾಗಿದ್ದ ಕಾಲವೊಂದಿತ್ತು. ಹೀಗೆ ಅಲೆಯುತ್ತಿದ್ದಾಗ ವನ್ಯ ಪ್ರಾಣಿಗಳಿಂದ, ನೈಸರ್ಗಿಕ ವಿಪತ್ತುಗಳಿಂದ ಕುಲಭಾಂದವರಿಂದ ಅನೇಕ ಬಾರಿ ಅಪಾಯಗಳು ಒದಗುತ್ತಿದ್ದವು. ಈ ವಿಪತ್ತು ಕಷ್ಟ-ಕೋಟಲೆಗಳನ್ನು ಎದುರಿಸಲಾಗದ ಸಂದರ್ಭದಲ್ಲಿ ಇವುಗಳ ನಿವಾಹಣೆಗೋಸ್ಕರ ಮನುಷ್ಯನನ್ನು ಮೀರಿದಂತ ಅಗೋಚರ ಶಕ್ತಿಯನ್ನು ಆಶ್ರಯಿಸಿದ್ದು ಸಹಜವೇ. ವಾಸ್ತವಾಗಿ ಇಲ್ಲಿ ಕಂಡುಬರುವ ಪ್ರಧಾನ ಅಂಶವೆಂದರೆ ಮಾನವ ಅಂದು ಅಗೋಚರ ಶಕ್ತಿಗಳ ಮೇಲಿಟ್ಟ ಗಾಢವಾದ ನಂಬಿಕೆಗಳೇ ಇಂದು ಬೆಳೆದು ದೊಡ್ಡದಾಗಿದೆ. ಬರಬರುತ್ತಾ ಇವತ್ತಿನ ಆಧುನಿಕ ಸಂದರ್ಭದಲ್ಲಿ ಈ ಗ್ರಾಮದೇವತೆಗಳು ಇವತ್ತಿಗೂ ಆಚರಣೆಯಲ್ಲಿ ಇರುವುದನ್ನು ಗ್ರಾಮೀಣ ಪ್ರದೇಶಗಳಲ್ಲಿ ಕಾಣುತ್ತೇವೆ. ಇಂದಿನ ಆಧುನೀಕರಣ, ಜಾಗತೀಕರಣ, ಉದಾರೀಕರಣದ ಸಂದರ್ಭದಲ್ಲಿಯೂ ಲಕ್ಷಾಂತರ ದೇವತೆಗಳು ಇರುವುದನ್ನು ಕಾಣುತ್ತೇವೆ. ಇವತ್ತೂ ಸಹ ಮನುಷ್ಯನಿಗೆ ಏನಾದರೂ ಅವಗಡ ಉಂಟಾದರೆ ದೈವದ ಮೊರೆ ಹೋಗುವುದು ಸಹಜವಾಗಿದೆ.

ಬಹುಶಃ ಮಾನವನು ತನ್ನ ಬದುಕಿಗೆ ಒಂದು ಸ್ಥಿರವಾದ ಚೌಕಟ್ಟನ್ನು ನಿರ್ಮಿಸಿ ಕೊಳ್ಳುತ್ತಿದ್ದ ಹಂತದಲ್ಲಿ ಈ ನಂಬಿಕೆಗಳಿಗೆ ಬುನಾದಿ ಹಾಕಿದನೆಂದು. ಬಾಳಿನ ಅನುಭವ ಈ ಅನುಭವದಿಂದುಂಟಾದ ಮಾನಸಿಕ ತಳಮಳ ಇವು ನಂಬಿಕೆ ಉಗಮಕ್ಕೆ ಪ್ರೇರಕ ಶಕ್ತಿಯಾಗಿರಬೇಕು. ವಿಧಿಯ ಕೈಗೊಂಬೆಯಾದ ಮಾನವ ಬದುಕಲು ಇಚ್ಛಿಸಿದಾಗ ಹಲವು ಶಕ್ತಿಗಳಿಗೆ ಮೊರೆ ಹೋಗಬೇಕಾಯಿತು. ನೈಸರ್ಗಿಕ ಕ್ರಿಯೆಗಳಾದ ಮಳೆ, ಗಾಳಿ, ನಿಸರ್ಗದಲ್ಲಿರುವ ಬೆಂಕಿ, ನೀರು ಮುಂತಾದವುಗಳಲ್ಲಿ ದೈವತ್ವವನ್ನು ಕಾಣುವುದರಿಂದ ಅವನಲ್ಲಿ ನಂಬಿಕೆಯ ಆ ಶಕ್ತಿ ಬೆಳೆಯುವುದು ಕಾರಣವಾಗಿದೆ.

