ಧರ್ಮ

ಹರಪ್ಪ ಧರ್ಮ ಹೇಗೆ ಹುಟ್ಟಿ, ಹೇಗೆ ಬೆಳೆಯಿತು ಎಂಬ ಬಗ್ಗೆ ಏನನ್ನೂ ಹೇಳುವುದು ಕಷ್ಟ. ಲಭ್ಯವಿರುವ ಮಾಹಿತಿಯನ್ನಾಧರಿಸಿ, ಸಿಂಧೂ ಸಂಸ್ಕೃತಿಯ ಕಾಲದಲ್ಲಿ ಅನುಸರಿಸುತ್ತಿದ್ದ ಧರ್ಮದ ಸ್ಪಷ್ಟ ಚಿತ್ರವನ್ನು ಕೊಡಲು ವಿದ್ವಾಂಸರು ಪ್ರಯತ್ನಿಸಿದ್ದಾರೆ. ಹರಪ್ಪ ಮತ್ತು ಮೊಹೆಂಜೋದಾರೊಗಳಲ್ಲಿ ಸ್ಮಾರಕಗಳಾಗಿ ಉಳಿದಿರುವ ಕೆಲವು ಕಟ್ಟಡಗಳನ್ನು ದೇವಸ್ಥಾನ ಗಳೆಂದು ಗುರುತಿಸಲಾಗಿದೆ. ಈ ಬಗ್ಗೆ ಮಾಹಿತಿ ದೊರೆತಿರುವುದು ಆಗಿನ ಕಾಲದ ಜೇಡಿಮಣ್ಣಿನ ಸಣ್ಣ ಪ್ರತಿಮೆಗಳು ಹಾಗೂ ಮೊಹರುಗಳ ಮೇಲಿರುವ ಚಿತ್ರಗಳಿಂದ. ಹರಪ್ಪ ಪ್ರದೇಶದಲ್ಲಿ ತುಂಬ ಒಡವೆಗಳನ್ನು ಧರಿಸಿರುವ ಜೇಡಿಮಣ್ಣಿನ ಹೆಣ್ಣು ಪ್ರತಿಮೆಗಳು ಸಾಕಷ್ಟು ದೊರೆತಿವೆ. ಇವುಗಳನ್ನು ಪ್ರಾಚೀನ ಕಾಲದಿಂದಲೂ ಪಶ್ಚಿಮ ಏಷ್ಯಾದಲ್ಲಿ ಪೂಜಿಸುತ್ತಾ ಬಂದಿರುವ ಆದಿಶಕ್ತಿಯೊಂದಿಗೆ ಹೋಲಿಸಲಾಗಿದೆ. ಶಿಶ್ನಪೂಜೆ ಮಾಡುತ್ತಿದ್ದರು ಎಂಬುದಕ್ಕೆ ಸಹಾ ಪುರಾವೆಗಳಿವೆ.

ಮೊಹರುಗಳ ಮೇಲೆ ಸಾಮಾನ್ಯವಾಗಿ ಒಂದು ಧಾರ್ಮಿಕ ನಂಬಿಕೆಯ ಬಗ್ಗೆ ಮಾಹಿತಿ ಸಿಗುತ್ತದೆ. ಅನೇಕ ಧಾರ್ಮಿಕ ಆಚರಣೆಗಳ ಬಗ್ಗೆ ಅವು ತಿಳಿಸುತ್ತವೆ. ಉದಾಹರಣೆಗೆ ಒಂದು ಪ್ರಖ್ಯಾತ ಮೊಹರಿನ ಮೇಲೆ, ಕೊಂಬುಗಳಿರುವ ದೇವತೆಯೊಂದು ಯೋಗ ಭಂಗಿಯಲ್ಲಿ ಕುಳಿತಿದ್ದು, ಅದರ ಸುತ್ತ ಅನೇಕ ಸಂಖ್ಯೆಯಲ್ಲಿ ಪ್ರಾಣಿಗಳಿದ್ದು ಅದನ್ನು ಸರ್ ಜನ್ ಮಾರ್ಷಲ್ ಅವರು ಪಶುಪತಿ ದೇವರು ಎಂದು ಗುರುತಿಸಿದ್ದಾರೆ. ಇನ್ನೊಂದು ಮೊಹರಿನ ಮೇಲೆ ಒಬ್ಬ ಯೋಗಿ ಹಾಗೂ ಹೆಡೆಬಿಚ್ಚಿದ ನಾಗರಹಾವಿನ ಚಿತ್ರವಿದೆ. ಇನ್ನೂ ಅನೇಕ ಮೊಹರುಗಳ ಮೇಲೆ ಆಲ ಅಥವಾ ಇತರ ವೃಕ್ಷದೊಡನೆ ವೃಕ್ಷದೇವತೆಯನ್ನು ಚಿತ್ರಿಸಲಾಗಿದೆ. ಕೆಲವೊಮ್ಮೆ ಪೂಜಿಸುವವರನ್ನೂ ಚಿತ್ರಿಸಿದ್ದಾರೆ. ಕೆಲವು ಮೊಹರುಗಳ ಮೇಲೆ ಸಂಯುಕ್ತ ಪ್ರಾಣಿ ಚಿತ್ರಗಳನ್ನು ತೋರಿಸಲಾಗಿದೆ. ಉದಾಹರಣೆಗೆ ಏಕ ಶೃಂಗಿ ಮತ್ತು ಆನೆ ಅಥವಾ ಮನುಷ್ಯ ಮತ್ತು ಸಿಂಹ. ಅವು ಒಂದು ಪಂಥದ ಚಿತ್ರಗಳಾಗಿರುವ ಸಾಧ್ಯತೆಯಿದೆ. ಆಲದ ಎಲೆ ಅಥವಾ ಸ್ವಸ್ತಿಕ್ ಚಿತ್ರಗಳು ಹರಪ್ಪನ್ನರಿಗೆ ಧಾರ್ಮಿಕ ಪ್ರಾಮುಖ್ಯತೆಯಿದ್ದವುಗಳಾಗಿ ದ್ದವು. ಹರಪ್ಪನ್ ನಾಗರಿಕತೆಯಂತೆಯೇ ಸಿಂಧು ಸಂಸ್ಕೃತಿಯ ಧಾರ್ಮಿಕ ಕರ್ಮಾ ಚರಣೆಯಲ್ಲಿ ನೀರಿಗೆ ಬಹುಮುಖ್ಯ ಸ್ಥಾನವಿದೆ. ಶುಚಿತ್ವಕ್ಕೆ ಹರಪ್ಪ ಜನರು ಅತ್ಯಂತ ಪ್ರಾಮುಖ್ಯತೆಯನ್ನು ನೀಡಿದ್ದರು. ಇದಕ್ಕೆ ಮೊಹೆಂಜೋದಾರೊದ ಬೃಹತ್ ಸ್ನಾನಗೃಹವೇ ಸಾಕ್ಷಿ.

ಕಾಲಿಬಂಗನ್‌ನಲ್ಲಿ ಬೂದಿ ಹಾಗೂ ಪ್ರಾಣಿಗಳ ಮೂಳೆಗಳಿರುವ, ಇಟ್ಟಿಗೆಯ ಅಂಚು ಕಟ್ಟಿರುವ ಹೊಂಡಗಳು ಕಂಡುಬಂದಿವೆ. ಅದನ್ನು ಯಜ್ಞವೇದಿಕೆಯಾಗಿ ಬಳಸಿರಬಹುದೆಂದು ಕಾಣುತ್ತದೆ. ಹರಪ್ಪ ನಾಗರಿಕತೆಯ ವಿವಿಧ ಪ್ರದೇಶಗಳಲ್ಲಿನ ಜನ ಬೇರೆ ಬೇರೆ ರೀತಿಯ ಧಾರ್ಮಿಕ ಆಚರಣೆಗಳನ್ನು ಅನುಸರಿಸುತ್ತಿದ್ದರೆಂಬುದನ್ನು ಇದು ಸೂಚಿಸುತ್ತದೆ. ಹೀಗೆ ಹರಪ್ಪ ನಾಗರಿಕತೆಯ ಕಾಲದಲ್ಲಿ, ವಿಗ್ರಹ ಪೂಜೆ ಹಾಗೂ ವಿಗ್ರಹ ರಹಿತ ಪೂಜೆ ಒಟ್ಟೊಟ್ಟಿಗೆ ಆಚರಣೆಯಲ್ಲಿದ್ದವು.

