ಚೀನಾ ಗಣರಾಜ್ಯವು ವಿಸ್ತಾರದಲ್ಲಿ ಇಡೀ ಯುರೋಪ್‌ಗಿಂತಲೂ ದೊಡ್ಡದು ಮತ್ತು ಪ್ರಪಂಚದ ಒಟ್ಟು ಭೂ ಪ್ರದೇಶದ ೧/೧೩ ಕ್ಕೆ ಸಮನಾಗಿದೆ. ಇವರಲ್ಲಿ ಇಪ್ಪತ್ತ ಮೂರು ಪ್ರಾಂತ್ಯಗಳಿವೆ ಹಾಗೂ ಮಂಗೋಲಿಯ ಒಳಪ್ರದೇಶ ಮತ್ತು ಸಿನ್ ಕಿಯಾಂಗ್ ವಿಗುರ್ ಸ್ವಾಯತ್ತ ಪ್ರದೇಶಗಳಿವೆ.

ದಕ್ಷಿಣ ಚೀನಾದ ಸಾರಿಗೆಯ ಬಹುಭಾಗ ಒಳನಾಡು ಜಲಸಾರಿಗೆ ಮೂಲಕ ಆಗುತ್ತದೆ. ಶತಶತಮಾನಗಳಿಂದಲೂ ಇದೇ ನಡೆದುಬಂದಿದೆ. ಯಾಂಗ್ಟ್ ಜಿ ಮತ್ತು ಸಿಕಿಯಾಂಗ್ ನಂತಹ ಮಹಾನದಿಗಳು, ಅವುಗಳ ಉಪನದಿಗಳು ಮತ್ತು ಕಾಲುವೆಗಳೇ ಈ ಸಾರಿಗೆಗೆ ಜಲಮಾರ್ಗಗಳು. ಉತ್ತರ ಚೀನಾ ಪರ್ವತಗಳ ಪ್ರದೇಶ. ಇಲ್ಲಿ ರೇಷ್ಮೆಮಾರ್ಗ ಅಭಿವೃದ್ದಿಯಾದಾಗಿನಿಂದ ಬಂಡಿ ಸಾರಿಗೆಯನ್ನು ಬಳಸಲಾಗುತ್ತಿದೆ.

ಚೀನಾದ ಪ್ರಾಚೀನ ನಾಗರಿಕತೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ದೊರೆಯುವ ಮೂಲಗಳು ಬಹಳ ಕಡಿಮೆ. ಏಕೆಂದರೆ, ಚೀನಾದ ನಾಗರಿಕತೆ ಅನೇಕ ಭಿನ್ನ ಭಿನ್ನ ಬೇರುಗಳಿಂದ ಹಬ್ಬಿ ಬೆಳೆದಿದೆ. ಇವುಗಳಲ್ಲಿ ಪ್ರಾಗೈತಿಹಾಸಿಕ ಶೋಧನೆಯಿಂದ ತಿಳಿದು ಬಂದ ಸಂಸ್ಕೃತಿಗಳಲ್ಲಿ ಕರಾರುವಕ್ಕಾಗಿ ಯಾವುದು ಚೀನಿ ನಾಗರಿಕತೆಯ ಅತಿ ಪ್ರಾಚೀನ ಮೂಲ ಎಂಬುದನ್ನು ವಿಂಗಡಿಸಿ ನೋಡುವುದು ನಿಷ್ಕೃಷ್ಟವಾಗಿ ಅರ್ಥೈಸಬೇಕಾದ ವಿಷಯ.

ಚೀನಾದ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ನಡೆಸಿದ ಪ್ರಾಚ್ಯವಸ್ತು ಶೋಧನೆಗಳಲ್ಲಿ ಚೀನಾದ ಅನೇಕ ಪ್ರಾಚೀನ ಕೃಷಿಸಂಸ್ಕೃತಿಗಳು ಬೆಳಕಿಗೆ ಬಂದಿವೆ. ಈ ಹೊಸ ಸಂಶೋಧನೆಗಳಿಂದ ತಜ್ಞರು ಚೀನಾ ದೇಶದ ಸಾಂಪ್ರದಾಯಿಕ ಇತಿಹಾಸವನ್ನು ಪುನರ್ ವಿಮರ್ಶೆ ಮಾಡಬೇಕಾಗಿ ಬಂದಿದೆ. ಚೀನಾದ ಈ ಸಾಂಸ್ಕೃತಿಕ ನಿವೇಶನಗಳಿಂದ, ಚೀನಾದೇಶದ ಪ್ರಾಚೀನ ಇತಿಹಾಸದಲ್ಲಿ ಹೊಸ ವಿಚಾರಗಳು ಸ್ಪಷ್ಟಗೊಳ್ಳುತ್ತಿವೆ ಮತ್ತು ಹೊಸ ವ್ಯಾಖ್ಯಾನಗಳಿಗೆ ಎಡೆ ಮಾಡಿಕೊಡುತ್ತಿವೆ.

ಚೀನಾದ ಪ್ರಾಗಿತಿಹಾಸ ಮಾನವನ ಉಗಮದ ಕಾಲದಷ್ಟೇ ಪ್ರಾಚೀನ ಮತ್ತು ಪೂರ್ವಶಿಲಾಯುಗ ಮತ್ತು ಮಧ್ಯಶಿಲಾಯುಗದ ಕಾಲದಷ್ಟು ಹಿಂದಿನ ಅನೇಕ ಸಂಸ್ಕೃತಿಗಳನ್ನು ಹೊಂದಿದೆ. ಆದರೆ ಈ ಲೇಖನದಲ್ಲಿ ನವಶಿಲಾಯುಗದ ಆರಂಭದಿಂದ ಒಂದು ಸಂಕ್ಷಿಪ್ತ ವಿವರ ನೀಡಲಾಗಿದೆ ಮತ್ತು ತರುವಾಯ ಚೀನಾದ ಆರಂಭದ ನಾಗರಿಕತೆಯನ್ನು ಕುರಿತು ಚರ್ಚಿಸಲಾಗುತ್ತದೆ.

ನವಶಿಲಾಯುಗದ ಸಂಸ್ಕೃತಿಗಳ ಆರಂಭ

ಹೊಲೋಸೀನ್ ಯುಗದ (ಸುಮಾರು ಕ್ರಿ.ಪೂ.೧೧,೦೦೦) ಪ್ರಾರಂಭದಲ್ಲಿ ಚೀನಾ ದೇಶದಲ್ಲಿ ನವಶಿಲಾಯುಗದ ಸಂಸ್ಕೃತಿ ಕಾಣಬಂದಿತು. ಪ್ರಾಚ್ಯವಸ್ತು ಸಂಶೋಧಕರ ಪ್ರಕಾರ ಚೀನಾದ ಸಂಸ್ಕೃತಿಯಲ್ಲಿ ಪ್ರಾಚೀನ ಶಿಲಾಯುಗದ ಕೊನೆಕೊನೆಯ ಭಾಗದಿಂದ ನವಶಿಲಾಯುಗವು ಬೆಳೆದು ಬಂದಿತು (ಸುಮಾರು ಕ್ರಿ.ಪೂ.೫೦,೦೦೦-೧೦,೦೦೦ವರೆಗೆ). ಇದು ಹಳೆಯ ಶಿಲಾಯುಗದ ಮತ್ತು ನವಶಿಲಾಯುಗದ ಹಂತಗಳ ನಡುವಿನ ಪಿಂಗಾಣಿಪೂರ್ವ ಸಂಸ್ಕೃತಿಯನ್ನು ಸೂಚಿಸುತ್ತದೆ. ಇಲ್ಲಿ ಮಧ್ಯಶಿಲಾಯುಗದ ಕುರುಹೇ ಇಲ್ಲ.

ಹೀಗಾಗಿ ಚೀನಾದಲ್ಲಿನ ನವಶಿಲಾಯುಗದ ಪ್ರಾರಂಭಿಕ ಹಂತವು ಕ್ರಿ.ಪೂ.೧೦,೦೦೦ ದಿಂದ ೮,೦೦೦ ವರೆಗಿನ ಅವಧಿಯಲ್ಲಿ ಬರುತ್ತದೆ. ಪ್ರಾರಂಭಿಕ ಹಂತವು ಪಿಂಗಾಣಿ ಪೂರ್ವ ಕಾಲದ್ದಾಗಿದ್ದು ಈ ಅವಧಿಯ ಉತ್ತರ ಭಾಗದಲ್ಲಿ, ಪರಿಪಕ್ವದಲ್ಲಿದ್ದ ಕುಂಭ ಗಾರಿಕೆಯ ಅವಶೇಷಗಳು ಕಾಣಬರುತ್ತವೆ. ದಕ್ಷಿಣ, ಪಶ್ಚಿಮ ಮತ್ತು ಉತ್ತರ ಚೀನಾಗಳಲ್ಲಿ ಅವನ್ನು ಬೆಳಕಿಗೆ ತರಲಾಗಿದೆ. ಕ್ರಿ.ಪೂ.೮೦೦೦ದಿಂದ ೫೦೦ದವರೆಗಿನ ಕಾಲಾವಧಿಯನ್ನು ಮಧ್ಯಕಾಲೀನ ನವಶಿಲಾ ಯುಗದ ಹಂತ ಎಂದು ಕರೆಯಲಾಗುತ್ತದೆ. ಹೆಚ್ಚು ಪ್ರಗತಿ ಹೊಂದಿದ ನೆಲಸುದಾಣಗಳು ಚೀನಾದುದ್ದಕ್ಕೂ ಅನೆಯಕ ಕಡೆ ಬೆಳೆದವು. ಈ ಕಾಲದ ಕುಂಭಾಗಾರಿಕೆ ಆರಂಭದ ಒರಟು ಮಾದರಿಗಳಿಗಿಂತ ಉತ್ತಮವಾಗಿದ್ದವು. ಈ ಕಾಲದ ಶಿಲಾಯುಧಗಳು ಉತ್ತಮ ಕೆಲಸಗಾರಿಕೆಯನ್ನು ನಯಗಾರಿಕೆಯನ್ನು ಹೊಂದಿದ್ದವು.

ಉತ್ತರ ಹೆನಾವ್ ಮತ್ತು ದಕ್ಷಿಣ ಹೆಬಿ ಪ್ರಾಂತ್ಯಗಳಲ್ಲಿ ಮಾಡಿದ ಶೋಧನೆಗಳಿಂದ ಅಪ್ರಬುದ್ಧ ಕೃಷಿಗಾರಿಕೆಯ ಸೂಚನೆ ಕಾಣಬರುತ್ತದೆ. ಇಲ್ಲಿ ನವಣೆ ಪ್ರಮುಖವಾದ ಬೆಳೆ. ಮಧ್ಯ ನವಶಿಲಾಯುಗದಲ್ಲಿ ಕೆಲವು ನಿರ್ಮಿತಿಗಳು ಸಹ ಕಂಡುಬಂದಿದ್ದು ಮನೆಗಳನ್ನು ದೊಡ್ಡ ಹಜರ ಮತ್ತು ಕೊಠಡಿಗಳಾಗಿ ವಿಂಗಡಿಸಿರುವುದು ಕಾಣಬರುತ್ತದೆ. ಮಧ್ಯಮ ನವಶಿಲಾಯುಗದಲ್ಲಿ ಭೂ ಭಾಗದಲ್ಲಿ ಅನೆಯಕ ಶಿಲಾಯುಧಗಳು ಮತ್ತು ಮಡಿಕೆ ಕುಡಿಕೆ ಗಳು ದೊರೆತಿವೆ. ಈ ಅವಶೇಷಗಳಲ್ಲಿ ಮೂಳೆಗಳು ಮತ್ತು ಮೂಳೆಯ ಆಯುಧಗಳು ಸೇರಿವೆ. ಇವರ ಜೊತೆಗೆ ಕೆಲವು ಜೇಡ್ ಕಲ್ಲಿನ ಕರಕುಶಲ ವಸ್ತುಗಳೂ ಇವೆ.

ಉತ್ತರ ನವಶಿಲಾಯುಗದ ನಿವಾಸಿಗಳು

ಚೀನಾದಲ್ಲಿ ನವಶಿಲಾಯುಗದ ಉತ್ತರಭಾಗ ಸುಮಾರು ಕ್ರಿ.ಪೂ.೫೦೦೦ದಿಂದ ೩೫೦೦ರ ಕಾಲದ್ದು. ಸುಮಾರು ಕ್ರಿ.ಪೂ. ೩೫೦೦ರಿಂದ ಇತಿಹಾಸ ಪ್ರಾರಂಭವಾಗುತ್ತದೆ. ಆದರೆ ಇನ್ನೊಂದು ಗುಂಪಿನ ವಿದ್ವಾಂಸರ ಪ್ರಕಾರ ತಾಮ್ರಶಿಲಾ ಹಂತವು ಲಾಂಗ್ ಶಾನ್ ಸಂಸ್ಕೃತಿಯೊಂದಿಗೆ (ಸು.ಕ್ರಿ.ಪೂ.೨೬೦೦-೨೧೦೦) ಪ್ರಾರಂಭವಾಗುತ್ತದೆ. ಈ ಅವಧಿ ಉತ್ತರ ನವಶಿಲಾಯುಗದ ಸರಳ ಹಳ್ಳಿಗಳಿಂದ ಬೃಹತ್ ನಗರಗಳ ಬೆಳವಣಿಗೆಯ ಕಾಲ. ಅಂದರೆ ತಾಮ್ರಶಿಲಾ ಸಂಸ್ಕೃತಿಯ ಅಂತ್ಯ ಭಾಗ.

ಚೀನಾದಲ್ಲಿ ನವಶಿಲಾಯುಗದ ಉತ್ತರ ಭಾಗದಲ್ಲಿ ಹಳ್ಳಿಗಳ ಬೆಳವಣಿಗೆಯ ಜೊತೆ ಜೊತೆಯಲ್ಲೇ ಐಹಿಕ ಸಂಸ್ಕೃತಿಯಲ್ಲೂ ಪ್ರಗತಿ ಉಂಟಾಗಿದೆ. ಈ ಅವಧಿಯಲ್ಲಿ ನವಣೆ ಮತ್ತು ಭತ್ತದ ವ್ಯವಸಾಯ ಕಂಡುಬರುತ್ತದೆ. ನೇಗಿಲು, ಕುಂಟೆ ಇತ್ಯಾದಿ ಕೃಷಿ ಉಪಕರಣಗಳ ಬಳಕೆ ಪ್ರಾರಂಭವಾಗುತ್ತದೆ. ಪ್ರಾಣಿ ಸಾಕುವಿಕೆ ಈ ಸಂಸ್ಕೃತಿಯ ಇನ್ನೊಂದು ಪ್ರಮುಖ ಅಂಶ. ಮನೆಯಲ್ಲಿ ಸಾಕಲಾರಂಭಿಸಿದ ಪ್ರಾಣಿಗಳೆಂದರೆ ಹಂದಿ, ನಾಯಿ, ದನಕರು ಮತ್ತು ಕುರಿ.

ಈ ಹಂತದ ಕೆಲವು ಶೋಧಗಳಿಂದ ಕೆಲವು ಧಾರ್ಮಿಕ ಆಚರಣೆಗಳು ಇರುವುದೂ ಕಂಡುಬರುತ್ತದೆ. ಉತ್ಖನನ ನಡೆಸಿದ ಅನೇಕ ನಿವೇಶನಗಳಲ್ಲಿ ಅನೇಕ ಚಚ್ಚೌಕ ಅಥವಾ ಆಯಾತಾಕಾರದ ಪೂಜ ವೇದಿಕೆಗಳಿದ್ದುದು ಕಂಡುಬಂದಿದೆ (ಡಾಂಗ್ ಶನ್ ಜುಯಿ ನಿವೇಶನ). ಇಲ್ಲಿ ಪೂಜ ವೇದಿಕೆಯ ಮೇಲೆ ಮಡಿಕೆ ಕುಡಿಕೆಗಳು, ವಿವಿಧ ಗಾತ್ರದ ಹೆಣ್ಣು ದೈವಗಳ ಮೂರ್ತಿಗಳು ಕಂಡುಬಂದಿವೆ. ಅನೇಕ ಪ್ರಾಣಿಗಳ ಮೂಳೆಗಳೂ ಪತ್ತೆಯಾಗಿವೆ. ಇದರಿಂದ ಪ್ರಾಣಿಬಲಿ ಪದ್ಧತಿ ಇತ್ತೆಂಬುದು ಗೊತ್ತಾಗುತ್ತದೆ. ವಿದ್ವಾಂಸರ ಪ್ರಕಾರ ಇವು ಬಹುಶಃ ಭೂಮಿ, ಆಕಾಶ ಮತ್ತು ಪೂರ್ವಿಕರನ್ನು ಆರಾಧಿಸಲು ಬಳಸುತ್ತಿದ್ದ ಪೂಜ ವೇದಿಕೆಗಳು.