ಮಾನವನಿಗೆ ಮೂಲತಃ ಗಿಡ, ಮರಗಳಲ್ಲಿ ನಂಬಿಕೆಗಳು, ಸಂಪ್ರದಾಯಗಳು ಹುದುಗಿ ಕೊಂಡವು. ಉದಾಹರಣೆ ಹೇಳುವುದಾದರೆ.

೧.         ಬನ್ನಿಗಿಡ ದೇವರ ಸಮಾನ – ಒದೆಯಬಾರದು

೨.         ಅರಳಿ ಮರದಲ್ಲಿ ಬ್ರಹ್ಮ, ವಿಷ್ಣುಗಳಿರುತ್ತಾರೆ – ಅದಕ್ಕೆ ಒದೆಯಬಾರದು.

೩.         ಹಾಗೆಯೇ ಗಂಗೆಗೆ ಕಲ್ಲನ್ನು ಎಸೆಯಬಾರದು ಹಾಗೂ ಉಗುಳಬಾರದು.

ಈ ರೀತಿ ಮಾನವ ಹಲವು ಶಕ್ತಿಗಳನ್ನು ದೇವರೆಂದು ನಂಬಿ ಪೂಜಿಸುತ್ತಾ ಒಂದಲ್ಲಾ ಒಂದು ರೀತಿಯಲ್ಲಿ ಅವುಗಳನ್ನು ಒಲಿಸಿಕೊಳ್ಳಲು ಪ್ರಯತ್ನಿಸಿದನು.

ಜನರ ನಿತ್ಯ ಬದುಕಿಗೂ ಮತ್ತು ದೇವತೆಗಳನ್ನು ಕುರಿತು ಇರುವ ನಂಬಿಕೆಗಳಿಗೂ ಅನ್ಯೋನ್ಯ ಸಂಬಂಧವಿರುವುದು ಕಂಡುಬರುತ್ತದೆ. ಜನರ ಆಂತರಿಕ ಭಾವನೆ ಮತ್ತು ಮೂಲ ಸಂಸ್ಕೃತಿ ಸಂಪ್ರದಾಯಗಳನ್ನು ತೋರಿಸುವಂಥ ನಂಬಿಕೆಗಳು ಮುಖ್ಯವಾಗಿರುವುದರಿಂದ ಅವುಗಳನ್ನು ಕಡೆಗಣಿಸುವಂತಿಲ್ಲ. ಇದಕ್ಕೆ ಜಾನಪದ ಸಾಹಿತ್ಯವೇ ಸಾಕ್ಷಿ. ಇಂದು ಜನರು ಎಲ್ಲವನ್ನು ನಂಬುತ್ತಿಲ್ಲವಾದರೂ ಪದೇ ಪದೇ ಅವುಗಳನ್ನು ಹೇಳುವುದರ ಮೂಲಕ ಅಥವಾ ಹಾಡುವುದರ ಮೂಲಕ ಸಂತೋಷಪಡುತ್ತಿದ್ದಾರೆ. ಇವತ್ತಿನ ಆಧುನಿಕ ಯುಗದಲ್ಲಿಯೂ ಅನಕ್ಷರಸ್ಥರೂ ಕೂಡ ಒಂದಲ್ಲಾ ಒಂದು ರೀತಿಯಲ್ಲಿ ಇವುಗಳ ಬಂಧನದಿಂದ ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ.

ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದಾಗ ದೇವರು ಮತ್ತು ದೇವತೆ ಎಂಬ ವಸ್ತು ನಂಬಿಕೆಯ ತಳಹದಿಯ ಮೇಲೆ ಮೊದಲಿನಿಂದಲೂ ಸ್ಥಿರವಾಗಿ ನಿಂತಿದೆ. ಆದರೆ ವೃತ್ತಿ, ಕಾಲ, ದೇಶಕ್ಕನುಗುಣವಾಗಿ ಅವು ಬೆಳೆಯುತ್ತವೆ. ಬದಲಾವಣೆ ಹೊಂದುತ್ತವೆ. ಹೀಗಿದ್ದರೂ ಜಾನಪದ ಮೂಲ ಅಂಶಗಳು ಅವುಗಳಲ್ಲಿ ಉಳಿದಿರುತ್ತವೆ.

ಆಧುನಿಕತೆ ಮತ್ತು ತಾಂತ್ರಿಕತೆ ಬೆಳೆಯುತ್ತಾ ಜೀವನದ ದೃಷ್ಟಿ-ಧೋರಣೆಗಳು ಹೊಸ ದಿಕ್ಕನ್ನು ಪಡೆಯುತ್ತಿರುವ ಇಂದು ನಂಬಿಕೆ ಹಾಗೂ ಸಂಪ್ರದಾಯಗಳ ಮೇಲೆ ಇವು ಪ್ರಭಾವ ಬೀರುತ್ತವೆ. ಇಂಥ ಜಾನಪದೀಯ ನಂಬಿಕೆಗಳೂ, ಆಧುನಿಕತೆಗೂ ಸಂಘರ್ಷ ಅನಿವಾರ್ಯ. ಕೆಲವು ನಂಬಿಕೆಗಳು ಅಪ್ರಸ್ತುತವಾಗಿದ್ದರೂ ಹಲವು ನಂಬಿಕೆಗಳು ಇವತ್ತಿಗೂ ಪ್ರಸ್ತುತವಾಗಿವೆ.

ಹಾಗಾಗಿ ಇಂದಿನ ಈ ಆಧುನಿಕ ಯುಗದಲ್ಲೂ ದೇವರ ಶಕ್ತಿಯನ್ನು ಕಂಡುಹಿಡಿಯುವ ಅಥವಾ ಹೊಸ ದೇವತೆಯನ್ನು ಸೃಷ್ಟಿಸುವ ಕಾರ್ಯ ನಡೆದಿಲ್ಲವಾದ್ದರಿಂದ ಹಳೆಯ ತಲೆಮಾರುಗಳಿಂದ ನಂಬಿಕೊಂಡು ಬಂದ ದೇವತೆಗಳ ಪ್ರಭಾವ ಇವತ್ತಿನ ದಿನಮಾನದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಪ್ರಚಲಿತವಾಗಿರುತ್ತದೆ. ಶಿಷ್ಟ ಜನರು ದೇವರ ಹೆಗ್ಗಳಿಕೆ ಹಾಗೂ ದೇವರ ಅಸ್ತಿತ್ವವನ್ನೇ ಪ್ರಶ್ನಿಸುತ್ತಾರೆ. ಅದೇ ದೇವರಲ್ಲಿ ನಂಬಿಕೆಯಿರುವ ಸುಶಿಕ್ಷಿತರು ತಮ್ಮ ದೇವತೆಗಳಲ್ಲಿ ಹೆಗ್ಗಳಿಕೆ ಕಂಡು ಉಳಿದವುಗಳನ್ನು ಅಲಕ್ಷಿಸುವ ತ್ವೇಷಮಯ ವಾತಾವರಣ ಕಂಡುಬರುತ್ತದೆ. ಆದರೆ ಜನಪದರಲ್ಲಿ ಇಂದಿಗೂ ಸಹ ಒಂದು ಕೋವಿನ ಜನಾಂಗ ಇನ್ನೊಂದು ಕೋಮಿನ ದೇವರನ್ನು ಆರಾಧಿಸುವುದು ಕಂಡುಬರುತ್ತದೆ.

