ಕಸ್ಸೈಟರ ಕಾಲ

ಹಳೆಯ ಬೆಬಿಲೋನಿಯ ಸಾಮ್ರಾಜ್ಯವು ಮುರಿದು ಬಿದ್ದ ನಂತರ ಮೆಸಪಟೋಮಿ ಯಾದವರಲ್ಲದ ಕಸ್ಸೈಟ್ ಎನ್ನುವ ಸಂತತಿಯವರು ಬೆಬಿಲೋನಿನಲ್ಲಿ ಅಧಿಕಾರವನ್ನು ಸ್ಥಾಪಿಸಿದರು. ಮೆಸಪಟೋಮಿಯಾದಲ್ಲಿ ಅದರ ಮಧ್ಯಭಾಗದ ಉದ್ದಕ್ಕೆ ಹರಿಯುತ್ತಿದ್ದ ಯುಫ್ರೆಟಿಸ್ ನದಿಯನ್ನು ವಾಯುವ್ಯ ದಿಕ್ಕಿನಲ್ಲಿ, ಕ್ರಿ.ಪೂ.೧೫ನೆಯ ಶತಮಾನದ ಮಧ್ಯ ಭಾಗದಲ್ಲಿ ಮೊದಲು ಎದುರುಗೊಂಡರು. ಕ್ರಿ.ಪೂ.೧೩ನೆಯ ಶತಮಾನದ ಅಂತ್ಯಕ್ಕೆ ಕಸ್ಸೈಟ್ ಸಂತತಿಯ ರಾಜರು ಬೆಬಿಲೋನಿಯಾದ ಮೇಲೆ ತಮ್ಮ ಅಧಿಕಾರವನ್ನು ಪುನಃ ಸ್ಥಾಪನೆ ಮಾಡಿದರು. ಸುಮಾರು ೩೦೦ ವರ್ಷಗಳ ಕಾಲ ರಾಜ್ಯವು ಒಂದುಗೂಡಿತ್ತು.

ಕಸ್ಸೈಟ್ ಸಂತತಿಯವರಿಗೆ ತಮ್ಮದೇ ಆದ ಸಂಸ್ಕೃತಿಯಿಲ್ಲದಿದ್ದುದರಿಂದ ಮೆಸಪಟೋ ಮಿಯಾ ಸಂಸ್ಕೃತಿಯನ್ನೇ ತಮ್ಮದನ್ನಾಗಿ ಬೆಳೆಸಿಕೊಂಡು, ಮೆಸಪಟೋಮಿಯಾದ ಹಳೆಯ ಬರವಣಿಗೆಯ ಪದ್ಧತಿಗಳನ್ನು ಮುಂದುವರಿಸಿಕೊಂಡು ಹೋದರು. ಇವರು ಸುಮೇರಿಯನ್ ನಗರದ ಸುಮಾರು ದೇವಾಲಯವನ್ನು ದುರಸ್ತಿ ಮಾಡಿಸಿದರು ಮತ್ತು ಕಾಲುವೆ ಪದ್ಧತಿಯನ್ನು ಮತ್ತಷ್ಟು ಬಿಗಿ ಮಾಡುವುದರ ಮುಖಾಂತರ ವ್ಯವಸಾಯೋತ್ಪನ್ನಗಳನ್ನು ಹೆಚ್ಚಿಸಿದರು. ಇವರ ಕಾಲದಲ್ಲಿ ನಿಪ್ಪೂರ್ ನಗರವು ಅಧಿಕವಾಗಿ ಅಭಿವೃದ್ದಿಗೊಂಡು ರಾಜ್ಯದ ಒಂದು ಮುಖ್ಯ ನಗರವಾಗಿ ಬೆಳೆಯಿತು.

ಯುಫ್ರೆಟಿಸ್ ಮತ್ತು ಟ್ರೈಗ್ರಿಸ್ ನದಿಗಳ ಸಂಗಮದ ಕಿರಿದಾದ ಸ್ಥಳದಲ್ಲಿ ದುರ್-ಕುರಿಗಲ್ಜು ಎನ್ನುವ ನಗರವೊಂದನ್ನು ಕಸ್ಸೈಟರು ನಿರ್ಮಿಸಿದರು. ಉತ್ತರದಿಂದ ಬೆಬಿಲೋನಿಯಾಕ್ಕೆ ಬರಬಹುದಾದ ದಾಳಿಕೋರರಿಂದ ಬೆಬಿಲೋನನ್ನು ರಕ್ಷಿಸಲು ಈ ನಗರವನ್ನು ನಿರ್ಮಿಸಿದ್ದರು.

ವಿದೇಶಿ ಸಂಬಂಧಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ತಮ್ಮ ಮೊದಲಿನ ರಾಜರುಗಳಿಗಿಂತ ಕಸ್ಸೈಟರು ಇನ್ನೂ ವಿಸ್ತಾರವಾದ ಜಗತ್ತಿನಲ್ಲಿ ವ್ಯವಹರಿಸುತ್ತಿದ್ದರು. ಕ್ರಿ.ಪೂ.೧೪ನೆಯ ಶತಮಾನದ ಆರಂಭದಲ್ಲಿ ಬೆಬಿಲೋನಿಯ ರಾಜ್ಯವು ಪ್ರಪಂಚದ ಅತಿ ಮುಖ್ಯವಾದ ರಾಜ್ಯಗಳಾದ ಈಜಿಪ್ಟ್, ಮಿಟ್ಟಾನಿ ಮತ್ತು ಹಿಟ್ಟೈಟ್ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು. ಈ ದೇಶಗಳು ಪೂರ್ವದ ಹೆಚ್ಚಿನ ಭಾಗವನ್ನು ಆಳುತ್ತಿದ್ದವು. ಮಣ್ಣಿನ ಹಲಗೆಗಳ ಶೋಧ ಅಂದಿನ ಕಾಲದ ರಾಜಕೀಯ ವಿಷಯಗಳ ಬಗ್ಗೆ ವಿಶೇಷವಾದ ಬೆಳಕು ಚೆಲ್ಲಿದೆ.

ಕ್ರಿ.ಪೂ.೧೪ನೆಯ ಶತಮಾನದ ಮಧ್ಯಭಾಗದಿಂದ ಮುಂದಕ್ಕೆ ಒಂದನೆಯ ಅಶುರ್-ಉಬಾಲಿತ್‌ನ (ಕ್ರಿ.ಪೂ.೧೩೬೩-೧೩೨೮) ಆಳ್ವಿಕೆಯಲ್ಲಿ ಅಸ್ಸಿರಿಯವು ಹೆಚ್ಚು ಪ್ರಬಲವಾಗಿ ಬೆಳೆಯುತ್ತಿತ್ತು. ಬೆಬಿಲೋನಿಯ ಮತ್ತು ಅಸ್ಸಿರಿಯಗಳು ಒಂದಕ್ಕೊಂದು ತುಂಬ ಹತ್ತಿರ ವಾದ ಸಂಬಂಧವನ್ನು ಹೊಂದಿದ್ದರೂ ಅವುಗಳ ಮಧ್ಯದಲ್ಲಿ ಆಗಾಗ ಉಂಟಾಗುತ್ತಿದ್ದ ಬಿಕ್ಕಟ್ಟಿನಿಂದಾಗಿ ಅಧಿಕಾರದಲ್ಲಿ ಏರುಪೇರುಗಳಾಗುತ್ತಿದ್ದವು.

ಕ್ರಿ.ಪೂ.೧೨೨೦ರ ಕಡೆಯ ಭಾಗದಲ್ಲಿ ಮಧ್ಯ ಅಸ್ಸಿರಿಯಾದ, ತುಂಬ ಪ್ರಬಲನಾದ ದೊರೆ ಒಂದನೆಯ ನಿನೂರ್ತ (ಕ್ರಿ.ಪೂ.೧೨೪೩-೧೨೦೭) ಕಸ್ಸೈಟರು ಮೊದಲು ಬೆಬಿಲೋನನ್ನು ವಶಪಡಿಸಿಕೊಂಡಿದ್ದರು ಎನ್ನುವ ವಾದದೊಡನೆ, ಬೆಬಿಲೋನಿಯವನ್ನು ಅಸ್ಸಿರಿಯಾಕ್ಕೆ ಸೇರಿಸಿಕೊಂಡನು. ಕ್ರಿ.ಪೂ.೧೨೨೪ರಲ್ಲಿ ಒಂದನೆ ಟುಕುತೆ ನಿನೂರ್ತ ಬೆಬಿಲೋನಿಯಾದ ರಾಜನನ್ನು ಕೆಳಗಿಳಿಸಿ ಸಿಂಹಾಸನವನ್ನು ತನ್ನ ವಶಮಾಡಿಕೊಂಡನು. ನಂತರ ತನ್ನ ಹೆಸರಿ ನಲ್ಲಿ ರಾಜ್ಯಭಾರ ಮಾಡಲು ಒಬ್ಬರಾದ ಮೇಲೊಬ್ಬರಂತೆ ಸ್ಥಳೀಯರನ್ನು ನೆಯಮಿಸಿದನು. ಈ ನಡುವೆ ಎಲಮೈಟರು ಬೆಬಿಲೋನಿಯಾಕ್ಕೆ ಸಮಸ್ಯೆಗಳನ್ನು ಒಡ್ಡುತ್ತಿದ್ದರು. ಎಲಾಮ್ ದೇಶದ ಶುತ್ರುಕ್-ನಹ್ಹುಂತೆ ಎಂಬುವವನು ಸುಮಾರು ಕ್ರಿ.ಪೂ.೧೧೬೦ರ ವೇಳೆಗೆ ಬೆಬಿಲೋನನ್ನು ದಾಳಿ ಮಾಡಿ, ಅಪಾರವಾದ ಆಸ್ತಿಯನ್ನು ಲೂಟಿ ಮಾಡುವುದರ ಜತೆಗೆ ಹಮುರಾಬಿಯ ಶಾಸನದ ಕಲ್ಲನ್ನು ಕೂಡ ತೆಗೆದುಕೊಂಡು ಹೋದನು. ಹೀಗೆ ಬೆಬಿಲೋನಿಯಾದ ಇತಿಹಾಸ ಕೊನೆಮುಟ್ಟಿತು. ಕಸ್ಸೈಟರ ಕಾಲದ ಬೆಬಿಲೋನಿಯಾದ ಇತಿಹಾಸವು ಅಷ್ಟೇನೂ ದಾಖಲಾಗಿಲ್ಲ.

ಅಸ್ಥಿರ ಸ್ಥಿತಿಗಳು

ಕಸ್ಸೈಟರ ನಂತರ ಬೆಬಿಲೋನನ್ನು ಆಳಿದವರಲ್ಲಿ ಅತಿ ಪ್ರಶಂಸೆಗೊಳಗಾಗಿರುವವನು ನೆಬು-ಕಡ್‌ನಜರ್ (ಕ್ರಿ.ಪೂ.೧೧೨೫-೧೧೦೪). ಇವನು ಸುಸವನ್ನು ತನ್ನ ವಶಕ್ಕೆ ತೆಗೆದುಕೊಂಡು ಮರ್ಡುಕ್‌ನ ಪ್ರತಿಮೆಯನ್ನು ವಶಪಡಿಸಿಕೊಂಡನು. ಇವನು ಮತ್ತು ಇವನ ಉತ್ತರಾಧಿಕಾರಿ ಗಳು ಗಡಿ ಪ್ರದೇಶವಾದ ಅಸ್ಸಿರಿಯಾದ ಮೇಲೆ ದಾಳಿ ನಡೆಸಿದರು ಮತ್ತು ನಿರ್ಮಾಣ ಕೆಲಸಗಳಲ್ಲಿ ತೊಡಗಿಸಿಕೊಂಡರು. ಈ ಸಾವಿರ ವರ್ಷಗಳ ಅಂತ್ಯಕ್ಕೆ ಬೆಬಿಲೋನಿಯಾವನ್ನು ಭಾಗಶಃ ಅಲೆಮಾರಿ ಬುಡಕಟ್ಟಿನ ಮತ್ತು ಅರಬ ಮತ್ತು ಯಹೂದಿ ಭಾಷೆಯನ್ನು ಮಾತನಾಡುತ್ತಿದ್ದ ಆರ್ಮೇನಿಯನ್ನರು ಮತ್ತು ಚಾಲ್ಡಿಯನ್ನರು ಪದೇ ಪದೇ ದಾಳಿ ಮಾಡಿದರು. ಹತ್ತನೆಯ ಶತಮಾನದ ಕಗ್ಗತ್ತಲ ಕಾಲದಲ್ಲಿ ಬೆಬಿಲೋನಿಯಾದ ಸ್ಥಿತಿಗತಿ ಗಳು ಸಂಪೂರ್ಣವಾಗಿ ಹದಗೆಟ್ಟು ಹೋದವು.