ನವಶಿಲಾಯುಗದ ಉತ್ತರ ಭಾಗದಲ್ಲಿ ಅಪ್ರಬುದ್ಧ ಲೋಹಗಾರಿಕೆ ಮತ್ತು ತಾಮ್ರದ ಕುರುಹುಗಳನ್ನು ಈಗಾಗಲೇ ಕಂಡಿದ್ದರೂ ಈ ಅವಧಿಯಲ್ಲಿ ಲೋಹಗಾರಿಕೆಯಲ್ಲಿ ಇನ್ನಷ್ಟು ಪ್ರಗತಿ ಆಗಿರುವುದನ್ನು ಕಾಣಬಹುದು. ಅದರಲ್ಲೂ ಎರಕ ಕಲೆ ಮತ್ತು ಕುಲುಮೆ ತಂತ್ರಕಲೆಯಲ್ಲಿ ಪ್ರಗತಿ ಕಾಣುತ್ತದೆ. ತಂತ್ರಜ್ಞಾನದ ಪ್ರಗತಿಯು ವ್ಯವಸ್ಥಿತವಾಗಿ ನೆಲೆ ಯೂರಲು ಮತ್ತು ಕುಂಭಕಲೆಯ ತಯಾರಿಕೆ ಸುಧಾರಿಸಲು ಸಹಾಯ ಮಾಡಿತು. ಈ ಕಾಲದ ಕುಂಭಕಲೆ ಕುಂಬಾರ ಚಕ್ರದಿಂದ ತಯಾರಿಸಲಾದದ್ದು ಮತ್ತು ಇನ್ನಷ್ಟು ಕುಸುರಿ ಕೆಲಸ ಹಾಗೂ ವರ್ಣವಿನ್ಯಾಸಗಳನ್ನು ಹೊಂದಿರುತ್ತದೆ. ಡ್ವೆಂಕು ಸಂಸ್ಕೃತಿಯ ಕುಂಭಕಲೆಯಲ್ಲಿ ಅಕ್ಷರ ವಿನ್ಯಾಸಗಳು ಕಂಡುಬಂದಿವೆ. ಇದು ಚೀನಾದ ಲಿಪಿಯ ಮೂಲದ ಅಧ್ಯಯನಕ್ಕೆ ಬಹಳ ಮಹತ್ವಕಾರಿಯಾದದ್ದು.

ವಾಸ್ತುಕಲೆಯಲ್ಲಿ, ಉತ್ತರ ನವಶಿಲಾಯುಗದ ಕಾಲದ ಅಭಿವೃದ್ದಿಯಲ್ಲಿ ನೆಲ ಹಾಗೂ ಗೋಡೆಗಳಿಗೆ ಸುಣ್ಣಗಾರೆ ಗಿಲಾವು ಮಾಡಿರುವುದು ಕಂಡುಬರುತ್ತದೆ. ಕುಟ್ಟಿ ಘಟ್ಟಿಸಿದ ಮಣ್ಣನ್ನು ಅಡಿಪಾಯಕ್ಕೆ ಹಾಕಲು ಬಳಸಲಾಗುತ್ತಿತ್ತು. ಅದರ ಮೇಲೆ ಮರದ ನಿರ್ಮಿತಿಗಳನ್ನು ಕಟ್ಟಲಾಗುತ್ತಿತ್ತು. ಈ ತಂತ್ರವನ್ನು ಈಗಲೂ ಚೀನಾದಲ್ಲಿ ಬಳಸ ಲಾಗುತ್ತಿದೆ.