ಮನುಷ್ಯನು ನೆಮ್ಮದಿಗಾಗಿ ದೇವರು ದೇವತೆಗಳನ್ನು ಸೃಷ್ಟಿಸಿ ಆರಾಧಿಸುತ್ತಿದ್ದಾನೆ. ಇಂದಿನ ಆಧುನಿಕ ವೈಚಾರಿಕ ಪ್ರಜ್ಞೆಗಳು ಆಕರ್ಷಿಸಿದರೂ ಸಾಂಸ್ಕೃತಿಕವಾಗಿ ಅವನು ಬಾಳುತ್ತಿರುವ ಸಮುದಾಯದ ಹಲವು ಸಂಗತಿಗಳು ಅವನಲ್ಲಿ ಘನೀಭೂತವಾಗಿರುವುದು ಕಂಡು ಬರುತ್ತದೆ. ತನಗೊದಗಿದ ಅಪಾಯ ಪರಂಪರೆಗಳು ತನ್ನ ಭವಿಷ್ಯ ಇವುಗಳ ಬಗೆಗಿನ ಮಾನವನ ಭೀತಿಯೇ ದೇವರು ಹಾಗೂ ಮತಗಳ ಕಲ್ಪನೆಗೆ ಕಾರಣವಯಿತೆಂದು ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ. ಮನುಷ್ಯನ ಬುದ್ಧಿ ಬೆಳೆದು ಬಂದಂತೆ ದೇವರು ದೇವತೆಗಳಿಗೂ ಸಹ ತನ್ನಂತೆಯೇ ಮನುಷ್ಯನ ಸ್ವರೂಪ ಕೊಟ್ಟು ಭಕ್ತಿಯಿಂದ ನಡೆದುಕೊಳ್ಳಲಾರಂಭಿಸಿದನು. ಇದು ಬೇರೆ ಬೇರೆ ಬುಡಕಟ್ಟುಗಳ ಸಂಪ್ರದಾಯ, ಆರಾಧನೆ, ಪಿತೃಪೂಜಾ ಪದ್ಧತಿಗಳು, ದೇವತೋಪಾಸನೆ ಮೊದಲಾದವುಗಳಿಗೆ ಅಡಿಗಲ್ಲಾದವು. ಆದಿಮಾನವನ ಮೂಲ ಗುಣಗಳಾದ ನಂಬಿಕೆ, ಸಂಪ್ರದಾಯಗಳ ಪಳೆಯುಳಿಕೆಗಳು, ನಶಿಸಿ ಹೋಗದೆ ಆಧುನಿಕ ಸಂದರ್ಭದ ಮನುಷ್ಯ ಬಾಳಿನ ಪ್ರಜ್ಞೆಯಲ್ಲಿ ಸುಭದ್ರವಾಗಿ ನೆಲೆಗೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ.

ಮಾನವನು ದೇವರು-ದೇವತೆ ಕಲ್ಪನೆಯಲ್ಲಿ ಧರ್ಮ, ತತ್ವ, ಆಧ್ಯಾತ್, ಸರ್ವಸ್ವವನ್ನು ಕಾಣುತ್ತಾನೆ. ಈ ನಂಬಿಕೆ ಶ್ರದ್ಧೆಗಳು ಬಾಳಿಗೆ ಅನುಕೂಲವಾಗುತ್ತವೆ. ಮುಂದೆ ದೇವರ ಪ್ರತಿಷ್ಠಾಪನೆ ಸ್ಥಾಪನೆಯಿಂದಾಗಿ ಅವು ಭಕ್ತಿ ವಿಚಾರಗಳ ಭಂಡಾರವಾಗಿ ಸಾಮಾಜಿಕ ನೀತಿ ನಡಾವಳಿಗಳನ್ನು ಸಾಧಿಸುವ ಕೇಂದ್ರಗಳಾಗಿ ಕಾರ್ಯನಿರ್ವಹಿಸ ತೊಡಗಿ ಪುರುಷಾರ್ಥಗಳ ಸಾಧನರಂಗವಾಗಿ ಪರಿಣಾಮಕಾರಿಯಾದವು.

