ಸಿಂಧು ನಾಗರಿಕತೆ ಅಥವಾ ಹರಪ್ಪನ್ ನಾಗರಿಕತೆ ಕ್ರಿಸ್ತ ಪೂರ್ವ ಮೂರು ಸಹಸ್ರ ವರ್ಷಗಳ ಮಧ್ಯಭಾಗದಲ್ಲಿ, ಈಚಿನ ಪಾಕಿಸ್ತಾನ ಮತ್ತು ವಾಯುವ್ಯ ಭಾರತದ ಸಿಂಧು ಕಣಿವೆಯ ಬಯಲು ಪ್ರದೇಶದಲ್ಲಿ ಕಾಣಿಸಿಕೊಂಡಿತು. ಈಗ ಪೂರ್ಣ ವಿಕಸಿತ ಹರಪ್ಪನ್ ಸಂಸ್ಕೃತಿಯ ಅವಧಿಯನ್ನು ಕ್ರಿಸ್ತ ಪೂರ್ವ ೨೫೦೦ರಿಂದ ೨೦೦೦ ಎಂದು ಅಂದಾಜು ಮಾಡಲಾಗಿದೆ. ಮೊಹೆಂಜೋದಾರೊ ಮತ್ತು ಹರಪ್ಪ ಪ್ರದೇಶಗಳು ಬೃಹತ್ ನಗರ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದ್ದಂಥ ಕಾಲ ಅದು. ಸಿಂಧು ನಾಗರಿಕತೆಯನ್ನು ಕೇವಲ ಪ್ರಾಚ್ಯ ವಸ್ತುಗಳ ಸಾಕ್ಷ್ಯಾಧಾರಗಳ ಮೇಲೆ ಅವಲಂಬಿಸಿ ಮಾತ್ರವೇ ಅರ್ಥಮಾಡಿಕೊಳ್ಳ ಬೇಕಾಗಿರುವುದು ದುರಾದೃಷ್ಟಕರ. ಹರಪ್ಪನ್ ನಾಕರಿಕತೆಯ ಜನರು ಬರಹ ಬಲ್ಲವರಾಗಿ ದ್ದರೂ ಸಹ ಅವರ ಲಿಪಿಯನ್ನು ಪೂರ್ಣವಾಗಿ ಅರ್ಥಮಾಡಿ ಕೊಳ್ಳಲು ಆಗಿಲ್ಲ. ವಿದ್ವಾಂಸರು ಈಗಲೂ ಸಹ ಅವರ ಲಿಪಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಏಕಾಭಿಪ್ರಾಯಕ್ಕೆ ಬಂದಿಲ್ಲ.

ಪಾಕಿಸ್ತಾನದ ಪಶ್ಚಿಮ ಪಂಜಬಿನಲ್ಲಿರುವ ರಾವಿ ನದಿಯ ದಡದ ಮೇಲೆ ಹರಪ್ಪ ಎಂಬ ಸ್ಥಳದಲ್ಲಿ ದೊರೆತ ವಿಶಿಷ್ಟ ಚೌಕಾಕಾರದ ಅಂಚೆ ಮೊಹರುಗಳಿಂದ, ೧೯ನೆಯ ಶತಮಾನದಲ್ಲಿ ಈ ಸಂಶೋಧನಾ ಕಾರ್ಯ ಮೊದಲಾಯಿತು. ಮೇಜರ್ ಕ್ಲಾರ್ಕ್ ಎಂಬುವರು ೧೮೭೫ರಷ್ಟು ಹಿಂದೆಯೇ ಈ ಮೊಹರನ್ನು ಸಂಗ್ರಹಿಸಿದ್ದರು. ಕನ್ನಿಂಗ್‌ಹ್ಯಾಮ್ ಎಂಬುವರು ಕೂಡ ಇದನ್ನು ಸಂಗ್ರಹಿಸಿದ್ದರು. ಆದರೆ ಅವು ಮುಖ್ಯವಾಗಿ ಐತಿಹಾಸಿಕ ಮಹತ್ವವುಳ್ಳ(ಪ್ರೋ ಹಿಸ್ಟಾರಿಕಲ್) ಮೊಹರುಗಳು ಎಂಬುದನ್ನು ಅವರು ಗುರುತಿಸದೆ ಹೋದರು.

ಭಾರತದ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆಯ ಮಹಾ ನಿರ್ದೇಶಕರಾಗಿದ್ದ ಸರ್ ಜನ್ ಮಾರ್ಷಲ್ ಅವರು ೧೯೨೦ರಿಂದ ೧೯೨೧ರ ಅವಧಿಯಲ್ಲಿ ತಮ್ಮ ಸಹೋದ್ಯೋಗಿ ಯಾದ ರಾಯ್ ಬಹಾದ್ದೂರ್ ದಯಾರಾಮ ಸಾಹನಿ ಎಂಬುವರನ್ನು ಹರಪ್ಪ ಸ್ಥಳದಲ್ಲಿ ಉತ್ಖನನಕ್ಕಾಗಿ ಕಳುಹಿಸಿದರು. ಸಾಹನಿಯವರಿಗೆ ಮತ್ತಷ್ಟು ಮೊಹರುಗಳು ದೊರೆತವು. ಆದರೆ ಅವುಗಳಿಗೆ ಸಂಬಂಧ ಕಲ್ಪಿಸಿ ಯಾವುದೇ ತೀರ್ಮಾನಕ್ಕೆ ಬರಲಾಗಲಿಲ್ಲ. ಇದಕ್ಕೆ ಒಂದು ವರ್ಷ ಮೊದಲು ಭಾರತ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆಯ ಪಶ್ಚಿಮ ವಲಯದ ಅಧೀಕ್ಷಕ ಪ್ರಾಚ್ಯವಸ್ತು ಶಾಸ್ತ್ರಜ್ಞರಾದ ರಾಖಲ್ ದಾಸ್ ಬ್ಯಾನರ್ಜಿ ಎಂಬುವರು ಸಿಂಧ್ ಪ್ರಾಂತ್ಯದ ನದಿಯ ದಡದ ಮೇಲೆ ಹರಪ್ಪ ಎಂಬ ಸ್ಥಳಕ್ಕೆ ಆಗ್ನೇಯ ದಿಕ್ಕಿನಲ್ಲಿ ೪೦೦ ಮೈಲಿಗಳಷ್ಟು ದೂರದ ಮೊಹೆಂಜೋದಾರೊ ಎಂಬ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಈ ಸ್ಥಳದ ಹೆಸರನ್ನು ೧೯೧೧-೧೨ರಲ್ಲಿ ಪ್ರಥಮ ಬಾರಿಗೆ ದಾಖಲು ಮಾಡಲಾಗಿದ್ದರೂ ಅದರ ಪ್ರಾಮುಖ್ಯತೆಯನ್ನು ಮನಗಂಡಿರಲಿಲ್ಲ. ಬ್ಯಾನರ್ಜಿಯವರು ಮೆಹೆಂಜೊದಾರೊನಲ್ಲಿ ಸಣ್ಣ ಪ್ರಮಾಣದ ಉತ್ಖನನ ಕಾರ್ಯವನ್ನು ಮಾಡಿದರು ಮತ್ತು ಬರಹವುಳ್ಳ ಅಂಚೆ ಮೊಹರುಗಳಷ್ಟೇ ಅಲ್ಲದೆ ಇನ್ನೂ ಕೆಲವು ವಸ್ತುಗಳನ್ನು ಬೆಳಕಿಗೆ ತಂದರು.

ಮತ್ತೊಮ್ಮೆ ೧೯೨೪-೨೬ರ ಅವಧಿಯಲ್ಲಿ ಕೆಲವು ತಂಡಗಳು ಎರಡೂ ಸ್ಥಳಗಳಲ್ಲಿ ಉತ್ಖನನ ಕಾರ್ಯವನ್ನು ಕೈಗೊಂಡವು. ಭಾರತ ಪ್ರಾಚ್ಯ ಮತ್ತು ಸಂಶೋಧನಾ ಇಲಾಖೆಯ ಮಹಾ ನಿರ್ದೇಶಕರಾದ ಜನ್ ಮಾರ್ಷಲ್‌ರವರು ೧೯೨೪ರ ಸೆಪ್ಟೆಂಬರ್ ೨೦ರಲ್ಲಿ ಇಲ್ಲಸ್ಟ್ರೇಟೆಡ್ ಲಂಡನ್ ನ್ಯೂಸ್ ಎಂಬ ಪತ್ರಿಕೆಯಲ್ಲಿ ತಮ್ಮ ಪ್ರಥಮ ಲೇಖನವನ್ನು ಬರೆದರು. ಅದರಲ್ಲಿ ‘‘ಸಿಂಧು ಕಣಿವೆಯಲ್ಲಿ ಮೆಸಪಟೋಮಿಯಾದಷ್ಟೇ ಪ್ರಾಚೀನವಾದ ಮತ್ತು ಅಷ್ಟೇ ಮಹತ್ತಾದ ಒಂದು ನಾಕರೀಕತೆ ಬೆಳಕಿಗೆ ಬಂದಿದೆ’’ ಎಂದು ತಿಳಿಸಿದರು. ಈ ಮಾತು ವಿಶ್ವದ ಎಲ್ಲ ಪ್ರಾಚ್ಯವಸ್ತು ಸಂಶೋಧಕರನ್ನು ಆಶ್ಚರ್ಯಗೊಳಿಸಿತು. ಈ ಲೇಖನ ವನ್ನು ೧೯೨೨ರಲ್ಲಿ ಹರಪ್ಪದಲ್ಲಿ ದಯಾರಾಮ್ ಸಾಹನಿಯವರು ಮತ್ತು ಮೊಹೆಂಜೋ ದಾರೊನಲ್ಲಿ ಆರ್.ಡಿ.ಬ್ಯಾನರ್ಜಿಯವರು ನಡೆಸಿದ ಪ್ರಾಥಮಿಕ ಉತ್ಖನನವನ್ನು ಆಧರಿಸಿ ಬರೆದುದಾಗಿತ್ತು. ೧೯೩೧ರವರೆಗೆ ಸರ್ ಜನ್ ಮಾರ್ಷಲ್, ಇ.ಜೆ.ಹೆಚ್.ಮ್ಯಾಕ್‌ರವರು ಮೊಹೆಂಜೋದಾರೊದಲ್ಲಿ ಮತ್ತು ಎಮ್.ಎಸ್.ವಾಲ್ಸ್ ಮತ್ತು ಇತರ ಸಹೋದ್ಯೋಗಿಗಳು ಹರಪ್ಪದಲ್ಲಿ ಅಧಿಕ ಪ್ರಮಾಣದ ಉತ್ಖನನ ಕಾರ್ಯವನ್ನು ನಡೆಸಿದರು.