ಚೀನಾದ ಆರಂಭದ ನಾಗರಿಕತೆ

ತಾಮ್ರ ಶಿಲಾಯುಗದ ಸಂಸ್ಕೃತಿಯ ತರುವಾಯ ಕಂಚಿನಯುಗ ಪ್ರಾರಂಭವಾಯಿತು. ವಾಸ್ತವವಾಗಿ ಚೀನಾದ ಪ್ರಾರಂಭಿಕ ನಾಗರಿಕತೆಯ ಆರಂಭದ ಘಟ್ಟವನ್ನು ಇದು ಪ್ರತಿನಿಧಿಸುತ್ತದೆ. ಮೊದಲೇ ಹೇಳಿದಂತೆ ಚೀನಿ ಇತಿಹಾಸದ ಆರಂಭದ ನಾಗರಿಕತೆಯನ್ನು ಪುನರ್ ರಚಿಸಲು ಸಿಗುವ ಆಧಾರಗಳು ಅತ್ಯಲ್ಪ. ಈ ಆಧಾರಗಳೂ ಪ್ರಮಾಣಭೂತ ವಾದವಲ್ಲ. ಏಕೆಂದರೆ ನಾವು ಹೇಳುತ್ತಿರುವ ಆರಂಭದ ಇತಿಹಾಸ ಐತಿಹ್ಯಗಳನ್ನು ಆಧರಿಸಿರುವಂತಹುದು. ಚೀನಾದ ಆರಂಭಿಕ ಇತಿಹಾಸ ಮೂರು ಐತಿಹಾಸಿಕ ವಂಶಾವಳಿ ಯನ್ನು ಕುರಿತು ಹೇಳುತ್ತದೆ. ಅಂದರೆ ಕ್ಸಿಯಾ, ಶಾಂಗ್ ಮತ್ತು ಜವ್ ವಂಶಗಳು. ಇತ್ತೀಚೆಗೆ ಪ್ರಾಗೈತಿಹಾಸಿಕ ಉತ್ಖನನ ನಿವೇಶನಗಳಿಗೂ ಈ ವಂಶಗಳಿಗೂ ಸಂಬಂಧ ಕಲ್ಪಿಸಲಾಗುತ್ತಿದೆ.

ಆದರೆ ಕ್ಸಿಯಾ ವಂಶದೊಂದಿಗೆ ಎರ್ಲಿಕೌವ್ ನಿವೇಶನಕ್ಕೆ ಸಂಬಂಧ ಕಲ್ಪಿಸಿರುವುದು ಎಲ್ಲೆಡೆ ಅಂಗೀಕೃತವಾಗಿಲ್ಲ. ಏಕೆಂದರೆ ಬಹಳ ಹಿಂದಿನ ಕಾಲದ ಐತಿಹ್ಯಗಳು ಮೂವರು ಸಂತರು ಹಾಗೂ ಐದು ಚಕ್ರವರ್ತಿಗಳ ಬಗ್ಗೆ ಹೇಳುತ್ತವೆ. ಇವರನ್ನು ಯಾವುದೇ ಸಂಸ್ಕೃತಿ ಅಥವಾ ಪ್ರಾಗೈತಿಹಾಸಿಕ ನಿವೇಶನದೊಂದಿಗೆ ನಿರ್ದಿಷ್ಟವಾಗಿ ಸಂಬಂಧ ಕಲ್ಪಿಸಲಾಗದಿದ್ದರೂ ಈ ಪೂರ್ವದ ವಂಶಾವಳಿಗಳಿಗಿಂತ ಹಿಂದೆ, ನಾಗರಿಕತೆ ಮತ್ತು ಸಂಸ್ಕೃತಿಯ ಕೆಲವು ಗುಣಲಕ್ಷಣಗಳನ್ನು ತೋರಿಸುವ ನಿವೇಶನಗಳಿದ್ದವು ಎಂಬುದು ಸ್ಪಷ್ಟ. ಈಶಾನ್ಯದ ಲಾಂಗ್ ಶಾನ್ ಮತ್ತು ಲಾವರ್ ಕ್ಸಿಯಾಜಿಯಡಿಯಾನ್ ಪೂರ್ವದ ವೆಂಕೂ ಭಾಗದ ಲಿಂಗ್ ಜೂ ಮತ್ತು ನೈರುತ್ಯದ ಪೂರ್ವ ಸಾನ್ ಸಿಂಗ್ ದುಯಿ ಕೆಲವು ನಿದರ್ಶನಗಳಾಗಿವೆ.

ಹೀಗೆ ಮೇಲೆ ಹೇಳಿದ ಅಪ್ರಬುದ್ಧ ನಾಗರಿಕತೆ ಚೀನಾದಲ್ಲಿ ಮುಂದಿನ ಬದಲಾವಣೆ ಗಳಾಗುವುದಕ್ಕೆ ತಕ್ಕ ನೆಲೆಗಟ್ಟನ್ನು ಒದಗಿಸಿದವು ಮತ್ತು ಅಗೋಚರ ರೀತಿಯಲ್ಲಿ ವಂಶಾವಳಿಗಳ ಯುಗದಲ್ಲಿ ಲೀನವಾದವು.

ಕ್ಸಿಯಾ ಮತ್ತು ಶಾಂಗ್

ಕ್ಸಿಯಾ ವಂಶವನ್ನು ಕುರಿತು ಐತಿಹಾಸಿಕ ಪುಸ್ತಕಗಳಲ್ಲಿ ಹೇಳಲಾಗಿದೆ. ತೀರ ಇತ್ತೀಚಿನವರೆಗೆ ಅದನ್ನು ಪೌರಾಣಿಕ ವಂಶ ಎಂದು ಪರಿಗಣಿಸಲಾಗಿತ್ತು. ಆದರೆ ಎರ್ಲಿತಾವ್ ನಲ್ಲಿನ ಶೋಧನೆಗಳು ಕ್ಸಿಯಾವಂಶಕ್ಕೆ ಸಂಬಂಧಪಟ್ಟಿವೆ ಹಾಗೂ ಈ ನಿವೇಶನ ಕ್ರಿ.ಪೂ.೨೦೦೦ದ ಆರಂಭದಷ್ಟು ಪುರಾತನ ಎಂದು ಗುರುತಿಸಲಾಗಿದೆ. ನಿಸ್ಸಂದಿಗ್ಧವಾದ ಹಾಗೂ ಭೂಪದರಗಳ ಪುರಾವೆಗಳಿಂದ ಇದು ಕ್ಸಿಯಾ ವಂಶಾವಳಿಗೆ ಸರಿ ಹೊಂದುತ್ತದೆ. ಇತ್ತೀಚಿನ ಉತ್ಖನನಗಳಿಂದ ಈ ನಿವೇಶನದಲ್ಲಿ ಒಂದು ನಗರದ ಸುತ್ತಲೂ ಕೋಟೆ, ಒಳಗಡೆ ದೊಡ್ಡ ಮತ್ತು ಚಿಕ್ಕಮನೆಗಳು, ಸಂಗ್ರಹ ಗುಂಡಿಗಳು, ಬಾವಿಗಳು ಹಾಗು ರಸ್ತೆಗಳು ಕಂಡುಬಂದಿವೆ. ಮತ್ತೊಂದು ಸ್ವಾರಸ್ಯಕರ ಅಂಶವೆಂದರೆ ವಾಸ್ತುಶಿಲ್ಪವುಳ್ಳ ಕಟ್ಟಡವೊಂದರ ಪತ್ತೆ. ಇದು ಅರಮನೆ ಇರಬಹುದೆಂದು ಊಹಿಸಲಾಗಿದೆ. ಕೆಲವು ಗೋರಿಗಳೂ ಪತ್ತೆಯಾಗಿವೆ. ಅವುಗಳಲ್ಲಿ ನರಬಲಿಯ ಕುರುಹುಗಳು ಕಂಡುಬಂದಿವೆ. ಶಿವದಾನಿಗಳ ಕುರುಹುಗಳು ಮತ್ತು ನಾಯಿಯ ಅಸ್ಥಿಪಂಜರ ಈ ಕಾಲದಲ್ಲಿ ಪತ್ತೆಯಾದ ಮಹತ್ವಪೂರ್ಣ ಅಂಶಗಳು. ಜೇಡ್ ಶಿಲೆಯನ್ನು ವಿವಿಧ ಆಕಾರದಲ್ಲಿ ಕೊರೆಯಲಾಗಿದೆ. ಕವಡೆಗಳು, ಮರದ ಮೇಲೆ ಅರಗಿನ ಬಣ್ಣ ಮತ್ತು ಟಾರ್ಕಾಯಿಷ್ ಹುದುಗು ಕಲೆಯುಳ್ಳ ವಸ್ತುಗಳು ಈ ಕಾಲದ ಇನ್ನಿತರ ಸ್ವಾರಸ್ಯಕರ ಅಂಶಗಳು. ಬರಹವಿಲ್ಲದ ಭವಿಷ್ಯವಾಣಿ ಮೂಳೆಗಳು ಸಹ ಕಂಡುಬಂದಿವೆ.