ಹಾಗೆಯೇ ದೇವಾಲಯಗಳಲ್ಲಿ ಭಕ್ತನು ದೈವೀಶಕ್ತಿಯನ್ನು ಕಾಣವುದರ ಮೂಲಕ ಅನುಭವಿಸುವ ಮೂಲಕ ಮಾನಸಿಕ, ದೈಹಿಕ ತೊಂದರೆಗಳಿಂದ ಮುಕ್ತನಾಗುತ್ತಾನೆ. ಅಲ್ಲಿಯ ಪ್ರಶಾಂತವಾದ ಭಕ್ತಿಯ ಗಂಭೀರ ವಾತಾವರಣ ಆತನ ಮೇಲೆ ಪ್ರಭಾವ ಬೀರುವ ಮೂಲಕ ವಿಶ್ರಾಂತಿಯನ್ನು ಪಡೆಯುತ್ತಾನೆ. ಭಕ್ತನು  ಪ್ರತಿದಿನ ದೇವಾಲಯಕ್ಕೆ ಹೋಗುವುದರ ಮೂಲಕ ಅವನಲ್ಲಿ ಒಂದು ಮಾರ್ಗದರ್ಶಕ ಶಕ್ತಿಯು ಇದೆ ಎಂದು ಮನುಷ್ಯರು ನಂಬಿರುತ್ತಾರೆ.

ಮನುಷ್ಯನ ಜೀವನದಲ್ಲಿ ಆಧುನಿಕತೆ, ಜಾಗತೀಕರಣ, ಉದಾರೀಕರಣ ಪ್ರವೇಶ ಮಾಡಿರುವುದರಿಂದ ಜಾನಪದವೆಂಬ ಹಳೆ ತಲೆಮಾರುಗಳಲ್ಲಿ ಅನೇಕ ಭಿನ್ನಾಭಿಪ್ರಾಯಗಳನ್ನು ದೇವತೆಗಳ ಹಿನ್ನೆಲೆಯಲ್ಲಿ ಕಾಣುವುದು ಸಹಜವಾಗಿದೆ. ಆದ್ದರಿಂದ ಒಂದು ಕಡೆ ದೇವರಲ್ಲಿ ನಂಬಿಕೆ, ಇನ್ನೊಂದು ಕಡೆ ಈ ಆಧುನಿಕತೆಯ, ವೈಚಾರಿಕ ವಿಚಾರಧಾರೆಗಳ ಆಕ್ರಮಣದ ಇಕ್ಕುಳದಲ್ಲಿ ಸಿಕ್ಕಿ ಮನುಷ್ಯ ಒದ್ದಾಡುತ್ತಿದ್ದಾನೆ. ಆದರೂ ಸಹ ದೇವತೆಗಳ ಮೇಲಿನ ಶಕ್ತಿ, ನಂಬಿಕೆಗಳು ಕಡಿಮೆಯಾಗಿಲ್ಲ ಎಂಬುದು ಗಮನಾರ್ಹವಾಗಿದೆ.