ಲಿಪಿ ಮತ್ತು ಭಾಷೆ

ಸಿಂಧೂ ಕಾಲದ ಭಾಷೆಯ ಬಗ್ಗೆ ಯಾವುದೇ ನಿಶ್ಚಿತ ಜ್ಞಾನವಿಲ್ಲ ದಿರುವುದು ಸಿಂಧೂ ಲಿಪಿಯನ್ನು ಓದುವುದಕ್ಕೆ ಇರುವ ಅತಿ ದೊಡ್ಡ ಅಡಚಣೆಯಾಗಿದೆ. ವಿದ್ವಾಂಸರು ಸಿಂಧೂ ಭಾಷೆಯನ್ನು ಓದುವ ಹಲವಾರು ಪ್ರಯತ್ನಗಳನ್ನು ಮಾಡಿದ್ದಾರೆ. ಅವರಲ್ಲಿ ಪ್ರತಿಯೊಬ್ಬರೂ ಸಿಂಧೂ ಸಂಸ್ಕೃತಿಯ ಭಾಷೆಯನ್ನು ಓದುವ ಪ್ರಯತ್ನದಲ್ಲಿ ತಮ್ಮದೇ ಆದ ಅತಿ ಮುಖ್ಯ ಸಿದ್ಧಾಂತಗಳನ್ನು ಮುಂದಿಟ್ಟಿದ್ದಾರೆ. ಅವುಗಳಲ್ಲಿ ಅತಿ ಮುಖ್ಯ ಸಿದ್ಧಾಂತಗಳೆಂದರೆ

೧. ಇಂಡೋ ಸುಮೇರಿಯನ್ ಮೂಲ

೨. ಪ್ರೋ ದ್ರವೀಡಿಯನ್

೩. ಇಂಡೋ-ಯುರೋಪಿಯನ್

೪. ಪ್ರೋ-ಬ್ರಾಹ್ಮಿ ಮತ್ತು ಇತ್ಯಾದಿ

ಹಂಟರ್, ಲ್ಯಾಂಗ್ ಡನ್ ಮತ್ತು ಇತರರು ಪರ್ಪೊಲಾ ಮತ್ತು ಅವರ ಸ್ಕಾಂಡಿನೇವಿ ಯನ್ ಸಹೋದ್ಯೋಗಿಗಳು, ಐರಾವತ ಮಹದೇವನ್, ಕಿನ್ನರ್ ಇಲ್ಸನ್ ಮತ್ತು ಎಸ್.ಆರ್.ರಾವ್ ಮತ್ತು ಇತರರು ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಿರುವ ಕೆಲವು ಪ್ರಮುಖ ವಿದ್ವಾಂಸರು. ಸಿಂಧೂ ಲಿಪಿಯನ್ನು ಓದಬಹುದೆಂದು ಹಲವರು ಹೇಳಿದರೂ ಅದನ್ನು ಓದಲಾಗಿಲ್ಲ ಎಂಬುದು ವಾಸ್ತವ ಸಂಗತಿ. ಹೀಗಾಗಿ ಹರಪ್ಪನ್ನರ ಭಾಷೆ ಇದುವರೆವಿಗೂ ನಿಗೂಢವಾಗಿಯೇ ಇದೆ ಮತ್ತು ಹರಪ್ಪನ್ ಲಿಪಿಯನ್ನು ಓದಲು ಸಾಧ್ಯವಾಗುವವರೆಗೆ ನಿಗೂಢವಾಗಿಯೇ ಉಳಿಯುತ್ತದೆ.

ಕಲೆ ಮತ್ತು ಕುಶಲಕಲೆ  

ಹರಪ್ಪ ಸಂಸ್ಕೃತಿಯ ಅತಿ ಮುಖ್ಯ ಸಾಧನೆಯೆಂದರೆ ಕಲೆ ಮತ್ತು ಕುಶಲಕಲೆಗಳ ಕ್ಷೇತ್ರದಲ್ಲಿನ ಅವರ ಸಾಧನೆ. ಏಕೆಂದರೆ ಭಾರತದಲ್ಲಿ ಪ್ಲಾಸ್ಟಿಕ್ ಕಲೆ ಅಭಿವೃದ್ದಿ ಹೊಂದಿದ್ದು ಸಿಂಧೂ ಕಾಲದ ಅನಂತರ, ಕರಕುಶಲಕಲೆ, ತಂತ್ರಜ್ಞಾನ ಮತ್ತು ಕಲೆಗಳ ಎಲ್ಲೆಗಳನ್ನು ನಿಶ್ಚಿತವಾಗಿ ಗುರುತು ಮಾಡುವುದು ಸಾಧ್ಯವಿಲ್ಲದ ಮಾತು. ಅವು ಒಟ್ಟೊಟ್ಟಿಗೆ ಅಸ್ತಿತ್ವ ದಲ್ಲಿರುತ್ತವೆ. ಕಲಾವಸ್ತುಗಳ ಸೂಕ್ಷ್ಮ ಅಧ್ಯಯನದಿಂದ ಸಾಮಾಜಿಕ ಮಲ್ಯಗಳು ಹಾಗೂ ಧಾರ್ಮಿಕ ನಂಬಿಕೆಗಳನ್ನು ನಾವು ಅರ್ಥಮಾಡಿಕೊಳ್ಳಬಹುದು. ಆದರೆ ಪ್ರಬುದ್ಧ ಹರಪ್ಪ ಸಂಸ್ಕೃತಿಯ ಅವಧಿಯಲ್ಲಿನ ಶಿಲ್ಪಗಳು ಕೆಲವೇ ದೊರೆತಿದ್ದು, ಅವುಗಳಲ್ಲಿ ಬಹುಪಾಲು ಭಗ್ನಗೊಂಡಿವೆ.

ಮುಖ್ಯವಾಗಿ ಉತ್ತರ ಮತ್ತು ದಕ್ಷಿಣ ಬಲೂಚಿಸ್ತಾನಗಳಲ್ಲಿ ಇದ್ದ ಏಷ್ಯಾದ ಮೊದಲ ಕೃಷಿ ಸಮುದಾಯ ಹರಪ್ಪ ಕಲೆಯ ಮೇಲೆ ಪ್ರಭಾವ ಬೀರಿದೆ. ಪ್ರಾಥಮಿಕ ಸ್ವರೂಪದ ಕಲೆ ಕಂಡುಬರುವ ಪ್ರಮುಖ ಸ್ಥಳಗಳೆಂದರೆ ಉತ್ತರ ಹಾಗೂ ದಕ್ಷಿಣ ಬಲೂಚಿಸ್ತಾನದ ಜಬ್, ಕುಲ್ಲಿ ಮತ್ತು ಮೇಹಿ ಪ್ರದೇಶಗಳಲ್ಲಿ. ಈ ಎರಡು ಸಂಸ್ಕೃತಿಗಳೂ ಸ್ವತಂತ್ರವಾಗಿ ಒಂದೇ ರೀತಿಯಾಗಿ ಒಂದೇ ಕಾಲದಲ್ಲಿ ಬೆಳೆದು ಬಂದರೂ ಕೊನೆಯಲ್ಲಿ ಪ್ರಚಲಿತವಾಗಿ ಪ್ರಭಾವಿತವಾಗಿದ್ದರೂ ಸಹ ತದನಂತರದಲ್ಲಿ ಅವು ಒಂದು ಸ್ವತಂತ್ರ ಕಲಾ ಪ್ರಕಾರವಾಗಿ ಬೆಳೆದವು.

ಕಲಾವಸ್ತುಗಳನ್ನು ಸಿದ್ಧಪಡಿಸಲು ಅವರು ಬಳಸುತ್ತಿದ್ದ ಕಚ್ಚಾ ಪದಾರ್ಥಗಳೆಂದರೆ ಲೋಹ, ತಾಮ್ರ, ಕಂಚು, ಕಲ್ಲು, ಮರ, ಜೇಡಿಮಣ್ಣು ಹಾಗೂ ಟೆರಕೋಟಾ. ಆ ಅವಧಿಯ ಲೋಹ ಶಿಲ್ಪಗಳನ್ನು ಅಥವಾ ವಸ್ತುಗಳನ್ನು ಅವರು ಅಚ್ಚುಗಳ ಮೂಲಕ ತಯಾರಿಸಿ ಅದಕ್ಕೆ ನುಣುಪು ನೀಡುತ್ತಿದ್ದರು. ಶಿಲಪ್ಪ ಶಿಲ್ಪಗಳನ್ನು ಅಚ್ಚುಗಳ ಸಹಾಯದಿಂದ ಹಾಗೂ ಕೈಗೆಲಸದಿಂದ ತಯಾರಿಸುತ್ತಿದ್ದರು. ಕೆಲವೊಮ್ಮೆ ಎರಡೂ ವಿಧಾನಗಳನ್ನು ಅಳವಡಿಸಿಕೊಂಡು ತಯಾರಿಸುತ್ತಿದ್ದರು.