ಪ್ರಬುದ್ಧ ಹರಪ್ಪನ್ ಸಂಸ್ಕೃತಿಯ ಕಾಲ ನಿರ್ಣಯವನ್ನು ರೇಡಿಯೋ ಕಾರ್ಬನ್ ದಿನಾಂಕವನ್ನು ಆಧರಿಸಿ ಮಾಡಲಾಗಿತ್ತು. ಇದರ ಜೊತೆಗೆ ಸಮಕಾಲೀನ ನಾಗರಿಕತೆಯನ್ನು ಆಧರಿಸಿ ಕಾಲ ನಿರ್ಣಯವನ್ನು ಮಾಡಲಾಗಿತ್ತು. ಉದಾಹರಣೆಗೆ ಮೆಸಪಟೋಮಿಯಾದಲ್ಲಿನ ಅಕ್ಕೇಡಿಯನ್ ಅವಧಿಯು ಪ್ರಬುದ್ಧ ಹರಪ್ಪನ್ ಸಂಸ್ಕೃತಿಯ ಅವಧಿಗೆ ಹೊಂದುತ್ತದೆ. ಹರಪ್ಪನ್ ಸ್ಥಳದಲ್ಲಿ ದೊರೆತ ಚೌಕಾಕಾರದ ಅಂಚೆ ಮೊಹರುಗಳು, ಕುಸುರಿ ಕೆಲಸ ಮಾಡಿದ ಕೆಂಪು ಪ್ರಶಸ್ತ ಮಣಿಗಳು ಮತ್ತು ಇತರ ವಸ್ತುಗಳಾದ ಮಾನವ ನಿರ್ಮಿತ ವಸ್ತುಗಳು ಅಕ್ಕೇಡಿಯನ್ ಸಂಸ್ಕೃತಿಯ ಸ್ಥಳಗಳಲ್ಲೂ ಸಹ ದೊರೆತಿವೆ. ಮೆಸಪಟೋಮಿಯಾದ ಕೆಲವು ಸಾಹಿತ್ಯ ಕೃತಿಗಳು ‘‘ಮೆಲೂಹಾ’’ ಎಂಬ ಹೆಸರನ್ನು ಉಲ್ಲೇಖಿಸುತ್ತವೆ. ಇದು ಸಿಂಧು ನಾಗರಿಕತೆಗೆ ಇದ್ದ ಮೆಸಪಟೋಮಿಯಾದ ಹೆಸರು ಎಂದು ಗುರುತಿಸಲಾಗಿದೆ. ಹೀಗೆ ಕಾಲ ನಿರ್ಣಯದ ಆಧಾರದ ಮೇಲೆ ಈ ನಾಗರಿಕತೆಯ ಸಾಮಾನ್ಯ ಕಾಲ ನಿರ್ಣಯವನ್ನು ಮಾಡಲಾಗಿದೆ.

ಭೂ ವಿವರಣೆ

ಪ್ರಬುದ್ಧ ಹರಪ್ಪನ್ ಅವಧಿಯ ಜನವಸತಿ ಪ್ರದೇಶಗಳು ಒಂದು ದಶಲಕ್ಷ ಚದುರ ಕಿಲೋಮೀಟರುಗಳನ್ನು ಮೀರಿದ ವಿಸ್ತಾರವಾದ ಪ್ರದೇಶದಲ್ಲಿ ಹರಡಿ ಹೋಗಿರುವುದು ಕಂಡುಬಂದಿದೆ. ಪಶ್ಚಿಮ ತುದಿಯ ಇಂಡಿಸ್ ಜನವಸತಿಯ ಪ್ರದೇಶವು ಸುಟ್ ಕಾಗೆನ್ ಡೋರ್ ಎಂದು ಕರೆಯಲಾಗುವ ಕೋಟೆಯಿಂದಾವೃತವಾದ ಸ್ಥಳವಾಗಿದ್ದು, ಇದು ಅರೇಬಿಯನ್ ಸಮುದ್ರದ ಬಳಿಯ ಪಾಕಿಸ್ತಾನ ಮತ್ತು ಇರಾನ್ ದೇಶಗಳ ಗಡಿ ಪ್ರದೇಶ ದಲ್ಲಿದೆ. ಒಮ್ಮೆ ಇದನ್ನು ಬಂದರು ಎಂದು ಭಾವಿಸಲಾಗಿತ್ತು. ಆದರೆ ಈಗ ಈ ಅಭಿಪ್ರಾಯ ವನ್ನು ಅಲ್ಲಗಳೆಯಲಾಗಿದೆ. ಗುಜರಾತ್‌ನಲ್ಲಿನ ಲೋಥಲ್ ಎಂಬ ಸ್ಥಳ ಪ್ರಬುದ್ಧ ಹರಪ್ಪನ್ ನಾಗರಿಕತೆಯ ಈಶಾನ್ಯ ತುದಿ. ಇದರ ನೈರುತ್ಯ ಎಲ್ಲೆಗಳು ಉತ್ತರ ಪ್ರದೇಶದ ಬಹುಪಾಲು ಸಹಾರಾನಪುರ ಜಿಲ್ಲೆಯಲ್ಲಿ ದೋ ಅಬ್ ಎಂಬ ಗಂಗಾ-ಯಮುನಾ ನದಿಯ ಮೇಲ್ಭಾಗದಲ್ಲಿ ಇದೆ. ಇದರ ಪೂರ್ಣ ತುದಿಯ ವಸಾಹತು ಸಟ್ಲೆಜ್ ನದಿಯ ಮೇಲ್ದಂಡೆಯ ರೊಪಾರನ್ ಬಳಿಯಿರುವ ಜಮ್ಮುವಿನ ಮಂಡಾ ಎಂಬಲ್ಲಿ ಇದೆ. ಈ ವಸಾಹತುಗಳ ಅತ್ಯಂತ ಹೆಚ್ಚಿನ ಸಾಂದ್ರತೆ ಕಂಡುಬರುವುದು ಪಾಕಿಸ್ತಾನದ ಬಹಾವಾಲಾಪುರ ಮತ್ತು ರಹೀಮ್ ಯಾರ್ ಖಾನ್ ಜಿಲ್ಲೆಗಳ ಖೋಲಿಸ್ತಾನ್(ಮರುಭೂಮಿ) ಎಂಬಲ್ಲಿ. ಇಲ್ಲಿ, ಹಿಂದಿನ ಸರಸ್ವತಿ ನದಿ ಅಥವಾ ಕಾಕ್ರ ನದಿಯ ಹರಿವಿನ ಕೊನೆಯ ಸುತ್ತಮುತ್ತ ಅತ್ಯಂತ ಹತ್ತಿರ ನೆಲೆಸಿರುವ ೧೮೫ ಸ್ಥಳಗಳನ್ನು ಗುರುತಿಸಲಾಗಿದೆ. ಉತ್ತರ ತುದಿಯ ಸ್ಥಳವನ್ನು ಉತ್ತರ ಆಫ್‌ಘಾನಿಸ್ತಾನದ ಓಕ್ಸ್‌ಸ್ ನದಿಯ ದಡದಲ್ಲಿರುವ ಶಾರ್ ತುಗಲ್ ಎಂದು ಗುರುತಿಸಲಾಗಿದೆ. ಇದು ಬಹುಪಾಲು ಖಚಿತವಾಗಿ ಒಂದು ವ್ಯಾಪಾರ ಕೇಂದ್ರವಾಗಿ ದ್ದಿರಬಹುದು.

ಹರಪ್ಪನ್ ಪೂರ್ವ ಸಂಸ್ಕೃತಿಗಳು

ಪ್ರಬುದ್ಧ ಹರಪ್ಪನ್ ಸಂಸ್ಕೃತಿಯನ್ನು ತಿಳಿದು ಕೊಳ್ಳುವುದಕ್ಕೆ ಮುಂಚೆ ಹರಪ್ಪನ್ ಪೂರ್ವ ಸಂಸ್ಕೃತಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿದು ಕೊಳ್ಳಬೇಕು. ಹರಪ್ಪನ್ ಪೂರ್ವದ ಸಂಸ್ಕೃತಿಗಳು ಮುಖ್ಯವಾಗಿ ಆಫ್‌ಘಾನಿ ಮತ್ತು ಬಲೂಚಿಸ್ತಾನ್ ಪ್ರದೇಶಗಳಲ್ಲಿ ಮತ್ತು ಸಿಂಧು ಕಣಿವೆಯಲ್ಲಿ ಕಂಡುಬಂದಿವೆ. ಭಾರತಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ ಹರಪ್ಪನ್ ಪೂರ್ವ ಸಂಸ್ಕೃತಿಯ ಸ್ಥಳ ಕಾಲಿಬಂಗನ್ ಎಂಬಲ್ಲಿ ಮಾತ್ರ ಕಂಡುಬಂದಿದೆ. ಹೊಸ ಪ್ರಾಚ್ಯ ಮತ್ತು ಸಂಶೋಧನಾ ದಾಖಲೆಗಳ ಆಧಾರದ ಮೇಲೆ ಹರಪ್ಪನ್ ಪೂರ್ವ ಸಂಸ್ಕೃತಿಯ ಬೆಳವಣಿಗೆಯನ್ನು ನಾಲ್ಕು ಹಂತಗಳಲ್ಲಿ ಗುರುತಿಸಲಾಗಿದೆ. ಇದರ ಅತಿ ಮುಖ್ಯ ಸ್ಥಳಗಳು ಎಂದರೆ ಮುಂಡಿಗಾರ್, ಮೆಹ್ ಗರ್, ಕಲಿ ಗುಲ್ ಮೊಹಮ್ಮದ್, ರಾನಾ ಘುಂಡಾಯ್, ಡಾಮ್ಬ್ ಸಾದಾತ್, ಅಂಜೀರಾ, ಕುಲ್ಲಿ, ಮೆಹಿ, ಕೋಟ್-ಡಿಜಿ, ಅಮ್ರಿ ಮತ್ತು ಇತರ ಸ್ಥಳಗಳು. ಆದರೆ ಹರಪ್ಪನ್ ಪೂರ್ವ ಸಂಸ್ಕೃತಿಗಳು ಎಷ್ಟರಮಟ್ಟಿಗೆ ಹರಪ್ಪನ್ ಸಂಸ್ಕೃತಿಗೆ ಪೂರಕವಾಗುವುವು ಎಂಬುದು ಇನ್ನೂ ಸರಿಯಾಗಿ ವಿವರಿಸಲಾರದ ಪ್ರಶ್ನೆಯಾಗಿ ಉಳಿದಿದೆ. ಹರಪ್ಪನ್ ಪೂರ್ವ ಸಂಸ್ಕೃತಿಯಲ್ಲಿ ಇದುವರೆಗೂ ಯಾವುದೇ ಬೃಹತ್ತಾದ ನಗರಗಳು ಅಥವಾ ವಸಾಹತುಗಳು ಕಂಡುಬಂದಿಲ್ಲ. ಸಾಮಾಜಿಕ ಸ್ತರಗಳಿರುವ ಸೂಚನೆಯೂ ಇಲ್ಲ. ಕುಶಲ ಕಲೆಯಲ್ಲೂ ಸಹ ಸಾಕಷ್ಟು ಪರಿಣತಿಯನ್ನು ಹೊಂದಿರುವುದು ಕಂಡುಬಂದಿಲ್ಲ. ಇತರ ವಸ್ತುಗಳ ಜೊತೆಯಲ್ಲಿ ಕಂಡುಬಂದಿರುವ ಮಣ್ಣಿನ ಪಾತ್ರೆಗಳು, ಪ್ರಬುದ್ಧ ಹರಪ್ಪನ್ ಸಂಸ್ಕೃತಿಯ ಕಾಲದಲ್ಲೂ ಕಂಡುಬಂದಿರುವುದು ಹರಪ್ಪನ್ ಪೂರ್ವ ಸಂಸ್ಕೃತಿಯ ಸಂಶೋಧನೆಯ ಒಂದು ಮಹತ್ವವಾದ ಅಂಶ. ಆಮ್ರಿ ಮತ್ತು ಕೋಟ್-ಡಿಮಿ ಎಂಬಲ್ಲಿ ಪ್ರಾಥಮಿಕ ಮತ್ತು ಗೋಡೆಗಳ ಉಲ್ಲೇಖಗಳು ಅತ್ಯಲ್ಪ ಪ್ರಮಾಣದಲ್ಲಿ ದೊರೆತಿವೆ. ಹರಪ್ಪನ್ ಪೂರ್ವದ ಸಂಸ್ಕೃತಿಯಲ್ಲಿ ಬರಹ ವ್ಯವಸ್ಥೆ ಕಂಡುಬಂದಿಲ್ಲ. ಹರಪ್ಪನ್ ಪೂರ್ವದ ಸಂಸ್ಕೃತಿಯ ಅವಧಿಯನ್ನು ಕ್ರಿಸ್ತ ಪೂರ್ವ ೩೦೦೦ರಿಂದ ೨೫೦೦ ವರ್ಷಗಳವರೆಗೆ ಎಂದು ಹೇಳಬಹುದು. ಕ್ರಿಸ್ತ ಪೂರ್ವ ೨೫೦೦ರಿಂದೀಚೆಗೆ ಸಿಂಧು ನಾಗರಿಕತೆಯ ನಗರ ಅಥವಾ ಸಂಕೀರ್ಣ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳ ಅಸ್ತಿತ್ವವಿದ್ದುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಮುಖ್ಯ ವಸಾಹತುಗಳು  

ಮೊಹೆಂಜೋದಾರೊ ಮತ್ತು ಹರಪ್ಪ, ಸಿಂಧೂ ನಾಗರಿಕತೆಯ ಮುಖ್ಯ ವಸಾಹತುಗಳು. ಇದರ ಮುಖ್ಯ ಸ್ಥಳಗಳು ಎಂದರೆ ಜನುವಾರೊ, ಲೋಥಲ್, ಧೋಲಾವಿರಾ, ಕಾಲಿಬಂಗನ್, ಬನವಾಲಿ ಮತ್ತು ಇತರ ಸ್ಥಳಗಳು. ಈ ಎಲ್ಲ ಸ್ಥಳಗಳ ಪೈಕಿ ಹರಪ್ಪ ಮತ್ತು ಮೊಹೊಂಜೊ ದಾರೊ ಸ್ಥಳಗಳು ಅವುಗಳ ವಸಾಹತುಗಳೊಂದಿಗೆ ಮತ್ತು ಉತ್ಖನನ ಕಾಲದಲ್ಲಿ ದೊರೆತ ಸಾಮಗ್ರಿಗಳ ವೈವಿಧ್ಯತೆಯಿಂದಾಗಿ ವಿಶಿಷ್ಟವಾಗಿ ನಿಲ್ಲುತ್ತವೆ. ಇವೆರಡೂ, ಈ ವಿಸ್ತಾರ ರಾಜ್ಯದ ಎರಡು ಜೋಡಿ ರಾಜಧಾನಿಗಳಾಗಿದ್ದವೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ಈ ನಗರಗಳು ರಾಜಧಾನಿಗಳೂ ಆಗಿದ್ದವೆಂದು ಹೇಳಲು ಯಾವುದೇ ನಿರ್ದಿಷ್ಟ ಸಾಕ್ಷ್ಯಗಳು ದೊರೆತಿಲ್ಲ. ಸಾಹಿತ್ಯಕ ಆಕರಗಳು ಯಾವುವೂ ಇಲ್ಲದಿರುವುದರಿಂದ ಅ ಅವಧಿಯ ರಾಜಕೀಯ ಸ್ಥಿತಿಯ ಬಗ್ಗೆ ಏನನ್ನೂ ಹೇಳುವುದು ಕಷ್ಟವಾಗುತ್ತದೆ. ಲಭ್ಯವಿರುವ ಕಾಲಮಾನ ವನ್ನು ಆಧರಿಸಿ ಕೇವಲ ಊಹೆಯನ್ನಷ್ಟೇ ಮಾಡಬಹುದು. ಉದಾಹರಣೆಗೆ ಹರಪ್ಪನ್ ಸಂಸ್ಕೃತಿಯ ಉದ್ದಕ್ಕು ಇದ್ದಂತ ಎಲ್ಲ ಪ್ರದೇಶಗಳಲ್ಲೂ ವಸ್ತುಗಳ ಪ್ರತಿ ವರ್ಗದ ವ್ಯಾಪಕ ವ್ಯಾಪಾರಕ್ಕೆ ಸಾಕ್ಷಿಯಾಗಿರುವ ತೂಕ ಮತ್ತು ಮಾನಕಗಳು, ಏಕರೂಪದ ಬರಹ, ಏಕರೂಪದ ಮೊಹರುಗಳ ಚಲಾವಣೆ ಮತ್ತು ಕಲೆ ಮತ್ತು ಧರ್ಮದಲ್ಲಿನ ಏಕರೂಪದ ಅಂಶಗಳು.

ಮೊಹೆಂಜೋದಾರೊ  

ಈ ದಕ್ಷಿಣ ನಗರ ಸಿಂಧು ನದಿಯ ಬಲ ದಂಡೆಯ ಮೇಲೆ ನೆಲೆಸಿದೆ. ಇಲ್ಲಿಯ ಉತ್ಖನನ ಕಾರ್ಯವನ್ನು ಸರ್ ಜನ್ ಮಾರ್ಷಲ್ ಮತ್ತು ಮ್ಯಾಕ್ ಎಂಬುವರು ನಡೆಸಿದರು. ಭಾರತ ಮತ್ತು ಪಾಕಿಸ್ತಾನಗಳ ವಿಭಜನೆಯ ನಂತರ ವ್ಹೀಲರ್ ಎಂಬುವರು ಈ ಕಾರ್ಯವನ್ನು ಮುಂದುವರಿಸಿದರು. ಇತ್ತೀಚೆಗೆ ಡೇಲ್ಸ್ ಎಂಬುವರು ಈ ಸ್ಥಳದಲ್ಲಿ ಉತ್ಖನನ ಕಾರ್ಯವನ್ನು ಮುಂದುವರಿಸಿದ್ದಾರೆ. ಆದರೆ ನೀರಿನ ಮಟ್ಟ ಇಲ್ಲಿ ಸಾಕಷ್ಟು ಏರುವುದರಿಂದ ಯಾವ ಪ್ರಾಚ್ಯ ವಸ್ತು ಸಂಶೋಧಕರೂ ಹರಪ್ಪನ್ ಸಂಸ್ಕೃತಿಯ ವಸಾಹತು ಇದ್ದಿತು ಎನ್ನಲಾಗುವ ಸ್ಥಳದ ತಳವನ್ನು ಮುಟ್ಟಲಾಗಿಲ್ಲ.

ಹರಪ್ಪ  

ಇದು ಪಂಜಬ್ (ಪಾಕಿಸ್ತಾನ)ನ ಈಗ ಒಣಗಿ ಹೋಗಿರುವ ರಾವಿ ನದಿಯ ಎಡ ದಂಡೆಯ ಮೇಲಿದೆ. ಇಲ್ಲಿನ ಪ್ರಮುಖ ಉತ್ಖನನ ಕಾರ್ಯವನ್ನು ಎಮ್.ಎಸ್.ವಾಟ್ಸ್ ಎನ್ನುವವರು ೧೯೨೦ರಿಂದ ೧೯೩೪ರ ವರೆಗೆ ನಡೆಸಿದರು.

ಈ ಸ್ಥಳಗಳಲ್ಲದೆ ಬೆಳಕಿಗೆ ಬಂದಿರುವ ಎರಡನೆಯ ಶ್ರೇಣಿಯ ಸ್ಥಳಗಳ ನಗರಗಳು ಮೂಲಭೂತ ವಿನ್ಯಾಸವನ್ನು ನೆನಪಿಗೆ ತರುವಂಥ ಲಕ್ಷಣಗಳನ್ನು ಹೊಂದಿವೆ. ವಸಾಹತಿನಲ್ಲಿ ಚಿಕ್ಕವಾದರೂ ಅವುಗಳು ಸರ್ಕಾರದ ಪ್ರಾಂತೀಯ ಕೇಂದ್ರಗಳು ಎಂದು ಪರಿಗಣಿಸಲಾಗಿವೆ. ಉದಾಹರಣೆಗೆ ಕಾಲಿಬಂಗನ್, ಲೋಥಲ್, ಸುರ್ ಕೊಟ್ ಡಾ, ಸುಟ್ ಕಾಗೆನ್ ಡೋರ್, ಬನವಾಲಿ ಮತ್ತು ಮುಂತಾದವುಗಳು. ಈ ಸ್ಥಳಗಳ ಪೈಕಿ ಗುಜರಾತ್ ನಲ್ಲಿ ಕ್ಯಾಂಬೆ ಕೊಲ್ಲಿಯ ಮೂಲದಲ್ಲಿ ನೆಲೆಸಿರುವ ಲೋಥಲ್ ಎಂಬ ಸ್ಥಳ ಆ ಸ್ಥಳದಲ್ಲಿನ ಪ್ರಬುದ್ಧ ಹರಪ್ಪನ್ ವ್ಯಾಪಾರದ ಹಾಗೂ ಹರಪ್ಪನ್ ನಂತರದ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.

ಧೋಲಾವಿರಾ  

ರಾಜಸ್ಥಾನದ ಕಚ್ ಪ್ರದೇಶದಲ್ಲಿರುವ ಈ ಸ್ಥಳದ ಉತ್ಖನನ ಕಾರ್ಯ ನಡೆದಿದೆ. ಈ ಸ್ಥಳ ಕೋಟೆಯಿಂದ ಆವೃತವಾಗಿದೆ. ಇದು ಪ್ರಾಥಮಿಕ ಅಥವಾ ಹರಪ್ಪನ್ ಪೂರ್ವ ಸಂಸ್ಕೃತಿಯಿಂದ ಪ್ರಬುದ್ಧ ಹರಪ್ಪನ್ ಮತ್ತು ಅನಂತರದ ಸಂಸ್ಕೃತಿಯ ಸ್ತರಗಳನ್ನು ಹೊಂದಿದೆ.

ಕಾಲಿಬಂಗನ್  

ಇದು ರಾಜಸ್ಥಾನದಲ್ಲಿ ಫಗ್ಗಾರ್ ನದಿಯ(ಈಗ ಒಣಗಿದ) ದಡದಲ್ಲಿದೆ. ಇದು ಸಿಂಧು ನಾಗರಿಕತೆಯ ಪ್ರಾದೇಶಿಕ ಕೇಂದ್ರಕ್ಕೆ ಒಂದು ಒಳ್ಳೆಯ ಉದಾಹರಣೆ. ಇದು ಹರಪ್ಪನ್ ಸಂಸ್ಕೃತಿಯ ಪ್ರಾಥಮಿಕ ಹಾಗೂ ಪ್ರಬುದ್ಧ ಅವಸ್ಥೆಗಳ ಅವಶೇಷಗಳನ್ನು ಹೊಂದಿದೆ.

ಸಿಂಧು ನಗರ ಯೋಜನೆ ಮತ್ತು ವಸಾಹತು ಮಾದರಿಗಳು  

ದೊಡ್ಡ ಪ್ರಮಾಣದ ವಸಾಹತುಗಳು ನಗರಗಳಿರಲಿ ಅಥವಾ ಪಟ್ಟಣಗಳಿರಲಿ ಒಂದು ನಿರ್ದಿಷ್ಟ ಮಾದರಿಯ ಮೂಲಭೂತ ವಿನ್ಯಾಸವನ್ನು ಹೊಂದಿವೆ. ಹರಪ್ಪ, ಮೆಹೆಂಜೋದಾರೊ ಮತ್ತು ಕಾಲಿಬಂಗನ್‌ಗಳು ಎರಡು ವಿಶಿಷ್ಟವಾದ ಭಾಗಗಳನ್ನೊಳಗೊಂಡಿದೆ. ಪಶ್ಚಿಮದಲ್ಲಿ ರುವ ಕೋಟೆಯಂತಹ ದಿಬ್ಬವನ್ನು ಉತ್ತರ ಮತ್ತು ದಕ್ಷಿಣಕ್ಕೆ ಉದ್ದವಾದ ಮತ್ತು ಪೂರ್ವದ ಕಡೆಗೆ ಮಣ್ಣಿನ ಇಟ್ಟಿಗೆಗಳಿಂದ ಉತ್ತರದ ವೇದಿಕೆಯ ಮೇಲೆ ಕಟ್ಟಲಾಗಿದೆ. ಇದರ ಮತ್ತೊಂದು ಭಾಗ ಎಂದರೆ ಕೆಳಗಿನ ನಗರದಲ್ಲಿರುವ ಮುಖ್ಯ ವಾಸದ ಪ್ರದೇಶ. ಕೋಟೆ ಮತ್ತು ಕೆಲವೊಮ್ಮೆ ಕೆಲ ನಗರಗಳು ಬೃಹತ್ ಗಾತ್ರದ ಮಣ್ಣಿನ ಗೋಡೆಯಿಂದಾವೃತ ವಾಗಿವೆ. ಇದಕ್ಕೆ ಉದಾಹರಣೆ ಕಾಲಿಬಂಗನ್. ಈ ಗೋಡೆ ಚಚ್ಚೌಕದ ಗೋಪುರಗಳನ್ನು ಮತ್ತು ಬುರುಜುಗಳನ್ನು ಹೊಂದಿದೆ. ಇದರ ಮುಖ್ಯ ದ್ವಾರವನ್ನು ಉತ್ತರದ ಕಡೆಗಿರುವ ಗೋಡೆಯಲ್ಲಿ ಅಳವಡಿಸಲಾಗಿದೆ ಮತ್ತು ದಕ್ಷಿಣದ ಕಡೆಗೆ ಮತ್ತೊಂದು ದ್ವಾರ ಇದೆ. ಅಗಲವಾದ ರಸ್ತೆಗಳು ಪರಸ್ಪರ ಸಮಕೋನದಲ್ಲಿವೆ. ಹೀಗೆ ನಗರವನ್ನು ವ್ಯವಸ್ಥಿತ ಜಲದ ಮಾದರಿಯಲ್ಲಿ ಅನೇಕ ಬ್ಲಾಕುಗಳನ್ನಾಗಿ ವಿಂಗಡಿಸಲಾಗಿದೆ. ರಸ್ತೆಗಳ ಅಗಲದಲ್ಲೂ ಕೂಡ ಒಂದು ರೀತಿಯ ಸಾಮಾನ್ಯ ಸಮನ್ವಯವಿರುವಂತೆ ಕಾಣುತ್ತದೆ. ಅತಿ ದೊಡ್ಡ ರಸ್ತೆಗಳು ಸಣ್ಣ ರಸ್ತೆಗಳಿಗಿಂತ ಎರಡರಷ್ಟು ಅಗಲವಾಗಿದ್ದರೆ ಅಡ್ಡ ರಸ್ತೆಗಳಿಗಿಂತ ಅವು ಮೂರರಿಂದ ನಾಲ್ಕು ಪಟ್ಟು ದೊಡ್ಡದಾಗಿವೆ.

ನಾಗರಿಕ, ಧಾರ್ಮಿಕ ಅಥವಾ ಆಡಳಿತ ಕಟ್ಟಡಗಳು ಹಾಗೂ ಹಗೇವುಗಳಂಥ ಮುಖ್ಯ ನಿರ್ಮಾಣಗಳು ಕೋಟೆಯೊಳಗಿರುವ ನಗರಗಳಲ್ಲಿವೆ. ಸಿಂಧು ಸಂಸ್ಕೃತಿಯ ಬಹುಪಾಲು ಎಲ್ಲ ನಗರ ಕೇಂದ್ರಗಳಲ್ಲಿ ಇದೇ ರೀತಿಯ ಸಾಮಾನ್ಯ ಮಾದರಿಯ ವಿನ್ಯಾಸವನ್ನು ನಾವು ಕಾಣುತ್ತೇವೆ. ಆದರೆ ಲೋಥಲ್‌ನಲ್ಲಿರುವ ಮಧ್ಯಮ ಗಾತ್ರದ ವಸಾಹತುಗಳ ವಿನ್ಯಾಸವು ಸ್ವಲ್ಪ ಮಟ್ಟಿಗೆ ಭಿನ್ನವಾಗಿವೆ. ಹರಪ್ಪನ್ ವ್ಯಾಪಾರ ಕೇಂದ್ರವಾಗಿ ಇದು ನಿರ್ವಹಿಸಿದ ಭಿನ್ನ ರೀತಿಯ ಪಾತ್ರವೇ ಇದಕ್ಕೆ ಕಾರಣ. ಈ ಪ್ರದೇಶ ಚತುರಸ್ರಾಕಾರದಲ್ಲಿದ್ದು, ಉತ್ತರ ದಕ್ಷಿಣಕ್ಕೆ ಹೆಚ್ಚು ಉದ್ದವಾಗಿದೆ. ಇದು ಸಬರಮತಿ ನದಿಯ ಉಪನದಿಗೆ ಹತ್ತಿರವಾದ ಕೆಳ ಮಟ್ಟದ ನೆಲದ ಮೇಲೆ ಇದ್ದುದರಿಂದಾಗಿ ಪ್ರವಾಹಕ್ಕೆ ರಕ್ಷಣೆಗಾಗಿ ಬೃಹತ್ ಗಾತ್ರದ ಇಟ್ಟಿಗೆಯ ಗೋಡೆಯಿಂದ ಇದು ಆವೃತವಾಗಿದೆ. ಈ ವಸಾಹತಿನ ಪೂರ್ವದಲ್ಲಿ, ೨೧೯x೩೭ ಮೀಗಳಷ್ಟು ಉದ್ದವಿರುವ ಮತ್ತು ೪.೫ ಮೀ.ಗಳಷ್ಟು ಎತ್ತರವಿರುವ ಇಟ್ಟಿಗೆಯ ಗೋಡೆಗಳಿಂದ ನಿರ್ಮಾಣವಾದ ಒಂದು ಇಟ್ಟಿಗೆಯ ಚೌಗುಳಿಯಾಕಾರದ ನಿರ್ಮಾಣವಿದೆ. ಡಾ.ಎಸ್.ಆರ್. ರಾಯಿಟ್ ಅವರು, ಇದು ಪಕ್ಕದಲ್ಲೇ ಇದ್ದ ಅಳಿವೆಗಾಗಿ ಕಾಲುವೆಗಳ ಮೂಲಕ ಸಂಪರ್ಕ ಕಲ್ಪಿಸಲಾದ ಹಡಗುಕಟ್ಟೆ ಇರಬಹುದು ಎಂದಿದ್ದಾರೆ. ಉಬ್ಬರವಿಳಿತದಿಂದಾಗಿ ಒಳಗೆ ಹರಿದುಬರುವ ನೀರನ್ನು ನಿಯಂತ್ರಿಸಲು ಮತ್ತು ಕಾಲುವೆಗಳಲ್ಲಿ ನೀರು ತಾನಾಗಿಯೇ ಹರಿದು ಹೋಗುವಂತೆ ಮಾಡಲು ಹೊರ ಹರಿವಿನ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಿರುವುದು ಕಂಡುಬರುತ್ತದೆ. ಲೋಥಲ್‌ನಲ್ಲಿ ನಡೆಸಲಾದ ಅನಂತರದ ಉತ್ಖನನದ ಕಾಲಗಳಿಂದ, ಇತರ ಕಟ್ಟಡಗಳ ಜೊತೆಗೆ ಉಗ್ರಾಣಗಳೂ ಹಾಗೂ ಹಗೇವುಗಳು, ಅಡಿಪಾಯಗಳು ಬೆಳಕಿಗೆ ಬಂದಿವೆ.

ಹರಪ್ಪನ್ ಪೂರ್ವದಲ್ಲಿರುವ ಎಲ್ಲ ನಿರ್ಮಾಣಗಳಲ್ಲೂ ನಗರ ಯೋಜನೆಯಲ್ಲಿ ಕಾಣಬಹುದಾದಂಥ ರೀತಿಯ ಏಕರೂಪತೆ ಕಂಡುಬರುತ್ತದೆ. ಅಲ್ಲಿ ಬಳಸಲಾದ ಸುಟ್ಟ ಇಟ್ಟಿಗೆಗಳು ಮತ್ತು ಮಣ್ಣಿನ ಇಟ್ಟಿಗೆಗಳ ಗಾತ್ರದಲ್ಲೂ ಸಹ ಒಂದು ಏಕರೂಪತೆ ಇದೆ. ಇಟ್ಟಿಗೆಯ ಗಾತ್ರದ ಸಾಮಾನ್ಯ ದಾಮಾಕ್ಷ ೪:೨:೧. ಕೆಲವು ನಿರ್ಮಾಣಗಳಲ್ಲಿ ಅವರು ಬಳೆಯಾಕಾರದ ಇಟ್ಟಿಗೆಗಳನ್ನು ಬಳಸಿರುವುದು ಕಂಡುಬಂದಿದೆ. ಗೋಡೆಗಳಿಗೆ ಗಾರೆ ಕೆಲವೊಮ್ಮೆ ಇಟ್ಟಿಗೆಯ ಜೊತೆಯಲ್ಲಿ ಜಿಪ್ಸೆಮ್ ಗಾರೆಯನ್ನು ಸಹ ಬಳಸಲಾಗಿದೆ.

ವಾಸದ ಮನೆಗಳು

ವಾಸದ ಮನೆಗಳ ಗಾತ್ರದಲ್ಲಿ ಸಾಕಷ್ಟು ವೈವಿಧ್ಯತೆ ಇದೆ. ಒಂದೇ ಕೋಣೆಯಿರುವ ಮನೆಯಿಂದ ಅಂಗಳವಿರುವ ಮನೆ ಹಾಗೂ ೧೨ ಕೋಣೆಗಳಿರುವ ಮನೆಯವರೆಗೂ ವಿಭಿನ್ನ ಗಾತ್ರದ ಮನೆಗಳು ಕಂಡುಬಂದಿವೆ. ಸಾಮಾನ್ಯವಾಗಿ ಎಲ್ಲ ದೊಡ್ಡ ಮನೆಗಳಲ್ಲೂ ಖಾಸಗಿ ಬಾವಿಗಳಿವೆ. ಕೋಣೆಗಳಲ್ಲಿ ಬೆಂಕಿ ಗೂಡುಗಳು ಇರುವುದು ಸಾಮಾನ್ಯವಾಗಿ ಕಂಡುಬಂದಿದೆ. ಪ್ರತಿ ಮನೆಯಲ್ಲೂ ಸ್ನಾನ ಗೃಹ ಇದ್ದು ಹೊರ ಹರಿವಿನ ಕಾಲುವೆಗಳನ್ನು ಹೊಂದಿವೆ. ಅವು ಇಳಿಗಾಲುವೆಗಳಿಗೆ ಸಂಪರ್ಕ ಹೊಂದಿದ್ದು ನೇರವಾಗಿ ರಸ್ತೆಯ ಮುಖ್ಯ ಚರಂಡಿಗಳಿಗೆ ಸೇರುತ್ತವೆ.

ಮುಖ್ಯರಸ್ತೆಗಳಿಗೆ ಸಮಕೋನದಲ್ಲಿರುವ ಇಕ್ಕಟ್ಟಾದ ರಸ್ತೆಗಳ ಕಡೆಯಿಂದ ಇರುವ ಮನೆಗಳಿಗೆ ಪ್ರವೇಶ ದ್ವಾರಗಳಿವೆ. ಕೆಳ ನಗರದಲ್ಲಿ ಅನೇಕ ಉಪ ರಸ್ತೆಗಳು, ಮುಖ್ಯ ರಸ್ತೆಗಳಲ್ಲಿ ಇಟ್ಟಿಗೆಯ ಚರಂಡಿ ವ್ಯವಸ್ಥೆ ಇದ್ದು ಅವುಗಳನ್ನು ಇಟ್ಟಿಗೆಗಳಿಂದ ಅಥವಾ ಕೆಲವೊಮ್ಮೆ ಕಲ್ಲು ಚಪ್ಪಡಿಗಳಿಂದ ಮೇಲೆ ಮುಚ್ಚಲಾಗಿದೆ. ಇವುಗಳಿಗೆ ಮನೆಗಳಿಂದ ಬರುವ ಹೊರ ಹರಿವುಗಳು ಸೇರುತ್ತವೆ. ಇದರ ಇತರ ಚರಂಡಿಗಳು ನೇರವಾಗಿ ಬೃಹತ್ ಗಾತ್ರದ ಗುಂಡಿಗಳಿಗೆ ಅಥವಾ ಹಳ್ಳಗಳಿಗೆ ಸೇರುತ್ತವೆ. ಹೀಗೆ ಸಿಂಧು ನಾಗರಿಕತೆ ವೈಜ್ಞಾನಿಕವಾದ ಒಳಚರಂಡಿ ವ್ಯವಸ್ಥೆಗೆ ಹೆಸರಾಗಿದೆ. ಮೊಹೆಂಜೋದಾರೊ ಮತ್ತು ಹರಪ್ಪಗಳಲ್ಲಿ ಒಂದೇ ಕೋಣೆಯಿರುವ ಬೋಳು ಕಟ್ಟಡಗಳೂ ಕಂಡುಬಂದಿವೆ. ಬಹುಶಃ ಇವು ಬಡ ವರ್ಗಕ್ಕೆ ಸೇರಿದ ಮನೆಗಳಾಗಿರಬೇಕು. ಕೆಳಗಿನ ಬಡಾವಣೆಯಲ್ಲಿ ಅಂಗಡಿಗಳು ಹಾಗೂ ಕುಶಲಕಲೆಗಳ ಕಾರ್ಯಾಗಾರಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದಿರಬೇಕು. ಸಿಂಧು ನಾಗರಿಕತೆಯ ಅತ್ಯಂತ ಪ್ರಮುಖವಾದ ಸ್ಮಾರಕಗಳೆಂದರೆ

. ಮೊಹೆಂಜೋದಾರೊವಿನ ಬೃಹತ್ ಸ್ನಾನ ಗೃಹ(ಗ್ರೇಟ್ ಬಾತ್): ಈ ಸ್ನಾನಗೃಹ ೧೨.೭ ಮೀ.ಗಳಷ್ಟು ವಿಸ್ತಾರವಾಗಿದ್ದು ಸುಮಾರು ೩ ಮೀ.ಗಳಷ್ಟು ಆಳವಾಗಿದೆ. ಕೋಟೆಯ ಒಳಗೆ ಇರುವ ಇದಕ್ಕೆ ಹೋಗಲು ಎರಡೂ ಕಡೆಯಿಂದ ಮೆಟ್ಟಿಲುಗಳಿವೆ. ಸ್ನಾನಗೃಹದ ನೆಲವನ್ನು ಸಿದ್ಧ ಇಟ್ಟಿಗೆಗಳಿಂದ ಕಟ್ಟಲಾಗಿದೆ. ಅದರ ಬದಿಗಳಿಗೆ ಬಿಟುಮನ್ ಗಾರೆಯ ಒಂದು ಪದರ ದೊಂದಿಗೆ ಜಿಪ್ಸ್‌ಮ್ ಗಾರೆಯನ್ನು ಬಳಿಯಲಾಗಿದೆ. ಇದಕ್ಕೆ ನೀರನ್ನು ಪಕ್ಕದ ಕೋಣೆಯಲ್ಲಿ ರುವ ಒಂದು ದೊಡ್ಡ ಬಾವಿಯಿಂದ ಪೂರೈಸಲಾಗುತ್ತಿತ್ತೆಂದು ಊಹಿಸಬಹುದು. ಮತ್ತು ಸ್ನಾನಗೃಹದ ಒಂದು ಮೂಲೆಯಲ್ಲಿ ಹೊರ ಹರಿವಿನ ಕೊಳವೆಯಿದ್ದು ಅದು ದಿಬ್ಬದ ಪಶ್ಚಿಮ ಬದಿಗೆ ತೆರೆದುಕೊಳ್ಳುವ ಒಂದು ಎತ್ತರದ ಚಾಚುಗಲ್ಲಿನಿಂದ ಮುಚ್ಚಲಾಗಿರುವ ಚರಂಡಿಗೆ ಸೇರುತ್ತದೆ. ಈ ಸ್ನಾನಗೃಹಕ್ಕೆ ಒತ್ತಿಕ್ಕೊಂಡ ಹಾಗೆ ಒಂದು ಪೋರ್ಟಿಕೋ ಇದೆ. ಇದರೊಂದಿಗೆ ಮಹಡಿಗೆ ಹೋಗುವ ದಾರಿಯನ್ನು ಒಳಗೊಂಡ ಒಂದು ಕೋಣೆಯಿದೆ. ಈ ಬೃಹತ್ ಸ್ನಾನದ ಗೃಹವನ್ನು ಯಾವುದೋ ಆಚರಣೆ ಸಂಬಂಧವಾಗಿ ಬಳಸಿಕೊಳ್ಳಲಾಗುತ್ತಿತ್ತು ಎಂದು ಅಭಿಪ್ರಾಯಪಡ ಲಾಗಿದೆ.

. ಸಭಾಂಗಣ : ಮೊಹೆಂಜೋದಾರೊವಿನಲ್ಲಿ ನಾವು ನೋಡಬಹುದಾದ ಬಹುಮುಖ್ಯ ಕಟ್ಟಡ ಸಭಾಂಗಣವಾಗಿದೆ. ಇಟ್ಟಿಗೆಗಳಿಂದ ಕಟ್ಟಲಾದ ಚೌಕಾಕಾರದ ಬೃಹತ್ ಸ್ತಂಭಗಳನ್ನು ಇದು ಹೊಂದಿದೆ. ಮೇಲ್ಛಾವಣಿಗೆ ಮರವನ್ನು ಬಳಸಲಾಗಿತ್ತು ಹಾಗು ಅವು ಈಗ ನಾಶವಾಗಿವೆ ಎಂದು ಅಭಿಪ್ರಾಯಪಡಲಾಗಿದೆ.

. ಉಗ್ರಾಣಗಳು : ಉಗ್ರಾಣಗಳೂ ಮೆಹೆಂಜೋದಾರೊವಿನಲ್ಲಿ ಸಿಕ್ಕಿವೆ. ನದಿಯ ತೀರದಲ್ಲಿ ೧೬ ಮೀ x ೬ ಮೀ ಅಳತೆಯಷ್ಟಿರುವ ೬ ಉಗ್ರಾಣಗಳನ್ನು ಪತ್ತೆ ಹಚ್ಚಲಾಗಿದೆ. ಈ ರೀತಿಯ ಉಗ್ರಾಣಗಳು ಪಹರಪ್ಪಾದಲ್ಲೂ ಇವೆ. ಉಗ್ರಾಣದ ದಕ್ಷಿಣ ಭಾಗದಲ್ಲಿ ಗೋಧಿ ಮತ್ತು ಬಾರ್ಲಿಯನ್ನು ಶುಚಿ ಮಾಡುವ ಕೋಣೆಗಳಿದ್ದವು. ಆದರೆ ಇಲ್ಲಿಯವರೆಗೆ ಎಲ್ಲೂ ದೇವಾಲಯಗಳಿರುವ ಬಗ್ಗೆ ಕುರುಹುಗಳು ದೊರೆತಿಲ್ಲ.

ನಗರ ಕೇಂದ್ರಗಳಲ್ಲಿ ಹಳ್ಳಿ ಮತ್ತು ಪಟ್ಟಣಗಳಿಗೆ ಬೇಕಾಗುವ ವಸ್ತುಗಳನ್ನು ತಯಾರಿಸ ಲಾಗುತ್ತಿತ್ತು. ಈ ಕೇಂದ್ರಗಳು ಆಡಳಿತ, ಧರ್ಮ ಹಾಗೂ ವ್ಯಾಪಾರ ಕೇಂದ್ರಗಳೂ ಆಗಿದ್ದವು. ಹರಪ್ಪಾ ಮತ್ತು ಮೊಹೆಂಜೋದಾರೋವಿನ ಜನರು ಕೃಷಿ ಉತ್ಪನ್ನಗಳನ್ನು ಬೆಳೆಯದ್ದರಿಂದ ಅವರು ಸುತ್ತಮುತ್ತಲಿನ ಹಳ್ಳಿಗಳ ರೈತರನ್ನು ಆಹಾರಕ್ಕಾಗಿ ಅವಲಂಬಿ ಸಿದ್ದರು. ಸ್ಥಳೀಯವಾಗಿ ದೊರಕದ ಅನೇಕ ಐಷಾರಾಮದ ವಸ್ತುಗಳನ್ನು ಶ್ರೀಮಂತರು ಬಳಸುತ್ತಿದ್ದರು. ಈ ಕಾರಣಕ್ಕಾಗಿಯೇ ಈ ನಗರಗಳು ವ್ಯಾಪಾರವನ್ನೇ ತೀವ್ರವಾಗಿ ಅವಲಂಬಿಸಿದ್ದವು.

ಆಡಳಿತ  

ನಾಗರಿಕತೆಯ ಬೆಳವಣಿಗೆ ಎಂದರೆ ರಾಜ್ಯ ಎಂದು ಕರೆಯುವ ನಿರ್ಧಾರ ತೆಗೆದುಕೊಳ್ಳುವ, ಒಂದು ಕೇಂದ್ರೀಕೃತ ವ್ಯವಸ್ಥೆಯ ಉದ್ಭವ ಎಂದೇ ಅರ್ಥ. ಹರಪ್ಪನ್ ಅವಧಿಯ ಆಡಳಿತದ ರೀತಿಯ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಏಕೆಂದರೆ ಆಗಿನ ಲಿಪಿಯನ್ನು ಇನ್ನೂ ಬಿಡಿಸಲಾಗಿಲ್ಲ. ಆದರೂ, ನಗರಗಳಲ್ಲಿ ಪುರಸಭೆ ಅಸ್ತಿತ್ವದಲ್ಲಿತ್ತೆಂದು ಊಹಿಸಬಹುದಾಗಿದೆ. ಅನೇಕ ನಗರಗಳಲ್ಲಿ ಉಪರಸ್ತೆಗಳು ಹಾಗೂ ರಸ್ತೆಗಳಲ್ಲಿ ಚರಂಡಿಗಳನ್ನು ಇಟ್ಟಿಗೆಗಳಿಂದ ಮುಚ್ಚಲಾಗಿದ್ದು, ಹೀರುಗುಂಡಿಗಳು ಇರುವುದು ಕಂಡು ಬಂದಿದೆ. ವ್ಯವಸ್ಥಿತವಾದ ಚರಂಡಿ ವ್ಯವಸ್ಥೆ ನಿರ್ಮಾಣ ಹಾಗೂ ನಿರ್ವಹಣೆಗಳಿಗೆ ಚೆನ್ನಾಗಿ ಅಭಿವೃದ್ದಿ ಹೊಂದಿದ ಒಂದು ಪುರಸಭಾ ವ್ಯವಸ್ಥೆ ಇರುವುದು ಅಗತ್ಯ. ಹಾಗೆಯೇ, ಧಾನ್ಯಾಗಾರ ಇದ್ದಿತೆಂಬ ವಿಷಯವೂ ಸಹ ಸುತ್ತಮುತ್ತಲ ಹಿನ್ನಾಡುಗಳಿಂದ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಅದನ್ನು ಜನರಿಗೆ ಪುನಃ ಹಂಚಿಕೆ ಮಾಡುವ ಒಂದು ಪ್ರಾಧಿಕಾರವಿದ್ದಿರಬೇಕೆಂಬುದನ್ನು ಸೂಚಿಸುತ್ತದೆ.

ಹರಪ್ಪನ್ ವಸಾಹತುಗಳಲ್ಲಿ ಉಪಯೋಗಿಸುತ್ತಿದ್ದ ಸಾಧನಗಳು, ಆಯುಧಗಳು ಹಾಗೂ ಇಟ್ಟಿಗೆಗಳ ವಿನ್ಯಾಸಗಳಲ್ಲಿ ಆಶ್ಚರ್ಯಕರವೆನಿಸಿದ ಏಕರೂಪತೆಯಿದೆ. ತಾಮ್ರ ಮತ್ತು ಕಲ್ಲುಗಳಿಂದ ಮಾಡಲಾದ ಕೊಡಲಿ, ಉಳಿ, ಚಾಕುಗಳು ಹಾಗೂ ಸನಿಕೆಗಳಂಥ ಸಾಧನಗಳ ತಯಾರಿಕೆ ಹಾಗೂ ವಿತರಣೆಗಳನ್ನು ನೋಡಿದಾಗ, ನಿರ್ಧಾರವನ್ನು ಕೈಗೊಳ್ಳುವ ಒಂದು ಕೇಂದ್ರೀಕೃತ ವ್ಯಾಪಾರಿ ತಂಡಗಳು ಅಥವಾ ಆಡಳಿತಗಾರ ಅಸ್ತಿತ್ವವನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ಹರಪ್ಪನ್ ಕಾಲದಲ್ಲಿ ಆಡಳಿತ ನಡೆಸುವ ವರ್ಗವಿತ್ತೆಂಬುದನ್ನು ಮೇಲಿನ ಅಂಶಗಳು ಸ್ಪಷ್ಟಪಡಿಸುತ್ತವೆ. ಸ್ಮಾರಕವಾಗಿ ಇರುವ ನಿರ್ಮಿತಿಗಳು ಬಹುಶಃ ಧಾರ್ಮಿಕ ಹಾಗೂ ರಾಜಕೀಯ ಅಧಿಕಾರದ ಕೇಂದ್ರಗಳಾಗಿದ್ದವು ಎನಿಸುತ್ತದೆ. ನಗರವಾಸಿಗಳು ಬಳಸುತ್ತಿದ್ದ ಭೋಗವಸ್ತುಗಳೂ ಸಹ ಸಮಾಜದಲ್ಲಿ ಇದ್ದಿರಬಹುದಾದ ವರ್ಗ ವ್ಯವಸ್ಥೆಯನ್ನು ತಿಳಿಸುತ್ತದೆ. ಇವುಗಳಲ್ಲಿ ಅನೇಕವನ್ನು ದೂರದೇಶಗಳಿಂದ ಆಮದು ಮಾಡಿಕೊಂಡಿರುವಂಥದ್ದಾಗಿವೆ. ಈ ಉತ್ಪನ್ನಗಳಿಂದ, ಸಿಂಧೂ ನಾಗರಿಕತೆಯಲ್ಲಿ ಎರಡು ಅಥವಾ ಅದಕ್ಕೂ ಹೆಚ್ಚಿನ ರಾಜಕೀಯ ಬಣಗಳಿದ್ದಿರಬಹುದು ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಹೀಗೆ ನಗರಗಳು ರಾಜಕೀಯ-ಆರ್ಥಿಕ-ಅಧಿಕಾರದ ಕೇಂದ್ರಗಳಾಗಿ ಬೆಳೆದವು.

ಜೀವನೋಪಾಯ  

ಸಿಂಧೂ ಸಂಸ್ಕೃತಿಯ ಜೀವನೋಪಾಯ ಕಸಬುಗಳೆಂದರೆ ಕೃಷಿ, ಪಶು ಸಂಗೋಪನೆ, ಮೀನುಗಾರಿಕೆ, ಬೇಟೆ ಮತ್ತು ಕಂದಮೂಲಾದಿ ಸಂಗ್ರಹಣೆಯಾಗಿತ್ತು. ಮುಖ್ಯ ಬೆಳೆಗಳೆಂದರೆ ಖರ್ಜೂರ ಹಾಗೂ ಅನೇಕ ಬಗೆಯ ದ್ವಿದಳ ಧಾನ್ಯಗಳು ಎಂದರೆ ಬಟಾಣಿ, ಎಳ್ಳು, ಸಾಸಿವೆ ಮುಂತಾದವು. ಹತ್ತಿ ಸಾಗುವಳಿ ಈ ಕಾಲದ ಪ್ರಮುಖ ಸಾಧನೆ. ಕೃಷಿಯಲ್ಲಿ ಅವರು ಬಳಸುತ್ತಿದ್ದ ಸಾಧನಗಳು ಯಾವುವು ಎಂಬ ಬಗ್ಗೆ ದೊರೆತಿರುವ ಪುರಾವೆಗಳು ಬಹು ಕಡಿಮೆ. ಕಾಲಿಬಂಗನ್‌ನಲ್ಲಿ ಜಮೀನುಗಳ ಮೇಲೆ ನೇಗಿಲ ಗುರುತುಗಳು ಕಂಡುಬಂದಿವೆ. ಈ ಗುರುತುಗಳಿಂದ ಮರದ ನೇಗಿಲನ್ನು ಬಳಸಲಾಗಿತ್ತೆಂದು ಊಹಿಸಬಹು ದಾಗಿದೆ. ಲೋಥಲ್ ಎಂಬ ಸ್ಥಳದಲ್ಲಿ ನೇಗಿಲಿನ ಟೆರಕೋಟ ಮಾದರಿ ದೊರೆತಿದೆ.

ಸಿಂಧೂ ಕಣಿವೆಯ ಜನ ಸಾಕಿದ ಹಾಗೂ ಕಾಡು ಪ್ರಾಣಿಗಳನ್ನು ಆಹಾರಕ್ಕಾಗಿ ಬಳಸುತ್ತಿದ್ದರು. ಕುರಿ, ಮೇಕೆ, ಜನುವಾರು, ಎಮ್ಮೆ, ಹಂದಿ ಹಾಗೂ ನಾಯಿಗಳು ಕೆಲವು ಮುಖ್ಯ ಸಾಕು ಪ್ರಾಣಿಗಳು. ಆನೆ ಮತ್ತು ಒಂಟೆಗಳ ಮೂಳೆಗಳೂ ಅಪರೂಪವಾಗಿ ದೊರೆತಿವೆ. ಮೊಹರುಗಳ ಮೇಲೆ ಆನೆಯ ಚಿತ್ರ ಬಹು ಸಾಮಾನ್ಯ. ಪಕ್ಷಿಗಳ ಪೈಕಿ, ಸಾಕಿದ ಕೋಳಿಯ ಮೂಳೆಗಳು ದೊರೆತಿರುವುದು ಗಮನಿಸಬೇಕಾದ ಅಂಶ. ಉತ್ಖನನ ಕಾಲದಲ್ಲಿ ಅನೇಕ ಗಾಳಗಳು ದೊರೆತಿದ್ದು ಅವರಿಗೆ ಮೀನು ಹಿಡಿಯುವುದು ತಿಳಿದಿತ್ತೆಂಬುದನ್ನು ಹಾಗೂ ಸಸ್ಯಾಹಾರದ ಜೊತೆಯಲ್ಲಿ ಮೀನುಗಳು ಅವರ ಮುಖ್ಯ ಆಹಾರವಾಗಿತ್ತೆಂಬುದನ್ನು ಸೂಚಿಸುತ್ತದೆ.

ವ್ಯಾಪಾರ ಮತ್ತು ಸಾರಿಗೆ

ಹರಪ್ಪನ್ ನಾಗರಿಕತೆಯ ಕಾಲದಲ್ಲಿ ಇತ್ತೆಂದು ಊಹಿಸಲಾದ ಸಾಮಾಜಿಕ ವ್ಯವಸ್ಥೆ ಹಾಗೂ ಜೀವನ ಮಟ್ಟವನ್ನು, ಅತ್ತುತ್ತಮವಾಗಿ ಅಭಿವೃದ್ದಿ ಹೊಂದಿದ್ದ ಸಂಪರ್ಕ ವ್ಯವಸ್ಥೆ ಹಾಗೂ ವ್ಯಾಪಕ ವ್ಯಾಪಾರ ಜಲ ನಿರ್ವಹಿಸುತ್ತಿದ್ದಿರಬೇಕು. ವ್ಯಾಪಾರಕ್ಕೆ ವಿನಿಮಯ ನಿಯಂತ್ರಣ ವ್ಯವಸ್ಥೆ ಅಗತ್ಯ. ಹರಪ್ಪನ್ ಕಾಲದಲ್ಲಿ ಈ ನಿಯಂತ್ರಣ ವ್ಯವಸ್ಥೆಯಿತ್ತೆಂಬುದನ್ನು ಅವರ ಸಾಂಸ್ಕೃತಿಕ ಪ್ರದೇಶಗಳಲ್ಲಿ ದೊರೆತಿರುವ ಏಕರೂಪದ ಮಾನಕಗಳು ಮತ್ತು ಮಾಪಕಗಳು ದೃಢಪಡಿಸುತ್ತವೆ. ಮೊಹರುಗಳು ಮತ್ತು ಮೊಹರು ಮಾಡಿರುವುದು ಅವರ ಕಾಲದಲ್ಲಿನ ಅತಿ ದೂರದೇಶಗಳೊಂದಿಗೆ ಇರಬಹುದಾದ ವ್ಯಾಪಾರವನ್ನು ಸೂಚಿಸುತ್ತದೆ. ಉತ್ಪಾದನೆಗಳ ಗುಣಮಟ್ಟಕ್ಕೆ ಖಾತರಿ ನೀಡಲು ಹಾಕಲಾದ ಮಾಲೀಕತ್ವದ ಗುರುತು ಈ ಮೊಹರುಗಳು.

ಹರಪ್ಪನ್ ಜನರು ಒಳಗಿನ ಹಾಗೂ ಹೊರಗಿನ ವ್ಯಾಪಾರಗಳನ್ನು ನಡೆಸುತ್ತಿದ್ದರು. ಕಚ್ಚಾ ಪದಾರ್ಥಗಳನ್ನು ಸಂಗ್ರಹಿಸುವ ರಾಜ್ಯದ ದೂರ ಪ್ರದೇಶಗಳಂಥ ಹಾಗೂ ಕೆಲಸ ನಡೆಸುವ ಸ್ಥಳಗಳ ನಡುವೆ ಅದರ ಸಾಂಸ್ಕೃತಿಕ ವಲಯದೊಳಗೆ ಆಂತರಿಕ ವ್ಯಾಪಾರಗಳು ನಡೆಯುತ್ತಿದ್ದವು. ಉದಾಹರಣೆಗೆ ಆಫ್‌ಘಾನಿನ ಬಡಾಕ್ಷನ್‌ನಿಂದ ನೀಲ ಹರಳುಗಳನ್ನು ಮತ್ತು ವೈಢೂರ್ಯಗಳನ್ನು ಬಲೂಚಿಸ್ತಾನ್, ರಾಜಸ್ಥಾನಿನ ಮತ್ತು ಕೇತ್ರಿ ಪ್ರದೇಶಗಳಿಂದ ತಾಮ್ರವನ್ನು, ರಾಜಸ್ಥಾನದ ಕೇತ್ರಿ ಪ್ರದೇಶ, ಕಾಶ್ಮೀರ, ಚೆರ್ಟ್(ಉತ್ತರ ಸಿಂಧೂ ಪ್ರದೇಶದ ರೋಹ್ರಿ ಬೆಟ್ಟಗಳು)ಗಳಿಂದ ಚಿನ್ನ ಮತ್ತು ಬೆಳ್ಳಿಯನ್ನು ಗುಜರಾತ್, ಪಶ್ಚಿಮ ಘಟ್ಟಗಳು ಮತ್ತು ಬಲೂಚಿಸ್ತಾನಗಳಿಂದ ಮೃದು ಕಲ್ಲು ಅಥವಾ ಸಾಬೂನು ಕಲ್ಲನ್ನು, ಭಾರತದ ಪಶ್ಚಿಮ ಕರಾವಳಿಯಿಂದ ಕಪ್ಪೆ ಚಿಪ್ಪುಗಳನ್ನು, ಹಿಮಾಲಯದಿಂದ ಮರಮುಟ್ಟುಗಳನ್ನು ತರಿಸಿ ಬಳಸುತ್ತಿದ್ದರು. ವಿದೇಶಗಳೊಡನೆ ಎಂದರೆ ಆಫ್‌ಘಾನಿಸ್ತಾನ್, ಮಧ್ಯ ಏಷ್ಯಾ, ಇರಾನ್ ಪ್ರಸ್ತಭೂಮಿ ಮತ್ತು ಮೆಸಪಟೋಮಿಯಾ ನಡುವೆ ವ್ಯಾಪಾರವನ್ನು ನಡೆಸ ಲಾಗುತ್ತಿತ್ತು.

ಹರಪ್ಪನ್ ಜನರು ತಮ್ಮ ವ್ಯಾಪಾರ ಚಟುವಟಿಕೆಗಳನ್ನು ಭೂ ಮಾರ್ಗ ಹಾಗೂ ಜಲ ಮಾರ್ಗಗಳೆರಡರ ಮೂಲಕವೂ ನಡೆಸುತ್ತಿದ್ದರು. ಕೆಲವು ಹರಳು, ವೈಢೂರ್ಯ, ಮುತ್ತು, ತೇಗ, ಹಸಿ ಖರ್ಜೂರ, ತಾಮಗ್ರ, ಚಿನ್ನ ಮುಂತಾದವುಗಳು ಸಿಂಧೂ ಕಣಿವೆಯಿಂದ ಮೆಸಪಟೋಮಿಯಾಕ್ಕೆ ರಫ್ತು ಮಾಡುತ್ತಿದ್ದ ಕೆಲವು ಮುಖ್ಯ ವಸ್ತುಗಳು. ಆಹಾರ ವಸ್ತುಗಳು, ತೈಲ ಹಾಗೂ ಬಟ್ಟೆ ಮುಂತಾದವುಗಳನ್ನು ಮುಖ್ಯವಾಗಿ ಆಮದು ಮಾಡಿಕೊಳ್ಳುತ್ತಿದ್ದರು.

ಮೆಸಪಟೋಮಿಯಾದಲ್ಲಿ ದೊರೆತ ಹರಪ್ಪದ ಮಾನವ ನಿರ್ಮಿತ ವಸ್ತುಗಳಾದ ಮೊಹರುಗಳು, ಕುಸುರು ಕೆಲಸ ಮಾಡಿದ ಕೆಂಪು ಮಣಿಗಳು, ಮಣ್ಣಿನ ವಸ್ತುಗಳು ಹರಪ್ಪ ಪ್ರದೇಶ ಮತ್ತು ಮೆಸಪಟೋಮಿಯಾಗಳ ನಡುವೆ ವ್ಯಾಪಾರ ಚಟುವಟಿಕೆಗಳು ನಡೆಯು ತ್ತಿದ್ದವು ಎಂಬಂಶವನ್ನು ದೃಢಪಡಿಸುತ್ತವೆ. ಆದರೆ ಮೆಸಪಟೋಮಿಯಾದಲ್ಲಿ ತಯಾರಾದ ವಸ್ತುಗಳು ಸಿಂಧೂ ಕಣಿವೆಯಲ್ಲಿ ಅತಿ ಕಡಿಮೆ ದೊರೆತಿವೆ ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಚ್ಯವಸ್ತುಶಾಸ್ತ್ರಜ್ಞರಲ್ಲಿ ಭಿನ್ನಾಭಿಪ್ರಾಯವಿದೆ. ಮೆಸಪಟೋಮಿಯಾದ ಸಾಹಿತ್ಯದಲ್ಲಿ ತೇಗ, ತಾಮ್ರ, ಚಿನ್ನ, ದಂತೆ ಮುಂತಾದವುಗಳನ್ನು ತಂದ ಮೆಲುಹ್ವಾದ ವ್ಯಾಪಾರಿಗಳ ಉಲ್ಲೇಖವಿದೆ. ಮೆಲುಹ್ವಾ ಪ್ರದೇಶವನ್ನು ಸಿಂಧೂ ಕಣಿವೆ ಪ್ರದೇಶದೊಡನೆ ಗುರುತಿಸಲಾಗಿದೆ.

ಸಾರಿಗೆ  

ಎತ್ತಿನ ಗಾಡಿಗಳು ಭೂ ಮಾರ್ಗದ ಸಾರಿಗೆಯ ಸಾಮಾನ್ಯ ವಿಧಾನವಾಗಿತ್ತು. ಉತ್ಖನನ ಕಾಲದಲ್ಲಿ ದೊರೆತ ಎತ್ತಿನ ಗಾಡಿಗಳ ಜೇಡಿ ಮಣ್ಣಿನ ಮಾದರಿಗಳೂ ಇದನ್ನೇ ದೃಢಪಡಿಸು ತ್ತವೆ. ಕಷ್ಟಕರವಾದ ಹಾಗೂ ಕಾಡುಗಳ ಮೂಲಕವಾಗಿ ಮಾಡಬೇಕಾಗುವ ದೀರ್ಘಕಾಲದ ಪ್ರಯಾಣಗಳಿಗೆ ಬಳಸುತ್ತಿದ್ದ ಸಾರಿಗೆ ಎಂದರೆ ಎತ್ತಿನ ಬಂಡಿಗಳು.

ಅವರು ಬಳಸುತ್ತಿದ್ದ ಜಲಮಾರ್ಗದ ಸಾರಿಗೆ ವ್ಯವಸ್ಥೆಯೆಂದರೆ ದೋಣಿಗಳು ಹಾಗೂ ಹಡಗುಗಳು. ಹರಪ್ಪ ಮೊಹೆಂಜೋದಾರೊಗಳಲ್ಲಿ ದೊರೆತಿರುವ ಮೊಹರುಗಳ ಮೇಲೆ ಹಡಗುಗಳ ಚಿತ್ರವಿರುವುದು ಕಂಡುಬಂದಿದೆ. ಅದಲ್ಲದೆ ಲೋಥಲ್‌ನಲ್ಲಿ ದೊರೆತಿರುವ ಜೇಡಿಮಣ್ಣಿನ ಹಡಗಿನ ಪ್ರತಿಕೃತಿ ಹಾಗೂ ಗೋಡೆಗಳ ಮೇಲೆ ದೊರೆತಿರುವ ಹಡಗಿನ ರೇಖಾ ವಿನ್ಯಾಸಗಳು ವ್ಯಾಪಾರ ಚಟುವಟಿಕೆಗಳಿಗೆ ಜಲ ಮಾರ್ಗದ ಬಳಕೆಯನ್ನು ಸೂಚಿಸುತ್ತವೆ.