ಪಶ್ಚಿಮ ಏಷ್ಯಾದ ಇತಿಹಾಸವೆಂದರೆ ಒಂದು ಭೌಗೋಳಿಕ ಪ್ರದೇಶ, ಅದರ ವಿಭಿನ್ನ ಬಗೆಯ ಜನರ ಇತಿಹಾಸದ ನಿರೂಪಣೆಯೇ ಹೊರತು ಒಂದು ರಾಷ್ಟ್ರ ಇತಿಹಾಸವಲ್ಲ. ೧೯೧೮ರಿಂದ ಆಧುನಿಕ ಕಾಲದವರೆಗೆ, ಈ ಇತಿಹಾಸ ಅಟ್ಟೊಮನ್ ಹಾಗೂ ಪರ್ಷಿಯನ್ ಸಾಮ್ರಾಜ್ಯಗಳ ಸುತ್ತ ಸುತ್ತುತ್ತದೆ. ಮೊದಲನೆಯ ಮಹಾಯುದ್ಧದ ತರುವಾಯ ಇದು ಪ್ರಮುಖವಾಗಿ ಹೊಸ ರಾಷ್ಟ್ರಗಳಾದ ಇರಾಕ್, ಇಸ್ರೇಲ್, ಜೋರ್ಡಾನ್, ಲೆಬನಾನ್, ಸಿರಿಯಾ, ಸೌದಿ ಅರೇಬಿಯಾ, ತುರ್ಕಸ್ಥಾನ, ಈಜಿಪ್ಟ್ ಹಾಗೂ ಇರಾನ್ ದೇಶಗಳ ಹುಟ್ಟಿನ ಕುರಿತು ನಿರೂಪಿಸುತ್ತದೆ.

ವ್ಯವಸ್ಥಿತವಾಗಿ ರೂಪುಗೊಂಡ ಈ ಪ್ರದೇಶ, ಏಷ್ಯಾ ಹಾಗೂ ಯುರೋಪ್‌ಗಳ ಜನರ ದಾಳಿಗೆ ಹಲವು ಬಾರಿ ಗುರಿಯಾದರೂ, ಪಶ್ಚಿಮ ಏಷ್ಯಾದ ಇತಿಹಾಸದುದ್ದಕ್ಕೂ, ಅದರ ಸಂಸ್ಕೃತಿಯ ಶ್ರೀಮಂತ ಗುಣಗಳು ಆ ಪ್ರದೇಶದ ಮೇಲೆ ದಾಳಿ ಮಾಡಿದ ಸುತ್ತಮುತ್ತಲಿನ ಬರ್ಬರರ ಮೇಲೆ, ರಾಜಕೀಯ ಆಕ್ರಮಣಕಾರರ ಮೇಲೆ ನಾಗರಿಕತೆಯ ದೃಷ್ಟಿಯಿಂದ ಗಾಢ ಪರಿಣಾಮ ಬೀರಿವೆ. ಇತ್ತೀಚಿನ ವರ್ಷಗಳಲ್ಲಿ ಮಾತ್ರ ಪಶ್ಚಿಮದ ಮೇಲೆ, ಪಶ್ಚಿಮ ಏಷ್ಯಾವು ಪ್ರಭಾವ ಬೀರುವುದಕ್ಕಿಂತ ಹೆಚ್ಚಾಗಿ ಪಶ್ಚಿಮ ಏಷ್ಯಾದ ಸಂಸ್ಕೃತಿಯ ಮೇಲೆ ವಿದೇಶಗಳ ಪ್ರಭಾವ ಅಧಿಕವಾಗಿರುವುದು ಎದ್ದು ಕಾಣುತ್ತದೆ. ಪಶ್ಚಿಮ ಏಷ್ಯಾದ ಸಂಸ್ಕೃತಿಯಲ್ಲಿ ಆದ ಇಂಥ ತಿರುವು ಮುರುವು, ಅದರ ಇತ್ತೀಚಿನ ಹಾಗೂ ವರ್ತಮಾನ ಇತಿಹಾಸದ ಗಮನಾರ್ಹ ಲಕ್ಷಣವಾಗಿದೆ.

ಲಿಖಿತ ಇತಿಹಾಸದ ಆರಂಭ ಕಾಲದಲ್ಲಿ ಈಜಿಪ್ಟ್, ಮೆಸಪಟೋಮಿಯಾ ಹಾಗೂ ಪ್ಯಾಲೆಸ್ಟೈನ್ ದೇಶಗಳಲ್ಲಿ ಪಾಶ್ಚಿಮಾತ್ಯ ನಾಗರಿಕತೆಯ ಮೂಲಭೂತ ಅಂಶಗಳು ಬೆಳೆದುಬಂದವು. ಪಶ್ಚಿಮದ ಮೂಲಭೂತ ಸಾಮಾಜಿಕ ಸಂಸ್ಥೆಗಳು ಹಾಗೂ ಅಲ್ಲಿಯ ಜನರ ನೈತಿಕ ಹಾಗೂ ಆಧ್ಯಾತ್ಮಿಕ ಪರಿಕಲ್ಪನೆಗಳು ಈ ಅವಧಿಯಲ್ಲಿ ರೂಪು ತಳೆದವು. ಪೂರ್ವ ಹಾಗೂ ಪಶ್ಚಿಮಗಳೆರಡರಲ್ಲೂ ಈ ಪರಂಪರೆ ಸಮಾನವಾಗಿದ್ದರೂ ಜೀವನ ಹಾಗೂ ವಿಚಾರಧಾರೆಯಲ್ಲಿ ಅವೆರಡರಲ್ಲೂ ಅವುಗಳದೇ ಆದ ವಿಭಿನ್ನತೆ ಕಂಡುಬರುತ್ತದೆ. ಏಕೆಂದರೆ ಪಶ್ಚಿಮ ಏಷ್ಯಾದ ಜನರೊಂದಿಗೆ ಮೊದಲ ಸಂಪರ್ಕ ದೊರೆತಾಗ ಪಾಶ್ಚಿಮಾತ್ಯರು ಅವರನ್ನು ವಿಚಿತ್ರ ಜನ ಹಾಗೂ ಸುಲಭಗ್ರಾಹ್ಯರಲ್ಲ ಎಂದೇ ಭಾವಿಸಿದರು. ಪಶ್ಚಿಮದ ಕುರಿತು ರುಡ್‌ಯಾರ್ಡ್ ಕಿಪ್ಲಿಂಗ್ ಹೇಳಿದ ರೀತಿ ಪರಿಣಾಮಕಾರಿ ಎನಿಸುತ್ತದೆ.

ಪೂರ್ವ ಪೂರ್ವವೇ ಪಶ್ಚಿಮ ಪಶ್ಚಿಮವೇ. ಅವೆರಡೂ ಯಾವಾಗಲೂ ಸಮಾನಾಂತರವೇ. ಅವುಗಳ ಮಿಲನ ಎಂದಿಗೂ ಸಾಧ್ಯವಿಲ್ಲ.

ಯುರೋಪ್ ಹಾಗೂ ಅಮೆರಿಕಾಗಳಿಗೆ ವಲಸೆ ಹೋಗಿ ಪಾಶ್ಚಾತ್ಯ ಸಂಸ್ಕತಿಯನ್ನು ಮೈಗೂಡಿಸಿಕೊಂಡ ಅಸಂಖ್ಯಾತ ಪೌರ್ವಾತ್ಯರು ಹಾಗೂ ಹಲವು ಖ್ಯಾತ ಯುರೋಪಿ ಯನ್ನರೂ ಈ ಅಂತರವನ್ನು ಹೋಗಲಾಡಿಸುವಲ್ಲಿ ಯಶಸ್ವಿಯಾದದ್ದು ಈ ವಿಚಾರದ ಅಸಂಗತತೆಗೆ ಸಾಕ್ಷಿ. ಪರಸ್ಪರರಲ್ಲಿ ತಿಳಿವಳಿಕೆ, ಸಹಾನುಭೂತಿ ಹಾಗೂ ಸದಿಚ್ಛೆಗಳಿದ್ದರೆ ಪೂರ್ವ ಹಾಗೂ ಪಶ್ಚಿಮಗಳೆರಡರ ಮಿಲನ ಸಾಧ್ಯ.

ಪಶ್ಚಿಮ ಏಷ್ಯಾ ಹಾಗೂ ಪಾಶ್ಚಿಮಾತ್ಯ ದೇಶಗಳ ಜನರ ನಡುವೆ ವ್ಯತ್ಯಾಸ ಕಂಡು ಬರಲು ಇರುವ ಪ್ರಮುಖ ಕಾರಣಗಳು ಇತಿಹಾಸ ಸ್ವರೂಪವುಳ್ಳವುಗಳಾಗಿವೆ. ಪಾಶ್ಚಿಮಾತ್ಯರು, ಮುಖ್ಯವಾಗಿ ಕೈಗಾರಿಕಾ ಯುಗದ ಸಂಕೀರ್ಣ ಸಮಾಜದಲ್ಲಿ ಬದುಕುವಂತಹವರು. ಸಮೀಪ ಪ್ರಾಚ್ಯವು ಮಧ್ಯಯುಗದಿಂದ ಪೂರ್ಣವಾಗಿ ಹೊರಗೆ ಬಂದಿಲ್ಲ. ಅವರ ವಿಚಾರಧಾರೆ ಹಾಗೂ ಸಂಸ್ಥೆಗಳು ಅತ್ಯಂತ ಹಿಂದಿನ ಕಾಲದವುಗಳಾಗಿದ್ದು, ಪಾಶ್ಚಾತ್ಯರಿಂದ ಬಹಳ ದೂರದಲ್ಲಿವೆ. ಈಗಿನ ಪಶ್ಚಿಮ ಏಷ್ಯಾದ ಬಗ್ಗೆ ತಿಳಿದುಕೊಳ್ಳ ಬಯಸಿದರೆ ಪೌರ್ವಾತ್ಯರು ಈ ಐತಿಹಾಸಿಕ ಕೊರಕಲನ್ನು ದಾಟಲೇ ಬೇಕಾಗುತ್ತದೆ.

ಪಶ್ಚಿಮ ಏಷ್ಯಾದ ಪ್ರಾಕೃತಿಕ ಲಕ್ಷಣ ಹಾಗೂ ಹವಾಮಾನಗಳು ಅಲ್ಲಿಯ ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ಅಭಿವೃದ್ದಿಯ ಮೇಲೆ ಗಾಢ ಪರಿಣಾಮ ಬೀರಿವೆ. ನೈಲ್, ಟ್ರೈಗ್ರಿಸ್ ಹಾಗೂ ಯೂಫ್ರೆಟಿಸ್ ನದಿಕೊಳ್ಳಗಳ ಸಂಸ್ಕತಿಗಳಲ್ಲಿ ಪುರಾತನ ಕಾಲದ ಜನರಿಗೆ ಕೃಷಿಯೇ ಪ್ರಧಾನ ಉದ್ಯೋಗವಾಗಿದ್ದರೂ ಉತ್ಸಾಹಿ ರೈತರು ನಗರ ಪ್ರದೇಶಗಳ ಅಭಿವೃದ್ದಿಗೆ ಅಗತ್ಯವಾದ ಸಂಪತ್ತನ್ನು ಸೃಜಿಸಿದರು. ಇದರಿಂದ ಕೈಗಾರಿಕೆ ಹಾಗೂ ವಾಣಿಜ್ಯ ಬೆಳೆದು, ಹಣ ರಾಶಿಯಾಗಿ, ಬಡತನ ಹಾಗೂ ನಿಯಂತ್ರಣಗಳೆರಡನ್ನು ಹೊಂದಿರುವ ಅಲ್ಪಸಂಖ್ಯೆಯ ಗುಂಪಿಗಾಗಿ, ಉನ್ನತ ಸಾಂಸ್ಕೃತಿಕ ಮಟ್ಟದ ನಾಗರಿಕ ಜೀವನದ ಉಗಮವಾಯಿತು.

ಪುರಾತನ ಕಾಲದಲ್ಲಿ ಪಶ್ಚಿಮ ಏಷ್ಯಾ ಪ್ರದೇಶವು ಕೈಗಾರಿಕೆ ಹಾಗು ವ್ಯಾಪಾರ ಚಟುವಟಿಕೆಗಳ ಕೇಂದ್ರವಾಯಿತಲ್ಲದೆ ಕೃಷಿ ಉತ್ಪನ್ನ ಕೇಂದ್ರವೂ ಆಗಿತ್ತು. ಕೃಷಿಕರು ಕೈಗಾರಿಕೆ ಹಾಗೂ ವಾಣಿಜ್ಯ ನಗರಗಳಿಗೆ ಆಹಾರವನ್ನು ಪೂರೈಸಿದರು. ಕುಶಲಕರ್ಮಿಗಳು ದೂರದೂರದ ಮಾರುಕಟ್ಟೆಗಳಿಗೆ ತಮ್ಮ ಉತ್ಪಾದನೆಗಳನ್ನು ಒದಗಿಸಿದರು. ನದಿ ತೀರಗಳ ಗುಂಟ ಮುಖ್ಯ ರಸ್ತೆಗಳಲ್ಲಿ ಮೊದಲು ವಾಣಿಜ್ಯ ಬೆಳೆಯಿತು; ದೂರದ ಪ್ರದೇಶಗಳಿಗೆ ಕಾರವಾನ ಹಾಗೂ ಸಮುದ್ರ ಮಾರ್ಗಗಳ ಮೂಲಕ ವಾಣಿಜ್ಯ ವಿಸ್ತರಿಸಿತು. ದೂರದೂರದ ಯುರೋಪ್, ಏಷ್ಯಾ ಹಾಗೂ ಆಫ್ರಿಕಾ ದೇಶಗಳಿಗೆ ಪಶ್ಚಿಮ ಏಷ್ಯಾದ ನಗರಗಳು ವ್ಯಾಪಾರ ಮಾರ್ಗಗಳು ಪ್ರಾರಂಭ ಬಿಂದುವಾದವು. ನದಿಗಳ ಗುಂಟ, ಮರುಭೂಮಿಗಳು ಹಾಗೂ ಹುಲ್ಲುಗಾವಲುಗಳು ಮತ್ತು ಸಮುದ್ರಗಳನ್ನು ದಾಟಿ ವ್ಯಾಪಾರ ಪೂರ್ವ ಪಶ್ಚಿಮವಾಗಿ, ದಕ್ಷಿಣೋತ್ತರವಾಗಿ ಬೆಳೆಯಿತು. ಮಧ್ಯ ಏಷ್ಯಾದ ಮೂಲಕವಾಗಿ ಚೀನಾದತ್ತ ಕಾರವಾನ್ ಮಾರ್ಗಗಳು ಬೆಳೆದವು. ಏಜಿಯನ್ ಜಲಸಂಧಿ (ದಾಂರ್ಡನೆಲಿಸ್, ಮಾರಮೊರಾ ಸಮುದ್ರ ಹಾಗೂ ಬೊಸ್‌ಪೊರಸ್) ಹಾಗೂ ಕಪ್ಪು ಸಮುದ್ರದ ಮೂಲಕ ಜನರು ಪೂರ್ವ ಯುರೋಪಿನ ನದಿಗಳಿಗೆ ಸುಲಭ ಜಲಮಾರ್ಗವನ್ನು ಕಂಡುಹಿಡಿದರು. ಇದರಿಂದ, ಉರಾಲ್ ಪರ್ವತಗಳಿಂದ ವೊರ್ಗಿಸ್ ಪರ್ವತ ಶ್ರೇಣಿಯವರೆಗೆ ಹರಡಿದ್ದ ಯುರೇಷಿಯನ್ ಬಯಲು ಪ್ರದೇಶಕ್ಕೆ ಪ್ರವೇಶ ದೊರೆಯಿತು. ಕೆಂಪು ಸಮುದ್ರ ಹಾಗೂ ಪರ್ಷಿಯನ್ ಗಲ್ಫ್‌ಗಳು ಪೂರ್ವ ಯುರೋಪ್ ಹಾಗೂ ಭಾರತಕ್ಕೆ ರಾಜಮಾರ್ಗವನ್ನು ಒದಗಿಸಿದವು. ಮೆಡಿಟರೇನಿಯನ್ ಸಮುದ್ರದ ಮೂಲಕ ಉತ್ತರ ಆಫ್ರಿಕಾ ಹಾಗೂ ನೈರುತ್ಯ ಯುರೋಪ್‌ಗಳಿಗೆ ವ್ಯಾಪಾರ ಸುಗಮವಾಯಿತು. ಖಂಡಗಳ ನಡುವಣ ಸಾರಿಗೆ ವ್ಯವಸ್ಥೆಗೆ ಮಾರ್ಗವಾಗಿದ್ದ ಕಾರವಾನ್ ಮಾರ್ಗಗಳು ಅನಟೋಲಿಯ, ಸಿರಿಯ, ಪ್ಯಾಲೆಸ್ತಿನ್ ಹಾಗೂ ಅರಬ್ ದೇಶಗಳಿಗೆ ವ್ಯಾಪಾರ ಸಂಬಂಧವನ್ನು ಕಲ್ಪಿಸಿದವು. ಪಶ್ಚಿಮ ಏಷ್ಯಾವು ಹಲವು ಶತಮಾನಗಳವರೆಗೆ ವ್ಯಾಪಾರ ಮಾರ್ಗಗಳಿಗೆ ಸಂಪರ್ಕ ಕೊಂಡಿಯಾಗಿ ಪರಿಣಮಿಸಿ ಆರ್ಥಿಕ ಅಭ್ಯುದಯದ ದೃಷ್ಟಿಯಿಂದ ಉತ್ತಮ ಭೌಗೋಳಿಕ ಪ್ರದೇಶ ಎನಿಸಿಕೊಂಡಿತು.

ಪಶ್ಚಿಮ ಏಷ್ಯಾದ ಪ್ರಾಕೃತಿಕ ಲಕ್ಷಣಗಳು, ಅದರ ಅಭಿವೃದ್ದಿ ಹಾಗೂ ಸಾಂಸ್ಕೃತಿಕ ಪ್ರಗತಿಗೆ ನೀಡಿದ ಕೊಡುಗೆ ಎಷ್ಟೇ ಮಹತ್ವದ್ದಾಗಿದ್ದರೂ, ಅವು ತಮ್ಮದೇ ಆದ ರೀತಿಯಲ್ಲಿ ಹಾನಿಯನ್ನು ಉಂಟುಮಾಡಿದವು. ಕಾರವಾನ್ ಹಾಗೂ ಸಮುದ್ರ ಮಾರ್ಗ ಗಳಿಂದಾಗಿ ಇಂಡೋ-ಯುರೋಪಿಯನ್ ಅಲೆಮಾರಿಗಳು ಉತ್ತರ ಭಾಗದಿಂದ ಹಾಗೂ ತುರ್ಕಿಸ್ಥಾನ ಹಾಗೂ ಮಂಗೋಲಿಯಾದ ಅಲೆಮಾರಿಗಳು ಪೂರ್ವದಿಂದ ದಾಳಿ ಮಾಡಲು ಅವಕಾಶವಾಯಿತು. ವ್ಯಾಪಾರ ಮಾರ್ಗಗಳಿಗೆ ಹಾಗೂ ನಗರವಾಸಿಗಳಿಗೆ ಆತಂಕಕಾರಿಗಳೇ ಆಗಿದ್ದ ಅಲೆಮಾರಿ ಬುಡಕಟ್ಟು ಜನರಿಗೆ ಮಾತ್ರ ಯೋಗ್ಯವಾಗಿದ್ದ ಬಂಜರು ಹಾಗೂ ಅರೆ ಬಂಜರು ಭೂಮಿಗಳ ಮೂಲಕ ಕಾರವಾನ್ ಮಾರ್ಗಗಳು ಹಾದು ಹೋಗಿದ್ದವು. ಪಶ್ಚಿಮ ಏಷ್ಯಾದ ನಗರಗಳ ಸಂಪತ್ತು ಬರ್ಬರ ಹಾಗೂ ಕಿರಾತಕರ ಕಣ್ಣು ಕುಕ್ಕಿಸಿತು.

ಸುಭದ್ರತೆ ಹಾಗೂ ಅಧಿಕಾರಕ್ಕಾಗಿ ಹೋರಾಟ

ಪಶ್ಚಿಮ ಏಷ್ಯಾ ಅಥವಾ ಸಮೀಪ ಪ್ರಾಚ್ಯ ದೇಶಗಳ ಅಭ್ಯುದಯ ಹಾಗೂ ಸಂಸ್ಕೃತಿಯ ಅಡಿಗಲ್ಲುಗಳಾದ ಕಾನೂನು ಸುವ್ಯವಸ್ಥೆ ಹಾಗೂ ಸುಭದ್ರತೆಯನ್ನು ನೆಲೆ ಗೊಳಿಸಲು ರಾಜಕೀಯ ಅಧಿಕಾರದ ಕೇಂದ್ರಸ್ಥಾನಗಳು ನೈಲ್, ಯೂಪ್ರಟಿಸ್ ಹಾಗೂ ಟೈಗ್ರಿಸ್ ನದಿಗಳ ಕಣಿವೆಗಳಲ್ಲಿ ಉಗಮವಾದವು. ಈಜಿಪ್ಟ್‌ನಲ್ಲಿ ರಾಷ್ಟ್ರೀಯ ಸರ್ಕಾರ, ಸುಮೇರಿಯಾದಲ್ಲಿ ನಗರ-ರಾಜ್ಯಗಳು ಹುಟ್ಟಿದವು. ಆದರೆ ಕಾಲಕ್ರಮೇಣ ಈಜಿಪ್ಟ್ ಹಾಗೂ ಮೆಸಪಟೋಮಿಯಾಗಳಲ್ಲಿ ಸಾಮ್ರಾಜ್ಯಗಳು ಹುಟ್ಟಿಕೊಂಡರೂ, ಅವುಗಳು ಸಮೀಪ ಪ್ರಾಚ್ಯದ ಮೇಲೆ ಅಧಿಪತ್ಯ ಸ್ಥಾಪಿಸಲು ವ್ಯರ್ಥವಾಗಿ ಹೆಣಗಿದವು. ಆದರೆ ಸಾಮ್ರಾಜ್ಯಗಳ ನಡುವಣ ಯುದ್ಧದಿಂದಾಗಿ ಏಳಿಗೆಗೆ ಅಗತ್ಯವಿದ್ದ ಭದ್ರತೆ ಶಿಥಿಲಗೊಂಡಿತು.

ಕ್ರಿಸ್ತಪೂರ್ವ ೬ನೆಯ ಶತಮಾನದಲ್ಲಿ ಪಶ್ಚಿಮ ಏಷ್ಯಾದಲ್ಲಿ ಪರ್ಶಿಯನ್ನರು ರಾಜಕೀಯ ಸ್ಥಿರತೆಯನ್ನು ಸ್ಥಾಪಿಸುವವರೆಗೆ ಅದು ಶಿಥಿಲವಾಗಿಯೇ ಉಳಿದಿತ್ತು. ಪರ್ಷಿಯನ್ನರು, ದಕ್ಷಿಣ ಹಾಗೂ ಪೂರ್ವ ಪ್ರದೇಶದ ಮೇಲೆ ಹಾಗೂ ಜಲಮಾರ್ಗದ ಮೇಲೆ ನಿಯಂತ್ರಣ ಸಾಧಿಸಿದ ತರುವಾಯ ತಮ್ಮ ಅಧೀನರಾದ ಈಜಿಪ್ಟಿಯನ್ನರು ಹಾಗೂ ಪೊಲಿನೆಯಷಿಯನ್ ರೊಂದಿಗೆ ಸೇರಿ ಗ್ರೀಕರಿಂದ ಉತ್ತರ ಹಾಗೂ ಪಶ್ಚಿಮ ಪ್ರದೇಶದ ವ್ಯಾಪಾರ ಮಾರ್ಗಗಳನ್ನು ಕಸಿದುಕೊಳ್ಳಲು ಹೆಣಗಿದರು. ಈ ಹೋರಾಟವೇ ನಮಗೆ ಪರಿಚಿತವಿರುವ ಪರ್ಷಿಯನ್ ಯುದ್ಧ. ಈ ಮುಗಿಯದ ಯುದ್ಧದಲ್ಲಿ ಪಶ್ಚಿಮ ಏಷ್ಯಾ ಹಾಗೂ ಏಷ್ಯಾದ ಇತರ ವ್ಯಾಪಾರ ಮಾರ್ಗಗಳ ಆಯಕಟ್ಟಿನ ಸ್ಥಳಗಳು ಪರ್ಷಿಯನ್ನರ ಕೈಯಲ್ಲಿ ಉಳಿದು, ಗ್ರೀಕರು ಎಜಿಯನ್ ಹಾಗೂ ಮೆಡಿಟರೇನಿಯನ್ ಸಮುದ್ರ ಮಾರ್ಗಗಳ ಮೇಲೆ ತಮ್ಮ ಆಧಿಪತ್ಯವನ್ನು ಸ್ಥಾಪಿಸಿಕೊಂಡರು. ಈ ಅಸ್ಥಿರಸ್ಥಿತಿ ಪರ್ಷಿಯನ್ ಸಾಮ್ರಾಜ್ಯದ ಆಳುವ ವರ್ಗಕ್ಕೆ ಹಾಗೂ ಗ್ರೀಕ್ ನಗರ ರಾಜ್ಯಗಳಿಗೆ ಅಸಮಾಧಾನವನ್ನುಂಟುಮಾಡಿತು.

ಗ್ರೀಕರು ಹೆಲೆನಿಸಂ ಹಾಗೂ ಹೆಲೆಸಿಜೀವನ ರೀತಿಗಾಗಿ ಬರ್ಬರ ಪರ್ಷಿಯನ್ನರ ವಿರುದ್ಧ ಹೋರಾಡಿದರು. ಈ ಹೋರಾಟ ಗ್ರೀಕ್ ನಗರ ರಾಜ್ಯಗಳ ರಾಜಕೀಯ ವೈಯಕ್ತಿಕತೆ ಹಾಗೂ ಬಹುರಾಷ್ಟ್ರೀಯ ಹೋರಾಟವಾಗಿ ತೋರಿತು. ಇದಕ್ಕೆ ಇದ್ದ ಪ್ರಮುಖ ಆಕರ್ಷಣೆಗಳೆಂದರೆ, ಸಮೀಪ ಪ್ರಾಚ್ಯದ(ಪಶ್ಚಿಮ ಏಷ್ಯಾದ) ಶ್ರೀಮಂತ ಕೈಗಾರಿಕಾ ಉತ್ಪಾದನಾ ಕೇಂದ್ರಗಳು ಹಾಗೂ ಅಂತರಖಂಡ ವ್ಯಾಪಾರ ಮಾರ್ಗಗಳ ಮೇಲಣ ನಿಯಂತ್ರಣ. ಈ ಬಿಕ್ಕಟ್ಟನ್ನು ೧೪೮ ವರ್ಷಗಳ ತರುವಾಯ ಅಲೆಕ್ಸಾಂಡರು ಕ್ರಿ.ಶ.ಪೂರ್ವ ೩೩೧ರಲ್ಲಿ ಬಗೆಹರಿಸಿದನು. ಗ್ರೀಕ್ ನಗರ ರಾಜ್ಯಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಈಜಿಪ್ಟನ್ನು ಗೆದ್ದು, ಪರ್ಶಿಯ ದೇಶವನ್ನು ನಾಶ ಮಾಡಿದನು. ಇದರಿಂದ ಪಶ್ಚಿಮ ಏಷ್ಯಾ ಇರಾನ್ ಹಾಗೂ ಮಧ್ಯ ಏಷ್ಯಾ ಪ್ರದೇಶಗಳೆಲ್ಲವನ್ನು ಸೇರಿ ಏಕಚಕ್ರಾಧಿಪತ್ಯವನ್ನು ಅವನು ಸ್ಥಾಪಿಸಿದಂತಾಯಿತು.

ಆದರೆ, ಅಲೆಕ್ಸಾಂಡರನ ಉತ್ತರಾಧಿಕಾರಿಗಳು ಅಧಿಕಾರಕ್ಕಾಗಿ ಹೋರಾಡುವಾಗ ಈ ತಾತ್ಕಾಲಿಕ ರಾಜಕೀಯ ಸಂಘಟನೆ ಕೊನೆಗೊಂಡಿತು. ಕ್ರಿಸ್ತಪೂರ್ವ ೩೨೩ರಲ್ಲಿ ಅಲೆಕ್ಸಾಂಡರ್ ನಿಧನ ಹೊಂದಿದ ಮೇಲೆ ಸುಮಾರು ೨೦೦ ವರ್ಷಗಳ ತರುವಾಯ ರೋಮನ್ನರು ಗೆಲ್ಲುವವರೆಗೆ ಪಶ್ಚಿಮ ಏಷ್ಯಾವು ಈಜಿಪ್ಟನ ಟೊಲ್‌ಮಿ ಆಳರಸರು ಏಷ್ಯಾ ಮೈನರ್ ಸೆಲ್ಯುಸಿಡರು ಹಾಗೂ ಮೆಸ್ಸಿಡೋನಿಯದ ಆಂಟೊನಿಡ್‌ರ ಪ್ರತಿಸ್ಪರ್ಧೆಗಳಿಗೆ ಬಲಿಯಾಯಿತು. ರೋಮನ್ ಗಣರಾಜ್ಯವು ಪೂರ್ವ ಹಾಗೂ ಪಶ್ಚಿಮ ಮೆಡಿಟರೇನಿಯನ್ ಪ್ರದೇಶಗಳ ಹಾಗೂ ಅದರ ಹಿನ್ನಾಡುಗಳ ಮೇಲೆ ನಿಯಂತ್ರಣ ಸಾಧಿಸುವವರೆಗೆ ಈ ರಾಜಮನೆತನಗಳು ಹಾಗೂ ಉಳಿದ ಗ್ರೀಕ್ ನಗರ ರಾಜ್ಯಗಳ ನಡುವಣ ಹೊಡೆದಾಟ ನಡೆದೇ ಇತ್ತು.

ತತ್ಪರಿಣಾಮವಾಗಿ ಉಂಟಾದ ರಾಜಕೀಯ ಹಾಗೂ ಆರ್ಥಿಕ ಏಕತೆ ಪಾಕ್ಸ್ ರೋಮಾನಾನ ಆಳ್ವಿಕೆಯಲ್ಲಿ ಸಮೀಪ ಪ್ರಾಚ್ಯಕ್ಕೆ ಅಭಿವೃದ್ದಿ ತಂದಿತು. ಕ್ರಿ.ಶ.೩ನೆಯ ಶತಮಾನದ ವೇಳೆಗೆ ರೋಮನ್ ಸಾಮ್ರಾಜ್ಯದಲ್ಲಿ ಉಲ್ಬಣಿಸಿದ ಅವ್ಯವಸ್ಥೆಯಿಂದಾಗಿ ಹಾಗೂ ಪರ್ಶಿಯಾದಲ್ಲಿ ಸಸಾಸಿಡ್ ರಾಜವಂಶ ಕಾಣಿಸಿಕೊಂಡ ಕಾರಣದಿಂದಾಗಿ(೨೨೬ ರಿಂದ ೬೫೧) ಪೂರ್ವ ವ್ಯಾಪಾರ ಮಾರ್ಗಗಳ ಮೇಲೆ ರೋಮನ್‌ರಿಗಿದ್ದ ನಿಯಂತ್ರಣ ತಪ್ಪಿತಲ್ಲದೆ, ಪಶ್ಚಿಮ ಏಷ್ಯಾದ ರಾಜಕೀಯ ಸುಭದ್ರತೆ ಹಾಗೂ ಆರ್ಥಿಕ ಪ್ರಗತಿ ಶಿಥಿಲಗೊಂಡಿತು. ಪಶ್ಚಿಮ ಏಷ್ಯಾದ ಆರ್ಥಿಕ ಸಮೃದ್ದಿಗೆ ಹೋಲಿಸಿದರೆ ಇಟಲಿಯ ಮಹತ್ವ ಕುಗ್ಗುತ್ತಿದ್ದುದನ್ನು ನೋಡಿ ಸಾಮ್ರಾಟ ಕಾನ್‌ಸ್ಟೆಂಟೈನ್-೧ ಎಂಬುವವನು ೩೭೫ರಲ್ಲಿ ತನ್ನ ರಾಜಧಾನಿಯನ್ನು ಬೆಸೆಂಟೈಮ್ ಎಂಬ ಪ್ರಾಚೀನ ಗ್ರೀಕ್ ನಗರದ ಬೊಸ್‌ಪೊರಸ್ ಎಂಬಲ್ಲಿ ಸ್ಥಾಪಿಸಲು ನಿರ್ಧರಿಸಿದನು. ಮೊದಲು ಕ್ರಿಶ್ಚಿಯನ್ ನಗರವಾದ ಈ ಹೊಸ ನಗರ ರೋಮ್ ಎಂದು ಹೆಸರನ್ನು ಪಡೆಯಿತು. ಇದರಿಂದಾಗಿ, ಇದು ರಾಜಕೀಯ ಹಾಗೂ ಆಡಳಿತಾತ್ಮಕ ಕೇಂದ್ರವಾಗಿ, ರೋಮನ್ ಸಾಮ್ರಾಟರು ಹಾಗೂ ಅವರ ಉತ್ತರಾಧಿಕಾರಿಗಳಾದ ಬೆಜೆಂಟೈನರು ಸಾವಿರಾರು ವರ್ಷಗಟ್ಟಲೆ ಪರ್ಶಿಯನ್ನರ ಮೇಲೆ ಹಾಗೂ ಸಸೇನಿಯನ್‌ರ ಮೇಲೆ ನಿಯಂತ್ರಣ ಸಾಧಿಸಿ ಟುಟೋನಿಕ್ ಸ್ಲಾವಿಕ್ ಹಾಗೂ ತುರೇನಿಯನ್ ಆಕ್ರಮಣಕಾರ ರೊಂದಿಗೆ ಹೋರಾಡಲು ಹಾಗೂ ಅನಟೋಲಿಯಾವನ್ನು ಅರಬ್ ಮುಸಲ್ಮಾನರಿಂದ ರಕ್ಷಿಸಲು ಶಕ್ತರಾದರು.

೩೯೫ರಲ್ಲಿ ರೋಮನ್ ಸಾಮ್ರಾಜ್ಯವು ವಿಭಜನೆಯಾದ ಮೇಲೆ ಕಾನ್‌ಸ್ಟಾಂಟಿನೋಪಲ್‌ನ ಕ್ರಿಶ್ಚಿಯನ್ ಚಕ್ರವರ್ತಿಗಳು ಪಶ್ಚಿಮ ಏಷ್ಯಾದ ಬಹುಭಾಗದ ಮೇಲೆ ಆಧಿಪತ್ಯ ಹೊಂದಿದರು. ೭ನೆಯ ಶತಮಾನದಲ್ಲಿ ಮುಸಲ್ಮಾನ ಅರಬರು ಇಡಿಯ ನೈರುತ್ಯ ಏಷ್ಯಾ ವನ್ನು ಹಾಗೂ ಈಜಿಪ್ಟನ್ನು ವಶಪಡಿಸಿಕೊಂಡರು. ೬೪೨ರಲ್ಲಿ ಸಿರಿಯಾದಲ್ಲಿ ಬೈಜೆನ್‌ಟೈನ ಸೈನ್ಯ ಪರಾಭವಗೊಳ್ಳುವವರೆಗೆ ಹಾಗೂ ೧೪೫೩ರಲ್ಲಿ ಕಾನ್‌ಸ್ಟಾಂಟಿನೋಪಲ್‌ನ್ನು ವಶಪಡಿಸಿಕೊಳ್ಳುವವರೆಗೆ ಪಶ್ಚಿಮ ಏಷ್ಯಾವು ಕ್ರಿಶ್ಚಿಯನ್ ಹಾಗೂ ಮುಸಲ್ಮಾನ ಧರ್ಮಗಳ ನಡುವಣ ಸಂಘರ್ಷದ ಪ್ರಮುಖ ರಣಭೂಮಿಯಾಗಿ ಪರಿಣಮಿಸಿತು.

ಪಶ್ಚಿಮ ಏಷ್ಯದಲ್ಲಿ ಸಂಸ್ಕೃತಿ ಹಾಗೂ ಸಮಾಜದ ಉಗಮ

ವಿಶಾಲ ಸಾಮ್ರಾಜ್ಯಗಳು ಹಾಗೂ ಸಾಮ್ರಾಜ್ಯವ್ಯಾಪಿ ನಾಗರಿಕತೆಗಳು ಬೆಳೆದಂತೆಲ್ಲ ಧಾರ್ಮಿಕ ರೂಪಾಂತರ ಉಂಟಾಯಿತು. ಆವರೆಗಿನ ಧರ್ಮಗಳು, ಆಯಾ ಪ್ರದೇಶಗಳು ಹಾಗೂ ಭೌಗೋಳಿಕ ಪರಿಸರಕ್ಕೆ ತಕ್ಕಂತೆ ಇದ್ದ ಚಿಕ್ಕ ಸಮುದಾಯಗಳಿಗೆ ಮಾತ್ರ ಸೀಮಿತವಾಗಿದ್ದವು. ಸಾಮಾಜಿಕವಾಗಿ, ಜನರಲ್ಲಿ ಪ್ರತಿಸ್ಪಂದನ ಹೆಚ್ಚಿಸಿದಂತೆಲ್ಲ ವಿವಿಧ ಜನರು ಒಂದೇ ದೇವರನ್ನು ಅಂಗೀಕರಿಸಿದರು. ಪುರಾತನ ಪಶ್ಚಿಮ ಏಷ್ಯಾದ ಜನರು ದೇವತೆಗಳಿಗೆ ಮನೆತನಗಳಿಗೆ, ಪಂಗಡಗಳಿಗೆ, ಗ್ರಾಮಗಳಿಗೆ ಹಾಗೂ ಪಟ್ಟಣಗಳಿಗೆ ಸಂಬಂಧಿಸಿದವರಾಗಿದ್ದರು. ಜನಗಳಲ್ಲಿ ಸಂಪರ್ಕ ಬೆಳೆದಂತೆ ದೇವತೆಗಳನ್ನು ಜಾಗತಿಕ ಸ್ವರೂಪದಲ್ಲಿ ಗುರುತಿಸಿ ಸಾಮ್ರಾಜ್ಯಗಳ ದೇವತೆಗಳು, ಅಧಿಕಾರಶಾಹಿ ವರ್ಗದ ದೇವತೆಗಳು, ವಿಜೇತರ ದೇವತೆಗಳು, ಪ್ರವಾಸಿಗರ, ವ್ಯಾಪಾರಿಗಳ ಹಾಗೂ ಪುರೋಹಿತರ ದೇವತೆಗಳು ಕಾಣಿಸಿಕೊಂಡು, ಈ ವರ್ಗದವರು ಒಂದೇ ಪ್ರದೇಶಕ್ಕೆ ಸೀಮಿತವಾಗಿಲ್ಲದಿದ್ದು ದರಿಂದ, ಆ ದೇವತೆಗಳ ಪೂಜೆ ದೂರದೇಶಗಳವರೆಗೂ ಹರಡುವುದಕ್ಕೆ ಕಾರಣವಾಯಿತು. ಸಕಲ ದೇವತೆಗಳ ದೇವಾಲಯ ಹಾಗೂ ದೇವತೆಗಳ ತಾರತಮ್ಯದ ಪರಿಕಲ್ಪನೆಯಿಂದ ವಿವಿಧ ಮತಗಳ ಸಮನ್ವಯ ಹಾಗೂ ದೇವತೆಗಳ ಏಕತ್ವದ ಭಾವನೆ ಮೂಡಿತು. ತಮ್ಮ ತಮ್ಮ ಸ್ಥಳೀಯ ಪಂಥಗಳು ಹಾಗೂ ಪೂಜ ವಿಧಾನಗಳನ್ನು ಕಾಪಾಡಿಕೊಂಡು ವಿಭಿನ್ನ ಬಗೆಯ ಜನರು ಒಂದೇ ಜಗತ್ತಿನಲ್ಲಿ ಬಾಳುವಂತಾಯಿತು.

ದೊಡ್ಡ ದೇವತೆಗಳ ವಿಶ್ವವ್ಯಾಪಿ ಶ್ರೇಷ್ಠತೆಯಿಂದಾಗಿ ಜನರಲ್ಲಿ ದೇವನೊಬ್ಬ, ಅವನು ಇಡೀ ವಿಶ್ವಕ್ಕೆ ಹಾಗೂ ಇಡಿಯ ಮಾನವ ಕುಲಕ್ಕೆ ಒಬ್ಬನೆಯ ಎಂಬ ಭಾವನೆಗೆ ಹಾದಿಯಾಯಿತು. ಈ ಏಕತೆಯ ಪರಿಕಲ್ಪನೆಯನ್ನು ಮೊಟ್ಟಮೊದಲು ಪ್ರಾಚೀನ ಇಸ್ರೇಲಿನ ಪ್ರವಾದಿಗಳು ಬೋಧಿಸಿದರು. ತರುವಾಯ ಕ್ರಿಸ್ತಪೂರ್ವ ೭ನೆಯ ಶತಮಾನದಲ್ಲಿ ಜೋರಾಸ್ಟರ್ ಎಂಬ ಇರಾನಿ ಪ್ರವಾದಿಯು ಬೋಧಿಸಿದನು. ಕ್ರಿಶ್ಚಿಯನ್ ಹಾಗೂ ಆ ತರುವಾಯ ಮುಸಲ್ಮಾನ ಮತಗಳು, ದೇವರು ಒಬ್ಬನೆಯ ಎಂಬ ಅಂಶವನ್ನೂ, ಅವನ ಪ್ರಭುತ್ವವನ್ನೂ ಬೋಧಿಸಿದರು. ಅವರ ಮಹತ್ವವನ್ನು ಸಾರುವುದು ಮಾನವ ಕುಲದ ಕರ್ತವ್ಯವೆಂದು ಬೋಧಿಸಿದರು.

ಜುಡಾಯಿಸಂ, ಜೋರಾಸ್ಟರ್ ಪಂಥ ಹಾಗೂ ಕ್ರಿಶ್ಚಿಯನ್ ಧರ್ಮಗಳು ರೋಮನ್ ಬೈಜೆನ್‌ಟೈನ್ ಹಾಗೂ ಸಸೆನಿಯನ್ ಸಾಮ್ರಾಜ್ಯಗಳಲ್ಲಿ ಬಹುತೇಕ ಎಲ್ಲ ಜನರ ಧರ್ಮ ಹೇಗೆ ಆದವು ಎಂಬ ಇತಿಹಾಸವನ್ನು ಇಲ್ಲಿ ಹೇಳಲಾಗದು. ಆದರೆ, ಮಧ್ಯ ಏಷ್ಯಾದ ಹೊಸ ವಿಚಾರಧಾರೆ ಹಾಗೂ ತತ್ವಗಳ ಪ್ರಕಾರ ಮತ್ತು ಪಶ್ಚಿಮ ಏಷ್ಯಾದ ಜನರ ನಡುವೆ ಸಂಪರ್ಕ ಹೆಚ್ಚುತ್ತಿದ್ದುದು ಹಾಗೂ ಹೊಸ ಸಾಮ್ರಾಜ್ಯಗಳ ಬೆಂಬಲದಿಂದಾಗಿ ದೇವತಾರಾಧನೆಯಿಲ್ಲದ ಧರ್ಮಗಳನ್ನು ಇಸ್ಲಾಂ ಉದಯದಿಂದಾಗಿ ಜಾಗತಿಕ ಧರ್ಮಗಳು ಆವರಿಸಿದವು. ಇರಾಕಿನ ಸ್ವಲ್ಪ ಭಾಗ ಹಾಗೂ ಬಹುತೇಕ ಇರಾನ್ ಪ್ರದೇಶದಲ್ಲಿ ಜೊರಾಷ್ಟ್ರಿಯನ್ ಪಂಥ ಪ್ರಚಲಿತವಾಯಿತು. ಇರಾಕ್ ದೇಶದ ಅಲ್ಪಭಾಗ, ಇರಾನ್ ಪೂರ್ತಿ, ಝರತುಷ್ಠ ಧರ್ಮದ ಮುಖ್ಯ ಶಾಖೆಗಳಾದ ಮನಿಕೆನಿಸಂ ಹಾಗೂ ಮೆಡೆಯಿಸಂ ಸೇರಿದಂತೆ ಝರತುಷ್ಠ ಪಂಥವನ್ನು ಸ್ವೀಕರಿಸಿತು. ಇರಾಕ್ ದೇಶದ ಸ್ವಲ್ಪ ಭಾಗ ಹಾಗೂ ಬೈಜೆನ್‌ಟೈನ್ ಸಾಮ್ರಾಜ್ಯ ಕ್ರಿಶ್ಚಿಯನ್ ಧರ್ಮದ ಹಲವು ಶಾಖೆಗಳಲ್ಲಿ ಒಂದನ್ನು ಸ್ವೀಕರಿಸಿತು. ಇಸ್ಲಾಂ ಉದಯಿಸಿದಾಗ ಈಜಿಪ್ಟ್‌ನಲ್ಲಿ ಕಾಪ್ಪಿಕ್ ಚರ್ಚ್ ಇದ್ದು ಸಿರಿಯಾದಲ್ಲಿ ಜಕೊಬೈಟ್ ಚರ್ಚ್ ಅಸ್ತಿತ್ವದಲ್ಲಿತ್ತು. ಇರಾಕ್‌ನಲ್ಲಿ ನೆಸ್ಟೊರಿಯನ್ ಚರ್ಚ್ ಇತ್ತು. ಅರ್ಮೆನಿಯದಲ್ಲಿ ಅರ್ಮೆನಿಯನ್ ಹಾಗೂ ಅನಟೋಲಿಯ ಹಾಗೂ ಚಾಲಕನ ಪ್ರದೇಶಗಳು ಗ್ರೀಕ್ ಸಾಂಪ್ರದಾಯಿಕ ಚರ್ಚೆಗೆ ಬದ್ಧವಾಗಿದ್ದವು. ಯಹೂದಿ ಸಮುದಾಯ ಹಾಗೂ ಕೆಲ ದೇವತಾರಾಧನೆ ಇಲ್ಲದ ಧರ್ಮಗಳು ಆ ಪ್ರದೇಶದ ತುಂಬ ಹುಟ್ಟಿಕೊಂಡವು.

ಏಕದೈವ ಪರಿಕಲ್ಪನೆಯ ಪಂಥಗಳು, ನಂಬಿಕೆಗಳು ಇದೇ ರೀತಿಯದಾಗಿದ್ದವು. ದೇವರು ಒಬ್ಬನೆಯ ಇದ್ದು, ಅವನು ಇಸ್ರೇಲಿನ ತನ್ನ ಜನರ ಮೇಲೆ ಅಧಿಕಾರ ಸ್ಥಾಪಿಸಿ ಕೊಳ್ಳುವವನೆಂದು ಹಾಗೂ ತನ್ನ ಪವಿತ್ರ ಶಾಸನವನ್ನು ನೆರವೇರಿಸಿಕೊಳ್ಳುವವನೆಂದು ಹಾಗೂ ಇಹಪರಗಳೆರಡರಲ್ಲೂ ಜನರ ಬಗ್ಗೆ ನಿರ್ಣಯಿಸುವವನು ಅವನೆಯ ಎಂದು ಯಹೂದಿ ಪಂಥ ಉಪದೇಶಿಸಿತು. ಜೊರಾಸ್ಟರ್ ಪಂಥವು ದೇವರು ಒಬ್ಬನೆ ಹಾಗೂ ಆತ ಅಹೂರಮಾಜ ಎಂದು ನಂಬಿತ್ತು. ಆತನೆಯ ಈ ಭೂಮಿಯ ಸೃಷ್ಟಿಕರ್ತ. ಅವನು ಬೆಳಕು ಹಾಗೂ ಸತ್ಯದ ದೇವತೆ ಎಂಬುದು ನಂಬಿಕೆಯಾಗಿತ್ತು. ಕೆಡುಕು ಹಾಗೂ ಅಜ್ಞಾನ ಅಂಧಕಾರದ ವಿರುದ್ಧ ದೇವರು ಮಾಡುವ ಹೋರಾಟದಿಂದ ಈ ಜಗತ್ತಿನ ಹಣೆಬರಹ ನಿರ್ಣಯವಾಗುತ್ತದೆ ಎಂಬುದು ಅವನ ನಂಬಿಕೆಯಾಗಿತ್ತು. ಹಾಗೂ ಮನುಷ್ಯ ಈ ಹೋರಾಟದ ಒಂದು ಅಂಗ ಮಾತ್ರ, ತನ್ನ ಕೃತಿ ಹಾಗೂ ನಂಬಿಕೆಗಳ ಮೂಲಕ ಒಳ್ಳೆಯತನ ಹಾಗೂ ಪ್ರಕಾಶದ ವಿಜಯಕ್ಕೆ ಸಹಕಾರಿಯಾಗುವುದು ಅವನ ಕರ್ತವ್ಯ ಎಂಬುದು ಅವರ ಬೋಧನೆಯಾಗಿತ್ತು. ಜೋರಾಸ್ಟರ್ ಪಂಥವು ಯಹೂದಿ ಪಂಥದಂತೆ ಮಾನವನ ನೈತಿಕ ಹೊಣೆಯನ್ನು ಬಿಂಬಿಸುವ ಧರ್ಮವಾಗಿತ್ತು. ಕ್ರಿಶ್ಚಿಯನ್ ಧರ್ಮದ ನಂಬಿಕೆಗಳು ಇದೇ ಮಾದರಿಯಾಗಿದ್ದರೂ ಅವರ ಬಗೆ ವಿಭಿನ್ನವಾಗಿತ್ತು. ಕ್ರಿಶ್ಚಿಯನ್ ಧರ್ಮದ ತತ್ವ ಎಂದರೆ ದೇವರು ಮೂರು ಮುಖಗಳು. ತಂದೆ, ಮಗ ಹಾಗೂ ಪವಿತ್ರ ಆತ್ಮದ ರೂಪದಲ್ಲಿ ದೇವರು ಇರುತ್ತಾನೆ. ಕ್ರಿಸ್ತನ ಅಪರಾವತಾರವಾದ ಲೋಗೋಸ್ ಮಗ. ಕ್ರಿಸ್ತನು ತಾನು ಶಿಲುಬೆಗೆ ಏರಿ ತನ್ನನ್ನು ನಂಬಿದವರನ್ನು ರಕ್ಷಿಸಿದ. ಕ್ರಿಶ್ಚಿಯನ್ ಧರ್ಮಕ್ಕೆ ಬಲವಾದ ನೈತಿಕ ಬುನಾದಿಯಿತ್ತು. ಮಾನವನ ಸ್ವಭಾವದ ಮೂಲಭೂತ ಗುಣವಾದ ಕೆಡಕು ಹಾಗೂ ಕೋಟಲೆಗಳನ್ನು ಕ್ರಿಸ್ತನಲ್ಲಿಯ ನಂಬಿಕೆಯ ಮೂಲಕವೇ ಕಳೆದುಕೊಂಡು ಮುಕ್ತಿ ಪಡೆಯುವುದೇ ಕ್ರಿಶ್ಚಿಯನ್ ಧರ್ಮದ ಮುಖ್ಯ ಆಶಯ.

ತತ್ವ ಬೋಧನೆಯ ರೀತಿ ವಿಭಿನ್ನವಾಗಿದ್ದರೂ ಯಹೂದಿ ಪಂಥ, ಜೊರಾಸ್ಟರ್ ಪಂಥ ಹಾಗೂ ಕ್ರಿಶ್ಚಿಯನ್ ಪಂಥಗಳ ಮೂಲ ಲಕ್ಷಣಗಳು ಒಂದೇ ಆಗಿದ್ದವು. ಎಲ್ಲವೂ ಪಾರಮಾರ್ಥಿಕ ಸ್ವರೂಪದವುಗಳಾಗಿದ್ದವು. ಲೌಕಿಕ ಜೀವನದ ಹೊರತಾಗಿ ಒಂದು ಉನ್ನತವಾದ ಪರಲೋಕವಿದ್ದು, ಅದು ದೈವಿಕತೆಯ ಆವಾಸವಾಗಿರುತ್ತದೆ. ಇದನ್ನು ನೈತಿಕ ಕಾರ್ಯಗಳ ಮೂಲಕ ಅಥವಾ ದೈವ ಶ್ರದ್ಧೆಯ ಮೂಲಕ ಮಾತ್ರವೇ ಸಾಧಿಸಬಹುದಾಗಿದೆ ಎಂಬುದು ಅವುಗಳ ಅಭಿಪ್ರಾಯವಾಗಿತ್ತು. ತ್ಯಾಗ, ಪ್ರಾರ್ಥನೆಗಳ ಮೂಲಕ ಪಾಪ ಹಾಗೂ ಮರಣದಿಂದ ಮುಕ್ತಿಯನ್ನು ಪಡೆದು ಶಾಶ್ವತ ಸತ್ಯಲೋಕಕ್ಕೆ ಹೋಗಲು ಮಾರ್ಗ ಎಂಬ ನಂಬಿಕೆಯಿತ್ತು. ಅಲ್ಲದೆ ಈ ಧರ್ಮಗಳು ವಿಶ್ವವ್ಯಾಪ್ತಿಯಾಗಿದ್ದು, ಭಗವಂತನೆ ಇಡಿಯ ವಿಶ್ವವನ್ನು ಸೃಷ್ಟಿಸಿದ್ದು, ಆತನೆಯ ಅದನ್ನು ಆಳುವನೆಂದು ನಂಬಿದ್ದರು. ದೇವರಿಗಿಂತ ಮೊದಲು ಆಯಾ ಧರ್ಮಾನುಯಾಯಿಗಳೇ, ಇಂತಹ ನಂಬಿಕೆ ಹಾಗೂ ನೈತಿಕ ಮಟ್ಟವನ್ನು ಬೆಳೆಸಿಕೊಂಡಿದ್ದು, ಪರಸ್ಪರ ಬಾಂಧವ್ಯ ಭಾವನೆಯನ್ನು ಹೊಂದಿದ್ದರು. ಏಕೆಂದರೆ, ಜೀವನ ರೀತಿ ಹಾಗೂ ಮುಕ್ತಿಯ ಅನ್ವೇಷಣೆ ವಿಚಾರ ಅವರಲ್ಲಿ ಒಂದೇ ಆಗಿತ್ತು.

ತಮ್ಮನ್ನು ತಾವು ಗುರುತಿಸಿಕೊಳ್ಳುವ ಪ್ರಜ್ಞೆ ಹಾಗೂ ಜೀವನದ ವಿಧಾನದಲ್ಲಿ ಸಮಾನತೆಗಳು ಧಾರ್ಮಿಕ ಸಂಸ್ಥೆಗಳ ರಚನೆಗೆ ನಾಂದಿಯಾದವು. ಇದಕ್ಕೆ ಮೊದಲ ಉದಾಹರಣೆ ಎಂದರೆ ಚರ್ಚ್‌ಗಳ ಆವಿರ್ಭಾವ. ಚರ್ಚ್ ಎಂಬುದು ಆಧ್ಯಾತ್ಮಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಪೀಠಾಧಿಪತಿಗಳ ಕ್ರಮಬದ್ಧ ಶ್ರೇಣಿಯಾಗಿದ್ದು, ಧರ್ಮ ಬೋಧನೆಯ ದೃಷ್ಟಿಯಿಂದ ಹಾಗೂ ಸಂಘಟನೆಯ ದೃಷ್ಟಿಯಿಂದ ಹಿರಿಯ ಮುಖ್ಯಸ್ಥನು ಪರಮ ಅಧಿಕಾರವನ್ನು ಹೊಂದಿದ್ದನು. ಆತ ಪ್ರಾದೇಶಿಕವಾಗಿ ಸಂಘಟಿಸಲಾಗಿದ್ದ ಸಂಘಟನೆಯ ಕ್ರಮಬದ್ಧ ಶ್ರೇಣಿಯ ಪೀಠಾಧಿಕಾರಿಗಳ ಮೂಲಕ ಅನುಯಾಯಿಗಳೊಂದಿಗೆ ಸಂಪರ್ಕ ಹೊಂದಿದ್ದನು. ಪೋಪರು ಹಾಗೂ ಪೆಟ್ರಿಯಾರ್ಕರು ಪರಮ ಅಧಿಕಾರವನ್ನು ಹೊಂದಿದ್ದರು. ಅವರು ಬಿಷಪ್‌ರನ್ನು ನೆಯಮಿಸಿದ್ದು ಅವರು ಡಯೊಸಿಸ್ ಎಂದು ಕರೆಯಲಾಗುತ್ತಿದ್ದ ಜಿಲ್ಲೆಗಳನ್ನು ನೋಡಿಕೊಳ್ಳುತ್ತಿದ್ದರು. ಬ್ರಿಟಿಷರು ಪ್ಯಾರಿಷ್ ಪ್ರೀಸ್ಟ್ ರನ್ನು ನೆಯಮಿಸುತ್ತಿದ್ದರು. ಜೊರಾಸ್ಟರ್ ಪಂಥದಲ್ಲಿ ಮೊಬಾದ್ಸ್ ಅಥವಾ ಅಗ್ನಿ ಪುರೋಹಿತರಿದ್ದು, ಮೂರನೆಯ ಶತಮಾನದಲ್ಲಿ ಪ್ರಧಾನ ಮೊಬದ್ ಎಂಬ ಸ್ಥಾನ ಕಾಣಿಸಿಕೊಂಡಿತು. ಅದು ಕ್ರಿಶ್ಚಿಯನ್ ಧರ್ಮದ ಪಾದ್ರಿ ಹುದ್ದೆಗೆ ಸಮಾನವಾದುದಾಗಿತ್ತು. ಈ ಅಧಿಕಾರಿ ಸ್ತರಗಳು ವಿವಿಧ ಪ್ರದೇಶಗಳನ್ನು ಒಂದೇ ಪ್ರದೇಶವಾಗಿ ಒಗ್ಗೂಡಿಸಿ ತನ್ಮೂಲಕ ಆ ಮತದಲ್ಲಿ ಪರಿಭಾಷಿಸಲಾದ ತತ್ವಗಳು ಹಾಗೂ ಉಪದೇಶಗಳನ್ನು ಎಲ್ಲ ಸದಸ್ಯರು ಅನುಸರಿಸುತ್ತಿದ್ದರು.

ಪ್ಯಾರಿಷ್ ಪ್ರೀಸ್ಟ್‌ರು ಸ್ಥಳೀಯ ಹಂತದಲ್ಲಿ ಚರ್ಚಿನ ತತ್ವಗಳನ್ನು ಅನುಷ್ಠಾನಕ್ಕೆ ತರುತ್ತಿದ್ದರು. ಈ ಹಂತದಲ್ಲಿ ಚರ್ಚುಗಳು ಜತ್ಯತೀತ ಹಾಗೂ ಧಾರ್ಮಿಕ ವಿಷಯ ಗಳೆರಡರಲ್ಲೂ ತಮ್ಮ ಧರ್ಮದ ಅನುಯಾಯಿಗಳ ಮೇಲೆ ಗಣನೀಯ ಅಧಿಕಾರವನ್ನು ಚಲಾಯಿಸಿದವು. ಚರ್ಚುಗಳು ನ್ಯಾಯಾಲಯಗಳಾಗಿಯೂ ಪಾತ್ರ ವಹಿಸುತ್ತಿದ್ದು ಕುಟುಂಬ, ಆಸ್ತಿ, ವಾಣಿಜ್ಯ ಹಾಗೂ ಇತರ ಸಿವಿಲ್ ಕಾನೂನು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಧಿಕಾರ ವ್ಯಾಪ್ತಿಯನ್ನು ಹೊಂದಿದ್ದವು. ಚರ್ಚ್ ಒಂದು ಮಹತ್ವದ ಶೈಕ್ಷಣಿಕ ಸಂಸ್ಥೆಯಾಗಿತ್ತು. ಬಿಷಪ್‌ರು ಹಲವು ಬಾರಿ ನಗರಗಳ ಆಡಳಿತಗಾರರಾಗಿದ್ದು ಡಯೋಸಿಸ್‌ಗಳು ನಿರ್ಮಾಣವಾದಲ್ಲಿ ಅವರ ಅಧಿಕಾರ ವ್ಯಾಪ್ತಿ ಇರುತ್ತಿತ್ತು. ಚರ್ಚ್ ಎಂಬುದು ಕೇವಲ ಆ ಧರ್ಮದ ಅನುಯಾಯಿಗಳ ಸಂಘಟನೆ ಮಾತ್ರವೇ ಆಗಿರದೆ ಸಾಮುದಾಯಿಕ ಜೀವನದ ವ್ಯವಸ್ಥಾಪನೆಗಾಗಿ ಇದ್ದ ಒಂದು ಸಂಘಟನೆಯೂ ಆಗಿತ್ತು. ಬಿಷಪ್‌ರು ನ್ಯಾಯಾಧಿಕಾರಿಗಳಾಗಿ, ಚರ್ಚ್‌ನಲ್ಲಿ ಧರ್ಮದ ಆಧಾರದ ಮೇಲೆ ಪೌರ ನಿಗಮದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮಾನವನು ತನ್ನ ಸುತ್ತಲಿನ ಸಾಮಾಜಿಕ ಹಾಗೂ ಪ್ರಾಕೃತಿಕ ಪರಿಸರದ ಬಗ್ಗೆ ತಿಳಿದು ಕೊಳ್ಳಲು ಸಾಧ್ಯವಾಗುವಂಥ ಪರಿಕಲ್ಪನೆಗಳನ್ನು ಕಲ್ಪಿಸಲಾಗುತ್ತಿತ್ತು. ಪೂಜೆ, ನ್ಯಾಯ ಪರಿಪಾಲನೆ, ಶಿಕ್ಷಣ, ಸ್ಥಳೀಯ ಆಡಳಿತಗಳನ್ನು ನಡೆಸುವಂಥ ಸಂಸ್ಥೆಯಾಗಿತ್ತು.

ಯಹೂದಿ ಸಮುದಾಯಗಳು ಕೂಡ ಸ್ಥಳೀಯ ಪ್ಯಾರಿಷ್ ಸಮುದಾಯಕ್ಕೆ ಸಮಾನವಾದ ರೀತಿಯಲ್ಲಿ ಸಂಘಟಿತವಾಗಿದ್ದವು. ಯಹೂದಿಯರು ರೂಪಿಸಿದ ಸಮುದಾಯಗಳಲ್ಲಿ ಧರ್ಮಶ್ರದ್ಧೆ ಹಾಗೂ ದೇವಪೂಜೆಯೊಂದಿಗೆ ಕಾನೂನು ಪಾಲನೆ, ಶಿಕ್ಷಣ ಹಾಗೂ ಧರ್ಮಕಾರ್ಯಗಳು ಮೇಳವಿಸಿದ್ದವು. ಯಹೂದಿ ಸಮುದಾಯದ ಮುಖ್ಯಸ್ಥರು ರಾಜ್ಯದ ಅಧಿಕಾರದಲ್ಲಿ ಸ್ಥಾನ ಪಡೆದಿದ್ದರು. ಆದರೂ, ಯಹೂದಿಗಳಲ್ಲಿ ಪೀಠಾಧಿಕಾರದ ಕ್ರಮ ಶ್ರೇಣಿಯುಳ್ಳ ಸಂಘಟನೆಯಿರಲಿಲ್ಲ. ಆದರೆ ವಿದ್ಯಾರ್ಹತೆಯ ದೃಷ್ಟಿಯಿಂದ ಕ್ರಮಶ್ರೇಣಿಯ ವಿಷಯದಲ್ಲಿ ಸಂಬಂಧವಿತ್ತು ಹಾಗೂ ಗೌರವವಿತ್ತು.

ಇಸ್ಲಾಮ್ ಧರ್ಮದ ಉದಯವಾಗುವ ವೇಳೆಗೆ ಪಶ್ಚಿಮ ಏಷ್ಯಾದಲ್ಲಿ ರಾಜಕೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಎರಡು ಮಹತ್ವದ ವಿಭಾಗಗಳು ಕಾಣಿಸಿಕೊಂಡವು. ಬೈಜೆನ್ ಟೈನ್ ಹಾಗೂ ಸೆಸೇನಿಯನ್ ಎರಡು ರಾಜಕೀಯ ವಿಭಾಗಗಳಾದರೆ, ಕ್ರಿಶ್ಚಿಯನ್ ಹಾಗೂ ಜೊರಾಸ್ಟ್ರಿಯನ್ ಎರಡು ಮತಪಂಥಗಳು. ಇವೆರಡರಲ್ಲಿ ಸಾಕಷ್ಟು ವಿಭಿನ್ನತೆಗಳು ಇದ್ದರೂ, ಪಶ್ಚಿಮ ಏಷ್ಯಾ ನಾಗರಿಕತೆಯ ಎರಡು ಭಾಗಗಳು – ಸಾಮ್ರಾಜ್ಯಗಳನ್ನು ಕಟ್ಟು ವಲ್ಲಿ ಧಾರ್ಮಿಕ ಹಾಗೂ ಸಾಮುದಾಯಿಕ ಜೀವನ ನಿರ್ಮಾಣದ ವಿಷಯದಲ್ಲಿ ಎರಡು ವಿಭಾಗಗಳಲ್ಲಿಯ ಸಮಾನ ಅಂಶಗಳನ್ನು ಮೈಗೂಡಿಸಿಗೊಂಡವು. ಪ್ರತಿಯೊಂದು ನಾಗರಿಕತೆಯಲ್ಲಿ ಒಂದೊಂದು ಚಿಕ್ಕಚಿಕ್ಕ ಸಮುದಾಯದ ಅಸಂಖ್ಯ ಜನಸ್ತೋಮ ತಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಉಳಿಸಿಕೊಂಡವು. ಅವುಗಳ ಮುಖ್ಯಸ್ಥರು ತಮ್ಮ ಏಕತೆಯನ್ನು ಉಳಿಸಿಕೊಂಡು ಸಮಾನ ಧರ್ಮ ಹಾಗೂ ಸಾಮ್ರಾಜ್ಯಗಳನ್ನು ಕಟ್ಟಿದರು. ಧರ್ಮ ಹಾಗೂ ಸಾಮ್ರಾಜ್ಯ ಹೆಚ್ಚು ನಿಕಟ ಸಂಬಂಧವನ್ನು ಹೊಂದಿದ್ದವು. ಸಾಮ್ರಾಜ್ಯಗಳು ಚರ್ಚ್‌ಗಳನ್ನು ಗೌರವಿಸಿದವು; ಅವರಿಗೆ ಆಶ್ರಯ ನೀಡಿದವು; ದಾನಗಳನ್ನು ಕೊಟ್ಟವು. ಸೆಸೆನಿಯನ್ ಸಾಮ್ರಾಜ್ಯದಲ್ಲಿ ಹೆಚ್ಚಿನ ಮತ ಸಹಿಷ್ಣುತೆ ಕಂಡುಬಂತು. ಬೈಜೆನ್‌ಟೈನ್ ಸಾಮ್ರಾಜ್ಯಕ್ಕಿಂತ ಇಲ್ಲಿ ಹಲವಾರು ಧರ್ಮಗಳಿದ್ದು ಚರ್ಚಿನ ವ್ಯವಸ್ಥಿತ ನಿಯಂತ್ರಣ ಇತ್ತು. ಧಾರ್ಮಿಕ ಸಮುದಾಯಗಳು ಸಾಮ್ರಾಟನ ಹೆಸರಿನಲ್ಲಿ ಆಳ್ವಿಕೆಗೆ ಸಹಾಯ ಮಾಡಿದವು.

ರಾಜಕೀಯ ಹಾಗೂ ಧಾರ್ಮಿಕ ಅಂಶಗಳ ದೃಷ್ಟಿಯಿಂದ ವಿಭಿನ್ನವಾಗಿದ್ದ ಎರಡು ಪ್ರದೇಶಗಳು ತಮ್ಮ ಸಮಾನ ಮನೋಧರ್ಮದಿಂದಾಗಿ ಒಂದೇ ಪಶ್ಚಿಮ ಏಷ್ಯಾ ನಾಗರಿಕತೆಯಾಗಿ ಒಗ್ಗೂಡಿದವು. ಏಳನೆಯ ಶತಮಾನದಲ್ಲಿ ಬಂದ ಅರಬ್ ಆಕ್ರಮಣಕಾರರು ಹಾಗೂ ಇಸ್ಲಾಮ್ ಮತಗಳು ಪಶ್ಚಿಮ ಏಷ್ಯಾದ ಸಂಸ್ಥೆಗಳನ್ನು ಉಳಿಸಿಕೊಂಡವು. ಕೌಟುಂಬಿಕ ಆನುವಂಶಿಕತೆ ಮತ್ತು ಪರಿವಾರ ಹಾಗೂ ಜನಾಂಗೀಯ ಸಮುದಾಯಗಳು ಮುಂದುವರಿದು ಐತಿಹಾಸಿಕವಾದ ಬದಲಾವಣೆಗಳಾದರೂ ಕೂಡ ಸಮಾಜದ ಅಡಿಗಲ್ಲು ಗಳಾಗಿ ಉಳಿದುಕೊಂಡವು. ಪ್ರಾದೇಶಿಕ ಪರಿಸರ ಕೃಷಿಕ ಹಾಗೂ ನಾಗರಿಕ ಸಮುದಾಯಗಳನ್ನು ಅವಲಂಬಿಸಿ ಮುಂದುವರಿಯಿತು. ಮಾರುಕಟ್ಟೆ ಹಾಗೂ ಹಣ ವಿನಿಮಯ ವ್ಯವಹಾರ ಗಳನ್ನನುಸರಿಸಿ ಆರ್ಥಿಕ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿತ್ತು. ಅಧಿಕಾರಶಾಹಿ ಆಡಳಿತ ಸೇರಿದಂತೆ ರಾಜ್ಯಸಂಘಟನೆಯ ವಿಭಿನ್ನ ವಿಧಗಳು, ಜಾಗತಿಕ ಹಾಗೂ ಪಾರಮಾರ್ಥಿಕ ನಂಬಿಕೆಗಳಿಗೆ ಒತ್ತು ನೀಡಲಾದ ಧರ್ಮ ಪ್ರಧಾನ ಜೀವನ ವೈಖರಿ ಹಾಗೂ ಪ್ಯಾರಿಷ್ ಮಾದರಿಯ ಸಮಾಜ ಸಂಘಟನೆಯನ್ನು ಕಾಯ್ದುಕೊಂಡು ಬರಲಾಗಿತ್ತು. ಪಶ್ಚಿಮ ಏಷ್ಯಾದ ಜನರನ್ನು ಸಾಮಾಜಿಕವಾಗಿ ಗುರುತಿಸುವ ಬಗೆಯನ್ನು ಹಾಗೂ ಅವರ ಧಾರ್ಮಿಕ ನಂಬಿಕೆಗಳನ್ನು ಇಸ್ಲಾಂ ಧರ್ಮದಲ್ಲಿ ಪುನಃ ಪರಿಭಾವಿಸಲಾಯಿತು; ತಮ್ಮನ್ನು ಆಳುತ್ತಿದ್ದ ಸಾಮ್ರಾಜ್ಯಗಳನ್ನು ಮರುಸಂಘಟಿಸಲಾಯಿತು.

ಇಸ್ಲಾಂ ಧರ್ಮದ ಉದಯ ಮತ್ತು ಅರಬರು (ಕ್ರಿ..೬೦೦ರಿಂದ ೧೨೦೦)

೪೭೩ರಲ್ಲಿ ರೊಮ್ ಸಾಮ್ರಾಜ್ಯದ ಆಳರಸರು ತೀವ್ರವಾದ ಬಿಕ್ಕಟ್ಟನ್ನು ಅನುಭವಿಸಿದರು. ಟ್ಯೂಟೋನಿಕ್, ಸ್ಲೇವಿ ಹಾಗೂ ಮಂಗೋಲಿಯನ್ ಪಂಗಡಗಳ ದಾಳಿಗೆ ಒಳಗಾದುದಲ್ಲದೆ, ಪೂರ್ವ ಯುರೋಪ್ ಹಾಗೂ ದಕ್ಷಿಣ ರಷ್ಯಾದ ಪ್ರಮುಖ ನದಿ ಮಾರ್ಗಗಳ ಗುಂಟ ಇದ್ದ ವ್ಯಾಪಾರವನ್ನು ತೊಂದರೆಗೆ ಈಡು ಮಾಡಿಕೊಂಡುದೇ ಅಲ್ಲದೆ, ಕಾನ್ ಸ್ಟಾಂಟಿನೋಪಲ್‌ನ ಆಳರಸರು ಪಶ್ಚಿಮದ ತೀವ್ರ ಅವನತಿಯ ಕಾರಣದಿಂದಾಗಿ ದೀರ್ಘಾ ವಧಿಯ ಆರ್ಥಿಕ ಮುಗ್ಗಟ್ಟನ್ನು ಅನುಭವಿಸಬೇಕಾಯಿತು. ಪಶ್ಚಿಮ ರೋಮನ್ ಸಾಮ್ರಾಜ್ಯದ ರಾಜಕೀಯ ಒಡಕಿನಿಂದಾಗಿ ಆಯಾ ಸಾಮಾಜಿಕ ಬದುಕು ಅವ್ಯವಸ್ಥಿತವಾದು ದಲ್ಲದೆ ಆರ್ಥಿಕ ಬಿಕ್ಕಟ್ಟು ತಲೆದೋರಿತು. ವ್ಯಾಪಾರ ವ್ಯವಹಾರ ಸ್ಥಗಿತವಾಯಿತು. ಆರನೆಯ ಶತಮಾನದಲ್ಲಿ ಬಂದ ಪೂರ್ವದ ಸಾಮ್ರಾಟನಾದ ಜಸ್ಟೀನಿಯನ್ ಎಂಬುವನು ಆರ್ಥಿಕತೆಯ ದೃಷ್ಟಿಯಿಂದ ಪಶ್ಚಿಮ ಏಷ್ಯಾ ಪ್ರದೇಶಕ್ಕೆ ಮಹತ್ವದವುಗಳಾದ ಪಶ್ಚಿಮ ಪ್ರದೇಶಗಳ ಮೇಲೆ ನಿಯಂತ್ರಣವನ್ನು ಸಾಧಿಸಲು ತೀವ್ರವಾಗಿ ಪ್ರಯತ್ನಿಸಿದನು. ಅವನು ಭಾಗಶಃ ಯಶಸ್ವಿಯಾದನಾದರೂ, ಆತನ ಈ ಪ್ರಯತ್ನಗಳು ಹಾಗೂ ಯಶಸ್ಸು ತಾತ್ಕಾಲಿಕ ಎಂಬುದು ಸಾಬೀತಾಯಿತು. ಏಕೆಂದರೆ, ಪಶ್ಚಿಮದ ಕುರಿತಾದ ಆತನ ಕಾರ್ಯನೀತಿ ಪಶ್ಚಿಮ ಏಷ್ಯಾದಲ್ಲಿ ಅವನ ಅಧಿಕಾರವನ್ನು ತಗ್ಗಿಸಿತು.

ಏಳನೆಯ ಶತಮಾನದ ವೇಳೆಗೆ ಬೈಜೆನ್‌ಟೈನ್ ಸಾಮ್ರಾಜ್ಯ ಸಹ ಶಕ್ತಿಗುಂದಿತ್ತು. ಉತ್ತರದಲ್ಲಿ ಏಷ್ಯಾದ ಅಲೆಮಾರಿಗಳು ಕಪ್ಪು ಸಮುದ್ರದ ಪ್ರದೇಶದಲ್ಲಿ ವ್ಯಾಪಾರಕ್ಕೆ ತೊಂದರೆಯುಂಟುಮಾಡಿದ್ದು ಬಾಲ್ಕನ್ ಸಮುದ್ರದಲ್ಲಿ ಅವರು ಖಾಯಂ ತಲೆನೋವಾಗಿದ್ದರು. ಇಳಿಮುಖವಾದ ವರಮಾನ ಹಾಗೂ ಬಡತನ ಜನರಲ್ಲಿ ಅಸಮಾಧಾನ ವನ್ನುಂಟು ಮಾಡಿದವು. ಸಾಮ್ರಾಜ್ಯದ ದಕ್ಷಿಣ ಭಾಗದಲ್ಲಿ ಬೈಜೆನ್‌ಟೈನ್ ಸರ್ಕಾರದ ಬಗ್ಗೆ ಜನರಿಗೆ ಇದ್ದ ವಿಧೇಯತೆ ಕುಗ್ಗಿತ್ತು. ಕಾನ್‌ಸ್ಟಾಂಟಿನೋಪಲ್‌ನಲ್ಲಿಯ ಗ್ರೀಕ್ ಆಳರಸರಿಗಿಂತ ಈಜಿಪ್ಟ್ ಹಾಗೂ ಸಿರಿಯಾಗಳ ಜನರಿಗೆ ಭಾಷಿಕವಾದ, ಸಾಂಸ್ಕೃತಿಕವಾದ ವಿಭಿನ್ನತೆಗಳು ಸಾಕಷ್ಟು ಇದ್ದು ಅವರಲ್ಲಿ ರಾಷ್ಟ್ರೀಯತೆಯ ಮನೋಭಾವ ಮೂಡಿತು. ಪಶ್ಚಿಮ ಏಷ್ಯಾದ ಕ್ರಿಶ್ಚಿಯನ್ನರ ಧಾರ್ಮಿಕ ಬೋಧನೆಯಿಂದಾಗಿ, ಒಡಕುಗಳಿಂದಾಗಿ ಈ ವಿಭಿನ್ನತೆಗಳು ಇನ್ನಷ್ಟು ಹೆಚ್ಚಿದವು. ಆರ್ಥಿಕ ಅಸಮಾಧಾನಗಳಿಂದಾಗಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಜಗಳಗಳು ಪರಿಸ್ಥಿತಿಯನ್ನು ವಿಕೋಪಕ್ಕೆ ಕೊಂಡೊಯ್ದವು. ಇದರಿಂದಾಗಿ ಅರಬ್ ದೇಶದ ಮುಸಲ್ಮಾನ ದಾಳಿಕೋರರು ಬೈಜೆನ್‌ಟೈನ್ ಸಾಮ್ರಾಜ್ಯದ ಮೇಲೆ ದಾಳಿ ಮಾಡಲು ಅವಕಾಶವಾಯಿತು.

ಆರನೆಯ ಶತಮಾನದ ಉತ್ತರಾರ್ಧ ಹಾಗೂ ಏಳನೆಯ ಶತಮಾನದ ಪೂರ್ವಾರ್ಧದಲ್ಲಿ ಅರೇಬಿಯಾದಲ್ಲಿ ರಾಜಕೀಯ ಹಾಗೂ ಧಾರ್ಮಿಕ ಕ್ರಾಂತಿ ಸಂಭವಿಸಿತು. ಮಹಮ್ಮದ್ ಪೈಗಂಬರರು ಅಲೆಮಾರಿ ಪಂಗಡಗಳನ್ನು ಹಾಗೂ ಚಿಕ್ಕಪುಟ್ಟ ಅರಬ ರಾಜ್ಯಗಳನ್ನು ಮಕ್ಕಾದ ವ್ಯಾಪಾರಿಗಳ ನಿಯಂತ್ರಣಕ್ಕೊಳಪಡಿಸಿದರು. ಈ ಹಿರಿಯ ಪ್ರವಾದಿಯು ತನ್ನ ಹೊಸಧರ್ಮವನ್ನು ಏಕದೇವ ಪರಿಕಲ್ಪನೆಯ ಆಧಾರದ ಮೇಲೆ ಸ್ಥಾಪಿಸಿ, ದಾನ್-ಉಲ್ -ಇಸ್ಲಾಂ ಎಂಬ ರೂಪದಲ್ಲಿ ಇಡೀ ಮನುಕುಲ ಅಲ್ಲಾಹ್‌ನಿಗೆ ಸೇರಿದ್ದೆಂದು ಬೋಧಿಸಿದನು. ಮಹಮ್ಮದನ ಮರಣಾನಂತರ, ಆತನ ಉತ್ತರಾಧಿಕಾರಿಗಳಾದ ಇಸ್ಲಾಮಿನ ಖಲೀಫರು ಅರಬ್ ಅಲೆಮಾರಿಗಳಲ್ಲಿ ಧಾರ್ಮಿಕ ಹುಮ್ಮಸ್ಸು ತುಂಬಿ, ಕೊಳ್ಳೆ ಹೊಡೆಯಲು ಅವರನ್ನು ಉದ್ದೀಪಿಸಿ ಪಶ್ಚಿಮ ಏಷ್ಯಾದ ಮೇಲೆ ದಾಳಿ ಮಾಡಲು ಪ್ರೇರೇಪಿಸಿದರು. ಬೈಜೆಂಟೈನ್ ಸಾಮ್ರಾಜ್ಯವು ಅನಟೋಲಿಯಾ ಹಾಗೂ ಬಾಲ್ಕನ್‌ಗಳ ಮೇಲೆ ನಿಯಂತ್ರಣ ಸಾಧಿಸಲು ಸಮರ್ಥವಾಗಿದ್ದರೂ, ಪರ್ಶಿಯನ್ ಸಾಮ್ರಾಜ್ಯ ನಾಶವಾಗಿ, ಅಲ್ಲಿಯ ಜನರ ಮೇಲೆ ಇಸ್ಲಾಂ ತನ್ನ ಹಿಡಿತ ಸಾಧಿಸಿತು.