ಆದರೆ ದುರಾದೃಷ್ಟಾವಶಾತ್, ಉತ್ಖನನದ ಸಮಯದಲ್ಲಿ ಹೊರತೆಗೆದ ಬಹುಪಾಲು ಶಿಲ್ಪಗಳು ಊನಗೊಂಡಿವೆ ಇಲ್ಲವೆ ತುಂಡುತುಂಡಾಗಿವೆ. ಬಹುಪಾಲು ಶಿಲ್ಪಗಳು ಮತ ಶ್ರದ್ಧೆಯ ಮೂರ್ತಿಗಳಾಗಿರುವಂತೆ ಕಂಡುಬರುತ್ತವೆ. ಸಾಮಾನ್ಯವಾಗಿ ಬಳಸುತ್ತಿದ್ದ ಕಲ್ಲು ಗಳೆಂದರೆ ಮೇರಶಿಲೆ, ಸುಣ್ಣಕಲ್ಲು, ಹಾಲುಗಲ್ಲು ಮುಂತಾದವುಗಳು. ಅವುಗಳಲ್ಲಿ ಗಮನ ಸೆಳೆಯುವ ಶಿಲ್ಪಗಳೆಂದರೆ, ಗಡ್ಡವಿರುವ ಮುಖ ಹಾಗೂ ಭುಜಗಳಿರುವ ಶಿಲ್ಪಗಳೂ ಮತ್ತು ಕೂದಲನ್ನು ಗಂಟು ಹಾಕಿರುವ ಅಥವಾ ಹೆಣೆದ ಉದ್ದ ಜಡೆಯಿರುವ ಬಗ್ಗೆ ಕುಳಿತಿರುವ ಅಥವಾ ಮೊಣಕಾಲೂರಿ ಕುಳಿತಿರುವ ಎರಡು ಸಣ್ಣ ಶಿಲ್ಪಗಳೂ ದೊರೆತಿವೆ. ಮನುಷ್ಯರ ಕೆತ್ತನೆ ಚಿತ್ರಗಳಿಗೆ ಹೋಲಿಸಿದರೆ ಪ್ರಾಣಿಗಳ ಕೆತ್ತನೆಗಳು ಅಪರೂಪವೇ.

ಹರಪ್ಪದಲ್ಲಿ ತಲೆ ಮತ್ತು ಕೈಕಾಲುಗಳನ್ನು ಜೋಡಿಸಲು ಅನುಕೂಲವಾಗುವಂತೆ ಹಾಗೂ ಅದರಲ್ಲಿ ಜೋಡಿಸುವ ಒಳಬೆಣೆ ಇರುವ ಕಲ್ಲು ಆಕೃತಿಗಳೂ ದೊರೆತಿವೆ. ಉತ್ತಮ ಮಾದರಿಯಲ್ಲಿ ಈ ಆಕೃತಿಗಳನ್ನು ತಯಾರಿಸಲಾಗಿದೆ. ಮೊಹೆಂಜೋದಾರೊದಲ್ಲಿ ಮುಖ್ಯ ವಾಗಿ ಕಂಚಿನ ಅಚ್ಚು ಆಕೃತಿಗಳು ದೊರೆತಿವೆ. ಇಲ್ಲಿಯವರೆಗೂ ದೊರೆತಿರುವುದರಲ್ಲೆಲ್ಲ ನೃತ್ಯಭಂಗಿಯಲ್ಲಿರುವ ಬಾಲೆ ಅತಿ ಮುಖ್ಯವಾದುದು. ಇದು ೧೧.೫ ಸೆಂಟಿಮೀಟರು ಎತ್ತರವಿದೆ. ತಲೆ ಹಿಂದಕ್ಕೆ ಬಾಗಿದ್ದು ಕಣ್ಣುಗಳು ಕೆಳಗೆ ನೋಡುತ್ತಿವೆ. ಬಲಗೈ ಪೃಷ್ಠದ ಮೇಲಿಟ್ಟು ಎಡಗೈ ತುಂಬ ಬಳೆಗಳಿದ್ದು ಇಳಿಬಿಡಲಾಗಿದೆ. ಕೊರಳಿನ ಕಂಠೀಹಾರ ಉಳಿದು ವಿಗ್ರಹ ನಗ್ನವಾಗಿದೆ ಮತ್ತು ಕೂದಲನ್ನು ಆಕರ್ಷಕವಾಗಿ ಕಟ್ಟಲಾಗಿದೆ.

ಕಂಚಿನ ಪ್ರಾಣಿ ಆಕೃತಿಗಳಲ್ಲಿ ಎಮ್ಮೆ ಮತ್ತು ಟಗರಿನ ಆಕೃತಿಗಳು ಗಣನೀಯ. ಆಟದ ಎತ್ತಿನಗಾಡಿಗಳು ಹಾಗೂ ಇತರ ಸಣ್ಣ ಆಟದ ವಸ್ತುಗಳೂ ದೊರೆತಿವೆ. ಗಟ್ಟಿ ಜೇಡಿಮಣ್ಣಿನ ಸಣ್ಣ ಪ್ರತಿಮೆಗಳು ಸಿಕ್ಕಿವೆ. ಅವುಗಳನ್ನು ಆಟದ ವಸ್ತುಗಳನ್ನಾಗಿ ಹಾಗೂ ಉಪಾಸನೆಯ ವಸ್ತುಗಳನ್ನಾಗಿ ಬಳಸುತ್ತಿದ್ದರು. ಈ ಪ್ರತಿಮೆಗಳನ್ನು ಕೈಯಿಂದ ಮಾಡಲಾಗಿದೆ. ಕೆಲವನ್ನು ಒಂದೇ ಅಚ್ಚಿನಲ್ಲಿ ಮಾಡಲಾಗಿದೆ. ಮನುಷ್ಯಾಕೃತಿಗಳು ಪ್ರಾಣಿ ಆಕೃತಿಗಳು ತಮ್ಮದೇ ಆದ ಶೈಲಿ ಮತ್ತು ರೀತಿಯಿಂದ ವಿಶಿಷ್ಟವಾಗಿವೆ. ಗಟ್ಟಿ ಜೇಡಿಮಣ್ಣಿನ ಪ್ರತಿಮೆಗಳಲ್ಲಿ ವಿವಿಧ ಪಕ್ಷಿಗಳು ಹಾಗೂ ಕೋತಿ, ನಾಯಿ, ಕುರಿ ಹಾಗೂ ಜನುವಾರುಗಳೂ ಸೇರಿದಂತೆ ಅನೇಕ ಬಗೆಯ ಪ್ರಾಣಿಗಳಿವೆ. ಡುಬ್ಬವಿರುವ ಹಾಗೂ ಇಲ್ಲದಿರುವ ಗೂಳಿಗಳೂ ಕಂಡುಬಂದಿವೆ. ಅವುಗಳನ್ನು ಉತ್ತಮ ರೀತಿಯಲ್ಲಿ ತಯಾರಿಸಲಾಗಿದೆ.

ಅನೇಕ ಸ್ತ್ರೀ ಪುರುಷರ ಪ್ರತಿಮೆಗಳೂ ದೊರೆತಿವೆ. ಹೆಣ್ಣು ಪ್ರತಿಮೆಗಳಿಗೆ ಅತಿಯಾಗಿ ಒಡವೆಗಳನ್ನು ಬಿಡಿಸಲಾಗಿದ್ದು, ಅಂಗಗಳು ಪ್ರಮುಖವಾಗಿ ಎದ್ದು ಕಾಣುವ ರೀತಿಯಲ್ಲಿ ರಚಿಸಲಾಗಿದೆ. ಇವು ಸ್ತ್ರೀ ದೇವತೆಯನ್ನು ಪ್ರತಿನಿಧಿಸುವ ಪ್ರತಿಮೆಗಳಿರಬೇಕೆಂದು ಗುರುತಿಸಲಾಗಿದೆ. ಇನ್ನೂ ಕೆಲವು ಸ್ತ್ರೀ ಪ್ರತಿಮೆಗಳಿಗೆ ಅಲಂಕಾರಿಕವಾದ ತಲೆಮುಡಿಗೆ ತೊಡಿಸಿ ಒಡವೆಗಳನ್ನು ಬಿಡಿಸಲಾಗಿದೆ. ಗಟ್ಟಿ ಜೇಡಿಮಣ್ಣಿನ ಅನೇಕ ಆಟದ ಬಂಡಿಗಳೂ ದೊರೆತಿವೆ.

ಮೊಹರುಗಳು

ಇವು ಹರಪ್ಪ ಕಲೆಯ ಅತಿ ಮುಖ್ಯ ಜೀವಂತ ಉದಾಹರಣೆಗಳಾಗಿವೆ. ಇಲ್ಲಿಯವರೆಗೆ ೨೦೦ಕ್ಕೂ ಹೆಚ್ಚಿನ ಮೊಹರುಗಳು ದೊರೆತಿವೆ. ಈ ಬಹುಪಾಲು ಮೊಹರುಗಳ ಮೇಲೆ ಸಂಕ್ಷಿಪ್ತವಾದ ಕೆಲವು ಮಾತುಗಳಿದ್ದು, ಪ್ರಾಣಿ ಚಿತ್ರವನ್ನು ಕೆತ್ತಲಾಗಿದೆ, ಇದರಲ್ಲಿ ಕಾಣುವ ಸಾಮಾನ್ಯ ಚಿತ್ರವೆಂದರೆ ಡುಬ್ಬವಿರುವ ಗೂಳಿಯ ಪಾರ್ಶ್ವ ನೋಟ. ಇದನ್ನು ಕುದುರೆಯ ಮೈಯೂ ಒಂದೇ ನೇರ ಕೊಂಬೂ ಇರುವ ಗ್ರೀಕ್ ಪುರಾಣ ಪ್ರಸಿದ್ಧವಾದ ಏಕಶೃಂಗಿಯ ಚಿತ್ರವೆಂದು ಗುರುತಿಸಲಾಗಿದೆ; ಮೊಹರುಗಳ ಮೇಲಿರುವ ಇತರ ಪ್ರಾಣಿಗಳ ಚಿತ್ರಗಳೆಂದರೆ ಆನೆ, ಕಾಡೆಮ್ಮೆ, ಫೆಂಡಾಮೃಗ ಹಾಗೂ ಹುಲಿ. ಇವನ್ನು ಉತ್ತಮ ರೀತಿಯಲ್ಲಿ ತಯಾರಿಸ ಲಾಗಿದ್ದು ಪ್ರಾಣಿಗಳ ಚಿತ್ರವನ್ನು ಬಿಡಿಸಿರುವುದರಲ್ಲೂ ಸಾಕಷ್ಟು ನೈಪುಣ್ಯ ಕಾಣುತ್ತದೆ.

ಆ ಅವಧಿಯಲ್ಲಿ, ದೊರೆತಿರುವ ಚಿನ್ನದ ಗುಂಡುಗಳು ಹಾಗೂ ಒಡವೆಗಳೂ ಸಹ ಆ ಕಾಲದ ಕಲಾತ್ಮಕ ಸಾಧನೆಯ ಸಾಕ್ಷಿಗಳಾಗಿವೆ. ಹರಪ್ಪನ್ನರು ಪ್ರಶಸ್ತ ಹಾಗೂ ಅರೆ ಪ್ರಶಸ್ತ ಕಲ್ಲುಗಳನ್ನು ಬಳಸಿ ಅನೇಕ ಬಗೆಯ ಮಣಿಗಳನ್ನು ತಯಾರಿಸಿದ್ದಾರೆ. ಉದಾಹರಣೆಗೆ ವೈಢೂರ್ಯ, ನೀಲ, ಹಸಿರು ಹವಳಗಲ್ಲು, ಮೇದುಶಿಲ ಮತ್ತು ಮುಂತಾದವುಗಳು. ಚನುದಾರೊ ಮತ್ತು ಲೋಥಲ್ ಪಟ್ಟಣಗಳಲ್ಲಿ ಮಣಿ ತಯಾರಕರ ಕಾರ್ಯಾಗಾರಗಳು ಇದ್ದವೆಂಬುದಕ್ಕೆ ಸಾಕ್ಷಿ ದೊರೆತಿದೆ. ಹೀಗೆ ಹರಪ್ಪನ್ನರ ಕಲೆ ಸ್ವಾಭಾವಿಕವಾಗಿ ದೊರೆಯುವ ವಸ್ತುಗಳಿಂದ ಮಾಡಿ ನಿರ್ಮಿತಿಗಳಿಗೆ ಪ್ರಸಿದ್ಧವಾಗಿತ್ತು.

ತಂತ್ರಜ್ಞಾ

ಸಿಂಧು ಸಂಸ್ಕೃತಿಯ ಬೇರೆ ಬೇರೆ ಸ್ಥಳಗಳಲ್ಲಿ ಕುಂಬಾರರು, ಕಲ್ಲು ಕೆಲಸಗಾರರು, ಮೊಹರು ತಯಾರಿಕೆಯ ಕಮ್ಮಾರರಂಥ ಅನೇಕ ಪರಿಣತ ಕುಶಲಕರ್ಮಿಗಳ ತಂಡಗಳಿದ್ದ ವೆಂಬುದು ಕಂಡುಬಂದಿದೆ.

ಪ್ರಬುದ್ಧ ಹರಪ್ಪನ್ನರ ಕಾಲದಲ್ಲಿ ತಾಮ್ರ ಹಾಗೂ ಕಂಚು ತಂತ್ರಜ್ಞಾನ ಉತ್ತಮ ರೀತಿ ಯಲ್ಲಿ ಅಭಿವೃದ್ದಿಗೊಂಡಿತ್ತು. ಚಪ್ಪಟೆ, ಕೊಡಲಿ, ಉಳಿ, ಚಾಕು, ಈಟಿಮೊನೆ, ಅಂಬಿನ ತಲೆ ಹಾಗೂ ಸಣ್ಣ ಗರಗಸಗಳಂಥ ಅಗತ್ಯ ಆಯುಧಗಳನ್ನು ಎರಕ ಹೊಯ್ಯುವ ಮೂಲಕ ಅಥವಾ ಉಳಿಯಿಂದ ಕೆತ್ತುವ ಹಾಗೂ ಸುತ್ತಿಗೆಯಿಂದ ಹೊಡೆಯುವ ಮೂಲಕ ತಯಾರಿಸಲಾಗುತ್ತಿತ್ತು.

ದೊರೆತಿರುವ ತಾಮ್ರ ಹಾಗೂ ಕಂಚಿನ ಪಾತ್ರೆಗಳಿಂದಲೂ ಸಹ ಆಗಿನ ಕಾಲದವರ ನೈಪುಣ್ಯತೆ ತಿಳಿದುಬರುತ್ತದೆ. ತಾಮ್ರ ಹಾಗೂ ಕಂಚನ್ನು ಎರಕ ಹೊಯ್ದು ವಸ್ತುಗಳನ್ನು ತಯಾರಿಸುತ್ತಿದ್ದರೆಂಬುದನ್ನು ನೋಡಿದಾಗ ಸಿಂಧೂ ಸಂಸ್ಕೃತಿಯ ಕಾಲದಲ್ಲಿದ್ದ ಜನರು ತಂತ್ರಜ್ಞಾನವನ್ನು ಚೆನ್ನಾಗಿ ಅರಿತಿದ್ದರೆಂಬುದನ್ನು ತಿಳಿಯಬಹುದು. ಲೋಹದಷ್ಟೇ ವ್ಯಾಪಕ ವಾಗಿ ಕಲ್ಲನ್ನೂ ಅವರು ಬಳಸಿದ್ದಾರೆ. ಅದರಲ್ಲಿ ತಯಾರಿಸಿದ ವಸ್ತುಗಳೆಂದರೆ ವಿವಿಧ ರೀತಿಯ ಉದ್ದನೆಯ ಕತ್ತಿಗಳು, ಆಲಗುಗಳು.

ಸಿಂಧು ಕಾಲದ ಮಣ್ಣಿನ ಸಾಮಾನುಗಳಲ್ಲಿ ಬಲೂಚಿಸ್ತಾನದ ಮತ್ತು ಭಾರತದ(ಕಾಲಿ ಬಂಗನ್) ಸಂಪ್ರದಾಯಗಳ ಮಿಶ್ರಣವನ್ನು ಕಾಣಬಹುದು. ಈ ಕಾಲದ ಮಣ್ಣಿನ ಸಾಮಾನು ಗಳನ್ನು ತಿಗುರಿಯನ್ನು ಬಳಸಿ ಮಾಡಿದವುಗಳಾಗಿವೆ. ಬಹುಪಾಲು ಮಣ್ಣಿನ ಸಾಮಾನು ಸಾದಾ ಸ್ವರೂಪದವು ಮತ್ತು ಬಹುಪಾಲು ಮಣ್ಣಿನ ಸಾಮಾನುಗಳ ಮೇಲೆ ಕೆಂಬಣ್ಣದ ಉದ್ದ ಪಟ್ಟಿಗಳಿದ್ದು ಕಪ್ಪು ಬಣ್ಣದಲ್ಲಿ ಅಲಂಕರಿಸಲಾಗಿದೆ. ಸಿಂಧೂ ಕಾಲದ ಮಣ್ಣಿನ ಸಾಮಾನುಗಳು ಕೆಂಬಣ್ಣದ ಮೇಲೆ ಕಪ್ಪು ಬಣ್ಣವಿರುವ ಸಾಮಾನುಗಳೆಂದೇ ಪ್ರಸಿದ್ದಿ. ಅವುಗಳ ಮೇಲೆ ಸಾಮಾನ್ಯವಾಗಿ ಜಮಿತಿಯ ವಿನ್ಯಾಸಗಳು, ಹಕ್ಕಿಗಳು, ಮೀನು, ಪ್ರಾಣಿಗಳು, ಗಿಡ ಮರಗಳು, ಆಲದೆಲೆಗಳಂಥ ಪ್ರಾಕೃತಿಕ ಚಿತ್ರಗಳು ಮತ್ತು ಮೀನುಗಳ ಚರ್ಮದ ವಿನ್ಯಾಸ, ಚುಕ್ಕಿಗಳು, ವಿವಿಧ ವಿನ್ಯಾಸದ ವೃತ್ತಗಳು ಮುಂತಾದವನ್ನು ಬಿಡಿಸಲಾಗಿದೆ. ಕೆಲವೊಂದು ದಂತ ಕೆತ್ತನೆಗಳೂ ಉತ್ಖನನ ಕಾಲದಲ್ಲಿ ದೊರೆತಿವೆಯೆಂದು ವರದಿ ಯಾಗಿದೆ. ಇವುಗಳಲ್ಲಿ ಬಾಚಣಿಗೆಗಳು, ಅಳತೆಪಟ್ಟಿ ಹಾಗೂ ಚದುರಂಗದ ಕಾಯಿಗಳೂ ಮುಂತಾದವುಗಳಿವೆ. ನೇಯ್ಗೆ ಈ ಅವಧಿಯ ಪ್ರಮುಖವಾದ ಹಾಗೂ ಸಾಮಾನ್ಯವಾಗಿ ಕಂಡುಬಂದಿರುವಂಥ ಕುಶಲಕಲೆ.

ಶವಸಂಸ್ಕಾರ ಪದ್ಧತಿಗಳು  

ಹರಪ್ಪನ್ನರ ಸ್ಮಶಾನಗಳು ಜನವಸತಿಯಿಂದ ದೂರ ಊರ ಹೊರಗೆ ಇರುತ್ತಿದ್ದವು. ಮೊಹೆಂಜೋದಾರೊ, ಹರಪ್ಪ, ಲೋಥಲ್ ಮತ್ತು ಕಾಲಿಬಂಗನ್‌ಗಳಲ್ಲಿ ಅನೇಕ ಸ್ಮಶಾನ ಗಳಿದ್ದುದು ವರದಿಯಾಗಿದೆ. ಮುಖ್ಯವಾಗಿ, ದೇಹವನ್ನು ನೀಳವಾಗಿರಿಸಿ ಉತ್ತರಾಭಿಮುಖ ವಾಗಿ ಹೂಳುವ ಶವಸಂಸ್ಕಾರ ಪದ್ಧತಿಯಿದ್ದುದು ಕಂಡುಬಂದಿದೆ. ಮಣ್ಣಿನ ಪಾತ್ರೆಗಳು, ಒಡವೆಗಳು, ತಾಮ್ರ ಹಾಗೂ ಕಂಚಿನ ಅನೇಕ ವಸ್ತುಗಳೊಡನೆ ಹೆಣವನ್ನು ಹೂಳುತ್ತಿದ್ದರು. ಕಾಲಿಬಂಗನ್‌ನಲ್ಲಿ ಇನ್ನೆರಡು ರೀತಿಯ ಹೆಣ ಹೂಳುವ ಪದ್ಧತಿ ಕಂಡುಬಂದಿದೆ.

೧. ಇತರ ಮಣ್ಣಿನ ಸಾಮಾನುಗಳೊಡನೆ ದೊಡ್ಡ ಗಾತ್ರದ ಗಡಿಗೆಗಳಿರುವ ಆದರೆ ಅಸ್ಥಿ ಪಂಜರದ ಉಳಿಕೆಗಳಿಲ್ಲದ ವೃತ್ತಾಕಾರದ ಚಿಕ್ಕ ಗುಂಡಿಗಳು.

೨. ಸಂಗ್ರಹಿಸಿದ ಮೂಳೆಯ ಉಳಿಕೆಗಳಿರುವ ಹೆಚ್ಚು ಸಾಂಪ್ರದಾಯಿಕ ರೀತಿಯ ಹೆಣ ಹೂಳುವ ಗುಂಡಿಗಳು.

ಸ್ತ್ರೀ ಹಾಗೂ ಪುರುಷ ಅಸ್ತಿಪಂಜರಗಳನ್ನು ಜೋಡಿಯಾಗಿ ಒಂದೇ ಗೋರಿಯಲ್ಲಿ ಮಣ್ಣು ಮಾಡಿರುವ ಇನ್ನೊಂದು ಬಗೆಯ ಪದ್ಧತಿಯ ಅನೇಕ ಉದಾಹರಣೆಗಳು ಲೋಥಲ್‌ನಲ್ಲಿ ದೊರೆತಿವೆ.

ಕಾಲಗಣನೆ  

ಹರಪ್ಪನ್ ನಾಗರಿಕತೆಯ ಕಾಲವನ್ನು ಕಂಡುಹಿಡಿಯಲು ಎರಡು ವಿಧಾನಗಳನ್ನು ಅನುಸರಿಸಲಾಗಿದೆ.

೧. ತೌಲನಿಕ ಕಾಲಗಣನೆ ಪದ್ಧತಿ

೨. ವೈಜ್ಞಾನಿಕ ಕಾಲಗಣನೆ ಪದ್ಧತಿ

ಸಿಂಧೂ ನಾಗರೀಕತೆಯ ಬಗೆಗೆ ಪ್ರಾರಂಭದಲ್ಲಿ ಕೆಲಸ ಮಾಡಿದ ವಿದ್ವಾಂಸರಾದ ಜನ್ ಮಾರ್ಷಲ್ ಮತ್ತು ಜೆ.ಗಡ್ ಅವರು ತೌಲನಿಕ ಕಾಲಗಣನೆ ಪದ್ಧತಿಯನ್ನು ಅನುಸರಿಸಿದರು. ಮೆಸಪಟೋಮಿಯ ನಾಗರಿಕತೆಯೊಂದಿಗೆ ಸಾಮಾನ್ಯವಾಗಿ ಹೊಂದುವ ಕಾಲದ ಆಧಾರದ ಮೇಲೆ ಅದರ ನಿರ್ಧಾರ ಸಿದ್ಧಾಂತ ರೂಪುಗೊಂಡಿತ್ತು. ಹೀಗೆ, ಅದರ ಕಾಲ ಕ್ರಿಸ್ತ ಪೂರ್ವ ೨೫೦೦-೧೫೦೦ರವರೆಗಿನ ಒಟ್ಟು ಅವಧಿಯಿರಬಹುದೆಂಬ ಬಗ್ಗೆ ಸಾಮಾನ್ಯ ಒಪ್ಪಿಗೆಯಿತ್ತು. ಕ್ರಿ.ಪೂ.೨೩೦೦ರಿಂದ ೨೦೦೦ ಇಸವಿಯ ನಡುವೆ ಮೆಸಪಟೋಮಿಯಾ ಜೊತೆ ಮುಖ್ಯ ವ್ಯಾಪಾರ ವ್ಯವಹಾರಗಳನ್ನು ಹೊಂದಿದ್ದ ಈ ನಾಗರಿಕತೆಯ ಕೊನೆಯನ್ನು ಸುಮಾರು ಕ್ರಿ.ಪೂ.೧೮೦೦ ಎಂದು ಹೇಳಲಾಗಿದೆ. ೧೯೬೪ರಲ್ಲಿ ಡಿ.ಪಿ.ಅಗರ್‌ವಾಲ್ ಎಂಬುವರು ರೇಡಿಯೋ-ಕಾರ್ಬನ್ ಡೇಟಿಂಗ್ ಎಂಬ ವೈಜ್ಞಾನಿಕ ರೀತಿಯ ಕಾಲಗಣನೆಯನ್ನು ಮಾಡಿ ಈ ಸಂಸ್ಕೃತಿಯ ಒಟ್ಟು ಕಾಲಾವಧಿಯು ಸುಮಾರು ಕ್ರಿಸ್ತಪೂರ್ವ ೨೩೦೦ರಿಂದ ೧೭೫೦ ಎಂದು ಹೇಳಿದ್ದಾರೆ. ಗ್ರಾಂಥಿಕ ಆಧಾರಗಳನ್ನು ಆಧರಿಸಿ ಎಂದರೆ ಮೆಲುಹಾ(ಸಿಂಧೂ ಕಣಿವೆ), ದಿಲ್ಮನ್ (ಪರ್ಷಿಯನ್ ಕೊಲ್ಲಿ) ಮತ್ತು ಮಗನ್(ಮಕ್ರನ್ ಕರಾವಳಿ)ಗಳಿಂದ ಮೆಸಪಟೋ ಮಿಯಕ್ಕೆ ಆಮದು ಮಾಡಿಕೊಂಡ ಉಲ್ಲೇಖಗಳನ್ನು ಆಧರಿಸಿ ಇನ್ನೊಂದು ರೀತಿಯಲ್ಲೂ ಕಾಲಗಣನೆ ಮಾಡಿದ್ದಾರೆ. ಹೀಗೆ ಇದರಿಂದ ಪ್ರಬುದ್ಧ ಹರಪ್ಪ ಸಂಸ್ಕೃತಿಯ ಕಾಲವನ್ನು ಕ್ರಿಸ್ತಪೂರ್ವ ೨೫೦೦ರಿಂದ ೨೦೦೦ ಎಂದು ಹೇಳಲಾಗಿದೆ.

ಅವನತಿ  

ಹರಪ್ಪ ನಾಗರಿಕತೆಯ ಅವನತಿಯನ್ನು ಕುರಿತಂತೆ ವಿದ್ವಾಂಸರು ಅನೇಕ ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಮೊಹೆಂಜೋದಾರೊ, ಹರಪ್ಪ ಮತ್ತು ಕಾಲಿಬಂಗನ್ ಗಳು ನಗರ ಯೋಜನೆ ಮತ್ತು ಗೃಹ ನಿರ್ಮಾಣದಲ್ಲಿ ಕ್ರಮೇಣ ಅವನತಿ ಹೊಂದಿರುವುದು ಆ ನಗರಗಳ ಸೂಕ್ಷ್ಮ ಅಧ್ಯಯನದಿಂದ ತಿಳಿದುಬರುತ್ತದೆ. ಮುಂದೆ ಮೆಹೆಂಜೋದಾರೊ ಮತ್ತು ಹರಪ್ಪ ವಸಾಹತು ಗಳನ್ನು ತ್ಯಜಿಸಲಾಯಿತು. ಆದರೆ ಇತರ ಬಹುಪಾಲು ಕಡೆಗಳಲ್ಲಿ ಜನ ವಾಸಿಸುವುದನ್ನು ಮುಂದುವರೆಸಿದರೂ, ಬರಹ, ಏಕರೂಪದ ತೂಕಗಳು, ಮಣ್ಣಿನ ಸಾಮಾನುಗಳು, ವಾಸ್ತು ಶಿಲ್ಪದ ಶೈಲಿಯಂಥ ಹರಪ್ಪನ್ ನಾಗರಿಕತೆಗೆ ವಿಶೇಷವಾದ ಕೆಲವು ಮುಖ್ಯ ಲಕ್ಷಣಗಳು ಕಣ್ಮರೆಯಾದವು. ಈ ಕಣ್ಮರೆ ಹರಪ್ಪ ನಾಗರಿಕತೆ ಅವನತಿ ಹೊಂದಿದ್ದರ ಲಕ್ಷಣ ಎಂದು ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ. ಇದಕ್ಕೆ ಮುಂಚೆ ಸಿಂಧೂ ನಾಗರಿಕತೆ ಇದ್ದಕ್ಕಿದ್ದಂತೆ ನಾಟಕೀಯವಾಗಿ ಅವನತಿ ಹೊಂದಿತು ಎಂದು ವಿದ್ವಾಂಸರು ನಂಬಿದ್ದರು. ಹೀಗಾಗಿ ಅವರು ನಗರ ಸಮುದಾಯವನ್ನೇ ನಿರ್ಮೂಲ ಮಾಡಿದಂಥ ವಿಪರೀತ ಘಟನೆ ಯಾವುದು ಎಂಬ ಬಗ್ಗೆ ಯೋಚಿಸುತ್ತಿದ್ದರು. ಸಿಂಧು ನಾಗರಿಕತೆಯ ಅವನತಿಗೆ ಕೊಟ್ಟಿರುವ ಮೂರು ಮುಖ್ಯ ಕಾರಣಗಳೆಂದರೆ

೧. ನೈಸರ್ಗಿಕ ವಿಕೋಪದಿಂದಾಗಿ ವಿನಾಶ

೨. ನಾಕರಿಕತೆಯನ್ನು ನಾಶಗೊಳಿಸಿದಂಥ ಪೈಶಾಚಿಕ ಆಕ್ರಮಣ

೩. ಪರಿಸರ ನಾಶ

ನೈಸರ್ಗಿಕ ವಿಕೋಪದ ಸಿದ್ಧಾಂತಕ್ಕೆ ಬೆಂಬಲವಾಗಿ ಮೊಹೆಂಜೋದಾರೊದ ಪ್ರವಾಹ ವನ್ನು ಅನೇಕರು ಬಳಸಿದ್ದಾರೆ. ಅದು ಅನೇಕ ಪ್ರವಾಹಗಳನ್ನು ಎದುರಿಸಿದ್ದು ಅದರಲ್ಲಿ ಕೆಲವು ಅತ್ಯಂತ ವಿನಾಶಕಾರಿಯಾಗಿದ್ದಿರಬೇಕೆಂದು ಕಂಡುಬಂದಿದೆ. ಸಿಂಧೂ ನದಿಯ ದಡದಲ್ಲಿ ನೆಲೆಸಿದ್ದ ನಗರಗಳಲ್ಲಿ ಬಂದ ಪ್ರವಾಹದ ಕಾರಣದಿಂದಾಗಿ ಸಿಂಧೂ ನಾಗರಿಕತೆ ಅವನತಿ ಹೊಂದಿತು ಎಂಬುದಾಗಿ ಕೆಲವು ವಿದ್ವಾಂಸರು ವಾದಿಸಿದ್ದಾರೆ. ಎರಡನೆಯದಾಗಿ ಕರಾವಳಿ ಪ್ರದೇಶಗಳು ಉತ್ಕರ್ಷ ಹೊಂದಿದುದರಿಂದ ಅದು ಸಿಂಧೂ ನಗರಗಳ ನಾಶಕ್ಕೆ ಹಾಗೂ ನದಿ ಮತ್ತು ಕರಾವಳಿ ಸಂಪರ್ಕವನ್ನು ಆಧರಿಸಿದ್ದ ಉದಾಹರಣೆಗೆ ಲೋಥಲ್ ನಗರಗಳ ಅವನತಿಗೆ ಕಾರಣವಾಗಿರಬೇಕೆಂದು ಹೇಳಲಾಗಿದೆ. ಸಿಂಧೂ ನಾಗರಿಕತೆ ನಾಶವಾಗಲು ಪ್ರವಾಹ ಕಾರಣ ಎಂಬ ಸಿದ್ಧಾಂತಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮತ್ತೊಂದು ವಿದ್ವಾಂಸರ ಗುಂಪಿನ ಅಭಿಪ್ರಾಯದಂತೆ ಸಿಂಧೂ ನದಿಯ ಮಾರ್ಗ ಬದಲಾವಣೆ ಮೊಹೆಂಜೋದಾರೊದ ಅವನತಿಗೆ ಕಾರಣ ಎನ್ನಲಾಗಿದೆ.

ಎರಡನೆಯ ಸಿದ್ಧಾಂತವನ್ನು ಮಂಡಿಸಿದವನು ಮಾರ್ಟಿಮರ್ ವ್ಹೀಲರ್ ಎಂಬಾತ. ಆರ್ಯರ ಆಕ್ರಮಣದಿಂದಾಗಿ ಸಿಂಧೂ ನಾಗರಿಕತೆ ನಾಶವಾಯಿತು ಎಂಬುದು ಇವನ ಅಭಿಪ್ರಾಯ. ಉತ್ಖನನ ಕಾಲದಲ್ಲಿ, ಸರಿಯಾಗಿ ಹೂಳದೇ ರಸ್ತೆಗಳಲ್ಲಿ ಬಿದ್ದಿದ್ದ ಮಾನವ ಅಸ್ಥಿಪಂಜರಗಳು ಮೊಹೆಂಜೋದಾರೊದಲ್ಲಿ ದೊರೆತಿರುವುದು ಇದಕ್ಕೆ ಸಾಕ್ಷಿ ಎನ್ನುತ್ತಾನೆ. ಆದರೆ ಈ ಅಸ್ಥಿಪಂಜರಗಳು ಒಂದೇ ಪದರದಲ್ಲಿ ದೊರೆತಿಲ್ಲ. ಎರಡನೆಯದಾಗಿ, ಮೆಹೆಂಜೋದಾರೊ ನಿರ್ವಸಿತವಾಗಿರುವುದು ಕ್ರಿಸ್ತಪೂರ್ವ ೧೮೦೦ರಲ್ಲಿ, ಆರ್ಯನ್ನರು ಭಾರತಕ್ಕೆ ಬಂದದ್ದು ಕ್ರಿಸ್ತಪೂರ್ವ ೧೨೦೦ರಲ್ಲಿ. ಆದ್ದರಿಂದ ಸಿಂಧು ನಾಗಕರಿಕತೆಯ ಅಂತ್ಯಕ್ಕೆ ಆರ್ಯನ್ನರು ಕಾರಣ ಎಂದು ಹೇಳಲಾಗುವುದಿಲ್ಲ.

ಫೇರ್ ಸರ್ವಿಸ್‌ನಂಥ ಲೇಖಖರು ಹರಪ್ಪ ನಾಗರಿಕತೆ ಅವನತಿ ಹೊಂದುವುದಕ್ಕೆ ಜೀವಿ ಪರಿಸ್ಥಿತಿ ಸಮಸ್ಯೆಗಳು ಕಾರಣ ಎಂದು ನಿರೂಪಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಹರಪ್ಪ ನಗರವಾಸಿಗಳು ತಮ್ಮ ಸೂಕ್ಷ್ಮ ಪರಿಸರವನ್ನು ಹಾಳು ಮಾಡಿದರು ಎಂದು ಅವನು ನಂಬುತ್ತಾನೆ. ಮಾನವ ಹಾಗೂ ಪ್ರಾಣಿಗಳಲ್ಲಿ ಹೆಚ್ಚಿದ ಸಂಖ್ಯೆಯಿಂದಾಗಿ ಸಂಪನ್ಮೂಲಗಳ ಕೊರತೆಯುಂಟಾದಾಗ ಭೂಭಾಗ ನಶಿಸಿರಬೇಕು. ಅರಣ್ಯಗಳು ಹಾಗೂ ಹಸಿರು ಹೊದಿಕೆ ನಾಶವಾಗಿರಬೇಕು. ಅತಿವೃಷ್ಟಿ ಅನಾವೃಷ್ಟಿಗಳುಂಟಾಗಿರಬೇಕು. ಇವುಗಳಿಂದುಂಟಾದ ಒತ್ತಡದಿಂದಾಗಿ ಕೊನೆಗೆ ನಗರ ಸಂಸ್ಕೃತಿ ಕುಸಿಯಿತು. ಈ ಸಿದ್ಧಾಂತವನ್ನು ಸಹ ಸಂಪೂರ್ಣ ವಾಗಿ ಒಪ್ಪಲು ಸಾಧ್ಯವಾಗುವುದಿಲ್ಲ. ಏಕೆಂದರೆ ಲಕ್ಷಾಂತರ ವರ್ಷಗಳಿಂದ ಉಳಿದುಬಂದಿರುವ ಭಾರತ ಉಪಖಂಡದ ಮಣ್ಣಿನ ಫಲವತ್ತತೆ ಈ ಊಹೆಯನ್ನು ತಳ್ಳಿ ಹಾಕುತ್ತದೆ.

ನಗರಗಳು, ಪಟ್ಟಣಗಳು, ಗ್ರಾಮಗಳು ಸಮುದಾಯಗಳು, ಕೃಷಿ ಸಮುದಾಯ ಹಾಗೂ ಅಲೆಮಾರಿ ಸಮುದಾಯಗಳು ಇವುಗಳ ನಡುವಿನ ಸಂಬಂಧದ ಸೂಕ್ಷ್ಮ ಸಮತೋಲನ ನಗರದ ಅಸ್ತಿತ್ವವನ್ನು ನಿಯಂತ್ರಿಸುತ್ತದೆ. ವ್ಯಾಪಾರಕ್ಕೆ ಮುಖ್ಯವಾಗಿರುವ ಅನೇಕ ಖನಿಜ ಗಳನ್ನು ಹೊಂದಿರುವ ನೆರೆಯ ಪ್ರದೇಶದ ನಡುವಿನ ಸಂಬಂಧ ಕಡಿದು ಹೋಗಬಹು ದಾದಂಥಹುದಾದರೂ ಅದು ಇಲ್ಲಿ ಮುಖ್ಯಪಾತ್ರವಹಿಸುತ್ತದೆ. ಹಾಗೆಯೇ, ಸಮಕಾಲೀನ ನಾಗರಿಕತೆಗಳೊಡನೆ ಸಂಪರ್ಕವಿರಿಸಿಕೊಳ್ಳುವುದೂ ಮುಖ್ಯವಾಗುತ್ತದೆ. ಈ ಸಂಬಂಧಗಳ ಸರಪಣಿಯ ಯಾವುದೇ ಕೊಂಡಿ ಕಳಚಿದರೂ ಅದು ನಗರಗಳ ಅವನತಿಗೆ ಕಾರಣವಾಗ ಬಹುದು.

ಸಿಂಧೂ ನಾಗರಿಕತೆಯ ಅವನತಿಗೆ ಕಾರಣಗಳನ್ನು ವಿಶ್ಲೇಷಿಸಿದಾಗ ಅದು ನಾಕರಿಕತೆಯ ಅವನತಿ ಅಥವಾ ಕಣ್ಮರೆ ಅಲ್ಲ. ಅದು ಸಾಕ್ಷರತೆಯ ನಾಗರಿಕತೆಯ ಅವನತಿ. ಮೊಹರುಗಳು ಮತ್ತು ಮೊಹರು ಸಾಧನಗಳ ಕಣ್ಮರೆ. ಒಟ್ಟಿನಲ್ಲಿ ಅವನತಿ ಎಂದರೆ ನಗರ ಹಂತದ ಅಂತ್ಯ. ಅನೇಕ ಅತಿ ಸಣ್ಣ ಸ್ಥಳಗಳು ಉಳಿದು ಮುಂದುವರಿದಿವೆ. ಅಂಥ ಅನೇಕ ಸ್ಥಳಗಳು ರಾಜಸ್ಥಾನ, ಹರಿಯಾಣ, ಗುಜರಾತ್ ಮುಂತಾದೆಡೆಗಳಲ್ಲಿ ಕಂಡುಬಂದಿವೆ. ಸಿಂಧೂ ನಾಗರಿಕತೆಯ ಅನೇಕ ಕೃಷಿ ಸಮುದಾಯಗಳು ಸ್ಥಳೀಯ ಕೃಷಿ ಸಮುದಾಯಗಳಾಗಿ ಮಾರ್ಪಟ್ಟವು. ಉದಾಹರಣೆಗೆ ಸಿಂಧ್‌ನಲ್ಲಿ ಆಮ್ರಿ ಮತ್ತು ಚನ್ಹುದಾರೊನಂಥ ಮೊದಲಾದ ಹರಪ್ಪನಲ್ಲಿನ ಪಟ್ಟಣಗಳಲ್ಲಿ, ಜನ ಸ್ವಲ್ಪ ವಿಭಿನ್ನವಾದ ಝಕಾರ್ ಎಂದು ಕರೆಯಲಾಗುವ ಮಣ್ಣಿನ ಸಾಮಾನುಗಳನ್ನು ಬಳಸಲು ಪ್ರಾರಂಭಿಸಿದರು. ಅಲ್ಲಿ ಕೆಲವು ಹೊಸ ವಸ್ತುಗಳ ಜೊತೆಗೆ ಬರಹವಿಲ್ಲದ ತಾಮ್ರದ ನಾಣ್ಯಗಳು ದೊರೆತಿವೆ. ಅವರು ಇಟ್ಟಿಗೆಗಳಿಂದ ನಿರ್ಮಾಣವಾದ ಮನೆಗಳಲ್ಲೇ ವಾಸಿಸುತ್ತಿದ್ದರು. ಆದರೆ ಯೋಜಿತ ವಿನ್ಯಾಸವನ್ನು ಅನುಸರಿಸುವುದನ್ನು ಬಿಟ್ಟರು. ಹೀಗೆ, ಇಲ್ಲಿ ಹರಪ್ಪ ನಗರಗಳ ಅಂತ್ಯ ಎಂದರೆ, ಜನರು ವ್ಯಾಪಾರ ಮತ್ತು ವಿನಿಮಯಕ್ಕಾಗಿ ಕಡಿಮೆ ವಸ್ತುಗಳನ್ನು ಬಳಸುತ್ತಿದ್ದರು ಎಂದರ್ಥ.

ಪಂಜಬ್, ಹರಿಯಾಣ ಮತ್ತು ರಾಜಸ್ತಾನಗಳಲ್ಲಿ ಸಿಂಧ್‌ನ ಪೂರ್ವಕ್ಕಿರುವ ಪ್ರದೇಶ ಗಳಲ್ಲಿ ಮಣ್ಣಿನ ಸಾಮಾನುಗಳ ಸಂಪ್ರದಾಯವಿರುವ ಅನೇಕ ಸ್ಥಳಗಳು ಕಂಡು ಬಂದಿವೆ. ಉದಾಹರಣೆಗೆ ಮಥಾಥಲ್, ಬಾರಾ, ರೂಪರ್ ಮತ್ತು ಸಿಸ್ಟಾಲ್ ಪ್ರಖ್ಯಾತವಾದವುಗಳು. ಬಹುತೇಕ ಪ್ರದೇಶಗಳಲ್ಲಿ ಜನರು ನಗರೋತ್ತರ ಹಂತದಲ್ಲಿ ವಾಸಿಸುತ್ತಿದ್ದರು. ಈ ಸ್ಥಳ ಗಳಲ್ಲಿ, ಮೊದಲ ಸಿಂಧೂ ಕಾಲದಲ್ಲಿ ಬಳಕೆಯಲ್ಲಿದ್ದ ಕುಂಭಕಲೆಯ ವಿಶಿಷ್ಟ  ಸಂಪ್ರದಾಯ ವಿದೆ. ನಗರ ಹಂತದಲ್ಲಿ ಈ ಕುಂಭಕಲೆಯ ಸಂಪ್ರದಾಯಗಳು ಹರಪ್ಪನ್ ಕುಂಭಕಲೆಯ ಸಂಪ್ರದಾಯದ ಜೊತೆಗೇ ಮುಂದುವರಿದವು. ನಗರ ಹಂತ ಕೊನೆಯಾಗುತ್ತಿದ್ದಂತೆಯೇ ಈ ಸ್ಥಳೀಯ ಸಂಪ್ರದಾಯಗಳು ಹೊಸ ಚೇತನದೊಂದಿಗೆ ಮತ್ತೆ ತಲೆಯೆತ್ತಿದವು. ಬಾರಾ ಮತ್ತು ಮಿಥಾಥಲ್‌ಗಳಲ್ಲಿ ನಡೆಸಿದ ಉತ್ಖನನಗಳ ಕಾಲದಲ್ಲಿ ಇಟ್ಟಿಗೆಯ ಮನೆಗಳು ಕಂಡುಬಂದಿವೆ. ಕೆಲವು ನಗರಗಳಲ್ಲಿ ಮಾಸಲು ಕಂದು ಹಳದಿ ಬಣ್ಣದ ಮಣ್ಣಿನ ಪಾತ್ರೆಗಳು ಸಹ ದೊರೆತಿವೆ.

ಕಚ್ ಮತ್ತು ಸೌರಾಷ್ಟ್ರಗಳಲ್ಲಿ ನಗರ ಹಂತದ ಅಂತ್ಯವನ್ನು ರಂಗ್ ಪೂರ್ ಮತ್ತು ಸೋಮ್‌ನಾಥ್‌ನಂಥ ಸ್ಥಳಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಪ್ರಬುದ್ಧ ಹರಪ್ಪನ್ ನಾಗರಿಕತೆಯ ಹಂತದಲ್ಲಿಯೂ ಸಹ, ಹರಪ್ಪನ್ ಮಣ್ಣಿನ ಪಾತ್ರೆಗಳೊಂದಿಗೇ ಸ್ಥಳೀಯ ಕುಂಭ ವಸ್ತುಗಳ ವ್ಯಾಪಾರ ಸಂಪ್ರದಾಯವೂ ಇತ್ತು. ಈ ಸಂಪ್ರದಾಯ ಮುಂದಿನ ಹಂತಗಳಲ್ಲೂ ಮುಂದುವರಿಯಿತು. ಆದರೆ, ಜನ ಸಿಂಧ್ ತೂಕಗಳ ಬಳಕೆಯನ್ನು ನಿಲ್ಲಿಸಿದರು. ಮುದ್ರಾಣಾಕ್ಷರ ಮತ್ತು ಸಾಧನಗಳನ್ನು ದೂರ ಪ್ರದೇಶಗಳಿಂದ ಆಮದು ಮಾಡಿಕೊಂಡರು. ಗುಜರಾತಿನಾದ್ಯಂತ ಅನೇಕ ವಸಾಹತುಗಳು ಗಣನೀಯವಾಗಿ ಹೆಚ್ಚಿದವು.

ನಗರಗಳ ಅಂತ್ಯ ಎಂದರೆ ಹರಪ್ಪನ್ ಸಂಪ್ರದಾಯದ ಅಂತ್ಯ ಎಂದಾಗಲಿಲ್ಲ. ಆದರೆ ಕಾರ್ಯನೀತಿ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ನಿರ್ಣಯ ಕೈಗೊಳ್ಳುವ ಕೇಂದ್ರೀಕೃತ ವ್ಯವಸ್ಥೆಯ ಅಂತ್ಯ ಎಂದಾಗಬಹುದು ಅಷ್ಟೆ.

 

ಪರಮಾರ್ಶನಗ್ರಂಥಗಳು

೧. ರೇಮಂಡ್ ಅಲ್‌ಚಿನ್ ಎಫ್ ಮತ್ತು ದಿಲಿಪ್ ಚಕ್ರವರ್ತಿ ಕೆ.(ಸಂ), ೧೯೭೯. ಸೋರ್ಸ್  ಬುಕ್ ಆಪ್ ಇಂಡಿಯನ್ ಆರ್ಕಿಯಾಲಜಿ, ನವದೆಹಲಿ: ಮುನ್ಷಿರಾಮ್ ಮನೋಹರ್ ಲಾಲ್

೨. ಬ್ರಿಡ್ಜೆಟ್ ಮತ್ತು ರೇಮಂಡ್ ಆಲ್‌ಚಿನ್, ೧೯೮೯. ದಿ ರೈಸ್ ಆಫ್ ಸಿವಿಲೈಜೇಷನ್ ಇನ್ ಇಂಡಿಯ ಆಂಡ್ ಪಾಕಿಸ್ತಾನ್, ನ್ಯೂಡೆಲ್ಲಿ: ಸೆಲೆಕ್ಟ್ ಬುಕ್ಸ್

೩. ರಾವ್ ಎಸ್.ಆರ್., ಲೋಥಲ್ ಅಂಡ್ ಇಂಡಸ್ ಸಿವಿಲೈಜೇಷನ್, ದೆಹಲಿ: ಏಷಿಯನ್ ಪಬ್ಲಿಷಿಂಗ್ ಹೌಸ್

೪. ಥಾಪರ್ ಬಿ.ಕೆ., ೧೯೮೫. ರೀಸೆಂಟ್ ಆರ್ಕಿಯಾಲಾಜಿಕಲ್ ಡಿಸ್ಕವರೀಸ್ ಇನ್ ಇಂಡಿಯಾ, ಯುನೆಸ್ಕೋ: ದಿ ಸೆಂಟರ್ ಫಾರ್ ಈಸ್ಟ್ ಏಷಿಯನ್ ಕಲ್ಚರಲ್ ಸ್ಟಡೀಸ್