ಇವತ್ತಿನ ಆಧುನಿಕ ಸಂದರ್ಭದಲ್ಲಿ ಗ್ರಾಮದೇವತೆಗಳ ಉಳಿವು ನಮ್ಮ ಗ್ರಾಮೀಣ ಪ್ರದೇಶದಲ್ಲಿ ಕಾಣಬಹುದು. ಇಲ್ಲಿ ಮುಖ್ಯವಾಗಿ ನಾಗರಿಕತೆಗಳು ಬದಲಾದಂತೆ ಸಂಸ್ಕೃತಿಗಳು ಚಲನೆಗೊಳ್ಳುತ್ತವೆ. ಸಂಸ್ಕೃತಿಗಳು ಬದಲಾದಂತೆ ಜನರಲ್ಲಿ ನಂಬಿಕೆ ಸಂಪ್ರದಾಯಗಳು ಬದಲಾಗುವುದು ಸೃಷ್ಟಿಯ ಸಹಜ ಗುಣ. ಆದರೂ ಮೂಲಭೂತವಾಗಿ ಜೀವನದಲ್ಲಿ ಅಳವಡಿಸಿಕೊಂಡಿರುವಂಥ ಆಂಶಗಳು ಮಾತ್ರ ಹೋಗುವುದಿಲ್ಲ ಎನ್ನಬಹುದು.

ಇಪ್ಪತ್ತೊಂದನೆ ಶತಮಾನ ಆರಂಭದಲ್ಲಿ ಮಾನವನ ಜೀವನದ ಮೇಲೆ ಆಧುನಿಕತೆಯ ಪ್ರಭಾವ ದಟ್ಟವಾಗಿದೆ. ಅನೇಕ ಆಧುನಿಕ ಸಲಕರಣೆಗಳು ನಿತ್ಯ ಜೀವನದಲ್ಲಿ ಉಪಯೋಗವಾಗುತ್ತಲಿವೆ. ಹಾಗೆಯೇ ಹಳೆಯ ತಲೆಮಾರಿನ ಸಂಪ್ರದಾಯ ನಂಬಿಕೆಗಳಲ್ಲಿಯೇ ತಮ್ಮ ಬಾಳಿನ ನೆಮ್ಮದಿಯನ್ನು ಜನರು ಕಾಣುತ್ತಿರುವುದು ಸಹಜವಾಗಿ ಕಂಡುಬರುತ್ತದೆ. ಪ್ರತಿದಿನ ಪೂಜೆ, ನೇಮ-ವಿಧಿ-ವಿಧಾನಗಳು ಈ ಸಂಸ್ಕಾರಗಳು ನಾಗರಿಕ ಆಚರಣೆಗಳಲ್ಲಿ ಕಂಡು ಬರುವುವು. ಇವುಗಳಿಂದ ಅವರು ಬಾಳಿನಲ್ಲಿ ನೆಮ್ಮದಿ ಕಾಣುವರು.

ಹಳ್ಳಿಗಳಲ್ಲಿ ವಾಸಿಸುವ ಮುಗ್ಧ ಜನರು ಅತಿ ಭಕ್ತಿಯಿಂದ ದೇವ-ದೇವತೆಗಳನ್ನು ಆರಾಧಿಸುವುದು ಕಂಡುಬರುತ್ತವೆ. ಅಲ್ಲದೆ ಗ್ರಾಮದೇವತೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿರುವುದನ್ನು ಕಾಣುತ್ತೇವೆ. ಇಂದಿಗೂ ನಮ್ಮ ಹಳ್ಳಿಗಳಲ್ಲಿ ಮಂಗಳವಾರ, ಶುಕ್ರವಾರ ಗ್ರಾಮದೇವತೆಗಳ ವಾರಗಳೆಂದು ವಿಶೇಷ ಪೂಜೆಗಳನ್ನು ಜರುಗಿಸುವರು. ಭೂಮಿಗೆ ಬೀಜ ಬಿತ್ತುವ ಪೂರ್ವದಲ್ಲಿ ದೇವಿಯ ಉಡಿಯನ್ನು ತುಂಬುವುದು. ಈ ಎಲ್ಲಾ ಅಂಶಗಳು ಇಂದಿನ ಆಧುನಿಕ ಕಾಲದಲ್ಲಿಯೂ ಹಳ್ಳಿಯ ಜನರಲ್ಲಿ ದೈವೀಶಕ್ತಿಯ ದಟ್ಟವಾದ ಪ್ರಭಾವವನ್ನು ತೋರಿಸುತ್ತವೆ.

