೪. ಏಷ್ಯಾದ ಪ್ರಮುಖ ಧರ್ಮಗಳು ಉಗಮ ಮತ್ತು ವಿಕಸನ

ಸುಮಿತ್ರಾ ವಿ.ಭಟ್

 

ಧರ್ಮವು ಪ್ರಾಥಮಿಕವಾಗಿ ದೇವಾಂಶದ ಬಗೆಗಿನ ಒಂದು ನಂಬಿಕೆ. ಧರ್ಮದ ಉಗಮವನ್ನು ಕುರಿತು ವಿವಿಧ ಬಗೆಗಳ ವಿವರಗಳು ಕಾಣಸಿಗುತ್ತವೆ. ಒಂದು ಮಹತ್ವದ ಸೈದ್ಧಾಂತಿಕ ದೃಷ್ಟಿಕೋನವೆಂದರೆ, ನಿಸರ್ಗವನ್ನು ಬಹುತೇಕ ವಿಷಯ-ವಿಚಾರಗಳಲ್ಲಿ ನಂಬಿಕೊಂಡಿದ್ದ ಜನತೆಗೆ ಅ ನಿಸರ್ಗದ ವೈಚಿತ್ರ್ಯಗಳನ್ನು ಅರ್ಥ ಮಾಡಿಕೊಳ್ಳಲು ಒಂದು ವ್ಯವಸ್ಥಿತ ಹಾಗು ತರ್ಕಬದ್ಧ ವಿವರಣೆ ಅಗತ್ಯವಾಗಿದ್ದರಿಂದ ಧರ್ಮವೆಂಬ ಪರಿಕಲ್ಪನೆ ಉದಯವಾಯಿತು. ಇನ್ನೊಂದು ಸೈದ್ಧಾಂತಿಕ ದೃಷ್ಟಿಕೋನವು ಧರ್ಮವನ್ನು ‘ಸಾಮಾಜಿಕ ಐಕ್ಯತೆಗೆ ಸಾಧನವಾಗಿ ಬಳಸಲ್ಪಡುವ ಒಂದು ಸಾಮಾಜಿಕ ಸಂಸ್ಥೆ’ ಎಂದು ವಿವರಿಸುತ್ತದೆ. ಸಮಾಜದಲ್ಲಿ ಅಪರಾಧಗಳನ್ನು ತಡೆಗಟ್ಟಿ, ಸದಸ್ಯರೆಲ್ಲರೂ ಸಾಮಾಜಿಕ ಮಲ್ಯ-ನಿಯಮಗಳಿಗೆ ಬದ್ಧರಾಗಿದ್ದು, ಸಮಾಜೀಕರಣ ಪ್ರಕ್ರಿಯೆಯು ಸುಗಮವಾಗಿ ಸಾಗುವಂತೆ ನೋಡಿಕೊಳ್ಳುವ ಕಾರ್ಯಕ್ಕೆಂದು ‘ಧರ್ಮ’ವು ಹುಟ್ಟಿತೆಂದೂ ಕೆಲವು ಸಮಾಜ ವಿಜ್ಞಾನಿಗಳು ತರ್ಕಿಸಿದ್ದಾರೆ. ಒಟ್ಟಿನಲ್ಲಿ ಧರ್ಮವು ಸಾಮಾಜಿಕ ಸ್ಥಿರತೆ ಮತ್ತು ಐಕ್ಯತೆಗಳನ್ನು ಕಾಪಾಡುವಲ್ಲಿ ಹಾಗೂ ಸಾಮಾಜಿಕ ಬದಲಾವಣೆಯನ್ನು ನಿಯಂತ್ರಿಸಿ-ನಿರ್ದೇಶಿಸುವಲ್ಲಿ ಮಹತ್ವದ ಪಾತ್ರ ವಹಿಸುವುದೆಂಬ ಅಂಶವನ್ನು ಇಲ್ಲಿ ಗಮನಿಸುವುದು ಅಗತ್ಯ.

ಧರ್ಮವು ಮಾನವನ ಆಂತರಂಗಿಕ ಭಾವನೆಗಳ ಅಭಿವ್ಯಕ್ತಿಗೆ ಒಂದು ಹೆದ್ದಾರಿ. ಸಂಸ್ಕೃತಿಯ ಇತಿಹಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಮಾನವನಿಗೆ ತನ್ನ ದಿನನಿತ್ಯದ ಜೀವನ ನಿರ್ವಹಣೆಯಲ್ಲಿ ವಿನಾಶದ ಭೀತಿ ಬೆಂಬತ್ತಿ ಅವನನ್ನು ಕಾಡಿಸುತ್ತಲೇ ಇರುತ್ತದೆ. ಈ ಭಯದಿಂದ ಪಾರಾಗಿ, ತನ್ನ ಮಾನಸಿಕ ಸಮತೋಲನವನ್ನುಳಿಸಿಕೊಳ್ಳಲು, ಮಾನವನು ತನಗಿಂತ ಹೆಚ್ಚು ಶಕ್ತ ಹಾಗೂ ಶ್ರೇಷ್ಠ ಶಕ್ತಿಗಳನ್ನು ಪೂಜಿಸಿ ಅವುಗಳ ಮೊರೆ ಹೊಕ್ಕಿದ್ದಾನೆ. ಫ್ರೆಂಚ್ ಸಮಾಜಶಾಸ್ತ್ರಜ್ಞ ಎಮೈಲ್ ಡರ್ಕ್‌ಹೈಮ್‌ನ ವಿಚಾರಗಳು ಧರ್ಮವೆಂಬ ಪರಿಕಲ್ಪನೆಯ ವಿಶ್ಲೇಷಣೆಯಲ್ಲಿ ಮಹತ್ವದ್ದಾಗಿದೆ. ಮನುಷ್ಯನ ಜೀವನದಲ್ಲಿ ‘ಸಾಮಾನ್ಯ’ ಮತ್ತು ‘ಅಸಾಮಾನ್ಯ’ ಎಂಬ ಪರಿಭೇದಗಳು ಮಹತ್ವದವಾಗಿದ್ದು ‘ಸಾಮಾನ್ಯ’ ಸಾಮಾಜಿಕ ಸಂಗತಿಗಳನ್ನು ದಿನನಿತ್ಯದ ಜೀವನದಲ್ಲೂ, ಅಸಾಮಾನ್ಯವಾದ ‘ಪವಿತ್ರ’ ಸಂಗತಿಗಳನ್ನು ನಿತ್ಯಜೀವನಕ್ಕೆ ಹೊರತಾದ ಸಾಮಾಜಿಕ ಸಂಗತಿಗಳನ್ನು ವಿಶ್ಲೇಷಿಸಲು ಬಳಸುವ ಪರಿಕಲ್ಪನೆ ಇವನದ್ದಾಗಿದೆ. ‘ನಮ್ಮ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ನಾವು ದೇವರು-ಧರ್ಮಗಳನ್ನು ಸೃಷ್ಟಿಸುತ್ತೇವೆ. ನಂತರ ದೇವರೇ ನಮ್ಮನ್ನು ಸೃಷ್ಟಿಸಿರುವನೆಂದು ನಂಬಿ ಕ್ರಿಯೆಗಳಲ್ಲಿ ತೊಡಗುತ್ತೇವೆ’ ಎಂಬುದು ಡರ್ಕ್‌ಹ್ಯಾಮ್‌ನ ವಾದ. ಎಂದರೆ ನಿಸರ್ಗದ ವಿರಾಟ್ ಶಕ್ತಿಗಳನ್ನು ದೇವತೆಗಳೆಂದು ಕರೆದು ಪೂಜಿಸಿ ತನ್ನ ರಕ್ಷಕರನ್ನಾಗಿಸಿಕೊಳ್ಳುವಲ್ಲಿ ಮಾನವನು ಪ್ರಯತ್ನಶೀಲನಾದ. ಈ ಹಿನ್ನೆಲೆ ದೇವರು ಪೂಜೆ – ದೇವಮಂದಿರ ಮುಂತಾದ ಕಲ್ಪನೆಗಳ ಹುಟ್ಟಿಗೆ ಕಾರಣವಾಯಿತು.

ಮನುಷ್ಯನು ತನ್ನ ಕೆಟ್ಟಗುಣಗಳ ನಿರ್ಮೂಲನೆಯ ಪ್ರಯತ್ನದಲ್ಲಿ ಬೇಕಾದ ಕ್ರಿಯೆ-ಆದರ್ಶಗಳ, ನಿಯಮ-ಮಲ್ಯಗಳ ವ್ಯವಸ್ಥಿತ ತಿಳುವಳಿಕೆಗಾಗಿ ಧರ್ಮಗ್ರಂಥಗಳನ್ನು ಕಟ್ಟಿದನೆಂಬುದು ಬಹುಜನರು ಒಪ್ಪಿರುವ ವಾದ. ‘ಧರ್ಮದ ರಕ್ಷಾಕವಚ ಮಾನವನಿಗೆ ಅನಿವಾರ್ಯ’ ಎಂಬುದು ಧಾರ್ಮಿಕ ವಿದ್ವಾಂಸರ ವಾದ ಸರಣಿ. ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ‘ಧಾರಣಾತ್ ಧರ್ಮಮ್’ ಎಂದು ಹೇಳಲಾಗಿದೆ, ಅಂದರೆ, ಧರ್ಮವು ಮನುಷ್ಯನನ್ನು ಧರಿಸುತ್ತದೆ. ಮಾನವನನ್ನು ಅಪೂರ್ಣತೆಗಳಿಂದ ಸೀಮಿತ ಭಾವನೆಗಳಿಂದ, ಪೀಡನೆಯಿಂದ ಮುಕ್ತನನ್ನಾಗಿ ಅಭಯ ನೀಡಲು ಧರಿಸುತ್ತದೆ ಎಂದು ಅರ್ಥೈಸಬಹುದು. ‘ಯತಃಅಭ್ಯುದಯ ನಿಃಶ್ರೇಯಸ ಸಿದ್ದಿಃ ಸ ಧರ್ಮಃ’ ಎನ್ನುವವರೂ ಇದ್ದಾರೆ. ಯಾವುದರಿಂದ ಶ್ರೇಯಸ್ಸು ಸಿಗುವುದೋ ಅದೇ ಧರ್ಮವೆನ್ನುವುದು ಇವರ ವಾದ.

ವಿಭಿನ್ನ ಧರ್ಮಗಳು ತಮ್ಮ ಅಭಿಪ್ರಾಯಗಳನ್ನು ಹಾಗೂ ವಿಚಾರಗಳನ್ನು ಬೆಳಸಿಕೊಂಡಿವೆ. ಪ್ರವಾಸಿ, ಪವಿತ್ರಗ್ರಂಥ, ದೇವಾಲಯ, ಆಳ್ವಿಕೆ ಈ ಎಲ್ಲವೂ ವಿಭಿನ್ನವಾಗಿದ್ದುವಲ್ಲದೆ ವಿಭಿನ್ನ ಭಾಷೆ, ಭೌಗೋಳಿಕ ಹಿನ್ನೆಲೆ, ಕುಲ, ರಾಷ್ಟ್ರೀಯ ಗತಿ, ವಾಯುಗುಣಗಳ ಆಧಾರದ ಮೇಲೆ ವಿವಿಧ ಧರ್ಮಗಳನ್ನು ನಾವು ಕಾಣಬಹುದು. ಧಾರ್ಮಿಕ ಗ್ರಂಥಗಳಿಂದ ತೆಗೆದುಕೊಂಡ ವಿಚಾರಗಳ ಆಧಾರದ ಮೇಲೆ ಬೇರೆ ಬೇರೆ ಧರ್ಮಗಳನ್ನು ಅಭ್ಯಸಿಸಬಹುದು. ಧರ್ಮವು ಜೀವನಕ್ಕೆ ವಿಮುಖವಾಗದೆ ಬದುಕಿನಲ್ಲಿ ಶ್ರದ್ಧೆಯನ್ನು ಮೂಡಿಸುವಂತಾಗಬೇಕು. ಮನುಷ್ಯನ ಜೀವನಕ್ಕೊಂದು ಬೆಲೆ ತರುವ, ಹೋರಾಟಕ್ಕೊಂದು ಅರ್ಥ ಕೊಡುವ, ಜೀವನವನ್ನು ವ್ಯವಸ್ಥಿತಗೊಳಿಸಿ ಸಕಲ ಜೀವಿಗಳೂ ಸುವ್ಯವಸ್ಥೆಯಿಂದ ಬಾಳಲು ಅಣಿಗೊಳಿಸುವ ಶಕ್ತಿ ಧರ್ಮಕ್ಕಿದೆ. ಅದಕ್ಕೆಂದೇ ಇಂದಿಗೂ ಧರ್ಮ ಜೀವಂತವಾಗಿದೆ. ಏಷ್ಯಾದ ಪ್ರಮುಖ ಧರ್ಮಗಳ ಐತಿಹಾಸಿಕ ಉಗಮ-ವಿಕಸನ-ಪ್ರಮುಖ ಧ್ಯೇಯೋದ್ದೇಶಗಳು ಮುಂತಾದವುಗಳ ಸ್ಥೂಲ ವಿವರಣೆ ಹಾಗೂ ಚರ್ಚೆ ಈ ಲೇಖನದ ಉದ್ದೇಶ.

ಜೋರಾಷ್ಟ್ರಿಯನ್ ಧರ್ಮ

ಝರತುಷ್ಟ್ರ ಧರ್ಮ (ಪಾರ್ಸಿ ಧರ್ಮ)ವು ಒಂದು ಕಾಲದಲ್ಲಿ ಜಗತ್ತಿನ ಅತಿ ಮಹತ್ವದ ಧರ್ಮಗಳಲ್ಲಿ ಒಂದಾಗಿತ್ತು. ಈ ಧರ್ಮದ ಇಂಥ ಐತಿಹಾಸಿಕ ಪ್ರಾಮುಖ್ಯತೆಗೆ ಕಾರಣವೆಂದರೆ ಈ ಧರ್ಮವು ಈಜಿಪ್ಟ್‌ನಿಂದ ಭಾರತದವರೆಗೂ ಸುಮಾರು ೩೦೦ ವರ್ಷಗಳ ಕಾಲ (ಕ್ರಿ.ಪೂ.೫೨೧-೩೨೧) ಹಬ್ಬಿದ ಪರ್ಶಿಯಾ ಸಾಮ್ರಾಜ್ಯದ ರಾಜಧರ್ಮ ವಾಗಿತ್ತು. ‘ಜೋರಾಷ್ಟ್ರ’ ಎಂಬ ಈಗಿನ ಶಬ್ದವು ಪರ್ಶಿಯನ್ ಭಾಷೆಯ ‘ಝರತುಷ್ಟ್ರ’ ಎಂಬ ಪದದ ತದ್ಭವ ಶಬ್ದವಾಗಿ ಬಳಕೆಯಾಗುತ್ತಿರುವುದು ಈ ಐತಿಹಾಸಿಕ ಸತ್ಯವನ್ನು ನಿಖರವಾಗಿ ಸೂಚಿಸುತ್ತದೆ.

ಝರತುಷ್ಟ್ರ ಧರ್ಮವು ಅವನತಿಯ ಹಾದಿಯಲ್ಲಿ ಸಾಗುತ್ತಿದ್ದುದನ್ನು ಗಮನಿಸಿದ ‘ಅಶದೀರ್’ ಸಾಮ್ರಾಟನು ಇದರ ಪುನರುಜ್ಜೀವನಕ್ಕಾಗಿ ಅನೆಯಕ ಝರತುಷ್ಟ್ರ ದಾರ್ಶನಿಕರ ಒಂದು ಮಹಾಮಂಡಲಿಯನ್ನೇ ಕರೆದಿದ್ದನೆಂದು ಇತಿಹಾಸವು ನಮಗೆ ತಿಳಿಸುತ್ತದೆ. ಸುಮಾರು ಅರವತ್ತು ಸಾವಿರ ಜನರು ಈ ಸಭೆಯಲ್ಲಿ ಭಾಗವಹಿಸಿದ್ದರೆಂದು ಐತಿಹ್ಯಗಳು ಹೇಳುತ್ತವೆ. ಜೋರಾಷ್ಟ್ರಧರ್ಮದ ಈ ಪುನರುಜ್ಜೀವನ ಕಾರ್ಯವು ಕ್ರೈಸ್ತಧರ್ಮವು ಹುಟ್ಟಿ ಸುಮಾರು ೧೫೦ ವರ್ಷಗಳ ನಂತರ ನಡೆಯಿತೆನ್ನಲಾಗಿದೆ. ಇದರಿಂದ ಪುನಃ ಪ್ರಕಾಶಕ್ಕೆ ಬಂದ ಈ ಮತವು ಕ್ರಿ.ಶ.೭ನೆಯ ಶತಮಾನದಲ್ಲಿ ಮಹಮ್ಮದೀಯರು ನಾಶಮಾಡುವವರೆಗೂ ಸಾಕಷ್ಟು ಜನಪ್ರಿಯವಾಗಿತ್ತು. ಮಹಮ್ಮದೀಯರ ದಾಳಿಯಲ್ಲಿ ಅಳಿದುಳಿದ ಈ ಧರ್ಮೀಯರು ತಲೆಮರೆಸಿಕೊಂಡು ಮಧ್ಯಪ್ರಾಚ್ಯಪ್ರಾಂತದಿಂದ ಭಾರತಕ್ಕೆ ಓಡಿಬಂದು ಆಶ್ರಯ ಪಡೆದರು. ಪರ್ಶಿಯಾ ದೇಶದಿಂದ ವಲಸೆ ಬಂದ ಕಾರಣದಿಂದ ಇವರು ‘ಪಾರ್ಸಿ’ಗಳೆಂದು ಗುರುತಿಸಲ್ಪಟ್ಟರು.

ಇಂದು ಭಾರತದಲ್ಲಿ ನೆಲೆಯೂರಿದ ಉಳಿದ ಧರ್ಮದ ಅನುಯಾಯಿಗಳಿಗೆ ಹೋಲಿಸಿದಾಗ ಪಾರ್ಸಿಗಳು ಬಹು ಕಡಿಮೆ ಸಂಖ್ಯೆಯಲ್ಲಿದ್ದಾರೆನ್ನುವುದು ಸ್ಪಷ್ಟ. ಹಾಗಿದ್ದರೂ ಅವರು ನಮ್ಮ ದೇಶದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ರಂಗಗಳ ಮೇಲೆ ಗಣನೀಯ ಪ್ರಭಾವ ಬೀರಿದ್ದಾರೆ. ವಿಶ್ವಾಸಾರ್ಹತೆ ಹಾಗೂ ಬುದ್ದಿವಂತಿಕೆಗಳಿಗೆ ಹೆಸರಾದ ಈ ಸಮುದಾಯವು ‘ಬ್ಯಾಂಕಿಂಗ್’ ಕ್ಷೇತ್ರದಲ್ಲಿ, ಬೃಹತ್ ಕೈಗಾರಿಕೆಗಳಲ್ಲಿ ಹಾಗೂ ನಗರ ವ್ಯವಸ್ಥೆಯ ಕಾರ್ಯಕ್ರಮಗಳಲ್ಲಿ ಬಹಳ ಪ್ರಸಿದ್ದಿ ಪಡೆದಿದೆ. ಜೇಮಶೇಟಜಿ ಟಾಟಾರವರಂಥ ಪಾರ್ಸಿ ಹೆಸರುಗಳು ಭಾರತದ ಮೂಲೆ ಮೂಲೆಯಲ್ಲಿಯೂ ಮನೆಮಾತು. ಪಾರ್ಸಿಗಳ ಹುಟ್ಟೂರಾದ ಇರಾನ್ (ಪರ್ಶಿಯಾ) ದೇಶದಲ್ಲಿ ಇಂದು ಕೇವಲ ಕೆಲವೇ ಸಂಖ್ಯೆಯಲ್ಲಿ ಪಾರ್ಸಿಗಳಿದ್ದು ಆ ಧರ್ಮವು ಭಾರತದಲ್ಲಿ ಬೀಡುಬಿಟ್ಟಿರುವ ಧರ್ಮವೆಂದೇ ಈಗ ಪರಿಗಣಿಸಲ್ಪಡುತ್ತದೆ. ಝರತುಷ್ಟ್ರಧರ್ಮರು ಜೂಧರ್ಮ(ಜೂಡಾಯಿಸಮ್) ಮತ್ತು ಕ್ರೈಸ್ತಧರ್ಮಗಳ ಮೇಲೆ ಸಾಕಷ್ಟು, ಪ್ರಭಾವ ಬೀರಿದೆ ಎಂಬ ಮಾತಿನಿಂದ ಈ ಧರ್ಮದ ದಾರ್ಶನಿಕ-ಧಾರ್ಮಿಕ ಮಹತ್ವವನ್ನು ಅಳೆಯಬಹುದು. ಉದಾಹರಣೆಗೆ ಸೈತಾನ್ (ಜಗತ್ತಿನ ಎಲ್ಲ ಕೆಟ್ಟ ವಿಷಯಗಳ ವ್ಯಕ್ತೀಕರಣ) ಎಂಬ ಪರಿಕಲ್ಪನೆಯ ಜೊತೆಗೇ ಕಾಪಾಡುವ ದೇವತೆಗಳು, ಪಿತೃ ಆತ್ಮಗಳು ಮುಂತಾದ ಪರಿಕಲ್ಪನೆಗಳು ಪಾರ್ಸಿ ಧರ್ಮದ ಮೂಲದಿಂದ ಬಂದವು.

ಜೋರಾಷ್ಟ್ರಿಯನ್ ಧರ್ಮದ ಪ್ರವರ್ತಕನಾದ ಜೋರಾಷ್ಟ್ರನು ಈ ಧರ್ಮದ ಬಹುಮುಖ್ಯ ವಕ್ತಾರನೆಯ ಹೊರತು ಈ ಧರ್ಮದ ಸಂಸ್ಥಾಪಕನಲ್ಲ. ಇವನ ಹುಟ್ಟಿನ ಹಾಗೂ ಬಾಲ್ಯದ ವರ್ಷಗಳ ವಿವರಗಳ ಕುರಿತು ಸಾಕಷ್ಟು ಜಿಜ್ಞಾಸೆಗಳು ಹಾಗೂ ಭಿನ್ನಾಭಿಪ್ರಾಯಗಳು ಇವೆ. ಸಾಮಾನ್ಯವಾಗಿ ಇವನ ಕಾಲವನ್ನು ಕ್ರಿಸ್ತಪೂರ್ವ ೭ನೆಯ ಶತಮಾನವೆಂದು ಗಣಿಸಲಾಗಿದೆ. ಪರ್ಶಿಯಾ ಧರ್ಮದ ನಂಬಿಕೆಗಳು ಕ್ರೋಡೀಕರಿಸಿ, ಅವುಗಳನ್ನು ಶೋಧಿಸಿ, ರೂಪಾತ್ಮಕವಾಗಿ ಅವಕ್ಕೆ ನೈತಿಕ ತಳಹದಿಯನ್ನು ಕೊಟ್ಟಿದ್ದರಿಂದ ಪಾರ್ಸಿಧರ್ಮದ ‘ಶುದ್ದೀಕೃತ’ ರೂಪದಲ್ಲಿ ಜೋರಾಷ್ಟ್ರನನ್ನು ಧರ್ಮಸಂಸ್ಥಾಪಕನೆಂದು ಹೇಳಲಡ್ಡಿಯಿಲ್ಲ. ಇವನು ನೀಡಿದ ಧಾರ್ಮಿಕ ವಿಚಾರಗಳು ಜೀವನದ ನಂತರದ ಪ್ರಶ್ನೆಗಳಿಗಿಂತ ಹೆಚ್ಚಾಗಿ ಮಾನವ ಜೀವಿತ ಕಾಲದ ಪ್ರಶ್ನೆಗಳಿಗೇ ಉತ್ತರಿಸುತ್ತವೆ. ಆದ್ದರಿಂದಲೇ ಝರತುಷ್ಟ್ರಧರ್ಮವನ್ನು ಒಂದು ದಾರ್ಶನಿಕ ಮಾದರಿ ಎನ್ನುವುದಕ್ಕಿಂತ ಜೀವನದ ವಿಧಾನವೆಂದು ಹೇಳುವುದೇ ಹೆಚ್ಚು ಸೂಕ್ತವಾದುದು ಎಂಬುದು ಸಮಾಜಶಾಸ್ತ್ರಜ್ಞರ ಅಭಿಮತ. ಜೋರಾಷ್ಟ್ರನು ರಾಜಮನೆತನದಿಂದ ಬಂದಿರಬಹುದೆಂದು ಊಹಿಸಲಾಗುತ್ತದೆ ಹಾಗೂ ಪರ್ಶಿಯನ್ ಸಾಮ್ರಾಟನ ವಿಶ್ವಾಸ ಗಳಿಸಿ ತನ್ನ ಧರ್ಮವನ್ನು ಜನಪ್ರಿಯ ಗೊಳಿಸುವಲ್ಲಿ ಸಾಕಷ್ಟು ಯಶಸ್ವಿಯಾದನೆಂದು ಊಹಿಸಲಾಗಿದೆ. ಇವನ ಜೀವನದ ಬಗ್ಗೆ ಹೆಚ್ಚು ವಿವರಗಳು ಸಿಗುವುದಿಲ್ಲ. ಸಿಕ್ಕರೂ ವಿವರಗಳಲ್ಲಿಯೂ ಭಕ್ತಿ, ಭಾವುಕತೆಗಳೇ ತುಂಬಿದ್ದು, ನೈಜ ವಿವರಣೆಗಳು ಅಪರೂಪವೇ ಆಗಿವೆ. ಆದ್ದರಿಂದ ಒಂದು ಚಾರಿತ್ರಿಕ ವ್ಯಕ್ತಿಯಾಗಿ ಜೋರಾಷ್ಟ್ರನನ್ನು ಅಭ್ಯಸಿಸುವುದು ಅಥವಾ ಅವನ ವಿಷಯದಲ್ಲಿ ಖಚಿತವಾಗಿ ಹೇಳುವುದು ಕಷ್ಟ. ‘ಮೆಯಾ’ ಎಂಬ ಸ್ಥಳ ಅವನ ಹುಟ್ಟೂರೆಂದೂ ಕ್ರಿ.ಪೂ.೬ರಿಂದ ೧೦ನೆಯ ಶತಮಾನದಲ್ಲಿ ಇದ್ದಿರಬಹುದೆಂದು ಅರ್ವಾಚೀನ ಇತಿಹಾಸಜ್ಞರು ಹೇಳುವರು.

ಝರತುಷ್ಟ್ರಧರ್ಮದಲ್ಲಿ ಮಾನವಜೀವನದ ನೈತಿಕತೆ ಎಂಬುದೇ ಅತ್ಯಂತ ಪ್ರಧಾನ ಅಂಶ. ನೈತಿಕತೆಯು ನಿರಂತರವಾದುದು. ಇದರ ಜೊತೆಗೇ ವ್ಯಕ್ತಿಯ ಕರ್ತವ್ಯ ಹಾಗೂ ವೈಯಕ್ತಿಕ ಜವಾಬ್ದಾರಿಗಳು ಪ್ರಮುಖವಾಗುತ್ತವೆ ಎಂದರೆ ಮನುಷ್ಯನು ತನ್ನ ಜೀವಿತದ ಅವಧಿಯಲ್ಲಿಯೇ ಒಳ್ಳೆಯ ಅಥವಾ ಕೆಟ್ಟ ಕಾರ್ಯಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಪಡೆದಿರುತ್ತಾನೆ. ಜಗತ್ತಿನಲ್ಲಿ ಎರಡು ರೀತಿಯ ಶಕ್ತಿಗಳಿವೆ. ಇವೆರಡೂ ಕ್ರಿಯಾತ್ಮಕ ವರ್ಚಸ್ಸು ಪಡೆದಿವೆ. ಇಂಥವುಗಳಲ್ಲಿ ಸಕಾರಾತ್ಮಕ (ಸತ್) ಶಕ್ತಿಯು ‘ಆಹೋರಾಮಜದಾ’ (ಅಹುರ್ ಮಜ್ದ) ಅಥವಾ ಅಪರಿಮಿತ ಧೀಮಂತ ಶಕ್ತಿ ಎಂದು ಕರೆಯಲ್ಪಟ್ಟಿದೆ. ಈ ಶಕ್ತಿಯೇ ಮನುಷ್ಯನ ಜೀವನದ ದಾರಿದೀಪ; ಎಲ್ಲ ಒಳ್ಳೆಯ ವಸ್ತು, ವಿಷಯಗಳ ಮೂಲ ಹಾಗೂ ಉತ್ತಮ ಗುಣ-ನಡತೆಗಳ ಘನೀಭೂತ ದೈವೀಶಕ್ತಿ. ಇದಕ್ಕೆ ವಿರೋಧವಾಗಿ ಅನೈತಿಕ, ಅಸತ್ಯ ಹಾಗೂ ಕತ್ತಲೆಯ ಕುರೂಪಿ ಪ್ರತಿನಿಧಿ ‘ಅಹಿರ್ಮಾನ್’(ಅಹ್ರಿಮನ್ಯು) ಅಥವಾ ‘ಆಂಗ್ರಾಮೈನ್ಯಂ’. ಇದರ ಶಾಬ್ದಿಕ ಅರ್ಥ ದುಷ್ಠಶಕ್ತಿ ಅಥವಾ ತಾಮಸಶಕ್ತಿ ಎಂದಾಗುತ್ತದೆ. ಮಾನವ ಜೀವನದ ಸದ್ಬಳಕೆಯೆಂದರೆ ದುಶ್ಶಕ್ತಿಯ ಮೇಲೆ ಶಿಷ್ಟ ಶಕ್ತಿಯ ವಿಜಯವನ್ನು ಸಾಧಿಸುವುದು. ಇದಕ್ಕೆಂದೇ ಮಾನವನು ‘ಅಹೋರಾಮಜದಾ’ ಶಕ್ತಿಯನ್ನು ಪೂಜಿಸಬೇಕು. ಪರ್ಶಿಯನ್ ಧರ್ಮದ ನಂಬಿಕೆಯಂತೆ ಮಾನವರು ಹೆಚ್ಚಿನ ಸಂಖ್ಯೆಯಲ್ಲಿ ಶಿಷ್ಟಶಕ್ತಿಯನ್ನು ನಂಬಿ, ನೈತಿಕತೆಯ ತಳಹದಿಯ ಮೇಲೆ ಜೀವನವನ್ನು ಮಾಡುತ್ತಾರೆ; ಹಾಗಿದ್ದರೂ ಸಾವಿನ ನಂತರ ಅವರ ಕೆಲಸಗಳ ಫಲಾಫಲಗಳು ನ್ಯಾಯದ ತಕ್ಕಡಿಯಲ್ಲಿ ತೂಗಲ್ಪಡುತ್ತವೆ. ಮನುಷ್ಯರ ಜೀವನದ ಅವಧಿಯ ಎಲ್ಲ ಮಾತು, ಕ್ರಿಯೆ ಹಾಗೂ ವಿಚಾರಗಳು ಅವನ ‘ಜೀವನ ಪುಸ್ತಕ’ದಲ್ಲಿ ದಾಖಲಿಸಲ್ಪಟ್ಟು, ಕೆಟ್ಟ ಕೆಲಸಗಳು ಒಳ್ಳೆಯ ಕೆಲಸಕ್ಕಿಂತ ಹೆಚ್ಚಿದ್ದಲ್ಲಿ, ವ್ಯಕ್ತಿಯು ದುಷ್ಟ ಶಕ್ತಿಯ ಮೂಲಕ ನರಕದಲ್ಲಿ ತಳ್ಳಲ್ಪಡುತ್ತಾನೆ. ಇದಕ್ಕೆ ಬದಲಾಗಿ ಸತ್ಕಾರ್ಯದಲ್ಲಿ ನಿರತನಾದ ವ್ಯಕ್ತಿಯು ಸದ್ಗತಿಯನ್ನು ಸಂಪಾದಿಸುತ್ತಾನೆ.

ಝರತುಷ್ಟ್ರ ಧರ್ಮದಲ್ಲಿ ಚರ್ಚಿಸಿದಂತೆ ಸಮಾಜದ ಏಳಿಗೆಯಲ್ಲಿ ಮಾನವನ ಜವಾಬ್ದಾರಿ ಬಹುಮುಖ್ಯವಾದದ್ದು. ಮೊದಲನೆಯದಾಗಿ ವ್ಯಕ್ತಿಯು ಒಳ್ಳೆಯ ಹಾಗೂ ಕೆಟ್ಟ ಕೆಲಸಗಳನ್ನು ಬೇರ್ಪಡಿಸಿ ನೋಡಬೇಕು. ಏಕದೈವತ್ವದ ಕಲ್ಪನೆಯನ್ನು ಪಾರ್ಸಿಧರ್ಮವು ನಿರಾಕರಿಸುವುದರಿಂದ ಶಿಷ್ಟಶಕ್ತಿಯ ಸದ್ಗುಣದ ರೂಪದಲ್ಲಿ ಎಲ್ಲರಲ್ಲಿಯೂ ಹಂಚಿಹೋಗು ವುದೆಂದು ಈ ಧರ್ಮದಲ್ಲಿ ನಂಬಲಾಗಿದೆ. ಈ ಧರ್ಮದ ಆತ್ಮ-ಪರಮಾತ್ಮಗಳ ದ್ವೈತ್ವವು ಮಾನವನ ಜೀವನದ ಸಕಾರತ್ಮಕತೆಯ ಪ್ರತೀಕ. ಶಿಷ್ಟಶಕ್ತಿಯ ವರ್ಚಸ್ಸು ಮತ್ತು ಮಾನವನ ಕ್ರಿಯಾತ್ಮಕ ಓಜಸ್ಸು ಎರಡೂ ಸಮ್ಮಿಳಿತವಾದಾಗಲೇ ದುರ್ಗುಣದ ಮೇಲೆ ಸದ್ಗುಣವು ಪರಾಜಯವನ್ನು ಸಾಧಿಸಲು ಶಕ್ಯವಾಗುತ್ತದೆ. ಝೋರಾಷ್ಟ್ರಿಯನ್, ಧರ್ಮದ ನಂಬಿಕೆಯಂತೆ ‘ಅಹೋರಾಮಜದಾ’ ಮತ್ತು ‘ಅಹಿರ್ಮಾನ್’ ಇವರಿಬ್ಬರೂ ಅವಳೀ ಸಹೋದರರಾಗಿದ್ದರು. ವಿಶ್ವದ ಭವಿಷ್ಯವನ್ನು ನಿರ್ಣಯಿಸುವಲ್ಲಿ ಉಂಟಾದ ಅವರಿಬ್ಬರ ನಡುವಿನ ಸಂಘರ್ಷದಲ್ಲಿ ದುಷ್ಟಶಕ್ತಿಯು ಶಿಷ್ಟಶಕ್ತಿಯಿಂದ ಪರಾಜಯಗೊಂಡಿತೆಂದೂ ಪಾರ್ಸಿಧರ್ಮವು ಸಾದರಪಡಿಸುತ್ತದೆ. ‘ಅಹುರ್ ಮಜ್ಜ’ನಿಂದಲೇ ಪಂಚಭೂತಗಳ ಸೃಷ್ಟಿಯಾಗಿದೆಯಾದ್ದರಿಂದ ಅವುಗಳನ್ನು ಅಪವಿತ್ರಗೊಳಿಸುವುದು ಧಾರ್ಮಿಕ ಅಪರಾಧ ಎನ್ನುವ ಭಾವನೆ ಇದೆ. ಆದ್ದರಿಂದಲೇ ಪಾರ್ಸಿಗಳು ಮೃತದೇಹಗಳನ್ನು ಭೂಮಿಯಲ್ಲಿ ಹುಗಿಯುವುದು, ಬೆಂಕಿಯಲ್ಲಿ ಸುಡುವುದು, ನೀರಿನಲ್ಲಿ ತೇಲಿಬಿಡುವುದು ಸರಿಯಲ್ಲವೆಂದು ನಂಬುತ್ತಾರೆ ಹಾಗೂ ಅವರಲ್ಲಿ ಜಡದೇಹಗಳನ್ನು ಪಕ್ಷಿಗಳಿಗೆ ಉಣಬಡಿಸುವ ಸಂಪ್ರದಾಯವಿದೆ. ಈ ರೀತಿ ಪಕ್ಷಿಗಳಿಗೆಂದೇ ಶವ ಇಡುವ ಕಟ್ಟಡಕ್ಕೆ ‘ದೊಕ್ಮಾ’ ಎಂದು ಕರೆಯುತ್ತಾರೆ. ಪಾರಸೀಗಳ ಅಗ್ನಿ ದೇವಾಲಯಗಳಂತೆ ‘ದೋಕ್ಮಾ’ದಲ್ಲೂ ವಿಜಾತಿಯರಿಗೆ ಪ್ರವೇಶವಿಲ್ಲ.

ಝರತುಷ್ಟ್ರಧರ್ಮ ಹಾಗು ಕ್ರೈಸ್ತಧರ್ಮದ ನಡುವೆ ತುಂಬಾ ಸಾಮ್ಯತೆಗಳನ್ನು ಗುರುತಿಸಬಹುದೆಂಬ ಅಂಶವನ್ನು ಈ ಮೊದಲೇ ಹೇಳಿದೆ. ಈಗಾಗಲೇ ಚರ್ಚಿಸಿದಂತೆ ಸೈತಾನನ ವ್ಯಕ್ತಿತ್ವ, ಅವನನ್ನು ಸರ್ಪವೆಂದು ಗುರುತಿಸುವುದು, ವ್ಯಕ್ತಿಯ ಸ್ವತಂತ್ರ ಅಭಿಪ್ರಾಯ, ಆಯ್ಕೆಯ ಮೇಲೆ ಒತ್ತು, ಸಾವಿನ ನಂತರ ದುಷ್ಟ-ಶಿಷ್ಟಶಕ್ತಿಗಳ ನಡುವಿನ ಶಕ್ತಿಗಳ ವ್ಯತ್ಯಂತರ, ಸ್ವರ್ಗ-ನರಕಗಳ ಕಲ್ಪನೆ, ಇಹಲೋಕದಲ್ಲಿ ಒಂದೇ ಜನ್ಮ, ಕಾಯುವ ದೇವತೆಗಳು ಮುಂತಾದವುಗಳು ಈ ಎರಡೂ ಧಾರ್ಮಿಕ ಪದ್ಧತಿಗಳಲ್ಲೂ ಪ್ರಚಲಿತವಾಗಿವೆ. ಏಸುಕ್ರಿಸ್ತನ ಪುನರಾಗಮನದ ರೀತಿಯಲ್ಲೇ ಝರತುಷ್ಟ್ರಧರ್ಮವು ನಂತರದ ಶತಮಾನಗಳಲ್ಲಿ ‘ಸಾವೊಶಂತ್’(ವಿಶ್ವರಕ್ಷಕ)ನ ಪುನರಾಗಮನವನ್ನು ಚರ್ಚಿಸಿದೆ. ಭಾರತದಲ್ಲಿ ಹರಡಿದ ಹಿಂದೂ ಧರ್ಮದ ಪುನರ್ಜನ್ಮ, ಪರಮಾತ್ಮನಲ್ಲಿ ಐಕ್ಯತೆ, ಏಕ ಪ್ರಮುಖ ದೇವತಾರಾಧನೆ ಮುಂತಾದವುಗಳಿಂದ ಪಾರ್ಸಿ ಧರ್ಮವು ಬಹಳಷ್ಟು ವ್ಯತ್ಯಾಸಗಳನ್ನು ಹೊಂದಿರುವುದು.

ಪಾರ್ಸಿ ಧರ್ಮದಲ್ಲಿ ಬೆಂಕಿಯನ್ನು ಸತ್ಯದ ಪ್ರತೀಕವೆಂದು ಗುರುತಿಸಲಾಗುತ್ತದೆ. ಅಗ್ನಿಯ ಪ್ರಕಾಶವು ಸತ್ಯವನ್ನು ಪ್ರತಿಬಿಂಬಿಸುವುದೆಂದೂ, ಸತ್ಯವು ಜೀವನದ ಅತ್ಯಮೂಲ್ಯ ಗುಣವೆಂದು ನಂಬುತ್ತಾರೆ. ಇವರ ಧರ್ಮಗ್ರಂಥಗಳಲ್ಲಿ ‘ಪವಿತ್ರಭೋಜನ’ ಮತ್ತು ಧರ್ಮದಲ್ಲಿ ಲೀನತೆಗಳ ಉಲ್ಲೇಖಗಳು ದೊರೆಯುತ್ತವೆ. ಪಾರಸೀ ಧರ್ಮದಲ್ಲಿ ಹೇಳಿದ ಅನೆಯಕ ಧಾರ್ಮಿಕ ಗ್ರಂಥಗಳು ಇಂದು ನಮಗೆ ಉಪಲಬ್ಧವಿಲ್ಲದಿದ್ದರೂ ಪ್ರವಾದಿಯ ಹೇಳಿಕೆಗಳು, ಉಪದೇಶಗಳು ಅವನ ಶಬ್ದದಲ್ಲಿಯೇ ಹೇಳಲ್ಪಟ್ಟ ‘ವಿಸ್ತಸ್ವಾ’(ವೀಸ್ವರತ್) ದಲ್ಲಿರುವ ಕವಿತೆಗಳಲ್ಲಿ ಸಿಗುತ್ತವೆ. ಜೋರಾಷ್ಟ್ರನು ತಾನು ಪಾರ್ಸಿ ಧರ್ಮವನ್ನು ಪುನಃಸ್ಥಾಪಿಸಲು ದೇವರಿಂದ ಕಳಿಸಲ್ಪಟ್ಟ ದೇವದೂತನೆಂದು ನಂಬಿದ್ದರಿಂದ ತನ್ನ ಆ ಕರ್ತವ್ಯವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದ್ದನ್ನು ಕಾಣುತ್ತೇವೆ. ಪರ್ಸಿಯಾ ದೇಶದಲ್ಲಿ ನಂತರದಲ್ಲಿ ಪ್ರಚಲಿತವಿದ್ದ ‘ಪೆಹಲವಿ’ ಭಾಷೆಯಲ್ಲಿ ಪ್ರವಾದಿಯ ಅನೆಯಕ ವಿಚಾರಗಳು ಭಾಷಾಂತರಿಸಲ್ಪಟ್ಟಿವೆ. ‘ಝೆಂಡ್’ ಎಂದು ಕರೆಯಲ್ಪಡುವ ಈ ಭಾಷಾಂತರದ ಕ್ರೋಡೀಕೃತರೂಪವೊಂದು ‘ಝೆಂಡಾ ಅವೆಸ್ತಾ’ ಎಂಬ ಪವಿತ್ರಗ್ರಂಥವಾಗಿ ಮಾರ್ಪಟ್ಟಿದೆ. ಜೋರಾಷ್ಟ್ರನ ಸ್ವಂತ ಶಬ್ದಗಳಲ್ಲಿ ಹೇಳಲ್ಪಟ್ಟ ಉಪದೇಶಗಳು-ಗಾಥೆಗಳು-ಯಾಸನಾ(ಯಸ್ನ) ಪಾರ್ಸೀ ಧರ್ಮದ ಪ್ರಮುಖ ಪ್ರಾರ್ಥನಾ ಗ್ರಂಥದಲ್ಲಿ ದಾಖಲಿಸಲ್ಪಟ್ಟಿವೆ. ಅಂತಃಸ್ವರೂಪವಾದ ಅಧ್ಯಾತ್ಮ ತತ್ವ ಹಾಗೂ ಬಾಹ್ಯಸ್ವರೂಪವಾದ ಮಾನವನ ನೈತಿಕ ಜೀವನ ಎರಡಲ್ಲೂ ಈ ಧರ್ಮವು ಉನ್ನತಮಟ್ಟದ ಬೆಳವಣಿಗೆ ಹೊಂದಿದೆ ಎನ್ನುವುದರಲ್ಲಿ ಸಂದೇಹವಿಲ್ಲ.

ಜೈನ ಧರ್ಮ

ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಅನೆಯಕ ಧರ್ಮಗಳು, ಮತ-ಪಂಥಗಳು ಹುಟ್ಟಿಕೊಂಡು ಹಿಂದೂ ಧರ್ಮದ ಆಚಾರ-ವಿಚಾರಗಳನ್ನು ಪ್ರಶ್ನಿಸಿರುವವರು ಮತ್ತು ತಮ್ಮದೇ ಆದ ಮತಾಚಾರ ಪದ್ಧತಿಗಳನ್ನು ಸಮಾಜಕ್ಕೆ ನೀಡಿರುವುದು ಎಲ್ಲರಿಗೂ ತಿಳಿದ ವಿಷಯ. ಇದು ಇಂದಿಗೂ ತನ್ನ ಪ್ರಭಾವವನ್ನು ಗಣನೀಯವಾಗಿ ಉಳಿಸಿಕೊಂಡು ಬಂದಿದೆ

‘ಜೈನ’ ಎಂಬ ಶಬ್ದವು ‘ಜಿನ’ ಎಂದ ಪದದಿಂದ ಬಂದಿರುವುದಾಗಿದ್ದು, ಈ ಪದದ ಅರ್ಥ ‘ಗೆದ್ದವನು’ ಎಂದಾಗುತ್ತದೆ. ಅವನು ಕರ್ಮಬಂಧನದಿಂದ ಮುಕ್ತನಾದ ದಿವ್ಯಾತ್ಮನು ಎಂದು ಭಾವಿಸಲಾಗಿದೆ. ಭಾರತದಲ್ಲಿ ಪ್ರಚಲಿತವಿರುವ ಉಳಿದ ಧರ್ಮಗಳಿಗೆ ಹೋಲಿಸಿ ನೋಡಿದಾಗ, ಪಾರಸೀ ಧರ್ಮವನ್ನು ಹೊರತುಪಡಿಸಿದರೆ ಜೈನ ಧರ್ಮದಲ್ಲಿ ಅತ್ಯಂತ ಕಡಿಮೆ ಅನುಯಾಯಿಗಳಿರುವುದು ಕಂಡುಬರುತ್ತದೆ. ಜಗತ್ತಿನಲ್ಲಿ ಜೈನ ಧರ್ಮವನ್ನು ಅನುಸರಿಸುವವರ ಸಂಖ್ಯೆ ಹದಿನೈದು ಲಕ್ಷವನ್ನು ಮೀರಿರಲಾರದೇನೋ. ಅವರಲ್ಲಿ ಬಹುಮಂದಿ ಭಾರತೀಯರು, ಇದರರ್ಥವೆಂದರೆ ಇದು ಭಾರತದ ಗಡಿಯನ್ನು ದಾಟಿ ಉಳಿದ ಭೌಗೋಳಿಕ ಪ್ರದೇಶಗಳ ಮೇಲೆ ತನ್ನ ಪ್ರಭಾವವನ್ನು ಬೀರುವಲ್ಲಿ ಹೆಚ್ಚಿನ ಯಶ ಕಂಡಿಲ್ಲ.

ಚಾರಿತ್ರಿಕವಾಗಿ ನೋಡಿದರೆ ಜೈನಧರ್ಮವು ಇತಿಹಾಸಪೂರ್ವದ ಧರ್ಮ. ಆದ್ದರಿಂದ ಈ ಧರ್ಮದ ಕುರಿತು ನಮಗೆ ಸಿಗುವ ದಾಖಲೆ ಪುರಾವೆಗಳು ಗ್ರಂಥ ಸಾಹಿತ್ಯವನ್ನೇ ಹೆಚ್ಚಾಗಿ ಅವಲಂಬಿಸಿವೆ. ವರ್ಧಮಾನ ಅಥವಾ ಮಹಾವೀರರು ತೀರ್ಥಂಕರರಲ್ಲಿ (ಜೈನ ಮುನಿಗಳಲ್ಲಿ) ೨೪ ನೆಯವನೆಂದು ಪರಿಗಣಿಸಲ್ಪಡುತ್ತಾನೆ. ಇವನಿಂದ ಈ ಧರ್ಮದ ಎಲ್ಲ ಪವಿತ್ರ ವಿಚಾರಗಳೂ ನೀಡಲ್ಪಟ್ಟಿವೆಯೆಂದು ಜೈನ ಧರ್ಮೀಯರು ನಂಬುತ್ತಾರೆ. ‘ತೀರ್ಥಂಕರ’ ಎಂಬ ಶಬ್ದವು ‘ತೀರ್ಥ’ ಎಂಬ ಪದದಿಂದ ಬಂದುದಾಗಿದ್ದು, ಈ ಶಬ್ದವನ್ನು ದಾಟುವುದು ಎಂದು ಅರ್ಥೈಸಬಹುದು. ಎಂದರೆ ಈ ‘ಭವ’ ಸಾಗರವನ್ನು ಕೈಹಿಡಿದು ದಾಟಿಸುವವವನ್ನು ತೀರ್ಥಂಕರ ಎಂದು ಜೈನಧರ್ಮದ ಪರಿಭಾಷೆಯಲ್ಲಿ ವಿಸ್ತರಿಸಲಾಗಿದೆ. ಮೊದಲನೆ ತೀರ್ಥಂಕರನೆಂದು ಹೇಳಲ್ಪಡುವ ವೃಷಭದೇವನು ಜೈನಧರ್ಮದ ತಳಪಾಯವನ್ನು ಹಾಕಿದನೆಂದು ಐತಿಹ್ಯವಿದೆಯಾದರೂ, ಇವನ ಕುರಿತು ಮಹತ್ವದ ಚಾರಿತ್ರಿಕ ಆಧಾರಗಳೇನೂ ದೊರೆತಿಲ್ಲ. ಬದಲಾಗಿ, ವೈಷಭದೇವನಿಗೆ ಸಂಬಂಧಿಸಿದ ಅನೆಯಕ ಕಥೆಗಳು ಮಾತ್ರವೇ ಜೈನಪುರಾಣಗಳಲ್ಲಿ ಲಭ್ಯವಾಗಿವೆ. ಇಂಥ ಕಥೆಗಳನ್ನು ಐತಿಹಾಸಿಕ ಪುರಾವೆಗಳೆಂದು ದಾಖಲಿಸಲು ಸಾಧ್ಯವಾಗುವುದಿಲ್ಲವಾದ್ದರಿಂದ ತೀರ್ಥಂಕರರ ಸಾಲಿನಲ್ಲಿ ಮೊದಲ ೨೨ ತೀರ್ಥಂಕರರು ಧಾರ್ಮಿಕ ಹಾಗೂ ಅತಿ ಪವಿತ್ರ ಮಾನವರೆಂದಷ್ಟೇ ಲಭ್ಯವಾಗಿದ್ದಾರೆ. ವರ್ಧಮಾನ ಮಹಾವೀರನಿಗಿಂತ ಹಿಂದಿನವನಾದ ೨೩ನೆಯ ತೀರ್ಥಂಕರ ಪಾರ್ಶ್ವನಾಥನ ಕುರಿತು ತುಸು ಸಾಕ್ಷಾಧಾರಗಳು ಸಿಗುತ್ತವೆ. ಅದೇನೆಯ ಇರಲಿ, ಜೈನ ಧರ್ಮವು ಪ್ರಸ್ತುತ ಆಚರಣೆಯಲ್ಲಿರುವ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಚರಿತ್ರೆಯ ದೃಷ್ಟಿಯಲ್ಲಿ ವರ್ಧಮಾನ ಮಹಾವೀರನು ಈ ಧರ್ಮವನ್ನು ಕ್ರೋಡೀಕರಿಸಿ, ಸಂಶೋಧಿಸಿ, ಅಗತ್ಯವಿದ್ದಷ್ಟು ಸಂಸ್ಕರಿಸಿ ಒಂದು ವ್ಯವಸ್ಥಿತ ನಂಬಿಕೆಯ ಪದ್ಧತಿಯಾಗಿ ಮಾರ್ಪಡಿಸಿದ್ದರಿಂದ ಐತಿಹಾಸಿಕವಾಗಿ ಮಹಾವೀರನನ್ನೇ ಜೈನ ಧರ್ಮದ ಸಂಸ್ಥಾಪಕನೆಂದು ಹೇಳಲಡ್ಡಿಯಿಲ್ಲ.

ತೌಲನಿಕವಾಗಿ ನೋಡಿದರೆ ಬೌದ್ಧ ಮತ್ತು ಜೈನಧರ್ಮಗಳಲ್ಲಿ ಗಣನೀಯ ಸಾಮ್ಯತೆ ಕಂಡುಬರುತ್ತದೆ. ಗೌತಮ ಬುದ್ಧನಂತೆಯೇ ಮಹಾವೀರನೂ ಕೂಡ ಕ್ಷತ್ರಿಯ ಕುಲದಲ್ಲಿ ಹುಟ್ಟಿದವನು. ಇಬ್ಬರೂ ಪುರೋಹಿತಶಾಹಿ ಧಾರ್ಮಿಕ ನಂಬಿಕೆಗಳನ್ನು ಅಲ್ಲಗಳೆದು ಸಾಮಾನ್ಯ ಜನರ ಭಾವನೆಗಳಿಗೆ ಸ್ಪಂದಿಸಿದವರು. ಈ ಎರಡೂ ಧರ್ಮಗಳಲ್ಲೂ ಎಲ್ಲ ಪ್ರಾಣಿಗಳಿಗೂ ಸಮಾನ ಕರುಣೆ ತೋರಿಸಲು ಉಪದೇಶಿಸಲಾಗಿದೆ ಹಾಗೂ ಅದೇ ಕಾರಣದಿಂದ ಕರ್ಮದ ಧಾರ್ಮಿಕ ವಿಧಿಗಳನ್ನೂ, ಯಜ್ಞ-ಯಾಗಗಳಲ್ಲಿ ಪಶುಬಲಿಯನ್ನು ನಿಷೇಧಿಸಲಾಗಿದೆ. ವೇದಗಳ ಅಪೌರುಷೇಯ ಮತ್ತು ಅಮಾನುಷ ಶಕ್ತಿಗಳನ್ನು ಈ ಧರ್ಮಗಳು ನಂಬುವುದಿಲ್ಲ. ಜಾತಿಪದ್ಧತಿಯ ಆಚರಣೆಗೆ ಎರಡು ಧರ್ಮಗಳಲ್ಲಿ ವಿರೋಧವಿದೆ. ಇಷ್ಟಿದ್ದರೂ ಬೌದ್ಧಧರ್ಮದಂತೆ ಜೈನಧರ್ಮದ ಮೇಲೆ ಕೂಡ ಹಿಂದೂ ಧರ್ಮದ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತದೆ. ಉದಾಹರಣೆಗೆ ಜೈನಧರ್ಮವು ಕರ್ಮ ತತ್ವವನ್ನು ನಂಬುತ್ತದೆ ಹಾಗೂ ಮರಣದ ನಂತರ ಮಾನವನ ಆತ್ಮವು ಯಾವುದಾದರೊಂದು ರೂಪದಲ್ಲಿ ಪರಲೋಕಕ್ಕೆ ಪ್ರಯಾಣ ಬೆಳೆಸುವುದೆಂಬ ಮಾತಿನಲ್ಲಿ ವಿಶ್ವಾಸವಿಡುತ್ತದೆ. ಈ ಕಾರಣದಿಂದಲೇ ಹಿಂದುಗಳಂತೆ ಜೈನರಿಗೆ ಕೂಡ ‘ಪುನರ್ಜನ್ಮ’ದಲ್ಲಿ ನಂಬಿಕೆ ಇದೆ. ಆದರೆ ಇನ್ನೊಂದು ಆಯಾಮದಲ್ಲಿ, ಮರಣದ ನಂತರವೂ ಆತ್ಮವು ಪರಮಾತ್ಮನಲ್ಲಿ ಲೀನ ವಾಗದೆ ತನ್ನ ಪ್ರತ್ಯೇಕತೆಯನ್ನು ಪಡೆದಿರುವುದೆಂದು ಜೈನಧರ್ಮವು ವಾದಿಸುತ್ತದೆ. ಈ ವಾದವು ಹಿಂದೂ ಧರ್ಮದ ಮೂಲಭೂತ ಅದ್ವೈತ ತತ್ವವಾದ ಆತ್ಮವು ಪರಮಾತ್ಮನಲ್ಲಿ ಲೀನವಾಗುವ ವಾದಕ್ಕೆ ಪ್ರತಿವಾದಿಯಾಗಿ ಗೋಚರಿಸುತ್ತದೆ.

ಸುತ್ತಲಿನ ಪರಿಸರವನ್ನು ಬಳಸಿದ್ದ ಹಿಂದೂ ಮತ ಸಂಪ್ರದಾಯಗಳಿಂದ ಗಣನೀಯವಾಗಿ ಪ್ರಭಾವಿಸಲ್ಪಟ್ಟಿದ್ದರೂ ಜೈನಧರ್ಮವು ಇಂದಿಗೂ ತನ್ನ ಸ್ವತಂತ್ರ್ಯ ಧಾರ್ಮಿಕ ಅಸ್ತಿತ್ವವನ್ನು ಕಾಯ್ದುಕೊಂಡು ಬಂದಿದೆ. ಉದಾಹರಣೆಗೆ, ಜೈನರ ಪವಿತ್ರ ಗ್ರಂಥಗಳು ಹಾಗೂ ಧಾರ್ಮಿಕ ನಂಬಿಕೆಗಳು ಹಿಂದೂ ಧರ್ಮದಿಂದ ಬಹಳ ಬೇರೆಯವೇ ಆಗಿದ್ದು ಮತಾಚರಣೆ ಗಳು, ಮಂದಿರಗಳು, ಪೂಜರಿಗಳು ಹಾಗೂ ಪ್ರವಾದಿಗಳ ಪ್ರವರಗಳೆಲ್ಲವೂ ಜೈನರಿಗೆ ತಮ್ಮದೇ ಆದ ವಿಶಿಷ್ಟತೆಯನ್ನು ತಂದುಕೊಟ್ಟಿವೆ. ಉದಾಹರಣೆಗೆ, ಮೋಕ್ಷ ಹಾಗೂ ಜೀವಾತ್ಮಗಳ ಕಲ್ಪನೆಯ ಜೈನಧರ್ಮದಲ್ಲಿ ಉಳಿದ ಪ್ರಮುಖ ಧರ್ಮಗಳಿಗಿಂತ ವಿಶಿಷ್ಟವಾಗಿದೆ.

ವರ್ಧಮಾನ ಮಹಾವೀರನ ಜೀವನದ ದಾಖಲೆಗಳು ಅಷ್ಟಾಗಿ ಸಿಗುತ್ತಿಲ್ಲವಾದರೂ ಅವನು ಕ್ರಿ.ಶ.೫೯೯ರಲ್ಲಿ ಜನಿಸಿರುವುದನ್ನು ಇತಿಹಾಸಜ್ಞರು ಒಪ್ಪುತ್ತಾರೆ. ಬಿಹಾರದ ವೈಶಾಲಿ ನಗರದಲ್ಲಿ ಶ್ರೀಮಂತ ಅರಸು ಮನೆತನದ ಸಿದ್ಧಾರ್ಥ ಹಾಗೂ ತ್ರಿಶಾಲಾ ದಂಪತಿಗಳಿಗೆ ಜನಿಸಿದ ಮಹಾವೀರನು ಜನಮತ ಸಂಪ್ರದಾಯದಲ್ಲಿ ಕಟ್ಟುನಿಟ್ಟಾಗಿ ಬೆಳೆಸಲ್ಪಟ್ಟವನು. ಮದುವೆಯಾಗಿ ಒಬ್ಬಳು ಮಗಳನ್ನು ಪಡೆದ ಮಹಾವೀರನು ತನ್ನ ೩೦ನೆಯ ವಯಸ್ಸಿನಲ್ಲಿ ತಂದೆ ತಾಯಿಗಳ ಮರಣಾನಂತರ ಸನ್ಯಾಸ ದೀಕ್ಷೆ ಪಡೆದನೆಂದು ನಂಬಲಾಗಿದೆ. ಮುಂದಿನ ೧೨ ವರ್ಷಗಳ ಕಾಲ ಆತನು ಸಂಚಾರಿ ಜೀವನವನ್ನು ಕೈಗೊಂಡು ತಪಸ್ಸು ಮತ್ತು ಧ್ಯಾನಗಳಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾನೆ. ಅವಧಿಯ ಕೊನೆಯಲ್ಲಿ ಮಹಾವೀರನು ತನ್ನನ್ನು ತಾನೆಯ ಕಂಡುಕೊಂಡು ‘ಸ್ವಯಂಭೂ’ ಸ್ಥಿತಿಗೆ ತಲುಪುತ್ತಾನೆಂದು ಜೈನಧರ್ಮವು ತಿಳಿಸುತ್ತದೆ; ಝ್ರಿಂಭಿಕಾ ಗ್ರಾಮದಲ್ಲಿ ಕೇವಲ ಜ್ಞಾನವನ್ನು ಪಡೆಯುತ್ತಾನೆ. ಹಿಂದಿನ, ಇಂದಿನ ಹಾಗೂ ಮುಂದಿನ ಎಲ್ಲ ವಿಷಯಗಳ ಪೂರ್ಣಜ್ಞಾನವನ್ನು ಗ್ರಹಿಸಿದ ವರ್ಧಮಾನನು ಸಾಮಾನ್ಯ ಪೀಡೆಗಳಾದ ಹಸಿವು, ನಿದ್ರೆ, ಮೈಥುನಗಳ ಬಾಧೆಯಿಂದ ಮುಕ್ತನಾಗಿ ದೇವದೂತನ ಪದವಿಗೆ ಏರುತ್ತಾನೆ. ಮುಂದಿನ ೩೦ ವರ್ಷಗಳ ಕಾಲ ಇವನು ಜೈನಧರ್ಮವನ್ನು ಬೋಧಿಸುತ್ತಿದ್ದು ತನ್ನ ೭೨ನೆಯ ವಯಸ್ಸಿನಲ್ಲಿ ನಿರ್ವಾಣವನ್ನು ಹೊಂದುತ್ತಾನೆ. ಇದು ನಮಗೆ ಗ್ರಾಂಥಿಕ ಸಾಹಿತ್ಯದಲ್ಲಿ ಉಪಲಬ್ಧವಿರುವ ೨೪ನೆಯ ಹಾಗೂ ಕೊನೆಯ ತೀರ್ಥಂಕರನ ಕಥೆ.

ಜೈನ ಸಾಧುಗಳಿಗೆ ೫ ಮಹಾವ್ರತಗಳಿವೆ. ಅಹಿಂಸೆ, ಸತ್ಯ, ಅಸ್ತೇಯ (ಅಚಾರ್ಯ), ಬ್ರಹ್ಮಚರ್ಯ ಹಾಗೂ ಅಪರಿಗ್ರಹ. ವರ್ಧಮಾನನು ತಿಳಿಸುವಂತೆ ಜೈನಧರ್ಮದ ತಿರುಳು ಅಹಿಂಸೆಯಲ್ಲಡಗಿದೆ. ಅಹಿಂಸೆಯೇ ಅತ್ಯುತ್ಕೃಷ್ಟ ಧರ್ಮ ಎಂದು ಅವನು ಸಾರುತ್ತಾನೆ. ಆದ್ದರಿಂದಲೇ ಜೈನಧರ್ಮದ ಅನುಯಾಯಿಗಳು ಪ್ರತಿಯೊಂದು ಜೀವಿಯೂ ಪವಿತ್ರವೆಂದು ಹಾಗೂ ಈ ಜೀವಿಯು ಕೆಲಸ, ಶಬ್ದ ಹಾಗೂ ವಿಚಾರಗಳಿಂದ ಘಾತಿಸಲ್ಪಡಬಾರದೆಂದು ನಂಬುತ್ತಾರೆ. ಹಾಗಿದ್ದರೂ ಜೀವರಾಶಿಗಳು ತಮ್ಮ ಸಂವೇದನೆಯ ಸಂಖ್ಯೆಯಿಂದ ವಿಭಾಗಿಸಲ್ಪಡುತ್ತವೆ. ಏಕಸಂವೇದನಾ ಜೀವಿಗಳಾದ ಹಣ್ಣು, ತರಕಾರಿ, ಬೀಜಗಳು ಮುಂತಾದವು ಆಹಾರಕ್ಕೆಂದು ಅಗತ್ಯವಿದ್ದಷ್ಟರ ಮಟ್ಟಿಗೆ ಬಳಸ್ಪಡಬಹುದು. ಎಲ್ಲ ಮಾಂಸಜನ್ಯ ಜೀವಿಗಳೂ ಆಹಾರ ಸ್ವರೂಪದಲ್ಲಿ ನಿಷೇಧ. ಸಂಪ್ರದಾಯಸ್ಥ ಜೈನರು ಜೇನುತುಪ್ಪ ಹಾಗೂ ಗಡ್ಡೆ-ಗೆಣಸುಗಳನ್ನು ಕೂಡ ಆಹಾರಕ್ಕೆಂದು ಬಳಸುವುದಿಲ್ಲ. ಅಂತೆಯೇ ಪ್ರಾಣಿಹತ್ಯೆಗೆ ಅನುವು ಮಾಡುವ ಯಾವ ಕೆಲಸದಲ್ಲಿಯೂ ಜೈನ ಧರ್ಮೀಯರು ತೊಡಗುವುದು ನಿಷಿದ್ಧ. ಒಬ್ಬ ಜೀವಿಯಾಗಿ ಮತ್ತೊಂದು ಜೀವಿಗೆ ಕೊಡುವ ರಕ್ಷಣೆ ಜೈನ ಧರ್ಮದ ಮೊದಲನೆಯ ಧಾರ್ಮಿಕ ಸೂತ್ರ.

ಜೈನ ಧರ್ಮದ ಎರಡನೆಯ ಸೂತ್ರವೆಂದರೆ ಯಾವಾಗಲೂ ಸತ್ಯವನ್ನೇ ನುಡಿಯುವುದು. ಹಾಗಿದ್ದರೂ ಇಲ್ಲಿ ಒಂದು ಧರ್ಮಸೂಕ್ಷ್ಮತೆಯನ್ನು ಕಾಣಬಹುದು. ಈ ಸೂತ್ರದ ಒಂದು ಅಂಶವಾಗಿ ಜೈನಧರ್ಮವು ಮತ್ತೊಬ್ಬರ ಕುರಿತಾದ ಗುಟ್ಟನ್ನು ರಟ್ಟು ಮಾಡುವುದೂ ಸಹ ಪಾಪವೆಂದು ತಿಳಿಸುತ್ತದೆ. ಮೂರನೆಯದಾಗಿ, ಯಾವುದೇ ರೀತಿಯ ಕಳುವು ಜೈನಧರ್ಮದಲ್ಲಿ ಮಹಾಪಾಪವೆಂದು ಬೋಧಿಸಲ್ಪಟ್ಟಿದೆ. ಅಪ್ರಾಮಾಣಿಕತೆ, ಕದ್ದ ವಸ್ತುಗಳನ್ನು ಖರೀದಿಸುವುದು, ತೂಕ-ಅಳತೆಗಳಲ್ಲಿ ಮಾಡುವ ಮೋಸ ಇವೆಲ್ಲವೂ ಪಾಪ ಕರ್ಮಗಳೆಂದು ಜೈನ ಧರ್ಮವು ಸಾರುತ್ತದೆ. ಈ ಧರ್ಮದ ನಾಲ್ಕನೆಯ ಸೂತ್ರ ಕಾಯನಿಗ್ರಹ. ಮದುವೆಯ ನಂತರವೂ ಕೂಡ ದೈಹಿಕ ಬೇಡಿಕೆಗಳನ್ನು ಧರ್ಮದ ಚೌಕಟ್ಟಿನಲ್ಲಿಯೇ ಪೂರೈಸಿಕೊಳ್ಳಬೇಕೆಂದು ಜೈನ ಧರ್ಮವು ಅನುಯಾಯಿಗಳಿಗೆ ಆದೇಶಿಸುತ್ತದೆ. ಐದನೆಯ ಹಾಗೂ ಕೊನೆಯ ಸೂತ್ರದಲ್ಲಿ ಜೈನಧರ್ಮವು ಅಗತ್ಯಕ್ಕಿಂತ ಹೆಚ್ಚಿನ ಸಂಪತ್ತನ್ನು ಪಡೆಯದಿರುವಂತೆ ಎಚ್ಚರಿಸುತ್ತದೆ. ಈ ಅಪರಿಗ್ರಹ ಸೂತ್ರವು ವ್ಯಕ್ತಿಯು ತನಗೆ ಹಾಗೂ ತನ್ನ ಕುಟುಂಬಕ್ಕೆ ತೀರ ಅವಶ್ಯಕವಿರುವ ವಸ್ತುಗಳನ್ನಷ್ಟೇ ಗಳಿಸಿ, ಉಳಿಸಿ, ಬಳಸಿಕೊಳ್ಳುವ ಅಧಿಕಾರ ನೀಡುತ್ತದೆ.

ಈ ಐದು ಸೂತ್ರಗಳನ್ನು ಪಂಚಮಹಾವ್ರತವೆಂದು ಜೈನರು ಪರಿಗಣಿಸುತ್ತಾರೆ. ಈ ಐದು ಸೂತ್ರಗಳು ಜೈನ ಮುನಿಗಳಿಗೆ ಹಾಗೂ ಜೈನ ಸಂಸಾರಿಗಳಿಬ್ಬರಿಗೂ ಬೋಧಿಸಲ್ಪಟ್ಟಿ ದ್ದರೂ, ಜೈನಮುನಿಗಳು ಇವೆಲ್ಲವನ್ನೂ ಪರಿಪೂರ್ಣವಾಗಿ ಪಾಲಿಸಬೇಕು. ನಡೆಯುವಾಗ ಉಳಿದ ಜೀವಿಗಳಿಗೆ ಹಿಂಸೆ ಆಗಬಹುದೆಂಬ ಕಾರಣದಿಂದ ಜೈನ ಸನ್ಯಾಸಿಯು ತನ್ನ ಪ್ರತಿಯೊಂದು ಹೆಜ್ಜೆಯನ್ನೂ ಅತ್ಯಂತ ಎಚ್ಚರದಿಂದ ಇಡಬೇಕು. ನೀರನ್ನು ಶೋಧಿಸಿ (ಸೋಸಿ) ಕುಡಿಯಬೇಕು. ಬೆಂಕಿಯನ್ನು ಹಚ್ಚಕೂಡದು ಹಾಗೂ ಬಾಯಿಗೆ ಬಟ್ಟೆಕಟ್ಟಿ ಉಸಿರಾಡಬೇಕು. ಜೈನ ಸನ್ಯಾಸಿಯು ಪೂರ್ಣ ಬ್ರಹ್ಮಚರ್ಯವನ್ನು ಪರಿಪಾಲಿಸಬೇಕು ಹಾಗೂ ಸ್ವಲ್ಪವೂ ಕೂಡ ವೈಯಕ್ತಿಕ ಆಸ್ತಿ-ಪಾಸ್ತಿಗಳನ್ನು ಹೊಂದಿರಕೂಡದು. ಈ ಐದು ವ್ರತಗಳಲ್ಲದೆ ಜೈನ ಸನ್ಯಾಸಿಯು ಇನ್ನೂ ಏಳು ಶಪಥಗಳನ್ನು ಮಾಡಬೇಕಾಗುವುದು. ಈ ಶಪಥಗಳು ಉಪವಾಸ ಹಾಗೂ ಜೀವನದ ಉಳಿದ ಶಿಸ್ತು ಸಂಯಮಗಳಿಗೆ ಅನುವು ಮಾಡಿಕೊಡುವ ಕಟ್ಟಳೆಗಳ ರೂಪದಲ್ಲಿ ಹೇಳಲ್ಪಟ್ಟಿವೆ. ಜೈನಧರ್ಮವು ಮುಖ್ಯವಾಗಿ ಸಾಂಘಿಕವಾದ ಧರ್ಮವಾಗಿದ್ದು, ಜೈನ ಮುನಿಯು ಇಂಥ ಮಠಗಳ ನಿರ್ವಾಹಕನಾಗಿರುತ್ತಾನೆ.

ಜೈನಧರ್ಮದಲ್ಲಿ ಆತ್ಮ ಪರಿಕಲ್ಪನೆಗೆ ಸಾಕಷ್ಟು ಪ್ರಾಶಸ್ತ್ಯ ನೀಡಲಾಗಿದೆ. ‘‘ಆತ್ಮವೇ ಸೃಷ್ಟಿ ಲಯಗಳಿಗೆ ಕಾರಣ. ಸುಖದುಃಖಗಳಿಗೆ ಮೂಲ. ಆತ್ಮಕ್ಕೆ ಆತ್ಮವೇ ಸ್ನೇಹಿತ ಹಾಗೂ ವೈರಿ. ಆತ್ಮವು ತನ್ನ ಒಳಿತು ಕೆಡಕುಗಳನ್ನು ನಿರ್ಣಯಿಸುತ್ತದೆ ಮತ್ತು ನರದಲ್ಲಿದೆಯೆಂದೆ ಹೇಳಲಾದ ವೇಯಾರಣ ನದಿಯನ್ನು ತನಗೆ ತಾನೆಯ ಸೃಷ್ಟಿಸಿಕೊಳ್ಳುತ್ತದೆ.’’ ಆತ್ಮದ ಅತ್ಯಂತ ಬಲಿಷ್ಟವಾದ ಶತ್ರುವು ವಿಷಯಾಸಕ್ತಿ ಹಾಗೂ ರಾಗ-ದ್ವೇಷಗಳು ಕೋಪ, ಸೊಕ್ಕು, ವಂಚನೆ ಹಾಗೂ ದುರಾಸೆಗಳು ಆತ್ಮವನ್ನು ಅವನತಿಯೆಡೆ ಒಯ್ಯುತ್ತವೆ. ಚಿಂತೆ, ಭಯ, ಅಸಹ್ಯ ಪಡುವಿಕೆ ಹಾಗೂ ಕಾಮ ಪ್ರಚೋದನೆಗಳು ಕೂಡ ಆತ್ಮವನ್ನು ಕೆಳಮಟ್ಟಕ್ಕೆ ಇಳಿಸುತ್ತವೆ. ಇದು ಆತ್ಮಕ್ಕೆ ಸಂಬಂಧಿಸಿದಂತೆ ಜೈನಧರ್ಮದ ಅತಿ ಮಹತ್ವದ ಅಂಶ.

ಪ್ರಾರಂಭದ ದಿನಗಳಿಂದಲೇ ಜೈನ ಧರ್ಮದಲ್ಲಿ ಎರಡು ಮಹತ್ವದ ಪಂಥಗಳು ಹುಟ್ಟಿಕೊಂಡವು; ದಿಗಂಬರ ಪಂಥ (ಅಕಾಶವನ್ನೇ ಬಟ್ಟೆಯಾಗಿಟ್ಟುಕೊಂಡವರು) ಹಾಗೂ ಶ್ವೇತಾಂಬರ ಪಂಥ (ಬಿಳಿ ಬಟ್ಟೆ ಧರಿಸುವವರು). ವಸ್ತುತಃ ಇವರಲ್ಲಿ ಹೆಚ್ಚಿನ ರೀತಿಯ ತಾತ್ವಿಕ ಮತಭೇದವಿಲ್ಲ. ದಿಗಂಬರರ ಪ್ರಕಾರ ತೀರ್ಥಂಕರರು ಆಹಾರವಿಲ್ಲದೆ ಜೀವಿಸು ವರೆಂದೂ, ಶ್ವೇತಾಂಬರ ತೀರ್ಥಂಕರರು ಆಹಾರದಿಂದ ಜೀವಿಸುವರೆಂದು ಹೇಳುವರು. ದಿಗಂಬರ ಪಂಥವು ಸ್ತ್ರೀಗೆ ನಿರ್ವಾಣ(ಮೋಕ್ಷ) ಸ್ಥಿತಿ ಇಲ್ಲವೆಂದು ವಾದಿಸುತ್ತದೆ, ಎಂದರೆ ನಿರ್ವಾಣ ಪಡೆಯಲು ಆಕೆಯು ಪುರುಷ ಜನ್ಮ ಪಡೆಯದೆ ಬೇರೆ ದಾರಿಯೇ ಇಲ್ಲ. ಆದರೆ ಶ್ವೇತಾಂಬರ ಪಂಥದಲ್ಲಿ ಇಂಥ ನಂಬಿಕೆ ಇಲ್ಲ. ದಕ್ಷಿಣ ಭಾರತದಲ್ಲಿ ದಿಗಂಬರ ಪಂಥವು ಹೆಚ್ಚು ಪ್ರಚಲಿತವಾಗಿದ್ದು, ಭಾರತದ ಇತರೆಡೆಗಳಲ್ಲಿ, ವಿಶೇಷವಾಗಿ ಪಶ್ಚಿಮ ಭಾರತದಲ್ಲಿ ಶ್ವೇತಾಂಬರ ಪಂಥವು ಹೆಚ್ಚು ಆಳವಾಗಿ ಬೇರುಬಿಟ್ಟಿದೆ. ಸಂಖ್ಯೆಯಲ್ಲಿ ಕಿರಿಯದಾಗಿದ್ದರೂ ಜೈನ ಧರ್ಮಕ್ಕೆ ಪ್ರಾಮುಖ್ಯತೆ ದೊರಕಲು ಒಂದು ಮಹತ್ವದ ಕಾರಣವೆಂದರೆ ಈ ಧರ್ಮದ ಅನುಯಾಯಿಗಳು ವ್ಯಾಪಾರ-ವಹಿವಾಟುಗಳಲ್ಲಿ ತೊಡಗಿದ್ದು ಸ್ಥಿತಿವಂತರಾಗಿರು ತ್ತಾರೆ. ಜೈನರಲ್ಲಿ ಸಾಕ್ಷರತೆಯ ಪ್ರಮಾಣವು ಗಣನೀಯವಾಗಿ ಹೆಚ್ಚು ಇದೆ. ಈ ಧರ್ಮೀಯರು ತಮ್ಮ ಮತಾಚಾರಗಳನ್ನು ಇಂದಿಗೂ ತಪ್ಪದೆ ಪಾಲಿಸುತ್ತಾರೆ ಹಾಗೂ ದೇಶದ ಎಲ್ಲೆಡೆಯ ಜೈನ ಬಾಂಧವರೊಂದಿಗೆ ಸಂಪರ್ಕವಿರಿಸಿಕೊಂಡಿರುತ್ತಾರೆ. ಮಹಾವೀರನ ಉಪದೇಶಗಳೆಲ್ಲ ಪಾಲಿ ಭಾಷೆಯಲ್ಲಿದೆ. ಇವರ ಪವಿತ್ರ ಗ್ರಂಥವು ‘ಅಂಗ’ ಎಂದೂ, ದೇವಾಲಯಗಳು ‘ಬಸ್ತೀ’ ಎಂದೂ ಪ್ರಸಿದ್ದಿಯಲ್ಲಿವೆ. ಬೌದ್ಧ ರತ್ನತ್ರಯಗಳ ಒಕ್ಕೂಟದಂತೆ ಜೈನರಲ್ಲೂ ಸಮ್ಯಕ್ ದರ್ಶನ (ಜೈನ ತತ್ವಗಳಲ್ಲಿ ಇಡುವ ಅಪರಿಮಿತ ನಂಬಿಕೆ), ಸಮ್ಯಕ್ ಜ್ಞಾನ(ಸತ್ಯಸ್ಥಿತಿಯ ಅರಿವು) ಹಾಗೂ ಸಮ್ಯಕ್ ಚಾರಿತ್ರ್ಯ (ರಾಗ-ದ್ವೇಷ ರಹಿತನಾಗಿರುವುದು) ಎಂಬ ರತ್ನತ್ರಯಗಳಿವೆ.

ಒಟ್ಟಿನಲ್ಲಿ ಜೈನಧರ್ಮವು ಸಂಖ್ಯೆಯ ದೃಷ್ಟಿಯಿಂದ ಕಿರಿದಾಗಿದ್ದರೂ ಪ್ರಭಾವದಿಂದ ಸಾಕಷ್ಟು ಹಿರಿದಾಗಿದೆ. ಉಳಿದವರ ವಿಷಯದಲ್ಲಿ ಅತ್ಯಂತ ಸೌಮ್ಯವಾಗಿ ವರ್ತಿಸುವ ಜೈನರು ತಮ್ಮದೇ ವಿಚಾರದಲ್ಲಿ ಬಹಳ ಕಠೋರರೂ, ಕಟ್ಟುನಿಟ್ಟಿನವರೂ ಆಗಿ ವರ್ತಿಸುವುದು ಆಸಕ್ತಿಯ ವಿಚಾರ. ಸಮಾಜಕ್ಕೆಂದು ಅರವಟ್ಟಿಗೆಗಳನ್ನು, ಆಸ್ಪತ್ರೆಗಳನ್ನು ಕಟ್ಟಿಸಿಕೊಡುವ ಜೈನರು ತಮ್ಮ ಮುಕ್ತಿಗೆಂದು ಉಪವಾಸ-ವನವಾಸಗಳಿಂದ ತಮ್ಮನ್ನೇ ದಂಡಿಸಿಕೊಳ್ಳುವುದು ಒಂದು ವಿರೋಧಾಭಾಸವಾಗಿ ಹೊಸಬರಿಗೆ ಕಂಡರೆ ಅಚ್ಚರಿಯಿಲ್ಲ. ಆದರೆ ಈ ಧರ್ಮವನ್ನು ಇಡಿಯಾಗಿ ಗಮನಿಸಿದಾಗ ಸಾಂಸ್ಥಿಕ ಹಿತಕ್ಕೆಂದು ಸ್ವಹಿತವನ್ನು ಕಡೆಗಣಿಸುವ ಈ ಧಾರ್ಮಿಕ ನಂಬಿಕೆಯ ವ್ಯವಸ್ಥೆ ಇಂದಿಗೂ ಅನುಯಾಯಿಗಳನ್ನು ಒಂದುಗೂಡಿಸಿ ಇಟ್ಟಿರುವುದರಲ್ಲಿ ತಥ್ಯ ಕಾಣುತ್ತದೆ.

ಬೌದ್ಧ ಧರ್ಮ

ಬೌದ್ಧಧರ್ಮವು ಸುಮಾರು ೮೦ ಕೋಟಿಗೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಧರ್ಮ. ಭಾರತದಲ್ಲಿ ಜನಿಸಿದ ಈ ಧರ್ಮವು ಇಂದು ಚೀನಾ, ಜಪಾನ್, ಟಿಬೆಟ್, ದಕ್ಷಿಣ ಮತ್ತು ಉತ್ತರ ಕೊರಿಯಾ, ಮಂಚೂರಿಯಾ, ಮುಂಗೋಲಿಯಾ, ಶ್ರೀಲಂಕಾ, ಥೈಲ್ಯಾಂಡ್ ಮುಂತಾದ ದೇಶಗಳಲ್ಲಿಯೂ ಆಶ್ರಯ ಪಡೆದಿದೆ. ಪೌರ್ವಾತ್ಯ ದೇಶಗಳಲ್ಲಿ ಇದರ ಪ್ರಭಾವವು ಹೆಚ್ಚಾಗಿದ್ದರೂ ಪಶ್ಚಿಮದ ರಾಷ್ಟ್ರಗಳಲ್ಲಿಯೂ ಸಹ ಬೌದ್ಧಧರ್ಮದ ಅನುಯಾಯಿಗಳು ತುಸು ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಆದ್ದರಿಂದ ಬೌದ್ಧಧರ್ಮವನ್ನು ಜಗತ್ತಿನ ಅತಿಪ್ರಮುಖ ಧರ್ಮಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಬಹು ದೇಶದಲ್ಲಿ ಹರಡಿದ ಪ್ರಕ್ರಿಯೆಯಿಂದಾಗಿ ವಿವಿಧ ಸಾಮಾಜಿಕ-ಸಾಂಸ್ಕೃತಿಕ ಅಂತರ್ ಕ್ರಿಯೆಗಳಿಗೆ ಒಳಗಾಗಿ ಬೌದ್ಧಧರ್ಮದಲ್ಲಿ ವೈವಿಧ್ಯಮಯ ರೂಪಗಳು ಕಂಡುಬರುತ್ತವೆ.

ಬೌದ್ಧಧರ್ಮದ ಸಂಸ್ಥಾಪಕನು ಗೌತಮ ಬುದ್ಧನೆಂಬುದರಲ್ಲಿ ಯಾವುದೇ ಸಂದೇಹವೂ ಇಲ್ಲ. ಇತಿಹಾಸಕಾರರು ಇವನ ಹುಟ್ಟಿದ ವರ್ಷವನ್ನು ಬೇರೆ ಬೇರೆಯಾಗಿ ಗುರುತಿಸಿದ್ದರೂ ಸಾಮಾನ್ಯವಾಗಿ ಕ್ರಿಸ್ತಪೂರ್ವ ೫೬೬ನ್ನು ಬುದ್ಧನು ಹುಟ್ಟಿದ ವರ್ಷವೆಂದು ಚರಿತ್ರೆಯಲ್ಲಿ ದಾಖಲಿಸಲಾಗಿದೆ. ಗೌತಮ ಬುದ್ಧನ ಪೂರ್ವಾಶ್ರಮದ ಹೆಸರು ಸಿದ್ಧಾರ್ಥ. ಇವನು ಕ್ಷತ್ರಿಯ ವಂಶಜನಾದ ‘ಕಪಿಲವಸ್ತು’ ರಾಜ್ಯದ ರಾಜನಾಗಿದ್ದ ಶುದ್ಧೋದನ ಹಾಗೂ ಮಾಯಾದೇವಿಯ ಪುತ್ರ. ಲುಂಬಿಣಿಯಲ್ಲಿ ಜನಿಸಿದ್ದಾನೆ ಎಂದು ನಂಬಲಾಗಿದೆ. ಬುದ್ಧನ ಮೂಲ ಕುಟುಂಬದ ಹೆಸರು ಗೌತಮನೆಂಬುದಾಗಿದ್ದು ‘ಕೋಲಿರಾಜ್ಯ’ದ ರಾಜನ ಪುತ್ರಿ ಯಶೋಧರೆ ಅವನ ಪತ್ನಿಯಾಗಿದ್ದಳು. ಬಿಲ್ಲು ವಿದ್ಯೆಯಲ್ಲಿ ಪ್ರವೀಣನಾದ ಅವನು ಸಂಪತ್ತಿನಲ್ಲಿ ತೇಲಾಡುತ್ತಿರುವ ಕಾಲದಲ್ಲಿ ‘ನಾಲ್ಕು ಚಿಹ್ನೆ’ಗಳಾದ ಮುದುಕ, ರೋಗಿ, ಶವ ಹಾಗೂ ಸನ್ಯಾಸಿಗಳನ್ನು ನೋಡುತ್ತಾನೆ. ಈ ದೃಶ್ಯಗಳಿಂದ ಸಿದ್ಧಾರ್ಥನಿಗೆ ಜೀವನದ ಕಟು ಸತ್ಯಗಳಾದ ವೃದ್ಧಾಪ್ಯ, ರೋಗ ಹಾಗೂ ಸಾವುಗಳು ಗೋಚರಿಸಿ ಸಂಪತ್ತಿನ ನಿರುಪಯುಕ್ತತೆ ಮನದಟ್ಟಾಗುತ್ತದೆ. ಹಾಗೂ ಇವುಗಳನ್ನು ಪರಿತ್ಯಜಿಸಿದ ಸನ್ಯಾಸಿ ಜೀವನವು ಅತ್ಯಂತ ಅರ್ಥಪೂರ್ಣವಾಗಿ ಕಂಡುಬರುತ್ತದೆ. ಮಾನವ ಜೀವನದ ಸಮಸ್ಯೆ ಗಳನ್ನು ಅರ್ಥಮಾಡಿಕೊಂಡ ರಾಜಕುಮಾರ ಸಿದ್ಧಾರ್ಥನು ಮಡದಿ ಯಶೋಧರೆ ಹಾಗೂ ಮಗ ರಾಹುಲನನ್ನು ತೊರೆದು, ಮಧ್ಯರಾತ್ರಿ ಮನೆಬಿಟ್ಟು ಸನ್ಯಾಸಿಯಾಗುತ್ತಾನೆ. ಬೋಧಿ ವೃಕ್ಷದ (ಬುದ್ದಿವಂತಿಕೆಯ ಮರ) ಕೆಳಗೆ ಧ್ಯಾನಾಸಕ್ತನಾಗಿ ಬೋಧೀಸತ್ವನಾಗುತ್ತಾನೆ; ಬುದ್ಧನಾಗುತ್ತಾನೆ. ಲೋಕದ ಚಿರಸತ್ಯಗಳು ಬುದ್ಧನಿಗೆ ಗೋಚರಿಸುತ್ತವೆ. ಹೀಗೆ ಬೌದ್ಧಧರ್ಮದ ಸಂಸ್ಥಾಪನೆಗೆ ನಾಂದಿಯಾಗುತ್ತದೆ.

ಬೌದ್ಧಧರ್ಮವು ತನ್ನ ಸಮಕಾಲೀನ ಹಿಂದೂಧರ್ಮದ ಅನೇಕ ಮೂಲಭೂತ ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸುತ್ತದೆ. ಮೇಲ್ನೋಟಕ್ಕೆ ಬುದ್ಧನ ಉಪದೇಶಗಳು ದ್ವಂದ್ವಾತ್ಮಕವಾಗಿ ಕಾಣುತ್ತವೆ. ಐಹಿಕ ಜೀವನದ ಭೋಗ-ಲಾಲಸೆಗಳನ್ನು, ಸುಖ-ಸಂಪತ್ತುಗಳನ್ನು ಬಿಡುವಂತೆ ಬುದ್ಧನು ಉಪದೇಶಿಸುವನು. ಆದರೆ ಒಳಹೊಕ್ಕು ನೋಡಿದಾಗ ಇಲ್ಲಿ ಯಾವುದೇ ದ್ವಂದ್ವವಿಲ್ಲ. ಪೂರ್ಣಪರಿತ್ಯಾಜ್ಯವೇ ಸುಖಕ್ಕೆ ಮೆಟ್ಟಿಲು. ಇದು ಬುದ್ಧನ ಉಪದೇಶಗಳಲ್ಲಿ ತೋರುವ ಮಹತ್ವದ ಅಂಶ. ಕಷ್ಟದ ಅನುಭವಕ್ಕೆ ಸಂಬಂಧ ಪಟ್ಟಂತೆ ಬೌದ್ಧಧರ್ಮವು ನಾಲ್ಕು ಸತ್ಯಗಳನ್ನು ಗುರುತಿಸುತ್ತದೆ. ಮೊದಲನೆಯದಾಗಿ ಜೀವನವು ನೋವಿನಿಂದ ತುಂಬಿದೆ. ಇಲ್ಲಿ ರೋಗ, ನಾಶ, ಸಾವು, ಆಸೆ ಹಾಗೂ ಅಸಂತುಷ್ಟಿಗಳಿವೆ. ಎರಡನೆಯದಾಗಿ ಜೀವನದಲ್ಲಿ ಯಾವುದಾದರೊಂದು ವಸ್ತುವಿಗಾಗಿ ಇರುವ ಅತಿಯಾದ ಆಸೆಯೇ ದುಃಖಕ್ಕೆ ಮೂಲ. ಇಂಥ ಉತ್ಕಟ ಬಯಕೆಯು ಜಗತ್ತಿನಲ್ಲಿರುವ ವಸ್ತುಗಳ ಬಯಕೆಯಾಗಿರಬಹುದು ಅಥವಾ ಭವಿಷ್ಯದ ಜೀವನದ ಸುಖಕ್ಕಾಗಿ ಹಾತೊರೆಯುವ ಆಸೆಯಾಗಿರಬಹುದು. ಇಂತಹ ಉತ್ಕಟ ಬಯಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದು ಎಂಬುದು ಮೂರನೆಯ ಸತ್ಯ. ನಾಲ್ಕನೆಯ ಸತ್ಯದಲ್ಲಿ ಈ ಮೂರು ಸತ್ಯಗಳನ್ನು ಸಾಧಿಸುವ ದಾರಿಯನ್ನು ಚರ್ಚಿಸಲಾಗಿದೆ.

‘ಅತ್ಯುತ್ಕೃಷ್ಟ ಅಷ್ಟಮಾರ್ಗವು’ ಮೇಲಿನ ನಾಲ್ಕು ಸತ್ಯಗಳಿಗೂ ದಾರಿ. ಆ ಅಷ್ಟಮಾರ್ಗದ ಎಂಟು ಮೆಟ್ಟಿಲುಗಳೆಂದರೆ ನ್ಯಾಯಸಮ್ಮತ ದೃಷ್ಟಿಕೋನ, ನ್ಯಾಯಸಮ್ಮತ ಆಸೆಗಳು, ಸರಿಯಾದ ಮಾತು, ಸರಿಯಾದ ನಡತೆ, ಜೀವನ ನಡೆಸುವ ಸರಿಯಾದ ವಿಧಾನ ಮತ್ತು ಸೂಕ್ತ ಪ್ರಯತ್ನ, ಸೂಕ್ತ ಬುದ್ದಿವಂತಿಕೆ (ಸಂದರ್ಭೋಚಿತ ವಿಚಾರಗಳು) ಮತ್ತು ಶ್ರದ್ಧೆ. ಬೌದ್ಧಧರ್ಮವು ಆತ್ಮವೆಂಬ ಪರಿಕಲ್ಪನೆಯ ವಿರುದ್ಧ ಸಮರ ಸಾರಿದೆ. ದೇಹ ಹಾಗೂ ಸ್ವಂತಿಕೆಗಳೆರಡು ಪ್ರತಿದಿನವೂ, ಪ್ರತಿಕ್ಷಣವೂ ಬದಲಾಗುತ್ತಲೇ ಇರುತ್ತವೆ. ಆದ್ದರಿಂದ ಪೂರ್ಣ ಹಾಗೂ ಅವಚ್ಛಿನ್ನ ‘ಆತ್ಮ’ ಎಂಬುದು ಒಂದು ಮಿಥ್ಯೆ. ನಮ್ಮನ್ನು ಸಮಗ್ರವಾಗಿ ಪ್ರತಿನಿಧಿಸುವ ವ್ಯಕ್ತಿತ್ವವೆಂಬ ತಪ್ಪು ಗ್ರಹಿಕೆಯು ಐದು ರೂಪಾತ್ಮಕ  ಆಸೆಗಳಿಂದೊಡಗೂಡಿದೆ. ಬೌದ್ಧ ಧರ್ಮದಲ್ಲಿ ಇಂಥ ಆಸೆಗಳನ್ನು ‘ಸ್ಕಂದಗಳು ಎನ್ನಲಾಗಿದೆ. ಇಂಥ ‘ಸ್ಕಂದ’ಗಳು ಮನುಷ್ಯನ ಸಾವಿನ ನಂತರವೂ ಮುಂದುವರಿಯುತ್ತವೆ. ಆದರೆ ಜೀವಿಯು ತನ್ನ ಈ ಉತ್ಕಟ ಬಯಕೆಯನ್ನು ಪೂರ್ಣವಾಗಿ ನಾಶಮಾಡಿಕೊಂಡಾಗ ಇವು ಬಯಕೆಯೊಂದಿಗೆ ಮಾಯವಾಗುತ್ತದೆ. ‘ಸ್ಕಂದಗಳು’ ನಾಶವಾಗದಿದ್ದಲ್ಲಿ ಅವು ಆ ವ್ಯಕ್ತಿಯ ಪುನರ್ಜನ್ಮದಲ್ಲಿ ಪುನಃ ಬಯಕೆಗಳಾಗಿ ಕಾಡುತ್ತವೆ. ಬೌದ್ಧಧರ್ಮದಲ್ಲಿ ‘ಆತ್ಮ’ ಎಂಬ ಕಲ್ಪನೆಯ ನಿರಾಕರಣೆಯಿದ್ದರೂ ಪುನರ್ಜನ್ಮ ಹಾಗೂ ಕರ್ಮಗಳ ನಂಟು ‘ಸ್ಕಂದ’ಗಳ ದೆಸೆಯಿಂದ ಮುಂದುವರಿಯುತ್ತವೆ. ಹಿಂದೂ ಧರ್ಮದಂತೆಯೇ ಬೌದ್ಧ ಧರ್ಮದಲ್ಲಿಯೂ ಕೂಡ ‘ಮೋಕ್ಷ’ ಅಥವಾ ‘ನಿರ್ವಾಣ’ವೆಂದರೆ ಪುನರ್ಜನ್ಮವಿಲ್ಲದ ಪೂರ್ಣಸ್ಥಿತಿ.

ಬೌದ್ಧಧರ್ಮವು ಧಾರ್ಮಿಕ ಸಂಸ್ಥೆ(ಸಂಘ)ಗಳಲ್ಲಿ ವಿಶ್ವಾಸವಿಡುತ್ತದೆ. ಬುದ್ಧನ ಅನುಯಾಯಿಗಳು ಬುದ್ಧನಿಗೆ, ಧರ್ಮಕ್ಕೆ ಮತ್ತು ಸಂಘಕ್ಕೆ ಸಂಪೂರ್ಣವಾಗಿ ಶರಣಾಗುವುದಾಗಿ ಘೋಷಿಸುತ್ತಾರೆ. ಬುದ್ಧನ ಕಾಲದಲ್ಲಿ ಪ್ರಸಿದ್ಧವಾಗಿದ್ದ ಕರ್ಮಠ ಹಿಂದೂ ಯಜ್ಞ-ಯಾಗಾದಿ ಕ್ರಿಯೆಗಳನ್ನು ವಿರೋಧಿಸುವ ಹಾಗೂ ಧಾರ್ಮಿಕ ವ್ಯವಸ್ಥೆಯಲ್ಲಿ ಕೆಳವರ್ಗದವರನ್ನು ವಿರೋಧಿಸುವ ಹಾಗೂ ಧಾರ್ಮಿಕ ವ್ಯವಸ್ಥೆಯಲ್ಲಿ ಕೆಳವರ್ಗದವರನ್ನು ಸೇರಿಸಿ ಸಂಘಟಿಸುವ ಕೆಲಸವನ್ನು ಬೌದ್ಧಧರ್ಮವು ಯಶಸ್ವಿಯಾಗಿ ನಿರ್ವಹಿಸಿತೆನ್ನಬಹುದು. ಇದರಿಂದಾಗಿ ಈ ಧರ್ಮಕ್ಕೆ ಹೆಚ್ಚಿನ ಜನಮನ್ನಣೆ ದೊರೆಯಿತೆನ್ನುವ ಅಂಶವನ್ನು ವಿದ್ವಾಂಸರು ಒಪ್ಪಿಕೊಳ್ಳುತ್ತಾರೆ. ಈ ಧರ್ಮದಲ್ಲಿ ಮನ್ನಣೆ ಪಡೆದ ‘ತ್ರಿಪೀಠಿಕಾ’ ಎಂಬ ಗ್ರಂಥವು ಧರ್ಮಸೂಕ್ಷ್ಮತೆಯನ್ನು ಅತ್ಯಂತ ಸರಳ ಹಾಗೂ ಸೂಕ್ಷ್ಮವಾದ ರೀತಿಯಲ್ಲಿ ವಿವರಿಸುತ್ತದೆ. ಮೇಲ್ಜಾತಿಯ ಹಾಗೂ ಆಳುವ ವರ್ಗದ ಭಾಷೆಯಾಗಿದ್ದ ಸಂಸ್ಕೃತವನ್ನು ಬಿಟ್ಟು ಸಾಮಾನ್ಯರ ಭಾಷೆಯಾದ ಪಾಲಿ ಮತ್ತು ಪ್ರಾಕೃತಗಳಲ್ಲಿ ವಿಚಾರಗಳನ್ನು ಮಂಡಿಸಿದ್ದರಿಂದ ಈ ಧರ್ಮಕ್ಕೆ ಅಪಾರ ಜನಮನ್ನಣೆ ಮತ್ತು ತತ್ಪರಿಣಾಮವಾಗಿ ರಾಜಶ್ರಯಗಳು ದೊರಕಿತು.

ಬೌದ್ಧಧರ್ಮದಲ್ಲಿಯೂ ಜೈನಧರ್ಮದಂತೆಯೇ ಎರಡು ಪ್ರಮುಖ ಪಂಥಗಳನ್ನು ಕಾಣಬಹುದು. ಮೊದಲನೆಯದಾದ ‘ಮಹಾಯಾನ’(ಬೃಹತ್ ವ್ಯವಸ್ಥೆ) ಪಂಥವು ಜೀವನವನ್ನು ಹೆಚ್ಚು ಮುಕ್ತ ದೃಷ್ಟಿಯಿಂದ ಕಾಣುತ್ತದೆ. ಈ ಪಂಥದಲ್ಲಿ ಮುಖ್ಯವಾಗಿ ಎರಡು ವಿಚಾರಗಳು ಪ್ರಚಲಿತವಾಗಿವೆ. ಮೊದಲನೆಯದಾಗಿ, ತನ್ನ ಸುತ್ತಲಿನ ದುಃಖಿಗಳನ್ನು ಉದ್ಧರಿಸುವ ಸಲುವಾಗಿ ‘ವೈರೋಚನ’(ಧರ್ಮತಾಯ)ನು ಬೋಧಿಸತ್ವನ ರೂಪದಲ್ಲಿ ಅನೆಯಕ ಬಾರಿ ಜನ್ಮ ತಾಳುತ್ತಾನೆ. ಅತಿ ಮೇಧಾವಿ ಶಕ್ತಿಯು ‘ನಿರ್ವಾಣ’ ಹೊಂದುವ ಮೊದಲು ತನ್ನ ಜನರಿಗೆ ‘ಪೂರ್ಣಜ್ಞಾನ’ವನ್ನು ಕೊಡುವ ಪ್ರಯತ್ನವು ಇದಾಗಿದೆಯೆಂದು ಮಹಾಯಾನ ಪಂಥದವರು ನಂಬುತ್ತಾರೆ. ಎರಡನೆಯದಾಗಿ ಮಾನವನ ಆತ್ಮ ಅನೆಯಕ ಸ್ವರ್ಗ ಅಥವಾ ನರಕಗಳನ್ನು ದಾಟಿದ ನಂತರವೇ ಅಂತಿಮ ಸ್ಥಿತಿಯಾದ ನಿರ್ವಾಣವನ್ನು ತಲುಪುತ್ತದೆ. ಈ ಅಂಶಗಳೆಲ್ಲವೂ ‘ಕಮಲಸೂತ್ರ’(ಪದ್ಮಸೂತ್ರ)ದಲ್ಲಿ ವಿವರವಾಗಿ ಚರ್ಚಿಸಲ್ಪಟ್ಟಿವೆ. ಎರಡನೆಯ ಪಂಥವಾದ ‘ಹೀನಾಯಾನ’(ಚಿಕ್ಕವ್ಯವಸ್ಥೆ)ವು ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಲಿತವಿದೆ. ಹೀನಾಯಾನ ಪಂಥದಲ್ಲಿ ಬೋಧಿಸತ್ವನ ಪುನರ್ಜನ್ಮ ಕಲ್ಪನೆ ಇಲ್ಲ. ಉತ್ತಮ ಕಾರ್ಯಗಳಿಂದ ಶ್ರೇಷ್ಠತೆ ದೊರಕುವುದೆಂಬುದು ಹೀನಾಯಾನ ಪಂಥದ ಬಲವಾದ ನಂಬಿಕೆ. ಹೀನಾಯಾನ ಪಂಥವು ನಿಸರ್ಗ ಪೂಜೆಯ ತತ್ವಗಳನ್ನು ತುಸು ಪ್ರಮಾಣದಲ್ಲಿ ಒಪ್ಪಿಕೊಳ್ಳುತ್ತದೆ.

ಬೌದ್ಧಧರ್ಮದ ಪ್ರಮುಖ ಅಂಶಗಳಲ್ಲಿ ವ್ಯಕ್ತಿತ್ವದ ಮಹತ್ವವೂ ಒಂದು. ಮಾನವನು ತನ್ನನ್ನು ತಾನೆಯ ರಕ್ಷಿಸಿಕೊಳ್ಳಬೇಕು. ಅವನ ಸ್ವಪ್ರಯತ್ನವಿಲ್ಲದೆ ಯಾವುದೇ ದೇವರು ಅಥವಾ ಧಾರ್ಮಿಕ ವಿಧಿಗಳು ಅವನನ್ನು ರಕ್ಷಿಸಲಾರವು. ವಿಶ್ವದ ಪ್ರಾರಂಭ, ಕೊನೆ., ಅನಂತತೆ, ಮುಂತಾದ ವಿಚಾರಗಳ ಚರ್ಚೆಯನ್ನು ಬುದ್ಧನು ಪ್ರೋ ಆದ್ದರಿಂದ ಬೌದ್ಧ ಧರ್ಮದಲ್ಲಿ ಆಚಾರಕ್ಕೆ ಬಹಳ ಮಹತ್ವವಿದೆ. ಸ್ವಾರ್ಥದ ತ್ಯಾಜ್ಯ ಹಾಗೂ ಜಗತ್ತಿನ ‘ಶ್ರೇಷ್ಠಹಾದಿ’ಯಲ್ಲಿ ಹಂತಹಂತವಾಗಿ ಮುಂದುವರಿಯುವುದು ಅಂತಿಮ ಅನನ್ಯ ಅನುಭವಕ್ಕೆ ದಾರಿ. ತನ್ನತನವನ್ನು ತ್ಯಜಿಸುವುದು ಇಂತಹ ಶ್ರೇಷ್ಠ ಮಾರ್ಗದ ಪ್ರಾರಂಭವಾದರೆ ನಿರ್ವಾಣವು ಈ ಮಾರ್ಗದ ಕೊನೆಯ ಗುರಿ ಎಂದು ಬೌದ್ಧ ಧರ್ಮವು ಉಪದೇಶಿಸುತ್ತದೆ. ಬೌದ್ಧ ಧರ್ಮದ ಧಾರ್ಮಿಕ ದರ್ಶನವು ‘ತ್ರಿಪೀಠಿಕಾ’ ಗ್ರಂಥದಲ್ಲಿ ಮೂರು ಪ್ರಮುಖ ವಿಭಾಗಗಳಾಗಿ ವಿಂಗಡಿಸಲ್ಪಟ್ಟಿವೆ. ಮಹತ್ವದ ಧಾರ್ಮಿಕ ವಿಚಾರಗಳು ತಾತ್ವಿಕವಾಗಿ ಒಂದೇ ತೆರನಾಗಿದ್ದರೂ ಬೌದ್ಧಧರ್ಮದ ಆಚರಣೆಯು ದೇಶದಿಂದ ದೇಶಕ್ಕೆ ಬದಲಾಗಿದ್ದನ್ನು ನಾವು ಗಮನಿಸಬಹುದು. ಮೂರ್ತಿಪೂಜೆಯನ್ನು ಸ್ವತಃ ಬುದ್ಧನೆಯ ಒಪ್ಪಿಕೊಳ್ಳದಿದ್ದರೂ ಬುದ್ಧನ ನಂತರದ ಶತಮಾನಗಳಲ್ಲಿ ಅವನೆಯ ಸ್ವತಃ ಮೂರ್ತಿಯ ರೂಪದಲ್ಲಿ ಪೂಜಿಸಲ್ಪಟ್ಟಿದ್ದು ಒಂದು ವಿಪರ್ಯಾಸವೆನ್ನಬಹುದು. ಅಂತೆಯೇ ಅನೆಯಕ ಬುದ್ಧರೂ ಹಾಗೂ ಬೌದ್ಧ ಸಂತರೂ ಮುಂದಿನ ಶತಮಾನಗಳಲ್ಲಿ ದೈವೀ ಪಟ್ಟ ಪಡೆದಿರುವುದು ಗಮನಾರ್ಹ.

ಬೌದ್ಧ ಧರ್ಮವು ಸಾಂಪ್ರದಾಯಿಕ ಹಿಂದೂ ಧರ್ಮದ ಆಚಾರ ವಿಚಾರಗಳಿಗೆ ಸಂವಾದಿಯಾಗಿ ಹುಟ್ಟಿಕೊಂಡಿರುವ ನಂಬಿಕೆಯ ವ್ಯವಸ್ಥೆ. ಧರ್ಮದರ್ಶನವು ಕೇವಲ ಕೆಲವೇ ಬುದ್ದಿಜೀವಿಗಳ ಮತ್ತು ಅಧಿಕಾರವುಳ್ಳವರ ಸೊತ್ತೆಂದೂ, ಧಾರ್ಮಿಕ ವಿಧಿ-ವಿಧಾನಗಳು ಸಮಾಜದ ಕೆಳಸ್ತರದ ಜನರಿಗೆ ಸಿಗಲಾರದೆಂದೂ ನಂಬಿದ್ದ ಬುದ್ಧನು ಪರ್ಯಾಯ ನಂಬಿಕೆಯ ವ್ಯವಸ್ಥೆಯನ್ನು ಸಾಮಾನ್ಯರಿಗೆಂದು ತಲುಪಿಸುವಲ್ಲಿ ಯಶಸ್ವಿ ಯಾಗಿದ್ದಾನೆ. ಪ್ರಾರಂಭದ ದಿನಗಳಲ್ಲಿ ಸನಾತನ(ಬ್ರಾಹ್ಮಣ) ನಂಬಿಕೆಯ ಬೌದ್ಧ ಧರ್ಮವನ್ನು ಅಷ್ಟಾಗಿ ವಿರೋಧಿಸದಿದ್ದರೂ ಕ್ರಮೇಣ ವಿರೋಧವು ಪ್ರಬಲವಾಯಿತು. ತುಲನಾತ್ಮಕವಾಗಿ ಮುಚ್ಚಿದ ಸಾಮಾಜಿಕ ಧಾರ್ಮಿಕ ವ್ಯವಸ್ಥೆಯನ್ನು ಹೊಂದಿದ್ದ ಪ್ರಬಲ ಹಿಂದೂ ಧರ್ಮದ ನಡುವೆ ಬೌದ್ಧ ಧರ್ಮವು ಸ್ವತಂತ್ರವಾಗಿ ಬೆಳೆಯುವಲ್ಲಿ ಪೂರ್ಣ ಯಶಸ್ಸನ್ನು ಕಾಣಲಿಲ್ಲ. ಬದಲಾಗಿ ಪೌರ್ವಾತ್ಯ ಸಮಾಜಗಳಾದ ಚೀನ, ಮಲೇಶಿಯಾ, ಇಂಡೋನೆಶಿಯಾ, ಕೊರಿಯಾ, ಜಪಾನ್ ಮುಂತಾದ ಕಡೆಗಳಲ್ಲಿ ನಿಸರ್ಗ ಪೂಜೆ, ಪ್ರಾಣಿ ಪೂಜೆಗಳ ಕಲ್ಪನೆಯ ಧರ್ಮಗಳ ನಡುವೆ ಬೌದ್ಧ ಧರ್ಮವು ತನ್ನ ಆಳವಾದ ವಿಚಾರಗಳಿಂದ ಹೆಚ್ಚು ಶಕ್ತಿಯುತವಾಗಿ ಹರಡಲು, ಉಳಿಯಲು ಹಾಗೂ ಬೆಳೆಯಲು ಸಾಧ್ಯವಾಯಿತು. ಬೌದ್ಧ ಧರ್ಮವು ಹುಟ್ಟಿದ ಭಾರತದಲ್ಲಿ ಈ ಧರ್ಮದ ಅನುಯಾಯಿಗಳು ಕಡಿಮೆ ಸಂಖ್ಯೆಯಲ್ಲಿದ್ದು ‘ಅಲ್ಪಸಂಖ್ಯಾತರೆಂದು’ ಪರಿಗಣಿಸಲ್ಪಡುತ್ತಾರೆ. ಪೂರ್ವದ ಅನೆಯಕ ರಾಷ್ಟ್ರಗಳಲ್ಲಿ ಸಂಖ್ಯೆ. ಶಕ್ತಿ ಮತ್ತು ವರ್ಚಸ್ಸುಗಳ ಕಾರಣದಿಂದ ಬೌದ್ಧ ಧರ್ಮವು ರಾಷ್ಟ್ರಧರ್ಮವಾಗಿ ನೆಲೆಯೂರಲು ಸಾಧ್ಯವಾಯಿತು.