ಕ್ರಿ.ಪೂ. ಒಂಬತ್ತನೆಯ ಶತಮಾನದ ಅರ್ಧಭಾಗದಿಂದ ಏಳನೆಯ ಶತಮಾನದ ಅಂತ್ಯದವರೆಗೆ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳಬೇಕೆಂಬ ಬಯಕೆಯನ್ನು ಹೊಂದಿದ್ದ ಅಸ್ಸಿರಿಯಾ ದೇಶವನ್ನು ಸದೆ ಬಡಿಯುವ ಕೆಲಸವನ್ನು ಬೆಬಿಲೋನಿಯ ಮಾಡಬೇಕಾಯಿತು. ಅಸ್ಸಿರಿಯನ್ನರು ಬೆಬಿಲೋನಿಯಾದ ಆಳ್ವಿಕೆ ವಿಷಯದಲ್ಲಿ ಸಂಪೂರ್ಣವಾಗಿ ಸಫಲರಾಗಿ, ಕ್ರಮೇಣ ತಮ್ಮ ಮಕ್ಕಳನ್ನು ಬೆಬಿಲೋನಿಯಾದ ಸಿಂಹಾಸನದ ಮೇಲೆ ಕೂರಿಸಿ ಅಲ್ಲಿನ ರಾಜ್ಯಭಾರವನ್ನು ನಡೆಸುವಂತಾದರು. ದಂಗೆಗಳು ಪದೇ ಪದೇ ಏಳಲು ಆರಂಭವಾದುವು. ಕಡೆಗೆ ಅಸ್ಸಿರಿಯಾದ ಚೆನ್ನಚೆರಿಬ್ (ಕ್ರಿ.ಪೂ.೯೦೪-೬೮೧) ಎಂಬುವವನು ಬೆಬಿಲೋನನ್ನು ಸಂಪೂರ್ಣವಾಗಿ ನಾಶಪಡಿಸಿದನು. ಆದರೆ ಚೆನ್ನಚೆರಿಬನ ಮಗನಾದ ಈಸರ್‌ಹದನ್ (ಕ್ರಿ.ಪೂ.೬೮೦-೬೬೯) ಎಂಬುವವನು ತನ್ನ ತಂದೆಯ ಮರಣದ ನಂತರ ಬೆಬಿಲೋನಿ ಯಾವನ್ನು ಪುನಃ ನಿರ್ಮಿಸಿದನು. ಕಾರಣವೆಂದರೆ ಅಸ್ಸಿರಿಯನ್ನರಿಗೆ ದಕ್ಷಿಣ ಮೆಸಪಟೋಮಿ ಯಾದ ಸಂಸ್ಕೃತಿಯ ಬಗ್ಗೆ ಮತ್ತು ದೇವರುಗಳ ಬಗ್ಗೆ ಅಪಾರವಾದ ಗೌರವವಿತ್ತು. ಈಸರ್‌ಹದನನ ಮಗ ಶಮಸ್-ಉಕಿನ್ನನು (ಕ್ರಿ.ಪೂ.೬೬೭-೬೪೮) ಬೆಬಿಲೋನಿಯಾದ ಪಟ್ಟವನ್ನು ಏರಿದನು. ಹೀಗಾಗಿ ಬೆಬಿಲೋನಿಯಾವು ಸುಮಾರು ೪ ದಶಕಗಳ ಕಾಲ ಶಾಂತಿಯುತವಾದ ವಾತಾವರಣವನ್ನು ಕಂಡಿತು. ಆದರೆ ತನ್ನ ತಮ್ಮ ಅಶುರ್‌ಬನಿಪಾಲನ ಮೇಲೆ ಕ್ರಿ.ಪೂ.೬೫೨ರಲ್ಲಿ ದಂಗೆಯೆದ್ದನು. ಪರಿಣಾಮವಾಗಿ ಅಸ್ಸಿರಿಯನ್ನರು ಬೆಬಿಲೋನಿ ಯದಲ್ಲಿ ಸಾಧಿಸಿದ್ದ ಸಾಮಾಜಿಕ ಸ್ಥಿರತೆ ಮತ್ತು ರಚಿಸಿದ್ದ ರಾಜಕೀಯ, ಆರ್ಥಿಕ ಮತ್ತು ಸೈನಿಕ ಭದ್ರ ಬುನಾದಿ ಕ್ರಿ.ಪೂ.೭ನೆಯ ಶತಮಾನದ ವೇಳೆಗೆ ಕ್ಷೀಣಿಸುತ್ತಾ ಬಂತು.

ಅನಂತರ ನಬೋಪೂಲ್ಲಸರ್ (ಕ್ರಿ.ಪೂ.೬೨೫-೬೦೫) ಎಂಬುವವನು ಬೆಬಿಲೋನಿಯ ವನ್ನು ಅಸ್ಸಿರಿಯನ್ನರಿಂದ ಮುಕ್ತಿಗೊಳಿಸುವುದರ ಜತೆಗೆ ಉತ್ತರ ಇರಾನಿನ ಮೀಡ್ಸ್ ಜನಗಳ ಸಹಾಯವನ್ನು ತೆಗೆದುಕೊಂಡು, ಕ್ರಿ.ಪೂ.೬೧೫ರಿಂದ ೬೦೯ ನಡುವೆ ಅಸ್ಸಿರಿಯಾದ ಮೇಲೆ ಒಂದಾದ ಮೇಲೊಂದರಂತೆ ದಾಳಿ ನಡೆಸಿ ಅದನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದನು.

ನವಬೆಬಿಲೋನಿಯ ಸಾಮ್ರಾಜ್ಯ

ನೆಪೋಪೊಲ್ಲಸ್ ಮತ್ತು ಇವನ ಮಗ ಎರಡನೆ ನೆಬುಖಡ್ನಝರ್ ಅವರು ಬೆಬಿಲೋನಿಯಾವನ್ನು ಆಳುತ್ತಿದ್ದ ಕಾಲದಲ್ಲಿ ಅಸ್ಸಿರಿಯಾ ಸಾಮ್ರಾಜ್ಯದ ಪಶ್ಚಿಮ ಭಾಗದಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸಿದ್ದರು. ಎರಡನೆ ನೆಬುಖಡ್ನಝರ್ ಪಟ್ಟಕ್ಕೆ ಬಂದ ನಂತರ ಪಶ್ಚಿಮ ಅಸ್ಸಿರಿಯಾದ ಸೋಲಿನ ದಾಳಿಯನ್ನು ಮುಂದುವರಿಸಿದನು. ಕ್ರಿ.ಪೂ.೫೯೭ರಲ್ಲಿ ಜರುಸಲೆಂ ಅನ್ನು ಗೆದ್ದುಕೊಂಡನು. ನಂತರ ಮತ್ತೊಮ್ಮೆ ಅದೇ ನಗರದ ಮೇಲೆ ದಾಳಿ ಮಾಡಿ ಕ್ರಿ.ಪೂ.೫೮೬ರಲ್ಲಿ ಸಂಪೂರ್ಣವಾಗಿ ಧ್ವಂಸ ಮಾಡಿದನು. ಹೊಸ ಬೆಬಿಲೋನಿಯಾ ಸಾಮ್ರಾಜ್ಯದ ಬೇರೆ ಭಾಗಗಳಲ್ಲಿ ಇವನು ನಡೆಸಿದ ಯುದ್ಧಗಳ ಬಗ್ಗೆ ಹೆಚ್ಚಿನದೇನೂ ತಿಳಿದುಬಂದಿಲ್ಲ.

ತಮ್ಮಲ್ಲಿರುವ ಅಸ್ತಿ, ಶ್ರೀಮಂತಿಕೆಯನ್ನು ಬಳಸಿಕೊಂಡು ಸಾಮ್ರಾಜ್ಯದ ಹೊಸ ರಾಜಧಾನಿಗೆ ಒಪ್ಪುವಂತೆ ಬೆಬಿಲೋನಿಯಾವನ್ನು ದುರಸ್ತಿಗೊಳಿಸಿದರು. ನಗರದ ಅರಮನೆ ಮತ್ತು ದೇವಸ್ಥಾನಗಳನ್ನು ವಿಸ್ತರಿಸಿದರು. ಸೂರ್ಯನ ಬೆಳಕಿನಲ್ಲಿ ಒಣಗಿಸಿದ ಇಟ್ಟಿಗೆಗಳಿಗೆ ಬದಲಾಗಿ ಬೇಯಿಸಿದ ಇಟ್ಟಿಗೆಗಳನ್ನು ಬಳಸಿದರು. ಮೆರವಣಿಗೆಯ ರಸ್ತೆಗಳನ್ನು ಸ್ಥಿರಗೊಳಿಸಲು ವಿವಿಧ ಬಗೆಯ ಕಲ್ಲುಗಳನ್ನು ಹೊರಗಡೆಯಿಂದ ಆಮದು ಮಾಡಿಕೊಂಡರು. ರಸ್ತೆಯ ಎರಡು ಪಕ್ಕಗಳಲ್ಲೂ ವರ್ಣಮಯ ಇಟ್ಟಿಗೆಗಳಿಂದ ಸಿಂಹಗಳನ್ನು ನಿರ್ಮಿಸಿದರು. ಅಂತೆಯೇ, ಮೆರವಣಿಗೆಯು ಹಾದು ಹೋಗುವ ಮತ್ತೊಂದು ದ್ವಾರವಾದ ಇಸ್ಥರ್ ಅನ್ನು ಗೂಳಿಗಳು ಮತ್ತು ಬೆಂಕಿ ಕಾರುವ ರೆಕ್ಕೆಯಿರುವ ಮೊಸಳೆಯಾಕಾರದ ಪೌರಾಣಿಕ ಭಯಂಕರ ಪ್ರಾಣಿಗಳಿಂದ ಶೃಂಗರಿಸಿದರು.

ತನ್ನ ಮೆಡಿಯಾದ ಹೆಂಡತಿಗಾಗಿ ನೆಬುಖಡ್ನಝರ್ ತೂಗು ಉದ್ಯಾನವನ್ನು ನಿರ್ಮಿಸಿದನು. ನೆಬುಖಡ್ನಝರ್‌ನ ಸಾವಿನ ನಂತರ ಬೆಬಿಲೋನಿಯಾ ಮತ್ತೆ ದ್ವಂದ್ವ ಸ್ಥಿತಿಯನ್ನು ಮುಟ್ಟಿತು. ಈ ಕಾಲದಲ್ಲಿ ಇವನ ಮಗ, ಅಳಿಯ ಮತ್ತು ತುಂಬ ಕಿರಿಯವರಾದ ಮೊಮ್ಮಕ್ಕಳು ಒಬ್ಬರಾದ ಮೇಲೆ ಒಬ್ಬರಂತೆ ಪಟ್ಟವನ್ನೇರಿದರು. ಕಡೆಯ ರಾಜನು ಸತ್ತ ನಂತರ ಅಸ್ಸಿರಿಯನ್ನರು ಹರ್ರಾನಿನ ರಾಜ್ಯಪಾಲನ ಮಗನಾದ ನಬೋನಿದಸ್ (ಕ್ರಿ.ಪೂ.೫೫೫-೫೫೯) ಎಂಬುವವನಿಗೆ ಅಧಿಕಾರವನ್ನು ವಹಿಸಿಕೊಟ್ಟರು. ನಬೋನಿದಸ್ ಕೂಡ ತುಂಬ ಒಳ್ಳೆಯ ರಾಜನಲ್ಲದ ಕಾರಣ ಬೆಬಿಲೋನಿಯ ಮತ್ತೆ ಕತ್ತಲ ಯುಗವನ್ನು ಪ್ರವೇಶಿಸಿತು. ಕಡೆಗೆ, ಪರ್ಷಿಯದ ರಾಜ ಎರಡನೆ ಸಿರಸ್‌ನು (ಕ್ರಿ.ಪೂ.೫೫೯-೫೩೦) ನಬೋನಿದಸ್ಸನ ಮೇಲೆ ದಾಳಿ ಮಾಡಿ ಬೆಬಿಲೋನಿಯಾವನ್ನು ತನ್ನ ಆಳ್ವಿಕೆಗೆ ಒಳಪಡಿಸಿ ಕೊಂಡನು.

ಅಸ್ಸಿರಿಯಾ

ಪಶ್ಚಿಮದಲ್ಲಿ ಟೈಗ್ರಿಸ್ ನದಿಯಿಂದ, ಆಗ್ನೇಯದಲ್ಲಿ ಜಬ್ ನದಿಯಿಂದ ಮತ್ತು ಉತ್ತರದಲ್ಲಿ ಜಗ್ರೂಸ್ ಪರ್ವತ ಶ್ರೇಣಿಯಿಂದ ಆವೃತಗೊಂಡಿದ್ದ ಅಸ್ಸಿರಿಯಾ ದೇಶದ ಮುಖ್ಯ ಭೂಭಾಗವು, ೧೪ನೆಯ ಶತಮಾನದ ಮಧ್ಯಭಾಗದಿಂದ ಕ್ರಿ.ಪೂ.೭ನೆಯ ಶತಮಾನದ ಕಡೆಯವರೆಗೆ, ಒಂದು ತ್ರಿಕೋನಾಕೃತಿಯನ್ನು ಹೋಲುತ್ತಿತ್ತು. ಈ ಮುಖ್ಯ ಭೂಭಾಗವು ಅಶುರ್, ಅರ್ಬೆಲ ಮತ್ತು ನಿನೆವೆಲ್ಸ್ ಎಂಬುವ ಮುಖ್ಯ ನಗರಗಳನ್ನು ಒಳಗೊಂಡಿತ್ತು. ಈ ನಗರಗಳು ಅಸ್ಸಿರಿಯಾದಲ್ಲಿ ಬಹುಮುಖ್ಯವಾಗಿದ್ದವು ಮತ್ತು ಪ್ರಬಲ ರಾಜರುಗಳು ಇಲ್ಲಿ ಆಳುವಾಗ ಅಸ್ಸಿರಿಯಾವನ್ನು ವಿಸ್ತರಿಸಲು ಪ್ರಯತ್ನಪಡುತ್ತಿದ್ದರು. ಹಾಗೆಯೇ ದುರ್ಬಲರಾದವರು ಇಲ್ಲಿಯ ರಾಜರಾದಾಗ ಈ ಪ್ರದೇಶವು ಸಣ್ಣದಾಗುತ್ತಿತ್ತು. ಅಸ್ಸಿರಿಯಾವನ್ನು ಒಂದುಗೂಡಿಸುವ ಪ್ರಯತ್ನ ಪ್ರಪ್ರಥಮವಾಗಿ ಅಶುರದ ರಾಜನಾದ ಒಂದನೆಯ ಅಶುರ್-ಉಬಾಲ್ಲಿತ್ ಎನ್ನುವವನಿಂದ (ಕ್ರಿ.ಪೂ.೧೩೬೩ರಿಂದ ೧೩೨೮) ಆರಂಭವಾಯಿತು. ಇವನು ಅಸ್ಸಿರಿಯಾವು ಒಂದು ಸಾಮ್ರಾಜ್ಯವಾಗಿ ಬೆಳೆಯಲು ಭದ್ರ ಬುನಾದಿಯನ್ನು ಹಾಕಿದನು.

ಕ್ರಿ.ಪೂ.೧೪ನೆಯ ಶತಮಾನದ ಹಿಂದೆಯೇ ಅಶುರ್ ನಗರವು ಮಧ್ಯಮ ಮಾರ್ಗವನ್ನು ಅನುಸರಿಸಿತ್ತು. ಕ್ರಿ.ಪೂ.ಮೂರು ಸಾವಿರ ವರ್ಷಗಳ ಅಂತ್ಯದಲ್ಲಿ ಅಶುರ್ ನಗರವನ್ನು ದಕ್ಷಿಣ ಮೆಸಪಟೋಮಿಯಾವು ಆಳುತ್ತಿತ್ತು. ನಮ್ಮ ಅನುಕೂಲಕ್ಕಾಗಿ ಅಸ್ಸಿರಿಯಾದ ಇತಿಹಾಸವನ್ನು ಮೂರು ಕಾಲಗಳನ್ನಾಗಿ ವಿಂಗಡಿಸಬಹುದಾಗಿದೆ.

೧. ಪುರಾತನ ಅಸ್ಸಿರಿಯಾ

೨. ಮಧ್ಯ ಅಸ್ಸಿರಿಯಾ

೩. ಆಧುನಿಕ ಅಸ್ಸಿರಿಯಾ

ಪುರಾತನ ಅಸ್ಸಿರಿಯಾದಲ್ಲಿ (ಕ್ರಿ.ಪೂ.೨೦೦೦ ರಿಂದ ೧೭೫೦) ಅಶುರ್ ನಗರವು ಒಂದು ವಾಣಿಜ್ಯ ಕೇಂದ್ರವಾಗಿತ್ತು. ಜವಳಿ ಮತ್ತಿತರ ವಸ್ತುಗಳನ್ನು ಅನತೋಲಿಯಾಕ್ಕೆ ಕೊಟ್ಟು ಪ್ರತಿಯಾಗಿ ಚಿನ್ನ ಮತ್ತು ಬೆಳ್ಳಿಯನ್ನು ವಸ್ತುವಿನಿಮಯ ಮಾಡಿಕೊಳ್ಳುತ್ತಿತ್ತು. ಕ್ರಿ.ಪೂ.೧೯ನೆಯ ಶತಮಾನದ ಅಂತ್ಯದ ವೇಳೆಗೆ ಅಶುರ್ ನಗರವು ಅಮ್ಮೋರೈಟರ ಆಳ್ವಿಕೆಗೆ ಒಳಪಟ್ಟಿತು. ಒಂದನೆಯ ಶಂಶಿ ಆದಬ್ (ಕ್ರಿ.ಪೂ.೧೮೧೩ ರಿಂದ ೧೭೮೧) ಅಮ್ಮೋರೈಟರಲ್ಲಿ ಅತಿ ಮುಖ್ಯನಾದ ರಾಜ. ಇವನು ‘‘ಅಶುರದ ರಾಜನೆಂಬ’’ ಬಿರುದನ್ನು ಹೊಂದಿದ್ದನು. ಪಶ್ಚಿಮದಲ್ಲಿ ಯುಫ್ರೆಟಿಸ್ ನದಿಯಿಂದ ಉತ್ತರದ ಮೆಸಪಟೋಮಿಯವನ್ನು ಬಳಸಿಕೊಂಡು ಜಗ್ರೂಸ್ ಬೆಟ್ಟಗಳ ನಡುವಿನ ವಿಸ್ತಾರವಾದ ಸಾಮ್ರಾಜ್ಯವನ್ನು ಒಂದನೆಯ ಶಂಶಿ ಆದಬ್ ಆಳುತ್ತಿದ್ದನು. ಏನೆಯ ಆದರೂ ಈ ವಿಶಾಲವಾದ ಸಾಮ್ರಾಜ್ಯ ಅವನ ಸಾವಿನ ನಂತರ ಹಾಗೆಯೇ ಉಳಿಯಲಿಲ್ಲ. ನಂತರದ ಶತಮಾನಗಳ ಅಶುರ್ ರಾಜ್ಯದ ಇತಿಹಾಸ ತಿಳಿದಿಲ್ಲ. ಕ್ರಿ.ಪೂ.೧೫ನೆಯ ಶತಮಾನದ ನಂತರ ಉತ್ತರದ ಮೆಸಪಟೋಮಿಯ ಮತ್ತು ಉತ್ತರ ಸಿರಿಯಾವನ್ನು ಆಳುತ್ತಿದ್ದ ರಾಜ್ಯವು ಅಶುರವನ್ನು ಆಳುತ್ತಿತ್ತು ಎಂದು ತಿಳಿದುಬಂದಿದೆ.

ಒಂದನೆಯ ಅಶುರ ಉಬಾಲಿತ್‌ನ ಆಡಳಿತಾವಧಿಯಲ್ಲಿ ಅಂದರೆ ಕ್ರಿ.ಪೂ.೧೪ನೆಯ ಶತಮಾನದಲ್ಲಿ ಅಸ್ಸಿರಿಯಾವು ಪೂರ್ಣ ಸ್ವಾತಂತ್ರ್ಯವನ್ನು ಮತ್ತು ಸಾಮ್ರಾಜ್ಯವಾಗಿ ಬೆಳೆಯುವ ಭದ್ರ ಬುನಾದಿಯನ್ನು ಹೊಂದಿತ್ತು. ಮಿಟ್ಟಾನಿ ರಾಜ್ಯದ ಜತೆ ಒಂದು ದೊಡ್ಡ ಯುದ್ಧವು ಶುರುವಾಯಿತು. ಈ ಯುದ್ಧದಲ್ಲಿ ಒಂದನೆ ಅಶುರ ಉಬಾಲಿತ್ ನ ಉತ್ತರಾಧಿಕಾರಿ ಒಂದನೆಯ ಶಲಮನೆಸರ್ ಮಿಟ್ಟಾನಿ ರಾಜ್ಯದ ಅರ್ಧ ಭಾಗವನ್ನು ಗೆದ್ದು ಅಸ್ಸಿರಿಯಾಕ್ಕೆ ಸೇರಿಸಿದನು.

ಬೆಬಿಲೋನಿಯಾದಲ್ಲಿ ನಡೆದ ಕ್ರಾಂತಿಯಿಂದಾಗಿ ಅಲ್ಲಿನ ರಾಜಮನೆತನವು ಉರುಳಿ ಬಿದ್ದಿದ್ದಾಗ ಒಂದನೆಯ ಅಶುರ-ಉಬಾಲಿತನು ಆ ರಾಜಮನೆತನವನ್ನು ಮತ್ತೆ ಅಧಿಕಾರಕ್ಕೆ ತಂದನು. ಒಂದನೆಯ ಅಶುರ ಉಬಾಲಿತನ ಸಾವಿನ ನಂತರ ಬೆಬಿಲೊನಿಯ ಮತ್ತು ಅಸ್ಸಿರಿಯಾಗಳ ನಡುವೆ ದೀರ್ಘವಾದ ಯುದ್ಧವು ಟ್ರೈಗ್ರಿಸ್ ನದಿಯ ಮೇಲೆ ನಡೆಯಿತು. ಈ ಯುದ್ಧದಲ್ಲಿ ಅಸ್ಸಿರಿಯನ್ನರಿಗೆ ಜಯ ಲಭಿಸಿತು. ಕಾರಣ ಅವರ ಯುದ್ಧ-ತಂತ್ರಗಳು ಉತ್ತಮ ಗುಣಮಟ್ಟದವಾಗಿದ್ದವು.

ಒಂದನೆಯ ತುಕುಲ್ತಿ ನಿನೂರ್ತನ ಕಾಲದಲ್ಲಿ (ಕ್ರಿ.ಪೂ.೧೨೪೩ರಿಂದ ೧೨೦೭) ಅಸ್ಸಿರಿಯಾವು ತುಂಬಾ ಪ್ರಾಬಲ್ಯಕ್ಕೆ ಬಂದಿತು. ಇದೇ ವೇಳೆಗೆ ಅಸ್ಸಿರಿಯಾದ ಮಧ್ಯ ಯುಗದ ಪ್ರಥಮ ಭಾಗದ ಇತಿಹಾಸ ಅಂತ್ಯಕ್ಕೆ ಬಂತು.

ಒಂದನೆಯ ತುಕುಲ್ತಿ ನಿನೂರ್ತ ತುಂಬ ಶಕ್ತಿಯುತನಾದ ಯೋಧನಾಗಿದ್ದನು. ಇವನು ಉತ್ತರದ ಮತ್ತು ಪೂರ್ವದ ಬೆಟ್ಟದ ಬುಡಕಟ್ಟಿನವರ ಮೇಲೆ ಮತ್ತು ಪಶ್ಚಿಮದಲ್ಲಿ ಹಿಟ್ಟಿಯವರ ಮೇಲೆ, ದಕ್ಷಿಣದಲ್ಲಿ ಬೆಬಿಲೋನಿಯರ ಮೇಲೆ ಯುದ್ಧವನ್ನು ಮಾಡಿದನು. ಬೆಬಿಲೋನಿಯವನ್ನು ದಾಳಿ ಮಾಡಿ ಅದನ್ನು ಧ್ವಂಸ ಮಾಡಿದನು. ಅದರ ಆಸ್ತಿಯೆಲ್ಲವನ್ನು ಮತ್ತು ಮರ್ಡುಕ್ ದೇವರ ಮೂರ್ತಿಯನ್ನು ಅಸ್ಸಿರಿಯಾ ದೇಶಕ್ಕೆ ಕೊಂಡು ಹೋದನು. ಹೀಗೆ ಇವನ ಕಾಲದಲ್ಲಿ ಅಸ್ಸಿರಿಯಾವು ಪಶ್ಚಿಮದಲ್ಲಿ ಸಿರಿಯಾವರೆಗೂ ಮತ್ತು ಯುಫ್ರೆಟಿಸ್ ನದಿಯವರೆಗೂ ಹಬ್ಬಿತ್ತು. ಬೆಬಿಲೋನನ್ನು ವಶಪಡಿಸಿಕೊಂಡ ನಂತರ ಅಸ್ಸಿರಿಯಾದ ಬಳಿ ಒಂದು ಹೊಸನಗರವನ್ನು ನಿರ್ಮಿಸಿದನು ಮತ್ತು ಅಶುರದಿಂದ ಟೈಗ್ರಿಸ್ ನದಿಯ ಮೇಲ್ಭಾಗಕ್ಕೆ ಕರ್-ತುಕುತಿ-ನಿರ್ನೂತ ಎಂಬುವನ್ನು ನಿರ್ಮಿಸಿದನು.

ಅಸ್ಸಿರಿಯಾವು ಸಂಪಾದಿಸಿದ್ದ ಪ್ರಾಬಲ್ಯವು ಅದರ ದುಂಡಾಕಾರದ ಅಚ್ಚುಗಳಿಂದ ನಮಗೆ ತಿಳಿದುಬರುತ್ತದೆ. ಸುಂದರೆ ಸಹಜವಾದ ನಿಸರ್ಗದ ರಮಣೀಯ ದೃಶ್ಯಗಳಿಂದ ಮತ್ತು ಕಾಲ್ಪನಿಕ ಹಾಗೂ ಸಹಜ ಪ್ರಾಣಿ, ಗಿಡ, ಮರ, ಪೊದೆಗಳನ್ನು ದುಂಡಾಕಾರದ ಅಚ್ಚುಗಳ ಮೇಲೆ ಕೆತ್ತಿದ್ದರು.

ಮೊದಲನೆಯ ತುಕುಲ್ತಿ ನಿನೂರ್ತನು ಕೊಲೆಯಾದ ನಂತರ ಸುಮಾರು ದಶಕಗಳ ಕಾಲ ಅಸ್ಸಿರಿಯಾ ಬಹಳ ದುರ್ಬಲವಾಯಿತು. ಒಂದನೆಯ ಟಿಗ್ಯಾತ್ ಪಿಲಾಸರನು (ಕ್ರಿ.ಪೂ.೧೧೧೪ ರಿಂದ ೧೦೭೬) ಅಸ್ಸಿರಿಯಾದ ಆಳ್ವಿಕೆಗೆ ಬಂದ ನಂತರ ಅದರ ಪ್ರಾಬಲ್ಯವು ಮತ್ತೆ ಹೆಚ್ಚಾಯಿತು. ಪಶ್ಚಿಮದಲ್ಲಿ ಆರ್ಮೆನಿಯನ್ನರ ವಿರುದ್ಧ ಸುಮಾರು ಯುದ್ಧಗಳನ್ನು ಮಾಡಿದನು. ಮೆಸಪಟೋಮಿಯಾದ ದಕ್ಷಿಣ ದಿಕ್ಕಿಗೆ ದಂಡೆತ್ತಿ ಹೋಗಿ ಬೆಬಿಲೋನಿಯಾದ ತುಂಬ ಮುಖ್ಯವಾದ ನಗರಗಳನ್ನು ಆಕ್ರಮಣ ಮಾಡಿಕೊಂಡನು. ಒಂದನೆಯ ಪಿಲಾಸರನ ಮರಣದ ನಂತರ ಹೊರಗಿನವರ ದಾಳಿಗಳಿಂದ ಅಸ್ಸಿರಿಯಾವು ಮತ್ತೆ ನಾಶವಾಯಿತು.

ಆಧುನಿಕ ಅಸ್ಸಿರಿಯ

ಕ್ರಿ.ಪೂ.೧೦ನೆಯ ಶತಮಾನದ ವೇಳೆಗೆ ಟೈಗ್ರಿಸ್ ನದಿಯ ಪೂರ್ವ ದಿಕ್ಕಿಗೆ ಅಸ್ಸಿರಿಯಾವು ಮತ್ತೆ ತಲೆ ಎತ್ತತೊಡಗಿತು. ಈ ಅವಧಿಯಲ್ಲಿ ಎರಡನೆಯ ಅಶುರ್ ನಸಿರಪಾಲ (ಕ್ರಿ.ಪೂ.೮೮೩ರಿಂದ ೮೫೯) ಮತ್ತು ಮೂರನೆ ಶಲ್ಮನೆಯಸರ್ (ಕ್ರಿ.ಪೂ.೮೫೮ ರಿಂದ ೮೨೪) ಎಂಬುವವರುಗಳು ಅಸ್ಸಿರಿಯಾವನ್ನು ಆಳಿದರು.

ಎರಡನೆಯ ಅಶುರ್ ನಸಿರಪಾಲನು ಹಲವು ಯಶಸ್ವಿ ದಂಡಯಾತ್ರೆಗಳನ್ನು ನಡೆಸಿದನು. ಇದರಿಂದಾಗಿ ಆಸ್ಸಿರಿಯಾ ಸಾಮ್ರಾಜ್ಯವನ್ನು ಉತ್ತರದಲ್ಲಿ ಮತ್ತು ಪೂರ್ವದಲ್ಲಿ ಬೆಟ್ಟಗಳವರೆಗೆ ಮತ್ತು ಯುಫ್ರೆಟಿಸ್ ನದಿಯಿಂದಾಚೆಗೆ ಹಾಗೂ ಮೆಡಿಟರೇನಿಯನ್ ಸಾಗರದ ಆಚೆಗೆ ವಿಸ್ತರಿಸಿದನು. ತನ್ನ ದಂಡಯಾತ್ರೆಗಳಿಂದ ತಂದ ಆಸ್ತಿ ಮತ್ತು ಐಶ್ವರ್ಯದಿಂದ ನಿನೆವೆಹದ ದಕ್ಷಿಣಕ್ಕಿರುವ ಕಲ್ಹು ಎನ್ನುವಲ್ಲಿ ಒಂದು ನಗರವನ್ನು ನಿರ್ಮಿಸಿದನು. ತನಗಾಗಿಯೇ ಪ್ರತ್ಯೇಕವಾದ ಒಂದು ಅರಮನೆಯನ್ನು ನಿರ್ಮಿಸಿಕೊಂಡನು. ಇದರ ಗೋಡೆಗಳು ೬ ಅಡಿ ಎತ್ತರವಿದ್ದವು ಮತ್ತು ಗೋಡೆಗಳ ಮೇಲಿನ ಕಲ್ಲಿನ ಚಪ್ಪಡಿಗಳ ಮೇಲೆ ತನ್ನ ಯುದ್ಧಗಳ ಚಿತ್ರಗಳನ್ನು ಕೆತ್ತಿಸಿದನು. ಬೇಟೆಯಲ್ಲಿ ಹಾಗೂ ದೈವೀಕತೆಯಲ್ಲಿ ಇವನಿಗೆ ಉತ್ತಮ ಹೆಸರಿತ್ತು. ಇದು ಇವನ ಆಳ್ವಿಕೆಯನ್ನು ಸುಗಮಗೊಳಿಸಿತ್ತು.

ಇವನ ನಂತರ ಮೂರನೆಯ ಶಲ್ನನೆಸರ್ ಆಳ್ವಿಕೆಗೆ ಬಂದನು. ತನ್ನ ಉತ್ತರದ ಶತ್ರುವಾದ ವ್ರಾರ್ತು ಮೇಲೆ ಸತತ ಯುದ್ಧವನ್ನು ನಡೆಸಿದನು. ಪಶ್ಚಿಮದಲ್ಲಿನ ಸಣ್ಣಪುಟ್ಟ ರಾಜ್ಯಗಳನ್ನು ವಶಪಡಿಸಿಕೊಂಡು ಇಸ್ರೇಲ್‌ವರೆಗೆ ರಾಜ್ಯ ವಿಸ್ತಾರ ಮಾಡಿದನು. ಬೆಬಿಲೋನಿಯಾದ ಮೇಲೂ ದಂಡೆತ್ತಿ ಹೋಗಿದ್ದನು. ಹಲವು ಯುದ್ಧಗಳನ್ನು ಮಾಡಿದ ನಂತರ ನಿರ್ಮಾಣ ಕಾರ್ಯದಲ್ಲೂ ಸ್ವಲ್ಪ ಗಮನ ಹರಿಸಿದನು. ಕಲ್ಹು ಕೋಟೆಯಲ್ಲಿನ ಶಲ್ಮನೆಸರ್‌ನಲ್ಲಿ ಇವನು ಒಂದು ಬೃಹತ್ತಾದ ಶಸ್ತ್ರಾಗಾರವನ್ನು ನಿರ್ಮಿಸಿದನು.

ಇವನ ನಂತರ ದುರ್ಬಲರಾದ ರಾಜರು ವ್ಯವಸ್ಥೆಯಲ್ಲಿನ ಉಳುಕುಗಳನ್ನು ಉಪಯೋಗಿಸಿಕೊಂಡು ಆಳ್ವಿಕೆಗೆ ಬಂದರು. ಪರಿಣಾಮವಾಗಿ ವ್ರಾರ್ತು ಹೆಚ್ಚು ಪ್ರಬಲವಾಗಿ ಬೆಳೆದು ಅಸ್ಸಿರಿಯನ್ನರಿಗೆ ಸಮಸ್ಯೆಗಳನ್ನು ಒಡ್ಡಿತು.

ಮುಂದಿನ ಶತಮಾನಗಳಲ್ಲಿ ಮೂರನೆಯ ತಿಗಾಲತ್ (ಕ್ರಿ.ಪೂ.೭೪೪-೭೨೭) ಅಕ್ರಮವಾಗಿ ಅಧಿಕಾರಕ್ಕೆ ಬಂದನು. ಕಳೆದು ಹೋಗಿದ್ದ ಅಸ್ಸಿರಿಯಾದ ಘನತೆಯನ್ನು ಅದಕ್ಕೆ ಮರಳಿ ತಂದುಕೊಟ್ಟ ಮಹಾನ್ ಆಡಳಿತಗಾರ ಇವನಾಗಿದ್ದನು. ಈಜಿಪ್ಪಿನವರೆಗೆ ರಾಜ್ಯ ವಿಸ್ತಾರ ಮಾಡಿದನು ಮತ್ತು ಬೆಬಿಲೋನಿಯವನ್ನು ಅಸ್ಸಿರಿಯಾದ ಆಳ್ವಿಕೆಗೆ ಒಳಪಡಿಸಿದನು. ರಾಜಮನೆತನದ ಅಧಿಕಾರವನ್ನು ಹೆಚ್ಚಿಸುವ ಸಲುವಾಗಿ ಮತ್ತು ಆಂತರಿಕ ದಂಗೆಗಳನ್ನು ಹತ್ತಿಕ್ಕಲು ಅನುಕೂಲವಾಗುವಂತೆ ಸೈನ್ಯವನ್ನು ಪುನಾರಚಿಸಿದನು ಹಾಗೂ ಅಸ್ಸಿರಿಯಾದ ಪ್ರಾಂತ್ಯಗಳ ವಿಸ್ತಾರವನ್ನು ಕಡಿಮೆ ಮಾಡಿದನು. ಈ ಸುಧಾರಣೆಗಳು ಅಸ್ಸಿರಿಯಾವು ಶತಮಾನದ ಅಂತ್ಯಕ್ಕೆ ಮಹಾನ್ ದೇಶವಾಗಿ ಬೆಳೆಯಲು ಬುನಾದಿಯನ್ನು ಹಾಕಿದವು.

ಎರಡನೆಯ ಸರ್ಗಾನ್ (ಕ್ರಿ.ಪೂ.೭೨೧-೭೦೫) ವಾಯುವ್ಯ ದಿಕ್ಕಿನಲ್ಲಿರುವ ಉರಾಟುವಿನ ಪ್ರಾಬಲ್ಯವನ್ನು ಸಂಪೂರ್ಣವಾಗಿ ಮುರಿದು ಹಾಕಿದನು. ಆದರೆ ಸ್ವತಂತ್ರರಾದ ಬೆಬಿಲೋನಿಯನ್ನರ ಜತೆ ಅವನ ಆಳ್ವಿಕೆಯ ಅವಧಿಯ ಕಡೆಯ ತನಕವೂ ಯುದ್ಧ ಮಾಡಬೇಕಾಯಿತು.

ಎರಡನೆಯ ಸರ್ಗಾನಿನ ಮರಣಾನಂತರ ಇವನ ಮಗ ಸೆನ್ನಚೆರಿಬ್ (ಕ್ರಿ.ಪೂ.೭೦೪-೬೮೧) ತನ್ನ ತಂದೆಯ ಕಾಲದ ರಾಜಧಾನಿಯನ್ನು ತ್ಯಜಿಸಿ ನಿನೆವೆಹ್‌ನಲ್ಲಿ ತನ್ನದೇ ಆದ ರಾಜಧಾನಿಯನ್ನು ನಿರ್ಮಿಸಿದನು. ನಗರದ ಸುತ್ತ ಕೋಟೆಯನ್ನು ನಿರ್ಮಿಸಿದನು ಮತ್ತು ಕೆರೆಗಳನ್ನು ಕಟ್ಟಿಸಿ, ನಾಲೆಗಳನ್ನು ನಿರ್ಮಿಸುವುದರ ಮುಖಾಂತರ ನೀರಾವರಿ ವ್ಯವಸ್ಥೆಯನ್ನು ಉತ್ತಮಪಡಿಸಿದನು. ಇವನ ಕಾಲದಲ್ಲಿ ಕಲೆಗೂ ಕೂಡ ಪ್ರಾಶಸ್ತ್ಯ ನೀಡಲಾಗಿತ್ತು. ಇವನು ಅರಮನೆಯ ಗೋಡೆಗಳ ಮೇಲೆ ಯುದ್ಧದ ವಿವರವಾದ ಕೆತ್ತನೆಗಳನ್ನು ಮಾಡಿಸಿದ್ದನು. ದಂಗೆಯೆದ್ದಿದ್ದ ಬೆಬಿಲೋನಿಯಾದವರನ್ನು ಮತ್ತು ಬೆಬಿಲೋನಿಯಾವನ್ನು ಸಂಪೂರ್ಣವಾಗಿ ನಾಶ ಮಾಡಿದನು.

ಸೆನ್ನಚೆರಿಬ್‌ನ ನಂತರ ಇವನ ಮಗ ಈಸರ್‌ಹಡ್ಡನ್ (ಕ್ರಿ.ಪೂ.೬೦೦-೬೦೯) ಅಧಿಕಾರಕ್ಕೆ ಬಂದನು. ಇವನು ಈಜಿಪ್ಟ್‌ನ್ನು ಅಸ್ಸಿರಿಯಾಕ್ಕೆ ಸೇರ್ಪಡೆ ಮಾಡಿದನು. ಇವನು ಇದು ಸೈನ್ಯಶಕ್ತಿಯ ಮುಖ್ಯವಾದ ಸಾಧನೆಯಾಗಿದೆ. ಬೆಬಿಲೋನಿಯಾವನ್ನು ಸರಿಪಡಿಸಿ ತನ್ನ ಮಗ ಶಮಶ್ ಶುಮಕಿನ್(ಕ್ರಿ.ಪೂ.೬೬೭-೬೪೮)ನ ಅಲ್ಲಿಯ ಪಟ್ಟದ ಮೇಲೆ ಕುಳ್ಳಿರಿಸಿದನು. ಇದೇ ಸಮಯದಲ್ಲಿ ತನ್ನ ಮತ್ತೊಬ್ಬ ಮಗ ಅಶುರಬನಿಪಾಲನನ್ನು ಅಸ್ಸಿರಿಯಾದ ಸಿಂಹಾಸನಕ್ಕೇರಿಸಿದನು.

ಅಶುರಬನಿಪಾಲನು ಉತ್ತಮವಾದ ಮೇಧಾವಿಯಾಗಿದ್ದನು. ಇವನು ನಿನೆವೆಹ್ ಎಂಬಲ್ಲಿ ಬೃಹತ್ತಾದ ಗ್ರಂಥಾಲಯವೊಂದನ್ನು ನಿರ್ಮಿಸಿದನು. ಇದರಿಂದ ದೊರೆತ ಆಧಾರಗಳು ಇಂದು ನಮಗೆ ಅಂದಿನ ಕಾಲದ ಮೆಸಪಟೋಮಿಯಾದ ಇತಿಹಾಸ ಮತ್ತು ಸಂಸ್ಕೃತಿಯ ಪುನಾರಚನೆ ಮಾಡುವಲ್ಲಿ ಸಹಕಾರಿಯಾಗಿವೆ. ತನಗಾಗಿಯೇ ಒಂದು ಪ್ರತ್ಯೇಕವಾದ ಅರಮನೆಯೊಂದನ್ನು ನಿರ್ಮಿಸಿಕೊಂಡನು. ಅದರ ಗೋಡೆಗಳ ಮೇಲೆ ತಾನು ನಡೆಸಿದ ಯುದ್ಧಗಳ ಮತ್ತು ಬೇಟೆಗಳ ಸುಂದರವಾದ ಕೆತ್ತನೆಗಳನ್ನು ಮಾಡಿಸಿದ್ದನು. ಕಲ್ಲಿನ ಮೇಲೆ ಮಾಡಿರುವ ಉಬ್ಬು ಕೆತ್ತನೆಗಳು ಅಸ್ಸಿರಿಯಾವು ಅಂದು ಕಲೆಯಲ್ಲಿ ಸಾಧಿಸಿದ್ದ ಉನ್ನತಿಯನ್ನು ತೋರಿಸುತ್ತವೆ.

ಕ್ರಿ.ಪೂ.೬೫೨ರಲ್ಲಿ ತನ್ನ ತಮ್ಮನ ಮೇಲೆ ಶಮರ್-ಸುಹ್ಮ ಉಕಿನ್ ಎಂಬುವವನು ದಂಗೆಯೆದ್ದನು. ಇವನನ್ನು ಅಶುರ್‌ಬನಿಪಾಲನು ಸಂಪೂರ್ಣವಾಗಿ ಸೋಲಿಸಿದನು. ದುರದೃಷ್ಟವೆಂದರೆ ಅಶುರ್‌ಬನಿಪಾಲನ ಕಡೆಯ ದಿನಗಳ ಬಗ್ಗೆ ಅಥವಾ ಅವನ ನಂತರ ಅಧಿಕಾರಕ್ಕೆ ಬಂದವರ ಬಗ್ಗೆ ಹೆಚ್ಚಿನ ವಿಷಯವೇನು ದೊರೆತಿರುವುದಿಲ್ಲ. ಅಂತಿಮವಾಗಿ ಮೇಡಿಸರು ಮತ್ತು ಬೆಬಿಲೋನಿಯನ್ನರು ಜತೆಗೂಡಿ ನಡೆಸಿದ ಯುದ್ಧಗಳಿಂದಾಗಿ ಅಸ್ಸಿರಿಯಾವು ಅಧಃಪತನಗೊಂಡಿತು. ಅಸ್ಸಿರಿಯಾದ ಕಟ್ಟಕಡೆಯ ರಾಜನೆಂದರೆ ಎರಡನೆಯ ಅಶುರ್ ಉಬಾಲಿತ್ (ಕ್ರಿ.ಪೂ.೬೧೧-೬೦೯). ಇವನು ಅಸ್ಸಿರಿಯಾದ ಕೆಲವು ಭಾಗಗಳನ್ನು ಆಳುತ್ತಿದ್ದನು. ಆದರೆ ಅಸ್ಸಿರಿಯಾದ ಅಂತ್ಯವು ಇನ್ನೂ ಮೂರು ವರ್ಷಗಳ ಮೊದಲೆ ಅಂದರೆ, ಕ್ರಿ.ಪೂ.೬೧೨ರಲ್ಲಿ ನಿನೆವೆಹದ ಗೋಡೆಗಳು ಕುಸಿದುಬಿದ್ದಾಗ ಮತ್ತು ಅರಮನೆಯ ಬೆಂಕಿಯಲ್ಲಿ ಸುಟ್ಟು ಹೋದಾಗಲೇ ಪೂರ್ಣವಾಯಿತು.

ಈಗಾಗಲೇ ಹೇಳಿರುವಂತೆ ಮೆಸಪಟೋಮಿಯಾದ ನಾಗರಿಕತೆಯ ಹುಟ್ಟು ಮತ್ತು ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಸುಮೆರ್, ಅಕ್ಕಡ್, ಬೆಬಿಲೋನಿಯ ಮತ್ತು ಅಸ್ಸಿರಿಯಾದ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು. ಈ ಎಲ್ಲ ರಾಷ್ಟ್ರಗಳ ಇತಿಹಾಸವನ್ನು ಒಟ್ಟುಗೂಡಿಸಿದರೆ ಮೆಸಪಟೋಮಿಯಾದ ಇತಿಹಾಸವಾಗುತ್ತದೆ.

ಹಮುರಾಬಿ ಶಾಸನ (ಕ್ರಿ.ಪೂ.೧೯೭೨೧೭೫೦)

ಬೆಬಿಲೋನನ್ನು ಆಳಿದ ಮೊದಲನೆಯ ಸಂತತಿಗೆ ಸೇರಿದ ಆರನೆಯ ರಾಜನ ಹೆಸರು ಹಮುರಾಬಿ. ಇವನು ವಿಶ್ವದಲ್ಲೇ ಮೊದಲ ಬಾರಿಗೆ ಶಾಸನ ಸಂಹಿತೆಯನ್ನು ರಚಿಸಿದ್ದಕ್ಕಾಗಿ ಹೆಸರುವಾಸಿಯಾಗಿದ್ದಾನೆ. ಈ ಶಾಸನಗಳನ್ನು ಹರಳುಗಳುಳ್ಳ ಪಾರದರ್ಶಿಕೆಯ ಕಪ್ಪು ಬಣ್ಣದ ಕಲ್ಲಿನ ಮೇಲೆ ಕೆತ್ತಲಾಗಿದ್ದು, ಈಗ ಈ ಶಿಲಾಶಾಸನ ಪ್ಯಾರಿಸ್‌ನ ವಸ್ತು ಸಂಗ್ರಹಾಲಯದಲ್ಲಿದೆ.

ಹಮುರಾಬಿಯ ಶಾಸನ ಸಂಹಿತೆಯು ಜರಿಗೆ ಬರುವ ಮೊದಲು ಉರ್, ಇಸಿನ್ ಮುಂತಾದ ದೇಶಗಳಲ್ಲಿ ಶಾಸನ ಸಂಹಿತೆಗಳು ಅಸ್ತಿತ್ವದಲ್ಲಿದ್ದವು. ದಿನನಿತ್ಯದ ನ್ಯಾಯಪಾಲನೆಗೆ ಈ ಸಂಹಿತೆಯನ್ನು ಬಳಸಿಕೊಳ್ಳುವ ಬದಲಾಗಿ ಅವು ಒಂದು ಆದರ್ಶ ಸಮಾಜದ ಪ್ರತಿಬಿಂಬವಾಗಿದ್ದವು. ಹಮುರಾಬಿಯ ಕಾಲಕ್ಕೆ ಮುನ್ನವೇ ಆಸ್ತಿತ್ವದಲ್ಲಿದ್ದ ಶಾಸನ ಸಂಹಿತೆಗಳು ಈ ಕೆಳಕಂಡಂತಿವೆ:

೧. ಉರುಕಾಗಿರುವ – ಸುಮೇರಿಯನ್ನಿನ ರಾಜ (ಕ್ರಿ.ಪೂ.೨೩೫೦)

೨. ಉರ್ – ನಮ್ಮು ಶಾಸನ – ಸುಮೇರಿಯನ್‌ನ ರಾಜ(ಕ್ರಿ.ಪೂ.೨೧೧೨-೨೦೯೮)

೩. ಲಿಪಿತ್ ಇಶ್ ತಾರ್ ಶಾಸನ-ಸುಮೇರಿಯನ್ ರಾಜ(ಕ್ರಿ.ಪೂ.೧೯೩೪-೧೯೨೪)

೪. ಎಶ್ಚುನ್ನ ಶಾಸನ – ಬೆಬಿಲೋನಿಯಾದ ರಾಜ (ಕ್ರಿ.ಪೂ.೧೯೦೦)

ಹಮುರಾಬಿಯು ತನ್ನ ಶಾಸನ ಸಂಹಿತೆಯನ್ನು ರಚಿಸುವಾಗ ಈ ಮೊದಲೇ ಅಸ್ತಿತ್ವದಲ್ಲಿದ್ದ ಶಾಸನಗಳನ್ನು ಬಳಸಿಕೊಂಡಿದ್ದಾನೆ. ಉದಾ : ಎಶ್ನುನ್ನದ ಶಾಸನಗಳು ತೆರಿಗೆ ಮತ್ತು ಬೆಲೆಗಳು, ಮತ್ತು ವೇತನ; ವಿವಾದ, ಕುಟುಂಬ ಹಾಗೂ ಅಪರಾಧಗಳ ಬಗ್ಗೆ; ಮರಣದಂಡನೆಗಳ ಹಾಗೂ ಹಲವು ಬಗೆಯ ಅಪರಾಧಗಳ ಬಗ್ಗೆ ವಿಷಯಗಳನ್ನು ಹೊಂದಿದ್ದವು.

ಲಿಖಿತದ ಶಾಸನವು ಸುಮಾರು ಹೊಸದು ಎನ್ನುವಂತೆ ಕಾಣುತ್ತದೆ. ಗುಲಾಮರ ಸ್ಥಾನಮಾನ ಕಾಲ, ಕದ್ದು ಓಡಿ ಹೋಗುವ ಗುಲಾಮಗಿರಿಗೆ ವಿಧಿಸುವ ದಂಡ ಹಾಗೂ ಇನ್ನೂ ಮುಂತಾದ ವಿಷಯಗಳನ್ನು ಒಳಗೊಂಡಿತ್ತು.

ಈ ಕಾಲದ ಅತಿ ಮುಖ್ಯವಾದ ಶಾಸನ ಸಂಹಿತೆಯೆಂದರೆ ಹಮುರಾಬಿ ಶಾಸನ ಸಂಹಿತೆ. ಹರಳುಗಳುಳ್ಳ ಪಾರದರ್ಶಿಕೆಯ ಕಪ್ಪು ಕಲ್ಲಿನ ಮೇಲೆ ಇವುಗಳನ್ನು ಕೆತ್ತಲಾಗಿದ್ದು, ಶಾಸನಗಳ ಸಂಹಿತೆಯ ಕೆಲವು ಭಾಗಗಳನ್ನು ಮಣ್ಣಿನ ಹಲಗೆಗಳ ಮೇಲೂ ಸಂಗ್ರಹಿಸಲಾಗಿದೆ, ಕಾರಣ ಈ ಶಾಸನಗಳನ್ನು ಸುಮಾರು ಕ್ರಿ.ಶ.೧ನೆಯ ಶತಮಾನದವರೆಗೆ ಶಾಲೆಗಳಲ್ಲಿ ಅಭ್ಯಸಿಸುತ್ತಿದ್ದರು.

ಶಾಸನ ರಚಿಸಿರುವ ಶಿಲೆಯ ಮೇಲ್ಭಾಗದಲ್ಲಿ ರಾಜನು ಶಮಶ್ ನ್ಯಾಯದೇವತೆಯಾದ ಸೂರ್ಯನಿಗೆ ಮುಖಾಮುಖಿಯಾಗಿ ಕುಳಿತಿರುವುದನ್ನು ಕಾಣಬಹುದಾಗಿದೆ. ಶಾಸನಗಳನ್ನು ಕಲ್ಲಿನ ಎರಡೂ ಮಗ್ಗುಲುಗಳಲ್ಲಿ ಕೆತ್ತಲಾಗಿದೆ.

ಶಾಸನ ಸಂಹಿತೆಯು ದೀರ್ಘವಾದ ಮುನ್ನುಡಿಯಿಂದ ಆರಂಭವಾಗುತ್ತದೆ. ಈ ಮುನ್ನುಡಿಯಲ್ಲಿ ದೇವತೆಗಳು ರಾಜನಿಗೆ ಅಧಿಕಾರವನ್ನು ಕೊಟ್ಟು ದುರ್ಬಲರನ್ನು, ಅನಾಥರನ್ನು, ವಿಧವೆಯರನ್ನು ಉಳ್ಳವರ ಬರ್ಬರತೆಯಿಂದ ಕಾಪಾಡುವಂತೆ ತಿಳಿಸಿವೆ ಎಂದು ಹೇಳಲಾಗಿದೆ.

ಮುನ್ನುಡಿಯ ನಂತರ ೨೮೨ ಶಾಸನಗಳಿವೆ. ಈ ಶಾಸನಗಳು ಬೆಬಿಲೋನಿಯಾದ ಪ್ರಸ್ತುತ ಸಮಾಜದ ಎಲ್ಲ ವಿಷಯಗಳನ್ನು ಒಳಗೊಂಡಿರುತ್ತವೆ. ಆರ್ಥಿಕ ನೀತಿ, ಕೌಟುಂಬಿಕ ಶಾಸನ, ಅಪರಾಧ ಶಾಸನಗಳನ್ನೂ ಈ ಸಂಹಿತೆಯು ಒಳಗೊಂಡಿರುತ್ತದೆ. ದಂಡ ವಿಧಿಸುವ ಪದ್ಧತಿಯು ಅಪರಾಧಿಯ ಸ್ಥಾನಮಾನ ಮತ್ತು ಅಪರಾಧದ ತೀವ್ರತೆ ಯನ್ನು ಅವಲಂಬಿಸಿದೆ. ದಂಡನೆಯ ಶಾಸ್ತ್ರವು ಸಮನಾದ ಪ್ರತೀಕಾರದ ನಿಯಮದ ಮೇಲೆ ಆರಂಭವಾಗಿದೆ.

ಈ ಸಂಹಿತೆಯು ಮನೆ ಕಟ್ಟುವವರ, ಇಟ್ಟಿಗೆ ಮಾಡುವವರ, ಹೊಲಿಗೆಯವರ, ಕಲ್ಲು ಕುಟ್ಟುವವರ, ಬಡಗಿಗಳ, ಕೂಲಿಕಾರರ, ದನ ಕಾಯುವವರ ಮತ್ತು ದೋಣಿ ಹಾಯಿಸುವವರಿಗೆ ನೀಡಬೇಕಾದ ವೇತನದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತದೆ.

ಪಿತ್ರಾರ್ಜಿತ ಆಸ್ತಿಯ ಹಕ್ಕುಬಾಧ್ಯತೆಗಳಿಗೆ ಸಂಬಂಧಿಸಿದಂತೆ ಪುರುಷನಿಂದ ಮಕ್ಕಳಿಗೆ ಆಸ್ತಿಯ ಹಕ್ಕು ಸಹಜವಾಗಿ ಮತ್ತು ನೆಯರವಾಗಿ ಬರುತ್ತದೆ. ಹೆಂಡತಿಗೆ ಹಕ್ಕು ಬರುವುದಿಲ್ಲ. ಕಾನೂನಿನ ಪ್ರಕಾರ ರಾಜನೆಯ ಅಂತಿಮ ನ್ಯಾಯಾಧೀಶ ಹಾಗೂ ರಾಜ್ಯದ ಮೇಲೆ ಪ್ರಜೆಗಳಿಗೆ ಯಾವ ಹಕ್ಕು ಇರುವಂತೆ ತೋರುವುದಿಲ್ಲ. ಮುನ್ನುಡಿಯು ರಾಜ್ಯವು ಟೈಗ್ರಿಸ್ ನದಿಯಿಂದ ನಿನೆವೆಹುವರೆಗೆ, ಯುಫ್ರೆಟಿಸ್‌ನಿಂದ ಟುಟ್ಟುಲ್ ವರೆಗೆ ಹಬ್ಬಿದ್ದು ರಾಜನ ಸಾರ್ವಭೌಮತ್ವ ಉನ್ನತ ಸ್ಥಿತಿಯಲ್ಲಿದ್ದ ಬಗ್ಗೆ ತಿಳಿಸುತ್ತದೆ. ಹೀಗೆ ಶಾಸನಗಳು ಪ್ರಸ್ತುತ ಬೆಬಿಲೋನಿಯ ಸಮಾಜದ ಎಲ್ಲ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ. ಸಂಹಿತೆಯು ಒಂದು ರೀತಿಯಲ್ಲಿ ಸಂಕ್ಷಿಪ್ತವಾಗಿ ಅಂತಿಮಗೊಳ್ಳುತ್ತದೆ. ಸಂಹಿತೆಯು ಕ್ರಮಬದ್ಧವಾದ ಮನೋಧೋರಣೆಯನ್ನಾಗಲಿ, ಸಾಧ್ಯವಿರುವ ಎಲ್ಲ ಸನ್ನಿವೇಶಗಳನ್ನಾಗಲಿ ತಿಳಿಸುವುದಿಲ್ಲ. ಆದರೆ ಇದು ಪುರಾತನ ಸಂಸ್ಕೃತಿಯಲ್ಲಾದ ಒಂದು ಬೃಹತ್ ಬೆಳವಣಿಗೆಯನ್ನು ತೋರಿಸುತ್ತದೆ.

ಧರ್ಮ

ಮೆಸಪಟೋಮಿಯಾದ ಪುರಾಣಗಳ ಪ್ರಕಾರ ಪ್ರಪಂಚವನ್ನು ಒಂದು ಹಿಡಿಯಷ್ಟು ದೇವರುಗಳು ಮಾತ್ರ ಆಳುತ್ತಿದ್ದರು. ದೇವತೆಗಳು ತುಂಬಾ ಶಕ್ತಿಯುತರಾಗಿದ್ದರು ಮತ್ತು ಶಾಶ್ವತರಾದವರು. ದೇವರುಗಳು ವೈಯಕ್ತಿಕವಾಗಿ ಪ್ರಕೃತಿಯ ಪ್ರಬಲವಾದ ಶಕ್ತಿಯನ್ನು ಪ್ರತಿನಿಧಿಸುತ್ತಿದ್ದರು. ಇವುಗಳಲ್ಲಿ ಭೂಮಿ, ಆಕಾಶ, ಚಂದ್ರ, ಗುಡುಗು, ಗಾಳಿ, ಶುದ್ಧ ಮತ್ತು ಉಪ್ಪು ನೀರಿನ ಮುಂತಾದ ದೇವತೆಗಳಿದ್ದರು. ಪ್ರತಿ ದೇವತೆಗೂ ತನ್ನದೇ ಆದ ದೇವಸ್ಥಾನವಿದ್ದು ಅದರಲ್ಲಿ ವಾಸವಾಗಿದ್ದರು.

ಹೀಗಾಗಿ ಸುಮೇರಿಯಾದ ನಗರವು ದೇವಸ್ಥಾನಗಳ ದೇವತೆಯೊಬ್ಬನ ಮನೆಯ ಸುತ್ತ ಬೆಳೆದು ಬಂದಿತ್ತು. ನಗರದ ಜನರು ಆರಾಧಿಸಿದರೆ ದೇವತೆಯು ಸಂತಸಗೊಳ್ಳುತ್ತಿತ್ತು ಮತ್ತು ನಂಬಿದವರನ್ನು ಅಪಾಯದಿಂದ ರಕ್ಷಿಸುತ್ತಿತ್ತು. ದೇವತೆಗಳು ತೃಪ್ತರಾಗದಿದ್ದರೆ ಪ್ರವಾಹ, ಕ್ಷಾಮವು ಕಾಣಿಸಿಕೊಳ್ಳುತ್ತಿತ್ತು, ಶತ್ರುಗಳಿಂದ ದಾಳಿಯಾಗುತ್ತಿತ್ತು. ದೇವರನ್ನು ಪೂಜಿಸಲು ‘‘ವಿಶೇಷವಾದ ಸೇವಕರು’’ಗಳನ್ನು ಗೊತ್ತು ಮಾಡಲಾಗಿತ್ತು. ಮೆಸಪಟೋಮಿ ಯಾದ ಸಮಾಜದಲ್ಲಿ ಪುರೋಹಿತರು ತುಂಬ ಪ್ರಬಲವಾಗಿದ್ದರು.

ದೇವಸ್ಥಾನವು ಒಂದು ಪ್ರಬಲವಾದ ಸಂಸ್ಥೆಯಾಗಿ ಪುರಾತನ ಮೆಸಪಟೋಮಿಯಾದಲ್ಲಿ ಬೆಳೆದಿತ್ತು. ದೇವಸ್ಥಾನಗಳು ಆರ್ಥಿಕವಾಗಿ ಸ್ವತಂತ್ರವಾಗಿದ್ದವು. ಅವುಗಳಿಗೆ ತಮ್ಮದೇ ಆದ ಭೂಮಿ, ದವಸಧಾನ್ಯಗಳ ಉಗ್ರಾಣಗಳು, ಪ್ರಾಣಿಗಳು ಇರುತ್ತಿದ್ದವು ಹಾಗೂ ವ್ಯವಸಾಯವೇ ದೇವಸ್ಥಾನಗಳ ಮುಖ್ಯ ಆದಾಯದ ಮೂಲವಾಗಿತ್ತು.

ಪುರಾತನ ಮೆಸಪಟೋಮಿಯನ್ನರು ಪ್ರಕೃತಿ ದೇವತೆಗಳನ್ನು ನಂಬಿದ್ದರು. ಸಣ್ಣ ಪ್ರದೇಶಗಳು ದೊಡ್ಡ ನಗರವಾಗಿ ಬೆಳೆದಂತೆ ಸಾಮಾನ್ಯ ದೇವತೆಯನ್ನು ಉನ್ನತ ಸ್ಥಿತಿಗೆ ಏರಿಸಲಾಗುತ್ತಿತ್ತು. ಮೆಸಪಟೋಮಿಯವನ್ನು ಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ಒಳಪಡಿಸಿದಾಗ ಕೆಲವು ದೇವತೆಗಳನ್ನು ದೇಶದ ದೇವತೆಗಳ ಸ್ಥಾನಕ್ಕೆ ಏರಿಸಲಾಯಿತು. ಹೀಗೆ ರಾಜ್ಯಧರ್ಮವೆಂಬ ಕಲ್ಪನೆ ಮೂಡಿಬಂತು. ರಾಜ್ಯಧರ್ಮವು ದೊಡ್ಡ ಪಂಥವನ್ನೇ ಸೃಷ್ಟಿಸಿತ್ತು. ರಾಜ್ಯದ ದೇವತೆಗಳಿಗೆ ಬೃಹತ್ತಾದ ದೇವಸ್ಥಾನಗಳನ್ನು ನಿರ್ಮಿಸಿದ್ದರು. ಉದಾಹರಣೆಗೆ ಚಂದ್ರ ದೇವತೆಯ ಪಂಥದ ನನ್ನ ದೇವರಿಗೆ ಉರ್ ಎನ್ನುವ ಬಳಿ ಬೃಹತ್ತಾದ ದೇವಾಲಯವನ್ನು (ಜಿಗುರಾತ್) ನಿರ್ಮಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಕ್ರಮೇಣ ಬೆಬಿಲೋನಿಯಾದ ಕಾಲ ಆರಂಭವಾದ ಮೇಲೆ ಮರ್ಡುಕ್ ಬೆಬಿಲೋನಿಯ ರಾಜ್ಯದ ದೇವರಾದನು. ಮುಖ್ಯವಾದ ನಗರಗಳಲ್ಲಿ ಇವನಿಗೆ ಬೃಹತ್ತಾದ ದೇವಾಲಯಗಳನ್ನು ನಿರ್ಮಿಸಲಾಗಿತ್ತು. ಬೆಬಿಲೋನಿಯನ್ನರು ಸೂರ್ಯದೇವನಾದ ಶಮಶ್‌ನನ್ನು ಪೂಜಿಸು ತ್ತಿದ್ದರು. ಅಸ್ಸಿರಿಯನ್ನರ ಆಗಮನದಿಂದಾಗಿ ಅಶುರ್ ದೇವತೆಯು ಮೆಸಪಟೋಮಿಯದಲ್ಲಿ ತುಂಬ ಪ್ರಬಲನಾದನು. ಹೀಗೆ ಅತಿಮುಖ್ಯರಾದ ದೇವತೆಗಳೆಂದರೆ ಇಶ್ತಾಕ್, ನಿನೂರ್ತ, ಚಂದ್ರದೇವ ಸಿನ್ ಮುಂತಾದವರುಗಳು.