ಇವತ್ತಿನ ಆಧುನಿಕ ಯುಗದಲ್ಲಿಯೂ ಗ್ರಾಮದೇವತೆಗಳ ಬಗೆಗೆ ನಂಬಿಕೆ, ಸಂಪ್ರದಾಯಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡು ಬಂದಿದೆ. ಗ್ರಾಮದೇವತೆಗಳ ಪ್ರಮುಖ ನೆಲೆ ಎಂದರೆ ಗ್ರಾಮ ಎಂದು ಹೇಳಬಹುದು. ಈ ಗ್ರಾಮಗಳು ಗ್ರಾಮ-ಸಂಸ್ಕೃತಿ ಸಂಪೂರ್ಣವಾಗಿ ನಶಿಸಿ ಹೋಗುವವರೆಗೆ ಗ್ರಾಮದೇವತೆಗಳು ಅಲ್ಲಿ ನೆಲೆಸಿರುವುವು. ಎಷ್ಟೋ ನಗರಗಳಲ್ಲಿ ಕೂಡ ಜಾತ್ರೆ, ಹಬ್ಬ ಮುಂತಾದ ಆಚರಣೆಗಳ ನೆಪ ಮಾಡಿಕೊಂಡು ಗ್ರಾಮದ ಸಂಕೇತಗಳನ್ನು ಪುನರ್  ಸೃಷ್ಟಿಗೊಳಿಸುತ್ತಿರುವುದನ್ನು ಇಂದಿಗೂ ಕಾಣುತ್ತೇವೆ.

ಹೀಗೆ ಗ್ರಾಮದೇವತೆಗಳು ವೈಯಕ್ತಿಕವಾದ ಮಾನಸಿಕ ನೆಮ್ಮದಿಯನ್ನು ನೀಡುವುದರ ಜೊತೆಗೆ ಸಮುದಾಯದ ಸಂಘಟನಾ ಕಾರ್ಯವನ್ನು ಸಹ ನಿರ್ವಹಿಸುತ್ತವೆ. ಗ್ರಾಮದೇವತೆಗೆ ಬೇಕಾದಂತಹ ಅಥವಾ ಸೃಷ್ಟಿಗೆ ಬೇಕಾದಂತಹ ಸಾಮೂಹಿಕ ಕಾರ್ಯವನ್ನು ಸಂಘಟಿಸುವುದು, ಆ ಕಾರ್ಯವನ್ನು ಗ್ರಾಮದೇವತೆಯ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಲು ಪ್ರಯತ್ನಿಸುವರು. ಹಾಗಾಗಿ ಗ್ರಾಮದೇವತೆಗಳು ಇಲ್ಲದಂತಹ ಪ್ರದೇಶಗಳಿಲ್ಲ, ಊರುಗಳಿಲ್ಲ. ಆ ಗ್ರಾಮದ ವೈಭವೀಕರಣಕ್ಕೆ ಮತ್ತು ಗ್ರಾಮದ ಸಾಂಕೇತೀಕರಣಕ್ಕೆ ಮಾನವನನ್ನು ಕೂಡಾ ಗ್ರಾಮದೇವತೆಯ ಮಟ್ಟಕ್ಕೆ ಏರಿಸಿ ಅವನನ್ನು ಪೂಜಿಸುವುದನ್ನು ನೋಡಿದರೆ ಜನರ ಮನಸ್ಸಿನಿಂದ ಇವತ್ತಿಗೂ ಗ್ರಾಮದೇವತೆಗಳ ಬಗೆಗೆ ನಂಬಿಕೆ. ಸಂಪ್ರದಾಯಗಳು ಇನ್ನೂ ನಿರ್ಗಮಿಸಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು.