ಶಾಂಗ್ ವಂಶ (ಸು.ಕ್ರಿ.ಪೂ.೧೭೭೬ ರಿಂದ ೧೧೨೨)

ಕ್ರಿ.ನೆಪೂ.೧ಯ ಶತಮಾನದಲ್ಲಿ ಚರಿತ್ರೆ ಬರೆದ ಗುಮಾಶಿಯಾನ್ ಎಂಬ ಇತಿಹಾಸಕಾರನು ಆರಂಭದ ಸುಮಾರು ೩೦ ಶಾಂಗ್ ರಾಜರ ಹೆಸರುಗಳನ್ನು ಪಟ್ಟಿ ಮಾಡಿದ್ದಾನೆ. ಆದರೆ ತೀರ ಇತ್ತೀಚಿನವರೆಗೆ ಅನೆಯಕ ವಿಚಾರವಾದಿಗಳು ಶಾಂಗ್ ವಂಶ ಎಂಬುದು ಅಸ್ತಿತ್ವದಲ್ಲಿತ್ತೇ ಎಂಬ ಬಗ್ಗೆ ಸಂಶಯವನ್ನು ಹೊಂದಿದ್ದರು. ಆದರೆ ಭವಿಷ್ಯವಾಣಿ ಮೂಳೆಗಳು ಅಥವಾ ‘ಡ್ರಾಗನ್’ ಮೂಳೆಗಳ ಸುಮಾರು ೧೦೦,೦೦೦ ತುಂಡುಗಳು ಪತ್ತೆಯಾಗಿ ಪ್ರಾಚ್ಯ ಸಂಶೋಧಕರ ಗಮನ ಸೆಳೆದಿವೆ. ಆ ತರುವಾಯ ಹೊನಾನ್ ಪ್ರಾಂತ್ಯದಲ್ಲಿ ಮಾಡಲಾದ ಉತ್ಖನನದಲ್ಲಿ, ಕಂಚಿನಯುಗ ಅಥವಾ ಶಾಂಗ್ ಯುಗದ ಕಾಲದವು ಎಂದು ಹೇಳ ಬಹುದಾದ ಅನೆಯಕ ಕುತೂಹಲಕಾರಿ ವಸ್ತುಗಳು ದೊರಕಿವೆ. ಈ ಉತ್ಖನನದಲ್ಲಿ ಅನೆಯಕ ಕುಟ್ಟಿಘಟ್ಟಿಸಿದ ಮಣ್ಣಿನ ಗೋಡೆಗಳು ಬೆಳಕು ಕಂಡಿವೆ. ಕೆಲವು ಸ್ಥಳದಲ್ಲಿ ಅವು ೨೯-೫ ಅಡಿ ಎತ್ತರದವಾಗಿವೆ ಮತ್ತು ತಳ ೧೧೮ ಅಡಿ ಅಗಲದ್ದಾಗಿದೆ. ಈ ಗೋಡೆಗಳ ಸುತ್ತಳತೆ ೪.೩ ಮೈಲುಗಳು (೭ಕಿ.ಮೀ). ಗೋಡೆಯ ಒಳಗೆ ತುಳಿದು ಘಟ್ಟಿಸಿದ ಮಣ್ಣಿನ ಅಡಿಪಾಯಗಳು ಮತ್ತು ದೊಡ್ಡ ಕಂಭಗಳುಳ್ಳ ಸ್ಥಳಗಳು ಕಂಡುಬಂದಿವೆ.

ನಗರದ ಕೋಟೆಯ ಹೊರಭಾಗದಲ್ಲಿ ಜನಸಾಮಾನ್ಯರದೆಂದು ಹೇಳಬಹುದಾದ ಸಣ್ಣ ಮನೆಗಳು, ಕಾರ್ಯಾಗಾರಗಳು ಮತ್ತು ಗೋರಿಗಳು ಕಂಡುಬಂದಿವೆ. ಶಾಂಗ್ ವಂಶಾವಳಿ ಅನೇಕ ರಾಜಧಾನಿಗಳನ್ನು ಹೊಂದಿತ್ತು. ಅವರು ಮೊದಲು ಬೋದಲ್ಲಿದ್ದರು. ತರುವಾಯ ಅವೂಗೆ ತಮ್ಮ ರಾಜಧಾನಿಯನ್ನು ಸ್ಥಳಾಂತರಿಸಿದರು. ಕೊನೆಯಲ್ಲಿ ಯಿನ್ ಅನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಕೊನೆಯ ರಾಜಧಾನಿ ಯಿನ್ ಪ್ರಾಗೈತಿಹಾಸಿಕವಾಗಿ ಪ್ರಸಿದ್ಧವಾದದ್ದು. ಐತಿಹಾಸಿಕ ದಾಖಲೆಗಳು ಮತ್ತು ಅರೆಕಲ್ ಮೂಳೆಗಳ ಪ್ರಕಾರ ಕೊನೆಯ ೧೨ ರಾಜರು ಇಲ್ಲಿ ೨೭೩ ವರ್ಷಗಳ ಕಾಲ ರಾಜ್ಯವಾಳಿದರು. ರಾಜರ ಸಮಾಧಿಗಳನ್ನು ಕ್ರಮಬದ್ಧವಾಗಿ ಉತ್ಖನನ ಮಾಡುವುದಕ್ಕೆ ಮುಂದೆ ಬಹಳವಾಗಿ ಲೂಟಿ ಮಾಡಲಾಗಿದೆ. ಆದರೆ ಈ ಅವಧಿ ಕಂಚಿನ ಪಾತ್ರೆಗಳಿಗೆ ಪ್ರಸಿದ್ಧವಾಗಿದೆ. ಅವುಗಳಲ್ಲಿ ಅನೆಯಕ ಪಾತ್ರೆಗಳ ಮೇಲೆ ಲೇಖನಗಳು ಕಂಡುಬಂದಿವೆ. ಹೀಗೆ ಶಾಂಗ್ ವಂಶದ ಕಾಲದ ಜನರು ಕ್ರಿ.ಪೂ.೧೫೨೩ರಿಂದ ೧೦೨೭ರವರೆಗೆ ಒಂದು ಪ್ರಬುದ್ಧ ಕಂಚಿನಯುಗದ ಸಂಸ್ಕೃತಿಯನ್ನು ಹೊಂದಿದ್ದರು ಎಂಬುದು ಈಗ ಸಂಪೂರ್ಣವಾಗಿ ಸ್ಪಷ್ಟವಾಗಿದೆ. ಹೀಗೆ ಕ್ರಿ.ಪೂ.೧೫೦೦ರ ಸುಮಾರಿಗೆ ಚೀನಾದಲ್ಲಿ ಒಂದು ಸ್ಪಷ್ಟ ಸಂಸ್ಕೃತಿ ರೂಪುಗೊಂಡಿತ್ತು. ಮತ್ತು ಇಲ್ಲಿನ ಜನರು ದೊಡ್ಡ ಮನೆಗಳಲ್ಲಿ ವಾಸಿಸುತ್ತಿದ್ದರು. ಚೆನ್ನಾಗಿ ಅಭಿವೃದ್ದಿ ಹೊಂದಿದ ಕೃಷಿ ಅರ್ಥವ್ಯವಸ್ಥೆ ಅವರದ್ದಾಗಿತ್ತು. ಕವಡೆಗಳು ವಿನಿಮಯ ಮಾಧ್ಯಮ ಎಂದರೆ ಹಣದ ರೂಪದಲ್ಲಿ ಬಳಕೆಯಾಗುತ್ತಿದ್ದವು. ರಾಜರ ಸಮಾಧಿಗಳು, ಸಮಾಧಿ ಸರಕುಗಳು ಮತ್ತು ನರಬಲಿ ಅಥವಾ ನಾಯಿಬಲಿ ಅವಶೇಷಗಳನ್ನು ಹೊಂದಿದ್ದವು. ಈ ಸಮಾಧಿ ಸರಕುಗಳನ್ನು ಶವದಾನಿಯೊಳಗೆ ಇರಿಸುತ್ತಿದ್ದರು. ಆದರೆ ಬಹಳಷ್ಟು ಬಾರಿ ಶವದಾನಿಯ ಹೊರಗೆ ಆದರೆ ಸಮಾಧಿ ಒಳಗೆ ಇರಿಸಿರುತ್ತಿದ್ದರು.

ಶಾಂಗ್ ವಂಶದ ಸಮಕಾಲೀನ ನಿವೇಶನಗಳು ಚೀನಾದ ಉದ್ದಗಲಕ್ಕೂ ದೊರೆಯುತ್ತವೆ. ಹೀಗೆ ಶಾಂಗ್ ವಂಶವು ಚೀನಾದ ವಿವಿಧ ರಾಜವಂಶಗಳಲ್ಲಿ ಅತ್ಯಂತ ಹಳೆಯದ್ದೆಂದು ಹೇಳಬಹುದು. ಅವರು ಉತ್ತರದ ಹಳದಿ ನದಿಯ ಕಣಿವೆಯಲ್ಲಿ ಒಂದು ವಿಶಾಲ ನಾಗರಿಕತೆಯನ್ನು ಸ್ಥಾಪಿಸಿದರು ಮತ್ತು ಯಿನ್ ರಾಜಧಾನಿ ನಗರದಲ್ಲಿ ಇದು ಸಾಂದ್ರ ವಾಗಿತ್ತು. ಆದರೆ ಒಟ್ಟಾರೆ ನೋಡಿದಾಗ ಶಾಂಗ್ ಎನ್ನುವುದು ಮೂಲತಃ ಒಂದೆಡೆಯಿಂದ ಇನ್ನೊಂದೆಡೆಗೆ ಅಲೆದಾಡುತ್ತಿದ್ದ ಒಂದು ಅಲೆಮಾರಿ ಬುಡಕಟ್ಟಿನ ಹೆಸರಾಗಿರುವಂತಿದೆ. ಅಂತಿಮವಾಗಿ ಇದು ಆಧುನಿಕ ಹೊನಾನ್ ಪ್ರಾಂತದ ಶಾಂಗ್ ಚ್ಲಿಯು ಪ್ರದೇಶದಲ್ಲಿ ನೆಲೆಗೊಂಡಿರುವಂತಿದೆ. ಹೆಚ್ಚು ಮುಂದುವರಿದ ಬುಡಕಟ್ಟುಗಳ ಸಂಸರ್ಗದಿಂದ ಇದು ಕ್ರಮೇಣ ಕೃಷಿಗಾರಿಕೆ ಬೆಳೆಸಿಕೊಂಡಿತು ಮತ್ತು ನೆಲೆನಿಂತ ಸಮಾಜದ ಶಿಷ್ಟ ಸಂಸ್ಕೃತಿಯನ್ನು ತನ್ನದಾಗಿಸಿಕೊಂಡಿತು. ಹೀಗಿದ್ದರೂ ಅದು ತನ್ನ ಅಲೆಮಾರಿ ಗುಂಪಿನ ಚೈತನ್ಯ ಮತ್ತು ಚುರುಕುತನವನ್ನು ಕಳೆದುಕೊಳ್ಳಲಿಲ್ಲ. ಕ್ರಿ.ಪೂ.೧೮ನೆಯ ಶತಮಾನದಲ್ಲಿ ಒಬ್ಬ ಮಹಾನ್ ನಾಯಕ ಹುಟ್ಟಿಕೊಂಡನು. ಆತ ಸಂಧಾನ ಮತ್ತು ಯುದ್ಧತಂತ್ರಗಳಿಂದ ನೆರೆಹೊರೆಯ ಬಹಳಷ್ಟು ರಾಜ್ಯಗಳನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. ಚೀನಾದ ಬುಡಕಟ್ಟುಗಳು ಕ್ಸಿಯಾ ಅಥವಾ ಸಿಯಾಗಳ ಅನುಯಾಯಿಗಳಾಗಿರುವುದನ್ನು ಬಿಟ್ಟು ತನ್ನ ಅನುಯಾಯಿ ಗಳಾಗುವಂತೆ ಮಾಡುವಲ್ಲಿ ಯಶಸ್ವಿಯಾದನು. ಹೀಗೆ ಶಾಂಗ್ ವಂಶ ವಿದ್ಯುಕ್ತವಾಗಿ ನೆಲೆಯೂರಿತು. ಈ ವಂಶ ಹೀಗೆ ನೆಲೆಗೊಂಡದ್ದು ಕ್ರಿ.ಪೂ.೧೭೬೬ರಲ್ಲಿ ಎಂದು ಪರಂಪರಾನುಗತವಾಗಿ ತಿಳಿದುಬಂದಿದೆ. ಹಿಂದೆ ಹೇಳಿದಂತೆ ಅವರು ತಮ್ಮ ಆಡಳಿತಾವಧಿಯಲ್ಲಿ ರಾಜಧಾನಿಯನ್ನು ಅನೆಯಕ ಬಾರಿ ಒಂದೆಡೆಯಿಂದ ಇನ್ನೊಂದೆಡೆಗೆ ಬದಲಾಯಿಸಿದ್ದಾರೆ. ಇದರಿಂದ ಅವರು ತಮ್ಮ ದನಗಾಹಿ ಹಂತದಿಂದ ಪೂರ್ಣವಾಗಿ ಹೊರಬಂದಿಲ್ಲ ಅಥವಾ ಪದೇ ಪದೇ ಸಾಗುವಳಿ ಮಾಡಿ ಭೂಮಿಯ ಫಲವತ್ತತೆ ನೀಗುವಂತೆ ಅನೇಕ ಸಲ ಮಾಡಿರುತ್ತಾರೆ ಎಂದು ಅರಿವಾಗುತ್ತದೆ. ಎರಡೂ ಸಿದ್ಧಾಂತದಲ್ಲಿ ಬಹುಶಃ ಸತ್ಯಾಂಶವಿರುವಂತಿದೆ. ಅಂತೂ ಕೃಷಿ ಅವರ ಮುಖ್ಯ ವೃತ್ತಿಯಾಗಿತ್ತು. ನವಣೆ, ಗೋಧಿ, ಅಕ್ಕಿ ಅವರ ಮುಖ್ಯ ಬೆಳೆಗಳು. ನವಣೆ ಅವರ ಪ್ರಮುಖ ದೈನಂದಿನ ಆಹಾರವಾಗಿತ್ತು ಮತ್ತು ಮದ್ಯ ತಯಾರಿಸಲೂ ಬಳಸುತ್ತಿದ್ದರು. ರೇಷ್ಮೆ ಕೃಷಿ ಅವರಿಗೆ ತಿಳಿದಿತ್ತು ಮತ್ತು ರೇಷ್ಮೆ ಉತ್ಪನ್ನವನ್ನು ತಯಾರಿಸುತ್ತಿದ್ದರು. ಹಸು, ಕುದುರೆ, ನಾಯಿ ಮುಂತಾದುವನ್ನು ಮನೆಯಲ್ಲಿ ಸಾಕುತ್ತಿದ್ದರು.

ರಣರಂಗದಲ್ಲಿ ಸಾಮಾನ್ಯ ಸೈನಿಕರು ಪದಾತಿ ದಳದಲ್ಲಿ ಯುದ್ಧ ಮಾಡಿದರೆ, ಗಣ್ಯ ಯೋಧರು ಅಶ್ವರಥಗಳಲ್ಲಿ ಕಾದಾಡುತ್ತಿದ್ದರು. ಉತ್ತರ ಚೀನಾದಲ್ಲಿ ಅರಣ್ಯಗಳಿದ್ದುದರಿಂದ ರಾಜಮನೆತನಗಳಲ್ಲಿ ಬೇಟೆ ಬಹಳ ಪ್ರಸಿದ್ಧವಾದ ಕ್ರೀಡೆಯಾಗಿತ್ತು. ಉತ್ಖನನಗಳಿಂದ ದೊರೆತ ಆಧಾರಗಳಿಂದ ರೈತರು ಹಾಗು ಜನಸಾಮಾನ್ಯರು ಚೆಡ್ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು. ಇಡೀ ಕುಟುಂಬ ಒಂದು ವಿಶಾಲವಾದ ಆಯತಾಕಾರದ ಕೋಟೆಯಲ್ಲಿ ವಾಸಿಸುತ್ತಿತ್ತು. ಇದನ್ನು ಮರದ ಹಲಗೆಗಳಿಂದ ಅಡುಗೆಮನೆ ಹಾಗೂ ವಾಸದ ಮನೆಯಾಗಿ ವಿಂಗಡಿಸಲಾಗುತ್ತಿತ್ತು. ಶ್ರೀಮಂತರ ಮನೆ ಇನ್ನೂ ಅನುಕೂಲಕರ ವಾಗಿರುತ್ತಿತ್ತು. ಯಿನ್ ಅವಶೇಷಗಳಲ್ಲಿ ಕಲ್ಲಿನ ಅಡಿಪಾಯಗಳು ಕಂಡುಬಂದಿದೆ.

ಶಾಂಗ್ ವಂಶ ಕಂಚಿನ ಲೋಹಗಾರಿಕೆ ಹಾಗೂ ಲಿಖಿತ ಭಾಷೆಯ ಅಭಿವೃದ್ದಿಗೆ ಹೆಸರಾಗಿದೆ. ಕಂಚಿನ ಸಾಮಗ್ರಿಗಳು ಇವರ ಕಾಲದಲ್ಲೇ ಪರಿಪಕ್ವತೆ ಕಂಡವು. ಸಮಕಾಲೀನ ನಾಗರಿಕತೆಗಳಿಗೆ ಹೋಲಿಸಿದರೆ, ಕಂಚಿನ ಎರಕಗಾರಿಕೆಯಲ್ಲಿ ಶಾಂಗ್ ವಂಶ ಸಿದ್ಧಹಸ್ತ ವಾಗಿತ್ತು. ಈ ಕಂಚಿನ ವಸ್ತುಗಳು ವಿವಿಧ ಬಗೆಯವಾಗಿದ್ದವು. ಮನೆಯ ಪಾತ್ರೆ ಪಡಗಗಳು ಪೂಜ ಸಾಮಗ್ರಿಗಳು ಹೀಗೆ. ಈ ಪೂಜ ಪಾತ್ರೆಗಳು ಕೊರೆದ ಕೆತ್ತನೆ ಅಥವಾ ಉಬ್ಬು ಕೆತ್ತನೆಯ ಕುಸುರಿ ಕೆಲಸವನ್ನು ಹೊಂದಿದ್ದವು. ಯುದ್ಧದ ಶಸ್ತ್ರಾಸ್ತ್ರ ತಯಾರಿಕೆಗೂ ಕಂಚನ್ನು ಬಳಸಲಾಗುತ್ತಿತ್ತು. ಭರ್ಜಿಗಳು, ಈಟಿಗಳು, ಬಾಣಗಳು, ಕತ್ತಿಗಳು, ಚಾಕುಗಳು ಹಾಗೂ ಯೋಧರ ಶಿರಸ್ತ್ರಾಣಗಳಿಗೆ ಬಣ್ಣ ಬಳಿದಿರುತ್ತಿದ್ದರು. ಕಂಚಿನ ಜೊತೆಗೆ ಅವರು ಕಲ್ಲಿನ ಹಾಗೂ ಮೂಳೆಗಳ ಸಾಧನಗಳನ್ನು ಬಳಸುತ್ತಿದ್ದರು.

ಶಾಂಗ್ ಕಾಲಾವಧಿಯಲ್ಲಿ ಪತ್ತೆಯಾದ ಇನ್ನೊಂದು ವಸ್ತುವೆಂದರೆ ಮೆರುಗು ಕೊಟ್ಟ ಮಡಿಕೆಗಳು. ಇವನ್ನು ಅತ್ಯಂತ ಉತ್ತಮವಾದ ಜೇಡಿಮಣ್ಣಿನಿಂದ ತಯಾರಿಸಲಾಗಿದೆ ಮತ್ತು ಅವುಗಳ ಮೇಲೆ ಪ್ರಾಣಿಗಳ ವರ್ಣಚಿತ್ರ ಅಥವಾ ಉಬ್ಬು ರೇಖಾಚಿತ್ರ ಮತ್ತು ಜಮಿತಿ ವಿನ್ಯಾಸಗಳನ್ನು ಬರೆದಿರಲಾಗುತ್ತಿತ್ತು.

ಜೇಡ್ ಕಲ್ಲುಗಳನ್ನು ಮನುಷ್ಯರು, ಕಾಡುಮೃಗಗಳು, ಹಕ್ಕಿಗಳು, ಮೀನುಗಳು ಮತ್ತು ಕಪ್ಪೆಗಳು ಮುಂತಾದ ಆಕಾರದಲ್ಲಿ ಕೆತ್ತಲಾಗುತ್ತಿತ್ತು. ಕಲ್ಲುಗಳನ್ನು ಮನುಷ್ಯರು, ಪ್ರಾಣಿಗಳು ಮತ್ತು ಹಕ್ಕಿಗಳ ಮೂರ್ತಿಗಳಾಗಿ ಕೆತ್ತಲಾಗಿತ್ತು. ಜೇಡ್ ಹಾಗೂ ಇತರ ಅಮೂಲ್ಯ ರತ್ನಗಳಿಂದ ವಿವಿಧ ಬಗೆಯ ಒಡವೆಗಳನ್ನು ತಯಾರಿಸುತ್ತಿದ್ದರು. ಈ ವಸ್ತುಗಳು ಅವುಗಳು ಕಂಡುಬಂದ ಪ್ರದೇಶಗಳಲ್ಲಿ ತಯಾರಾಗುತ್ತಿರಲಿಲ್ಲವಾದ ಕಾರಣ ವ್ಯಾಪಾರ ಬಹಳ ವ್ಯಾಪಕವಾಗಿ ನಡೆಯುತ್ತಿದ್ದಿರಬಹುದು. ಕವಡೆಗಳನ್ನು ವಿನಿಮಯ ವಸ್ತು ಅಥವಾ ಹಣದ ರೂಪದಲ್ಲಿ ಬಳಸಲಾಗುತ್ತಿತ್ತು.

ಶಾಂಗ್ ಜನರು ಧಾರ್ಮಿಕ ನಂಬಿಕೆಯುಳ್ಳವರಾಗಿದ್ದರು. ಅವರಿಗೆ ಆತ್ಮಗಳ ಬಗ್ಗೆ ನಂಬಿಕೆ ಇತ್ತು. ಅವರು ಪಿತೃಪೂಜೆಯಲ್ಲಿ ನಂಬಿಕೆ ಇಟ್ಟಿದ್ದರು. ಬಲಿ ನೀಡುವುದು ಸರ್ವೆಸಾಮಾನ್ಯವಾಗಿತ್ತು. ಕೇವಲ ಪ್ರಾಣಿಬಲಿಯಷ್ಟೇ ಅಲ್ಲ, ನರಬಲಿಯೂ ನಡೆಯುತ್ತಿತ್ತು. ಧಾರ್ಮಿಕ ವಿಧಿಗಳಿಗಾಗಿ ಪೂಜರಿಗಳು ಭವಿಷ್ಯವಾಣಿಗಾಗಿ ಮೂಳೆಗಳನ್ನು ಬಳಸುತ್ತಿದ್ದರು. ಅವನ್ನು ಆಮೆಚಿಪ್ಪು ಅಥವಾ ಪ್ರಾಣಿಗಳ ಮೂಳೆಗಳಿಂದ ತಯಾರಿಸುತ್ತಿದ್ದರು. ಅವುಗಳ ಮೇಲೆ ಏನೋ ಬರೆದಿರುತ್ತಿತ್ತು. ಅದನ್ನು ಕೇವಲ ಪೂಜರಿಯು ತನ್ನ ಮಂತ್ರಸೂತ್ರದ ಮೂಲಕ ವ್ಯಾಖ್ಯಾನ ಮಾಡುತ್ತಿದ್ದನು. ಈವರೆಗೆ ಈ ಲಿಪಿಯ ಎರಡು ಸಾವಿರಕ್ಕಿಂತಲೂ ಹೆಚ್ಚು ಲಿಖಿತ ಅಕ್ಷರಗಳನ್ನು ಓದಲಾಗಿದೆ ಮತ್ತು ಅವುಗಳಲ್ಲಿ ಬಹಳಷ್ಟನ್ನು ಇಂದಿನ ಚೀನಿ ಲಿಪಿಯ ಅಕ್ಷರಗಳ ಸಂವಾದಿ ಎಂದು ಗುರುತಿಸಲಾಗಿದೆ. ಅದ್ದರಿಂದ ಚೀನಾದಲ್ಲಿ ಬರಹ ಕಡೇಪಕ್ಷ ಕ್ರಿ.ಪೂ.೨೦೦೦ರ ಹೊತ್ತಿಗೇ ಪ್ರಾರಂಭವಾಗಿತ್ತು.

ಇಂದು ಚೀನಿಭಾಷೆ ಜಗತ್ತಿನ ಜೀವಂತ ಭಾಷೆಗಳಲ್ಲೇ ಹಳೆಯದು. ಇದರ ವಿಶಿಷ್ಟತೆ ಏನೆಂದರೆ ಇದು ಧ್ವನಿ ಆಧಾರಿತವಲ್ಲ. ಇದು ಚಿತ್ರಲಿಪಿ ಮತ್ತು ಭಾವಲಿಪಿಯಿಂದ ಆರಂಭ ವಾಯಿತು. ಇದು ಕಲಿಯಲು ಅತಿಕಷ್ಟವಾದ ಭಾಷೆಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಇದಕ್ಕೆ ಕಾರಣವೆಂದರೆ ಅದು ಧ್ವನಿ ಆಧಾರಿತವಲ್ಲದ ಭಾಷೆ ಆಗಿರುವುದು. ಹೀಗೆ ಶಾಂಗ್ ವಂಶದ ಕಾಲ ಚೀನಿಯರ ನಾಗರಿಕೆಯಲ್ಲಿ ಅತ್ಯಂತ ಪ್ರಮುಖ ಸಾಂಸ್ಕೃತಿಕ ಘಟ್ಟವಾಗಿದೆ.

ಚೌ ವಂಶ

ಕ್ರಿ.ಪೂ.೧೧ನೆಯ ಶತಮಾನದಲ್ಲಿ ಪಶ್ಚಿಮದಿಂದ ಬಂದ ಚೌ ಅಲೆಮಾರಿ ಬುಡಕಟ್ಟಿನವರು ಶಾಂಗ್ ಬುಡಕಟ್ಟಿನವರನ್ನು ಪರಾಜಿತರಾಗಿಸಿದರು. ಇವರು ಶಾಂಗ್ ಸಂಸ್ಕೃತಿಯ ಅನೆಯಕ ಲಕ್ಷಣಗಳನ್ನು ಉಳಿಸಿಕೊಂಡರು. ಶಾಂಗ್ ವಂಶಕ್ಕಿಂತ ಚೆನ್ನಾಗಿ ಚೌ ವಂಶದ ಐತಿಹಾಸಿಕ ಅಸ್ತಿತ್ವ ಸ್ಥಾಪಿತವಾಗಿದೆ ಮತ್ತೆ ಅದಕ್ಕೆ ಪೂರಕವಾಗಿ ಪುರಾತತ್ವ ಸಾಕ್ಷ್ಯಗಳೂ ಇವೆ. ಚೌ ವಂಶಸ್ಥರ ಆರಂಭದ ಕಾಲವನ್ನು ಪಶ್ಚಿಮ ಚೌ ಕಾಲ ಎಂದು ಕರೆಯಲಾಗುತ್ತದೆ. ಅವರು ಇಂದಿನ ಸಿಯಾನ್ ನಗರದ ಬಳಿಯ ವೆಯ್ ಕಣಿವೆಯಲ್ಲಿ ವಾಸಿಸುತ್ತಿದ್ದರು. ವೆಯ್ ನದಿ ಹಳದಿಯ ನದಿಯ ಒಂದು ಉಪನದಿ. ಚೌಗಳು ಶಾಂಗ್ ವಂಶಸ್ಥರಷ್ಟು ನಾಗರಿಕರಾಗಿರಲಿಲ್ಲ. ನವಶಿಲಾಯುಗದ ಕಪ್ಪು ಮಡಿಕೆ ಸಂಸ್ಕೃತಿಯಂತೆ ಇವರ ನಾಗರಿಕತೆ. ಆದರೆ ಶಾಂಗ್ ಸಂಸ್ಕೃತಿಯವರಿಗಿಂತ ಯುದ್ಧಪ್ರಿಯರು.

ಭವಿಷ್ಯವಾಣಿ ಮೂಳೆಯ ಪ್ರಕಾರ ಅವರು ಶಾಂಗ್ ವಂಶಸ್ಥರೊಂದಿಗೆ ಕೆಲವೊಮ್ಮೆ ಮಿತ್ರರಾಗಿ ಕೆಲವೊಮ್ಮೆ ಶತ್ರುಗಳಾಗಿ ಸಂಬಂಧ ಹೊಂದಿದ್ದರು ಎಂದು ತಿಳಿದುಬರುತ್ತದೆ.

ಕ್ರಿ.ಪೂ.೧೦೫೦ರ ಹೊತ್ತಿಗೆ ಉತ್ತರದ ಅಲೆಮಾರಿಗಳು ಮತ್ತು ಪೂರ್ವದ ಬಂಡುಕೋರ ಬುಡಕಟ್ಟುಗಳೊಂದಿಗೆ ಹೋರಾಡಿ ಹೋರಾಡಿ ಶಾಂಗ್ ವಂಶಸ್ಥರು ದುರ್ಬಲರಾಗಿದ್ದರು. ಈ ಅವಕಾಶವನ್ನು ಚೌ ಜನಾಂಗ ಬಳಸಿಕೊಂಡರು ಮತ್ತು ವಿಶ್ವಾಸ ಕಳೆದುಕೊಂಡಿದ್ದ ನಗರ ರಾಜ್ಯಗಳೊಂದಿಗೆ ಮೈತ್ರಿ ಬೆಳೆಸಿಕೊಂಡರು ಮತ್ತು ಶಾಂಗ್ ವಂಶಸ್ಥರನ್ನು ಆಕ್ರಮಿಸಿ ಗೆದ್ದರು.

ಚೌ ವಂಶಸ್ಥರೂ ಶಾಂಗ್ ಸಂಸ್ಕೃತಿಯ ಜೀವನ ವಿಧಾನವನ್ನೇ ಅನುಸರಿಸಿದರು. ವ್ಯವಸಾಯವೇ ಅರ್ಥವ್ಯವಸ್ಥೆಯ ಪ್ರಮುಖ ಅಂಗವಾಗಿತ್ತು. ಸಮಾಜವೂ ವಿವಿಧ ಸ್ತರಗಳಾಗಿ ವಿಂಗಡಿಸಲ್ಪಟ್ಟಿತ್ತು. ಅವು ಹೀಗಿವೆ

೧. ರಾಜರು-ಅರಸುಮನೆತನದವರು

೨. ಅಧಿಕಾರಿಗಳು ಮತ್ತು ಯೋಧರು

೩. ರೈತರು

೪. ಗುಲಾಮರು-ಮನೆವಾರ್ತೆ ನೌಕರರು.

ಭಾವಲಿಪಿ ಬರಹದ ಚೀನಿ ಬರವಣಿಗೆ ಯಾವುದೇ ಆಡೆತಡೆ ಇಲ್ಲದೆ ಅಭಿವೃದ್ದಿ ಹೊಂದಿತು. ಕಂಚಿನ ಉತ್ಸವ ಪಾತ್ರೆಗಳನ್ನು ಈ ಕಾಲದಲ್ಲೂ ಎರಕ ಹೊಯ್ದು ತಯಾರಿಸ ಲಾಗುತ್ತಿತ್ತು. ಆದರೆ ಅವುಗಳಲ್ಲಿ ಶಾಂಗ್ ಕಾಲದ ಪಾತ್ರೆಗಳ ಸೂಕ್ಷ್ಮ ಕೆತ್ತನೆ ಇರುತ್ತಿರಲಿಲ್ಲ.

ಚೌ ಜನಾಂಗದವರು ಪಶ್ಚಿಮದ ತಮ್ಮ ರಾಜಧಾನಿಯನ್ನು ಇಟ್ಟುಕೊಂಡರು. ಆದರೆ ಹಳದಿ ನದಿಯ ದಕ್ಷಿಣದ ತಿರುವಿನಲ್ಲಿ ಲೊಯಾಂಗ್‌ನಲ್ಲಿ ಇನ್ನೊಂದು ರಾಜಧಾನಿಯನ್ನು ಸ್ಥಾಪಿಸಿದರು. ರಾಜಕೀಯವಾಗಿ ಚೌ ಜನಾಂಗದವರು ಶಾಂಗ್ ಜನಾಂಗದವರ ಅಡಿಯಲ್ಲಿ ಶಿಥಿಲವಾಗಿ ರೂಪುಗೊಂಡಿದ್ದ ಊಳಿಗಮಾನ್ಯ ಪದ್ಧತಿಯನ್ನು ಇನ್ನೂ ನಿಖರವಾದ ಪದ್ಧತಿಯನ್ನಾಗಿ ಮಾಡಿದರು. ತಮ್ಮ ಭೂಭಾಗಗಳನ್ನು ಈ ಹೊಸ ಶ್ರೀಮಂತ ಪ್ರಭುತ್ವ ದಲ್ಲಿ ಜಹಗೀರುಗಳಾಗಿ ವಿಂಗಡಿಸಿದರು. ಇದು ಬೇಸಾಯ ಅರ್ಥವ್ಯವಸ್ಥೆಯನ್ನು ಆಧರಿಸಿದ್ದಾಗಿತ್ತು ಮತ್ತು ರೈತಾಪಿವರ್ಗ ಬಹಳವಾಗಿತ್ತು. ಆದರೆ ಮೊದಲಿನಿಂದಲೂ ಅಸ್ಥಿರತೆಯ ಕುರುಹುಗಳು ಕಂಡುಬರುತ್ತಿದ್ದವು. ಅನೇಕ ಚಿಕ್ಕಪುಟ್ಟ ಸಂಸ್ಥಾನಗಳು ಸಿಡಿದು ಬೇರ್ಪಡಲು ಪ್ರಯತ್ನಿಸುತ್ತಿದ್ದವು. ಅವು ಉತ್ತರ ಹಾಗೂ ವಾಯುವ್ಯದ ಕಡೆಯಿಂದ ಬರುತ್ತಿದ್ದ ದಾಳಿಯನ್ನು ಎದುರಿಸಲು ಅಸಮರ್ಥವಾಗಿದ್ದವು. ಕೊನೆಗೆ ಕ್ರಿ.ಪೂ.೭೭೧ರ ಹೊತ್ತಿಗೆ, ಪಶ್ಚಿಮ ಚೌ ವಂಶಸ್ಥರ ವೈ ಕಣಿವೆ ರಾಜಧಾನಿಯನ್ನು ಬರ್ಬರರು ದಾಳಿ ಮಾಡಿ ಗೆದ್ದರು. ಕೊನೆಯ ಚೌ ಚಕ್ರವರ್ತಿ ಬಹಳ ದುರ್ಬಲನಾಗಿದ್ದ ಕಾರಣ ದಾಳಿಕೋರರು ಅವನನ್ನು ಕೊಂದು ಚೌ ರಾಜಧಾನಿಯನ್ನು ಸೂರೆ ಮಾಡಿದರು.

ಸಿಂಹಾಸನ ಏರಬೇಕಾಗಿದ್ದ ಯುವರಾಜ ತನ್ನ ಕೆಲವು ಆಸ್ಥಾನಿಕರೊಂದಿಗೆ ತಪ್ಪಿಸಿಕೊಂಡು ಇನ್ನೂರು ಮೈಲಿ ಪೂರ್ವದಲ್ಲಿದ್ದ ಹಳದಿ ನದಿಯ ತಿರುವಿನ ದಕ್ಷಿಣದಲ್ಲಿದ್ದ ತಮ್ಮ ಎರಡನೆಯ ರಾಜಧಾನಿ ಲೊಯಾಂಗ ಪಟ್ಟಣಕ್ಕೆ ಓಡಿಬಂದನು. ಈ ಘಟ್ಟದಿಂದ ಚೀನಿ ಇತಿಹಾಸವನ್ನು ಪೂರ್ವದ ಚೌಗಳ ಕಾಲ ಎಂದು ಕರೆಯಲಾಗುತ್ತದೆ. ಲೊಯಾಂಗ್‌ಗೆ ಓಡಿಬಂದ ಮೇಲೆ ಚೌ ರಾಜರು ತಮ್ಮ ಈ ಹಿಂದಿನ ಅಧಿಕಾರದ ಹಿಡಿತವನ್ನು ಮತ್ತೆ ಪಡೆದುಕೊಳ್ಳುವುದು ಸಾಧ್ಯವಾಗಲಿಲ್ಲ.

ಪೂರ್ವದ ಚೌಗಳು

ಈ ಹಿಂದೆ ಹೇಳಿದಂತೆ ಪೂರ್ವದ ಚೌಗಳು ಲೊಯಾಂಗ್ ಅನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಅವರ ಈ ರಾಜಧಾನಿ ಸಂಸ್ಕೃತಿ ಹಾಗೂ ಧಾರ್ಮಿಕ ಆಚರಣೆಗಳ ಕೇಂದ್ರಸ್ಥಾನವಾಯಿತು. ಪೂರ್ವದ ಚೌಗಳ ಕಾಲದ ಮೊದಲ ಘಟ್ಟವನ್ನು ವಸಂತ ಮತ್ತು ಗ್ರೀಷ್ಮಕಾಲ ಎಂದು ಕೆಲವೊಂದು ಬಾರಿ ಕರೆಯಲಾಗಿದೆ. ಇದು ಕ್ರಿ.ಪೂ.೭೨೨ರಿಂದ ೪೮೧ರವರೆಗಿನ ಕಾಲವನ್ನು ಒಳಗೊಳ್ಳುತ್ತದೆ. ಎರಡನೆಯ ಘಟ್ಟವನ್ನು ಕ್ರಿ.ಪೂ.೪೦೧ರಿಂದ ೨೫೬ರವರೆಗಿನ ಕಾಲಾವಧಿಯನ್ನು ಯುದ್ಧನಿರತ ರಾಜ್ಯಗಳ ಕಾಲ ಎಂಬ ಹೆಸರಿನಲ್ಲಿ ಕರೆದ ಚರಿತ್ರೆಯ ಆಧಾರದ ಮೇಲೆ ಹಾಗೆಂದೇ ಕರೆಯಲಾಗಿದೆ. ಹೀಗೆ ಪೂರ್ವದ ಚೌಗಳ ಕಾಲದಲ್ಲಿ ರಾಜಕೀಯದ ಚಿತ್ರ ಬಹಳ ಗೊಂದಲಮಯವಾಗಿದೆ. ವಸಂತ ಮತ್ತು ಗ್ರೀಷ್ಮಕಾಲದಲ್ಲಿ ಚೌ ಅಧಿಕಾರ ಎರಡು ಹೋಳಾಗಿ ಒಡೆಯಿತು. ಆದರೂ ಅನೆಯಕ ಬಗೆಯ ನಾಗರಿಕತೆಗಳು ಸಮೃದ್ಧವಾಗಿ ಬೆಳೆಯುತ್ತಾ ಹೋದವು. ಅದರಲ್ಲೂ ಉತ್ತರ ಚೀನಾ ಮತ್ತು ಮಧ್ಯದ ಮೈದಾನ ಭಾಗಗಳಲ್ಲಿ ಅನೆಯಕ ಸ್ವಾಯತ್ತ ರಾಜ್ಯಕ್ಷೇತ್ರಗಳು ಬೆಳೆದವು. ದೊಡ್ಡ ದೊಡ್ಡ ರಾಜ್ಯಗಳು ತಮ್ಮ ಗಡಿಸೀಮೆಯೊಳಗಿನ ಪ್ರದೇಶಗಳನ್ನು ಕ್ರೋಡೀಕರಿಸಲು ಪ್ರಾರಂಭಿಸಿದವು. ಅವು ಬುಡಕಟ್ಟು ಜನರನ್ನೂ ತಮ್ಮಲ್ಲಿ ವಿಲೀನಗೊಳಿಸಿಕೊಂಡವು. ಸಣ್ಣ ದುರ್ಬಲ ರಾಜ್ಯಗಳನ್ನು ಆಕ್ರಮಿಸಿ ರಾಜ್ಯಕ್ಷೇತ್ರವನ್ನು ವಿಶಾಲ ಮಾಡಿಕೊಂಡವು.

ಆಕ್ರಮಣಕಾರಿ ರಾಜ್ಯಕ್ಷೇತ್ರಗಳ ವಿರುದ್ಧ ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಹಾಗೂ ಚೌ ರಾಜರುಗಳು ಪರಿಣಾಮಕಾರಿಯಾಗಿ ಅಧಿಕಾರ ಚಲಾಯಿಸದೇ ಇದ್ದ ಕಾರಣ ಸಣ್ಣಪುಟ್ಟ ರಾಜ್ಯಗಳವರು ರಕ್ಷಣಾತ್ಮಕ ಮೈತ್ರಿ ಸಂಘಟನೆಯನ್ನು ಮಾಡಿಕೊಂಡಿದ್ದರು. ಅತಿ ಪ್ರಾಚೀನವಾದ ಇಂತಹ ಮೈತ್ರಿಕೂಟ ಕ್ರಿ.ಪೂ.೬೮೧ರಲ್ಲಿ ರೂಪುಗೊಂಡಿತು. ದಕ್ಷಿಣದಲ್ಲಿ ಯಾಂಗ್ ಟಿ ನದಿಯ ದಡದಲ್ಲಿ ರೂಪುಗೊಂಡ ಅರೆಬರ್ಬರ ರಾಜ್ಯದ ವಿರುದ್ಧ ಇದನ್ನು ಸ್ಥಾಪಿಸಲಾಯಿತು. ಸಣ್ಣಪುಟ್ಟ ರಾಜ್ಯಗಳ ರಾಜಕುಮಾರರು ಮತ್ತು ನಾಯಕರು ತಮ್ಮದೇ ಆದ ಒಬ್ಬ ಅಧಿರಾಜನನ್ನು ಉತ್ತರದ ರಾಜ್ಯಕ್ಷೇತ್ರ ಆಳಲು ಆಯ್ಕೆ ಮಾಡಿದರು ಮತ್ತು ಆತನಿಗೆ ಹಣ ಹಾಗೂ ಸೈನಿಕ ಬೆಂಬಲ ನೀಡುವುದಾಗಿ ಆಣೆ ಮಾಡಿದರು. ಒಂದು ಗೂಳಿಯನ್ನು ಬಲಿಕೊಟ್ಟು ಅವರೆಲ್ಲರೂ ಪ್ರಮಾಣವಚನ ಸ್ವೀಕರಿಸಿದರು. ಮುಂದಿನ ಎರಡು ಶತಮಾನಗಳಲ್ಲಿ ಈ ಮೈತ್ರಿಕೂಟ ಬದಲಾಯಿತು ಮತ್ತು ಆಧಿಪತ್ಯ ಕೂಡ ಬದಲಾಯಿತು.

ಕ್ರಿ.ಪೂ.ಐದನೆಯ ಶತಮಾನದ ಹೊತ್ತಿಗೆ ಈ ಎಲ್ಲ ರಕ್ಷಣಾತ್ಮಕ ಮೈತ್ರಿಕೂಟಗಳು ಮುರಿದುಬಿದ್ದವು. ಶಕ್ತಿಶಾಲಿ ರಾಜ್ಯಗಳು ದುರ್ಬಲ ನೆರೆರಾಜ್ಯಗಳನ್ನು ಕಬಳಿಸಿದವು. ಗಡಿನಾಡಿನ ರಾಜ್ಯಗಳು ಶಕ್ತಿ ಹಾಗೂ ಗಾತ್ರದಲ್ಲಿ ಬೃಹತ್ ಆಗಿ ಬೆಳೆದವು. ಅಂತರರಾಜ್ಯ ಸ್ಥಿರತೆ ಮಾಯವಾಯಿತು.

ನಾಲ್ಕನೆಯ ಶತಮಾನದ ಹೊತ್ತಿಗೆ ಕೇವಲ ಎಂಟು ಅಥವಾ ಒಂಬತ್ತು ರಾಜ್ಯಗಳು ಸ್ಪರ್ಧಿಗಳಾಗಿ ಉಳಿದವು. ಇಲ್ಲಿ ನಾವು ಚೀನಿ ರಾಜಕೀಯ ಸಂದರ್ಭ ಮತ್ತು ಚೀನಿ ಸಮಾಜದಲ್ಲಿ ಬದಲಾವಣೆ ಕಾಣುವುದು ಮಾತ್ರವಲ್ಲ, ವ್ಯವಸಾಯದ ಮತ್ತು ಜನ ಸಮುದಾಯ ಹಬ್ಬುವಿಕೆಯ ಕ್ಷೇತ್ರದಲ್ಲೂ ಬದಲಾವಣೆ ಕಾಣುತ್ತೇವೆ. ಅನೆಯಕ ಚೌಗು ಭೂಮಿಗಳನ್ನು ವ್ಯವಸಾಯಕ್ಕೆ ಬಳಸಿಕೊಂಡಿರುವುದನ್ನು ಕಾಣುತ್ತೇವೆ ಮತ್ತು ಇಲ್ಲಿನ ಅರ್ಥವ್ಯವಸ್ಥೆ ಸಂಪೂರ್ಣವಾಗಿ ಕೃಷಿ ಅರ್ಥವ್ಯವಸ್ಥೆ ಆಗಿರುತ್ತದೆ. ಕಬ್ಬಿಣದ ಶೋಧವಾದ ನಂತರ ಇದು ಮತ್ತಷ್ಟು ಶಕ್ತಿಶಾಲಿಯಾಯಿತು. ನೀರಾವರಿ ಮತ್ತು ಹರಿಗಾಲುವೆಗಳು ಮೊದಲಬಾರಿಗೆ ಪ್ರಮುಖವಾದವು.

ಈ ಅವಧಿಯ ಇನ್ನೊಂದು ಮಹತ್ವಪೂರ್ಣವಾದ ಬೆಳವಣಿಗೆ ಎಂದರೆ ರಾಜ್ಯಕ್ಷೇತ್ರಗಳು ರೂಪುಗೊಂಡಿದ್ದು ಮತ್ತು ವಾಣಿಜ್ಯ ವ್ಯವಹಾರ ಹೆಚ್ಚಿದುದು. ಕ್ರಿ.ಪೂ.೩ನೆಯ ಶತಮಾನದಲ್ಲಿ ಒಂಟೆ ಚೀನಾವನ್ನು ಪ್ರವೇಶಿಸಿತು ಮತ್ತು ಅಗ್ಗವಾದ ಸರಕು ಸಾಗಾಣಿಕೆಗೆ ಅವಕಾಶ ಕಲ್ಪಿಸಿತು. ತಾಮ್ರದ ನಾಣ್ಯಗಳು, ರೇಷ್ಮೆ ಮತ್ತು ಅಮೂಲ್ಯ ಲೋಹಗಳನ್ನು ವಿನಿಮಯ ವಸ್ತುಗಳನ್ನಾಗಿ ಬಳಸಲಾಗುತ್ತಿತ್ತು. ಇನ್ನೂ ಅನೆಯಕ ಸಾಂಸ್ಕೃತಿಕ ವಸ್ತುಗಳು ಚೌ ಅವಧಿಯಲ್ಲಿ ಕಂಡುಬಂದಿದೆ.

ಈ ನಗರ ರಾಜ್ಯಗಳಲ್ಲಿ ಕಂಡುಬಂದ ಮೂರನೆಯ ಬದಲಾವಣೆ ಎಂದರೆ ಒಂದು ಹೊಸ ರೀತಿಯ ಸೇವೆ ರೂಪುಗೊಂಡಿದ್ದು, ಅನೇಕ ಯುದ್ಧರಥಗಳನ್ನು ಸೇರ್ಪಡೆ ಮಾಡಲಾಯಿತು. ಈ ಕಾಲದ ಮುಖ್ಯವಾದ ಆಯುಧ ಅಡ್ಡಬಿಲ್ಲು ಮತ್ತು ಅನೆಯಕ ಕಬ್ಬಿಣದ ಹತಾರಗಳು.

ಸರಕಾರದಲ್ಲೂ ಬದಲಾವಣೆ ಉಂಟಾಯಿತು. ಹೊಸ ರಾಜ್ಯಕ್ಷೇತ್ರಗಳ ನಾಯಕರುಗಳು ತಮ್ಮನ್ನು ರಾಜರೆಂದು ಕರೆದುಕೊಳ್ಳಲಾರಂಭಿಸಿದರು. ಅನೇಕ ಕಡೆ, ರಾಜಸಭೆ ಹಾಗು ಆಸ್ಥಾನಿಕರು ಕಡಿಮೆಯಾಗುತ್ತಾ ಬಂದರು. ಬದುಕಿ ಉಳಿಯುವುದಕ್ಕಾಗಿ ಈ ಹೊಸ ರಾಜ್ಯಗಳು ತಮ್ಮ ವ್ಯವಸಾಯ ಹಾಗೂ ವಾಣಿಜ್ಯದಿಂದ ಬಂದ ಹಣವನ್ನು ಸೈನ್ಯ ಬಲದಲ್ಲಿ ತೊಡಗಿಸಬೇಕಾಯಿತು. ತೆರಿಗೆ ಸಂಗ್ರಹಿಸಲು ಅಧಿಕಾರಿಗಳನ್ನು ನೆಯಮಿಸಲಾಯಿತು ಮತ್ತು ಅವರುಗಳು ದಾಖಲೆ ನಿರ್ವಹಿಸಿಕೊಂಡು ಬರುವಂತೆ ಸೂಚಿಸಲಾಯಿತು.

ಇದು ಗಮನೀಯ ಬೌದ್ದಿಕ ಪ್ರಗತಿಯಾದ ಕಾಲವೂ ಆಗಿದೆ. ಈ ಸಂಕೀರ್ಣ ರಾಜಕೀಯ ಪರಿಸ್ಥಿತಿ ಅನೆಯಕ ಸಲಹೆಗಾರರು ಹುಟ್ಟಿಕೊಳ್ಳುವಂತೆ ಮಾಡಿತು. ಅವರು ವಿವಿಧ ಪಾಳೆಯಗಾರರ ಆಸ್ಥಾನದಲ್ಲಿದ್ದು ಪರಸ್ಪರ ವಿರುದ್ಧವಾದ ವಿಚಾರವಾದಗಳನ್ನು ಮಂಡಿಸಿದರು. ಈ ಕಾಲದ ಅತ್ಯಂತ ಪ್ರಸಿದ್ಧ ತತ್ವಜ್ಞಾನಿಗಳೆಂದರೆ ಕನ್‌ಪ್ಯೂಷಿಯಸ್, ಮೆನ್ಷಿಯಸ್, ಚುಯಂನ್‌ಟ್ಚು ಈ ನೂರು ವಿಚಾರಧಾರೆಗಳ ಕಾಲದಲ್ಲಿದ್ದರು (ಇದರ ಬಗ್ಗೆ ಮುಂದೆ ವಿವರಣೆಯಿದೆ) ಮತ್ತು ಇವರಿಂದ ಚೀನಾದ ಮಹಾನ್ ರಾಜಕೀಯ ಸಂಪ್ರದಾಯ ಬೆಳೆಯಿತು.

ಚಿನ್ ವಂಶ

ಹೀಗೆ ಅಂತಿಮ ಯುದ್ಧದಲ್ಲಿ ಮತ್ತೊಂದು ವಂಶ ಈ ಪರಿಸ್ಥಿತಿಯಲ್ಲಿ ವಿಜೇತವಾಗಿ ಬಂದಿತು. ಅವರನ್ನು ಚೀನಾದ ಇತಿಹಾಸದಲ್ಲಿ ಚಿನ್ ವಂಶ ಎಂದು ಕರೆಯಲಾಗಿದೆ. ಚಿನ್ ರಾಜರು ರಾಜ್ಯದ ಕೇಂದ್ರಶಕ್ತಿಯನ್ನು ಬಲಪಡಿಸಲು ಕ್ರಮಬದ್ಧವಾಗಿ ತೊಡಗಿದರು. ಅದರ ರಾಜತಂತ್ರಜ್ಞರು ಕನ್‌ಪೂಷಿಯಸ್‌ನ ನೈತಿಕ ರಾಜಕೀಯ ತತ್ವಜ್ಞಾನವನ್ನು ತಿರಸ್ಕರಿಸಿದರು. ಅಧಿಕಾರಶಾಹಿಯನ್ನು ಜರಿಗೆ ತರಲಾಯಿತು. ಜೀತದುಡಿಮೆಯಿಂದ ನೀರಾವರಿ ಕಾಮಗಾರಿಗಳನ್ನು ನಿರ್ಮಿಸುತ್ತಿದ್ದರು ಮತ್ತು ಜನರನ್ನು ಬಲವಂತದಿಂದ ಸೇನೆಗೆ ಸೇರಿಸಲಾಗುತ್ತಿತ್ತು. ಒಂದೊಂದಾಗಿ ಅವರು ಸುತ್ತಲ ರಾಜ್ಯಗಳನ್ನು ಆಕ್ರಮಿಸಿ ಗೆದ್ದರು ಮತ್ತು ಕ್ರಿ.ಪೂ.೨೨೨ರಲ್ಲಿ ಚೌಗಳ ಕೊನೆಯ ಮತ್ತು ಮಹಾನ್ ಶತ್ರು ರಾಜ್ಯನನ್ನು ಸೋಲಿಸಲಾಯಿತು. ಈ ರಾಜ ಮುಂದೆ ಶಿಹ್ವಾಂಗ್ ಟಿ ಎಂಬ ಹೆಸರಿನಲ್ಲಿ ಪ್ರಸಿದ್ಧನಾದನು ಮತ್ತು ಮೊತ್ತಮೊದಲ ಬಾರಿಗೆ ಚೀನಿ ಇತಿಹಾಸದಲ್ಲಿ ಕೇಂದ್ರೀಕೃತ ರಾಜಡಳಿತದ ಅಧಿರಾಜನಾಗಿ ತನ್ನನ್ನು ಘೋಷಿಸಿಕೊಂಡನು.

ತತ್ವಜ್ಞಾನದ ನೂರು ವಿಚಾರಧಾರೆಗಳು

ಪರಸ್ಪರ ಕಚ್ಚಾಡುತ್ತಿದ್ದ ರಾಜ್ಯಗಳ ಗೊಂದಲ ಅನಿಶ್ಚಿತತೆಗಳ ನಡುವೆಯೂ ನಗರಗಳು ಹೆಚ್ಚು ಹೆಚ್ಚು ಪ್ರಗತಿಹೊಂದಿ ಸಮೃದ್ಧವಾದವು. ಇವು ಗ್ರಾಮದಲ್ಲೂ ದೊಡ್ಡದಾದವು. ಅಲ್ಲೆಲ್ಲ ತಂತ್ರಜ್ಞಾನ ಮುಂದುವರಿಯಿತು ಹಾಗೂ ವ್ಯಾಪಾರ ಅಭಿವೃದ್ದಿ ಹೊಂದಿತು. ಅರಾಜಕತೆಯ ಧೀಮಂತರು ಬೆಳೆಯಲು ಅವಕಾಶ ಮಾಡಿಕೊಟ್ಟಿತು. ರಾಜರುಗಳು ತಮ್ಮ ಬುದ್ದಿ ಮಾತುಗಳಿಗೆ ಕಿವಿ ಕೊಡುತ್ತಿರಲಿಲ್ಲವಾದ್ದರಿಂದ ಅವರು ಪುಸ್ತಕಗಳನ್ನು ಬರೆಯಬೇಕಾಯಿತು. ಹೀಗೆ ಈ ಯುದ್ಧನಿರತ ರಾಜ್ಯಗಳು, ತಮ್ಮ ಮಾತನ್ನು ಕೇಳಲು ಸಿದ್ಧನಾದ ಯಾವುದೇ ರಾಜವಂಶಸ್ಥನಿಗೆ ತತ್ವಜ್ಞಾನಿಗಳು ಬುದ್ದಿವಾದ ನೀಡುತ್ತಿದ್ದುದರಿಂದ ಈ ರೀತಿ ನೂರು ವಿಚಾರಧಾರೆ ಹೊರಹೊಮ್ಮಲು ಕಾರಣವಾದವು. ಇವೇ ಮುಂದೆ ಕನ್‌ಪ್ಯೂಷಿಯನಿಸಂ, ಟಾವೊಇಸಂ, ಮೊಹಿಸಂ, ಲೀಗಲಿಸಂ ಎಂದು ರೂಪುಗೊಂಡವು.

ಕನ್ಪ್ಯೂಷಿಯನಿಸಂ

ಇದು ಸುಮಾರು ೨೦೦೦ ವರ್ಷಗಳವರೆಗೆ ಚೀನಾದ ಜನತೆ ನಡೆಸುತ್ತಿದ್ದ ಜೀವನವನ್ನು ಪ್ರತಿನಿಧಿಸುತ್ತದೆ. ಈ ವಿಚಾರ ಸಿದ್ಧಾಂತವನ್ನು ಮೊದಲು ಪ್ರತಿಪಾದಿಸಿದವನು ಕನ್‌ಫ್ಯೂಷಿಯಸ್. ಕನ್‌ಫ್ಯೂಷಿಯಸ್‌ನ ಸಂಹಿತೆಯ ಪ್ರತಿಯೊಬ್ಬ ವ್ಯಕ್ತಿ ಹೇಗೆ ತನ್ನ ಜೀವನ ನಡೆಸಬೇಕು ಎನ್ನುವುದಕ್ಕೆ ಒಂದು ಮಾರ್ಗದರ್ಶಿ ಸೂತ್ರವಾಯಿತು. ಇಂದಿಗೂ ಕನ್‌ಪ್ಯೂಷಿಯನಿಸಂ ಚೀನಾದೇಶದ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳಿಂದ ನಡೆದುಬಂದ ನೀತಿಸಂಹಿತೆಯಾಗಿದೆ. ಕನ್‌ಪ್ಯೂಷಿಯನಿಸಂ ಅನ್ನು ಕೆಲವು ಬಾರಿ ಒಂದು ವ್ಯವಸ್ಥೆ ಮತ್ತು ಕೆಲವು ಬಾರಿ ಒಂದು ಧರ್ಮವಾಗಿ ನೋಡಲಾಗುತ್ತದೆ. ಇದು ಚೀನಿ ಧರ್ಮದ ಬಹಳ ಮೆಚ್ಚಬಹುದಾದಂತಹ ಕೆಲವು ಅಂಶಗಳನ್ನು, ಅಂದರೆ ದೇವರ ಬಗ್ಗೆ ಭಕ್ತಿ ಮತ್ತು ಹಿರಿಯರ (ಪಿತೃಗಳ) ಪೂಜೆ ಮುಂತಾದವನ್ನು ತನ್ನಲ್ಲಿ ಅಳವಡಿಸಿಕೊಂಡಿತು. ಕನ್‌ಪ್ಯೂಷಿಯನಿಸಂನ ಮತ್ತೊಂದು ವೈಶಿಷ್ಟ್ಯವೆಂದರೆ ಚೀನಿಯರು ಟಾವೊಧರ್ಮ, ಬೌದ್ಧಧರ್ಮ ಅಥವಾ ಕ್ರೈಸ್ತಧರ್ಮಗಳನ್ನು ಅವಲಂಬಿಸಲಾರಂಭಿಸಿದರೂ ಆಂತರಿಕವಾಗಿ ಅವರು ಕನ್‌ಪ್ಯೂಷಿಯಸ್ ಸಿದ್ಧಾಂತ ಅನುಯಾಯಿಗಳಾಗಿಯೇ ಉಳಿದಿರುತ್ತಾರೆ. ಇದು ಚೀನಿಯರು ಮತ್ತು ಅವರ ಸಮಾಜದ ಬದುಕಿನಲ್ಲಿ ಬಲುಮುಖ್ಯವಾದ ಪಾತ್ರವನ್ನು ವಹಿಸಿದೆ.

ಕನ್‌ಪ್ಯೂಷಿಯಸ್‌ನ ಬದುಕಿನ ಬಗ್ಗೆ ತಿಳಿದುಬಂದಿರುವುದು ಬಹಳ ಕಡಿಮೆ. ಆತ ಹುಟ್ಟಿದ್ದು ಕ್ರಿ.ಪೂ.೫೫೧ರಲ್ಲಿ. ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡನು. ಚಿಕ್ಕ ಅಧಿಕಾರಿಯಾಗಿ ಹಾಗೂ ಉಪಾಧ್ಯಾಯನಾಗಿ ಕೆಲಸಕ್ಕೆ ಸೇರಿಕೊಂಡನು. ರಾಜಕುಮಾರರಿಗೆ ಸಲಹೆ, ಬುದ್ದಿವಾದಗಳನ್ನು ನೀಡಲು ಅನೇಕ ಸ್ಥಳಗಳಿಗೆ ಸಂಚಾರ ಮಾಡಿದ್ದಾನೆ. ಆತ ತನ್ನ ೭೦ನೆಯ ವಯಸ್ಸಿನಲ್ಲಿ ಅಂದರೆ ಕ್ರಿ.ಪೂ.೪೭೯ರಲ್ಲಿ ದಿವಂಗತನಾದನು. ಮೊದಲೇ ಹೇಳಿದಂತೆ ಅವನ ಹಿತೋಪದೇಶಗಳು ಧಾರ್ಮಿಕವಾದದಲ್ಲಿ, ನೀತಿ ಸಂಹಿತೆಗಳು. ಕನ್‌ಪ್ಯೂಷಿಯಸ್‌ನ ಪ್ರಕಾರ ಆದರ್ಶ ನೀತಿವಂತನೆಂದರೆ ‘‘ಸದ್ಗೃಹಸ್ಥ’’ನಾದ ವ್ಯಕ್ತಿ. ಸದ್ಗೃಹಸ್ಥನಾದವನಲ್ಲಿ ಇರಬೇಕಾದ ಕಲ್ಯಾಣ ಗುಣವೆಂದರೆ ಚೆನ್ (ಮಾನವೀಯತೆ ಮತ್ತು ದಯಾಗುಣ), ಆತ ಚಂಗ್ ಅನ್ನು ಮಾಡುವವನಾಗಿರಬೇಕು (ತನ್ನ ಕೈಲಾದಷ್ಟು ಒಳಿತು ಮಾಡುವುದು) ಹಾಗೂ ಶು(ಇತರರಿಗೆ ಏನು ಬೇಕೆಂಬುದನ್ನು) ತಿಳಿಯುವವನಾಗಿರ ಬೇಕು. ಇವು ಅತ್ಯುನ್ನತ ಸಾಮಾಜಿಕ ಆದರ್ಶಗಳು.

ಕನ್ಪ್ಯೂಷಿಯಸ್ ವಿಚಾರಧಾರೆ

ಕನ್‌ಪ್ಯೂಷಿಯಸ್ ತನ್ನ ವಿಧವೆ ತಾಯಿಯ ಆರೈಕೆಯಲ್ಲಿ ಬೆಳೆದನು ಮತ್ತು ಅವನು ಸ್ವತಃ ವಿದ್ಯಾವಂತನಾದನು. ಮೊದಲೇ ಹೇಳಿದಂತೆ ಅವನ ಬೋಧನೆಗಳು ಸಹಜ, ಮಾನವೀಯ ಮತ್ತು ಸರಳ. ಆತ ಯಾವಾಗಲೂ ಚಾರಿತ್ರ್ಯ ಮತ್ತು ಋಜು ಮಾರ್ಗದಲ್ಲಿ ನಡೆದುಕೊಳ್ಳುವುದಕ್ಕೆ ಬಹಳ ಒತ್ತನ್ನು ನೀಡುತ್ತಿದ್ದನು. ಉದಾಹರಣೆಗೆ ಕನ್‌ಪ್ಯೂಷಿಯಸ್‌ನ ಸೂಕ್ತಿ ಹೀಗಿದೆ, ಶ್ರೇಷ್ಠ ವ್ಯಕ್ತಿಯಾದವನು ತನ್ನ ಸದ್ಗುಣ ಚಾರಿತ್ರ್ಯಗಳಿಗೆ ಬೆಲೆ ಕೊಡು ತ್ತಾನೆ. ಕೀಳುವ್ಯಕ್ತಿ ತನ್ನ ಭೂಮಿಯ ಬಗ್ಗೆ ಯೋಚಿಸುತ್ತಿರುತ್ತಾನೆ. ಹೀಗೆಯೇ ಶ್ರೇಷ್ಠ ವ್ಯಕ್ತಿಯಾದವನು ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಅರಿತುಕೊಳ್ಳಬಲ್ಲವ ನಾಗಿರುತ್ತಾನೆ. ಆದರೆ ಕೀಳುವ್ಯಕ್ತಿ ಯಾವುದು ಲಾಭದಾಯಕ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾನೆ. ಕನ್‌ಪ್ಯೂಷಿಯಸ್‌ನ ಪ್ರಕಾರ ಯಾವುದು ಚೆನ್ ಗುಣವನ್ನು ಹೊಂದಿ ಅದರಂತೆ ನಡೆದು ಕೊಳ್ಳುತ್ತದೊ ಅದೇ ಉತ್ತಮ ಸಮಾಜ.

ಧಾರ್ಮಿಕ ಅಂಶಗಳು

ಕನ್‌ಪ್ಯೂಷಿಯನಿಸಂ ಅನ್ನು ಕೆಲವೊಮ್ಮೆ ಧರ್ಮ ಎಂದು ಪರಿಗಣಿಸಲಾಗುತ್ತದೆ. ಆತ ಪ್ರಾರ್ಥಿಸುತ್ತಿದ್ದ, ಉಪವಾಸವಿರುತ್ತಿದ್ದ, ಭಗವಂತನಿಗೆ ಬಲಿ ನೀಡುವ ಹಬ್ಬಗಳಲ್ಲಿ ಭಾಗವಹಿಸುತ್ತಿದ್ದ ಮತ್ತು ದೇವಲೋಕದ ಹೆಸರಿನಲ್ಲಿ ಆಣೆ ಮಾಡುತ್ತಿದ್ದ.

ಕನ್‌ಪ್ಯೂಷಿಯಸ್ ಬರೆದ ಪುಸ್ತಕದ ಹೆಸರು ಲುನ್ ಯು(ಸಂವಾದಗಳು ಅಥವಾ ಸಂಕಲನ). ಇದು ಆತನ ಶಿಷ್ಯರು ತಮ್ಮ ಗುರು ಆಗಾಗ್ಗೆ ನೀಡುತ್ತಿದ್ದ ತತ್ವಬೋಧೆ ಸಂಭಾಷಣೆಗಳ ಕಾಲಾನುಸಾರವಾಗಿ ಇಟ್ಟುಕೊಂಡು ಬಂದ ಟಿಪ್ಪಣಿ ಮತ್ತು ಪ್ರವಾಸ ಕಥನಗಳ ಸಂಕಲನ. ಈ ಕೃತಿಯಲ್ಲಿ ೨೦ ವಿಭಾಗಗಳಿದ್ದು ಅದರಲ್ಲಿ ೪೯೬ ಅಧ್ಯಾಯಗಳಿವೆ. ಈ ಕೃತಿ ಅತಿ ಪ್ರಾಚೀನವಾದದ್ದೂ ಮತ್ತು ಕನ್‌ಪ್ಯೂಷಿಯಸ್‌ನ ಬದುಕು ಮತ್ತು ಬೋಧನೆಗಳ ಬಗ್ಗೆ ಅತ್ಯಂತ ನಂಬಲರ್ಹವಾದ ಮೂಲವಾಗಿದೆ. ಈ ಕೃತಿಯ ಈಗಿರುವ ಆವೃತ್ತಿ ಕ್ರಿಸ್ತಶಕದ ಆರಂಭದ ಭಾಗದಲ್ಲಿ ರೂಪುಗೊಂಡಂತಹುದು.

ತನ್ನ ಜೀವನದ ಉತ್ತರಾರ್ಧದಲ್ಲಿ ಕನ್‌ಪ್ಯೂಷಿಯಸ್ ತತ್ತ್ವಬೋಧನೆಯಲ್ಲಿ ನಿರತ ನಾದನು. ಈ ಕಾರ್ಯದ ಅಂಗವಾಗಿ ಅವನು ವುಚಿಂಗ್ (ಐದು ಚಿರಂತನ ಕೃತಿಗಳ) ಸಂಪಾದನೆಯ ಕಾರ್ಯವನ್ನು ಮಾಡಿದನು ಎಂದು ಪರಂಪರೆಯ ಮೂಲಕ ತಿಳಿದುಬಂದಿದೆ. ಅವು ಯಾವುದೆಂದರೆ ಚಿಂಗ್ (ಪರಿವರ್ತನೆಗಳ ಚಿರಂತನ ಕೃತಿ), ಶಿಚಿಂಗ್ (ಕಾವ್ಯದ ಚಿರಂತನ ಕೃತಿ), ಶುಚಿಂಗ್ (ಇತಿಹಾಸ ಕುರಿತ ಚಿರಂತನ ಕೃತಿ), ಲಿಚಿಂಗ್ (ಧಾರ್ಮಿಕ ವಿದಿ ವಿಧಾನಗಳ ಸಂಗ್ರಹ) ಚುನ್ ಚಿ (ವಸಂತ ಮತ್ತು ಗ್ರೀಷ್ಮದ ವಾರ್ಷಿಕಗಳು). ಅವನಿಗೆ ೭೦ರಿಂದ ೭೨ ಪ್ರಧಾನ ಶಿಷ್ಯರಿದ್ದರು. ಅವರು ತಮ್ಮ ಗುರುವಿನ ಮರಣಾನಂತರ ಬೋಧನಾ ಕಾರ್ಯವನ್ನು ಮುಂದುವರಿಸಿದರು.

ಟಾವೊಇಸಂ

ಲಾವೊಟ್ಜು ಈ ತತ್ವ ಸಿದ್ಧಾಂತದ ಮುಖ್ಯ ಪ್ರತಿನಿಧಿ. ಇದೂ ಕನ್‌ಪ್ಯೂಷಿಯಸ್ ಸಿದ್ಧಾಂತದಂತೆ ಮುಖ್ಯವಾಗಿ ಮಾನವರ ಸಮಸ್ಯೆಗಳನ್ನು ಕುರಿತು ಚಿಂತನೆ ನಡೆಸಿದಂತಹುದು. ಲಾವೊಟ್ಟು ಅಥವಾ ವೃದ್ಧ ತತ್ತ್ವಜ್ಞಾನಿ ಚೌ ರಾಜಧಾನಿ ಲೋಯಾಂಗ್‌ನ ರಾಜ ಪತ್ರಾಗಾರದ ಪರಿಪಾಲಕನಿದ್ದಿರಬಹುದು. ಆತನ ಜೀವನದ ಬಗ್ಗೆ ತಿಳಿದುಬಂದಿರುವುದು ಅತ್ಯಲ್ಪ. ಆತನ ಹೆಸರಿನೊಂದಿಗೆ ಸಂಬಂಧಿಸಿದ ಒಂದು ಪುಸ್ತಕದ ಹೆಸರು, ಟಾವೋ ಟೆ ಚಿಂಗ್ (ಸಚ್ಚಾರಿತ್ರ್ಯದ ಮಾರ್ಗ). ಇದರಲ್ಲಿ ಪರಸ್ಪರ ಕಚ್ಚಾಡುತ್ತಿದ್ದ ರಾಜ್ಯಗಳ ಅವಧಿಯ ಬಗ್ಗೆ ಬಹಳ ಸೂಕ್ತವಾದ ಟೀಕು ಟಿಪ್ಪಣಿಗಳಿವೆ. ಟಾವೋ ಸಿದ್ಧಾಂತದವರ ಪ್ರಕಾರ ಸಾಮಾಜಿಕ ವಿಕಾಸವು ಪಾಳೇಗಾರಿಕೆ ಕಾರಣದಿಂದಾಗಿ ತಪ್ಪುದಾರಿ ಹಿಡಿದಿದೆ. ಅವರು ಹ್ಸ ಇಯಾ ವಂಶದವರಿಗಿಂತ ಹಿಂದಿನ ಕಾಲದಲ್ಲಿ ಇದ್ದ ಪ್ರಾಚೀನ ಕೂಡು ಸಮಾಜವೇ ಸರಿ ಎಂದು ಹೇಳುತ್ತಾರೆ. ಈ ರೀತಿಯ ತಾತ್ವಿಕವಾಗಿ ಟಾವೋ ಸಿದ್ಧಾಂತ ಕನ್‌ಪ್ಯೂಷಿಯಸ್‌ನ ಸಿದ್ಧಾಂತವನ್ನು ಒಂದೊಂದು ಅಂಶದಲ್ಲೂ ವಿರೋಧಿಸುತ್ತದೆ ಮತ್ತು ಅನೇಕರು ಟಾವೋ ತತ್ತ್ವಜ್ಞಾನವನ್ನು ಟೀಕಿಸಿದ್ದಾರೆ.

ಟಾವೊ ಸಿದ್ಧಾಂತದಲ್ಲಿ ಮಾರ್ಗ ಎಂದರೆ ಮಾನವನ ಮಾರ್ಗವಲ್ಲ. ಪ್ರಕೃತಿಯ ಮಾರ್ಗ, ಲಾವೊಟ್ಸು ಪ್ರಕಾರ ಟಾವೋ ಎಲ್ಲ ವಸ್ತುಗಳ ಮಾರ್ಗ, ತತ್ವ, ಸಾರ ಹಾಗೂ ಮಾನಕವಾಗಿರುತ್ತದೆ. ಅದನ್ನೇ ಎಲ್ಲರೂ ಪಾಲಿಸಬೇಕು. ಒಟ್ಟಾರೆ ಅದು ಶಾಶ್ವತ, ಸಂಪೂರ್ಣ, ದೇಶಕಾಲಾತೀತ. ಅದು ಪ್ರಕೃತಿಯ ತಾತ್ವಿಕ ಮಾದರಿ ಮತ್ತು ಅದು ‘ಸ್ವಯಂಭೂ’. ಅದು ಒಂದು ಪ್ರತ್ಯೇಕ ವಸ್ತುವಿನಲ್ಲಿ ಒಳಗೊಂಡಾಗ ಅದು ಅದರ ಗುಣವಿಶೇಷವಾಗುತ್ತದೆ. ವ್ಯಕ್ತಿಯ ಆದರ್ಶ ಬದುಕು, ಸಮಾಜದ ಆದರ್ಶ ವ್ಯವಸ್ಥೆ ಮತ್ತು ಆದರ್ಶ ರಾಜಡಳಿತ ಎಲ್ಲವನ್ನೂ ಇದನ್ನೇ ಆಧರಿಸಿ ರೂಪಿಸಲಾಗುತ್ತದೆ. ಉತ್ತಮ ಬದುಕು ಸರಳ, ಸ್ವಯಂಸ್ಫೂರ್ತವಾಗಿರುವುದರ ಜೊತೆಗೆ ಶಾಂತಿ ನೆಮ್ಮದಿ ಕೂಡಿದ್ದಾಗಿರುತ್ತದೆ. ಇದೇ ಪ್ರಾಕೃತಿಕ ಸ್ವರೂಪದ ಗುಣಲಕ್ಷಣ.

ಹೀಗೆ ಟಾವೋಗಳು ಅಥವಾ ಟಾವೋ ಸಿದ್ಧಾಂತ ಕನ್‌ಪ್ಯೂಷಿಯಸ್‌ಗಿಂತಲೂ ಹೆಚ್ಚು ಆಧ್ಯಾತ್ಮಿಕವಾಗಿದ್ದಾರೆ. ವಾಸ್ತವವಾಗಿ ಲಾವೋಟ್ಜು ಚೀನೀ ತತ್ವಜ್ಞಾನವನ್ನು ಆಧ್ಯಾತ್ಮಿಕ ಆಧಾರದ ಮೇಲೆ ಪ್ರತಿಪಾದಿಸಿದ ಮೊದಲ ವಿದ್ವಾಂಸ ಆಗಿದ್ದರೂ ಅದು ವ್ಯವಹಾರಿಕ ಜಗತ್ತಿಗೆ ವಿಮುಖವಾಗಿಯೇನೂ ಇರಲಿಲ್ಲ. ಎಷ್ಟಿದ್ದರೂ ಟಾವೋಲೋಕಾಂತರ್ಗತವಾದದ್ದು ಮತ್ತು ಅದರ ಚಲನೆಗೆ ಕಾರಣವಾದದ್ದು. ಅಂತಿಮವಾಗಿ ಹೇಳುವುದಾದರೆ ಅದು ವಸ್ತುಗಳು ವರ್ತಿಸಬೇಕಾದ ರೀತಿ ಮತ್ತು ಟಾವೋವಾದಿಗಳು ಸಾಂಪ್ರದಾಯಿಕ ನೈತಿಕತೆಯನ್ನು ಖಂಡಿಸಿದರೂ, ಪ್ರೇಮ, ಜ್ಞಾನ, ಶಾಂತಿ ಮತ್ತು ಸಾಮರಸ್ಯವನ್ನು ಕನ್‌ಫ್ಯೂಷಿಯಸ್ ವಾದಿಗಳಷ್ಟೇ ಸಮವಾಗಿ ಪ್ರತಿಪಾದಿಸಿದರು.

ಮೊಹಿಸಂ

ಮೊಹಿಸಂ ಅನ್ನು ಮಾವೊಟ್ಸು ಕ್ರಿ.ಪೂ.೫ನೆಯ ಶತಮಾನದಲ್ಲಿ ಸ್ಥಾಪಿಸಿದನು. ಅದು ಒಂದು ರೀತಿಯಲ್ಲಿ ಕನ್‌ಪ್ಯೂಷಿಯನಿಸಂ ಹಾಗೂ ಟಾವೊಇಸಂಗಳ ಸಮ್ಮಿಶ್ರಣ. ಮಾಹಿಇಸಂ ಚೀನಿ ಇತಿಹಾಸದಲ್ಲಿ ಬಹಳ ಜನಪ್ರಿಯವಾದ ತತ್ವಜ್ಞಾನವಾಗಿ ಉಳಿಯಿತು. ಮೊಹಿಸಂನಲ್ಲಿ ಅಂತಿಮಗುರಿ ಸ್ವರ್ಗಸಾಧನೆ. ಹೀಗಾಗಿ ಈ ತತ್ವಜ್ಞಾನವು ಇನ್ನಾವುದೇ ಪ್ರಾಚೀನ ತತ್ವಜ್ಞಾನಕ್ಕಿಂತಲೂ ಹೆಚ್ಚು ಧಾರ್ಮಿಕವಾಯಿತು. ಮಾವೋಟ್ಜುನ ಮೂಲಭೂತ ಬೋಧನೆಯೆಂದರೆ ‘‘ವಿಶ್ವಪ್ರೇಮ ಮತ್ತು ಪರಸ್ಪರ ಮಾನವೀಯ ಪ್ರಯೋಜನಗಳು.’’

ನ್ಯಾಯಿಕವಾದ

ಈ ತತ್ವಜ್ಞಾನದ ಪ್ರತಿಪಾದಕ ಹ್ಯಾನ್ ಫೈಟ್ಜು. ಅವನು ಪಾಳೆಯಗಾರ ರಾಜರಿಗೆಂದೇ ಇದನ್ನು ಪ್ರತಿಪಾದಿಸಿದನು. ಆಳುವ ವರ್ಗದ ಹಿತಾಸಕ್ತಿಗೆ ಅದು ಪ್ರಭಾವ ಬೀರುವಷ್ಟಕ್ಕೆ ಬಿಟ್ಟರೆ ಉಳಿದಂತೆ ಅದು ಪೂರ್ವದ ಆರ್ಷೇಯ ಸಂಸ್ಕೃತಿಯಾಗಲಿ ಅಥವಾ ವ್ಯಕ್ತಿಗಳ ಖಾಸಗಿ ಜೀವನದ ಬಗ್ಗೆಯಾಗಲಿ ಚಿಂತನೆ ನಡೆಸಿಲ್ಲ. ಅದರ ಏಕೈಕ ಗುರಿ ಎಂದರೆ ಆಳರಸರಿಗೆ, ಹೇಗೆ ಬದುಕುಳಿಯುವುದು ಮತ್ತು ಇಂದಿನ ಜಗತ್ತಿನಲ್ಲಿ ಏಳ್ಗೆ ಹೊಂದುವುದು ಎಂಬುದನ್ನು ಬೋಧಿಸುವುದಾಗಿತ್ತು.

ನ್ಯಾಯಿಕವಾದದ ಬೋಧಕರು ವಿದ್ಯಾಭ್ಯಾಸ ಮತ್ತು ನೈತಿಕ ತರಬೇತಿಯ ಅಗತ್ಯವನ್ನು ಒತ್ತಿ ಹೇಳಿದರು. ಇದೇ ರೀತಿ ಚೌಗಳ ಆಡಳಿತಾವಧಿಯಲ್ಲಿ ಇನ್ನೂ ಅನೇಕ ತತ್ವಜ್ಞಾನದ ವಿಚಾರಧಾರೆಗಳು ಮೂಡಿ ಅರಳಿದವು. ಮತ್ತೊಂದು ಪ್ರಮುಖ ತತ್ವಜ್ಞಾನದ ವಿಚಾರಧಾರೆಯಾಗಿ ಬೌದ್ಧಮತವು ಚೀನಾವನ್ನು ತರುವಾಯದ ದಿನಗಳಲ್ಲಿ ಪ್ರವೇಶಿಸಿತು.

ಚೀನಿ ಕಲೆ

ಶಾಂಗ್ ಮತ್ತು ಚೌ ವಂಶಗಳ ಕಾಲದ ಕಲೆ ಮುಖ್ಯವಾಗಿ ಕಂಚಿನ ಕಲೆಯಾಗಿ ಅಂದರೆ ಕಂಚಿನ ಬಲಿ ಪಾತ್ರೆಗಳ ರೂಪದಲ್ಲಿ ಉಳಿದಿದೆ. ಈ ಪಾತ್ರೆಗಳ ಮೇಲೆ ಬಲುಸುಂದರ ಕುಸುರಿ ಕೆತ್ತನೆ ಇದೆ. ಈ ಕಾಲದ ಇತರ ಕಲಾಕೃತಿಗಳೆಂದರೆ ಮುಖವಾಡಗಳು. ಈ ಮುಖ ವಾಡಗಳು ಶಾಂಗ್ ಕಾಲದುದ್ದಕ್ಕೂ ಸಮರೂಪವನ್ನೇ ಹೊಂದಿರುತ್ತದೆ. ಹುಲಿ ಮತ್ತು ಎತ್ತಿನ ನಡುವಿನ ಒಂದು ರೂಪ ಸಾಮಾನ್ಯವಾಗಿ ಇದಕ್ಕೆ ಕೊಂಬು ಇರುತ್ತದೆ. ದೊಡ್ಡ ದೊಡ್ಡ ಕಣ್ಣುಗಳು ಮತ್ತು ಕೋರೆದಾಡೆಗಳುಳ್ಳ ಮೇಲು ದವಡೆ ಇರುತ್ತದೆ. ಕೆಳದವಡೆ ಇರುವುದಿಲ್ಲ. ತರುವಾಯದಲ್ಲಿ ಡ್ರಾಗನ್‌ನ ಮುಖವಾಡಗಳು ಕಂಡುಬಂದವು.

ಲಲಿತಕಲೆಗಳಲ್ಲಿ ಚೀನಿಯರು ವರ್ಣಚಿತ್ರದ ಕಲೆಯನ್ನು ಬೆಳೆಸಿಕೊಂಡರು. ಮನುಷ್ಯ ನನ್ನು ವಿಶ್ವ ಅಥವಾ ಪ್ರಕೃತಿಗೆ ಅನುಗುಣವಾಗಿ ರೂಪಿಸುವುದಕ್ಕೆ ಚೀನಿ ವಿಚಾರಧಾರೆ ಕೇಂದ್ರೀಕರಿಸಿದ ಕಾರಣ, ಪ್ರಾಕೃತಿಕ ಚಿತ್ರಗಳು ಪ್ರಕೃತಿಯ ಸಾರ್ವತ್ರಿಕ ಕಲ್ಪನೆ ಹಾಗೂ ಅದರಲ್ಲಿ ಮಾನವನ ಸ್ಥಾನವನ್ನು ಚಿತ್ರಿಸಿದವು. ಹೀಗೆ ಇಲ್ಲಿನ ಚಿತ್ರಕಾರರು ಒಂದು ನಿರ್ದಿಷ್ಟ ಘಟನೆ ಅಥವಾ ವಸ್ತುವನ್ನು ಕುರಿತು ಚಿತ್ರಿಸುವುದಕ್ಕಿಂತ, ಪ್ರಕೃತಿ ಅಂತಿಮವಾಗಿ ತಿಳಿಸುವ ರೂಪುರೇಷೆಗಳನ್ನು ಚಿತ್ರಿಸಿದರು. ಚೀನಿಯರು ಕಲಾತ್ಮಕ ಲಿಪಿ ಚಿತ್ರಣಕ್ಕೂ ಹೆಸರು ವಾಸಿಯಾದವರು.

ಹೀಗೆ ಚೀನಾದಲ್ಲಿ ನಾಗರಿಕತೆಯ ಬೆಳವಣಿಗೆ ಸುದೀರ್ಘ ಹಾಗೂ ನಿರಂತರ ಪ್ರಕ್ರಿಯೆ ಯಾಗಿತ್ತು ಮತ್ತು ಇದರಲ್ಲಿ ಅನೇಕ ಪ್ರದೇಶಗಳು ಮತ್ತು ಅಭಿವೃದ್ದಿಯ ವಿವಿಧ ತಂತುಗಳು ಒಳಗೊಂಡಿದ್ದವು. ಮಧ್ಯಭಾಗದ ಬಯಲುಗಳ ನಿವೇಶನಗಳೇ ನಾಗರಿಕತೆಯ ಒಂದು ನೇರ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತವೆ ಎಂದು ನಾವು ಹೇಳುವಂತಿಲ್ಲ. ಅನೇಕ ಸಂಸ್ಕೃತಿಗಳು ಪರಸ್ಪರ ಹೆಣೆದುಕೊಂಡು ಒಂದಕ್ಕೊಂದು ಅನೇಕ ಗುಣವಿಶೇಷಗಳನ್ನು ಕೊಡುಗೆ ನೀಡಿ ತಮ್ಮದೇ ರೀತಿಯಲ್ಲಿ ಅವನ್ನು ರೂಪಿಸಿದೆ. ನಾಗರಿಕತೆಯನ್ನು ಸೃಷ್ಟಿಸಿದೆ ಎಂದು ಪರಿಗಣಿಸಬೇಕಾಗಿದೆ.

 

ಪರಾಮರ್ಶನಗ್ರಂಥಗಳು

೧. ಫ್ಯಾನನ್ ಬ್ರೈನ್ ಎಂ., ೧೯೯೬. ದಿ ಅಕ್ಸ್ಫರ್ಡ್ ಕಂಪ್ಯಾನಿಯನ್ ಟು ಆರ್ಕಿಯಾಲಜಿ,             ಆಕ್ಸ್‌ಫರ್ಡ್ : ಯೂನಿವರ್ಸಿಟಿ ಪ್ರೆಸ್.

೨. ಪಾರ್ಕರ್ ಜೆಫ್ರಿ(ಸಂ), ೧೯೮೬. ದಿ ವರ್ಲ್ಡ್ ಇಲ್ಲಸ್ಟ್ರೇಟೆಡ್ ಹಿಸ್ಟರಿಹಾರ್ಪರ್ ಆಂಡ್ ರೌಲ್, ಪ್ರಕಾಶಕರು : ನ್ಯೂಯಾರ್ಕ್.

೩. ಕ್ಲಾರ್ಕ್, ಗ್ರಾಹಂ , ೧೯೭೭. ವರ್ಲ್ಡ್ ಪ್ರಿ ಹಿಸ್ಟರಿಇನ್ ನ್ಯೂ ಪರ್ಸ್ಪೆಕ್ಟಿವ್೩ನೆಯ ಆವೃತ್ತಿ, ಕೇಂಬ್ರಿಡ್ಜ್ : ಯೂನಿವರ್ಸಿಟಿ ಪ್ರೆಸ್.

೪. ಪೌಲ್ ಎಚ್., ೧೯೮೮, ಕ್ಲೈಡ್ ಬರ್ಟನ್, ಎಫ್.ಬೀರ್ಸ್, ದಿ ಫಾರ್ ಈಸ್ಟ್ ಹಿಸ್ಟರಿ ಆಫ್ ದಿ ವೆಸ್ಟ್ರನ್ ಇಂಪ್ಯಾಕ್ಟ್ ಆನ್ ಈಸ್ಟರನ್ ರೆಸ್ಪಾನ್ಸಸ್೧೮೩೦೧೯೭೫ಆರನೆಯಆವೃತ್ತಿ, ನವದೆಹಲಿ : ಪ್ರೆಂಟಿಸ್ ಹಾಲ್ ಆಫ್ ಇಂಡಿಯಾ ಫ್ರೈ(ಲಿ).

೫. ಮೆಕ್‌ನಿಲ್ ವಿಲಿಯಂ ಎಚ್., ೧೯೯೦, ‘‘ ಹಿಸ್ಟರಿ ಆಫ್ ದಿ ಹ್ಯೂಮನ್ ಕಮ್ಯೂನಿಟಿಪ್ರಿ ಹಿಸ್ಟರಿ ಟು ದಿ ಪ್ರೆಸೆಂಟ್’’, ಮೂರನೆಯ ಆವೃತ್ತಿ, ನ್ಯೂಜರ್ಸಿ : ಪ್ರಿಂಟಿಸ್ ಹಾಲ್.