ಮೆಸಪಟೋಮಿಯಾದ ಇತಿಹಾಸದಲ್ಲಿ ಹಲವು ನಗರಗಳು ಧರ್ಮದ ಕೇಂದ್ರ ಬಿಂದುಗಳಾದವು. ಉದಾಹರಣೆಗೆ ಸುಮೇರಿಯನ್ ನಗರ-ರಾಜ್ಯಗಳು ಉನ್ನತಿಯನ್ನು ತಲುಪಿದಾಗ ಕಿಶ್ ಎನ್ನುವ ಸ್ಥಳ ಒಂದು ಧಾರ್ಮಿಕ ಕೇಂದ್ರವಾಯಿತು. ಸುಮೇರಿನ ಮೇಲೆ ಚಕ್ರಾಧಿಪತ್ಯವನ್ನು ಸ್ಥಾಪಿಸಿದ ರಾಜರೆಲ್ಲರೂ ‘‘ಕಿಶ್‌ನ ರಾಜ’’ ಎಂಬ ಬಿರುದನ್ನು ಇದರಿಂದಾಗಿಯೇ ಹೊಂದಿರುತ್ತಿದ್ದರು. ಬೆಬಿಲೋನಿಯ ಮತ್ತು ಅಸ್ಸಿರಿಯಾದ ಕಾಲದಲ್ಲಿ ನಿಪ್ಪೂರ್ ಒಂದು ಧಾರ್ಮಿಕ ಕೇಂದ್ರವಾಗಿ ಬೆಳೆಯಿತು. ಹೀಗಾಗಿ ಆ ಪ್ರದೇಶವನ್ನು ಆಕ್ರಮಿಸಿಕೊಂಡ ಪ್ರತಿ ದೊರೆಯು ನಿಪ್ಪೂರನ್ನು ಧಾರ್ಮಿಕ ರಾಜಧಾನಿಯನ್ನಾಗಿ ಪರಿಗಣಿ ಸುತ್ತಿದ್ದನು. ಹೀಗೆ ಮೇಲೆ ಹೇಳಿದ ಬಿರುದು ಸಾಂಕೇತಿಕವಾಗಿ ಅ ಪ್ರಾಂತ್ಯದ ಮೇಲಿನ ರಾಜನ ಅಧಿಕಾರವನ್ನು ಸೂಚಿಸುತ್ತಿತ್ತು.

ದೇವಸ್ಥಾನಗಳು ರಾಜ್ಯದ ಉಗ್ರಾಣಗಳಾಗಿಯೂ ಕೆಲಸ ನಿರ್ವಹಿಸುತ್ತಿದ್ದವು ಮತ್ತು ಧಾರ್ಮಿಕ ಜತ್ರೆಗಳಿಗೆ ದೇವತೆಗಳನ್ನು ಕೊಟ್ಟು ತೆಗೆದುಕೊಳ್ಳುವ ಪದ್ಧತಿಗೆ ಕೇಂದ್ರವಾಗಿದ್ದವು. ದೇವಸ್ಥಾನವು ಶ್ರೇಣೀಕೃತ ಆಡಳಿತ ವ್ಯವಸ್ಥೆಯ ಮೇಲ್ತುದಿಯಲ್ಲಿ ನಗರದ ಮುಖ್ಯಸ್ಥನಾದ ಎನ್ಸಿ ಎನ್ನುವವನಿದ್ದನು. ಇವನು ದೇವಸ್ಥಾನದ ಖಜನೆಯ ಮುಖ್ಯಸ್ಥನೂ ಆಗಿದ್ದನು.

ಈ ಮೊದಲೇ ಹೇಳಿರುವಂತೆ ಪಂಥದ ದೇವರು ಮತ್ತು ದೇವತೆಗಳಿಗೆ ದೇವಸ್ಥಾನಗಳನ್ನು ನಿರ್ಮಿಸುತ್ತಿದ್ದರು. ಮೊದಲನೆಯದಾಗಿ ದೇವಸ್ಥಾನಗಳು ತುಂಬ ಸರಳವಾಗಿರುತ್ತಿದ್ದವು ಹಾಗು ಇಟ್ಟಿಗೆಯಿಂದ ಸಾಮಾನ್ಯ ಜಗಲಿಯ ಮೇಲೆ ನಿರ್ಮಿಸಲಾಗುತ್ತಿತ್ತು. ನಗರಗಳು ಬೆಳೆದಂತೆ ದೇವಸ್ಥಾನಗಳು ಎತ್ತರವಾಗಿ, ದೊಡ್ಡದಾಗಿ ಪುರಾಣಗಳ ಕಥೆಗಳ ಏಳು ಮಹಡಿಯ, ನೂರಾರು ಅಡಿ ಎತ್ತರದ ಜಿಗುರಾತ್ ದೇವಸ್ಥಾನದವರೆಗೂ ಬೆಳೆಯಿತು. ದೇವಸ್ಥಾನದ ಸುತ್ತಮುತ್ತ ಉಗ್ರಾಣ ಹಾಗೂ ಪುರೋಹಿತರು ವಾಸಿಸುವ ಮನೆಗಳು ಹುಟ್ಟಿಕೊಂಡವು.

ಜಿಗುರಾತ್‌ನ ದೇವಸ್ಥಾನದ ಗೋಡೆಗಳನ್ನು ಕಲ್ಲಿನಿಂದ ಹಾಗೂ ಬೇಯಿಸಿದ ಮಣ್ಣಿನ ಆಕೃತಿಗಳಿಂದ ಶೃಂಗರಿಸಲಾಗಿತ್ತು. ಇವುಗಳನ್ನು ಎಷ್ಟೊಂದು ಸುಂದರವಾಗಿ ಜೋಡಿಸಲಾಗಿತ್ತು ಎಂದರೆ ಸಮತಲವಾದ ದೇವಸ್ಥಾನದ ತುದಿಗಳು ರೇಖ ನಾಗರ ಆಕೃತಿಗಳಿಂದ ರಂಜಿಸಿ ದ್ದವು. ಹೀಗೆ ಧರ್ಮವು ಮೆಸಪಟೋಮಿಯಾದ ನಾಗರಿಕತೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿತ್ತು.

ಸಾಹಿತ್ಯ

ಮೆಸಪಟೋಮಿಯಾದ ನಾಗರಿಕತೆಯ ಬಹಳ ದೊಡ್ಡ ಸಾಧನೆಯೆಂದರೆ ಅವರಲ್ಲಿ ಬೆಳೆದಿದ್ದ ಲಿಪಿ ಪದ್ಧತಿ. ಇದು ಕ್ರಿ.ಪೂ.ಮೂರು ಸಾವಿರ ವರ್ಷಗಳಿಂದಲೇ ಆರಂಭಗೊಂಡಿತ್ತು. ಆರಂಭದಲ್ಲಿ ಲಿಪಿಗಳು ಚಿತ್ರಮಾದರಿಯಾಗಿದ್ದವು. ಇದು ಕ್ರಮೇಣ ಕೋನಾಕೃತಿ ಬರವಣಿಗೆಗೆ ಎಡೆ ಮಾಡಿಕೊಟ್ಟಿತು.

‘‘ಕ್ಯುನಿಫಾರಂ’’ ಎನ್ನುವುದು ಲ್ಯಾಟಿನ್ ಶಬ್ದ. ಲ್ಯಾಟಿನ್ ಭಾಷೆಯಲ್ಲಿ ಕೋನಾಕೃತಿ ಎಂದರೆ ಅಲಗು ರೀತಿ ಎಂದರ್ಥ. ಇದು ಕೊರೆದಾಕಾರದ ಚಿತ್ರವಾಗಲು ಕಾರಣ ಆರಂಭದಲ್ಲಿ ಇದನ್ನು ಹಸಿಯಾದ ಮಣ್ಣಿನ ಹಲಗೆಯ ಮೇಲೆ ಕೊಳವೆ ಕಡ್ಡಿಯಿಂದ ಬರೆಯಲಾಗುತ್ತಿತ್ತು. ಕೊಳವೆಯ ಕಡ್ಡಿಯಿಂದ ಬರೆದ ಅಕ್ಷರ ತ್ರಿಕೋನಾಕಾರದ ಅಥವಾ ಕೊರೆದಾಕಾರದಲ್ಲಿ ಇರುತ್ತಿದ್ದುದರಿಂದ ಇದಕ್ಕೆ ಕೋನಾಕೃತಿ ಎಂಬ ಹೆಸರು ಬಂದಿತು.

ಕೋನಾಕೃತಿ ಬರವಣಿಗೆಯ ಮಾದರಿಯನ್ನು ಆರ್ಥಿಕ ವಹಿವಾಟುಗಳನ್ನು ನಡೆಸಲು ಸೃಷ್ಟಿಸಲಾಗಿತ್ತು. ಮಣ್ಣಿನ ಸಣ್ಣ ಚೂರುಗಳನ್ನು ನಾಣ್ಯಗಳಾಗಿ ಬಳಸಲಾಗುತ್ತಿತ್ತು. ಕ್ರಮೇಣ ಇದನ್ನೇ ಲಿಪಿಯಾಗಿ ಬಳಸಲಾಯಿತು ಮತ್ತು ಸಾಹಿತ್ಯ ಪ್ರಕಾರಗಳಿಗೆ ಇದನ್ನೇ ಮೆಸಪಟೋಮಿಯದ ಪುರಾತನ ನಾಗರಿಕತೆಯಲ್ಲಿ ಬಳಸಲಾಯಿತು.

ಬರವಣಿಗೆಯು ಆರಂಭವಾದ ದಿನಗಳನ್ನು ಕ್ರಿ.ಪೂ.ಸುಮಾರು ೩೪೦೦ರಿಂದ ೩೦೦೦ದ ನಡುವೆ ನಡೆದಿರಬಹುದೆಂದು ಗುರುತಿಸಲಾಗಿದೆ. ಆದರೆ ಕೋನಾಕೃತಿ ಮಾದರಿಯ ಲಿಪಿ ಕ್ರಿ.ಪೂ.ದ ಅಂತ್ಯಕ್ಕೆ ರೂಪುಗೊಂಡಿದೆ. ಸುಮಾರು ಕ್ರಿ.ಪೂ.೨೦೦೦ ವರ್ಷದ ವೇಳೆಗೆ ದಕ್ಷಿಣದ ಇರಾಕಿನಲ್ಲಿ ಹುಟ್ಟಿದ ಲಿಪಿಯ ಪ್ರಕಾರ ಮೆಸಪಟೋಮಿಯಾದ ಉದ್ದಗಲಕ್ಕೆ ಹರಡಿಕೊಂಡಿತು. ಆರಂಭದಲ್ಲಿ ಸುಮೇರಿಯನ್ ಭಾಷೆಯನ್ನು ಬರೆಯಲು ಇದನ್ನು ಬಳಸಲಾಯಿತು. ನಂತರ ಇದನ್ನು ಅಕ್ಕಾಡಿಯನ್ ಭಾಷೆಯನ್ನು ಬರೆಯಲು ಬಳಸಲಾಯಿತು.

ಲಿಪಿಯು ಹೆಚ್ಚೆಚ್ಚು ಪ್ರಯೋಜನಕಾರಿಯಾಗಿ ಕಂಡಂತೆಲ್ಲ ಬರವಣಿಗೆಯ ಶಾಲೆಗಳನ್ನು ಸ್ಥಾಪಿಸಲಾಯಿತು. ಬರವಣಿಗೆಯು ಪ್ರತಿದಿನದ ಬಳಕೆಗೆ ಬಂದಂತೆಲ್ಲ ಗುರುತಿಸಬಹುದಾಗಿದ್ದ ಚಿತ್ರಗಳು ಮಾಯವಾದವು. ಪ್ರತಿಯಾಗಿ ಬರವಣಿಗೆಯ ಚಿಹ್ನೆಗಳನ್ನು ಕೆಲವೇ ಸುಧಾರಿಸಿದ ರೇಖೆಗಳಿಗೆ ಸೀಮಿತಗೊಳಿಸಲಾಯಿತು.

ಈ ಕಾಲದ ಸಾಹಿತ್ಯವು ಪುರಾಣ ಕತೆಗಳನ್ನು, ಮಂತ್ರಗಳನ್ನು, ಜನಪದವನ್ನು, ಜ್ಞಾನ ಸಾಹಿತ್ಯ, ಇತಿಹಾಸ, ವ್ಯಾಪಾರ ಮತ್ತು ವಹಿವಾಟುಗಳನ್ನು ಒಳಗೊಂಡಿತ್ತು. ಈ ಕಾಲದ ಮುಖ್ಯವಾದ ಪುರಾಣಿಕತೆ ಅಂದರೆ

ಅ. ಗಿಲ್ಗಮೇಶ್ ಮಹಾಕಾವ್ಯ

ಆ. ಅತ್ರ-ಹರಿಸ್

ಇ. ಅಡಪ

ಈ. ಪಾತಾಳಲೋಕಕ್ಕೆ ಇಷಾಟರ್ ದೇವತೆಯ ಪ್ರವೇಶ

ಉ. ಪ್ರವಾಹ ಮುಂತಾದ ಕಥೆಗಳು

ಇವುಗಳ ಗಂಭೀರವಾದ ಅಧ್ಯಯನವು ನಮಗೆ ಅಂದಿನ ಕಾಲದ ಮೆಸಪಟೋಮಿಯದ ನಾಗರಿಕತೆಯ ಬಗ್ಗೆ ಹೆಚ್ಚು ವಿಷಯ ತಿಳಿಸುತ್ತದೆ.

ಸಮಾಜದ ಆರ್ಥಿಕತೆ

ಈ ಕಾಲದ ಆರ್ಥಿಕ ವ್ಯವಹಾರ ಬೇಸಾಯದ ಮೇಲೆ ನಿಂತಿತ್ತು. ಆದರೆ ಇದನ್ನು ಪಶು ಸಾಕಾಣಿಕೆ, ವಾಣಿಜ್ಯ, ವ್ಯಾಪಾರಗಳಿಂದ ಇನ್ನೂ ಮುಂದುವರಿಸಲಾಗಿತ್ತು.

ಅರಮನೆ ಮತ್ತು ದೇವಾಲಯಗಳು ಆರ್ಥಿಕತೆಯ ಬಹುಮುಖ್ಯವಾದ ಸಂಸ್ಥೆಗಳಾಗಿದ್ದವು. ಇವು ವಿಸ್ತಾರವಾದ ಭೂಮಿಯನ್ನು ಹೊಂದಿದ್ದು, ವ್ಯಾಪಾರವನ್ನು ನಡೆಸುತ್ತಿದ್ದವು. ಹಣದ ವ್ಯವಸ್ಥೆ ಇಲ್ಲದಿದ್ದುದರಿಂದ ವ್ಯಾಪಾರವು ವಸ್ತುವಿನಿಮಯ ಪದ್ಧತಿಯ ಮೇಲೆ ನಡೆಯುತ್ತಿತ್ತು. ಆದರೆ ವ್ಯವಸ್ಥಿತವಾದ ಅಳತೆ ಮತ್ತು ತೂಕದ ವ್ಯವಸ್ಥೆಯಿತ್ತು.

ಈ ಕಾಲದ ಮುಖ್ಯ ಬೆಳೆಗಳೆಂದರೆ ಬಾರ್ಲಿ, ಖರ್ಜೂರ, ಧಾನ್ಯಗಳು, ಹಣ್ಣುಗಳು ಮುಂತಾದವು. ಮೀನು ಈ ಕಾಲದಲ್ಲಿ ಯಥೇಚ್ಛವಾಗಿ ಸಿಗುತ್ತಿತ್ತು.

ಮೆಸಪಟೋಮಿಯಾದಲ್ಲಿ ಆಂತರಿಕ ಮತ್ತು ಬಾಹ್ಯ ವಾಣಿಜ್ಯ ವ್ಯಾಪಾರ ನಡೆಯುತ್ತಿತ್ತು. ಆಂತರಿಕ ವ್ಯಾಪಾರವು ಹಲವು ಬಗೆಯ ಕಚ್ಚಾವಸ್ತುಗಳನ್ನು ವ್ಯಾಪಾರಕ್ಕೆ ತರುವಲ್ಲಿ ಯಶಸ್ವಿಯಾಗಿತ್ತು. ಮೆಸಪಟೋಮಿಯಾದ ಜನರು ಬಿರುಸಿನ ವಿದೇಶಿ ವ್ಯಾಪಾರವನ್ನು ಕೂಡ ಮಾಡುತ್ತಿದ್ದರು. ಇಂಡಸ್ ಕಣಿವೆ ಮತ್ತು ಈಜಿಪ್ಟ್ ಮುಖ್ಯವಾದ ವಿದೇಶಿ ವ್ಯಾಪಾರ ಕೇಂದ್ರಗಳಾಗಿದ್ದವು. ಚಕ್ರಗಳುಳ್ಳ ಗಾಡಿಗಳು ಮತ್ತು ಪ್ರಾಣಿಗಳಿಂದ ಎಳೆಯುವ ಗಾಡಿಗಳಿಂದ ಭೂಮಾರ್ಗದಲ್ಲೂ ಹಾಗೂ ದೋಣಿ ಮತ್ತು ಹಡಗುಗಳಿಂದ ಸಾಗರದ ಮೇಲೂ ವ್ಯಾಪಾರ ನಡೆಸುತ್ತಿದ್ದರು.

ಮುಖ್ಯವಾದ ಆಮದು ವಸ್ತುಗಳೆಂದರೆ- ಭಾರತದಿಂದ ಚಿನ್ನ, ಏಷಿಯಾಮೈನರ್ ನಿಂದ ಬೆಳ್ಳಿ, ಅಫಘಾನಿಸ್ತಾನದಿಂದ ನೀಲವರ್ಣದ ಕಲ್ಲು, ಇರಾನಿನಿಂದ ಬಟ್ಟಲುಗಳನ್ನು ಮಾಡಲು ಕಲ್ಲುಗಳನ್ನು ಮತ್ತು ಅನಟೋಲಿಯದಿಂದ ತಾಮ್ರ, ಹಿಮಾಲಯದಿಂದ ಮರ ಮತ್ತು ವಜ್ರ, ವೈಢೂರ್ಯಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಸಮಾಜವು ಶ್ರೇಣೀಕೃತ ವ್ಯವಸ್ಥೆಯನ್ನು ಹೊಂದಿತ್ತು. ರಾಜನು ತುತ್ತತುದಿಯಲ್ಲಿ, ಗುಲಾಮರು ಕಟ್ಟಕಡೆಯಲ್ಲಿ ಇದ್ದರು. ಈ ಎರಡು ವರ್ಗಗಳ ಮಧ್ಯದಲ್ಲಿ ಶ್ರೀಮಂತರು, ಸ್ವತಂತ್ರ ಜನರು, ನಾಗರಿಕ ಅಧಿಕಾರಿಗಳು, ವ್ಯಾಪಾರಿಗಳು, ಕುಶಲಕರ್ಮಿಗಳು ಇದ್ದರು. ವರ್ಗವ್ಯವಸ್ಥೆಯು ತುಂಬ ಕಠಿಣವಾಗಿತ್ತು. ಸಮಾಜದ ಮೇಲ್ವರ್ಗದ ಜನ ಹೆಚ್ಚು ಸವಲತ್ತುಗಳನ್ನು ಅನುಭವಿಸುತ್ತಿದ್ದರು.

ಅಂದಿನ ಕಾಲದ ಕಲೆಯ ಉನ್ನತಿಯನ್ನು ಮುದ್ರೆಗಳ ಆಕಾರದಲ್ಲಿ ಕಾಣಬಹುದಾಗಿದೆ. ಸುಮೇರಿಯನ್ನರ ಮುದ್ರೆಗಳು/ಅಚ್ಚುಗಳು ದುಂಡಾಕಾರದಲ್ಲಿವೆ. ವಿರುದ್ಧ ದಿಕ್ಕಿನಲ್ಲಿ ಚಿತ್ರಗಳನ್ನು ದುಂಡಾಕಾರದ ವಸ್ತುವಿನ ಮೇಲೆ ಕೆತ್ತುವುದರಿಂದ ಅಚ್ಚುಗಳನ್ನು ತಯಾರಿಸ ಲಾಗುತ್ತಿತ್ತು. ಈ ಅಚ್ಚನ್ನು ಹಸಿ ಮಣ್ಣಿನ ಮೇಲೆ ಅಡ್ಡಲಾಗಿ ಉರುಳಿಸಿದಾಗ ಅದು ಮುದ್ರೆಯನ್ನು ಒತ್ತುತ್ತದೆ. ಈ ಅಚ್ಚುಗಳಲ್ಲಿ ಕೋನಾಕೃತಿ ಮತ್ತು ಚಿತ್ರದ ಬರಹಗಳೆರಡೂ ಇವೆ. ಸಾವಿರಾರು ದುಂಡಾಕಾರದ ಅಚ್ಚುಗಳನ್ನು ಪತ್ತೆ ಹಚ್ಚಲಾಗಿದೆ.

ಆ ಕಾಲದ ಹಲವು ಕಲ್ಲಿನ ವಿಗ್ರಹಗಳು ಹಾಗೂ ಮೂರ್ತಿಗಳು ಸಿಕ್ಕಿವೆ. ಆದರೆ ಅವು ನೆಯತ್ರಾನಂದವನ್ನೇನೂ ನೀಡುವುದಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮೆಸಪಟೋಮಿ ಯಾದ ನಾಗರಿಕತೆಯು ಇಡೀ ವಿಶ್ವದಲ್ಲೇ ಮೊದಲ ನಾಗರಿಕತೆಯಾಗಿರುವುದರಿಂದ ಏಷ್ಯಾ ಭಾಗಕ್ಕೆ ಇದು ತನ್ನದೇ ಆದ ಕೊಡುಗೆಯನ್ನು ನೀಡಿದೆ. ಅದರಲ್ಲೂ ಸಾಹಿತ್ಯದಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಮೆಸಪಟೋಮಿಯಾದ ಉತ್ತಮ ಮಟ್ಟದ ಸಾಧನೆಗಳನ್ನು ನಾವು ಕಾಣಬಹುದಾಗಿದೆ. ಆದ್ದರಿಂದ ಅಂದಿನ ಕಾಲದ ಕಲೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ತುಂಬ ಸೀಮಿತವಾದ ಆಧಾರಗಳು ಮಾತ್ರ ದೊರೆತಿವೆ. ಪ್ರಾಯಶಃ ತಮ್ಮ ಕಲಾಪ್ರಕಾರಗಳನ್ನು ಬಳಸಿ ತಮ್ಮ ಪಂಥದ ದೇವತೆಗಳ ಮೂರ್ತಿಯನ್ನು ಕೆತ್ತಿದ್ದಿರಬಹುದು. ಈ ಮೂರ್ತಿಗಳನ್ನು ತುಂಬ ಬೆಲೆಬಾಳುವ ವಸ್ತುಗಳಿಂದ ಮಾಡಿದ್ದರು, ಆದ್ದರಿಂದ ಈವತ್ತಿಗೆ ಅವಾವು ಉಳಿದುಕೊಂಡಿಲ್ಲ. ದುರದೃಷ್ಟಕರವಾಗಿ ಸುಮೇರಿಯನ್ ಸಂಸ್ಕೃತಿಯ ಮೇರು ಕಲಾಕೃತಿಗಳನ್ನೂ ನಾಶಪಡಿಸಲಾಯಿತು.

 

ಪರಾಮರ್ಶನಗ್ರಂಥಗಳು

೧. ಪಾರ್ಕರ್, ಜೆಫ್ರಿ(ಸಂ). ೧೯೮೯. ದಿ ವಲ್ಡ್ ಇಲ್ಲಸ್ಟ್ರೇಟೆಡ್ ಹಿಸ್ಟರಿಹಾರ್ಪರ್ ಆಂಡ್ ಕೌಲ್ನ್ಯೂಯಾರ್ಕ್

೨. ಮೆಕ್‌ನಿಲ್, ವಿಲಿಯಂ ಹೆಚ್. ೧೯೯೦. ಎ ಹಿಸ್ಟರಿ ಆಫ್ ದಿ ಹ್ಯೂಮನ್ ಕಮ್ಯೂನಿಟಿ: ಪ್ರಿ ಹಿಸ್ಟರಿ ಟು ದಿ ಪೆಸೆಂಟ್, ನ್ಯೂಜರ್ಸಿ : ಪ್ರಿಂಚಿಸ್ ಹಾಲ್.